Advertisement
ನಾನೇನು ಮಾಡಲಿ… ಯಾರಿಗೆ ಹೇಳಲಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನೇನು ಮಾಡಲಿ… ಯಾರಿಗೆ ಹೇಳಲಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಏನು ಮಾಡಬೇಕೆಂದು ದಿಕ್ಕೇ ತೋಚದೆ, ದೇವರೆದುರು ನಿಂತೆ. ಕೈ ಮುಗಿದು, ಕುಸಿದು ಕೂತೆ. ಎಲ್ಲ ಕಳೆದ ಮೇಲೆ, ಈಗ ಬಂದು ಮತ್ತೆ ಕೂಡಬೇಕು ಎಂದರೆ ಬದುಕೆಂದರೆ ಇವರಿಗೆಲ್ಲ ಆಟವೇ? ಹೆಣ್ಣಿಗೂ ಅವಳದ್ದೇ ಆದ ಆಸೆಗಳಿರುತ್ತವೆ, ಅವಳ ಮನಸ್ಸು ಇದನ್ನು ಒಪ್ಪುತ್ತದೆಯೇ? ಯಾವ ಪ್ರಶ್ನೆ ಅವರ ಯೋಚನೆಯಲ್ಲೂ ಬರದು. ಜೋರಾಗಿ ಕೂಗಿ, ಅಳಬೇಕು ಎನಿಸಿತಾದರೂ ಮಾಡುವಂತಿಲ್ಲ. ಹೊರಗೆ ಕಾಣದ ಸಂಕೋಲೆಯನ್ನು ಈ ಸಮಾಜ ಹೆಣ್ಣಿಗೆ ತೊಡಿಸಿರುತ್ತದೆ. ಮಾತು ಹೇಗೆ ಹೊರಡೀತು?
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೇಳನೆಯ ಕಂತು

ಇದೊಂದು ರೀತಿಯಲ್ಲಿ ಇಬ್ಬದಿಯ ಸಂಕಟದ ಸ್ಥಿತಿಯಾಗಿತ್ತು ನನಗೆ. ಶೇಕ್ ಚಾಂದ್ ಅವರ ಸ್ನೇಹಿತ ಆರಾಧ್ಯ ಹೇಳಿದ ಮಾತು ನೆನಪಿತ್ತು. ನೀವು ಶೇಕ್‌ನ ಪ್ರೀತಿಯನ್ನು ಒಪ್ಪದೇ ಹೋದರೆ, ಖಂಡಿತ ಅವನು ಸಾಯುತ್ತಾನೆ ಎಂದಿದ್ದು ತಲೆಯಲ್ಲಿ ಗುನುಗುತ್ತಲೇ ಇತ್ತು. ನನಗಾದರೂ ಮಾವನ ಮಗ ಅಥವಾ ಗೋವಿಂದರೆಡ್ಡಿ ಬಂದು ಮದುವೆಯಾಗಿ ಜೊತೆಯಾಗುತ್ತಾರೆ. ಇವರಿಗ್ಯಾರು ದಿಕ್ಕು? ಈ ಆತಂಕವೇ ಬಹುಶಃ ಸಲುಗೆ ಬೆಳೆಸಿದ್ದಿರಬೇಕು.

ಮೈಲಾಪುರ ಜಾತ್ರೆಯ ಕ್ಯಾಂಪ್ ಮುಗಿಸಿ ಮರಳಿ ಯಾದಗಿರಿಗೆ ಬರುವ ಹೊತ್ತಿಗೆ ನಾನು, ಅವರು ನಾವಾಗಿಬಿಟ್ಟಿದ್ದೆವು. ಕಲಾವಿದರೆಲ್ಲರಿದ್ದ ಆ ಯಾದಗಿರಿ ಮನೆಯ ಮಾಳಿಗೆಯಲ್ಲಿ ನಮ್ಮ ಕೋಣೆಯಿತ್ತು. ಮೆಟ್ಟಿಲು ಹತ್ತಿ ಹೋಗುವವರಿಗೆ ಹೊರಬರಲು ಎರಡು ಬಾಗಿಲುಗಳಿತ್ತು. ತಂದೆಯವರನ್ನು ಹೇಗೆಲ್ಲ ಯಾಮಾರಿಸಿದ್ದೆ ಎಂದರೆ ಈಗ ನೆನೆದರೆ ಸಂಕೋಚ, ಬೇಸರವಾಗುತ್ತದೆ. ನಾನು ಮೇಲೆ ಹತ್ತಿ ಹೋಗಿ, ಅವರು ನನ್ನ ಹಿಂಬಾಲಿಸಿ ಬರುವಷ್ಟರಲ್ಲಿ ಆಚೆ ಕಡೆ ಬಾಗಿಲಿನಿಂದ ಹೋಗಿ ಶೇಕ್ ಚಾಂದ್ ಅವರೊಂದಿಗೆ ಮಾತಿಗಿಳಿಯುತ್ತಿದ್ದೆ. ಮಾತು ಕತೆಯಾಗಿ, ಪ್ರೇಮ ಪ್ರಕರಣವಾಗಿ ರೂಪಪಡೆದದ್ದು ಆ ಸಂದರ್ಭದಲ್ಲೇ.

ಇಳಕಲ್‌ನಿಂದ ಬಂದಿದ್ದ ಮುಸ್ಲಿಂ ದಂಪತಿಯ ಜಾಹೀದಾ ಬೇಗಂ ಮಾತ್ರ ನಮ್ಮಿಬ್ಬರ ಬಗ್ಗೆ ಹೊಗಳುವುದು ಮಾತ್ರ ನಿಲ್ಲಿಸುತ್ತಿರಲಿಲ್ಲ. ಪ್ರೇಮ ಪಾಠಗಳು, ಪ್ರೀತಿ ಲೋಕಗಳೆಲ್ಲ ನನಗೆ ದರ್ಶನವಾಗುತ್ತಿದ್ದದ್ದು ಅವರಿಂದಲೇ. ಇದಾಗುತ್ತಿದ್ದಂತೆಯೇ ನಾಲ್ವಾರ್ ಜಾತ್ರೆ ನಡೆಯಿತು. ನನ್ನ ಮತ್ತೆ ಶೇಕ್ ಚಾಂದ್ ಮಟ್ಟಿಗೆ ಇದು ಬಹುಮುಖ್ಯವಾದ ಘಟನೆ. ಇಷ್ಟರವರೆಗೆ ಕಣ್ಣಲ್ಲೇ ಬಯಕೆಯನ್ನು ಹೇಳಿಕೊಳ್ಳುತ್ತಿದ್ದೆವಷ್ಟೇ, ವಚನ ಕೊಟ್ಟಿರಲಿಲ್ಲ. ಕೈ ಮೇಲೆ ಕೈ ಇಟ್ಟು, ಪರಸ್ಪರ ಕಣ್ಣುಗಳನ್ನೇ ಕಾಣುತ್ತಾ ಅಂತಃಸಾಕ್ಷಿಯಲ್ಲಿ ಮದುವೆಯಾಗುವುದಾಗಿ ತೀರ್ಮಾನಿಸಿದೆವು. ನಿನ್ನ ಬಿಟ್ಟು ಇನ್ನೊಬ್ಬರನ್ನು ಮದುವೆಯಾಗುವುದಿಲ್ಲ ಎಂದು ಇಬ್ಬರೂ ಹೇಳಿದ ರೀತಿ ಅಂದು ನಮ್ಮ ಪ್ರೀತಿಯ ಘನತೆಯನ್ನು ಹೆಚ್ಚಿಸಿತ್ತು. ಕಣ್ಣ ತುದಿಯ ಭಾವಗಳೆಲ್ಲ ಅಂದು ಮಾತಾಗಿ, ಮೌನವಾಗಿ ನಿರಾಳವಾಗಿತ್ತು.

ನಾಲ್ವಾರ್ ಜಾತ್ರೆ ಮುಗಿಸಿ ಮತ್ತೆ ಯಾದಗಿರಿಗೆ ಪಯಣ. ಮಾರನೇ ದಿನ ಸಂಜೆ ನಾಲ್ಕರ ಹೊತ್ತಿಗೆ ಶೇಕ್ ಚಾಂದ್ ಅವರಿಗೆ ತಕ್ಷಣವೇ ಊರಿಗೆ ಬರಬೇಕೆಂದು ಟೆಲಿಗ್ರಾಂ ಬಂತು. ಊರಲ್ಲಿದ್ದ ಅವರ ತಾಯಿಯ ಅನಾರೋಗ್ಯದಲ್ಲಿರುವ ಕಾರಣಕ್ಕೆ ತಡಮಾಡದೇ ಆದಷ್ಟು ಬೇಗನೇ ಬರಬೇಕೆಂದು ಅದರಲ್ಲಿತ್ತು. ವಿಷಯ ನನಗೂ ತಿಳಿಯಿತು. ಅವರೇ ಹೇಳುತ್ತಾರೆಂದು ಕಾದೆ. ಬಂದು ಹೊರಡುತ್ತೇನೆಂದಾಗ, ‘ಮರಳಿ ಬರುವುದು?’ ಎಂದೆ. ನನ್ನ ದುಗುಡ ಅವರಿಗೆ ತಿಳಿಯದ್ದೇನೂ ಅಲ್ಲವಲ್ಲಾ, ಎರಡೇ ದಿನಗಳ ಸಮಯವಕಾಶ ಕೇಳಿದರು. ಹೂಂಗುಡದೇ ಬೇರೆ ದಾರಿಯಾದರೂ ಏನಿತ್ತು?

ಬೆಳಕು ಮೂಡುವ ಮುನ್ನವೇ ಬೇಗನೇ ಶೇಕ್ ಚಾಂದ್ ಹೊರಟುಬಿಟ್ಟಿದ್ದರು. ಆರರ ಹೊತ್ತಾದರೂ ನಾನಿನ್ನೂ ಎಚ್ಚರಗೊಂಡಿರಲಿಲ್ಲ; ಕೋಣೆಯಲ್ಲಿ ಮಲಗಿಯೇ ಇದ್ದೆ. ಹಾಲ್‌ನಲ್ಲೇನೊ ಮಾತುಕತೆ ನಡೆಯುತ್ತಿರುವುದು ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಯಾರಿರಬಹುದೆಂದು ನಿಧಾನಕ್ಕೆ ಎದ್ದು ಬಂದು ನೋಡಿದರೆ ಗೋವಿಂದರೆಡ್ಡಿ! ನಿಜಕ್ಕೂ ಕುಸಿದುಬಿಟ್ಟೆ. ಬದುಕು ಎದುರಾಗಿಸುವ ಇಂತಹ ಸೋಜಿಗಕ್ಕೆ ಏನೆನ್ನಬೇಕು? ಪ್ರೀತಿ ಕೈ ಸೇರುವ ಮೊದಲೇ ಕೈ ಜಾರುವ ಅನುಭವಗಳೆಲ್ಲ ನನಗೆ ಹೊಸತಲ್ಲ. ಆದರೆ ಮನಸ್ಸು ಈ ನಿರಾಸೆಗಳನ್ನು ಅದೆಷ್ಟು ಬಾರಿ ಸಹಿಸೀತು ಹೇಳಿ!

ಗೋವಿಂದರೆಡ್ಡಿ ನನ್ನ ಹುಡುಕಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಬಾಂಬೆಗೂ ಹೋಗಿದ್ದರಂತೆ. ಹೇಳಿದ ಕಂಪೆನಿಗಳಿಗೆಲ್ಲ ಹೋಗಿ ಹುಡುಕಾಡಿದ್ದರು. ಅಲೆದಲೆದು ಕೊನೆಗೆ ನಾನಿದ್ದ ಊರಿಗೆ ಹೋಗಿ, ನನ್ನ ದೊಡ್ಡಪ್ಪ, ಚಿಕ್ಕಪ್ಪಂದಿರನ್ನೆಲ್ಲ ಭೇಟಿ ಮಾಡಿದ್ದರು. ‘ನಾನು ನಿಮ್ಮ ಮನೆಮಗಳನ್ನೇ ಮದುವೆಯಾಗುವುದು. ನಿಮ್ಮೆಲ್ಲರ ಒಪ್ಪಿಗೆ ಇದೆಯಲ್ಲಾ?’ ಹೀಗೆ ಕೇಳಿದ್ದಷ್ಟೇ ಅಲ್ಲ, ಬಟ್ಟೆಬರೆಗಳನ್ನೆಲ್ಲ ನೀಡಿ ಆಶೀರ್ವಾದ ಪಡೆದು ಬಂದಿದ್ದರು. ‘ಅವಳೇನಾದರೂ ಬಂದರೆ ನನಗೆ ಪತ್ರ ಬರೆಯಿರಿ’ ಎಂದು ಹೇಳಿಬಂದಿದ್ದರಂತೆ. ಅದೊಂದು ಸಾಲು ಇದೆಯಲ್ಲಾ, ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ ಎಂದು. ಹಾಗೆಯೇ ಆದದ್ದು. ಇದಾಗಿ ರಾಯಚೂರಿಗೆ ಹೋದರೆ, ಇವರಿಗೆ ಡಾನ್ಸರ್ ಕಮಲಾ ಸಿಕ್ಕಳು. ಮಲ್ಲಯ್ಯನ ಜಾತ್ರೆಗೆಂದು ಬಂದಿದ್ದವಳು, ಕ್ಯಾಂಪ್ ಮುಗಿಸಿ ರಾಯಚೂರು ಸೇರಿದ್ದಳು. ಜೀವನ ತಂದಿಕ್ಕುವ ಕಾಕತಾಳಿಯವೆಲ್ಲ ಬೆರಗು ಹುಟ್ಟಿಸುತ್ತದೆ! ನನ್ನ ಕುರಿತು, ಅಂತೆಯೇ ನನ್ನ ತಂದೆ ಈರಪ್ಪನವರ ಬಗ್ಗೆ ಹೇಳುತ್ತಿದ್ದಂತೆ ಎಲ್ಲ ಬಲ್ಲ ಕಮಲಾ ಸುಮ್ಮನಿರುತ್ತಾಳೆಯೇ? ‘ಮೈಲಾಪುರ ಜಾತ್ರಿ ಮುಗ್ಸಿ ಈಗ ಯಾದಗಿರಿಯಲ್ ಇದಾಳ್ ನೋಡ್ರಿ’ ಎಂದುಬಿಟ್ಟಳು. ಅವಳ ಮಾತಿನ ಫಲಶ್ರುತಿ ನನ್ನ ಕಣ್ಣೆದುರಿನ ದೃಶ್ಯ!

ನಾನು ಬರುವ ಮೊದಲೇ ಪರಿಚಯದ ಕಾರ್ಯಕ್ರಮವೆಲ್ಲ ಮುಗಿದಂತಿತ್ತು. ತಂದೆಯವರ ಕಾಲಿಗೆ ಬಿದ್ದು, ನನ್ನ ಮದುವೆಯಾಗಲೇಬೇಕೆಂಬ ಬೇಡಿಕೆ ಮಂಡನೆಯಾಗುತ್ತಿತ್ತು. ಸರಸ್ವತಿಯನ್ನು ಮದುವೆಯಾಗಿ ಕಂಪೆನಿಗೆ ಕರೆದುಕೊಂಡು ಹೋಗುವುದಾಗಿ, ಈಗ ಕಂಪೆನಿ ಗದಗಿನಲ್ಲಿರುವುದಾಗಿ ಹೇಳುತ್ತಿದ್ದರು. ಅಪ್ಪ ಕೂಡ ಕಂಪೆನಿಯ ಕುರಿತು ವಿಚಾರಿಸುತ್ತಿದ್ದರು. ಅವರ ಪಾಲಿಗದು, ಜವಾಬ್ದಾರಿಯ ಪ್ರಶ್ನೆಯಾಗಿತ್ತು. 1969ರ ಕಾಲಕ್ಕೆ ಒಂದು ಕಂಪೆನಿ ಕಟ್ಟುವುದು ಎಂದರೆ ಅದು ಸಾಮಾನ್ಯವಾಗಿರಲಿಲ್ಲ. ಕಲಾವಿದರನ್ನು ಕರೆಸುವುದು, ಅಗತ್ಯ ಸಾಮಾಗ್ರಿಗಳ ಪೂರೈಕೆ, ನೇಪಥ್ಯದಲ್ಲಿ ದುಡಿವವರು ಎಲ್ಲದಕ್ಕೂ ಲಕ್ಷ ಲಕ್ಷ ತಗಲುತ್ತಿತ್ತು. ಗೋವಿಂದರೆಡ್ಡಿ ಅವರು ಅದಾಗಲೇ ಎರಡೂವರೆ ಲಕ್ಷದಷ್ಟು ಹಣವನ್ನು ಖರ್ಚುಮಾಡಿದ್ದರು. ಎದುರಿದ್ದವರು ಹುಬ್ಬೇರಿಸುವುದು ಸಹಜವೇ. ಅಂತಹದ್ದರಲ್ಲಿ ತಂದೆಯೂ ಅಚ್ಚರಿಗೊಂಡರು. ಸಾಲದೆಂಬಂತೆ ಮದುವೆಯಾಗುವವ ಒಡವೆಯನ್ನೆಲ್ಲ ಪ್ರದರ್ಶಿಸಿದರೆ ಹೆಣ್ಣೊಬ್ಬಳ ತಂದೆಗೆ ಹೇಗೆನಿಸಬಹುದು? ಮಗಳು ಹಣವಂತರ ಮನೆ ಸೇರುತ್ತಾಳೆಂದರೆ ತಂದೆಯೊಳಗಿರುವ ಕನಸಿನ ಹಕ್ಕಿ ಗರಿಗೆದರದೆ ಇರುತ್ತದೆಯೇ!

ಏನು ಮಾಡಬೇಕೆಂದು ದಿಕ್ಕೇ ತೋಚದೆ, ದೇವರೆದುರು ನಿಂತೆ. ಕೈ ಮುಗಿದು, ಕುಸಿದು ಕೂತೆ. ಎಲ್ಲ ಕಳೆದ ಮೇಲೆ, ಈಗ ಬಂದು ಮತ್ತೆ ಕೂಡಬೇಕು ಎಂದರೆ ಬದುಕೆಂದರೆ ಇವರಿಗೆಲ್ಲ ಆಟವೇ? ಹೆಣ್ಣಿಗೂ ಅವಳದ್ದೇ ಆದ ಆಸೆಗಳಿರುತ್ತವೆ, ಅವಳ ಮನಸ್ಸು ಇದನ್ನು ಒಪ್ಪುತ್ತದೆಯೇ? ಯಾವ ಪ್ರಶ್ನೆ ಅವರ ಯೋಚನೆಯಲ್ಲೂ ಬರದು. ಜೋರಾಗಿ ಕೂಗಿ, ಅಳಬೇಕು ಎನಿಸಿತಾದರೂ ಮಾಡುವಂತಿಲ್ಲ. ಹೊರಗೆ ಕಾಣದ ಸಂಕೋಲೆಯನ್ನು ಈ ಸಮಾಜ ಹೆಣ್ಣಿಗೆ ತೊಡಿಸಿರುತ್ತದೆ. ಮಾತು ಹೇಗೆ ಹೊರಡೀತು?

‘ಸರಸು ಎಲ್ಲಿ?’ ಎಂದು ಗೋವಿಂದರೆಡ್ಡಿ ಅವರು ಕೇಳಿದರು. ‘ಒಳ್ಗೆ ಮಕ್ಕೊಂಡಾಳ’ ಎಂದು ತಂದೆಯವರು ಹೇಳಿದಾಗ ಸಮಾಧಾನವಾಯಿತು. ಅವರಿಬ್ಬರ ಮಾತುಕತೆಯ ನಡುವಲ್ಲೇ ನಡೆದುಬಂದೆ. ಗೋವಿಂದರೆಡ್ಡಿಯ ಕಣ್ಣುಗಳು ನನ್ನ ಕಾಣಲು ಕಾತರಿಸುತ್ತಿತ್ತು ಎಂಬುದು ಬಲ್ಲೆ. ಶೌಚಕ್ಕೆ, ನಿತ್ಯಕರ್ಮಗಳಿಗೆ ಹೋಗಿ ಬರುವುದಾಗಿ ಹೊರ ನಡೆದುಬಂದೆ. ಆಚೆ ಕಡೆ, ದಾವಲ್‌ಸಾಬ್ ನಿಂತಿದ್ದ. ‘ಅವರೆಲ್ಲಿ?’ ಎಂದು ಆಚೀಚೆ ಕತ್ತಾಡಿಸುತ್ತಿದ್ದೆ. ಆಗಲೇ ಹೋದನಲ್ಲಾ, ಎಂದ. ಏನಾಗುತ್ತಿದೆ ಎಂಬ ವಿಷಯವನ್ನು ಅವನಿಗೆ ಹೇಳಿದಾಗ, ಸನ್ನಿವೇಶದ ಗಾಂಭೀರ್ಯತೆ ಅವನಿಗೆ ಅರ್ಥವಾಯಿತು. ‘ಅಣ್ಣ ಇನ್ನೇನು ದಾರಿಯಲ್ಲಿರಬಹುದು. ಒಂದೇ ದಾರಿ. ಈಗ ಹೊರಟರೂ ಅವನನ್ನು ಸೇರಬಹುದು’ ಎಂದು ಕರೆದುಕೊಂಡು ಹೊರಟ. ಬಸ್ಸೇರಿ ಊರಿನ ಕಡೆಗೆ ನಡೆದೇಬಿಟ್ಟೆವು. ಸಿನಿಮೀಯ ರೀತಿಯಲ್ಲಿ ಎಲ್ಲವೂ ನಡೆಯಿತು! ಊರು ತಲುಪಿದ ಮೇಲೆ ಮನೆಗೆ ಕರೆದುಕೊಂಡು ಹೋಗದೆ, ಮಡಿವಾಳಪ್ಪ ಎಂಬ ಅಗಸರ ಮನೆಯಲ್ಲಿ ಉಳಿಯಲು ಬಿಟ್ಟರು.

(ಹಿಂದಿನ ಕಂತು: “ಕಾಡಿದ” ಪ್ರೀತಿ….)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ