Advertisement
ಶಬ್ದ ಸಂವೇದನೆಯ ಒಳ ವಿನ್ಯಾಸ “ಘಾಚರ್ ಘೋಚರ್”: ದೇವಿಕಾ ನಾಗೇಶ್‌ ಬರಹ

ಶಬ್ದ ಸಂವೇದನೆಯ ಒಳ ವಿನ್ಯಾಸ “ಘಾಚರ್ ಘೋಚರ್”: ದೇವಿಕಾ ನಾಗೇಶ್‌ ಬರಹ

“ಘಾಚರ್ ಘೋಚರ್” ಒಂದು ‘ನೀಳ್ಗತೆ ಎಂದು ಕೃತಿಯ ಲೇಖಕ ವಿವೇಕ ಶಾನಭಾಗ ಕರೆದರೂ ಇದು ಎರಡು ತಲೆಮಾರಿನ ಜೀವನಪಯಣದ ಓಟದಲ್ಲಿನ ಏಳುಬೀಳುಗಳನ್ನು ಪಲ್ಲಟವನ್ನೂ ಅಮೂಲಾಗ್ರವಾಗಿ ದಾಖಲಿಸುತ್ತದೆ. ‘ಘಾಚರ್ ಘೋಚರ್ʼ ಈ ಯುಗಳ ಪದ ನಮ್ಮ ಇಡೀ ಬದುಕೆ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿನಿಧಿಯಂತೆ ಅನುರಣನಗೊಳ್ಳುತ್ತದೆ’ ಎಸ್. ಆರ್. ವಿಜಯಶಂಕರ್ ಮಾತಿದು.  ಆದರೆ ಎಪ್ಪತ್ತು ಪುಟಗಳ ಕಿರು ಕಾದಂಬರಿ ಗಾತ್ರದ ಈ ಕಥೆಯ ಪಾತ್ರಗಳು ಒಂದು ಕುಟುಂಬದ ಭೂಮಿಕೆಯಿಂದ ಹೊರ ಜಗತ್ತಿಗೆ ವಿಸ್ತರಿಸಿಕೊಳ್ಳುತ್ತ ಸಾಗುವ ಚಲನೆ ಮೂಡಿಸುವ ತಲ್ಲಣ ದಂಗು ಬಡಿಸುವಂತಿದೆ.
ವಿವೇಕ ಶಾನಭಾಗ ಕಥಾಸಂಕಲನ “ಘಾಚರ್‌ ಘೋಚರ್”‌ ಕುರಿತು ದೇವಿಕಾ ನಾಗೇಶ್‌ ಬರಹ

“ಘಾಚರ್ ಘೋಚರ್”. ಕನ್ನಡದ ನೆಲವನ್ನು, ಉಸಿರನ್ನು, ಮುಖ್ಯ ಭೂಮಿಕೆಯಾಗಿಸಿಕೊಂಡು ಬರೆದಿರುವ ಕೃತಿ.  ಆರು ಕಥೆಗಳಿರುವ ಅಕ್ಷರ ಪ್ರಕಾಶನ, ಸಾಗರ, ದಶಕದ ಹಿಂದೆ ಪ್ರಕಟಿಸಿರುವ ಲೇಖಕ ವಿವೇಕ ಶಾನಭೋಗ ಬರೆದಿರುವ ಈ ಕೃತಿಗೆ ದಶಕ ಕಳೆದರೂ ಇಲ್ಲಿನ ವಸ್ತು ವಿಷಯಗಳು ಇವತ್ತಿಗೂ ಪ್ರಸ್ತುತವಾಗಿದೆ. ಇಲ್ಲಿನ ಕಥಾ ಪಾತ್ರಗಳ ದಿನ ನಿತ್ಯದ ಜೀವನದಲ್ಲಿ ಜಾಗತೀಕರಣದ ದಟ್ಟ ಪ್ರಭಾವ ಆಗಿದ್ದರೂ ಸಾಂಪ್ರದಾಯಿಕ ಚಿಂತನ ಕ್ರಮಗಳಿಂದ ಕುಟುಂಬ ವ್ಯವಸ್ಥೆಯ ಗಟ್ಟಿ ನಂಬಿಕೆಗಳಿಂದ ಅವರಿಗೆ ಬಿಡುಗಡೆ ಆಗಿಲ್ಲ. ಬದಲಾವಣೆ ಜಗದ ನಿಯಮ ಒಪ್ಪಿಕೊಳ್ಳುವುದು ಬಿಡುವುದು  ಅವರವರ  ಮನೋಲಹರಿಗೆ ಸಂಬಂಧ ಪಟ್ಟದ್ದು ಎನ್ನುವ ಸ್ಥಾಯಿಗುಣವೇ ಇಲ್ಲಿರುವ ಬಹುತೇಕ ಎಲ್ಲಾ ಕಥೆಗಳ  ಅಂತರಾಳ.

“ಘಾಚರ್ ಘೋಚರ್” ಒಂದು ‘ನೀಳ್ಗತೆ ಎಂದು ಕೃತಿಯ ಲೇಖಕ ವಿವೇಕ ಶಾನಭಾಗ ಕರೆದರೂ ಇದು ಎರಡು ತಲೆಮಾರಿನ ಜೀವನಪಯಣದ ಓಟದಲ್ಲಿನ ಏಳುಬೀಳುಗಳನ್ನು ಪಲ್ಲಟವನ್ನೂ ಅಮೂಲಾಗ್ರವಾಗಿ ದಾಖಲಿಸುತ್ತದೆ. ‘ಘಾಚರ್ ಘೋಚರ್ʼ ಈ ಯುಗಳ ಪದ ನಮ್ಮ ಇಡೀ ಬದುಕೆ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿನಿಧಿಯಂತೆ ಅನುರಣನಗೊಳ್ಳುತ್ತದೆ’ ಎಸ್. ಆರ್. ವಿಜಯಶಂಕರ್ ಮಾತಿದು.  ಆದರೆ ಎಪ್ಪತ್ತು ಪುಟಗಳ ಕಿರು ಕಾದಂಬರಿ ಗಾತ್ರದ ಈ ಕಥೆಯ ಪಾತ್ರಗಳು ಒಂದು ಕುಟುಂಬದ ಭೂಮಿಕೆಯಿಂದ ಹೊರ ಜಗತ್ತಿಗೆ ವಿಸ್ತರಿಸಿಕೊಳ್ಳುತ್ತ ಸಾಗುವ ಚಲನೆ ಮೂಡಿಸುವ ತಲ್ಲಣ ದಂಗು ಬಡಿಸುವಂತಿದೆ.

(ವಿವೇಕ ಶಾನಭಾಗ)

ಕತೆಯ ಪ್ರಾರಂಭದಲ್ಲಿ ಬರುವ ಕಾಫಿ ಹೌಸ್ ಅಂದರೆ ಬಾರ್ ಅಂಡ್ ರೆಸ್ಟೋರೆಂಟ್ ಆಧುನಿಕತೆಯ ಪ್ರತೀಕ. ಕಥಾನಾಯಕ ಇಲ್ಲಿಗೆ ತನ್ನ ನೋವು ದುಮ್ಮಾನಗಳಿಗೆ ಸಾಂತ್ವನ ಬಯಸಿ  ಧಾವಿಸುತ್ತಿರುತ್ತಾನೆ. ನೊಂದ ಹೃದಯಗಳ ಪಿಸುಮಾತಿಗೆ ಕಿವಿಯಾಗಿ  ಬದುಕಿನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಅಗಾಧ ಸಾಧ್ಯತೆಗಳನ್ನು ಮೌನದಲ್ಲಿ ತೆರೆದಿಡುವ ಸ್ಥಳ ಆಗಿ ಅವನಂತಹ ಎಷ್ಟೋ ಜೀವಗಳಿಗೆ ಇದು ಆಸರೆಯಾಗಿದೆ. ಇಲ್ಲಿನ ವೇಟರ್ ವಿನ್ಸೆಂಟ್ ಸ್ನೇಹಜೀವಿ. ಗ್ರಾಹಕರ ಜೊತೆಗಿನ ಈತನ ಚುಟುಕು ಸಂಭಾಷಣೆಗಳೇ ಎಷ್ಟೋ ಸಲ ಬದುಕಿನ ದಾರಿಯನ್ನು ಸ್ಪಷ್ಟಪಡಿಸುವ ಅಗೋಚರ ಶಕ್ತಿಯಾಗಿ ಭಾಸವಾಗುತ್ತದೆ. “ಬ್ಲಡ್ ಈಸ್ ಥಿಕರ್ ದ್ಯಾನ್ ವಾಟರ್”, “ಎಲ್ಲರ  ಮನೆ ದೋಸೆಯೂ ತೂತೇ ಸಾರ್” ಇತ್ಯಾದಿ ಆತನ ಸಂಭಾಷಣೆಗಳ ಕೆಲವು ತುಣುಕುಗಳು. ಕಥಾನಾಯಕನ ಮನೆಯಲ್ಲಿರುವ ಮೂವರು ಭಯಾನಕ ವ್ಯಕ್ತಿತ್ವಗಳೆಂದರೆ ಅಕ್ಕ ಮಾಲತಿ, ಹೆಂಡತಿ ಅನಿತಾ, ತಾಯಿ ಕುಮುದಾ ಮೂವರಿಗೂ ತಮ್ಮ ತಮ್ಮ ಹೆಚ್ಚುಗಾರಿಕೆ ಮೆರೆಯುವ ಜಿದ್ದಾಜಿದ್ದಿ. ಮನೆ ವ್ಯವಹಾರ ಮಂದಿಯ ಬಾಯಿಗೆ ಕವಳ ಆಗಬಾರದು ಎನ್ನುವ ಮನೆಯ ಗಂಡಸರ ಮೌನವೇ ಇವರ ಬಂಡವಾಳ. ಹಾಗಂಥ ಇಲ್ಲಿ ಸರಿ ತಪ್ಪು ಯಾರದು ಎನ್ನುವ ಪ್ರಶ್ನೆಯಲ್ಲ. ಇಲ್ಲಿರುವ ಪ್ರತಿಯೊಬ್ಬರು  ತಮ್ಮದೇ ಸ್ವಗತಗಳ ಸಿಕ್ಕಿನಲ್ಲಿ ಒದ್ದಾಡುತ್ತ ಉಸಿರುಗಟ್ಟಿದಂತೆ ಬದುಕುತ್ತಿರುವವರು. ಮಾತಿನ ಆಯುಧವನ್ನು ಬಳಸಿ ಗೆದ್ದ ಠೇಂಕಾರ ಹೆಣ್ಣು ಜೀವಗಳದಾದರೆ ಮೌನವನ್ನೆ ಹಾಸು ಹೊದ್ದು ಬದುಕುತ್ತಿರುವ ಕಥಾನಾಯಕನಿಗೆ  ತಾಯಿಯ ಮಡಿಲು ಕಾಫಿ ಹೌಸ್. ಉದ್ಯೋಗ ಸೇರಿಕೊಳ್ಳಬೇಕು ಎಂಬ ಗುರಿ ಇಟ್ಟುಕೊಂಡಿದ್ದ ಕಥಾನಾಯಕನಿಗೆ ‘ಕುಟುಂಬದ ವ್ಯಾಪಾರಕ್ಕೆ ಸೇರಿಕೊಂಡು ಅದನ್ನೇ ವಿಸ್ತರಿಸಿಕೊ…’ ಎನ್ನುವ ಚಿಕ್ಕಪ್ಪನ ಸಲಹೆ ಪ್ರಿಯವಾಗಿ ಅದನ್ನು ನೆಚ್ಚಿಕೊಂಡ. ಆದರೆ ಸಿಕ್ಕಾಪಟ್ಟೆ ಹಣ ಕೊಳ್ಳೆ ಹೊಡೆಯುತ್ತಿರುವ ಸೋನಾ ಮಸಾಲೆ ಕಂಪನಿಯ ಎಲ್ಲ ವ್ಯವಹಾರಗಳನ್ನು ಚಿಕ್ಕಪ್ಪನೇ ನಿರ್ವಹಿಸುತ್ತಾ ಮನೆ ಮಂದಿಯ ಬ್ಯಾಂಕು ಖಾತೆಗಳಿಗೆ ಹಣ ವರ್ಗಾಯಿಸುತ್ತಾ ಒಂದು ರೀತಿ ಎಲ್ಲರನ್ನು ಸೋಮಾರಿಯಾಗಿಸಿದ್ದ.

ಘಾಚರ್ ಘೋಚರ್ ಕಥೆಯ ನಾಯಕನ ಅಪ್ಪ ಸೇಲ್ಸ್ ಮ್ಯಾನ್ ಆಗಿದ್ದವರು. ಚಿಕ್ಕಪ್ಪ ವೆಂಕಟಾಚಲ ‘ಸೋನಾ ಮಸಾಲೆ’ ಎನ್ನುವ ಹೆಸರಿನಲ್ಲಿ ಉದ್ದಿಮೆ ಪ್ರಾರಂಭಿಸಿದ ನಂತರ ಐದು ಜನರಿರುವ ಆ ಕೂಡು ಕುಟುಂಬದ ಸ್ವರೂಪವೇ ಬದಲಾಯಿತು. ಅದೃಷ್ಟ ಲಕ್ಷ್ಮಿ ಕೈ ಹಿಡಿದಂತೆ ಇರುವೆ ಗೂಡಿನಂತಹ ಬಾಡಿಗೆ ಮನೆಯಲ್ಲಿದ್ದ ಈ ಮನೆಯ ಸದಸ್ಯರು ಹೊಸ ಮನೆ ಕಟ್ಟಿ  ಅಲ್ಲಿಗೆ ವಾಸ ಬದಲಿಸಿದರು. ಮಾಲತಿ ಈ ಮನೆಮಗಳು.  ಈಕೆಯ  ವಿವಾಹ ವಿಫಲವಾಗಿ ತವರು ಮನೆಯಲ್ಲಿ ಖಾಯಂ ಆಗಿ ನಿಂತವಳು . ಅನಿತಾ ಕಥಾನಾಯಕನನ್ನು ಮದುವೆಯಾಗಿ ಬಂದ ಮನೆಯ ಸೊಸೆ.

“ಘಾಚರ್ ಘೋಚರ್”  ಬಾಲ್ಯದಲ್ಲಿ ಅನಿತಾ ಮತ್ತು ಅವಳ ತಮ್ಮ  ಮನೆ ತಾರಸಿಯಲ್ಲಿ ಗಾಳಿಪಟ ಹಾರಿಸುವ  ಸಂದರ್ಭದಲ್ಲಿ ಹುಟ್ಟಿಕೊಂಡ ಪದ. ಗಾಳಿಪಟಕ್ಕೆ ಕಟ್ಟಿದ್ದ ದಾರದ ಉಂಡೆಯಿಂದ ನೂಲು ಬಿಡಿಸಿಕೊಳ್ಳಲು ಒದ್ದಾಡುತ್ತಿರುವಾಗ ಹತಾಶೆಯಲ್ಲಿ ಅನಿತಾಳ ತಮ್ಮ ಉದ್ಗರಿಸಿದ ಪದವಿದು.  ನಂತರ ಆ ಮನೆಯಲ್ಲಿ ಮಕ್ಕಳಿಂದ ಪದೇ ಪದೇ ಬಳಸಲ್ಪಟ್ಟ ಈ ಪದ ನಿಧಾನಕ್ಕೆ ಹೆತ್ತವರೂ ಬಳಸುತ್ತಾರೆ.  ಇಡೀ ಕಥೆಯಲ್ಲಿ ಈ ಪದ ಬೆರಳೆಣಿಕೆಯಷ್ಟು ಸಲ ಬಳಕೆಯಾಗಿದೆ ಮತ್ತು ಆ ಪ್ರತಿ ಸಂದರ್ಭವೂ ಗಮನಾರ್ಹ ಸನ್ನಿವೇಶ ಎನ್ನುವುದು ಕುತೂಹಲಕರವಾದದ್ದು.

ಗಡಿಯಾರದ ಮುಳ್ಳಿನಂತೆ ಬದುಕುವ ನೌಕರಷಾಹಿ ಕುಟುಂಬ ಅನಿತಾಳದ್ದು. ನಿಧಾನವೇ ಪ್ರಧಾನ ಎನ್ನುವಂತೆ ಇರುವ ವ್ಯಾಪಾರಸ್ಥರ ಕುಟುಂಬ ಕಥಾನಾಯಕನದು. ಈ ಎರಡು ಕುಟುಂಬಗಳ ನಡುವಿನ ಅಜಗಜಾಂತರ ವ್ಯತ್ಯಾಸವೇ ಒಂದು ಅಧ್ಯಯನ ಯೋಗ್ಯ ಸಂಗತಿ. ಪರಸ್ಪರರ ನೈತಿಕತೆಯ ಮನೋಭೂಮಿಕೆಯ ನಡುವಿನ ಕಂದಕವನ್ನು ಕಥೆ ವಿಶ್ಲೇಷಿಸುವ ರೀತಿ ಕುತೂಹಲಕಾರಿಯಾದದ್ದು.

ಕಾಯಕವೇ ಕೈಲಾಸ ಎಂದು ನಂಬಿದ ಕುಟುಂಬದ ಕುಡಿಯಾದ ಅನಿತಾಳಿಗೆ ಸೋನಾ ಮಸಾಲೆ ಕಂಪನಿಯ 50% ಪಾಲುದಾರನಾದ ತಂದೆಯ ಮಗ ತನ್ನ ಗಂಡ  ಕಂಪನಿಯಲ್ಲಿ ಯಾವುದೇ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವುದು ತಿಳಿದಾಗ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಅದು ನುಂಗಲಾರದ ಬಿಸಿ ತುಪ್ಪವಾಗಿ ಘಾಸಿ ಉಂಟು ಮಾಡುತ್ತದೆ. ವ್ಯಾಪಾರವಾದರೆ ವ್ಯಾಪಾರ, ಕೆಲಸವಾದರೆ ಕೆಲಸ, ಯಾವುದರಲ್ಲಾದರೂ ಗಂಭೀರವಾಗಿ ತೊಡಗಿಕೊಳ್ಳಲಿ ಆಗ ಸ್ವಾಭಿಮಾನದಿಂದ ತಾನೂ ಬದುಕಬಹುದು ಎನ್ನುವ ಆಶೆ ಅವಳದು. ಸೋನಾ ಮಸಾಲೆ ಕಂಪನಿಯ ಮೈದುನನ ದುಡಿಮೆಯನ್ನು ಮನೆಯೊಡತಿ ಕುಮುದಾ ಮಗಳು ಮಾಲತಿ, ಕಥಾನಾಯಕ ಸೇರಿದಂತೆ ಎಲ್ಲರೂ ಕುಟುಂಬದ ಆಸ್ತಿ ಎಂದು ಪರಿಗಣಿಸಿ ಅದನ್ನು ಅನುಭವಿಸುವುದು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ಆದರೆ ಇದು ಅನಿತಾಳಿಗೆ ಯಾಕೋ ಸಾಧ್ಯವಾಗುತ್ತಿಲ್ಲ. ಹೀಗೆ ಈ ಕೂಡು ಕುಟುಂಬದ ಮೂವರು ಮಹಿಳೆಯರದೂ ಗಟ್ಟಿ ವ್ಯಕ್ತಿತ್ವವೇ. ಮತ್ತು ಅವರಿಗೆ ಅವರದೇ ಆದ ಒಲವು ನಿಲುವುಗಳಿದ್ದವು.

ಮನೆಯ ಆಡಳಿತದ ಚುಕ್ಕಾಣಿ ಹಿಡಿದವಳು ಅಮ್ಮ ಕುಮುದಾ. ಮನೆಯೇ ಅವಳ ಜೀವಾಳ. ಮೈದುನನ ಅವಿರತ ಪರಿಶ್ರಮದ ಫಲ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ ಎಂದು ನಂಬಿದವಳು. ತನ್ನ ಗಂಡನಿಗೆ ನಿಷ್ಠೆಯಿಂದ ಇದ್ದಷ್ಟೇ ಸಹಜವಾಗಿ ಕುಟುಂಬದ ಆರ್ಥಿಕತೆ ದಿಕ್ಕು ಬದಲಿಸಿದಾಗ ಸೋನಾ ಮಸಾಲೆ ಕಂಪನಿಯ ಹಿತಾಸಕ್ತಿಗೆ ಅನುಗುಣವಾಗಿ ಮೈದುನನಿಗೆ ನಿಷ್ಠೆಯಿಂದ ಇದ್ದವಳು. ಮೈದುನನಿಗೆ ಒಲಿದ ಹೆಣ್ಣು ಮಗಳು ಸುಹಾಸಿನಿ ಮನೆಯ ಬಾಗಿಲಿಗೆ ಬಂದು ತನ್ನ ಪ್ರಿಯಕರನನ್ನು ವಿಚಾರಿಸಿದಾಗ ಮೈದುನನ ಕಣ್ಣ ಸನ್ನೆಯಂತೆ ಆಕೆಯನ್ನು ಮನೆಯೊಳಗೆ ಬರಲು ಬಿಡದೆ ಹೀನಾಯವಾಗಿ ನಡೆಸಿಕೊಂಡು ಹೊರಗೆ ಅಟ್ಟುತ್ತಾಳೆ. ಆಕೆ ತನ್ನ ಪ್ರಿಯಕರನಿಗೆ ತಂದ ಖಾದ್ಯದ ಪಾತ್ರೆಯನ್ನು ಮನೆ ಜಗಲಿಯಲ್ಲಿ ಅವಳೆದುರೇ ಚೆಲ್ಲಿದ್ದಾಳೆ.  ಆಗ ಆಕೆಗೆ ಕುಟುಂಬದ ಮರ್ಯಾದೆಯೇ ಮುಖ್ಯವಾಗಿತ್ತು ಹೊರತು ತನ್ನಂತಹದ್ದೇ ಒಬ್ಬಳು ಹೆಣ್ಣು ಮಗಳ ದಯನೀಯ ಸ್ಥಿತಿ ಮುಖ್ಯವಾಗಿರಲಿಲ್ಲ.

ಮನೆಯ ಸೊಸೆಯಾದ ಅನಿತಾಳಿಗೆ ತನ್ನ ಕಣ್ಣೆದುರೇ ನಡೆದ  ಈ ಎಲ್ಲ ಘಟನೆಗಳು ಉಂಟು ಮಾಡಿದ ಪರಿಣಾಮ ಆಘಾತ ಹುಟ್ಟಿಸುವಂಥದ್ದು. ಇದು ಸ್ವತಃ ತನ್ನ ಗಂಡನ ಪ್ರಾಮಾಣಿಕತೆಯ ಬಗ್ಗೆಯೂ ಆಕೆಗೆ ಸಂಶಯ ಮೂಡಿಸಿತ್ತು. ಅವಳ ನ್ಯಾಯ, ನೀತಿ, ತಪ್ಪು ಸರಿ ಪರಿಭಾಷೆಗಳು ಮನೆಯವರಿಗಿಂತ ಭಿನ್ನವಾದದ್ದರಿಂದ ಈ ಗುದ್ದಾಟದಲ್ಲಿ ಗಂಡನ ಮನೆಯನ್ನು ತನ್ನ ಮನೆಯೆಂದು ಒಪ್ಪಿಕೊಳ್ಳದಂತಹ  ದೊಡ್ಡ ಕಂದಕವನ್ನು ಇಡೀ ಕುಟುಂಬದ ಸದಸ್ಯರು ಮತ್ತು ಅವಳ ನಡುವೆ ಉಂಟುಮಾಡಿತ್ತು.

ಕುಟುಂಬ ರಾಜಕಾರಣವು ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ… ಹಣ, ಸ್ವಪ್ರತಿಷ್ಠೆಯ ಮುಂದೆ ನೈತಿಕತೆ ಮಾನವೀಯತೆ ಹಳ್ಳ ಹತ್ತುವುದನ್ನು ಕಥೆಯು ಸೂಚ್ಯವಾಗಿ ಹೇಳುತ್ತದೆ. ಅಭಿವೃದ್ಧಿ ಎಂದರೆ ಏನು? ಎನ್ನುವ ಗಾಢ ವಿಷಾದದೊಂದಿಗೆ ಕಥೆ ಕೊನೆಯಾಗುತ್ತದೆ. ತವರಿಗೆ ಹೋಗಿದ್ದ ಅನಿತಾ ಹಿಂದೆ ಬರಲಿಲ್ಲ ಯಾಕೆ ಎನ್ನುವ ಪ್ರಶ್ನೆಯೂ ಭಷ್ಟ ವ್ಯವಸ್ಥೆಯಲ್ಲಿ ಅವಳ ಪ್ರಶ್ನೆಸುವ ಮನೋಭಾವವೇ ಅವಳಿಗೆ ಹೇತುವಾಗಿರಬಹುದಲ್ಲ… ಎಂಬ ಸಂದೇಹಕ್ಕೂ ಎಡೆ ಮಾಡುತ್ತದೆ.

ಕಥೆಯಲ್ಲಿ ಕಾಫಿ ಹೌಸ್‌ನ ವೇಟರ್ ವಿನ್ಸೆಂಟ್‌ನ ಪುಟ್ಟ ಪುಟ್ಟ ಸಂಭಾಷಣೆಗಳು ಈತ ಅನುಭಾವ ಪರಂಪರೆಯ ಕೊನೆಯ ಕೊಂಡಿಯೋ ಎನ್ನುವಂತೆ ಗ್ರಾಹಕ ದೇವರುಗಳನ್ನು ಸಂತೈಸುವ ಸಂತ ಈತ ಇರಬಹುದಲ್ಲ ಎನ್ನುವ ಅಚ್ಚರಿಗೂ ಕಾರಣವಾಗಿಸುತ್ತದೆ.

“ಕೇವಲ ಸಂಸಾರಿಕ ರಗಳೆ ಅಥವಾ ಗೋಳು ಕರೆಯಾಗಬಹುದಾಗಿದ್ದ ಕಥನವನ್ನು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿ ಬಿಡುತ್ತದೆ. ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಸಾಧ್ಯತೆ ಮತ್ತು ಕಷ್ಟಗಳ ಬಗೆಗಿನ ಧ್ಯಾನವಾಗಿ ಬಿಡುತ್ತದೆ” ಎನ್ನುವ ಟಿ.ಪಿ ಅಶೋಕರ ಮಾತುಗಳು ಇಡೀ ಕಥಾನಕದ ಓಘದ ಹಿನ್ನೆಲೆಯಲ್ಲಿ ಅತಿ ಮುಖ್ಯವಾಗುತ್ತದೆ.

ಒಟ್ಟಿನಲ್ಲಿ ಘಾಚರ್ ಘೋಚರ್, ನೀಳ್ಗತೆ ಒಂದು ಕುಟುಂಬ ಆ ಮೂಲಕ ಸಮಾಜದ ತಲ್ಲಣಗಳನ್ನು  ಸಶಕ್ತವಾಗಿ ಒಡಮೂಡಿಸುವ ಮೂಲಕ ಎಲ್ಲ ಕಾಲಕ್ಕೂ ಸಲ್ಲುವ ಪುಟ್ಟ ಕಾದಂಬರಿ ಸ್ವರೂಪದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಕೃತಿಯಲ್ಲಿರುವ ಉಳಿದ ಐದು ಕಥೆಗಳಲ್ಲಿ  ‘ನಿರ್ವಾಣ’ ಸಾಫ್ಟ್‌ವೇರ್ ಜಗತ್ತಿನ ಹಳವಂಡಗಳನ್ನು ತೆರೆದಿಡುವ ಪುಟ್ಟ ಕಥೆ. ಇವರ ಅಂಗೈ ಒಳಗೆ ಜಗತ್ತು ಇದ್ದರೂ “ಹೇಳಿಕೊಳ್ಳುವುದು ಮುಖ್ಯ ಕೇಳಿಸಿಕೊಳ್ಳುವವರು ಇರುವಾಗ” ಎನ್ನುವ ಮಾತು ವರ್ತಮಾನದ ಮಕ್ಕಳದ್ದೇ…. ವೃದ್ಧರದ್ದೇ… ಎಂದುಕೊಂಡರೆ ಅಲ್ಲ ಇದು ಸದ್ಯದ ಇಡೀ ಮಾನವ ಕುಲದ್ದು… ನಿಟ್ಟುಸಿರು ಎನ್ನುವಂತೆ ಕಿವಿಗೆ ಅಪ್ಪಳಿಸುತ್ತದೆ. ಅಪರಿಚಿತರಿಬ್ಬರೂ ಎದುರುಬದುರು ಕೂತು  ವಿಸ್ಕಿ ಕುಡಿಯುತ್ತ ಯಾರೀತಾ ಇರಬಹುದು ಎಂದು ಸಂದೇಹಿಸುತ್ತಲೇ ಕಳೆದ  ಇಡೀ ಮಾತುಕತೆ ಕೊನೆಯಾಗುವುದು “ಹೂ ಆರ್ ಯೂ ಬಾಸ್ಟರ್ಡ್‌” ಎನ್ನುವ ಉದ್ಘಾರದೊಂದಿಗೆ…!

“ಕೋಳಿ ಕೇಳಿ ಮಸಾಲೆ?” ಈ ಸಂಕಲನದ ಮತ್ತೊಂದು ಕಥೆ. ‘ಕೋಳಿ ಕೇಳಿ ಮಸಾಲೆ ಅರೆಯುತ್ತಾರೆಯೇ’ ಎಂದಿದ್ದರೆ ಕನ್ನಡದ ಗಾದೆ ಮಾತು ಆಗುತ್ತಿತ್ತು. ‘ಕೋಳಿ’ ಕಥಾನಾಯಕನ ಸಹಪಾಠಿಯ ಅಡ್ಡ ಹೆಸರು ಈ ಕಥೆಯಲ್ಲಿ  ಮಕ್ಕಳ ಮೇಲಿನ ದೌರ್ಜನ್ಯ ಎಂದು ನಾವು ಏನೆಲ್ಲಾ ಹೇಳುತ್ತೇವೆಯೋ  ಆ ಎಲ್ಲವನ್ನು ಶಿಕ್ಷಕರು ಸಹಪಾಠಿಗಳು ನೆರೆಹೊರೆಯವರಿಂದ ಅನುಭವಿಸುತ್ತಿದ್ದ ಅಮಾಯಕ ಹುಡುಗ ‘ಕೋಳಿ’. ಓದು ಮತ್ತು ದುಡಿಮೆಯನ್ನು ಒಟ್ಟಿಗೆ ನಿಭಾಯಿಸುತ್ತಿದ್ದ ಈ ಪುಟ್ಟ ಹುಡುಗ ಕಥಾನಾಯಕನಿಗೆ ಮುಖಾಮುಖಿಯಾಗುವುದು ಇಬ್ಬರೂ ದೊಡ್ಡವರಾದ ನಂತರ ಒಮ್ಮೆ ಕಥಾನಾಯಕ  ವಾಕಿಂಗ್ ಹೋಗಿದ್ದಾಗ  ಒಂದು ಪಾರ್ಕ್ ಆವರಣದಲ್ಲಿ. ಆದರೆ ಇಂದು ಅದೇ ‘ಕೋಳಿ’ ಎಷ್ಟು ಅಗಾಧವಾಗಿ ಬೆಳೆದಿದ್ದನೆಂದರೆ ತನ್ನ ಬಗ್ಗೆ ಕಥೆ ಬರೆಯಬಾರದು ಎಂದು ಕಥಾನಾಯಕನಿಗೆ  ಧಮ್ಕಿ ಹಾಕುವಷ್ಟು … ಇಡೀ ಕಥೆ ಮಾನವ ಹಕ್ಕುಗಳ ಉಲ್ಲಂಘನೆಯ ವಿವಿಧ ಸ್ವರೂಪವನ್ನು ತೆರೆದಿಡುವ ಮೂಲಕ ಮುಖ್ಯ ಕತೆಯಾಗಿ ಕಣ್ಣಿಗೆ ಕಟ್ಟುತ್ತದೆ.

“ರಿಸ್ಕ್ ತಗೊಂಡು” ಕತೆಯಲ್ಲಿ ಬರುವ  “ಪ್ರೀತಿನೇ ಉಳಿಯೋದು ಕಾಮ ಇನ್ಸಿಡೆಂಟಲ್” ಎನ್ನುವ ವಾಕ್ಯ ಮೇಲು ನೋಟಕ್ಕೆ ಉಡಾಫೆಯ ಹಾಗೆ ಅನ್ನಿಸಿದರೂ ಹಾಗಾದರೆ ಮದುವೆ ಮಕ್ಕಳು ಎನ್ನುವ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಹುಟ್ಟುವ ಸಂದೇಹ ಮೂಡಿಸುತ್ತದೆ. ಇದರ ಬೆನ್ನಲ್ಲಿಯೇ ಹುಡುಗಿ ಪ್ರೀತಿಸಿದವನನ್ನು ಮದುವೆ ಆಗುವ ರಿಸ್ಕ್ ತಗೊಂಡು ಗುರುವನ್ನು ಮತ್ತೆ ಭೇಟಿಯಾಗಲು ಬಂದಿದ್ದಳು.

“ಸುಧೀರನ ತಾಯಿ”. ಈ ಸಂಕಲನದ ಇನ್ನೊಂದು ಮುಖ್ಯ ಕಥೆ. ಸರೋಜಿನಿ ಜಾಣೆ ಸುಂದರಿ. ಗಂಡಿಗೆ ‘ಎತ್ತರ’ ವರವಾದರೆ ಹೆಣ್ಣಿಗೆ ಅದುವೇ ಶತ್ರುವಾಗುತ್ತದೆ ಎನ್ನುವುದಕ್ಕೆ ಈ ಕಥೆಯಲ್ಲಿ ಸರೋಜಿನಿಯ ವಿವಾಹ ಸಾಕ್ಷಿ. ಕೈ ತೊಳೆದು ಮುಟ್ಟಬೇಕು ಅನ್ನುವಂತಹ ಸುಂದರಿ ಹುಡುಗಿಯನ್ನು ಆಕೆ ಎತ್ತರ ಇದ್ದಾಳೆ ಎನ್ನುವ ಕಾರಣದಿಂದ ವಿವಾಹವಾದವ ಉಪ್ಪ. ಸರೋಜಿನಿಯನ್ನು ಮದುವೆಯಾಗುವುದಕ್ಕೆ ಅವ ಆಕಿಗಿಂತ ಎತ್ತರ ಇದ್ದಾನೆ ಎನ್ನುವುದು ಬಿಟ್ಟರೆ ಬೇರೆ ಯೋಗ್ಯತೆಯೇನೂ ಅವನಿಗಿರಲಿಲ್ಲ. ಪೆದ್ದು ಗಂಡನನ್ನು ಸಂಭಾಳಿಸುವುದಕ್ಕೆ ಊರ ಜನ ಅವನಿಗೆ ಗೌರವ ಕೊಡುವುದಕ್ಕೆ  ಬೇಕಾಗುವ ಯೋಗ್ಯತೆಯನ್ನು ಆತ ಗಳಿಸಿಕೊಳ್ಳಲಿ ಎಂಬ ಆಶಯದಲ್ಲಿ ಅವನನ್ನು ಪಳಗಿಸಲು   ಸರೋಜಿನಿ ಸಾಕಷ್ಟು ಪ್ರಯತ್ನಿಸಿದಳು.

ಸುಧೀರನ ತಾಯಿಯಾದ ನಂತರ ಆಕೆಯ ಬದುಕಿನಲ್ಲಿ ಇನ್ನಿಲ್ಲದ ಉತ್ಸಾಹ ಚಿಮ್ಮತೊಡಗಿತು. ವರದಾಂಬ ಪ್ರೆಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡ ಆಕೆ ಗೋಂದು ಹಚ್ಚುವುದರಿಂದ ತೊಡಗಿ ಮೊಳೆ ಜೋಡಿಸುವವರೆಗೆ ಕಲಿತಳು. ಜೀವನದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ತಾನು ಅನುಭವಿಸಿದ ಅವಮಾನಗಳು ಅವಳಿಗೆ ನೆನಪಿನಲ್ಲಿತ್ತು. ಏನೇ ಕಷ್ಟ ಬಂದರೂ ತವರಿನವರ ಹಂಗಿಗೆ ಬೀಳುವುದಿಲ್ಲ ಎನ್ನುವ ಸ್ವಾಭಿಮಾನವೇ ಆಕೆ ಕೆಲವೊಂದು ಸಲ ಗಂಡನ ಕೆಲಸವನ್ನು ಹಂಗಿಸುವಂತೆ ಮಾಡಿತ್ತು. ಕೊನೆಗೆ ಒಂದು ದಿನ ಅದೇನೋ ವ್ಯವಹಾರ ಮಾಡುತ್ತಿದ್ದೇನೆ ಎಂದು ಹೇಳಿ ಉಪ್ಪ ಹೆಂಡತಿಯ ಕೈಗೆ ಸಾವಿರ ರೂಪಾಯಿಯ ಗಂಟು ಕೊಟ್ಟು ಹೋದವ ಮನೆಗೆ ಹಿಂತಿರುಗಲೇ ಇಲ್ಲ. ಸುಧೀರ ಜಾಣ ಹುಡುಗ. ಆತನಿಗೆ ವಿದ್ಯೆ ಕಲಿಸಲು ಮೂಗಿಗೆ ಕವಡೆ ಕಟ್ಟಿಕೊಂಡು ಸರೋಜಿನಿ ದುಡಿದಳು. ದುಂದು ವೆಚ್ಚ ಇಲ್ಲದೆ ಬದುಕಿದ ಆ ಜೀವಕ್ಕೆ ಅಗತ್ಯಕ್ಕಿಂತ ಒಂದು ಹೆಚ್ಚು ವಸ್ತು ಮನೆಯಲ್ಲಿದ್ದರೆ ಕಷ್ಟವಾಗುತ್ತಿತ್ತು. ಮಗ ಸುಧೀರ ಓದಿ  ನೌಕರಿಗೆ ಸೇರಿಕೊಂಡು  ಸರೋಜಿನಿಯ ಅಣ್ಣನ ಮಗಳು ಕೌಸಲ್ಯ ಜೊತೆ ವಿವಾಹವಾದ. ಮೊಮ್ಮಗ ಅರ್ಜುನ ಹುಟ್ಟಿದ. ಸಂಸಾರಿಯಾದ ಮಗನ ಮನೆ ಮುಂಬೈಗೆ 8 ವರ್ಷಗಳ ನಂತರ ಸರೋಜಿನಿ ಹೋದಳು. ಅಲ್ಲಿ ಮಗನ ಮನೆಯ ದುಂದು ವೆಚ್ಚ ಆಡಂಬರದ ಜೀವನ ಕಂಡು ಚಡಪಡಿಸುತ್ತಿದ್ದಳು. ಇಲ್ಲಿಗೆ ಅನಾರೋಗ್ಯವೆಂದು  ಮುಂಬೈಗೆ ಬಂದೆ ಈಗ ಚೇತರಿಸಿಕೊಂಡಿದ್ದೇನೆ ಊರಿಗೆ ಹಿಂತಿರುಗುತ್ತೇನೆ ಎಂದು ಅವಳು ಎಷ್ಟು ವಿನಂತಿಸಿಕೊಂಡರೂ ಮಗ ಆಕೆ ಊರಿಗೆ ಹೋಗುವುದನ್ನು ಒಪ್ಪುತ್ತಿಲ್ಲ. ಹೀಗಾಗಿ ಒಳಗೆ ಕೊರಗುತ್ತಿದ್ದ ಸರೋಜಿನಿಗೆ ಕಣ್ಮರೆಯಾದ ಗಂಡ ಉಪ್ಪ ಊರಿಗೆ ಹಿಂತಿರುಗಿದ್ದಾನೆ ಎನ್ನುವ ಚಿತ್ರಾಪುರ ಮಠದವರ ಕಡೆಯ ಸುದ್ದಿಯೇ ನೆವವಾಗಿ ಊರಿಗೆ ಹಿಂತಿರುಗುತ್ತೇನೆ ಎಂದು ಅವಸರ ಪಡುತ್ತಾಳೆ. ಮಗನಿಗೆ ಆತ ನಿನ್ನ ತಂದೆ ಹೌದೇ ಅಲ್ಲವೇ ಎಂದು ಪತ್ತೆ ಹಚ್ಚಲು ತಾನೇ ಮುಂದಾಗಿ ಊರಿಗೆ ಹೋಗುವ ನಿರ್ಧಾರವನ್ನು ಬಹಿರಂಗಪಡಿಸಿದಳು.

ನಾಳೆ ಸಾಯುತ್ತಿದ್ದೇನೆ ಎನ್ನುವ ವಿಷಯ ತಿಳಿದ ತಕ್ಷಣದಲ್ಲಿ ಮಾಡಿದ ತಪ್ಪು ನಿರ್ಧಾರದಿಂದ ಅಜ್ಞಾತವಾಗಿ ಉಳಿದವ  ಕತೆ  ‘ವಿಚಿತ್ರ ಕತೆ’ ಗೆ ವಸ್ತು.

ಒಟ್ಟಾರೆಯಾಗಿ ಈ ಸಂಕಲನದ ಬಹುತೇಕ ಕಥೆಗಳು ಎರಡು ದಶಕಗಳನ್ನು ಕಂಡಿದ್ದರೂ ಇಲ್ಲಿನ ವಿದ್ಯಮಾನಗಳಷ್ಟೂ ಇಂದಿಗೂ ಪ್ರಸ್ತುತ ಅನ್ನೋದು ಮುಖ್ಯ ಆಗುತ್ತದೆ.

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ