Advertisement
ಆರ‍್ಮುಗಂ ಭಯ: ಕೆ. ಸತ್ಯನಾರಾಯಣ ಕಥಾ ಸರಣಿ

ಆರ‍್ಮುಗಂ ಭಯ: ಕೆ. ಸತ್ಯನಾರಾಯಣ ಕಥಾ ಸರಣಿ

ಅಗತ್ಯವಿರಲಿ, ಇಲ್ಲದಿರಲಿ, ಆಫೀಸಿನಲ್ಲಿ, ಸಾಮಾಜಿಕ ವಲಯಗಳಲ್ಲಿ ರಾಜಗೋಪಾಲ್‌ ಮನೆಯವರು ತಮಗೆ ಸಂಬಂಧಿಯೆಂದು, ಇಂತಹವರು, ಇಂತಹ ಮನೆಯಲ್ಲಿ ತಮಗೆ ಭಾವನೆಂಟರು, ವಾರಗಿತ್ತಿಯರು, ಅತ್ತಿಗೆ-ನಾದಿನಿಯರು ಆಗಬೇಕೆಂದು ಎಲ್ಲ ಕಡೆಯೂ ಹೇಳಿಕೊಳ್ಳುತ್ತಿದ್ದರು. ಹೀಗೆ ಅವರು ನನ್ನೆದುರಿಗೇ ಎಷ್ಟೋ ಸಲ ಹೇಳಿಕೊಳ್ಳುತ್ತಿದ್ದಾಗ, ಇಲ್ಲ ಇವರು ಸಹಜವಾಗಿ ಹೇಳಿಕೊಳ್ಳುತ್ತಿದ್ದಾರೆ, ಕೃತ್ರಿಮತೆಯೇನೂ ಇಲ್ಲ ಅನಿಸಿತು. ಆದರೂ ಆರ‍್ಮುಗಂ ತಮ್ಮ ಉಳಿದ ಮಕ್ಕಳಿಗೆ ಮದುವೆ ಸಂಬಂಧ ಹುಡುಕುವಾಗ, ಕುದುರಿಸುವಾಗ, ರಾಜಗೋಪಾಲ್‌ ಮನೆತನದೊಡನೆಯ ಸಂಬಂಧವನ್ನು ಪ್ರಸ್ತಾಪಿಸುತ್ತಿದ್ದುದು ಅತಿಯಾಯಿತೆನಿಸಿತು. ಇದರಿಂದೆಲ್ಲ ರಾಜಗೋಪಾಲ್‌ ಮನೆತನದವರು ಮುಜುಗರಕ್ಕೆ ಒಳಗಾಗಿರುವರೆಂದು, ಭಯಭೀತರಾಗಿರುವರೆಂದು ಸುದ್ದಿ ಹಬ್ಬಿತು.
ಕೆ.
ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

“ಬೆಂಗಳೂರಿಗೆ ಬರುತ್ತಿದ್ದೇನೆ, ಎರಡು ವಾರಗಳಲ್ಲಿ – ದಿನ ಸಮಯ ಮುಂದೆ ತಿಳಿಸುತ್ತೇನೆ. ಬೆಂಗಳೂರಿನ ತುಂಬಾ ಬಂಧು-ಮಿತ್ರರು. ನಗರದ ತುಂಬೆಲ್ಲಾ ಹರಡಿಹೋಗಿದ್ದಾರೆ. ಸಮಯ ಹೊಂದಿಸಿಕೊಂಡು ಎಲ್ಲರನ್ನೂ ನೋಡಬೇಕು. ಸಾಧ್ಯವಾದರೆ ಎಲ್ಲರನ್ನೂ ಸೇರಿಸಿ ಒಂದು ಸ್ನೇಹ ಭೋಜನವನ್ನು ಕೂಡ ಇಟ್ಟುಕೊಳ್ಳಬೇಕು. ಇದಕ್ಕೆಲ್ಲ ನಿಮ್ಮ ಸಹಕಾರ ಬೇಕು. ಮನೆಯಲ್ಲಿ ಸಮಾಚಾರ ತಿಳಿಸಿ.

ಶುಭಾಂಗಿ ಯಾವಾಗಲೂ ನಿಮ್ಮನ್ನು ನೆನಸಿಕೊಳ್ಳುತ್ತಾಳೆ.

ನಿಮ್ಮ ಎಂದಿನ ವಿಶ್ವಾಸಿ.

ಮಾಣಿಕದಾಸ್‌ ಆರ‍್ಮುಗಂ”

*****

          ನಾನು ಚೆನ್ನೈ ಬಿಟ್ಟೇ ಇಪ್ಪತ್ತುಮೂರು ವರ್ಷಗಳಾಯಿತು. ಆರ‍್ಮುಗಂಗೆ ಕೂಡ ಈಗ ೬೫ ದಾಟಿರಬೇಕು. ಹೀಗೆ ಇದ್ದಕ್ಕಿದ್ದಂತೆ ನೆನಸಿಕೊಂಡು ಪತ್ರ ಬರೆದು ಬರುವೆ, ಬಂದು ನೋಡುವೆ, ಒಂದು ಸ್ನೇಹಕೂಟ ಏರ್ಪಡಿಸಬೇಕು ಅಂದರೆ ಯಾರಿಗೆ ಆಶ್ಚರ್ಯವಾಗುವುದಿಲ್ಲ.

ಅಲ್ಲದೆ, ಆರ‍್ಮುಗಂ ಸ್ವಲ್ಪ ವಿಚಿತ್ರ, ಅಡ್ಡಾದಿಡ್ಡಿ ಮನುಷ್ಯನಾದ್ದರಿಂದ ನನಗೆ ಸ್ವಲ್ಪ ಭಯವೇ ಆಯಿತು.

*****

          ಆರ‍್ಮುಗಂ ನನ್ನ ಸಹಾಯಕ ಅಧಿಕಾರಿ. ಕೌಟುಂಬಿಕ ಆಪ್ತ. ಅಧಿಕಾರಿಯ ಗತ್ತು, ಗೈರತ್ತು ಇಲ್ಲದವ. ಎಲ್ಲರೊಡನೆ ಬೆರೆಯಬಲ್ಲ, ಯಾರಿಗೆ ಬೇಕಾದರೂ ನೆರವಾಗಬಲ್ಲ ಸ್ವಭಾವ. ಮಾತು ಸ್ವಲ್ಪ ಜಾಸ್ತಿ. ಕೊಂಚ ತೋರುಗಾಣಿಕೆಯ ರೀತಿ ಕೂಡ. ಮೇಲಧಿಕಾರಿಗಳು, ಅವರ ಕುಟುಂಬ ಅಂದರೆ ನೆರವಾಗುವುದರಲ್ಲಿ ಒಂದು ಕೈ ಮುಂದು.

ನನ್ನ ಹತ್ತಿರ ಅಂತ ಅಲ್ಲ, ಎಲ್ಲ ಮೇಲಧಿಕಾರಿಗಳ ಹತ್ತಿರವೂ ಚೆನ್ನಾಗಿದ್ದ. ಕರಾರುವಾಕ್ಕಾಗಿ ಹೇಳಬೇಕೆಂದರೆ, ಮೇಲಧಿಕಾರಿಗಳ ಕುಟುಂಬದವರ ಜೊತೆಯೇ ಹೆಚ್ಚು ಆಪ್ತನಾಗಿರುತ್ತಿದ್ದ. ಅಧಿಕಾರಿಗಳ ಪತ್ನಿಯರು, ಹೆಣ್ಣು ಮಕ್ಕಳೆಲ್ಲ ಯಾವ ಮುಲಾಜೂ ಇಲ್ಲದೆ ಎಲ್ಲ ಕೆಲಸಗಳನ್ನೂ ಅವನ ಕೈಲೇ ಮಾಡಿಸಿಕೊಳ್ಳುತ್ತಿದ್ದರು. ಅವರಿಗೆ ಬೇಕಾದ ಆಮದಾದ ಸೆಂಟ್‌, ಲಿಪ್‌ಸ್ಟಿಕ್ಕನ್ನು ಅಧಿಕಾರಿಗಳಿಗೇ ಗೊತ್ತಾಗದಂತೆ ತಂದುಕೊಡುತ್ತಿದ್ದ. ದೂರದ Beauty Parlour ಗಳಿಗೆ, Swimming Pool ಗಳಿಗೆಲ್ಲ ಹೆಣ್ಣುಮಕ್ಕಳನ್ನು ಅವನ ಮೇಲೆ ನಂಬಿಕೆಯಿಟ್ಟು ಕಳಿಸುತ್ತಿದ್ದರು. ಅಕ್ಕಪಕ್ಕದ ಊರಿನ ದೇವಸ್ಥಾನಗಳಿಗೆ, ಪೂಜೆ, ಅಭಿಷೇಕಗಳಿಗೆಲ್ಲ ಇವನದೇ ಮಧ್ಯಸ್ತಿಕೆ. ಅಲ್ಲದೆ, ಆರ‍್ಮುಗಂಗೆ ಇಂತಹ ಕೆಲಸ, ಅಂತಹ ಕೆಲಸ ಎಂದು ಬೇಧಭಾವ ಇರಲಿಲ್ಲ. ಅದು ಕಂಪ್ಯೂಟರ್‌ ಕೆಲಸವಾಗಿರಬಹುದು, ಗೋಡೆಗೆ ಮೊಳೆ ಹೊಡೆಯುವ ಕೆಲಸವಾಗಿರಬಹುದು, ಬಟ್ಟೆ ಒಣಗಿ ಹಾಕುವ ತಂತಿ ಸಡಿಲವಾದರೆ, ಹೊಸ ತಂತಿ ತರುವುದು, ಸೂಪರ್‌ ಮಾರ್ಕೆಟ್‌ನಿಂದ ತಂದ ಸಾಮಾನು ಇಷ್ಟವಾಗದೆ ಹೋದರೆ ವಾಪಸ್‌ ಮಾಡುವ ಡ್ಯೂಟಿ ಆದರೂ ಪರವಾಗಿಲ್ಲ.

ಆರ‍್ಮುಗಂನಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದ ಇನ್ನೊಂದು ಸ್ವಭಾವವೆಂದರೆ, ಒಬ್ಬರ ಮನೆಯ ವಿಷಯವನ್ನು ಇನ್ನೊಬ್ಬರಿಗೆ ಹೇಳುತ್ತಿರಲಿಲ್ಲ. ಮತ್ತೆ ವಾರಾಂತ್ಯದಲ್ಲಿ ಕುಟುಂಬ ಸಮೇತನಾಗಿ ಮನೆಗೆ ಬಂದುಬಿಡುವನು. ಮಧ್ಯಾಹ್ನದ ಊಟಕ್ಕೆ ಅಂತ ಬಂದರೆ ಊಟವಾದ ಮೇಲೆ ವೆರಾಂಡದ ಸೋಫಾದಲ್ಲಿ ಮಲಗಿ, ಗಡದ್ದಾಗಿ ನಿದ್ದೆ ಹೊಡೆದು, ನಂತರ ಕಾಫಿ ಕುಡಿದು, ಮತ್ತೆ ರಾತ್ರಿಯ ಊಟವನ್ನು ಕೂಡ ಮಾಡಿಕೊಂಡೇ ಹೋಗುತ್ತಿದ್ದುದು. ಮನೆಯೆಲ್ಲ ತುಂಬಿದ ಹಾಗೆ ಇರೋದು.

ಆರ‍್ಮುಗಂ ಮಗಳು ಶಿವಾಂಗಿ ನನ್ನ ಮಗಳಿಗಿಂತ ಸ್ವಲ್ಪ ಚಿಕ್ಕವಳು. ಎರಡು ಜಡೆ ಹಾಕುವ ವಯಸ್ಸನ್ನು ದಾಟಿದ್ದಳು. ಒಂದೇ ಜಡೆ ಚೆನ್ನಾಗಿ ಒಪ್ಪುತ್ತಿತ್ತು. ಆದರೂ ಕಡ್ಡಾಯವಾಗಿ ಎರಡು ಜಡೆ ಹಾಕಿಕೊಳ್ಳುತ್ತಿದ್ದಳು. ದಿನಕ್ಕೊಂದು ರೀತಿಯ ಮುಂಗುರುಳಿನ ವಿನ್ಯಾಸದ ಬಿನ್ನಾಣ. ಎದುರಿಗೆ ಯಾರು ಕುಳಿತಿದ್ದಾರೆ ಎನ್ನುವ ಪರಿವಿಯೇ ಇಲ್ಲದೆ, ಹದಿನೈದು-ಇಪ್ಪತ್ತು ನಿಮಿಷಕ್ಕೆ ಒಂದು ಸಲ ಪರ್ಸ್‌ನಿಂದ ಪಾಕೆಟ್‌ ಕನ್ನಡಿ ತೆಗೆದು, ತನ್ನ ಮುಖ ತಾನೇ ನೋಡಿಕೊಂಡು ಸರಿಯಾಗಿಯೇ, ಚೆನ್ನಾಗಿಯೇ ಇರುವ ಮುಂಗುರುಳನ್ನು ಇನ್ನೊಂದು ಸಲ ತೀಡಿಕೊಳ್ಳುವಳು. ಮನೆಯಲ್ಲಿ ಹೊಕ್ಕು ಬಳಕೆ ಚೆನ್ನಾಗಿದ್ದುದರಿಂದ ನಮ್ಮ bed room make up ಕನ್ನಡಿ, drawer ಒಳಗೆ ಇರುವ ಎಲ್ಲ ಸಾಮಾನು-ಸಾಧನಗಳನ್ನು ಪರಿಶೀಲಿಸಿ, ಸೂಕ್ಷ್ಮವಾಗಿ ಇಂಗಿತ ತಿಳಿಸಿ ಉಡುಗೊರೆ ಪಡೆಯುವಳು.

ಶೃಂಗಾರ ಪ್ರೀತಿಗಿಂತ ಹೆಚ್ಚಾಗಿ ನನ್ನ ಗ್ರಂಥಾಲಯದ ಪುಸ್ತಕಗಳ ರಾಶಿಯ ಬಗ್ಗೆಯೂ ಅಷ್ಟೇ ಗಮನ, ಕುತೂಹಲ. ಪುಸ್ತಕಗಳನ್ನು ಓದುವುದು, ಬಿಡುವುದು, ಅವಳ ವಯಸ್ಸಿಗೆ ಮೀರಿದ್ದರಿಂದ, ಪುಸ್ತಕ ಬರೆದವರು ಯಾರು, ಯಾತಕ್ಕೆ ಬರೆದರು, ಇಷ್ಟೊಂದು ಪುಸ್ತಕಗಳನ್ನು ಯಾರು ಓದುತ್ತಾರೆ, ಓದುವುದರಿಂದ ಎಷ್ಟು ಪ್ರಯೋಜನ, ಹೀಗೆ ಕೇಳುತ್ತಲೇ ಹೋದರೆ ಮಕ್ಕಳಿಗೆ ಸಮಾಧಾನವಾಗುವ ಉತ್ತರವನ್ನು ಹೇಳುವುದಾದರೂ ಹೇಗೆ? ನಾನು ಏನೇ ಉತ್ತರ ಹೇಳಲು ಹೊರಟರೂ ಬಹು ಬೇಗ ತಾಳ್ಮೆ ಕಳೆದುಕೊಳ್ಳುತ್ತಿದ್ದಳು.

Economist ವಾರಪತ್ರಿಕೆ ನಮ್ಮ ಮನೆ ಬಾಗಿಲಿಗೇ ಬರುತ್ತಿತ್ತು. ಕಾಕತಾಳಿಯವೋ ಏನೋ ಎಂಬಂತೆ, ಆರ‍್ಮುಗಂ, ಶಿವಾಂಗಿ ನಮ್ಮ ಮನೆಗೆ ಬಂದಾಗಲೇ ಪತ್ರಿಕೆ ಕೊರಿಯರ್‌ನಲ್ಲಿ ಬರೋದು. ಪತ್ರಿಕೆ ಏಕೆ ಮನೆ ಬಾಗಿಲಿಗೇ ಬರುತ್ತದೆ, ಅದು ಲಂಡನ್‌ನಿಂದಲೇ ಏಕೆ ಬರಬೇಕು, ಪ್ರತಿವಾರವೂ ಅದರಲ್ಲಿ ಓದುವ ವಿಶೇಷವೇನಿರುತ್ತದೆ, ಹೀಗೆ ಬಿಡಿಸಿ ಬಿಡಿಸಿ ಕೇಳುವಳು, ಕೇಳುತ್ತಲೇ ಇರುವಳು.

ಅವಳ ಓದು ಬರಹದ ಕುತೂಹಲವನ್ನು ಗಮನಿಸಿ, ದಿನಕ್ಕೊಂದು ಹೊಸ ಪದ, ಗಾದೆ ಮಾತು, ವಾಚಕರ ವಾಣಿ, ಸಂಪಾದಕೀಯ, ಹೀಗೆ ಒಂದರ ನಂತರ ಇನ್ನೊಂದರ ಕಡೆ ಗಮನ ಸೆಳೆದು, ಟಿಪ್ಪಣಿ ಮಾಡಿಕೊಳ್ಳಲು. ಬೇರೆ ಬೇರೆ ರೀತಿಯ ವಾಕ್ಯ ರಚನೆ ಮಾಡಿಸಲು ಪ್ರೋತ್ಸಾಹಿಸಿದೆ. ಓದುವುದು, ಬರೆಯುವುದಕ್ಕಿಂತ ಹೆಚ್ಚಾಗಿ, ತಾನು ಇಂತಹದ್ದನೆಲ್ಲ ಓದಿದೆ ಎಂದು ಹೇಳಿಕೊಳ್ಳುವುದರಲ್ಲೇ ಜಂಭ, ಸಂತೋಷ.

ಶಿವಾಂಗಿ ವಯಸ್ಸಿನ ಮಕ್ಕಳು ನಮ್ಮ ಕಾಲೋನಿಯಲ್ಲಿದ್ದರೂ, ಓದು ಬರಹದಲ್ಲಿ ಚುರುಕಾಗಿದ್ದರೂ, ನಮಗೆ ಈಗಾಗಲೇ ಎಲ್ಲವೂ ಗೊತ್ತಿದೆ, ಹೇಗಿದ್ದರೂ ನಮಗೆ ಚೆನ್ನಾಗಿ ತಿಳಿಯುತ್ತದೆ ಅನ್ನುವ ಮನೋಭಾವದವರು. ಅದೂ ಅಲ್ಲದೆ, ಆ ಮಕ್ಕಳ ತಾಯಿ-ತಂದೆಗಳು ಕೂಡ ನನ್ನಷ್ಟೇ ವಿದ್ಯಾವಂತರೂ, ನನ್ನಷ್ಟೇ ಸ್ಥಾನಮಾನದವರೂ ಆಗಿದ್ದರಿಂದ ನನ್ನ ಹತ್ತಿರ ಯಾಕೆ ಬರುತ್ತಾರೆ? ಶಿವಾಂಗಿಯೇ ಕ್ರಮೇಣ ಹೆಚ್ಚು ಸ್ಪಂದಿಸುತ್ತಿದ್ದಳು. ನಾನು ಸಲಹೆ ಸೂಚನೆಗಳನ್ನು ಕೊಡುತ್ತಲೇ ಹೋದೆ. ಗ್ರಹಿಕೆಯ ಚುರುಕಿಗಿಂತ ಅವಳ ಆಸಕ್ತಿ ಕುತೂಹಲವೇ ನನಗೆ ವಿಪರೀತ ಖುಷಿ ನೀಡುತ್ತಿತ್ತು.

ಚೆನ್ನೈನಲ್ಲಿ ನಾನು ಹತ್ತು ಹನ್ನೆರಡು ವರ್ಷ ಇದ್ದೆನಲ್ಲ, ಶಿವಾಂಗಿ ಚೆನ್ನಾಗಿ ಓದಿದಳು. ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದಳು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಕಲೆ ರೂಢಿಸಿಕೊಂಡಳು. ಯೌವ್ವನದ ಕಳೆಯ ಜೊತೆಗೆ ಬುದ್ಧಿವಂತಿಕೆಯ ಕಳೆ, ಎಂದಿನ ಶೃಂಗಾರ ಪ್ರೀತಿ ಎಲ್ಲವೂ ಸೇರಿಕೊಂಡು ಶಿವಾಂಗಿಗೆ ತಾನು ಇತರರಿಗಿಂತ ಭಿನ್ನ ಮತ್ತು ಹಾಗೆಂದು ತೋರಿಸುವ ಚಪಲ ಸೇರಿಕೊಂಡು ಯಾವಾಲೂ ಚಡಪಡಿಕೆಯಲ್ಲಿರುವಂತೆ ಕಾಣುತ್ತಿದ್ದಳು. ನಿಧಾನವಾಗಿ ಅವಳೇ ಓದಿದ ಪುಸ್ತಕ, ಲೇಖನಗಳ ಬಗ್ಗೆ ನನ್ನ ಗಮನವನ್ನು ಸೆಳೆಯುತ್ತಿದ್ದಳು. ನಾನು ಕೂಡ ನನ್ನ ಕೆಲವು ಬರಹಗಳನ್ನು ಬೆರಳಚ್ಚು ಮಾಡಿಸಿದ ನಂತರ ತಪ್ಪು ತಿದ್ದಲು ಕೊಡುತ್ತಿದ್ದೆ. ತಕ್ಷಣ ತಿದ್ದಿಕೊಡುತ್ತಿದ್ದಳು. ತಾನೊಮ್ಮೆ ಗಮನಿಸಿದ ಮೇಲೆ ಮತ್ತೆ ಹೊಸ ದೋಷಗಳು ನನ್ನ ಕಣ್ಣಿಗೆ ಬೀಳಬಾರದೆಂಬ ನಿರೀಕ್ಷೆಯಿಂದ ಕಣ್ಣುಗಳು ಮಿನುಗುತ್ತಿದ್ದವು. ನಾನು ಅವಳು ಗಮನಿಸಿದ ಕರಡನ್ನು ಇನ್ನೊಮ್ಮೆ ನೋಡುತ್ತಿದ್ದೆ. ಪಕ್ಕದಲ್ಲಿ ನಿಂತು ಕೆಳ ತುಟಿಯನ್ನು ನಾಲಿಗೆಯಿಂದ ಸವರುತ್ತಾ ಸಂತೋಷ ವ್ಯಕ್ತ ಪಡಿಸುತ್ತಿದ್ದಳು.

ಹೀಗೇ ಓದುತ್ತಾ, ಪರೀಕ್ಷೆಗಳನ್ನು ಬರೆಯುತ್ತಾ, ಶಿವಾಂಗಿ ಎರಡನೇ ಪ್ರಯತ್ನದಲ್ಲಿ ರಾಂಚಿಯ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರವೇಶ ಪಡೆದಳು. ಫಲಿತಾಂಶ ಬಂದ ದಿವಸ ಅಪ್ಪ-ಮಗಳು ಇಬ್ಬರೂ ಟ್ಯಾಕ್ಸಿ ಮಾಡಿಕೊಂಡು ಪೆರಂಬೂರಿನಿಂದ ಬಂದಿದ್ದರು. ಫಲಿತಾಂಶದ ಸಂತೋಷ-ಗಡಿಬಿಡಿ, ಬಿಸಿಲಿನಲ್ಲಿ ಟ್ಯಾಕ್ಸಿ ಪ್ರಯಾಣ, ಎರಡೂ ಸೇರಿ ಇಬ್ಬರೂ ಚೆನ್ನಾಗಿ ಬೆವರುತ್ತಿದ್ದರು. ಆರ‍್ಮುಗಂ ಮಾತುಗಳು ತೊದಲುತ್ತಿದ್ದವು. ಇಷ್ಟು ದಿನ ತೋರುತ್ತಿದ್ದುದಕ್ಕಿಂತ ಹೆಚ್ಚಿನ ಗೌರವವನ್ನು ನನಗೆ ತೋರುತ್ತಿದ್ದರು. ಮೂರು-ನಾಲ್ಕು ಗ್ಲಾಸ್‌ ನೀರು ಕುಡಿದರು. ಶಿವಾಂಗಿ ಕೂಡ ಬೆವರುತ್ತಿದ್ದರೂ ನೀರು ಕುಡಿಯಲಿಲ್ಲ. ಸಂತೋಷದಿಂದ, ಸ್ವಾಭಿಮಾನದಿಂದ, ಹೆಮ್ಮೆಯಿಂದ ತಲೆ ತಗ್ಗಿಸಿಕೊಂಡಿದ್ದಳು. ಅವಳ ಕಾಲಿನ ಹೆಬ್ಬೆರಳು ನೆಲವನ್ನು ತೀಡುತ್ತಿತ್ತು. ಅಸ್ತವ್ಯಸ್ತಗೊಂಡಿದ್ದ ದುಪ್ಪಟವನ್ನು ಕೂಡ ಸರಿ ಮಾಡಿಕೊಳ್ಳಲಿಲ್ಲ. ಹೊಸ್ತಿಲು ದಾಟುವಾಗ ಮಾತ್ರ ಗದ್ಗದಿತ ಧ್ವನಿಯಲ್ಲಿ I am happy and proud today ಎಂದು ನನಗೆ ಹಸ್ತಲಾಘವ ಕೊಡಲು ಕೈ ನೀಡಿದಾಗ ನನಗೆ ಆಶ್ಚರ್ಯವಾಯಿತು. ಆರ‍್ಮುಗಂ ನಡಿಗೆಗಿಂತ ಅವಳ ನಡಿಗೆಯೇ ಚುರುಕಾಗಿತ್ತು. ಮನೆಯಿಂದ ಹೊರಟು ಮುಂದಿನ ರಸ್ತೆಗೆ ತಿರುವಿನಲ್ಲಿ ದುಪ್ಪಟವನ್ನು ಸರಿ ಮಾಡಿಕೊಂಡಳು. ಏನನ್ನಿಸಿತೋ ಎನೋ, ಸರಿ ಮಾಡಿಕೊಂಡ ದುಪ್ಪಟವನ್ನು ಮತ್ತೆ ತೆಗೆದು ಒದರಿ, neck tie ರೀತಿಯಲ್ಲಿ ಕಟ್ಟಿಕೊಂಡು ಎರಡೂ ಕೈಗಳನ್ನು ಜೋರಾಗಿ ಬೀಸುತ್ತಾ ಆರ‍್ಮುಗಂ ಜೊತೆ ಏನೇನೋ ವೇಗವಾಗಿ ಮಾತಾಡುತ್ತಿದ್ದುದು ಕಾಣಿಸಿತು.

ಇಂತಹ ಶಿವಾಂಗಿಗೆ ಇದೇ ಚೆನ್ನೈನ ಬೆಸಂಟ್‌ ನಗರದ ಬಡಾವಣೆಯಿಂದ ರಾಂಚಿ ಇನ್‌ಸ್ಟಿಟ್ಯೂಟ್‌ಗೆ ಆಯ್ಕೆಯಾಗಿದ್ದ ರಾಜಗೋಪಾಲ್‌ ಜೊತೆ ಗೆಳೆತನ, ಪ್ರೇಮ ಎಲ್ಲವೂ ಬೆಳೆಯಿತು. ರಾಜಗೋಪಾಲ್‌ ಶ್ರೀ ವೈಷ್ಣವ ಕುಟುಂಬದಿಂದ ಮಾತ್ರವಲ್ಲದೆ, ಶ್ರೀಮಂತ ಉದ್ಯಮಿ ಕುಟುಂಬಕ್ಕೆ ಸೇರಿದವನಾಗಿದ್ದನು. ಸಹಜವಾಗಿಯೇ ಮದುವೆ ತಪ್ಪಿಸಲು, ಮುಂದೆ ಹಾಕುವ ಜಾಣತನ ತೋರಿದರು. ನಿಮ್ಮ ತಂದೆ-ತಾಯಿಯನ್ನು ಒಂದು ಸಲ ಭೇಟಿ ಮಾಡಿಸು, ನಾನೇ ಮಾತಾಡಿ ಒಪ್ಪಿಸುತ್ತೇನೆ ಎಂದು ಶಿವಾನಿ ಹಠ ಹಿಡಿದು ರಾಜಗೋಪಾಲನೊಡನೆ ಚೆನ್ನೈಗೆ ಬಂದು ಕಣ್ಣನ್‌ ಕುಟುಂಬವನ್ನು ಒಪ್ಪಿಸಿಯೇ ಬಿಟ್ಟೆ ಎಂದುಕೊಂಡಳು. ಮದುವೆಯೇನೋ ಆಯಿತು. ಆದರೆ ಮದುವೆ ನಡೆದ ರೀತಿಯಲ್ಲಿ ಹೃತ್ಪೂರ್ವಕತೆ ಕಾಣಲಿಲ್ಲ. ಬಂಧು-ಮಿತ್ರರನ್ನು ಸೀಮಿತವಾಗಿ ಕರೆಯಬೇಕು, ಮದುವೆ ಬಗ್ಗೆ ಹೆಚ್ಚು ಪ್ರಚಾರ ಮಾಡಬಾರದು, ಆರತಕ್ಷತೆಯನ್ನು ರಾಂಚಿಯಲ್ಲಿ ಮಾಡುತ್ತೇವೆ, ಚೆನ್ನೈನಲ್ಲಿ ಬೇಡ ಎಂಬ ಷರತ್ತು ಹಾಕಿದರು. ಆದರೇನು ಆಗಿರುವ ಮದುವೆಯನ್ನು ಲೋಕದ ಕಣ್ಣಿನಿಂದ ಮುಚ್ಚಿಡುವುದು ಸಾಧ್ಯವೇ? ರಾಜಗೋಪಾಲ್‌ ಕುಟುಂಬ ಮಂಕಾಯಿತು ಎಂಬುದು ಚೆನ್ನೈನಲ್ಲಿ ಗೊತ್ತಾಯಿತು. ಸರೀಕರ, ನೆಂಟರಿಷ್ಟರ ಸಭೆ-ಸಮಾರಂಭಗಳಿಗೆ ಹೋಗಿ ಬರುವುದನ್ನು ಕಡಿಮೆ ಮಾಡಿದರು. ಆದರೆ ರಾಜಗೋಪಾಲ್‌, ಶಿವಾಂಗಿ ಚೆನ್ನೈಗೆ ಬಂದಾಗ, ಶಿವಾಂಗಿ ಹೆಚ್ಚು ದಿನ/ಸಮಯ ರಾಜಗೋಪಾಲ್‌ನ ಪುರಾತನ ಮನೆಯಲ್ಲೇ ಹೆಚ್ಚಾಗಿ ಉಳಿದುಕೊಳ್ಳುತ್ತಿದ್ದಳು. ತೋಟದಲ್ಲಿದ ಉಯ್ಯಾಲೆಯಲ್ಲಿ ಅವಳು ಜೀಕುತ್ತಿದ್ದುದನ್ನೂ, ಜೀಕುತ್ತಾ ಜೀಕುತ್ತಾ ಮುಂಗುರುಳು ಸರಿ ಮಾಡಿಕೊಳ್ಳುತ್ತಿದ್ದುನ್ನೂ ಬಡಾವಣೆಯ ಬಹುಪಾಲು ನಾಗರಿಕರು ಕಣ್ಣಾರೆ ನೋಡಿದ್ದರು.

ಅದೇಕೋ, ಅದೇನು ಕಾರಣವೋ, ಶಿವಾಂಗಿ ನಮ್ಮ ಮನೆಗೆ ಬಂದು ಹೋಗುವುದು ಕಡಿಮೆಯಾಯಿತು. ಹಾಗೆ ಕಡಿಮೆಯಾದಾಗ, ಶಿವಾಂಗಿ ಮದುವೆಯ ವಿಷಯದಲ್ಲಿ ನಮ್ಮನ್ನು ಪ್ರೀತಿ-ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಅನಿಸಿತು. ನಾವು ರಾಜಗೋಪಾಲ್‌ ಜಾತಿಯವರಾದ್ದರಿಂದ ನಮ್ಮ ಒಲವು-ನಿಲುವು ಕೂಡ ಅವರ ಮನೆಯವರಂತೆಯೇ ಇರಬಹುದು ಎಂಬ ಅನುಮಾನ ಬಂದಿರಬೇಕು. ನಾವೇನು ಮಾಡಬಹುದು. ಸ್ವಲ್ಪ ದಿನ ಬೇಜಾರು ಮಾಡಿಕೊಂಡು ಸುಮ್ಮನಾದೆವು.

ಆದರೆ ಆರ‍್ಮುಗಂ ಜೊತೆ ಆಫೀಸಿನಲ್ಲಿ ಸಂಬಂಧಕ್ಕೆ ಯಾವ ಊನವೂ ಬರಲಿಲ್ಲ. ಹಿಂದಿನದೇ ವಿಶ್ವಾಸ, ವಿಧೇಯತೆ, ಸಲಿಗೆ ಬೆರೆತ ಸಂಬಂಧ. ಕೆಲ ತಿಂಗಳುಗಳ ನಂತರ ಎಲ್ಲವೂ ಮಾಮೂಲಾಯಿತು.

ಆದರೂ ಆರ‍್ಮುಗಂ ಒಂದು ವಿಷಯದಲ್ಲಿ ಸ್ವಲ್ಪ ಅತಿ ಮಾಡಿದರು. ಅಗತ್ಯವಿರಲಿ, ಇಲ್ಲದಿರಲಿ, ಆಫೀಸಿನಲ್ಲಿ, ಸಾಮಾಜಿಕ ವಲಯಗಳಲ್ಲಿ ರಾಜಗೋಪಾಲ್‌ ಮನೆಯವರು ತಮಗೆ ಸಂಬಂಧಿಯೆಂದು, ಇಂತಹವರು, ಇಂತಹ ಮನೆಯಲ್ಲಿ ತಮಗೆ ಭಾವನೆಂಟರು, ವಾರಗಿತ್ತಿಯರು, ಅತ್ತಿಗೆ-ನಾದಿನಿಯರು ಆಗಬೇಕೆಂದು ಎಲ್ಲ ಕಡೆಯೂ ಹೇಳಿಕೊಳ್ಳುತ್ತಿದ್ದರು. ಹೀಗೆ ಅವರು ನನ್ನೆದುರಿಗೇ ಎಷ್ಟೋ ಸಲ ಹೇಳಿಕೊಳ್ಳುತ್ತಿದ್ದಾಗ, ಇಲ್ಲ ಇವರು ಸಹಜವಾಗಿ ಹೇಳಿಕೊಳ್ಳುತ್ತಿದ್ದಾರೆ, ಕೃತ್ರಿಮತೆಯೇನೂ ಇಲ್ಲ ಅನಿಸಿತು. ಆದರೂ ಆರ‍್ಮುಗಂ ತಮ್ಮ ಉಳಿದ ಮಕ್ಕಳಿಗೆ ಮದುವೆ ಸಂಬಂಧ ಹುಡುಕುವಾಗ, ಕುದುರಿಸುವಾಗ, ರಾಜಗೋಪಾಲ್‌ ಮನೆತನದೊಡನೆಯ ಸಂಬಂಧವನ್ನು ಪ್ರಸ್ತಾಪಿಸುತ್ತಿದ್ದುದು ಅತಿಯಾಯಿತೆನಿಸಿತು. ಇದರಿಂದೆಲ್ಲ ರಾಜಗೋಪಾಲ್‌ ಮನೆತನದವರು ಮುಜುಗರಕ್ಕೆ ಒಳಗಾಗಿರುವರೆಂದು, ಭಯಭೀತರಾಗಿರುವರೆಂದು ಸುದ್ದಿ ಹಬ್ಬಿತು.

*****

          ಚೆನ್ನೈನಿಂದ ನಮಗೆ ದೇಶದ ಬೇರೆ ಬೇರೆ ಭಾಗಗಳಿಗೆ, ನಗರಗಳಿಗೆ ವರ್ಗವಾಯಿತು. ರಾಜಗೋಪಾಲ್‌-ಶಿವಾಂಗಿ ತರಹದ ವಿವಾಹಗಳ ಇನ್ನೂ ಹತ್ತಾರು ವರಸೆಗಳನ್ನು ನಾವು ಬೇಕಾದಷ್ಟು ನೋಡಿದೆವು. ಆದರೂ ಆರ‍್ಮುಗಂ ಎಂದರೆ ಒಂದು ರೀತಿಯ ಭಯ, ಹಿಂಜರಿಕೆಯೇ.

ಆರ‍್ಮುಗಂ ಈಗ ಬೆಂಗಳೂರಿನಲ್ಲಿ ಬಂಧು-ಮಿತ್ರರು ಹೆಚ್ಚು ಅಂತ ಬರೆದಿದ್ದಾರೆ. ಅದಕ್ಕೇ ನನಗೆ ಭಯ. ಈ ಮಹಾರಾಯ ಇಲ್ಲಿಗೂ ಬಂದು ಯಾರು ಯಾರನ್ನು ಬಂದು ತನ್ನ ಬಂಧುಗಳೆಂದು ಹೇಳಿಕೊಳ್ಳುತ್ತಾನೋ, ಅಕಸ್ಮಾತ್‌ ಅವನು ತನ್ನ ಬಂಧುಗಳೆಂದು ಹೇಳಿಕೊಂಡವರಲ್ಲಿ ನಮ್ಮ ನೆಂಟರಿಷ್ಟರು ಸೇರಿದ್ದರೆ, ಅಂತಾ!

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ