Advertisement
ಕೆಂಪು ಟಿಟ್ಟಿಭ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೆಂಪು ಟಿಟ್ಟಿಭ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೆಂಪು ಟಿಟ್ಟಿಭ, ಗೂಡು ಕಟ್ಟುವ ಪರಿ, ವಿಚಿತ್ರ ಮತ್ತು ವಿಶಿಷ್ಟ! ಮಾರ್ಚ್‌ನಿಂದ ಆಗಸ್ಟ್ ತಿಂಗಳುಗಳಲ್ಲಿ ಇವುಗಳ ಸಂತಾನಾಭಿವೃದ್ಧಿ. ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ, ನೇರವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತವೆ. 3-4 ಮೊಟ್ಟೆಗಳನ್ನು ಇಟ್ಟು, ಮರಿ ಮಾಡುತ್ತದೆ. ಮೊಟ್ಟೆಗಳು ಕಂದು ಬಣ್ಣದ ಮೇಲೆ ವಿವಿಧ ಗಾತ್ರದ ಗಾಢ ಮಣ್ಣಿನ ಚುಕ್ಕೆಗಳಿದ್ದು, ಗೂಡುಗಳು ಮತ್ತು ಮೊಟ್ಟೆಗಳು ಅವುಗಳಿರುವ ನೆಲದ ಬಣ್ಣ ಹಾಗೂ ಸುತ್ತಲಿನ ವಸ್ತುಗಳನ್ನು ಹೋಲುವುದರಿಂದ ಅವುಗಳನ್ನು ಗುರುತಿಸುವುದು ಬಹಳ ಕಷ್ಟ.
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂಪು ಟಿಟ್ಟಿಭ ಹಕ್ಕಿಯ ಕುರಿತ ಬರಹ ಇಲ್ಲಿದೆ

ಇಂದಿನ ನಮ್ಮ ಹಕ್ಕಿ, ಕೆಂಪು ಟಿಟ್ಟಿಭ. ಟಿಟ್ಟಿಭದ ಹೆಸರನ್ನು ನೀವು ಪಂಚತಂತ್ರದ ಕತೆಗಳಲ್ಲಿಯೂ ಕೇಳಿರುತ್ತೀರಿ. ಇದು ಕ್ಯಾರಾಡ್ರಿಡೇ, Charadriidae, ಕುಟುಂಬಕ್ಕೆ ಸೇರಿದ ಪಕ್ಷಿ. ಇಂಗ್ಲೀಷಿನಲ್ಲಿ ಈ ಹಕ್ಕಿಯನ್ನು Red-wattled Lapwing  ಎಂತಲೂ, ವೈಜ್ಞಾನಿಕ ಪರಿಭಾಷೆಯಲ್ಲಿ Vanellus indicus ಎಂದೂ ಕರೆಯುತ್ತಾರೆ. ಟಿಟ್ಟಿಭಗಳು, 33 ಸೆಂಮೀ. ಗಾತ್ರದ ಅಂದರೆ, ಮಧ್ಯಮ ಗಾತ್ರದ ಹಕ್ಕಿಗಳು. ಅಗಲವಾದ, ಕಪ್ಪು ಬಣ್ಣದ ತಲೆಗೆ ದೊಡ್ಡ ಕಣ್ಣುಗಳು; ಕತ್ತು, ಎದೆ, ರೆಕ್ಕೆ ಮತ್ತು ಬಾಲದ ಅಂಚು ಎಲ್ಲವೂ ಕಪ್ಪು; ತಿಳಿಗಂದು ಬೆನ್ನು; ಕೆಳಮೈ ಬಿಳಿ; ಚಿಕ್ಕ, ಗಟ್ಟಿಮುಟ್ಟಾದ ಕೆಂಪು ಕೊಕ್ಕು ಮತ್ತು ಅದರ ತುದಿ ಕಪ್ಪು; ಕೆಂಪು ಟಿಟ್ಟಿಭಕ್ಕೆ ಕಣ್ಣಿನ ಮುಂಭಾಗದಲ್ಲಿ ಅಚ್ಚಗೆಂಪು ಮಾಂಸಲ; ಹಳದಿ ಕಾಲುಗಳು ಮತ್ತು ಮೊಂಡು ಬಾಲ. ದೂರದ ಹಾರಾಟಕ್ಕೆ ತಕ್ಕುದಾದ ಉದ್ದವಾದ ಮತ್ತು ಚೂಪಾದ ರೆಕ್ಕೆಗಳು; ಈ ರೆಕ್ಕೆಗಳು ಹಿಂಬದಿಯಲ್ಲಿ ಒಂದರ ಮೇಲೊಂದು ಆವರಿಸಿಕೊಂಡಿರುತ್ತವೆ. ಹಾಗಾಗಿ ಈ ಹಕ್ಕಿಗಳಿಗೆ Lapwing ಹೆಸರು. ಆಕಾಶದಲ್ಲಿ ವೇಗದ ಮತ್ತು ನೇರವಾದ ಹಾರಾಟ.

ಸಾಧಾರಣವಾಗಿ ಜೋಡಿಯಾಗಿ, ಕೆರೆ, ಸರೋವರ ಮತ್ತು ಇತರ ಜಲಮೂಲಗಳು, ಹೊಲಗಳು, ಗೋಮಾಳಗಳಲ್ಲಿ, ಹುಲ್ಲುಗಾವಲು, ಮೈದಾನ, ಕೃಷಿ ಪ್ರದೇಶ, ಕೊಳದ ದಂಡೆ, ಗದ್ದೆಗಳ ಬಳಿ ವಾಸ ಮಾಡುತ್ತವೆ. ಕೆಂಪು ಟಿಟ್ಟಿಭಗಳ ಆಹಾರದಲ್ಲಿ ಬಗೆ ಬಗೆಯ ಕೀಟಗಳು, ಶಂಖುಹುಳ, ಮೃದ್ವಂಗಿ, ಅಕಶೇರುಕಗಳು, ಹಾಗೂ ಮಣ್ಣಿನೊಳಗಿನ ಸಸ್ಯಜನ್ಯಗಳು, ಕೆಲವೊಮ್ಮೆ ಧಾನ್ಯಗಳು ಸೇರಿವೆ. ಅಲ್ಲದೆ, ಹುಣ್ಣಿಮೆ ರಾತ್ರಿಯ ಚಂದ್ರನ ಬೆಳಕಿನಲ್ಲಿ ಕೂಡ ಆಹಾರವನ್ನು ಅರಸುತ್ತವೆ.

ಕೆಂಪು ಟಿಟ್ಟಿಭ, ಗೂಡು ಕಟ್ಟುವ ಪರಿ, ವಿಚಿತ್ರ ಮತ್ತು ವಿಶಿಷ್ಟ! ಮಾರ್ಚ್‌ನಿಂದ ಆಗಸ್ಟ್ ತಿಂಗಳುಗಳಲ್ಲಿ ಇವುಗಳ ಸಂತಾನಾಭಿವೃದ್ಧಿ. ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ, ನೇರವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತವೆ. 3-4 ಮೊಟ್ಟೆಗಳನ್ನು ಇಟ್ಟು, ಮರಿ ಮಾಡುತ್ತದೆ. ಮೊಟ್ಟೆಗಳು ಕಂದು ಬಣ್ಣದ ಮೇಲೆ ವಿವಿಧ ಗಾತ್ರದ ಗಾಢ ಮಣ್ಣಿನ ಚುಕ್ಕೆಗಳಿದ್ದು, ಗೂಡುಗಳು ಮತ್ತು ಮೊಟ್ಟೆಗಳು ಅವುಗಳಿರುವ ನೆಲದ ಬಣ್ಣ ಹಾಗೂ ಸುತ್ತಲಿನ ವಸ್ತುಗಳನ್ನು ಹೋಲುವುದರಿಂದ ಅವುಗಳನ್ನು ಗುರುತಿಸುವುದು ಬಹಳ ಕಷ್ಟ. ಇದು ನೈಸರ್ಗಿಕ ಛದ್ಮವೇಷದಿಂದ, ಸುಳುಹು ಮರೆ ಮಾಚುವುದಕ್ಕೆ ಉತ್ತಮ ಉದಾಹರಣೆ.

ಅಹರ್ನಿಶಿ, ನಿರಂತರ ಜಾಗರೂಕತೆಯಿಂದ, ನೆಲದ ಮೇಲಿಡುವ ಮೊಟ್ಟೆ-ಮರಿಗಳನ್ನು ಕಾಪಾಡುತ್ತಾ ಸಾಕುತ್ತದೆ. ಇವುಗಳ ಗಮನ ಅತೀ ಸೂಕ್ಷ್ಮ. ಮುಂಗುಸಿ, ಕಾಗೆ, ಗಿಡುಗ, ಗರುಡಗಳು ಮುಖ್ಯ ಶತ್ರುಗಳು. ಆಪತ್ತಿನ ಸೂಚನೆ ಕಂಡುಬಂದರೆ, ತಕ್ಷಣ ಕೂಗಾಡಿ, ಗುಲ್ಲೆಬ್ಬಿಸಿ ಇತರ ಹಕ್ಕಿಗಳನ್ನೂ ಎಚ್ಚರಗೊಳಿಸಿಬಿಡುತ್ತದೆ. ವ್ಯವಸಾಯ ಅಥವಾ ಇನ್ನಾವುದೇ ಕಾರಣದಿಂದ ಆ ಗೂಡಿಗೆ ತೊಂದರೆ ಕಂಡು ಬಂದಲ್ಲಿ ಮೊಟ್ಟೆಗಳೊಂದಿಗೆ ಗೂಡನ್ನೂ ಸುರಕ್ಷಿತ ಸ್ಥಳಕ್ಕೆ ವರ್ಗ ಮಾಡಬಲ್ಲವು!

ಕೆಂಪು ಟಿಟ್ಟಿಭದ ಕೂಗು ಎಲ್ಲರಿಗೂ ಸುಪರಿಚಿತ. ಇದು ನಾಲ್ಕು ಸ್ವರದ ಡಿಡ್.ಯೂ.ಡೂ.ಇಟ್.? ಎಂಬ ಪ್ರಶ್ನಾರ್ಥಕ ಸಿಳ್ಳೆ! ಕತ್ತಲಾದ ನಂತರವೂ ಡಿಡ್.ಯು.ಡೂ.ಇಟ್. ಕೂಗು ಕೇಳಬಹುದು.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ