Advertisement
ಕೆಂಬೂತ: ಡಾ. ಎಸ್.ವಿ. ನರಸಿಂಹನ್‌‌ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

ಕೆಂಬೂತ: ಡಾ. ಎಸ್.ವಿ. ನರಸಿಂಹನ್‌‌ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

ಇವುಗಳದ್ದು ತುಂಬಾ ಸಂಕೋಚ ಸ್ವಭಾವ. ಇದರ ರೆಕ್ಕೆಗಳು ದುರ್ಬಲವಾದ್ದರಿಂದ ಇವು ಹೆಚ್ಚಾಗಿ ಮರ-ಪೊದೆಗಳಲ್ಲಿ ಕುಪ್ಪಳಿಸಿಕೊಂಡು ಆಹಾರವನ್ನು ಅರಸುತ್ತವೆ. ಕೆಂಬೂತಗಳ ಆಹಾರ ಬಲುಬಗೆಯ ಕೀಟಗಳು, ಹುಳುಗಳು, ಧಾನ್ಯಗಳು, ಹಣ್ಣುಗಳು, ಬೀಜಗಳು, ಅನ್ಯ ಹಕ್ಕಿಯ ಮೊಟ್ಟೆಗಳು, ಚಿಕ್ಕ ಹಾವುಗಳು, ಕೆಲ ವಿಷಕಾರಿ ಹಣ್ಣುಗಳು ಮತ್ತು ಅದರ ಬೀಜಗಳು. ಪಾಮ್ ಎಣ್ಣೆ ಮರದಲ್ಲಿನ ಹಣ್ಣನ್ನು ಬಯಸುವ ಇವು, ಪಾಮ್-ಮರದ ಕೃಷಿಕರಲ್ಲಿ ಬೆಳೆ ನಾಶಕ ಎಂದೆನಿಸಿವೆ. ಅಲ್ಲದೆ ಕೆಂಬೂತಗಳು ಸಣ್ಣ ಪಕ್ಷಿಗಳ ಪಾಲಿಗೆ ಉಪದ್ರಕಾರಿಗಳೇ ಆಗಿವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಬೂತದ ಕುರಿತ ಬರಹ ಇಲ್ಲಿದೆ

ಓದುಗರೇ, ಇಂದು ನಾವು ತಿಳಿದುಕೊಳ್ಳುವ ಹಕ್ಕಿ, ಕೆಂಬೂತ. ಇಂಗ್ಲೀಷಿನಲ್ಲಿ Greater Coucal, ಗ್ರೇಟರ್ ಕೌಕಾಲ್. ಇದರ ವೈಜ್ಞಾನಿಕ ಹೆಸರು, ಸೆಂಟ್ರೋಪಸ್ ಸೆನೆಂಸಿಸ್.

“ನವಿಲು ಕುಣೀತೂಂತ ಕೆಂಭೂತ ಪುಕ್ಕ ತೆರೆದುಕೊಂಡಿತಂತೆ” ಎಂಬ ಗಾದೆಯನ್ನು ನೀವು ಕೇಳಿರಬಹುದು. ನವಿಲು ಕುಣಿಯುವುದನ್ನು ನೋಡಿ, ಕೆಂಬೂತ ತಾನೂ ಇರುವ ಪುಕ್ಕ ಕಿತ್ತುಹಾಕಿ, ನವಿಲುಗರಿ ಕಟ್ಟಿಕೊಂಡು ಇದ್ದ ಪುಕ್ಕವನ್ನೂ ಕಳೆದುಕೊಂಡ ಕತೆ ಇದು. ಇದ್ದವರು ಯಾರೋ ಏನೋ ಮಾಡುತ್ತಾರೆಂದು ಇಲ್ಲದವರು ಅವರಂತೆ ಆಡಬಾರದು ಎಂಬುದು ಈ ಗಾದೆಯ ನೀತಿ.

ಕೆಂಬೂತ, ಕೋಗಿಲೆ ಗಣಕ್ಕೆ ಸೇರಿದ ಒಂದು ಹಕ್ಕಿ ಪ್ರಭೇದ. ಈ ಹಕ್ಕಿಯ ವ್ಯಾಪ್ತಿ ವಿಶಾಲವಾಗಿದ್ದು, ಏಷ್ಯಾದ ಬಹು ಭಾಗ, ಚೀನಾ, ಇಂಡೋನೇಷ್ಯಾಗಳಲ್ಲಿ, ಮತ್ತು ಭಾರತದ ಕುರುಚಲು, ಬಿದಿರುಕಾಡು, ಬಯಲುಪ್ರದೇಶ ಮತ್ತು ಜನವಸತಿಯಿರುವೆಡೆ ಸಣ್ಣ ಮರಗಳ ಪೊದೆಗಳಲ್ಲಿ, ಹೀಗೆ ಎಲ್ಲ ಆವಾಸಗಳಲ್ಲಿಯೂ ಕಂಡುಬರುತ್ತದೆ. ಕೆಂಬೂತ, ಕಾಗೆ ಗಾತ್ರದ 48 ಸೆಂಮೀ. ಹಕ್ಕಿ. ಇದರ ತಲೆ, ಬೆನ್ನು, ಎದೆ, ಹೊಟ್ಟೆ ಭಾಗಗಳೆಲ್ಲಾ ನೀಲಿ ಮಿಶ್ರಿತ ಹೊಳೆವ ಕಪ್ಪು, ಕಣ್ಣುಗಳು ಕೆಂಪು, ರೆಕ್ಕೆ ಮತ್ತು ಭುಜದ ಭಾಗಗಳು ತಾಮ್ರದಂತೆ ಕೆಂಗಂದು. ಇದರೊಂದಿಗೆ ಸಡಿಲವಾದ, ಉದ್ದವಾದ ಕಪ್ಪು ಪಟ್ಟೆ ಬಾಲ. ಹೆಣ್ಣು ಗಂಡಿಗಿಂತಲೂ ಸ್ವಲ್ಪ ದೊಡ್ಡದಾದರೂ ಮೇಲ್ನೋಟಕ್ಕೆ ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸವಿಲ್ಲ. ಮರಿಗಳ ದೇಹ ಮಂದ ಕಪ್ಪಾಗಿದ್ದು, ನೆತ್ತಿಯ ಮೇಲೆ ಚುಕ್ಕಿಗಳು ಮತ್ತು ಬಾಲದ ಅಡಿಯಲ್ಲಿ ಬಿಳಿ ಅಥವಾ ಬೂದಿ ಬಣ್ಣದ ಅಡ್ಡ ಗೆರೆಗಳಿರುತ್ತವೆ.

ಇವುಗಳದ್ದು ತುಂಬಾ ಸಂಕೋಚ ಸ್ವಭಾವ. ಇದರ ರೆಕ್ಕೆಗಳು ದುರ್ಬಲವಾದ್ದರಿಂದ ಇವು ಹೆಚ್ಚಾಗಿ ಮರ-ಪೊದೆಗಳಲ್ಲಿ ಕುಪ್ಪಳಿಸಿಕೊಂಡು ಆಹಾರವನ್ನು ಅರಸುತ್ತವೆ. ಕೆಂಬೂತಗಳ ಆಹಾರ ಬಲುಬಗೆಯ ಕೀಟಗಳು, ಹುಳುಗಳು, ಧಾನ್ಯಗಳು, ಹಣ್ಣುಗಳು, ಬೀಜಗಳು, ಅನ್ಯ ಹಕ್ಕಿಯ ಮೊಟ್ಟೆಗಳು, ಚಿಕ್ಕ ಹಾವುಗಳು, ಕೆಲ ವಿಷಕಾರಿ ಹಣ್ಣುಗಳು ಮತ್ತು ಅದರ ಬೀಜಗಳು. ಪಾಮ್ ಎಣ್ಣೆ ಮರದಲ್ಲಿನ ಹಣ್ಣನ್ನು ಬಯಸುವ ಇವು, ಪಾಮ್-ಮರದ ಕೃಷಿಕರಲ್ಲಿ ಬೆಳೆ ನಾಶಕ ಎಂದೆನಿಸಿವೆ. ಅಲ್ಲದೆ ಕೆಂಬೂತಗಳು ಸಣ್ಣ ಪಕ್ಷಿಗಳ ಪಾಲಿಗೆ ಉಪದ್ರಕಾರಿಗಳೇ ಆಗಿವೆ. ಸಣ್ಣ ಪಕ್ಷಿಗಳ ಗೂಡುಗಳೇನಾದರು ಇವುಗಳ ಕಣ್ಣಿಗೆ ಬಿದ್ದರೆ, ಗೂಡನ್ನು ತರಿದು, ಮೊಟ್ಟೆಗಳನ್ನು ತಿಂದು ಹಾಕುತ್ತವೆ.

ಬೆಳಗಿನ ಬಿಸಿಲಲ್ಲಿ ಒಂಟಿ ಇಲ್ಲವೇ ಜೋಡಿಯಾಗಿ, ರೆಕ್ಕೆ ಹರಡಿ ಮೈ ಕಾಯಿಸಿಕೊಂಡು ಸೂರ್ಯನ ತಾಪ ಕಡಿಮೆ ಇರುವ ಸಮಯದಲ್ಲಿ ತಮ್ಮ ಚಟುವಟಿಕೆಗಳಲ್ಲಿ ತೊಡಗುತ್ತವೆ. ಕೆಂಬೂತದ ಸುಪರಿಚಿತವಾದ, ಹ್ಹು.ಹ್ಹೂ.ಹೂ.. ಹ್ಹೂ. ಎಂಬ ಪ್ರತಿಧ್ವನಿಸುವ, ಕೂಗನ್ನು ಎಲ್ಲರೂ ಕೇಳಿದ್ದೇವೆ. ಕೆಲವೊಮ್ಮೆ ಇವು ಯುಗಳ ಕೂಗಿನಲ್ಲಿ ತೊಡಗಿದಾಗ, ಶಂಖನಾದದಿಂದ ಹಿಡಿದು, ವಟಗುಟ್ಟುವ ಕರೆ, ಕಿರಚುವ, ಬುಸುಗುಟ್ಟುವ ಕೋಪದ ಕೂಗು ಹೀಗೆ ಇವುಗಳು ಬಗೆಬಗೆಯ ಕರೆಗಳನ್ನು ಹೊಂದಿವೆ.

ಕೆಂಬೂತ ಸಂತಾನ ಅಭಿವೃದ್ಧಿಯಲ್ಲಿ ಅದರದ್ದೇ ಆದ ವೈಚಿತ್ರ‍್ಯಗಳನ್ನು ಹೊಂದಿದೆ. ಕೋಗಿಲೆ ಗಣಕ್ಕೆ ಸೇರಿದ್ದರೂ, ಇದು ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಡುವ ಪರಾವಲಂಬಿ ಹಕ್ಕಿಯಲ್ಲ. ಗಂಡು ಹಕ್ಕಿಗಳು ಒಂದೇ ಹೆಣ್ಣು ಕೆಂಬೂತದೊಡನೆ ಜೀವಾವಧಿ ಸಂಬಂಧ ಹೊಂದಿರುತ್ತವೆ. ಗಂಡು ಕೆಂಬೂತಗಳು ಸಂತಾನ ಪಾಲನೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ದಕ್ಷಿಣ ಭಾರತದ ಕೆಂಬೂತಗಳು ಸಾಧಾರಣವಾಗಿ ಮುಂಗಾರು ಮಳೆಗಾಲದ ಅಂದರೆ, ಜೂನ್ – ಸೆಪ್ಟೆಂಬರ್ ತಿಂಗಳುಗಳಲ್ಲಿ, ಸಂತಾನ ಅಭಿವೃದ್ಧಿ ಕ್ರಿಯೆಯಲ್ಲಿ ತೊಡಗುತ್ತವೆ. ದಟ್ಟವಾಗಿ ಹಬ್ಬಿರುವ ಬಳ್ಳಿಗಳಲ್ಲಿ, ಬಿದಿರು ಪೊದೆಗಳಲ್ಲಿ ಅಥವ ಈಚಲು ಮರದ ಮೇಲೆ, ಆಳವಾದ ಬಟ್ಟಲಿನಂತಹ ಗೂಡನ್ನು ಗಂಡು ಹಕ್ಕಿಯೇ ಕಟ್ಟುತ್ತವೆ. ಇದರಲ್ಲಿ ಹೆಣ್ಣು ಹಕ್ಕಿ 3-5 ಮೊಟ್ಟೆಗಳನ್ನು ಇಡುತ್ತವೆ. ಹೆಣ್ಣು ಮತ್ತು ಗಂಡು ಹಕ್ಕಿಗಳೆರಡೂ ಗೂಡು, ಮೊಟ್ಟೆ, ಮರಿಗಳ ಪಾಲನೆಯಲ್ಲಿ ತೊಡಗುತ್ತವೆಯಾದರೂ ಗಂಡು ಹಕ್ಕಿಯದ್ದೇ ಪ್ರಧಾನ ಪೋಷಣೆಯ ಜವಾಬ್ದಾರಿ! 15-16 ದಿನಗಳಲ್ಲಿ ಕಾವಿಟ್ಟ ಮೊಟ್ಟೆಗಳು ಮರಿಯಾಗಿ, ನಂತರ 18-22 ದಿನಗಳಲ್ಲಿ ಮರಿಗಳು ಹಾರಲು ಸಿದ್ಧವಾಗುತ್ತವೆ.

ಕೆಂಬೂತದ ಕೂಗು, ಅನೇಕ ಸಂಸ್ಕೃತಿಗಳಲ್ಲಿ ಶಕುನ ಸೂಚಕ ಎಂದು ಪರಿಗಣಿಸಲಾಗಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಸಂಕ್ರಾಂತಿ ಹಬ್ಬದ ದಿನ ಇದನ್ನು ಕಂಡರೆ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇದೆ. ನಾಟಿ-ವೈದ್ಯದಲ್ಲಿ ಇವು ಸಂಜೀವಿನಿ ಮೂಲಿಕೆ ತರುವುದೆಂದೂ, ಇದರ ಮಾಂಸ ಕ್ಷಯರೋಗ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳಿಗೆ ಮದ್ದೆಂದೂ ಪರಿಗಣಿಸಲ್ಪಟ್ಟಿದೆ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ