ಪ್ರಭಾಳನ್ನ ನಾನೊಬ್ಬ ಹುಚ್ಚನಂತೆ ಆವಾಹಿಸಿಕೊಂಡೆ. ಅವಳನ್ನೇ ಬದುಕಿನ ಬಣ್ಣವಾಗಿಸಿಕೊಂಡೆ. ಕಾವಾದ ಹಿಡಿ ಹಿಡಿ ಮಣ್ಣಿನಲ್ಲೂ ಆಕೆಯ ಹೆಜ್ಜೆಗಳನ್ನ ತಡಕಾಡಿದೆ. ನನ್ನ ಪ್ರತಿ ಪೇಂಟಿಂಗಿನಲ್ಲೂ ಆಕೆಯನ್ನ ಚಿತ್ರಿಸಿದೆ. ನನ್ನ ಜೀವನದಲ್ಲಿ ಘಟಿಸಿದ ವಾಸುದೇವನ ಬಣ್ಣಗಳು, ಅಮ್ಮನ ಚಿತ್ರಗಳು, ಈ ನನ್ನ ಪ್ರಭಾ- ಸತ್ಯ. ಪ್ರಭಾ ಪ್ಯಾಲೆಟ್ಟಿನಲ್ಲಿ ಕಲಿಸಿದ ಬಣ್ಣದಂತೆ. ವಾಸುದೇವನನ್ನ ಚಿತ್ರಿಸುವಾಗ ನನ್ನನ್ನ ಚಿತ್ರಿಸಿದ ಪ್ರಭಾ. ಈಕೆ ಕಲಾಕೃತಿಯಲ್ಲ. ಚಿತ್ರವಲ್ಲ. ದೊಡ್ಡ ಕಲೆಗಾರ್ತಿ. ಆಕೆಯನ್ನ ತುಂಬ ಪ್ರೀತಿಸಿದೆ. ಆ ಅನುಭೂತಿಯಲ್ಲಿ ಬಣ್ಣವಾದೆ ಚಿತ್ರವಾದೆ. ನನ್ನ ಈ ಪ್ರೀತಿಯಲ್ಲಿ ಮುಳುಗಿದೆ.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಯಾನವಾಸ್” ನಿಮ್ಮ ಓದಿಗೆ
ಹೆಜ್ಜೆ ಹೆಜ್ಜೆಗೂ ಮರದ ನೆರಳು. ಆಕಾಶದೆತ್ತರಕೆ ಬೆಳೆದು ನಿಂತಿರುವ ಅಶೋಕ ವೃಕ್ಷಗಳು. ಅಲ್ಲಲ್ಲಿ ಇಣುಕುತ್ತಿರುವ ಬಿಸಿಲು. ಮುಗಿಬೀಳುತ್ತಿರುವ ಒಲವಿನ ಕ್ಷಣಗಳು. ಎಷ್ಟೊಂದು ಉತ್ಸಾಹ. ನಗುಮೊಗದವನಾಗಿ ಹೊರಡುವಾಗ ಅವಳ ಕನವರಿಕೆ. ಉಲ್ಲಾಸದಲ್ಲಿ ಗೆಲುವಾಗುತ್ತಾನೆ. ತೆಗೆಯಬೇಕು-ಪ್ರಪಂಚದಲ್ಲಿರುವ ಸುಂದರ ಅನುಭೂತಿಯನ್ನ ಕ್ಯಾನವಾಸಿನಲ್ಲಿ ಬಣ್ಣಗಳಿಂದ ತುಂಬಬೇಕು. ಅಲ್ಲೋ ಇಲ್ಲೋ ಕಳೆದುಬಿಡುವ ತತ್ಪರತೆಯಲ್ಲಿ ವಾಸ್ತವದ ವಿಲಕ್ಷಣಗಳನ್ನ ಗುರುತಿಸುವ ರೀತಿಯಲ್ಲಿ ತುಂಬಬೇಕು. ನೋವಿಗೂ ನಲಿವಿಗೂ ಭಾವತೊಡಕುಗಳಿಗೂ ನಡುವಿರುವ ಬಲೆಯಲ್ಲಿ ಸಿಕ್ಕಿ ತೊಳಲಾಡುವ ಚಿತ್ರಕ್ಕೆ ಬಣ್ಣ. ಹಸಿರು ಕೆಂಪು ನೀಲಿ ಬಿಳಿ ಬಂಗಾರ ಬೆಳ್ಳಿ ಕಂದು… ಎಷ್ಟೊಂದು ವರ್ಣಗಳು. ಎಷ್ಟೊಂದು ವಿಚಾರಗಳು. ದಿನದ ಕೊನೆಗೆ ಕಪ್ಪು ಎಲ್ಲ ಕಪ್ಪು ಕಪ್ಪು. ಕಪ್ಪು ಆಗಸದಲ್ಲಿ ಬಿಳಿಯಾಗಿ ಎಲ್ಲೆಂದರಲ್ಲಿ ಸಿಗುವ ಚಂದ್ರ. ಚುಕ್ಕೆಗಳು. ಸೋಜಿಗ ಸೃಷ್ಟಿ. ಈ ಸೃಷ್ಟಿಗೆ ವರ್ಣಗಳ ಅನುಬಂಧ. ಅವಳ ಕಣ್ಣುಗಳಲ್ಲಿ ಕಾಣಸಿಗುವ ಪ್ರೀತಿಯ ಬಣ್ಣ. ಬಣ್ಣಗಳಿಂದ ಪ್ರೀತಿ. ಅದರಿಂದ ಬದುಕು. ಹೇಗೆ ಬಣ್ಣ ತನ್ನನ್ನು ಆವರಿಸಿಕೊಂಡಿದೆ?…
ವಾಸುದೇವ್ ಹಾಗೂ ನನ್ನ ನಡುವಿನ ಸಂಬಂಧದ ಬಣ್ಣ, ಪ್ರಭಾಳ ಪ್ರೀತಿಯ ಬಣ್ಣ ಎರಡೂ ಒಂದೆ. ಈ ಚಿತ್ರಗಳ, ಬಣ್ಣಗಳ, ತುಂಬಿರುವ ಕ್ಯಾನವಾಸಿನ ಮೇಲೆಲ್ಲ ಬದುಕು. ಬಣ್ಣ ಬಣ್ಣದ ಬದುಕು. ಹೀಗಿರುವ ಜೀವನದಲ್ಲಿ ವೈವಿದ್ಯಮಯವಾದ ಬಣ್ಣಗಳು- ಒಂದೊಂದು ಅಂತರಾಳದಲ್ಲೊಂದೊಂದು ಬಣ್ಣ. ಪ್ರತಿ ಹೃದಯದಲ್ಲೂ ಸಾವಿರ ಕನಸುಗಳು ಸಾವಿರ ಭಾವನೆಗಳು. ಒಂದೊಂದು ಭಾವನೆಯನ್ನೂ ಒಂದೊಂದು ಬಣ್ಣದಿಂದ ತುಂಬಿದ ವಾಸುದೇವ್. ಚಿಗುರುತ್ತಿರುವ ಆಸೆಗಳನ್ನ ಕ್ಯಾನವಾಸಿನ ಮೇಲೆ ಬೆಳೆಸಬೇಕು. ಬೆಳೆಸಿದ ಆಸೆಗಳನ್ನ ಬಣ್ಣಗಳಿಂದ ತುಂಬಬೇಕು. ವಾಸುದೇವ್ ಹತ್ತಿರ ನಾನು ಬಂದದ್ದು ಅವರ ಕಲೆಯ ಮೂಲದ ಜಾಡನ್ನ ತಡಕಾಡುತ್ತಲೇ ಅಲ್ಲವೇ?… ವಾಸುದೇವನನ್ನ ಗೆಲ್ಲುತ್ತಾ ನಾನು ಮೇಲೇಳಬೇಕು ಎಂದಲ್ಲವೇ? ಈ ವಿಲಕ್ಷಣಗಳಿಂದ ರೋಸಿ ಹೋಗಿ ಬೆಚ್ಚಿಬಿದ್ದೆ. ಆದರೂ ಯೌವನದ ಕಾಮನೆಗಳಲ್ಲಿ ತೆಗೆದ ಚಿತ್ರಗಳು. ಅವುಗಳನ್ನ ತುಂಬಿದ ಬಣ್ಣಗಳು. ಕ್ಯಾನವಾಸ್ ಮೂರ್ತವಾಗುತ್ತದೆ. ಸಂಗತವಾಗುತ್ತದೆ. ಭಾವನೆಗಳೆಲ್ಲ ಕುಂಚದ ಬಣ್ಣಗಳಾಗುತ್ತವೆ. ಮತ್ತೆ ಚಿತ್ರ?… ಅದು ಬದುಕಾಗುತ್ತದೆ. ಧ್ಯೇಯ ಧೋರಣೆಗಳ ಪ್ಯಾಲೆಟ್ಟಿನಲ್ಲಿ ಕಲಿಸಿದ ಭಾವನೆಗಳ ಬಣ್ಣ. ಅವುಗಳನ್ನ ಕಲಿಸಿದಾಗ ಉಕ್ಕಿ ಬರುವ ಹೊಸ ಪ್ರೀತಿಯ ಬಣ್ಣ. ಸಂಗಾತಿಯನ್ನ ಅರಸುತ್ತ ಹಾರುವ ಕಿಂಗ್ ಫಿಶರ್ನ ಬಣ್ಣ. ಎಂದೋ ಯಾವತ್ತೋ ಒಲವಿನಲ್ಲಿ ಆಕೆಗೆ ಕೊಟ್ಟ ನವಿಲುಗರಿಯ ಬಣ್ಣ. ಆಕೆಯ ಸೊಗಸಿನ ನುಣುಪಾದ ಮೈ ಬಳುಕಿನ ಬಣ್ಣ. ನಸುಗೆಂಪು ತುಟಿಗಳು. ಕಡುಗಪ್ಪು ಹುಬ್ಬು. ನೀಳ ಕೂದಲುಗಳು. ಆಕೆಯನ್ನಪ್ಪಿ ಮುದ್ದಾಡಬೇಕು ಎನ್ನಿಸುವಷ್ಟು ಒತ್ತರಿಸಿ ಬರುವ ಭಾವನೆಗಳ ಉಕ್ಕುವಂತೆ ಮಾಡುವ ಬಣ್ಣ. ಇದರ ಮೂಲ ಇರುವ ಕ್ಷಣಗಳ ವಿಸಿನಿಟಿ ಎಷ್ಟೊಂದು ಸತ್ಯ ಹೀಗೆ ಯೋಚಿಸುವಾಗ. ಹಿಂದೆ ಸರಿದದ್ದು ಇಂದಾಗಿದೆ. ಹಿಂದಿದ್ದರೂ ವರ್ತಮಾನಕ್ಕೆ ಬಂದು ತಲೆ ಹಿಡಿಯುವ ಘಟನೆಗಳು. ಕ್ಯಾನವಾಸನ್ನ ನೋಡುವಾಗಲೆಲ್ಲ ಭೂತದ ಕಂಪನಗಳು. ಹೇಗೆ ಕಹಿಗಳು ನನ್ನನ್ನ ಮುಕ್ಕುತ್ತವೆ? ಹೇಗೆ ಬಯಕೆಗಳು ಹರಿದು ಬರುತ್ತವೆ. ತೀರದ ಬಯಕೆಗಳು. ಭೂತದಲ್ಲಿ ಸತ್ಯವಾಗುತ್ತ ವರ್ತಮಾನದಲ್ಲಿ ಸುಳ್ಳಾಗುವ ನಾನು, ನನ್ನ ಪ್ರೀತಿ, ನನ್ನ ಭಾವನೆಗಳು, ನಾನು ತುಂಬ ಪ್ರೀತಿಸುವ ನನ್ನ ಅಮ್ಮ, ಮತ್ತೆ ನನ್ನ ಅಪ್ಪ – ಈ ವಾಸುದೇವ್.
*****
ಊರಿಗೆ ಹೋದಾಗ ಕಾಯುತಿದ್ದ ನನ್ನ ತಾಯಿಯ ಒದ್ದೆಯಾದ ಕಂಗಳು. ತನ್ನ ಪ್ರಿಯಕರನಾದ ವಾಸುದೇವ್ನ ಪೇಂಟಿಂಗ್ಗಳನ್ನ ಜತನದಿಂದ ಗೋಡೆಯ ಮೇಲೆ ಹಾಕಿದ್ದಾಳೆ. ನಾನೊಬ್ಬ ಕಲಾಕಾರನಾಗಲು ವಾಸುದೇವನ ಜೀನ್ಗಳೇ ಕಾರಣ ಎಂದುಕೊಳ್ಳುತ್ತಾ ಉಲ್ಲಸಿತಳಾಗುತ್ತಾಳೆ. ಆಕೆಯ ಯೌವನದಲ್ಲಿ ತನ್ನ ಸ್ವಂತಿಕೆಯ ಅಭಿವ್ಯಕ್ತಿಯ ಸೆಲೆಯನ್ನ ಹುಡುಕುತ್ತಾ ಇಲ್ಲಿಗೆ ಬಂದು ಈ ಊರಕೆರೆಯ ದಡದಲ್ಲಿ ನಿಂತು ಪೇಂಟಿಂಗ್ ಮಾಡುತ್ತಿದ್ದ ಈ ವಾಸುದೇವನ ಕುರಿತು ತುಂಬ ಹೆಮ್ಮೆ ಪಡುತ್ತಾಳೆ. ನನ್ನೆಡೆಗೆ ನೋಡಿ ಕಣ್ಣೀರಾಗುತ್ತಾಳೆ. ಅವಳ ಪ್ರೀತಿಯ ಕಣ್ಣೀರಿನ ಮೂಲವನ್ನ ಹುಡುಕುವಾಗ ನನಗೊಂದು ಪೇಂಟಿಂಗ್ಗಳ ಫೈಲ್ ಸಿಕ್ಕಿತು- ವಾಸುದೇವನ ಪ್ರೇಮ ಪತ್ರಗಳು, ಅಮ್ಮನಿಗಾಗಿ ಬರೆದಿದ್ದು. ಅಮ್ಮನಿಗೂ ಗೊತ್ತಿಲ್ಲದಂತೆ ನಾನು ವಾಸುದೇವ್ನ ಜಾಡನ್ನ ಹಿಡಿದು ಮೈಸೂರಿಗೆ ಬಂದದ್ದು ಅಮ್ಮನಿಗೆ ಗೊತ್ತಿಲ್ಲ. ಕಾವಾದಲ್ಲಿ ಪ್ರೊಫೆಸರನಾಗಿದ್ದ ವಾಸುದೇವನನ್ನ ಹುಡುಕುವುದು ಕಷ್ಟವಾಗಲಿಲ್ಲ. ಆದರೂ ವಾಸುದೇವನಿಗೆ ನಾನೇನನ್ನೂ ಬಿಚ್ಚಿ ಹೇಳಲಿಲ್ಲ. ನನ್ನ ಅಮ್ಮ ಅವನ ಅಪ್ರತಿಮ ಕಲಾಕೃತಿ- ಮಾಸ್ಟರ್ಪೀಸ್. ಅಮ್ಮನ ಜೀವನದಲ್ಲಿ ಆತ ಎಷ್ಟು ಸತ್ಯ. ಬಣ್ಣಗಳೆಲ್ಲ ಎಷ್ಟೊಂದು ಸತ್ಯ. ಆದರೂ ಅಮ್ಮ ನನಗೇನನ್ನೂ ಹೇಳಲಿಲ್ಲ. ವಾಸುದೇವನ ನೆನಪಿನಲ್ಲಿ ಅವನ ಪ್ರತೀಕ್ಷೆಯಲ್ಲಿ ಕಾಯುತ್ತಿರುವ ವಾಸುದೇವನ ಪೇಂಟಿಂಗ್ಳಲ್ಲಿಯ ಬಟ್ಟೆ ಒಗೆಯುತ್ತಿರುವ ಹುಡುಗಿ. ಮಳೆಯಲ್ಲಿ ಓಡಿಹೋಗುತ್ತಿರುವ ಲಂಗ ದಾವಣಿಯ ಸುಂದರ ಬೆಡಗಿ- ನನ್ನ ಅಮ್ಮ. ಅವನ ಕಲೆಯಲ್ಲಿ ಈಕೆ ಎಷ್ಟೊಂದು ಸತ್ಯ. ಆದರೆ ನನ್ನಲ್ಲಿ? ನನ್ನ ಪೇಂಟಿಂಗ್ಗಳಲ್ಲಿ?…
ಪ್ರಭಾಳನ್ನ ನಾನೊಬ್ಬ ಹುಚ್ಚನಂತೆ ಆವಾಹಿಸಿಕೊಂಡೆ. ಅವಳನ್ನೇ ಬದುಕಿನ ಬಣ್ಣವಾಗಿಸಿಕೊಂಡೆ. ಕಾವಾದ ಹಿಡಿ ಹಿಡಿ ಮಣ್ಣಿನಲ್ಲೂ ಆಕೆಯ ಹೆಜ್ಜೆಗಳನ್ನ ತಡಕಾಡಿದೆ. ನನ್ನ ಪ್ರತಿ ಪೇಂಟಿಂಗಿನಲ್ಲೂ ಆಕೆಯನ್ನ ಚಿತ್ರಿಸಿದೆ. ನನ್ನ ಜೀವನದಲ್ಲಿ ಘಟಿಸಿದ ವಾಸುದೇವನ ಬಣ್ಣಗಳು, ಅಮ್ಮನ ಚಿತ್ರಗಳು, ಈ ನನ್ನ ಪ್ರಭಾ- ಸತ್ಯ. ಪ್ರಭಾ ಪ್ಯಾಲೆಟ್ಟಿನಲ್ಲಿ ಕಲಿಸಿದ ಬಣ್ಣದಂತೆ. ವಾಸುದೇವನನ್ನ ಚಿತ್ರಿಸುವಾಗ ನನ್ನನ್ನ ಚಿತ್ರಿಸಿದ ಪ್ರಭಾ. ಈಕೆ ಕಲಾಕೃತಿಯಲ್ಲ. ಚಿತ್ರವಲ್ಲ. ದೊಡ್ಡ ಕಲೆಗಾರ್ತಿ. ಆಕೆಯನ್ನ ತುಂಬ ಪ್ರೀತಿಸಿದೆ. ಆ ಅನುಭೂತಿಯಲ್ಲಿ ಬಣ್ಣವಾದೆ ಚಿತ್ರವಾದೆ. ನನ್ನ ಈ ಪ್ರೀತಿಯಲ್ಲಿ ಮುಳುಗಿದೆ.
ಅವಳ ಜೀವನದಲ್ಲಿ ಆಕೆಗೆ ಪ್ರೀತಿ ಸಿಗಲಿಲ್ಲವಂತೆ. ಅವಳ ತಂದೆ ತಾಯಿಯ ಜಗಳದಲ್ಲಿ ಬಡವಾದ ಕೂಸು ಅವಳು. ಎಲ್ಲ ಇದ್ದೂ ತಬ್ಬಲಿ. ಆಕೆ ಈ ಪ್ರೀತಿಯ ಬಣ್ಣದಲ್ಲಿ ಮುಳುಗಿದಾಗ ಹೇಳಿದ ಕಥೆ. ಅವತ್ತು ತಿಳಿ ಸಂಜೆ. ಕುಕ್ಕರಳ್ಳಿ ಕೆರೆಯ ದಡದಲ್ಲಿ ನಿಂತು ಪ್ರಕೃತಿಯನ್ನ ಚಿತ್ರಿಸುವಾಗ ಹಿಂದಿನಿಂದ ಬಂದು ತಬ್ಬಿದ ಆಕೆ. ಆಕೆ ನನ್ನನ್ನ ತುಂಬ ಪ್ರೀತಿಸುತ್ತಾಳೆ ಎಂದು ಹೇಳುತಿದ್ದ ಕಣ್ಣುಗಳು. ‘ನೀನೊಬ್ಬ ಪಾಗಲ್ʼ ಎನ್ನುತ್ತ ಅಳುತ್ತ ನನ್ನ ತಬ್ಬಿದ ಪ್ರಭಾಳ ಕೈಹಿಡಿದು ‘ಏನಾಯಿತುʼ ಎಂದೆ. ‘ನಿನಗೇನೋ ಹೇಳಬೇಕುʼ ಎಂದಳು,
“ನನ್ನ ತಂದೆ ಒಬ್ಬ ಆರ್ಟಿಸ್ಟ್. ಆತನೊಬ್ಬ ಯೋಗಿಯಂತೆ ಬಣ್ಣಗಳಲ್ಲಿ ಮುಳುಗಿಬಿಡುತ್ತಿದ್ದ. ಒಂದು ಸಾರಿ ಆತ ಪೈಂಟ್ ಅನ್ನ ಪ್ಯಾಲೆಟ್ಟಿನಲ್ಲಿ ಕಲಿಸಿದ ಮೇಲೆ ಮುಗಿಯಿತು. ಅಮ್ಮ ಇದೇ ಕಾರಣವಾಗಿ ಆತನೊಡನೆ ಜಗಳವಾಡುತ್ತಿದ್ದಳು. ನನ್ನನ್ನ ಇಬ್ಬರೂ ಮರೆತೇಬಿಡುತ್ತಿದ್ದರು. ಒಂದು ಸಾರಿ ಅಪ್ಪ ಚಿತ್ರಿಸುವಾಗ ಅಮ್ಮ ಅಳುತ್ತ ಕೂತಿದ್ದಳು. ಆಗ ಅಪ್ಪ ಬಂದು ಆಕೆಯನ್ನ ಸಂತೈಸುತ್ತ ಕ್ಷಮಿಸುವಂತೆ ಕೋರಿದ. ಆಗ ಅಮ್ಮ ‘ನಿನಗೆ ನಿನ್ನ ಭಾವನೆಗಳಷ್ಟೇ ಸತ್ಯ. ನಾವೇನು ನಿನಗೆ? ಪ್ರಭಾಳನ್ನ ನೋಡು. ನಿನ್ನ ಪೇಂಟಿಂಗ್ ಗಳಷ್ಟೇ ಪ್ರೀತಿಯನ್ನ ನೀನು ಆಕೆಗೆ ನನಗೆ ನೀಡಬೇಕಾದುದು ನಿನ್ನ ಧರ್ಮವಲ್ಲವೇ? ನಿನಗೆ ನಾವಿಬ್ಬರೂ ಮುಖ್ಯ ಅಲ್ಲವೇ ಅಲ್ಲ. ನಿನ್ನ ಮುಖ ತೋರಬೇಡ.ʼ ಎಂದು ಚೀರಾಡಿದಳು. ಆಗ ಅಪ್ಪನಿಗೆ ಸಿಟ್ಟು ಬಂದು ಆಕೆಯ ಕೆನ್ನೆಗೆರಡು ಬಾರಿಸಿ ‘ನೀನು ಸಾಯಿʼ ಎಂದು ಬೈಯುತ್ತಾ ಬಣ್ಣದ ಡಬ್ಬಿಯಿಂದ ಆಕೆಯ ಮುಖಕ್ಕೆ ಬಣ್ಣ ಎರಚಿ ಹೊರಟುಹೋದ. ಆಮೇಲೆ ಅಮ್ಮ ಹುಚ್ಚಿಯಂತಾದಳು. ಮುರುಟಿಹೋದಳು. ಏನನ್ನೋ ಹುಡುಕುತಿದ್ದಳು. ‘ನನ್ನ ಬಿಟ್ಟು ಹೋಗ್ತೀಯಾʼ ಅಂತಾ ಸ್ಕೂಲಿಂದ ಬಂದ ಮೇಲೆ ನನಗೆ ಹೊಡೆಯುತ್ತಿದ್ದಳು. ಆಕೆಯ ಜೀವನದಲ್ಲಿ ಅಪ್ಪನ ಚಿತ್ರಗಳೆಲ್ಲಾ ಸುಳ್ಳು. ಚೇತರಿಸದೇ ನನ್ನನ್ನ ಅನಾಥಾಶ್ರಮಕ್ಕೆ ಸೇರಿಸಿ ಹೊರಟುಹೋದಳು. ಆಕೆಯೂ ನನ್ನ ಜೀವನದಲ್ಲಿ ನಂದಿದ ದೀಪ. ಒಣಗಿ ಹಾಳಾದ ಪೇಂಟ್ ಬಾಕ್ಸ್ಗಳಂತೆ. ನನ್ನ ಜೀವನ ಬಣ್ಣದಲ್ಲಿಯೇ ಮುರುಟಿಹೋದರೂ ನಾನು ಕಾವಾಗೆ ಬಂದೆ, ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕೆಂದು, ಸತ್ಯವಾಗಬೇಕೆಂದು ಬಣ್ಣವಾಗಬೇಕೆಂದು. ನನ್ನ ಜೀವನದ ಕ್ಯಾನವಾಸಿನಲ್ಲಿ ಸದಾಕಾಲ ಉರಿಯುವ ದೀಪ ನೀನು. ನನ್ನ ಅಪ್ಪನ ಹಾಗೆ ನನ್ನನ್ನ ಪೀಡಿಸಬೇಡ. ನಾನು ಇಲ್ಲಿಯ ಬಂಧನಗಳಲ್ಲಿ ಅಡಕವಾಗಿರುವ ದ್ವೇಷ, ಅಸೂಯೆ, ದುಃಖವನ್ನ ಚಿತ್ರಿಸುತ್ತ ಹೊರಟಿದ್ದೆ. ಅಲ್ಲಿಯೇ ಕಾವಾದ ಕ್ಲಾಸ್ ರೂಮಿನಲ್ಲಿ ನೀನು ನನ್ನನ್ನ ಯಾಚಿಸುವ ತನಕ. ಈಗ ನೀನೊಬ್ಬನೇ ನನಗೆ ಸತ್ಯ. ನನ್ನ ಜೀವನ. ನನ್ನ ಜೀವನದ ಬಣ್ಣ…”
ನಾನವಳ ಹಣೆಗೆ ಮುತ್ತಿಕ್ಕಿ ‘ಇಲ್ಲ. ನಾನೆಂದಿಗೂ ನಿನ್ನ ಬಿಟ್ಟು ಹೋಗುವುದಿಲ್ಲʼ ಎಂದೆ. ನನ್ನ ಕೈಹಿಡಿದುಕೊಂಡೇ ಸ್ವಲ್ಪ ಹೊತ್ತು ಕುಳಿತುಕೊಂಡಳು.

ಇವಳ ತಾಯಿಯ ಜೀವನದಲ್ಲಿ ಚಿತ್ರಗಳೆಲ್ಲ ಸುಳ್ಳು. ಕ್ಯಾನವಾಸ್ ನರಕದಂತೆ. ಪ್ಯಾಲೆಟ್ಟಿನಲ್ಲಿ ಕಲಿಸಿದ ಬಣ್ಣ- ದ್ರೋಹದ ದ್ಯೋತಕ. ಎಲ್ಲವೂ ಎಷ್ಟೊಂದು ಅಸತ್ಯ. ತಪ್ತ ಜೀವನ. ಸುಂದರ ಕನಸುಗಳನ್ನ ನನಸಾಗಿಸುವ ಹೊತ್ತಿನಲ್ಲಿ ನರಕದ ಕೆರಳು. ಹರಿಯುವ ನೀರಿಗೆ ಕಟ್ಟಿರುವ ಗೋಡೆ. ನನ್ನ ಅಮ್ಮನ ಜೀವನದಲ್ಲಿ ಸತ್ಯವಾಗುವ ವರ್ಣಗಳು, ಈಕೆಯ ಅಮ್ಮನ ಜೀವನದಲ್ಲಿ ಸುಳ್ಳಾಗುತ್ತವೆ. ಇದರ ಜಾಡನ್ನ ನಾನು ಚಿತ್ರಿಸಲೇಬೇಕು. ಅಂತರಾಳದಲ್ಲಿ ಸತ್ಯವಾಗುವ ರೀತಿಯಲ್ಲಿ ಇದನ್ನ ಚಿತ್ರಿಸಬೇಕು.
*****
ನಲುಗುವ ವಿಚಾರಗಳು. ಸಂಕಟವಾಗುತ್ತದೆ. ಕೆಂಡದ ಮೇಲೆ ಕಾಲಿಟ್ಟ ಹಾಗೆ, ಜೀವನದ ಕ್ಯಾನವಾಸಿನ ಮೇಲೆ ಹೆಜ್ಜೆ. ವಿಲಕ್ಷಣವಾದ ಕೂಗುಗಳು. ಮಾರ್ದನಿಸುವ ಕೂಗುಗಳಲ್ಲಿ ಪ್ರತಿಧ್ವನಿಯಾಗುವ ಆರ್ತನಾದ. ಹೇಗಾಯಿತು? ಅವತ್ತು ವಾಸುದೇವನನ್ನ ಮಾತನಾಡಿಸುವಾಗ ಪ್ರೀತಿಯಿಂದ ‘ಮಗೂʼ ಎಂದು ಮಾತನಾಡಿಸಿದನಲ್ಲವೇ?… ನಾನು ಅವನ ನಿಜವಾದ ಮಗ ಎಂದು ಹೇಳಲೂ ನನಗೆ ಆಗಲಿಲ್ಲ. ಆ ಪ್ರೀತಿಯ ಕರೆಯಲ್ಲಿ ಗದ್ಗದಿತನಾಗಿ ಕಣ್ಣು ತುಂಬಿ ಬಂದುವಲ್ಲವೇ?… ಯಾವುದು ಸತ್ಯ ಯಾವುದು ಸುಳ್ಳು?… ನನ್ನನ್ನ ನಾನು ತಡಕಾಡುವಾಗ ಸಿಕ್ಕ ಈ ವಾಸುದೇವ್ ಎಂಬ ಸತ್ಯ. ಸುಳ್ಳಾಗಿದ್ದ ಸತ್ಯ. ಅಡಕತ್ತರಿಯಲ್ಲಿರುವ ಅಡಕೆ. ಮೌನದಲ್ಲಿ ಚುಚ್ಚುವ ಸಂಕಟ.
ಪ್ರಭಾ ಎಲೆಗಳ ಹಾಸಿನ ಮೇಲೆ ನಿಂತು ಗುಲ್ ಮೊಹರ್ನ ಬಿಡಿಸುತ್ತಿದ್ದಳು. ಆಕೆಯ ಭಾವನೆಗಳ ಪ್ರತೀಕ. ಉಲ್ಲಾಸದ ಸಂಕೇತ. ಅಂದು ನಾನಲ್ಲಿಗೆ ಹೋದಾಗ ನನ್ನ ಭುಜಕ್ಕೊರಗಿ ಆಕೆ ಹೇಳಿದಳು-
“ನೀನು ನನ್ನ ತಂದೆಯೊಡನೆ ಮಾತನಾಡಬೇಕು. ಆತನೇ ನನ್ನನ್ನ ಇಲ್ಲಿಗೆ ತಂದು ಸೇರಿಸಿದ್ದು. ಅಮ್ಮ ನನ್ನ ಅನಾಥಾಶ್ರಮಕ್ಕೆ ಸೇರಿಸಿದ ಮೇಲೆ ಇದ್ದರೂ ಇಲ್ಲದಂತಿದ್ದ ನನ್ನನ್ನ ಕಾವಾಕ್ಕೆ ಕರೆದುಕೊಂಡು ಬಂದದ್ದು ಆತನೇ. ಆತ ಸುಳ್ಳಾದರೂ ಸತ್ಯ. ಆದರೂ ಅವನ ಪ್ರೀತಿ ನನಗೆ ಅರ್ಥವಾಗಿದ್ದು ನೀನು ಸಿಕ್ಕ ಮೇಲೆ. ಹೌದು ನೀನು ಅವನನ್ನ ಭೇಟಿಯಾಗಲೇಬೇಕು. ನನ್ನೊಳಗಿನ ಕುದಿತದಲ್ಲಿ ಸುಳ್ಳಾಗಿದ್ದ ಪ್ರೀತಿ ಆತ, ಈಗ ಸತ್ಯವಾಗಿದ್ದಾನೆ ನಿನ್ನೊಡನೆ.”
“ಆಯಿತು” ಎಂದೆ.
ಹೇಗೆ ಆಕೆ ತನ್ನ ತಂದೆಯೆಡೆಗೆ ನೋಡುತ್ತಾಳೆ? ನನಗೆ ಹೇಳಿರದ ಸತ್ಯವನ್ನ ಹೇಗೆ ನನ್ನ ಮುಂದೆ ಬಿಸಾಡುತ್ತಾಳೆ? ಯಾವ ನಿಷ್ಠರತೆಯಲ್ಲಿ ಕಠೋರತೆಯಲ್ಲಿ ಆಕೆ ಕೆಂಡಾಮಂಡಲವಾಗಿದ್ದಳೋ ಈಗ ಎಷ್ಟೊಂದು ಮೃದುವಾಗಿದ್ದಾಳೆ? ಎಲ್ಲವೂ ಎಷ್ಟೊಂದು ವಿಚಿತ್ರ. ಆಕೆಗೆ ಆಕೆಯ ತಂದೆ ಈಗ ಸತ್ಯ. ಇದರಲ್ಲಿ ಪ್ರೀತಿ ಮೂರ್ತವಾಗುತ್ತದೆ. ನಾನು ಆಕೆಗೆ ಪ್ರೇಮದೇವತೆಯಾಗುತ್ತೇನೆ. ಈಗ ಆಕೆಗೆ ದೂರವಾಗಿದ್ದ ಪ್ರೀತಿ ಹತ್ತಿರವಾಗಿದೆ. ಆಕೆ ಗೆಲುವಾಗುತ್ತಿದ್ದಾಳೆ. ಉಲ್ಲಸಿತಳಾಗುತ್ತಿದ್ದಾಳೆ. ಹೇಗೆ ನನ್ನೊಳಗೆ ಇದು ಬೆಳೆಯುತ್ತಿದೆ? ನನ್ನನ್ನ ಹೇಗೆ ಬೆಳೆಸುತ್ತಿದೆ?…
ಮಾರನೇ ದಿನದ ನಿರಮ್ಮಳವಾದ ಬಿಸಿಲು. ಎಲ್ಲೋ ಹೊಂಗೆ ಮರಗಳಡಿ ಕೂತು ವಿದ್ಯಾರ್ಥಿಗಳೊಡನೆ ಚರ್ಚೆಯಲ್ಲಿ ಪ್ರಿಯವಾಗಿ ಕೂತಿದ್ದ ವಾಸುದೇವ್. ನನ್ನ ತಂದೆ. ನಾನವನನ್ನೇ ನೋಡುತ್ತ ನಿಂತಿದ್ದೆ. ಅಮ್ಮನ ಚಿಲುಮೆಯಾಗಿದ್ದ ಈ ವಾಸುದೇವ್ ನನಗೂ ಅಷ್ಟೇ ಪ್ರಿಯ. ನನ್ನನ್ನಾತ ಕರೆದ-
“ಏನು ಯೋಚಿಸುತ್ತಿದ್ದೀ?” ಎಂದು ಕೇಳಿದ.
“ಎಲ್ಲೋ ಎಂದೋ ಕಳೆದುಹೋದ ಅಪ್ಪ ಒಮ್ಮೆಲೇ ಸಿಕ್ಕಾಗ ಏನೆನ್ನಿಸಬಹುದು? ತಂದೆಯ ಚಿತ್ರಗಳಲ್ಲಿ ಹುಡುಕಬೇಕಾದ ಪ್ರೀತಿಯನ್ನ ಚಿತ್ರಿಸಬೇಕು.” ಎಂದೆ. ‘ನೀನು ನನ್ನ ಹಾಗೆಯೇ ಇದ್ದೀʼ ಎನ್ನುತ್ತಾ ನನ್ನ ಬೆನ್ನು ತಟ್ಟಿದ. ಈತನಿಗೆ ನಾನೇ ಅವನ ಮಗ ಎಂದು ತಿಳಿಸಿದರೆ ನನ್ನನ್ನ ಒಪ್ಪಿಕೊಳ್ಳುತ್ತಾನೆಯೇ?… ಅವನು ಸತ್ಯವಾಗುತ್ತಿರುವ ವೇಳೆಯಲ್ಲಿ ಸುಳ್ಳಾಗಿಬಿಟ್ಟರೇ? ಬೇಡ. ಯಾವುದನ್ನೂ ಈಗ ತೆರೆಯುವುದು ಬೇಡ. ಯಾವುದೂ ಇದಕ್ಕೆ ಪರಿಹಾರವಲ್ಲ. ನಾನು ಸುಮ್ಮನಾದೆ. ಅದೇ ಸಮಯಕ್ಕೆ ಅಲ್ಲಿಗೆ ಪ್ರಭಾ ಬಂದಳು. ಆಕೆಯ ಮುಖದಲ್ಲಿ ಅದೆಂತಹ ಕಾಂತಿ. ಆಕೆಯ ತೃಪ್ತಭಾವದಲ್ಲಿ ಅರಳಿದ ಆಕೆಯ ಮೊಗ. ಎಷ್ಟೊಂದು ಸುಂದರ. ಅರಳಿದ ಕಮಲ. ಆಕೆ ಹೀಗೆಯೇ ಇರಬೇಕು. ನಾನವಳನ್ನ ತುಂಬ ಪ್ರೀತಿಸುತ್ತೇನೆ. ಹೀಗೆಂದುಕೊಳ್ಳುತ್ತಾ ಕೂತಿದ್ದಾಗ ತಟ್ಟನೇ ಬಂದು ವಾಸುದೇವನ ಕೈ ಹಿಡಿದು ‘ಅಪ್ಪಾ, ಐ ಲವ್ ಯೂ.ʼ ಎಂದಳು. ಒಂದು ಕ್ಷಣ ಎದೆ ಧಸಕ್ಕೆಂದಿತು. ವಾಸುದೇವ್ ಪ್ರಭಾಳ ಅಪ್ಪ!!… ವಾಸುದೇವ್ ಒಂದು ಕ್ಷಣ ಎದ್ದು ನಿಂತು ಕಂಗಳ ತುಂಬಿಕೊಂಡು ಆಕೆಯನ್ನ ತಬ್ಬಿದ. ಆಕೆಯೂ ತೃಪ್ತಿಯ ಕಣ್ಣೀರಿನಲ್ಲಿ ಆತನ ಎದೆಯ ಮೇಲೆ ತಲೆಯಿಟ್ಟಳು. ನಾನು ಕುಸಿದೆ. ಸಂಕಟದಲ್ಲಿ ನೆಲಸಮವಾದೆ. ವಾಸುದೇವ್ ಮತ್ತು ಪ್ರಭಾ ವಾಸ್ತವಕ್ಕೆ ಬರುವ ಮುಂಚೆಯೇ ನಾನು ಅಲ್ಲಿಂದ ಜಾರಿಕೊಂಡೆ.
ವಾಸುದೇವ್ ಪ್ರಭಾಳ ಅಪ್ಪ?! ನಿಜವೇ?!… ಸಂಬಂಧಗಳು ಗೋಸುಂಬೆಯಂತೆ. ಎಷ್ಟು ಬದಲಾವಣೆ. ಎಲ್ಲೋ ಸುಂದರವಾಗುವಾಗ ಹೊಸ ಆಘಾತ. ಬಿಸಿಲ್ಗುದುರೆ. ವಾಸುದೇವ್ ಅವನ ಚಿತ್ರಗಳಷ್ಟೆ ಸಂಕೀರ್ಣ. ನನ್ನ ಬದುಕು? ಈ ನನ್ನ, ಅಮ್ಮನ, ವಾಸುದೇವನ, ಪ್ರಭಾಳ ಹಾಗೂ ಅವಳ ಅಮ್ಮನ, ನಮ್ಮ ಪೇಂಟಿಂಗ್ಗಳ ವಿಷಿಯಸ್ ಸರ್ಕಲ್ ನಮ್ಮೆಲ್ಲರನ್ನ ಪೀಡಿಸುತ್ತದೆ. ನಲುಗಿಸುತ್ತದೆ. ಎಷ್ಟೋ ಸತ್ಯಗಳನ್ನ ಬಚ್ಚಿಟ್ಟುಕೊಳ್ಳುತ್ತದೆ. ಸಂಕೀರ್ಣವಾಗುತ್ತದೆ. ಈ ಸಂಕೀರ್ಣತೆ ವಿಕಾಸವಾಗುತ್ತದೆ. ವಿರಹವೇದನೆಯನ್ನ ಹತ್ತಿರವಿದ್ದರೂ ಅನುಭವಿಸುವ ಸಂದಿಗ್ಧತೆ. ತನ್ನನ್ನ ಬದುಕಿನ ಉದ್ದೇಶದಿಂದ ವಿಚಲಿತನನ್ನಾಗಿಸುವ ಹುನ್ನಾರ. ಕಲಿಸಿದ ಬಣ್ಣಗಳನ್ನ ಬೇರ್ಪಡಿಸುವ ತವಕ. ಆದರದು ಸಾಧ್ಯವಿಲ್ಲ. ಇಲ್ಲಿರುವ ಸಾಧ್ಯತೆಗಳು ಎಷ್ಟೊಂದು ಕ್ಲಿಷ್ಟಕರ. ಹೇಗೆ ಇದು ಜಟಿಲ. ಕೂಲಂಕುಷವಾಗಿ ಇದನ್ನ ಪರಿಹರಿಸಬೇಕು. ತಿಳಿಯದ ಶುಷ್ಕಗಳನ್ನ ಕಾಲದಡಿಯಲ್ಲಿ ಸಮಾಧಿಯಾಗಿಸಬೇಕು. ನನ್ನನ್ನ ನಾನು ಕಂಡುಕೊಳ್ಳಬೇಕು. ಸತ್ಯವಾಗಬೇಕು. ಸಂಗತವಾಗಬೇಕು. ಮೂರ್ತವಾಗಬೇಕು.
ಪ್ರಭಾಳನ್ನ ಇಷ್ಟೊಂದು ಪ್ರೀತಿಸುವ ನನಗೆ ಆಕೆಯನ್ನ ಬೇರೆ ಸಂಬಂಧದಲ್ಲಿ ಪಡೆದುಕೊಳ್ಳುವುದು ಏಕೆ ಸಾಧ್ಯವಾಗುತ್ತಿಲ್ಲ? ಈ ಬಹುಬಣ್ಣಗಳ ನೋಟ ಕೊನೆಗೆ ಯಾವ ಬಣ್ಣಕ್ಕೆ ತಿರುಗುವುದೊ? ಪ್ರಶ್ನೆಗಳಿಗೆ ಎಲ್ಲಿ ಉತ್ತರ ಸಿಗುವುದೋ?.. ಯಾಕೆ ನನಗೆ ನಿಶ್ಚಲವಾಗುವುದು ಅಸಂಗತವಾಗುತ್ತದೆ? ನೀರವವಾಗುವ ಭಾವನೆಗಳು ಹೇಗೆ ಕ್ಲೀಷೆಗಳಾಗುತ್ತವೆ?… ಆಂತರ್ಯದಲ್ಲಿ ಹಾಗೆಯೇ ಉಳಿದುಬಿಡುವ ಪ್ರಶ್ನೆಗಳಲ್ಲಿ ಜಟಿಲವಾಗುವ ಭಾವನೆಗಳು ಹಾಗೂ ಸಂಬಂಧಗಳು.
ನನ್ನ ಮತ್ತು ಪ್ರಭಾಳ ನಡುವೆ ಹೊಸದಾಗಿ ಕಾಣುತ್ತಿರುವ ಹಳೆಯ ತೊಡಕು- ಈ ವಾಸುದೇವ್. ಹೇಗೆ ಆತ ನಮ್ಮ ಯೋಚನೆಗಳಲ್ಲಿ ಸಂಬಂಧಗಳಲ್ಲಿ ವಿಕೃತನಾಗುತ್ತಾನೆ. ಇದು ಎಷ್ಟೊಂದು ಜಟಿಲ. ಸಂಬಂಧಗಳ ಮ್ಲಾನತೆಯಲ್ಲಿ ಕುಸಿದು ಬೀಳುವ ಒಲವು. ನಾವು ಎಷ್ಟೇ ಪ್ರಯತ್ನಿಸಿದರೂ ಕೊನೆಗೆ ಮತ್ತೆ ಉಳಿಯುವ ಸೆಳೆತಗಳು. ಕಾವಾ ಹೇಗೆ ಸುಪ್ತವಾಗುತ್ತದೆ? ಸಮಾಧಿಯಾಗುತ್ತದೆ? ಮತ್ತೆ ಹೇಗೆ ವಾಸುದೇವ್ ಯೋಗಿಯಾಗುತ್ತಾನೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವ ಹೊತ್ತಿನಲ್ಲಿ ದೊಡ್ಡ ಕಂದಕ ಎದುರಾಗುತ್ತದೆ. ಜೀವನ ತನ್ನಲ್ಲಿ ಎಲ್ಲ ರಹಸ್ಯಗಳನ್ನ ಅಡಗಿಸಿಟ್ಟುಕೊಳ್ಳುತ್ತದೆ. ಕ್ಯಾನವಾಸಿನ ಮೇಲೆ ವಿಕಾಸವಾಗಬೇಕು. ಬಣ್ಣಗಳಿಂದ ಈ ರಹಸ್ಯಗಳು ತೆರೆದುಕೊಳ್ಳಬೇಕು.
*****
ವಾಸುದೇವ್ ಮತ್ತು ಪ್ರಭಾಳ ಸಂಬಂಧದಲ್ಲಿ ನನ್ನ ಪ್ರೀತಿ ಸುಳ್ಳಾಗುತ್ತದೆ. ಅಕ್ಕಿ ಕುದಿಯುವ ನೀರಿನಲ್ಲಿ ಬೇಯುವಂತೆ ನನ್ನ ವಿಚಾರಗಳು ಬೇಯುತ್ತವೆ. ಈ ವರ್ಚುಯಾಲಿಟಿಯಲ್ಲಿ ಮೂರ್ತವಾಗಬೇಕಾದ ಅನಿವಾರ್ಯ. ಅನಿವಾರ್ಯತೆಯ ಸಂದಿಗ್ಧತೆ. ಪ್ರಭಾಳಿಗೆ ಈ ಸತ್ಯವನ್ನ ಹೇಳಬೇಕೆ? ನಾವು ಸಿಲುಕಿಕೊಂಡಿರುವ ಜೇಡರಬಲೆ ಎಷ್ಟು ದೊಡ್ಡದು. ಈ ಕಂದಕ ಎಷ್ಟೊಂದು ಆಳ. ಇಲ್ಲ. ಬೇಡ. ಇದನ್ನ ಪ್ರಭಾಳಿಗೆ ಅರಗಿಸಿಕೊಳ್ಳುವುದು ಸಾಧ್ಯವೇ? ನನ್ನೊಳಗಿನ ಸಂಕಟವನ್ನ ವಾಸುದೇವನ ಮಡಿಲಲ್ಲಿ ಒಡೆಯಬೇಕು. ನನ್ನ ಅಮ್ಮನ ಪ್ರೀತಿಗಾಗಿ ಇದೆಲ್ಲವನ್ನ ವಾಸುದೇವನಿಗೆ ಹೇಳಬೇಕು.
ನಾನು ಅವನ ಮನೆಗೆ ಹೊರಟೆ ಅವನಿಗೆ ಇದೆಲ್ಲವನ್ನೂ ತಿಳಿಸಬೇಕು ಎಂದು. ಅವನ ಮನೆಯ ಗೋಡೆಯ ಮೇಲೆಲ್ಲ ಪೇಂಟಿಂಗ್ಗಳ ಕಟ್ಬೋರ್ಡ್ಗಳು. ಎಡಗಡೆಯಲ್ಲಿ ಸಮುದ್ರ ಮಂಥನ. ಎದುರುಗಡೆಯಲ್ಲಿ ಅದೇ ಪೈರನು ಕೊಯ್ಯುತ್ತಿರುವ ಹುಡುಗಿ. ಬಲಗಡೆಯಲ್ಲಿ ಬಟ್ಟೆ ಒಗೆಯುತ್ತಿರುವ ಹುಡುಗಿ. ನಾನು ಹೋದಾಗ ನಗುಮೊಗದಿಂದಲೇ ಆತ ಒಳಕರೆದ. ನನ್ನನ್ನ ತಬ್ಬಿದ. ನಾನು ಹೇಳಬೇಕೆನ್ನುವಷ್ಟರಲ್ಲಿ ಅವನೇ ಹೇಳಿದ-
“ಪ್ರಭಾಳನ್ನ ನಾನು ಪ್ರೀತಿಸಲಿಲ್ಲ. ಆಕೆಯ ಜೀವನದಲ್ಲಿ ಅವಳ ಅಮ್ಮ ಎಲ್ಲೋ ಕಳೆದುಬಿಟ್ಟಳು. ಇದೆಲ್ಲದರಿಂದ ಮುಕ್ತನಾಗಲು ಆಕೆಯನ್ನ ಕಾವಾಗೆ ಕರೆತರದೆ ಬೇರೆ ವಿಧಿಯಿರಲಿಲ್ಲ. ಆಕೆ ನನ್ನನ್ನೆಂದೂ ಒಪ್ಪಿಕೊಂಡಿರಲಿಲ್ಲ. ಮೊನ್ನೆ ತಾನೆ ನಾನು ಅಪ್ಪನಾದೆ. ಈ ನವಿರಾದ ಸಂಬಂಧ ನಿನ್ನ ಕೊಡುಗೆ. ನೀನು ಮಾಡಿದ ದೊಡ್ಡ ಸಹಾಯ. ನಾನು ಆಥೆಂಟಿಕ್ ಆಗಲು ಕೇವಲ ಒಂದು ಉಪಾಯವಷ್ಟೇ ಉಳಿದಿದೆ. ಪ್ರಭಾ ನನಗೆ ಎಲ್ಲವನ್ನೂ ಹೇಳಿದ್ದಾಳೆ. ಅವಳನ್ನ ಮದುವೆಯಾಗು. ಮುಂದಿನ ತಿಂಗಳೇ ಆಯಿತಲ್ಲವೇ?…”
ನಾನು ಸುಮ್ಮನಿದ್ದೆ. ಒಳಗಿನಿಂದ ಅಡುಗೆಯವ ಟೀ ಕಪ್ಪುಗಳನ್ನ ತಂದು ಟೇಬಲ್ ಮೇಲಿಟ್ಟ. ಡ್ರ್ಯಾಗನ್ ಚಿತ್ರಿಸಿದ್ದ ಟೀ ಕಪ್ಪುಗಳು. ಕುತೂಹಲದಿಂದ ನೋಡುತ್ತಿದ್ದೆ. ಇನ್ನೊಂದರ ಮೇಲೆ ಸಾಗುತ್ತಿರುವ ದೋಣಿ. ವಿಹ್ವಲನಾದೆ. ನನ್ನನ್ನ ಹೇಗೆ ಮುಳುಗಿಸಿಬಿಡುತ್ತವೆ ಕಲೆಯ ಕಂಪನಗಳು. ಅಮ್ಮನಿಂದ ಶುರುವಾದ ಕಂಪನಗಳು ಪ್ರಭಾಳಲ್ಲಿ ಮೂರ್ತವಾಗುವ ಹೊತ್ತಿನಲ್ಲಿ ಹೇಗೆ ಬ್ಲರ್ ಆಗುತ್ತವೆ? ಈಗ ಸಂಕಷ್ಟ. ನಾನೀಗ ವಾಸುದೇವನಿಗೆ ಇದೆಲ್ಲವನ್ನ ಹೇಳದೇ ಮುಕ್ತನಾಗಲಾರೆ. ಕಲಾವಿದನಾಗಲಾರೆ. ಟೀ ಕಪ್ಪಿನಿಂದ ಒಂದು ಸಿಪ್ ಹೀರಿ, ನನ್ನ ಮಾತುಗಳಿಗಾಗಿ ಕಾಯುತ್ತಿದ್ದ ವಾಸುದೇವನಿಗೆ ಹೇಳಿದೆ-
“ನಾನು ಧಾರವಾಡದ ಹತ್ತಿರದವನು. ನನ್ನ ಅಮ್ಮ ಮದುವೆಯಾಗಲಿಲ್ಲ. ಅದೇ ಅವಳು ಮಾಡಿದ ದೊಡ್ಡ ತಪ್ಪು. ಅವತ್ತು ಕೆರೆಯ ದಡದಲ್ಲಿ ಬಟ್ಟೆ ಒಗೆಯುವಾಗ ಒಬ್ಬನನ್ನ ನೋಡಿದಳಂತೆ. ಪೇಂಟಿಂಗ್ ಮಾಡುತಿದ್ದ…”
ವಾಸುದೇವನ ಕಣ್ಣುಗಳು ಅಚ್ಚರಿಯಿಂದ ಹೊರಳಿದವು,
“ಮುಂದೆ?”
“ಅವನಿಗೂ ಆಕೆ ಇಷ್ಟವಾಗಿದ್ದಳು. ಅವಳನ್ನೇ ಚಿತ್ರಿಸಿದ- ಬಟ್ಟೆ ಒಗೆಯುತ್ತಿರುವ ಹುಡುಗಿ, ಪೈರನು ಕೊಯ್ಯುತ್ತಿರುವ ಹುಡುಗಿ, ಮಳೆಯಲ್ಲಿ ಲಂಗವನ್ನೆತ್ತಿ ಓಡುತ್ತಿರುವ ಸುಂದರ ಬೆಡಗಿ…”
ಇಷ್ಟು ಹೇಳುತ್ತಿದ್ದಂತೆ ಅವನ ಮುಖ ಕಳೆಗಟ್ಟಿತು. ಕಣ್ಣಿನಲ್ಲಿ ನೀರು ತುಂಬಿ ಬಂತು. ನನ್ನ ಕೈಹಿಡಿದುಕೊಂಡು ಮಕ್ಕಳಂತೆ ಅಳಲು ಶುರುಮಾಡಿದ. ಅದಾದ ಮೇಲೆ ಸ್ವಲ್ಪ ನೀರವದಲ್ಲಿ ಸುಮ್ಮನೆ ಕೂತೆವು. ಅಷ್ಟಾದ ಮೇಲೆ ತನ್ನ ಡ್ರೈವರ್ಗೆ ನನ್ನನ್ನ ಕಳುಹಿಸಿ ಬರಲು ಕಳಿಸಿದ. ಆತಂಕದಲ್ಲಿ ನಾನು ಏನೂ ತೋಚದವನಾದೆ. ದುಃಖದಲ್ಲಿ ಬಿಕ್ಕಿದೆ. ನನ್ನ ಜೀವನದಲ್ಲಿ ನಾನೂ ವಾಸುದೇವನಂತೆ ಎಡಬಿಡಂಗಿಯಾದೆ. ನಾನೆಂದೂ ಚೇತರಿಸಿಕೊಳ್ಳಲಾಗದಂತಹ ಗಾಯಕ್ಕೆ ತುತ್ತಾದೆ. ಆದರೆ ನಾನು ಆಥೆಂಟಿಕ್ ಆದೆ. ವಾಸುದೇವ್ ಹಾಗೆಯೇ ಉಳಿದುಬಿಟ್ಟ. ಮುಂದೆ ಇನ್ನೇನಾಗಬಹುದೋ ಎಂದು ವಿಹ್ವಲನಾಗಿ ತಡೆಯಲಾರದೇ ನಿದ್ದೆ ಗುಳಿಗೆಯನ್ನ ನುಂಗಿದೆ. ಯಾವಾಗ ನಿದ್ದೆ ಬಂದಿತೋ ತಿಳಿಯಲೇ ಇಲ್ಲ.
*****
ಮಾರನೇ ದಿನ ತುಂಬಾ ಭಾರವಾಗಿತ್ತು. ಕಾಲೇಜಿಗೆ ಹೋಗುವಾಗ ಕೋಗಿಲೆಯ ಕೂಗು. ಗೊರವಂಕಗಳ ಕೂಗು. ನೆನ್ನೆ ರಾತ್ರಿಯ ಸದ್ದಿಗಿಂತ ಇದೆಷ್ಟು ಭಿನ್ನವಾದುದು. ರಾತ್ರಿಯ ವೇಳೆಯಲ್ಲಿ ಗೂಳಿಟ್ಟ ನಾಯಿಗಳು- ಎಷ್ಟು ವಿಚಿತ್ರ. ಹೀಗೆ ಏನೇನೋ ವಿಚಾರಗಳಲ್ಲಿ ಕಾಲೇಜು ತಲುಪಿದೆ. ಎಲ್ಲೆಡೆ ನೀರವತೆ. ಕಡುಮೌನ. ಯಾವ ವಿದ್ಯಾರ್ಥಿಯ ಸುಳಿವೂ ಇಲ್ಲ. ಅಷ್ಟರಲ್ಲಿ ಪ್ರಭಾ ಅಳುತ್ತಾ ಓಡಿಬಂದು ತಬ್ಬಿ ‘ಅಪ್ಪಾʼ ಎಂದಳು. ನಾನು ಏನಾಯಿತು ಎಂಬಂತೆ ಗೆಳೆಯನೆಡೆಗೆ ನೋಡಿದೆ. ‘ವಾಸುದೇವ್ ಬಣ್ಣಗಳಲ್ಲಿ ಲೀನವಾದರುʼ ಎಂದಳು. ನಾನು ಮತ್ತೆ ಕುಸಿದೆ. ವಾಸುದೇವ್ ನನ್ನ ಜೀವನದಲ್ಲಿ ಸತ್ಯವಾಗಲೇ ಇಲ್ಲ. ಸಂಕೀರ್ಣವಾಗಿದ್ದ ಪ್ರಶ್ನೆಯೇ ಅಳಿಸಿಬಿಟ್ಟಿತು. ಅಮ್ಮನಿಗೆ ಇದ್ಯಾವುದನ್ನೂ ಹೆಳಲಾರೆ. ಬಣ್ಣಗಳಲ್ಲಿ ವಿಕಾಸವಾಗಬೇಕಿದ್ದ ವಿಚಾರಗಳು ಪರಿಹಾರಗಳು ಬಣ್ಣಗಳಲ್ಲಿಯೇ ಲೀನವಾದವು. ಕ್ಯಾನವಾಸಿನ ಮೇಲೆ ವಾಸುದೇವ್. ಆತ ಯೋಗಿ. ತಾನು ತಪ್ತ. ಹೇಗೆ ಜವಾಬ್ದಾರಿಗಳನ್ನ ಆತ ಸಮಾಧಿಯಾಗಿಸಿದ? ವಾಸುದೇವ್ ತೀರಿಹೋದನೆ? ನಂಬಲಾಗಲೇ ಇಲ್ಲ. ಪ್ರಭಾ ನನ್ನ ಕೈಹಿಡಿದು ಕರೆದೊಯ್ದಳು. ವಾಸುದೇವ್ ದೊಡ್ಡ ದೊಡ್ಡ ಕಲಾಕಾರರ ಹಾಗೂ ಪ್ರೀತಿಯ ಶಿಷ್ಯವೃಂದದ ನಡುವೆ ಉಸಿರಾಡದೇ ಮೌನವಾಗಿ ಮಲಗಿದ್ದ. ನನಗೆ ಕಿರುಚಾಡಬೇಕೆನ್ನಿಸಿತು. ಅತ್ತು ಗೋಳಾಡಬೇಕೆನ್ನಿಸಿತು. ಅದು ಸಾಧ್ಯವಿರಲಿಲ್ಲ. ಪ್ರಭಾಳ ದುಃಖದ ತೀವ್ರತೆಯನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಿದ್ದುದು ನನಗೊಬ್ಬನಿಗೆ. ಆಕೆಯನ್ನ ತಬ್ಬಿದೆ, ಕಂಗಳಲ್ಲಿ ನೀರು ತುಂಬಿಕೊಂಡು.
ನಾನು ಪ್ರಭಾಳಿಗೆ ಸತ್ಯವನ್ನ ಹೇಳಬೇಕು ಎನ್ನುವಷ್ಟರಲ್ಲಿ ವಾಸುದೇವ್ ನನ್ನನ್ನ ಅನಾಥನನ್ನಾಗಿಸಿ ಶುಷ್ಕನನ್ನಾಗಿಸಿಬಿಟ್ಟ. ನಾನು ತಪ್ತನಾದೆ. ಮೂಕರೋಧನೆಯಲ್ಲಿ ಮುರುಟಿಹೋದೆ. ವಾಸುದೇವನ ಮನೆಯಲ್ಲಿಯೇ ಪ್ರಭಾ ಇರುತ್ತಿದ್ದಳು. ನನ್ನನ್ನೂ ಕರೆದಳು, ಹೋದೆ. ಆತ ಸಾಯುವ ಹಿಂದಿನ ದಿನ ನಾವು ಮಾತನಾಡಿದ್ದನ್ನ ಪ್ರಭಾಳಿಗೆ ಹೇಳಬೇಕೇ?… ಇಲ್ಲ ಬೇಡ. ಅವಳನ್ನ ನಾನು ನೋಯಿಸಲಾರೆ. ನಾನು ವಾಸುದೇವನ ಪೇಂಟಿಂಗ್ ಗಳನ್ನೆ ನೋಡುತ್ತ ಕಣ್ತುಂಬಿಕೊಂಡು ನಿಂತಿದ್ದೆ. ಹೇಗೆ ನನ್ನ ಭಾವನೆಗಳು ಸಿಡಿಮದ್ದಿನ ಸದ್ದಿಗೆ ಹಾರಿಹೋಗುವ ಹಕ್ಕಿಗಳಂತೆ ಚೆಲ್ಲಾಡಿಹೋದವು. ವಾಸುದೇವನ ಮನೆಯ ಗೋಡೆಗಳ ಮೇಲೆ ಮೂರ್ತವಾಗಿದ್ದ ಅಮ್ಮ. ಇದನ್ನೆಲ್ಲ ಹೇಗೆ ಅರಗಿಸಿಕೊಳ್ಳುವುದು?!…
ಪ್ರಭಾ ನನ್ನನ್ನ ತಬ್ಬಿದಳು. ಆಕೆಯ ದುಃಖದಲ್ಲಿ ಇವ್ಯಾವ ಭಾವನೆಗಳೂ ದೊಡ್ಡವಲ್ಲ. ಆಕೆಗೆ ಗೊತ್ತೂ ಇಲ್ಲ. ಗೊತ್ತಾಗುವುದೂ ಬೇಡ. ಆಕೆ ನನ್ನನ್ನ ಬೆಡ್ ರೂಮಿಗೆ ಕರೆದೊಯ್ದಳು. ನನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿದಳು. ನಾನವಳ ಹಣೆಗೆ ಮುತ್ತಿಕ್ಕಿದೆ. ಆಕೆಯನ್ನ ಮಲಗಿಸಿ ನಾನು ಸಿಗರೇಟ್ ಹೊತ್ತಿಸಿ ಸುಮ್ಮನೆ ಕುಳಿತೆ.
ಮಾರನೇ ದಿನ ಮನೆಯ ಹಿಂಭಾಗದಲ್ಲಿ ತೋಟದಾಚೆ ಹರಿಯುತ್ತಿದ್ದ ನದಿಯೆಡೆಗೆ ಹೋಗಿ ನಿಂತೆ. ಪ್ರಭಾ ಅದ್ಯಾವಾಗ ಅಲ್ಲಿಗೆ ಬಂದಳೋ?!… ನನ್ನ ಕೈ ಹಿಡಿದು,
“ನನ್ನ ಬಿಟ್ಟು ಎಲ್ಲಿಗೂ ಹೋಗಬೇಡ” ಎಂದಳು,
ನಾನು “ಇಲ್ಲ” ಎಂದೆ.
“ನಾನೆಂದಿಗೂ ನನ್ನ ಮಗನನ್ನ ಕಲಾವಿದನನ್ನಾಗಿಸುವುದಿಲ್ಲ” ಎಂದಳು.

ಜೀವನದಲ್ಲಿ ಕಲಿಸಿಟ್ಟ ಬಣ್ಣಗಳನ್ನ ಬೇರ್ಪಡಿಸುವ ತವಕ. ಆದರದು ಸಾಧ್ಯವಿಲ್ಲ. ಹೇಗೆ ಇದು ಇಷ್ಟೊಂದು ಸಂಕೀರ್ಣ? ಹುಚ್ಚಿಯಾಗಿ ಓಡಿಹೋದ ಪ್ರಭಾಳ ತಾಯಿ. ಕೊನೆಗೂ ಸತ್ಯವಾದ ಪ್ರಭಾಳ ಪ್ರೀತಿ. ತನ್ನ ಪ್ರಿಯಕರನ ದಾರಿ ಕಾಯುತ್ತ ಕಣ್ಣೀರಿಡುವ ನನ್ನ ತಾಯಿ. ಯೋಗಿಯಾದ ವಾಸುದೇವ್. ತಪ್ತನಾದ ನಾನು. ಹೀಗಂದುಕೊಳ್ಳುತ್ತ ಆಕಾಶದೆಡೆಗೆ ನೋಡಿದೆ, ಕಾಮನಬಿಲ್ಲು. ನೀರಿನ ಹನಿಗಳಿಂದ ಹಾದು ಬಿಳಿ ಬಣ್ಣದ ಬಿಸಿಲುಕೋಲಿನಿಂದ ಬೇರ್ಪಟ್ಟ ಬಣ್ಣಗಳು…


