Advertisement
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಅವಳು ಮತ್ತು ಅವಳೊಂಟಿತನ”

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಅವಳು ಮತ್ತು ಅವಳೊಂಟಿತನ”

ದಾರಿಯನ್ನು ಸವೆಸುವ ಸಮಯ ಎಲ್ಲ ಋತುಗಳನೂ ತೆರೆದು ತೋರಿಸುವುದು. ಅದ್ಯಾಕೋ ವಸಂತವೆಂಬ ಋತು ನನ್ನೊಳಗಿನ ಆರಜೂಗಳಿಗೆ ತುಂಬ ಆಪ್ತವೆನ್ನಿಸುವುದು. ಶಿಶಿರದಲ್ಲಿ ಉದುರುವ ಎಲೆಗಳನ್ನು ನೋಡುತ್ತಿದ್ದರೆ ಒಳಗೊಂದು ನಂಟನು ಬೆಸೆದುಕೊಳ್ಳಲಾಗದ ಮತ್ತೊಂದು ಅಸಹಾಯಕತೆಗೆ ಗಭರಾಹಟ್ ಧುತ್ತೆಂದು ಎದುರಿಗೆ ನನಗೂ ಎತ್ತರಕ್ಕೆ ಕಾಲಿಲ್ಲದಿದ್ದರೂ ಎದ್ದು ನಿಲ್ಲುವುದು. ಮತ್ತು ಈ ಮುಸಾಫಿರ್ ನಂಥ ಜಿಂದಗಿಯಲ್ಲಿ ಹಾಗೆ ಕಳಚಿಕೊಂಡು ಉದುರಿದ ಎಲೆಗಳು ಕಾಲ ಕೆಳಗೆ ಮುದುರುವ ಪರಿಯನು ನೆನೆದರೇನೇ ಬೇಚೈನುಗೊಳ್ಳುವೆನು.
ಲಕ್ಷ್ಮಣ ಶರೆಗಾರ ಬರೆದ ಕತೆ “ಅವಳು ಮತ್ತು ಅವಳೊಂಟಿತನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಅಂದವನು ಸುಮ್ಮನೇ ನಿಂತಿದ್ದ.. ನಾನೇ ಅಳ್ತಿದ್ದೆ.. ಅಗಲುವ ನಿರ್ಧಾರ ನನ್ನದಾಗಿತ್ತು.. ಜುದಾಯಿಯನ್ನು ಅರಗಿಸಿಕೊಳ್ಳಲು ಆಗದವನು ನನ್ನ ಬಾಹುಗಳಲ್ಲಿ ಇದ್ದರೂ ಶಿಲೆಯಂತಿದ್ದ.. ಅವನ ಮೈಮೇಲೆ ಉದುರಿದ ನನ್ನ ಕಣ್ಣ ಹನಿಗಳೇ ಅವನಿಗೆ ನನ್ನ ಕಟ್ಟ ಕಡೆಯ ಕೊಡುಗೆಗಳಾಗುವವಿದ್ದವು..

ಆಲಿಂಗನದ ಮೂಲಕ ಅಲ್ಪಿದಾ ಹೇಳುವ ದುರ್ಗತಿ ಯಾವ ಪ್ರೇಮಕೂ ಬಾರದಿರಲಿ ದೇವ್ರೇ..

ಏನು ಮಾಡಲಿ… ಕಿಸ್ಮತ್ತಿನಲ್ಲಿ ಅವನೊಂದಿಗೆ ಒಂದೇ ಸೂರು ಬರೆದಿರಲಿಲ್ಲ.. ಈ ಮಜಬೂರಿಗಳೆಂಬುವವು ಹಲವು ಪ್ರೇಮಗಳ ಗೋರಿಗಳಾಗುತ್ತವೆ ಮತ್ತು ಲಂಗರಿಗೆ ಕಟ್ಟಿ ಹಾಕಿದ ಹಾಯಿದೋಣಿಯೊಳಗಿನ ಚಲಿಸುವ ಒತ್ತಡ ಆಗಿರುತ್ತದೆ ಎಂದು ನನಗಾದರೂ ಎಲ್ಲಿ ಗೊತ್ತಿತ್ತು.

ನನಗಾದರೂ ಅವನ ಬಾಹುವಿನಿಂದ ಹೊರತಾದ ಮತ್ತೊಂದು ದುನಿಯಾ ಎಲ್ಲಿತ್ತು… ಎಲ್ಲ ಕನಸುಗಳು ಕಣ್ಣ ಹನಿಗಳಾಗಿ ಅವನನ್ನ ತೋಯಿಸಿಯಾದ ಮೇಲೆ ನನ್ನೊಳಗೆ ಉಳಿದುಕೊಳ್ಳುವುದು ಬರೀ ಬಂಜರೆಂದು ಅವನಿಗೆ ಅದು ಹೇಗೆ ಸಾಬೀತುಪಡಿಸಲು ಸಾಧ್ಯವಿತ್ತು ನನಗೆ..

*****

ಅಂದು..

ಎಂದಿನಂತೆ ನನ್ನ ಪಕ್ಕದಲ್ಲಿ ಕುಳಿತುಕೊಳ್ಳದೆ, ಒಮ್ಮೆಲೇ ಅಲ್ಲಿಯವರೆಗಿನ ಎಲ್ಲ ಸಲುಗೆಯಿಂದ ಬಿಡುಗಡೆ ಹೊಂದಿದವನಂತೆ, ನನ್ನೆದುರಿಗೆ ಒಂದು ಕುರ್ಚಿ ಎಳೆದುಕೊಂಡು ಕಳಿತು ಶೂನ್ಯವನ್ನೇ ದಿಟ್ಟಿಸುತ್ತ, ಜೂಜಿನಲ್ಲಿ ಒಂದೇ ಆಟದಲ್ಲಿ ಎಲ್ಲವನ್ನೂ ಕಳೆದುಕೊಂಡವನಂತೆ, ನನ್ನ ಸಾಮಿಪ್ಯ ಇದ್ದೂ ಆಸಕ್ತಿ ಕಳೆದುಕೊಂಡ ವೇದಾಂತಿಯಂತೆ ಹೀಗೆ ಹೇಳಿದ್ದ:

ನಿನ್ನೆದೆಯ ಕದ ತೆರೆದು ಮಂಚದ ತುದಿಯಲಿ ಕುಳಿತು, ನೀರವದ ಸರವತ್ತಿನ ರಾತ್ರಿಯಲ್ಲಿ ಇಲ್ಲಿಯವರೆಗೆ ಸಲ್ಲಾಪಿಸದೇ ಉಳಿದುಹೋದ ಪಿಸು ಮಾತುಗಳು ಹಲವಿವೆ ನಮ್ಮಗಳ ನಡುವೆ..

..ಸಾಕಿನ್ನು ನೆರಳ ಮುಟ್ಟುವ ಆಟದಲಿ ಸೋತು ಹೋಗಬೇಕು ನಾನು..

..ಮೈಯ ಬಯಲಿನಲಿ ಬಚ್ಚಿಟ್ಟುಕೊಳ್ಳಲು ಬತ್ತಲಾಗಬೇಕು ನಾನು..

ನಿನ್ನೆಡೆಗಿನ ಜುಸ್ತಜೂ ನಸುಕಿನಲಿ ಇಬ್ಬನಿ ವಿರಮಿಸುವ ತೂಕಡಿಕೆ ಆಯಿತು..

..ಮೆಹಫಿಲ್‌ನಲ್ಲಿದ್ದರೂ ತನ್ಹಾಯಿ ಅನುಭವಿಸಿದ್ದನ್ನು ಹೇಳಬೇಕು ನಾನು..

..ಎಚ್ಚರದ ಆಟದಲಿ ಅದೇನನ್ನು ದಕ್ಕಿಸಿಕೊಂಡು ಸುಖಿಸುವೆ ಒಲವೆ..

..ಒಂದು ಸಲವಾದರೂ ಬೇಹೋಷ್‌ನ ಬೆರಗನು ನಿನ್ನದಾಗಿಸಿಕೊಳ್ಳಬೇಕಿತ್ತು ನೀನು..

..ಅಲ್ವಿದಾ ಹೇಳುವಾಗ ತಿರುಗಿ ಕಣ್ಣೊರಸಿಕೊಂಡಿದ್ದನ್ನ ನೋಡಿದ್ದೆ ನೀನು..

ಕಿನಾರೆ ತಲುಪದ ದೋಣಿಯ ಅಂತರಾಳವನು ಅರುಹಬೇಕು ನಾನು..

..ಗೋರಿಯೊಳಗೆ ಪ್ರೇಮ ಕಣ್ಮುಚ್ಚಿದರೂ ಇನ್ನೂ ಉಸಿರಾಡುತಲೇ ಇದೆ..

..ನಿರಾಕರಣೆಯ ತೀವ್ರತೆಯನು ಹುದುಗಿದ ಬೇಖುದಿಗೆ ಪರಿಚಯಿಸಬೇಕು ನಾನು..

*****

ನಿನಗೆ ನೆನಪಿದೆಯಾ ಆ ಒಂದು ಸರವತ್ತಿನ ರಾತ್ರಿ..

ಆಗಸದ ಮುಖಕೆ ರಾತ್ರಿಯ ಕಪ್ಪನು ಅದಾಗಲೇ ಬಳಿಯಲಾಗಿತ್ತು..

ಅಲ್ಲಲ್ಲಿ ಚುಕ್ಕೆಗಳು ನಮ್ಮೊಳಗಿನ ಪರಕೀಯತೆಯನ್ನು ಆಚರಿಸುತ್ತಿರುವಂತೆ ಮಿನುಗುವ ಆಟಕ್ಕಿಳಿದಿದ್ದವು..

ಅಂಥದೊಂದು ನೀರವದ ರಾತ್ರಿಯಲ್ಲಿ, ಕತ್ತಲೆಗೆ ಮತ್ತು ಚುಕ್ಕೆಗಳಿಗೆ ಮಾತ್ರ ಸಾಕ್ಷಿಯಾಗಿ ನಾವಿಬ್ಬರೂ ಮೊಹಬ್ಬತ್ತನ್ನೇ ಉರಿಸಿಕೊಳ್ಳುತ್ತ ಎದುರು, ಬದುರಾಗಿ ಹಿಂದಿನ ಜನುಮದಿಂದಲೂ ಹಾಗೇ ಕುಳಿತುಕೊಂಡವರಂತೆ ಕುಳಿತುಕೊಂಡಿದ್ದೆವು..
ನಮ್ಮಿಬ್ಬರ ನಡುವೆ ಮಾತಿಗಿಂತ ಮೌನವೇ ಹಭೆಯಾಡುತ್ತಿತ್ತು..

ಸುಖಾಸುಮ್ಮನೆ ಏನೇನೋ ಮಾತನಾಡಿಕೊಂಡು ನಮ್ಮಿಬ್ಬರ ನಡುವಿನ ಚಂದನೆಯ ಮತ್ತು ಸಹ್ಯದ ಮೌನವನ್ನು ಕದಡಿಕೊಳ್ಳುವ ಇರಾದೆ ಇಬ್ಬರೊಳಗೂ ಇದ್ದಿರಲಿಲ್ಲ..

ಹೀಗೆ ಸರವತ್ತಿನ ರಾತ್ರಿಯಲ್ಲಿ ಇಬ್ಬರೇ ಮೌನವನ್ನು ಹೊದ್ದುಕೊಂಡು ಅದೇನನ್ನೊ ಫೈಸಲ್ ಮಾಡಿಕೊಳ್ಳಲೆಂದೇ ಕುಳಿತುಕೊಂಡಿದ್ದಕ್ಕೆ ನಕ್ಷತ್ರಗಳು ಇನ್ನೇನು ಸಾಕ್ಷಿಗಳಾಗಿಬಿಡಲು ತವಕಿಸುತ್ತಲಿದ್ದವು..

ನಿನ್ನ ಎದೆಯೊಳಗಿನ ಇಷ್ಕ್ ಎಂಬುವುದು ಸಿಗರೇಟಿನ ಹೊಗೆಯಾಗಿ ಅಲ್ಲೆಲ್ಲ ಬೆಚ್ಚಗೇ ಪಸರಿಸಿತ್ತು..

ನಾನೊ ಮೈತುಂಬ ಸೆರಗು ಹೊದ್ದು ನನ್ನೊಳಗಿನ ಅನುರಾಗವನ್ನು ಬೆಚ್ಚಗಿರಿಸಿಕೊಳ್ಳುವ ಹಠಕ್ಕೆ ಬಿದ್ದ ಹಾಗಿದ್ದೆ..

ನಮ್ಮಿಬ್ಬರ ನಡುವಿನ ಕೈಯಳತೆಯ ಅಂತರ ದೊಡ್ಡ ಕಂದರವನ್ನೇ ನಿರ್ಮಿಸಿತ್ತು..

ಹೆಪ್ಪುಗಟ್ಟಿದ ಕತ್ತಲೆಯನ್ನು ನಾವು ಮೈ ತುಂಬ ಸುರಿದುಕೊಂಡು, ಮಾತು ಕೂಡ ಕಳೆದುಕೊಂಡು ಮತ್ತು ಕೇಳಲಿರುವ ಮಾತುಗಳ ದಾರಿ ಕಾಯುತ್ತ ಥೇಟ್ ಶಿಲೆಗಳೇ ಆಗಿಬಿಟ್ಟಿದ್ದೆವು..

ಥಣ್ಣಗಿನ ಮೌನ ನಮ್ಮನ್ನು ಅನಾಮತ್ತಾಗಿ ತನ್ನ ತೆಕ್ಕೆಗೆ ಅದಾಗಲೇ ತೆಗೆದುಕೊಂಡಾಗಿತ್ತು..

ಈ ರಾತ್ರಿಗೆ ಮುಂಜಾವು ಎಂಬುವುದು ಇಲ್ಲವೇ ಇಲ್ಲವೇನೊ ಎಂಬಂಥ ಸಣ್ಣಾಟಾ ಕ್ಷಣ, ಕ್ಷಣಕ್ಕೂ ಆತಂಕ ಹೆಚ್ಚಿಸುತ್ತಲಿತ್ತು..

ನಮ್ಮೊಳಗಿನ ತೀರ್ಮಾನಗಳನು ಬಾಯಿ ಬಿಟ್ಟು ಹೇಳಿಕೊಂಡಾದ ಮೇಲೆ ನಾವಿಬ್ಬರೂ ಎದ್ದು ಅದೆಲ್ಲಿಗೆ ಹೋಗುತ್ತೇವೋ .. – ನೆನಪಿಸಿಕೊಳ್ಳುವುದೂ ಬೇಡವೆನ್ನಿಸಿ, ಮತ್ತೂ ಹಾಗೆಯೇ ಸುಮ್ಮನೆ ಕುಳಿತಿದ್ದರೆ ನಿಜದಲ್ಲಿ ಶಿಲೆಯೇ ಆಗಿ ಬದಲಾಗಿಬಿಡುವ ಹೆದರಿಕೆಗೆ ಆಕಾರ ಮೂಡಿ ನಾನೇ ಮುಂದಾಗಿ ನಿನ್ನ ಕೈ ಹಿಡಿದುಕೊಂಡಿದ್ದೆ..
ಆಗ..
ನೀನು..
ನೀ ಬೇಕು – ಅಂದಿದ್ದಿ..
ಅಲ್ಲಲ್ಲಿ ಮಿನುಗತೊಡಗಿದ ಚುಕ್ಕೆಗಳನ್ನು ಅದ್ಯಾರೊ ಒಂದುಗೂಡಿಸಿ ರಂಗೋಲಿ ಹಾಕಿದ ಚಿತ್ತಾರ ಆಗಸದ ತುಂಬ ಮೈದುಂಬಿಕೊಳ್ಳುವುದು..
ಅಲ್ಲಿಂದ ಶುರುವಾಗಿತ್ತು ನಮ್ಮಿಬ್ಬರ ಈ ಅಧೂರಿ ಪ್ರೇಮ ಕಹಾನಿ..

ಅವನಂತಾನೆ:

ಲಂಗರಿಗೆ ಕಟ್ಟಿದ ದೋಣಿಗೆ ಅಲೆಗಳ ಮೇಲೆ ತೇಲದಿರುವ ನಿರಾಸೆ ..

ಆಳ ಮುಳುಗಿಸುತ್ತದೆಯಾದರೂ, ಅಲೆಗಳು ತೇಲಿಸುತ್ತವೆಂಬುವುದೇ ಧೈರ್ಯ..

ತೇಲಲಿ, ಮುಳುಗಲಿ ನೀರಿಗಿಳಿಯುವುದೇ ನನ್ನ ಸ್ವಭಾವ – ಎಂದೆಲ್ಲ ದೋಣಿ ಹೇಳಿದರೆ ಯಾರು ಕೇಳುವರು..

ತುಕ್ಕು ಹಿಡಿದರೂ ಸರಿಯೇ ಎಲ್ಲದಕೂ ಇಲ್ಲಿ ಮುಹೂರ್ತ ನೋಡುತ್ತಾರೆ..

ಕಾಲ ಎಲ್ಲಿ ದಡ ತಲುಪಿಸುವುದು..

ದಡದ ಮೇಲಿನ ಜಿಂದಗಿಗೆ ಏರಿ ಬರುವ ಅಲೆಗಳದೇ ಹೆದರಿಕೆ..

ದಡ ಮುಟ್ಟುವ ಆಟದಲಿ ಅಲೆಗಳಿಗೆ ದಣಿವು ಇರದು..

ನೀರ ಮೇಲಿನ ದೋಣಿಯೊಂದಿಗಿನ ಸಫರ್ ಸದಾ ಅಲೆಗಳ ಮೇಲೆಯೇ..

ಹಮ್ಸಫರ್‌ನೊಂದಿಗಿನ ಈ ಸಫರ್ ದೂರ ತೀರವ ಸೇರಲಿ..

*****

ಭಾಗ -2

ಇಂದ್ಯಾಕೊ ಸಂಜೆಯಿಂದಲೆ ಮನಸ್ಸು ಖಾಲಿ, ಖಾಲಿ ಅನ್ನಿಸ್ತಿತ್ತು..
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ.. – ಹಾಡೊಂದು ಇನ್ನಿಲ್ಲದ ಹಾಗೆ ನೋಯಿಸ್ತಿತ್ತು..
ಅದಾಗಲೇ ಇಲ್ಲಿಯವರೆಗಿನ ಹಳೆಯ ನೋವುಗಳು ಬಾಯಿ ಬಿಟ್ಟು ಉ‌ಸಿರೆಳೆದುಕೊಳ್ಳತೊಡಗಿದ್ದವು..

ಹಭೆಯಾಡುವ ಈ ಉದಾಸಿಯೊಂದಿಗೆ ಗೆಳೆತನ ಒಳ್ಳೆಯದಲ್ಲವೆಂದು ನನಗೇ ನಾನು ಹೇಳಿಕೊಳ್ಳುತ್ತೇನೆ.

ಮುಂಜಾನೆಯಿಂದಲೇ ನಾಲ್ಕು ಗೋಡೆಗಳ ನಡುವೆ ಖೈದಾಗಿಬಿಟ್ಟಿದ್ದ ಇರಸು ಮುರುಸು ಅಲುಗಾಡದಂತೆ ಬಿಗಿದು, ಕಟ್ಟಿಹಾಕಿದೆ…

ಕನಸಿಲ್ಲದ ನಿದಿರೆಯಂತೆ
ಸಂತೆಯೊಳಗಿನ ಮೌನದಂತೆ.. – ಅವೇ ನಾಲ್ಕು ಗೋಡೆಗಳಿಗೆ ಬಾಯಿ ಇಲ್ಲದ ಸಾಕ್ಷಿಯಾಗಿ ಇದ್ದುಬಿಟ್ಟಿದ್ದೆ..

ರೆಕ್ಕೆಯಿತ್ತು .. ಬಂಗಾರದ ಪಂಜರ.. ಹಾರಲಾಗಲಿಲ್ಲ
ಕಾಲುಗಳಿದ್ದವು.. ಬೆಳ್ಳಿಯ ಬೇಡಿ.. ನಡೆಯಲಾಗಲಿಲ್ಲ

ಬಾಗಿಲು ತೆರೆದೇ ಇತ್ತು.. ಕಿಟಕಿ ಹಾಕಿರಲಿಲ್ಲ.. ನನ್ನೊಳಗಿನ ಅವಳು ವಿಧಿಯ ಆಟಕೆ ಹೈರಾಣಾಗಿ ಮುದುರಿ, ಹಿಡಿಯಷ್ಟಾಗಿ ಕುಳಿತಿದ್ದಳು..

ಆದರೂ..
ಇಷ್ಕ್ ನೊಂದಿಗಿನ ಮೌನದಲಿನ ಮಳೆಬಿಲ್ಲಿನ ಪುಳಕ..
ಈ ಪ್ರೇಮ ಪಯಣದಲ್ಲಿ ಅವನದೇ ನೆನಪಿನ ಜಳಕ..

ನನ್ನ ತಂತುವಿನ ಆಳದಲ್ಲಿ ಅದೊಂಥರ ಹಿತವಾದ ಮಿಸುಕು..
ನನ್ನೊಳಗಿನ ಕಾಡಿನಲ್ಲಿ ಬಿಟ್ಟೂ ಬಿಡದ ಮುಂಗಾರು ಮಳೆ..
ಆಗಾಗ ತೋಯ್ದು ಹಸಿಯಾಗುವ ಕಣ್ಣೆವೆಗಳು ..

*****

ಮುಂಜಾನೆ ಎಲ್ಲ ಅಷ್ಟೊಂದು ಸಡಗರದಿಂದ ಮಾಡಿಟ್ಟ ಅಡಿಗೆ, ತಟ್ಟೆ ಮೇಲೆ ಹಾಕಿಕೊಳ್ಳುವ ಮಧ್ಯಾಹ್ನದ ಹೊತ್ತಿಗೆ ತಣ್ಣಗಾಗಿ, ಹಸಿವೇ ಇಲ್ಲವಾಗಿಹೋಗಿ: ಉಣ್ಣಲು ಜೊತೆಗೆ ಅವನಿರಬೇಕಿತ್ತು – ಅನ್ನಿಸದೇ ಇರಲಿಲ್ಲ.

ಏನೆಂದರೆ: ಹಸಿವು ಹೊಟ್ಟೆಯಲ್ಲಿ ಇರಲೇ ಇಲ್ಲ..

ಅವನಿದ್ದಿದ್ದರೆ.. ಒಬ್ಬರ ಕಣ್ಣಲಿ ಇನ್ನೊಬ್ಬರನ್ನು ಚಪ್ಪರಿಸುತ್ತ, ಕಲಸಿದ ಒಂದು ತುತ್ತು ಬಾಯಿಗೆ .. ಒಂದು ಮುತ್ತು ಮೈಯಿಗೆ..
ಅವನಿಲ್ಲದೆ, ಅಂಥದೊಂದು ಉಣ್ಣುವ ಸಡಗರವಿಲ್ಲದೆ ಅನ್ನ ಹಳಸಿಯಾಗಿತ್ತು..

ಅವನದೇ ಉಪಸ್ಥಿತಿಯನು ಮೆಹಸೂಸ್ ಮಾಡಿಕೊಳ್ಳುತ ಹಗಲನು ದೂಡಿಯಾಯಿತು..
ಇರುಳೆಂದರೆ ಮಗ್ಗುಲು ಬದಲಿಸುವ ಆಟವಾಯಿತು..

ಅವನಿಗೆ ದಕ್ಕಬೇಕಾದ ನನ್ನ ಮೈ ಎಂಬುವುದು ಸಾಬೀತಿಗೆ ನನ್ನನೇ ಸೀದ ಕನ್ನಡಿ ಮುಂದೆ ತಂದು ನಿಲ್ಲಿಸುವುದು..
ನಿರೀಕ್ಷೆಯಲ್ಲಿಯೇ ಬಾಡಿ ಹೋದ ಮತ್ತು ಕೊಳಗಳಾದ ಕಂಗಳು..
ನೇವರಿಸುವ ಬೆರಳುಗಳು ಇಲ್ಲದೆ ಮಂಕಾದ ಮುಂಗುರುಳು..
ನಗುವಿಲ್ಲದೆ ತೇವ ಆರಿಸಿಕೊಂಡ ಒಣಗಿದ ತುಟಿಗಳು..
– ಎಲ್ಲವೂ ಕನ್ನಡಿಯಲ್ಲಿ ಒಡೆದು ಕಾಣುವವು.

ಆಗೊಮ್ಮೆ ಇದೇ ಕನ್ನಡಿಯಲ್ಲಿ ಇಣುಕಿ ಹೋದವನನ್ನು ಅರಸಲು ಕನ್ನಡಿಯ ಎದೆ ಸೀಳುವ ಧಾವಂತ..

ಕನ್ನಡಿಯಲ್ಲಿ ಕೂಡ ಅವನು ಉಳಿಸಿಹೋಗಿರಬಹುದಾದ ಅವನದೇ ಬಿಂಬ ಅರಸುವ ಅವನೆಡೆಗಿನ ನನ್ನೀ ತಲುಬನು ನಾನೇ ಅಚ್ಚರಿಯಿಂದ ಗುರುತಿಸಿಕೊಂಡು ವಿಸ್ಮಿತಗೊಳ್ಳುವೆನು.

ಕನ್ನಡಿಯ ಒಳಗೆ ಹೋಗದ ನನ್ನ ಅಸಹಾಯಕತೆಯನು ಹಳಿಯುತ್ತ ಕನ್ನಡಿಯ ಮುಂದೆ ನಿಸ್ಸಹಾಯಕಳಾಗಿ ನಿಲ್ಲುವೆನು..
ಕನ್ನಡಿಯ ಆಳದಲಿ ಅಚ್ಚಾಗಿ ಹೋದ ಬಿಂಬಕೆ ಪ್ರತಿಬಿಂಬ ಮೂಡಿಸುತ್ತ ನಿಂತುಕೊಳ್ಳುವೆನು..

ಕನ್ನಡಿಯಲ್ಲಿ ಕಂಡ ಹಣೆಯ ಮೇಲಿನ ಕುಂಕುಮ ಸ್ಪರ್ಶಿಸ್ತೇನೆ.. ಬೆಚ್ಚಗಿನ ಹಣೆಯ ಮೇಲೆ ಅವನ ಬೆಚ್ಚಗಿನ ತುಟಿ ಮತ್ತು ಬೆರಳುಗಳದೇ ಸ್ಪರ್ಷ.. ನೆನಪುಗಳು ಮರುಕಳಿಸುತ್ತವೆ..

ದೈವದ ಸನ್ನಿಧಿಯಲ್ಲಿ ಹಣೆಗೆ ಕುಂಕುಮ ಹಚ್ಚಿ: ನೀನು ನನ್ನವಳು- ಅಂದವನ ಭಾವವನು ಅಷ್ಟು ಸುಲಭವಾಗಿ ವಾಡಿಕೆ ಎಂದೆಲ್ಲ ಸಬೂಬು ಹೇಳುತ ಅಲ್ಲವೆಂದು ತಳ್ಳಿಹಾಕಲು ನನ್ನಿಂದ ಹೇಗೆ ಸಾಧ್ಯವಿತ್ತು.. – ರಿವಾಜಿನ ಸರಪಳಿಗೆ ಕಟ್ಟಿಹಾಕಿದ ನನ್ನೊಳಗಿನ ಬೇಬಸಿಗೆ ನಾನೇ ನೊಂದುಕೊಳ್ತೇನೆ. ಏನು ಮಾಡುವುದು.. ರಿವಾಜಿನ ಜಗದ ಕಣ್ಣಿಗೆ ಬೇಡವಾದ ಆಟಕ್ಕೆ ಇಳಿದಾಗಿದೆ.

ಆವಾಗಿನಿಂದ ಒಂಟಿಕಾಲಲಿ ನಿಂತವಳು ದೊಡ್ಡದಾಗಿ ಆಕಳಿಸುತ ಮೈ ಮುರೀತೇನೆ.. ಮೈ ತುಂಬ ಅವನೇ ಓಡಾಡಿ ಹೋಗಿದ್ದ ಸದ್ದು ಕೇಳಿ‌ಸುತ್ತದೆ..

ಅವನಿಲ್ಲದೆ ಇರುವ ಈ ತನ್ಹಾಯಿ ಎದೆ ಬಗೆದು ಋತುಗಳಾಚೆಗೂ ಹಿಂಸಿಸುವುದು..

ಅವನೊಂದಿಗೆ ಕಳೆದ ಆ ಎಲ್ಲ ಲಮ್ಹೆಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಪ್ರಯತ್ನಕ್ಕೆ ಇಳಿಯುವ ನನ್ನ ಅಸಹಾಯಕ ಮಜಬೂರಿಯನ್ನು ಯಾರ ಮುಂದೆ ಹೇಳಿಕೊಳ್ಳಲಿ..

ಈಗ ಹೇಗಾಗಿದೆಯೆಂದರೆ ಇಡೀ ಜನುಮಕ್ಕಾಗುವಷ್ಟು ಏಕಾಂತ ಆಕಳಿಸುತ್ತ ನಮ್ಮಿಬ್ಬರ ನಡುವೆ ಮೈಚಾಚಿ ಮಲಗಿದೆ..

ಕ್ಷಣ ಕ್ಷಣಕ್ಕೆ ಆಕಾರ ಬದಲಿಸಿಕೊಳ್ಳತೊಡಗಿದ್ದ, ಹಾಗೆ ನಿಲುವುಗನ್ನಡಿಯಲ್ಲಿ ಕಂಡ ಆ ಪ್ರೇತ ಕಳೆಯ ಚಹರೆ, ನನ್ನದು ಅಲ್ಲವೇ ಅಲ್ಲ ಅಂದುಕೊಳ್ಳುತ್ತ ಸರಕ್ಕನೇ ಕನ್ನಡಿಯಿಂದ ಮುಖ ತಪ್ಪಿಸಿಕೊಳ್ತೇನೆ..

ಸಿಂಕ್ ಹತ್ತಿರದ ಕನ್ನಡಿಯಲ್ಲಿ ಅವನ ಮುಖ ಅಷ್ಟೇ ಕಾಣಿಸಿದ ಹಾಗಾಗಿ ಸುಮ್ಮನೆ ನಿಂತುಕೊಳ್ತೇನೆ.. ನನ್ನ ಮನ ಅರಿತ ಆ ಕನ್ನಡಿ: ಮೂಡಿಸಿಕೊಂಡಿದ್ದನ್ನ ಮಾತ್ರ ತೋರಿಸ್ತೀನಿ – ಅಂದಂತಾಗಿ ಹಾಗೆ ಮೂಡಿದ್ದನ್ನಾದರೂ ದಕ್ಕಿಸಿಕೊಳ್ಳಲು ಕನ್ನಡಿಯ ಮುಖವನ್ನು ಸೆರಗಿನಿಂದ ನಯವಾಗಿ ಒರೆಸ್ತೀನಿ..

ನನ್ನ ಮನಸಿನ ಆಲಯದ ತುಂಬ
ನನ್ನ ಮೈಯಲಿ ಹಣಿಕಿಹೋದವನದೇ ಬಿಂಬ

ನಾನು ಕನ್ನಡಿಯ ಒಳಗೆ ಹೋಗಲಾರೆ
ಕನ್ನಡಿಯೊಳಗಿನ ಅವನು ಹೊರ ಬರಲಾರ

ಒಂದು ಹಂತದಲ್ಲಿ ಅವನ ವಾದ ಹೀಗಿತ್ತು:
ಕಣ್ಣ ಮುಂದೆ ಕಡಲಿದೆ
ಕಾಲ ಕೆಳಗೆ ಮರಳಿದೆ
ನಡೆದು ಸೇರದೆ ಅಂತರ ಅಳಿಯದು
ಮುಳುಗದೇ ಹೋದರೆ ಆಳ ತಿಳಿಯದು..
ಒಬ್ಬರಲ್ಲಿ ಇನ್ನೊಬ್ಬರನ್ನು ಹುಡುಕುವುದೆಂದರೆ
ನಮ್ಮನು ನಮಗೇ ಪರಿಚಯಿಸಿಕೊಂಡಂತೆ..
ನೀನು ನನಗೆ ಅರ್ಥವಾಗಲಿಲ್ಲವೆಂದರೆ
ನನಗೆ ನಾನೇ ಅರ್ಥವಾಗಲಿಲ್ಲ ಅಂತ
ಅಷ್ಟೇ..

ಅದೇ ಇಷ್ಕ್, ಅವೇ ಆರಜೂಗಳ ನಡುವೆ ನಾವಿಬ್ಬರೂ ಅದ್ಯಾವಾಗ ಅಪರಿಚಿತರಾದೆವೋ..
ಕನ್ನಡಿ ತೋರಿಸುವುದು ಬೇರೆಯದೇ ಮುಖ..
ನಾನು ನಾನಾಗಿಲ್ಲ, ಅವನು ಅವನಾಗಿಲ್ಲ..
ಏನಾಗಿ ಹೋಗಿದೆ ನಮಗೆ..

ಎದೆಯ ಬಯಲಿನಲ್ಲಿ ಆವಾಗಿನಿಂದ ದೊಂಬರಾಟ ಆಡುತ್ತಿದ್ದವನೊಬ್ಬ ಗತಕ್ಕೆ ಕರೆದುಕೊಂಡು ಹೋಗಿ ಕುಣಿಸಲು ಶುರು ಮಾಡಿದ್ದಾನೆ..

*****

ಭಾಗ -3

ಸಂಜೆ ಹಚ್ಚಿದ ದೀಪಕ್ಕೆ ಮತ್ತಷ್ಟು ಎಣ್ಣೆ ಹಾಕಿ, ಮನೆ ತುಂಬ ಲೋಭಾನ ಹಾಕಿ ದೇವರಿಗೆ ಕೈ ಮುಗಿದು: ದೇವ್ರೇ ನನಗೆ ರೆಕ್ಕೆ ಮೂಡಿಸು.. – ಕೇಳಿಕೊಳ್ತೇನೆ..

ನನ್ನ ಮೈಯೊಳಗಿನಿಂದ ಅವನ ವಾಸನೆ ಬರ್ತಿದೆಯೇ.. – ತಿಳಿದುಕೊಳ್ಳಲು ನನ್ನದೇ ಇಡೀ ಮೈಯನು ಒಂದು ಸಲ ಮೂಸಿಕೊಳ್ಳುವ ಮತ್ತೊಂದು ಆಟಕ್ಕಿಳಿತೇನೆ..

ಬಹಳ ಹೊತ್ತಿನಿಂದ ತಡೆದು ಇಟ್ಟುಕೊಂಡಿದ್ದ ಹತಾಶೆ, ಅಸಹಾಯಕತೆಯನ್ನು ಕೊನೆಗೂ ರೆಪ್ಪೆಗಳು ತುಳುಕಿಸಿ ಬಿಡ್ತವೆ..

ಓಡಿ ಹೋಗಿ ಮಂಚದ ಮೇಲೆ ಬೋರಲಾಗಿ ಮಲಗಿದವಳಿಗೆ ದಿಂಬು ಸಾಂತ್ವನ ಹೇಳಿದಂತಾಗಿ ಗಂಟಲಿನಿಂದ ಹೊರಗೆ ಬಂದ ಬಿಕ್ಕು ದಿಂಬಿನ ಒಡಲು ಸೇರುತ್ತದೆ..

ಮಂಚದ ತುದೀಲಿ ಕೂತು ನನ್ನನೇ ಎಲ್ಲಿ ನಿರುಕಿಸುತಿರುವನೋ – ಎಂದುಕೊಳ್ಳುತ ಎದ್ದು ಕೂತವಳಿಗೆ ಅವನಿಲ್ಲದ ಇಡೀ ಕೋಣೆಯೇ ಭಣ, ಭಣ ಅನಿಸುವುದು..

ಏನೇನೆಲ್ಲ ಮಾತನಾಡುತ್ತ ಇದ್ದವ, ಅಂದವತ್ತು ಮಾತು ಕಳೆದುಕೊಂಡು, ಒಳಗೊಂದು ನಿರ್ವಾತ ಇಟ್ಟುಕೊಂಡವನಂತೆ ಮಂಚದ ತುದಿಯಲಿ ನಿಂತು ಇಡೀ ಮಂಚವನು ಅಪಾದಮಸ್ತಕವಾಗಿ ದಿಟ್ಟಿಸಿ ಒಂದೂ ಮಾತನಾಡದೆ, ಒಳಗೊಂದು ಸದ್ದಿಲ್ಲದ ಕಲರವ ಇಟ್ಟುಕೊಂಡು, ಸುಮ್ಮನೆ ತಿರುಗಿ ಹೋಗಿದ್ದ.. ಹೋಗುವಾಗ ಭೀಕರವಾಗಿ ಹೆಪ್ಪುಗಟ್ಟಿದ್ದ..

ಅಂದವನನ್ನು ಕೈ ಹಿಡಿದು ಮಂಚದ ಸಮೀಪ ಕರೆದುಕೊಂಡು ಹೋಗಿ ಕಾಲಿಲ್ಲದ ಮಂಚದ ಮೇಲೆ ಕೂರಿಸಬೇಕಿತ್ತು.. ಅವನು ಉದಾಸಗೊಂಡು ನನ್ನೊಳಗೊಂದು ಉರಿಯದ ಕಿಚ್ಚು ಹಚ್ಚಿ ಎದ್ದು ಹೋಗಿದ್ದು ಏಕೇಂತ ಈಗ ಅರ್ಥ ಆಗ್ತಿದೆ..

ಅಂದಿನಿಂದ ಮೌನವನೇ ಹಾಸಿ, ಹೊದ್ದು ಮಾತನೇ ಕಳೆದುಕೊಂಡು ಅಂಗಾತ್ತಾಗಿ ಮಲಗಿದ ಮಂಚ ನಮ್ಮಿಬ್ಬರ ನಡುವಿನ ಅಂತರ ಕಡಿಮೆಯಾಗದೇ ಹೀಗೇ ದಿನ ಕಳೆದಂತೆ ತನ್ನ ಕಾಲುಗಳನ್ನೇ ಕಳೆದುಕೊಂಡು ಹೆಳವಾಗಿಬಿಟ್ಟಿದೆ. ಇಬ್ಬರೊಳಗಿನ ಆ ಬಿಗು, ಆ ಕುದಿಗೆ ಮಂಚವೆಂಬೊ ಸುಪ್ಪತ್ತಿಗೆ ಕೂಡ ತನ್ನೆದೆಯೊಳಗೊಂದು ಸಬ್ರ ಮಡುಗಟ್ಟಿಸಿಕೊಂಡಿದೆ.. ಗಂಭೀರವಾಗಿದೆ. ಈಗೀಗ ಸುಳ್ಳಾದರೂ ಸರಿಯೇ ಜಿಸ್ಮ್‌ಗೆ ಹತ್ತಿರವಾದ ಹಗಲುಗನಸನು ಕಟ್ಟಿಕೊಡಲು ಮತ್ತು ಆ ಮೂಲಕ ನನ್ನನು ಸಂತೈಸಲು ಈ ಮಂಚಕೂ ಆಗದೆ ಮೌನದ ಸನ್ನಾಟಾ ಕೋಣೆಯ ತುಂಬ ಸೂತಕವಾಗಿ ಪಸರಿಸುವುದು.

ಹತ್ತಿರವನ್ನು ಕನಸುವ ವೇಳೆಯಲ್ಲಿ ಸುಖಾಸುಮ್ಮನೆ ಉಳಿದುಕೊಳ್ಳುವ ದೂರವೊಂದು ನೆನಪಿಗೆ ಬಂದು ಎಷ್ಟು ತುಳಿದರೂ ಸವೆಯದ ದಾರಿ ದೆವ್ವದ ಹಾಗೆ ಉದ್ದಕೂ ಬೆಳೆಯುತ್ತಿರುವುದನು ಕಂಡೂ, ಕಂಡೂ ದುನಿಯಾದ ರಿವಾಜಿಗೆ ರೋಸಿಹೋಗದೆ ಮತ್ತೊಂದನ್ನು ಮಾಡಲಾಗದ ಅಸಹಾಯಕತೆಯಿಂದಾಗಿ ನಿಟ್ಟುಸಿರಾಗಿಬಿಡುತ್ತೇನೆ.

ಗಮ್ಯ ಗುರುತಿದೆ
ದಾರಿ ಉದ್ದವಿದೆ..

ದಾರಿಯನ್ನು ಸವೆಸುವ ಸಮಯ ಎಲ್ಲ ಋತುಗಳನೂ ತೆರೆದು ತೋರಿಸುವುದು. ಅದ್ಯಾಕೋ ವಸಂತವೆಂಬ ಋತು ನನ್ನೊಳಗಿನ ಆರಜೂಗಳಿಗೆ ತುಂಬ ಆಪ್ತವೆನ್ನಿಸುವುದು. ಶಿಶಿರದಲ್ಲಿ ಉದುರುವ ಎಲೆಗಳನ್ನು ನೋಡುತ್ತಿದ್ದರೆ ಒಳಗೊಂದು ನಂಟನು ಬೆಸೆದುಕೊಳ್ಳಲಾಗದ ಮತ್ತೊಂದು ಅಸಹಾಯಕತೆಗೆ ಗಭರಾಹಟ್ ಧುತ್ತೆಂದು ಎದುರಿಗೆ ನನಗೂ ಎತ್ತರಕ್ಕೆ ಕಾಲಿಲ್ಲದಿದ್ದರೂ ಎದ್ದು ನಿಲ್ಲುವುದು. ಮತ್ತು ಈ ಮುಸಾಫಿರ್ ನಂಥ ಜಿಂದಗಿಯಲ್ಲಿ ಹಾಗೆ ಕಳಚಿಕೊಂಡು ಉದುರಿದ ಎಲೆಗಳು ಕಾಲ ಕೆಳಗೆ ಮುದುರುವ ಪರಿಯನು ನೆನೆದರೇನೇ ಬೇಚೈನುಗೊಳ್ಳುವೆನು.

ಈಗೇನಿದ್ದರೂ ಮಂಚ ಮತ್ತು ದಿಂಬುಗಳು ನನ್ನೊಳಗಿನ ಬೇಬಸಿಗೆ ಮುಲಾಜಿಲ್ಲದ ಸಾಕ್ಷಿಗಳಾಗಿಬಿಡುವವು. ತುಳುಕಿ ಪಾತಗೊಂಡ ಕಣ್ಣ ಹನಿಗಳನು ದಿವ್ಯದ ದಿಂಬೆನ್ನುವುದು ಒಂದು ಚಂದನೆಯ ಆಣೆಕಟ್ಟಾಗಿ ತನ್ನೊಳಗೆ ಜತನದಿಂದ ಶೇಖರಿಸಿಟ್ಟುಕೊಂಡಿದೆ.

ಸರವತ್ತಿನ ರಾತ್ರಿಯಲ್ಲಿ, ಹೆದರಿಸುವ ಕತ್ತಲೆಯ ನೀರವತೆಯಲ್ಲಿ ನಿದ್ದೆ ಕಳೆದುಕೊಂಡು ಇನ್ನೂ ಮಗ್ಗುಲ ಬದಲಿಸುವುದು ತೀರ ದುಸ್ತರ ಮತ್ತು ಹಿಂಸೆ ಅನ್ನಿಸಿ ಎದ್ದು ಬಾಗಿಲ ಸಂದಿಯಲ್ಲಿ ನಿಂತು ನನ್ನೊಳಗಿನ ಬೆರಗುಗಳಿಗೆ ಹಾಗೆ ಸಾಕ್ಷಿಗಳಾಗಿಹೋದ ಅವೇ ಮಂಚ ಮತ್ತು ದಿಂಬನು ತದೇಕಚಿತ್ತದಿಂದ ಕಣ್ಪಿಳುಕಿಸದೆ ದಿಟ್ಟಿಸುತ್ತೇನೆ.

*****

ನನ್ನ ಮೈ ನನ್ನ ಸೆರಗೊಳಗೆಯೇ ಉಳಿದು ಹೋಯಿತು..
ಅದಕ್ಕಿಂತ ಮೊದಲು –
ಮುಟ್ಟುವ ಆಟದಲಿ ಅವನನು ಮುಂದು ಬಿಡಲೇ ಇಲ್ಲ… ಬೆನ್ನು ತಿರುಗಿಸಿದೆ, ಕೈ ಗಳನು ಅಡ್ಡ ತಂದೆ, ಮುಖ ಕೂಡ ಅತ್ತ ತಿರುಗಿಸಿದೆ.. ಇಬ್ಬರ ನಡುವೊಂದು ಅಂತರವನ್ನು ಸಾಧಿಸಿದ್ದೆ..- ನನ್ನ ಮೈಯನೇ ನನ್ನೊಳಗೇ ಎಳೆದುಕೊಳ್ಳುವ ಆ ವೇಳೆಯಲ್ಲಿ ನನ್ನೊಳಗೊಂದು ಗಭರಾಹಟ್ ಇತ್ತು.

ಮನೆಯ ತುಂಬ ಜೊತೆಯಾಗಿ ಹೆಜ್ಜೆಗಳನು ಮೂಡಿಸಿಬಿಡುವ ಹಗಲುಗನಸಿಗಿಳಿದವನ ಬೇಕರಾರಿಗೆ ಏನು ಹೇಳಬಲ್ಲವಳಾಗಿದ್ದೆ ನಾನು..

ನಮ್ಮಗಳ ನಡುವಿನ ಮೌನದ ಭೀಕರತೆಯನು ಮೊಟ್ಟ ಮೊದಲ ಬಾರಿಗೆ ಇಬ್ಬರೂ ಅನುಭವಿಸಿಯಾಗಿತ್ತು..

ಅವನು ತನ್ನೊಳಗನ್ನು ಬಸಿದುಕೊಂಡವನಂತೆ ತಿರಗಿಯೂ ನೋಡದೆ ನಡೆದುಹೋದನೆಂದರೆ ಹೊಳ್ಳಿ ಬರಲು ಮತ್ತೊಂದು ಋತುವೇ ಬರಬೇಕೇನೊ..

ಗೆಲ್ಲುವ ಅಮಲನು ತಲೆಗೇರಿಸಿಕೊಂಡಾಗ ಅವನು ಅವನಾಗಿರುವುದೇ ಇಲ್ಲ. ಮತ್ತು ನಾನು ಏನೆಂದು ಅವನಿಗೆ ಅರ್ಥವಾಗಲೇ ಇಲ್ಲ. ನೀನು ಸೋತು ಬಂದಾಗಲೇ ನನಗಿಷ್ಟವಾಗುವುದು ಹುಡುಗಾ.. ಗೆದ್ದೆನೆಂದುಕೊಳ್ಳುವ ನಾನು ಯಾವಾಗಲೂ ಸೋಲುವ ಇರಾದೆಯವಳೇ ಆಗಿರ್ತೀನಿ.. ಅನ್ನುವ ಸೂಕ್ಷ್ಮ ನಿನಗೆ ತಿಳಿಯದುದೆ.. ಸೋತು ಗೆಲ್ಲುವ ಆಟದಲಿ ಗೆಲುವಿದೆ- ಇದನ್ನೆಲ್ಲ ಅವನಿಗೆ ತಿಳಿಸಿ ಹೇಳಲು ಹೋಗಿ ಬಾರಿ, ಬಾರಿ ಸೋತಿದ್ದೇನೆ.

ಬೀರುವನ್ನು ತೆರೆದು ಮುಚ್ಚಿಟ್ಟ ಮೊಹಬ್ಬತ್ತಿನ ಹೊತ್ತಿಗೆಯನ್ನು ನಾಜೂಕಿನಿಂದ ಎತ್ತಿಕೊಳ್ತೇನೆ.. ಆ ಹೊತ್ತಿಗೆಯಲ್ಲಿ ಮನದ ಹಲವು ಪಿಸು ಮಾತುಗಳು ನಕ್ಷತ್ರಗಳ ಸಾಕ್ಷಿಯಲ್ಲಿ, ಬೆಳದಿಂಗಳ ಉಪಸ್ಥಿತಿಯಲ್ಲಿ ಧಾಖಲಾಗಿಹೋಗಿವೆ..

ಮಂಚದ ಮೇಲೆ ಬೋರಲಾಗಿ ಮಲಗಿ ಹೊಸದೇ ಆದ ಪುಟದ ಮೇಲೆ ಮತ್ತೊಂದು ಹೊಸ ಅಧ್ಯಾಯ ಏನೆಂದು ಬರೆಯುವುದು ಗೊತ್ತಾಗದೆ ಅಂಗಾತ್ತಾಗಿ ಮಲಗಿ ಸೂರನೇ ದಿಟ್ಟಿಸ್ತೇನೆ..
ಸೂರಿಗೆ ನೇತು ಹಾಕಿದ ಫ್ಯಾನ್ ಉಸಿರನು ಕಳೆದುಕೊಂಡು ನಿಶ್ಚಲವಾಗಿತ್ತು..

ಇಲ್ಲಿಯವರೆಗಿನ ಎಲ್ಲ ಹಕೀಕತ್ತುಗಳೂ ಒಂದೊಂದೇ ಚಿತ್ರಪಟಗಳಾಗಿ ಮನದ ಭಿತ್ತಿಯಲ್ಲಿ ಮೂಡತೊಡಗಿ ಹೊಸದೇ ಆದ ಋತುವಿನ ಗಾಳಿ ಬೀಸುವುದು.

ಪರಿಚಿತದ ಎಲ್ಲವೂ ಜೊತೆಯಲಿರುವಾಗ ಈಗೀಗ ನನಗೇ ನಾನು ಅದು ಹೇಗೆ ಅಪರಿಚಿತ ಆಗಿ ಹೋದೆನೋ..
ನನಗೇ ನನ್ನ ಪರಿಚಯ ಆಗ್ಬೇಕು..

ನೀ ಬೇಕು..- ಎಂದೆಲ್ಲ ಹೊತ್ತಿಗೆಯ ಹೊಸದೇ ಆದ ಒಂದು ಪುಟದಲ್ಲಿ ಬರೆದುಕೊಳ್ತೇನೆ..

ಯಾರಾದರೂ ಹೇಳಿ:
ಪ್ರೇಮವೆಂದರೆ.. ವಿರಹವೇನಾ..

ಎದೆಯ ಗಾಯಗಳನು ಸೆರಗು ಹಾಸಿ ಗಾಳಿಯಲಿ ಆರಿಹಾಕಿರುವೆ. ಒಲವ ಬೇನೆಗೆ ಮುಲಾಮಾಗದ ನನ್ನ ಮಜಬೂರಿ ಏನೆಂದು ಅರಿಯುವ ಸಾಹಸಕಾದರೂ ಒಮ್ಮೆ ಇಳಿದು ನೋಡು ಹುಡುಗಾ..

ಈ ದೂರ ಮತ್ತು ಮೌನದ ಸನ್ನಾಟಾ ಎಂಬುವವು ಎದೆಯ ಮೇಲೆ ಕುಳಿತು ಕುತ್ತಿಗೆ ಹಿಸುಕುತಿವೆ. ಬಣ್ಣವಿಲ್ಲದ ಗೋಡೆಗಳ ನಡುವಿನ ತನ್ಹಾಯಿಗೆ ಬೇಸರಿಸಿರುವೆನು.

ನಾನಿಲ್ಲಿ ಸೂರಿನ ಕೆಳಗಿನ ಬಟಾಬಯಲಿನಲಿ ಕಾಡ ಬೆಳದಿಂಗಳಾಗಿ ಪರಿತಪಿಸುತಿರುವೆ.. ಸರವತ್ತಿನ ರಾತ್ರಿಯಲಿ ಕಿಂದರ ಜೋಗಿ ಆಗಿ ಬಂದು ಮೀಸಲು ಮುರಿಯುವಿಯೆಂದು ಕಾತರಿಸಿರುವೆ.

ಏನನ್ನೋ ನೋಡುತಿರುವ ಕಣ್ಣಲಿ ನೀನೇ ನೋಟವಾಗಿದ್ದೆ.. ಒಬ್ಬರಲ್ಲಿ ಇನ್ನೊಬ್ಬರ ನರ್ತನ ನಿರಂತರವಾಗಿತ್ತು.. ಈ ಮೊಹಬ್ಬತ್ ಹೀಗೆಯೇ.. ಎಲ್ಲೆಗಳನು ಲೆಕ್ಕಿಸದಿರುವುದು..
ನೋಡಿಲ್ಲಿ: ಖೈದಾಗಿರುವೆ..

ಏ ಜಿಂದಗಿ,
ನೀನೆಷ್ಟೇ ಹುಗಿದಿಡು..
ಬಿರುಕು ಬಿಟ್ಟು ಹೊರಗೆ ಹಣುಕುವೆ
ಮುಗಿಲೆತ್ತರದ ಕನಸನು
ಯಃಕಶ್ಚಿತ್ ಗೋಡೆಗಳು ಬಂಧಿಸಿಡಲಾರವು..
ಇಲ್ಲಿ
ಬೀಜದ ಉಸಿರನು ದಫನ್ ಮಾಡಿ
ಗೋರಿ ಕಟ್ಟಲಾಗುವುದಿಲ್ಲ..
ಬಿದಿರಿನ ತಹತಹಿಕೆ ಕೊಳಲಾಗದೆ ಕೊರಡಾಗುವುದಿಲ್ಲ
ಗಂಧದ ನರ್ತನಕೆ ಹೂವಾಗಿ ಅರಳದೆ ಇರಲಾಗುವುದಿಲ್ಲ

ನನಗೂ ಈಗ ತಿಳಿದಾಯಿತು: ನಿನ್ನೊಂದಿಗೆ ಒಂದಾದಾಗಲೇ ನನಗೆ ಮರುಹುಟ್ಟು ಎಂದು..
ಈ ಅನುಬಂಧಕೆ ಏನು ಹೇಳಲಿ..
ಸಮಯದೊಂದಿಗಿನ ಓಟ ದಣಿಸುತಿದೆ..
ಕಾಲಾತೀತವಾಗಿ ಕಾಯುತಿರುವೆ ಇಂದಾದರೂ ಬಾ ಗೆಳೆಯ..

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಲಕ್ಷ್ಮಣ ಶರೆಗಾರ

ಲಕ್ಷ್ಮಣ ಶರೆಗಾರ ವಕೀಲ ವೃತ್ತಿ, ಗೋಕಾಕದಲ್ಲಿ ವಾಸ, ಮೂರು ಕಥಾಸಂಕಲನಗಳು ಪ್ರಕಟ ಆಗಿವೆ, ಗಝಲ್ ಸಂಕಲನ ಪ್ರಕಟಿಸುವುದಿದೆ.. ಬಿಡುಗಡೆ ಕತೆಗೆ, ಸುರಭಿ ಕಥಾಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ