ನಿನ್ನೆ ಜಗಳವಾದ ಮೇಲೂ ರಾಘವ ಹೇಳಿದಂತೆ ಕೇಳಬೇಕಿತ್ತು. ನೀನು ಸುಮ್ಮನಿದ್ದಿದ್ದರೆ ಮುಗಿಯುತ್ತಿತ್ತು. ಎಂಬವನ ಮಾತು ಸರಿಯಾಗಿತ್ತು. ಮಾತಿನ ಬರದಲ್ಲಾದ ತಪ್ಪಿಗೆ ಇವತ್ತು ಮ್ಯಾನೇಜ್‌ಮೆಂಟ್‌ನಲ್ಲಿ ತಾನು ಅಪರಾಧಿಯ ಸ್ಥಾನದಲ್ಲಿದ್ದೇನೆ. ಅವಳು ನನ್ನ ಭಾಷೆಯ ಬಗ್ಗೆ ಹಾಗೆ ಮಾತಾಡಿದ್ದು ತನಗೆ ಹಿಡಿಸಲಿಲ್ಲ, ಅಲ್ಲದೇ ಅದು ಸರ್ಕಾರದ ಪ್ರಾಜೆಕ್ಟ್ ಮತ್ತು ಈ ಪ್ರಾಜೆಕ್ಟಿನ ಎಲ್ಲ ಕಡತಗಳನ್ನು ಸರ್ಕಾರ ಕನ್ನಡದಲ್ಲೇ ಮಂಡಿಸುವುದು. ಇಂಥ ಸ್ಟೇಟ್ ಕನ್ನಡ ಪ್ರಾಜೆಕ್ಟ್‌ನಲ್ಲಿ ಇದ್ದುಕೊಂಡೇ ಹೀಗೇ ಮಾತಾಡುವವರು ಇನ್ನೂ ಎಂ.ಎನ್.ಸಿ. ಕಂಪನಿಯಲ್ಲಿದ್ದರೆ ಕನ್ನಡವನ್ನು ಸಾಯಿಸಿಯೇ ಬಿಡುತ್ತಾರೆ, ಭಾಷೆ ವಿಚಾರದಲ್ಲಿ ನಾನು ಮಾಡಿದ್ದೆ ಸರಿ ಎನಿಸಿತವಗೆ.
ಶಿವಕುಮಾರ ಚನ್ನಪ್ಪನವರ್ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್” ನಿಮ್ಮ ಓದಿಗೆ
-1-
ಸಿರಿಗನ್ನಡಂ ಗೆಲ್ಗೇ, ಸಿರಿಗನ್ನಡಂ ಬಾಳ್ಗೇ..,
ಐ ಟಿ ಪಾರ್ಕಿನ ಮೊದಲನೇ ಮಹಡಿಯಲ್ಲಿ, ಕನ್ನಡ ಹೋರಾಟಗಾರರ ಗುಂಪೇ ನೆರೆದಿತ್ತು..,
ಸುಮಾರು ನೂರರಿಂದ ಇನ್ನೂರು ಜನಗಳು ಕಲೆತು ನಿಂತಿದ್ದರು. ಕೆಂಪು, ಹಳದಿ ವಸ್ತ್ರಗಳನ್ನು ಹೆಗಲ ಮೇಲೆ ಹಾಕಿಕೊಂಡ ಅವರೆಲ್ಲಾ ಕನ್ನಡ ಕಾರ್ಯಕರ್ತರು. ನಿಮ್ಮ ಕಂಪನಿಯ ತೇಜು ಎಂಬ ನೌಕರಳನ್ನ ಅಮಾನುತುಗೊಳಿಸಿ, ಇಲ್ಲವಾದರೇ ಉಗ್ರ ಹೋರಾಟ ನಡೆಯುತ್ತದೆ. ನಮ್ಮ ಕಾರ್ಯಕರ್ತರೂ, ಕನ್ನಡಪರ ಹೋರಾಟಗಾರರೂ ಆಗಿರುವ ರಾಜೀವ ಅವರ ಮುಂದೆಯೇ ಕನ್ನಡ ಭಾಷೆಯ ಬಗ್ಗೆ ಅವಹೇಳನ ಮಾಡಿದ ಅವಳಿಗೆ ಅಮಾನತುವೇ ಸರಿಯಾದ ಶಿಕ್ಷೆ. ಅಮಾನತುಗೊಳಿಸಿದರೇ ಹೋರಾಟ ಅಂತಿಮಗೋಳ್ಳುತ್ತದೆ. ಇಲ್ಲವಾದರೇ… ಎಂದು, ಏನೋ ಹೇಳಲು ಹೊದವರು ತಡೆದುಕೊಂಡು, ತಿರ್ಮಾನ ನಿಮ್ಮದು ಬಹುಶಃ ಇವಳೊಬ್ಬಳಿಂದ ಇಡೀ ಕಂಪನಿಯ ನೌಕರರು ಮನೆಗೆ ಹೋಗಬೇಕಾಗಿ ಬರಬಹುದು ಎಂದೊಬ್ಬ, ಇಲ್ಲೇ ಹೊರಾಟ ಅಂತ್ಯವಾಗಬೇಕಾದರೇ ತತಕ್ಷಣ ಅಮಾನತುಗೊಳಿಸಬೇಕು ಎಂದು ಇನ್ನೊಬ್ಬ, ಹೀಗೆ ಎದುರಿಗಿರುವ ಆಕೃತಿಯ ಎದುರು ಅಬ್ಬರಿಸುತ್ತಿದ್ದರು. ಒಬ್ಬರಿಗೆ ಉತ್ತರ ಕೊಡುವಷ್ಟರಲ್ಲೇ ಇನ್ನೊಬ್ಬರ ಮತ್ಯಾವುದೋ ಪರ ವೀರೋದ ವಾದ ನಡೆಯುತ್ತಿತ್ತು. ಪುರಸೊತ್ತು ಕೊಡದೇ, ತನಗೂ ಮಾತಾಡಲೂ ಬಿಡದಿರುವ ಇವರೆದುರು ನಿಂತವ ಎಚ್. ಆರ್. ಮ್ಯಾನೇಜರ್ ರಾಘವ ಸುಮ್ಮನೇ ಕೇಳಹತ್ತಿದ್ದ. ನಾನು ಹೇಳುತ್ತೇನೆ ಕೇಳಿ ಏನಾಗಿದೆಯೆಂದು ಎಂದು ಅವಲತ್ತುಕೊಂಡರೂ ಯಾರೊಬ್ಬರೂ ಇವನ ಮಾತನ್ನು ಕೇಳಲಿಚ್ಛಿಸಲಿಲ್ಲ. ಸ್ವಲ್ಪ ಹೊತ್ತು ತಿಳಿಹೇಳಲು ನೋಡಿ ಯಾವ ಪ್ರಯೋಜನವಾಗದೇ, ಅವನಿಂದ ಅವರ ಬಾಸ್‌ಗೆ, ಅವರಿಂದ ಕಂಪನಿಯ ಮ್ಯಾನೇಜ್‌ಮೆಂಟಿಗೆ, ಮ್ಯಾನೇಜ್ಮೆಂಟಿಂದ ಹನ್ನೊಂದು ರಾಜ್ಯಗಳಲ್ಲಿ ಬ್ಯೂಸಿನೆಸ್ ಹೊಂದಿದ್ದ ಕಂಪನಿಯ ಛೇರಮೆನ್‌ವರೆಗೂ ಸುದ್ದಿ ಹರಿದು ಎಲ್ಲರ ಕಣ್ಣುಗಳು ರಾಜೀವನ ಮೇಲೆ ಕೆಂಡಾಮಂಡಲವಾಗಿದ್ದವು.
ಕನ್ನಡ ಭಾಷೆಯನ್ನು ನಿಂದಿಸಿದ್ದಕ್ಕಾಗಿ ಅವಳನ್ನು ಅಮಾನತುಗೊಳಿಸಬೆಕೆಂದು ಹೂಡಿದ್ದ ಕನ್ನಡ ಪರ ಸಂಘಟನೆಗಳ ವಾದಕ್ಕೆ ಪ್ರತಿವಾದ ಮಂಡಿಸುವ ಯಾವ ಧೈರ್ಯ ಕಂಪನಿಯ ಛೇರ್‌ಮೆನ್‌ಗೂ ಇರಲಿಲ್ಲ. ಕರ್ನಾಟಕದಲ್ಲಿ ಕನ್ನಡಕ್ಕಿರುವ ಪ್ರಾಮುಖ್ಯತೆಯೇ ಅಂಥದ್ದೆಂದು ಅವರಾಗಲೇ ಮನಗಂಡಿದ್ದರು. ಅವಳನ್ನು ಅಮಾನತುಗೊಳಿಸಿದರೂ ಸರಿಯೇ ತಮ್ಮ ಪ್ರಾಜೆಕ್ಟ್ ನಡೆಯಬೇಕು ಅಲ್ಲಿ, ಅದೇ ನಮಗೆ ಮುಖ್ಯ, ನಮ್ಮ ಗುಡ್‌ವಿಲ್‌ಗೆ ದಕ್ಕೆ ಬರಬಾರದು ಇಷ್ಟು ವರ್ಷ ಕಾಪಾಡಿಕೊಂಡು ಬಂದಿದ್ದೇವೆ; ಅಲ್ಲದೇ ಎಂ.ಎಂ.ಯು. ದೊಡ್ಡ ಪ್ರಾಜೆಕ್ಟ್ ಒಂದು ನಮಗೆ ಸಿಗಲಿದೆ ಕರ್ನಾಟಕದಲ್ಲಿ. ತುರ್ತಾಗಿ ಅವಳನ್ನು ಅಮಾನತುಗೊಳಿಸಿ ಎಂದು ಎಚ್. ಆರ್. ರಾಘವನಿಗೆ ಮೇಲ್ ಕಳಿಸಿ ಫೋನ್ ಮಾಡಿ ಉಗಿದಿದ್ದರು. ವಿಷಯವನ್ನು ಅಲ್ಲೇ ಬಗೆಹರಿಸುವುದ ಬಿಟ್ಟು ಬಿಕ್ಕಟ್ಟಾಯಿಸಿದ್ದಕ್ಕೆ. ಅದೇ ಮೇಲ್‌ಗೆ ಮತ್ತೇ ರಿಪ್ಲೈಯಾಗಿ ಸಿ. ಈ. ಓ.(ಚೀಪ್ ಎಕ್ಸೇಕೂಟಿವ್ ಆಫೀಸರ್) ನಮ್ಮ ಗುಡ್‌ವಿಲ್‌ಗೆ ಧಕ್ಕೆ ತಂದಿರುವ ಇಬ್ಬರನ್ನೂ ಅಮಾನತುಗೊಳಿಸಿ ಸಿಚುವೇಷನ್ ನೋಡಿಕೊಂಡು ಎಂದು ಆದೇಶಿಸಿದ್ದರು. ಅವನನ್ನು ಅಮಾನತುಗೊಳಿಸಿದರೆ ಮತ್ತೆ ಹೋರಾಟ ತೀವ್ರವಾಗುತ್ತದೆಂದು ಹೇಳಿದರೂ, ಕೇಳಲಿಲ್ಲ. ಇದೇ ಮ್ಯಾನೆಜ್‌ಮೆಂಟ್ ಅಂತಿಮ ನಿರ್ಧಾರ, ನೀವು ಮ್ಯಾನೇಜ್ ಮಾಡ್ಲೇಬೇಕು ಇಟ್ಸ್ ಯುವರ್ ಡ್ಯೂಟಿ ಎಂದು ರಿಪ್ಲೈ ಹಾರಿಸಿದ್ದರು.
ರಾಜೀವನಿಗೆ ಗಕ್ಕನೇ ಎಚ್ಚರವಾಯ್ತು…,
ಕೆಲಸ ಹೋಗುತ್ತೆನ್ನುತ್ತಿದ್ದಂತೆ, ಕಣ್ಣಿಗೆ ಮಂಜು ಕವಿದಂತಾಗಿ, ಪ್ರಳಯವೇ ಸಂಭವಿಸಿದಂತಾಯ್ತು. ಸುತ್ತಲೂ ಏನು ನಡೆಯುತ್ತಿದೆಯೆಂಬುದೇ ಅವನಿಗೆ ತಿಳಿಯದಂತಾಗಿ, ದಟ್ಟ ಕಾನನದಲ್ಲಿ ಬಿಟ್ಟ ಮಗುವಿನಂತಾಗಿದ್ದ. ನಿನ್ನೆ ಸಾಯಂಕಾಲ ಆಫೀಸಿನಲ್ಲಿ ನಡೆದ ಘಟನೆಯಿಂದ, ಬೆಳಗು ಮುಂಜಾನೆ ನಾಲ್ಕು ಗಂಟೆಯಾದರೂ ನಿದ್ದೆ ಬರದೆ, ಮುಂಜಾನೆಯ ಸಕ್ಕರೆ ನಿದ್ದೆಯಲ್ಲಿನ ಕನಸಿನ ಗದ್ದಲಕ್ಕೆ ಹಾಸಿಗೆಯಲ್ಲೇ ಕಣ್ಣು ಬಿಟ್ಟ. ಕಣ್ಣು ಉರಿಯತೊಡಗಿದ್ದವು. ‘ಛೇ ಏನಾಯ್ತು ಮಾರಾಯ, ನಾನು ಸುಮ್ಮನೇ ಇರೋದನ್ನ ಬಿಟ್ಟು ಚಡ್ಡಿಯಲ್ಲಿ ಹುಳ ಬಿಟ್ಟುಕೊಂಡಗಾಯ್ತಲ್ಲ, ತಾನು ಮಾತಾಡಿದ್ದದ್ದು ತನಗೆ ಮುಳುವಾಗಬಹುದು, ಬಾಸ್‌ಗೆ ಅವಳು ಖಂಡಿತ ವಿಷಯ ತಿಳಿಸಿರುತ್ತಾಳೆ. ಅವನು ಮೊದಲೇ ತಾನೆಂದರೇ ಉರಿದು ಬಿಳುತ್ತಾನೆ. ಇನ್ನು ಮ್ಯಾನೆಜ್‌ಮೆಂಟು ಸುಮ್ಮನಿರುತ್ತದೆಯೇ..? ಮೊನ್ನೆ ಏಪ್ರಿಲ್‌ನಲ್ಲಿ ಅಪ್ರೈಸಲ್ ವಿಚಾರದಲ್ಲಿ ನನಗೆ ಸಿ ಪ್ಲಸ್ ಕೊಟ್ಟು ಕೇವಲ ಸಾವಿರ ಇಂಕ್ರಿಮೇಂಟು ಕೊಡಿಸಿದ್ದಾನೆ. ಈಗ ಈ ವಿಚಾರವೆನಾದರೂ ಗೊತ್ತಾದರೇ ನೌಕರಿ ಹೋದಂತೆಯೇ ಸರಿ, ನೌಕರಿ ಹೋದರೆ ತನ್ನ ಗತಿಯೇನು, ತನ್ನ ಸಂಬಳ ನಂಬಿದವರ ಗತಿಯೇನು..? ಬೇರೆ ನೌಕರಿಗೇನು ಸಿಗುತ್ತವೆ, ಆದರೆ ಇಷ್ಟು ಸಂಬಳದ ನೌಕರಿ ದೊರಕುವುದು ಇಲ್ಲಿನ ಮಾರುಕಟ್ಟೆಗೆ ಕಷ್ಟಸಾಧ್ಯವೇ ಸರಿ. ತನ್ನ ಸಂಬಳಕ್ಕಿಂತ ಕಾಲುಭಾಗ ಕೊಡುವುದು ಕಷ್ಟ. ಎರಡು ಬ್ಯಾಂಕ್‌ನಲ್ಲಿ ಲೋನ್ ಇದೆ ಎಂದು ನೆನಪಾಗಿ, ಎದೆ ಭಾರವೆನಿಸಿ ಒಂದು ನಿಟ್ಟುಸಿರು ಬಿಟ್ಟ, ಎಷ್ಟೇ ಅವಲತ್ತುಗೊಂಡರೂ ನಿದ್ದೆಯ ಸುಳಿವು ಕಾಣಲಿಲ್ಲ. ತಿಗಣೆ, ಸೊಳ್ಳೆ ಕಾಟಕ್ಕೆ, ಎದ್ದು ಕೂತು, ತನ್ನ ಚಿಕ್ಕ ಕೊಣೆಯನ್ನೊಮ್ಮೆ ನೊಡಿದ. ಅಲ್ಲಲ್ಲಿ ತಿಗಣೆ ಒರಗಿದ ರಕ್ತದ ಕಲಿ, ಕತೆ ಕಾದಂಬರಿಯ ಪುಸ್ತಕಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ತನ್ನ ದಿನನಿತ್ಯ ಕೆಲಸ ಕಾರ್ಯಗಳ ವೇಳಾಪಟ್ಟಿಯೊಂದು ನೇತಾಡುತ್ತಿತ್ತು, ಈ ವೇಳಾಪಟ್ಟಿಯಂತೆ ಒಂದು ದಿನವೂ ನಡೆದುಕೊಂಡಿಲ್ಲ. ಕದದ ಮರಿಗೆ ಕಂಡ ಸಣ್ಣ ತಿಪ್ಪೆಯಂತಿರುವ ಕಸದ ಗುಡ್ಡೆ, ತನ್ನ ದೇಹದಲ್ಲೇನೋ ಗುಳು ಗುಳು ಸದ್ದಾಯಿತು. ಸಟಕ್ಕನೇ ಎದ್ದು ಕೊಡವಿದ. ಈಗಲೋ ಆಗಲೋ ಹೆರಿಗೆಯಾಗಲಿರುವ ಜಿರುಳೆಯೊಂದು ನೆಲಕ್ಕೆ ಬಿದ್ದು ಕಂಬದ ಮರಿಗೆ ನಿಂತು ಇವನನ್ನೇ ನೋಡುತ್ತಿತ್ತು. ಕಮಟು ವಾಸನೆಗೆ ಬಂದ ತನ್ನ ರಗ್ಗುಗಳನ್ನು ಎಷ್ಟು ದಿನಗಳಾಯಿತೋ ಸೆಳೆದು ಹಾಕಿ. ನಿದ್ದೆ ಹತ್ತುವ ಯಾವ ಲಕ್ಷಣಗಳೂ ಇಲ್ಲದೇ ಹಾಸಿಗೆಯಿಂದೆದ್ದು ಮುಖ ತೊಳೆಯಹೊರಟ.
ನಿನ್ನೆ ಜಗಳವಾದ ಮೇಲೂ ರಾಘವ ಹೇಳಿದಂತೆ ಕೇಳಬೇಕಿತ್ತು. ನೀನು ಸುಮ್ಮನಿದ್ದಿದ್ದರೆ ಮುಗಿಯುತ್ತಿತ್ತು. ಎಂಬವನ ಮಾತು ಸರಿಯಾಗಿತ್ತು. ಮಾತಿನ ಬರದಲ್ಲಾದ ತಪ್ಪಿಗೆ ಇವತ್ತು ಮ್ಯಾನೇಜ್‌ಮೆಂಟ್‌ನಲ್ಲಿ ತಾನು ಅಪರಾಧಿಯ ಸ್ಥಾನದಲ್ಲಿದ್ದೇನೆ. ಅವಳು ನನ್ನ ಭಾಷೆಯ ಬಗ್ಗೆ ಹಾಗೆ ಮಾತಾಡಿದ್ದು ತನಗೆ ಹಿಡಿಸಲಿಲ್ಲ, ಅಲ್ಲದೇ ಅದು ಸರ್ಕಾರದ ಪ್ರಾಜೆಕ್ಟ್ ಮತ್ತು ಈ ಪ್ರಾಜೆಕ್ಟಿನ ಎಲ್ಲ ಕಡತಗಳನ್ನು ಸರ್ಕಾರ ಕನ್ನಡದಲ್ಲೇ ಮಂಡಿಸುವುದು. ಇಂಥ ಸ್ಟೇಟ್ ಕನ್ನಡ ಪ್ರಾಜೆಕ್ಟ್‌ನಲ್ಲಿ ಇದ್ದುಕೊಂಡೇ ಹೀಗೇ ಮಾತಾಡುವವರು ಇನ್ನೂ ಎಂ.ಎನ್.ಸಿ. ಕಂಪನಿಯಲ್ಲಿದ್ದರೆ ಕನ್ನಡವನ್ನು ಸಾಯಿಸಿಯೇ ಬಿಡುತ್ತಾರೆ, ಭಾಷೆ ವಿಚಾರದಲ್ಲಿ ನಾನು ಮಾಡಿದ್ದೆ ಸರಿ ಎನಿಸಿತವಗೆ.
ನಿನ್ನೇ ತಾನು ಸಂಜೆ ಐದಕ್ಕೆನೇ ಆಫೀಸು ಬಿಟ್ಟರೂ, ಅಲ್ಯಾಋೂ ಯಾಕಿಷ್ಟು ಬೇಗ ಹೊರಡುತ್ತಿದ್ದೀರೆಂದು ಕೇಳಲಿಲ್ಲ. ಮೊದಲೆಲ್ಲಾ ಬೆಳಿಗ್ಗೆ ಹತ್ತು ಹತ್ತಕ್ಕೆ ಪಂಚು ಮಾಡಿದರೆ, ಸಾಯಂಕಾಲ ಆರು ಹತ್ತಕ್ಕೇ ಪಂಚು ಮಾಡಿ ಹೋಗಬೇಕೆಂದು ಒದರಾಡುತ್ತಿದ್ದ ರಾಘವನೂ, ತನ್ನ ಜೊತೆಯಲ್ಲೇ ಕೆಳಗೆ ಬೈಕ್ ಪಾರ್ಕಿಂಗ್‌ವರೆಗೂ ಬಂದು ಬುದ್ದಿವಾದ ಹೇಳಿದ್ದ. ರಾಘವ ಹೇಳಿದ್ದನ್ನು ಕೇಳಬೇಕಿತ್ತೇನೋ ಎಂದು ರಾತ್ರಿಪೂರ ಅನಿಸಿತ್ತು. ಯಾವಾಗಲೂ ತನ್ನ ಒಳಿತನ್ನೇ ಬಯಸುವ ರಾಘವ, ಈ ವಿಚಾರದಲ್ಲೂ ಅಷ್ಟೇ, ಅವಳ ಜೊತೆ ಬಾಯಿಮಾಡುವ ಮೊದಲಿನಿಂದ ಹಿಡಿದು ಅಂತ್ಯವಾಗುವ ತನಕ ತನ್ನನ್ನೇ ಸಮಾಧಾನಪಡಿಸುತ್ತಿದ್ದ. ಅವಳು ಹೇಗಂತ ನಿಂಗೆ ಗೊತ್ತಲ್ಲ, ಅವಳ ಫಲ ಅವಳದ್ದು. ನಂಗೊತ್ತು ನೀನು ಕನ್ನಡದ ಕಟ್ಟಾಳು, ಇವಳಿಗಾಗಿ, ಹೀಗೇಕೆ, ಇಷ್ಟೊಂದು ಎಗ್ಸೈಟ್ ಆಗುತ್ತಿ. ಡೊಂಟ್ ಫೀಲ್ ಬ್ಯಾಡ್ ಮ್ಯಾನ್ ಎಂದು ಚಿಕ್ಕ ಮಗುವಿಗೆ ಹೇಳಿದಂತೆ, ತಾನೊಬ್ಬ ಎಚ್. ಆರ್. ಮ್ಯಾನೇಜರ್ ಎಂಬ ಹಮ್ಮು ಬಿಟ್ಟು ಹೇಳಿದರೂ ಕೇಳದೇ ತಾನು ಸದಸ್ಯನಾಗಿದ್ದ ಕನ್ನಡ ಸಂಘಕ್ಕೆ ಕಾಲ್ ಮಾಡಿದ, ನಾಳೆ ಬೆಳಿಗ್ಗೆನೇ ಇದಕ್ಕೊಂದು ಅಂತ್ಯ ಹಾಡಿದರಾಯ್ತು ಎಂದು ತಿರ್ಮಾನವಾಯ್ತು ಕಾನ್ಫರೆನ್ಸ್ ಕಾಲ್‌ನಲ್ಲಿ. ರಾಜೀವನ ವರ್ತನೆಯಿಂದ, ಕಂಪನಿಯ ಎಚ್. ಆರ್. ಆಗಿ ತನ್ನ ಎಂಪ್ಲಾಯ್‌ಯನ್ನು ಮನವೊಲಿಸಲು ಸೋತಂತೆನಿಸಿತು ರಾಘವನಿಗೆ. ಕೊನೆಯದಾಗಿ ಬಾಸ್ ಫೋನು ಮಾಡಿದರೆ ಹೇಗೆ ಮಾತಾಡಬೇಕೆಂಬ ಸೂಕ್ಷ್ಮ ತಿಳಿಸಿದ, ಇಲ್ಲದ್ದಿದ್ದರೇ ನೌಕರಿ ಹೋಗುವ ಸಂಭವವಿದೆ ಎಂದೂ ಹೇಳಿದ.
ನಿನ್ನೇ ಇಳಿಸಂಜೆ ಹೊತ್ತು ನಿನ್ನೇ ಮುಂಜಾನೆಯಿಂದ ಕಂಪ್ಯೂಟರ್‌ನಲ್ಲೇ ಮುಖ ಹುದುಗಿಸಿಟ್ಟವರು ಹಾಯ್ ಎಂದು ಟೀ ಹೀರಿ ಕೊನೆಯ ಮೇಲ್ ಬಂದಿದೆಯಾ? ಮತ್ತೇನಾದರೂ ಕೆಲಸವಿದೆಯಾ..? ಇಲ್ಲವಾದರೇ ಹೊರಡಲು ಅನುವಾಗಿ ಈ ಹಾಳು ಟ್ರಾಫಿಕ್ ಮತ್ತೇ ಡಸ್ಟನಲ್ಲಿ ಮನೆ ಸೇರುವ ಹೊತ್ತಿಗೆ ರಾತ್ರಿಯಾಗಿರುತ್ತದೆಯೆಂದು ಮಾತಾಡುವ ಸಮಯ. ಟೀ ಹೀರುತ್ತಾ ಪಲ್ಲವಿ ನಿಮ್ಮ ಜಂಗಮವಾಣಿ ಅಲ್ಲೇ ಟೆಬಲ್‌ಮೇಲೆ ಇಟ್ಟಿದ್ದಿರಿ ನೋಡಿ ಎಂದು ರಾಜೀವನಿಗೆ ಕಿಚಾಯಿಸಿ ಎಲ್ಲರೆದುರು ನಕ್ಕಿದ್ದಳು, ಅದು ಜಂಗಮವಾಣಿಯೇ ಸರಿ ಆದರೇ ನೀವು ಅದನ್ನು ಹೇಳುವ ಧ್ವನಿ ಸರಿಯಿಲ್ಲ, ಅದು ಸರಿಮಾಡಿಕೊಳ್ಳಿ ಎಂದ.
ಹತ್ತು ನಿಮಿಷದ ಪಲ್ಲವಿ ಮತ್ತು ರಾಜೀವನ ಆರೊಗ್ಯಕರ ವಾದ ನಡೆಯುತ್ತಲೇ ಇತ್ತು. ಮಧ್ಯೇ ಒಮ್ಮೆಲೆ ತೇಜುವಿನ ಸ್ವರ ನುಗ್ಗಿಬಂತು. ‘ಹಲೋ… ಮಿಸ್ಟರ್, ನಮಗೆ ಕನ್ನಡ ಅಷ್ಟೇ ಬರೋದು, ಮಾತಾಡಲ್ಲ ಕನ್ನಡದಲ್ಲಿ ಎನಿವಾಗ, ನಿಮ್ಮ ಕೈಲೇನು ಕಿತ್ತುಕೊಳ್ಳಕಾಗುತ್ತದೆಯೋ ಅದನ್ನೆ ಕಿತ್ಕೋಳ್ಳಿ ನಾವು ಹಾಗೆ ಮಾತನಾಡೊದು. ನಿಮ್ಮ ಭಾಷಾಭಿಮಾನ ಎನಿದ್ರೂ ನಿಮ್ಮತ್ರಾನೆ ಇಟ್ಕೋಳಿ ಅರ್ತಾಯ್ತಾ..?’ ಎಂದ ಅವಳ ಧ್ವನಿಯಲ್ಲಿ ಕೊಂಕಿತ್ತು. ಆಫೀಸಿನ ಅಷ್ಟೂ ಜನರೆದುರು ರಾಜೀವನಿಗೆ ಕೋಪ ಅವಮಾನ ಒಟ್ಟೊಟ್ಟಿಗೆ ಉಕ್ಕಿ ಬಂದಂತೆ ಮುಖವೆಲ್ಲಾ ಕೆಂಪಾಯಿತು ಅಷ್ಟೇ ಅಲ್ಲಿಂದಲೇ ಶುರುವಾದದ್ದು.
ಐ.ಟಿ ಕಾಂಪ್ಲೇಕ್ಸಿನ ಹತ್ತಾರು ಸಾಪ್ಟವೇರ್ ಆಫೀಸುಗಳಲ್ಲಿ ಮೊದಲ ಮಹಡಿಯ, ಈ ಆಫೀಸಿನ ಚಚೌಕ ಮೂಲಿಯಿಂದ, ಎಂಟ್ರಾö್ಯಂನ್ಸ್ ಬಾಗಿಲವರೆಗೂ ರಡಿಮಾಡಿದ ಕೊನಗಳಂತ ಡಿಪಾರ್ಟಮೆಂಟುಗಳು, ಮ್ಯಾನೇಜರ್‌ನಿಂದ ಹಿಡಿದು ಪ್ಯೂವನ್‌ವರೆಗಂದ್ರೆ ಸುಮಾರು ನೂರು ಜನರಿರಬಹುದು. ರಾಜೀವ, ಸೋಮು, ರಾಘವ, ಪಲ್ಲವಿ, ತೇಜು, ಮಂಜುನಾಥ ಹೀಗೆ ಹನುಮನ ಬಾಲದಂತೆ ಬೆಳೆಯುತ್ತದೆ ಅಲ್ಲಿ ಕೆಲಸ ಮಾಡುವವರ ಹೆಸರು. ಅದು ಸದಾ ಸದ್ದುಗದ್ದಲದಿಂದ ಕೂಡಿರುತ್ತಿದ್ದ ವಾತಾವರಣ. ಯಾರೋ ಒಬ್ಬ ಪ್ರಿಂಟ್ ಕೊಡುತ್ತಾನೆ. ಮತ್ತೊಬ್ಬ ಕಾಲ್‌ಸೆಂಟರ್‌ನ ಕರೆಯಲ್ಲೇ ಬ್ಯೂಸಿ, ಇನ್ನೊಬ್ಬ ಅಲೆದಾಡುತ್ತಿರುತ್ತಾನೆ. ಪ್ಯಾನು ತಿರುಗದೇ ನಿಂತ ದಿನದ ನೆನಪೇ ಇಲ್ಲ, ಐದು ವರ್ಷದಿಂದ ತಿರುಗುತ್ತಲೇ ಇವೆ. ಅದು ಸರ್ಕಾರಿ ಪ್ರಾಯೊಜಿತ ಕಾರ್ಯಕ್ರಮವೊಂದರ ಟೆಂಡರ್ ಪಡೆದು ನಡೆಸುತ್ತಿರುವ ಪ್ರತಿಷ್ಠಿತ ಎನ್.ಜಿ.ಓ. ಕಂಪನಿ. ಸೋಮು, ರಾಘವ ಮತ್ತೆ ಪಲ್ಲವಿ ಎಚ್. ಆರ್. ಡಿಪಾರ್ಟಮೆಂಟಿನವರು. ತೇಜು ಟ್ರೆöÊನರ್ ಮತ್ತೆ ರಾಜೀವ ಅಂಕೌಟ್ಸ ಡಿಪಾರ್ಟಮೆಂಟಿನವನು. ಆಲ್ಮೊಸ್ಟ್ ಎಲ್ಲರದ್ದೂ ಎರೆಡು ವರ್ಷ ಕಳೆದಿದೆ ಇಲ್ಲಿಗೆ ಬಂದು. ಸಂಜೆ ಬರುವ ಟೀ ಸಮಯದಲ್ಲಿ ಹೊರಬರುತ್ತವೆ ಹೆಂಗಸರು ಮನೆಯಿಂದ ಕುರುಕಲು ತಿಂಡಿ, ಶೇಂಗಾಬೀಜ ಇತರೆ ಸ್ನಾಕ್ಸು. ಅವತ್ತಿನ, ಇಲ್ಲವೇ ಹಿಂದಿನ ದಿನದ ವಿಷಯ ಕೆದಕಿ ಅದನ್ನೇ ಮಾತಾಡುತ್ತಾ ಮೆಲ್ಲುತ್ತಾರೆ ಮೆದುವಾಗಿ ನಗುತ್ತಾ. ಆ ಆಫೀಸಿನಲ್ಲಿ ಇಂಗ್ಲೀಷ್ ಕಡ್ಡಾಯವಾಗಿಲ್ಲ, ಅದೊಂದು ಕರ್ನಾಟಕ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿ, ಕನ್ನಡದಲ್ಲೇ ಕರೆಗಳನ್ನು ಸ್ವೀಕರಿಸಿ ಉತ್ತರಿಸಬೇಕಾದ ಸರ್ವಿಸ್ ಸೆಕ್ಟರ್ ಆದರೂ ಅಲ್ಲಿರುವ ಸರ್ಪೋಟ್ ಸ್ಟಾಪ್ ಒಬ್ಬರಿಗೊಬ್ಬರು ಇಂಗ್ಲಿಷ್‌ನಲ್ಲೇ ಮಾತಾಡುವುದು. ರಾಜೀವನಂತ ಕನ್ನಡ ಮಿಡಿಯಂ ಹುಡ್ಗರನ್ನ ಕಂಡರೇ ಕಿಚಾಯಿಸಿ ನಗುವುದು, ಅವರನ್ನು ಕೀಳಾಗಿ ಕಾಣುವುದು ನಡದೇ ಇತ್ತು. ರಾಜ್ಯ ಸರ್ಕಾರದ ಅದರಲ್ಲೂ ಕನ್ನಡವೇ ಪ್ರಧಾನವಾಗಿರುವ ಪ್ರೋಗ್ರಾಮ್‌ನಲ್ಲಿ ಇಂತ ಅವಹೇಳನತನಕ್ಕೆ ಒಳಗಾಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ರಾಜೀವನಿಗೆ ತನ್ನ ಕಮಿಟ್ಮೆಂಟು ಹಲವಾರು ಬಾರಿ ಅಡ್ಡ ಬಂದಿತ್ತು. ಕನ್ನಡ ಅಕ್ಷರಗಳ ಸಣ್ಣ ಮಕ್ಕಳಂತೆ ಪೋಣಿಸಿ ಓದುವ ಅವರ ಕನ್ನಡ ಜ್ಞಾನ, ಹುಟ್ಟಿದ ನಾಡಲ್ಲಿ ಮಾತೃಬಾಷೆ ಬರದವರನ್ನು ರಾಜ್ಯ ಬಿಟ್ಟೊಡಿಸಬೇಕೆನ್ನುವ ತನ್ನ ಸಂಘದ ಸಿದ್ದಾಂತ ಅವನ ಕಣ್ಣ ಮುಂದೆ ಬಂದವು. ಕನ್ನಡ ಪರ ಹೋರಾಟಗಾರನಾಗಿದ್ದ ರಾಜೀವನಿಗೆ ಹುದುಗಿಸಿಟ್ಟಿದ್ದ ಸಿಟ್ಟೆಲ್ಲಾ ನಿನ್ನೇ ಹೊರಬಂದಿತ್ತು.
ತೇಜುವಿನ ದುರ್ವತನೆಯಿಂದ ‘ರೀ ನಿಮಗೆ ನನ್ನ ಬಗ್ಗೆ ಎನು ಗೊತ್ತು ಮನಸ್ಸು ಮಾಡಿದ್ರೇ ನಾಳೆಯೇ ಕನ್ನಡ ಪರ ಹೋರಾಟಗಾರರನ್ನು ಕರೆಸಿ ಈ ಕಂಪನಿಗೆ ಬೀಗ ಹಾಕಿಸಿಬಿಡುತ್ತೆನೆಂದÀ’. ಮಾತಿಗೆ ಮಾತು ಬೆಳೆದು ಮೆದುವಾಗಿ ಪ್ರಾರಂಭವಾಗಿದ್ದ ಜಗಳ ತುಸು ವೀಕೋಪಕ್ಕೆ ಒಳಗಾಯ್ತು, ಸುಮ್ಮನೆ ಕಂಪ್ಯೂಟರ್‌ನಲ್ಲಿ ಮುಖ ಹುದುಗಿಸಿ, ಅದೇನನ್ನೋ ಹುಡುಕುತ್ತಿರುವಂತೆ ಕುಳಿತ್ತಿದ್ದವರೂ, ಎನೋ ಅನಾಹುತ ಜರುಗಿತೆನ್ನುವ ಪರಿಯಲ್ಲಿ ನೊಡತೊಡಗಿದರು, ಆಗ ತಾನೇ ಅಪಾಂಟ್ ಆಗಿದ್ದ ಟ್ರೆöÊನಿಸ್ ಜಗಳವನ್ನು ಆಲಿಸಿದರೂ ಕೇಳದಂತೆ ಕಿವಿಗೆ ಹೆಡ್‌ಫೋನ್ ಹಾಕಿ ಕುಳಿತ್ತಿದ್ದರು. ಅಷ್ಟೊತ್ತು ಸದ್ದುಗದ್ದಲದಿಂದ ಕೂಡಿದ್ದ ಆಫೀಸು ಎರೆಡು ನಿಮಿಷಗಳಲ್ಲೇ ಸೂಜಿ ಬಿದ್ದರೂ ಸಪ್ಪಳಗುವಂತೆ ಸಡನ್ನಾಗಿ ಮಾರ್ಪಾಟ್ಟಿತ್ತು. ಕೆಲವರು ಇವಳಿಗೆ ಇದು ಬೇಕಿತ್ತು ತನ್ನ ಪಾಡಿಗೆ ತಾನು ಇರಬಾರದೇ..? ಮೊನ್ನೆ ತಾನೆ ಅನಸ್ತೆಸಿಯಾ ಆಗಿದೆ, ಅಸ್ತಮಾ ಬೇರೆ ಮೊದಲಿಂದ ಇದೆ ಎಂದುಕೊಂಡರು. ಅಯ್ಯೋ ರಾಜೀವ ಎನು ಮಾಡಿದ, ಇನ್ನು ಮುಂದೆ ದೇವರೇ ಬಂದರೂ ಅವನ ಕೆಲಸ ಉಳಿಸಿಕೊಳ್ಳಲಾರನೆಂದು, ಬಾಸ್‌ಗೆ ಮತ್ತೆ ಮ್ಯಾನೇಜ್‌ಮೆಂಟಿಗೆ ಅವಳು ಹೇಳುವುದು ಗ್ಯಾರಂಟಿ ಇವನ ಕತಿ ಮುಗಿದಂತೆ ಎಂದು ಇನ್ನೂ ಕೆಲವರು ಮಾತಾಡುತ್ತಿದ್ದರು. ಇದೆಲ್ಲದರ ಭಯ ಅವನಿಗಿರಲಿಲ್ಲದಂತೆ ಅವನು ನಟಿಸಿದ, ಭಯ ಅವನೊಳಗೆ ತಾಂಡವಾಡಹತ್ತಿತ್ತು.

ಕತ್ತಲು ಸರಿದು ಬೆಳಕು ಹರಿದಿತ್ತು. ರೂಂ ಬಿಟ್ಟು ಕೆಳಗಿಳಿದು ಬಂದು ಮಂಜಣ್ಣನ ಟೀ ಅಂಗಡಿಯಲ್ಲಿ, ಕಣ್ಣ ಉರಿಯಲ್ಲೇ ಪೇಪರ್ ಮೇಲೆ ಕಣ್ಣಾಡಿಸಿ, ಲೊಕಲ್ ಪುಟಗಳನ್ನು ನೋಡುತ್ತಾ ಓ ಸಿಟ್, ಗಂಭೀರವಾಗಿ ಎನ್ನನ್ನೋ ಹತ್ತಿರಕ್ಕೆ ಹಿಡಿದು ಓದತೊಡಗಿದ. ನಮ್ಮ ಕಂಪನಿಯ ಸುದ್ದಿ ಪತ್ರಿಕೆಯಲ್ಲಿ,, ಶಿರೋನಾಮೆಯೇ ಎಲ್ಲರನ್ನೂ ಕೆದಕುವಂತಿತ್ತು ‘ಕಾಲ್ ಸೆಂಟರ್‌ನ ಕನ್ನಡ’ ಎಂದು.
ಸರ್ಕಾರಿ ಪ್ರಾಯೊಜಿತ ಕಾರ್ಯಕ್ರಮವೊಂದರ ‘ಕಾಲ್‌ಸೆಂಟರ್‌ನಲ್ಲಿ ಇಂಗ್ಲೀಷ್ ಬಳಕೆ ಜಾಸ್ತಿಯಾಗಿ, ನಿನ್ನೇ ಅದೇ ಕಂಪನಿಯ ಇಬ್ಬರು ನೌಕರರ ಮಧ್ಯೇ ಜಗಳವಾಗಿದ್ದು ಕನ್ನಡವನ್ನು ಅವಮಾನಿಸಿರುವ ಕಂಪನಿಗೆ ಕರ್ನಾಟಕದಲ್ಲಿ ಬೀಗ ಹಾಕಲು ಮತ್ತು ನೌಕರರನ್ನು ತೆಗೆದು ಹಾಕಲು ಒತ್ತಾಯಿಸಿ ಇವತ್ತು ಕನ್ನಡ ಪರ ಸಂಘಟನೆಗಳು ಸ್ಥಳದಲ್ಲಿ ಬಿಡು ಬಿಟ್ಟಿದ್ದು, ಇಡೀ ದಿನ ಕಾಲ್ ಸೆಂಟರ್ ಬಂದಾಗುವ ಸಾದ್ಯತೆ ಇದೆ’ ಎಂದು ಬರೆದಿತ್ತು.
-2-
ರಾಜೀವನ ಫೋನ್ ರಿಂಗಾಯಿತು, ನೂರಿಪ್ಪತ್ತೂ ಕಿಲೋಮಿಟರ್‌ಗೂ ದೂರವಿರುವ ತನ್ನ ಹಳ್ಳಿಯಿಂದ ಬಂದ ಕರೆ ತನ್ನ ಮಾವನದ್ದು.
ಹಲೋ ಗವಿಂಡಿ ಇಲ್ಲೇ ಬಂದದ್ದಾರ ಇಷ್ಟು ಬೆಳಿಗ್ಗೇಗೆ, ಟೇಪು ಹಾಕಿ ಅಳತೆ ಮಾಡಿ ಒಂದು ಲಕ್ಷ ಮೂವತ್ತು ಸಾವಿರಕ್ಕೆ ಮಾತು ಮುಗಿಸೋಮಂತ, ಅವ್ರು ಒಂದು ಐವತ್ತು ಕೇಳಕತ್ತಾರ, ನಾನು ಈ ಕಡಿ ಸೈಡಿಗೆ ಬಂದು ಮಾತಾಡಕತ್ತಿನಿ ಅಂದ.
ರಾಜೀವನಿಗೆ, ತಿನ್ನಲು ಅನ್ನವಿಲ್ಲದ ಕ್ಷಣದಲ್ಲಿ ಒಬ್ಬ ಸಂಬಂಧಿಕರು ಗೊತ್ತಿರಲಿಲ್ಲ ಅವನಿಗೆ. ಮೊದಲಿನ ಜೀವನ ನೆನೆಸಿಕೊಂಡು ನಿಟ್ಟುಸಿರು ಬಿಟ್ಟ. ಹುಟ್ಟಿದಾಗಿನಿಂದ ತನ್ನ ತಾಯಿಯ ಮುಖವನ್ನೇ ನೋಡಿದವನಲ್ಲ. ತಾನು ಹುಟ್ಟುತ್ತಿದ್ದಂತೆ ತಾಯಿ ಹೊರಟು ಹೋದಳು. ಪಟ್ಟಣದ ವಾಂಚೆಯಿಂದ ತುಂಬಾ ದೂರವೇ ಇರವ ಸಂಪಿಗಳ್ಳಿ ಇವನೂರು. ಇವತ್ತಿಗೂ ಅವನಿಗೆ ಕೆಟ್ಟ ಅನಿಸುವ ವಿಚಾರವೆಂದರೇ ಅವನ ತಾಯಿಯನ್ನು ತಾನೇ ಬಲಿತೆಗೆದುಕೊಂಡೆನೆಂಬುದು. ತಾನು ಚಿಕ್ಕವನಿದ್ದಾಗ ರುದ್ರಪ್ಪಸ್ವಾಮಿ ಜಾತಕ ನೋಡಿ ಹೇಳಿದ್ದು, ಇವನಿಗೆ ಹೆಸರು ಬದಲಾಯಿಸಬೇಕಿದೆ. ಹುಟ್ಟಿದ ನಕ್ಷತ್ರ ಸರಿಯಿಲ್ಲ ಹಾಗಾಗಿ ತಾಯಿಯನ್ನೇ ನುಂಗಿದ್ದಾನೆ. ರ ಅಥವಾ ರಾ ಅಕ್ಷರದಿಂದ ಹೆಸರಿಡಿಯೆಂದು ಇಟ್ಟ ಹೆಸರನ್ನು ಬಿಟ್ಟು ರಾಜೀವನೆಂದು ನಾಮಕರಣ ಮಾಡಿದ್ದರು. ಮೊದಲ ಹದಿನಾಕು ವರ್ಷ ಅಂದರೇ ಅವನ ಎಳನೇ ತರಗತಿವರೆಗೂ ಅವನು ತನ್ನ ಗಂಡಜ್ಜಿಯ ತೊಡೆಯಲ್ಲೇ ಬೆಳೆದದ್ದು. ಓದಿನಲ್ಲಿ ತುಸು ಶ್ಯಾಣೆವಿದ್ದದ್ದರಿಂದ ಬಾಲುವಡಿ ಮುಗಿಯುವುದಕ್ಕಿಂತ ಮೊದಲೇ ಐದು ವರ್ಷಕ್ಕೇನೇ ಒಂದನೇಯ ತರಗತಿಗೆ ಹಾಜರಾತಿ ಹಾಕಿಕೊಂಡಿದ್ದ ಪಾಟೀಲ ಮಾಸ್ತಾರರಿಂದಲೇ ತಾನು ಬುದ್ದಿ ತಿಳಿಯುವ ಮೊದಲೇ ಎಳನೇ ತರಗತಿ ಮುಗಿಸಿದ್ದ ರಾಜೀವ ಮುಂದೆ ತನ್ನ ತಂದೆಯ ಮರುಮದುವೆ, ಮಲತಾಯಿಯ ಧೋರಣೆಯಿಂದ ಬೆಸತ್ತು ತನ್ನ ಗಂಡಜ್ಜಿ ಸಾಯುತ್ತಿದ್ದಂತೆ ತನ್ನ ತಾಯಿಯ ತಾಯಿ ಊರಿಗೆ ಪಲಾಯನ ಮಾಡಿ, ಅಜ್ಜಯ್ಯನ ಛತ್ರದಲ್ಲಿದ್ದು ಹಗಲೆಲ್ಲಾ ಶಾಲಿ ಸಾಯಂಕಾಲದ ಹೊತ್ತಿಗೆ ಪೂಜೆ, ಭಜನೆ, ದೇವರ ಸೇವಾ ಮಾಡುತ್ತಾ ಮೆಟ್ರಿಕ್ ಪಾಸಾಗಿ ಮುಂದೆ ಪಾರ್ಟ್ ಟೈಮ್ ಜಾಬ್ ಅಂತ ಮಾಡಿ ಡಿಗ್ರಿ ಮುಗಿಸುವ ಹೊತ್ತಿಗೆ ಮೀಸೆ ಚಿಗುರಿ ವಯಸ್ಸಿನಲ್ಲಿದ್ದ. ಮೊನ್ನೇ ಹಳ್ಳಿಗೆ ಹೋದಾಗ ತನ್ನ ಮಾವನ ಮನೆ ಕಟ್ಟಲು ಗವಿಂಡಿಗೆ ಕೊಡುವ ಹಣದ ಜವಾಬ್ದಾರಿ ತಾನು ಹೊತ್ತುಕೊಂಡಿದ್ದ. ಅದು ಒಂದರಿಂದ ಒಂದುವರೇ ಲಕ್ಷ ಬರಬಹುದೆಂದು ಅವನ ಊಹೆ. ಐದು ತಿಂಗಳ ಸಂಬಳ ತಗೀದಿಟ್ಟರೇ ಆದಿತೆಂದು. ನಿನ್ನೇ ರಾತ್ರಿಯಿಂದ ಅದು ಬದಲಾಗಿತ್ತು.
ಬಿ. ಕಾಂ ಮುಗಿಸಿದ್ದರಿಂದ ಮುಂದೆ ಯಾವುದೋ ಕಂಪನಿಗೆ ಅಕೌಂಟೆಂಟ್ ಆಗಿ ಸೇರಿ, ಕಂಪನಿಯಿಂದ ಕಂಪನಿಗೆ ಹಾರುತ್ತಾ ಇಲ್ಲಿಗೆ ಬರುವ ಹೊತ್ತಿಗೆ ಎಳು ವರ್ಷಗಳು ಕಳೆದಿವೆ. ಈ ಕಂಪನಿಯಲ್ಲಿ ಸ್ವಲ್ಪ ಸಂಬಳ ಚನ್ನಾಗಿಯೇ ಇತ್ತು. ತನ್ನ ತಂಗಿಯನ್ನು, ತನ್ನ ಮಗನಿಗೆ ಮದುವೆ ಮಾಡಿಕೊಂಡಿದ್ದ ಅಜ್ಜಿ ಉದಾರತೆಗೆ ತಾನು ದುಡಿದಿದ್ದೆಲ್ಲಾ ತನ್ನಜ್ಜಿಯ ಕೈಲಿ ಕೊಡುತ್ತಾ ಬಂದಿದ್ದ ರಾಜೀವನ ಅಕೌಂಟ್ ಬ್ಯಾಲೆನ್ಸ್ ಬರಿ ಹತ್ತು ಸಾವಿರ ರೂಪಾಯಿವರೆಗಿತ್ತು. ಇತ್ತಿಚೆಗೆ ಅಜ್ಜಿ ಕೂಡ ಊರಲ್ಲೆಲ್ಲಾ ತಾನು ಒಂದಾಣಿನೂ ಕೊಟ್ಟಿಲ್ಲ ಎಂದು ಡಂಗುರ ಸಾರಿ ಕಂಡಕಂಡಲ್ಲೆಲ್ಲಾ ಅಸಯ್ಯೇಯಾಗುವಂತೆ ಮಾಡಿದ್ದಳು.
ಹುಟ್ಟು ಅನಾಥನಾಗಿದ್ದ ರಾಜೀವನಿಗೆ ತಂದೆ ತಾಯಿಯ ಪ್ರೀತಿಯಂತೂ ಸಿಗಲಿಲ್ಲ, ಎಲ್ಲಿ ಹೋದರೂ ತಿರಸ್ಕಾರ, ಅವಮಾನ ಮಾಮೂಲಿಯಾಗಿತ್ತು, ಹಾಗಾಗಿ ಪರಸ್ಥಿತಿಗೆ ಹೊಂದಿಕೊಳ್ಳುವುದು ಅವನಿಗೆ ಅನಿವಾರ್ಯವಾಗಿತ್ತು. ಅವನಿಗೆ ಅಡ್ಜೆಸ್ಟ್ ಆಗದವರ ಜೊತೆಗೂ ಅವನು ಹೊಂದಿಕೊಂಡು ಹೋಗುತ್ತಿದ್ದ. ನಿನ್ನೇಯವರೆಗೂ ಅವರ ಅವಮಾನಗಳನ್ನು ಸಹಿಸಿಕೊಂಡಿದ್ದ, ನೀನ್ನೇ ಒಂದಿನ ಸಹಿಸಿಕೊಂಡಿದ್ದರೇ ತನ್ನ ಮಾವನ ಮನೆ ಕಟ್ಟಲೂ ಸುಲಬವಾಗುತ್ತಿತ್ತೆನೋ ಎಂದೆನಿಸಿತವನಿಗೆ. ಮನುಷ್ಯರಿಗಿಂತ ಪುಸ್ತಕಗಳೆಂದರೇ ಪ್ರೀತಿ ಹೊಂದಿದ್ದ ರಾಜೀವನಿಗೆ ಕನ್ನಡದಲ್ಲಿ ಎಂ.ಎ. ಮಾಡಿ ಲಕ್ಚರೆರ್ ಆಗಬೇಕೆಂದವ, ಪರಸ್ಥಿತಿ ಒತ್ತಡಕ್ಕೆ ಸಿಕ್ಕು ಕಾಮರ್ಸ ಮಾಡಿ ಅಕೌಂಟೆಂಟ್ ಆಗಿದ್ದ. ರಾಜ್ಯದ ಪ್ರತಿಷ್ಠಿತ ಕನ್ನಡ ಸಂಘದ ಕಟ್ಟಾಳು, ಎಲ್ಲಿ ಕನ್ನಡಕ್ಕೆ ಅನ್ಯಾಯವಾಗುತ್ತದೋ ಅಲ್ಲಿ ಕನ್ನಡದ ಹೀರಿತನ ಮೆರೆಯುವುದು, ಕನ್ನಡಕ್ಕಾಗಿ ದುಡಿಯುವ ಅವಕಾಶ ಗಿಟ್ಟಿಸಿಕೊಂಡಿದ್ದ.
ಪ್ರತಿದಿನ ಬೆಳಿಗ್ಗೆ ರೂಮು ಬಿಡುವ ಮೊದಲು ಆಂಜನೇಯನ ದರ್ಶನ ಮಾಡಿ, ಗುಡ್ಡಜ್ಜಿ ಮೂರು ತಿಂಗಳ ಹಿಂದೆ ಕೊಟ್ಟಿದ್ದ ನಿಂಬೆಹಣ್ಣನ್ನು ಬಕ್ಕಣಕ್ಕೆ ಹಾಕಿ ಹೊರಡುತ್ತಿದ್ದ. ಇವತ್ತು ದೂರದಿಂದಲೇ ನಮಸ್ಕರಿಸಿದ. ಸುಮಾರು ಬೆಳಗಿನ ಹತ್ತು ಗಂಟೆಯ ಆಸುಪಾಸಿಗೆ ಆಫೀಸಿನ ಹತ್ತಿರ ಬಂದ ರಾಜೀವನ ಕಂಡು ಅಲ್ಲಿದ್ದ ಕನ್ನಡ ಪರ ಹೋರಾಟಗಾರರು, ಕಾರ್ಯಕರ್ತರು ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕೆಂದು ಕೊಂಡಾಡಹತ್ತಿದರು. ಇಂಥ ಎಷ್ಟೋ ಧೋರಣೆಗಳುಳ್ಳ ಕತೆಗಳು ಕಾರ್ಪೋರೇಟ್ ವಲಯದಲ್ಲಿ ನಡೆಯುತ್ತಿರುತ್ತವೆ. ಯಾರೂ ಧೈರ್ಯ ಮಾಡುವುದಿಲ್ಲ. ಇದರಿಂದ ನಿಮ್ಮ ಉದ್ಯೋಗಕ್ಕಾಗಬಹುದಾದ ತೊಡಕುಗಳ ಲೆಕ್ಕಿಸದೇ ಕನ್ನಡ ನುಡಿಗಾಗಿ ಹೊರಾಡಬೆಕೆನ್ನುವ ನಿಮ್ಮ ಕಿಚ್ಚು ಅಗ್ರಮಾನ್ಯವೆಂದರು. ಪತ್ರಿಕೆಗಳಲ್ಲಿ ಬಂದ ವರದಿಯಂತೆ ನಾವು ಕಂಪನಿಯನ್ನು ಮುಚ್ಚಲು ಒತ್ತಾಯಿಸುವುದಿಲ್ಲ. ಹೊರತಾಗಿ ಅವಳನ್ನು ಅಮಾನತುಗೊಳಿಸಿದರೇ ಸಾಕು ಮತ್ತೆ ನೀವು ನೌಕರಿಯಲ್ಲಿರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಎಲ್ಲಿಂದಾದರೂ ಒತ್ತಡ ಬಂದರೇ ಹೇಳಿ ನೋಡಿಕೊಳ್ಳುವ ಎಂದು ಹುಬ್ಬೇರಿಸಿದ ಅವರಿಗೆ ಒಂದು ಹುಸಿನಗೆ ಬೀರಿದ. ಸದ್ಯ ತಾನು ಸೇಪಾದರೂ ಮುಂದೆ ಇದೇ ಕಂಪನಿಯಲ್ಲಿ ಖಂಡಿತ ತನಗೆ ಸ್ಥಾನವಿಲ್ಲವೆನ್ನುವ ಭಯ, ರಾಜೀವನ ಎದೆಬಡಿತವನ್ನು ಹೆಚ್ಚಿಸುತ್ತಿತ್ತು. ಎಷ್ಟೋ ಹೊರಾಟಗಳನ್ನು ಮಾಡಿದ್ದಾಗಿದೆ. ವಿಧ್ಯಾರ್ಥಿಗಳಿಗೋಸ್ಕರ, ಅಲ್ಲಲ್ಲಿ ನಡೆಯುವ ಕನ್ನಡದ ಅನ್ಯಾಯ ಖಂಡಿಸುವುದಕ್ಕೂಸ್ಕರ, ಪರಭಾಷೆ ಚಿತ್ರ ಪ್ರದರ್ಶನ ರದ್ದುಗೊಳಿಸುವುದಕ್ಕೊಸ್ಕರ, ಆದರೇ ಇಂದು ತನ್ನ ಜೀವನಕ್ಕೇ ತಾನೇ ಅಪರಾಧಿಯಾಗಿದ್ದೆನೆಯೇ ಎಂದನಿಸಿತ್ತು. ಒಂದು ದೊಡ್ಡ ಜಾತ್ರೆಯಂತೆ ಮೈದಳೆದ್ದಿದ್ದ ಜನ. ಕಾಲ್‌ಸೆಂಟರ್ ಬಂದಾಗಿತ್ತು. ಎಲ್ಲೆಡೆ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಆಫೀಸಿನಲ್ಲಿ ಜನವಿಲ್ಲದೇ, ಪ್ರದರ್ಶನವಿಲ್ಲದ ಥೇಟರ್‌ನಂತೆ ಖಾಲಿ ಕುರ್ಚಿಗಳು ಬಣ ಬಣ ಎನಿಸುತ್ತಿದ್ದವು. ಐದು ವರ್ಷದಿಂದ ನಿಂತಿರದ ಪ್ಯಾನುಗಳು ಇವತ್ತು ಬಂದಾಗಿದ್ದವು. ನೆಲದ ಹಾಸು ಓಡಾಡಿ ಸವಕಳಿಯಾಗಿದ್ದರೂ ಇಂದ್ಯಾರು ಒಡಾಡದ್ದಿದ್ದುದ್ದಕ್ಕೆ ಅಲ್ಲಲ್ಲಿ ಬಿರುಕು ಬಿಟ್ಟು ಮೇಲೆಳುವ ವ್ಯರ್ಥ ಪ್ರಯತ್ನ ಮಾಡುತ್ತಿತ್ತು. ಎಲ್ಲೆಡೆ ಕೂಗು, ದಿಕ್ಕಾರ, ದಿಕ್ಕಾರ ಕನ್ನಡ ವಿರೋಧಿಗೆ ದಿಕ್ಕಾರ ಎಂದು. ಅವರ ನಿರ್ಧಾರ ಸ್ಪಸ್ಟವಾಗಿತ್ತು ತೇಜುವನ್ನ ಅಮಾನತುಗೊಳಿಸಬೇಕೆಂದು, ಅಲ್ಲಿನ ಜೆಟ್ಪಿ ಮೆಂಬರ್ ಬಂದರು ಅವರು ಹೋರಾಟಕ್ಕೆ ಕೂತರು ಎಂ.ಎಲ್.ಎ. ಬಂದರು ಸಹಕರಿಸಿದರು ಅನಿವಾರ್ಯ ತೇಜುವನ್ನು ಅಮಾನತುಗೊಳಿಸಲಾಯಿತು. ಎಲ್ಲರೂ ಕಾರ್ಯ ಮುಗಿಯಿತೆಂದುಕೊಂಡು ಹೊರಟರು.
ಫೋನ್ ರಿಂಗಣಿಸಿತು.
ಬಾಸ್ ಆ ಕಡೆಯಿಂದ ನೀವು ಮಾಡಿದ್ದು ಎಂತ ತಪ್ಪು ಗೊತ್ತೇ..? ನಿಮ್ಮಂಥವರಿಂದ ಇವತ್ತು ನಮ್ಮ ಕಂಪನಿಯ ಗುಡ್‌ವಿಲ್ ಹಾಳಾಯ್ತು, ಕರ್ನಾಟಕ ಸರ್ಕಾರ ನಮ್ಮ ಪ್ರಾಜೆಕ್ಟ್ ರಿಟೆಂಡರ್ ಮಾಡಲು ಅನುಮೊದಿಸಿದೆ, ಇದಕ್ಕೇಲ್ಲಾ ನೀವೇ ಕಾರಣ, ನನಗೆ ಹೇಳಿದ್ದರೆ ನಾನು ಸರಿಮಾಡುತ್ತಿದ್ದೆ ನಿಮ್ಮ ಊಟಕ್ಕೆ ನೀವೇ ಕಲ್ಲು ಹಾಕಿಕೊಂಡಿರಿ ಕಾರ್ಪೋರೆಟ್ ಸೆಕ್ಟರ್‌ನಲ್ಲಿ ಹೇಗಿರಬೇಕೆಂಬುದ ಮೊದಲು ತಿಳಿದುಕೊಳ್ಳಿ. ನಿಮಗೆ ವಿಥೋಟ್ ನೋಟಿಸ್ ಪೀರೈಡ್ ರ‍್ಮಿನೇಟ್ ಮಾಡಲು ಮ್ಯಾನೆಜ್‌ಮೆಂಟು ಡಿಸಿಜನ್ ಇದೆ ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದರು.
ಎರೆಡು ನಿಮಿಷದಲ್ಲೇ ಮತ್ತೇ ಫೋನ್ ರಿಂಗಣಿಸಿತು
ಎಚ್.ಆರ್. ರಾಘವ, ಬಾಸ್ ಫೋನ್ ಬಂದಿತ್ತು ಅವರು ಸಿಕ್ಕಾಬಟ್ಟೆ ಬೇಜಾರಾಗಿದ್ದಾರೆ ನಿಮ್ಮ ಮೇಲೆ, ಸೋ ವಾಟ್ ವಿ ಡೂ ಮ್ಯಾನ್, ಕ್ಯಾನ್ ಯು ಕಾಂರ್ಪೋಮೈಸ್ ವಿತ್ ಹಿಮ್, ಬೆಟರ್ ಜಸ್ಟ ಯು ರೈಟ್ ಎ ಲೆಟರ್ ಟು ಹುಮ್ ದಟ್ ದಿಸ್ ಮಿಸ್ಟೆಕ್ ಇಸ್ ಪ್ಯೂರ‍್ಲಿ ಡನ್ ಬೈ ಮಿ ಅಂಥ. ಹಾಗೇ ತೇಜುವನ್ನು ಮತ್ತೇ ಜ್ಯೆöÊಂನ್ ಮಾಡಿಕೊಳ್ಳೊಲ್ಲವಂತೆ, ಸೊ ನಿಮ್ಮ ಅಪಾಲಜಿ ಲೆಟರ್‌ನ ಡಿಪಾರ್ಟುಮೆಂಟಿಗೆ ಕೊಟ್ಟು ಪ್ರಾಜೆಕ್ಟ್ ರೀ ಟೇಂಡರ್ ಆಗದಂತೆ ನೋಡಿಕ್ಕೊಳುತ್ತಾರೆ ಬಾಸ್, ಅಂತಿಮವಾಗಿ ನಿಮಗೆ ಅಪ್ರೆöÊಜಲ್ ಆಗದೇ ಇರಬಹುದೆಂದ. ನೋಡಿ ವಿಚಾರಮಾಡಿ ನಿಮ್ಮಂಥ ಕೆಲಸಗಾರರನ್ನು ಕಳೆದುಕೊಳ್ಳಲು ನನಗೂ ಇಷ್ಟವಿಲ್ಲ ಸೋ., ಎಂದ. ಇದೊಂದು ಕಾರ್ಪೋರೇಟ್ ಗಿಮಿಕ್ ಮೊದಲಿದ್ದ ಅಕೌಂಟೆಂಟ್‌ನನ್ನೂ ಹೀಗೆ ಮಾಡಿ ತೆಗೆದದ್ದು ಎಂಬುದ ರಾಜೀವನೂ ಬಲ್ಲ.
ನೋ ಕಾರ್ಪೋಮೈಸ್ ಸರ್, ನನಗೆ ತೊಚಿದ್ದು ನಾನು ಮಾಡಿದೆ. ನಂಗೆ ಗೊತ್ತು ನನ್ನ ಕೆಲಸ ಹೇಗೆ ಉಳಿಸಿಕೊಳ್ಳಬೇಕೆಂದು, ಬೆರೊಂದು ರಾಜ್ಯದ, ರಾಷ್ಟçದ ಕಂಪನಿ ಇಲ್ಲಿ ಬಂದು ನಮ್ಮ ಮಾತೃಭಾಷೆ ನಿಂದಿಸಿದರೂ ಬಾಯಿಮುಚ್ಚಿ ಸುಮ್ಮನಿರುವ ಜಾಯಮಾನ ಕನ್ನಡಿಗರದ್ದಲ್ಲ. ದಿಕ್ಕಾರವಿರಲಿ ಮನಸ್ಸು ಮಾಡಿದರೇ ನಾನು ಮತ್ತೆ ಮರಳಿ ಅಲ್ಲಿಯೇ ಬರಬಲ್ಲೇ ಆದರೆ ನಾನು ಬರುವುದಿಲ್ಲ ಸಾರಿ, ಬಾಯ್ ಎಂದು ಫೋನಿಟ್ಟ.

ರಾಜೀವನಿಗೆ ತನ್ನ ಕಮಿಟ್ಮೆಂಟು ಒಂದು ಕಡೆ, ಕನ್ನಡ ಪ್ರೇಮ ಒಂದು ಕಡೆ, ತನಗೆ ಅನ್ನ ಹಾಕಿದ ಕಂಪನಿಯ ಗುಡ್‌ವಿಲ್‌ಗೆ ತನ್ನಿಂದ ಹೊಡೆತ ಬಿದ್ದದ್ದು ಒಂದು ಕಡೆ ಕಾಡತೊಡಗಿದವು. ತಮ್ಮ ಕೆಲಸ ಮುಗಿಸಿ ವ್ಯಾನಿನಲ್ಲಿ ಹೊರಟಿದ್ದ ಕನ್ನಡ ಕಾರ್ಯಕರ್ತರು ಇವನೆಡೆಗೆ ನೋಡುತ್ತಾ ‘ಸಿರಿಗನ್ನಡಂ ಗೆಲ್ಗೇ’ ಎಂದರು. ರಾಜೀವನ ಕಿವಿ ಅರಳಿದವು. ಈ ನೌಕರಿಗೋಸ್ಕರ ಕನ್ನಡಪ್ರೇಮ ಬಿಡುವುದು ಅಸಾಧ್ಯ, ಕಂಪನಿ ಗುಡ್‌ವಿಲ್‌ಗಿಂತ ಕನ್ನಡದ ಗುಡ್‌ವಿಲ್ ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ, ಕಮಿಟ್‌ಮೆಂಟು ಇದೆ ಆದರೂ ಕಾಂಪ್ರೋಮೈಸ್ ಮಾತೇ ಇಲ್ಲ ಎಂಬ ಧೃಡ ನಿರ್ಧಾರದೊಂದಿಗೆ ಹೊರನಡೆದ. ಕಂಪನಿಯು ಕರ್ನಾಟಕ ಸರ್ಕಾರದಿಂದಲೇ ಬ್ಯಾನ್ ಆಗಿತ್ತು. ನಮ್ಮ ನಡುವಿನ ಹೊಡೆದಾಟದಿಂದ ನೂರಾರು ಜನರಿಗೆ ಕೆಲಸವಿತ್ತ ಕಂಪನಿಯ ಮ್ಯಾನೇಜ್ಮೆಂಟ್ ನಿರ್ಧಾರದಂತೆ ಎಚ್.ಆರ್. ರಾಘವ ಎಲ್ಲರಿಗೂ ನೊಟಿಸ್ ಪಿರೆಡ್ ಒಂದು ತಿಂಗಳು ಎಂದು ಮೇಲ್ ಹಾಕತೊಡಗಿದ, ಇವನು ಇನ್‌ಬಾಕ್ಸ್ ರಿಪ್ರೇಸ್ ಮಾಡಿದರು ಯಾವ ಮೇಲ್ ಬಂದಿರಲಿಲ್ಲ. ಮುಂದಿನ ತಿಂಗಳ ಇ.ಎಮ್.ಆಯ್. ಬರುವಷ್ಟರಲ್ಲಿ ಬೇರೇ ನೌಕರಿ ನೋಡಿಕೊಳ್ಳಬೇಕೆನಿಸಿ, ಜಾಬ್ ಪೋರ್ಟಲ್‌ಗಳಲ್ಲಿ ಸಿ.ವಿ. ಅಪ್ಲೋಡ್ ಮಾಡತೊಡಗಿದ, ಅವನ ಸಿ.ವಿ. ಹರಿದಾಡಿದಲ್ಲೇಲ್ಲಾ ರಿಜೆಕ್ಟ್ ಆಗತೊಡಗಿತು.

ಶಿವಕುಮಾರ ಚನ್ನಪ್ಪನವರ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಹೀಲದಹಳ್ಳಿಯವರು.
‘ಒಂದು ಭ್ರೂಣದ ಕನಸು’ (ಕವಿತಾ ಸಂಕಲನ) ‘ಮುಖವಾಡದ ಮಾಫಿಯಾದಲ್ಲಿ’ (ಕಥಾ ಸಂಕಲನ) ಹಲವು ಪತ್ರಿಕೆಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟವಾಗಿವೆ ಮತ್ತು ಇವರ ಕತೆಗಳಿಗೆ ಹಲವು ಬಹುಮಾನಗಳು ಸಂದಿವೆ
