ಇಂಥ ಶಿವಮೂರ್ತಿ ಮೇಷ್ಟ್ರು ತಾವು ಹೇಳಿಕೊಡುತ್ತಿದ್ದ ಪಾಠಕ್ಕೆ ಯಾವ ಮಕ್ಕಳಿಂದಲೂ ಎಂದೂ ದುಡ್ಡನ್ನು ತಗೊಳ್ಳುತ್ತಿರಲಿಲ್ಲ. ಬದಲಿಗೆ ಮಕ್ಕಳು ತಮ್ತಮ್ಮ ಮನೆಯಿಂದ ಧವಸ ಧಾನ್ಯಗಳನ್ನಷ್ಟೇ ತಂದುಕೊಡಬೇಕಿತ್ತು. ಅದು ಇಂಥದೇ ಅಂತಿಲ್ಲ. ಇಷ್ಟೂ ಅಂತಾನೂ ಇರುತ್ತಿರಲಿಲ್ಲ. ರಾಗಿ ಅಂದರೆ ರಾಗಿ. ಜೋಳ ಅಂದರೆ ಜೋಳ. ಭತ್ತ ಅಂದರೆ ಭತ್ತ. ತಿಂಗಳಿಗೊಮ್ಮೆ ಅಥವಾ ನಮಗೆ ಯಾವಾಗ ಸಾಧ್ಯವಾಗುತ್ತಿತ್ತೋ ಇಲ್ಲಾ ನಮ್ಮ ಮನೆಗಳಲ್ಲಿ ಯಾವಾಗ ಕೊಡುತ್ತಿದ್ದರೋ ಆಗ ಅದನ್ನವರಿಗೆ ಹೊತ್ತು ತಲುಪಿಸುತ್ತಿದ್ದೆವು. ಪಾಠದ ಮನೆಯ ಮೂಲೆಯೊಂದರಲ್ಲಿ ಹೀಗೆ ತಂದ ಧವಸಗಳನ್ನು ಹಾಕಲು ಚೀಲಗಳಿರುತ್ತಿದ್ದವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನೆಂಟನೆಯ ಕಂತು
ನನ್ನ ಹಳ್ಳಿಯಲ್ಲಾಗಲಿ ಪಕ್ಕದ ಹೋಬಳಿ ಕೇಂದ್ರವಾಗಿದ್ದ ಶೆಟ್ಟೀಕೆರೆಯಲ್ಲಾಗಲಿ ನಾನು ಓದುವ ಕಾಲಕ್ಕೆ ಯಾವುದೇ ಸಾರ್ವಜನಿಕ ಗ್ರಂಥಾಲಯಗಳು ಇರಲಿಲ್ಲ. ದೆಹಲಿ ಆಕಾಶವಾಣಿ ಕನ್ನಡ ವಾರ್ತಾಪ್ರಸಾರವನ್ನು ಆರಂಭಿಸಿದ್ದರೂ ನನ್ನ ಹಳ್ಳಿಯಲ್ಲಿ ತುಂಬಾ ಸ್ಥಿತಿವಂತರ ಮನೆಗಳಲ್ಲಿ ಮಾತ್ರ ಒಂದೋ ಎರಡೋ ರೇಡಿಯೋಗಳಿದ್ದವು. ಆಗ ಅದೊಂದು ಪ್ರತಿಷ್ಠೆಯ ಸಂಗತಿಯಾಗಿತ್ತು. ಹಂಗಾಗಿ ಕೆಲವರು ತೋಟ, ಹೊಲ ಮುಂತಾದ ಕಡೆಗಳಿಗೆಲ್ಲಾ ತಮ್ಮ ಜತೆಯಲ್ಲಿ ರೇಡಿಯೋ ಹಿಡುಕಂಡು ಅಡ್ಡಾಡುತ್ತಿದ್ದರು. ಜತೆಗೆ ಊರಿಗೆ ಹೊಸದಾಗಿ ಬರುತ್ತಿದ್ದ ಅಳಿಯಂದಿರು ಕೈಯ್ಯಲ್ಲಿ ಹಿಂಗೆ ರೇಡಿಯೋ ಹಿಡುಕಂಡು ಅದರಲ್ಲಿ ಜೋರಾಗಿ ಸೌಂಡ್ ಕೊಟ್ಟುಕಂಡು ಹಳ್ಳಿಯ ಬೀದಿಯಲ್ಲಿ ಓಡಾಡುತ್ತಿದ್ದ ಕಾಲ ಅದು. ಧಾರವಾಡ ಆಕಾಶವಾಣಿ ಕೇಂದ್ರದಿಂದ `ಪ್ರದೇಶ ಸಮಾಚಾರ’ ಶುರುವಾಗುವ ಹೊತ್ತಿಗೆ ನನ್ನ ಹಳ್ಳಿಗೆ ಬೆರಳೆಣಿಕೆಯಷ್ಟು ರೇಡಿಯೋಗಳು ಬಂದಿದ್ದವು. ಆಗ ನಮ್ಮ ಮನೆಗೆ `ಬುಷ್’ ಅನ್ನುವ ಎರಡು ಬ್ಯಾಂಡಿನ ರೇಡಿಯೋ ಬಂದಿತ್ತು. ಇದು ಸುಮಾರು ವರ್ಷಗಳ ಕಾಲ ನಮ್ಮ ಮನೆಯಲ್ಲಿ ಮೆಚ್ಚಿನ ಸಂಗಾತಿಯಾಗಿತ್ತು. ಅಂತೆಯೇ ಅದನ್ನು ಅಷ್ಟೇ ಜೋಪಾನವಾಗಿಟ್ಟುಕೊಳ್ಳಲಾಗಿತ್ತು. ಇದರಲ್ಲಿ ಪ್ರದೇಶ ಸಮಾಚಾರದ ಜತೆಗೆ ದೆಹಲಿಯಿಂದ ಕನ್ನಡ ವಾರ್ತೆಗಳು ಪ್ರಸಾರವಾಗುತ್ತಿದ್ದವು. ನಮ್ಮ ಹಳೆಯ ಮನೆಯ ಪಡಸಾಲೆಯಲ್ಲಿ ಇದಕ್ಕಾಗಿ ಒಂದು ಮರದ ಸ್ಟ್ಯಾಂಡ್ ಮಾಡಿಸಿ ಇದನ್ನು ಅದರ ಮೇಲೆ ಇಡಲಾಗುತ್ತಿತ್ತು. ಇದು ಶೆಲ್ಗಳಿಂದ ಚಾಲು ಆಗುತ್ತಿದ್ದುದರಿಂದ ವಾರ್ತೆ, ಪ್ರದೇಶ ಸಮಾಚಾರ ಮತ್ತು ಚಿತ್ರಗೀತೆಗಳ ಹೊತ್ತಲ್ಲಿ ಮಾತ್ರ ಆನ್ ಆಗಿರುತ್ತಿತ್ತು. ಸ್ಟೇಷನ್ಗಳು ಸರಿಯಾಗಿ ಸಿಗದಿದ್ದಾಗ ಕರ್ರೋರ್ರೋ ಅಂತ ಸದ್ದು ಮಾಡುತ್ತಿತ್ತು. ಆಗೆಲ್ಲ ಅದರ ಬ್ಯಾಂಡ್ ಚೇಂಜು ಮಾಡುತ್ತಾ ಸ್ಪಷ್ಟವಾಗಿ ಬರುತ್ತಿದ್ದ ಸ್ಟೇಷನ್ಗಳನ್ನು ಹುಡುಕುವುದೇ ಒಂದು ಮಜದ ಸಂಗತಿಯಾಗಿತ್ತು. ಹಿಂಗಿದ್ದ `ಬುಷ್’ ಅದೊಂದು ದಿನ ಪಡಸಾಲೆಯ ಸ್ಟ್ಯಾಂಡ್ನಿಂದ ಮಾಯವಾಗಿಬಿಟ್ಟಿತ್ತು. ಹತ್ತಾರು ದಿನ ಕಳೆದರೂ ಕದ್ದವರು ಯಾರೆಂದು ಪತ್ತೆಯಾಗಲಿಲ್ಲ. ಅಯ್ಯ ಅದಕ್ಕಾಗಿ ಹುಡುಕಿಸಿಯೇ ಹುಡುಕಿಸಿತ್ತು. ಪ್ರಯೋಜನವಾಗಿರಲಿಲ್ಲ. ಹಂಗಾಗಿ ಮತ್ತೊಂದು `ಬುಷ್’ ಮನೆಗೆ ಬಂತು. ಈಗದರ ವಾಸ್ತವ್ಯ ಪಡಸಾಲೆಯಿಂದ ನಡುಮನೆಗೆ ಬದಲಾಗಿತ್ತು. ಈ `ಬುಷ್’ ಅಯ್ಯನ ಕೊನೆಯ ದಿನಗಳವರೆಗೂ ಜತೆಯಲ್ಲಿತ್ತು. ಅದು ಏನಾದರೂ ರಿಪೇರಿ ಮಾಡಿಸುತ್ತಿತ್ತು. ಅಯ್ಯನ ನಂತರ ಅದು ಮೂಲೆ ಸೇರಿತು. ನಂತರ ಅಟ್ಟಕ್ಕೇರಿತು. ಕಡೆಗೊಂದು ದಿನ ಅಲ್ಲಿಂದಲೂ ಖಾಲಿಯಾಗಿ ಬೇಲಿ ಸಾಲು ತಲುಪಿತು. ಇದರಲ್ಲೇ ನಾನು `ರೇಡಿಯೋ ಸಿಲೋನ್’ನಿಂದ ಪ್ರಸಾರವಾಗುತ್ತಿದ್ದ `ಮನರಂಜಿನಿ’ ಕಾರ್ಯಕ್ರಮ ಕೇಳತೊಡಗಿದ್ದು. ಅದನ್ನು ನಡೆಸಿಕೊಡುತ್ತಿದ್ದ `ಶ್ರೋತೃಗಳೇ’ ಅಂತ ಪ್ರಾರಂಭಿಸುತ್ತಿದ್ದ ಹೆಣ್ಣಿನ ದನಿ ಮಾಧುರ್ಯ ಇಂದಿಗೂ ನೆನಪಿದೆ. ಕ್ರಮೇಣ ಮತ್ತಂದಷ್ಟು ಮನೆಗಳಿಗೆ ರೇಡಿಯೋಗಳು ಬಂದವು. ಅವುಗಳಲ್ಲಿ `ಫಿಲಿಪ್ಸ್’ `ಮರ್ಫಿ’ ಗಳು ಹೆಚ್ಚಾಗಿದ್ದವು. ಮತ್ತಂದಷ್ಟು ದಿನಗಳು ಕಳೆಯುವ ಹೊತ್ತಿಗೆ ಮನೆಗೆ ತೆಳ್ಳಗೆ ಬಳ್ಳಗೆ ಪ್ರಜಾವಾಣಿ ಪತ್ರಿಕೆ ಹಾಗೂ ಪ್ರಜಾಮತ ವಾರಪತ್ರಿಕೆಗಳು ಬರತೊಡಗಿದವು. ಆದರೆ ನಮ್ಮಂಥ ಹಳ್ಳಿಯ ಮಕ್ಕಳಿಗೆ ಸ್ಕೂಲಿನ ಪಠ್ಯಪುಸ್ತಕಗಳ ಹೊರತಾಗಿ ಮತ್ತೊಂದು ಪುಸ್ತಕ ಸಿಕ್ಕುವ ಮಾತೇ ಇರಲಿಲ್ಲ. ಪ್ರತಿ ಗ್ರಾಮ ಪಂಚಾಯತ್ಗಳಲ್ಲಿ ಗ್ರಂಥಾಲಯಗಳು ಪ್ರಾರಂಭವಾಗುವ ಹೊತ್ತಿಗೆ ನಾನು ಎಂ.ಎ. ಮುಗಿಸಿ ಊರಿಗೆ ಬಂದಿದ್ದೆ. ನಾನು ಗ್ರಂಥಾಲಯ ಅಂತ ನೋಡಿದ್ದು ಮಹಾರಾಜ ಕಾಲೇಜು ಮತ್ತು ಮಾನಸಗಂಗೋತ್ರಿಯಲ್ಲಿ. ಆ ಕಾಲಕ್ಕೆ ಮಹಾರಾಜ ಕಾಲೇಜಿನ ಗ್ರಂಥಾಲಯ ಅತ್ಯುತ್ತಮ ಗ್ರಂಥಾಲಯಗಳಲ್ಲಿ ಒಂದಾಗಿತ್ತು. ಇದು ಹಳ್ಳಿಯಿಂದ ಬಂದಿದ್ದ ಹಾಗೂ ಪಠ್ಯವೇ ಸಕಲ ಅಂತ ನಂಬಿದ್ದ ನನ್ನಂಥವನಿಗೆ ಓದಿನ ಹೊಸಾ ದಿಕ್ಕನ್ನು ತೋರಿಸಿತ್ತು. ಆವರೆವಿಗೆ ನಾನು ಕನ್ನಡ ಸಾಹಿತ್ಯದ ಅಥವಾ ಇಂಗ್ಲಿಷ್ ಸಾಹಿತ್ಯ ಲೋಕದ ಬಾಗಿಲಿಗೂ ಕಾಲಿಟ್ಟಿರಲಿಲ್ಲ. ಅಂಥ ಅವಕಾಶ ನಾನು ಓದುತ್ತಿದ್ದ ಶಾಲಾ ಕಾಲೇಜುಗಳಲ್ಲಿ ಇರಲೂ ಇಲ್ಲ. ಹಂಗಾಗಿ ಪಠ್ಯಗಳಲ್ಲಿದ್ದ ಲೇಖಕರುಗಳ ಹೆಸರುಗಳು ಮಾತ್ರ ಗೊತ್ತಿದ್ದವು.
ಇದು ಬಿಟ್ಟರೆ ಇಡೀ ಹಳ್ಳಿಯ ಯಾವ ಮನೆಯನ್ನು ತಡಕಿದರೂ ಒಂದೇ ಒಂದು ಪುಸ್ತಕ ಅಂತ ಸಿಗದ ಕಾಲ ಅದಾಗಿತ್ತು. ರೈತಾಪಿ ಬದುಕಿನಲ್ಲಿ ಮುಳುಗಿರುತ್ತಿದ್ದ ಹಳ್ಳಿಗರಿಗೆ ಹಿಂಗೆ ಓದು ಅನ್ನುವುದು ಒಗ್ಗುವ ಮಾತಾಗಿರಲಿಲ್ಲ. ಜತೆಗೆ ಸ್ಕೂಲುಗಳ ಮೆಟ್ಟಿಲುಗಳನ್ನು ಸುಲಭಕ್ಕೆ ಹತ್ತುತ್ತಲೂ ಇರಲಿಲ್ಲ. ಹಿಂಗಿರುವಾಗ ನನ್ನ ಮನೆಯಲ್ಲಿ ಅಯ್ಯನ ಓದಿನ ಆಸೆಯಿಂದಾಗಿ ಕೆಲವು ಪುಸ್ತಕಗಳಿದ್ದವು. ಅವುಗಳಲ್ಲಿ ಒಂದು ಅಡಿಯಷ್ಟು ಉದ್ದದ ಅಷ್ಟೇ ಅಗಲದ ತೆಳೂಂದರೆ ತೆಳು ಹಾಳೆಗಳ `ಮಹಾಭಾರತʼದ ಪುಸ್ತಕವಿತ್ತು. ಅದರ ಜೊತೆಗೆ ಮಾಸಲು ಹೊದಿಕೆಯ `ಜೈಮಿನಿ ಭಾರತ’ದ ಪ್ರತಿಯೊಂದಿತ್ತು. `ಕುರುಬರ ರಟ್ಟ ಮತ ಶಾಸ್ತ್ರ’ ಮತ್ತು `ಶನಿಮಹಾತ್ಮೆ’ಯ ಪುಸ್ತಕಗಳಿದ್ದವು. ಇವುಗಳು ನನ್ನಾನೇ ಓದಿಕೊಳ್ಳುವ ಪುಸ್ತಕಗಳಾಗಿರಲಿಲ್ಲ. ಇವುಗಳನ್ನು ಅಯ್ಯ ಓದಿಕೊಳ್ಳುವಾಗ ಮಾತ್ರ ಕೇಳಿಸಿಕೊಳ್ಳುತ್ತಿದ್ದೆ. ಇವುಗಳ ಜತೆಗೆ ಎನ್. ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿ `ಪುರುಷೋತ್ತಮನ ಸಾಹಸ’, ಸಾವರ್ಕರ್ ಅವರ `ಆತ್ಮಾಹುತಿ’ ಅನ್ನುವ ಪುಸ್ತಕಗಳಿದ್ದವು. ಇವು ನಾನು ಓದಿಕೊಳ್ಳಬಹುದಾಗಿದ್ದವುಗಳು. ಇವುಗಳಲ್ಲಿ ನಾನು ಮತ್ಮತ್ತೆ ಓದುತ್ತಿದ್ದದ್ದು `ಪುರುಷೋತ್ತಮನ ಸಾಹಸ’ವನ್ನು. ಇದು ನಾನು ನನ್ನ ಜೀವನದಲ್ಲಿ ಓದಿದ ಮೊಟ್ಟ ಮೊದಲ ಪುಸ್ತಕ. ಇದನ್ನು ಅದೆಷ್ಟು ಸಾರ್ತಿ ಓದಿದ್ದೆ ಅಂದರೆ ಅದರೊಳಗಿನ ಒಂದೊಂದು ಘಟನೆಗಳೂ ಮನದೊಳಗೆ ಅಚ್ಚಾಗಿಬಿಟ್ಟಿದ್ದವು. `ಆತ್ಮಾಹುತಿ’ಯನ್ನು ಒಂದೆರಡು ಸಾರ್ತಿ ಮಾತ್ರ ಓದಿದ್ದೆ. ಅಯ್ಯ ನಾನು ಓದುತ್ತಿದ್ದ ಈ ಪುಸ್ತಕಗಳನ್ನು ಒಮ್ಮೆಯೂ ಓದಿದ್ದನ್ನು ನಾನು ಕಂಡಿರಲಿಲ್ಲ. ಈಗ ನೆನೆದರೆ ನನ್ನ ಹಳ್ಳಿಯಂಥ ಹಳ್ಳಿಗೆ ಈ ಪುಸ್ತಕಗಳು ಅದೆಂಗೆ ಬಂದವು? ಯಾರು ತಂದಿದ್ದರು? ಈ ಸಂಗತಿ ನನಗೀಗಲೂ ಸೋಜಿಗ. ಏಕೆಂದರೆ ಅಣ್ಣ ತಂದಿರಬಹುದು ಅಂದರೆ ಅವರಿಗೆ ಓದುವ ಗೀಳು ಇರಲಿಲ್ಲ.
ಇನ್ನು ಈ `ಪತ್ತೇದಾರಿ ಪುರುಷೋತ್ತಮ’ ಪುಸ್ತಕ ಆಗ ನನ್ನೊಳಗೆ ಅದೆಷ್ಟು ಪ್ರಭಾವ ಬೀರಿತ್ತು ಅಂದರೆ ಈ ಪ್ರಭಾವದಿಂದಾಗಿ ನಾನು `ಪತ್ತೇದಾರಿ ಪಂಚ’ ಅನ್ನುವ ಅನ್ನುವ ಕಾದಂಬರಿ ಸ್ವರೂಪದ ಪುಟ್ಟ ಬರಹವೊಂದನ್ನು ಬರೆದಿದ್ದೆ. ನೂರು ಪೇಜಿನ ರೂಲ್ಡ್ ನೋಟ್ ಬುಕ್ಕಿನಲ್ಲಿ ಬರೆದಿದ್ದ ಇದು ನಲವತ್ತರಿಂದ ಐವತ್ತು ಪುಟಗಳಿಷ್ಟಿತ್ತು. ನಾನು ಬರೆದ ಮೊಟ್ಟ ಮೊದಲ ಬರಹ ಇದಾಗಿತ್ತು. ಇಲ್ಲಿನ ಪಂಚ ನನ್ನ ವಾರಿಗೆಯ ಗೆಳೆಯ ನಾವೆಲ್ಲಾ ಕೊಚ್ಚ ಅಂತ ಕರೆಯುತ್ತಿದ್ದ ಶಂಕರನಾಗಿದ್ದ. ಈ ಕೊಚ್ಚನೂ ಮಹಾ ಕುತೂಹಲಿಯಾಗಿದ್ದ ಮತ್ತು ಮಹಾ ಚತುರ ಬುದ್ಧಿಯವನಾಗಿದ್ದ. ಆಗ ನಾನು ಒಂಭತ್ತರಿಂದ ಹತ್ತಕ್ಕೆ ಪಾಸಾಗಿದ್ದೆ. ಆ ವರ್ಷದ ಬೇಸಿಗೆ ರಜೆಯಲ್ಲಿ ಇದನ್ನು ಬರೆದಿದ್ದೆ. ಆದರೆ ಅದನ್ನು ಯಾರಿಗಾದರೂ ಓದಬೇಕು ಇಲ್ಲಾ ತೋರಿಸಬೇಕು ಅನ್ನುವುದಾಗಲಿ ನನಗೆ ಗೊತ್ತಿರಲಿಲ್ಲ. ಅಂತೆಯೇ ಅದನ್ನು ಜೋಪಾನ ಮಾಡಬೇಕು ಅಂತಾನೂ ಅನಿಸಿರಲಿಲ್ಲ. ಹಂಗಾಗಿ ಆ ನೋಟ್ಬುಕ್ ಎಲ್ಲೋ ಕಳೆದು ಹೋಯ್ತು. ನನ್ನ ಪತ್ತೆದಾರಿ ಪಂಚನೂ ಕಾಣೆಯಾಗಿಹೋಗಿದ್ದ. ಇದಾದ ಒಂದಷ್ಟು ದಿನಕ್ಕೆ ಅಪ್ಪಟ ನಾಟಿ ಭಾಷೆಯಲ್ಲಿ ಒಂದು ಕಥೆ ಬರೆದಿದ್ದೆ. `ಮೈಲಿಗೆ ಬಟ್ಟೆ’ ಅಂತ ಇದರ ಹೆಸರು. ಇದು ನಾನು ಬರೆದ ಮೊದಲ ಕಥೆ. ಹಬ್ಬ ಮತ್ತು ಜಾತ್ರೆಯ ಸಂದರ್ಭಗಳಲ್ಲಿ ನಮ್ಮೂರಿಗೆ ಶೆಟ್ಟೀಕೆರೆಯ `ಕೆಂಪಮ್ಮ ದೇವರು’ ಬರುತ್ತಿತ್ತು. ಕೆಂಪಮ್ಮನ ಜತೆಗೆ `ಕರೆ ಸ್ವಾಮ’ ಮತ್ತು `ಬೀಳೆ ಸ್ವಾಮ’ಗಳು ಬರುತ್ತಿದ್ದವು. ಅವುಗಳನ್ನು ಹೊರುವವರು ಸ್ವಾಮಗಳ ದಡಿ ಬುರುಡೆಗಳೊಳಗೆ ಗಂಟೆಗಟ್ಟಲೆ ಮುಖವಿಟ್ಟುಕೊಂಡು ಅವುಗಳಿಗಿದ್ದ ದಡಿ ಮೂಗಿನ ಸೊಳ್ಳೆಗಳಿಂದ ಉಸಿರಾಡಬೇಕಿತ್ತು. ಅದನ್ನು ನೋಡಿದಾಗಲೆಲ್ಲಾ ಅವುಗಳನ್ನು ಹೊತ್ತವರು ಸರಿಯಾಗಿ ಉಸಿರಾಡಲು ಗಾಳಿ ಸಿಕ್ಕದೆ ಉಸಿರುಕಟ್ಟಿ ಸತ್ತರೆ ಅನ್ನುವ ಆತಂಕ ನನ್ನನ್ನು ಕಾಡುತ್ತಿತ್ತು. ಆ ವಯಸ್ಸಿನಲ್ಲಿ ಅದ್ಯಾಕೆ ಹಂಗನ್ನಿಸುತ್ತಿತ್ತೋ ಗೊತ್ತಿಲ್ಲ. ನನ್ನ `ಮೈಲಿಗೆ ಬಟ್ಟೆ’ ಇದರ ಸುತ್ತ ಇತ್ತು. ಇದರಲ್ಲಿ ಹಂಗೆ ಸ್ವಾಮನನ್ನು ಹೊತ್ತಿದ್ದವರೊಬ್ಬರು ಉಸಿರು ಕಟ್ಟಿ ಸತ್ತುಬಿಡುತ್ತಾರೆ. ಹಂಗೆ ಸತ್ತವರ ಮಗನಿಗೆ ಅಪ್ಪನ ಸಾವಿನ ಸೇಡು ತೀರಿಸಿಕೊಳ್ಳುವಂತೆ ಮಾಡುತ್ತೆ. ಈ ಮಗ ನಾಳೆ ಜಾತ್ರೆ ಅನ್ನುವಾಗ ಊರ ಮಧ್ಯದಲ್ಲಿದ್ದ ದೇವಸ್ಥಾನದೊಳಕ್ಕೆ ಮುಟ್ಟಾದವರ ಮೈಲಿಗೆ ಬಟ್ಟೆಗಳನ್ನು ಎಸೆದು ರಾತ್ರೋ ರಾತ್ರಿ ಊರನ್ನು ಬಿಟ್ಟು ಹೋಗುತ್ತಾನೆ. ಹಿಂಗೆ ಮಾಡಿದರೆ ಜಾತ್ರೆ ನಿಲ್ಲುತ್ತೆ. ಗುಡಿದುಂಬಿಕೊಂಡಿದ್ದ ದೇವರುಗಳು ಹೊರಡುವುದಿಲ್ಲ ಅನ್ನುವುದು ಅವನ ನಂಬಿಕೆಯಾಗಿರುತ್ತೆ. ಪುಣ್ಯಕ್ಕೆ `ಪತ್ತೇದಾರಿ ಪಂಚ’ನಂತೆ `ಮೈಲಿಗೆ ಬಟ್ಟೆ’ಯೂ ಕಳೆದುಹೋಯ್ತು. ಈಗ ನೆನೆನದರೆ ಇದೆಲ್ಲಾ ತುಂಬಾ ವಿಚಿತ್ರವಾಗಿ ಕಾಣುತ್ತೆ.
ಹಿಂಗೆ ಒಂಚೂರು ಓದುವ ಮತ್ತು ಹಂಗೇ ಅನಿಸಿದ್ದನ್ನೆಲ್ಲಾ ಗೀಚುವ ಹುಮ್ಮಸ್ಸಿನಲ್ಲಿದ್ದ ನನಗೆ ಮತ್ತೊಂಚೂರು ಓದುವ ಆಸಕ್ತಿಯನ್ನು ಬೆಳೆಸಿದ್ದು ಹೈಸ್ಕೂಲಿನ ದಿನಗಳಲ್ಲಿ ನಾನು ಹೋಗುತ್ತಿದ್ದ ಪಾಠದ ಮನೆ. ಈ ಪಾಠದ ಮನೆಯಲ್ಲಿ ನನಗೆ `ವಿಕ್ರಮಾದಿತ್ಯ ಮತ್ತು ಬೇತಾಳನ ಕಥೆಗಳು’ ಮತ್ತು ಟಿ.ಕೆ. ರಾಮರಾವ್ ಅವರ `ದೂರ ಗಗನ’ ಸಿಕ್ಕಿದ್ದವು. ಶಿವಮೂರ್ತಿ ಮೇಷ್ಟ್ರನ್ನು ಕೇಳಿ ಇವೆರಡನ್ನೂ ಮನೆಗೆ ಇಸುಕಂಡು ಬಂದಿದ್ದೆ. ಒಂದಷ್ಟು ದಿನ ಇವನ್ನೂ ತಿರುಗಾಮುರುಗಾ ಓದಿದ್ದ ಪರಿಣಾಮವಾಗಿ ಇವೆರಡರ ಮುಖಪುಟಗಳು ಪೂರಾ ಕಿತ್ತು ಹೋಗಿದ್ದವು. ಹಂಗಾಗಿ ತಿರುಗಿ ಕೊಡಲು ಹೋದರೆ ಮೇಷ್ಟ್ರು ಬೈತಾರೆ ಅನ್ನುವ ಕಾರಣಕ್ಕೆ ನಾನು ವಾಪಸ್ಸು ಕೊಡುವ ಮನಸ್ಸು ಮಾಡಲಿಲ್ಲ. ಮೇಷ್ಟ್ರೂ ತಿರುಗಿ ಕೇಳಿರಲೂ ಇಲ್ಲ.
ಆದರೆ ಈ `ವಿಕ್ರಮಾದಿತ್ಯ ಮತ್ತು ಬೇತಾಳ’ನ ಕಥೆಗಳು ನನಗೆ ವಿಚಿತ್ರವಾಗಿ ಕಾಡುತ್ತಿದ್ದವು. ಏಕೆಂದರೆ ಹಿಂಗೆ ಬೇತಾಳಗಳು ವಾಸ ಮಾಡುತ್ತಿವೆ ಅಂತ ನಂಬಿದ್ದ `ಹೆಣ ಕುಯ್ಯುವ ಮರ’ವನ್ನು ಕಂಡಾಗಲೆಲ್ಲಾ, ಅದರಡಿಯಲ್ಲಿ ನಡೆಯುವಾಗಲೆಲ್ಲಾ ಈ ಬೇತಾಳ ನೆನಪಾಗುತ್ತಿದ್ದ. ಈ ಹೆಣ ಕುಯ್ಯುವ ಮರದಲ್ಲಿರುವ ಬೇತಾಳಗಳಲ್ಲಿ ಅಕಸ್ಮಾತ್ ಯಾವುದಾದರೊಂದು ಬೇತಾಳ ನನ್ನ ಬೆನ್ನೇರಿದರೆ ಏನಪ್ಪಾ ಗತಿ ಅಂತ ಅಪಾರ ಅವ್ಯಕ್ತ ಭಯಕ್ಕೆ ಒಳಗಾಗುತ್ತಿದ್ದೆ. ಇದಕ್ಕೆ ಪೂರಕವಾಗಿ ನನ್ನೂರಿನಲ್ಲಿ ಸತ್ತವರು ದೆವ್ವವಾಗಿ ತಮಗೆ ಇಷ್ಟವಾದರ ಮೈ ಮೇಲೆ ಬರುವುದು ಹಾಗೂ ಆ ದೆವ್ವಗಳನ್ನು ಬಿಡಿಸುವ ಸಲುವಾಗಿ ಮಾಡುತ್ತಿದ್ದ ಮಂತ್ರ ತಂತ್ರಗಳು ನಿರಂತರವಾಗಿ ನಡೆಯುತ್ತಿದ್ದವು. ಇವುಗಳ ಜತೆಗೆ ದೆವ್ವಗಳ ಬಗ್ಗೆ ಕೆಂಪ್ಲಿಗಜ್ಜನ ಕಥೆಗಳೂ ಸೇರಿಕಂಡಿದ್ದವು.
ಸಾಧಾರಣ ಎತ್ತರದ, ಕಡುಗಪ್ಪು ಮೈ ಬಣ್ಣದ, ಕೊಂಚ ಉಬ್ಬಲ್ಲಿನ, ನಗು ಮೊಗದ ಶಿವಮೂರ್ತಿ ಮೇಷ್ಟ್ರು ಆ ಕಾಲಕ್ಕೇ ಬಿ.ಎಸ್ಸಿ. ಓದಿಕಂಡಿದ್ದರು. ಸರ್ಕಾರಿ ಕೆಲಸ ಯಾಕೆ ಸಿಕ್ಕಿರಲಿಲ್ಲವೋ ಅಥವಾ ಆಗ ಇವರಿಗೇ ಕೆಲಸಕ್ಕೆ ಹೋಗಲು ಇಷ್ಟವಿರಲಿಲ್ಲವೋ ಗೊತ್ತಿಲ್ಲ; ಅಂತೂ ಶೆಟ್ಟೀಕೆರೆಯಲ್ಲಿ ಬಹಳಷ್ಟು ವರ್ಷ ಪಾಠದ ಮನೆಯೊಂದನ್ನು ನಡೆಸುತ್ತಾ ಸುತ್ತ ಮುತ್ತಲ ಹಳ್ಳಿಗಳ ಮಕ್ಕಳಿಗೆ ಪ್ರೀತಿಯ ಮೇಸ್ಟ್ರಾಗಿದ್ದರು. ಐದನೆಯ ಕ್ಲಾಸಿನಿಂದ ಹೈಸ್ಕೂಲಿನವರೆಗೂ ಪಾಠ ಹೇಳಿಕೊಡುತ್ತಿದ್ದರು.
ನನ್ನೂರಿನ ಪಕ್ಕದ ಶೆಟ್ಟೀಕೆರೆ ಇವರ ಊರು. ಇದು ಒಂದು ಕಾಲಕ್ಕೆ ನಮಗೆಲ್ಲಾ ವಿಶೇಷ ಆಕರ್ಷಣೆಯ ಊರಾಗಿತ್ತು. ಏಕೆಂದರೆ ಇಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿತ್ತು. ಅಯ್ಯನ ಜತೆಯಲ್ಲಿ ಸಂತೆಗೆ ಹೋಗುವುದೇ ಒಂದು ಖುಷಿಯ ಸಂಗತಿಯಾಗಿತ್ತು. ಜತೆಗೆ ಇದರ ಆಸು ಪಾಸಿನಲ್ಲಿ ಹತ್ತಾರು ಹಳ್ಳಿಗಳಿದ್ದರೂ ಅವುಗಳಲ್ಲಿ ಕೇವಲ ಪ್ರೈಮರಿ ಸ್ಕೂಲುಗಳು ಮಾತ್ರ ಇದ್ದವು. ಮಿಡ್ಲ್ ಸ್ಕೂಲ್ ಮತ್ತು ಹೈಸ್ಕೂಲುಗಳಿಗೆ ಈ ಶೆಟ್ಟೀಕೆರೆಗೇ ಬರಬೇಕಿತ್ತು. ಈಗಿನಂತೆ ಬಸ್ಸುಗಳ ಸೌಕರ್ಯವಿರದಿದ್ದ ಆ ಕಾಲದಲ್ಲಿ ಹತ್ತಾರು ಕಿಲೋಮೀಟರುಗಳಷ್ಟು ದೂರದಿಂದ ಮಕ್ಕಳು ನಡೆದೇ ಬರುತ್ತಿದ್ದರು. ಎಲ್ಲೋ ಕೆಲವು ಅನುಕೂಲವಂತ ಮನೆಯ ಮಕ್ಕಳು ಮಾತ್ರ ಸೈಕಲ್ಲುಗಳಲ್ಲಿ ಬರುತ್ತಿದ್ದರು. ಆಗ ಏಳನೆಯ ಕ್ಲಾಸಿಗೇ ಪಬ್ಲಿಕ್ ಪರೀಕ್ಷೆ ಇದ್ದುದರಿಂದ ಪರೀಕ್ಷೆಗಳ ಕಾಲದಲ್ಲಿ ಈ ಶೆಟ್ಟೀಕೆರೆಯ ತುಂಬಾ ಮಕ್ಕಳೋ ಮಕ್ಕಳು.
ಇಂಥ ಊರಲ್ಲಿ ಹತ್ತಾರು ವರ್ಷ ಮನೆಯ ಪಾಠ ನಡೆಸುತ್ತಾ ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಇಷ್ಟದ ವ್ಯಕ್ತಿಯಾಗಿದ್ದವರು ಈ ಶಿವಮೂರ್ತಿ ಮೇಷ್ಟ್ರು. ಪಾಠ ನಡೆಯುತ್ತಿದ್ದುದು ಮಣ್ಣಿನ ಮಾಳಿಗೆಯ ವಿಶಾಲವಾದ ಮನೆಯೊಂದರಲ್ಲಿ. ಸಂಜೆ ಏಳು ಗಂಟೆಯಿಂದ ರಾತ್ರಿ ಹತ್ತರವರೆಗೆ. ಇಲ್ಲಿಗೆ ಆ ಊರಿನವರಲ್ಲದೆ ಸುತ್ತ ಮುತ್ತಲ ಹಳ್ಳಿಗಳಿಂದ ಮಕ್ಕಳು ಬರುತ್ತಿದ್ದರು. ಈ ಮಕ್ಕಳಲ್ಲಿ ಹುಡುಗರಷ್ಟೇ ಹುಡುಗಿಯರೂ ಇರುತ್ತಿದ್ದರು. ಬೇರೆ ಊರಿನ ಮಕ್ಕಳು ರಾತ್ರಿ ಅಲ್ಲೇ ಊಳಿದುಕೊಂಡರೆ ಆ ಊರಿನವರು ಪಾಠ ಮುಗಿಯುತ್ತಿದ್ದಂತೆ ತಂತಮ್ಮ ಮನೆಗಳಿಗೆ ಹೋಗುತ್ತಿದ್ದರು. ಇಲ್ಲಿ ಪಾಠಕ್ಕೆ ಬರುತ್ತಿದ್ದ ಮಕ್ಕಳು ಸ್ಕೂಲು ಮುಗಿಯುತ್ತಿದ್ದಂತೆ ಒಂದೇ ಉಸುರಿಗೆ ಹಳ್ಳಿಗಳಿಗೆ ಓಡಿ ಸಂಜೆಗೆ ಮುಂಚೆಯೇ ಊಟವನ್ನು ಮುಗಿಸಿ ಬಗಲ ಬ್ಯಾಗುಗಳ ಜೊತೆಗೆ ಹೊದೆಯಲು ರಗ್ಗೊಂದನ್ನು ಹೆಗಲಿಗಾಕಿಕೊಂಡು ಪಾಠದ ಮನೆಯತ್ತ ಧಾವಿಸುತ್ತಿದ್ದರು. ಸಂಜೆಗೇ ಈ ಪಾಠದ ಮನೆಯ ಮುಂದೆ ಮಕ್ಕಳ ಕಲರವ ಶುರುವಾಗಿ ಬಿಡುತ್ತಿತ್ತು. ಒಮ್ಮೆ ಇಲ್ಲಿ ಸೇರಿದ ಮಕ್ಕಳು ಯಾವುದೇ ಕಾರಣಕ್ಕೂ ಒಂದು ದಿನವೂ ಚಕ್ಕರ್ ಹಾಕುತ್ತಿರಲಿಲ್ಲ.
ಏಕೆಂದರೆ ಇಲ್ಲಿನ ವಾತಾವರಣವೇ ಹಂಗಿತ್ತು. ಒಂದು ರೀತಿಯಲ್ಲಿ ಖುಷಿಯ ತಾಣವಾಗಿತ್ತು. ಇಲ್ಲಿ ಸ್ಕೂಲಿನಲ್ಲಿ ಇರುತ್ತಿದ್ದ ಭಯದ ವಾತಾವರಣವಾಗಲಿ ಹೇಳಿದ್ದನ್ನು ಮಾಡಿಕೊಂಡು ಹೋಗದಿದ್ದರೆ ಏಟುಗಳು ಬೀಳುವುದಾಗಲಿ ಬೈಗುಳಗಳಾಗಲಿ ಇರುತ್ತಿರಲಿಲ್ಲ. ಇಲ್ಲಿನ ಈ ಮೇಸ್ಟ್ರ ಕೈಯ್ಯಲ್ಲೂ ಕೋಲೊಂದು ಸದಾ ಇರುತ್ತಿತ್ತು. ನೆಪ ಮಾತ್ರಕ್ಕೆ. ತುಂಬಾ ತಾಳ್ಮೆಯ ಸ್ವಭಾವದವರಾದ ಇವರು ಮಕ್ಕಳು ಮಾಡುತ್ತಿದ್ದ ತಪ್ಪುಗಳಿಗೆ ಕೊಡುತ್ತಿದ್ದ ಅತಿಘೋರ ಶಿಕ್ಷೆ ಅಂದರೆ ಕೂತಲ್ಲಿಂದ ಏಳಿಸಿ ನಿಲ್ಲಿಸುವುದಾಗಿತ್ತು.
ಇಲ್ಲಿ ವಾರಕ್ಕೊಮ್ಮೆ ಅಂದರೆ ಪ್ರತೀ ಶುಕ್ರವಾರ ಶಾರದಾ ಪೂಜೆ ನಡೆಯುತ್ತಿತು. ಹಂಗಾಗಿ ಅದೊಂದು ದಿನ ಮಾತ್ರ ಪಾಠಕ್ಕೆ ಅರ್ಧಕ್ಕೇ ಬ್ರೇಕ್ ಬೀಳುತ್ತಿತ್ತು. ಮಕ್ಕಳು ತಮಗೆ ಯಾವ್ಯಾವ ಹೂಗಳು ಸಿಗುತ್ತವೊ ಆ ಹೂಗಳನ್ನೆಲ್ಲಾ ತಂದು ಶಾರದೆಯ ಫೋಟೋಕ್ಕೆ ಮುಡಿಸುತ್ತಿದ್ದರು. ಅವತ್ತು ಆ ಫೋಟೋ ದಾಸವಾಳ, ಗುಲಾಬಿ, ಆಕಾಶ ಮಲ್ಲಿಗೆ, ಮಲ್ಲಿಗೆ ಹೀಗೆ ಥರಾವರಿ ಹೂಗಳಿಂದ ಅಲಂಕರಿಸಲ್ಪಡುತ್ತಿತ್ತು. ಜೊತೆಗೆ ಪೂಜೆಯ ಹೊತ್ತಿನಲ್ಲಿ ಪೂಜೆಯ ಜೊತೆಗೆ ಮನರಂಜನಾ ಕಾರ್ಯಕ್ರಮ ಇರುತ್ತಿತ್ತು. ಹಾಡುಗಳನ್ನು ಪೂರ್ತಿ ಕಲಿತವರು, ಅರ್ಧಂಬರ್ದ ಕಲಿತವರು, ಒಳ್ಳೆಯ ಕಂಠದವರು, ಹಾಡಿನ ಗಂಧಗಾಳಿ ಇಲ್ಲದವರು-ಹಿಂಗೆ ಎಲ್ಲರೂ ಯಾವ ಅಳುಕೂ ಇಲ್ಲದಂತೆ ಹಾಡುತ್ತಿದ್ದೆವು. ಅದಾದ ನಂತರ ಕಡ್ಲೆಪುರಿ ಅಥವಾ ಸಿಹಿ ಸಿಕ್ಕುತ್ತಿತ್ತು. ಮಕ್ಕಳಿಗೋ ಖುಷಿಯೋ ಖುಷಿ. ಇದಾದ ಮೇಲೆ ಸರಿರಾತ್ರಿಯವರೆಗೂ ಹರಟಿ ಮಲಗಿದರೂ ಮತ್ತೆ ಬೆಳಗಿನ ಐದಕ್ಕೆ ಸರಿಯಾಗಿ ಬಂದು ಏಳಿಸಿ ಓದಲು ಕೂರಿಸುತ್ತಿದ್ದರು. ಇಂಥ ಶಿವಮೂರ್ತಿ ಮೇಷ್ಟ್ರು ತಾವು ಹೇಳಿಕೊಡುತ್ತಿದ್ದ ಪಾಠಕ್ಕೆ ಯಾವ ಮಕ್ಕಳಿಂದಲೂ ಎಂದೂ ದುಡ್ಡನ್ನು ತಗೊಳ್ಳುತ್ತಿರಲಿಲ್ಲ. ಬದಲಿಗೆ ಮಕ್ಕಳು ತಮ್ತಮ್ಮ ಮನೆಯಿಂದ ಧವಸ ಧಾನ್ಯಗಳನ್ನಷ್ಟೇ ತಂದುಕೊಡಬೇಕಿತ್ತು. ಅದು ಇಂಥದೇ ಅಂತಿಲ್ಲ. ಇಷ್ಟೂ ಅಂತಾನೂ ಇರುತ್ತಿರಲಿಲ್ಲ. ರಾಗಿ ಅಂದರೆ ರಾಗಿ. ಜೋಳ ಅಂದರೆ ಜೋಳ. ಭತ್ತ ಅಂದರೆ ಭತ್ತ. ತಿಂಗಳಿಗೊಮ್ಮೆ ಅಥವಾ ನಮಗೆ ಯಾವಾಗ ಸಾಧ್ಯವಾಗುತ್ತಿತ್ತೋ ಇಲ್ಲಾ ನಮ್ಮ ಮನೆಗಳಲ್ಲಿ ಯಾವಾಗ ಕೊಡುತ್ತಿದ್ದರೋ ಆಗ ಅದನ್ನವರಿಗೆ ಹೊತ್ತು ತಲುಪಿಸುತ್ತಿದ್ದೆವು. ಪಾಠದ ಮನೆಯ ಮೂಲೆಯೊಂದರಲ್ಲಿ ಹೀಗೆ ತಂದ ಧವಸಗಳನ್ನು ಹಾಕಲು ಚೀಲಗಳಿರುತ್ತಿದ್ದವು. ನಾವು ತರುತ್ತಿದ್ದ ಧಾನ್ಯಗಳನ್ನು ರಾಗಿ ಆಗಿದ್ದರೆ ರಾಗಿಯ ಚೀಲಕ್ಕೆ, ಜೋಳ ಆಗಿದ್ದರೆ ಜೋಳದ ಚೀಲಕ್ಕೆ ಹಿಂಗೆ ಆಯಾಯಾ ಚೀಲಕ್ಕೆ ಹಾಕುತ್ತಿದ್ದೆವು. ಇಷ್ಟು ತಂದಿದ್ದೀವಿ ಇಂಥದ್ದನ್ನೇತಂದಿದ್ದೀವಿ ಅಂತ ನಾವು ಅವರಿಗೆ ತೋರಿಸಲೂ ಬೇಕಿರಲಿಲ್ಲ. ಯಾರು ಕೊಟ್ಟಿದ್ದಾರೆ ಯಾರು ಬಿಟ್ಟಿದ್ದಾರೆ ಅಂತ ಅವರೂ ಗಮನಿಸತ್ತಲೂ ಇರಲಿಲ್ಲ. ಮಕ್ಕಳೂ ಅಷ್ಟೇ. ಯಾವ ಕಾರಣಕ್ಕೂ ಈ ಮೇಸ್ಟ್ರಿಗೆ ಮೋಸ ಮಾಡುತ್ತಿರಲಿಲ್ಲ.
ಒಂದು ದಿನ ನಮ್ಮ ಜೊತೆ ಪಾಠಕ್ಕೆ ಬರುತ್ತಿದ್ದ ಹುಡುಗನೊಬ್ಬ ಪಾಠವೆಲ್ಲಾ ಮುಗಿದ ಮೇಲೆ ನಾವೆಲ್ಲಾ ಇನ್ನೂ ಚಾಪೆಯ ಮೇಲೇ ಕೂತು ನಮ್ಮ ನಮ್ಮ ಮಲಗುವ ಜಾಗಗಳನ್ನು ಖಾಯಂ ಮಾಡಿಕೊಳ್ಳುತ್ತಿರಬೇಕಾದರೆ, ಮೆಲ್ಲಗೆ ಸಪ್ಪೆ ಮೋರೆ ಹಾಕಿಕೊಂಡು ಎದ್ದು ನಿಂತು ಮೇಷ್ಟ್ರನ್ನೇ ದಿಟ್ಟಿಸಿದ. ಮೇಷ್ಟ್ರು ಆ ಹುಡುಗನ ಹತ್ತಿರಕ್ಕೆ ಬಂದು ಅವನ ಮೈ ಮುಟ್ಟಿ ಹುಷಾರು ಇಲ್ಲವೇನೋ ಅಂತ ಕೇಳಿದರು. ಹಂಗೆ ಕೇಳುತ್ತಲೇ ಹುಡುಗ ಅಳುಕುತ್ತಲೇ ತನ್ನ ಚೆಡ್ಡಿಜೇಬಿನಿಂದ ಮುದುರಿದ ಕೆಲವು ನೋಟುಗಳನ್ನು ತೆಗೆದು ಇವರ ಮುಂದಿಡಿದ. ಆ ನೋಟುಗಳನ್ನು ನೋಡಿದ ಕೂಡಲೇ ಸದಾ ಪ್ರಸನ್ನವಾಗಿರುತ್ತಿದ್ದ ಮೇಷ್ಟ್ರು ಮುಖದಲ್ಲಿ ಸಣ್ಣಗೆ ಕೋಪದ ಗೆರೆಗಳೆದ್ದು ಏನಿದು ಅಂದರು. ಆಗ ಆ ಹುಡುಗ ಬೆಚ್ಚಿದವನಂತೆ ಮುಂದೆ ಚಾಚಿದ್ದ ಕೈಗಳನ್ನು ಹಿಂದಕ್ಕೆಳೆದುಕೊಂಡು ಮತ್ತೆ ಅವರನ್ನೇ ದಿಟ್ಟಿಸತೊಡಗಿದ. ಮೇಷ್ಟ್ರು ಅವನ ಹೆಗಲ ಮೇಲೆ ಕೈಯ್ಯಿಟ್ಟು ಕೊಂಚ ಹೊತ್ತು ಅವನನ್ನೇ ದಿಟ್ಟಿಸಿ ಹೋಗಿ ಕೂರುವಂತೆ ಹೇಳಿದರು. ಮುದುರಿದ ನೋಟುಗಳನ್ನು ಮತ್ತೆ ಚೆಡ್ಡಿಜೀಬಿನೊಳಕ್ಕೆ ಸೇರಿಸಿಕೊಂಡ ಅವನು ತಿರುಗಿ ಬಂದುಕೂತ.
ಆ ಹುಡುಗ ಒಬ್ಬ ಕೂಲಿ ಮಾಡುವವರ ಮಗನಾಗಿದ್ದ. ಅವರಪ್ಪನಿಗೆ ಅಂಗೈಯಗಲ ನೆಲ ಕೂಡಾ ಇರಲಿಲ್ಲ. ಅವನು ಸುಮಾರು ತಿಂಗಳುಗಳಿಂದಲೂ ಪಾಠದ ಮನೆಗೆ ಬರುತ್ತಿದ್ದ. ಆಗಿನಿಂದಲೂ ಅವನು ಮೇಷ್ಟ್ರಿಗೆ ಏನನ್ನೂ ಕೊಟ್ಟಿರಲಿಲ್ಲ. ಅವನು ಮನೆಯವರಿಗೆ ಮಕ್ಕಳು ಧವಸ ಧಾನ್ಯಗಳನ್ನು ತಂದುಕೊಡುತ್ತಿದ್ದ ಮಕ್ಕಳ ಬಗ್ಗೆ ಹೇಳಿದ್ದಾನೆ. ಅವರು `ನಾವೇ ಕೊಂಡ್ಕಂಡು ಬಂದು ತಿನ್ಬೇಕು. ಅಂಥಾದ್ರಲ್ಲಿ ಎಲ್ಲಿ ತರಾನಪ್ಪಾ ಕೊಡಾಕೆ’ ಅಂದಿದ್ದಾರೆ. ಹುಡುಗನಿಗೆ ಏನನ್ನೂ ಕೊಡದೆ ಪಾಠ ಕೇಳುವುದು ತುಂಬಾ ಕೇಡಿನ ಸಂಗತಿ ಅನಸಿದೆ. ಹಂಗಾಗಿ ಒಂದಷ್ಟು ದುಡ್ಡನ್ನು ಇಸುಕಂಡು ಬಂದಿದ್ದ.
ಹಿಂಗೆ ಪಾಠದ ಮನೆಗೆ ಹೋಗುತ್ತಿದ್ದ ನಾವೆಲ್ಲಾ ಹೈಸ್ಕೂಲನ್ನು ಮುಗಿಸಿ ಅದೂ ಇದೂ ಓದಲೆಂದು ಬೇರೆ ಬೇರೆ ಊರುಗಳಿಗೆ ಹೋದಂಥ ಹೊತ್ತಲ್ಲಿ ಈ ಶಿವಮೂರ್ತಿ ಮೇಷ್ಟ್ರಿಗೆ ಸರ್ಕಾರಿ ಕೆಲಸವೊಂದು ಸಿಕ್ಕಿತ್ತು. ಆದರೆ ತುಂಬಾ ಬೇಗ ತೀರಿಕೊಂಡ ಸುದ್ದಿ ತುಂಬಾ ದಿನಗಳಾದ ಮೇಲೆ ನನಗೆ ಗೊತ್ತಾಗಿತ್ತು. ಆ ಪಾಠದ ಮನೆ, ಅಲ್ಲಿ ನಾನು ಕಳೆದ ಚಣಗಳು, ಅಲ್ಲಿಂದ ತಂದಿದ್ದ ಪುಸ್ತಕಗಳು ಯಾವತ್ತೂ ಮಾಸದಂಗೆ ಮನದಲ್ಲಿ ಕೂತಿವೆ.
ಈ ನಡುವೆ ನಾನು ಸೈನ್ಸ್ ಬಿಟ್ಟು, ಆರ್ಟ್ಸ್ ತಗಂಡು ಪಿ.ಯೂ.ಸಿ. ಪಾಸು ಮಾಡಿಕಂಡು ಡಿಗ್ರಿಗೆಂದು ಮೈಸೂರಿನ ಮಹಾರಾಜ ಕಾಲೇಜು ಸೇರಿದೆ. ಪಿ.ಯೂ. ಓದುವಂಥ ಹೊತ್ತಲ್ಲಿ ಪಠ್ಯವನ್ನು ಬಿಟ್ಟು ಮತ್ತೇನನ್ನೂ ಓದಿರಲಿಲ್ಲ. ಅಂತೆಯೇ ಏನನ್ನೂ ಗೀಚಬೇಕು ಅಂತಾನೂ ಅನಿಸಿರಲಿಲ್ಲ. ಮಹಾರಾಜ ಕಾಲೇಜಿನ ಲೈಬ್ರರಿ ಮತ್ತೆ ನನ್ನನ್ನು ಓದುವ ಜಾಡಿನತ್ತ ಮುಖ ಮಾಡಿಸಿತ್ತು. ಕುವೆಂಪು, ಕಾರಂತರ ಕಥನಗಳನ್ನು ಓದತೊಡಗಿದೆ. ಮುಂದೆ ನಿರಂಜನ, ಕಟ್ಟೀಮನಿ, ಲಂಕೇಶ್, ಅನಂತಮೂರ್ತಿ, ದೇವನೂರು, ಶ್ರೀಕೃಷ್ಣ ಆಲನಹಳ್ಳಿ ಮುಂತಾದವರ ಲೋಕದಲ್ಲಿ ನಡೆದಾಡಲು ಯತ್ನಿಸಿದ್ದೆ. ಆಗ ಆ ಲೋಕ ಎಷ್ಟು ದಕ್ಕಿತ್ತೋ ಗೊತ್ತಿಲ್ಲ. ಆದರೆ ನಾನು ಈ ಹಿಂದೆ ಓದಿದ್ದ ಪತ್ತೆದಾರಿ ಪ್ರಪಂಚ ಇವುಗಳ ಮುಂದೆ ತೀರಾ ಸಪ್ಪೆ ಅನಿಸಿತ್ತು. ಹಂಗಾಗಿ ಮತ್ತೆ ಅತ್ತ ಮುಖ ಮಾಡಲಿಲ್ಲ. ಈ ಪಯಣದಲ್ಲಿ ನಾನು ಮೊದಲು ಓದಿದ್ದು ಆಲನಹಳ್ಳಿಯವರ `ಕಾಡು’ ಕಾದಂಬರಿ. ಏಕೆಂದರೆ ಗಾತ್ರದಲ್ಲಿ ಚಿಕ್ಕದಾಗಿತ್ತು ಅನ್ನುವ ಕಾರಣಕ್ಕೆ. ಡಿಗ್ರಿಯಲ್ಲಿ ಇಂಗ್ಲೀಷನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೆ. ಆದರೆ ಆವರೆವಿಗೂ ಒಂದೇ ಒಂದು ಇಂಗ್ಲಿಷ್ ಕಾದಂಬರಿಯನ್ನೂ ಓದಿರಲಿಲ್ಲ. ಎಮಿಲಿ ಬ್ರಾಂಟೆಯ `ವುದರಿಂಗ್ ಹೈಟ್ಸ್’ ನಮಗೆ ಪಠ್ಯವಾಗಿತ್ತು. ಅದನ್ನು ಓದಲು ಪ್ರಯತ್ನಪಡುತ್ತಿದ್ದೆ. ಆದರೆ ಪೂರ್ತಿ ಮುಗಿಸಲಾಗುತ್ತಿರಲಿಲ್ಲ. ಆದರೆ ಆ ವೇಳೆಗಾಗಲೇ ಗೆಳೆಯನಾಗಿದ್ದ ರಶೀದನ ಕೈಯ್ಯಲ್ಲಿ ಮಾರ್ಕ್ವೆಜ್ನ `ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಕಾದಂಬರಿ ಇರುತ್ತಿತ್ತು. ಅದನ್ನು 1983ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಗಂಗಾರಾಂ ಕಟ್ಟಡ ದುರಂತದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಕೊಂಡದ್ದನ್ನು ಯಾರೋ ಕೊಟ್ಟಿದ್ದರು ಅಂತ ಅವನು ಹೇಳಿದ್ದ ನೆನಪು. ಅವನಿಂದ ಇಸುಕಂಡು ಅದನ್ನು ಸುಮಾರು ಸಾರ್ತಿ ಓದಲು ಪ್ರಯತ್ನಿಸಿದ್ದೆ. ಒಂಚೂರೂ ಅರ್ಥವಾಗುತ್ತಿರಲಿಲ್ಲ. ಮತ್ತೆ ಅದರೊಳಕ್ಕೆ ಇಳಿಯಲು ತುಂಬಾ ದಿನಗಳೇ ಬೇಕಾದವು. ನಾನು ಮೊದಲ ಬಾರಿಗೆ ಪೂರಾ ಓದಿದ್ದ ಮೊದಲ ಇಂಗ್ಲಿಷ್ ಕಾದಂಬರಿ ಅಂದರೆ ಅದು ಹೆಮಿಂಗ್ವೆಯ `ಫಾರ್ ಹೂಂ ದ ಬೆಲ್ ಟೋಲ್ಸ್.’ ಆ ನಂತರ ಹೆಮಿಂಗ್ವೆ ನನ್ನ ಸಾರ್ವಕಾಲಿಕ ಶ್ರೇಷ್ಠ ಲೇಖಕರಲ್ಲಿ ಒಬ್ಬನಾಗಿ ಹೋದ.

ಹೈಸ್ಕೂಲಿನ ದಿನಗಳಲ್ಲಿ ಬರೆದದ್ದು ಬಿಟ್ಟರೆ ಮತ್ತೆ ಅತ್ತ ಯೋಚಿಸಿರಲಿಲ್ಲ. ಅಥವಾ ಬರೀಬೇಕು ಅಂತ ಅನಿಸಿರಲೂ ಇಲ್ಲ. ನಾನಾಗ ಡಿಗ್ರಿಯ ಕೊನೆಯ ವರ್ಷದಲ್ಲಿದ್ದೆ. ಆ ಹೊತ್ತಲ್ಲಿ ಓದಿನ ಜತೆಗೆ ಏನನ್ನಾದರೂ ಬರೆಯಬೇಕು ಅನ್ನುವ ಸಣ್ಣದೊಂದು ತುಡಿತ ಶುರುವಿಟ್ಟುಕೊಂಡಿತ್ತು. ಪರಿಣಾಮ ನೋಟ್ಬುಕ್ಕೊಂದರಲ್ಲಿ ಒಂದು ಒಂದೂವರೆ ಪುಟದ ಕವಿತೆಯೊಂದನ್ನು ಗೀಚಿದ್ದೆ. ಮತ್ತೆ ಒಂದಷ್ಟು ದಿನ ಅದರ ಸಹವಾಸಕ್ಕೆ ಹೋಗಲಿಲ್ಲ. ನಮಗೆ ಬೇಂದ್ರೆಯವರ ಆಯ್ದ ಕವಿತೆಗಳು ಮೊದಲ ವರ್ಷದ ಅಥವಾ ಎರಡನೆಯ ವರ್ಷದ ಡಿಗ್ರಿಗೆ `ಬಾ ಹತ್ತರ’ ಅನ್ನುವ ಶೀರ್ಷಿಕೆಯಡಿಯಲ್ಲಿ ಪಠ್ಯವಾಗಿತ್ತು. ಈ ಪದ್ಯವನ್ನು ಗೀಚಿದ ಮೇಲೆ ನಾನು `ಬಾ ಹತ್ತರ’ ಸಹವಾಸಕ್ಕೆ ಬಿದ್ದೆ. ನಂತರ ಒಂದಷ್ಟು ದಿನ ನಾನು ರಶೀದ ಬಿಡುವಾದಾಗಲೆಲ್ಲಾ ಮಹಾರಾಜ ಕಾಲೇಜಿನಲ್ಲಿದ್ದರೂ ಮಾನಸ ಗಂಗೋತ್ರಿಯ ಮಾವಿನ ಮರದಡಿಯಲ್ಲಿ ಬೇಂದ್ರೆ ಕವಿತೆಗಳನ್ನು ಜೋರಾಗಿ ಓದಿಕೊಳ್ಳುತ್ತಿದ್ದೆವು. ಯಾವಾಗ ಕವಿತೆಗಳ ಸಂಗ ನಿಕಟವಾಗತೊಡಗಿತೋ ನೋಟ್ ಬುಕ್ನಲ್ಲಿದ್ದ ಗೀಚಿಟ್ಟಿದ್ದ ಕವಿತೆ ಮತ್ತೆ ಮಾತನಾಡತೊಡಗಿತು. ಅದನ್ನು ಒಂದೆರಡು ಸಾರ್ತಿ ತಿದ್ದಿ ಬರೆದೆ. ದುಂಡಾದ ಅಕ್ಷರಗಳಲ್ಲಿ ಮತ್ತೊಂದು ಪುಟದಲ್ಲಿ ಬರೆದು ಮತ್ತೆ ಹಂಗೇ ಇಟ್ಟಿದ್ದೆ. ಅವತ್ತೊಂದು ದಿನ ರಶೀದ ತೊಣಚಿಕೊಪ್ಪಲಿನ ಪುಟ್ಟಯ್ಯನ ಹುಂಡಿಯಲ್ಲಿದ್ದ ನನ್ನ ರೂಮಿಗೆ ಬಂದಿದ್ದ. ಆಗ ಆ ನೋಟ್ಬುಕ್ ಅವನ ಕಣ್ಣಿಗೆ ಬಿದ್ದು ಹಂಗೇ ತಿರುವಿ ಹಾಕತೊಡಗಿದಾಗ ಈ ಕವಿತೆ ಕಣ್ಣಿಗೆ ಬಿದ್ದಿದೆ. ಅದನ್ನು ಓದಿದ ಅವನು ಮತ್ತೊಮ್ಮೆ ನನ್ನಿಂದ ದುಂಡಾಗಿ ಬರೆಸಿ, ಅದಕ್ಕೆ `ಪ್ರತಿ ದಿನದ ಸೂರ್ಯ’ ಅನ್ನುವ ಶೀರ್ಷಿಕೆ ಕೊಟ್ಟು, ಆ ವರ್ಷದ ಕ್ರೈಸ್ಟ್ ಕಾಲೇಜಿನ ದ.ರಾ.ಬೇಂದ್ರೆ ಸ್ಮೃತಿ ಅಂತರ ಕಾಲೇಜು ಕವನ ಸ್ಪರ್ಧೆಗೆ ಕಳಿಸಿದ್ದ. ಆ ವರ್ಷ ಅದಕ್ಕೆ ಬಹುಮಾನ ಬಂದಿತ್ತು. ಈ ಕವನದ ಶೀರ್ಷಿಕೆಯೇ ಆ ವರ್ಷದ ಬಹುಮಾನಿತ ಕವಿತೆಗಳ ಗುಚ್ಚಕ್ಕೆ ಶೀರ್ಷಿಕೆಯಾಗಿತ್ತು. ಅದು 1986ನೇ ಇಸವಿ. ಎಂ.ಎ. ಓದು ಹೊತ್ತಲ್ಲಿ ಮತ್ತೆರಡು ಸಾರ್ತಿ ಕವಿತೆಗಳಿಗೆ ಬಹುಮಾನ ಬಂದಿತ್ತು. ಮೊದಲ ಸಾರ್ತಿ ಬಹುಮಾನ ತಗಳ್ಳಲು ಹೋದಾಗ ನನಗೆ ಕಿ.ರಂ.ನಾಗರಾಜ್ ಹಾಗೂ ಎಲ್ಸಿ. ನಾಗರಾಜ ಪರಿಚಯ ಆಗಿದ್ದು. ನಂತರದ ಎರಡು ಸಾರ್ತಿ ಹೋದಾಗ ಎಲ್ಸಿ ನಾನೂ ರಶೀದ ಎಲ್ಸಿ ರೂಮಿಗೆ ಹೋಗಿದ್ದೆವು. ಅಲ್ಲೇ ನಾನು ಪ್ರಕಾಶ್ ರೈ ಅವರನ್ನು ಕಂಡದ್ದು. ಅದು ಮಲ್ಲೇಶ್ವರಂನಲ್ಲಿದ್ದ ಗೀತಾಂಜಲಿ ಟಾಕೀಸ್ ಪಕ್ಕದಲ್ಲಿತ್ತು. ಆ ನಂತರ ಕವಿತೆ ನನ್ನ ಕೈ ಹಿಡಿಯಲಿಲ್ಲ. ಹಿಡುಕಂಡು ಜಗ್ಗಾಡುವ ಹಠವೂ ನನಗಿರಲಿಲ್ಲ. ಕ್ರಮೇಣ ನನ್ನ ಆಸಕ್ತಿ ಕಥನದತ್ತ ಹೋಯ್ತು. ನಾನು ಅದರ ಕೈ ಹಿಡಿದೆ. ಅದು ನನ್ನ ಕೈ ಹಿಡಿದಿದೆಯೋ ಇಲ್ಲವೋ ಗೊತ್ತಿಲ್ಲ.
(ಹಿಂದಿನ ಕಂತು: ಪುಟ್ಟಕ್ಕಜ್ಜಿ ಮತ್ತು ಸಲೀಂ ಅಲಿಗಳು)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

