Advertisement
ಆಸ್ಟ್ರೇಲಿಯನ್ ಜನಗಣತಿ ಕಥನಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯನ್ ಜನಗಣತಿ ಕಥನಗಳು: ವಿನತೆ ಶರ್ಮ ಅಂಕಣ

ಸರಕಾರವು ಎಲ್ಲರೂ ಜನಗಣತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಳೆದ ಎರಡು ತಿಂಗಳುಗಳಿಂದ ಭಾರಿ ಪ್ರಚಾರ ನಡೆಸಿತ್ತು. ವಿವರಗಳನ್ನು ಕೊಟ್ಟರಾಯ್ತು ಎಂದುಕೊಂಡು ಸುಮ್ಮನಾಗಿ ಕೊನೆಯಲ್ಲಿ ಆನ್ಲೈನ್ ಫಾರಂ ತುಂಬಲು ಹೊರಟಾಗ ಹೆಣಗಾಡಬೇಕಾಯ್ತು. ಒಂದು ಬಾಕ್ಸಿನಲ್ಲಿ ಮಾಹಿತಿಯನ್ನು ಕೊಟ್ಟರೆ ಅದು ಮತ್ತೊಂದು, ಮಗದೊಂದು ಬಾಕ್ಸ್‌ಗಳನ್ನು ತೆರೆದು ಕೊಡು ಮತ್ತಷ್ಟು ವಿವರ, ಎನ್ನುತ್ತಿತ್ತು. ಆರೋಗ್ಯದ ಬಗ್ಗೆ ವಿವರಗಳನ್ನು ಕೊಡುವಾಗ ಈ ಎಲ್ಲಾ ವಿವರಗಳು ಸರ್ಕಾರದ ಆರೋಗ್ಯ ವ್ಯವಸ್ಥೆಯಲ್ಲಿ ಈಗಾಗಲೇ ದಾಖಲಾಗಿದೆಯಲ್ಲಾ, ಮತ್ತೆ ಇಷ್ಟೆಲ್ಲಾ ಬರೆಯಬೇಕಾದ ಅಗತ್ಯವೇನಿತ್ತು ಎಂದೆನಿಸಿತ್ತು.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಆಸ್ಟ್ರೇಲಿಯಾದ ಜನಗಣತಿ ಮುಗಿಯಿತು. ಮೊನ್ನೆ ಮಂಗಳವಾರ ಆಗಸ್ಟ್ ತಿಂಗಳ ೧೧ನೇ ತಾರೀಕು ರಾತ್ರಿ ನಮ್ಮನೆಯಲ್ಲಿದ್ದ ಎಲ್ಲರನ್ನೂ ತಲೆಲೆಕ್ಕ ಹಾಕಿ ಜನಗಣತಿ ಫಾರಂ ತುಂಬಿದ್ದಾಯ್ತು.

ಆಸ್ಟ್ರೇಲಿಯಾದ ಜನಗಣತಿಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ನಮ್ಮ ವಿವರಗಳನ್ನು ಕೊಡುವುದು ಕಡ್ಡಾಯ. ಆಗಸ್ಟ್ ೧೧ ರಂದು ಫಾರಂ ಭರ್ತಿ ಮಾಡುವುದು, ತಡವಾದರೆ ನಿನ್ನೆ ೧೪ರೊಳಗೆ ಕೊಡಲೇಬೇಕು ಎನ್ನುವ ನಿಯಮವಿದೆ. ವಿವರಗಳನ್ನು ಕೊಡದಿದ್ದರೆ ಸರ್ಕಾರದಿಂದ ಮೊದಲೊಂದು ಸಣ್ಣ ಎಚ್ಚರಿಕೆ ಸಂದೇಶ ಬರುತ್ತದೆ. ಅದನ್ನೂ ಉಪೇಕ್ಷಿಸಿದರೆ ದಂಡ ಕಟ್ಟಬೇಕಾಗುತ್ತದೆ. ಅದೇನೂ ಕಡಿಮೆ ಮೊತ್ತವೇನಲ್ಲ, ದಿನವೊಂದಕ್ಕೆ ೩೬೪ ಡಾಲರ್ ದಂಡ ಬೀಳುತ್ತದೆ. ತಿಳಿದೂ ತಿಳಿದೂ ಏನಾದರೂ ತಪ್ಪು ಮಾಹಿತಿ, ವಿವರಗಳನ್ನು ಕೊಟ್ಟರೆ ಅದು ಅಪರಾಧವಾಗುತ್ತದೆ. ಈ ಅಪರಾಧಕ್ಕೆ ೩೬೪೦ ಡಾಲರ್ ತನಕ ದಂಡವಿದೆ. ಈ ಪಾಟಿ ದಂಡಕ್ಕೆ ಹೆದರಿಯೇ ಜನರು ಕಡ್ಡಾಯ ಜನಗಣತಿಯಲ್ಲಿ ಪಾಲ್ಗೊಳ್ಳುತ್ತಾರೇನೊ!!

ಸರ್ಕಾರ ಹೇಳುವುದು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಿಂದ ಅನೇಕ ರೀತಿಯಲ್ಲಿ ಒಳ್ಳೆಯದು. ಆಸ್ಟ್ರೇಲಿಯಾದಲ್ಲಿ ಯಾರೆಲ್ಲಾ ವಾಸಿಸುತ್ತಿದ್ದಾರೆ, ಅವರ ಲಿಂಗ, ವಯಸ್ಸು, ಸಾಂಸ್ಕೃತಿಕ ಅಸ್ಮಿತೆ, ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗ, ಮದುವೆಯಾಗಿದೆಯಾ ಇಲ್ಲವಾ, ಈಗಿನ ಅಡ್ರೆಸ್ ಜೊತೆಗೆ ಕಳೆದ ಐದು ವರ್ಷಗಳ ಹಿಂದೆ ಯಾವ ವಿಳಾಸದಲ್ಲಿದ್ದೆ, ಭಾಷೆ, ಹುಟ್ಟಿದ ದೇಶ, ಆಸ್ಟ್ರೇಲಿಯನ್ ಪ್ರಜೆಯಾ, ವಿದ್ಯಾರ್ಥಿಯಾ, ಎಂಬಂತೆ ಎಲ್ಲವೂ ದಾಖಲಾಗುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಮ್ಮ ಜನುಮಜನುಮದ ಜಾತಕ, ಕುಂಡಲಿ, ಸಕಲವನ್ನೂ ಸರ್ಕಾರಕ್ಕೆ ಒಪ್ಪಿಸಬೇಕು!

ಯಾಕೆಂದರೆ, ಈ ಬಾರಿ ಜನಗಣತಿಯಲ್ಲಿ ನಮ್ಮ ಕುಲವಿವರ (ancestry) ಜೊತೆಗೆ ಲೈಂಗಿಕತೆಯ ಆಯ್ಕೆಯನ್ನೂ ಕುರಿತು ಹೇಳಿಕೊಳ್ಳಬೇಕು ಎನ್ನುವ ಪ್ರಶ್ನೆಗಳಿದ್ದವು. ಕುಲವಿವರ ಪ್ರಶ್ನೆಗೆ ಸಂಬಂಧಪಟ್ಟ ಹಾಗೆ ಹಲವಾರು ಆಯ್ಕೆಗಳಿದ್ದವು – ಐರಿಷ್, ಸ್ಕಾಟಿಷ್, ಇಂಗ್ಲಿಷ್, ಅಬೊರಿಜಿನಲ್, ಟೊರ್ರೆ ಸ್ಟ್ರೈಟ್ ದ್ವೀಪವಾಸಿ, ಇತ್ಯಾದಿಗಳ ಜೊತೆ ‘ಆಸ್ಟ್ರೇಲಿಯನ್’ ಅಂತಿತ್ತು. ಅಲ್ಲಾ, ಅದೇನೇನೋ ancestry ಆಯ್ಕೆಯಿದ್ದದ್ದು ಸರಿ; ಆದರೆ ಈ ಆಸ್ಟ್ರೇಲಿಯನ್ ಎಂಬ ancestry ಎಂದರೆ ಏನು ಅನ್ನೋ ಪ್ರಶ್ನೆ  ಎದ್ದಿತ್ತು. ಬಿಳಿಯರೆಲ್ಲಾ ತಮಗೆ ಐರಿಷ್, ಸ್ಕಾಟಿಷ್, ಇಂಗ್ಲಿಷ್, ಗ್ರೀಕ್, ಇಟಾಲಿಯನ್ ಇತ್ಯಾದಿ ancestry ಇದೆ ಎಂದು ಹೇಳುವುದು ಒಂದು. ಅದೆಲ್ಲಾ ಸರಿ. ನಾವು ಭಾರತೀಯರು Other ಅನ್ನೋ ಬಾಕ್ಸಿನಲ್ಲಿ ಇಂಡಿಯನ್ ಅಂತ ಹಾಕುವುದು. ಇದೂ ಸರಿ. ಆದರೆ ‘ಆಸ್ಟ್ರೇಲಿಯನ್’ ಕುಲಮೂಲವೆಂದರೆ ಯಾರು, ಯಾವ ದೇಶ… ಪ್ರಶ್ನೆಯಾಗೇ ಉಳಿದಿದೆ. ಅದ್ಯಾವ ಮಹಾಶಯರು ಇದನ್ನು ಹುಟ್ಟಿಹಾಕಿದರೊ ತಿಳಿಯದು.

ಸರಕಾರವು ಎಲ್ಲರೂ ಜನಗಣತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಳೆದ ಎರಡು ತಿಂಗಳುಗಳಿಂದ ಭಾರಿ ಪ್ರಚಾರ ನಡೆಸಿತ್ತು. ವಿವರಗಳನ್ನು ಕೊಟ್ಟರಾಯ್ತು ಎಂದುಕೊಂಡು ಸುಮ್ಮನಾಗಿ ಕೊನೆಯಲ್ಲಿ ಆನ್ಲೈನ್ ಫಾರಂ ತುಂಬಲು ಹೊರಟಾಗ ಹೆಣಗಾಡಬೇಕಾಯ್ತು. ಒಂದು ಬಾಕ್ಸಿನಲ್ಲಿ ಮಾಹಿತಿಯನ್ನು ಕೊಟ್ಟರೆ ಅದು ಮತ್ತೊಂದು, ಮಗದೊಂದು ಬಾಕ್ಸ್‌ಗಳನ್ನು ತೆರೆದು ಕೊಡು ಮತ್ತಷ್ಟು ವಿವರ, ಎನ್ನುತ್ತಿತ್ತು. ಆರೋಗ್ಯದ ಬಗ್ಗೆ ವಿವರಗಳನ್ನು ಕೊಡುವಾಗ ಈ ಎಲ್ಲಾ ವಿವರಗಳು ಸರ್ಕಾರದ ಆರೋಗ್ಯ ವ್ಯವಸ್ಥೆಯಲ್ಲಿ ಈಗಾಗಲೇ ದಾಖಲಾಗಿದೆಯಲ್ಲಾ, ಮತ್ತೆ ಇಷ್ಟೆಲ್ಲಾ ಬರೆಯಬೇಕಾದ ಅಗತ್ಯವೇನಿತ್ತು ಎಂದೆನಿಸಿತ್ತು.

ನಾನು ಮೊದಲಬಾರಿ ೨೦೦೪ ನೇ ಇಸವಿಯಲ್ಲಿ ಆಸ್ಟ್ರೇಲಿಯನ್ ಸೆನ್ಸಸ್ ಫಾರಂ ತುಂಬಿದ್ದೆ. ಆಗದು ಪೇಪರ್-ಪೆನ್ ವಿಧಾನದಲ್ಲಿ ಮಾತ್ರ ಲಭ್ಯವಿತ್ತು. ಆ ಉದ್ದಾನುದ್ದ ಜನಗಣತಿ ಫಾರಂ ತುಂಬಿದ್ದು ನಾನಾದರೂ, ನನ್ನ ಹೆಸರು, ಅಸ್ಮಿತೆ, ವಿವರಗಳನ್ನು ಕೊಡಲಾಗಲಿಲ್ಲ. ಯಾಕೆಂದರೆ ಆಗಿನ್ನೂ ನಾನು ವಿದ್ಯಾರ್ಥಿ ವೀಸಾ ಅರ್ಹತೆಯಲ್ಲಿದ್ದೆ. ಜನಗಣತಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಕೊಡಲಿಲ್ಲ. ಫಾರಂ ತುಂಬಿದ್ದು ನನ್ನ ಗಂಡ, ಮಗನಿಗಾಗಿ. ಅವರ ವಿವರಗಳನ್ನು ಕೊಟ್ಟಿದ್ದು. ನನ್ನದೊಂದು ಕುತೂಹಲಕ್ಕಾಗಿ ಫಾರಂ ತುಂಬುವ ಜವಾಬ್ದಾರಿ ತೆಗೆದುಕೊಂಡಿದ್ದೆ. ಆಗ ಮನೆಯಲ್ಲಿ ಆಸ್ಟ್ರೇಲಿಯನ್ ಅತ್ತೆ ಕೂಡ ಇದ್ದರು. ಅವರನ್ನು, ನನ್ನ ಗಂಡನನ್ನು ಪ್ರಶ್ನೆ ಕೇಳುತ್ತಾ ಫಾರಂ ತುಂಬಿದ್ದು ಒಂದು ದೊಡ್ಡ ಅನುಭವವೇ ಆಗಿತ್ತು. ಅದರಲ್ಲಿ ನಾನಿಲ್ಲದಿದ್ದದ್ದು ಪೆಚ್ಚೆನಿಸಿತ್ತು. ಅದೇ ವರ್ಷ ನಡೆದ ಚುನಾವಣೆಯಲ್ಲಿ ಕೂಡ ನಾನು ಪಾಲ್ಗೊಳ್ಳಲಾಗಲಿಲ್ಲ. ಏಕೆಂದರೆ ಆಗ ನಾನಿನ್ನೂ ಆಸ್ಟ್ರೇಲಿಯನ್ ಪ್ರಜೆಯಾಗಿರಲಿಲ್ಲ. ಪುನಃ ಅದೇ ಕುತೂಹಲಕ್ಕಾಗಿ ಮಗುವನ್ನೆತ್ತಿಕೊಂಡು ಗಂಡನ ಜೊತೆ ಮತಚಲಾವಣೆ ಬೂತ್‌ಗೆ ಹೋಗಿ ಆಸ್ಟ್ರೇಲಿಯಾದಲ್ಲಿ ಹೇಗೆ ಮತ ಹಾಕುತ್ತಾರೆ ಎನ್ನುವ ಅನುಭವವಾಗಿತ್ತು.

ಮತ್ತೆ ಜನಗಣತಿ ವಿಷಯಕ್ಕೆ ಬರುತ್ತೀನಿ. ಆಸ್ಟ್ರೇಲಿಯಾದ ಕನ್ನಡ ಭಾಷಾ ಸಂಘಗಳು, ಸಮುದಾಯ ಗುಂಪುಗಳು, ಮತ್ತು ಸಿಡ್ನಿ ಕನ್ನಡ ವಾಣಿ ರೇಡಿಯೋ ಕನ್ನಡಿಗರೆಲ್ಲಾ ತಮ್ಮ ಮಾತೃಭಾಷೆ ಕನ್ನಡ ಎಂದು ನಮೂದಿಸಬೇಕು ಎನ್ನುವ ಪ್ರಚಾರ ಮಾಡಿದ್ದರು. ನಮ್ಮನೆಯಲ್ಲಿ ಮನೆಭಾಷೆ ಇಂಗ್ಲಿಷ್ ಆದರೂ ನಾನು ಮಾತನಾಡುವ ಮತ್ತೊಂದು ಭಾಷೆ ಕನ್ನಡ ಎಂದು ನಮೂದಿಸಿದಾಗ ಖುಷಿಯಾಗಿತ್ತು.

ಹೀಗೆ ನಾವು ಜನಗಣತಿಯಲ್ಲಿ ಕೊಡುವ ವಿವರಗಳಿಂದ ಲಾಭಗಳಿವೆ ಎಂದು ಹೇಳಿದ್ದೆನಲ್ಲಾ. ಅದೇನೆಂದರೆ, ಈ ಪ್ರದೇಶದಲ್ಲಿ ಇಷ್ಟು ಸಂಖ್ಯೆ ಜನರಿದ್ದಾರೆ, ಅವರಿಗೆ ಅಗತ್ಯ ಸೇವೆಸೌಲಭ್ಯಗಳು ಸಿಗುತ್ತಿವೆಯಾ ಎನ್ನುವುದಕ್ಕೆ ಇಷ್ಟೆಲ್ಲಾ ವಿವರಗಳು ಬೇಕು. ಉದಾಹರಣೆಗೆ, ಪಟ್ಟಣದ ಹೊರಗಡೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಣ್ಣದೊಂದು ಸಮುದಾಯಕ್ಕೆ ಪ್ರತಿನಿತ್ಯವೂ ನಿಗದಿತ ಸಮಯಕ್ಕೆ ಬಸ್ ಇದೆಯಾ, ಅಲ್ಲಿ ಒಬ್ಬ ಡಾಕ್ಟರ್ ಇದ್ದಾರಾ, ಹೆಚ್ಚಿನ ಆರೋಗ್ಯ ತಪಾಸಣೆಗೆ ಜನರು ಎಲ್ಲಿ ಹೋಗಬೇಕಾಗುತ್ತದೆ, ಶಾಲೆ ವಯಸ್ಸಿನ ಮಕ್ಕಳ ಸಂಖ್ಯೆ ಎಷ್ಟು, ಅವರ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಸಂಪನ್ಮೂಲಗಳು ಇವೆಯೇ ಇತ್ಯಾದಿ. ಒಂದು ಉದಾಹರಣೆ ಕೊಡುವುದಾದರೆ, ನಾನು ವಾಸ ಮಾಡುವ ಬಡಾವಣೆಗೆ ಬಸ್ ಸೌಲಭ್ಯ ಚೆನ್ನಾಗಿಲ್ಲ. ಸಂಜೆ ಆರು ಗಂಟೆಯ ತನಕ ಪ್ರತಿಗಂಟೆಗೊಮ್ಮೆ ಬಸ್ ಬರುತ್ತದೆ. ಮಧ್ಯಾಹ್ನ ಊಟದ ಸಮಯದ ಎರಡು ಗಂಟೆ ಕಾಲ ಬಸ್ ಬರುವುದಿಲ್ಲ. ಸಂಜೆ ಆರು ಗಂಟೆಯ ನಂತರವೂ ಇಲ್ಲ. ನಮ್ಮನೆಯಿಂದ ೩೦ ನಿಮಿಷಗಳ ಕಾಲದ ನಡಿಗೆ ದೂದದಲ್ಲಿ ಟ್ರೇನ್  ಸ್ಟೇಷನ್ ಇದೆ. ಅಲ್ಲಿ ನಿಗದಿತ ಟ್ರೇನ್ ವ್ಯವಸ್ಥೆ ಅನೂಕೂಲವಾಗಿದ್ದರೂ, ಅಲ್ಲಿಂದ ಮನೆಗೆ ಇರುವ ಏರುದಾರಿಯಲ್ಲಿ ಮೂವತ್ತು ನಿಮಿಷ ಕಾಲ ನಡೆಯಬೇಕು. ಕೆಲಸದ ಸ್ಥಳಕ್ಕೆ ಹೋಗಲು, ಎರಡು ಟ್ರೇನ್‌ನಲ್ಲಿ ಪಯಣ. ಒಟ್ಟಾರೆ ಸಮಯವನ್ನು ಗಮನಿಸಿದರೆ ಕಾರ್ ಹತ್ತುವುದೆ ಸೈ. ಹೀಗೆ ನಾವು ದಿನನಿತ್ಯದ ಸಂಚಾರಕ್ಕೆ ಕಾರ್ ಬಳಸುತ್ತೀವಿ ಎಂದು ಜನಗಣತಿ ಫಾರಂ ನಲ್ಲಿ ತುಂಬಿದರೆ ಪುನಃ ಅದೇ ಕತೆ – ಬಸ್ ಸೌಕರ್ಯ ಸುಧಾರಿಸುವುದಿಲ್ಲ.

ಹೀಗೆ ಒಂದು ಜನಗಣತಿಯ ಕತೆಗಳನ್ನು ಹೇಳುತ್ತಾ ಹೋದರೆ ಅದೊಂದು ದೊಡ್ಡ ಪುರಾಣ ಕಥನವೆ ಆಗುತ್ತದೆ!

 

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ