ನನಗೆ ಈ ವಿಷಯದಲ್ಲಿ ಇನ್ನಷ್ಟು ಆತಂಕ ತಂದ ಅಂಶವೆಂದರೆ ತನ್ನ ಸಹಪಾಠಿಗಳ ಮುಂದೆ ಉಚ್ಚಾರ ತಪ್ಪಿಸಿದ್ದು ತುಸು ಅವಳಿಗೆ ನಾಚಿಕೆ ತಂದಿತ್ತಾದರೂ ತನ್ನ ತಾಯ್ನುಡಿಯ ಸರಳ ಪದಗಳ ಉಚ್ಚಾರವು ತನಗೆ ಕಷ್ಟವಾಗುತ್ತಿದೆಯಲ್ಲ, ಅಯ್ಯೋ ಎಂಬ ಬೇಸರವೇನೂ ಆಕೆಯಲ್ಲಿ ಕಾಣಿಸಲಿಲ್ಲ. ಆ ಬಗ್ಗೆ ನನ್ನ ಹತ್ತಿರ ಆಕೆ ಯಾವ ಕಾಳಜಿಯನ್ನೂ ವ್ಯಕ್ತಪಡಿಸಲಿಲ್ಲ. ನಮ್ಮ ನಾಟ್ಯಶಾಲೆಗೆ ಬರುವ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಮಕ್ಕಳು ಆಂಗ್ಲ ಮಾಧ್ಯಮದ ಶಾಲೆಗೆ ಹೋಗುವುದು ಮಾಮೂಲು. ಇವರಲ್ಲಿ ಕೆಲವರು ತಕ್ಕಮಟ್ಟಿಗೆ ಕನ್ನಡವನ್ನು ಒದುವುದು ಬರೆಯುವುದು ಮಾಡುತ್ತಾರೆ, ಉಳಿದವರು ಮೇಲೆ ಪ್ರಸ್ತಾಪಿಸಿದ ವಿದ್ಯಾರ್ಥಿನಿಯಂತೆ ಚಿಕ್ಕ ಚಿಕ್ಕ ಪದಗಳನ್ನು ಉಚ್ಚರಿಸಲೂ ಕಷ್ಟ ಪಡುತ್ತಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೇಳನೆಯ ಬರಹ
ಕುವೆಂಪು ಅವರು ತಮ್ಮ ಕವನವೊಂದರಲ್ಲಿ ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು’ ಎಂಬ ಮಾತನ್ನು ಹೇಳಿದ್ದಾರಲ್ಲವೆ? (ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು … ಎಂದು ಪ್ರಾರಂಭವಾಗುವ ಕವಿತೆ ಅದು). ಅಸಲಿಗೆ ಕನ್ನಡತನ ಎಂದರೇನು? ಅದು ನಾಡೇ, ನುಡಿಯೇ, ಅದು ರಾಜಕೀಯ ಗಡಿಯೇ? ಮ. ರಾಮಮೂರ್ತಿಯವರು ರೂಪಿಸಿದ ಹಳದಿ ಕೆಂಪು ಬಾವುಟವೇ? ಕನ್ನಡ ಪ್ರದೇಶದವರು ಮಾಡುವ ಧಾರವಾಡ ಪೇಡ, ಮೈಸೂರು ಪಾಕಿನಂತಹ ಕನ್ನಡ ದೇಸಿ ತಿಂಡಿತಿನಿಸೇ? ಮೈಸೂರು ರೇಷ್ಮೆ, ಇಳಕಲ್ ಸೀರೆಯಂತಹ ಅವರ ದೇಸಿ ಉಡುಗೆ ತೊಡುಗೆಯೇ? ಕನ್ನಡದ ಗಾದೆಮಾತು, ನಾಣ್ಣುಡಿ, ಕವಿನುಡಿಗಳಲ್ಲಿ ಕಂಡುಬರುವ ಕನ್ನಡ ವಿವೇಕವೇ? ಅಥವಾ ಇದೆಲ್ಲ ಸೇರಿ ಹಾಗೂ ಇದೆಲ್ಲವನ್ನೂ ಮೀರಿ ಕನ್ನಡಿಗರ `ಹೃದಯ’ದಲ್ಲಿ ಸೇರಿಹೋಗಿರುವ `ನಾನು ಕನ್ನಡದವನು’ ಎಂಬ ಅಭಿಮಾನವೇ? ಕನ್ನಡ ರಾಜ್ಯೋತ್ಸವದ ಈ ತಿಂಗಳಲ್ಲಿ ಈ ಬಗ್ಗೆ ಮರುಚಿಂತಿಸುವ ಅಗತ್ಯ ಇದೆ. ನನ್ನ ವಿದ್ಯಾಗುರುಗಳಾದ ಹಾಗೂ ಈಚೆಗೆ ನಮ್ಮನ್ನಗಲಿದ ಪ್ರಸಿದ್ಧ ಭಾಷಾ ವಿಜ್ಞಾನಿ ಕೆವಿಎನ್ ತಮ್ಮ ಒಂದು ಭಾಷಣದಲ್ಲಿ `ನಮ್ಮ ದೇಹದೊಳಗೆ ಕನ್ನಡ ಎಲ್ಲಿದೆ?’ ಎಂಬ ಪ್ರಶ್ನೆ ಕೇಳಿದ್ದು ನೆನಪಾಗುತ್ತಿದೆ. ಇದೇ ಪ್ರಶ್ನೆಯನ್ನು ಕನ್ನಡತನದ ಬಗೆಗೂ ಈಗ ನಾವು ಕೇಳಿಕೊಳ್ಳಬೇಕಿದೆ ಅನ್ನಿಸುತ್ತಿದೆ.
ಇಲ್ಲಿ ಹೀಗೆ ಮರುಚಿಂತಿಸಲು, ಅನೇಕ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನೆಲೆಗಳ ಸಾಮುದಾಯಿಕ ಕಾರಣಗಳು ಇರುವಂತೆ, ಈ ಲೇಖಕಿಗೆ ಇತ್ತೀಚೆಗೆ ಆದ ಎರಡು ವೈಯಕ್ತಿಕ ಅನುಭವಗಳು ಕೂಡ ಒಂದು ಕಾರಣ.
ಕಳೆದ ಮೂವತ್ತೈದು ವರ್ಷಗಳಿಂದ ನಡೆಸಿಕೊಂಡು ಬಂದಿರುವ ನಮ್ಮ ಭರತನಾಟ್ಯ ಸಂಸ್ಥೆಯಾದ `ಚಿತ್ರನಾಟ್ಯ’ದಲ್ಲಿ ದೈನಂದಿನ ಮಾತುಕತೆ, ಕಾರ್ಯಕ್ರಮಗಳ ನಿರೂಪಣೆ, ಹಾಡುಗಳ ಆಯ್ಕೆಯಲ್ಲಿನ ಒಲವು ಎಲ್ಲವೂ ಕನ್ನಡವೇ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇಂಗ್ಲಿಷ್, ಹಿಂದಿಯನ್ನು ಬಳಸುತ್ತೇವೆ. ಕಳೆದ ವಾರ, `ಮಾಧ್ಯಮಿಕ-ಪ್ರಥಮ’ ಎಂಬ ಹಂತದ (3-4 ವರ್ಷ ನಿರಂತರವಾಗಿ ನಾಟ್ಯ ಕಲಿತರೆ ಬರುವ ಹಂತವಿದು)ನಾಟ್ಯ ಕಲಿಯುತ್ತಿರುವ ವಿದ್ಯಾರ್ಥಿನಿಯರ ಒಂದು ತಂಡಕ್ಕೆ, `ಕಿಂಕಿಣಿ’ ಎಂಬ ಪದದ ಬಗ್ಗೆ ಒಂದಿಷ್ಟು ಪಾಠವನ್ನು ಒದಗಿಸಿ, ಓದಲು ಹತ್ತು-ಹದಿನೈದು ನಿಮಿಷ ಸಮಯ ಕೊಟ್ಟು, ಆನಂತರ `ಆ ಪಾಠವನ್ನು ಪುಸ್ತಕ ನೋಡದೆ ನನ್ನ ಮುಂದೆ ಒಪ್ಪಿಸಬೇಕು’ ಎಂದು ಹೇಳಿದ್ದೆ. ಭರತನಾಟ್ಯ ಕಲಿಯುವವರು ತೆಗೆದುಕೊಳ್ಳುವ ವಿವಿಧ ಮಂಡಳಿಯ ಪರೀಕ್ಷೆಗಳಲ್ಲಿ ಶಾಸ್ತ್ರ ವಿಷಯದ ಬರವಣಿಗೆಯ ಪತ್ರಿಕೆಯೂ ಸೇರಿರುತ್ತದೆ. ಹೀಗಾಗಿ ನಾಟ್ಯವನ್ನು ತಮ್ಮ ಕೈ-ಮೈಗಳಿಂದ ಪ್ರಾಯೋಗಿಕವಾಗಿ ಮಾಡಲು ನಾವು ಹೇಳಿಕೊಡುವಂತೆ ಹಸ್ತಮುದ್ರೆಯ ಶ್ಲೋಕಗಳು, ಭರತನಾಟ್ಯದ ನೃತ್ತ, ನೃತ್ಯ, ನಾಟ್ಯ, ಅಡವುಗಳಂತಹ ತಾಂತ್ರಿಕ ವಿಷಯಗಳು, ಆ ಕಲೆಯ ಚರಿತ್ರೆ ಮುಂತಾದವನ್ನೂ ಶಾಲಾ ತರಗತಿಗಳಲ್ಲಿ ಓದುಪಾಠ ಹೇಳಿಕೊಡುವಂತೆ ಹೇಳಿಕೊಡುತ್ತೇವೆ. ಈ ಕಾರಣದಿಂದಾಗಿ ವಿದ್ಯಾರ್ಥಿಗಳು ಓದಿ ಬರೆದು ಮಾಡುವಂತಹ ಸನ್ನಿವೇಶವು ನಾಟ್ಯ ತರಗತಿಗಳಲ್ಲಿ ಇದ್ದೇ ಇರುತ್ತದೆ. ಅದಕ್ಕಾಗಿಯೇ ನಾನು ಆ ವಿದ್ಯಾರ್ಥಿನಿಯರ ತಂಡಕ್ಕೆ ಓದಲು `ಕಿಂಕಿಣಿ’ ಪಾಠ ಕೊಟ್ಟದ್ದು.
ಸರಿ, ಕೊಟ್ಟ ಸಮಯದ ನಂತರ ಆ ತಂಡದ ವಿದ್ಯಾರ್ಥಿನಿಯರು ಬಂದು ನನ್ನ ಮುಂದೆ ಪಾಠ ಒಪ್ಪಿಸುತ್ತಿದ್ದರು. ಅವರಲ್ಲಿ, ಸುಮಾರು ಹದಿನೆಂಟು ವಯಸ್ಸಾಗಿದ್ದ ನನ್ನ ವಿದ್ಯಾರ್ಥಿನಿಯೊಬ್ಬಳಿಗೆ ಎಷ್ಟು ಕಷ್ಟ ಪಟ್ಟರೂ `ಕರಿದಾರ’ ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗಲಿಲ್ಲ. ಕಿಂಕಿಣಿಗಳನ್ನು ಅಂದರೆ ಚಿಕ್ಕ ಚಿಕ್ಕ ಗೆಜ್ಜೆಗಳನ್ನು ಕಪ್ಪು ಬಣ್ಣದ ದಾರ ಅಂದರೆ ಕರಿದಾರದಲ್ಲಿ ಕಟ್ಟಿರುತ್ತಾರೆ. ಈ ವಿವರದಲ್ಲಿ ಬರುವ ಕರಿದಾರವನ್ನು ಅವಳು ಕರಿದಾರಿ, ಕರಿದಾರಿ ಎಂದೇ ಉಚ್ಚರಿಸುತ್ತಿದ್ದಳು. ಬಹಳ ಸಲ ತಿದ್ದಿದರೂ ಅವಳಿಗೆ ಸರಾಗವಾಗಿ ಈ ಪದ ಬಳಸಿ ಸಂಬಂಧಿತ ವಾಕ್ಯವನ್ನು ಹೇಳಲು ಸಾಧ್ಯ ಆಗಲೇ ಇಲ್ಲ. ಹಾಗೆಂದು ಆಕೆ ಮಂದಬುದ್ಧಿಯವಳೇನಲ್ಲ. ನಾಟ್ಯ ಕಲಿಯುವುದರಲ್ಲಾಗಲೀ, ಸಾಮಾನ್ಯ ದೈನಂದಿನ ಮಾತುಕತೆಯಲ್ಲಾಗಲೀ ಯಾವ ತೊಂದರೆಯೂ ಇಲ್ಲದೆ ಬಹಳ ಚುರುಕಾಗಿದ್ದಾಳೆ. ಮನೆಯಲ್ಲೂ ಅವಳ ತಾಯ್ನುಡಿ ಕನ್ನಡವೇ. ಹೀಗಿದ್ದರೂ ಕರಿದಾರ ಎಂಬ ಸರಳವಾದ ಪದವನ್ನು ಈ ಹುಡುಗಿಗೆ ಉಚ್ಚರಿಸಲು ಆಗಲಿಲ್ಲ ಎಂಬ ವಿಷಯ ನನ್ನನ್ನು ತುಂಬ ಚಿಂತೆಗೀಡು ಮಾಡಿತು.
ನನಗೆ ಈ ವಿಷಯದಲ್ಲಿ ಇನ್ನಷ್ಟು ಆತಂಕ ತಂದ ಅಂಶವೆಂದರೆ ತನ್ನ ಸಹಪಾಠಿಗಳ ಮುಂದೆ ಉಚ್ಚಾರ ತಪ್ಪಿಸಿದ್ದು ತುಸು ಅವಳಿಗೆ ನಾಚಿಕೆ ತಂದಿತ್ತಾದರೂ ತನ್ನ ತಾಯ್ನುಡಿಯ ಸರಳ ಪದಗಳ ಉಚ್ಚಾರವು ತನಗೆ ಕಷ್ಟವಾಗುತ್ತಿದೆಯಲ್ಲ, ಅಯ್ಯೋ ಎಂಬ ಬೇಸರವೇನೂ ಆಕೆಯಲ್ಲಿ ಕಾಣಿಸಲಿಲ್ಲ. ಆ ಬಗ್ಗೆ ನನ್ನ ಹತ್ತಿರ ಆಕೆ ಯಾವ ಕಾಳಜಿಯನ್ನೂ ವ್ಯಕ್ತಪಡಿಸಲಿಲ್ಲ. ನಮ್ಮ ನಾಟ್ಯಶಾಲೆಗೆ ಬರುವ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಮಕ್ಕಳು ಆಂಗ್ಲ ಮಾಧ್ಯಮದ ಶಾಲೆಗೆ ಹೋಗುವುದು ಮಾಮೂಲು. ಇವರಲ್ಲಿ ಕೆಲವರು ತಕ್ಕಮಟ್ಟಿಗೆ ಕನ್ನಡವನ್ನು ಒದುವುದು ಬರೆಯುವುದು ಮಾಡುತ್ತಾರೆ, ಉಳಿದವರು ಮೇಲೆ ಪ್ರಸ್ತಾಪಿಸಿದ ವಿದ್ಯಾರ್ಥಿನಿಯಂತೆ ಚಿಕ್ಕ ಚಿಕ್ಕ ಪದಗಳನ್ನು ಉಚ್ಚರಿಸಲೂ ಕಷ್ಟ ಪಡುತ್ತಾರೆ. ಹಾಗೂ ತಮಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂಬ ಅಂಶವನ್ನು ಅವರು ಒಂದು ಅವಮಾನಕರವಾದ, ಚಿಂತನಾರ್ಹ ವಿಷಯ ಎಂದೇನೂ ಅವರು ಭಾವಿಸಿದಂತೆ ತೋರುವುದಿಲ್ಲ.
ಕರಿದಾರ ಎಂಬ ಪದವನ್ನು ಉಚ್ಚರಿಸಲು ಕಷ್ಟಪಟ್ಟ ನನ್ನ ವಿದ್ಯಾರ್ಥಿನಿಯು ಆ ವಯಸ್ಸಿನ ಕನ್ನಡನಾಡಿನ ಹುಡುಗ ಹುಡುಗಿಯರ ಅಂದರೆ ಕನ್ನಡಿಗರ ಒಂದು ಗುಂಪಿನ ಪ್ರತಿನಿಧಿ ಅಲ್ಲವೆ? ಉಡಲು, ಉಣ್ಣಲು ಕೊರತೆ ಇಲ್ಲದಂತಹ ಮನೆಯಿಂದ ಬಂದ ಇಂತಹ ಯುವ `ಕನ್ನಡಿಗರು’ ಕನ್ನಡವನ್ನು ಅಥವಾ ಕನ್ನಡತನವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವಲ್ಲ, ಏಕೆ? ಇನ್ನೂ ಇಪ್ಪತ್ತು ತುಂಬದ ಎಳೆಯರನ್ನು ಅವರ ಇಂತಹ ಭಾಷಾಕೊರತೆ ಅಥವಾ `ನಿರಭಿಮಾನ’ಕ್ಕಾಗಿ, ನಿಶ್ಚಿಂತ ಅಜ್ಞಾನಕ್ಕಾಗಿ ಕಟುವಾಗಿ ಟೀಕಿಸುವ ಮುನ್ನ ನಾವು ಹಿರಿಯರು ಅಂದರೆ ಕನ್ನಡ ನಾಡಿನ ತಾಯ್ತಂದೆಯರು ಮತ್ತು ಶಿಕ್ಷಕರು ತಪ್ಪಿದ್ದೆಲ್ಲಿ ಎಂದು ಕೇಳಿಕೊಳ್ಳಬೇಕು ಅನ್ನಿಸುತ್ತೆ.
ಹಾಂ, ಅಂದ ಹಾಗೆ ಇನ್ನೊಂದು ಅನುಭವ ನಾನು ಕೆಲಸ ಮಾಡುವ ವಿದ್ಯಾಲಯದಲ್ಲಿ ಆಗಿದ್ದು. ಸರ್ಕಾರಿ ವ್ಯವಸ್ಥೆಯಲ್ಲಿ ಖಾಯಂ ಹುದ್ದೆಗಳಿಗೆ ನೇಮಕಾತಿಗಳು ಸಾಕಷ್ಟು ಆಗದಿರುವ ಹಿನ್ನೆಲೆಯಲ್ಲಿ ನಮ್ಮ ಮಹಾರಾಣಿ ವಿಶ್ವವಿದ್ಯಾಲಯದಲ್ಲಿ ಕಸ ಗುಡಿಸಿ ಎತ್ತಿ ಹಾಕುವ ಜಾಡಮಾಲಿಗಳ ಕೆಲಸಕ್ಕೆ ಸಾಮಾನ್ಯವಾಗಿ ಹೊರಗುತ್ತಿಗೆ ನೌಕರರನ್ನು ತೆಗೆದುಕೊಂಡಿರುತ್ತಾರೆ. ವಿದ್ಯಾಲಯಕ್ಕೆ ಬೆಳಿಗ್ಗೆ ಮೊಟ್ಟ ಮೊದಲು ಕೆಲಸಕ್ಕೆ ಹಾಜರಾಗುವವರು ಈ ನೌಕರರು. ಅದೇನು ಕಾರಣವೋ ಏನೊ ನಮ್ಮ ಸಂಸ್ಥೆಯಲ್ಲಿ ಈ ಕೆಲಸ ಮಾಡುವವರಲ್ಲಿ ಗರಿಷ್ಠ ಮಂದಿ ತಮಿಳು ಭಾಷೆಯವರು. ಬೆಳಿಗ್ಗೆ ಕಾಲಿಟ್ಟ ತಕ್ಷಣ ಕಿವಿಗೆ ಬೀಳುವುದು ಆ ಕೆಲಸಗಾರರು ತುಂಬ ಜೋರು ದನಿಯಲ್ಲಿ ಬಿಡುಬೀಸಾಗಿ ಮಾತಾಡುವ ತಮಿಳು ಭಾಷೆ. ಯಾರಾದರೂ ಅಪರಿಚಿತರು ಮೊಟ್ಟ ಮೊದಲು ನಮ್ಮ ವಿದ್ಯಾಲಯಕ್ಕೆ ಕಾಲಿಟ್ಟರೆ `ಏನಪ್ಪಾ ಇದು? ಕನ್ನಡ ನಾಡೋ ಅಲ್ಲವೊ ಈ ಜಾಗ? ಎಂಬ ಪ್ರಶ್ನೆ ಕೇಳಿಯಾರು. ಯಾಕೆ ನಮ್ಮ ಸಂಸ್ಥೆಗಳಲ್ಲಿ ಕನ್ನಡತನ ಮಾಯವಾಗಿರುವ ಇಂತಹ ಸನ್ನಿವೇಶಗಳು ಉಂಟಾಗುತ್ತವೆ? ಸರೋಜಿನಿ ಮಹಿಷಿಯವರ ವರದಿ ಇಲ್ಲಿ ಯಾಕೆ ಜಾರಿಯಾಗುವುದಿಲ್ಲ? ಕನ್ನಡತನವು ಉದ್ಯೋಗ ಸ್ಥಳಗಳಲ್ಲಿ ಅಲ್ಲಲ್ಲಿ ಆಗಾಗ ಕಾಣೆಯಾಗಲು ವ್ಯವಸ್ಥೆ ಕಾರಣವೋ, ನಾವು ಕನ್ನಡಿಗರು ಕಾರಣವೋ?

ಸರಿ, ಈ ಬರಹದ ಪ್ರಾರಂಭದಲ್ಲಿ ಕೇಳಿಕೊಂಡ ಕನ್ನಡತನ ಅಂದರೆ ಏನು ಎಂಬ ಪ್ರಶ್ನೆಗೆ ಮರಳಿ ಬರೋಣ.
ಕನ್ನಡತನ ಕೇವಲ ನಾಡಾಗಿರಲಾರದು. ಏಕೆ ಗೊತ್ತೆ? ಕೇವಲ ನಾಡಾದರೆ ಕರ್ನಾಟಕವನ್ನು ಬಿಟ್ಟು ಬೇರೆ ನಾಡುಗಳಲ್ಲಿಯೂ ಕನ್ನಡ ನುಡಿಯುವವರು, ಕನ್ನಡತನ ಇರುವವರು ಇರುತ್ತಾರಲ್ಲವೆ? ಇಡೀ ವಿಶ್ವದಲ್ಲಿ ಕನ್ನಡ ಮಾತಾಡುವವರು ನೆಲೆಸಿದ್ದಾರೆ ಎಂದ ಮೇಲೆ ಕನ್ನಡತನವು ಕರ್ನಾಟಕ ಎಂಬ ರಾಜ್ಯದ ಗಡಿಗೆ ಸೀಮಿತವಾಗುವುದಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿ, ಮನೆಯಲ್ಲಿ ಕನ್ನಡ ಮಾತಾಡುವ ವಾತಾವರಣ ಇದ್ದು ಬಾಲ್ಯದಲ್ಲಿ ಕನ್ನಡ ಕಲಿತವರು ಮುಂದೆ ಬೆಳೆದ ಮೇಲೆ ಎಲ್ಲೇ ನೆಲೆಸಿದರೂ ಅವರಲ್ಲಿ ನುಡಿ, ಬದುಕುವ ವಿಧಾನಗಳ ಮಟ್ಟಿಗಿನ ಕನ್ನಡತನ ಇದ್ದೇ ಇರುತ್ತದೆ.
ಇನ್ನು ಕನ್ನಡತನ ಎಂಬುದು ಕನ್ನಡ ನುಡಿ ಎಂದಾದರೆ ಕನ್ನಡ ಮಾತಾಡುವವರೆಲ್ಲ ಅದನ್ನು ಗಂಭೀರವಾಗಿ ಏಕೆ ತೆಗೆದುಕೊಳ್ಳಲ್ಲ ಎಂಬ ಪ್ರಶ್ನೆ ಮೂಡುತ್ತೆ. ನಾನು ಈ ಮೊದಲು ಪ್ರಸ್ತಾಪಿಸಿದ ನಮ್ಮ ನಾಟ್ಯಶಾಲೆಯ `ಕರಿದಾರ’ದ ಹುಡುಗಿ, ನಮ್ಮ ವಿದ್ಯಾಲಯದ ಉದ್ಯೋಗ ವ್ಯವಸ್ಥೆ ಇದಕ್ಕೆ ಉದಾಹರಣೆ.
*****
ಇಂದು ತುಂಬ ಸುದ್ದಿ ಮಾಡುತ್ತಿರುವ ನೂತನ ಪೀಳಿಗೆಯ (ಝೆನ್ ಝೀ) `ಕನ್ನಡತನ’ದ ಬಗ್ಗೆ ನನಗೆ ಕುತೂಹಲ ಇದೆ. ಆ ಪೀಳಿಗೆಯ ನನ್ನ ಕನ್ನಡ ಎಂಎ ವಿದ್ಯಾರ್ಥಿನಿಯೊಬ್ಬಳು ಮೊನ್ನೆ ಹೀಗೆ ಹೇಳಿದಳು – `ಮೇಡಂ, ಕನ್ನಡವನ್ನು ಐಚ್ಛಿಕ ವಿಷ್ಯವಾಗಿ ತಗೊಳ್ಳದೆ ಬೇರೆ ಬೇರೆ ವಿಷ್ಯ ಓದ್ತಾ ಇರೋ ನನ್ನ ಗೆಳತೀರು, ಸಹಪಾಠಿಗಳು ಕನ್ನಡ ರಾಜ್ಯೋತ್ಸವದ ದಿನ ತಮ್ಮ ವಾಟ್ಸಾಪ್ನ ಸ್ಟೇಟಸ್ (ಸದ್ಯಸ್ಥಿತಿ ಎಂಬ ಪದ ಬಳಸಬಹುದೆ ಸ್ಟೇಟಸ್ ಪದಕ್ಕೆ ಸಂವಾದಿಯಾಗಿ?) ನಲ್ಲಿ ಕನ್ನಡದ ಬಾವುಟ ಹಾಕ್ಕೊಳ್ಳೋದು ಕನ್ನಡತನದ ಇನ್ಯಾವ ವಿಷಯದ ಬಗ್ಗೆಯೂ ಜಾಸ್ತಿ ತಲೆ ಕೆಡಿಸಿಕೊಳ್ಳಲ್ಲ, ಇವರು ಒಂಥರಾ `ಸ್ಟೇಟಸ್ ಕನ್ನಡಿಗರು; ಮೇಡಂ ಅಂದಳು. ಅವಳ ಗಮನಿಕೆ ಒಂದು ಮಟ್ಟದಲ್ಲಿ ವಸ್ತುನಿಷ್ಠ ಅನ್ನಿಸಿತು ನನಗೆ.
ವಾಸ್ತವಿಕ ಬದುಕಿನ ಒಂದು ಅಂಶ ಅಂದರೆ ಉಡುಪು. ನನ್ನ ವಿದ್ಯಾರ್ಥಿನಿ `ಸ್ಟೇಟಸ್ ಕನ್ನಡಿಗರು’ ಎಂದಾಗ ಆ ಪೀಳಿಗೆ ಅಂದರೆ ಝೆನ್ ಝೀಯ ಉಡುಪಿನ ಬಗ್ಗೆಯೂ ಯೋಚಿಸಿದೆ ನಾನು. ವಿಶ್ವದಾದ್ಯಂತ ಇಂದು ಗಂಡು ಹೆಣ್ಣು ಇಬ್ಬರೂ ಆರಾಮದಾಯಕ, ಸುಲಭ ಅನ್ನುವ ಕಾರಣಕ್ಕಾಗಿ ಜೀನ್ಸ್ ಪ್ಯಾಂಟ್/ಪೈಜಾಮ/ಟೀ ಶರಟಿನ ಒಂದು ರೀತಿಯು ಸಮವಸ್ತçದಂತಹ ಉಡುಪಿಗೆ ಮಾರು ಹೋಗಿರುವುದು ನಮಗೆ ಗೊತ್ತಿರುವ ವಿಷಯವೇ. ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಇದರ ಅನುಭವ ಆಗಿರುತ್ತದೆ. ಇಪ್ಪತ್ತು-ಮೂವತ್ತರ ಆಸುಪಾಸಿನ ಯುವಕ-ಯುವತಿಯರು ಎಲ್ಲೇ ಹತ್ತಿದರೂ, ಎಲ್ಲೇ ಇಳಿದರೂ ಯಾವುದೇ ಭಾಷೆ ಮಾತಾಡುತ್ತಿದ್ದರೂ ಉಡುಪು ಮಾತ್ರ ಅದೇ ಶರಟು, ಅದೇ ಪ್ಯಾಂಟು. ಕೇಶಶೈಲಿ ಸಹ ಹೆಚ್ಚು ಕಡಿಮೆ ಅದದೇ ಆಗಿರುತ್ತದೆ. ಜಾಗತೀಕರಣದ ಬಗ್ಗೆ ಚರ್ಚಿಸುವಾಗ ಮಾರುಕಟ್ಟೆಯಿಂದ ಚಾಲನೆಗೊಂಡ ಏಕರೂಪತೆ ಇಲ್ಲಿನ ಉಡುಗೆ ತೊಡುಗೆಗಳಲ್ಲಿ ಕಾಣಿಸುತ್ತದೆ.
ಜಾಗತೀಕರಣವು ಸ್ಥಳೀಯ ಸಂಸ್ಕೃತಿಗಳಿಗೆ ಉಂಟು ಮಾಡುವ ಅಪಾಯಗಳನ್ನು ಪಟ್ಟಿ ಮಾಡುವಾಗ ಆಹಾರ ಹಾಗೂ ಉಡುಗೆಗಳಲ್ಲಿನ ಜಾಗತಿಕ ಏಕರೂಪತೆಯ ಅಪಾಯವನ್ನು ಮುಖ್ಯವಾಗಿ ಮುನ್ಸೂಚಿಲಾಗಿತ್ತು. ಲಂಗ-ದಾವಣಿ, ಪಂಚೆ, ಸೀರೆಗಳಂತಹ ಕನ್ನಡದೇಸಿ ಉಡುಪು ಯುವಜನತೆಯ ವೃತ್ತಿ ಸನ್ನಿವೇಶದಿಂದ ಸಾಕಷ್ಟು ಮರೆಯಾಗಿರಲು ಇದೇ ಕಾರಣ.
ಹಿರಿಯ ಚಿಂತಕರಾದ ನಾಡೋಜ ಶ್ರೀ ಬರಗೂರು ರಾಮಚಂದ್ರಪ್ಪ ತಮ್ಮ ಕನ್ನಡಾಭಿಮಾನ ಎಂಬ ಹೊತ್ತಗೆಯಲ್ಲಿ ಹೀಗೆ ಹೇಳಿದ್ದಾರೆ – ಸಮಕಾಲೀನ ಅಗತ್ಯಗಳಿಗೆ ಕನ್ನಡವನ್ನು ಸಜ್ಜುಗೊಳಿಸಬೇಕು ಎಂದು ಹೇಳುವಾಗ ಕನ್ನಡಾಭಿಮಾನದ ಸ್ವರೂಪದ ಪ್ರಶ್ನೆಯೂ ಅದರಲ್ಲಿ ಅಡಗಿದೆ. ಒಂದು ಕಾಲದಲ್ಲಿ ಕನ್ನಡದ ಸಂಗೀತಗಾರರಿಗೆ ಅವಕಾಶ ಕೊಡಿ ಎನ್ನುವುದೇ ಕನ್ನಡಾಭಿಮಾನದ ಪ್ರಮುಖ ಹೆಜ್ಜೆಯಾಗಿತ್ತು. ಕನ್ನಡ ಚಲನಚಿತ್ರಗಳನ್ನು ಬೆಂಗಳೂರಿನ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬೇಕೆಂದು ಒತ್ತಾಯಿಸುವುದೇ ದೊಡ್ಡ ಕನ್ನಡ ಹೋರಾಟವಾಗಿತ್ತು… ಕನ್ನಡದಲ್ಲಿ ಮಾತಾಡುವ ಜನರೇ ಇಲ್ಲ ಎನ್ನುವುದರಿಂದ ಹಿಡಿದು ಬೆಂಗಳೂರು ಕನ್ನಡಿಗರ ಕೈತಪ್ಪುತ್ತದೆಯೆಂಬ ಭಯ ಬಿತ್ತುವವರೆಗೂ ಕನ್ನಡಾಭಿಮಾನ ಪ್ರಕಟವಾಗಿದೆ. ಅಂದಂದಿನ ಅಗತ್ಯಕ್ಕನುಗುಣವಾಗಿ ಇವು ಅಗತ್ಯ ಕೆಲಸಗಳೇ ಆಗಿವೆ. ಆದರೆ ನಾವು ಈಗಲೂ ಇಷ್ಟರಲ್ಲೇ ಇರಬೇಕೆ ಅಥವಾ ಇವನ್ನೂ ಒಳಗೊಂಡಂತೆ ಹೊಸ ಸಂದರ್ಭದ ಹೊಸ ಸವಾಲುಗಳಿಗೆ ಉತ್ತರ ಹುಡುಕುವ ರಚನಾತ್ಮಕ ಕೆಲಸಗಳಲ್ಲಿ ಕನ್ನಡಾಭಿಮಾನವನ್ನು ಕಂಡುಕೊಳ್ಳಬೇಕೆ? ಕನ್ನಡಪರ ರೋಚಕತೆ ಬೇಕೆ? ರಚನಾತ್ಮಕತೆ ಬೇಕೆ?” (ಪುಟ.41, ಕನ್ನಡಾಭಿಮಾನ).

ಬಹುಶಃ ಕನ್ನಡತನ ಎಂದರೆ ಅಸ್ಮಿತೆಯನ್ನು ಕುರಿತ ಒಂದು ಗಾಢ ಭಾವನೆ ಹಾಗೂ ಎಚ್ಚರದ ಆಯ್ಕೆಗಳ ಸಮ್ಮಿಲನ. ಕನ್ನಡದ ವಿವೇಕವು ಗಮನಿಸಿರುವಂತೆ ಕನ್ನಡ ಉಳಿಯುವುದು, ಬೆಳೆಯುವುದು ಅಂದರೆ ಕನ್ನಡಿಗರು ಉಳಿಯುವುದು, ಬೆಳೆಯುವುದು ಎಂದು ಅರ್ಥ. ಕನ್ನಡದಲ್ಲಿ ಅನ್ನ ಹುಟ್ಟಿದರೆ ಮಾತ್ರ ಕನ್ನಡತನ ಉಳಿಯುತ್ತದೆ ಎಂಬುದು ವಾಸ್ತವಿಕ ಕಟುಸತ್ಯ. ಬರಗೂರು ಗುರುಗಳು ಹೇಳಿದ ರಚನಾತ್ಮಕತೆ ಇಲ್ಲಿ ಬೇಕಿದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

