ರಾಜಸ್ತಾನ ಅನೇಕ ಸ್ಥಳಗಳಲ್ಲಿ ಪ್ರಾಚೀನ ಕಾಲದಲ್ಲಿ ಸೀಸದ ಗಣಿಗಾರಿಕೆ ನಡೆದಿದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ರಾಜಪುರ-ದರಿಬಾ, ಪುರ್-ಬನೇರಾ, ಚೌತ್ ಕಾ ಬಾರ್ವಾರಾ, ಅಗುಚಾ, ಅಜ್ಮೇರ್-ಘಗ್ರ, ಸಾವರ್, ಜಹಜ್ಪುರ್, ಬಸಂತಘರ್-ದೇರಿ, ರಾಂಪುರ-ಅಗುಚಾ ಮತ್ತು ಜಾವರ್ ಗಣಿಗಳು. ಹೆಚ್ಚಿನ ಸಂದರ್ಭಗಳಲ್ಲಿ ಸೀಸ ಮತ್ತು ಸತು ಒಟ್ಟಾಗಿ ದೊರಕುತ್ತವೆ. ಈ ಎಲ್ಲಾ ಪ್ರಾಚೀನ ಗಣಿ ಪ್ರದೇಶಗಳಲ್ಲಿ ಶ್ಯಾಫ್ಟ್ಗಳು, ಕಂದಕಗಳು-ಹೊಂಡಗಳು, ಲೋಹ ಕಿಟ್ಟ ಮತ್ತು ಗಣಿತ್ಯಾಜ್ಯ ಗುಡ್ಡಗಳು ಮತ್ತು ಕುಲುಮೆಗಳು ಹರಡಿಕೊಂಡಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿಯಲ್ಲಿ ನಾಲ್ಕನೆಯ ಅಧ್ಯಾಯ
ರೆಟಾರ್ಟ್ಸ್ ಎಂದರೆ ವಸ್ತುಗಳ ಬಟ್ಟಿ ಇಳಿಸುವಿಕೆ. ಉದ್ದವಾದ ಕೆಳಮುಖ ಹೊಂದಿರುವ ಗೋಳಾಕಾರದ ಪಾತ್ರೆಯನ್ನು ಹೊಂದಿರುವ ಸಾಧನ (ಸೋರೆಕಾಯಿ ಆಕಾರ). ಬಟ್ಟಿ ಇಳಿಸುವ ದ್ರವವನ್ನು ಪಾತ್ರೆಯಲ್ಲಿ ಸಂಗ್ರಹಿಸಿ ಬಿಸಿ ಮಾಡಿ ಎರಕ ಹೊಯ್ದು ಅಚ್ಚೊತ್ತುವಿಕೆ.

(ಚಿತ್ರ: ಸೀಸ-ಸತು ಲೋಹ ಸಂಸ್ಕರಿಸಿ ಎಸೆದಿರುವ ರೆಟಾರ್ಟ್ಗಳ ತ್ಯಾಜ್ಯ.)
ಸೀಸ-ಸತು (ಲೆಡ್-ಜಿಂಕ್) ಖನಿಜಗಳು ಸಾಮಾನ್ಯವಾಗಿ ಒಟ್ಟಾಗಿ ದೊರಕುತ್ತವೆ, ಕೆಲವೊಮ್ಮೆ ಈ ಖನಿಜಗಳ ಜೊತೆಗೆ ತಾಮ್ರವೂ ಸೇರಿಕೊಂಡಿರುತ್ತದೆ. ಸೀಸ-ಸತು ನಿಕ್ಷೇಪಗಳು ಭಾರತದಲ್ಲಿ ಮುಖ್ಯವಾಗಿ ರ್ಯಾಯದ್ವೀಪದ ಶೀಲ್ಡ್ ಗಟ್ಟಿಶಿಲೆಗಳಲ್ಲಿ ಮತ್ತು ಸ್ವಲ್ಪಮಟ್ಟಗೆ ಕೆಳ ಹಿಮಾಲಯದಲ್ಲೂ ದೊರಕುತ್ತವೆ. ಪ್ರಾಚೀನ ಸೀಸ-ಸತು ಗಣಿಗಳು ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಅಸ್ತಿತ್ವದಲ್ಲಿದ್ದು, ಪ್ರಾಚೀನ ಭಾರತದಲ್ಲಿ ಲೋಹಗಳು, ಲೋಹಶಾಸ್ತ್ರ ಮತ್ತು ಅವುಗಳ ಅನ್ವಯಗಳ ಬಗ್ಗೆ ಅಪಾರ ಜ್ಞಾನ ಇರುವುದು ಕಂಡುಬರುತ್ತದೆ. ಸೀಸದಿಂದ ಬೆಳ್ಳಿಯ ಸತ್ತ್ವವನ್ನು ತೆಗೆಯುವ ಜ್ಞಾನವನ್ನೂ ಹೊಂದಿದ್ದರು ಎನ್ನಲಾಗಿದೆ.
ಆಂಧ್ರಪ್ರದೇಶದ ಕೆಲವು ಸ್ಥಳಗಳಲ್ಲಿ ಪ್ರಾಚೀನ ಸೀಸದ ಗಣಿಗಳು ಪೆದ್ದಗವಲಕೊಂಡ ಮತ್ತು ವುಮಿಡಿವಾರಂನಲ್ಲಿ ಕಂಡುಬಂದಿವೆ. ಬಂಡಲಮೊಟ್ಟು ಮತ್ತು ಧೂಕೊಂಡದಲ್ಲಿ ಸೀಸ-ಸತು ಜೊತೆಗೆ ತಾಮ್ರವೂ ದೊರಕುತ್ತದೆ; ಜಂಗಮರಾಜುಪಲ್ಲೆ, ಕಾರೆಂಪುಡಿ, ವರಿಕುಂಟಾ, ಗೊಲ್ಲಪಲ್ಲೆ ಮತ್ತು ಚೆಲಿಮಾ ಪ್ರದೇಶಗಳಲ್ಲೂ ಸತು ದೊರಕುತ್ತದೆ.
ಕರ್ನಾಟಕದಲ್ಲಿ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಸೀಸ ಇರುವುದು ಕಂಡಬಂದಿದೆ. ತಮಿಳುನಾಡಿನ ಮಾಮಂದೂರಿನಲ್ಲಿ ಸೀಸವು, ಸತು ಮತ್ತು ತಾಮ್ರದೊಂದಿಗೆ ಕಂಡುಬಂದಿದೆ. ಮಧ್ಯ ಭಾರತದಲ್ಲಿ ಪ್ರಾಚೀನ ಸೀಸ ಗಣಿ ಕಾರ್ಯಗಳು ಹೊಶಂಗಾಬಾದ್ ಜಿಲ್ಲೆಯ ಜೋಗ ಮತ್ತು ದುರ್ಗ್ ಜಿಲ್ಲೆಯ ದೋಂಗ್ರಿಯಲ್ಲಿ ಕಂಡುಬಂದಿದೆ.
ಗುಜರಾತ್ನ ಅಂಬಾಮಾತಾ ಮತ್ತು ಖಾಂಡಿಯಾ ಪ್ರದೇಶಗಳಲ್ಲಿ ಸೀಸ-ಸತು ಸಣ್ಣ ಪ್ರಮಾಣದಲ್ಲಿ ತೆಗೆದಿರುವ ಗಣಿ ಕಾರ್ಯಗಳು ಕಂಡುಬಂದಿವೆ. ರೇಡಿಯೋ-ಕಾರ್ಬನ್ ಡೇಟಿಂಗ್ ಮತ್ತು ಪುರಾತನ ಗ್ರಂಥಗಳಲ್ಲಿನ ಉಲ್ಲೇಖಗಳು ಕ್ರಿ.ಪೂ. ಮೊದಲ ಶತಮಾನದಿಂದ ಪ್ರಾರಂಭಗೊಂಡು 11ನೇ ಮತ್ತು 19ನೇ ಶತಮಾನಗಳ ನಡುವೆ ಗಣಿಗಾರಿಕೆ ವ್ಯಾಪಾಕವಾಗಿ ನಡೆದಿದೆ. ಅಂಬಾಜಿಯಿಂದ ಕುಂಬಾರಿಯವರೆಗಿನ ಪ್ರದೇಶದಲ್ಲಿ ವ್ಯಾಪಕ ಗಣಿಗಾರಿಕೆ ನಡೆದಿದ್ದು ಕಿಟ್ಟ (ಸ್ಲ್ಯಾಗ್) ಗುಡ್ಡಗಳಾಗಿ ಬಿದ್ದಿದೆ. ಪಂಚಮಹಲ್ ಜಿಲ್ಲೆಯ ಕಡವಾಲ್ ಮತ್ತು ಜಮ್ಲಾ ಚೌಕಿಯ ಬಳಿ ಪ್ರಾಚೀನ ಸೀಸದ ಗಣಿಗಾರಿಕೆ ನಡೆದಿರುವ ಕುರುಹುಗಳು ಇವೆ.
ಜಮ್ಮು ಮತ್ತು ಕಾಶ್ಮೀರದ ಖೇರಿಕೋಟ್, ಸೆರ್ಸಂದು ಮತ್ತು ಕಳೇನಿಯಲ್ಲಿ ಹಳೆಯ ಸೀಸದ ಗಣಿಗಳು ದೊರಕಿವೆ. ಹಾಗೇ ದೋಡಾ ಜಿಲ್ಲೆಯ ಚಿಚೆಯಿಂದಲೂ ಹಳೆಯ ಸೀಸದ ಗಣಿಗಳು ವರದಿಯಾಗಿವೆ. ಹಿಮಾಚಲ ಪ್ರದೇಶದಲ್ಲಿ ಹಳೆಯ ಸೀಸದ ಗಣಿಗಳು ಕುರ್ಮಾ ಕಣಿವೆಯಲ್ಲಿ, ಸರ್ಮೌರ್ ಜಿಲ್ಲೆಯ ಅಂಬಾ ಕಲಾ, ಸೋಲನ್ ಜಿಲ್ಲೆಯ ಪನುಹ್ ಮತ್ತು ತಾಲ್ ಬಳಿಯೂ ಕಂಡುಬಂದಿವೆ. ಉತ್ತರಾಖಂಡ್ನ ದೇಸೌಲಿ ಬಳಿಯೂ ಸೀಸದ ಗಣಿಗಾರಿಕೆ ನಡೆದಿದೆ. ಶ್ರೀನಗರ ಪೂರ್ವದಲ್ಲಿ ರಾಜರು ಮತ್ತು ಬ್ರಿಟಿಷರ ಕಾಲದಲ್ಲೂ ಗಣಿಗಾರಿಕೆ ನಡೆದಿರುವುದು ಕಂಡುಬಂದಿದೆ.

(ಚಿತ್ರ: ಖೇರಿ ಕೋಟ್ನ ಪ್ರಾಚೀನ ಸೀಸದ ಗಣಿ ಕಾರ್ಯಗಳು, ಜಮ್ಮು ಮತ್ತು ಕ್ಯಾಶ್ಮೀರ.)
ರಾಜಸ್ತಾನ ಅನೇಕ ಸ್ಥಳಗಳಲ್ಲಿ ಪ್ರಾಚೀನ ಕಾಲದಲ್ಲಿ ಸೀಸದ ಗಣಿಗಾರಿಕೆ ನಡೆದಿದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ರಾಜಪುರ-ದರಿಬಾ, ಪುರ್-ಬನೇರಾ, ಚೌತ್ ಕಾ ಬಾರ್ವಾರಾ, ಅಗುಚಾ, ಅಜ್ಮೇರ್-ಘಗ್ರ, ಸಾವರ್, ಜಹಜ್ಪುರ್, ಬಸಂತಘರ್-ದೇರಿ, ರಾಂಪುರ-ಅಗುಚಾ ಮತ್ತು ಜಾವರ್ ಗಣಿಗಳು. ಹೆಚ್ಚಿನ ಸಂದರ್ಭಗಳಲ್ಲಿ ಸೀಸ ಮತ್ತು ಸತು ಒಟ್ಟಾಗಿ ದೊರಕುತ್ತವೆ. ಈ ಎಲ್ಲಾ ಪ್ರಾಚೀನ ಗಣಿ ಪ್ರದೇಶಗಳಲ್ಲಿ ಶ್ಯಾಫ್ಟ್ಗಳು, ಕಂದಕಗಳು-ಹೊಂಡಗಳು, ಲೋಹ ಕಿಟ್ಟ ಮತ್ತು ಗಣಿತ್ಯಾಜ್ಯ ಗುಡ್ಡಗಳು ಮತ್ತು ಕುಲುಮೆಗಳು ಹರಡಿಕೊಂಡಿವೆ.

(ಚಿತ್ರ: ಅಗುಚಾ ತೆರೆದ ಮತ್ತು ಭೂಗತ ಗಣಿ, ರಾಜಸ್ತಾನ (ಎ.ಕೆ.ಗ್ರೋವರ್).
ಜಾವರ್ ಪ್ರದೇಶದಲ್ಲಿರುವ ಜಾವರ್ಮಲಾ, ಮೋಚಿಯಾ ಮ್ಯಾಗ್ರಾ, ಬಲರಿಯಾ ಮತ್ತು ಹಿರನ್ ಮ್ಯಾಗ್ರಾದಲ್ಲಿ ಕನಿಷ್ಠ 12 ಕಿ.ಮೀ. ಪರ್ವತ ಶ್ರೇಣಿಗಳ ಉದ್ದಕ್ಕೂ ಪ್ರಾಚೀನ ಕಾಲದಲ್ಲಿ ಗಣಿಗಾರಿಕೆ ನಡೆದಿರುವ ಕುರುಹುಗಳನ್ನು ನೋಡಬಹುದು. ಹಳೆಯ ಜಾವರ್ ಪ್ರದೇಶದಲ್ಲಿ ಅಗಾಧ ಕಿಟ್ಟ-ಗಣಿತ್ಯಾಜ್ಯ ಗುಡ್ಡಗಳು ರಾಶಿರಾಶಿಯಾಗಿ ಬಿದ್ದಿವೆ. ಅವುಗಳಲ್ಲಿ ರೆಟಾರ್ಟ್ಗಳು ರಾಶಿರಾಶಿ ಬಿದ್ದಿವೆ. ಜಾವರ್ ಪ್ರದೇಶದ ಪ್ರಾಚೀನ ಗಣಿಗಾರಿಕೆ ಪ್ರದೇಶಗಳಲ್ಲಿ ಕಂದಕಗಳು, ಶ್ಯಾಫ್ಟ್ಗಳು, ತೆರೆದ ಹೊಂಡಗಳು, ಇಳಿಜಾರುಗಳು ಮತ್ತು ಭೂಗತ ಗಣಿ ಸುರಂಗಗಳು ಕಂಡುಬಂದಿವೆ. ಗಣಿಗಳು (ಸುರಂಗಗಳು) ಸಾಮಾನ್ಯವಾಗಿ ಕಿರಿದಾಗಿರುತ್ತವೆ ಮತ್ತು 10 ರಿಂದ 300 ಮಿಟರುಗಳ ಉದ್ದವಿರುತ್ತವೆ. ಭೂಗತ ಗಣಿಗಳಲ್ಲಿ ಮೇಲ್ಛಾವಣಿಗಳನ್ನು ಬೆಂಬಲಿಸಲು ಕಮಾನಿನ ಆಕಾರದ ಕಂಬಗಳನ್ನು ಕೊಡಲಾಗಿರುತ್ತದೆ. ಮರದ ಏಣಿಗಳು ಮತ್ತು ಮರದ ದಿಮ್ಮಿಗಳನ್ನು ಸುರಂಗಗಳು ಕುಸಿಯದಂತೆ ಆಧಾರ ಕೊಡಲಾಗುತ್ತದೆ. ಅಗುಚಾ ಸೀಸ-ಸತು ನಿಕ್ಷೇಪ ಮೇಲ್ಭಾಗದ ಸ್ಟ್ರಿಂಗರ್ (ಸಣ್ಣಸಣ್ಣ ಖನೀಜಕರಣದ ಸಿರೆ) ವಲಯಗಳಿಂದ ಗೆಲಿನಾವನ್ನು (ಸೀಸದ ಅದಿರು) ಹೊರತೆಗೆಯಲಾಗುತ್ತಿತ್ತು ಮತ್ತು ಗೆಲಿನಾದಿಂದ ಬೆಳ್ಳಿಯನ್ನು ಹೊರತೆಗೆಯಯುವ ಕೆಲಸವೂ ನಡೆದಿತ್ತು.

(ಚಿತ್ರ: ಅಂಬಾಕಾಲಾ ಸೀಸದ ಹಳೆ ಗಣಿ, ಹಿಮಾಚಲ ಪ್ರದೇಶ (ಲಾ, 2011).

(ಚಿತ್ರ: ಮರದ ದಿಮ್ಮಿಗಳನ್ನು ಆಧಾರವಾಗಿ ನಿಲ್ಲಿಸಿರುವ ರಾಜಪುರ-ದರಿಬಾ ಪ್ರಾಚೀನ ಗಣಿ ಕಾರ್ಯಗಳು, ರಾಜಸ್ತಾನ.)

ಚಿತ್ರ: ರಾಜಪುರ-ದರಿಬಾ ಮತ್ತು ಜಾವರ್ ಸೀಸ-ಸತು ಪ್ರಾಚೀನ ಗಣಿ ಕಾರ್ಯಗಳು (ಚಿತ್ರಗಳು ಎಂ.ಎನ್.ಮೊಶ್ರಾ)
ಪ್ರಾಚೀನ ಭಾರತದಲ್ಲಿ ಸೀಸ-ಸತು ಗಣಿಗಾರಿಕೆ ಮತ್ತು ಉತ್ಪಾದನೆ ಸರ್ವೇಸಾಮಾನ್ಯವಾಗಿತ್ತು. ಸೀಸ-ಸತುವನ್ನು ಹಿತ್ತಾಳೆಯ ತಯಾರಿಕೆಯಲ್ಲಿ ಮಿಶ್ರಣ ಲೋಹವಾಗಿ ಬಳಸಲಾಗುತ್ತಿತ್ತು. “ಚರಕ ಸಂಹಿತೆ” (ಕ್ರಿ.ಪೂ.300) ಯಲ್ಲಿ ಇವುಗಳ ಆಕ್ಸೈಡ್ ಅಂಶವನ್ನು ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು ಎಂದು ವಿವರಿಸಲಾಗಿದೆ. ಸತುವಿನ ಉತ್ಪಾದನೆಯ ಪ್ರಕ್ರಿಯೆಗಳನ್ನು ಹಲವಾರು ಸಂಸ್ಕೃತ ಪಠ್ಯಗಳಲ್ಲಿ ನೋಡಬಹುದು. ಉದಾ: “ರಸಾರ್ಣವಂ ರಹಸ್ಯಂ” (ಕ್ರಿ.ಪೂ. 500-100), ರಸರತ್ನಾಕರ್ (2ನೇ ಶತಮಾನ), ರಸಪ್ರಕಾಶ್ ಸುಧಾಕರ್ (12ನೇ ಶತಮಾನ) ಮತ್ತು ರಸರತ್ನ ಸಮುಚ್ಚಯ (13ನೇ ಶತಮಾನ) ಇತ್ಯಾದಿ.
ಸತು ಉತ್ಪಾದನೆಗೆ ಬೇಕಾದ ಪದಾರ್ಥಗಳಲ್ಲಿ ಲ್ಯಾಕ್ (ಅರಗು), ಅಶ್ವತ್ಥಮರದ ತೊಗೆಟೆ, ಅಳಲೆಕಾಯಿ, ರಾಳ, ಉಪ್ಪು, ಬೊರಾಕ್ಸ್ ಮತ್ತು ಖರ್ಪಾರ್ (ಸತುವಿನ ಅದಿರು) ಸೇರಿವೆ; ಮತ್ತು ಇವುಗಳನ್ನು ಹಸುವಿನ ಹಾಲು ಮತ್ತು ಶುದ್ಧೀಕರಿಸಿದ ಬೆಣ್ಣೆಯೊಂದಿಗೆ ರುಬ್ಬಿ ತಯಾರಿಸಿದ ಮುದ್ದೆಗಳನ್ನು ರೆಟಾರ್ಟ್ಗಳಿಗೆ ತುಂಬಿ ಕುಲುಮೆ ಮೇಲಿಟ್ಟು ನಿರ್ದಿಷ್ಟ ತಾಪಮಾನದಲ್ಲಿ ಕಾಯಿಸಿ ಸೀಸ-ಸತುವನ್ನು ಪಡೆಯಲಾಗುತ್ತಿತ್ತು ಎಂಬ ವಿವರಗಳು ದೊರಕುತ್ತವೆ. ಜಿಂಕ್ ಸಲ್ಫೈಅನ್ನು ಸತು ಆಕ್ಸೈಡ್ ಆಗಿ ಪರಿವರ್ತಿಸಲು ಕೆಲವು ರಾಸಾಯನಿಕಗಳು ಮತ್ತು ಫ್ಲಕ್ಸ್ಗಳನ್ನು (ಡಾಲಮೈಟ್/ಉಪ್ಪು) ಬಳಸಲಾಗುತ್ತಿತ್ತು.
ಬ್ರಿಟಿಷ್ ಮ್ಯೂಸಿಯಂ (ಲಂಡನ್), ಹಿಂದೂಸ್ಥಾನ್ ಜಿಂಕ್ ಲಿಮಿಟಿಡ್, ಮತ್ತು ಬರೋಡಾ ವಿಶ್ವವಿದ್ಯಾಲಯ ವಿಜ್ಞಾನಿಗಳ ತಂಡಗಳು ಒಟ್ಟು ಸೇರಿ ರಾಜಸ್ತಾನದ ಉದಯಪುರ ಜಿಲ್ಲೆಯ ಜಾವರ್ ಪ್ರದೇಶಗಳಲ್ಲಿ ಪರಿಶೋಧನೆ ನಡೆಸಿ ಸೀಸ-ಸತು ಕರಗಿಸುವ ಗಣಿಗಾರಿಕೆ ತಂತ್ರಜ್ಞಾನ ಜಗತ್ತಿನಲ್ಲೇ ಅತಿ ಪ್ರಾಚೀನವಾದದ್ದು ಎಂಬುದಾಗಿ ವರದಿ ಮಾಡಿದರು. ಈ ರೆಟಾರ್ಟ್ಗಳು 20 ರಿಂದ 30 ಸೆ.ಮೀ. ಉದ್ದ ಮತ್ತು 8 ರಿಂದ 12 ಸೆ.ಮೀ. ವ್ಯಾಸವನ್ನು ಹೊಂದಿದ್ದು ಸುಮಾರು 1 ಸೆ.ಮೀ. ದಪ್ಪದ ಪದರನ್ನು ಹೊಂದಿರುತ್ತವೆ. ಸತು ನೊರೆಯನ್ನು ಉಕ್ಕಿಸಿ ಸಾಂದ್ರೀಕರಿಸುವುದಕ್ಕಾಗಿ ಸಣ್ಣ ವ್ಯಾಸದ ನಳಿಕೆಯನ್ನು ರೆಟಾರ್ಟ್ ಬಾಯಿಗೆ ಸೇರಿಸಲಾಗುತ್ತಿತ್ತು.

(ಚಿತ್ರ: ಪ್ರಾಚೀನ ಜಾವರ್ ಭೂಗತ ಗಣಿ ಒಳಗೆ ಬೆಟ್ಟದ ಮೂಲ ಬಂಡೆಯನ್ನೆ ಸುರಂಗಗಳ ಮಧ್ಯೆ ಶಂಕಿನಾಕಾರ ಆಧಾರ ಕಂಬವಾಗಿ ಬಳಸಿಕೊಂಡಿರುವುದು (ರಾಜ, ಡಿ.ಎಮ್.ಜಿ, 2015).


(ಚಿತ್ರ: ಜಾವರ್ ಗಣಿಗಾರಿಕೆ ಪ್ರದೇಶದಲ್ಲಿ ಕಂಡುಬರುವ ರೆಟಾರ್ಟ್ಗಳ ತ್ಯಾಜ್ಯ ಗುಡ್ಡಗಳು ಮತ್ತು ಗಣಿ ಪ್ರದೇಶದಲ್ಲಿರುವ ಹಳೆಯ ದೇವಾಲಯಗಳು (ಎ.ಕೆ.ಗ್ರೋವರ್).
ರೆಟಾರ್ಟ್ಗಳನ್ನು ರಂದ್ರಗಳಿರುವ ಬೋಗುಣಿಯಲ್ಲಿ ಜೋಡಿಸಿ ಕಲ್ಲು ಕುಲಮೆ ಇಟ್ಟು ಕೆಳಗಿಂದ ಬೆಂಕಿ ಉರಿಸಲಾಗುತ್ತದೆ. ಒಂದು ನಿರ್ದಿಷ್ಟ ಉರಿಯ ತಾಪಮಾನಕ್ಕೆ ಅದಿರು ಆವಿಯಾಗಿ ಲೋಹದ ನೊರೆ ಹೊರಹೊಮ್ಮಿ ಸಂಗ್ರಹ ತಟ್ಟೆಗಳಲ್ಲಿ ಘನೀಕೃತಗೊಳ್ಳುತ್ತದೆ. ಸಾಮಾನ್ಯವಾಗಿ ಒಂದು ಕುಲುಮೆಯ ಮೇಲೆ 36 ರೆಟಾರ್ಟ್ಗಳನ್ನು ಜೋಡಿಸಲಾಗಿ 20-25% ಲೋಹ ರೆಟಾರ್ಟ್ಗಳಲ್ಲಿಯೇ ಉಳಿದುಕೊಂಡು ಸುಮಾರು 300-400 (ಒಂದು ರೆಟಾರ್ಟ್) ಗ್ರಾಂ ಲೋಹ ಅಂದರೆ 36 ರೆಟಾರ್ಟ್ಗಳಿಂದ ಒಟ್ಟು 10-15 ಕೆಜಿಯಷ್ಟು ಸೀಸ-ಸತು ಉತ್ಪಾದನೆಯಾಗುತ್ತಿತ್ತು ಎಂದು ಲೆಕ್ಕ ಹಾಕಲಾಗಿದೆ.
ಒಂದು ಲೆಕ್ಕಾಚಾರದ ಪ್ರಕಾರ 1,30,000 ಟನ್ನುಗಳ ಅವಶೇಷಗಳು ಜವಾರ್ ಪ್ರದೇಶದಲ್ಲಿ ಬಿದ್ದಿದ್ದು ಇದರಿಂದ ಸುಮಾರು 1,000,000 ಟನ್ನುಗಳ ಸೀಸ-ಸತು ಲೋಹ ಮತ್ತು ಸತು ಆಕ್ಸೈಡ್ಸ್ ಉತ್ಪಾದನೆಯಾಗಿದೆ ಎನ್ನಲಾಗಿದೆ. ಜಾವರ್ ಮಾಲಾದ (ಬೆಟ್ಟ) ಹಳೆಯ ಸೀಸ-ಸತು ಗಣಿಗಳ ಸುರಂಗಗಳಲ್ಲಿ ಆಧಾರವಾಗಿ ಕೊಟ್ಟಿದ್ದ ಮರದ ದಿಮ್ಮಿಗಳನ್ನು ರೇಡಿಯೋಕಾರ್ಬನ್ ಡೇಟಿಂಗ್ ವಿಶ್ಲೇಷಣೆಗೆ ಒಳಪಡಿಸಿದಾಗ ಅವು 2180 ವರ್ಷಗಳ (ಹೆಚ್ಚುಕಡಿಮೆ 35 ವರ್ಷಗಳು) ಕಾಲವನ್ನು ತೋರಿಸಿವೆ. ರಾಜಸ್ತಾನವು, ಪ್ರಾಚೀನ ಸತು ಗಣಿಗಾರಿಕೆಯ ಕುಲುಮೆಗಳ ಪುರಾವೆಗಳನ್ನು ಹೊಂದಿರುವ ಏಕೈಕ ಗಣಿಗಳಾಗಿವೆ ಎಂಬುದಾಗ ಪುರಾತತ್ತ್ವಶಾಸ್ತ್ರ ಇಲಾಖೆ ಹೇಳುತ್ತದೆ. (Hindzinc Tech, HZL, V.1, No.1, ಗಿ.1, ಓo.1, 1989).

ಚಿತ್ರ: ಜಾವರ್ನಲ್ಲಿ ಬಿಸಾಕಿರುವ ರೆಟಾರ್ಟ್ಗಳನ್ನು ಬಳಸಿ ಕಟ್ಟಿರುವ ಗೋಡೆಗಳು (ಎ.ಕೆ.ಗ್ರೋವರ್).

(ಚಿತ್ರ: ಸತು ಕರಗಿಸುವ ಪ್ರಾಚೀನ ಕುಲುಮೆ (ಎಚ್.ಜೆಡ್.ಎಲ್.).
ಸೀಸ-ಸತು ನಿಕ್ಷೇಪಗಳು : ಸಾಮಾನ್ಯವಾಗಿ ಸೀಸ-ಸತು ಲೋಹಗಳು ಒಟ್ಟಾಗಿ ದೊರಕುತ್ತವೆ. ಭೂಮಿಯ ಫಲಕಾಲೋಂದನ (ಟೆಕ್ಟೋನಿಕ್) ವಿಕಾಸದ ಕಾಲದಲ್ಲಿ ಸೀಸ-ಸತು ಲಭ್ಯತೆ ಮರು ವಿತರಣೆಯಾಗಿ ಮಾರ್ಪಟ್ಟಿದ್ದೆ ಇಂದಿನ ನಿಕ್ಷೇಪಗಳ ಅಸಮ ವಿತರಣೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಸೀಸ-ಸತುವಿನ ಅದಿರು ರಚನೆಯ ಉತ್ಪಾದಕತೆಯಲ್ಲಿನ ಸೈಕ್ಲಿಕ್ ಬದಲಾವಣೆಗಳು ಹೆಚ್ಚಿನ ಖಂಡೀಯ (ಖಂಡಗಳ) ಕ್ರಸ್ಟಲ್ ಬ್ಲಾಕ್ಗಳು ಮತ್ತು ಸೂಪರ್ ಕಾಂಟಿನೆಂಟಲ್ (ಭೂ ಖಂಡಗಳ) ರಚನೆ, ಸ್ಥಿರೀಕರಣ ಮತ್ತು ಅಂತಿಮಾವಾಗಿ ನಿಘಟನೆಯ ನಿಯತಕಾಲಿಕ ಸಂಯೋಜನೆಯನ್ನು ಪ್ರತಿಬಿಂಬಿಸುತ್ತವೆ.
ಸೀಸ-ಸತು ನಿಕ್ಷೇಪಗಳ ವಯಸ್ಸಿನ ರೋಹಿತದ (ಸ್ಪೆಕ್ಟ್ರಾ) ಅನೇಕ ಲಕ್ಷಣಗಳು, ಕ್ರಾಟೋನಿಕ್ ದ್ವೀಪಗಳ ಕಮಾನುಗಳನ್ನು ವಿಲೀನಗೊಳಿಸುವ ಪರಿಣಾಮವಾಗಿ ಭೂಖಂಡದ ಹೊರಪದರು ಕ್ರಮೇಣ ಬೆಳವಣಿಗೆಯಾಗಿದೆ. ಅದಿರು ರಚನೆ ಎನ್ಸಿಯಾಲಿಕ್ ಪರಿಸರಗಳ ಅಗಲಗೊಳಿಸುವ ವ್ಯಾಪ್ತಿ ಮತ್ತು ಮ್ಯಾಗ್ಮಾ ಉತ್ಪಾದನಾ (ಹೊರಚೆಲ್ಲುವ) ಪ್ರಕ್ರಿಯೆಗಳಲ್ಲಿ ಖಂಡಗಳ ಹೊರಪದರು ಹೆಚ್ಚುತ್ತಿರುತ್ತದೆ. ಸೀಸವು ತುಂಬಾ ಮೃದುವಾದ, ನೀಲಿ ಬೂದು ಲೋಹವಾಗಿದೆ. ಸೀಸ ತುಂಬಾ ಮೃದುವಾದ ಕಾರಣ ಇದನ್ನು ಇತರ ಲೋಹಗಳಲ್ಲಿ ಸುಲಭವಾಗಿ ಮಿಶ್ರಣ ಮಾಡಬಹುದು.

(ಸೀಸದ ಅದಿರು, (IStock Image).

(ಸತುವಿನ ಅದಿರು, (Dreamstime Image).
ಸತು, ನೀಲಿ-ಬಿಳಿ ಹೊಳೆಯುವ ಲೋಹವಾಗಿದ್ದು, ಕೋಣೆಯ ತಾಪಮಾನದಲ್ಲಿ ದುರ್ಬಲವಾಗಿರುತ್ತದೆ. ಆದರೆ 100 ಡಿಗ್ರಿ ಸೆಲ್ಸಿಯಸ್ನಲ್ಲಿ ಮೃದುವಾಗಿರುತ್ತದೆ. ಸತುವು ಭೂಮಿಯ ಹೊರಪದರಲ್ಲಿ ದೊರಕುವ ಒಂದು ಸಾಮಾನ್ಯ ಖನಿಜವಾಗಿದೆ. ಸತು ಅಂಶ ಮಣ್ಣು, ಗಾಳಿ, ನೀರಿನಲ್ಲಿ ಮತ್ತು ಆಹಾರದಲ್ಲಿಯೂ ಕಂಡುಬರುತ್ತದೆ. ಹೆಚ್ಚಿನ ಸತುವಿನ ನಿಕ್ಷೇಪಗಳು ಸೀಸದ ಬಹುಮುಖ್ಯ ಖನಿಜವಾದ ಗ್ಯಾಲೆನಾವನ್ನು ಹೊಂದಿರುತ್ತವೆ. ಸೀಸ ಮತ್ತು ಸತು ಎರಡೂ ಖನಿಜಗಳನ್ನು ಒಟ್ಟಾಗಿ ಗಣಿ ಮಾಡಿ ತೆಗೆಯಲಾಗುತ್ತದೆ. ಸೀಸ-ಸತು ಖನಿಜಗಳೊಂದಿಗೆ ಸ್ವಲ್ಪ ಅಂಶದ ಬೆಳ್ಳಿ ಮತ್ತು ತಾಮ್ರವೂ ದೊರಕುತ್ತದೆ. ಸತು ವಿವಿಧ ಲವಣಗಳ ಸಂಯೋಜನೆಯ ಸಂಯುಕ್ತಗಳ ಮೂಲಕವೂ ಅಸ್ತಿತ್ವದಲ್ಲಿದೆ. ಪ್ರಸ್ತುತ ಸತು ಜಗತ್ತಿನ 50 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಉತ್ಪಾದನೆಯಾಗುತ್ತದೆ.

ಡಾ. ವೆಂಕಟಸ್ವಾಮಿ ಇಂದಿನ ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆಯವರು. ಪ್ರ.ದ.ಕಾಲೇಜ್ನಲ್ಲಿ ಬಿ.ಎಸ್ಸಿ,. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ(ಭೂವಿಜ್ಞಾನ) ಎಂ.ಎಸ್ಸಿ. ಮುಗಿಸಿದ್ದಾರೆ. ೧೯೮೫ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ(ಯು.ಪಿ.ಎಸ್.ಸಿ. ಮೂಲಕ) ಸೇರಿಕೊಂಡು ೨೦೧೫ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಉಪ ಮಹಾನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. “ಕೋಲಾರ ಚಿನ್ನದ ಗಣಿಗಳು” ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ದೊರಕಿದೆ. ಕಳೆದ ನಾಲ್ಕೂವರೆ ದಶಕಗಳಿಂದಲೂ ಇವರು ಸಾಹಿತ್ಯಸೇವೆಯಲ್ಲಿ ತೊಡಗಿಕೊಂಡಿದ್ದು, ಈಶಾನ್ಯ ರಾಜ್ಯಗಳ ಸಾಹಿತ್ಯವನ್ನು ಕನ್ನಡಕ್ಕೆ ಮೊದಲು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇವರ ಕೃತಿಗಳು ನಾಡಿನ ಪ್ರಮುಖ ಪ್ರಕಾಶನಗಳಲ್ಲಿ ಒಟ್ಟು ೩೭ ಕೃತಿಗಳು ಪ್ರಕಟಗೊಂಡಿವೆ. ೨೦೧೯ರಲ್ಲಿ ಬಂಗಾರಪೇಟೆ ತಾಲ್ಲೂಕಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿದ್ದರು.


