ಯಕ್ಷಗಾನದಲ್ಲಿ ಭೀಷ್ಮ ವಿಜಯ, ವಾಲಿವಧೆ, ಕೃಷ್ಣ ಸಂಧಾನ ಇವೆಲ್ಲವೂ ವಾದಕೇದ್ರಿತವಾಗಿ, ರಸವೆನ್ನುವುದನ್ನು ಹುಡುಕಬೇಕಾಗಿದೆ. ವಾಲಿ ಸುಗ್ರೀವ ಎದುರಾದಾಗ “ಮತ್ತು ಮತ್ತೆನ್ನೆಡೊನೆ ನಿತ್ತುಕೊಂಡೀರಣದಿ ಉತ್ತರವ ಕೊಡುವೆ” ಎನ್ನುವ ಭರದಲ್ಲಿ ಉದ್ದುದ್ದು ಮಾತನಾಡುವ ಪ್ರವೃತ್ತಿಯನ್ನು ನಿರಾಕರಿಸುವಾಗ ಗ ನಾ ಭಟ್ಟರಿಗೆ ವರ್ತಮಾನದ ತಾಳಮದ್ದಳೆಯ ಅಪಸವ್ಯಗಳು ಎದುರಾಗಿವೆ. ವೀರ ರಸದ ಭಾಗದಲ್ಲಿ ಮಾತು ಕಡಿಮೆ ಆಡಬೇಕೆನ್ನುವ ಔಚಿತ್ಯಪ್ರಜ್ಞೆಯನ್ನು ಅವರು ವಿವರಿಸುತ್ತಾರೆ. ರಾಮ ಧರ್ಮಸೂಕ್ಷ್ಮವನ್ನು ವಿವರಿಸಬೇಕೆ ಹೊರತೂ ತರ್ಕದ ಹಾದಿ ಹಿಡಿಯ ಬಾರದು. ಜೊತೆಗೆ ಪಾರ್ತಿಸುಬ್ಬ ವಾಲಿಯನ್ನು ಉದಾತೀಕರಣಕೊಳಿಸಿರುವುದನ್ನು ಕಟುವಾಗಿ ಟೀಕಿಸುತ್ತಾರೆ. ಇದು ಓರ್ವ ವಿಮರ್ಶಕನಿರಬೇಕಾದ ನಿಲುವು.
ಗ.ನಾ. ಭಟ್ಟ ಬರೆದ “ಮಾತು ಮದ್ದಳೆ” ಕೃತಿಯ ಕುರಿತು ನಾರಾಯಣ ಯಾಜಿ ಬರಹ
ತಾಳಮದ್ದಳೆ ಕೇವಲ ಮನೋರಂಜನೆಯ ಕಲೆಯಲ್ಲ; ಅದು ಭಾರತೀಯ ಸಂಸ್ಕೃತಿ, ಧರ್ಮ, ಕಾವ್ಯ ಮತ್ತು ತತ್ತ್ವಚಿಂತನೆಯ ಜೀವಂತ ಅಭಿವ್ಯಕ್ತಿ. ವೇಷಭೂಷಣವಿಲ್ಲದೆ, ಮಾತಿನ ಮೂಲಕವೇ ಪಾತ್ರಗಳಿಗೆ ಜೀವ ತುಂಬುವ ಈ ಕಲೆಯಲ್ಲಿ ಅರ್ಥಗಾರಿಕೆಯ ಪಾತ್ರ ಅತ್ಯಂತ ಮಹತ್ವದ್ದು. ಈ ಅರ್ಥಗಾರಿಕೆಯ ಸ್ವರೂಪ, ಅದರ ಮಿತಿ, ಸಾಧ್ಯತೆ ಮತ್ತು ಹೊಣೆಗಾರಿಕೆಯನ್ನು ಆಳವಾಗಿ ಪರಿಶೀಲಿಸಿದ ಕೃತಿಯೇ ವಿದ್ವಾನ್ ಗ. ನಾ. ಭಟ್ಟರ “ಮಾತು ಮದ್ದಳೆ.” ತಾಳಮದ್ದಳೆಯ ಪ್ರಸಿದ್ಧ ಅರ್ಥದಾರಿ, ಸಂಘಟಕ, ಉಪನ್ಯಾಸಕ ಹಾಗೂ ಭಾರತೀಯ ಸಂಸ್ಕೃತಿ ಮತ್ತು ವೇದಶಾಸ್ತ್ರಗಳಲ್ಲಿ ಪಾಂಡಿತ್ಯ ಹೊಂದಿದ ಗ. ನಾ. ಭಟ್ಟರು, ತಮ್ಮ ದೀರ್ಘ ಅನುಭವವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಸಂಗತಿ ಅರ್ಥವಾಗಬೇಕಾದರೆ ಯಕ್ಷಗಾನ ತಾಳಮದ್ದಳೆಯ ಮೂಲ ನಿರ್ವಚನವನ್ನು ಗಮನಿಸಬೇಕಾಗುತ್ತದೆ. ಈ ರಂಗವನ್ನು ಒಂದು ಕೇವಲ ಪ್ರದರ್ಶನಕಲೆ ಎಂದು ಅಂದುಕೊಂಡರೆ ಸಾಧ್ಯವಾಗುವುದಿಲ್ಲ. ಯಾವ ಆಹಾರ್ಯದ ಸಂಭ್ರಮವಿಲ್ಲದೇ ಕೇವಲ ವಾಚಿಕಾಭಿನಯದ ಮೂಲಕ ಮಹಾಕಾವ್ಯಗಳ ಸತ್ವವನ್ನು ಪ್ರೇಕ್ಷಕರಿಗೆ ತಲುಪಿಸಬೇಕಾದ ಹೊಣೆ ಅರ್ಥಗಾರಿಕೆಯಲ್ಲಿ ಇರಬೇಕಾಗುತ್ತದೆ ಎನ್ನುವುದು ಭಟ್ಟರ ಆಶಯ. ಹಾಗಾಗಿ ಅವರು ಮೊದಲ ಲೇಖನ ಪಟ್ಟಾಭಿಷೇಕ ಪ್ರಸಂಗದಲ್ಲಿ ಸುಮಂತ್ರನ ಪಾತ್ರವನ್ನು ಗೌಣವಾಗಿಸುವ ಕ್ರಿಯೆಗೆ ಅಸಮ್ಮತಿ ಸೂಚಿಸುತ್ತಾರೆ. ಯಕ್ಷಗಾನ ಕಲಾವಿದರನೇಕರು ತಮಗೆ ಪ್ರಸಂಗವೇ ಆಧಾರ ಎಂದು ಹೇಳುವುದನ್ನು ಗಮನಿಸಬಹುದು. ಇದು ನಿಜವಾದರೂ ಅಲ್ಲಿ ಮಹಾಕಾವ್ಯದ ಆದರ್ಶವನ್ನು ಮರೆಯಬಾರದು ಎನ್ನುವ ಕಳಕಳಿ ಗಮನಾರ್ಹ. ದಶರಥ ಹೇಳಿದಕೂಡಲೇ ರಾಮ ಪಟ್ಟಾಭಿಷೇಕಕ್ಕೆ ಗೋಣು ಆಡಿಸಿದರೆ ರಾಮನಂತಹ ರಾಮನ ಆದರ್ಶಕ್ಕೆ ಭಂಗ ಬರುತ್ತದೆ. ರಾಮ ತಂದೆಯಲ್ಲಿ ಭರತ ಶತೃಘ್ನರು ಯಾಕೆ ಇಲ್ಲ ಎಂದು ಕೇಳಿದರೆ ಅದಕ್ಕೆ ದಶರಥ ಉತ್ತರಿಸಿದರೆ ಪಟ್ಟಾಭಿಷೇಕಕ್ಕೆ ರಾಮ ಸಿದ್ಧನಾಗುವುದಕ್ಕೆ ಮೌಲ್ಯವೊಂದು ಸಿಗುತ್ತದೆ. ಕಲೆಯ ಅಭಿವ್ಯಕ್ತಿಯ ದೃಷ್ಟಿಯಿಂದ ಈ ನೋಟ ಬಲು ಮಹತ್ವದ್ದು. ತಾಳಮದ್ದಳೆ ಶಾಸ್ತ್ರ ಮತ್ತು ಕಾವ್ಯಗಳ ಆಶಯಗಳನ್ನು ಪ್ರೇಕ್ಷಕರ ಅಂತಃಕರಣಕ್ಕೆ ತಲುಪಿಸುವ ಒಂದು ತತ್ವಜ್ಞಾನದ ವೇದಿಕೆ. ಇಂತಹ ತಾಳಮದ್ದಲೆಯ ಅರ್ಥಗಾರಿಕೆಗೆ ಹೊಸ ಆಯಾಮವನ್ನು ನೀಡಿ, ಕಲೆಯ ಔಚಿತ್ಯವನ್ನು ವಿಶ್ಲೇಷಿಸಿದ ಕೃತಿ ವಿದ್ವಾನ್ ಗ.ನಾ.ಭಟ್ಟರ ‘ಮಾತು ಮದ್ದಳೆ’. ಭಾರತೀಯ ಸಂಸ್ಕೃತಿ, ವೇದಗಳು ಹಾಗೂ ಸಾಹಿತ್ಯ ವಿಮರ್ಶೆಯಲ್ಲಿ ಆಳವಾದ ಹಿಡಿತ ಹೊಂದಿರುವ ಭಟ್ಟರು, ತಾಳಮದ್ದಲೆಯ ಅರ್ಥಧಾರಿಗಳಾಗಿ ತಮಗಿರುವ ದಶಕಗಳ ಅನುಭವದ ಬುತ್ತಿಯನ್ನು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ.
ಕೃತಿಯ ವಸ್ತು ಮತ್ತು ರಾಮಾಯಣದ ಪ್ರಸಂಗಗಳ ವಿವೇಚನೆ: ‘ಮಾತು ಮದ್ದಳೆ’ ಕೃತಿಯು ಮುಖ್ಯವಾಗಿ ರಾಮಾಯಣದ ಕಥಾವಸ್ತುಗಳನ್ನು ಒಳಗೊಂಡ ಹದಿನಾಲ್ಕು ಪ್ರಸಂಗಗಳು ಹಾಗೂ ‘ವೀರಮಣಿ ಕಾಳಗ’ ಸೇರಿದಂತೆ ಒಟ್ಟು ಹದಿನೈದು ಪ್ರಸಂಗಗಳ ಅರ್ಥಗಾರಿಕೆಯನ್ನು ಆಳವಾದ ನಿಕಷಕೊಡ್ಡಿದ್ದಾರೆ. ಶ್ರೀರಾಮ ಪಟ್ಟಾಭಿಷೇಕದ ಆರಂಭದ ಕ್ಷಣಗಳಿಂದ ಹಿಡಿದು ಶ್ರೀರಾಮ ನಿರ್ಯಾಣದವರೆಗಿನ ಸುದೀರ್ಘ ಪಯಣದ ಪ್ರಸಂಗಗಳು ಇಲ್ಲುಂಟು.

(ಗ.ನಾ. ಭಟ್ಟ)
ಲೇಖಕರು ಪ್ರಸಂಗಗಳ ಪದ್ಯಗಳನ್ನು ಮೂಲ ವಾಲ್ಮೀಕಿ ರಾಮಾಯಣದೊಂದಿಗೆ ತೌಲನಿಕವಾಗಿ ಪರಿಶೀಲಿಸುತ್ತಾ, ಕವಿಯ ಕಾಣ್ಕೆಯನ್ನು ಒರೆಗೆ ಹಚ್ಚುತ್ತಾರೆ. ಪಟ್ಟಾಭಿಷೇಕ ಪ್ರಸಂಗದಲ್ಲಿ ದಶರಥನ ಪಾತ್ರ ಪ್ರವೇಶದ ಪೀಠಿಕೆಯಿಂದಲೇ ಲೇಖಕರು ಅರ್ಥಗಾರಿಕೆಯ ಮರ್ಮವನ್ನು ಬಿಡಿಸುತ್ತಾ ಹೋಗುತ್ತಾರೆ. ದಶರಥನು ತನ್ನ ಪೂರ್ವಜರನ್ನು ಸ್ಮರಿಸುತ್ತಾ, ತನಗೆ ಬಹುಕಾಲ ಮಕ್ಕಳಿಲ್ಲದ ಬೇಗುದಿ ಹಾಗೂ ಅಂತಿಮವಾಗಿ ಮಕ್ಕಳಾದಾಗ ಆದ ಸಂತೋಷದ ಜೊತೆಗೆ, ತನ್ನ ಆಂತರ್ಯದ ದುಗುಡವನ್ನು ವ್ಯಕ್ತಪಡಿಸಬೇಕು ಎನ್ನುತ್ತಾರೆ. ವಿಶೇಷವಾಗಿ, ದಶರಥನ ಜೀವನದ ದುರಂತಕ್ಕೆ ಕಾರಣವಾದ ಶ್ರವಣ ಕುಮಾರನ ವಧೆ ಹಾಗೂ ಪುತ್ರಶೋಕದಿಂದ ಸಾಯುವ ಶಾಪದ ಪ್ರಸ್ತಾಪವನ್ನು ಕಲಾವಿದರು ಅರ್ಥಗಾರಿಕೆಯಲ್ಲಿ ತರಬೇಕಾದ ಅಗತ್ಯವನ್ನು ಭಟ್ಟರು ಬಲವಾಗಿ ಪ್ರತಿಪಾದಿಸುತ್ತಾರೆ. ಪ್ರಸಂಗ ಪಠ್ಯದಲ್ಲಿ ಇಲ್ಲವೆಂಬ ಕಾರಣಕ್ಕೆ ಈ ಸೂಕ್ಷ್ಮಗಳನ್ನು ಕೈಬಿಟ್ಟರೆ ದಶರಥನ ಪಾತ್ರದ ಜೀವಾಳವೇ ನಷ್ಟವಾಗುತ್ತದೆ ಎಂಬುದು ಅವರ ಮಾರ್ಮಿಕ ಅನಿಸಿಕೆ.
ಪಾದುಕಾ ಪ್ರಧಾನ ಈ ಪ್ರಸಂಗ ಭರತನ ಭಾವಾವೇಶ ಮತ್ತು ರಾಮನ ತರ್ಕಬದ್ಧ ಸಂಗತಿಗಿಂತಲೂ ಕೈಕೆಯಿಯ ಒಂದು ಕ್ಷಣದ ತಪ್ಪಿನಿಂದ ಅಯೋಧ್ಯೆಯ ದುರಂತಕ್ಕೆ ತಾನು ಕಾರಣನಾಗಿದ್ದೇನೆ ಎನ್ನುವ ಅಪರಾಧಿ ಪ್ರಜ್ಞೆ ಭರತನಲ್ಲಿರುವುದು ಬಲು ಮುಖ್ಯ. ಕೈಕೇಯಿಯ ಪಾತ್ರ ಗ್ರೀಕ್ ನಾಟಕದಲ್ಲಿ ಬರುವ Character of Hamartia (ದುರಂತದೋಷ) ಲಕ್ಷಣಕ್ಕೆ ಹತ್ತಿರವಾಗಿದೆ. ಇಂತವಳ ಮಗನಾಗಿ ಭರತ ಅನುಭವಿಸುವ ನೋವು ಅಭಿವ್ಯಕ್ತಿಸುವಾಗ ಅರ್ಥಗಾರನ ಪ್ರಜ್ಞೆ ಜಾಗ್ರತವಾಗಿರಬೇಕಾಗುತ್ತದೆ. ವಾಲ್ಮೀಕಿ “ಯುಗಾಂತೇ ಭಾಸ್ಕರಂ ಯಥಾ” ಎಂದು ವರ್ಣಿಸಿದ ಸನ್ನಿವೇಶವನ್ನು ನಿಭಾಯಿಸಬೇಕಾಗುತ್ತದೆ. ಭರತನ ಭಾವಾವೇಶ, ರಾಮನ ಧರ್ಮನಿಷ್ಠೆ ಮತ್ತು ಇವೆರಡರ ನಡುವೆ ಸಮತೋಲನ ಸಾಧಿಸುವ ವಶಿಷ್ಠನ ಜ್ಞಾನಪೂರ್ಣ ಪಾತ್ರವನ್ನು ಅವರು ವಿಶೇಷವಾಗಿ ಗುರುತಿಸುತ್ತಾರೆ. ತಾಳಮದ್ದಳೆಯಲ್ಲಿ ಪ್ರೇಕ್ಷಕರಿಗೆ ದೊರೆಯಬೇಕಾದದ್ದು ಕೇವಲ ಮಾತಿನ ವೈಭವವಲ್ಲ; ರಸನಿಷ್ಪತ್ತಿ. ವಶಿಷ್ಠನ ಧರ್ಮೋಪದೇಶವು ಸಣ್ಣದರಲ್ಲಿ ಪರಿಣಾಮಕಾರಿಯಾಗಿರುವ ಅಗತ್ಯವಿದೆ ಎನ್ನುವ ಒಳನೋಟವಿಲ್ಲಿದೆ. ಅಂತೆಯೇ, ‘ಪಾದುಕಾ ಪ್ರದಾನ’ದಂತಹ ಕಠಿಣ ಪ್ರಸಂಗದಲ್ಲಿ ಭರತನ ಧರ್ಮಬದ್ಧ ಭಾವಾವೇಶ ಹಾಗೂ ರಾಮನ ತರ್ಕಸಮ್ಮತ ಶಾಂತಚಿತ್ತದ ವಿಷಯ ಮಂಡನೆಗಳು ಹೇಗೆ ಮೇಳೈಸಬೇಕು ಎಂಬುದನ್ನು ವಿವರಿಸುತ್ತಾರೆ. ಇದು ಪ್ರೇಕ್ಷಕರಿಗೆ ರಸದೌತಣವಾಗಬೇಕೇ ಹೊರತು ವಾಗ್ವಾದದ ಮಾರೀ ಔತಣವಾಗಬಾರದು ಎನ್ನುವ ಅಭಿಪ್ರಾಯ ಲೇಖಕರದ್ದು. ರಾಮ ನಿರ್ಯಾಣದ ಪ್ರಸಂಗದವರೆಗೆ ರಾಮನ ಮನಸ್ಥಿತಿ ಹೇಗಿತ್ತು ಎನ್ನುವುದರತ್ತಲೂ ಅವರು ಗಮನ ಹರಿಸಿದ್ದಾರೆ. ಸೀತಾಪಹರಣದ ಸಂದರ್ಭದಲ್ಲಿ ಬರುವ ಸೀತೆಯ ಪದ್ಯಗಳು ಆಕೆಯ ಗಂಭೀರ ವ್ಯಕ್ತಿತಕ್ಕೆ ಚ್ಯುತಿ ತರದಂತೆ, ಗ್ರಾಮ್ಯ ಹೆಣ್ಣಿನಂತೆ ಬಿಂಬಿತವಾಗದಂತೆ ಅರ್ಥಧಾರಿಗಳು ಎಚ್ಚರ ವಹಿಸಬೇಕು ಮತ್ತು ಮೂಲ ರಾಮಾಯಣದ ಆಶಯವನ್ನು ಕಾಯಬೇಕು ಎಂಬುದು ಅವರ ಕಳಕಳಿಯಾಗಿದೆ.
ಪಂಚವಟಿ ಮತ್ತು ಸೀತಾಪಹರಣ ಪ್ರಸಂಗಗಳಲ್ಲಿ ಗ. ನಾ. ಭಟ್ಟರು ಮೂಲಕಾವ್ಯದ ಆಶಯವನ್ನು ಬಿಟ್ಟು ಪಾತ್ರಗಳನ್ನು ಅನಗತ್ಯವಾಗಿ ಉದಾತ್ತೀಕರಿಸುವ ಪ್ರವೃತ್ತಿಯನ್ನು ವಿಮರ್ಶಿಸುತ್ತಾರೆ. ವಿಶೇಷವಾಗಿ ರಾವಣನ ಪಾತ್ರವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಮೂಲ ರಾಮಾಯಣಕ್ಕೆ ವಿರುದ್ಧವಾದ ಅರ್ಥಗಳನ್ನು ಸೇರಿಸುವುದು ಕಲಾತ್ಮಕವಾಗಿಯೂ ಶಾಸ್ತ್ರೀಯವಾಗಿಯೂ ಸಮಂಜಸವಲ್ಲ ಎನ್ನುತ್ತಾರೆ. ಅರ್ಥದಾರಿ ತನ್ನ ಕಲ್ಪನೆಯನ್ನು ಬಳಸಬಹುದು; ಆದರೆ ಅದು ಮೂಲದರ್ಶನಕ್ಕೆ ವಿರುದ್ಧವಾಗಬಾರದು ಎಂಬ ಸಂದೇಶವನ್ನು ಈ ವಿಮರ್ಶೆ ನೀಡುತ್ತದೆ.
ಬಹುಮುಖ್ಯವಾದದ್ದು ವಾಲಿ ವಧೆ ಪ್ರಸಂಗ. ಯಕ್ಷಗಾನದಲ್ಲಿ ಭೀಷ್ಮ ವಿಜಯ, ವಾಲಿವಧೆ, ಕೃಷ್ಣ ಸಂಧಾನ ಇವೆಲ್ಲವೂ ವಾದಕೇದ್ರಿತವಾಗಿ, ರಸವೆನ್ನುವುದನ್ನು ಹುಡುಕಬೇಕಾಗಿದೆ. ವಾಲಿ ಸುಗ್ರೀವ ಎದುರಾದಾಗ “ಮತ್ತು ಮತ್ತೆನ್ನೆಡೊನೆ ನಿತ್ತುಕೊಂಡೀರಣದಿ ಉತ್ತರವ ಕೊಡುವೆ” ಎನ್ನುವ ಭರದಲ್ಲಿ ಉದ್ದುದ್ದು ಮಾತನಾಡುವ ಪ್ರವೃತ್ತಿಯನ್ನು ನಿರಾಕರಿಸುವಾಗ ಗ ನಾ ಭಟ್ಟರಿಗೆ ವರ್ತಮಾನದ ತಾಳಮದ್ದಳೆಯ ಅಪಸವ್ಯಗಳು ಎದುರಾಗಿವೆ. ವೀರ ರಸದ ಭಾಗದಲ್ಲಿ ಮಾತು ಕಡಿಮೆ ಆಡಬೇಕೆನ್ನುವ ಔಚಿತ್ಯಪ್ರಜ್ಞೆಯನ್ನು ಅವರು ವಿವರಿಸುತ್ತಾರೆ. ರಾಮ ಧರ್ಮಸೂಕ್ಷ್ಮವನ್ನು ವಿವರಿಸಬೇಕೆ ಹೊರತೂ ತರ್ಕದ ಹಾದಿ ಹಿಡಿಯ ಬಾರದು. ಜೊತೆಗೆ ಪಾರ್ತಿಸುಬ್ಬ ವಾಲಿಯನ್ನು ಉದಾತೀಕರಣಕೊಳಿಸಿರುವುದನ್ನು ಕಟುವಾಗಿ ಟೀಕಿಸುತ್ತಾರೆ. ಇದು ಓರ್ವ ವಿಮರ್ಶಕನಿರಬೇಕಾದ ನಿಲುವು. ಅತಿಕಾಯ ಕಾಳಗವನ್ನು ಪ್ರಸ್ತಾಪಿಸುತ್ತಾ ಲಕ್ಷ್ಮಣ ಕೊನೆಯವರೆಗೂ ತಾನು ಯಾರು ಎನ್ನುವ ಗುಟ್ಟನ್ನು ಬಿಟ್ಟುಕೊಡಕೂಡದು ಎನ್ನುವ ನಿಲುವು ಇಂದ್ರಜಿತ್ತು ಕಾಳಗದಲ್ಲಿ ಶುಕ್ರಾಚಾರ್ಯನ ಪಾತ್ರವನ್ನು ತರುವುದನ್ನು ಸರಿಯಲ್ಲ ಎನ್ನುವ ಮಾತು ಸಹ ಇಂದಿನ ತಾಳಮದ್ದಳೆಯ ಸಂಘಟಕರು ಗಮನಿಸುವುದು ಒಳ್ಳೆಯದು.
ಇನ್ನೊಂದು ಮುಖ್ಯವಾದ ಪ್ರಸಂಗವೆಂದರೆ “ವೀರಮಣಿ ಕಾಳಗ” ಹನುಮಂತ ಪರಮ ಭಕ್ತ. ವೀರಮಣಿ ಶಿವನೇ ಶ್ರೇಷ್ಠನೆನ್ನುವ ಮೊಂಡುತನ ಹೊಂದಿದವ. ಆತನ ಭಕ್ತಿಗೂ ಹನುಮಂತನ ಭಕ್ತಿಗೂ ವ್ಯತ್ಯಾಸವಿದೆ. ಹನುಮಂತ ಭಕ್ತನಾದರೂ ಆತ ವ್ಯಾಕರಣ ಪಂಡಿತ, ಸಾಧಾರಣ ಮಂಗವಲ್ಲ, ಅದನ್ನು ಅರಿತು ವಿಷ್ಣುಪಾರಮ್ಯವನ್ನು ಮೆರೆಯಬೇಕಾದ ಹಾದಿಯನ್ನು ವಿಶದವಾಗಿ ವಿವರಿಸಿದ್ದಾರೆ. ರಾಮಾಯಣದ ಪಾತ್ರಗಳ ಮೂಲ ಸ್ವಭಾವವನ್ನು ಬದಲಿಸುವ, ಮಹಾಜ್ಞಾನಿ ಹನುಮಂತನನ್ನು ಕೇವಲ ಮಂಗನಂತೆ ನಡೆಸಿಕೊಳ್ಳುವ ಪ್ರವೃತ್ತಿಗಳು ಕಾವ್ಯದ ಮರ್ಯಾದೆಯನ್ನು ಕಾಯುವುದಿಲ್ಲ ಎಂದು ಎಚ್ಚರಿಸುವ ಮೂಲಕ ಅರ್ಥಗಾರಿಕೆಯಲ್ಲಿ ಔಚಿತ್ಯಪ್ರಜ್ಞೆಯ ಮಹತ್ವವನ್ನು ಸಾರುತ್ತಾರೆ.
ಖಳಪಾತ್ರಗಳ ವೈಭವೀಕರಣ ಮತ್ತು ಔಚಿತ್ಯ ಪ್ರಜ್ಞೆ: ಯಕ್ಷಗಾನ ರಂಗದ ಮತ್ತೊಂದು ಪ್ರವೃತ್ತಿಯಾದ ಖಳಪಾತ್ರಗಳ ಅತಿಯಾದ ವೈಭವೀಕರಣವನ್ನು ಲೇಖಕರು ಕಟುವಾಗಿ ಪ್ರಶ್ನಿಸುತ್ತಾರೆ. ಪಂಚವಟಿ ಪ್ರಸಂಗದಲ್ಲಿ ರಾವಣನನ್ನು ಉದಾತ್ತೀಕರಿಸಲು ಮಾಡುವ ಪ್ರಯತ್ನಗಳನ್ನು ಮೂಲ ಶ್ಲೋಕಗಳ ಆಧಾರದೊಂದಿಗೆ ಅವರು ತಿರಸ್ಕರಿಸುತ್ತಾರೆ.
ತಾಳಮದ್ದಲೆಯ ಅರ್ಥಗಾರಿಕೆ: ಕೆಲವು ತಾತ್ತ್ವಿಕ ಟಿಪ್ಪಣಿಗಳು
ವಿದ್ವಾನ್ ಗ.ನಾ.ಭಟ್ಟರ ಆಶಯದಂತೆ, ತಾಳಮದ್ದಲೆಯ ಅರ್ಥಗಾರಿಕೆಯು ಕೇವಲ ವಾಕ್ಚಾತುರ್ಯವಲ್ಲ, ಅದೊಂದು ನಿರಂತರ ಅಧ್ಯಯನಶೀಲತೆಯ ಯಜ್ಞ. ಈ ಕಲೆಯ ಉನ್ನತಿಗೆ ಪೂರಕವಾದ ಕೆಲವು ಮುಖ್ಯ ಸಂಗತಿಗಳು ಇಲ್ಲಿವೆ:
- ಮೂಲ ಕಾವ್ಯ ಮತ್ತು ಶಾಸ್ತ್ರಗಳ ಅಧ್ಯಯನ: ಅರ್ಥಧಾರಿಗಳಾದವರು ಕೇವಲ ಪ್ರಸಂಗದ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಮೂಲ ಕಾವ್ಯಗಳು, ಆಕರ ಗ್ರಂಥಗಳು ಮತ್ತು ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಮೂಲ ಕಾವ್ಯದ ಆಶಯಕ್ಕೆ ವ್ಯತಿರಿಕ್ತವಾದ ಸಂಗತಿಗಳು ಅರ್ಥಗಾರಿಕೆಯಲ್ಲಿ ನುಸುಳದಂತೆ ಬದ್ಧತೆ ಪ್ರದರ್ಶಿಸಬೇಕು.
- ವಾಚಿಕದ ವೈಚಾರಿಕ ವಿಸ್ತಾರ ಮತ್ತು ರಸಪಾಕ: ತಾಳಮದ್ದಲೆಯ ಪ್ರಸ್ತುತಿಯಲ್ಲಿ ವೈಚಾರಿಕ ವಿಸ್ತಾರ ಇರಬೇಕು. ಪಾತ್ರಗಳ ಸ್ಥಾಯಿ ಭಾವ ಮತ್ತು ಸಂಚಾರಿ ಭಾವಗಳನ್ನು ಅಭಿವ್ಯಕ್ತಿಸುವಾಗ ಕಥೆಯ ಚೌಕಟ್ಟನ್ನು ಮೀರಬಾರದು. ಎದುರು ಪಾತ್ರದೊಂದಿಗೆ ಸಂವಾದ ನಡೆಸುವಾಗ ಕಲೆಯ ಮರ್ಯಾದೆ, ಭಾಷೆಯ ಗಾಂಭೀರ್ಯ ಮತ್ತು ಭಾವ-ರಸಗಳ ಪರಿಪಾಕಕ್ಕೆ ಪ್ರಾಧಾನ್ಯತೆ ನೀಡಬೇಕು.
- ಕುತರ್ಕ ಮತ್ತು ಚಮತ್ಕಾರಗಳ ನಿರಸನ: ಇತ್ತೀಚಿನ ದಿನಗಳಲ್ಲಿ ಅರ್ಥಗಾರಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಅಧ್ಯಯನದ ಕೊರತೆ, ಸಭಿಕರಿಂದ ಕೇವಲ ಚಪ್ಪಾಳೆ ಗಿಟ್ಟಿಸಲು ಮಾಡುವ ಕುತರ್ಕಗಳು, ದುರ್ವಾದಗಳು ಮತ್ತು ಎದುರು ಅರ್ಥಧಾರಿಯ ತೇಜೋವಧೆ ಮಾಡುವ ಚಮತ್ಕಾರಗಳನ್ನು ಕಲೆಯ ಹಿತದೃಷ್ಟಿಯಿಂದ ಖಂಡಿಸಬೇಕಾಗಿದೆ. ತಾಳಮದ್ದಲೆಯು ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಸಾರುವ ಮಾಧ್ಯಮವಾಗಬೇಕೇ ಹೊರತು ವೈಯಕ್ತಿಕ ಪ್ರತಿಷ್ಠೆಯ ವೇದಿಕೆಯಾಗಬಾರದು.
- ಪ್ರಯೋಗಶೀಲತೆ ಮತ್ತು ರಂಗತಂತ್ರದ ನವೀಕರಣ: ಮೂಲ ಕಾವ್ಯದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಪ್ರಸಂಗದ ಪರಿಣಾಮವನ್ನು ಹೆಚ್ಚಿಸಲು ಅಗತ್ಯವಾದ ರಂಗತಂತ್ರದ ಬದಲಾವಣೆಗಳನ್ನು ಸ್ವಾಗತಿಸಬೇಕು. ಪದ್ಯಗಳ ಸೂಕ್ತ ಆಯ್ಕೆ, ಸಂವಾದದ ಕ್ರಮ ಮತ್ತು ಪಾತ್ರಗಳ ಆಂತರ್ಯವನ್ನು ಭಾವಪೂರ್ಣವಾಗಿ ತೆರೆದಿಡುವ ಪ್ರಯೋಗಶೀಲತೆ ಅರ್ಥಗಾರಿಕೆಗೆ ಹೊಸ ಜೀವಂತಿಕೆಯನ್ನು ತರುತ್ತದೆ.
ಕೃತಿಯ ಉದ್ದಕ್ಕೂ ಲೇಖಕರು ಅರ್ಥದಾರಿಯ ಅಧ್ಯಯನಶೀಲತೆಯನ್ನೇ ಪ್ರಧಾನವಾಗಿರಿಸಿದ್ದಾರೆ. ವೇದ, ಉಪನಿಷತ್ತು, ರಾಮಾಯಣ, ಭಾರತೀಯ ಸಂಸ್ಕೃತಿ ಮತ್ತು ಕಾವ್ಯಶಾಸ್ತ್ರಗಳ ಜ್ಞಾನವಿಲ್ಲದೆ ತಾಳಮದ್ದಳೆಯ ಅರ್ಥಗಾರಿಕೆ ಪರಿಪೂರ್ಣವಾಗುವುದಿಲ್ಲ ಎಂಬುದು ಅವರ ದೃಢ ನಿಲುವು. ಪಾತ್ರದ ಮಾತು ಪಾಂಡಿತ್ಯ ಪ್ರದರ್ಶನಕ್ಕಾಗಿ ಅಲ್ಲ; ಪಾತ್ರದ ಅಂತರಂಗವನ್ನು ರಸಪೂರ್ಣವಾಗಿ ಅನಾವರಣಗೊಳಿಸುವ ಸಾಧನವಾಗಬೇಕು ಎಂಬುದು ಈ ಕೃತಿಯ ಕೇಂದ್ರಭಾವವಾಗಿದೆ.
ಕೊನೆಯದಾಗಿ ರಾಮ ನಿರ್ಯಾಣ ಪ್ರಸಂಗದಲ್ಲಿ ಲೇಖಕರ ದೃಷ್ಟಿ ಅತ್ಯಂತ ತಾತ್ತ್ವಿಕವಾಗುತ್ತದೆ. ಜೀವನಪರ್ಯಂತ ಧರ್ಮಕ್ಕಾಗಿ ಬದುಕಿದ ರಾಮನು ಅಂತಿಮ ಕ್ಷಣದಲ್ಲಿ ಯಾವ ಮನಃಸ್ಥಿತಿಯಲ್ಲಿದ್ದಾನೆ ಎಂಬ ಪ್ರಶ್ನೆಯನ್ನು ಅವರು ಸೂಕ್ಷ್ಮವಾಗಿ ಚರ್ಚಿಸುತ್ತಾರೆ. ಪಟ್ಟಾಭಿಷೇಕದಲ್ಲಿ ಆರಂಭವಾದ ರಾಜಧರ್ಮದ ಪಯಣ, ಪಾದುಕಾ ಪ್ರಧಾನದಲ್ಲಿ ವಶಿಷ್ಠನಿಂದ ದೃಢಗೊಂಡ ಧರ್ಮದರ್ಶನ ಮತ್ತು ಅಂತಿಮವಾಗಿ ನಿರ್ಯಾಣದಲ್ಲಿ ವೈರಾಗ್ಯಪೂರ್ಣ ಸಮಾಪ್ತಿ, ಸಂಪೂರ್ಣ ಜೀವನವೃತ್ತವನ್ನು ಅವರು ಒಂದೇ ತಾತ್ತ್ವಿಕ ಸೂತ್ರದಲ್ಲಿ ಕಟ್ಟಿಕೊಡುತ್ತಾರೆ.

ಒಟ್ಟಾರೆ “ಮಾತು ಮದ್ದಳೆ“ ತಾಳಮದ್ದಳೆಯ ಅರ್ಥಗಾರಿಕೆಗೆ ದಿಕ್ಸೂಚಿಯಂತಿರುವ ಕೃತಿ. ಇದು ಕೇವಲ ಪ್ರಸಂಗಗಳ ವಿಮರ್ಶೆಯಲ್ಲ; ಮೂಲಕಾವ್ಯದ ನಿಷ್ಠೆ, ಪಾತ್ರದ ಮನೋವಿಜ್ಞಾನ, ರಸಸಿದ್ಧಾಂತ ಮತ್ತು ಭಾರತೀಯ ಮೌಲ್ಯಗಳನ್ನು ಒಟ್ಟುಗೂಡಿಸಿದ ಕಲಾದರ್ಶನ. ತಾಳಮದ್ದಳೆಯ ಅರ್ಥಗಾರರಾಗುವವರಿಗೂ, ಆಸ್ವಾದಕರಿಗೂ, ಸಂಶೋಧಕರಿಗೂ ಈ ಕೃತಿ ಮಾರ್ಗದರ್ಶಕ ಗ್ರಂಥವಾಗಿ ಉಳಿಯುತ್ತದೆ.
(ಕೃತಿಯ: ಮಾತು ಮದ್ದಳೆ, ಲೇಖಕರು: ಗ ನಾ ಭಟ್ಟ, ಪ್ರಕಾಶಕರು: ಮಹಿಮಾ ಪ್ರಕಾಶನ, ಮೈಸೂರು, ಬೆಲೆ: 300/-)

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.


