Advertisement
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರೆದ ಈ ದಿನದ ಕವಿತೆ

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರೆದ ಈ ದಿನದ ಕವಿತೆ

ದೇವರು ಭಿಕ್ಷುಕನಾದ

ಅವನೊಬ್ಬ ಯುವರಾಜಕುಮಾರ
ಅವನಿಗಾಗಿ ಸಾರೋಟ ಮತ್ತು ಸಂಸಾರ.
ಆದರೋ ಅವನಿಗೆ ಅದೆಲ್ಲವೂ ಬೇಕಿರಲಿಲ್ಲ.
ಹೀಗೊಂದು ದಿನ ಎಲ್ಲವನ್ನು ತೊರೆದ
ಎಲ್ಲಿಗೋ ಹೊರಟ
ಒರಟು ದಾರಿ ಮುಳ್ಳು ಕಂಟಿ
ಇಟ್ಟ ಹೆಜ್ಜೆಗಿತ್ತು ದೃಢತೆ
ನೋವಿನ ಮೂಲ ಹುಡುಕ ಹೊರಟು
ಸನ್ಯಾಸಿಯಾದ.

ಅವನು ಭಿಕ್ಕುವಾದ
ಜ್ಞಾನದ ಜೋಳಿಗೆ ಹಿಡಿದು ತಿರುಗಾಡಿದ
ಅರಿವಿನ ದಾರಿ ಹಿಡಿದು ಅಲೆದಾಡಿದ
ಭಿಕ್ಕು ತನ್ನ ತಾನರಿಯುವತ್ತಲೇ
ಯಾರೂ ನಡೆಯದ ದಾರಿಯಲ್ಲಿ ನಡೆದ
ತನಗೆ ತಾನೇ ಬೆಳಕಾದುದ ಕಂಡ
ಕೊನೆಗೊಮ್ಮೆ ನಸುನಕ್ಕ
ಜಗದ ಬೆಳಕಿದು ಎಂದ
ಲೋಕ ಮೈಕೊಡವಿ ಎದ್ದಿತು. ಭಿಕ್ಷೆ ಬೇಡಿದವಗೇ ದೇವರೆಂದಿತು

ದೇವರೇ ಭಿಕ್ಷೆ ಕೇಳಿ ಭಿಕ್ಕುವಾದ.
ಅವನ ಜೋಳಿಗೆ ತುಂಬಿದವರು
ಜೋಳಿಗೆಯಿಂದ ಹೊಟ್ಟೆ ತುಂಬಿಸಿಕೊಂಡವರು
ಕೇವಲ ಮನುಷ್ಯರಾದರು
ಆದರೇ ಎಲ್ಲರಿಗೂ ಎಲ್ಲವನ್ನು
ಹಂಚಿದ ಭಿಕ್ಷುಕನೇ ದೇವರಾದ.

ಜೋಳಿಗೆಗೆ ಶತ ಶತಮಾನ ಕಳೆದ ಆಯುಷ್ಯವಿದೆ.
ಸದ್ಯ ಅದಕ್ಕೂ ಜಂಗು ಹಿಡಿದಿದೆ.
ಜೋಳಿಗೆಯೊಳಗಿನ ಬುತ್ತಿ ಉಂಡವರು ಇನ್ನೂ ಮನುಷ್ಯರಾಗಲೇ ಇಲ್ಲ.

ಎಲ್ಲ ನನ್ನದೇ ಎಲ್ಲ ನನಗೆ ಸೇರಲೇ ಬೇಕೆಂಬ ನಾವು ಮಾನವರು ಆಗುತ್ತಿಲ್ಲ.
ಬೇಡಾದುದ ಎಲ್ಲವನ್ನು ತೊರೆದು ಹೊರಟವ
ಬೇಕಾದುದ ಎಲ್ಲವನ್ನು ಗಳಿಸಿದ ಭಿಕ್ಷುಕ ದೇವರಾದ

ಭಿಕ್ಕು ಬೀರಿದ ಮಾತುಗಳೆಲ್ಲಾ ಅಮೃತದ ಅಗಳುಗಳು
ಹಸಿವು ಸಾವು ನೋವು ಕೊನೆಗೆ ಬೆಲ್ಲ ಬೇವು
ತಥಾಗತನಾಗಲೇ ಬೇಕಾದ ಯುವರಾಜ
ಗತದ ಮಹಾದೇವನಾದ.
ದೇವರು ಭಿಕ್ಷುಕನಾದ ಭಿಕ್ಷುಕ ದೇವರಾದ.

ಯಶೋಧರೆಯ ಮೂರು ಮುಷ್ಟಿಯ
ಮೊದಲ ಖಾಲಿ ಭಿಕ್ಷೆ ಪಡೆದ ಸಿದ್ಧಾರ್ಥ
ಲೋಕತೊಟ್ಟಿಲಿಗೆ ತಾಯಿಯಾದ
ಬೆರಳುಸಂದಿಗಳಲಿ
ಒಂದಗುಳೂ ಉಳಿಯದಂತೆ ಈಯುವವಳು ತಾಯಿ ತಾನಲ್ಲದೇ ಬೇರಿಲ್ಲ ಎಂದ

ಸತ್ಯ ಬೆತ್ತಲಾಗಿದೆ
ಕತ್ತಲ ಕಣ್ಣು ಗಹಗಹಿಸುತ್ತಿದೆ
ನ್ಯಾಯಕ್ಕೆ ವೃದ್ಧಾಪ್ಯ
ಪ್ರಾಮಾಣಿಕತೆ ಮಸಣದ ಹೂವಾಗಿದೆ.
ಬಿಸಿಲೂರು ಲುಂಬಿನಿಯ ಸಿದ್ದ
ಜಗವ ಸುತ್ತಿದರು ಕರಗಿ ಕತ್ತಲಾಗಲಿಲ್ಲ
ಅಂದು ದಿವ್ಯಜ್ಯೋತಿ
ಯಾಗಿದ್ದ ಬುದ್ಧ
ಈಗ ಹಗಲಲ್ಲಿ
ಮಿಂಚು ಹುಳುವಾದ

About The Author

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಮೈತ್ರೇಯಿಣಿ ಗದಿಗೆಪ್ಪಗೌಡರ  ಮೂಲತಃ ಹುಬ್ಬಳ್ಳಿಯವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ೧೦ ವರ್ಷ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಭಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲವು ಹನಿಗವಿತೆ ಮತ್ತಿತರ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ