ನಮ್ಮ ಇಂಥ ದೈನೇಸಿ ಸ್ಥಿತಿಯ ಅರಿವಾಯಿತು ಎಂಬಂತೆ ಹುಚ್ಚೆದ್ದು ಓಡುತ್ತಿದ್ದ ಕುದುರೆ ಓಟದ ಬಿರುವನ್ನು ಕೊಂಚ ಕುಗ್ಗಿಸಿಕೊಂಡು ಎತ್ತಿ ಕುಕ್ಕಿದಂತೆ ಒಮ್ಮೆಗೇ ಕೆನೆದು ಮತ್ತೆ ಮಾಮೂಲಿ ಓಟಕ್ಕಿಟ್ಟುಕೊಂಡಿತು. ಇದನ್ನು ನಿರೀಕ್ಷಿಸದಿದ್ದ ಹಿಂದೆ ಕುಳಿತಿದ್ದ ನಾನು ಹೇಳದೇ ಕೇಳದೇ ಅಂತಾರಲ್ಲ ಹಂಗೆ ದೊಪ್ಪನೆ ಕೆಳಗೆ ಬಿದ್ದುಬಿಟ್ಟೆ. ಬಿದ್ದ ರಭಸಕ್ಕೆ ಕುಂಡಿಗಳನ್ನು ಗುಂಡು ಕಲ್ಲೊಂದರಿಂದ ಜಜ್ಜಿದಂತಾಯ್ತು. ತಕ್ಷಣ ಏನು ಮಾಡಬೇಕೆಂದು ತೋಚದೆ ಕೂತಲ್ಲೇ ಬಿಕ್ಕಳಿಸತೊಡಗಿದೆ. ನನ್ನ ಆ ಅನಾಥ ಅಳು ನನ್ನ ಅಡಿಯಲ್ಲಿ ಹರಿಯುತ್ತಿದ್ದ ನೀರೊಳಗೆ ಬೆರೆತು, ಅದು ಹರಿದೆಡೆಯಲ್ಲೆಲ್ಲಾ ಹರಿದಾಡುತ್ತಿರಲು ತಪಲನನ್ನು ಹೊತ್ತ ಕುದುರೆ ಸುರಿವ ಮಳೆಯಲ್ಲಿ ಮಾಯವಾಗಿಬಿಟ್ಟಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹನ್ನೊಂದನೆಯ ಕಂತು
ಚಿಕ್ಕನಾಯಕನಹಳ್ಳಿ ನನ್ನೂರು ಮಾಕಳ್ಳಿಗೆ ತಾಲ್ಲೂಕು ಕೇಂದ್ರ. ಹೆಸರಿಗೆ ತಕ್ಕಂತೆ ಈಗಲೂ ಒಂಥರಾ ಹಳ್ಳಿಯೇ. ಏಕೆಂದರೆ ಇದರ ಆತ್ಮ ಇಂದಿಗೂ ಹಳ್ಳಿಯ ಸೊಗಡುಗಳನ್ನು, ಆಚರಣೆಗಳನ್ನು ಪೂರಾ ಬಿಟ್ಟುಕೊಟ್ಟಿಲ್ಲ. ಇದು ಅಪ್ಪಟ ಬಯಲುಸೀಮೆಯ ನಾಡು. ಇಲ್ಲಿ ಜಾನಪದ, ತತ್ವಪದ, ಅನುಭಾವ, ಜಾತ್ರೆ, ಹಬ್ಬ ಹರಿದಿನಗಳಿಗೆ ಹಿಂದಿನ ವೈಭವ ಇಲ್ಲದಿದ್ದರೂ ಅವುಗಳ ಘಾಟು ಇದ್ದೇ ಇದೆ. ಚಿಕ್ಕೇನಳ್ಳಿ ಮಠ, ಕಂದಿಕೆರೆಯ ಅಜ್ಜಯ್ಯ ಶಾಂತವೀರಸ್ವಾಮಿ, ಜುಂಜಪ್ಪನ ಬಾಣದೇವರ ಹಟ್ಟಿ ವಗೈರೆ ನೆಲ ಮೂಲ ಸಂಸ್ಕೃತಿಯ ಪರಂಪರೆಗಳು, ಮದಲಿಂಗನ ಕಣಿವೆಯಂಥ ಜಾನಪದ ಧಾರೆಗಳು, ವಚನಕಾರ ಸಿದ್ದರಾಮ ನಡೆದಾಡಿದ ಕುರುಹುಗಳು ಈ ಮಣ್ಣಿಗಿರುವ ಕಸುವಿನ ಪ್ರತೀಕಗಳು. ಇದರ ಮೂಡಲ ದಿಕ್ಕಿಗೆ ಉದ್ದಕ್ಕೂ ಗುಡ್ಡದ ಸಾಲುಗಳು. ಅಲ್ಲಿ ಅಪರೂಪದ ಮರ ಗಿಡಗಳು, ಗಿಡ ಮೂಲಿಕೆಗಳು, ಜೀವ ವೈವಿದ್ಯ ಬದುಕು ಇದೆ. ಇಲ್ಲಿನ ರೈತಾಪಿ ಬದುಕಿಗೆ, ಅವುಗಳನ್ನೇ ನಂಬಿ ಬದುಕಿದ್ದ ಜೀವಿಗಳಿಗೆ ಜೀವನಾಡಿಯಾಗಿದ್ದ ಈ ಗುಡ್ಡ ಸಾಲುಗಳ ಮೇಲೆ ಕೆಲವು ವರ್ಷಗಳ ಹಿಂದೆ ಗಣಿ ಕಳ್ಳರ ಕಣ್ಣು ಬಿದ್ದು ಆ ಕೇಡಿಗಳು ನಡೆಸಿದ ದೌರ್ಜನ್ಯ ಇವುಗಳ ಮೈ ಮನಸ್ಸುಗಳನ್ನು ಮುಕ್ಕು ಮಾಡಿದೆ. ಪರಿಣಾಮ ಈ ಗುಡ್ಡ ಸಾಲುಗಳಲ್ಲಿ ಇನ್ನೂ ಅಡಗಿರುವ ಅಪಾರ ಖನಿಜ ಸಂಪತ್ತಿಗೆ ಒಂದಲ್ಲಾ ಒಂದು ದಿನ ಮತ್ತೆ ಅಪಾಯ ಕಾದಿದೆ ಅನ್ನುವ ಸಂಗತಿ ಇವುಗಳನ್ನು ಆಸರಿಸಿರುವ ಪ್ರಾಣಿ, ಪಕ್ಷಿ, ಗಿಡ, ಮರ, ಹಳ್ಳ ಕೊಳ್ಳಗಳ ಹಾಗೂ ರೈತಾಪಿ ಬದುಕನ್ನು ದಿಗಿಲಿಗೆ ದೂಡಿದೆ.
ಚಿಕ್ಕನಾಯಕನಹಳ್ಳಿ ಇಂಥ ತನ್ನ ಹಲವು ಅಸ್ಮಿತೆ ಮತ್ತು ಅಧ್ವಾನಗಳ ನಡುವೆ ಸಹಬಾಳ್ವೆ ಮತ್ತು ಸೌಹಾರ್ದತೆಗೆ ಬಲು ದೊಡ್ಡ ಮಾದರಿಯಾಗಿದೆ. ಇದು ಈ ನೆಲದ ಬಲು ದೊಡ್ಡ ಗುಣವಾಗಿದೆ. ನನಗೆ ತಿಳಿದಿರುವಂತೆ ಇಲ್ಲಿ ಕೋಮು ಗಲಭೆಗಳಾದ ನೆನಪಿಲ್ಲ. ಇಂದಿನ ರಾಜಕಾರಣ ಎಲ್ಲೆಡೆಯಂತೆಯೇ ಇಲ್ಲಿಯೂ ಜಾತಿ, ಧರ್ಮಗಳನ್ನು ಒಡೆದು ಆಳುವ ನೀತಿಯನ್ನೇ ಧರ್ಮವಾಗಿಸಿಕೊಂಡಿದ್ದರೂ ಈ ಮಣ್ಣಿನಲ್ಲಿ ಅದಕ್ಕೆ ಅಂಥ ಯಶಸ್ಸು ಈವರೆವಿಗೂ ಸಿಕ್ಕಿಲ್ಲ. ಏಕೆಂದರೆ ಇಲ್ಲಿ ಅನುಭಾವಿಗಳು, ಸಾಧು ಸಂತರು, ಸೂಫಿಗಳು ನಡೆದಾಡಿದ್ದಾರೆ. ಉಸಿರಾಡಿದ್ದಾರೆ. ಇಂಥ ಮನುಕುಲದ ತಿಳಿ ಗಾಳಿ ಅಂಥ ಜೀವ ವಿರೋಧಿ ಅಪಾಯವನ್ನು ಆಗಗೊಡದಂತೆ ತಡಾಕಿದೆ. ಇಂಥದ್ದೊಂದು ಅಪ್ಪಟ ಅನುಭಾವ ಹಾಗೂ ಸಾಮರಸ್ಯದ ಪ್ರತೀಕವಾಗಿ ಇಲ್ಲಿನ ತಾತಯ್ಯನ ಗೋರಿ ಇದೆ. ಜನರು ತಾತಯ್ಯನ ಗೋರಿಯ ಬಗ್ಗೆ ತೋರುವ ಪ್ರೀತಿ, ನಡೆದುಕೊಳ್ಳುವ ರೀತಿಯನ್ನು ಗಮನಿಸಿದರೆ ಯಾರಿಗೂ ಅದು ಅರ್ಥವಾಗಿಬಿಡುತ್ತದೆ. ಜನರ ಮನದಲ್ಲಿ ಪವಾಡ ಪುರುಷನಾಗಿ, ಜಾತಿ ಧರ್ಮಗಳಾಚೆಯ ಭಾವವಾಗಿ ನಿಂತಿರುವ ತಾತಯ್ಯ ಇದೇ ಮಣ್ಣಿನಲ್ಲಿ ಬಾಳಿ ಬದುಕಿದವರು. ಹೆಸರು ಹಜರತ್ ಮೊಹಿಯುದ್ದಿನ್ ಶಾ ಖಾದ್ರಿ ಎಂದಿದ್ದರೂ ಇಲ್ಲಿನ ಮನಸ್ಸುಗಳಿಗೆ ಅವರು ಸದಾ ತಾತಯ್ಯನೇ. ಅವರೊಬ್ಬ ಸೂಫಿ ಸಂತ. ಜನ ತಮ್ಮ ತಾತ ಮುತ್ತಾಂದಿರಂತೆ ಈ ತಾತನನ್ನು ನೆನಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಉರುಸ್ ಮತ್ತು ಖವ್ವಾಲಿಗಳನ್ನು ಎಲ್ಲ ಜಾತಿ, ಧರ್ಮದವರೂ ತಮ್ಮದು ಎಂಬಂತೆ ಸಂಭ್ರಮಿಸುತ್ತಾರೆ. ನನಗೆ ಚಿಕ್ಕಂದಿನಲ್ಲಿ ಇದ್ದ ಅದೇ ಸೆಳೆತ ಈ ತಾತಯ್ಯನ ಗೋರಿ, ಇದರ ಉರುಸ್ ಹಾಗೂ ಖವ್ವಾಲಿಗಳ ಬಗ್ಗೆ ಈ ಚಣದಲ್ಲೂ ಹಂಗೇ ಇದೆ.
ನಾನು ಮತ್ತು ನನ್ನ ವಾರಿಗೆಯವರಿಗೆ ಈ ತಾತಯ್ಯನ ಉರುಸ್ ಬಂದರೆ ಸಾಕು ನಮ್ಮ ಜಾತ್ರೆಗಳಷ್ಟೇ ಹಿಗ್ಗು ತರುತ್ತಿತ್ತು. ಇದು ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಲ್ಲಿ ಬರುತ್ತಿತ್ತು. ಸಂಜೆಗೇ ಊಟ ಮಾಡಿಕೊಂಡು ಚಿಕ್ಕನಾಯಕನಹಳ್ಳಿಗೆ ಹೋಗುತ್ತಿದ್ದೆವು. ಇದು ನಡೆಯುತ್ತಿದ್ದ ಮೂರೂ ದಿನಗಳು ಚಿಕ್ಕನಾಯಕನಹಳ್ಳಿಯ ಎದೆಯ ಮೇಲೆ ಬಣ್ಣ ಬಣ್ಣದ ದೀಪಗಳು ಫಳಾರಿಸುತ್ತಿದ್ದವು. ತಾತಯ್ಯನ ಗೋರಿಯ ಎದುರಿನ ರಸ್ತೆ ಅಡ್ಡಾಡಲೂ ಆಗದಂತೆ ಗಿಜಿಗುಡುತ್ತಿತ್ತು. ಅತ್ತರಿನ ಕಮಟು ಘಮಲು ಅದಕ್ಕೆ ಪೈಪೋಟಿ ನೀಡುತ್ತಿತ್ತು. ಬೆಂಡು ಬತ್ತಾಸು, ಖಾರ ಕಡ್ಲೆ ಪುರಿ, ಆಟದ ಸಾಮಾನು, ಶರಭತ್ತುಗಳನ್ನು ಮಾರುವ ಅಂಗಡಿಗಳು ಆ ರಸ್ತೆಯ ಇಕ್ಕೆಲದಲ್ಲೂ ಕಿಕ್ಕಿರಿದಿರುತ್ತಿದ್ದವು. ಆ ಜನ ಸಂದಣಿಯೊಳಗೆ ನುಸುಳಿಕೊಂಡು ದರ್ಗಾದ ಒಳ ಹೊಕ್ಕರೆ ಅದರೊಳಗಿನ ನಿಶ್ಯಬ್ಧ, ಸಮಾಧಿಗೆ ಕವುಚಿರುತ್ತಿದ್ದ ಹಸಿರು ಚಾದರ, ಆ ಸಮಾಧಿಯ ಇಕ್ಕೆಲದಲ್ಲಿ ನಿಂತು ದೊಡ್ಡ ದೊಡ್ಡ ಚೌರಿಗಳಿಂದ ಒಂದು ನೊಣ ಕೂಡಾ ಕೂರದಂತೆ ಗಾಳಿ ಬೀಸುತ್ತಾ ನಿಂತಿರುತ್ತಿದ್ದ ಗಡ್ಡಧಾರಿಗಳು, ಸಾಂಬ್ರಾಣಿಯ ಹೊಗೆ, ಅತ್ತರಿನ ಕಡು ಘಮಲು ನಮ್ಮನ್ನು ಮೌನಕ್ಕೆ ಜಾರಿಸುತ್ತಿತ್ತು. ಗೋರಿಯ ಸುತ್ತ ಒಂದು ಸುತ್ತು ಹಾಕಿ ಅವರು ಕೊಡುತ್ತಿದ್ದ ಸಕ್ಕರೆ ಮತ್ತು ಕಡ್ಲೆಗಳನ್ನು ಇಸುಕಂಡು, ನವಿಲು ಗರಿಗಳ ಗುಚ್ಛದಿಂದ ಅವರುಗಳಿಂದ ಆಶೀರ್ವಾದ ಪಡಕಂಡು ಮತ್ತೆ ಜನ ಸಾಗರದೊಳಕ್ಕೆ ಧುಮುಕುತ್ತಿದ್ದೆವು. ಊರಿನ ದಾರಿ ಹಿಡಿಯುವ ಹೊತ್ತಿಗೆ ಸರೊತ್ತು ಮೀರಿರುತ್ತಿತ್ತು. ಈ ಉರುಸ್ನಲ್ಲಿ ಖರ್ಚು ಮಾಡುವ ಸಲುವಾಗಿಯೇ ಸುಮಾರು ದಿನಗಳಿಂದ ಕಡ್ಡಿ ಸಿಗಿದೋ, ಹೊಂಗೆ, ಹಿಪ್ಪೆ ಅಥವಾ ಬೇವಿನ ಬೀಜಗಳನ್ನೋ ಕೂಡಾಕಿ ಮಾರಿ ಆಟೋ ಈಟೋ ಕಾಸು ಮಾಡಿಕೊಳ್ಳುತ್ತಿದ್ದೆವು. ಆದರೆ ಆ ಕಾಸು ನಮಗೆ ಉರುಸ್ನ ಮೊದಲ ದಿನಕ್ಕೂ ಬಾಳಿಕೆ ಬರುತ್ತಿರಲಿಲ್ಲ.

ಮಕ್ಕಳಿಗೆ ನರುಳ್ಳೆಗಳಾದರೆ ಜನ ತಾತಯ್ಯನ ಗೋರಿಗೆ ಹರಕೆ ಕಟ್ಟಿಕೊಳ್ಳುತ್ತಿದ್ದರು. ಅದರಂತೆ ಬಿಡುವಾದಾಗ ಹೋಗಿ ತಾತಯ್ಯನಿಗೆ ಸಕ್ಕರೆ, ಕಡ್ಲೆಗಳನ್ನು ತಿದ್ದಿಸಿಕೊಂಡು ಬರುತ್ತಿದ್ದರು. ನಾನೂ ಸುಮಾರು ಸಾರ್ತಿ ಅಜ್ಜನ ಜತೆ, ಅಜ್ಜಿಯ ಜತೆ ಅಷ್ಟೇ ಯಾಕೆ ತಾತಯ್ಯನ ಗೋರಿಗೆ ಹೊರಟಿದ್ದಾರೆ ಅಂತ ಗೊತ್ತಾದರೆ ಸಾಕು ಮನೆಯವರಿಗೆ ತಿಳಿಯದಂತೆ ಅವರ ಜತೆ ಕೂಡಾ ಹೋಗಿಬಿಡುತ್ತಿದ್ದೆ. ಹಂಗಾಗಿ ತಾತಯ್ಯನ ಗೋರಿ ನಮ್ಮೂರ ಈಶ್ವರ ಗುಡಿ ಅಥವಾ ಕರಿಯಮ್ಮ ದೇವರ ಗುಡಿಯಷ್ಟೇ ಸಲೀಸಾಗಿ ಹೋಗಿತ್ತು. ನಾವಾಗಿಯೇ ಉರುಸ್ಗೆ ಹೋಗುವಂಗೆ ಆದ ಮೇಲಂತೂ ಒಂದು ವರ್ಷವೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆಗ ನಾನು ಮತ್ತು ನನ್ನ ವಾರಿಗೆಯ ಗೆಳೆಯರು ಹೈಸ್ಕೂಲಿನಲ್ಲಿದ್ದೆವು. ಮೊದ ಮೊದಲು ಗುಂಪು ಗುಂಪಾಗಿ ನಡೆದುಕೊಂಡು ಹೋಗುತ್ತಿದ್ದೆವು. ನನ್ನ ಹಳ್ಳಿಯ ಪಕ್ಕದ ಊರಾದ ಶೆಟ್ಟೀಕೆರೆಯಲ್ಲಿ ಗಂಟೆಯ ಲೆಕ್ಕದಲ್ಲಿ ಸೈಕಲ್ಗಳನ್ನು ಬಾಡಿಗೆ ಕೊಡುವ ಪದ್ಧತಿ ಶುರುವಾಯ್ತೋ ಹೆಂಗೋ ಮಾಡಿ ಬಾಡಿಗೆಗೆ ಬೇಕಾಗುವಷ್ಟು ಕಾಸನ್ನು ಹೊಂದಿಸಿಕೊಂಡು ಇಬ್ಬಿಬ್ಬರು ಕೂಡಿ ಒಂದು ಸೈಕಲ್ ಬಾಡಿಗೆ ತಗಂಡು ಹೋಗತೊಡಗಿದೆವು. ಹಿಂಗೆ ತಗಂಡು ಹೋದ ಸೈಕಲ್ಲುಗಳನ್ನು ಚೆನ್ನಾಗಿ ಬೆಳಕಿರುವ ಕಡೆ ಯಾವುದಾದರೊಂದು ಅಂಗಡಿ ಬದಿಯಲ್ಲಿ ಬೀಗ ಹಾಕಿ ನಿಲ್ಲಿಸುತ್ತಿದ್ದೆವು. ಹಿಂಗಿದ್ದರೂ ಒಮ್ಮೆ ಈ ಬಾಡಿಗೆ ಸೈಕಲ್ ನಮ್ಮನ್ನು ಪೀಕಲಾಟಕ್ಕೆ ಸಿಲುಕಿಸಿತ್ತು.
ಆ ಸಾರ್ತಿ ಉರೂಸ್ಗೆ ನಾನು ಮತ್ತು ನನ್ನ ಗೆಳೆಯ ಕೊಚ್ಚ ಇಬ್ಬರೇ ಶೆಟ್ಟೀಕೆರೆಯ ಪಾಪಣ್ಣನವರ ಸೈಕಲ್ ಶಾಪಿನಿಂದ ಒಂದು ಸೈಕಲ್ಲನ್ನು ಬಾಡಿಗೆಗೆ ತಗಂಡು ಹೋಗಿದ್ದೆವು. ಸೈಕಲ್ ನಿಲ್ಲಿಸಲು ಜಾಗ ಮಾಡಿಕೊಳ್ಳುವ ಸಲುವಾಗಿ ಗೋರಿಯ ಎದುರಿಗೇ ಇದ್ದ ಕಡ್ಲೆಪುರಿ ಅಂಗಡಿಯಲ್ಲಿ ಒಂಚೂರು ವ್ಯಾಪಾರ ಮಾಡಿ ಅಂಗಡಿಯವರಿಗೆ ಹೇಳಿ ಜಾತ್ರೆಯೊಳಕ್ಕೆ ಹೋಗಿದ್ದೆವು. ಮತ್ತೆ ವಾಪಸ್ಸು ಬಂದು ನೋಡಿದರೆ ನಿಲ್ಲಿಸಿದ್ದ ಸೈಕಲ್ ಮಾಯವಾಗಿತ್ತು. ಅದನ್ನು ನೋಡುತ್ತಲೇ ಎದೆ ಧಸಕ್ಕೆಂದಿತ್ತು. ಅಮುಕುತ್ತಿದ್ದ ನಿದ್ದೆ ಓಟ ಕಿತ್ತಿತ್ತು. ಅಂಗಡಿಯವನನ್ನು ಎಷ್ಟು ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಗಾಬರಿಯಲ್ಲಿ ಮತ್ತೆ ಸುತ್ತಾ ಮುತ್ತಾ ಹುಡುಕೇ ಹುಡುಕಿದೆವು. ಸೈಕಲ್ ಸುಳಿವು ಸಿಗಲಿಲ್ಲ. ಇಬ್ಬರೊಳಗೂ ಮಾತು ಸತ್ತಿದ್ದವು. ಅದರ ತಾವಿನಲ್ಲಿ ಅಳು ಎದ್ದಾಡುತ್ತಿತ್ತು. ಸೈಕಲ್ ಇಲ್ಲದೆ ಮತ್ತೆ ತಿರುಗಿ ಊರಿಗೆ ಹೋಗುವುದನ್ನು ನಾವು ಕಲ್ಪಿಸಿಕೊಳ್ಳುವಂತೆಯೂ ಇರಲಿಲ್ಲ. ಈ ವಿಚಾರದಲ್ಲಿ ಮನೆಯವರೂ ಕರುಣೆ ತೋರಿಸುತ್ತಾರೆ ಅನ್ನುವಂಗೂ ಇರಲಿಲ್ಲ. ಕಾರಣ ನಾವು ಉರುಸ್ ಬಂದದ್ದಾಗಲಿ, ಸೈಕಲ್ ಬಾಡಿಗೆಗೆ ತಗಂಡಿದ್ದಾಗಲಿ ಅವರಿಗೆ ಗೊತ್ತಿರಲೇ ಇಲ್ಲ. ಸಿಗದ ಸೈಕಲ್ಲನ್ನು ಹುಡುಕಿ ದಣಿವಾಗಿದ್ದಕ್ಕೋ, ಅಪಾರ ಭಯಕ್ಕೋ ನನಗೆ ಸುತ್ತಲಿನದೆಲ್ಲಾ ವಿಚಿತ್ರವಾಗಿ ಕಾಣತೊಡಗಿತ್ತು. ಕೊಚ್ಚ ನನಗಿಂತ ಕೊಂಚ ಧೈರ್ಯವಂತ. ಹಂಗಾಗಿ ಅವನೇ ಕಡೆಗೊಂದು ತೀರ್ಮಾನಕ್ಕೆ ಬಂದಿದ್ದ. ಊರಿಗೆ ತಿರುಗಿ ಹೋದರೆ ತಾನೆ ಸೈಕಲ್ಲಿನವರು ಕಾಸು ಕೇಳೋದು? ಮನೆಯರ ಕೈಯ್ಯಿಂದ ಲಾತು ಬೀಳೋದು?
ಕೊಚ್ಚನ ಮಾತುಗಳು ಸರಿ ಅನಿಸಿತು. ಮತ್ತೆ ಉರುಸ್ನಲ್ಲಿ ಅಡ್ಡಾಡುವ ಮನಸ್ಸಿರಲಿಲ್ಲ. ಎಲ್ಲಾದರೂ ಯಾವುದಾದರೊಂದು ಮೂಲೆಯಲ್ಲಿ ಮಲಗಬೇಕು ಅನಿಸಿತು. ದೂರದ ಊರುಗಳಿಂದ ಬಂದಿದ್ದ ಕೆಲವರು ದರ್ಗಾದ ಹಿಂಬದಿಯ ಬಯಲಿನಲ್ಲಿ ಮಲಗಿದ್ದರು. ನಾನು ಮತ್ತು ಕೊಚ್ಚ ಆ ಬಯಲಿನ ಮೂಲೆಯೊಂದರಲ್ಲಿ ಹಾಸಿದ್ದ ಚಾಪೆಯಲ್ಲಿ ಹಂಗೇ ಸುರುಟಿಕೊಂಡೆವು. ಅರೆ ನಿದ್ದೆ ಅರೆ ಎಚ್ಚರ ಹಾಗೂ ಭಯದಲ್ಲೇ ಅಚ್ಚಗಾಗುವವರೆಗೂ ರಾತ್ರಿ ದೂಡಿದೆವು. ಬೆಳಕಾಗತೊಡಗುತ್ತಲೇ ನಮ್ಮೊಳಗಿನ ದುಗುಡ ಮತ್ತೆ ದುಮುಗುಡ ಹತ್ತಿತ್ತು. ರಾತ್ರಿ ಜಗಮಗಿಸುತ್ತಿದ್ದ ದೀಪಗಳನ್ನು ಆರಿಸಲಾಗಿತ್ತು. ಅಂಗಡಿಗಳು ಅರೆಬರೆ ಮುಚ್ಚಿದ್ದವು. ರಸ್ತೆಯಗಲಕ್ಕೂ ಕಸ ಕಡ್ಡಿ ಇಟ್ಟಾಡಿತ್ತು. ಇಬ್ಬರೂ ಎದ್ದು ಮುಖ ಮುಖ ನೋಡಿಕೊಂಡೆವು. ಕೊಚ್ಚನಿಗೆ ಅದೇನು ನೆನಪಾಯ್ತೋ ಎದ್ದವನೇ ಬಾ ಅಂತ ನನ್ನನ್ನೂ ಕರಕಂಡು ಹೊರಟ. ಇಬ್ಬರೂ ಹಾಗಲವಾಡಿ ರಸ್ತೆಯಲ್ಲಿ ಒಂದಷ್ಟು ದೂರ ನಡೆಯುವುದರೊಳಗೆ ಚೆನ್ನಾಗಿಯೇ ಬೆಳಕಾಯ್ತು. ಎಲ್ಲಿಗೆ ಅಂತ ಕೇಳಿದರೆ ಕೊಚ್ಚನ ಬಳಿಯೂ ಉತ್ತರ ಇರಲಿಲ್ಲ. ನಿದ್ದೆ ಇಲ್ಲದಕ್ಕೆ, ರಾತ್ರಿ ಸರಿಯಾಗಿ ಊಟ ಮಾಡದ್ದಕ್ಕೆ ಹೊಟ್ಟೆ ತಾಳ ಹಾಕತೊಡಗಿತ್ತು. ಒಂದೆರಡು ಹಳ್ಳಿಗಳನ್ನು ಹಿಂದಿಕ್ಕಿ ಗೊತ್ತು ಗುರಿಯಿಲ್ಲದೆ ರಸ್ತೆಯುದ್ದಕ್ಕೂ ನಡೆದೆವು. ಸುಸ್ತಾದಾಗ ಅಲ್ಲಲ್ಲಿ ಕೂತೆವು. ಥರಾವರಿ ಯೋಚನೆಗಳು, ಥರಾವರಿ ಆತಂಕಗಳು ನನ್ನನ್ನು ಕಾಡಲಾರಂಭಿಸಿದವು. ಇಷ್ಟೊತ್ತಿಗೆ ಬಾಡಿಗೆ ಸೈಕಲ್ಲಿನ ಪಾಪಣ್ಣ ನಮ್ಮ ಮನೆಯ ಹತ್ತಿರ ಹೋಗಿರಬಹುದಾ? ರಾತ್ರಿಯಿಂದ ಕಾಣೆಯಾದ ನಮ್ಮಿಬ್ಬರನ್ನು ಮನೆಯವರು ಹುಡುಕಾಡಲು ಆರಂಭಿಸಿರಬಹುದಾ? ಮುಂತಾಗಿ. ಪಾಪಣ್ಣನಿಗೆ ನನ್ನ ಅಯ್ಯನ ಪರಿಚಯವಿತ್ತು. ಹಂಗಾಗಿ ನನ್ನ ಗ್ಯಾರಂಟಿಯ ಮೇಲೆಯೇ ಪಾಪಣ್ಣ ನಮಗೆ ಸೈಕಲ್ ಬಾಡಿಗೆಗೆ ಕೊಟ್ಟಿದ್ದರು.
ನಡೆದೆವು. ಒಂದೆರಡು ಹಳ್ಳಿಗಳನ್ನು ಬಿಟ್ಟರೆ ಯಾವ ಹಳ್ಳಿಯೂ ಸಿಗುತ್ತಿಲ್ಲ. ನಾವು ನಡೆಯುತ್ತಿದ್ದ ರಸ್ತೆ ಅಂಕು ಡೊಂಕಾಗಿ ಸುತ್ತಿ ಸುತ್ತಿ ಹೋಗುತ್ತಿತ್ತು. ನಂತರದ ದಿನಗಳಲ್ಲಿ ತಿಳಿಯಿತು. ಅದು ಸುತ್ಕಣಿವೆಯ ದಾರಿ ಅಂತ. ಎದುರಿಗೆ ಗುಡ್ಡಗಳ ಸಾಲು ಕಾಣಿಸುತ್ತಿತ್ತು. ಗಿಡ ಮರಗಳು ದಟ್ಟವಾಗಿ ಹಸಿರು ಕಕ್ಕುತ್ತಿದ್ದವು. `ಹಿಂಗೇ ನೆಡ್ಕಂಡು ಹೋಗಾನಾ ಬಾ. ಎಲ್ಲಿಗಾರಾ ಹೋಗ್ಲಿ’ ಅಂತ ಕೊಚ್ಚ ಹುರಿದುಂಬಿಸುತ್ತಿದ್ದ. ಆದರೆ ಅವನ ಅಂಥ ಯಾವ ಮಾತುಗಳೂ ನನಗೆ ನಾಟುತ್ತಿರಲಿಲ್ಲ. ಅಷ್ಟು ದಣಿದು ಹೋಗಿದ್ದೆ. ಹಸಿವು ವಿಪರೀತ ರಾದ್ಧಾಂಥ ಮಾಡ ಹತ್ತಿತ್ತು. ಇಳೆ ಬಿದ್ದಿದ್ದ ಮನಸ್ಸುಗಳು ಹಾಗೂ ಹಸಿವಿನಿಂದಾಗಿ ದಾರಿ ಸಾಗುತ್ತಿಲ್ಲ. ಮತ್ತೊಂದಷ್ಟು ದೂರ ನಡೆದು ಕಡೆಗೊಂದು ಮರದಡಿಯಲ್ಲಿ ಕೂತೆವು. ದಟ್ಟ ಗಿಡಗಳಿದ್ದ ಹಚ್ಚ ಹಸಿರಿನ ಗುಡ್ಡವೊಂದು ನಮ್ಮೆದುರಿಗಿತ್ತು. ಅದರ ಬುಡದಲ್ಲಿದ್ದ ಹಳ್ಳದ ಕಡೆಯಿಂದ ಥರಾವರಿ ಪಕ್ಷಿಗಳು ಬೆಳಗಿನ ಬಿಸಿಲಿನಲ್ಲಿ ಮಾತಿಗಿಳಿದಿದ್ದವು. ನಾವು ಕೂತಿದ್ದ ಆ ತಾಣ ಮದಲಿಂಗನ ಕಣಿವೆ ಅಂತಲೂ, ನಮ್ಮ ಎದುರಿಗಿದ್ದ ಆ ಗುಡ್ಡ ಮದಲಿಂಗನ ಗುಡ್ಡ ಅಂತಲೂ ಮುಂದೊಂದು ದಿನ ನನಗೆ ತಿಳಿಯಿತು. ಹೊಸದಾಗಿ ಮದುವೆಯಾಗಿದ್ದ ಮದಲಿಂಗ ತನ್ನ ಹೆಂಡತಿಯ ತಂಗಿಯ ಮೋಹಕ್ಕೆ ಬಿದ್ದು ಅವಳನ್ನೂ ಮದುವೆ ಮಾಡಿ ಕೊಡುವಂತೆ ಅತ್ತೆಯನ್ನು ಕೇಳುತ್ತಾನೆ. ಆಗ ಅತ್ತೆ ತನ್ನೆದುರಿಗೆ ಕಾಣುತ್ತಿದ್ದ ಗುಡ್ಡವನ್ನು ತೋರಿಸಿ `ಈ ಗುಡ್ಡಾನ ಹಿಂದ್ಮುಂದಾಗಿ ಹತ್ತಿ ಇಳುದ್ರೆ ಕಿರೀ ಮಗುಳ್ನೂ ಕೊಡ್ತೀನಿ’ ಅನ್ನೋ ಷರತ್ತು ಹಾಕುತ್ತಾಳೆ. ಅದರಂತೆ ಹತ್ತಲು ಹೋದ ಮದಲಿಂಗ ಬಾಯಾರಿಕೆಯಿಂದ ಅಸು ನೀಗುತ್ತಾನೆ. ಹಂಗಾಗಿ ಅದು ಮದಲಿಂಗನ ಗುಡ್ಡವಾಯ್ತು. ಅವರು ನಡೆದು ಬರುತ್ತಿದ್ದ ಕಣಿವೆ ಮದಲಿಂಗನ ಕಣಿವೆಯಾಯ್ತು. ಹಿಂಗೆ ಜಾನಪದ ಕಥೆಯಂತೆಯೂ, ಐತಿಹ್ಯದಂತೆಯೂ ಕಾಣಲ್ಪಡುವ ಈ ಕಥೆ ನಡೆಯುವ ಜಾಗ ಅಪ್ಪಟ ಬಯಲು ಸೀಮೆಯ ನಾಡಿನಲ್ಲಿ ಮಲೆನಾಡಿನ ಸಕಲ ಗುಣಗಳನ್ನೂ ಹೊಂದಿದೆ. ಈ ಕಣಿವೆ ಮತ್ತು ಈ ಗುಡ್ಡ ಈಗಲೂ ನನ್ನ ಇಷ್ಟದ ಜಾಗಗಳಲ್ಲಿ ಒಂದು. ಮಳೆಗಾಲದಲ್ಲಿ ಈ ಕಣಿವೆಯ ರಸ್ತೆಯಲ್ಲಿ ಓಡಾಡುವುದೇ ಒಂದು ಅದ್ಭುತ ಅನುಭವ.
ರವಷ್ಟು ಉಸುರುಯ್ದುಕೊಂಡು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಕೊಚ್ಚ ಎದ್ದವನೇ ಉಚ್ಚೆ ಉಯ್ಯುವ ಸಲುವಾಗಿ ತಾವು ಕೂತಿದ್ದ ಮರದ ಹಿಂದಕ್ಕೆ ಯಾಕೋ ಎದ್ದು ಹೋದ. ಅಲ್ಲಿಂದ ತಕ್ಷಣವೇ ನನ್ನನ್ನು ಕರೆದ. ಹೋಗಿ ನೋಡಿದರೆ, ಅಲ್ಲಿ ಒಂದಷ್ಟು ಚಕ್ಕೆ ಕಲ್ಲುಗಳನ್ನು ಮತ್ತು ಕಲ್ಲಿನ ದುಂಡಿಗಳನ್ನು ಮಂಡಿಯುದ್ದಕ್ಕೆ ಬ್ಯಾಟೆ ಮರದ ಸುತ್ತಲೂ ಜೋಡಿಸಲಾಗಿತ್ತು. ಆ ಬ್ಯಾಟೆ ಮರಕ್ಕೆ ಅರಿಷಿಣ, ಕುಂಕುಮಗಳನ್ನು ಹಚ್ಚಿ ಪೂಜಿಸಲಾಗಿತ್ತು. ಹಂಗೇ ಆ ಮರದ ಬುಡದಲ್ಲಿ ಒಂದು ಚಿಪ್ಪು ಬಾಳೆ ಹಣ್ಣು ಹಾಗೂ ಮಾಂಸದ ನೈವೇದ್ಯವನ್ನು ಇಡಲಾಗಿತ್ತು. ಎಡೆಯಲ್ಲಿದ್ದ ಮಾಂಸದ ತುಂಡುಗಳು ಎಡೆ ಎಲೆಯ ಪಕ್ಕದಲ್ಲಿ ಅಲ್ಲಲ್ಲಿ ಚೆಲ್ಲಾಡಿದ್ದವು. ಬಾಳೆ ಹಣ್ಣು ಮಾತ್ರ ಹಂಗೇ ಇದ್ದವು. ಅದನ್ನು ನೋಡಿದರೆ ನಿನ್ನೆ ಸಂಜೆ ಪೂಜೆ ಮಾಡಿದಂತಿತ್ತು. ಹಂಗೂ ಕೊಚ್ಚ ಬಾಳೆ ಹಣ್ಣುಗಳ ಜತೆಗೆ ಒಂದೆರಡು ಮಾಂಸದ ತುಂಡುಗಳನ್ನು ಚಪ್ಪರಿಸಿದ. ನಾನು ಮೂರ್ನಾಲ್ಕು ಬಾಳೆ ಹಣ್ಣುಗಳನ್ನು ತಿಂದೆ. ಹೊಟ್ಟೆಗೆ ಕೊಂಚ ತಾಡಾದಂತೆ ಅನಿಸಿತು. ಈಗ ಆ ಬ್ಯಾಟೆ ಮರದ ಬದಲು ಅದೇ ಜಾಗದಲ್ಲಿ ದಿಮ್ಮಾಗಿ ಬೆಳೆದಿದೆ. ಭೂತಪ್ಪನ ಗುಡಿ ಅಂತ ಕರೆಯಲ್ಪಡುವ ಈ ಜಾಗಕ್ಕೆ ಹಿಂದಿಗಿಂತಲೂ ಈಗ ಜನ ಹೆಚ್ಚು ನಡೆದುಕೊಳ್ಳುತ್ತಾರೆ.
ಮತ್ತೆ ಅಲ್ಲಿಂದ ಹೊರಟೆವು. ರಸ್ತೆ ಮತ್ತೂ ಅಂಕುಡೊಂಕಗಿತ್ತು. ಅಂಥ ರಸ್ತೆಯನ್ನು ಇಳಿದು ಸಮತಟ್ಟಾದ ರಸ್ತೆಗೆ ಬರುವ ಹೊತ್ತಿಗೆ ನನಗೆ ಇದ್ದಕ್ಕಿದ್ದಂತೆ ಊರಿನ ನೆನಪು ಕಾಡತೊಡಗಿತು. ಆದದ್ದು ಆಗಲಿ ವಾಪಸ್ಸು ಊರಿಗೆ ಹೋಗುವ ಅಂತ ಕೊಚ್ಚನೆದುರು ಹಠಕ್ಕೆ ಬಿದ್ದೆ. ಆದರೆ ತಿರುಗಿ ಚಿಕ್ಕನಾಯಕನಹಳ್ಳಿಗೆ ನಡೆಯುವ ತ್ರಾಣವಂತೂ ಇರಲಿಲ್ಲ. ಹಂಗಾಗಿ ಅಜ್ಜಿ ಗುಡ್ಡೆ ಎಂಬ ಹಳ್ಳಿಯ ಗೇಟಿನಲ್ಲಿ ಸುಮ್ಮನೆ ಕೂತುಬಿಟ್ಟೆವು. ಎಷ್ಟೋ ಹೊತ್ತಾದ ಮೇಲೆ ನಮ್ಮ ಎದುರುಗಡೆಯಿಂದ ಎತ್ತಿನ ಗಾಡಿಯೊಂದು ಬರುವುದು ಕಾಣಿಸಿತು. ಆ ಗಾಡಿ ಯಾವುದೋ ದನದ ಜಾತ್ರೆಗೆ ಹೊರಟಿತ್ತು. ಅವರು ನಮ್ಮನ್ನು ಚಿಕ್ಕನಾಯಕನಹಳ್ಳಿಯವರೆಗೂ ಬಿಟ್ಟರು. ಹಂಗೆಯೇ ನಮ್ಮ ಬಾಡಿದ ಮುಖಗಳನ್ನು ನೋಡಿ ತಾವು ಜಾತ್ರೆಗೆಂದು ಕಟ್ಟಿಕೊಂಡಿದ್ದ ಬುತ್ತಿಯಲ್ಲಿ ಒಂದೊಂದು ರೊಟ್ಟಿಯನ್ನು ತಿನ್ನಲು ಕೊಟ್ಟರು. ಆ ರೊಟ್ಟಿ ಚಿಕ್ಕನಾಯಕನಹಳ್ಳಿಯಿಂದ ಮತ್ತೆ ಊರಿಗೆ ನಡೆಯಲು ಬೇಕಾದ ಕಸುವನ್ನು ಕೊಟ್ಟಿತ್ತು. ಊರು ತಲುಪಿದಾಗ ಆಗಲೇ ಇಳಿ ಹೊತ್ತಾಗಿತ್ತು. ನಾನು ಅಂದುಕೊಂಡಂತೆ ಸೈಕಲ್ ಪಾಪಣ್ಣ ಹಾಗೂ ಕೊಚ್ಚನ ಅಪ್ಪ ಮನೆಯ ಹತ್ತಿರ ಬಂದಿದ್ದರು. ಅಲ್ಲಿನ ವಾತಾವರಣ ನಾವು ಅಂದುಕೊಂಡಷ್ಟು ಬಿಗುವಾಗಿರಲಿಲ್ಲ. ಒಂಚೂರು ಬೈದಂಗೆ ಮಾಡಿದ್ದು ಬಿಟ್ಟರೆ ಮನೆಯವರು ಅಂಥ ರಾದ್ಧಾಂತವನ್ನೇನೂ ಮಾಡಲಿಲ್ಲ. ಸೈಕಲ್ಲಿನ ಬಾಬ್ತು ಮುಂದೇನಾಯ್ತು ಅನ್ನುವುದು ನಮಗೆ ತಿಳಿಯಲಿಲ್ಲ. ಆಗದು ನಮಗೆ ಬೇಕಾಗಿಯೂ ಇರಲಿಲ್ಲ.
*****
ಈ ತಾತಯ್ಯನ ಗೋರಿಯವರು ಕುದುರೆಯೊಂದನ್ನು ಸಾಕಿದ್ದರು. ಅಥವಾ ಹಲವು ಕುದುರೆಗಳನ್ನು ಸಾಕಿದ್ದರೋ ತಿಳಿಯದು. ಆದರೆ ಈ ಕುದುರೆಯಿಂದಾಗಿ ನಾನು ಮತ್ತು ನನ್ನ ಗೆಳೆಯರನ್ನು ಮತ್ತೊಂದು ಸಂಕಟಕ್ಕೆ ಸಿಲುಕಿದ್ದೆವು. ಇದು ನಡೆದದ್ದು ನಾವೆಲ್ಲಾ ಹೈಸ್ಕೂಲ್ನಲ್ಲಿದ್ದಾಗಲೇ. ಚಿಕ್ಕವರಿದ್ದಾಗ ನನ್ನಂತೆಯೇ ನನ್ನ ವಾರಿಗೆಯ ಗೆಳೆಯರಿಗೆ ಕುದುರೆ ಸವಾರಿ ಮಾಡುವುದೆಂದರೆ ಮಹಾ ಕುತೂಹಲದ ಸಂಗತಿಯಾಗಿತ್ತು. ಇದಕ್ಕೂ ಮುನ್ನ ನಾನು ಚಿಕ್ಕನಾಯಕನಹಳ್ಳಿ ಟೆಂಟಿನಲ್ಲಿ `ಸಂಪತ್ತಿಗೆ ಸವಾಲ್’ ಸಿನೇಮಾ ನೋಡಿದ್ದೆ. ಹಂಗಾಗಿ ಆ ಸಿನೇಮಾದಲ್ಲಿ ರಾಜಕುಮಾರ್ ಎಮ್ಮೆ ಸವಾರಿ ಮಾಡುವಂತೆ ನಾನೂ ಎಮ್ಮೆ ಸವಾರಿ ಮಾಡುವುದನ್ನು ರೂಢಿ ಮಾಡಿಕೊಂಡಿದ್ದೆ. ಆದರದು ನಮ್ಮ ಕುದುರೆ ಸವಾರಿ ಮಾಡುವ ತುಡಿತವನ್ನು ಕಡಿಮೆ ಮಾಡಿರಲಿಲ್ಲ. ಇದಕ್ಕೆ ಕಾರಣವೊಂದಿತ್ತು. ನಮ್ಮ ಹಳ್ಳಿಗೆ ವರ್ಷಕ್ಕೊಮ್ಮೆ ತಿಪಟೂರು ಸಮೀಪದ ರಂಗಾಪುರ ಅನ್ನುವ ಊರಿನ ಮಠದ ಸ್ವಾಮೀಜಿಯೊಬ್ಬರು ಭಿಕ್ಷಾಟನೆಗಾಗಿ ಕುದುರೆಯ ಮೇಲೆ ಬರುತ್ತಿದ್ದರು. ಹಾಗೆ ಬಂದವರು ಒಂದೆರಡು ದಿನ ಕರಿಯಮ್ಮನ ಗುಡಿಯ ಅಂಗಳದಲ್ಲಿ ತಂಗುತ್ತಿದ್ದರು. ಕುದುರೆಯನ್ನು ಗುಡಿಯ ಪಕ್ಕದಲ್ಲಿದ್ದ ಕರುವುಗಲ್ಲಿಗೆ ಕಟ್ಟಿರುತ್ತಿದ್ದರು. ನಾವು ಹುಡುಗರೆಲ್ಲಾ ಅದರ ಸುತ್ತಲೂ ಗುಂಪುಗೂಡಿ ಅದರ ನುಣ್ಣನೆಯ ಮೈಯ್ಯನ್ನು, ಅದರ ಕುಚ್ಚಿನ ಬಾಲವನ್ನು, ಚಿಗರೆಯಂತೆ ನೆಟ್ಟಿಗಿದ್ದ ಕಿವಿಗಳನ್ನು ಮುಟ್ಟುತ್ತಾ ಖುಷಿಪಡುತ್ತಿದ್ದೆವು. ತಿರುಗಿ ಆ ಸ್ವಾಮೀಜಿಯವರು ನಮ್ಮೂರಿನಿಂದ ಹೋಗುವವರೆಗೂ ಕಾದು ಅವರು ಮತ್ತೆ ಕುದುರೆಯ ಮೇಲೆ ಹೋಗುವುದನ್ನು ಕಣ್ತುಂಬಿಕೊಳ್ಳುತ್ತಿದ್ದೆವು. ಹಂಗಾಗಿ ನಮಗೂ ಅಂಥ ಕುದುರೆಯ ಮೇಲೆ ಕೂತು ಸವಾರಿ ಮಾಡುವ ಆಸೆಯಾಗಿತ್ತು. ಇದನ್ನು ಮನಗಂಡಂತೆ ನಮ್ಮ ಊರಿನಲ್ಲಿ ಚಿಕ್ಕನಾಯಕನಹಳ್ಳಿಯ ತಾತಯ್ಯನ ಗೋರಿಯ ಬಡಕಲು ಕುದುರೆ ವರ್ಷದಲ್ಲಿ ಯಾವುದಾದರೊಂದು ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಹಂಗೆ ಬಂದದ್ದು ಅಲ್ಲಿ ಇಲ್ಲಿ ಮೇಯುತ್ತಾ ತಿಂಗಳುಗಟ್ಟಲೆ ನಮ್ಮ ಊರಿನಲ್ಲೇ ಉಳಿದುಬಿಡುತ್ತಿತ್ತು. ಆ ಸಾರ್ತಿ ಸ್ವಾಮೀಜಿಯವರು ನಮ್ಮ ಊರಿಗೆ ಬಂದು ಹೋಗಿ ಕೆಲವು ದಿನಗಳಷ್ಟೇ ಕಳೆದಿದ್ದವು. ಅದು ನಮ್ಮ ಕುದುರೆ ಸವಾರಿಯ ಆಸೆಯನ್ನು ಮತ್ತೊಮ್ಮೆ ಚಿವುಟಿ ಹೋಗಿತ್ತು. ಅದಾದ ಕೆಲ ದಿನಕ್ಕೇ ಅದೊಂದು ದಿನ ತಾತಯ್ಯನ ಕುದುರೆ ನಮ್ಮ ಊರಿನಲ್ಲಿ ಪ್ರತ್ಯಕ್ಷವಾಯ್ತು. ಅದು ಕಣ್ಣಿಗೆ ಬಿದ್ದದ್ದೇ ಅದರ ಚಲನವಲನಗಳ ಮೇಲೆ ನಾವು ನಿಗಾ ಇರಿಸತೊಡಗಿದೆವು. ನಾವದರ ಮೇಲೆ ಸವಾರಿ ಮಾಡಲು ತೀರ್ಮಾನಿಸಿಕೊಂಡರೂ ಅದಕ್ಕಾಗಿ ನಾವು ಶನಿವಾರದವರೆಗೂ ಕಾಯಬೇಕಿತ್ತು. ಆದರದಕ್ಕೆ ಇನ್ನೂ ಐದು ದಿನಗಳು ಬಾಕಿ ಇದ್ದವು. ಹಂಗಾಗಿ ನಾವು ಊರಾಚೆಯ ಪಾಳು ಪೌಳಿಯ ಹಿಂಬದಿಯಲ್ಲಿದ್ದ ಹಾಳು ಕೊಪ್ಪಲೊಂದರಲ್ಲಿ ಕುದುರೆಯನ್ನು ಹಿಡಿದು ಕಟ್ಟಾಕಿದೆವು. ದಿನವೂ ಸ್ಕೂಲಿಗೆ ಹೋಗೋಕೆ ಮುನ್ನ ಹಾಗೂ ಸ್ಕೂಲಿನಿಂದ ಬಂದ ಮೇಲೆ ಅದರ ಮುಂದಕ್ಕೊಂದಷ್ಟು ಮೇವನ್ನು ಎಸೆಯುತ್ತಿದ್ದೆವು. ಆದರೆ ಇದಾವುದೂ ನಮ್ಮ ಮನೆಯವರನ್ನು ಒಳಗೊಂಡಂತೆ ಬೇರೆ ಯಾರಿಗೂ ತಿಳಿದಿರಲಿಲ್ಲ.

ನಾವು ಕಾತರದಿಂದ ಕಾಯುತ್ತಿದ್ದ ಆ ಶನಿವಾರ ಬಂದೇ ಬಿಡ್ತು. ಅವತ್ತು ಮಾರ್ನಿಂಗ್ ಕ್ಲಾಸನ್ನು ಮುಗಿಸಿಕೊಂಡು ಬಂದವರೇ ನಾನು, ಗೆಳೆಯರಾದ ಕೊಚ್ಚ, ತೇಲ ಮತ್ತು ತಪಲ ಎಲ್ಲರೂ ಜತೆಗೂಡಿ ಕುದುರೆಯನ್ನು ಕಟ್ಟಿದ್ದ ಹಾಳು ಕೊಪ್ಪಲಿಗೆ ಹೋದೆವು. ನಾವು ನಾಲ್ವರೂ ಒಟ್ಟಿಗೇ ಹೋಗಿದ್ದನ್ನು ಕಿರುಗಣ್ಣಿನಲ್ಲೇ ಎಟಕಿಸಿಕೊಂಡರೂ ಕುದುರೆ ತನ್ನ ಮೆಲುಕು ಹಾಕುವ ಕೆಲಸವನ್ನು ಮುಂದುವರೆಸಿತ್ತು. ಹಂಗೆ ಹೋಗುವಾಗ ಐದಾರು ದಪ್ಪ ದಪ್ಪ ಅಂಬಳ್ಳಿ ಕಟ್ಟುಗಳನ್ನು ಕಿತ್ತುಕೊಂಡಿದ್ದೆವು. ಅವುಗಳನ್ನೆಲ್ಲಾ ಒಟ್ಟಿಗೆ ಸೇರಿಸಿ ನುಣಿದು ಲಗಾಮನ್ನು ಮಾಡಿಕೊಂಡೆವು. ಕುದುರೆಯನ್ನು ಹದ್ದುಬಸ್ತಿನಲ್ಲಿಡಲು ಅದರ ಬಾಯಿಗೆ ಲಗಾಮು ಹಾಕಬೇಕು ಅನ್ನುವುದು ಗೊತ್ತಿತ್ತೇ ಹೊರತು ಅದು ಕಬ್ಬಿಣದ್ದೇ ಆಗಿರಬೇಕು ಅನ್ನುವುದು ಮಾತ್ರ ನಮಗಾರಿಗೂ ಗೊತ್ತಿರಲಿಲ್ಲ.
ನಾವು ಅಲ್ಲಿಗೆ ತಲುಪುವ ಹೊತ್ತಿಗಾಗಲೇ ಮಧ್ಯಾಹ್ನವಾಗಿ ಹೋಗಿತ್ತು. ಹಿಂದಿನ ದಿನ ಮಳೆ ಬಿದ್ದಿತ್ತು. ಆದರೂ ಬಿಸಿಲಿನ ಝಳ ವಿಪರೀತ ಇತ್ತು. ಜೊತೆಗೆ ಸಂಜೆಗೆ ಮುಂಚೆಯೇ ಮಳೆ ಬರಬಹುದಾದ ಸೂಚನೆಯಾಗಿ ಮುಗಿಲಲ್ಲಿ ಅಲ್ಲಲ್ಲಿ ಕಪ್ಪು ಮೋಡಗಳು ಹೆಪ್ಪುಗಟ್ಟಿಕೊಳ್ಳುತ್ತಿದ್ದವು. ಈ ಕಾರಣಕ್ಕೆ ಗಡಿಬಿಡಿಯಿಂದಲೇ ಕೊಪ್ಪಲಿನೊಳಗೆ ಕಟ್ಟಿದ್ದ ಕುದುರೆಯನ್ನು ಬಿಚ್ಚಿ ಹೊರಕ್ಕೆ ಹೊಡಕಂಡು ಬಂದೆವು. ಅದರ ಬಾಯಿಗೆ ಅಂಬಳ್ಳಿ ಬಳ್ಳಿಯ ಲಗಾಮನ್ನು ಹಾಕಿದೆವು. ನಂತರ ತೇಲನ ಹೆಗಲ ಮೇಲಿದ್ದ ಟವೆಲ್ಲಿನಿಂದ ಕುದುರೆಗೆ ಕೊಳ್ಳುರಿ ಕಟ್ಟಿದೆವು. ಮೊದಲು ಯಾರಾದರೂ ಇಬ್ಬರು ಅದರ ಮೇಲೆ ಕೂರುವುದೆಂದೂ ಉಳಿದ ಇಬ್ಬರು ಕೂತವರ ರಕ್ಷಣೆಗಾಗಿ ಕುದುರೆಯ ಇಕ್ಕೆಲಗಳಲ್ಲಿಯೂ ನಡೆಯುವುದೆಂದೂ ತೀರ್ಮಾನಿಸಿದೆವು. ಅದರಂತೆ ನಾನು ಮತ್ತು ತಪಲ ಮೊದಲು ಕೂರುವುದೆಂದು ತೀರ್ಮಾನವಾಯ್ತು. ಕೊಚ್ಚ ಮತ್ತು ತೇಲನ ಸಹಾಯದಿಂದ ನಾವಿಬ್ಬರೂ ಕುದುರೆಯನ್ನು ಹತ್ತಿ ಕೂತೆವು. ನಮ್ಮ ಈ ಎಲ್ಲ ಆಟಗಳನ್ನೂ ಕುದುರೆ ಅನಿವಾರ್ಯವಾಗಿ ಸಹಿಸಿಕೊಂಡಿತ್ತೋ ಅಥವಾ ಅದಕ್ಕೆ ನಮ್ಮನ್ನು ಪ್ರತಿಭಟಿಸುವ ಶಕ್ತಿ ಇರಲಿಲ್ಲವೋ ಗೊತ್ತಿಲ್ಲ. ತುಂಬಾ ನಿರುಪದ್ರವಿಯಂತೆ ಸುಮ್ಮನೆ ನಿಂತಿತ್ತು. ಮೊದಲು ನಾನು ಹತ್ತಿ ಲಗಾಮನ್ನು ಹಿಡಿದುಕೊಳ್ಳಬೇಕೆಂಬ ಆಸೆ ನನ್ನೊಳಗಿದ್ದರೂ ಮುಂದೆ ಕುಳಿತು ಲಗಾಮನ್ನು ಹಿಡಿದಿದ್ದ ತಪಲನನ್ನು ಹಿಂದಿನಿಂದ ಅವುಚಿ ಕುಳಿತೆ.
ಆ ಹೊತ್ತಿಗಾಗಲೇ ಕಪ್ಪು ಕಪ್ಪು ಮಳೆಯ ಮೋಡಗಳು ಕೆಂಡದಂತೆ ಗುಂಡಗಿದ್ದ ಸೂರ್ಯನನ್ನು ಕವುಚಿಕೊಳ್ಳಲಾರಂಭಿಸಿದ್ದವು. ಸಣ್ಣಗೆ ದೂರದಿಂದ ಮಳೆಯ ವಾಸನೆಯೂ ಮೂಗಿಗೆ ಅಡರತೊಡಗಿತ್ತು. ಸಾಲದ್ದಕ್ಕೆ ತಣ್ಣಗೆ ಗಾಳಿಯೂ ತೀಡತೊಡಗಿತ್ತು. ಇದೆಲ್ಲದರಿಂದ ತಮ್ಮ ಸರಧಿ ಎಲ್ಲಿ ತಪ್ಪಿ ಹೋಗೊಬಿಡುತ್ತೋ ಅನ್ನುವ ಅನುಮಾನ ನಮ್ಮ ರಕ್ಷಣೆಗೆ ನಿಂತಿದ್ದ ಕೊಚ್ಚ ಮತ್ತು ತೇಲರೊಳಗೆ ಆಡಿಸುತ್ತಿದ್ದರ ಪರಿಣಾಮವಾಗಿ `ಬೇಗ ಬೇಗ ಓಡುಸ್ರೋ’ ಅನ್ನತೊಡಗಿದರು. ಆದರೆ ನಮ್ಮನ್ನು ಹೊತ್ತ ಕುದುರೆ ಮಾತ್ರ ಇದಾವುದರ ಅರಿವೆಯೇ ಇಲ್ಲ ಎಂಬಂತೆ ಮೆಲ್ಲಗೆ ಹೆಜ್ಜೆಗಳನ್ನು ಇಡುತ್ತಿತ್ತು. ಮೇಲೆ ಕುಳಿತ ನಮಗೂ ಅಂಥ ಅವಸರವಿರಲಿಲ್ಲ. ಕಾರಣ ಕುದುರೆ ನಡೆದು ಹೋಗುತ್ತಿರುವಾಗ ನಮ್ಮ ಸುತ್ತಲೂ ಇದ್ದ ಗಿಡ ಮರಗಳು ಅದರ ಜೊತೆಯಲ್ಲಿಯೇ ನಡೆಯುತ್ತಿರವಂತೆ ಭಾಸವಾಗುತ್ತಿದ್ದುದರ ಜೊತೆಗೆ ಚಿಲಿಪಿಗುಡುತ್ತಾ ಹಾರಾಡುತ್ತಿದ್ದ ಪಕ್ಷಿಗಳೆಲ್ಲಾ ಬೇರೊಂದು ಲೋಕದವುಗಳಂತೆ ಭಾಸವಾಗುತ್ತಾ ಹೇಳಲಾಗದ ಪುಳಕವನ್ನು ಹುಟ್ಟಿಸುತ್ತಿದ್ದವು. ನನಗೆ ಎಮ್ಮೆ ಸವಾರಿ ಮಾಡಿದ್ದ ಅನುಭವವಿದ್ದರೂ ಈ ಕುದುರೆ ಮೇಲೆ ಕುಂತ ಚಣ ವಿಶೇಷ ಅನಿಸತೊಡಗಿತ್ತು.
ನಮ್ಮ ಸವಾರಿ ಸ್ವಲ್ಪ ದೂರ ಹೋಗಿತ್ತು. ಅಷ್ಟರೊಳಗೆ ಅಲ್ಲೊಂದು ಇಲ್ಲೊಂದು ಮಳೆಯ ಹನಿಗಳು ಹನಿಯಲಾರಂಭಿಸಿದವು. ಗಾಳಿಗೂ ಬಿರುವು ಬಂತು. ಇದರಿಂದ ಗಲಿಬಿಲಿಗೊಳಗಾದ ಕೆಳಗೆ ನಡೆದು ಬರುತ್ತಿದ್ದ ಕೊಚ್ಚ ಮತ್ತು ತೇಲ `ಲೇ ಜೋರಾಗಿ ಓಡುಸ್ರಿ ಇಲ್ಲಾ ಕೆಳಕ್ಕೆ ಇಳೀರಿ’, ಅಂತ ಕೂಗಿಕೊಳ್ಳತೊಡಗಿದರು. ಇದನ್ನು ಕೇಳಿಸಿಕೊಳ್ಳುತ್ತಲೇ ಲಗಾಮು ಹಿಡಿದಿದ್ದ ತಪಲ ತನ್ನೆರಡೂ ಕಾಲುಗಳಿಂದ ಕುದುರೆಯ ಹೊಟ್ಟೆಯ ಭಾಗಕ್ಕೆ ಒದೆಯುತ್ತಾ ರಾಜ ಗಾಂಭೀರ್ಯದಲ್ಲಿ ಲಗಾಮನ್ನು ಎಳೆಯುತ್ತಾ `ಟರ್ರ ಟರ್ರ,’ ಅಂತ ಅನ್ನತೊಡಗಿದ. ಆಗಲೂ ಕುದುರೆ ಮೆಲ್ಲಗೇ ನಡೆಯುತ್ತಿತ್ತು. ಈ ವೇಳೆಗೆ ಕುದುರೆಯ ಬಾಯೊಳಗಿದ್ದ ಅಂಬಳ್ಳಿ ಕಟ್ಟಿನ ಲಗಾಮಿನ ಅರ್ಧ ಕಟ್ಟುಗಳಾಗಲೇ ತುಂಡಾಗಿದ್ದುದರ ಕಲ್ಪನೆ ನಮಗಾರಿಗೂ ಇರಲಿಲ್ಲ.
ಮಳೆಯ ಹನಿಗಳು ಮತ್ತೂ ಹೆಚ್ಚಾಗತೊಡಗಿದವು. ತಪಲನ ಹುಕುಮ್ಮಿಗೂ ಕುದುರೆ ಬೆಲೆ ಕೊಡದಿದ್ದುದ ಕಂಡ ಕೊಚ್ಚನಿಗೆ ಆಗಲೋ ಈಗಲೋ ಸುರಿಯಬಹುದಾಗಿದ್ದ ಮಳೆಯನ್ನು ನೆನೆದೇ ಕೋಪವುಕ್ಕಿ ತನ್ನ ಕೈಯ್ಯಲ್ಲಿದ್ದ ಲಕ್ಕೆಯ ಕಡ್ಡಿಯಿಂದ ಕುದುರೆಯ ಕುಂಡಿಗಳಿಗೆ ಒಂದೇ ಸಮನೆ ಹೊಡೆಯತೊಡಗಿದ. ಯಾವಾಗ ಲಕ್ಕೆ ಕಡ್ಡಿಯ ಏಟುಗಳು ಕುಂಡಿಗಳಲ್ಲಿ ಚುರುಕು ಮುಟ್ಟಿಸತೊಡಗಿದವೋ ಆವರೆಗೂ ಸಮಾಧಾನದಿಂದ ಇದ್ದ ಕುದುರೆ ಕೆನೆಯುತ್ತಾ ತನ್ನ ಹಿಂಬದಿಯ ಕಾಲುಗಳೆರಡನ್ನೂ ಎತ್ತಿ ಚಿಮ್ಮುತ್ತಾ ಇದ್ದಕ್ಕಿದ್ದಂತೆ ವೇಗ ಹೆಚ್ಚಿಸಿಕೊಂಡು ಬಿಟ್ಟಿತು. ಇದನ್ನು ನಿರೀಕ್ಷಿಸದೇ ಇದ್ದ ಮೇಲೆ ಕುಳಿತಿದ್ದ ನಮಗೆ ಒಮ್ಮೆಗೇ ಆಯ ತಪ್ಪಿದಂತಾಯ್ತು. ತಪಲ ಕುದುರೆಯ ಕತ್ತನ್ನು ಅವುಚಿ ಮಲಗಿದ. ನಾನು ಅವನನ್ನು ಅವುಚಿ ಹಿಡಿದುಕೊಂಡಿದ್ದೆ. ನಮ್ಮ ಇಂಥ ಪರಿಸ್ಥಿತಿಯನ್ನು ಮನಗಂಡದ್ದರಂತೆ, ಒಂದು ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿರುತ್ತಿದೆಯೇನೋ ಎಂಬಂತೆ ಆವರೆವಿಗೂ ಒಮ್ಮುಖವಾಗಿ ಓಡುತ್ತಿದ್ದ ಕುದುರೆ ಅಡ್ಡಾದಿಡ್ಡಿಯಾಗಿ ದಿಕ್ಕು ಬದಲಾಯಿಸಿಕೊಳ್ಳುತ್ತಾ ಜಗ್ಗು ಹಾಕಿಕೊಂಡು ಚಿಮ್ಮಿದಂತೆ ಓಡತೊಡಗಿತು. ನಂತರ ಲಗಾಮಿನಿಂದ ಕುದುರೆಯ ವೇಗವನ್ನು ಕಟ್ಟಿ ಹಾಕಬಹುದು ಎಂಬ ಸಂಗತಿ ತಪಲನಿಗೆ ತಡವಾಗಿ ಹೊಳೆಯಿತು. ಮೆಲ್ಲನೆ ಕುದುರೆಯ ಕುತ್ತಿಗೆಯನ್ನು ಬಿಟ್ಟು ಕೊಂಚ ಮೇಲೆದ್ದು ಎರಡೂ ಕೈಗಳಿಂದ ಲಗಾಮನ್ನು ಹಿಡಿದು ಜೋರಾಗಿ ಜಗ್ಗಿದ. ಆ ವೇಳೆಗಾಗಲೇ ಹೆಚ್ಚೂ ಕಡಿಮೆ ತುಂಡಾಗಿ ಹೋಗಿದ್ದ ಲಗಾಮಿನ ಕಟ್ಟುಗಳು ಅವನು ಜಗ್ಗಿದಷ್ಟೇ ರಭಸವಾಗಿ ಅವನ ಕೈಗೆ ಬಂದವು.
ಆಕಾಶದಲ್ಲಿ ಮೋಡಗಳ ಹಿಂದೆ ಯಾರೋ ಕೂತು ಸಣ್ಣ ಸಣ್ಣ ಕಲ್ಲುಗಳನ್ನು ಎಸೆಯುತ್ತಿದ್ದಾರೆ ಎಂಬಂತೆ ಮಳೆ ಧೋ ಎಂದು ಸುರಿಯತೊಡಗಿತು. ಸಂಜೆಯಾಗಲು ಇನ್ನೂ ಬಹಳ ಹೊತ್ತಿತ್ತು. ಆದರೂ ಸಂಜೆಯ ಕತ್ತಲನ್ನೂ ಮೀರಿಸುವಂಥ ಕತ್ತಲು ಆವರಿಸಿಕೊಂಡು ಬಿಟ್ಟಿತು. ಸಣ್ಣಗೆ, ಉದ್ದಕ್ಕೆ ದೀಪ ಹಚ್ಚಿದಂತೆ ಮಿಂಚುಗಳ ಮಾಲೆ ಫಳಾರಿಸತೊಡಗಿತು. ಜೊತೆಗೆ ಗುಡುಗುಗಳ ಆರ್ಭಟ ಶುರುವಾಯ್ತು. ಈ ಮಿಂಚು ಗುಡುಗುಗಳು ಕುದುರೆಯೊಳಗೆ ಭಯ ಹುಟ್ಟಿಸಿ, ಇದಕ್ಕೆ ಬೆಚ್ಚಿದಂತೆ ಕುದುರೆ ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಹೊಲಮಾಳಗಳನ್ನು ದಾಟುತ್ತಾ ಅದರ ಎದೆಯ ಮೇಲೆ ಹರಿಯುತ್ತಿದ್ದ ಕೆಂಪು ನೀರನ್ನೂ ಅದರೊಳಗಿನ ಸಣ್ಣ ಪುಟ್ಟ ಗುಂಡಿಗಳನ್ನೂ ಲೆಕ್ಕಿಸದೆ ಹುಚ್ಚೆದ್ದು ಓಡ ತೊಡಗಿತು. ಕಣ್ಣುಗಳನ್ನು ಬಿಡಲಾರದಷ್ಟು ಮಳೆಯ ಹನಿಗಳು ನಮಗೆ ರಾಚುತ್ತಿದ್ದವು. ಕುದುರೆಯ ಅಡ್ಡಾದಿಡ್ಡಿ ಓಟ ನಮನ್ನು ಅಸಾಧ್ಯ ಭಯದಲ್ಲಿ ಮುಳುಗಿಸಿತು. ನೆಗೆಯೋಣವೆಂದರೆ ಎಲ್ಲಿದ್ದೇವೆ ಎಂಬುದರ ಅರಿವಿರಲಿಲ್ಲ. ಸಾಲದ್ದಕ್ಕೆ ಮಳೆಯ ಹನಿಗಳು ಬಿದ್ದಂತೆಲ್ಲಾ ಮತ್ತೂ ನುಣುಪಾಗುತ್ತಾ ಕುದುರೆಯ ಮೈ ಜಾರತೊಡಗಿತ್ತು. ಹೆಂಗೇ ತಿಣುಕಿದರೂ ಸಿಗದ ಹಿಡಿತ. ನಮ್ಮಿಬ್ಬರಿಗೂ ನಮ್ಮ ಕಥೆ ಮುಗಿಯಿತು ಅನಿಸತೊಡಗಿತು. ಭಯಕ್ಕೆ ನಮ್ಮಿಬ್ಬರೊಳಗೂ ಒಮ್ಮೆಗೇ ಅಳುವಿನ ರಾಗಗಳು ಮೂಡಿದವು. ನಮ್ಮ ಆ ರಾಗಗಳು ಆ ಮಳೆ, ಆ ಗಾಳಿ, ಆ ಮಿಂಚು ಸಿಡಿಲುಗಳ ನಡುವೆ ಅಪ್ಪಚ್ಚಿಯಾಗಿ ಹೋಗುತ್ತಿದ್ದವು. ನಮ್ಮ ಇಂಥ ದೈನೇಸಿ ಸ್ಥಿತಿಯ ಅರಿವಾಯಿತು ಎಂಬಂತೆ ಹುಚ್ಚೆದ್ದು ಓಡುತ್ತಿದ್ದ ಕುದುರೆ ಓಟದ ಬಿರುವನ್ನು ಕೊಂಚ ಕುಗ್ಗಿಸಿಕೊಂಡು ಎತ್ತಿ ಕುಕ್ಕಿದಂತೆ ಒಮ್ಮೆಗೇ ಕೆನೆದು ಮತ್ತೆ ಮಾಮೂಲಿ ಓಟಕ್ಕಿಟ್ಟುಕೊಂಡಿತು. ಇದನ್ನು ನಿರೀಕ್ಷಿಸದಿದ್ದ ಹಿಂದೆ ಕುಳಿತಿದ್ದ ನಾನು ಹೇಳದೇ ಕೇಳದೇ ಅಂತಾರಲ್ಲ ಹಂಗೆ ದೊಪ್ಪನೆ ಕೆಳಗೆ ಬಿದ್ದುಬಿಟ್ಟೆ. ಬಿದ್ದ ರಭಸಕ್ಕೆ ಕುಂಡಿಗಳನ್ನು ಗುಂಡು ಕಲ್ಲೊಂದರಿಂದ ಜಜ್ಜಿದಂತಾಯ್ತು. ತಕ್ಷಣ ಏನು ಮಾಡಬೇಕೆಂದು ತೋಚದೆ ಕೂತಲ್ಲೇ ಬಿಕ್ಕಳಿಸತೊಡಗಿದೆ. ನನ್ನ ಆ ಅನಾಥ ಅಳು ನನ್ನ ಅಡಿಯಲ್ಲಿ ಹರಿಯುತ್ತಿದ್ದ ನೀರೊಳಗೆ ಬೆರೆತು, ಅದು ಹರಿದೆಡೆಯಲ್ಲೆಲ್ಲಾ ಹರಿದಾಡುತ್ತಿರಲು ತಪಲನನ್ನು ಹೊತ್ತ ಕುದುರೆ ಸುರಿವ ಮಳೆಯಲ್ಲಿ ಮಾಯವಾಗಿಬಿಟ್ಟಿತ್ತು.
ಸ್ವಲ್ಪ ಹೊತ್ತಿಗೆ ಕೊಚ್ಚ ಮತ್ತು ತೇಲ ನಾನು ಕೂತಿದ್ದಲ್ಲಿಗೆ ಏದುತ್ತಾ ಓಡಿ ಬಂದರು. ಬಂದವರೇ ನನ್ನನ್ನು ಎಬ್ಬಿಸಿ ನಿಲ್ಲಿಸಿ ನನ್ನನ್ನು ಸುತ್ತಾ ತಿರುಗಿಸಿ ತಿರುಗಿಸಿ ನೋಡಿದರು. ಅಂಥಾದ್ದೇನೂ ಆಗಿಲ್ಲ ಅನ್ನುವುದನ್ನು ಮನಗಂಡು ತಪಲನ ಬಗ್ಗೆ ವಿಚಾರಿಸಿದರು. ಕೈ ಸನ್ನೆಯಲ್ಲೇ ಕುದುರೆ ಹೋದ ದಿಕ್ಕನ್ನು ತೋರಿಸಿದೆ. ಮೂವರೂ ತೊಯ್ದು ತೊಪ್ಪೆಯಾಗಿದ್ದೆವು. ನನ್ನೊಳಗೆ ಆಡುತ್ತಿದ್ದ ಭಯ, ಆತಂಕಗಳು ಅವರೊಳಗೂ ಆಡುತ್ತಿದ್ದವು. ಅಂತೆಯೇ ಅವರಿಬ್ಬರೂ ಅಳುತ್ತಿದ್ದರು.
ಕೊಂಚ ಹೊತ್ತಿಗೆ ಮಳೆಯ ವೇಗ ಕಡಿಮೆಯಾಗಿದೆ ಅನಿಸಿತು. ಆದರೂ ಅದನ್ನೂ ಮೀರಿಸುವ ಭಯಾನಕ ಗಾಳಿ ಬೀಸುತ್ತಿತ್ತು. ಬಾರೆಗೆ ಮೇಯಲು ಹೋಗಿದ್ದ ದನಗಳು ಸಾಲಾಗಿ ಕೆರೆಯ ಏರಿಯ ಮೇಲೆ ಮೈಸಿಂಡರಿಸಿಕೊಂಡು ಮನೆಗಳತ್ತ ಧಾವಿಸುತ್ತಿದ್ದುದು ನಾವಿದ್ದ ಜಾಗದಿಂದ ಕಾಣುತ್ತಿತ್ತು. ಮೂವರೂ ತಪಲನನ್ನು ಹುಡುಕಿಕೊಂಡು ಹೊರಟೆವು. ಸ್ವಲ್ಪ ದೂರ ನಡೆಯುವುದರೊಳಗೆ ತಪಲ ಕಾರೆಗುತ್ತಿಯೊಂದರ ಪಕ್ಕದಲ್ಲಿ ಅಂಗಾತನಾಗಿ ಬಿದ್ದಿದ್ದ. ಒಂದೇ ಉಸುರಿಗೆ ನಾವು ಅವನತ್ತ ಓಡಿದೆವು. ನಮ್ಮನ್ನೇ ನೋಡುತ್ತಿದ್ದ ತಪಲನ ನೋಟಕ್ಕೆ ನಾವೆಲ್ಲಾ ಕಂಗಾಲಾದೆವು. ಹತ್ತಿರ ಹೋದವರೇ ಅವನನ್ನು ಏಳಿಸಿ ನಿಲ್ಲಿಸಿದೆವು. ನಿಲ್ಲಲಾಗದೆ ತಟ್ಟಾಡುತ್ತಾ ಕೊಚ್ಚನನ್ನು ಆತು ನಿಂತ. ಅವನ ತಲೆಯ ಹಿಂಭಾಗದಿಂದ ರಕ್ತ ಜಿನುಗುತ್ತಿತ್ತು. ಹಂಗೆ ನಮ್ಮನ್ನು ಎತ್ತಿ ಎಸೆದು ಓಡಿ ಹೋದ ಕುದುರೆ ಮತ್ತೆ ಸುಮಾರು ವರ್ಷ ನಮ್ಮ ಊರಿನತ್ತ ತಲೆ ಹಾಕಲಿಲ್ಲ. ಈಗ ತಾತಯ್ಯನ ಕುದುರೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೂ ಅದು ಅಂದಿನಂತೆ ಊರಾಡಲು ನಮ್ಮ ಕಡೆ ಬರುತ್ತದೋ ಇಲ್ಲವೋ ತಿಳಿದಿಲ್ಲ.

ಅದಾಗಿ ಎಂಟತ್ತು ವರ್ಷಗಳ ನಂತರ ತಪಲ ಬ್ರೈನ್ ಟ್ಯೂಮರ್ನಿಂದ ತೀರಿಕೊಂಡ. ಅವತ್ತು ಹಂಗೆ ಹಿಮ್ಮುಖನಾಗಿ ಬಿದ್ದು ತಲೆಗೆ ಪೆಟ್ಟಾಗಿದ್ದು ಅವನ ಸಾವಿಗೆ ಕಾರಣ ಅಲ್ಲ ಅಂತ ಗೊತ್ತಿದ್ದರೂ ಆ ದಿನ ಅವನು ಆ ಸುರಿವ ಮಳೆಯಲ್ಲಿ ಬಿದ್ದಿದ್ದ ಆ ಚಿತ್ರ ಆಗಾಗ ಕಣ್ಮುಂದೆ ಬರುತ್ತಾ ಸಣ್ಣದೊಂದು ಅಪರಾಧ ಪ್ರಜ್ಞೆಗೆ ನನ್ನನ್ನು ದೂಡುತ್ತದೆ.
(ಹಿಂದಿನ ಕಂತು: ಮಾಕಳ್ಳಿಯ ಮಾಂತ್ರಿಕ ಕಥಿಕರು)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

