ಹುಲಿಯು ತನ್ನ ಸರಹದ್ದನ್ನು ದಿನಾ ತುಸುತುಸುವೇ ಹೆಚ್ಚು ಮಾಡಿಕೊಳ್ಳುವಂತೆ ನಾನು ಸಹ ನನ್ನ ಚಾಲನಾ ಸರಹದ್ದನ್ನು ನನ್ನ ಪ್ರತಿದಿನದ ನಸುಕಿನ ಅಭ್ಯಾಸದಲ್ಲಿ ಜಾಸ್ತಿ ಮಾಡುತ್ತಾ ಹೋದೆ. ಮನೆಯ ಅಕ್ಕಪಕ್ಕದ ರಸ್ತೆಗಳು, ಮೊದಮೊದಲು ಎಲ್ಲಿ ಗುದ್ದಿಬಿಡುತ್ತೇನೋ ಎಂದು ವಿಪರೀತ ಹೆದರಿಕೆ ಆಗಿ `ಯಾಕಪ್ಪಾ ಓಡಿಸ್ತೇನೆ, ಬೇಕಿತ್ತಾ ನಂಗೆ ಈ ವಯಸ್ಸಲ್ಲಿ ಇದು?’ ಎಂದು ಅನೇಕ ಸಲ ಅನ್ನಿಸುತ್ತಿತ್ತು. ಆದರೆ ಬಿಡದೆ ಓಡಿಸಿ ಓಡಿಸಿ ಈಗ ಒಬ್ಬಳೇ, ಮುಖ್ಯರಸ್ತೆಯಲ್ಲಿ 7-8 ಕಿಲೊಮೀಟರು ಓಡಿಸುವ ಹಂತಕ್ಕೆ ಬಂದಿದ್ದೇನೆ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೇಳನೆಯ ಬರಹ
ವಾಹನಗಳನ್ನು ಓಡಿಸುವುದು ಚಿಕ್ಕಂದಿನಿಂದಲೂ ನನಗೆ ಬಹಳ ಆಸಕ್ತಿಯ ವಿಷಯವೇನಾಗಿರಲಿಲ್ಲ. ಮಂಗಳೂರಿನಲ್ಲಿ ನಾನು ಆರನೆಯ ಅಥವಾ ಏಳನೆಯ ತರಗತಿ ಓದುತ್ತಿದ್ದಾಗ, ಚಕ್ರಗಳು ಮತ್ತು ವಾಹನ ಚಾಲನೆಯ ಬಗ್ಗೆ ತುಂಬ ಆಸಕ್ತಿ ಹೊಂದಿದ್ದ ನನ್ನ ತಮ್ಮನ ಪ್ರಬಲವಾದ ಹಂಬಲಕ್ಕೆ ಮನಸೋತು ನನ್ನ ಅಪ್ಪ ಮನೆಗೆ ಹಸಿರು ಬಣ್ಣದ ಒಂದು ಹೊಚ್ಚಹೊಸ ಬೈಸಿಕಲ್ ತಂದಿದ್ದರು. ತಮ್ಮನೇನೊ ಖುಷಿಯಾಗಿ ಆ ಸೈಕಲ್ ಓಡಿಸುತ್ತಿದ್ದ. ನನಗೆ ಅದರ ಮೇಲೆ ಅಷ್ಟೇನೂ ಆಕರ್ಷಣೆ ಇರಲಿಲ್ಲ! ನನ್ನ ತಂದೆಯವರೇ `ಮನೆಯಲ್ಲಿ ಸೈಕಲ್ ಇದೆಯಲ್ಲ, ಕಲ್ತ್ಕೋಮ್ಮ …. ಕಲಿ … ಕಲಿಯಮ್ಮ … ಮುಂದೆ ಉಪಯೋಗಕ್ಕೆ ಬರುತ್ತೆ”…….. ಎಂದು ಬಲವಂತಿಸಿ, ಬಲವಂತಿಸಿ ಮನಸ್ಸಿಲ್ಲದ ನನ್ನನ್ನು ಸೈಕಲ್ ಕಲಿಯಲು ಹಚ್ಚಿದರು! ಅಂತೂ ಅವರ ತರಬೇತೆಯಲ್ಲಿ ಸೈಕಲ್ ಹತ್ತಿ, ಹೆದರಿಕೊಂಡು ವಾಲಾಡಿ ಒದ್ದಾಡಿ ಓಡಿಸಿ, ಚರಂಡಿಗೆ ಬಿದ್ದು ಎದ್ದು ಅಂತೂ ಇಂತೂ ಕಲಿತೆ ಅನ್ನಿ. ಮಂಗಳೂರಿನ ಉರ್ವಸ್ಟೋರಿನ ರಸ್ತೆಗಳಲ್ಲಿ ನಾನು ಬೀಳದಂತೆ ಸೈಕಲ್ ಹಿಡಿದುಕೊಂಡು ನನ್ನ ಪಕ್ಕವೇ ಓಡುತ್ತಿದ್ದ ಅಪ್ಪನ ಚಿತ್ರ ನೆನಪಾಗುತ್ತೆ. ಈಗ ಎರಡು ವರ್ಷಗಳಿಂದ ರಕ್ತನಾಳಗಳ ತೊಂದರೆಯಿಂದಾಗಿ ಗಂಭೀರತರ ನೆನಪಿನ ಕಾಯಿಲೆ(ವ್ಯಾಸ್ಕುಲಾರ್ ಡಿಮೆನ್ಷಿಯಾ)ಯಿಂದ ನರಳುತ್ತಿರುವ ಹಾಗೂ ವಾಹನ ಚಲಾಯಿಸುವುದಿರಲಿ ಒಬ್ಬರೇ ನಡೆಯಲೂ ಕಷ್ಟ ಪಡುವ ಅವರನ್ನು ನೋಡಿದಾಗ ಕಣ್ಣು ಹನಿಗೂಡುತ್ತದೆ.
ಸರಿ, ನನ್ನ ವಾಹನಚಾಲನ ಕಲಿಕಾ ಪುರಾಣವನ್ನು ಮುಂದುವರಿಸುತ್ತೇನೆ. ಮುಂದೆ, ಬೆಂಗಳೂರಿನಲ್ಲಿ, ತಮ್ಮ ನಲವತ್ಮೂರನೇ ವಯಸ್ಸಿನಲ್ಲಿ ನನ್ನ ತಾಯಿಯವರು, ತಮಗೆ ವರ್ಗವಾಗಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಿಟಿಎಸ್ (ಬೆಂಗಳೂರು ನಗರ ಸಾರಿಗೆಗಿದ್ದ ಹಳೆಯ ಕಾಲದ ಸಂಕ್ಷಿಪ್ತ ಹೆಸರು ಅದು) ಬಸ್ ವ್ಯವಸ್ಥೆಯು ಸರಿಯಾಗಿರಲಿಲ್ಲವೆಂದು ಲೂನಾ ಓಡಿಸುವುದನ್ನು ಕಲಿತರು! ಶಾಲೆಗೆ ಆ ಲೂನಾದಲ್ಲಿ ಹೋಗಲು ಪ್ರಾರಂಭಿಸಿದರು. ಆಗಲೂ ಕೂಡ ನನಗೆ ಆ ಲೂನಾ ಅಥವಾ ಯಾವುದೇ ಗಾಡಿ ಓಡಿಸುವುದೇನೂ ಬಹಳ ಆಕರ್ಷಕ ವಿಷಯವಾಗಿರಲಿಲ್ಲ. ಅಪ್ಪ ಹೇಳಿ ಹಾಗೂ ಗೆಳತಿಯರು ಕೊಟ್ಟ ಸ್ಫೂರ್ತಿಯಿಂದ ನಾನು ಕನ್ನಡ ಎಂಎ ಓದುತ್ತಿದ್ದಾಗ ಲೂನಾ ಕಲಿತು ಓಡಿಸಿದೆ ಅನ್ನಿ.
ಮುಂದೆ ನಾನು ಭಾರತೀಯ ಹವಾಮಾನ ಇಲಾಖೆಯ ಕೇಂದ್ರ ಸರ್ಕಾರಿ ಕೆಲಸಕ್ಕೆ ಸೇರಿದಾಗ, ಸ್ಕೂಟರ್ ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ನನಗೆ ಮದುವೆಯಾಗಿ ನಾವಿದ್ದ ರಾಜಾಜಿನಗರದ ಮನೆಯಿಂದ ನನ್ನ ಕಛೇರಿ ಇದ್ದ ಮಹಾರಾಣಿ ಕಾಲೇಜು ವೃತ್ತಕ್ಕೆ ಹೇಳಿಕೊಳ್ಳುವಂತಹ ಬಸ್ ವ್ಯವಸ್ಥೆ ಇರಲಿಲ್ಲ. ಮೆಟ್ರೋ ರೈಲು ಬೆಂಗಳೂರಿಗೆ ಬರಲು ಇನ್ನೂ ಇಪ್ಪತ್ತು ವರ್ಷ ಸಮಯ ಇತ್ತು. ಮನೆಯ ಜವಾಬ್ದಾರಿ, ಗಂಡ ಹಾಗೂ ಪುಟ್ಟ ಮಗುವಿನ ದೇಖರೇಖಿ ಇವು ನನಗೆ ಬಿಟಿಎಸ್ ಬಸ್ ಕಾದು ಕೆಲಸಕ್ಕೆ ಹೋಗುವಷ್ಟು ಸಮಯ ಕೊಡುತ್ತಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ಕೂಟರ್ ಓಡಿಸಲು ಕಲಿಯಬೇಕಾಯಿತು. `ಕೈನೆಟಿಕ್ ಹೊಂಡಾ’ ಎಂಬ ಹಲ್ಲುಗಾಲಿ ರಹಿತ(ಗೇರ್ಲೆಸ್) ಸ್ಕೂಟರನ್ನು ಕೊಂಡು ನನ್ನ ಮನೆಯವರ ಸಹಾಯದಿಂದ ಅದನ್ನು ಓಡಿಸಿದೆ. ಚಾಲನಾ ನಿರಾಸಕ್ತಿಯನ್ನು ಬದುಕಿನ ಅನಿವಾರ್ಯತೆಯು ಗೆದ್ದಿತು. ಕಳೆದ ಮೂವತ್ತು ವರ್ಷಗಳಿಂದ ನನ್ನ ಉದ್ಯೋಗಸ್ಥ ಬದುಕು ಸ್ಕೂಟರಿಗೆ ಸಂಪೂರ್ಣವಾಗಿ ತಳುಕು ಹಾಕಿಕೊಂಡಿದೆ. ಸ್ಕೂಟರಿಲ್ಲದೆ ಒಂದು ದಿವಸ ನನ್ನ ಕೆಲಸ ನಡೆಯಲ್ಲ ಎಂಬ ಇಂದಿನ ನನ್ನ ಸನ್ನಿವೇಶ ನೋಡಿದಾಗ `ಗಾಡಿ ಓಡಿಸುವುದು ಇಷ್ಟ ಇಲ್ಲ’ ಅನ್ನುತ್ತಿದ್ದವಳು ನಾನೇನಾ ಎಂಬ ಅನುಮಾನ ಬರುತ್ತೆ ನನಗೆ!
*****
ಇನ್ನು ಕಾರು ಪುರಾಣ. ನನ್ನ ಬಾಲ್ಯ, ಹದಿಹರೆಯ ಎಲ್ಲವೂ ಕಳೆದಿದ್ದು ಸಾರ್ವಜನಿಕ ಸಾರಿಗೆ ಹಾಗೂ ಮನೆಯಲ್ಲಿನ ದ್ವಿಚಕ್ರ ವಾಹನಗಳ ಉಪಸ್ಥಿತಿಯಲ್ಲೇ. `ಕಾರು ಎಂಬುದು ಶ್ರೀಮಂತರ ಪಾಲಿಗೆ ಮಾತ್ರ’ ಎಂದು ಭಾವಿಸುತ್ತಿದ್ದ, ಜಾಗತೀಕರಣದ ಮುಂಚಿನ, ಮಧ್ಯಮವರ್ಗದ ಬಾಲ್ಯಕಾಲ ನನ್ನದು. ನನ್ನ ಮದುವೆಯ ನಂತರ, ಜಾಗತೀಕರಣವೂ ಚಾಲ್ತಿಗೊಂಡಿತು ಹಾಗೂ ನಮ್ಮ ಮನೆಯ ವಾಹನ ಸನ್ನಿವೇಶವೂ ಬದಲಾಯಿತು. ಆಗ, ಒಂದು `ಕಾರುಹಣಕಾಸು ಸಂಸ್ಥೆ’ಯಾಗಿದ್ದ `ಆಪಲ್ ಕಾರ್ ಫೈನಾನ್ಸ್’ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಬಾಳಸಂಗಾತಿ ರವಿ(ರವಿ ಕುಮಾರ್)ಯು, 1997ನೇ ವರ್ಷದ ಒಂದು ದಿನ, ನಮ್ಮ ಮನೆಗೆ ಎರಡನೇ ಬಳಕೆ(ಸೆಕೆಂಡ್ ಹ್ಯಾಂಡ್)ಯ ಒಂದು ಮಾರುತಿ-800 ಕಾರನ್ನು ಕೊಂಡು ತಂದರು. ಆಗ, ಅರವತ್ತು ವಯಸ್ಸು ಸಮೀಪಿಸುತ್ತಿದ್ದ ನನ್ನ ತಂದೆಯವರು, ಸುಮಾರು ಮೂರು ವರ್ಷ ವಯಸ್ಸಿನ ನನ್ನ ಹಿರಿಮಗಳು ಇದ್ದ ನಮ್ಮ ಕುಟುಂಬವನ್ನು `ಒಟ್ಟಿಗೆ ಓಡಾಡಿಸಲು ಕಾರು ಬೇಕಾಗುತ್ತದೆ’ ಎಂಬ ಅನಿವಾರ್ಯತೆಯಿಂದ ಹಾಗೂ ಗಾಡಿ ಓಡಿಸುವುದರಲ್ಲಿ ತಮಗೆ ಇದ್ದ ಚಾಕಚಕ್ಯತೆಯಿಂದ ಅನ್ನಿಸುತ್ತೆ, ರವಿ ತನ್ನ ಸ್ನೇಹಿತರೊಬ್ಬರ ಸಹಾಯದಿಂದ ಕಾರು ಓಡಿಸುವುದನ್ನು ಎರಡು-ಮೂರು ದಿನಗಳಲ್ಲಿ ಕಲಿತುಬಿಟ್ಟರು! ಆ ದಿನಗಳಲ್ಲಿ ನಾನು ಕೂಡ ಚಾಲನಾ ತರಬೇತಿ ಶಾಲೆಗೆ ಸೇರಿಕೊಂಡು ಕಾರು ಓಡಿಸುವುದನ್ನು ಕಲಿಯಲು ಪ್ರಯತ್ನ ಪಟ್ಟೆನಾದರೂ ಅನೇಕ ಕಾರಣಗಳಿಂದ ರಸ್ತೆಯಲ್ಲಿ ಆರಾಮವಾಗಿ ಕಾರು ಓಡಿಸುವ ಮಟ್ಟಿಗೆ ನನ್ನ ಪ್ರಗತಿ ಸಾಗಲಿಲ್ಲ. ನನ್ನ ಕಾಲೇಜು ಕೆಲಸ, ಮನೆಯ ಸುತ್ತಮುತ್ತಲ ಅಂಗಡಿ ಓಡಾಟಗಳಿಗೆ ನನ್ನ ದ್ವಿಚಕ್ರಿಣಿ (ನೀಲಿ ಬಣ್ಣದ ಕೈನೆಟಿಕ್ ಹೊಂಡಾ) ಇತ್ತು ಎಂಬುದು, ಹಾಗೂ ಬೆಂಗಳೂರು ನಗರದ ವಿಪರೀತ ವಾಹನ ದಟ್ಟಣೆಯ ನಡುವಿನ ಓಡಾಟಕ್ಕೆ `ಸ್ಕೂಟರು ಸಾಕು’ ಎಂಬ ನನ್ನ ಬಲವಾದ ಭಾವನೆ ಕೂಡ ಕಾರು ಚಾಲನೆಯ ಬಗ್ಗೆ ನನ್ನಲ್ಲಿ ಶ್ರದ್ಧೆ ಮೂಡದೆ ಇರಲು ಕಾರಣಗಳು ಅನ್ನಿಸುತ್ತೆ.
ಆದರೆ ಬದಲಾವಣೆಯೇ ಬದುಕಿನ ನಿಯಮ ಅಲ್ಲವೆ? ನಮ್ಮ ಮನೆಯಲ್ಲಿ ಮಾರುತಿ ಎರ್ಟಿಗಾ ಕಾರು ಕಳೆದ ಹನ್ನೊಂದು ವರ್ಷಗಳಿಂದ ಇದ್ದರೂ ಅದನ್ನು ಓಡಿಸಲು ಮನಸ್ಸು ಮಾಡದ ನಾನು ಅದನ್ನು ಕಲಿಯಲೇಬೇಕಾದ ಪರಿಸ್ಥಿತಿ ಬಂತು! ಮನೆಯವರಿಗೆ ಬಂದ ಸಂಧಿವಾತದ ನೋವು ಅವರಿಗೆ ಕಾರು ಓಡಿಸಲು ಅಡ್ಡಿ ಮಾಡಿದಾಗ ಕಾರು ಸುಮ್ಮನೆ ನಿಲ್ಲುವ ಸನ್ನಿವೇಶ ಬಂತು. ಈಗ ನಾನು ಸುಮ್ಮನಿದ್ದರೆ ಕಾರಿಗೂ, ಮನೆಮಂದಿಯ ಓಡಾಟಕ್ಕೂ ತೊಂದರೆ ಬರುವುದರಲ್ಲಿತ್ತು. ಹೀಗಾಗಿ ಕಾರು ಕಲಿಯಲು ಪ್ರಾರಂಭಿಸಿದೆ ನಾನು, ನನ್ನ ಐವತ್ನಾಲ್ಕನೇ ವಯಸ್ಸಿನಲ್ಲಿ!

ಒಂದಾದ ಮೇಲೊಂದರಂತೆ ಎರಡೆರಡು ವಾಹನಾ ಚಾಲನಾ ತರಬೇತಿ ಶಾಲೆಗಳಿಗೆ ಸೇರಿಕೊಂಡು, ಸಾಕಷ್ಟು ಹಣ ತೆತ್ತು ಸುಮಾರು ಎರಡು ತಿಂಗಳುಗಳ ಕಾಲ ಅಭ್ಯಾಸ ಮಾಡಿದರೂ ಮನೆಯಲ್ಲಿರುವ ಕಾರನ್ನು ಒಬ್ಬಳೇ ಓಡಿಸುವ ಧೈರ್ಯ ಬರಲಿಲ್ಲ ನನಗೆ. ಏನೋ ಅಂಜಿಕೆ ಅಳುಕು. `ಏನು ಮಾಡಲಿ ….’ ಎಂದು ಚಿಂತೆ ಆಗುತ್ತಿತ್ತು. `ಏಕವ್ಯಕ್ತಿಗೆ ನನ್ನ ಕಾರಿನಲ್ಲೇ ತರಬೇತಿ ಕೊಡುವವರು ಯಾರಾದರೂ ಇದ್ದಾರೆಯೇ?’ ಎಂದು ಯೋಚಿಸುತ್ತಿದ್ದೆ. ಹಾಗೆಯೇ ಅಂತರ್ಜಾಲದ ಮೂಲಕ ನಮ್ಮ ಪ್ರದೇಶದಲ್ಲೇ ಒಬ್ಬ ತರಬೇತಿದಾರರನ್ನು ಸಹ ಹುಡುಕಿಕೊಂಡೆ. ಅವರ ತರಬೇತಿ ಶುಲ್ಕ ದಿನಕ್ಕೆ ಅಂದರೆ ದಿನದಲ್ಲಿ ಒಂದು ಗಂಟೆ ತರಬೇತಿ ಕೊಡಲು ಐನೂರು ರೂಪಾಯಿ. ನನ್ನ ಮನೆಯವರ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಿದಾಗ ಅವರು `ಎಷ್ಟು ಅಂತ ಹಣ ಕೊಡ್ತಿ ಮಾರಾಯ್ತಿ ಈ ತರಬೇತಿಗೆ? ಕೊನೆ ಮೊದಲೇ ಇಲ್ಲವೆ ಇದಕ್ಕೆ?’ ಅಂದರು. ಆಗ ನನಗೆ ಅನ್ನಿಸಿಬಿಟ್ಟಿತು – `ಎಷ್ಟು ದಿನ ಅಂತ ಹೀಗೆ ಪರಪುಟ್ಟನ ತರಹ ಇನ್ನೊಬ್ಬರ ಮೇಲೆ ಅವಲಂಬಿತಳಾಗುವುದು? ಒಂದಲ್ಲ ಒಂದು ದಿನ ನಾನು ಒಬ್ಬಳೇ ಕಾರು ಓಡಿಸಲೇಬೇಕಲ್ಲವೆ?’. ಸರಿ, ಮಾರನೆಯ ದಿನ (ಅದೊಂದು ಭಾನುವಾರ) ಬೆಳಗಿನ ಜಾವ 5.30ರ ಸುಮಾರಿಗೆ ನಾನು ಧೈರ್ಯ ಮಾಡಿ ಒಬ್ಬಳೇ ಕಾರು ತೆಗೆದೇಬಿಟ್ಟೆ! ತೀರಾ ಬೆಳಿಗ್ಗೆ ಮುಂಚೆಯ ಸಮಯವಾದದ್ದರಿಂದ ಜನ ಸಂಚಾರ ತುಂಬ ಕಡಿಮೆ ಇತ್ತು. ಮಾರುತಿ ಎರ್ಟಿಗಾದಂತಹ ದೊಡ್ಡ ಕಾರು ಅಂದರೆ ಪ್ರಬಲ ಹುಲಿಯಂತಹ ಶಕ್ತಿವಂತ ಯಂತ್ರ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿರುವ ಕಾರುಗಳು, ಸ್ಕೂಟರು-ಬೈಕುಗಳು, ಬೆಳಗಿನ ನಡಿಗೆಗೆಂದೋ, ಮನೆಯ ಮುಂದೆ ರಂಗೋಲಿ ಹಾಕಲೆಂದೋ ವಿರಳವಾಗಿ ಕಾಣುತ್ತಿದ್ದ ಜನರು … ಎಲ್ಲಿ ಯಾವುದಕ್ಕಾದರೂ, ಯಾರಿಗಾದರೂ ಗುದ್ದಿಬಿಡುತ್ತೇನೋ ಎಂಬ ಭಯ ನನ್ನಲ್ಲಿ ವಿಪರೀತವಾಗಿತ್ತು. ನಿಧಾನವಾಗಿ, ಅತಿನಿಧಾನವಾಗಿ ಬಹುಶಃ ಗಂಟೆಗೆ ಒಂದು ಕಿಮೀ ವೇಗದಲ್ಲಿ ಕಾರನ್ನು ಓಡಿಸಲಾರಂಭಿಸಿದೆ! ಹಿಡಿಕೆ-ವೇಗನಿರೋಧಕ (ಕ್ಲಚ್ – ಬ್ರೇಕ್)ಗಳ ಮೇಲೆ ನನ್ನ ನಿಯಂತ್ರಣದ ಕೊರತೆಯಿಂದಾಗಿ ಕಾರು ಆಗಾಗ ಹಿಂದೆ ಮುಂದೆ ಜರುಗಾಡಿ ನಿಲ್ಲುವುದು, ನಾನು ಮತ್ತೆ ಚಾಲೂ ಮಾಡುವುದು ನಡೆಯುತ್ತಿತ್ತು.
ಅಂದ ಹಾಗೆ, ಇಲ್ಲಿ ಒಂದು ಗಮನೀಯ ವಿಷಯ ಇದೆ. ಕಾರು ಚಾಲನಾ ತರಬೇತಿ ಶಾಲೆಗೆ ಸೇರಿಕೊಂಡುಬಿಟ್ಟ ಮಾತ್ರಕ್ಕೆ ಧೈರ್ಯವಾಗಿ ಒಬ್ಬರೇ ಕಾರು ಓಡಿಸಿಬಿಡುತ್ತೇವೆ ಎಂದು ಯಾರೂ ಎದೆತಟ್ಟಿ ಹೇಳಲು ಸಾಧ್ಯ ಇಲ್ಲ. ಇದಕ್ಕೆ ಕಾರಣವೇನೆಂದರೆ, ಚಾಲನಾಪೀಠದಲ್ಲಿ ಕುಳಿತು ಕಲಿಯುತ್ತಿರುವ ವ್ಯಕ್ತಿಯ ಪಕ್ಕದ ಪೀಠದಲ್ಲಿ ಕುಳಿತಿರುವ ಕಾರು ಚಾಲನಾ ತರಬೇತಿದಾರರ ಪಾದಗಳಲ್ಲಿ ವೇಗವರ್ಧಕ(ಆಕ್ಸಲಿರೇಟರ್)ದ ಹೊರತು ಉಳಿದ ಎಲ್ಲ ನಿಯಂತ್ರಣಗಳೂ ಇರುತ್ತವೆ. ದಿನಕ್ಕೆ ಅರ್ಧ ಗಂಟೆಯೋ, ಒಂದು ಗಂಟೆಯೋ ನಡೆಯುವ ತರಬೇತಿಯಲ್ಲಿ ಕಾರಿನ ಗರಿಷ್ಠ ನಿಯಂತ್ರಣವನ್ನು ಅವರೇ ಮಾಡಿ ಸೈ-ಜೈ ಅನ್ನಿಸಿಬಿಡುತ್ತಾರೆ. ಓಡಿಸುತ್ತಾ ಇರುವ ಕಲಿಕಾವ್ಯಕ್ತಿಗೆ ತಾನು ಚಾಲನಾಚಕ್ರ (ಸ್ಟೀರಿಂಗ್) ಹಿಡಿದಿರುವುದರಿಂದ ತಾನೇ ಓಡಿಸುತ್ತಿದ್ದೇನೆ ಎಂಬ ಭ್ರಮೆ ಇರುತ್ತದೆ ಅಷ್ಟೆ. ಅವನು/ಅವಳು ನಿಜಕ್ಕೂ ಕಾರು ಚಲಾಯಿಸಬೇಕೆಂದರೆ ತಾನೊಬ್ಬನೇ/ತಾನೊಬ್ಬಳೇ ಒಂದಷ್ಟು ದಿನ ಕಾರು ಓಡಿಸುವ ಅಭ್ಯಾಸ ಮಾಡಬೇಕು. ಯಾರೂ ಓಡಾಡದಿರುವ ಮೈದಾನದಲ್ಲೋ, ಅಥವಾ ಖಾಲಿ ರಸ್ತೆಗಳಲ್ಲೋ ಎರಡರಿಂದ ನಾಲ್ಕು ವಾರ ಪ್ರತಿದಿನವೂ ಸ್ವಲ್ಪ ಸ್ವಲ್ಪ ಓಡಿಸಬೇಕು. ಹೆದರಿಕೆ, ಗಾಬರಿ, ಅನುಮಾನ, ಕಷ್ಟ ಎಲ್ಲದರ ನಡುವೆಯೇ ಛಲ ಬಿಡದೆ ಆಮೆವೇಗದಿಂದ, `ಪ್ರಯತ್ನ ಮಾಡು – ತಪ್ಪು ಮಾಡು – ಪ್ರಯತ್ನ ಮಾಡು – ಸರಿಮಾಡು’ (ಟ್ರಯಲ್ ಅಂಡ್ ಎರರ್) ವಿಧಾನದಿಂದ ಓಡಿಸುತ್ತಾ ಹೋಗಬೇಕು. ಮೊದಲು ಮನೆಯ ಅಕ್ಕ ಪಕ್ಕದ ರಸ್ತೆಗಳು, ನಂತರ ಹತ್ತಿರ ಇರುವ ಮುಖ್ಯರಸ್ತೆ, ನಂತರ ಪಕ್ಕದ ಬಡಾವಣೆ ಅದರ ನಂತರ ಪಟ್ಟಣದ/ನಗರದ ಇನ್ನೊಂದು ಪ್ರದೇಶ ಹೀಗೆ …… ಓಡಿಸುವ ಪ್ರದೇಶಮಿತಿಯನ್ನು ನಿಧಾನವಾಗಿ ಜಾಸ್ತಿ ಮಾಡುತ್ತಾ ಹೋಗಬೇಕು. ಮೊದಮೊದಲಲ್ಲಿ ಹೀಗೆ ಒಂಟಿಯಾಗಿ ಓಡಿಸಲು ಹೋದಾಗ ಹೆದರಿಕೆ, ಗಾಬರಿಗಳಿಂದ ಮತ್ತು ವಿಪರೀತ ಜಾಗ್ರತೆ ವಹಿಸಬೇಕಾದ ಕಾರಣಕ್ಕಾಗಿ ಮೈಯಲ್ಲಿ ಬೆವರು ಕಿತ್ತುಕೊಂಡು ಬರುತ್ತದೆ, ಹೃದಯ ಎಷ್ಟು ಜೋರಾಗಿ ಹೊಡೆದುಕೊಳ್ಳುತ್ತಿರುತ್ತದೆ ಅಂದರೆ ಕಾರು ಇಳಿದು ಎಷ್ಟೋ ಹೊತ್ತಾದ ಮೇಲೂ ಈ ಕಂಪನಗಳು ಭಾಸವಾಗುತ್ತಿರುತ್ತವೆ. ಕಾರನ್ನು ಇಂಗ್ಲಿಷ್ನ `ಯು’ ಆಕಾರದಲ್ಲಿ ತಿರುಗಿಸುವ ಸವಾಲು, ಅಥವಾ ದಿಬ್ಬದ ಮೇಲೆ ಹತ್ತಲಾಗದೆ ಅದು ನಿಂತುಬಿಟ್ಟಾಗ ಮತ್ತೆ ಅದು ಚಲಿಸುವಂತೆ ಮಾಡುವ ಸಾಹಸ, ಇಕ್ಕಟ್ಟಿನ ಜಾಗಗಳಲ್ಲಿ ತಿರುಗಿಸಲಾಗದೆ ಒದ್ದಾಡುವ ಪರಿಸ್ಥಿತಿ ಇವೆಲ್ಲ ಉಂಟಾಗುತ್ತವೆ. ಹೀಗೆ ಒಮ್ಮೊಮ್ಮೆ ಕಾರು ಎಲ್ಲೆಂದರಲ್ಲಿ ಧಡಕ್ಕನೆ ನಿಂತುಬಿಟ್ಟಾಗ, ಹಿಂದೆ ಬರುತ್ತಿರುವ ಕಾರು, ಬಸ್ಸು. ವ್ಯಾನಿನವರು ದಾರಿ ಸಿಗದ ಕೋಪ, ಅಸಹನೆಗೆ ತಮ್ಮ ವಾಹನ ಕಹಳೆ(ಹಾರ್ನ್)ಯನ್ನು ಜೋರಾಗಿ ಬಾರಿಸುವಾಗ ಉಂಟಾಗುವ ಅಸಾಧ್ಯ ಗಾಬರಿ … ಇವೆಲ್ಲ `ಯಾಕಪ್ಪಾ ಬೇಕಿತ್ತು ನಂಗೆ ಈ ಸಾಹಸ? ಸುಮ್ಮನಿರಬಾರದಿತ್ತಾ ನಾನು?’ ಅನ್ನಿಸುವಂತೆ ಮಾಡುತ್ತವೆ! ಆದರೆ ಈ ಹಂತದಲ್ಲಿ ಮನಸ್ಸನ್ನು ಚಿಕ್ಕದು ಮಾಡಿಕೊಳ್ಳದೆ, ಧೈರ್ಯಗೆಡದೆ ಯಾವುದು ಭಯ ಹುಟ್ಟಿಸುತ್ತದೋ ಅದನ್ನೇ ಮತ್ತೆ ಮತ್ತೆ ಮಾಡಬೇಕು. ಆಗ ಮಾತ್ರ ಕಾರು ಓಡಿಸಲು ಸರಿಯಾಗಿ ಕಲಿಯಬಹುದು ನಾವು. ಈಗಂತೂ ಕಾರುಚಾಲನೆಯ ಬಗ್ಗೆ ಅತ್ಯುತ್ತಮವಾದ ದೃಶ್ಯಚಿತ್ರ(ವಿಡಿಯೊ)ಗಳು ಲಭ್ಯ ಇವೆ. ಅವುಗಳ ಸಹಾಯದಿಂದ ಸಾಕಷ್ಟು ಮುಖ್ಯ ಚಾಲನಾ ಸೂಚನೆಗಳು, ಕಿವಿಮಾತುಗಳು ದೊರೆಯುತ್ತವೆ.
*****
ಕಾರು ಕಲಿಯುವುದು ಭರತನಾಟ್ಯ ಕಲಿಯುವುದು ಬಹಳ ಮಟ್ಟಿಗೆ ಒಂದೇ ಎಂದು ನನಗನ್ನಿಸಿದೆ! ಕಳೆದ 46 ವರ್ಷಗಳಿಂದ ಭರತನಾಟ್ಯದ ಸಂಗದಲ್ಲಿರುವ ನನಗೆ ಮಾರುತಿ ಸುಝುಕಿ ಚಾಲನಾ ಶಾಲೆಯವರು ಹಂತಹಂತವಾಗಿ ಕಾರು ಕಲಿಸುತ್ತಿದ್ದಾಗ `ಅರೆ! ನಾನು ಪುಟ್ಟ ಮಕ್ಕಳಿಗೆ ನಾಟ್ಯ ಹೇಳಿಕೊಡುವ ವಿಧಾನ ಇದೇ ಅಲ್ಲವೆ!’ ಅನ್ನಿಸಿತು. ಕಾರು ಕಲಿಯುವುದು ಮತ್ತು ಭರತನಾಟ್ಯ ಎರಡರಲ್ಲೂ ಕಾಲು, ಕೈ ಹಾಗೂ ಕಣ್ಣು, ಮತ್ತು ಮನಸ್ಸು ಒಂದರೊಡನೊಂದು ಹೊಂದಾಣಿಕೆಯಿಂದ ಏಕಕಾಲದಲ್ಲಿ ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಬಲಗೈಗೆ ಎಡಗಾಲು, ಎಡಗೈಗೆ ಬಲಗಾಲು, ಬೇರೆ ಬೇರೆ ರೀತಿಯ ಕಣ್ಣೋಟಗಳು, ಮುದ್ರೆಗಳು ಎಲ್ಲವೂ ಇರುವ ಕಷ್ಟಕರವಾದ `ಅಡವು’ ಅನ್ನು (ಪ್ರಾಥಮಿಕ ಅಂಗಮೇಳವನ್ನು) ಕಲಿಸುವಾಗ ಮೊದಲು ಬರೀ ಕಾಲು, ನಂತರ ಕೈ, ಆಮೇಲೆ ಕಣ್ಣು, ಮನಸ್ಸಿನ ಏಕಾಗ್ರತೆಯ ಅಗತ್ಯ – ಈ ವಿವಿಧ ವಿಷಯಗಳನ್ನು ಒಟ್ಟಿಗೆ ಕಲಿಸುವುದಿಲ್ಲ, ಒಂದಾದ ನಂತರ ಒಂದರಂತೆ ಕಲಿಸುತ್ತೇವೆ. ಹಾಗೆಯೇ ಸರಿಯಾದ ರೀತಿಯಲ್ಲಿ ಕಾರು ಕಲಿಸುವವರು, ಮೊದಲ ಮೂರು-ನಾಲ್ಕು ದಿನ ಕೇವಲ ಎಡಗಾಲಿನಲ್ಲಿ ಕ್ಲಚ್, ಬ್ರೇಕ್ ಹಾಕುವುದನ್ನು ಕಲಿಸುತ್ತಾರೆ. ಇದರಲ್ಲಿ ಒಂದಷ್ಟು ಅಭ್ಯಾಸ ಆದ ನಂತರ ಬಲಗಾಲಿನಲ್ಲಿ ವೇಗವರ್ಧಕವನ್ನು – ಆಕ್ಸಿಲಿರೇಟರ್, ಸ್ಪೀಡ್, ರೇಸ್ ಎಂದೆಲ್ಲ ಕರೆಯುತ್ತಾರೆ ಇದನ್ನು – ಅಭ್ಯಾಸ ಮಾಡಿಸುತ್ತಾರೆ. ನಂತರ ಸ್ಟೀರಿಂಗ್, ನಂತರ ಗೇರ್ ಹೀಗೆ. ಆಮೇಲೆ ಏಕಕಾಲದಲ್ಲಿ ಎಲ್ಲವನ್ನೂ ಒಟ್ಟಿಗೆ ಮಾಡುವ ಬಹುಕಾರ್ಯ ಸನ್ನಿವೇಶ(ಮಲ್ಟಿ ಟಾಸ್ಕಿಂಗ್).
*****
ಹಾಂ, ಸರಿ. ನನ್ನ ಕಾರುಕಲಿಕಾ ಪುರಾಣವನ್ನು ಮುಂದುವರಿಸಲೆ? ಹುಲಿಯು ತನ್ನ ಸರಹದ್ದನ್ನು ದಿನಾ ತುಸುತುಸುವೇ ಹೆಚ್ಚು ಮಾಡಿಕೊಳ್ಳುವಂತೆ ನಾನು ಸಹ ನನ್ನ ಚಾಲನಾ ಸರಹದ್ದನ್ನು ನನ್ನ ಪ್ರತಿದಿನದ ನಸುಕಿನ ಅಭ್ಯಾಸದಲ್ಲಿ ಜಾಸ್ತಿ ಮಾಡುತ್ತಾ ಹೋದೆ. ಮನೆಯ ಅಕ್ಕಪಕ್ಕದ ರಸ್ತೆಗಳು, ಮೊದಮೊದಲು ಎಲ್ಲಿ ಗುದ್ದಿಬಿಡುತ್ತೇನೋ ಎಂದು ವಿಪರೀತ ಹೆದರಿಕೆ ಆಗಿ `ಯಾಕಪ್ಪಾ ಓಡಿಸ್ತೇನೆ, ಬೇಕಿತ್ತಾ ನಂಗೆ ಈ ವಯಸ್ಸಲ್ಲಿ ಇದು?’ ಎಂದು ಅನೇಕ ಸಲ ಅನ್ನಿಸುತ್ತಿತ್ತು. ಆದರೆ ಬಿಡದೆ ಓಡಿಸಿ ಓಡಿಸಿ ಈಗ ಒಬ್ಬಳೇ, ಮುಖ್ಯರಸ್ತೆಯಲ್ಲಿ 7-8 ಕಿಲೊಮೀಟರು ಓಡಿಸುವ ಹಂತಕ್ಕೆ ಬಂದಿದ್ದೇನೆ!
ಈ ಕಷ್ಟದ ಕಲಿಕೆಯಲ್ಲಿ ನನಗೆ ಸಹಾಯ ಮಾಡಿದ ಅನೇಕರು ನೆನಪಾಗುತ್ತಾರೆ. ಹೇಗೆ ನಿಲ್ಲಿಸಬೇಕು ಎಂದು ತೋರಿಸಿಕೊಟ್ಟ, ನಮ್ಮ ಮನೆಗೆ ಪೇಪರ್ ಹಾಕುವ ದಯಾನಂದ್, ಕಾರನ್ನು ಹಿಂದೆ ಹೇಗೆ ತರಬೇಕು ಎಂದು ತೋರಿಸಿಕೊಟ್ಟ ಎದುರು ಮನೆಯ ಅನಿಲ್, ಜೊತೆಗೆ ಕುಳಿತು ಧೈರ್ಯ ಕೊಟ್ಟ, ನಮ್ಮ ಮನೆಯ ಎದುರು ರಸ್ತೆಯಲ್ಲಿ ವಾಸಿಸುವ ಮನೆ ಧನಂಜಯ, `ಹೋಗುತ್ತೆ, ಹೋಗುತ್ತೆ … ತಿರುಗ್ಸಿ ತಿರುಗ್ಸಿ ಮೇಡಂ’ ಎಂದು ಧೈರ್ಯ ಕೊಟ್ಟ ದಾರಿಹೋಕರು, `ಕಲೀರಿ.. ಕಲೀಬೇಕು’ ಎಂದು ಮುಗುಳ್ನಕ್ಕು ಎತ್ತಿದ ಹೆಬ್ಬೆರಳು ತೋರಿದ ಮುಂಜಾನೆ ನಡಿಗೆಯವರು, ಅಂತರ್ಜಾಲ ದೃಶ್ಯಚಿತ್ರ ಮಾಡಿ ಕಾರು ಚಾಲನಾ ತರಬೇತಿ ನೀಡುವ ದೀಪಕ್, ಪೂನಂ ಎಲ್ಲ ನೆನಪಾಗುತ್ತಾರೆ.

`ಒಂದು ಮಗುವನ್ನು ಬೆಳಸಲು ಇಡೀ ಹಳ್ಳಿ ಬೇಕು’ ಎಂಬರ್ಥದ ಗಾದೆ ಮಾತಿದೆ ಇಂಗ್ಲಿಷ್ ಭಾಷೆಯಲ್ಲಿ. ಹೀಗೆಯೇ ನನ್ನ ಸ್ವಂತ ಅನುಭವದಿಂದ ಹೇಳುವುದಾದರೆ, `ಭಯಗ್ರಸ್ತ ಚಾಲಕಿಗೆ ಕಾರುಚಾಲನೆ ಕಲಿಸಲು ಇಡೀ ಸಮುದಾಯ ಬೇಕು! `ಎನಿತು ಜನ್ಮದಲಿ ಎನಿತು ಜೀವರಿಗೆ ನಮ್ಮ ಬಾಳು ಋಣಿಯೊ, ನಿಜದಿ ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೊ’ ಎಂಬ ಕವಿನುಡಿ (ಕೆ.ಎಸ್.ನರಸಿಂಹಸ್ವಾಮಿ) ನೆನಪಾಗುತ್ತಿದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

