Advertisement
ನಾಟಕ ರೂಪದ ವರದಿ ವಾಚನದ ಮಜಾ… ಬಸವನಗೌಡ ಹೆಬ್ಬಳಗೆರೆ ಸರಣಿ

ನಾಟಕ ರೂಪದ ವರದಿ ವಾಚನದ ಮಜಾ… ಬಸವನಗೌಡ ಹೆಬ್ಬಳಗೆರೆ ಸರಣಿ

ತಮಾಷೆಯ ಸಂಗತಿ ಅಂದರೆ ಇನ್ಸಲ್ಟ್  ಆಗಿದ್ದ ದಯಾನಿಗೆ ಹೊರಗೆ ಹೋದ ಕೂಡಲೇ ಅವನು ಮದುವೆಯಾಗಬೇಕೆಂದುಕೊಂಡಿದ್ದ ಅವನ ಮನದರಸಿ  ಕರೆ ಮಾಡಿದ್ದಾಳೆ. ಅವಳ ಕರೆಯಲ್ಲಿ ಅವನು ತಲ್ಲೀನನಾಗಿಬಿಟ್ಟಿದ್ದಾನೆ. ನಾಟಕವನ್ನು‌ ಮರೆತುಬಿಟ್ಟಿದ್ದಾನೆ ಅನಿಸುತ್ತೆ. ತಕ್ಷಣ ನಾನೇ ಹೊರ ಹೋಗಿ ಅವನನ್ನು ಒಪ್ಪಿಸಿ ವಾಪಸ್ಸು ಕರೆ ತಂದಿದ್ದಾಯ್ತು, ನಂತರ ಕಾಳಿದಾಸ ಫಿಲಂ ನಲ್ಲಿನ ‘ಕಮಲೇ  ಕಮಲೋತ್ಪತ್ತಿಃ’ ಪದದ ಬದಲು ಪ್ರೇರಣಾ ತರಬೇತಿಯಾದ್ದರಿಂದ ‘ಪ್ರೇರಣೇ ಪ್ರೇರಣೋತ್ಪತ್ತಿಃ’ ಎಂದು ಹೇಳುತ್ತಾ ಬಂದು ಪ್ರಶ್ನೆ ಕೇಳಿಸಿ  ನಮ್ಮ ವರದಿ ವಾಚನದ ನಾಟಕವು ಮೂಡಿಬಂತು.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಯಾವುದೇ ವೃತ್ತಿಗೆ ಸೇರಲಿ, ಮೊದಲು  ಆ ವೃತ್ತಿ ದಕ್ಷತೆ ಹೆಚ್ಚಿಸಲು ತರಬೇತಿ ಕೊಡುತ್ತಾರೆ. ಇದನ್ನು ‘ಸೇವಾವಧಿ ತರಬೇತಿ’ ಎಂದು‌ ಕರೆಯುತ್ತಾರೆ. ಇದೇ ರೀತಿ ಶಿಕ್ಷಕ ವೃತ್ತಿಗೆ ಸೇರಿದ ಪ್ರಾರಂಭದಲ್ಲಿ ನಮಗೆ ‘ಪ್ರೇರಣೆ’ ಎಂಬ ಹೆಸರಿನ ತರಬೇತಿಗೆ ನಿಯೋಜಿಸಿದ್ದರು. ತರಬೇತಿಯ ಸ್ಥಳ ಗೌರಿಬಿದನೂರು… ಕೆಲಸ ಸಿಕ್ಕ ಜೋಶ್‌ನಲ್ಲಿ ನಾವೂ ಸಹ ತರಬೇತಿಗೆ ಜೋಶ್‌ನಿಂದ ಹೋಗುತ್ತಿದ್ದೆವು. ತರಬೇತಿಯಲ್ಲಿ ನಾವು ತುಂಬಾ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದೆವು. ಯಾರಿಗೂ ಯಾವ ತರಗತಿಗಳೂ ಬೋರ್ ಆಗದಂತೆ ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ಕೊಡುತ್ತಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೂ ತರಬೇತಿ ನಡೆಯುತ್ತಿದ್ದರೂ ನಮಗ್ಯಾರಿಗೂ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.

​ಇಲ್ಲಿ ಎಲ್ಲರೂ ಸಮಾನ ವಯಸ್ಸಿನ ಹಾಗೂ ಸಮಾನ ಮನಸ್ಕರಿದ್ದೆವು. ತರಬೇತಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವುದು ಇದ್ದೇ ಇತ್ತು. ಇಲ್ಲಿ ವಿಷಯವಾರು ಅವಧಿಗಳು ಇರುತ್ತಿದ್ದವು. ತರಬೇತಿ ನಡೆಯುವಾಗ  ಒಮ್ಮೆ ಕನ್ನಡ ಭಾಷಾ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನು ಸುಮ್ಮನೆ ಕುಳಿತುಕೊಳ್ಳುವುದನ್ನು ಬಿಟ್ಟು ಕನ್ನಡ ಬರೆಯುವಾಗ ಒಂದಕ್ಷರ ಆಚೆ ಈಚೆ ಹೋಗಬಾರದು… ಹೋದರೆ ಅದು ಯಾವ ರೀತಿ ಅನರ್ಥಕ್ಕೆ ಕಾರಣವಾಗುತ್ತದೆ ಎಂದು ತಿಳಿಸಲು ‘ಅವಳ ಹೂ ಸುವಾಸನೆ ಚೆನ್ನಾಗಿದೆ’ ಎಂದು ಬರೆದು ಎರಡನೇ ಸಲ

‘ಅವಳ ಹೂಸು ವಾಸನೆ ಚೆನ್ನಾಗಿದೆ’ ಎಂಬ ವಾಕ್ಯಗಳನ್ನು ಬರೆದು ವಿವರಿಸಿದೆ. ಆಗ ಕೆಲ ಶಿಕ್ಷಕಿಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಪರೋಕ್ಷವಾಗಿ ನನ್ನ ಮೇಲೆ ಮುನಿಸಿಕೊಂಡರು.

​ನಾವು ಪ್ರತಿದಿನವೂ ತರಬೇತಿಯು ಮುಗಿದ ಮಾರನೇ ದಿನ ಹಿಂದಿನ ದಿನದ ವರದಿಯನ್ನು ಒಪ್ಪಿಸಬೇಕಾಗಿತ್ತು. ಇದಕ್ಕಾಗಿಯೇ ವಿವಿಧ ತಂಡಗಳನ್ನು ಮಾಡಿ ನಮಗೆ ಕಾರ್ಯ ಹಂಚಿಕೆ ಮಾಡುತ್ತಿದ್ದರು. ಈ ರೀತಿ ಮಾಡಿದಾಗ ಅವರು ತಮ್ಮ ನಿಗದಿಪಡಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ ನಮ್ಮ ಸಂಪನ್ಮೂಲ ವ್ಯಕ್ತಿಗಳು “ವರದಿಯನ್ನು ವಿಶೇಷ ರೀತಿಯಲ್ಲಿ ಮಂಡಿಸಿ” ಎಂದರು. ಅಂದಿನಿಂದ ನಾವು ಅವರ ಮಾತನ್ನು ಪಾಲಿಸಿದೆವು. ಮೊದಲನೇ ವರದಿಯಲ್ಲಿ ನಾನು ಡಾ.ರಾಜ್ ಕುಮಾರ್ ಅಭಿನಯದ ‘ಕಾಳಿದಾಸ’ ಚಲನ ಚಿತ್ರದ ‘ಕಮಲೇ ಕಮಲೋತ್ಪತ್ತಿಃ’  ಪ್ರಸಂಗವೊಂದನ್ನು ಆಯ್ದುಕೊಂಡು ಅದನ್ನು ವರದಿ ಮಂಡಿಸುವ ರೀತಿಗೆ ಬದಲಾಯಿಸಿಕೊಂಡೆನು. ನನ್ನ ಕಲ್ಪನೆಯು ಈ ರೀತಿಯಾಗಿತ್ತು:

ನಮ್ಮಲ್ಲೇ ಒಬ್ಬನನ್ನು ಒಬ್ಬ ಕವಿಯನ್ನಾಗಿ ಮಾಡಿ ಅವನು ನಮ್ಮ ಆಸ್ಥಾನಕ್ಕೆ ಪರ ರಾಜ್ಯದ ನಿದ ಬಂದಿರುತ್ತಾನೆ. ಅವನು ಬರುವ ವಿಷಯವು ಒಬ್ಬ ಸೇವಕನಿಂದ ನಮಗೆ ತಿಳಿಯುತ್ತದೆ. ಅವನು ರಾಜನ ಆಸ್ಥಾನದಲ್ಲಿರುವ ಕವಿಗಳಿಗೆ ಪ್ರಶ್ನೆ ಕೇಳುತ್ತಾನೆ. ಆ ಪ್ರಶ್ನೆಗಳಿಗೆ ನಮ್ಮ ಆಸ್ಥಾನದ ಕವಿಗಳು ಉತ್ತರಿಸುವ ಒಂದು ಪ್ರಸಂಗ ಕಲ್ಪನೆ ಮಾಡಿಕೊಂಡೆನು. ಆದರೆ ಪ್ರಶ್ನೆಗಳು ಮಾತ್ರ ತರಬೇತಿಗೆ ಸಂಬಂಧಿಸಿದವೇ ಆಗಿರಬೇಕು ಎಂಬ ನಿಯಮ ಮಾಡಿಕೊಂಡು ಆ ಪ್ರಶ್ನೆಗಳನ್ನೂ ಸಹ ರಚಿಸಿದೆನು. ನನ್ನ ತಂಡದಲ್ಲಿದ್ದ ಐದಾರು ಮಂದಿಗೆ ಅವರು ನಿರ್ವಹಿಸಬೇಕಾದ ವಿವಿಧ ಪಾತ್ರಗಳನ್ನು ಹಂಚಿಕೆ ಮಾಡಿದೆನು. ಪ್ರಶ್ನೆಗಳು ಅಂಥಾ ದೊಡ್ಡವೇನೂ ಇಲ್ಲ. ಹಿಂದಿನ ದಿನದ ತರಬೇತಿಯ  ಅಂಶಗಳ ಕುರಿತೇ ಇದ್ದವು. ಉದಾಹರಣೆಗೆ;

ಪ್ರಾರ್ಥನೆಯನ್ನು ನಡೆಸಿಕೊಟ್ಟವರು ಯಾರು? ವಿವಿಧ ಅವಧಿಗಳಲ್ಲಿ ಯಾರು ಯಾವ ವಿಷಯವನ್ನು ತಿಳಿಸಿದರು? ಈ ರೀತಿಯಾಗಿ ಇಡೀ ದಿನದ ವರದಿಯನ್ನು ಪ್ರಶ್ನಾವಳಿಯ ರೂಪದಲ್ಲಿ ಮಾಡಿಕೊಂಡೆನು. ನನ್ನದೇ ತಂಡ ಮೊದಲನೆಯದಾಗಿ ವಿಭಿನ್ನವಾಗಿ ವರದಿ ಮಂಡಿಸುತ್ತೇವೆ ಎಂದು ಎಲ್ಲರೆದುರು ಕೊಚ್ಚಿಕೊಂಡು ಬಂದಿದ್ದರಿಂದ ಒತ್ತಡವೂ ಸಹ ಅದೇ ರೀತಿಯಲ್ಲಿ ನನ್ನ ಮೇಲಿತ್ತು. ಆದ್ದರಿಂದ ತಂಡದವರಿಗೆ ಹೆಚ್ಚಾಗಿಯೇ ತರಬೇತುಗೊಳಿಸಿದ್ದೆ. ಅದರಲ್ಲಿ ನನ್ನದು ರಾಜನ ಪಾತ್ರ, ದಯಾನಂದನಿಗೆ ಸೇವಕನ ಪಾತ್ರ ಕೊಟ್ಟಿದ್ದೆ. ಅವನಿಗೆ ಮೊದಲೇ ಹೇಳಿದ್ದೆ, “ನಾನು ಆಸ್ಥಾನದಲ್ಲಿರುತ್ತೇನೆ. ಮಂತ್ರಿಗಳ ಬಳಿ ಜನರ ಕಷ್ಟ-ಕಾರ್ಪಣ್ಯಗಳನ್ನು ಕೇಳುತ್ತಿರುತ್ತೇನೆ. ಅದು ಮುಗಿದಾಗ ನೀನು ನನ್ನ ಬಳಿಗೆ ಬಂದು ‘ಮಹಾಪ್ರಭುಗಳೇ, ನಮ್ಮ ರಾಜ್ಯಕ್ಕೆ ಒಬ್ಬ ಕವಿಪುಂಗವರು ಬಂದಿದ್ದಾರೆ. ಅವರು ನಮ್ಮ ರಾಜ್ಯದ ಕವಿಗಳನ್ನು ಪರೀಕ್ಷಿಸಬೇಕಂತೆ’ ಎಂದು ಹೇಳು ಎಂದು ತಿಳಿಸಿದ್ದೆ. ಅವನು ಇದಕ್ಕೆ ಒಪ್ಪಿದ್ದ. ನಾಟಕದ ಪ್ರಾಕ್ಟೀಸ್ ಚೆನ್ನಾಗಿಯೇ ನಡೆಯಿತು.

​ಮಾರನೇ ದಿನ ತರಬೇತಿ ಶುರುವಾದ ಬಳಿಕ, ನಾನು “ಪ್ರಾರ್ಥನೆಯ ನಂತರ ನಮ್ಮ ವರದಿಯು ನಾಟಕದ ರೂಪದಲ್ಲಿ ಬಿತ್ತರವಾಗುತ್ತದೆ” ಎಂದೆ. ಎಲ್ಲರಿಗೂ ಕುತೂಹಲ ಮೂಡಿತ್ತು. ರಾಜನಾಗಿ ನಾನು ಮಂತ್ರಿಗಳ ಬಳಿ ರಾಜ್ಯದ ಜನರ ಸುಭಿಕ್ಷತೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಬೇಕೆನ್ನುವಷ್ಟರಲ್ಲಿಯೇ, ದಯಾನಂದನು “ಮಹಾರಾಜರೇ ಮಹಾರಾಜರೇ, ನಮ್ಮ ರಾಜ್ಯಕ್ಕೆ ಒಬ್ಬ ಕವಿ ಬಂದಿದ್ದಾರೆ” ಎಂದು ಹೇಳುತ್ತಾ ಬಂದೇ ಬಿಟ್ಟ.

​ಆದರೆ ಮಂತ್ರಿಗಳಿಗೆ ಕೇಳಬೇಕಾದ ನನ್ನ ಪ್ರಶ್ನೆಗಳು ಇನ್ನೂ ಮುಗಿದಿರಲಿಲ್ಲ. ಅವನು ನಾನು ಹೇಳಿದ್ದಕ್ಕಿಂತ ಮುಂಚೆಯೇ ಬಂದುಬಿಟ್ಟ ಎಂದು ಸಿಟ್ಟು ಬಂತು. ತಕ್ಷಣ ನಾನು ಎಲ್ಲಿದ್ದೇನೆ ಎಂಬುದನ್ನು ಮರೆತು, “ದಯಾ, ನಿನಗೇನು ಗೊತ್ತಾಗಲ್ಲಾ ಬಿಡಲೇ… ನಿನಗೆ ಬರಲಿಕ್ಕೆ ಹೇಳಿದ್ದು ಯಾವಾಗ? ನೀನು ಬಂದಿದ್ದು ಯಾವಾಗ?  ಇಷ್ಟು ಬೇಗ ಯಾಕೆ ಬಂದೆ?” ಎಂದು ಬೈದು ಬಿಟ್ಟೆ. ಆಗ ಎಲ್ಲರೂ ಗೊಳ್ಳೆಂದು ನಕ್ಕರು. ನಮ್ಮ ಸೇವಕನ ಪಾತ್ರದಲ್ಲಿದ್ದ ದಯಾನಂದನಿಗೆ ಶೇಪ್ ಔಟ್ ಆಯ್ತು ಎಂದು ಅನಿಸಿತೇನೋ!

ಅವನು ಅಲ್ಲಿಂದ ಹೊರಗೆ ಹೋದ. ನಾನು ನನ್ನ ಡೈಲಾಗ್ ಮುಂದುವರೆಸಿದೆ. ತಮಾಷೆ ಅಂದರೆ ನನ್ನ ಎಲ್ಲಾ ಡೈಲಾಗ್ ಮುಗಿದರೂ ಸಹ ದಯಾನಂದ ಒಳಗೆ ಬರಲಿಲ್ಲ. ನಾನು ಕೇಳಬೇಕಾದ ಪ್ರಶ್ನೆಗಳ ಸರಣಿ ಮುಗಿದಿದ್ದರಿಂದ ಮತ್ತೊಮ್ಮೆ ನಾನು ರಾಜ ಎಂಬುದನ್ನು ತಟ್ಟನೆ ಮರೆತು “ಲೋ ದಯಾನನ್ನು ಕರೆಯಿರೋ, ದಯಾ ಬರದೇ ಇದ್ದರೆ ನಾಟಕ ಮುಂದುವರೆಯಲ್ಲ” ಅಂದುಬಿಟ್ಟೆ. ನೆರೆದಿದ್ದ ಶಿಬಿರಾರ್ಥಿಗಳು ಮತ್ತೊಮ್ಮೆ ಗೊಳ್ಳೆಂದು ನಕ್ಕರು. ಹೊರಗೆ ನೋಡಿದ ಒಬ್ಬ ಶಿಬಿರಾರ್ಥಿ “ರಾಜರೇ ನಿಮ್ಮ ಸೇವಕ  ದಯಾ ಮೊಬೈಲ್‌ನಲ್ಲಿ  ಮಾತನಾಡುತ್ತಿದ್ದಾನೆ” ಅಂದುಬಿಟ್ಟ!!  ಮತ್ತೊಮ್ಮೆ ಪ್ರೇಕ್ಷಕರೆಲ್ಲರೂ ನಕ್ಕರು. ತಮಾಷೆಯ ಸಂಗತಿ ಅಂದರೆ ಇನ್ಸಲ್ಟ್  ಆಗಿದ್ದ ದಯಾನಿಗೆ ಹೊರಗೆ ಹೋದ ಕೂಡಲೇ ಅವನು ಮದುವೆಯಾಗಬೇಕೆಂದುಕೊಂಡಿದ್ದ ಅವನ ಮನದರಸಿ  ಕರೆ ಮಾಡಿದ್ದಾಳೆ. ಅವಳ ಕರೆಯಲ್ಲಿ ಅವನು ತಲ್ಲೀನನಾಗಿಬಿಟ್ಟಿದ್ದಾನೆ. ನಾಟಕವನ್ನು‌ ಮರೆತುಬಿಟ್ಟಿದ್ದಾನೆ ಅನಿಸುತ್ತೆ. ತಕ್ಷಣ ನಾನೇ ಹೊರ ಹೋಗಿ ಅವನನ್ನು ಒಪ್ಪಿಸಿ ವಾಪಸ್ಸು ಕರೆ ತಂದಿದ್ದಾಯ್ತು, ನಂತರ ಕಾಳಿದಾಸ ಫಿಲಂ ನಲ್ಲಿನ ‘ಕಮಲೇ  ಕಮಲೋತ್ಪತ್ತಿಃ’ ಪದದ ಬದಲು ಪ್ರೇರಣಾ ತರಬೇತಿಯಾದ್ದರಿಂದ ‘ಪ್ರೇರಣೇ ಪ್ರೇರಣೋತ್ಪತ್ತಿಃ’ ಎಂದು ಹೇಳುತ್ತಾ ಬಂದು ಪ್ರಶ್ನೆ ಕೇಳಿಸಿ  ನಮ್ಮ ವರದಿ ವಾಚನದ ನಾಟಕವು ಮೂಡಿಬಂತು.

​ಈ ನಾಟಕ ರೂಪದ ವರದಿ ವಾಚನದಲ್ಲಿ ಉಂಟಾದ ಈ ಅನಿರೀಕ್ಷಿತ ಘಟನೆಗಳು ಎಲ್ಲರನ್ನು ರಂಜಿಸುವಲ್ಲಿ ಯಶಸ್ವಿ ಆದವು.

​ಕೆಲವೊಮ್ಮೆ ಹೀಗೆ ಆಗುತ್ತೆ. ನಾವು ನಿರೀಕ್ಷಿಸುವುದೊಂದು, ಆದರೆ ಆಗುವುದೇ ಮತ್ತೊಂದು. ನಾವು ನಗಿಸಬೇಕೆಂದು ನಾಟಕ ಮಾಡಿದ್ದರೆ ನಗಿಸುವುದಕ್ಕೆ ಆಗುತ್ತಿರಲಿಲ್ಲ. ಆದರೆ ನಾಟಕದಲ್ಲಿ ಆಗ ಒಂದು ಸಣ್ಣ ಎಡವಟ್ಟು ನಮ್ಮನ್ನು ನಗೆಗಡಲಲ್ಲಿ ತೇಲಿಸಿತು.

ಮಾರನೇ ದಿನ ಲೋಹಿತ್ ಎಂಬ ಮತ್ತೊಬ್ಬ ಶಿಕ್ಷಕಮಿತ್ರ ‘ಚೀಲೇಶ್ವರ’ ಎಂಬ ಕಲ್ಪನಾ ಪ್ರಸಂಗ, ಮತ್ತೊಂದು ದಿನ ಮಹಾಭಾರತದ ‘ಯಕ್ಷ ಪ್ರಸಂಗ’ವನ್ನು ತೆಗೆದುಕೊಂಡು ಪಾತ್ರಾಭಿನಯ ಮಾಡುವ ಮೂಲಕ ವರದಿ ಮಾಡಿಸಿದರು. ಬೇರೆ ಬೇರೆ ತಂಡದವರದಾಗಿದ್ದರೂ ಇವಕ್ಕೆ ಸಹಾಯಕ ನಿರ್ದೇಶಕ, ಸ್ಕ್ರಿಪ್ಟ್ ರೈಟರ್ ನಾನೇ ಆಗಿದ್ದು ವಿಶೇಷ!

​ಕೆಲವೊಂದು ಸಲ ಚಟುವಟಿಕೆಗಳನ್ನು ಮಾಡಿಸುವಾಗ ಹಾಡುಗಳನ್ನು ಹೇಳಿ ಕೊಡಲು ತಿಳಿಸಲಾಗುತ್ತಿತ್ತು. ಕೆಲ ವಿದ್ಯಾರ್ಥಿಗಳು ಶಿಶು ಪದ್ಯಗಳನ್ನು ಹೇಳಿಕೊಟ್ಟರೆ ನಾನು ಒಂದು ಸಲ

‘ಬಾರೇ ತಂಗಿ ಮದುವೆಗೆ
ಬರ್ದೇ ಗಿರ್ದೇ ಇರಬೇಡ
ಸೀರೇ ಗೀರೇ ಇಲ್ಲಣ್ಣ
ಹೆಂಗೇ ಬರಲೀ ಮದುವೆಗೆ’

ಎಂಬ ಹಾಡನ್ನು ಹೇಳಿಕೊಟ್ಟೆ. ಇದರಿಂದ ಕೆಲವರು ತರಬೇತಿ ಮುಗಿದ ನಂತರ “ಗೌಡ, ತಂಗೀ ಅಂತಾ ಪದ ಬರೋ ಹಾಡು ಹೇಳಿ ಕೊಡಬೇಡಪ್ಪ, ನಮಗೆ ಹೇಳೋಕೆ ಆಗಲ್ಲ. ನಾವು ಲೈಫ್ ಪಾರ್ಟ್ನರ್‌ಗಳನ್ನ ಹುಡುಕೊಳ್ತಾ ಇದೀವಿ” ಅಂತಾ ಹೇಳಿದಾಗ ನಾನು ಮತ್ತೊಮ್ಮೆ ಹಾಡು ಹೇಳಿಕೊಡುವಾಗ ತಂಗಿ ಪದ ಬರದಂತಹ ಹಾಡನ್ನು ಹೇಳಿಕೊಡುತ್ತಿದ್ದೆ!

​ತರಬೇತಿಯು 10 ದಿನವಾಗಿದ್ದರೂ ಯಾರಿಗೂ ಸಹ ಬೇಸರವೆನಿಸಲಿಲ್ಲ. ತುಂಬಾ ಖುಷಿಯಿಂದಲೇ ಆ ತರಬೇತಿ ಪಡೆದುಕೊಂಡೆವು. ಶಿಕ್ಷಕ ಸೇವೆಗೆ ಸೇರಿ 19 ವರ್ಷವಾದರೂ ಸಹ ಇಂದಿಗೂ ಆ ತರಬೇತಿಯ ಈ ಪ್ರಸಂಗವನ್ನು ಮರೆಯಲಾಗಿಲ್ಲ…

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ