ನಮ್ಮ ದೇವರು ದೇವಸ್ಥಾನ ಋಷಿಗಳು ದೇವರು ದಿಂಡರು…. ಇವರುಗಳ ಬಗ್ಗೆ ಹೇಳಬೇಕು ಅಂದರೆ ದೇವಸ್ಥಾನಗಳು ಇರುವುದಿಲ್ಲ. ಬದಲಿಗೆ ಕಮ್ಯುನಿಟಿ ಪ್ರೇಯರ್ ಹಾಲ್ ಅಂತ ಇರ್ತವೆ. ಅಲ್ಲಿ ಸರ್ಕಾರದಿಂದ ನೇಮಿತವಾದ ಒಬ್ಬರು ಪುರುಷ ಒಬ್ಬರು ಮಹಿಳೆ ಇರ್ತಾರೆ. ಪ್ರತಿ ಹತ್ತು ನಿಮಿಷಕ್ಕೆ ರೆಕಾರ್ಡೆಡ್ ಪ್ರೇಯರ್ಗಳನ್ನು ಹಾಕುತ್ತಾರೆ. ಒಂದು ಸಿಟಿಂಗ್ಗೆ ಇಷ್ಟು ದುಡ್ಡು ಅಂತ ಕೊಟ್ಟು ಇಂತಹ ಕಡೆ ಹೋಗಬಹುದು. ಇಂತಹ ಕಡೆ ಬಂದರೆ ಶಾಂತಿ ಸಮಾಧಾನ ಸಿಗುತ್ತೆ ಅಂತ ಸರ್ಕಾರ ಚೆನ್ನಾಗಿ ಪ್ರಚಾರ ಮಾಡುತ್ತೆ. ಭಗ್ನ ಹೃದಯಿಗಳು ಇಂತಹ ಕಡೆ ಹೇರಳವಾಗಿ ಕಾಣುತ್ತಾರೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೫ನೇ ಬರಹ ನಿಮ್ಮ ಓದಿಗೆ
ಹಿಂದಿನ ಕಂತು ಹೀಗೆ ಮುಗಿದಿತ್ತು…
ಹಳೆಯ ಬೆಂಗಳೂರು ನೆನಪಿಗೆ ಬಂದಾಗ ಒಂದು ವಿಷಯ ಮಾತ್ರ ಸ್ಪಷ್ಟವಾಗುತ್ತದೆ. ನಗರ ಬದಲಾಗಿದೆ. ರಸ್ತೆಗಳು ಬದಲಾಗಿವೆ. ವಾಹನಗಳು ಬದಲಾಗಿವೆ. ಓದುವ ವಿಧಾನ ಬದಲಾಗಿದೆ. ಆದರೆ ಮನುಷ್ಯನ ನೆನಪು ಮಾತ್ರ ಬದಲಾಗಿಲ್ಲ. ನಾವು ನಡೆದ ರಸ್ತೆಗಳು, ಓದಿದ ಕಾಲೇಜುಗಳು, ಕೇಳಿದ ಮೇಷ್ಟ್ರುಗಳ ಮಾತುಗಳು, ಗೆಳೆಯರ ಕೀಟಲೆಗಳು, ಎಲ್ಲವೂ ಇನ್ನೂ ನಮ್ಮೊಳಗೆ ಹಾಗೆಯೇ ಉಳಿದಿವೆ.
ರಿಂಗ್ ರೋಡ್ ಮೊದಲಿನ ಬೆಂಗಳೂರು ಈಗ ಇಲ್ಲ. ಆದರೆ ಆ ಬೆಂಗಳೂರಿನ ನೆನಪು ನಮ್ಮೊಳಗಿದೆ. ಎಸ್ಎಸ್ಎಲ್ಸಿ ರಿಸಲ್ಟ್, ಪಿಯುಸಿ ಅಡ್ಮಿಷನ್, ಬಿಎಸ್ಸಿ ಕೋರ್ಸ್, ಟ್ಯುಟೋರಿಯಲ್ಸ್, ಕನ್ನಡ ಇಂಗ್ಲಿಷ್ ಮೇಷ್ಟ್ರ ಪಾಠ, ಸೋಷಿಯಲ್ಸ್, ಕೆಮ್, ಫಿಸಿಕ್ಸ್ ಲ್ಯಾಬ್, ಜಿಯೋಗ್ರಫಿ, ಆಸ್ಟ್ರಾನಮಿ, ಜಿಟಿಎನ್ ಕತೆ, ಲಾ ಪಾಠ—ಇವೆಲ್ಲವೂ ನಮ್ಮ ಕಾಲದ ಬೆಂಗಳೂರು.
ಈಗ ಯಾರಾದರೂ “ಆ ಕಾಲದಲ್ಲಿ ಏನಿತ್ತು?” ಎಂದು ಕೇಳಿದರೆ, ಏನೂ ಇರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಬಹಳ ಇತ್ತು. ಆದರೆ ಈಗ ಇರುವುದಕ್ಕಿಂತ ಬೇರೆ ರೀತಿಯಲ್ಲಿ ಇತ್ತು. ಆಗ ರಿಂಗ್ ರೋಡ್ ಇರಲಿಲ್ಲ. ಆದರೆ ನೆನಪುಗಳ ರಸ್ತೆಗೆ ಕೊನೆಯೇ ಇರಲಿಲ್ಲ. ನಿಮ್ಮ ಮೂಲದ ಕೊನೆಯ ಪ್ಯಾರಾದಿಂದಲೇ ಈ ಲೇಖನವನ್ನು ಬೆಳೆಸಿದ್ದೇನೆ. ಇನ್ನೂ ಹೆಚ್ಚು ನಿಮ್ಮ ವೈಯಕ್ತಿಕ ಘಟನೆಗಳು—ಯಾವ ಕಾಲೇಜು, ಯಾವ ಮೇಷ್ಟ್ರು, ಜಿಟಿಎನ್ ಕತೆಯಲ್ಲಿ ಏನಾಯಿತು, ಲಾ ಪಾಠದ ಒಂದು ಪ್ರಸಂಗ—ಸೇರಿಸಿದರೆ ಲೇಖನ ಇನ್ನಷ್ಟು ನಿಮ್ಮದೇ ಆಗುತ್ತ….
ನೋಡಿದ್ರಾ AI ಮಜಾ ಹೇಗಿರುತ್ತೆ?
ನನ್ನ ಪುರಾಣ ಅದು ಮುಂದುವರೆಸಿದ ರೀತಿ ನನಗೆ ಶೇ ನೂರರಷ್ಟು ಸಮ್ಮತಿ ಇಲ್ಲ. ಅದನ್ನು ಬೇರೆ ರೀತಿ ಇನ್ನೂ ಚೆನ್ನಾಗಿ ಹೇಳಬಹುದಿತ್ತು ಅಂತ ಗೊತ್ತು! ಇದರ ಮೂಲಕ ಮುಂದೆ ಕತೆ ಕಾದಂಬರಿ ಬರೆಸಿ ಕವಿತೆ ಹೊಸೆದು ಅಕಾಡೆಮಿ ಅವಾರ್ಡ್ ಬಾಚಿಕೊಂಡು…. ಏನೇನು ಮಾಡಬಹುದು ಅಲ್ಲವೇ… ಇದರ ಬಗ್ಗೆ ಮುಂದೆ ಖಂಡಿತ ಹೇಳುತ್ತೇನೆ..!
ಈಗ ಮುಂದಕ್ಕೆ.
AI ನ ಹೊಸಾ ಅವತಾರ ಹೇಗೆ ಉಪಯೋಗ ಮಾಡಿಕೊಳ್ಳಬಹುದು ಅಂತ ಒಂದು ಯೋಚನೆ ಹರಿಬಿಟ್ಟಿದ್ದೆ. AI ಬಗ್ಗೆ ಈಗಾಗಲೇ ನೀವೆಲ್ಲಾ ಸಾಕಷ್ಟು ತಿಳಿದುಕೊಂಡಿದ್ದೀರಿ ಅಂತ ಗೊತ್ತು. ಇದು ನನಗೆ ಹೊಸದಲ್ಲವಾ? ಅದರಿಂದ ಎಳೆ ಕೂಸಿನ ಕುತೂಹಲದ ಕಣ್ಣು ನನ್ನದು. ಮೊದಲು ನನ್ನ ಐಡಿಯಾ ನಿಮ್ಮ ಜತೆ ಹಂಚಿಕೊಳ್ಳಲೆ..
ಇನ್ನು ಸಾವಿರ ವರ್ಷಕ್ಕೆ ಅಂದರೆ 3026ರಲ್ಲಿ ಬೆಂಗಳೂರು ಹೇಗಿರುತ್ತೆ? ನನ್ನ ಪ್ರಕಾರ ನಮ್ಮ ಬೆಂಗಳೂರಿನಲ್ಲಿ ಒಂದೇ ಒಂದು ಇಂಚು ನೆಲ ಕಾಣುವ ಹಾಗೆ ಇರುವುದಿಲ್ಲ. ನಗರದ ರಸ್ತೆಗಳು ಮಾಯ ಆಗಿರುತ್ತದೆ. ಐನೂರು ಸಾವಿರ ಎರಡು ಸಾವಿರ ಹತ್ತು ಸಾವಿರ ಅಂತಸ್ತಿನ ಭಾರೀ ಕಟ್ಟಡಗಳು ಇಡೀ ಬೆಂಗಳೂರನ್ನು ಆಕ್ರಮಿಸಿರುತ್ತೆ. ಈಗಿನ ಹಾಗೆ ರಸ್ತೆಗಳು ಇರುವುದಿಲ್ಲ, ಕಾರಣ ರಸ್ತೆಯ ಮೇಲೆಲ್ಲಾ ಕಟ್ಟಡ ಎದ್ದಿರುತ್ತದೆ. ಅದೇ ರೀತಿ ಈಗ ಇಲ್ಲಿ ಅಳಿದು ಉಳಿದಿರುವ ಕೆರೆ ಕುಂಟೆಗಳು ಬಹುಮಹಡಿ ಕಟ್ಟಡಕ್ಕೆ ದಾರಿ ಮಾಡಿರುತ್ತವೆ. ರಸ್ತೆಗಳೇ ಇಲ್ಲ ಅಂದಮೇಲೆ bmtc ಬಸ್ಸು ಕಣ್ಮರೆ ಆಗಿರುತ್ತೆ, ಆಟೋರಿಕ್ಷಾ, ಕ್ಯಾಬ್ಗಳು ನಾಮಾವಶೇಷ ಆಗಿರುತ್ತೆ. ಜನರ ಓಡಾಟಕ್ಕೆ ಆಕಾಶ ಮಾರ್ಗ ಹುಡುಕಿರುತ್ತಾರೆ. ಇದರ ಪ್ರಭಾವ ಅಂದರೆ ಪ್ರತಿಯೊಬ್ಬರೂ ಅವರ ಬಳಿ ಈಗಿನ ಹೆಲಿಕಾಪ್ಟರ್ ರೀತಿಯ ವಾಹನ ಹೊಂದಿರುತ್ತಾರೆ. ಒಂದೊಂದು ಅಂತಸ್ತಿನ ಮನೆಗಳು ಇರುಲ್ಲ ಮತ್ತು ಅಂತಹ ಕಾಲ ಇತ್ತು ಎಂದು ಸೂಚಿಸುವ ಯಾವ ಪಳೆಯುಳಿಕೆ ಸಹ ಇರದು. ಜನಸಾಮಾನ್ಯರು ಅಂದರೆ ನಾವು ನೀವು ಇಲ್ಲೆಲ್ಲೂ ಕಾಣುವುದಿಲ್ಲ. ಕೆಲ ಹಂತದ ಶ್ರೀಮಂತರಿಗೆ ಎಂದೇ ರಸ್ತೆಯ ಅಡಿಯಲ್ಲಿ ಸಾವಿರಾರು ಸಾವಿರಾರು ಮೈಲಿ ಉಹೂಂ ಮೈಲಿ ಅಲ್ಲ ಕಿಲೋಮೀಟ್ರು ಸುರಂಗ ಇರುತ್ತೆ. ಸುರಂಗದಲ್ಲಿ ಎಲ್ಲಿಗೆ ಬೇಕು ಅಂದರೆ ಅಲ್ಲಿಗೆ ಹೋಗುವ ಸಂಪರ್ಕ ಕಲ್ಪಿಸುವ ರಸ್ತೆ ಇರ್ತದೆ ಮತ್ತು ಆಗಿನ ಇಂದಿನ ನವೀಕರಿಸಿದ ಮೆಟ್ರೋ ಇರ್ತದೆ. ನವೀಕರಿಸಿದ್ದು ಯಾಕೆ ಅಂದರೆ ಪ್ರತಿಸಲ ನವೀಕರಿಸಿದ ನಂತರ ಚೆನ್ನಾಗಿ ದುಡ್ಡು ಹೊಡೆಯುವ ಯೋಜನೆ ಇವರ ನಾಯಕನಲ್ಲಿ ಬೆಳೀತಾ ಇರ್ತದೆ! ಇವುಗಳೆಲ್ಲವನ್ನೂ ನಿರ್ವಹಿಸಲು ಮನುಷ್ಯ ಇರುಲ್ಲ! ಬದಲಿಗೆ ಈ AI ಅಂದರೆ ಕೃತಕ ಬುದ್ಧಿಮತ್ತೆ ಅಂತ ಒಂದರ ಬಗ್ಗೆ ಈಗ ನಾವು ಮಾತಾಡುತ್ತಾ ಇದೀವಲ್ಲ ಅದು ಇರುತ್ತೆ. ಮನುಷ್ಯ ಮಾಡುವ ಎಲ್ಲಾ ಕೆಲಸವನ್ನೂ ಅದು ಹೆಗಲಿಗೆ ಹೊತ್ತು ಮಾಡುತ್ತದೆ ಮತ್ತು ಮನುಷ್ಯ ಬೇರೆ ಕೆಲಸ ಮಾಡಿಕೊಳ್ಳಲು ಬಿಡುವು ಕೊಟ್ಟಿರುತ್ತೆ. ಈ ಬಿಡುವಿನಲ್ಲಿ ಮನುಷ್ಯ ಯಾರನ್ನು ಹೇಗೆ ತುಳಿಯಬೇಕು, ಇನ್ನೂ ಎಲ್ಲಿ ಸುರಂಗ ತೋಡಬೇಕು, ಎಲ್ಲಿ ಹೆಲಿ ಪ್ಯಾಡ್ ಮಾಡಬೇಕು, ಎಲ್ಲಿ ಹೇಗೆ ಬೆಲೆ ಹೆಚ್ಚಿಸಬೇಕು, ಯಾವ ಕೆಲಸಕ್ಕೆ ಎಷ್ಟು ಲಂಚ ಫಿಕ್ಸ್ ಮಾಡಬೇಕು, ಯಾರ ಮನೆ ಹಾಳುಗೆಡವಬೇಕು, ಯಾರ ಮಾನ ಮಾರ್ಯಾದೆ ಒಂದೂ ಕಾಲು ಪೈಸೆಗೆ ಹರಾಜಾಗುವ ಹಾಗೆ ಯಾವ ಸಿಡಿ ಪೆನ್ ಡ್ರೈವ್ ಹೊರತರಲಿ (ಆಗ ಸಿಡಿ ಪೆನ್ ಡ್ರೈವ್ ಗಳ ಸಾವಿರಪಟ್ಟು improved version ಬಂದಿರುತ್ತೆ ಬೇರೆಬೇರೆ ಆಕರ್ಷಕ ಹೆಸರಿನ ಸಂಗಡ )…ಇನ್ನೂ ಉಳಿದಿರುವ ಚೂರು ಪಾರು ಭೂತಾಯಿಯ ಹೃದಯ ಹೇಗೆ ಬಗೆಯ ಬೇಕು ಎಂದು ದೇಶ ಮುಂದೆ ತರುವ ಬಗ್ಗೆ ಪ್ಲಾನಿಸುತ್ತಾನೆ. ಅದರಿಂದ ಬಂದ ಕಳ್ಳ ದುಡ್ಡನ್ನು ತನ್ನ ಹತ್ತನೇ ಹದಿನೈದನೆ ತಲೆಮಾರಿಗೆ ಮೀಸಲಿಡಲು ಯೋಜಿಸುತ್ತಾನೆ. ಯಾವ ದೇಶದಲ್ಲಿ ಇಟ್ಟರೆ ಸೇಫು ಎನ್ನುವ ಕಂಠ ಮಟ್ಟ ಮಾಹಿತಿ ಅವನಿಗೆ ಕರತಲಾಮಲಕ ಆಗಿರುತ್ತೆ. ತಮಾಷೆ ಅಂದರೆ ಅವನಿಗೆ ಆಗಲೇ ಅರವತ್ತು, ಇನ್ನೂ ಮದುವೆ ಇಲ್ಲ, ಮಕ್ಕಳೂ ಇಲ್ಲ! ಆದರೆ ದೇಶ ಕಟ್ಟುವ ಅದರಲ್ಲಿ ತನ್ನ ಮುಂದಿನ ಪೀಳಿಗೆಗೆ ಸಾಕಷ್ಟು ಗಂಟು ಇಡುವ ದೊಡ್ಡ ಆಸೆ ಮಾತ್ರ ಇರುತ್ತದೆ.
ಸುರಂಗದಲ್ಲಿನ ವಾಹನ ಓಡುತ್ತದೆ, ಅದರಲ್ಲಿ ಈ ಶ್ರೀಮಂತರು ನೇತು ಹಾಕಿಕೊಂಡು ಓಡಾಡುತ್ತಾರೆ. ಆಕಾಶದಲ್ಲಿ ಹಾರಾಡುವ ಶ್ರೀ ಮಂತರಿಗೆ ಎಂದೇ ಹೆಲಿಪ್ಯಾಡ್ ಮಾದರಿಯ ಈಗಿನ ರೀತಿಯ ಬಸ್ ಸ್ಟ್ಯಾಂಡ್ಗಳು ಇರುತ್ತವೆ. ಇವುಗಳನ್ನು ನಿರ್ಮಿಸಲು ಒಂದು ದೊಡ್ಡ squad ಇರುತ್ತೆ ಮತ್ತು ಇದರಲ್ಲಿ ಪರಿಣಿತರು ಇರುತ್ತಾರೆ. ಇಂತಹವರನ್ನು ಹಿಂದೆ ರಾಜಕಾರಣಿಗಳು ಎಂದು ಕರೆಯುತ್ತಿದ್ದರು. ಈಗ ಅವರು nation builders ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ!
(ಇದನ್ನು ಮುಂದುವರೆಸು ಅಂತ ಕೃತಕ ಬುದ್ಧಿಮತ್ತೆ ಅಂದರೆ AI ಗೆ ಕೋರಿಕೊಂಡೆ ನೋಡಿ. ಒಂದೇ ಸೆಕೆಂಡ್ ನಲ್ಲಿ ಇಷ್ಟುದ್ದ ವಿವರ ಕೊಟ್ಟಿತು. ಅದರಲ್ಲಿ ಬೇಕಾದ್ದು ಮಾತ್ರ ಇಲ್ಲಿ ಮತ್ತೆ ಕಾಣಿಸಿದ್ದೀನಿ.)
ಇಡೀ ಬೆಂಗಳೂರು, ಈಗಿನ ಬೆoಗಳೂರಿನ ಯಾವ ಲಕ್ಷಣಗಳನ್ನೂ ಹೊಂದಿರುವುದಿಲ್ಲ, ಬದಲಿಗೆ ಒಂದು ರೀತಿ ಕಲಸು ಮೇಲೋಗರ. ಒಬ್ಬರ ಪರಿಚಯ ಮತ್ತೊಬ್ಬರಿಗೆ ಇರದು ಮತ್ತು ಇನ್ನೂ ವಿಶೇಷ ಎಂದರೆ ಮೆದುಳಿನ ಒಂದು ಭಾಗ ಸಂಪೂರ್ಣ ನಿಶ್ಕ್ರಿಯವಾಗಿರುತ್ತದೆ. ಅಂದರೆ ಮೆದುಳು ಎರಡು ಭಾಗಗಳಿಂದ ಸೇರಿದೆ ಎನ್ನುವುದು ನಾವು ಓದಿರುವ ಸೈನ್ಸ್ನ ಒಂದು ಪಾಠ. ಅದರಲ್ಲಿ ನಮ್ಮ ದೈನಂದಿನ ವ್ಯವಹಾರಗಳು, ಗಡಸುತನ, ಆಕ್ರಮಣ ಶೀಲತೆ ಮೊದಲಾದ ಉಗ್ರ ಅನಿಸುವಂತಹ ಭಾವನೆಗಳು ಮೆದುಳಿನ ಒಂದು ಕಡೆ ಸಂಮಿಳಿತವಾಗಿರುತ್ತದೆ. ಕೋಮಲ ಭಾವನೆಗಳು, ಲಲಿತ ಕಲೆಗಳು, ಹಾಡು ಹಸೆ ಮೊದಲಾದ ಮನಸಿಗೆ ಮುದಕೊಡುವ ಕೆಲವು ಸಂಗತಿಗಳು ಮೆದುಳಿನ ಮತ್ತೊಂದು ಭಾಗದಲ್ಲಿ ಇರುತ್ತದಂತೆ. ಇದು ನಾವು ಚಿಕ್ಕವರಿದ್ದಾಗ ಸೈನ್ಸ್ ನಮಗೆ ಕಲಿಸಿದ್ದು. ಬೆಳೆದು ದೊಡ್ಡವರಾಗುತ್ತಾ ಬಂದ ಹಾಗೆ ನಮ್ಮಲ್ಲೇ ಒಬ್ಬ ಅಥವಾ ಒಬ್ಬಳು ಕೋಪಿಷ್ಟ, ಗರ್ವ ತುಂಬಿ ತುಳುಕಾಡುವ, ಮನುಷ್ಯನಿಗೆ ಸಹಜ ಅನಿಸುವ ಪ್ರೀತಿ ಪ್ರೇಮ ಕರುಣೆ ಇವಾವುವೂ ಇಲ್ಲದ ಪ್ರಾಣಿಯ ಹಾಗೆ ಕಂಡಾಗ ನಮಗೆ ಏನನ್ನಿಸುತ್ತದೆ? ಲೂಸು ಮುಂಡೇದು ರಾಕ್ಷಸ ಆಗಿ ಹುಟ್ಟಬೇಕಿತ್ತು, ಅಪ್ಪಿ ತಪ್ಪಿ ಮನುಷ್ಯ ಆಗಿ ಹುಟ್ಟಿದೆ ಅನಿಸುತ್ತೆ ತಾನೇ? ಕೆಲವು ಅಂತಹ ಸುಕೋಮಲ ಭಾವನೆ ರಹಿತರನ್ನು ನೋಡಿದಾಗ ಮೊದಮೊದಲು ನನಗೆ ಇದು ಯಾಕೆ ಈ ಮನುಷ್ಯ ಹೀಗಾಡುತ್ತೆ ಅಂತ ಅನಿಸಿದೆ. ನಂತರ ಈತ ಯಾಕೆ ಹೀಗೆ ಎಂದು ಅನಾಟೊಮಿ ಮಾಡಲು ಯತ್ನಿಸಿದೆ…! ನನ್ನ ನಂತರದ ಪೀಳಿಗೆಯ ಸುಮಾರು ಮಕ್ಕಳು ಸಿಸೆರಿಯನ್ ಮೂಲಕ ಹುಟ್ಟಿದವು ಮತ್ತು ಕೆಲವು ಫೋರ್ ಸೆಪ್ಸ್ ಹುಟ್ಟಿನವು. ಸಿಸೆರಿಯನ್ ಅಂದರೆ ಹೊಟ್ಟೆ ಕೊಯ್ದು ಮಗು ಹೆರಿಗೆ ಅಂತ ಆದರೆ ಫೋರ್ ಸೆಪ್ಸ್ನಲ್ಲಿ ತಲೆಯನ್ನು ಒಂದು ರೀತಿಯ ಇಕ್ಕಳದಿಂದ ಹಿಡಿದು ಗರ್ಭದಿಂದ ಹೊರಗೆ ಎಳೆದು ಮಗುವಿನ ಪೂರ್ಣ ದೇಹ ಆಚೆ ಬರಿಸುವ ಹೆರಿಗೆ. ತಲೆಯ ಎರಡೂ ಬದಿಯನ್ನು ಫೋರ್ ಸೆಪ್ಸ್ನ ಎರಡು ತುದಿಗಳು ಗಟ್ಟಿಯಾಗಿ ಅದುಮಿ ಹಿಡಿಯುತ್ತದೆ. ಅದರಿಂದ ಮೆದುಳು ಅಪ್ಪಚ್ಚಿ ಆಗಿರುತ್ತದೆ. ಈ ರೀತಿ ಹುಟ್ಟಿದ ಮಕ್ಕಳಿಗೆ ಮೆದುಳಿನ ಸಂಪೂರ್ಣ ಬೆಳವಣಿಗೆಗೆ ತೊಡಕು ಬಂದಿರುತ್ತೆ. ಈ ಕಾರಣದಿಂದ ಫೋರ್ ಸೆಪ್ಸ್ ಮೂಲಕ ಪ್ರಪಂಚ ಕಂಡವರಿಗೆ ಸುಕೋಮಲ ಭಾವನೆಗಳು ಖಂಡಿತ ಇರುವುದಿಲ್ಲ ಎನ್ನುವುದು ನಾನು ಕಂಡುಕೊಂಡಿರುವ ಸತ್ಯ. ಇದಕ್ಕೆ ವೈದ್ಯಕೀಯ ಶಾಸ್ತ್ರ ಒಪ್ಪಲಿ ಬಿಡಲಿ ನನ್ನ ಮಟ್ಟಿಗೆ ಇದು ಖರೆ! ಬೇಕಿದ್ದರೆ ನಿಮಗೆ ತಿಳಿದಿರುವ ಯಾವುದೇ ರಾಜಕಾರಣಿಯನ್ನು, ಕಾರ್ಪೋರೇಷನ್ ಕೆಲಗಾರರನ್ನು, bda ಅಧಿಕಾರಿಯನ್ನು ಕಣ್ಣು ಮುಚ್ಚಿ ನಿಮ್ಮ ಕಣ್ಣ ಮುಂದೆ ತಂದುಕೊಳ್ಳಿ! ನಾನು ಹೇಳಿದ್ದು ಸತ್ಯ ತಾನೇ?
ಮುಂದಿನ ಬೆಂಗಳೂರಿನ ಟಾಪೋಗ್ರಾಫಿ ನಿಮಗೆ ಕೊಡ್ತಾ ಇದ್ದೆ, ಆಗಲೇ ಕಥೆ ಹಳ್ಳಕ್ಕೆ ಹರಿದದ್ದು ಅಂದರೆ deviate ಆಗಿದ್ದು. ಮತ್ತೆ ಹಳಿಗೆ ಬರಲೇ…
ನನ್ನ ಕಲ್ಪನೆಯ ಮುಂದಿನ ಶತ ಶತಮಾನಗಳ ಸುಂದರ ಬೆಂಗಳೂರಿನಲ್ಲಿ ರಾಜಕಾರಣಿಗಳು ಇರುತ್ತಾರೆಯೇ? ನನಗೆ ನಿಮಗೆ ಇವು ಖಡಾ ಖಂಡಿತ ಬೇಡ ಅಂತ ಅನಿಸಿದರೂ ಇವು ಖಂಡಿತ ಇದ್ದೇ ಇರ್ತವೆ ಮತ್ತು ನಮ್ಮ ಸಂಪಾದನೆಯನ್ನು ನಮ್ಮ ಅರಿವಿಗೆ ಬಾರದ ಹಾಗೆ ಅದರ ಕಡೆಗೆ ಸೈಫನ್ ಮಾಡಿರುತ್ತವೆ. ಅವುಗಳ ಹೆಸರನ್ನೂ ಸಹ ಆಗಿನ ಕಾಲಮಾನಕ್ಕೆ ತಕ್ಕಂತೆ ಆಕರ್ಷಣೀಯವಾಗಿ ಮಾಡಿಕೊಂಡಿರುತ್ತವೆ. ಹಿಂದೆ ಹೇಳಿದ nation builders ಮಾದರಿಯ ಹೆಸರುಗಳು ಅವರನ್ನು ವಿಜೃಂಭಿಸುತ್ತವೆ.
ಇನ್ನು ನಮ್ಮ ಆಹಾರ ಪಾಹಾರಗಳಿಗೆ ಬಂದರೆ… ಆಗ ಹೋಟೆಲ್ ಪೊಟೇಲ್ ಇರದು. ದರ್ಶಿನಿ ಸಹ ಇರದು. ಎಲ್ಲೋ ಕೆಲವು ಆಯ್ದ ಸ್ಥಳಗಳಲ್ಲಿ ಫುಡ್ ಪಾಕೆಟ್ಸ್ ಅಂತ ಪೊಟ್ಟಣ ಕಟ್ಟಿದ ಆಹಾರ ದುಡ್ಡಿಗೆ ಸಿಗುತ್ತೆ. ಅವು ಹೊರದೇಶದವು. ವರ್ಷಾನುಗಟ್ಟಲೆ ಇಟ್ಟರೂ ಕೆಡದಿರುವಂತಹವು. ಅದನ್ನು ಜನ ಕಾಸು ಕೊಟ್ಟು ಕೊಂಡು ಓಡುತ್ತಲೇ ಉಣ್ಣುತ್ತಾರೆ. ಅದೇ ರೀತಿ ಒಂದು ಡಬ್ಬದಲ್ಲಿ ಪಾನೀಯ ಸಹ ಅದೂ ಹೊರದೇಶದ್ದು, ಓಡುತ್ತಾ ಓಡುತ್ತಾ ಕುಡಿಯುತ್ತಾರೆ. ಯಾಕೆ ಓಡುತ್ತಾ ಕುಡಿಯುತ್ತಾರೆ ಅಂದರೆ ಯಾರಿಗೂ ನಿಧಾನಕ್ಕೆ ನಡೆಯುವುದು ಬಾರದು. ಓಡುತ್ತಿದ್ದರೆ ಮಾತ್ರ ನೀವು ಮಿಕ್ಕವರೊಂದಿಗೆ compete ಮಾಡಬಹುದು ಎಂದು ಸಣ್ಣ ವಯಸ್ಸಿನಿoದಲೇ ಪಾಠ ಆಗಿರುತ್ತದೆ. ಪಾನೀಯ ಹೊರದೇಶದ್ದು ಅಂದೆ, ನಮ್ಮ ಯಾವ ಪಾನೀಯದ ಗಂಧ ಗಾಳಿ ನಮ್ಮ ದೇಶಿಯರು ಯಾರಿಗೂ ತಿಳಿದಿರುಲ್ಲ.
ನಮ್ಮ ಕಾಲದ ಕೆಲವು ತಿಂಡಿ ತೀರ್ಥಗಳ enlarged ಫೋಟೋಗಳನ್ನು ಮ್ಯೂಸಿಯಂ ನಲ್ಲಿ ಇಟ್ಟು ತೋರಿಸುವ ವ್ಯವಸ್ಥೆ ಇದೆ. ದುಡ್ಡು ಕೊಟ್ಟು ಇದನ್ನು ನೋಡಬೇಕು. ಫೋಟೋಗಳಲ್ಲಿ ದೋಸೆ. ಮಸಾಲಾದೋಸೆ, ಖಾಲಿ ದೋಸೆ, ಉಪ್ಪಿಟ್ಟು, ಕೇಸರಿ ಭಾತ್ ತರಹದ vegetarian ಫುಡ್ ಕಂಡರೆ ನಾನ್ ವೆಜ್ ಆಹಾರಗಳನ್ನು ಡಿಸ್ ಪ್ಲೇ ಮಾಡಿರುವುದಿಲ್ಲ. ಕಾರಣ ಅವು ಈಗಲೂ ಲಭ್ಯ.
ವ್ಯವಸಾಯ ತೋಟ ಪಾಟ ಇರುತ್ತದೆಯೇ ಅಂದರೆ ಇಲ್ಲ!
ನಮ್ಮ ಇಂದಿನ ತರಕಾರಿಗಳ ಮಾಡೆಲ್ಗಳು ಮ್ಯೂಸಿಯಂ ನಲ್ಲಿ ಸಿಗುತ್ತವೆ, ಬೇಕಾದವರು ನೋಡಿಕೊಳ್ಳಬಹುದು. ಆಗಿನ ಅಂದರೆ ಮುಂದಿನ ಬೆಂಗಳೂರಿನ ಒಂದು ಮ್ಯೂಸಿಯಂ ಬಗ್ಗೆ…
ಪ್ರತಿ 1000 ಮತ್ತು 10000ನೇ ಮಹಡಿಯಲ್ಲಿ ಒಂದು ಮ್ಯೂಸಿಯಂ ಇದೆ. ಅದರಲ್ಲಿ ಇಂದಿನ ತರಕಾರಿಗಳಾದ ಟೊಮೆಟೊ, ಬದನೆಕಾಯಿ, ಹೀರೆಕಾಯಿ, ಬೀನ್ಸ್ ನ ಬೃಹತ್ ಚಿತ್ರ ಮತ್ತು ವಿವರಣೆ ಇದೆ. ಸುರಂಗದ ಮಕ್ಕಳಿಗೆ ಇದು ಅಳಿದುಹೋದ ಪ್ರಭೇದ. ಅಲ್ಲಿನ ವಾಯ್ಸ್ ಮೆಸೇಜಲ್ಲಿ ಒಬ್ಬ ಹೇಳುತ್ತಾನೆ – ಒಂದು ಕಾಲದಲ್ಲಿ KR Market ನಲ್ಲಿ ಈ ತರಕಾರಿ ರಾಶಿ ಇತ್ತು ಅಂತ.
ನಮ್ಮ ದೇವರು ದೇವಸ್ಥಾನ ಋಷಿಗಳು ದೇವರು ದಿಂಡರು…. ಇವರುಗಳ ಬಗ್ಗೆ ಹೇಳಬೇಕು ಅಂದರೆ ದೇವಸ್ಥಾನಗಳು ಇರುವುದಿಲ್ಲ. ಬದಲಿಗೆ ಕಮ್ಯುನಿಟಿ ಪ್ರೇಯರ್ ಹಾಲ್ ಅಂತ ಇರ್ತವೆ. ಅಲ್ಲಿ ಸರ್ಕಾರದಿಂದ ನೇಮಿತವಾದ ಒಬ್ಬರು ಪುರುಷ ಒಬ್ಬರು ಮಹಿಳೆ ಇರ್ತಾರೆ. ಪ್ರತಿ ಹತ್ತು ನಿಮಿಷಕ್ಕೆ ರೆಕಾರ್ಡೆಡ್ ಪ್ರೇಯರ್ಗಳನ್ನು ಹಾಕುತ್ತಾರೆ. ಒಂದು ಸಿಟಿಂಗ್ಗೆ ಇಷ್ಟು ದುಡ್ಡು ಅಂತ ಕೊಟ್ಟು ಇಂತಹ ಕಡೆ ಹೋಗಬಹುದು. ಇಂತಹ ಕಡೆ ಬಂದರೆ ಶಾಂತಿ ಸಮಾಧಾನ ಸಿಗುತ್ತೆ ಅಂತ ಸರ್ಕಾರ ಚೆನ್ನಾಗಿ ಪ್ರಚಾರ ಮಾಡುತ್ತೆ. ಭಗ್ನ ಹೃದಯಿಗಳು ಇಂತಹ ಕಡೆ ಹೇರಳವಾಗಿ ಕಾಣುತ್ತಾರೆ!
ಪೇಲು ಮುಖ, ಮೈಯ ತುಂಬಾ ದುಃಖ ತೇಲುತ್ತಿರುವ ಕಣ್ಣುಗಳು… ಯಾರಿಗೇ ಆದರೂ ಅಯ್ಯೋ ಅನಿಸುತ್ತದೆ.
ದೇವರ ಪ್ರತಿಮೆಗಳನ್ನು ಒಂದು ನೂರು ಸಾವಿರ ಅಂತಸ್ತುಗಳ ಕಟ್ಟಡದ ದೊಡ್ಡ ಹಾಲ್ನಲ್ಲಿ ಇರಿಸಿರುತ್ತಾರೆ. ಅವುಗಳನ್ನು ನೋಡಲು ಒಂದು ದರ ಇರುತ್ತೆ. ಅದನ್ನು ತೆತ್ತು ಒಳಹೋಗಬಹುದು. ದೇವರುಗಳನ್ನು ಸಾಲಾಗಿ ಜೋಡಿಸಿರುತ್ತಾರೆ. ಒಂದು ಸಾಲಿನಲ್ಲಿ ಪುರುಷ ದೇವರು, ಎದುರು ಸಾಲಿನಲ್ಲಿ ಮಹಿಳಾ ದೇವರು ಮತ್ತು ಮಧ್ಯದ ಸಾಲಿನಲ್ಲಿ ಶಿಶು ದೇವರುಗಳ ಪ್ರತಿಮೆ ಜೋಡಿಸಿ ಇಟ್ಟಿರುತ್ತಾರೆ. ಪ್ರತಿ ದೇವರಮುಂದೆ ಒಂದು kiosk ಇದ್ದು ಅದರೊಳಗೆ ನೀವು ಕಾಸು ಹಾಕಿದರೆ ದೇವರ ಬಗ್ಗೆ ವಿವರ ರೆಕಾರ್ಡೆಡ್ ಧ್ವನಿ ಕೇಳುತ್ತದೆ. ದೇವರಿಗೆ ಹರಕೆ ಹೊರಬಹುದು ಮತ್ತು ಇದಕ್ಕೆ ವಿಶೇಷ ನಿಗದಿತ ಶುಲ್ಕ. ಬರುವ ಭಕ್ತರು ಹರಕೆ ಹೊರಲು ಬರುತ್ತಾರೆ ಮತ್ತು ಸರ್ಕಾರಕ್ಕೆ ಇದು ಆದಾಯದ ಎರಡನೇ ದೊಡ್ಡ ಮೂಲ!

ಹಳೇ ಬೆಂಗಳೂರು ಕಥೆ ಸಂಗಡ ಮುಂದಿನ ಸಹಸ್ರಮಾನದ ಬೆಂಗಳೂರಿನ ಬಗ್ಗೆ ತುಸು ವಿವರಣೆ ಕೊಟ್ಟಿದ್ದೇನೆ. ಇದರ ಮುಂದುವರೆದ ಕಂತುಗಳು ಮತ್ತು ಪ್ರಸ್ತುತ ಬೆಂಗಳೂರಿನ ದಂಗು ಬಡೆಯುವ ಸಂಗತಿಗಳು ನಿಮ್ಮೆದುರು ಬರ್ತದೆ. ಕತೆಯ ಕೊನೆ ಕೊನೆಗೆ ದಾಪುಗಾಲು ಹಾಕುತ್ತಿದ್ದೇನೆ…!
ಇನ್ನೂ ಇದೆ….

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

