ಹೀಗೆ ಮಾತನಾಡುತ್ತಿದ್ದಾಗ, ‘ಈ ಸರಣಿಗೆ ತೇಜಸ್ವಿ ಫೋಟೋ ಹಾಕಿಕೊಳ್ಳಬೇಕು, ಕತೆಗಾರ ಅಬ್ದುಲ್ ರಶೀದ್ ಸಾರ್, ನೀವು ತೆಗೆದಿರುವ ತೇಜಸ್ವಿ ಫೋಟೋ ಕೇಳುತ್ತಿದ್ದಾರೆ ಯಾವುದಾದರೂ ಕೊಡಿ’ ಎಂದೆ. ಅದಕ್ಕವರು ಒಂದು ಕ್ಷಣ ಯೋಚಿಸಿ ನಕ್ಕರು. ‘ಏಕೆ ಸಾರ್ ತೆಗೆದಿಲ್ಲವಾ….?’ ಎಂದು ಮತ್ತೆ ಕೇಳಿದೆ. ‘ಏ ಇಲ್ಲಾ ಕಣೋ ತೇಜಸ್ವಿ ಸಾವಿರಾರು ಫೋಟೋ ತೆಗೆದಿದ್ದಾರೆ. ನಾನೂ ಕೂಡ ತೆಗೆದಿದ್ದೇನೆ. ಎಂತೆಂಥಹವರ ಫೋಟೋ ತೆಗೆದಿದ್ದೇವೆ. ಆದರೆ ಎಂದೂ ನಮ್ಮ ನಮ್ಮ ಫೋಟೋಗಳನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ
ತೇಜಸ್ವಿ ಮತ್ತು ಕೆ.ಟಿ. ಶಿವಪ್ರಸಾದ್ ಪರಸ್ಪರ ಗೌರವಿಸುತ್ತಿದ್ದರು. ಸಣ್ಣಪುಟ್ಟ ಮನಸ್ತಾಪಗಳ ಹೊರತಾಗಿ ತೇಜಸ್ವಿ-ಲಂಕೇಶರಂತೆ ದೊಡ್ಡ ಮಟ್ಟದಲ್ಲಿ ಅಂತರ ಕಾಯ್ದುಕೊಳ್ಳಲಿಲ್ಲ. ಆ ಗೌರವವನ್ನು ತೇಜಸ್ವಿ ಇರುವವರೆಗೂ ಕಾಯ್ದುಕೊಂಡು ಬಂದಿದ್ದು ಇವರ ಗೆಳೆತನಕ್ಕೆ ಸಾಕ್ಷಿ.
ಹೀಗೆ ಮಾತನಾಡುತ್ತಿದ್ದಾಗ, ‘ಈ ಸರಣಿಗೆ ತೇಜಸ್ವಿ ಫೋಟೋ ಹಾಕಿಕೊಳ್ಳಬೇಕು, ಕತೆಗಾರ ಅಬ್ದುಲ್ ರಶೀದ್ ಸಾರ್, ನೀವು ತೆಗೆದಿರುವ ತೇಜಸ್ವಿ ಫೋಟೋ ಕೇಳುತ್ತಿದ್ದಾರೆ ಯಾವುದಾದರೂ ಕೊಡಿ’ ಎಂದೆ. ಅದಕ್ಕವರು ಒಂದು ಕ್ಷಣ ಯೋಚಿಸಿ ನಕ್ಕರು. ‘ಏಕೆ ಸಾರ್ ತೆಗೆದಿಲ್ಲವಾ….?’ ಎಂದು ಮತ್ತೆ ಕೇಳಿದೆ. ‘ಏ ಇಲ್ಲಾ ಕಣೋ ತೇಜಸ್ವಿ ಸಾವಿರಾರು ಫೋಟೋ ತೆಗೆದಿದ್ದಾರೆ. ನಾನೂ ಕೂಡ ತೆಗೆದಿದ್ದೇನೆ. ಎಂತೆಂಥಹವರ ಫೋಟೋ ತೆಗೆದಿದ್ದೇವೆ. ಆದರೆ ಎಂದೂ ನಮ್ಮ ನಮ್ಮ ಫೋಟೋಗಳನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ. ತೆಗೆಯಬೇಕು ಎಂದು ಎನ್ನಿಸಲಿಲ್ಲ. ಅದೇನೋ… ನಮ್ಮಿಬ್ಬರ ಮಧ್ಯೆ ಒಂದು ರೀತಿಯ ಭಾವವಿತ್ತು. ಒಬ್ಬರನ್ನೊಬ್ಬರು ಅಪಾರವಾಗಿ ಗೌರವಿಸುತ್ತಿದ್ದೆವು’ ಎಂದು ನಿಟ್ಟುಸಿರುಬಿಟ್ಟರು ಕೆ.ಟಿ.
ಅವರ ನಡುವೆ ನಡೆದ ಕೆಲವು ಅಪರೂಪದ ಪ್ರಸಂಗಗಳನ್ನು ಘಟನೆಗಳನ್ನು ಕೆಟಿ ಬಾಯಿಂದಲೇ ಕೇಳಿ…
‘ಆಗ ತೇಜಸ್ವಿ ಮಕ್ಕಳಾದ ಸುಷ್ಮಾ, ಈಶಾನ್ಯ ಇನ್ನೂ ಚಿಕ್ಕವರು. ಅವರ ಬಳಿ ಕಿವಿ ಎಂಬ ನಾಯಿ ಇತ್ತು. ಅವರ ಮನೆಗೆ ಹೋದಾಗ ಗರ್ರ್ ಎನ್ನುತ್ತಿತ್ತು. ಟೇಬಲ್ ಮೇಲಿಂದ ಒಂದು ಪೇಪರ್ ತೆಗೆದರೂ ಗರ್ರ್ ಎನ್ನುತ್ತಿತ್ತು. ಆನಂತರ ಅದು ನನಗೂ ಫ್ರೆಂಡ್ ಆಯಿತು.
ಅಲ್ಲೊಬ್ಬ ಮಾರ ಎಂಬ ದಲಿತನಿದ್ದ ಸುಮಾರು ಎಪ್ಪತ್ತೈದು ವರ್ಷ. ಅವನು ತೇಜಸ್ವಿಯವರ ಪುಸ್ತಕಗಳಲ್ಲಿ ಅಲ್ಲಲ್ಲಿ ಬಂದು ಹೋಗುತ್ತಾನೆ. ವಿಚಿತ್ರ ಕ್ಯಾರೆಕ್ಟರ್. ಅದೆಲ್ಲಿಂದಲೋ ಪ್ರತ್ಯಕ್ಷ ಆಗುತ್ತಿದ್ದ ‘ನಮಸ್ಕಾರ ಬುದ್ದಿಯೋರೆ’ ಎನ್ನುತ್ತಿದ್ದ. ನನಗೋ ಒಂದೊಂದು ಸಾರಿ ಇವನ ವರ್ತನೆ ನೋಡಿದರೆ ಭಯ ಆಗುತ್ತಿತ್ತು.
ಹೀಗೆ ಒಮ್ಮೆ ನಾನು, ತೇಜಸ್ವಿ ಯಾವುದೋ ವಿಚಾರ ಮಾತನಾಡುತ್ತ ನಡೆದು ಹೋಗುತ್ತಿದ್ದೆವು. ಎದುರಿಗಿದ್ದ ಗದ್ದೆಯಲ್ಲಿ ಗುಂಪೊಂದು ಸೇರಿಕೊಂಡು ಏನೋ ಅಟ್ಟಿಸಿಕೊಂಡು ಓಡುತ್ತಿದ್ದರು. ನನಗೆ ಅಚ್ಚರಿ ‘ಯಾರನ್ನಾದರೂ ಹಿಡಿಯಲು ಓಡುತಿದ್ದಾರೆಯೇ..?’ ಎಂದು ತೇಜಸ್ವಿಯವರನ್ನು ಕೇಳಿದೆ. ‘ಇರು ಶಿವಾ’ ಎಂದು ಸುಮ್ಮನಿರಿಸಿದ ತೇಜಸ್ವಿ “ಹಾಗೇ ನೋಡು ಅವರನ್ನು” ಎಂದು ಕಣ್ಣಾಡಿಸಿದರು. ನನಗೋ ಅಚ್ಚರಿ, ಮುಂದೆ ಹೋಗಿ ನೋಡಿದರೆ, ಆ ಗುಂಪು ಓಡಿಸುತ್ತಿದ್ದದ್ದು ಮೊಲವೊಂದನ್ನು. ನನಗೆ ನಗು ತಡೆಯಲಾಗಲಿಲ್ಲ. ‘ಒಂದು ಮೊಲ ಹಿಡಿಯಲು ಇಷ್ಟು ಜನವಾ’ ಎಂದೆ.
ಅದಕ್ಕೆ ತೇಜಸ್ವಿ ‘ಶಿವಾ ಹಾಗೆ ನೋಡು, ಆ ಜನಕ್ಕೆ ಆ ಮೊಲ ಹೇಗೆ ಕಾಣುತ್ತಿದೆ ಗೊತ್ತಾ; ಬಿರಿಯಾನಿ ಕಂಡಂತಿದೆ. ನೋಡು ಆ ಜನ ಹೆಂಗೆ ಆಸೆಯಿಂದ ಹಿಡಿಯಲು ಓಡುತಿದ್ದಾರೆ. ಅವರ ಕಣ್ಣು, ಬಾಯನ್ನು ನೋಡು’ ಎಂದರು ತೇಜಸ್ವಿ. ಆ ಸನ್ನಿವೇಶ ಕಲ್ಪಿಸಿಕೊಂಡು ಇಬ್ಬರೂ ನಕ್ಕೆವು.

ತೇಜಸ್ವಿಗೆ ಬಿರಿಯಾನಿ ಎಂದರೆ ಇಷ್ಟವಿತ್ತು. ಒಮ್ಮೊಮ್ಮೆ ಇಬ್ಬರೂ ಮೂಡಿಗೆರೆಗೆ ಬಂದು ಮಾಂಸ ತೆಗೆದುಕೊಂಡು ಹೋಗುತ್ತಿದ್ದೆವು.
ಅವರ ಹತ್ತಿರ ಒಂದು ಜೀಪಿತ್ತು. ಹೀಗೆ ಒಂದು ದಿನ ಚಿಕ್ಕಮಗಳೂರಿಗೆ ಹೋಗಿದ್ದೆವು. ಆ ಜೀಪಿನದೋ ವಿಚಿತ್ರವಾದ ಸದ್ದು. ಚಿಕ್ಕಮಗಳೂರಿಗೆ ಸಮೀಪ ಇದ್ದಾಗ ಮಧ್ಯದಲ್ಲಿ ಕೆಟ್ಟು ನಿಂತಿತು. ಹತ್ತಿರ ಯಾವುದೇ ಗ್ಯಾರೆಜ್ ಕೂಡ ಇಲ್ಲದ್ದರಿಂದ ಇನ್ನು ಕತೆ ಅಷ್ಟೆ ಎಂದು ನನಗೆ ಆತಂಕ ಶುರುವಾಯ್ತು.
ಆದರೆ ತೇಜಸ್ವಿ ಮುಖದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಕಷ್ಟು ಬಾರಿ ಸ್ಟಾರ್ಟ್ ಮಾಡಿದರೂ ಜೀಪು ಮುಂದಕ್ಕೆ ಹೋಗಲೇ ಇಲ್ಲ.
ಅದೇನು ನೋಡುತ್ತೇನೆ ಎಂದು ಜೀಪಿನ ಅಡಿ ಮಲಗಿದ ತೇಜಸ್ವಿ ಕಣ್ಣಿನಲ್ಲೇ ಏನಾಗಿದೆ ಎಂದು ಒಂದು ಅಂದಾಜು ಮಾಡಿ ಎದ್ದರು. ಅವರಿಗೆ ಈ ರಿಪೇರಿಯಲ್ಲಿ ತುಂಬಾ ಆಸಕ್ತಿ, ಕುತೂಹಲ. ನಂತರ ಜೀಪಿನ ಅಡಿ ಮಲಗಿ ಅದೇನೋ ಮಾಡಿದರು. ನಾನು ಹಿಂದಿನಿಂದ ದೂಕಿದೆ. ಕೊನೆಗೂ ಜೀಪು ಸ್ಟಾಟ್ ಆಗಿ ‘ಅಬ್ಬಾʼ ಎಂದು ನಿಟ್ಟುಸಿರು ಬಿಟ್ಟು ಮನೆಗೆ ಬಂದೆವು.
ಹೇಗೋ ತೇಜಸ್ವಿ ಅವರ ಮನೆಗೆ ಬಂದೆವು. ತೇಜಸ್ವಿ ಪತ್ನಿಯವರು ‘ಏನು ರಸ್ತೆಯಲ್ಲಿ ಮಲ್ಕೊಂಡು ಜೀಪು ರಿಪೇರಿ ಮಾಡ್ತಾ ಇದ್ರಂತಲ್ಲಾ’ ಎಂದು ಪ್ರಶ್ನಿಸಿದರು. ನನಗೋ ನಗು.
ತಿರುಗಿ ಪತ್ನಿಯತ್ತ ನೋಡಿದ ತೇಜಸ್ವಿ ‘ಯಾವನೇ ಅವ್ನು ಹೇಳಿದ್ದು’ ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಅವರು ಮಾತನಾಡಲಿಲ್ಲ.
ನಮಗೋ ಅಚ್ಚರಿ ಅದೇಗೆ ನಾವು ಜೀಪು ರಿಪೇರಿ ಮಾಡಿದ್ದು ಇವರಿಗೆ ಗೊತ್ತಾಯಿತು ಎಂದು.
ವಿಪರ್ಯಾಸ ಎಂದರೆ ಇವರು ರಿಪೇರಿ ಮಾಡುವಾಗ ಈ ಭಾಗದ ಕೆಲವರು ಅದೇ ರಸ್ತೆಯಲ್ಲಿ ಬಸ್ನಲ್ಲಿ ಬರುವಾಗ ನಮ್ಮ ಅವಸ್ಥೆ ನೋಡಿದ್ದರು. ಬಂದವರೇ ‘ಏನಮ್ಮಾ ನಿನ್ನ ಗಂಡ ಮತ್ತು ಅವರ ಜತೆ ಅದ್ಯಾರೋ ರಸ್ತೆಯಲ್ಲಿ ಮಲಕ್ಕೊಂಡು ಜೀಪು ರಿಪೇರಿ ಮಾಡ್ತಿದ್ರು ನೀವಾದ್ರು ಅವ್ರಿಗೆ ಹೇಳೋದಲ್ವಾ..? ಹಂಗೆಲ್ಲ ರಸ್ತೆಲಿ ಮಲ್ಕೊಂಡು ರಿಪೇರಿ ಮಾಡ್ಬೆಡಿ ಅಂತಾ, ನೋಡ್ದವ್ರು ಏನಂತಾರೆ’. ಎಂದು ಹೇಳಿ ಹೋಗಿದ್ದರು.
ವಿಚಾರ ತಿಳಿದ ತೇಜಸ್ವಿ “ಅವನ್ಯಾವನು ಸಿಕ್ಲಾ” ಎಂದು ಕಿಡಿ ಕಾರಿದ್ದರು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


