ದೂರದಲ್ಲಿದ್ದ ಟ್ರಾನ್ಸಿಸ್ಟರ್ನಿಂದ ಕೊಳಲಿನ ನಾದ ಕೇಳಿಬರುತ್ತದೆ. ಕವಿದಿದ್ದ ಕತ್ತಲು, ಧ್ವನಿಯ ಹಂಗು ಕಳಚಿಕೊಂಡ ವಾತಾವರಣ. ಆ ಸಮಯದಲ್ಲೇ ದೂರದಿಂದ ಕೇಳಿಬಂದ ವೇಣುನಾದ. ಆಗ ಅಡಿಗರೊಳಗೆ ಹುಟ್ಟುವ ಸಾಲು- ‘ಯಾವ ಮೋಹನ ಮುರಳಿ ಕರೆಯಿತೊ ದೂರ ತೀರಕೆ ನಿನ್ನನು…’ ರಾಜಕುಮಾರನಾಗಿದ್ದ ಸಿದ್ಧಾರ್ಥನಿಗೆ ಕಗ್ಗತ್ತಲಿನ ರಾತ್ರಿಯಲ್ಲಿ ವೈರಾಗ್ಯ ಮೂಡಿ, ಸಂನ್ಯಾಸನದೆಡೆಗೆ ಆಕರ್ಷಿತನಾದುದನ್ನು ಈ ಕವಿತೆ ಹೇಳುತ್ತದೆ. ಗೋಕುಲದಿಂದ ಶ್ರೀಕೃಷ್ಣ ನಿರ್ಗಮಿಸಿದ ರೀತಿಯನ್ನು ಹೇಳುವ ಕವಿತೆಯಾಗಿಯೂ ಇದನ್ನು ಪರಿಭಾವಿಸಿಕೊಳ್ಳಬಹುದು.
ಡಾ. ವಿಶ್ವನಾಥ ನೇರಳಕಟ್ಟೆ ಬರಹ
ಭೌತಿಕ ಬದಲಾವಣೆ ಮತ್ತು ರಾಸಾಯನಿಕ ಬದಲಾವಣೆ ಎನ್ನುವ ಎರಡು ಪ್ರಮುಖ ಪರಿಕಲ್ಪನೆಗಳನ್ನು ರಸಾಯನಶಾಸ್ತ್ರದಲ್ಲಿ ಕಾಣಬಹುದು. ಭೌತಿಕ ಬದಲಾವಣೆಯಲ್ಲಿ ವಸ್ತುವಿನ ಆಕಾರ, ವಿನ್ಯಾಸ, ಗಾತ್ರದಲ್ಲಿ ಪರಿವರ್ತನೆಗಳು ಕಂಡುಬರುತ್ತವೆ. ವಸ್ತುವಿನ ಮೂಲ ಗುಣಮಟ್ಟದಲ್ಲಿ ಯಾವುದೇ ಮಾರ್ಪಾಡುಗಳು ಸಂಭವಿಸುವುದಿಲ್ಲ. ಇಲ್ಲಿ ವಸ್ತುಗಳು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬದಲಾಗುತ್ತವೆಯೇ ಹೊರತು ಹೊಸ ವಸ್ತುಗಳ ಉತ್ಪತ್ತಿ ಇರುವುದಿಲ್ಲ. ಈ ರೀತಿಯ ಬದಲಾವಣೆಗೆ ಒಳಗಾದ ವಸ್ತುಗಳನ್ನು ಮತ್ತೆ ಪಡೆಯಬಹುದಾಗಿದೆ. ನೀರನ್ನು ಕುದಿಸುವುದು, ನೀರನ್ನು ಮಂಜುಗಡ್ಡೆಯಾಗಿಸುವುದು, ಹಣ್ಣನ್ನು ಕತ್ತರಿಸಿ ಹೋಳುಗಳನ್ನಾಗಿಸುವುದು, ತಾಮ್ರದ ತಗಡನ್ನು ತಂತಿಯಾಗಿಸುವುದು ಇವೆಲ್ಲವೂ ಭೌತಿಕ ಬದಲಾವಣೆಗೆ ಒಳ್ಳೆಯ ಉದಾಹರಣೆಗಳಾಗಿವೆ.
ರಾಸಾಯನಿಕ ಬದಲಾವಣೆಯು ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ರಾಸಾಯನಿಕ ಬದಲಾವಣೆಗೆ ಒಳಗಾದ ಒಂದು ವಿಧದ ವಸ್ತುವು ಇನ್ನೊಂದು ವಿಧದ ವಸ್ತುವಾಗಿರುತ್ತದೆ. ಇಲ್ಲಿ ವಸ್ತುವಿನೊಳಗಡೆ ಇರುವ ರಾಸಾಯನಿಕ ಅಂಶಗಳು ಪರಿವರ್ತನೆ ಹೊಂದಿರುತ್ತವೆ. ಇಂತಹ ವಸ್ತುವನ್ನು ಮೂಲಸ್ಥಿತಿಗೆ ತರಲು ಸಾಧ್ಯವಿಲ್ಲ. ಆದ್ದರಿಂದ ರಾಸಾಯನಿಕ ಬದಲಾವಣೆಯನ್ನು ಶಾಶ್ವತ ಬದಲಾವಣೆಯಾಗಿ ಗುರುತಿಸಲಾಗುತ್ತದೆ. ಹಾಲು ಮೊಸರಾಗುವುದು, ಕಬ್ಬಿಣಕ್ಕೆ ತುಕ್ಕು ಹಿಡಿಯುವುದು, ಇಂಧನಗಳನ್ನು ದಹಿಸುವುದು, ಕರ್ಪೂರ ಉರಿಯುವುದು, ಕಾಗದವನ್ನು ಸುಡುವುದು ಮೊದಲಾದವುಗಳು ರಾಸಾಯನಿಕ ಬದಲಾವಣೆ ಪ್ರಕ್ರಿಯೆಗೆ ಕೊಡಬಹುದಾದ ಉದಾಹರಣೆಗಳಾಗಿವೆ. ವಿಜ್ಞಾನದಲ್ಲಿ ಕಂಡುಬರುವ ಈ ಪರಿಕಲ್ಪನೆಯು ಕಾವ್ಯಸೃಷ್ಟಿಯ ಪ್ರಕ್ರಿಯೆಯ ಜೊತೆಗೆ ಸಾಮ್ಯತೆಯನ್ನು ಹೊಂದಿದೆ.
*****
ಕಾವ್ಯಸೃಷ್ಟಿ ಎನ್ನುವುದೊಂದು ಕ್ರಿಯೆಯಲ್ಲ; ಅದು ಪ್ರಕ್ರಿಯೆ. ಏಕೆಂದರೆ ಕಾವ್ಯಸೃಷ್ಟಿಯಲ್ಲಿ ಹಲವು ಕ್ರಿಯೆಗಳಿರುತ್ತವೆ. ಜೊತೆಗೆ ನಿರಂತರತೆಯೂ ಇರುತ್ತದೆ. ಕಾವ್ಯವೊಂದನ್ನು ರಚಿಸಲು ಮೂಲಭೂತವಾದ ಸ್ಫೂರ್ತಿಯನ್ನು ಒದಗಿಸಿಕೊಡುವುದು ಲೋಕವಸ್ತು ಎನಿಸಿಕೊಳ್ಳುತ್ತದೆ. ಈ ಲೋಕವಸ್ತು ಬೇರೆ ಬೇರೆ ಸ್ವರೂಪದಲ್ಲಿ ಕವಿಯನ್ನು ಬಂದು ತಲುಪಬಹುದು. ಸಂಗಾತಿಯ ಅಗಲಿಕೆಯಿಂದ ನೊಂದ ಕ್ರೌಂಚಪಕ್ಷಿಯ ಆಕ್ರಂದನ ಎನ್ನುವುದು ವಾಲ್ಮೀಕಿ ಮಹರ್ಷಿಗಳ ಪಾಲಿಗೆ ಲೋಕವಸ್ತುವಾಯಿತು. ಇಂತಹ ಲೋಕವಸ್ತುವಿನ ನಂತರದ ಹಂತ ರಸವಸ್ತು. ರಸವಸ್ತು ಎನ್ನುವುದು ಕವಿಯ ವಿಶಿಷ್ಟ ಅನುಭವದಿಂದ ಆರ್ದ್ರವಾದ ಲೋಕವಸ್ತು. ಕ್ರೌಂಚಪಕ್ಷಿಯ ಆಕ್ರಂದನವನ್ನು ಕೇಳಿದ ಕವಿ ವಾಲ್ಮೀಕಿ ಮಹರ್ಷಿಗಳು ಆ ಪಕ್ಷಿಯ ಬಗ್ಗೆ ಕಾವ್ಯ ರಚಿಸಲಿಲ್ಲ. ಅವರಿಗೆ ನೆನಪಾದದ್ದು ಶ್ರೀರಾಮನಿಂದ ಅಗಲಿದ ಸೀತೆಯ ಎದೆಯಲ್ಲಿ ಮಡುಗಟ್ಟಿದ್ದ ಶೋಕ. ಅಂದರೆ, ಸಾಮಾನ್ಯ ವ್ಯಕ್ತಿಗಾಗುವ ಅನುಭವ ಮತ್ತು ಕವಿಗಾಗುವ ಅನುಭವ ಬೇರೆ ಬೇರೆಯೇ. ರಸವಸ್ತುವಿನ ನಂತರದ ಹಂತ ಕಾವ್ಯಕೃತಿಯ ರಚನೆ. ಪಕ್ಷಿಯ ಆಕ್ರಂದನವನ್ನು ಆರ್ದ್ರಭಾವದಿಂದ ಗ್ರಹಿಸಿದ ವಾಲ್ಮೀಕಿ ಮಹರ್ಷಿಗಳು ಮಹಾಕಾವ್ಯವೊಂದರ ಸೃಷ್ಟಿಗೆ ಕಾರಣಕರ್ತರಾಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಲೋಕವಸ್ತು ರಸವಸ್ತುವಾಗಿ ಮಾರ್ಪಡುವುದನ್ನು ರಸಾಯನಶಾಸ್ತ್ರದ ರಾಸಾಯನಿಕ ಬದಲಾವಣೆ ಪರಿಕಲ್ಪನೆಗೆ ಸಂವಾದಿಯಾಗಿ ಪರಿಭಾವಿಸಬಹುದು.
ಕವಿಮನಸ್ಸು ಎನ್ನುವುದು ವಿಶಿಷ್ಟಪೂರ್ಣವಾದುದು. ರಸ್ತೆಯಲ್ಲಿ ಅಪಘಾತವಾಗಿದೆ; ಚಾಲಕ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣಸಂಕಟದಿಂದ ಒದ್ದಾಡುತ್ತಿದ್ದಾನೆ ಎಂದುಕೊಳ್ಳಿ. ಅದನ್ನು ಆ ರಸ್ತೆಯಲ್ಲಿ ಸಾಗಿದ ನೂರಾರು ಮಂದಿ ವೀಕ್ಷಿಸಿರುತ್ತಾರೆ. ಆದರೆ ಆ ದೃಶ್ಯ ಕೆಲವೇ ಕೆಲವು ಮಂದಿಯ ಎದೆಗಿಳಿಯುತ್ತದೆ. ಅದರ ಬಗ್ಗೆ ಏನಾದರೂ ಬರೆಯಬೇಕು ಎಂಬ ಭಾವನೆ ಯಾರಿಗಾದರೂ ಬಂದರೆ ಅಂತಹವರಿಗೆ ಕವಿಮನಸ್ಸು ಇದೆ ಎಂದರ್ಥ. ಇಂತಹವರಿಗೆ ತೀವ್ರವಾದ ಸಂವೇದನಾಶೀಲತೆ ಇರುತ್ತದೆ. ಆದರೆ ಅವರು ಬರೆಯಹೊರಟಾಗ ಅದು ಅವರು ಕಂಡ ಸ್ವರೂಪದಲ್ಲಿಯೇ ಅಭಿವ್ಯಕ್ತಿಗೊಳ್ಳುವುದಿಲ್ಲ. ಅವರವರಲ್ಲಿ ಉಂಟಾದ ಆರ್ದ್ರತೆಗೆ ಅನುಗುಣವಾಗಿ ಅಭಿವ್ಯಕ್ತಗೊಳ್ಳುತ್ತದೆ. ಅಂದರೆ ಕಾವ್ಯಸೃಷ್ಟಿಯ ಪ್ರಕ್ರಿಯೆಯಯಲ್ಲಿ ಭಾವತೀವ್ರತೆಯ ಪಾತ್ರ ಪ್ರಧಾನವಾದದ್ದು. ಮುಳ್ಳಿನ ಮಧ್ಯೆ ಅರಳಿನಿಂತ ಗುಲಾಬಿ ಹೂವೊಂದು ಒಬ್ಬ ವ್ಯಕ್ತಿಯ ಪಾಲಿಗೆ ಕಷ್ಟದ ಮಧ್ಯೆಯೂ ಬೆಳೆದುನಿಂತು ಈಗ ಸುಖವನ್ನು ಕಾಣುತ್ತಿರುವವರೊಬ್ಬರ ಬದುಕಿನ ಪ್ರತಿಬಿಂಬವಾಗಿ ಕಾಣಬಹುದು. ಇನ್ನೊಬ್ಬ ಅದನ್ನು ಹೊರಗೆ ಹೂವಿನಂತೆ ಕೋಮಲವಾಗಿರುವ ಆಂತರಂಗಿಕವಾಗಿ ಮುಳ್ಳು ಮನಸ್ಸಿರುವ ವ್ಯಕ್ತಿತ್ವಕ್ಕೆ ರೂಪಕವಾಗಿ ಪರಿಭಾವಿಸಬಹುದು. ಪ್ರೇಮದ ಭಾವವನ್ನು ಹೊತ್ತವನಿಗೆ ಅದು ತನ್ನ ಪ್ರಿಯತಮೆಯ ಮುಡಿಯನ್ನಲಂಕರಿಸುವುದಕ್ಕೆಂದೇ ನಗುತ್ತಾ ನಿಂತಂತೆ ತೋರಬಹುದು. ಆ ಹೂವು ಇವುಗಳಲ್ಲಿ ಯಾವ ವರ್ಗಕ್ಕೆ ಸೇರುತ್ತದೆ ಎಂದರೆ ಎಲ್ಲಾ ವರ್ಗಕ್ಕೂ ಸೇರುತ್ತದೆ. ಲೋಕವಸ್ತು ಅದುವೇ ಇದ್ದರೂ ಅದು ರಸವಸ್ತುವಾಗುವ ಬಗೆ ಬೇರೆ ಬೇರೆ.

ರಾಸಾಯನಿಕ ಬದಲಾವಣೆಗೆ ಒಳಗಾದ ವಸ್ತುವನ್ನು ಹೇಗೆ ಮೂಲರೂಪದಲ್ಲಿ ಮತ್ತೆ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ರಸವಸ್ತುವಿನ ಮೂಲಕ ಕಾವ್ಯಕೃತಿಯಾದುದರ ಲೋಕವಸ್ತುವನ್ನು ಗ್ರಹಿಸುವುದು ಬಹಳ ಕಷ್ಟ. ಇದಕ್ಕೆ ಉದಾಹರಣೆಯಾಗಿ ಸಾಕಷ್ಟು ಕಾವ್ಯರಚನೆಗಳು ದೊರಕುತ್ತವಾದರೂ ಎರಡು ಕವಿತೆಗಳನ್ನು ಗಮನಿಸಬಹುದು. ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ ನನ್ನ’ ಎನ್ನುವ ಕವಿತೆ ನಮ್ಮ ಮುಂದಿರುವ ಕಾವ್ಯಕೃತಿ. ಬೇಂದ್ರೆಯವರ ಮಗನ ಸಾವು, ಆ ಸಂದರ್ಭದಲ್ಲಿ ಅವರ ಪತ್ನಿಯ ಅಸಹಾಯಕ ನೋಟ, ಅವಳಷ್ಟೇ ಅಸಹಾಯಕತೆಯನ್ನು ಕಣ್ಣಿನಲ್ಲಿ ಹೊತ್ತುಕೊಂಡ ಕವಿ- ಇದು ಆ ಕವಿತೆಯ ಲೋಕವಸ್ತು. ಆದರೆ ಕಾವ್ಯಕೃತಿಯಲ್ಲೆಲ್ಲೂ ಸಹ ಇದೊಂದು ವಿಷಾದ ಗೀತೆ ಎನ್ನುವ ಸುಳಿವೂ ದೊರೆಯುವುದಿಲ್ಲ. ಕವಿತೆಯೊಳಗಡೆ ‘ಚಂದಿರನ ಹೆಣ’ ಎಂಬ ಪದ ಬಳಕೆಯಾಗಿದ್ದರೂ ಸಹ ಆ ಪದ ಲೋಕವಸ್ತುವನ್ನು ಸಂಪೂರ್ಣವಾಗಿ ಅರ್ಥೈಸುವಲ್ಲಿ ಶಕ್ತವಾಗಿಲ್ಲ. ಹಾಗೆಂದು ಲೋಕವಸ್ತುವನ್ನು ತಿಳಿಯಗೊಡದ ಕಾವ್ಯಕೃತಿ ದುರ್ಬಲವಾಗಿದೆ ಎಂದರ್ಥವಲ್ಲ. ಕಾವ್ಯಕೃತಿಯನ್ನು ಓದಿದಾಗ ಲೋಕವಸ್ತು ಅರಿವಿಗೆ ಬರದಿದ್ದರೆ ಅದನ್ನು ಕವಿಯ ಇಲ್ಲವೇ ಕವಿತೆಯ ದೌರ್ಬಲ್ಯವಾಗಿ ಪರಿಭಾವಿಸುವ ಕ್ರಮವಿಲ್ಲ. ಆದರೆ ಲೋಕವಸ್ತು ರಸವಸ್ತುವಾಗಿ ಮಾರ್ಪಟ್ಟು ಕಾವ್ಯಕೃತಿ ರೂಪುಗೊಳ್ಳುವ ಈ ಪ್ರಕ್ರಿಯೆ ಅತ್ಯಂತ ರೋಮಾಂಚಕವಾದದ್ದು.

ಗೋಪಾಲಕೃಷ್ಣ ಅಡಿಗರು ಅದೊಂದು ದಿನ ಸುತ್ತುಸುತ್ತಾದ ಮೆಟ್ಟಿಲುಗಳನ್ನು ಹತ್ತುತ್ತಿರುತ್ತಾರೆ. ಅರ್ಧದಷ್ಟು ಮೆಟ್ಟಿಲುಗಳನ್ನು ಹತ್ತಿ ಮುಗಿಸಿದ್ದಾರಷ್ಟೇ, ವಿದ್ಯುತ್ ಕೈಕೊಡುತ್ತದೆ. ಸುತ್ತಮುತ್ತ ಕತ್ತಲು ಹಬ್ಬುತ್ತದೆ. ಸದ್ದು ಹೊರಡಿಸುತ್ತಿದ್ದ ರೇಡಿಯೋಗಳೆಲ್ಲ ಇದ್ದಕ್ಕಿದ್ದಂತೆ ನಿಂತುಹೋಗುತ್ತವೆ. ಕತ್ತಲಿನಲ್ಲಿ ಮುಂದಿನ ಮೆಟ್ಟಿಲುಗಳು ಸರಿಯಾಗಿ ಕಾಣಿಸದೇ ಇದ್ದುದರಿಂದ ಅಡಿಗರು ಮೆಟ್ಟಿಲುಗಳನ್ನು ನಿಧಾನಕ್ಕೆ ಹತ್ತಲಾರಂಭಿಸುತ್ತಾರೆ. ಆಗ ದೂರದಲ್ಲಿದ್ದ ಟ್ರಾನ್ಸಿಸ್ಟರ್ನಿಂದ ಕೊಳಲಿನ ನಾದ ಕೇಳಿಬರುತ್ತದೆ. ಕವಿದಿದ್ದ ಕತ್ತಲು, ಧ್ವನಿಯ ಹಂಗು ಕಳಚಿಕೊಂಡ ವಾತಾವರಣ. ಆ ಸಮಯದಲ್ಲೇ ದೂರದಿಂದ ಕೇಳಿಬಂದ ವೇಣುನಾದ. ಆಗ ಅಡಿಗರೊಳಗೆ ಹುಟ್ಟುವ ಸಾಲು- ‘ಯಾವ ಮೋಹನ ಮುರಳಿ ಕರೆಯಿತೊ ದೂರ ತೀರಕೆ ನಿನ್ನನು…’ ರಾಜಕುಮಾರನಾಗಿದ್ದ ಸಿದ್ಧಾರ್ಥನಿಗೆ ಕಗ್ಗತ್ತಲಿನ ರಾತ್ರಿಯಲ್ಲಿ ವೈರಾಗ್ಯ ಮೂಡಿ, ಸಂನ್ಯಾಸನದೆಡೆಗೆ ಆಕರ್ಷಿತನಾದುದನ್ನು ಈ ಕವಿತೆ ಹೇಳುತ್ತದೆ. ಗೋಕುಲದಿಂದ ಶ್ರೀಕೃಷ್ಣ ನಿರ್ಗಮಿಸಿದ ರೀತಿಯನ್ನು ಹೇಳುವ ಕವಿತೆಯಾಗಿಯೂ ಇದನ್ನು ಪರಿಭಾವಿಸಿಕೊಳ್ಳಬಹುದು. ‘ಅಮೇರಿಕಾ ಅಮೇರಿಕಾ’ ಎನ್ನುವ ಸಿನಿಮಾದಲ್ಲಿ ವಿದೇಶೀ ವ್ಯಾಮೋಹದಿಂದುಂಟಾಗುವ ತಲ್ಲಣವನ್ನು ಅಭಿವ್ಯಕ್ತಿಸುವ ಧಾಟಿಯಲ್ಲಿ ಈ ಕವಿತೆಯನ್ನು ಬಳಸಿಕೊಳ್ಳಲಾಗಿದೆ. ಲೋಕವಸ್ತುವಿನ ಸುಳಿವೇ ಸಿಗದಂತೆ ರಸವಸ್ತುವಿನ ಮೂಲಕ ಕಾವ್ಯಕೃತಿಯನ್ನು ಕೆತ್ತಿ ನಿಲ್ಲಿಸಿದ ಕವಿತ್ವವಂತೂ ಎಂದಿಗೂ ಬಗೆಹರಿಯದ ಪರಮರಹಸ್ಯ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

