Advertisement
“ತೇರ ನಡುವಿನ ಮೌನ”: ವಿದ್ಯಾ ಭರತನಹಳ್ಳಿ ಕೃತಿಗೆ ಕಮಲಾಕರ ಕಡವೆ ಮುನ್ನುಡಿ

“ತೇರ ನಡುವಿನ ಮೌನ”: ವಿದ್ಯಾ ಭರತನಹಳ್ಳಿ ಕೃತಿಗೆ ಕಮಲಾಕರ ಕಡವೆ ಮುನ್ನುಡಿ

ಆರೋಪಿತ ಮೌನದಿಂದ ಸ್ವಯಂ ಅಭಿವ್ಯಕ್ತಿಗೆ ಹೊರಳುವ ಈ ಚಲನೆ ಸಂಕಲನದ ಕಾವ್ಯಾತ್ಮಕ ಸಾಧನೆಗಳಲ್ಲಿ ಒಂದಾಗಿದೆ. ವಿಶೇಷವೆಂದರೆ, ಪ್ರತಿರೋಧವನ್ನು ನಾಟಕೀಯಗೊಳಿಸುವುದನ್ನು ನಿರಾಕರಿಸಿದರೂ, ಜೋರಾಗಿ ಹೇಳದೆಯೂ, ಜೀವಂತಿಕೆಯ ಸಹಜ ಚಟುವಟಿಕೆಗಳ ಮೂಲಕವೇ ಪ್ರತಿರೋಧವನ್ನು ದಾಖಲಿಸುವ, ಹಾಗೆಯೇ ಸೂಚಿಸುವ ಪರಿ ಇದಾಗಿದೆ.
ವಿದ್ಯಾ ಭರತನಹಳ್ಳಿ ಕವನ ಸಂಕಲನ “ತೇರ ನಡುವಿನ ಮೌನ” ಕೃತಿಗೆ ಕಮಲಾಕರ ಕಡವೆ ಮುನ್ನುಡಿ

ಹೆಣ್ಣು ಮತ್ತು ಮೌನ. ಇದು ಕಾವ್ಯಲೋಕಕ್ಕೆ ಸಂಬಂಧಿಸಿದ ವಿಷಯವೂ ಹೌದು, ರಾಜಕೀಯಕ್ಕೆ ಸಂಬಂಧಿಸಿದ ವಿಷಯವೂ ಹೌದು. ಜಗತ್ತಿನಾದ್ಯಂತ ಮಹಿಳಾ ಸಾಹಿತ್ಯ, ಅದರಲ್ಲೂ ಸ್ತ್ರೀವಾದಿ ಸಾಹಿತ್ಯ, ಮೌನವಾಗಿಸುವಿಕೆಯನ್ನು ಮತ್ತೆ ಮತ್ತೆ ಪರೀಕ್ಷಿಸಿದೆ. ಇತಿಹಾಸವೂ ಸಹ ಹೆಣ್ಣನ್ನು ಮೌನವಾಗಿಸಿರುವುದರ ಕುರಿತು ನಡೆಸಿರುವ ಚರ್ಚೆ ಸುಪರಿಚಿತವಾದದ್ದು. ಇಡೀ ಕಾದಂಬರಿಯಲ್ಲಿ ಧ್ವನಿಸದ ಕುಸುಮಬಾಲೆಯ ಧ್ವನಿ ಒಮ್ಮೆಗೇ ಅವಳು ಕಲಿತಿಲ್ಲದ ಇಂಗ್ಲೀಷಿನಲ್ಲಿ “I want to go home” ಎಂದು ಹೇಳುವುದು, ಇಬ್ಸನ್ನನ ನೋರಾ ದೊಡ್ಡ ಸಪ್ಪಳದೊಂದಿಗೆ ಬಾಗಿಲು ಹಾಕಿ ಮನೆಬಿಟ್ಟು ಹೊರಟು ಹೋಗುವ ಮೊದಲು ಹೇಳುವ “ಗುಡ್ ಬೈ”, ಧೂಳಿನ ಹಾಗೆ ತಾನು ನಿರ್ಲಕ್ಷ್ಯಕ್ಕೆ ಒಳಗಾದರೂ ಮೇಲೇರಿಯೇ ತೀರುವೆನೆಂಬ ಮಾಯಾ ಏಂಜೆಲೋಳ “Still I Rise” ಎನ್ನುವ ಜಿದ್ದು – ಒಟ್ಟಾರೆ ಮಹಿಳೆಯರ ಮೌನವನ್ನು ಒಡೆಯುವ ಧ್ವನಿಗಾಗಿ ಮಹಿಳಾ ಸಾಹಿತ್ಯ ಸತತವಾಗಿ ಶೋಧಿಸುತ್ತಾ ಬಂದಿದೆ. ಪ್ರತಿಸಲ ಹೆಣ್ಣು ಮೌನ ಮುರಿದಾಗ ಸಮಾಜ ಬಗೆಬಗೆಯ ಗದ್ದಲಗಳಲ್ಲಿ ಅವಳ ಧ್ವನಿಯನ್ನು ಅಡಗಿಸುವುದೂ ಹೊಸತಲ್ಲ. ಸ್ತ್ರೀವಾದ, ಸ್ತ್ರೀ ಚಳುವಳಿಗಳೆಲ್ಲದರ ಹೊರಗೂ ಸಹ ಹೆಣ್ಣು ತನ್ನ ಮೌನವನ್ನು ಪ್ರಶ್ನಿಸುತ್ತಾ ಬಂದಿರುವುದೂ ನಿಜ. ಚಳುವಳಿಗಳ ಹೊರಗೆ, ಸಿದ್ಧಾಂತಗಳ ಹೊರಗೆ, ಸ್ತ್ರೀಯರ ಮೇಲೆ ಆರೋಪಿಸಿರುವ ಮೌನವನ್ನು ಪ್ರಶ್ನಿಸಲಾಗುವುದಿಲ್ಲ ಎಂಬ ತಪ್ಪುಗ್ರಹಿಕೆ ಕೆಲವೊಮ್ಮೆ ನಮ್ಮಲ್ಲಿರುತ್ತದೆ. ಹೆಣ್ಣು ಹಿಂದೆಯೂ, ಇಂದೂ, ಎಂದೆಂದೂ ತನಗೆ ವಿಧಿಸಲಾದ ಮೌನವ್ರತವನ್ನು ಪ್ರಶ್ನಿಸುತ್ತಾ ಬಂದಿದ್ದಾಳೆ. ಅಂತಹ ಪ್ರಶ್ನೆಗಳು ನಾವು ಗ್ರಹಿಸುವ ಬಗೆಯಲ್ಲಿಯೇ ಇರದಿರಬಹುದು. ಅಡುಗೆಯ ರುಚಿಯಲ್ಲಿಯೂ ಆಂದೋಲನ ಆಗಬಹುದು. ಕಣ್ಣೀರಿನಲ್ಲಿಯೂ ಕ್ರೋಧ ಅಡಗಿರಬಹುದು. ಕರ್ತೃತ್ವಕ್ಕಿರಬಹುದಾದ ಭಿನ್ನ ರೂಪಗಳ ಬಗೆಗೆ ಆಂಟೋನಿಯೋ ಗ್ರಾಮ್ಶಿ ನಮ್ಮ ಗಮನ ಸೆಳೆದು ಶತಕವಾಗುತ್ತಾ ಬಂದಿದೆ. ಕರ್ತೃತ್ವವನ್ನು ಬಳಸದ ವ್ಯಕ್ತಿ ಇರುವುದಿಲ್ಲ – ಅಧಿಕಾರದ ಹೇರುವಿಕೆಯ ವಿರುದ್ಧದ ನಡೆ ನಿರಂತರ. ಎಲ್ಲ ವಿರೋಧಗಳೂ, ಎಲ್ಲ ಕತೃತ್ವಗಳೂ ಒಂದೇ ವ್ಯಾಕರಣ ಬಳಸಿ ಬರೆದ ನುಡಿಗಳಾಗಿರುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡಾಗ ಆರೋಪಿತ ಮೌನದ ವಿರುದ್ಧ ಸ್ತ್ರೀ-ವಿರೋಧದ ಅಸಂಖ್ಯ ರೂಪಗಳು ತೋರುತ್ತಾ ಹೋಗುತ್ತವೆ.

(ವಿದ್ಯಾ ಭರತನಹಳ್ಳಿ)

ಹಿರಿಯ ಕವಿ ವಿದ್ಯಾ ಭರತನಹಳ್ಳಿಯವರ “ತೇರ ನಡುವಿನ ಮೌನ” ಹಲವು ಕಾರಣಗಳಿಗಾಗಿ ಮಹತ್ವದ ಸಂಕಲನ. ಈ ಸಂಕಲನದಲ್ಲಿ “ಸ್ತ್ರೀವಾದಿ” ಎಂದು ತಲೆಗೊಟ್ಟು ಹಚ್ಚಬಹುದಾದ ಕವಿತೆಗಳಿಲ್ಲದಿದ್ದರೂ, ಮೇಲೆ ಹೇಳಿದಂತೆ ಹೆಣ್ಣಿನ ಮೌನವನ್ನು ಪ್ರಶ್ನಿಸುವ, ಮುರಿಯುವ ಮತ್ತು ಆ ಮೌನಕ್ಕೊಂದು ಹೊಸ ಅರ್ಥವಂತಿಕೆ ಸೂಚಿಸುವ ಕವನಗಳಿವೆ. ಶೀರ್ಷಿಕೆಯಲ್ಲಿಯೇ ಕವಿ ಈ ಸಂಕಲನದುದ್ದಕ್ಕೂ ಕಾಣುವ ವಿರೋಧಾಭಾಸವನ್ನು ಸೂಚಿಸುತ್ತಾರೆ. ತೇರು ಅಂದರೆ ಏನಂದರೂ ಗದ್ದಲ ಇದ್ದದ್ದೇ. ಅದರ ನಡುವೆಯೂ ಕವಿಗೆ “ಮೌನ ಹುಡುಕ ಬೇಕಿದೆ”. ಯಾಕೆಂದರೆ “ಮಾತಲ್ಲಿ/ ಚುಚ್ಚುವವರು, ಚಚ್ಚುವವರು” ಹೆಚ್ಚಾಗಿದ್ದಾರೆ. “ತರಹೇವಾರಿ” ಮಾತಿನ ಬಣ್ಣಗಳು ಸರ್ವೇಸಾಮಾನ್ಯವಾಗಿರುವಾಗ “ಕಂಡ ಬಣ್ಣಕ್ಕೂ, ನಿಜದ ಬಣ್ಣಕ್ಕೂ/ ಅಂತರ” ಇರುವಾಗ, ಕವಿಗೆ “ಶಬ್ದದ ಗಲಾಟೆಯಲ್ಲಿ/ ಹುಡುಕಿಕೊಂಡ ಮೌನ”, “ಎದೆಯಲ್ಲಿ/ ಹೂವು” ಅರಳಲು ಸಾಧ್ಯವಾಗಿಸುತ್ತದೆ. ಹಾಗಾಗಿಯೇ “ಮೌನ ಮಾತಾಗಲಿ” ಎಂದು ಆಶಿಸುತ್ತಾರೆ ಕವಿ. ಮೌನವೇ ಮಾತಾಗಬಹುದು; ಮೌನದ ಮಾತನ್ನು ಸಹ ಗ್ರಹಿಸುವ ಶಕ್ತಿ ನಮಗೆ ಬೇಕು. ಮೌನ ಎನ್ನುವುದು ಅದುಮಿದ ಧ್ವನಿ ಮಾತ್ರವಾಗಬೇಕಿಲ್ಲ; ಮೌನಕ್ಕೂ ಅರ್ಥವಿದೆ, ಮೌಲ್ಯವಿದೆ, ಮಹತ್ವವಿದೆ – ಇದು ಈ ಕವನದಲ್ಲಷ್ಟೇ ಅಲ್ಲ, ಅನೇಕ ಕವನಗಳು ಸೂಚಿಸುವ ಕಲ್ಪನೆ.

ವಿದ್ಯಾ ಭರತನಹಳ್ಳಿ ಅವರ “ತೇರ ನಡುವಿನ ಮೌನ” ಸಂಕಲನದಲ್ಲಿ ಮೌನಕ್ಕೆ ಅನೇಕ ಅರ್ಥಗಳು. ಅದು ಶಬ್ದಶೂನ್ಯ ಮೌನವಲ್ಲ, ಆದರೆ ಗದ್ದಲದ ನಡುವೆ ಕಂಡುಕೊಂಡ ಮೌನ. ಹೀಗೆ ಕಂಡುಕೊಳ್ಳುವುದಕ್ಕೆ ತೀವ್ರ ಗಮನ ಅಗತ್ಯ. ಇಲ್ಲಿಯ ಕವಿತೆಗಳಲ್ಲಿ ಅಂತಹ ನಿಕಟ ಗಮನವಿದೆ. ಈ ಕವಿತೆಗಳು ಗಮನವನ್ನು ಎಷ್ಟು ತೀಕ್ಷ್ಣವಾಗಿ ಬಳಸುತ್ತವೆ ಎಂದರೆ ಅದು ಚಿಂತನೆಯಾಗಿ ರೂಪಾಂತರಗೊಳ್ಳುತ್ತದೆ. ವಿದ್ಯಾ ಅವರಿಗೆ ಮೌನ ಆಧ್ಯಾತ್ಮವೂ ಅಲ್ಲ, ಆಂದೋಲನವೂ ಅಲ್ಲ – ಅಸ್ಥಿರ ಮಾನವೀಯ ಸಂಬಂಧಗಳನ್ನು ನಿರಾಕರಿಸದೆ ನಿರಂತರ ಗಮನದ ಮೂಲಕ ಸದ್ದುಗಳ, ಶಬ್ದಗಳ ಅನಿತ್ಯ, ಅಸತ್ಯಗಳನ್ನು ದಾಟುವ, ಸ್ವಂತಿಕೆಯನ್ನು ಗಳಿಸುವ ಪ್ರಯತ್ನ.

“ತೇರ ನಡುವಿನ ಮೌನ” ದ ಕವಿತೆಗಳು ಮೇಲ್ನೋಟಕ್ಕೆ ಸರಳ ರಚನೆಗಳಾದರೂ, ಅನುಭವದ ಸಾಂದ್ರತೆ, ಆಂತರಿಕ ಶೋಧನೆ, ಲಿಂಗ ಆಧಾರಿತ ಅಸ್ತಿತ್ವದ ಸುತ್ತಲಿನ ಅರ್ಥಪದರಗಳನ್ನು ಅನ್ವೇಷಿಸುವ ಮೂಲಕ ಅತೀವ ಗಹನತೆ ಹೊಂದಿವೆ. ಈ ಸಂಕಲನದ ಕವಿತೆಗಳಲ್ಲಿ ರಾಜಕೀಯ ಅಥವಾ ಕಾವ್ಯಾತ್ಮಕ ಮಹತ್ವಾಕಾಂಕ್ಷೆಯು ಎದುರು ಹಿಡಿವ ಗುರಾಣಿ ಅಲ್ಲ. ಅದು ಅಂತಸ್ಥ. ಸಾಮಾನ್ಯ ಅನುಭವದ ಹೂರಣವನ್ನು ಚಿಂತನೆಗೆ, ಧ್ಯಾನಕ್ಕೆ ಒಳಪಡಿಸುವ ಶಾಂತ ಪ್ರತಿರೋಧದ ಅಭಿವ್ಯಕ್ತಿ ಕ್ರಮ ಇಲ್ಲಿದೆ. ಗದ್ದಲವನ್ನು ಮೀರುವ, ಬಣ್ಣ ಬಣ್ಣದ ಮಾತುಗಳ ಕಪಟತನವನ್ನು ನಿರಾಕರಿಸುವ, “ಜೋರು ಧ್ವನಿಯಲ್ಲಿ” ಮಾತಾಡುವುದನ್ನು ಬಯಸದೇ, “ಬಾಗಿಲ ಸಂಧಿಯಲ್ಲೆ ಕುಳಿತ ಹೃದಯಕ್ಕೆ” “ಜೀವ ತುಂಬಲು” ಪ್ರಯತ್ನಿಸುವ ಕವನಗಳಿವು. ಅಂದರೆ, ನಿತ್ಯದ ಅನುಭವಗಳ ಸಾಮಾನ್ಯತೆಯಲ್ಲಿ ಮೌನದ ಮಾತನ್ನು ಕೇಳಿಸುವ ಕವನಗಳಿವು.

ಇಲ್ಲಗಳ ಚೀಟಿ ಏಪ್ರಾನ್ನಲ್ಲಿಟ್ಟು
ಕನಸುಗಳ ಕಪಾಟಿನಲ್ಲಿ ಮಡಚಿಟ್ಟು
ಬೆಂಕಿ ಝಳದಲ್ಲಿ ಬೇಯುತ್ತಲೂ
ಹಬ್ಬ ಮಾಡುತ್ತಿತ್ತು ಕವಿತೆ

ಇಲ್ಲಿನ ಹಲವಾರು ಕವನಗಳ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಧ್ವನಿಯ ಮೇಲೆ ಕವಿಗಿರುವ ನಿಯಂತ್ರಣ. “ಮಿಸೆಸ್ ಸೋ ಆಂಡ್ ಸೋ” ತೆಗೆದುಕೊಳ್ಳಿ. ಈ ಕವಿತೆಯು ನಿರಾಕರಣೆಯಲ್ಲಿ ಪ್ರಾರಂಭವಾಗುತ್ತದೆ—“ ಗುರುತಿಸುವುದಿಲ್ಲ… ಮಾತಾಡಿಸುವುದಿಲ್ಲ”. ಗೃಹಿಣಿ ಕೇವಲ ಕಾಣದವಳಲ್ಲ; ಅವಳನ್ನು ಗುರುತಿಸಲಾಗುವುದಿಲ್ಲ. ಆದರೂ ಕವಿತೆ ಕ್ರಮೇಣ ಈ ಅದೃಶ್ಯತೆಯಿಂದ “ನೀನೇನು ಕಡಿಮೆಯಲ್ಲ… ಹೂತ ಧ್ವನಿಯ ಆಚೆ ಬಿಡು” ಎಂದು ಪ್ರತಿಪಾದಿಸುತ್ತದೆ. ಆರೋಪಿತ ಮೌನದಿಂದ ಸ್ವಯಂ ಅಭಿವ್ಯಕ್ತಿಗೆ ಹೊರಳುವ ಈ ಚಲನೆ ಸಂಕಲನದ ಕಾವ್ಯಾತ್ಮಕ ಸಾಧನೆಗಳಲ್ಲಿ ಒಂದಾಗಿದೆ. ವಿಶೇಷವೆಂದರೆ, ಪ್ರತಿರೋಧವನ್ನು ನಾಟಕೀಯಗೊಳಿಸುವುದನ್ನು ನಿರಾಕರಿಸಿದರೂ, ಜೋರಾಗಿ ಹೇಳದೆಯೂ, ಜೀವಂತಿಕೆಯ ಸಹಜ ಚಟುವಟಿಕೆಗಳ ಮೂಲಕವೇ ಪ್ರತಿರೋಧವನ್ನು ದಾಖಲಿಸುವ, ಹಾಗೆಯೇ ಸೂಚಿಸುವ ಪರಿ ಇದಾಗಿದೆ.

“ನಾನು ನಾನಾಗಬೇಕು” ಕವನದಲ್ಲಿ ಕಾಯಕದಲ್ಲಿ ಮುಳುಗಿರುವ ಹೆಣ್ಣು ಹೊಂದಿರಬೇಕಾದ ಸ್ವಂತಿಕೆಯ ಚಿತ್ರಣವಿದೆ –

ಕಣ್ಣುತೆರೆದಿರಬೇಕು
ಮರೆಯಬಾರದು ಮೈ
ಜೇಡವ ಹೊಡೆಯುತ್ತ
ಬಚ್ಚಲು ತಿಕ್ಕುತ್ತ
ಮೌನದ ಗೂಡಲ್ಲಿ
ಅನ್ನವ ಬೇಯಿಸುತ್ತ.
ಸ್ವಲ್ಪ ಸಿಟ್ಟು, ಸ್ವಲ್ಪ ದೃಢತೆ ಮತ್ತು ಅಪಾರ ಎಚ್ಚರ:
ಮನೆ ಮನೆಯ ಹೆಣ್ಣುಜೀವಗಳು
ಹಿಡಿದಿರಬೇಕು ಕೈಕತ್ತಿಯನ್ನು
ಕಟ್ಟಿಕೊಂಡಿರಬೇಕು
ಬೆಂಕಿಯಂಗಿಯನ್ನು
ಮೈಮುಟ್ಟ ಬಂದವರು
ಭಸ್ಮವಾಗಿಬಿಡಬೇಕು
ನೋವು ಕೊಡುವ ಜಗತ್ತಲ್ಲಿ
ಬಾಡಿದ ಹೂಗಳಂತಿರಬಾರದು

ಸೂರ್ಯನ ತಲುಪುವ “ಹಸಿರು ಗಿಡ” ದ ಚಿತ್ರಣ ಕೇವಲ ರಮ್ಯ ರೂಪಕವಲ್ಲ – ಇದು ಪರಿಸರ ಮತ್ತು ದೈಹಿಕ ರೂಪಕಗಳಲ್ಲಿ ಆಕಾಂಕ್ಷೆಯನ್ನು ಪ್ರತೀಕವಾಗಿಸುವ ಬಗೆ. “ಧರಿಸಿರಬೇಕು ಕಬ್ಬಿಣದ ಕವಚವನ್ನು” – ಇದು ಕೇವಲ ವೀರತ್ವಕ್ಕೆ ರೂಪಕವಲ್ಲ; ಇದು ಪ್ರತಿಕೂಲ ಸಾಮಾಜಿಕ ಸಂದರ್ಭದಲ್ಲಿ ದೌರ್ಬಲ್ಯವನ್ನು ಎದುರಿಸುವ ಇಚ್ಛಾಶಕ್ತಿಯ ರೂಪಕ. ಈ ಕವಿತೆಯಲ್ಲಿ  ಹಿಂಸೆಯ ಸ್ಪಷ್ಟ ಅರಿವಿನೊಂದಿಗೆ ರಮ್ಯರೂಪಕಗಳ ಸಮ್ಮಿಳನ ವಿಶಿಷ್ಟವಾಗಿದೆ.

“ಮುಖವಿಲ್ಲ” ಕವಿತೆ ಶಕ್ತಿಶಾಲಿ ಕೇಂದ್ರ ರೂಪಕವಾಗಿ ಮುಖಗವುಸನ್ನು ಬಳಸುತ್ತದೆ. ಇಲ್ಲಿ, ಮುಖಗವುಸು ಕೋವಿಡ್ ಸಾಂಕ್ರಾಮಿಕ ಯುಗದ ಅಗತ್ಯ ಮಾತ್ರವಲ್ಲ; ಸಮಾಜದಲ್ಲಿ ಹೆಣ್ಣಿನ ಕಾಯಕ ಜೀವನ ಅಗೋಚರವಾಗಿ ಉಳಿವುದಕ್ಕೆ ಸಂಕೇತ.

ಕಣ್ಣ ಕೆಳಗಿನ ನೆರಿಗೆ
ತುಳುಕುವ ನೀರು
ಕಪೋಲದ ಕೆಂಪು
ಗಾಂವಾದ ಮೂಗು
ಕಾಣದಿರಲಿ ಎಲ್ಲ ಎಂದು
ಮುಖಗವುಸು ತೊಡುತ್ತೇವೆ

ಒಡೆದ ಹೃದಯ
ತೊಟ್ಟಿಕ್ಕಿದ ರಕ್ತ
ಚುಚ್ಚುವ ಮುಳ್ಳು
ನಂಜು ಕಾರುವ ಬಾಯಿ
ಕಾಣದಿರಲಿ ಎಲ್ಲ ಎಂದು
ಮುಖಗವುಸು ತೊಡುತ್ತೇವೆ

ನಾಟಕವಾಡುತ್ತದೆ
ಜಗತ್ತು ಸುರಕ್ಷಿತವೆಂಬಂತೆ

“ಕಾಣದಿರಲಿ ಎಲ್ಲಾ ಎಂದು / ಮುಖಗವುಸು ತೊಡುತ್ತೇವೆ” ಎಂಬ ಸಾಲಿನ ಪುನರಾವರ್ತನೆ ಅಡಗಿಕೊಳ್ಳುವ ಕ್ರಿಯೆಯನ್ನು ಸಾರ್ವತ್ರಿಕಗೊಳಿಸುತ್ತದೆ. “ನಿರಾಳ ನಗಬೇಕೆಂದಾಗ” ಇರದ ಕಣ್ಣೀರ ಹುಡುಕುವವರ ಕುರಿತಾದ ವ್ಯಂಗ್ಯ ಮುಂದುವರಿದು, ಮುಕ್ತಾಯದ ಕತ್ತಿ ಗೀರಿನಂತಹ ಒಳನೋಟವಾಗುತ್ತದೆ: “ಇಡೀ ಜಗತ್ತೇ ಮುಖಮುಚ್ಚಿ ಕುಳಿತಿದೆ”. ಈ ಕವನ ರೂಪಕಗಳ ಮೂಲಕ ಪರಿಕಲ್ಪನಾತ್ಮಕ ಸ್ಪಷ್ಟತೆ ಸಾಧಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, “ತೇರ ನಡುವಿನ ಮೌನ” ಹೆಚ್ಚು ಚಿಂತನಶೀಲವೂ, ಅಲೌಕಿಕದತ್ತ ಸೂಚಿಸುವಂಥದೂ ಆಗಿದೆ. ಗದ್ದಲ ಮತ್ತು ಮೌನದ ನಡುವಿನ ಉದ್ವಿಗ್ನತೆಯೊಳಗೆ ಕಾವ್ಯವನ್ನು ಇರಿಸುತ್ತಾರೆ ಕವಿ. “ಶಬ್ದದ ಗಲಾಟೆ” ಕೇವಲ ಬಾಹ್ಯವಲ್ಲ; ಅದು ಭಾಷೆಯದೂ ಹೌದು: ಭಾಷೆಯೇ ಕಿಕ್ಕಿರಿದ ಸ್ಥಳ. “ಮೌನ ಮಾತಾಗಲಿ” ಎನ್ನುತ್ತಾ ಕವಿ ಸದ್ದುಗದ್ದಲಗಳ ಜಾಗದಲ್ಲಿ ಮೌನವನ್ನು ಅರ್ಥಸಾಧ್ಯತೆಯ ಆಕರವಾಗಿ ಕಾಣುತ್ತಾರೆ. ಈ ಕವಿತೆಯಲ್ಲಿ ವಿದ್ಯಾ ಭರತನಹಳ್ಳಿ ತಮ್ಮ ಕಾವ್ಯಶಾಸ್ತ್ರವನ್ನೇ ಅರುಹಿದ್ದಾರೆ ಎಂದು ನನ್ನೆಣಿಕೆ.

“ಒಂದು ಪ್ರಾರ್ಥನೆ” ಕವನದಲ್ಲಿ ಈ ಸಂಕಲನದ ಅತ್ಯಂತ ಮಹತ್ವದ ಶಕ್ತಿಗಳಲ್ಲಿ ಒಂದನ್ನು ಕಾಣುತ್ತೇವೆ – ಆರೈಕೆಯ ಕಾಯಕ. ‘ಗಿಡ ಬೆಳೆಸುತ್ತೇನೆ ನಾನುʼ ಎನ್ನುವ ಒಂದು ಸರಳ ಘೋಷಣೆ ಪೋಷಣೆಯ, ಜೀವನಪ್ರೀತಿಯ ವಿಸ್ತೃತ ರೂಪಕವಾಗುತ್ತದೆ. ಶ್ರೇಣೀಕೃತ ಸಮಾಜದಲ್ಲಿನ ಅಸಮಾನ ಮಾನ್ಯತೆಯನ್ನೂ ಸೂಚಿಸುವ ಈ ಕವನದಲ್ಲಿ ನನ್ನ ಗಮನ ಸೆಳೆದದ್ದು ಗಿಡ ಬೆಳೆಸುವ ಕಾಯಕ ಕಾವ್ಯವಾಗುವ ಪರಿ. “ಬಲಿ” ಎಂಬ ನಿರೂಪಣಾ ಕವಿತೆಯ ಆಕೃತಿ ಮಹತ್ವಾಕಾಂಕ್ಷೆಯದು. ಅರೆ-ಜಾನಪದ ನಿರೂಪಣಾ ವಿಧಾನ ಬಳಸಿರುವ ಈ ಕವಿತೆ ಬಂಜೆತನದ ಕಳಂಕದ ಕತೆಯ ಮೂಲಕ ಗಂಡಾಳಿಕೆಯ ಸಮಾಜದ ಹಿಂಸೆಯ ನಿರೂಪಣೆಯಾಗಿದೆ. ನಿರೂಪಣೆ, ವಿಮರ್ಶೆ ಮತ್ತು ಸಹಾನುಭೂತಿಯನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಕವಿಯ ಸಾಮರ್ಥ್ಯ “ಬಲಿ” ಕವನದಲ್ಲಿ ಕಾಣುತ್ತದೆ.

“ಕೊರಗದಿರು ಮೇದಿನಿ” ಎಂಬ ಇನ್ನೊಂದು ಪ್ರಮುಖ ಕವಿತೆ, ದೇಶೀಯ ದೃಷ್ಟಿಕೋನ ಮೀರಿ ಭೌಗೋಳಿಕ ರಾಜಕೀಯವನ್ನು ಸಂಗ್ರಹದ ವ್ಯಾಪ್ತಿಯಲ್ಲಿ ತರುತ್ತದೆ. ಯುದ್ಧ, ಪರಿಸರ ನಾಶ ಮತ್ತು ಹಿಂಸೆಯ ವಿವರಗಳಿರುವ ಈ ಕವಿತೆಯ ಜಾಗತಿಕ ಮತ್ತು ಸ್ಥಳೀಯದ ನಿಕಟತೆಯನ್ನು ಸೂಚಿಸುತ್ತ ದೊಡ್ಡ ಪ್ರಮಾಣದ ಹಿಂಸೆ ದೈನಂದಿನ ಜೀವನವನ್ನು ಹೇಗೆ ವ್ಯಾಪಿಸುತ್ತದೆ ಎಂಬುದನ್ನು ತೋರಿಸುತ್ತದೆ.

(ಕಮಲಾಕರ ಕಡವೆ)

ವಿದ್ಯಾ ಅವರ ಕವಿತೆಗಳಲ್ಲಿ, ಸ್ಥಾಯಿಭಾವವೆಂದರೆ ಕಾಯಕ. ಅಡುಗೆ, ಶುಚಿಗೊಳಿಸುವಿಕೆ, ತೋಟಗಾರಿಕೆ, ಆರೈಕೆ – ಇವು ಅರ್ಥಹೀನ ಚಟುವಟಿಕೆಗಳಲ್ಲ. ಕಾಯಕ ಬದುಕು ಕಟ್ಟಿಕೊಡುವ ದೃಷ್ಟಿಕೋನದ ಒಳಗಿನಿಂದ ವಿದ್ಯಾ ಬರೆಯುವುದರಿಂದ ಈ ಸಂಕಲನದ ಸೌಂದರ್ಯ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಎರಡೂ ಕಾಯಕದಲ್ಲಿಯೇ ಹುದುಗಿರುವುದನ್ನು ಅವರು ಸೂಚಿಸುತ್ತಾರೆ. ತಾವು ಎತ್ತಿಕೊಳ್ಳುವ ಹಲವು ವಿಷಯ, ಸಂದರ್ಭ, ಅನುಭವಗಳಿಗೆ ಮತ್ತಷ್ಟು ವಿಸ್ತಾರ ಸಾಧ್ಯತೆ ಇದ್ದರೂ, ಆತ್ಮಾವಲೋಕನ ಹಾಗೂ ಮೃದು ಪ್ರತಿರೋಧಗಳನ್ನು ಮೀರಿದ ಮಹತ್ವಾಕಾಂಕ್ಷೆಯನ್ನು ವಿದ್ಯಾ ಇಲ್ಲಿಯ ಕವನಗಳಲ್ಲಿ ಬಯಸುವುದಿಲ್ಲ ಎನ್ನುವುದು ಸ್ಪಷ್ಟ.

“ತೇರ ನಡುವಿನ ಮೌನ” ಲಿಂಗಭೇಧ, ಕಾಯಕ ಮತ್ತು ಆಂತರಿಕ ಜೀವನದ ವಿವಿಧ ಅನುಭವಗಳಿಂದ ರೂಪುಗೊಂಡ ಜಗತ್ತನ್ನು ಕಟ್ಟಿಕೊಡುವ ಕವನ ಸಂಕಲನ. ಜೋರುಧ್ವನಿಯಲ್ಲಿ ಈ ವಿಷಯಗಳನ್ನು ಅಭಿವ್ಯಕ್ತಿಸುವ ಪ್ರಯೋಗಾತ್ಮಕ ಶೈಲಿ ವಿದ್ಯಾ ಭರತನಹಳ್ಳಿ ಅವರ ದಾರಿಯಲ್ಲ. ಬದಲಾಗಿ, ಅತ್ಯಂತ ಪ್ರಾಮಾಣಿಕ ಹಾಗೂ ತೀವ್ರತೆಯಿಂದ ಗ್ರಹಿಣಿಯ ಬದುಕನ್ನು ಗಮನಿಸುವ ಮೂಲಕ ಪ್ರಭಾವೀ ರೂಪಕಶಕ್ತಿಯ ಸೃಜನಶೀಲತೆ ಸಾಧ್ಯ ಎನ್ನುವುದನ್ನು ಅರಿತ ದಾರಿ ಅವರದ್ದು. ಈ ಸಂಕಲನದ ಕವನಗಳು ಓದುಗರನ್ನು ನಿಧಾನವಾಗಿ ಓದಲು, ಕೇಳಲು, ಅನುಭವವನ್ನು ಅನುಸಂಧಾನಕ್ಕೆ ಒಳಪಡಿಸಲು ಆಹ್ವಾನಿಸುತ್ತವೆ. ಈ ನಿಧಾನಿಸುವ ಹಾಗೂ ತೀವ್ರ ಗಮನ ಮುಡಿಪಾಗಿಸುವ ರೀತಿಯ ಓದನ್ನು ಬಯಸುವುದೂ ಸಹ ವಿದ್ಯಾ ಅವರ ಕಾವ್ಯದ ರಾಜಕೀಯ ಎಂದು ನಾನು ಭಾವಿಸುತ್ತೇನೆ.

ಕಾವ್ಯ ಜಗತ್ತಿಗೆ ನನ್ನನ್ನು ಪರಿಚಯಿಸಿದವರಲ್ಲಿ ಒಬ್ಬರಾದ ವಿದ್ಯಾ ಭರತನಹಳ್ಳಿ ಅವರು, ತಮ್ಮ ಕವನ ಸಂಕಲನಕ್ಕೆ ನನ್ನಿಂದ ಮುನ್ನುಡಿ ಬರೆಸುವುದರ ಮೂಲಕ ಕವಿತೆಯ ಓದಿನ ನನ್ನ ಕಲಿಕೆಯನ್ನು ವಿಸ್ತರಿಸುವಂತೆ ಮಾಡಿದ್ದಾರೆ. ಅವರ ಕವನಗಳನ್ನು ಓದುವ ಅನುಭವ ನನ್ನೊಳಗೆ ಮೂಡಿಸಿದ ಅನುಭೂತಿ ಅಪರೂಪದ್ದು. ಮತ್ತು ವಿಪರೀತಗಳ ನಡುವೆ ನಲುಗುತ್ತಿರುವ ನಮ್ಮ ಬದುಕಿನಲ್ಲಿ, ಕಾವ್ಯ ನಮ್ಮೊಳಗೆ ಸ್ಪಂದನಶೀಲತೆಯನ್ನು ಸೃಜಿಸುವಂಥದ್ದು. ಪ್ರಕಟಣೆಗೆ ಮುನ್ನ ವಿದ್ಯಾ ಭರತನಹಳ್ಳಿ ಅವರ ಕವಿತೆಗಳನ್ನು ಓದಿ, ನನ್ನ ಓದಿನ ಅನುಭವನ್ನು ಮುನ್ನುಡಿಯ ರೂಪದಲ್ಲಿ ಹಂಚಿಕೊಳ್ಳಲು ಆಹ್ವಾನಿಸಿದ ಅವರ ಹೃದಯವೈಶಾಲ್ಯಕ್ಕೆ ವಂದನೆಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ