ಅದೇನು ಅನಿಸಿತೋ ಏನೋ ಕೃಷ್ಣಮೂರ್ತಿ ನಮ್ಮ ಕಾಲುಗಳ ನಡುವೆ ಬಿದ್ದಿದ್ದ ಹುಟ್ಟುಗೋಲನ್ನು ಕೈಗೆತ್ತಿಕೊಂಡು ದೋಣಿಯ ಪಕ್ಕದ ನೀರಿನಲ್ಲಿ ಕೊಂಚ ಮುಳುಗಿಸಿ ಅದರಿಂದ ಮೆಲ್ಲಗೆ ನೀರನ್ನು ಹಿಂದೆ ಮುಂದೆ ತಳ್ಳಿದ. ಆಗ ದೋಣಿಯ ಮುಮ್ಮುಖ ಚಲನೆ ನಿಂತು ಅದು ಇದ್ದಲ್ಲಿಯೇ ಮೆಲ್ಲನೆ ಸುತ್ತ ಹತ್ತಿತು. ಇದನ್ನು ಕಂಡು ಜೀವ ಬಂದವನಂತೆ ಅವನು ಆ ಹುಟ್ಟಿನಿಂದ ವಿರುದ್ಧ ದಿಕ್ಕಿನಲ್ಲಿ ನೀರನ್ನು ತಳ್ಳಿದ. ದೋಣಿಯ ಗತಿ ಮತ್ತೆ ಬದಲಾಯ್ತು. ಮತ್ತೇನೋ ಹೊಳೆದವನಂತೆ ಹಂಗೆಯೇ ದೋಣಿಯ ಇಕ್ಕೆಲಗಳಲ್ಲೂ ಹುಟ್ಟು ಹಾಕತೊಡಗಿದ. ಆಗ ದೋಣಿ ತಾನು ತಿರುಗಿ ಬಂದ ದಾರಿಯತ್ತ ಮುಖ ಮಾಡಿ ಹೊರಟಿತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತೊಂಭತ್ತನೆಯ ಕಂತು
ನಮ್ಮ ತೋಟದಲ್ಲಿ ತುಂಬಾ ಹಾಲುವಾಣದ ಮರಗಳಿದ್ದವು. ತೆಂಗಿನ ಸಸಿಗಳನ್ನು ಇಡುವಾಗ ಅವುಗಳ ಆಸರೆಗಾಗಿ ಅವುಗಳೊಂದಿಗೆ ಗುಂಡಿಯಲ್ಲಿ ಹಸಿಯ ಚಿಗುರು ಕಡ್ಡಿಗಳನ್ನು ಕೂರಿಸಲಾಗುತ್ತಿತ್ತು. ಅವುಗಳಲ್ಲಿ ಹಾಲುವಾಣ ಮತ್ತು ಕೊಣಬೇವಿನ ಕಡ್ಡಿಗಳು ಹೆಚ್ಚು ವಾಡಿಕೆಯಲ್ಲಿದ್ದವು. ಹಂಗೆ ಕೂರಿಸಿದ್ದ ಚಿಗುರುಕಡ್ಡಿಯ ಗುಜ್ಜುಗಳು ಚಿಗಿತು ತೆಂಗಿನ ಸಸಿಗಳೊಂದಿಗೆ ಬೆಳಕಾಣುತ್ತಿದ್ದವು. ಸಸಿಗಳು ಚೆನ್ನಾಗಿ ಏಳತೊಡಗಿದಂತೆ ಈ ಗುಜ್ಜುಗಳೂ ದಿಪ್ಪಾಗುತ್ತಿದ್ದವು. ಆಗವುಗಳು ಸಸಿಗಳ ಪುಟ್ಟ ಪುಟ್ಟ ಸೋಗೆ ಗರಿಗಳನ್ನು ಒಗ್ಗೂಡಿಸಿ ಕಟ್ಟು ಹಾಕಲೂ ನೆರವಾಗುತ್ತಿದ್ದವು. ನಮ್ಮ ಪಾಲಿಗೆ ಬಂದಿದ್ದ ಪಾಳಿನಲ್ಲಿ ಹೊಸದಾಗಿ ತೋಟ ಮಾಡುವ ಸಲುವಾಗಿ ಇಟ್ಟಿದ್ದ ತೆಂಗಿನ ಸಸಿಗಳ ಕುಳಿಗಳಿಗೆ ಹಾಲವಾಣದ ಕಡ್ಡಿಗಳನ್ನು ಮಾತ್ರ ನೆಟ್ಟಿದ್ದರು. ತೆಂಗಿನ ಸಸಿಗಳು ದಿಪ್ಪಾದರೂ ಇವುಗಳ ತಂಟೆಗೆ ಹೋಗುತ್ತಿರಲಿಲ್ಲ. ಕಡಿದಾಕುತ್ತಿರಲಿಲ್ಲ. ಈ ಕಾರಣಕ್ಕೆ ನಮ್ಮ ತೋಟದಲ್ಲಿ ಆ ಸಸಿಗಳಷ್ಟೇ ಹಾಲುವಾಣಗಳೂ ಇದ್ದವು. ಇವುಗಳ ಅಂಗೈಯ್ಯಗಲದ ಅಚ್ಚ ಹಸಿರಿನ ಎಲೆಗಳು ಮೇಕೆಗಳಿಗೆ ತುಂಬಾ ಪ್ರಿಯವಾದ ತಿನಿಸಾಗಿದ್ದವು. ಹಂಗಾಗಿ ಕುರಿ ಮೇಕೆ ಸಾಕಿದ್ದವರ ಕೈಕುಡ್ಲುಗಳು ಈ ಗಿಡಗಳನ್ನು ಕಂಡರೆ ಸಾಕು ಲಪುಕ್ಕಂತ ಇವುಗಳ ಮೇಲೆರಗುತ್ತಿದ್ದವು. ಇವುಗಳ ಮೇಲೆ ಹೆಚ್ಚಾಗಿ ಗಿಣಿಗಳ ಹಿಂಡು ಕೂರುತ್ತಿತ್ತು. ಎರಡೂ ಕಡು ಹಸುರುಗಳು ಒಂದಾಗಿ ಕೂಡಾಡುತ್ತಿದ್ದ ಪರಿಗೆ ಆ ಗಿಣಿಗಳೂ ಆ ಗಿಡಗಳ ಪುಟಾಣಿ ಎಲೆಗಳಂತೆಯೂ ಅವುಗಳ ಎಳೆ ಚಿಗುರುಗಳಂತೆಯೂ ಭಾಸವಾಗುತ್ತಿದ್ದವು. ಅವುಗಳು ಪುಳುಗುಟ್ಟಿದಾಗ, ಚಿಲಿಪಿಲಿಗೈದಾಗ ಆ ಗಿಡಗಳ ಹಸಿರು ಎಳೆಯ ಎಲೆಗಳೂ ಪುಳುಗುಟ್ಟುತ್ತಿದ್ದವು. ಅಪರೂಪಕ್ಕೆ ಇವುಗಳ ಕಡ್ಡಿಗಳಲ್ಲಿ ಚಿಟ್ಟು ಜೇನು ಕಟ್ಟುತ್ತಿದ್ದವು. ಇವುಗಳ ಎಲೆಗಳಿಂದ ತುಂಬಾ ಒಳ್ಳೆಯ ಕಾಂಪೋಸ್ಟ್ ಗೊಬ್ಬರವೂ ಆಗುತ್ತಿತ್ತು. ಹಂಗೇನೇ ಈ ಗಿಡಗಳ ನೀಳ ದಿಂಡುಗಳು ಒಣಗುತ್ತಲೇ ನೀರಿನಲ್ಲಿ ತೇಲುವಷ್ಟು ತುಂಬಾ ಹಗುರಾಗಿಬಿಡುತ್ತಿದ್ದವು. ಹೊಸದಾಗಿ ಈಜು ಕಲಿಯುವವರು ಇವುಗಳನ್ನು ಹಿಡುಕಂಡು ನೀರಿಗಿಳಿಯುತ್ತಿದ್ದರು. ನೀರಿಗಳಿದು ಕುತ್ತಿಗೆಯ ಕೆಳ ಭಾಗಕ್ಕೆ ಹಾಲುವಾಣದ ಒಣಗಿದ ತುಂಡನ್ನು ಕೊಟ್ಟುಕಂಡು, ಅದರ ಮೇಲೆ ಎರಡು ಕೈಗಳನ್ನು ಇಟ್ಟುಕಂಡು ಸುಮ್ಮನೆ ಕಾಲುಗಳನ್ನು ಆಡಿಸಿದರೆ ಸಾಕು ಅದು ತೇಲಿಸುತ್ತಿತ್ತು. ಈ ನೆಪದಲ್ಲಿ ಕೆರೆ ಕಟ್ಟೆಗಳಲ್ಲಿ ಮೀನು ಹಿಡಿಯುವವರು ಕೆಲವೊಮ್ಮೆ ಇಂಥ ಹಾಲುವಾಣದ ಒಣಗಿದ ದಿಮ್ಮಿಗಳಿಂದ ತೆಪ್ಪವನ್ನು ಮಾಡಿಕೊಳ್ಳುತ್ತಿದ್ದರು.
ಅಜ್ಜನ ಕೆರೆ ಅಂತ ಕರೆಯಲ್ಪಡುವ ಪುಟಾಣಿ ಕೆರೆಗೆ ಹೊಂದಿಕಂಡಂತೆ ನಮ್ಮ ತೋಟವಿದೆ. ಯಾರೋ ಪುಣ್ಯಾತ್ಮ ಅಜ್ಜ ಕಟ್ಟಿಸಿದ್ದ ಕಾರಣಕ್ಕೆ ಈ ಕೆರೆಗೆ ಅಜ್ಜನ ಕೆರೆ ಅಂತ ಹೆಸರು ಬಂದಿರಬಹುದು ಅಂತ ನನ್ನ ನಂಬಿಕೆ. ನಮಗಾಗ ಇಂಥ ಕೆರೆ, ಕಟ್ಟೆಗಳೇ ಬಲು ದೊಡ್ಡ ಕಡಲುಗಳು. ನಾವು ಸಾಕುತ್ತಿದ್ದ ದನ ಕರು, ಕುರಿ ಮೇಕೆ ಮುಂತಾದವುಗಳ ಬಯಲ ಬಚ್ಚಲು ಮನೆಗಳು. ಈ ಕಡಲುಗಳು ಎಲ್ಲೋ ಐದೋ ಇಲ್ಲಾ ಹತ್ತು ವರ್ಷಕ್ಕೊಮ್ಮೆಯೋ ಮಳೆಗಾಲ ಕೈ ಕೊಟ್ಟಾಗ ಬರಿದಾಗಿ ಮುಖ ಇಳೇಬಿಟ್ಟುಕೊಳ್ಳುತ್ತಿದ್ದವು. ಆಗ ಜನ ತಮ್ಮ ಹೊಲ, ತೋಟ, ಗದ್ದೆಗಳಿಗೆ ಅವುಗಳಿಂದ ಹೂಳೆತ್ತುತ್ತಿದ್ದರು. ಆಳ ಮಾಡುವ ನೆಪದಲ್ಲಿ ಅವುಗಳನ್ನು ಗಾಯ ಮಾಡುತ್ತಿದ್ದರು. ಕೆರೆ ಕಟ್ಟೆಗಳು ತುಂಬುವುದು ಅಪರೂಪವಾಗುತ್ತಿರುವ ಈ ಹೊತ್ತಲ್ಲಿ ಆಬದ್ದಿನ ನೆಪದಲ್ಲಿ ನೂರಾರು ವರ್ಷಗಳಿಂದ ಕಾಪಾಡಿಕಂಡಿದ್ದ ಇವುಗಳ ಮರಳ ಹಾಸಿಗೆಗಳನ್ನೆಲ್ಲಾ ಹುರಿದು ಮುಕ್ಕುತ್ತಿದ್ದಾರೆ.
ಅಜ್ಜನ ತುಂಬಿ ತುಟುಕಾಡಿದರೆ ಅದು ಹೆಚ್ಚಿನ ನೀರನ್ನು ಹೋಗು ಅಲ್ಲೊಂದಷ್ಟು ದಿನ ಇದ್ದು ಬಾ ಅನ್ನುವಂತೆ ನಮ್ಮ ತೋಟದಳಕ್ಕೆ ಕಳಿಸುತ್ತಿತ್ತು. ಆಗ ತೋಟ ನಮಗೆ ನೀರಾಟದ ತಾಣವಾಗುತ್ತಿತ್ತು. ನಾನು ಮತ್ತು ನಮ್ಮ ಮನೆಯಲ್ಲಿ ನನ್ನ ವಾರಿಗೆಯ ಹೈಸ್ಕೂಲಿನಲ್ಲಿ ನನ್ನ ಜತೆ ಓದಿಕೊಂಡಿದ್ದ ಮೂರ್ತಿ ಆ ನೀರಿನಲ್ಲಿ ಚಿಣಿಮಿಣಿಗುಡುತ್ತಿದ್ದ ಪುಟಾಣಿ ಮೀನುಗಳನ್ನು ಹಿಡಿಯುವ ಆಟದಲ್ಲಿ ಮುಳುಗುತ್ತಿದ್ದೆವು. ಕೆಲವೆಡೆ ನೀರು ಮಂಡಿಯುದ್ದಕ್ಕೆ ನಿಲ್ಲುತ್ತಿತ್ತು. ಆಗ ನಾವು ಒಣಗಿದ ಹಾಲವಾಣದ ದಿಮ್ಮಿಗಳನ್ನು ಹಿಡುಕಂಡು ತೇಲುವ ಆಟ ಆಡುತ್ತಿದ್ದೆವು. ಆ ಹೊತ್ತಲ್ಲಿ ಭಯ ಹುಟ್ಟಿಸುತ್ತಿದ್ದವುಗಳೆಂದರೆ ಆ ನೀರಿನಲ್ಲಿ ರಾಜಾರಸ್ಟಾಗಿ ತೇಲಾಡುತ್ತಿದ್ದ ನೀರಾವುಗಳು. ಈ ತೋಟ ಹಿಂಗೆ ಈ ನೀರಿಗೆ ಒಂದೆರಡು ತಿಂಗಳುಗಳ ಕಾಲ ತಾತ್ಕಾಲಿಕ ಮನೆಯಾಗುತ್ತಿತ್ತು. ಇಲ್ಲಿ ನೀರು ಬಿಡುತ್ತಿದ್ದಂತೆ ನಮ್ಮ ಆಟ ಅಜ್ಜನ ಕೆರೆಗೆ ವರ್ಗಾಯಿಸಲ್ಪಡುತ್ತಿತ್ತು. ಆದರೆ ಅಲ್ಲಿ ನೀರಿಗಿಳಿಯುವ ಸಾಹಸ ಮಾಡದೆ ದಡದಲ್ಲಿ ಕೂತು ಮೀನು ಹಿಡಿಯುವ, ನೀರಿನಲ್ಲಿ ತೇಲುತ್ತಿದ್ದ ಹಕ್ಕಿಗಳಿಗೆ ಕಲ್ಲು ಹೊಡೆದು ಹೆದರಿಸುವುದು, ಹಂಚಿಬೋಕಿಯ ಬಿಲ್ಲೆಗಳನ್ನು ನೀರ ಮೇಲೆ ಜೋರಾಗಿ ಬೀಸಿ ತೇಲಿಸುವುದು ಮುಂತಾದ ಆಟಗಳನ್ನು ಆಡುತ್ತಿದ್ದೆವು. ಕೆಲವೊಮ್ಮೆ ಮಂಡಿಯುದ್ದದ ನೀರಿಗಿಳಿದು ಎರಡೂ ಕೈಗಳಿಂದ ನೀರನ್ನು ಬಡಿಯುತ್ತಾ ಪುಟಾಣಿ ಅಲೆಗಳನ್ನೇಳಿಸುತ್ತಿದ್ದೆವು. ಒಮ್ಮೆ ಹಿಂಗೆ ಆಡುವಾಗ ನಾವು ಈ ಮಂಡಿಯುದ್ದದ ನೀರಿನಲ್ಲೇ ಯಾಕೆ ಆಡಬೇಕು? ತೋಟದೊಳಕ್ಕೆ ಬರುತ್ತಿದ್ದ ನೀರಿನಲ್ಲಿ ಆಡುವಂತೆ ಅಜ್ಜನ ಕೆರೆಯಲ್ಲೂ ಯಾಕಾಗಬಾರದು? ಅಂತ ಅನಿಸಿತ್ತು. ಪರಿಣಾಮ ಒಂದು ದಿನ ಮೂರ್ತಿ ಮತ್ತು ನಾನು ಸೇರಿಕಂಡು ನಾಲ್ಕು ಹಾಲವಾಣದ ದಿಮ್ಮಿಗಳನ್ನು ಸೇರಿಸಿ, ಆ ನಾಲ್ಕೂ ದಿಮ್ಮಿಗಳನ್ನು ದನಗಳನ್ನು ಕಟ್ಟುತ್ತಿದ್ದ ಹಗ್ಗಗಳಿಂದ ಬಿಗಿ ಹಚ್ಚಿ ತೆಪ್ಪವೊಂದನ್ನು ಮಾಡಿ ಯಾರಿಗೂ ಕಾಣದಂತೆ ಕೆರೆಯ ಪಕ್ಕದ ಬೇಲಿಯಲ್ಲಿದ್ದ ಹೊಂಗೆ ಗಿಡಗಳ ನಡುವಲ್ಲಿ ಅವಿಸಿಟ್ಟಿದ್ದೆವು. ಇದರ ಜತೆಗೆ ಮೂರ್ತಿ ಗಾಡಿಯ ವಪ್ಪಾರಿನಲ್ಲಿದ್ದ ಎರಡು ಸೇದೋ ಹಗ್ಗಗಳನ್ನೂ ತಗಂಡು ಬಂದು ಇಟ್ಟಿದ್ದ. ಮೂರ್ತಿಗೆ ಹಿಂಗೆ ಮಂಚಿಗೆಗಳನ್ನು ಹಾಕುವುದರಲ್ಲಿ, ತೆಪ್ಪಗಳನ್ನು ಕಟ್ಟುವುದರಲ್ಲಿ ತುಂಬಾ ಖುಷಿಯಿತ್ತು. ಆಗ ಸ್ಕೂಲಿಗೆ ದಸರಾ ರಜೆ ಇತ್ತು. ಅಜ್ಜನ ಕೆರೆಯೂ ತುಂಬಿ ತುಳುಕಾಡುತ್ತಿತ್ತು. ಕೆರೆಯ ಹೊಸ ನೀರು ಇನ್ನೂ ತಿಳಿತುಕೊಳ್ಳದೆ ಕೆಂಪುಕೆಂಪಾಗಿತ್ತು.

ಅವತ್ತು ಬೆಳಗ್ಗೆ ಎದ್ದವರೇ ಒಂದೇ ಉಸುರಿಗೆ ಸಗಣಿ ಬಾಚಾಕಿ, ಕೊಟ್ಟಿಗೆ ಗುಡಿಸಿ, ಹೊಲಕ್ಕೆ ಹೋಗಿ ಇಬ್ಬರೂ ಒಂದೊಂದು ಹೊರೆ ಹಕ್ಕಿ ಹುಲ್ಲನ್ನೂ ಕಿತ್ತು ತಂದೆವು. ತಿಂಡಿ ತಿಂದವರೇ ತೆಪ್ಪದತ್ತ ಓಡಿದೆವು. ಕೆರೆಯ ನೀರು ತೋಟದ ದಡದಲ್ಲಿ ಕೂತರೆ ಕೈಗೆಟಕುವಂತಿತ್ತು. ಬೇಲಿಯನ್ನು ವಾರೆ ಮಾಡಿ ವಾಳೆ ಮಾಡಿಕೊಂಡೆವು. ನಂತರ ಹೊಂಗೆ ಗಿಡದ ಮರೆಯಲ್ಲಿದ್ದ ತೆಪ್ಪವನ್ನು ತಂದೆವು. ನಂತರ ಮೆಲ್ಲಗೆ ನೀರಿನೊಳಕ್ಕಿಳಿದು ನೀರಿಗಿಳಿಸಿಕೊಂಡೆವು. ಮೂರ್ತಿ ಹೊಂಗೆ ಗಿಡದ ಕವಲುಗಳಲ್ಲಿಟ್ಟಿದ್ದ ಸೇದೋ ಹಗ್ಗಗಳನ್ನು ತಗಂಡು ಎರಡನ್ನೂ ಒಂದಕ್ಕೊಂದು ಗಂಟು ಹಾಕಿ ಹಗ್ಗದ ಒಂದು ತುದಿಯನ್ನೂ ಹೊಂಗೆ ಗಿಡವೊಂದರ ದಡಿ ಬುಡಕ್ಕೆ ಕಟ್ಟಿದ. ಮತ್ತೊಂದು ತುದಿಯನ್ನು ತೆಪ್ಪದ ಎರಡು ದಿಮ್ಮಿಗಳನ್ನು ಸೇರಿಸಿ ಗಂಟಾಕಿದ. ಮೂರ್ತಿ ಹಗ್ಗಗಳನ್ನು ತಂದಿಟ್ಟಿದ್ದು ಯಾಕೆಂದು ಆವಾಗ ನನಗೆ ತಿಳಿಯಿತು. ನಂತರ ಮಂಡಿಯುದ್ದದ ನೀರನ್ನು ದಾಟಿ ಚೆಡ್ಡಿಗಳು ನೆನೆಯುವಂಥ ನೀರಿಗಿಳಿದು ಇಬ್ಬರೂ ಒಂದೊಂದು ಕಡೆಯಿಂದ ತೆಪ್ಪವನ್ನು ಜಗ್ಗಿಸಿಕೊಂಡು ಒಟ್ಟಿಗೇ ಹತ್ತಿದೆವು. ಹತ್ತುವಾಗ ಮುಳುಗುವಂತೆ ಹೊಯ್ದಾಡಿದ ತೆಪ್ಪ ಮರು ಚಣಕ್ಕೆ ಮೇಲೆದ್ದು ತೇಲತೊಡಗಿತು. ಕೈಯ್ಯಿಂದ ನೀರನ್ನು ಬಗೆ ಮಾಡುವಂತೆ ಮೂರ್ತಿ ಹೇಳಿದ. ಬಗೆ ಮಾಡತೊಡಗಿದಂತೆ ತೆಪ್ಪ ತೇಲತೊಡಗಿತು. ಹಗ್ಗ ತೆಪ್ಪದ ಬಾಲದಂತೆ ಹಿಂದಕ್ಕುಳಿಯತೊಡಗಿತು. ಬೆಳಗಿನ ಸೂರ್ಯ ಗಡುಸಾಗತೊಡಗಿದ್ದ. ನೀರ ಮೇಲಿಂದ ತಂಗಾಳಿ ತೀಡುತ್ತಿತ್ತು. ತೆಪ್ಪ ಮೆಲ್ಲಗೆ ತೇಲುತ್ತಿತ್ತು. ಅದು ನಮ್ಮನ್ನು ಖುಷಿಯಲ್ಲಿ ತೇಲಿಸುತ್ತಿತ್ತು. ಅದು ಕೊಂಚ ಕೊಂಚವೇ ದೂರ ತೇಲತೊಡಗಿದಂತೆ ನಮ್ಮ ತೋಟದ ಬೇಲಿಯದ್ದ ಹೊಂಗೆ ಮರಗಳು ಉದ್ದನೆಯ ಹಸಿರು ಬೇಲಿಯಂತೆ ಭಾಸವಾಗುತ್ತಿದ್ದವು. ತುಂಬಾ ಹತ್ತಿರದಲ್ಲಿ ಹೊಸಾ ನೀರಿನಲ್ಲಿ ಗುಳುಮುಳು ಹಕ್ಕಿಗಳು ಮುಳುಗೇಳುವ ಕಾಯಕದಲ್ಲಿದ್ದವು. ದೂರದ ಕೆರೆಯ ಏರಿಯ ಮೇಲೆ ಓಡಾಡುತ್ತಿದ್ದವರು ಪುಟ್ಟ ಪುಟ್ಟ ಚಿತ್ರಗಳಂತೆ ಕಾಣುತ್ತಿದ್ದರು. ನಾವು ಗಂಟಾಕಿದ್ದ ಹಗ್ಗದಲ್ಲಿ ಒಂದು ಹಗ್ಗ ಇನ್ನೇನು ಮುಗಿಯಾಕೆ ಬಂತು ಅನ್ನುವಷ್ಟರಲ್ಲಿ ಎದರ್ಗಾಳಿ ರವಷ್ಟು ಬಿರುವಿನಲ್ಲಿ ಬೀಸತೊಡಗಿತು. ಪರಿಣಾಮ ಮೆಲ್ಲಗೆ ಮುಂದೇಳುತ್ತಿದ್ದ ತೆಪ್ಪ ಹಂಗೇ ಕೆಲ ಚಣ ನಿಂತು ಹಿಮ್ಮಖ ಮಾಡಿತು. ನಮಗೆ ಅದೇನೂ ಅನಿಸಲಿಲ್ಲ. ಅದು ಎತ್ತಕ್ಕಾದರೂ ತೇಲಬೇಕಿತ್ತು ಅಷ್ಟೇ. ಗಾಳಿ ಪಡುವಣಕ್ಕೆ ತಿರುಗಿ ದಿಕ್ಕು ಬದಲಿಸಿತು. ಈಗ ತೆಪ್ಪ ಅತ್ತ ತಿರುಗಿ ಪೂರಾ ಅತ್ತಲೇ ಹೋಗದೆ ಒಂದು ಕೊಯ್ಮಕ್ಕೆ ಚೊಟ್ಟಗೆ ಹೊರಟಿತು. ಅತ್ತ ಕಡೆಯ ದಡದಲ್ಲಿ ಕುರಿಗಳ ಮೈ ತೊಳುವ ಸಲುವಾಗಿ ಕುರಿಗಳನ್ನು ದುಂಡಾಗಿಸಿಕಂಡು ಕೆರೆಯ ನೀರಿಗೆ ದೂಕುತ್ತಿದ್ದರು. ಆದರವುಗಳು ಹಿಂದೇಟು ಹಾಕುತ್ತಾ ಮಾಮೇರಿ ಅರಚಿಕೊಳ್ಳುತ್ತಿದ್ದವು. ಯಾವಾಗ ಮೈ ತೊಳೆಸಲು ಬಂದಿದ್ದವರು ಒಂದೆರಡು ಕುರಿಗಳನ್ನು ಹಿಡಿದು ನೀರೊಳಕ್ಕೆ ಎಸೆದರೋ ಆವಾಗ ಒಂದೊಂದೇ ಕುರಿಗಳು ನೀರಿಗಿಳಿಯತೊಡಗಿದವು. ಆಗ ಆ ಕುರಿಗಳು ಮತ್ತು ಅವುಗಳನ್ನು ನಿಗಾ ಮಾಡುವವರ ಸದ್ದುಗಳು ಕೆರೆಯಗಲಕ್ಕೂ ಎದ್ದಾಡುತ್ತ ಆ ಕೆರೆಯ ಮಹಾ ಮೌನಕ್ಕೆ ಗುದ್ದುತ್ತಿದ್ದವು. ತೆಪ್ಪ ಮತ್ತೆ ಗಾಳಿಯ ಆಜ್ಞೆಗೆ ತಲೆ ಬಾಗಿತು. ಅದರಂತೆ ತೆಪ್ಪ ಮತ್ತೆ ಏರಿಯತ್ತ ಮುಖ ಮಾಡಿತು. ನಾವು ಕಟ್ಟಿದ್ದ ತಲುಪು ಹಾಕಿದ್ದ ಇನ್ನೇನು ಮುಗಿಯಾಕೆ ಬಂತು ಅನ್ನುವಷ್ಟರಲ್ಲಿ ತೆವಳುತ್ತಿದ್ದ ತೆಪ್ಪ ಕೆರೆಯ ನೀರ ಮೇಲಾಸಿ ಇಣುಕಾಕುತ್ತಾ ಗುಪ್ಪಗಿದ್ದ ಆಪಿನ ಗುಪ್ಪೆಯ ದಡ ತಲುಪಿತು. ಆ ಆಪು ಒಂದೆರಡು ಮಾರು ಒತ್ತೊತ್ತಾಗಿ ಬೆಳೆದು ನಿಂತಿತ್ತು. ಅದು ಅಲ್ಲೇ ನಿಂತಿದ್ದರೆ ನಮಗೆ ಯಾವ ಸಂಕಷ್ಟವೂ ಬರುತ್ತಿರಲಿಲ್ಲ. ಹಂಗೆ ಆಪಿನ ದಡ ತಲುಪಿದ್ದ ತೆಪ್ಪ ಗಾಳಿ ರವಷ್ಟು ಬಿರುವಾಗಿ ತಳ್ಳಿದ್ದರ ಪರಿಣಾಮವಾಗಿ ಆ ಆಪಿನ ಗುಪ್ಪೆಯ ನಡೂ ಮಧ್ಯಕ್ಕೆ ಹೋಗಿ ತಗಲಾಕಿಕೊಂಡಿತು. ಆಗ ಆಪಿನ ಕೊಂಚ ಗಡುಸಾದ ಕಡ್ಡಿಗಳು ನಮ್ಮ ತೆಪ್ಪದ ದಿಮ್ಮಿಗಳ ನಡುವಿನ ತೂತಿನಿಂದ ಆಚೆ ಹೊರಟು ತೆಪ್ಪವನ್ನು ಪೂರಾ ತಮ್ಮ ಸುಪರ್ದಿಯಲ್ಲಿಟ್ಟುಕೊಂಡವು. ತಗೋ ತೆಪ್ಪ ಅವಕ್ಕೆ ಪೂರಾ ಶರಣಾಗಿಬಿಡ್ತು. ನಾವು ಎತ್ತ ಕೊಸರಾಡಿದರೂ ಅದು ಜಪ್ಪಯ್ಯ ಅನ್ನುತ್ತಿಲ್ಲ. ತೆಪ್ಪದಿಂದ ಇಳಿದು ಅದನ್ನು ಅತ್ತಿತ್ತ ಕೊಸರಾಡಿಸೋಣವೆಂದರೆ ಅಲ್ಲಿ ಕೆರೆ ಆಳವಾಗಿತ್ತು. ನಮಗೆ ಬರುತ್ತಿದ್ದ ಈಜು ಅಷ್ಟಕ್ಕಷ್ಟೇ ಇತ್ತು. ನಾವು ಕೂತಲ್ಲೇ ಅತ್ತಿತ್ತ ಸರುಕಾಡಿ ತೆಪ್ಪವನ್ನು ಅಲ್ಲಿಂದ ಸಾಗಾಕಲು ಯಣಗಾಡಿದೆವು. ನಾವು ಎಷ್ಟು ತಿಣುಕಿದರೂ ತೆಪ್ಪ ತೆಪ್ಪಗಿತ್ತು. ಈ ವ್ಯರ್ಥ ಪ್ರಯತ್ನದಲ್ಲಿ ಐದತ್ತು ನಿಮಿಷಗಳು ಕಳೆದವು. ಅಂತೆಯೇ ನಮ್ಮ ಆತಂಕವೂ ಏರತೊಡಗಿತು. ಕೂತಲ್ಲೇ ಕಣ್ಣಾಡಿಸಿದೆವು. ಕುರಿಗಳನ್ನು ನೀರಿಗಿಳಿಸುತ್ತಿದ್ದವರು ದೂರದಲ್ಲಿದ್ದರು. ಕೂಗಿಕೊಂಡರೂ ಅವರಿಗೆ ಕೇಳಿಸುವಂತಿರಲಿಲ್ಲ. ನಮ್ಮ ಆತಂಕ ಕಾಣುವಂತೆಯೂ ಇರಲಿಲ್ಲ. ಕೆರೆಯ ಕೆಂಪು ನೀರಿನಲ್ಲಿ ಕಾವೇರತೊಡಗಿದ್ದ ಬಿಸಿಲಿನ ಝಳಕ್ಕೆ ಕೆರೆಯಂಥ ಕೆರೆಯ ಮೂತಿ ಮತ್ತಷ್ಟು ಕೆಂಪಾಗಿತ್ತು. ಮೂರ್ತಿ ಧೈರ್ಯ ಕಳಕೊಳ್ಳದೆ ತೆಪ್ಪದ ಜತೆ ಸೆಣಸಾಡುತ್ತಿದ್ದ. ಅದು ಅವನ ಯತ್ನವನ್ನೆಲ್ಲಾ ಯಕಶ್ಚಿತ್ ಎಂಬಂತೆ ತಳ್ಳಿ ಹಾಕುತ್ತಿತ್ತು. ನನ್ನ ಆತಂಕ ಅಳುವಿಗೆ ತಿರುಗಲು ತುದಿಗಾಲಲ್ಲಿತ್ತು. ಅಷ್ಟರಲ್ಲಿ ತೆಪ್ಪ ಇದ್ದಕ್ಕಿದ್ದಂತೆ ಅಲುಗಾಡತೊಡಗಿತು. ಮೆಲ್ಲಗೆ ತೋಟದತ್ತ ತೇಲತೊಡಗಿತು. ನನಗಂತೂ ಹೋದ ಜೀವ ಬಂದಂತಾಗಿತ್ತು. ತೆಪ್ಪ ಹತ್ತಿರಾದಂತೆ ಮೂರ್ತಿ `ಎಲಾ ಯಾರೋ ತೆಪ್ಪಾನ ಎಳಿತಾವ್ರೆ ಕಣ್ಲ’ ಅಂದ ಅಚ್ಚರಿಯ ದನಿಯಲ್ಲಿ. ಮತ್ತೊಂದೆರಡು ಮಾರು ತೇಲುವಷ್ಟರಲ್ಲಿ ಎಳೆಯುತ್ತಿದ್ದವರು ಯಾರೆಂದು ಕಂಡರು. ನನಗೆ ಮತ್ತೆ ಜೀವ ಹೊಡಕೊಳ್ಳತೊಡಗಿತು. ಅಯ್ಯ ಮತ್ತು ಹೊಟ್ಟಿಗಪ್ಪ ಇಬ್ಬರೂ ಹೊಂಗೆ ಗಿಡದ ಮರೆಯಿಂದ ತೆಪ್ಪಕ್ಕೆ ಕಟ್ಟಿದ್ದ ಹಗ್ಗವನ್ನು ಹಿಡುಕಂಡು ತೆಪ್ಪವನ್ನು ಎಳಕಳ್ಳುತ್ತಿದ್ದರು. `ಶಿವಪ್ಪ, ಈ ಹುಡುಗಣ್ಗುಳ್ಗೆ ಏನಾರಾ ಭಯ ಭಕ್ತಿ ಇದ್ದಾತ?’ ಅಂತ ಹೊಟ್ಟಿಗಪ್ಪ ಅಯ್ಯನಿಗೆ ಒಪ್ಪಿಸುತ್ತಿದ್ದರು. ಹೊಟ್ಟಿಗಪ್ಪ ಕಲ್ಲಿನ ಕೆಲಸ ಮಾಡುವುದರಲ್ಲಿ ಎತ್ತಿದ ಕೈ. ಅವರು ನನ್ನ ಹಳ್ಳಿಯಿಂದ ಒಂದೆರಡು ಕಿ.ಮೀ.ನಷ್ಟು ದೂರದಲ್ಲಿದ್ದ ನುಚ್ಚುಗಲ್ಪಾಳ್ಯದವರು. ಕಳೆದ ಕೆಲ ದಿನಗಳಿಂದ ಅವರು ನಮ್ಮ ತೋಟದ ಮನೆಯ ಹಿಂಭಾಗಕ್ಕೆ ಕಾಡುಗಲ್ಲಿನ ಅಣೆಯನ್ನು ಕಟ್ಟುತ್ತಿದ್ದರು. `ಈಗೇನಾರಾ ಕೈಗೆ ಸಿಕ್ಕಿದೆ ಅಂದ್ರೆ ಮಕ ಮಾರೆ ನೋಡ್ದಂಗೆ ಲಾತ ಬೀಳ್ತವೆ’ ಅನ್ನಾದು ನನಗೆ ಖಾತ್ರಿಯಾಗಿ ಹೋಯ್ತು. ಅಯ್ಯ ಯಾವತ್ತೂ ಮೂರ್ತಿಯ ಮೇಲೆ ಕೈ ಮಾಡುತ್ತಿರಲಿಲ್ಲ. ಹಂಗಾಗಿ ಮೂರ್ತಿ ಧೈರ್ಯವಾಗಿದ್ದ. ಆದರೂ ಬಚಾವಾಗಲು ಅಸಹಾಯಕ ಭಾವವೊಂದನ್ನು ಮುಖದಲ್ಲಿ ತೇಲುಬಿಟ್ಟುಕಂಡು ಕೂತಿದ್ದ. ತೆಪ್ಪ ಇನ್ನೇನು ಅವರ ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ ನಾನು ಮಂಡಿಯುದ್ದ ನೀರಿಗೆ ಚಂಗನೆ ನೆಗೆದು ಅಲ್ಲಿಂದ ಪರಾರಿಯಾಗಿಬಿಟ್ಟೆ. ಮತ್ತೆ ಮನೆ ಸೇರಿದ್ದು ಸಂಜೆಗೇ. ನನ್ನ ಗ್ರಾಚಾರ ನೆಟ್ಟಗಿತ್ತು. ಅಷ್ಟೊತ್ತಿಗೆ ಅಯ್ಯ ಅದನ್ನು ಮರೆತಂತಿತ್ತು.
ಇದಾಗಿ ಎಷ್ಟೋ ವರ್ಷಗಳ ನಂತರ. ಓದು ಮುಗಿಸಿ ಕೆಲಸಕ್ಕೆ ಸೇರಿಕಂಡು ತಿಪಟೂರಿನಲ್ಲಿ ವಾಸಿಸತೊಡಗಿ ಸುಮಾರು ವರ್ಷಗಳಾಗಿದ್ದವು. ಒಂದು ದಿನ ಬೆಳಬೆಳಗ್ಗೇನೇ ತಿಪಟೂರಿನ ಕೆರೆಯನ್ನು ನೋಡಲೆಂದು ಹೋಗಿದ್ದೆ. ಕೊರೆವ ಚಳಿಯಲ್ಲೂ ದೊಡ್ಡವರಿಂದ ಹಿಡಿದು ಪುಟಾಣಿಗಳವರೆಗೂ ವಾಕ್ ಮಾಡುತ್ತಿದ್ದ ದೃಶ್ಯ, ಕೆರೆಯ ನೀರಿನಿಂದ ಮೇಲೇಳುತ್ತಿದ್ದ ಹಬೆಯಿಂದಾಗಿ ಇಡೀ ವಾತಾವರಣವೇ ತುಂಬಾ ಮುದಕೊಡುವಂತಿತ್ತು. ಸುಮಾರು ವರ್ಷಗಳಿಂದ ಕನಿಷ್ಟ ನೀರನ್ನು ಕೂಡಾ ಕಾಣದೆ ಮೈ ತುಂಬಾ ಬಳ್ಳಾರಿ ಜಾಲಿಗಿಡಗಳನ್ನು ಬೆಳೆಸಿಕೊಂಡು ಹಾಳು ಸುರಿಯುತ್ತಿದ್ದ ಈ ಕೆರೆಗೆ ಹೇಮಾವತಿ ನಾಲೆಯ ನೀರನ್ನು ತುಂಬಿಸಲಾಗಿತ್ತು. ಹಂಗೆ ತುಂಬಿದ ಕೆರೆ ಬಟಾಬಯಲು ಸೀಮೆಯಾದ ತಿಪಟೂರಿಗೆ ಸಣ್ಣದೊಂದು ಕಡಲು ನೀಡಬಹುದಾದ ರೊಮಾಂಚನದ ಅನುಭವ ನೀಡುವಂತಿತ್ತು. ಅವತ್ತು ಕೆಲವು ಕುತೂಹಲಿಗಳು ಆ ಕೆರೆಯ ನೀರಲ್ಲಿ ದೋಣಿಯೊಂದರಲ್ಲಿ ಕೆರೆಯಗಲಕ್ಕೂ ಅಡ್ಡಾಡುತ್ತಿದ್ದರು.
ಅಪ್ಪನ ಜತೆ ಕೆರೆಯನ್ನು ನೋಡಲು ಬಂದಿದ್ದ ಪುಟ್ಟ ಹುಡುಗನೊಬ್ಬ ಒಂದೇ ಸಮನೆ ವಿಭಿನ್ನ ರಾಗಗಳಲ್ಲಿ ಅಳುತ್ತಾ ನಡೆಯುತ್ತಿದ್ದ. ಯಾಕೆ ಅಂತ ಅವನ ಅಪ್ಪನನ್ನು ಕೇಳಿದ್ದಕ್ಕೆ `ನೋಡಿ ಅಲ್ಲಿ ಹೋಗ್ತಾ ಐತಲ್ಲಾ ಆ ದೋಣೀಲಿ ಇವ್ನೂ ಹೋಗ್ಬೇಕಂತೆ. ಎಷ್ಟು ಹೇಳಿದ್ರೂ ಕೇಳ್ತಿಲ್ಲ’ ಅಂದರು. ಜತೆಗೆ ಇನ್ನಿಲ್ಲದ ಸಮಾಧಾನ ಮಾಡುತ್ತಿದ್ದರು. ಆದರೆ ಆ ಹುಡುಗನಿಗೆ ಅಪ್ಪ ಹೇಳುತ್ತಿದ್ದ ಯಾವ ಮಾತುಗಳು ಕಿವಿಗೆ ಹೋಗುತ್ತಿರಲಿಲ್ಲ. ಮುಖವನ್ನು ಊದಿಸಿಕೊಂಡು ಅಪ್ಪನಿಂದ ಕೈ ಬಿಡಿಸಿಕಂಡು ಅಪ್ಪನನ್ನು ತಿನ್ನುವವನಂತೆ ಕೊಂಚ ದೂರದಲ್ಲೇ ನಿಂತು ದುರುಗುಟ್ಟಿಕೊಂಡು ದುಕ್ದುಕ್ಕಳಿಸಿಕಂಡು ಅಳುತ್ತಿದ್ದ.
ಈ ನೀರಿನ ಸೆಳೆತವೇ ಅಂಥಾದ್ದೇನೋ. ಈ ಪುಟ್ಟ ಹುಡುಗನಿಗೆ ತನ್ನ ಕುತೂಹಲದ ಮುಂದೆ ಅಪ್ಪ ಹೇಳುತ್ತಿದ್ದ ಮಾತುಗಳು ಅರ್ಥವಾಗುತ್ತಿರಲಿಲ್ಲ ಹಾಗೂ ಅದರಿಂದ ಆಗಬಹುದಾದ ಅನಾಹುತದ ಬಗ್ಗೆ ಕಲ್ಪಿಸಿಕೊಳ್ಳುವಂಥ ವಯಸ್ಸು ಕೂಡಾ ಅವನದಾಗಿರಲಿಲ್ಲ. ಹಂಗೆ ನೋಡಿದರೆ ಅದೊಂದು ದಿನ ದಾನನ್ ದಡಿಯರಂಗೆ ಇದ್ದ ನಾವು ಮೂವರು ಗೆಳೆಯರು ಇಂಥದ್ದೊಂದು ದುಸ್ಸಾಹಸಕ್ಕಿಳಿದುಬಿಟ್ಟಿದ್ದೆವು. ದೋಣಿಯನ್ನು ನಡೆಸುವುದರ ಬಗ್ಗೆ ಒಂದು ಸಣ್ಣ ಜ್ಞಾನವೂ ಇಲ್ಲದೆ! ಆ ಕೆರೆಯ ಆಳದ ಬಗ್ಗೆ ಒಂದೀಟೂ ತಿಳಿಕೊಳ್ಳದೆ! ಆದರೂ ಏಕಾಏಕಿ ದೋಣಿಯೊಂದನ್ನು ನಡೆಸಲು ಹೋಗಿದ್ದೆವು.
ಸುಮಾರು ವರ್ಷಗಳ ಹಿಂದಿನ ಮಾತು. ಇದು ತಿಪಟೂರಿಗೆ ಬಂದ ಹೊಸತರಲ್ಲಿ. ಅವತ್ತು ನಾವು ಕೂತಿದ್ದ ದೋಣಿ ಅಗಾ ಇಗಾ ಅನ್ನುವುದರೊಳಗೆ ಮಂಡಿಯುದ್ದದ ನೀರಿನಿಂದ ಕೆರೆಯ ಆಳವಾದ ತಾವಿನಲ್ಲಿ ತೇಲತೊಡಗಿತು. ನೆತ್ತಿಯ ಮೇಲೆ ಸೂರ್ಯ ಸುಡುವ ನೀರನ್ನು ಬಗ್ಗಿಸುತ್ತಿದ್ದ. ಕೆರೆಯ ಮೇಲೆ ಕೆರೆಯ ಅಗಲಕ್ಕೂ ಕೆರೆಯ ಕಂದಮ್ಮಗಳಂತೆ ಹಲವು ಬಗೆಯ ಹಕ್ಕಿಗಳು ತೇಲಾಡಿದಂತೆ ಹಾರಾಡುತ್ತಿದ್ದವು. ದೂರದಲ್ಲಿ ಕೆರೆಯ ಆಚೆ ಬದಿಯಲ್ಲಿ ದೊಡ್ಡ ಹಾಸು ಬಂಡೆಯೊಂದರ ಮೇಲೆ ದೇವಸ್ಥಾನವೊಂದು ಕಾಣುತ್ತಿತ್ತು. ದೂರಕ್ಕೆ ಅದು ಬಂಡೆಗಲ್ಲಿನ ಮೇಲೆ ಗುಪ್ಪೆ ಕೂತಂತೆ ಗೋಚರಿಸುತ್ತಿತ್ತು. ಮತ್ತೊಂದು ಬದಿಯಲ್ಲಿ ಹಸಿರು ಹೊಲಗಳು ಅಚ್ಚು ಹಾಕಿದಂತೆ ಚಂದದ ಚಿತ್ರಗಳಾಗಿದ್ದವು. ಅವುಗಳ ಬದುಗಳಲ್ಲಿ ದನ ಕುರಿಗಳು ಮೇಯುತ್ತಿದ್ದವು.
ಬೆಳಗಿನ ಜಾವದಿಂದ ಕೆರೆಯ ಎದೆಯ ಮೇಲೆಲ್ಲಾ ಹರಿದಾಡಿ, ರಾಶಿ ರಾಶಿ ಮೀನುಗಳನ್ನು ಹೊತ್ತು ತಂದು ತನ್ನ ಯಜಮಾನನ ಬಿಡುವಿನ ವೇಳೆಯಲ್ಲಿ ದಣಿವಾರಿಸಿಕೊಳ್ಳುವ ಸಲುವಾಗಿ ದೋಣಿಯೊಂದು ಬೋರಲು ಬಿದ್ದಿತ್ತು. ಅದನ್ನು ಕಾಣುತ್ತಲೇ ನಮ್ಮ ಹುಮ್ಮಸ್ಸು ಇಮ್ಮಡಿಸಿತ್ತು. ಅದುವೇ ಆ ಚಣ ನಮ್ಮನ್ನು ಹೊತ್ತು ಸಾಗುತ್ತಿದ್ದ ದೋಣಿಯಾಗಿತ್ತು. ಅದಕ್ಕೆ ನಮ್ಮ ಎಡವಟ್ಟು ಅರಿವಾಗಿ ಅದಕ್ಕಾಗಿ ಮರುಗುತ್ತಿತ್ತೋ ಏನೋ? ಆದರೂ ತನ್ನ ತೇಲುವ ಕಾಯಕಕ್ಕೆ ನಿಷ್ಠವಾಗಿತ್ತು. ಗಾಳಿ ಬೀಸುತ್ತಿದ್ದ ದಿಕ್ಕಿನತ್ತ ಬಿರು ನಡಿಗೆಯಲ್ಲಿ ಸಾಗುತ್ತಿತ್ತು.
ದೋಣಿಗೆ ಬಿರುವು ಬರತೊಡಗಿದಂತೆ ನಮ್ಮೊಳಗಿನ ಮಾತುಗಳು ಮೆಲ್ಲಗೆ ಮುದುಡಿಕೊಳ್ಳತೊಡಗಿದವು. ದೋಣಿಯನ್ನು ನಡೆಸುವ ಹುಟ್ಟು ನಮ್ಮ ಕಾಲುಗಳ ನಡುವೆ ಅನಾಥವಾಗಿ ಬಿದ್ದಿತ್ತು. ತಿನ್ನಲೆಂದು ತಂದಿದ್ದ ತಿಂಡಿಗಳು, ಹೊಲಮಾಳದಲ್ಲಿ ಈಚಿಕೊಂಡು ಬಂದಿದ್ದ ಹಸಿ ರಾಗಿ ತೆನೆಗಳು ನಮ್ಮ ಕೈಯ್ಯಲ್ಲಿದ್ದವು. ದೋಣಿ ಕೆರೆಯ ನಡುವಿನತ್ತ ತೇಲುತ್ತಾ ಹೋದಂತೆಲ್ಲಾ ಹೆಚ್ಚು ಹುರುಪುಗೊಂಡಂತೆ ಗಾಳಿ ಬೀಸತೊಡಗಿತು. ಅದು ನಮ್ಮನ್ನು ಸಾಕ್ಷಾತ್ ಅಂಟಿಸಿ ಕೂರಿಸಿದ್ದ ಬೊಂಬೆಗಳನ್ನಾಗಿಸಿತ್ತು. ಗಾಬರಿ ಅನ್ನೋದು ನಮ್ಮೊಳಗೆ ಧುಮುಕ ಹತ್ತಿತ್ತು. ಅದರ ಹೊಡೆತಕ್ಕೆ ಗಾಬರಿಗೆ ನಮ್ಮಲ್ಲಿ ಯಾರೊಬ್ಬರು ಅಲುಗಾಡಿದ್ದರೂ, ಪುಟ್ಟ ತಟ್ಟೆಯಂತಿದ್ದ ಆ ದೋಣಿ ನಮ್ಮನ್ನು ಅಲ್ಲೇ ಮಗುಚಾಕಿ ಮತ್ತೆ ತೇಲಿ ಬಿಡುವ ಅದರ ಹುಮ್ಮಸ್ಸಿನ ಗುಟ್ಟು ನಮಗಾಗಲೇ ಗೊತ್ತಾಗಿ ಹೋಗಿತ್ತು.
ತಿಪಟೂರಿನಿಂದ ಸುಮಾರು ಹತ್ತದಿನೈದು ಕಿಲೋಮೀಟರ್ ದೂರದಲ್ಲಿ ಮಲ್ಲಾಘಟ್ಟದ ಕೆರೆ ಅಂತ ಕರೆಯಲ್ಪಡುವ ದೊಡ್ಡದೊಂದು ಕೆರೆಯಿದೆ. ಬೀಸಾದ ಹಾಸು ಬಂಡೆಯೊಂದನ್ನು ಕುಳಿ ಮಾಡಿ ಅದರೊಳಗೆ ನೀರನ್ನು ನಿಲ್ಲಿಸಿದಂತೆ ಕಾಣುವ ಈ ಕೆರೆ ಮೀನುಗಾರಿಕೆಗೆ, ಧಾರ್ಮಿಕ ನಂಬಿಕೆಗಳಿಗೆ ಸುತ್ತೇಳು ಹಳ್ಳಿಗಳಲ್ಲೂ ಹೆಸರುವಾಸಿ. ಇದಕ್ಕೆ ಹೇಮಾವತಿ ನೀರು ಹರಿಯತೊಡಗಿದ ಮೇಲಂತೂ ಇದು ವರ್ಷವಿಡೀ ಮೈತುಂಬಿಕೊಂಡಿರುತ್ತದೆ.
ಅವತ್ತು ಭಾನುವಾರ. ನಾನು, ಕವಿ ಮಿತ್ರ ಬಿಳಿಗೆರೆ ಕೃಷ್ಣಮೂರ್ತಿ ಹಾಗೂ ಪರಿಸರದ ಬಗ್ಗೆ ಅಪಾರ ಕಾಳಜಿಯಿದ್ದ ಮತ್ತೊಬ್ಬ ಮಿತ್ರ ಷಡಕ್ಷರ ದೇವರು ತಿಪಟೂರಿನಿಂದ ಈ ಕೆರೆಯನ್ನು ತಲುಪುವ ಹೊತ್ತಿಗಾಗಲೇ ಹೊತ್ತು ನೆತ್ತಿಗೇರಿತ್ತು. ಹಂಗೆ ನೋಡಿದರೆ ದೋಣಿ ಹತ್ತಬೇಕೆಂಬ ಕಲ್ಪನೆ ನಾವಲ್ಲಿ ತಲುಪುವವರೆಗೂ ಇರಲಿಲ್ಲ. ಕೆರೆಯ ತಡಿಯಲ್ಲಿ ಅನಾಥವಾಗಿ ಬಿದ್ದಿದ್ದ ದೋಣಿಯನ್ನು ಕಂಡ ಕೂಡಲೇ ಇದ್ದಕ್ಕಿದ್ದಂತೆ ಇಂಥದ್ದೊಂದು ತೀರ್ಮಾನಕ್ಕೆ ಬಂದುಬಿಟ್ಟಿದ್ದೆವು. ಜೊತೆಗೆ ದೋಣಿಯನ್ನು ಹತ್ತುವುದಕ್ಕೆ ಮುಂಚೆ ನಮ್ಮಲ್ಲಿ ಯಾರಿಗೂ ಈ ಕೆರೆಯ ಆಳದ ಬಗ್ಗೆಯಾಗಲಿ, ಇದರ ಒಡಲ ತುಂಬಾ ಕಾಣದಂತೆ ಮೀನುಗಳಿಗಾಗಿ ಹರಡಿಕೊಂಡು ನಿಂತಿದ್ದ ರೇಷ್ಮೆ ಬಲೆಗಳ ಬಗ್ಗೆಯಾಗಲಿ ಯೋಚಿಸುವ ವ್ಯವಧಾನ ಕೂಡಾ ಆಗ ಇರಲಿಲ್ಲ. ಅಷ್ಟೇ ಯಾಕೆ ನಮ್ಮಲ್ಲಿ ಯಾರೊಬ್ಬನಿಗೂ ದೋಣಿಯನ್ನು ನಡೆಸುವುದೇ ಗೊತ್ತಿರಲಿಲ್ಲ! ಅಷ್ಟೋ ಇಷ್ಟೋ ಕಲಿತಿದ್ದ ಈಜೊಂದನ್ನೇ ನಂಬಿ ನಾವು ಇಂಥದ್ದೊಂದು ಧೈರ್ಯ ಮಾಡಿ ಬಿಟ್ಟಿದ್ದೆವು.
ಹಿಂಗೆ ಮೊಂಡ ಧೈರ್ಯವನ್ನೇ ನಂಬಿಕೊಂಡು ಕೂತಿದ್ದ ನಮ್ಮನ್ನು ಹೊತ್ತ ದೋಣಿ ತೇಲುತ್ತಾ ತೇಲುತ್ತಾ, ಕಿರುತೆರೆಗಳನ್ನು ತಳ್ಳುತ್ತಾ ತಳ್ಳುತ್ತಾ ಗಾಳಿಯ ಧ್ಯಾನಕ್ಕೆ ತಕ್ಕಂತೆ ಆಗಾಗ ಒಂದೊಂದು ಸುತ್ತು ತಿರುಗುತ್ತಾ ಕೆರೆಯ ನಡುವಿಗೆ ತಲುಪಿಯೇ ಬಿಟ್ಟಿತು. ದೂರದವುಗಳೆಲ್ಲಾ ಪುಟ್ಟದಾಗಿ ಕಾಣತೊಡಗಿದ್ದವು. ಕೆರೆಯ ತಡಿಯಲ್ಲಿದ್ದವರ ಕೂಗುಗಳು, ಎಚ್ಚರಿಕೆಗಳು ನಮ್ಮ ಗದಗುಡುತ್ತಿದ್ದ ಎದೆಗಳಲ್ಲಿ ಮರುದನಿಗಳಾಗುತ್ತಾ ನಮ್ಮೊಳಗೆ ಮತ್ತಷ್ಟು ಭಯವನ್ನು ತುಂಬುತ್ತಿದ್ದವು. ಸಾವಿನ ಸೂರಿನತ್ತ ನಮ್ಮನ್ನು ಹೊತ್ತು ಸಾಗಿಸುವ ಹಠಕ್ಕೆ ಬಿದ್ದಂತೆ ದೋಣಿ ತನ್ನ ಪಾಡಿಗೆ ತಾನು ತೇಲುತ್ತಲೇ ಇತ್ತು. ಬದುಕುವ ಆಸೆಯೇ ಕಮರಿ ಹೋದಂಥ ಪ್ರೇತ ಕಳೆಯೊಂದು ನಮ್ಮ ಮೂವರ ಮುಖಗಳ ಮೇಲೂ ಆಡುತ್ತಾ ನಮ್ಮೊಳಗಿನ ಮಾತುಗಳನ್ನೆಲ್ಲಾ ಕಿತ್ತುಕೊಂಡು ತನ್ನ ಸುಪರ್ಧಿನಲ್ಲಿಟ್ಟುಕೊಂಡಂತಿತ್ತು.
ಇದೆಲ್ಲಾ ನಂಗೂ ಗೊತ್ತು, ಇಷ್ಟಕ್ಕೇ ನಿಮ್ಮನ್ನ ಬಿಟ್ಟುಬಿಡ್ತೀನ ಅನ್ನುವಂತೆ ದೋಣಿ ತೇಲುತ್ತಲೇ ಇತ್ತು. ನಾವು ಮೂವರು ಒಬ್ಬರ ಮುಖಗಳನ್ನು ಒಬ್ಬರು ನೋಡಿಕೊಳ್ಳುತ್ತಾ ನಮ್ಮನ್ನು ನಾವೇ ಸಂತೈಸಿಕೊಳ್ಳುತ್ತಿರುವಂಥಾ ಹೊತ್ತಲ್ಲಿ ಗಾಳಿಯೂ ಮುನಿಸಿಕೊಂಡಿತು. ಆವರೆವಿಗೂ ಬೀಸುತ್ತಿದ್ದ ಅದು ತಾನೂ ಒಂದು ಕೈ ನೋಡ್ಕಂಡೇ ಬಿಡ್ತೀನಿ ಅನ್ನುವಂತೆ ಒಂದಷ್ಟು ಹೊತ್ತು ತನ್ನ ನಡೆಗೆ ವಿರಾಮ ಕೊಟ್ಟಿತು. ಗಾಳಿ ಎತ್ತಮಕ್ಕಾದರೂ ಬೀಸಿ ಹೆಂಗಾದರೂ ನಮ್ಮನ್ನು ಎತ್ತ ಕಡೆಯ ದಡಕ್ಕಾದರೂ ಹೊತ್ತಾಕುತ್ತೆ ಅನ್ನುವ ನಮ್ಮ ದೂರದ ಆಸೆಯನ್ನೂ ಅದು ಕಮರಿಸಿತು. ಆದರೆ ಅಯ್ಯೋ ಹುಲುಮಾನವರ ನಾನು ಹಿಂಗೆ ನಿಂತ ಕಡೆ ನಿಲ್ಲುವ ಜಾಯಮಾನ ನಿಮದೇ ಹೊರತು ನನದಲ್ಲ ಎಂಬಂತೆ ಸ್ವಲ್ಪ ಹೊತ್ತಿಗೆಲ್ಲಾ ಮತ್ತೆ ಮತ್ತೆ ಗಾಳಿ ಬೀಸತೊಡಗಿತು. ಈ ಮೊದಲು ಬೀಸುತ್ತಿದ್ದ ದಿಕ್ಕನ್ನು ಬಿಟ್ಟು ಮತ್ತೊಂದು ದಿಕ್ಕನ್ನು ಹಿಡುಕಂಡಿತು. ಆಗ ದೋಣಿ ನಾವು ಬಂದಿದ್ದ ಇಲ್ಲಾ ನಮ್ಮೆದುರಿನ ದಡ ಇವೆರಡನ್ನೂ ಬಿಟ್ಟು ಮತ್ತೊಂದು ದಾರಿ ಹಿಡಿಯಿತು.

ದೂರದಲ್ಲಿ ನಮ್ಮನ್ನು ಕಂಡು ಬೊಬ್ಬೆ ಹೊಡೆಯುತ್ತಿದ್ದವರು ಸುಮ್ಮನೇ ಕೂಗುತ್ತಿದ್ದರೇ ಹೊರತು ಯಾರೊಬ್ಬರೂ ನಮ್ಮ ಸಹಾಯಕ್ಕೆ ಬರುವಂತಿರಲಿಲ್ಲ. ದೋಣಿಗಳನ್ನು ನಿಲ್ಲಿಸಿ ಮನೆಗಳಿಗೆ ಊಟಕ್ಕೆ ಹೋಗಿದ್ದ ಮೀನುಗಾರರು ಬರುವ ಹೊತ್ತು ಇನ್ನೂ ಆಗಿರಲಿಲ್ಲ. ಹಂಗಾಗಿ ನಾವು ಯಾರನ್ನೂ ದೂಷಿಸುವಂತಿರಲಿಲ್ಲ. ಹಿಂಗೆಯೇ ಒಂದು ಒಂದೂವರೆ ಗಂಟೆ ಕಳೆಯಿತು. ಮಾತುಗಳನ್ನೇ ಕಳೆದುಕೊಂಡಿದ್ದ ನಮ್ಮೊಳಗೆ ಯಾವ ಹೊಸ ದಾರಿಯೂ ಬಿಚ್ಚಿಕೊಳ್ಳುವಂತಿರಲಿಲ್ಲ. ಆದದ್ದು ಆಗಿ ಬಿಡಲಿ ಅಂತ ದೋಣಿಯಿಂದ ಧುಮುಕಿಬಿಡುವ ಅಂದರೆ ಆಗ ನೀರಿನೊಳಗಿರುವ ಬಲೆಗಳಿಗೆ ಮೀನುಗಳ ಬದಲಾಗಿ ನಾವು ಸಿಕ್ಕಿಕೊಳ್ಳುತ್ತಿದ್ದೆವು. ಹಂಗೆ ಮಾಡಿದರೆ ಮತ್ತೊಂದು ಅನಾಹುತವನ್ನು ನಾವೇ ಕೈ ಬೀಸಿ ಕರೆದಂತೆ ಎಂಬುದು ಅರಿವಾಗಿ ಆ ಸಾಹಸಕ್ಕೆ ನಮ್ಮ ಮನಸ್ಸುಗಳು ಅಣಿಯಾಗುವ ಸಾಧ್ಯತೆಗಳೇ ಇರಲಿಲ್ಲ. ಹಿಂಗಿರುವಾಗ, ಅದೇನು ಅನಿಸಿತೋ ಏನೋ ಕೃಷ್ಣಮೂರ್ತಿ ನಮ್ಮ ಕಾಲುಗಳ ನಡುವೆ ಬಿದ್ದಿದ್ದ ಹುಟ್ಟುಗೋಲನ್ನು ಕೈಗೆತ್ತಿಕೊಂಡು ದೋಣಿಯ ಪಕ್ಕದ ನೀರಿನಲ್ಲಿ ಕೊಂಚ ಮುಳುಗಿಸಿ ಅದರಿಂದ ಮೆಲ್ಲಗೆ ನೀರನ್ನು ಹಿಂದೆ ಮುಂದೆ ತಳ್ಳಿದ. ಆಗ ದೋಣಿಯ ಮುಮ್ಮುಖ ಚಲನೆ ನಿಂತು ಅದು ಇದ್ದಲ್ಲಿಯೇ ಮೆಲ್ಲನೆ ಸುತ್ತ ಹತ್ತಿತು. ಇದನ್ನು ಕಂಡು ಜೀವ ಬಂದವನಂತೆ ಅವನು ಆ ಹುಟ್ಟಿನಿಂದ ವಿರುದ್ಧ ದಿಕ್ಕಿನಲ್ಲಿ ನೀರನ್ನು ತಳ್ಳಿದ. ದೋಣಿಯ ಗತಿ ಮತ್ತೆ ಬದಲಾಯ್ತು. ಮತ್ತೇನೋ ಹೊಳೆದವನಂತೆ ಹಂಗೆಯೇ ದೋಣಿಯ ಇಕ್ಕೆಲಗಳಲ್ಲೂ ಹುಟ್ಟು ಹಾಕತೊಡಗಿದ. ಆಗ ದೋಣಿ ತಾನು ತಿರುಗಿ ಬಂದ ದಾರಿಯತ್ತ ಮುಖ ಮಾಡಿ ಹೊರಟಿತು. ದೋಣಿ ದಡವನ್ನು ಮುಟ್ಟುವ ಹೊತ್ತಿಗೆ ದೋಣಿಯ ಮಾಲೀಕನೂ ಅವನ ಜೊತೆಗೆ ಹತ್ತಾರು ಜನರೂ ಜಮಾಯಿಸಿದ್ದರು. ದೋಣಿಯ ಯಜಮಾನನ ಮುಖದಲ್ಲಿ ಭಯದ ಜೊತೆಗೆ ಸಿಟ್ಟು ಮಡುಗಟ್ಟಿಕೊಂಡಿತ್ತು. ಕೆಲವರು ಸಾವಿನಿಂದ ಒಂದೀಟರಲ್ಲಿ ಬಚಾವಾಗಿ ಬಂದವರಂತೆ ನಮ್ಮನ್ನು ನೋಡಿದರು. ಮತ್ತೆ ಕೆಲವರು ನಮ್ಮ ಹುಚ್ಚುತನಕ್ಕೆ ಮಂಗಳಾರತಿ ಮಾಡಿ ಒಂದು ಜನ್ಮಕ್ಕಾಗುವಷ್ಟು ಉಪದೇಶ ಮಾಡಿದರು. ಅವ್ಯಾವೂ ನಮಗೆ ನಾಟುವಂಥ ಸ್ಥಿತಿಯಲ್ಲಿ ನಾವಿರಲಿಲ್ಲ. ನಾವು ತಿಪಟೂರಿನತ್ತ ಮತ್ತೆ ಮುಖ ಮಾಡುವ ಹೊತ್ತಿಗೆ ಸಾವು ನಮ್ಮನ್ನು ಮನೆಯ ಬಾಗಿಲಿನವರೆಗೂ ಕರಕಂಡೋಗಿ ಹೋಗಲಿ ಪಾಪ ಅಂತ ಬಿಟ್ಟು ಕಳಿಸಿದ್ದ ಗುಟ್ಟನ್ನು ನಾನು ಯಾರಿಗೂ ಹೇಳಲ್ಲ ಹೋಗಿ ಅನ್ನುವಂತೆ ಮೆತುವಾಗತೊಡಗಿದ್ದ ಇಳಿ ಹೊತ್ತಿನ ಸೂರ್ಯ ಕಣ್ಣು ಮಿಟುಕಿಸುತ್ತಿದ್ದ.
****
ಹಾಲುವಾಣ: ಹಾಲಿವಾಣ ಅಥವಾ ಹೊಂಗಾರಕ. ಇದೊಂದು ಆಶ್ರಯ ಮರ.
ಕೊಣಬೇವು: ಇದೊಂದು ಕಾಡು ಗಿಡ. ಕೆಲವೊಮ್ಮೆ ಹೂಗಳಿಗೆ ಬದಲಾಗಿ ಅಥವಾ ಹೂಗಳ ಜತೆಗೆ `ಕೊಣಬೇವಿನ ಪತ್ರೆ’ಯಾಗಿ ಪೂಜೆ ಬಳಸುತ್ತಾರೆ.
ವಾಳೆ: ದಾರಿ.
ಸೇದೋಹಗ್ಗ: ಸೇದುವ ಬಾವಿಗಳಲ್ಲಿ ಬಿಂದಿಗೆಗಳಿಂದ ನೀರನ್ನು ಸೇದಲು ಬಳಸುತ್ತಿದ್ದ ಹಗ್ಗ.
ಎತ್ತಮಕ್ಕವಾದರೂ: ಎತ್ತಕಡೆಗಾದರೂ.
ಕೊಯ್ಮಕ್ಕೆ ಚೊಟ್ಟಗೆ: ನೇರ ಹೋಗದೆ ಒಂದೆಡೆಗೇ ಹೋಗುವುದು.
ಆಪು: ಕೆರೆ ಕಟ್ಟೆಗಳಲ್ಲಿ ಬೆಳೆಯುವ ಒಂದು ಬಗೆಯ ಜೊಂಡುಹುಲ್ಲು.
ಸುಪರ್ದು: ಅಧೀನ.
***
(ಹಿಂದಿನ ಕಂತು: ಬುಷ್ ರೇಡಿಯೋ, ಪಾಠದ ಮನೆ ಮತ್ತು ಪ್ರತಿದಿನದ ಸೂರ್ಯ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

