Advertisement
ಧನ್ವಂತರಿ  ಚಿಕಿತ್ಸೆ ಇಂದಿಗೆ  ನಡೆಯುವುದೇ?: ಸುಮಾವೀಣಾ  ಅಂಕಣ

ಧನ್ವಂತರಿ  ಚಿಕಿತ್ಸೆ ಇಂದಿಗೆ  ನಡೆಯುವುದೇ?: ಸುಮಾವೀಣಾ ಅಂಕಣ

ಪುರಾಣ ಪ್ರಸಂಗ ಇಲ್ಲಿ ಮನೋರಂಜನೆಯ ಉದ್ದೇಶವಾಗಿಲ್ಲ; ವಾಸ್ತವತೆಯನ್ನು ತೆರೆದಿಡುವುದೇ ಆಗಿದೆ.  ಧನ್ವಂತರಿ ಆಯುರ್ವೇದದ ಅಧಿಪತಿ  ಅರ್ಥಾತ್ ದೈವವೆಂದೆ ನಮಗೆ ತಿಳಿದಿರುವಂಥದ್ದು. ದೈವಿಕ ಶಕ್ತಿಯೇ ಬಂದು ರೈತನ ಸಮಸ್ಯೆಯನ್ನು ಬಗೆಹರಿಸಿ,  ಸಾಮಾಜಿಕ ಸಮಸ್ಯೆಯೊಂದಿಗೆ  ಮುಖಾಮಖಿಯಾಗುವ ಪರಿಭಾಷೆ ಅನನ್ಯವಾಗಿದೆ, ರೈತರಲ್ಲಿ ನೈತಿಕತೆಯನ್ನು ಬಲಪಡಿಸುವ,  ಅವಶ್ಯಕತೆ ಮತ್ತು ಅಸಾಹಯಕತೆಯನ್ನು ಗುರುತಿಸುವ ನೊಂದ ರೈತನ ಮಾನಸಿಕ ಸ್ಥರವನ್ನು ತಲುಪುವ  ಕುವೆಂಪುರವರ ಪ್ರಯತ್ನ ಇಂದಿನ ರಾಜಕೀಯ ಮತ್ತು ಸಮಾಜದ್ದಾಗಬೇಕಾಗಿದೆ. ‘ಬಾಯಂಚಿನಮಾತು ಮಗಿಲಿನ ಕಿವಿಯನ್ನು ಮುಟ್ಟಲೆ ಇಲ್ಲ’   ಎಂಬಂತೆ ಬಡ ರೈತನಕೂಗು  ಯಾರಿಗೂ ಕೇಳಿಸುತ್ತಿಲ್ಲ. ನಮ್ಮ ಸಮಾಜದಲ್ಲಿ ಈಗಾಗಲೇ ಆಗಿ ಹೋಗಿರುವ ವೈರುಧ್ಯಗಳನ್ನು ಬುಡಸಹಿತ ತೆಗೆದುಹಾಕುವ ಚಿಕಿತ್ಸೆ  ಬೇಕು.
ಸುಮಾವೀಣಾ
ಬರೆಯುವ “ನುಡಿನಲಿವು” ಅಂಕಣದಲ್ಲಿ ಹೊಸ ಬರಹ

‘ಧನ್ವಂತರಿ ಚಿಕಿತ್ಸೆ’ ಪೌರಾಣಿಕ ಪ್ರತಿಮೆಯಿರುವ ಕುವೆಂಪುರವರ ಕಥೆ. ದೇವಲೋಕದಲ್ಲಿ ವಿಶ್ವಾಮಿತ್ರ ಯಾರದ್ದೋ ನರಳಾಟದ ಧ್ವನಿಯನ್ನು ಕೇಳಿಸಿಕೊಂಡು ಅದನ್ನು ಹುಡುಕಿಕೊಂಡು ಭೂಲೋಕದವರೆಗೂ ಬಂದು ಅದನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡುವುದು ಕಥೆಯ  ಸಾರಾಂಶ. ಮುಂಗಾರು ಕಳೆಯುತ್ತಾ ಬಂದರೂ ನಮಗೆ ಅಗತ್ಯವಾಗಿ ಬೀಳಬೇಕಾದ ಮಳೆ ಬಿದ್ದಿಲ್ಲ.  ಜಲಾಶಯಗಳೆಲ್ಲ ಬರಿದಾಗಿವೆ ಬೆಳೆ ಬೆಳೆಯುವುದು ಹೋಗಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಬರದೆ ಇದ್ದರೆ ಸಾಕು ಎನ್ನುವ  ಕೋರಿಕೆ ಜನಸಾಮಾನ್ಯರದ್ದಾಗಿದೆ. ಇನ್ನೊಂದೆಡೆ ತಮಿಳಿನಾಡಿಗೆ ಇಷ್ಟೇ ಪ್ರಮಾಣದಲ್ಲಿ ನೀರು ಹರಿಸಬೇಕೆಂದು  ಕಾವೇರಿ ನ್ಯಾಯಾಧಿಕರಣ ಆದೇಶ ನೀಡಿದೆ. ಆ ಕಾರಣಕ್ಕೆ  ರೈತ ಹೋರಾಟಗಳು, ಕನ್ನಡಪರ ಸಂಘಟನೆಗಳ ಹೋರಾಟಗಳು,  ಕರ್ನಾಟ ಬಂದ್ ಮಾಡುವ  ಮಾತುಕತೆಗಳು,   ಜಲಾಶಯಗಳ ಮುತ್ತಿಗೆಯಂಥ   ಮಾತುಗಳು ಕೇಳಿ ಬರುತ್ತಿವೆ. ಕಾವೇರಿ ನೀರಿನ ಹೋರಾಟ ಎಂದಾಗ ಎಲ್ಲಾ ರಾಜಕೀಯ ಪಕ್ಷಗಳು ಹೇಳಿಕೆಗಳನ್ನು ಪ್ರತಿಹೇಳಿಕೆಗಳನ್ನು ಕೊಡುತ್ತವೆ.  ಆದರೆ ರೈತನ ಸಮಸ್ಯೆಗಳಿಗೆ  ಮೂಲ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಅಕ್ಷರಶಃ ಆಗುತ್ತಿವೆಯೇ  ಎಂಬ ಪ್ರಶ್ನೆಗೆ ಉತ್ತರವನ್ನು ಯಾರೂ ಕಂಡುಕೊಳ್ಳುತ್ತಿಲ್ಲ.      ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ  ವಾಹನಗಳು ಉರುಳುವ   ರಸ್ತೆಗಳಾಗಿ ಮಾರ್ಪಡುತ್ತಿವೆ. ಇನ್ನೊಂದೆಡೆ  ಕೈಯಲ್ಲಿರುವ ಕಡಿಮೆ ಭೂ ಹಿಡುವಳಿಯಿಂದ ರೈತ ಉನ್ನತ ತಂತ್ರಜ್ಞಾನ ಬಳಸಿ ಅಧಿಕ ಫಸಲನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ.   ಹೋಗಲಿ…..  ಸಾಂಪ್ರದಾಯಿಕ ಕೃಷಿ ಅವನ ಕೈಯನ್ನೂ ಹಿಡಿಯುತ್ತಿಲ್ಲ.  ಒಂದೆಡೆ ಮಹತ್ವಾಕಾಂಕ್ಷೆಯ ನಗರ ಬದುಕು, ಅನಾಯಾಸ ಬದುಕು  ರೈತರನ್ನು  ಸೆಳೆಯುತ್ತಿದೆ.  ಒಂದು ಕಾಲದಲ್ಲಿ ಜಮೀನ್ದಾರರು, ಸಾಹುಕಾರರು ಸಾಲ ಕೊಡುತ್ತಿದ್ದರು. ಸಾಲ ಅಧಿಕವಾದಾಗ  ಜಮೀನು ಉಳ್ಳವರ ಪಾಲಾಗುತ್ತಿತ್ತು. ಕಾಲಬದಲಾದಂತೆ ಅನೇಕ ಬ್ಯಾಂಕುಗಳು ಸಾಲ ಕೊಡುತ್ತಿವೆ. ಸಾಲದ ಸುಳಿಯಲ್ಲಿ ಸಿಲುಕಿ ಹೊರಬಾರಲಾರದ ರೈತ ರೋಗಿಷ್ಠನಾಗುತ್ತಿದ್ದಾನೆ, ಖಿನ್ನತೆಗೆ ಒಳಗಾಗುತ್ತಿದ್ದಾನೆ. ಒನ್ ಟೈಮ್ ಸೊಲ್ಯೂಶನ್ ಎಂಬಂತೆ ಆತ್ಮ ಹತ್ಯೆಯ ನಿರ್ಧಾರ ಮಾಡುತ್ತಿದ್ದಾನೆ.

ಭಾರತೀಯ ಗ್ರಾಮಜೀವನ ಇಲ್ಲವೆ ರೈತರ ಜೀವನದ ವೈಯಕ್ತಿಕ ಇತಿಹಾಸವಷ್ಟೇ ಬದಲಾಗಿಲ್ಲ; ಬದಲಾಗಿ  ಇಂದಿಗೆ ಸಾಮಾಜಿಕರನ್ನು  ತಹತಹಕ್ಕೆ ದೂಡುವ ಪರಿಭಾಷೆಯಾಗಿದೆ. ಮನೋದೈಹಿಕ ಚಿಕಿತ್ಸೆ ಪರಿಹಾರ್ಯ ಎನ್ನುವುದು ಇಲ್ಲಿ  ಕೇವಲ ಹೆಸರಿಗೆ  ಮಾತ್ರ. ರೈತನಿಗೆ ಆವರಿಸಿಕೊಂಡಿರುವುದು ದೈಹಿಕ  ರೋಗವಲ್ಲ  ತಾನು ಅನುಭವಿಸಿದ  ಅಸಮಾನತೆ, ಅನಿಶ್ಚಿತತೆ,  ಭ್ರಷ್ಟಾಚಾರ ಶೋಷಣೆಗಳೇ ರೋಗಗಳಾಗಿ  ವೃಣವಾಗಿ ಬಾಧಿಸುತ್ತಿರುವುದು. ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು  ಪೌರಾಣಿಕ ಪ್ರತಿಮೆಯೊಂದಿಗೆ  ಆಧುನಿಕ ರೈತನ ಸಮಸ್ಯೆಗಳನ್ನು ಬಿಡಿಸುವ ಕಥಾಹಂದರವನ್ನು  ಇರಿಸಿಕೊಂಡು   ಕುವೆಂಪುರವರು ರಚಿಸಿದ ಕಥೆ  ‘ಧನ್ವಂತರಿ ಚಿಕಿತ್ಸೆ’. ಇದರ ಕಥನ ತಂತ್ರ ರೈತನ ಸಮಸ್ಯೆಯನ್ನು ಬಿಡಿಸುವಲ್ಲಿ ಪ್ರಾತಿನಿಧಿಕವಾಗಿ ಯಶಸ್ವಿಯಾಗಿದೆ.   ಈಗ ರೈತರದ್ದೆಂದು ಪಟ್ಟಿ  ಮಾಡಿರುವ  ಸಮಸ್ಯೆಗಳು ಹುಟ್ಟಿಗಂಟಿಕೊಂಡಿರುವವಲ್ಲ. ಬದಲಾಗಿ  ಪೂರ್ವಿಕರ ಕಾಲದಿಂದಲೂ   ಬೆಳೆದುಕೊಂಡು ಹಬ್ಬಿ ಬಲಿದಿರುವಂಥವು. ಇಂಥವಕ್ಕೆ  ತಕ್ಷಣದ ಪರಿಹಾರ  ಸಾಕಾಗುವುದಿಲ್ಲ. ಸಮಸ್ಯೆಯ ಮೂಲವನ್ನು ಹುಡುಕಿ ಅದನ್ನು ಸರಿಪಡಿಸಬೇಕಾಗಿದೆ. ಇದೇ ತಂತ್ರವನ್ನು  ಅರ್ಥಾತ್ ಕುವೆಂಪುರವರು  ಸಮಸ್ಯೆಯ ಮೂಲಬೇರನ್ನು ನಿರ್ನಾಮ ಮಾಡುವ ಲೋಕೋತ್ತರ ಚಿಂತನೆಯನ್ನು ಮಾಡಿದ್ದಾರೆ.  ರೈತನ ಸಮಸ್ಯೆಗಳಿಗೆ  ವೈದ್ಯಕೀಯ ಮತ್ತು  ತಾಂತ್ರಿಕ ಪರಿಹಾರಗಳು  ಬೇಕಾಗಿಲ್ಲ ಬದಲಾಗಿ ಸಮಸ್ಯೆಯಿಂದ ಹೊರಬರುವ ಮಾರ್ಗಗಳು ಬೇಕು. ರೈತವರ್ಗ ವ್ಯವಸ್ಥೆಯಲ್ಲಿ  ಸುಧಾರಣೆಯನ್ನು ಬಯಸುತ್ತಿದೆ. ಈ  ಈಡೇರಲಾರದ ಬಯಕೆಗಳು ಮನಸ್ಸಿನ ಒತ್ತಡಗಳಾಗುತ್ತಿವೆ. ಕ್ರಮೇಣ ಹತಾಶೆಗಳಾಗಿ ಕುಟುಂಬಗಳನ್ನೆ ಆಹುತಿ  ತೆಗೆದುಕೊಳ್ಳುತ್ತಿವೆ. ಆದರೆ “ಧನ್ವಂತರಿ ಚಿಕಿತ್ಸೆಯಲ್ಲಿ” ಪರಿಸ್ಥಿತಿ ಕೈ ಮೀರುವ ಮೊದಲು ಪರಿಹಾರ ಸಿಕ್ಕಿಬಿಡುತ್ತದೆ. ಧರ್ಮ ಹಾಗು  ದಯೆಗಳನ್ನು ಸಾಮಾಜಿಕ ನ್ಯಾಯದ ಪರಿಧಿಯಲ್ಲಿ ನೋಡುವ ಪ್ರಯತ್ನವನ್ನು ಕುವೆಂಪು ಮಾಡಿದ್ದಾರೆ. ವಿಶ್ವಾಮಿತ್ರ ಮತ್ತು ವಸಿಷ್ಟರು  ಪರಂಪರೆ ಮತ್ತು ವಾಸ್ತವತೆಯನ್ನು ಬಿಂಬಿಸುವ ಪ್ರತಿಮೆಗಳಾಗಿದ್ದಾರೆ. ಮೌಲ್ಯಗಳೆ ಇಲ್ಲಿ ಚಿಕಿತ್ಸಕ ದ್ರವ್ಯಗಳಾಗಿವೆ.  ಕಥೆಯ ಪ್ರಾರಂಭದಲ್ಲಿ ವಿಶ್ವಾಮಿತ್ರ  ಕೇಳುವ ನರಳಾಟ  ಪರಿಹಾರ ಯಜ್ಞ ಮಾಡಿದರೆ ಸರಿಹೋಗುತ್ತದೆ ಎಂಬ ಸಲಹೆ ವಸಿಷ್ಠರಿಂದ ಕೇಳಿ ಬರುತ್ತದೆ. ಆದರೆ ನಾರದ “ನರಳುವಿಕೆಯ ಧ್ವನಿಯ ಮೂಲ ಭೂಲೋಕವೇ ಆಗಿರಬೇಕು ಅಲ್ಲಿ ಹುಡುಕಿ”  ಎನ್ನುವ ಸಲಹೆಯನ್ನು ಕೊಡುತ್ತಾರೆ. ನಾರದರ ಸಲಹೆಯಂತೆ ಭೂಲೋಕಕ್ಕೆ ಬಂದ ವಿಶ್ವಾಮಿತ್ರರಿಗೆ ಕ್ಷತ್ರಿಯರ ಪರಮ ವೈರಿ ಪರಶುರಾಮರು  ಸಹಾಯಮಾಡುತ್ತಾರೆ. ವಸಿಷ್ಠರು ಪರಂಪರೆಗೂ ವಿಶ್ವಾಮಿತ್ರರು ವಾಸ್ತವತೆಯೆಡೆಗೂ ಪರಶುರಾಮ ಆಳುವವರ ವಿರುದ್ಧ ನಿಲ್ಲುವುದನ್ನು  ನಾವು ಇಲ್ಲಿ ಅಗತ್ಯವಾಗಿ ಗಮನಿಸಬೇಕು.  ಆಧುನಿಕ ವೈದ್ಯರು ಪತ್ತೆ ಹಚ್ಚಲಾಗದ್ದನ್ನು  ಧನ್ವಂತರಿ  ಪತ್ತೆ ಹಚ್ಚುವುದು  ಇಲ್ಲಿಯ ವಿಶೇಷ. ಕಡೆಗೆ ವಿಶ್ವಾಮಿತ್ರರು ರೈತನ ಎದೆಯ ಮೇಲೆ ಒಟ್ಟಲಾಗಿದ್ದ  ಸಮಸ್ಯೆಯನ್ನು   ಅಂದರೆ ಸಾಲಬಾಧೆ, ಆಧಿಕಾರಿಗಳ ಭ್ರಷ್ಟಾಚಾರ, ಬೆಳೆನಷ್ಟ, ಮಳೆಯ ಕೊರತೆ, ಸಾಲಬಾಧೆ, ಮಧ್ಯವರ್ತಿಗಳ ಹಾವಳಿಗಳನ್ನು  ಹೇಳಹೆಸರಿಲ್ಲದೆ ಉರುಳಿಸಿಬಿಡುತ್ತಾರೆ. ಇಲ್ಲಿ ನಡೆದದ್ದು  ಚಿಕಿತ್ಸೆ  ಅಲ್ಲ ಬದಲಾಗಿ ಸಾಮಾಜಿಕ ರೋಗಕ್ಕೆ ಉಪಚಾರ ಮಾತ್ರ.

ಕಥೆಯಲ್ಲಿ ರೈತನ ರೋಗ ಪರೀಕ್ಷೆಗೆ ನಿಂತ ಧನ್ವಂತರಿಗೆ ಪರಶುರಾಮನ ಈ ರೋಗ ಆತ್ಮದ್ದೇನು? ಎಂದು ಕೇಳಿದಾಗ  ಧನ್ವಂತರಿ  “ದೇಹದ್ದಾಗಿದ್ದರೆ ದೇಹದಲ್ಲಿ ಇರಬೇಕಾಗಿತ್ತು. ಆತ್ಮದ್ದಾಗಿದ್ದರೆ ಪಾಪದ ರೂಪದಲ್ಲಿ ತೋರಬೇಕಾಗಿತ್ತು. ಅದರೆ ಈ ಸರಳ ಸಾಮಾನ್ಯನಿಗೆಗೆ ಇನ್ನೂ ಆ ರೋಗ ತಗಲಿಲ್ಲ” ಎನ್ನುವುದು ರೈತರ ಬದುಕಿನ ವಿಧಾನವನ್ನೆ ದರ್ಶಿಸುತ್ತದೆ.   ಈ ದೃಷ್ಟಿಕೋನದಿಂದಲೇ   ಕುವೆಂಪು ಇಲ್ಲಿ ಬರೆ ದೇಹದ ಕಾಯಿಲೆಗೆ  ಔಷಧ ಕೊಡಿಸುವ ತಂತ್ರವನ್ನು ಮಾಡಿಲ್ಲ; ಬದಲಾಗಿ ನೊಂದ ರೈತನ  ಅಂತರಂಗವನ್ನು ತಲುಪುವ ಪ್ರಯತ್ನವನ್ನು ಮಾಡಿದ್ದಾರೆ. ಪುರಾಣ ಪ್ರಸಂಗ ಇಲ್ಲಿ ಮನೋರಂಜನೆಯ ಉದ್ದೇಶವಾಗಿಲ್ಲ; ವಾಸ್ತವತೆಯನ್ನು ತೆರೆದಿಡುವುದೇ ಆಗಿದೆ.  ಧನ್ವಂತರಿ ಆಯುರ್ವೇದದ ಅಧಿಪತಿ  ಅರ್ಥಾತ್ ದೈವವೆಂದೆ ನಮಗೆ ತಿಳಿದಿರುವಂಥದ್ದು. ದೈವಿಕ ಶಕ್ತಿಯೇ ಬಂದು ರೈತನ ಸಮಸ್ಯೆಯನ್ನು ಬಗೆಹರಿಸಿ,  ಸಾಮಾಜಿಕ ಸಮಸ್ಯೆಯೊಂದಿಗೆ  ಮುಖಾಮಖಿಯಾಗುವ ಪರಿಭಾಷೆ ಅನನ್ಯವಾಗಿದೆ, ರೈತರಲ್ಲಿ ನೈತಿಕತೆಯನ್ನು ಬಲಪಡಿಸುವ,  ಅವಶ್ಯಕತೆ ಮತ್ತು ಅಸಾಹಯಕತೆಯನ್ನು ಗುರುತಿಸುವ ನೊಂದ ರೈತನ ಮಾನಸಿಕ ಸ್ಥರವನ್ನು ತಲುಪುವ  ಕುವೆಂಪುರವರ ಪ್ರಯತ್ನ ಇಂದಿನ ರಾಜಕೀಯ ಮತ್ತು ಸಮಾಜದ್ದಾಗಬೇಕಾಗಿದೆ. ‘ಬಾಯಂಚಿನಮಾತು ಮಗಿಲಿನ ಕಿವಿಯನ್ನು ಮುಟ್ಟಲೆ ಇಲ್ಲ’   ಎಂಬಂತೆ ಬಡ ರೈತನಕೂಗು  ಯಾರಿಗೂ ಕೇಳಿಸುತ್ತಿಲ್ಲ. ನಮ್ಮ ಸಮಾಜದಲ್ಲಿ ಈಗಾಗಲೇ ಆಗಿ ಹೋಗಿರುವ ವೈರುಧ್ಯಗಳನ್ನು ಬುಡಸಹಿತ ತೆಗೆದುಹಾಕುವ ಚಿಕಿತ್ಸೆ  ಬೇಕು. ಅದನ್ನು  ಭರವಸೆಗಳಾಗಿಸದೆ ಕಾನೂನುಗಳನ್ನಾಗಿ ಮಾಡುವುದು ಅತ್ಯಂತ ಅಗತ್ಯವಾಗಿದೆ. ಹಾಗಾದಾಗ ಮಾತ್ರ ಸಾಮಾಜಿಕರಿಗೆ ‘ನೇಗಿಲ ಯೋಗಿ’, ‘ಅನ್ನದಾತ’, ‘ದೇಶದ ಬೆನ್ನೆಲುಬು’   ಎಂದು ಕರೆಯುವ ನೈತಿಕ ಹಕ್ಕು  ಬರುತ್ತದೆ ಎಂದೆನಿಸುತ್ತದೆ.

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ