Advertisement
ಕೆ.ಎಸ್.ನ ಕಾವ್ಯದ ಸೊಲ್ಲು – ಕನ್ನಡತೋಟದ ಮಲ್ಲಿಗೆಯರಳು: ಎಲ್. ಜಿ. ಮೀರಾ ಅಂಕಣ

ಕೆ.ಎಸ್.ನ ಕಾವ್ಯದ ಸೊಲ್ಲು – ಕನ್ನಡತೋಟದ ಮಲ್ಲಿಗೆಯರಳು: ಎಲ್. ಜಿ. ಮೀರಾ ಅಂಕಣ

ಕೆ.ಎಸ್.ನ. ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನವು ನಮ್ಮ ಸಾಹಿತ್ಯ ಕ್ಷೇತ್ರದ ಒಂದು ಸುಕುಮಾರ ಬೆರಗು! ಹಿಂದಿರುಗಿ ನೋಡಿದರೆ ಇಂಥದೊಂದು ಘಟಿತ ಸಾಧ್ಯ ಆಗಿದ್ದು ಹೇಗೆ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಹೌದು, ಡಾ.ಎಚ್.ಎಸ್.ವಿ. ಅವರು ಸರಿಯಾಗಿ ಗುರುತಿಸಿರುವಂತೆ ಆಚಾರ್ಯ ಬಿ.ಎಂ.ಶ್ರೀ ಅವರ ಯುಗಪ್ರವರ್ತಕ ಅನುವಾದ ಕೃತಿ `ಇಂಗ್ಲಿಷ್ ಗೀತಗಳು’ ಹಾಗೂ ತೀ.ನಂ.ಶ್ರಿ. ಅವರ `ಒಲುಮೆ’ ಕವನ ಸಂಕಲನಗಳ ಪ್ರಭಾವ `ಮೈಸೂರು ಮಲ್ಲಿಗೆ’ಯ ಮೇಲಿರುವ ಹಾಗಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೊಂದನೆಯ ಬರಹ

ಮೈಸೂರೆನ್ನಿ, ಕನ್ನಡವೆನ್ನಿ
ಮಲ್ಲಿಗೆಯೆನ್ನಿ, ಒಂದೆ!
ಒಡೆಯರ ಮಕುಟದ ರತ್ನವಿದೆನ್ನಿ,
ಒಡೆಯರ ಕನ್ನಡವೆನ್ನಿ!
ಇರುಳನು ಕಾಣದ ಕನ್ನಡವೆನ್ನಿ,
ಒಡೆಯದ ಕನ್ನಡವೆನ್ನಿ!
ಕವಿಗಳು ಬಳಸುವ ಭಾಷೆಯಿದೆನ್ನಿ
ಒಳಗಿನ ಹೂರಣವೊಂದೆ!

ಕೆಎಸ್‌ನ ಅವರ ಈ ಸಾಲುಗಳು ಕನ್ನಡ ಭಾಷೆಯ ಬಗೆಗೆ ಅವರಿಗೆ ಇದ್ದ ಸಕ್ಕರೆಯಂತಹ ಅಕ್ಕರೆಯನ್ನು ತೋರುತ್ತವೆ. ಈ ಕವಿಯು ಕನ್ನಡ ಭಾಷೆಯನ್ನು ಕೇಳಿದ, ಕೇಳಿಸಿದ, ಆಡಿದ, ಆಡಿಸಿದ, ಲಾಲಿಸಿದ, ಪಾಲಿಸಿದ ರೀತಿ ಬಹು ಅಪೂರ್ವವಾದುದು. ಈ ಪ್ರಬಂಧದಲ್ಲಿ ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ(ಕನ್ನಡಿಗರ ಪ್ರೀತಿಯ ಕೆಎಸ್‌ನ) ಅವರ ಕಾವ್ಯಭಾಷೆಯನ್ನು ಕುರಿತು ಒಂದು ಜಿಜ್ಞಾಸೆ ಇದೆ. ಈ ಕವಿಯ ಕನ್ನಡವು ಸರಳತೆ, ಮಾಧುರ್ಯ ಹಾಗೂ ಅರ್ಥಪೂರ್ಣತೆಗಳನ್ನು ಸುಲಲಿತವಾಗಿ ಬೆರೆಸಿದ್ದು ಹೇಗೆ ಎಂಬ ಕುತೂಹಲವು ಈ ಜಿಜ್ಞಾಸೆಯ ಹಿಂದೆ ಕೆಲಸ ಮಾಡಿದೆ.

 *****

 ಇಂಗ್ಲಿಷ್ ಕವಿ ರಾಬರ್ಟ್ ಬರ್ನ್ಸ್‌ನ ಜನಪದ ಪ್ರೇಮಗೀತೆಗಳಿಂದ ಸ್ಫೂರ್ತಿ ಪಡೆದು ತಾವು ಮೈಸೂರ ಮಲ್ಲಿಗೆಯ ಕವಿತೆಗಳನ್ನು ಬರೆದುದಾಗಿ ಕೆಎಸ್‌ನ ತಮ್ಮ ಒಂದು ಸಮಗ್ರ ಸಂಕಲನ(ಮಲ್ಲಿಗೆಯ ಮಾಲೆ)ಕ್ಕೆ ಬರೆದ ಮುನ್ನುಡಿಯೊಂದರಲ್ಲಿ ಹೇಳಿಕೊಂಡಿದ್ದಾರೆ. `ಇಂಗ್ಲಿಷ್ ಕವಿತೆಯ ಗುಲಾಬಿ ತೋಟದಲ್ಲಿದ್ದ ನನ್ನನ್ನು ಶ್ರೀಯವರ `ಇಂಗ್ಲಿಷ್ ಗೀತಗಳು’ ಕನ್ನಡಕ್ಕೆ ಬರಮಾಡಿಕೊಂಡವು’ ಎನ್ನುವ ಈ ಕವಿ ಪುರಾಣದ ಕಟ್ಟೆಯಲ್ಲಿ ತಾವು ಕೇಳಿದ ಗದುಗಿನ ಭಾರತ, ಕನ್ನಡ ಭಾಷೆಯ ಜನಪದ ಗೀತೆಗಳ ಸೊಬಗು ಹಾಗೂ ಮೈಸೂರಿನ ದೊಡ್ಡ ಗಡಿಯಾರದ ಎದುರಿಗೆ ಇದ್ದ ಒಂದು ಹೂವಿನಂಗಡಿಯ ಮಾಲಿಕರು `ದೂರ ದೂರಕ್ಕೆ ಗುಲಾಬಿ, ಸಂಪಗೆ, ಮರುಗ, ಪಚ್ಚೆತೆನೆ ಇಟ್ಟು ಮಲ್ಲಿಗೆ ದಂಡೆ ಹೆಣೆದದ್ದು’ ಇವೆಲ್ಲವೂ ತಮಗೆ ಕವಿತೆ ಬರೆಯಲು ಸ್ಫೂರ್ತಿ ನೀಡಿದವು ಎಂದಿದ್ದಾರೆ. ಮೈಸೂರು ಮಲ್ಲಿಗೆಯ ಮಾಲೆ ಕಟ್ಟುವುದನ್ನು ನೋಡಿಯೇ ಇವರಿಗೆ ಕಾವ್ಯ ಪಂಕ್ತಿಯ ಕಲ್ಪನೆ ಮೊದಲ ಬಾರಿಗೆ ಬಂದದ್ದಂತೆ! ಎಂತಹ ಸುರಮ್ಯ ಹಿನ್ನೆಲೆ ಅಲ್ಲವೆ ಕವಿತೆಯ ಸೃಷ್ಟಿಗೆ! ಯಾವ ಹೂ ಕಟ್ಟುವಿಕೆಯನ್ನು ನೋಡಿದರೋ ಅದರ ಹೆಸರನ್ನೇ ತಮ್ಮ ಚೊಚ್ಚಲ ಕವನ ಸಂಕಲನಕ್ಕೆ ಇಟ್ಟರು! ಮೈಸೂರ ಮಲ್ಲಿಗೆ!

 *****

 ಕವನರಚನೆಯ ದೃಷ್ಟಿಯಿಂದ ನೋಡಿದರೆ ಕನ್ನಡದ ಒಂದು ಅಪ್ಪಟ ಮನಸ್ಸು ಕೆಎಸ್‌ನ. ಕೀಟ್ಸ್, ಬೈರನ್, ಶೆಲ್ಲಿ ಮುಂತಾದ ಇಂಗ್ಲಿಷ್ ರಮ್ಯ ಕವಿಗಳಿಂದ (ರೊಮ್ಯಾಂಟಿಕ್) ಪ್ರಭಾವಿತರಾಗಿ ಕನ್ನಡಕ್ಕೆ ಅಂತಹದೇ ಸುರಮ್ಯ ಭಾವಗಳನ್ನು ಆಡುಭಾಷೆಯಲ್ಲಿ ಸರಳವಾಗಿ ಅಭಿವ್ಯಕ್ತಿಸಿದ ಕೀರ್ತಿ ಹಾಸನ ಜಿಲ್ಲೆಯ ಕಿಕ್ಕೇರಿಯ ಈ ಕವಿಯದು. `ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು’, `ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು, ಚಂದ ನಿನಗಾವುದೆಂದು, ನಮ್ಮೂರು ಹೊನ್ನೂರು, ನಿಮ್ಮೂರು ನವಿಲೂರು ಚಂದ ನಿನಗಾವುದೆಂದು’, `ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ?’ ಎಂದೆಲ್ಲ ಹೇಳಿದಾಗ-ಕೇಳಿದಾಗ ಜಾನಪದ ಹಾಗೂ ಶಿಷ್ಟ ಅಭಿವ್ಯಕ್ತಿಗಳು ಹದವಾಗಿ ಬೆರೆತ ಕನ್ನಡದ ಲಲಿತವಾದ ಕಿಂಕಿಣಿಯು ನಮ್ಮ ಕಿವಿಗೆ ಕೇಳಿಸುತ್ತದೆ.

ದೊರೆ, ಅಂಬಾರಿ, ದರ್ಬಾರು, ಅರಮನೆ ಮುಂತಾದ ಪದಗಳು ಮೈಸೂರು ರಾಜ್ಯದ ರಾಜಪರಂಪರೆಯ ವೈಭವವನ್ನು ಹೇಳುವಂಥವು. ಮೈಸೂರು ಕಡೆಯ ಜನಸಮಾನ್ಯರ ಮಾತುಗಳಲ್ಲೂ ಇವು ಕೇಳಿಬರುತ್ತವೆ. `ಓಹೋಹೋ, ನೋಡವನ ದರ್ಬಾರು!’, `ದೊಡ್ಡ ದೊರೆಮಗ ಇವ್ನು!ʼ, `ಅರಮನೇಲಿದ್ರೂ ನೆರೆಮನೆ ಬೇಕು’, `ನಾಯೀನ ಅಂಬಾರೀಲಿ ಕೂರಿಸಿದ ಹಾಗೆ’?…… ಹೀಗೆ ಹಳೆ ಮೈಸೂರಿಗರ ನುಡಿಗಟ್ಟು, ಗಾದೆಮಾತು, ನಾಣ್ಣುಡಿಗಳ ಭಾಷೆಯಲ್ಲಿ ಮೈಸೂರಿನ ರಾಜವೈಭವದ ಛಾಯೆ ವ್ಯಕ್ತವಾಗುತ್ತಲೇ ಇರುತ್ತದೆ. ಕೆಎಸ್‌ನ ಅವರಿಗೆ ಮೈಸೂರು ತುಂಬ ಪರಿಚಿತವಾದ ಹಾಗೂ ಅವರ ಮೇಲೆ ತುಂಬ ಪ್ರಭಾವ ಬೀರಿದ ಊರಾದ್ದರಿಂದ ಈ ಎಲ್ಲ ಪದಗಳು ಅವರ ಕಾವ್ಯದಲ್ಲೂ ದಂಡಿಯಾಗಿ ಕಾಣಸಿಗುತ್ತವೆ.

ಕೆಎಸ್‌ನ ಅವರ ಸುಲಲಿತವಾದ ಕನ್ನಡ ಬಳಕೆಯು ವಿಶೇಷ ಗಮನ ಬೇಡುವಂಥದ್ದು ಮತ್ತು ಕನ್ನಡ ಭಾಷೆಯು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ದಿನಮಾನದಲ್ಲಿ ಮರುಚಿಂತನೆ, ಮರುಅಧ್ಯಯನಗಳನ್ನು ಮಾಡಬೇಕಾದಂಥದ್ದು. `ಎನ್ನರಸ ಸುಮ್ಮನಿರಿ’, `ಸುಮ್ಮನಿರಿ ಮಾವನವರೆ’, `ಬೆಳಗಾಯಿತು ಸರಿ ಹೊರಡುವೆನೆಂದರು’, `ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ’, `ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ ಅಮ್ಮನಿಗೆ ಬಳೆಯ ತೊಡಿಸಿದರು’, ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು, ನಿಮಗೇತಕೀ ಕಲ್ಲು ಮನಸು, ಹೋಗಿಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು’ ……. ಇಂತಹ ಪದ, ಪದಗುಂಪು ಮತ್ತು ವಾಕ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಾವು ನೀವು ಅಥವಾ ಹಳೆಯ ಮೈಸೂರಿನ ಪ್ರದೇಶದ ಜನ, ನಿತ್ಯವೂ ಆಡುವ ಪದಗಳೇ ಇವರಲ್ಲಿ ಕವಿತೆಯಾಗಿಬಿಟ್ಟಿವೆ! ಆಡುಭಾಷೆಯಲ್ಲಿ ಸಹಜವಾಗಿ ಇರುವ ಸಂಗೀತ-ಲಯ-ಮಾಧುರ್ಯಗಳನ್ನು ಹೀಗೆ ಗುರುತಿಸಿ ಬರೆಯುವ ಈ ಕವಿಯ ಕಾವ್ಯ ಕಟ್ಟುವ `ಕಾರಯತ್ರಿ ಪ್ರತಿಭೆ’ ಅಚ್ಚರಿ ಉಂಟುಮಾಡುತ್ತದೆ. ಸಂತೆಯಲ್ಲಿ, ಮಾರುಕಟ್ಟೆಯಲ್ಲಿ ತಾವು ಸುತ್ತಾಡುವಾಗ, ಓಡಾಡುವಾಗ ಕೆಎಸ್‌ನ ಜನರ ಕನ್ನಡವನ್ನು ಆಲಿಸಿ, ಲಾಲಿಸಿ ಅದರಲ್ಲಿರುವ ಮಾಧುರ್ಯವನ್ನು ಗಮನಿಸಿ ಹಾಡಿನ ಮಟ್ಟಕ್ಕೆ ಏರಿಸಿದ್ದಾರೆ, ಮೆರೆಸಿದ್ದಾರೆ. ಕವಿ ಯಾರೆಂದು ತಿಳಿಯದ ಅನಕ್ಷರಸ್ಥರು, ಕೊನೆಗೆ ಭಿಕ್ಷುಕರು ಸಹ ಇವರ ಹಾಡುಗಳನ್ನು ಖುಷಿಯಿಂದ ಹಾಡುತ್ತಿದ್ದರು ಎಂದರೆ ಎಂತಹ ಜನ ಮೆಚ್ಚಿದ ಕವಿ ಇವರು ಎಂದು ನಾವು ಆರ್ಥ ಮಾಡಿಕೊಳ್ಳಬಹುದು.

ಕೆ.ಎಸ್.ನ. ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನವು ನಮ್ಮ ಸಾಹಿತ್ಯ ಕ್ಷೇತ್ರದ ಒಂದು ಸುಕುಮಾರ ಬೆರಗು! ಹಿಂದಿರುಗಿ ನೋಡಿದರೆ ಇಂಥದೊಂದು ಘಟಿತ ಸಾಧ್ಯ ಆಗಿದ್ದು ಹೇಗೆ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಹೌದು, ಡಾ.ಎಚ್.ಎಸ್.ವಿ. ಅವರು ಸರಿಯಾಗಿ ಗುರುತಿಸಿರುವಂತೆ ಆಚಾರ್ಯ ಬಿ.ಎಂ.ಶ್ರೀ ಅವರ ಯುಗಪ್ರವರ್ತಕ ಅನುವಾದ ಕೃತಿ `ಇಂಗ್ಲಿಷ್ ಗೀತಗಳು’ ಹಾಗೂ ತೀ.ನಂ.ಶ್ರಿ. ಅವರ `ಒಲುಮೆ’ ಕವನ ಸಂಕಲನಗಳ ಪ್ರಭಾವ `ಮೈಸೂರು ಮಲ್ಲಿಗೆ’ಯ ಮೇಲಿರುವ ಹಾಗಿದೆ. ಆದರೆ ಮದುವೆಗೆ ಮುಂಚಿನ ಹಾಗೂ ಹೊಸದಾಗಿ ಮದುವೆಯಾದ ಗಂಡು ಹೆಣ್ಣುಗಳ ಪ್ರೀತಿ, ಅಗಲಿಕೆಗಳ ನೋವನ್ನು ಯಾರಿಗೂ ಮುಜುಗರವಾಗದಂತಹ ಲಲಿತವಾದ ಭಾಷೆಯಲ್ಲಿ ಕನ್ನಡ ಭಾಷೆಗೆ ತಂದ ಹೆಗ್ಗಳಿಕೆ ಮಾತ್ರ ಕೆ.ಎಸ್.ನ. ಅವರದೇ.

“ತಮ್ಮವು ಪ್ರೇಮಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆ.ಎಸ್.ನ (ಈಚೆಗೆ) ಹೇಳಿದ್ದು ಅರ್ಥಪೂರ್ಣ. ಮೈಸೂರು ಮಲ್ಲಿಗೆಯ ಬಹಳಷ್ಟು ಕವಿತೆ ದಾಂಪತ್ಯಗೀತೆಗಳೇ ಆಗಿವೆ. ದಶಕಗಳ ಹಿಂದಣ ಸಾವಧಾನದ ಬದುಕಿನ ಚಿತ್ರಣ ಇಲ್ಲಿದೆ. ಮಧ್ಯಮವರ್ಗ, ಕೆಳಮಧ್ಯಮ ವರ್ಗದ ಸಮಾಜವೇ ಇಲ್ಲಿ ಕಾಣಿಸತಕ್ಕದ್ದು. ಹೆಚ್ಚಾಗಿ ಕವಿತೆಗಳ ಉದ್ದಕ್ಕೂ ಒಂದು ಗ್ರಾಮೀಣ ಪರಿಸರದ ಚಿತ್ರಣವಿದೆ. ನವಿಲೂರು, ಹೊನ್ನೂರು ಮೊದಲಾದುವು ಈ ಗ್ರಾಮೀಣ ಜಗತ್ತಿನ ಪ್ರಾತಿನಿಧಿಕ ನೆಲೆಗಳು. ಮೈಸೂರು ಮಲ್ಲಿಗೆಯ ಕವಿತೆಗಳು ಎಷ್ಟರ ಮಟ್ಟಿಗೆ ಈ ನೆಲದವಾಗಿವೆಯೆಂದರೆ ಅವುಗಳ ಹಿಂದೆ ಬರ್ನ್ಸ್ ಕವಿಯ ಪ್ರಭಾವವಿದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಡಿ.ವಿ.ಜಿ. ಅವರು ಮೈಸೂರು ಮಲ್ಲಿಗೆಯ ಮುನ್ನುಡಿಯಲ್ಲಿ ಗುರುತಿಸಿರುವಂತೆ ಸ್ವಾಭಾವಿಕತೆ, ಸರಳತೆ, ಋಜುತೆಗಳೇ ಈ ಕಾವ್ಯದ ಮುಖ್ಯ ಲಕ್ಷಣಗಳಾಗಿವೆ. ಒಟ್ಟಾರೆ ನಮ್ಮಲ್ಲೇ ಇದ್ದ ಜಾನಪದ ಕಾವ್ಯ ಮತ್ತು ಪಾಶ್ಚಾತ್ಯ ಪ್ರೇಮ ಕಾವ್ಯದ ಪ್ರಭಾವದಿಂದ ವಿಶಿಷ್ಟವಾದ ಈ ಮಣ್ಣಿನ ಮಲ್ಲಿಗೆಯ ಚೆಲುವಾದ ಕವಿತೆಯನ್ನು ಕೆ.ಎಸ್.ನ. ನಿರ್ಮಿಸಿದವರು ಎನ್ನಬಹುದು” (ಎಚ್.ಎಸ್.ವೆಂಕಟೇಶ ಮೂರ್ತಿ – ಸಾಲುದೀಪಗಳು ಕೃತಿಯಲ್ಲಿ).

 *****

ಎಂದೋ ಕೇಳಿದ ಒಂದು ಹಾಡನು
ನಾನು ವೀಣೆಗೆ ಕಲಿಸಿದೆ
ಅದನೆ ನೆನೆಯುತ ನೀನು ಹಾಡಲು
ನಾನು ಜೊತೆಗೂ ನುಡಿಸಿದೆ.

ನಾನು ಹಾಡಿದೆ ನೀನು ನುಡಿಸಿದೆ
ಹಾಡೆ ಹಾದಿಯ ತೋರಿತು
ನಿನ್ನ ಕೊರಳಿಗೆ ನನ್ನ ಬೆರಳಿಗೆ
ಸಂಜೆ ಶುಭವನು ಕೋರಿತು.

ಹೀಗೆ ಮಾತೇ ಹಾಡಾಗುವ, ಹಾಡೇ ಮಾತಾಗುವ ಪರಿ ಕೆಎಸ್‌ನ ಅವರ ಕಾವ್ಯದ ಸಿರಿವೈಖರಿ. `ಮೈಸೂರ ಮಲ್ಲಿಗೆ ಎಂಬುದು ಕನ್ನಡದ ಮನಸ್ಸು ಒಮ್ಮೆ ಮಾತ್ರ ಹಾಡಿಕೊಳ್ಳಬಹುದಾದ ಹಾಡು’ ಎಂದು ವಿಮರ್ಶಕ ಡಿ.ಆರ್.ನಾಗರಾಜ್ ತಮ್ಮ `ಶಕ್ತಿ ಶಾರದೆಯ ಮೇಳ’ ಕೃತಿಯಲ್ಲಿ ಗುರುತಿಸಿದ್ದಾರೆ.

 ****

 `ಕರ್ನಾಟಕ ಗೀತ’ ಎಂಬ ತಮ್ಮ ಒಂದು ಕವಿತೆಯಲ್ಲಿ ಕನ್ನಡ ನಾಡನ್ನು ಕೆ.ಎಸ್.ನ ತಮ್ಮ ಕವಿಸೊಲ್ಲಿನಲ್ಲಿ ವರ್ಣಿಸುವುದು ಹೀಗೆ. “ಪಡುವಣ ಕಡಲಿನ ನೀಲಿಯ ಬಣ್ಣ, ಮುಡಿಯೊಳು ಸಂಜೆಯ ಅಂಚಿನ ಚಿನ್ನ, ಹೊಳೆಗಳ ಸೆರಗಿನ ಪಚ್ಚೆಯ ಬಯಲು, ಬಿರುಮಳೆಗಂಜದ ಬೆಟ್ಟದ ಸಾಲು, ಹುಲಿ ಕಾಡಾನೆಗಳಲೆಯುವ ಕಾಡಿದು, ಸಿರಿಗನ್ನಡ ನಾಡು. ಕಲ್ಲಿಗೆ ಬಯಸಿದ ರೂಪವ ತೊಡಿಸಿ, ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ, ದಾನಧರ್ಮಗಳ ಕೊಡುಗೈಯಾಗಿ, ವೀರಾಗ್ರಣಿಗಳ ತೊಟ್ಟಿಲ ತೂಗಿ, ಬೆಳಗಿದ ನಾಡಿದು ಚಂದನಗಂಪಿನ ಸಿರಿಗನ್ನಡ ನಾಡು. ಇಲ್ಲಿ ಅರಳದಿಹ ಹೂವುಗಳಿಲ್ಲ, ಹಾಡಲು ಬಾರದ ಹಕ್ಕಿಗಳಿಲ್ಲ, ಸಾವಿರ ದೀಪಗಳರಮನೆಯೊಳಗೆ, ಶರಣೆನ್ನುವೆನೀ ವೀಣಾಧ್ವನಿಗೆ, ಕನ್ನಡ ನಾಡಿದು ಮಿಂಚುವ ಕಂಗಳ ಸಿರಿಗನ್ನಡ ನಾಡು”. ಅವರ ತುಂಬು ಮನದ ಕನ್ನಡಾಭಿಮಾನ ವ್ಯಕ್ತವಾಗುವ ರೀತಿ ಅನನ್ಯವಾದುದಲ್ಲವೆ?

 *****

 ಕೆಎಸ್‌ನ ಅವರ ಕನ್ನಡ ಭಾಷಾ ಬಳಕೆಯನ್ನು ವಿಶ್ಲೇಷಣೆ ಮಾಡಿರುವ ಭಾಷಾಶಾಸ್ತ್ರಜ್ಞ ಡಾ.ಕೆ.ವಿ.ನಾರಾಯಣ ಅವರು “ಜನಪದ ಗೀತೆಗಳಿಗೆ ಹೋಲಿಸಿದರೆ ಕೆ.ಎಸ್.ನ. ಅವರ ಸಂವೇದನೆ ಹೆಚ್ಚು ನಯವಾದದ್ದು, ನಾಗರಿಕವಾದದ್ದು. ಜನಪದ ಗೀತೆಯಲ್ಲಿ ವ್ಯಕ್ತವಾಗುವ ಸಂವೇದನೆಗಳಿಗೆ ಹೆಚ್ಚು ಉತ್ಕಟತೆಯಿರುತ್ತದೆ. ಅವುಗಳ ಪರಿಧಿಯಿಂದ ಯಾವ ಅಂಶವೂ, ವಿವರವೂ ತಪ್ಪಿಸಿಕೊಳ್ಳುವುದಿಲ್ಲ. (ಆದರೆ) ಸಾಮಾಜಿಕ ನೀತಿ ಸಂಹಿತೆಗಳು ನಿರೋಧಿಸುವ ಸಂಬಂಧಗಳನ್ನು ಕೆ.ಎಸ್.ನ. ಕೂಡ ತಿರಸ್ಕರಿಸುತ್ತಾರೆ. ಉದಾ. ವಿವಾಹಾನಂತರ ಪ್ರಣಯ. ಕೆ.ಎಸ್.ನ.ರವರ ಈ ಗೀತೆಗಳಲ್ಲಿ ಹೆಂಗಸು/ಹೆಂಡತಿ ಗಂಡಸು/ಗಂಡನನ್ನು ಏಕವಚನದಲ್ಲಿ ಸಂಬೋಧಿಸುವ ಉದಾಹರಣೆ ಸಿಕ್ಕರೆ ಆಶ್ಚರ್ಯವಾಗಬೇಕಷ್ಟೆ. ಆದ್ದರಿಂದ ಜನಪದ ಪ್ರೇಮಗೀತೆಗಳಿಂದ ಕೆ.ಎಸ್.ನ. ಭಿನ್ನರಾಗುತ್ತಾರೆ” ಎಂದಿದ್ದಾರೆ. ಇನ್ನೂ ಕೆಲವು ಸೂಕ್ಷ್ಮ ಭಾಷಾ ವಿಷಯಗಳನ್ನು ಈ ವಿದ್ವಾಂಸರು ಗಮನಿಸಿದ್ದಾರೆ. ಉದಾಹರಣೆಗೆ, “ಕುಡಿದ ನೀರಲುಗಿಲ್ಲ” .. ತರಹದ ಒತ್ತಕ್ಷರಗಳಿಲ್ಲದ ಸಾಲುಗಳು. ಕೆ.ಎಸ್.ನ. ಬಹುಪಾಲು ಅವಲಂಬಿಸುವ ಅಚ್ಚಗನ್ನಡದ ಶಬ್ದಕೋಶ. ಅಚ್ಚಗನ್ನಡ ಅಂದರೆ ಆಂಡಯ್ಯನ ಮಾದರಿಯಲ್ಲ. ಸಂಸ್ಕೃತ ಶಬ್ದಗಳನ್ನು ಆಯ್ದುಕೊಳ್ಳುವಾಗಲೂ ಕನ್ನಡದ ಜಾಯಮಾನವನ್ನು ಕಾಯ್ದುಕೊಳ್ಳುವುದು ಕೆ.ಎಸ್.ನ. ಅವರ ಜಾಣ್ಮೆ. ಕನ್ನಡದ ಶಬ್ದರಚನೆಯ ಬಗೆಗೆ ಹೆಚ್ಚು ಜಾಗರೂಕರಾದ ಅವರು ಇದನ್ನು ಸಾಧಿಸಿದ್ದಾರೆ. ಮ್ಲಾನ, ಕ್ಲಿಷ್ಟ ಮುಂತಾದ ಆದಿದ್ವಿತ್ವದ ಪದಗಳು ಕನ್ನಡಕ್ಕೆ ಒಗ್ಗುವುದಿಲ್ಲʼ. ಮುಂದೆ ಸಾಗುತ್ತಾ, `ತಮ್ಮ ಕಾವ್ಯ ರಚನೆಯ ಅನುಭವ ಹೆಚ್ಚುತ್ತಾ ಹೋದಂತೆ, ವಾಕ್ಯಗಳು ಮಾಡುವ ಕೆಲಸವನ್ನು ಕೇವಲ ಶಬ್ದಗಳಿಂದ ಮಾಡಿಸುವುದು, ಕ್ರಿಯಾಪದಗಳ ಬಳಕೆಯನ್ನು ಅಲ್ಲಲ್ಲಿ ಉದ್ದೇಶಪೂರ್ವಕವಾಗಿ ನಿಲ್ಲಿಸುವುದು, ತಾವು ಬದುಕುತ್ತಿರುವ ಕಾಲದ್ದಲ್ಲದ ಹಲವು ಭಾಷಾ ಪ್ರಯೋಗಗಳನ್ನು ಕೈಬಿಡುವುದು, ಸಹಜ ಗದ್ಯದ ಲಯದಲ್ಲಿ ಬರೆಯುವುದು, ಕವನವನ್ನು ಮಾತಾಡುವ ಧಾಟಿಯಲ್ಲಿ ಕೊಂಡೊಯ್ಯುವುದು, ಭಾಷೆಯಲ್ಲಿ ಅಭಿನಯಶೀಲತೆಯನ್ನು ರೂಢಿಸಿಕೊಳ್ಳುವುದು’ ….. ಈ ಮುಂತಾದ ಪ್ರಯೋಗಗಳನ್ನು ಕೆ.ಎಸ್.ನ. ಅವರಲ್ಲಿ ನಾವು ಕಾಣಬಹುದು ಎಂದು ಕೆವಿಎನ್ ಹೇಳುತ್ತಾರೆ(`ಬೇರು ಕಾಂಡ ಚಿಗುರು’ ಪುಸ್ತಕದ `ಕೆ.ಎಸ್.ನ. ಅವರ ಕಾವ್ಯ ಮತ್ತು ಭಾಷೆ’ ಲೇಖನದಿಂದ)

 *****

 ಕನ್ನಡದ ಇನ್ನಿಬ್ಬರು ಕವಿಗಳು ತಮ್ಮ ಸಹಕವಿಗೆ ಅರ್ಪಿಸಿದ ಈ ಕೆಳಗಿನ ಎರಡು ಪದ್ಯ/ಪದ್ಯಭಾಗಗಳನ್ನು ನೋಡಿ. ಒಂದು ಜಿಎಸ್ಸೆಎಸ್ ಅವರ ಸುನೀತ, ಇನ್ನೊಂದು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಂದ ರಚಿತವಾದ ಸಾಲುಗಳು.

ಸಾವಧಾನದ ನಡಿಗೆ
ಕನ್ನಡದ ನಾಡೆಲ್ಲ ಒಮ್ಮೆಗೇ ಬೆರಗಾಯ್ತು
ಮೈಸೂರು ಮಲ್ಲಿಗೆಯ ಕಂಪು ತೀಡಿ
ಈ ನೆಲದ ಮಣ್ಣಿಂದ ಬಂದ ಗಂಧವಿದಲ್ಲ
ಎಂದಿತ್ತು ರಸಿಕ ಜನ ಹೊಗಳಿ ಹಾಡಿ

ಆದರೂ ಈ ನೆಲದ ಮಣ್ಣಿನ ಗಂಧವೇ ಇದು
ಸುಳ್ಳಲ್ಲ: ವಿಧಿ-ಕರ್ಮ-ಕರ್ಮಗಳ ಗೊಡವೆ-
ಯಿಲ್ಲದ ನಿಲುವು: ಸಂಸಾರ ಸಾರೋದಯದ
ಸಂಪತ್ತು; ಪ್ರೀತಿಯೆ ಇದರ ವಸ್ತು ಒಡವೆ.

ಬೆಟ್ಟದಷ್ಟಿರಬಹುದು ದುಃಖ; ಆದರೂ
ಹುಣ್ಣಿಮೆಯ ಬೆಳಕಲ್ಲಿ ಎಲ್ಲವೂ ಮಿದುವೆ.
ಹಣ್ಣಾಗದಿದ್ದರೆ ಮನಸು ಎಲ್ಲ ತಿನಿಸೂ
ಕಹಿಯೆ ಮುಖ್ಯವಾದದ್ದು ಒಳಗಿನ ಹದವೆ

ಗಡಿಯಾರಗಳ ನಡುವೆ ಬೆದರಿ ನಿಲ್ಲದ ಕುದುರೆ
ಸಾವಧಾನದ ನಡಿಗೆ ಬೆಳಕಿನೆಡೆಗೆ
ಹರಿವ ನೀರಿನ ಹಾಗೆ, ಎದುರು ತಡೆಗಳನೆಲ್ಲ
ಮೃದು ಮಾಡಿ, ಬರಡೆದೆಗೆ ಹಸಿರುನುಡುಗೆ
– ಜಿ.ಎಸ್.ಶಿವರುದ್ರಪ್ಪ

ಎಂತಹ ಬರಡು ಎದೆಯಲ್ಲೂ ಹಸಿರುಕ್ಕಿಸುವ ಶಕ್ತಿ ಕೆ.ಎಸ್.ನ. ಕವಿತೆಗಿದೆ ಎಂಬ ಮಾತು ತುಂಬ ಚೇತೋಹಾರಿಯಾಗಿದೆ. ಹಾಗೆಯೇ ಎನ್.ಎಸ್.ಎಲ್. ಅವರ ಈ ಮುಂದಿನ ಸಾಲುಗಳು ನಮ್ಮ ಮಲ್ಲಿಗೆಯ ಕವಿಯನ್ನು ಉಚಿತವಾಗಿ ವರ್ಣಿಸಿವೆ ಅನ್ನಿಸುತ್ತೆ –

ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ
ಮಾತನೆತ್ತಿದ ಜಾಣ, ನೇರಗಿಡದಿಂದಲೇ
ಹೂವ ಬಿಡಿಸುವ ಧ್ಯಾನ: ತೊಟ್ಟ ಮಾತೆಲ್ಲವೂ
ಗುರಿಗೆ ತಪ್ಪದ ಬಾಣ
ನಿಮ್ಮಂತೆ ಅರಳಿ, ಸುತ್ತೆಲ್ಲ ಪರಿಮಳ ಚೆಲ್ಲಿ ಯಾರು ಬಾಳಿದರು?
ಜನದ ಎದೆಎದೆಯಲ್ಲೂ ಸಿಂಹಾಸನವೇರಿ ಯಾರು ಆಳಿದರು?

ಹೌದಲ್ಲ, ತಮ್ಮ ಚೆಲುವಾಂತ ಕನ್ನಡದಿಂದಾಗಿ ಕೆ.ಎಸ್.ನರಸಿಂಹಸ್ವಾಮಿಯವರು ಕನ್ನಡಿಗರ ಎದೆಯ ಸಿಂಹಾಸನದಲ್ಲಿ ಸದಾಕಾಲಕ್ಕೂ ಶೋಭಾಯಮಾನವಾಗಿದ್ದಾರೆ. ಇವರು ಕನ್ನಡ ಭಾಷೆಯಲ್ಲಿ ಸೃಷ್ಟಿಸಿದ್ದು ಬಿರುವಾಸ್ತವದಲ್ಲೂ ಬಾಡದ ಚೆಲುವು- ಒಲವುಗಳ ಭಾವಗಳನ್ನು ಮತ್ತು ಬದುಕಿನ ಬಗೆಗಿನ ಸಕಾರಾತ್ಮಕತೆಯ ಸುಂದರತೆಯನ್ನು. ಗಿಡದಲ್ಲಿ ಅರಳುವ ಮಲ್ಲಿಗೆ ಬಿಸಿಲಿಗೆ ಬಾಡಬಹುದು, ಆದರೆ ಕೆಎಸ್‌ನ ಅವರ ಕನ್ನಡಮಲ್ಲಿಗೆ ಮಾತ್ರ ಓದುಗರೆದೆಯಲ್ಲಿ ಮತ್ತೆ ಮತ್ತೆ ಅರಳುತ್ತಲೇ ಇರುತ್ತದೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ