ಅವರೇನೊ ಸುಲಭವಾಗಿ ಹೊರಟುಬಿಟ್ಟರು. ಏಕಾಂಗಿಯಾದ ನನ್ನ ಪಾಡು? ಗೋವಿಂದ ರೆಡ್ಡಿ ಅವರ ಪ್ರೀತಿಯ ಸುಳಿಯಲ್ಲಿ ಪೂರ್ತಿಯಾಗಿ ಸಿಲುಕಿಬಿಟ್ಟಿದ್ದೆ. ಅವರಿಲ್ಲದ ನಾನು ಒಂಟಿಯಾದಂತೆನಿಸಿತು. ಮದುವೆಯಾದರೆ ಇವರನ್ನೇ ಎಂದು ಮನಸ್ಸು ನಿರ್ಧರಿಸಿತ್ತಲ್ಲಾ! ಕೇಳಿ ಬರಲು ಹೋಗಿದ್ದು. ಗುರುಗಳು ಒಪ್ಪಿಗೆ ನೀಡುತ್ತಾರೆ. ಇಲ್ಲಾ, ಇವರೇ ಒಪ್ಪಿಗೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಕಾದು ಬೆಂಗಾಡಾಗಿದ್ದ ಮನಸ್ಸನ್ನು ಸಮಾಧಾನಿಸುತ್ತಲೇ ಇದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೊಂದನೆಯ ಕಂತು
ಕಂಪೆನಿ ನಿನ್ನ ಹೆಸರಲ್ಲೇ ಮಾಡುತ್ತಿದ್ದೇವೆ ಎಂದು ಗೋವಿಂದರೆಡ್ಡಿ ಅವರು ಹೇಳಿದ್ದಾಗ ನಿಜಕ್ಕೂ ಬೆಕ್ಕಸ ಬೆರಗಾಗಿದ್ದೆ. ಕಂಪೆನಿಯ ಆಗುಹೋಗು ಎಲ್ಲದಕ್ಕೂ ನೀನೇ ಜವಾಬ್ದಾರಳು. ಪಾತ್ರ ಮಾಡುವುದೂ ನೀನೆ, ಮಾಲೀಕತ್ವ ವಹಿಸುವುದೂ ನೀನೆ. ‘ನಮಗೆಲ್ಲ ಸಂಬಳ ಕೋಡಾಕಿ ನೀನೆ ಕಣಮ್ಮಾ’, ಅವರೆಲ್ಲ ಕೂಡಿ ಆಡಿದ ಮಾತು ಹಗಲುಗನಸಿನಂತೆ ಕಳೆದುಹೋಗುವಂತೆ ಮಾಡಿತ್ತು. ನಾನು ಯಾರನ್ನು ‘ಅಣ್ಣಾವ್ರೇ’ ಎಂದು ಭಯಭಕ್ತಿಯಿಂದ ಕರೆಯುತ್ತಿದ್ದೆನೋ ಆ ವೆಂಕಟರೆಡ್ಡಿಯವರೇ ‘ನೀನೀಗ ಮೇಲಿನ ಸ್ಥಾನಕ್ಕೆ ಹೋಗ್ತಿಯಾ!’ ಹೀಗೆ ನಕ್ಕುನುಡಿವಾಗ ಕೆಸರೇ ತಾಕಿರದ ಕೈಯಲ್ಲಿ ಮೊಸರುಣ್ಣುವ ಯೋಗ ನನಗೇಕೆ ಎಂದೆಲ್ಲ ಅನಿಸುತ್ತಿತ್ತು.
ಅಂದು ಮಾತಾಡುವಾಗ ಎಲ್ಲವನ್ನೂ ಗೋವಿಂದ ರೆಡ್ಡಿಯವರು ಎಲ್ಲ, ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದರು. ಪಾರ್ವತಿ ಎಂಬ ಹೆಂಡತಿ, ಮಗುವಿದ್ದ ಸಂಗತಿಯನ್ನು ಮುಕ್ತವಾಗಿ ಹೇಳಿದ್ದರು. ಅಷ್ಟೇ ಆಗಿದ್ದರೆ ಹೂಂಗುಟ್ಟು ಸುಮ್ಮನಿರಬಹುದಿತ್ತು. ಮುಂದುವರೆಸಿ, ‘ನಿನ್ನನ್ನ ಪ್ರೀತಿಸುತ್ತಿದ್ದೇನೆ. ಮದುವೆಯಾಗಬೇಕು ಎಂದೂ ಭಾವಿಸಿದ್ದೇನೆ. ಮದುವೆ ಯಾವಾಗ? ಹಾಂ, ಕಂಪೆನಿಯ ಆರಂಭದ ದಿನ ವೇದಿಕೆ ಮೇಲೆ ಮದುವೆಯಾದರೆ?’ ಸಾರಾಸಗಟಾಗಿ ಹೇಳಿಬಿಡುವುದಾ! ಎದುರಿದ್ದವರ ಕಥೆ ಏನಾಗಬೇಡ? ಬಿಟ್ಟ ಕಣ್ಣು ಬಿಟ್ಟಂತೆಯೇ ಅವರನ್ನೆ ದಿಟ್ಟಿಸುತ್ತಿದ್ದೆ. ನಿರುತ್ತರಿ ನನ್ನ ಕಂಡು ಮೌನ ಸಮ್ಮತಿ ಲಕ್ಷಣ ಅಂತ ಭಾವಿಸಿದರೆ ಅಂತ ಮನಸ್ಸು ಎಚ್ಚರಿಸಿತು. ಸಾಧ್ಯವಿಲ್ಲ, ನನಗೆ ಒಪ್ಪಿಗೆ ಇಲ್ಲ ಎಂದುಬಿಟ್ಟೆ.
ಗೋವಿಂದ ರೆಡ್ಡಿ ಹಿಡಿದ ಪಟ್ಟು ಬಿಡುವಂತೆ ಕಾಣಲಿಲ್ಲ. ಈ ಮಾತುಕತೆ ನಡೆದು ಒಂದು ತಿಂಗಳು ಕಳೆದಿರಬಹುದು. ಊರಿನ ಮುಖ್ಯಸ್ಥರು ಮತ್ತು ಕಂಪೆನಿಯ ಕಲಾವಿದರು ಸೇರಿ ಹದಿನೈದೋ ಇಪ್ಪತ್ತೋ ಜನರು ಸೇರಿದ್ದರು. ಎಲ್ಲಿ ಎಂದು ತಿಳಿದರೆ ನೀವೂ ಅಚ್ಚರಿಗೊಳ್ಳುತ್ತೀರಿ! ಒಂದು ಲಾಡ್ಜಿಂಗ್‌ನಲ್ಲಿ. ಆ ಕಾಲಕ್ಕೆ ಅಂತಹ ಐಷಾರಾಮಿ ಹೊಟೇಲು, ಲಾಡ್ಜ್‌ಗಳಿಗೆಲ್ಲ ಹೋಗುವುದಿರಲಿ, ಕಣ್ಣಾಯಿಸಿಯೂ ನೋಡಿದ್ದಿಲ್ಲ. ಹಾಗಿದ್ದಾಗ ಈ ಮದುವೆ ಮಾತುಕತೆಗೆ ಗೋವಿಂದ ರೆಡ್ಡಿ ಆಯ್ದುಕೊಂಡ ಸ್ಥಳವದು. ಹುಬ್ಬೇರಿಸಿ ಒಳಹೊಕ್ಕೆ, ಕೂತೆ. ತಾನು ಹೇಳಿದ್ದನ್ನು ಈಕೆ ಗಂಭೀರವಾಗಿ ಪರಿಗಣಿಸಿಲ್ಲ. ನನ್ನಲ್ಲಿ ನಂಬಿಕೆ ಹುಟ್ಟಿಸುವ ಸಲುವಾಗಿ ಎಲ್ಲರನ್ನೂ ಸೇರಿಸಿದಂತಿತ್ತು. ಒಪ್ಪಿಸುವ ಕಾರ್ಯವಂತೂ ಭಗೀರಥ ಪ್ರಯತ್ನದ ರೀತಿಯಲ್ಲಿ ಸಾಗುತ್ತಲೇ ಇತ್ತು. ಎಲ್ಲವನ್ನೂ ಆಲಿಸುತ್ತಿದ್ದೆ. ಒಂದು ತಿಂಗಳು ಕಳೆದದ್ದರಿಂದ ನನ್ನ ಕೈಯಾರೆ ಕೆಲಸಗಾರರಿಗೆ, ಕಲಾವಿದರಿಗೆ ಸಂಬಳ ಕೊಡಬೇಕೆಂದು ಹೇಳಿದರು. ಇಷ್ಟೆಲ್ಲ ಮಾತುಕತೆಯ ನಡುವೆ ಗೋವಿಂದ ರೆಡ್ಡಿ ಅವರಿಗೆ ನನ್ನ ಬಗ್ಗೆ ಪ್ರೀತಿ ಇದ್ದೀತೆಂದು ಮನಸ್ಸಿಗೆ ಅರ್ಥವಾಗತೊಡಗಿತ್ತು. ‘ಪ್ರೀತಿ ಇಲ್ಲದ ಮೇಲೆ – ಮಾತಿಗೆ ಮಾತು ಕೂಡೀತು ಹೇಗೆ?’ ಎಂದವರ ಮಾತು ಈಗಲೂ ಹೌದೆನಿಸುತ್ತದೆ! ನನ್ನ ಮದುವೆಯಾಗಲು ಇಷ್ಟೊಂದೆಲ್ಲ ಮಾಡಿದರಲ್ಲಾ ಎಂದು ಗೋವಿಂದ ರೆಡ್ಡಿ ಅವರ ಬಗ್ಗೆ ಗೌರವ ಹೆಚ್ಚಾಗುತ್ತಲೇ ಇತ್ತು.
ಮಾಂಡ್ರೆ ಕವಿಗಳ ಕಂಪೆನಿಯಲ್ಲಿ ಆದ ಘಟನೆಯಿಂದ ಪ್ರೀತಿಸಲು ಮನಸ್ಸು ಹೆದರುತ್ತಿದ್ದದ್ದೇನೊ ನಿಜ, ಆದರೆ ದುರಂತ ಕೇಳಿ; ಅದೇ ಮನಸ್ಸು ಪ್ರೀತಿಯನ್ನೇ ಬಯಸುತ್ತಿತ್ತು. ಪ್ರೀತಿಗೆ ಕುರುಡುತನದ ಹಣೆಪಟ್ಟಿ ಕಟ್ಟಬಾರದು. ಅದೇನೊ ಅವರ ಪ್ರೀತಿಗೆ ಶರಣಾದೆ, ಮದುವೆಯಾಗುವುದಾಗಿ ಸಮ್ಮತಿಸಿದೆ. ಆದರೆ ನನ್ನವೆಂದೇ ಕೆಲ ಷರತ್ತುಗಳಿತ್ತು. ಮದುವೆಯೆಂದರೆ ನಿಮ್ಮ ಕುಟುಂಬದವರೊಂದಿಗೆ ನಮ್ಮ ಕುಟುಂಬವೂ ಸೇರಬೇಕು. ಊರಿನಲ್ಲಿದ್ದ ನಮ್ಮ ಕೂಡು ಕುಟುಂಬದ ಪ್ರತಿಯೊಬ್ಬರೂ ಮದುವೆಯಲ್ಲಿರಲೇ ಬೇಕು ಎಂದೆ. ಸಂಪ್ರದಾಯಸ್ಥ ಮನೆತನವಾದ್ದರಿಂದ ಹೀಗೆ ನಾಟಕ ಕಂಪೆನಿಗೆ ಬಂದು ಏಕಾಏಕಿ ಮದುವೆಯಾಗುತ್ತಿದ್ದೇನೆ ಎಂದರೆ ನನ್ನ ತಂಗಿಯರಿಗೆ ಮುಂದೆ ಸಮಸ್ಯೆಯಾಗುತ್ತದೆ. ಹಾಗಾಗಿ ಅವರೆಲ್ಲರ ಎದುರು ಮದುವೆಯಾಗಬೇಕು. ಆಗ ನನಗಿದ್ದ ಚುರುಕಿನ ಬುದ್ಧಿ ಇಷ್ಟೆಲ್ಲ ಮಾತುಗಳನ್ನು ಆಡಿಸಿದ ಬಗ್ಗೆ ನನಗಂತೂ ಬೆರಗು. ಅವರೆಲ್ಲರ ಮಾತುಗಳನ್ನು ನಾ ಹೇಗೆ ಮೌನವಾಗಿ ಕೂತು ಕೇಳುತ್ತಿದ್ದೆನೊ ಅವರೂ ನನ್ನ ಮಾತುಗಳನ್ನು ಹಾಗೇ ಆಲಿಸಿದರು. ಎಲ್ಲದಕ್ಕೂ ಒಪ್ಪಿಗೆ ಎಂದು ನಗುಬೀರಿದರು.
ಮೊದಲ ತಿಂಗಳ ಸಂಬಳ ನನ್ನ ಕೈಯಲ್ಲೇ ನೀಡಬೇಕೆಂದು ಒತ್ತಾಯಿಸಿದ್ದರು. ನನಗೋ ತೀರಾ ಮುಜುಗರ. ‘ನೀನೆನಮ್ಮಾ, ಎಲ್ರನ್ನೂ ಅವ್ವ ಅಪ್ಪ ಅಂತಲೇ ಕರೀತಿಯಾ. ಮಾಲೀಕಳು ಕಣವ್ವಾ ನೀನು’ ಎಂದು ಕೈ ತುಂಬಿ, ಬೆರಳುಗಳೆಲ್ಲ ಬೇರೆಯಾಗುವಷ್ಟು ನೋಟಿನ ಕಂತೆಯನ್ನು ಕೈಗಿಟ್ಟರು. ಅಂತೂ ನಾನೇ ಸಂಬಳ ನೀಡಿದ್ದಾಯಿತು.
ಇದೆಲ್ಲ ಮುಗಿಸಿ ನಾವು ಮತ್ತು ಕಲಾವಿದರೆಲ್ಲ ಸುರೇಬಾನಕ್ಕೆ ಹೊರಟೆವು. ಈ ಸಮಯದಲ್ಲಿ ಒಂದು ಆಸೆಯನ್ನು ಗೋವಿಂದ ರೆಡ್ಡಿಯವರು ಹೇಳಿಕೊಂಡಿದ್ದರು. ಮದುವೆಯಾಗುತ್ತಿರುವ ವಿಚಾರವನ್ನು ಅವರ ಮನೆಯ ಗುರುಗಳ ಬಳಿ ಕೇಳಬೇಕಿತ್ತೆಂದು. ಗುರುಗಳೆಂದರೆ ಅವರ ಪಾಲಿಗೆ ದೇವರ ಸಮಾನ. ಗುರುಗಳ ಮಾತೆಂದರೆ ಅದು ದೇವರ ನುಡಿಯಿದ್ದಂತೆ. ಊರಿನ ಮುಖ್ಯಸ್ಥರನ್ನೆಲ್ಲ ಸೇರಿಸಿ ಸಭೆ ಕರೆದು, ನನ್ನ ಒಪ್ಪಿಸುವ ಧಾವಂತವಾದರೂ ಏನಿತ್ತೆಂದು ಅನ್ನಿಸಿತು. ಆದರೆ ವ್ಯಕ್ತಪಡಿಸಲಿಲ್ಲ. ಒಪ್ಪದೆ, ಇನ್ನೇನು ತಾನೆ ಮಾಡಲಾಗುತ್ತದೆ? ಮನೆ ಗುರುಗಳ ಬಳಿ ಹೋಗುವ ಮುನ್ನ ಟ್ರಂಕ್ ತುಂಬ ತರಾವರಿ ಸೀರೆಗಳು, ಅದಕ್ಕೊಪ್ಪುವ ಕುಪ್ಪಸ, ಚಿನ್ನವನ್ನೇ ಹೋಲುತ್ತಿದ್ದ ಪರ್ಸ್, ಬಳೆಗಳು, ತಿಂಗಳ ಮಟ್ಟಿಗೆ ಬೇಕಾಗುವ ಸಾಮಾನುಗಳು… ಅಬ್ಬಾ! ಎಲ್ಲವನ್ನೂ ತುಂಬಿಸಿ ಕೆಲಸಗಾರನ ಕೈಗೊಪ್ಪಿಸಿ, ಸುರೇಬಾನದಲ್ಲಿ ಮಾಲೀಕರಿಗೆ ನೀಡಬೇಕೆಂದು ತಲುಪಿಸುವ ಕಾರ್ಯ ಭರ್ಜರಿಯಾಗೇ ನಡೆಯಿತು. ಕಂಪೆನಿ ಆಗ ತಾನೆ ಆರಂಭವಾಗುತ್ತಿದ್ದದ್ದರಿಂದ ಬೋರ್ಡಿಗೆ ಬಣ್ಣ ಬಳಿಯುವುದಕ್ಕೋ ಅಥವಾ ಇನ್ನಾವುದಕ್ಕೋ ಹಣ ಬೇಕಾಗಬಹುದೆಂದು ಒಂದಷ್ಟು ಹಣದ ಕಂತೆಯನ್ನು ನನ್ನ ಕೈಗಿಟ್ಟಿದ್ದರು. ಅದರೊಂದಿಗೆ ಮನೆಗೆ ಬಂದು ಕೂತು, ಬೇಗನೇ ಹೋಗಿಬರುತ್ತೇನೆ. ಆದಷ್ಟು ಬೇಗ ಮದುವೆಯಾಗುವುದಾಗಿ ಮಾತಾಡಿದಾಗಲೂ ನನಗೇನೊ ಕಾಲದ ಬಗ್ಗೆ ಸದಾ ಅಂಜಿಕೆ. ಮನದ ದುಗುಡ ಅವರಿಗೆ ಅರ್ಥವಾಗಿತ್ತೇನೊ, ಭರವಸೆ ನೀಡಿದರು. ಅವರ ಕಣ್ಣಲ್ಲಿ ಆಗ ಹೊಮ್ಮುತ್ತಿದ್ದದ್ದು, ನಿಷ್ಕಲ್ಮಶ ಪ್ರೇಮ ಮಾತ್ರ. ನನ್ನೊಂದಿಷ್ಟು ನಗಿಸಿ ಹೊರಟುಬಿಟ್ಟರು.
ಅವರೇನೊ ಸುಲಭವಾಗಿ ಹೊರಟುಬಿಟ್ಟರು. ಏಕಾಂಗಿಯಾದ ನನ್ನ ಪಾಡು? ಗೋವಿಂದ ರೆಡ್ಡಿ ಅವರ ಪ್ರೀತಿಯ ಸುಳಿಯಲ್ಲಿ ಪೂರ್ತಿಯಾಗಿ ಸಿಲುಕಿಬಿಟ್ಟಿದ್ದೆ. ಅವರಿಲ್ಲದ ನಾನು ಒಂಟಿಯಾದಂತೆನಿಸಿತು. ಮದುವೆಯಾದರೆ ಇವರನ್ನೇ ಎಂದು ಮನಸ್ಸು ನಿರ್ಧರಿಸಿತ್ತಲ್ಲಾ! ಕೇಳಿ ಬರಲು ಹೋಗಿದ್ದು. ಗುರುಗಳು ಒಪ್ಪಿಗೆ ನೀಡುತ್ತಾರೆ. ಇಲ್ಲಾ, ಇವರೇ ಒಪ್ಪಿಗೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಕಾದು ಬೆಂಗಾಡಾಗಿದ್ದ ಮನಸ್ಸನ್ನು ಸಮಾಧಾನಿಸುತ್ತಲೇ ಇದ್ದೆ.
ಹನ್ನೆರಡು ದಿನ ಕಳೆದು ಗೋವಿಂದ ರೆಡ್ಡಿ ಬಂದಾಗ ನನ್ನ ಸಂಭ್ರಮವನ್ನು ಅದ್ಹೇಗೆ ವರ್ಣಿಸಲಿ! ಅವರಿಂದು ಬರುತ್ತಿದ್ದಾರೆ ಎಂಬ ಸುದ್ದಿಯೇ ನನ್ನ ಕಾಲು, ಮನಸ್ಸು ನಿಂತಲ್ಲಿ ನಿಲ್ಲಲೊಲ್ಲದು. ಮದುವೆಗೆ ಇನ್ನು ಯಾವ ಅಡ್ಡಿಯೂ ಇಲ್ಲ ಎಂದು ನಿರಾಳವಾಗಿದ್ದೆ. ಆದರೆ ಬಂದದ್ದೇ, ಮನೆ ದೇವರಂತಿದ್ದ ಮೃತ್ಯುಂಜಯ ಗುರುಗಳು ಈ ಮದುವೆ ಬೇಡ ಎಂದಿದ್ದ ವರ್ತಮಾನ ಕೇಳುತ್ತಿದ್ದಂತೆ ಆಘಾತದಿಂದ ಕುಸಿದುಹೋಗಿದ್ದೆ!
ಮುಂದುವರೆಯುವುದು…
(ಹಿಂದಿನ ಕಂತು: ಬದುಕಿನ ನಾಟಕ ನೋಡಿ…)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

