ಹೀಗೆ ಹಾಡುತ್ತಿರುವಾಗ ಕೆಲವರು ಮೂಲಕವಿಯ ಅಂಕಿತವನ್ನು ಬದಲಿಸಿ ತಮ್ಮ ನಡುವಿನ ಇಲ್ಲವೆ ದೇವರ ಹೆಸರುಗಳನ್ನು ಸೇರಿಸುವುದುಂಟು. ಆದರೆ ಇವು ಜನಪದರು ಹಾಡುತ್ತಿದ್ದ ಹಾಡುಗಳು ಎಂಬ ಕಾರಣದಿಂದಾಗಿ ಪಂಡಿತರು ಇವನ್ನು ಉಪೇಕ್ಷೆ ಮಾಡುತ್ತಿದ್ದರು. ಹೀಗಾಗಿ ಇವುಗಳ ಸಂಗ್ರಹಕಾರ್ಯ ವಿಳಂಬವಾಯಿತು. ಅವು ಹಾಡಿನ ರೂಪದಲ್ಲಿ ಇದ್ದುದರಿಂದ ಜನರ ಬಾಯಲ್ಲಿ ಹೇಗೋ ಉಳಿದುಕೊಂಡು ಅಳಿಯದೆ ಪ್ರಸಾರವಾಗುತ್ತಾ ಬಂದಿವೆ. ಜಾತಿಧರ್ಮಗಳನ್ನು ಮೀರಿ, ಈ ನೆಲದ ತತ್ವಚಿಂತನೆಯನ್ನು ನಿಸರ್ಗ ವಿವೇಕದ ಜೊತೆ ಬೆರೆಸುತ್ತ ಸಮಾಜದ ಚಿಂತನಾಕ್ರಮವನ್ನು ಆರೋಗ್ಯಕರವಾಗಿರುವಂತೆ ಈ ತತ್ವಪದಗಳು ನೋಡಿಕೊಂಡಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ನಾಲ್ಕನೆಯ ಬರಹ
ಈಗ ಅಂದರೆ 2026ರಲ್ಲಿ ಐವತ್ತು ಅಥವಾ ಅರವತ್ತು ವರ್ಷ ವಯಸ್ಸಾಗಿರುವ ವ್ಯಕ್ತಿಗಳು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದರೆ ಅವರು ತಮ್ಮ ಬಾಲ್ಯಕಾಲದಲ್ಲಿ `ಭಜನಾ ಮಂಡಳಿ’ ಎಂಬ ನಾಮಫಲಕಗಳನ್ನು, ಹಾಗೂ ಮುಸ್ಸಂಜೆಗಳಲ್ಲಿ ಆ ಸ್ಥಳಗಳಲ್ಲಿ ಒಂದಷ್ಟು ಜನರು ತಾಳ, ಹಾರ್ಮೋನಿಯಂ, ದಮಡಿ(ತಮಟೆಯಂತಹ ಒಂದು ಚಿಕ್ಕ ವಾದ್ಯ), ಡೋಲು ಮುಂತಾದ ವಾದ್ಯಗಳನ್ನು ಹಿಡಿದು ದೇವರ ಭಕ್ತಿ, ಹಾಗೂ ಜೀವನನೀತಿಗಳನ್ನು ಕುರಿತ ಹಾಡುಗಳನ್ನು ಹಾಡುತ್ತಿದ್ದುದನ್ನು ನೋಡಿರುತ್ತಾರೆ. ರಾಮಕೃಷ್ಣಮಠದ ಭಕ್ತರಿಗೂ ಆ ಮಠದಲ್ಲಿ ಪ್ರತಿ ಸಂಜೆಯೂ ನಡೆಯುವ ಭಜನೆಯ ಪರಿಚಯ ಇರುತ್ತದೆ. ದೂರದರ್ಶನ ಹಾಗೂ ದೂರವಾಣಿಗಳು ನಮ್ಮ ಬದುಕನ್ನು ಈಗಿನಂತೆ ಆಕ್ರಮಿಸದಿದ್ದ ದಿನಗಳು, ಅಂದರೆ ಜಾಗತೀಕರಣಕ್ಕೂ ಕಾಲು ಶತಮಾನದಷ್ಟು ಮುಂಚಿನ ದಿನಗಳು ಅವು.
ಮೇಲೆ ಪ್ರಸ್ತಾಪಿಸಿದ ಭಜನಾಮಂಡಳಿಗಳಲ್ಲಿ ಯಾವ ಹಾಡುಗಳನ್ನು ಹಾಡುತ್ತಿದ್ದರು ಎಂದು ನಾವು ಗಮನಿಸಿದರೆ, ಶಿವಶರಣ ವಿರಚಿತ ವಚನಗಳು, ಹರಿದಾಸ ವಿರಚಿತ ದೇವರನಾಮಗಳ ಜೊತೆಗೆ `ತತ್ವಪದಗಳು’ ಎಂಬ ಇನ್ನೊಂದು ರೀತಿಯ ಹಾಡುಗಳನ್ನು ಸಹ ಅವರು ಹಾಡುತ್ತಿದ್ದುದು ನಮಗೆ ತಿಳಿದು ಬರುತ್ತದೆ. `ಕೋಗಿಲೆ ಚೆಲ್ವ ಕೋಗಿಲೆ’, `ಜ್ಯೋತಿ ಬೆಳಗುತಿದೆ, ವಿಮಲ ಪರಂಜ್ಯೋತಿ ಬೆಳಗುತಿದೆ’, `ಸಕಲಕೆಲ್ಲಕೆ ನೀನೆ ಅಕಳಂಕ ಗುರುವೆಂದು’, `ಸದಾಶಿವ ನಿನ್ನ ಪಾದ ಮುಟ್ಟಿ ಹೇಳುತೇನೆ’, `ಸೋರುತಿಹುದು ಮನೆಯ ಮಾಳಿಗೆ’, `ಎಲ್ಲಾ ರೂಪವು ತಾನಂತೆ’ ……. ಈ ಹಾಡುಗಳು. ಆಕಾಶವಾಣಿಯಲ್ಲಿ ಪ್ರತಿ ಮುಂಜಾನೆ ಪ್ರಸಾರವಾಗುತ್ತಿದ್ದ ಭಕ್ತಿಗೀತೆಗಳ ಭಾಗವಾಗಿದ್ದದ್ದು ಸಹ ಮೇಲೆ ಪ್ರಸ್ತಾಪಿಸಿದ ಪೀಳಿಗೆಗೆ ನೆನಪಿರಬಹುದಾದ ಸಂಗತಿಯಾಗಿದೆ. ಶಾಲಾಕಾಲೇಜುಗಳ ಕನ್ನಡ ಪಠ್ಯಪುಸ್ತಕಗಳಲ್ಲಿಯೂ ಇವುಗಳನ್ನು ನಾವು ಗಮನಿಸಬಹುದಿತ್ತು.
ಏನಿವು ತತ್ವಪದಗಳು? ಕನ್ನಡ ನಾಡಿನಲ್ಲಿ ಅವುಗಳ ಪ್ರಾಮುಖ್ಯ ಏನು? ವಚನಗಳು, ದೇವರನಾಮಗಳಿಗೂ ಮತ್ತು ಇವುಗಳಿಗೂ ಇರುವಂತಹ ವ್ಯತ್ಯಾಸ ಏನು? ಈ ಪ್ರಶ್ನೆಗಳಿಗೆ ಉತ್ತರ ಪಡೆಯುವುದು ಹಾಗೂ ತತ್ವಪದಗಳ ಭಾಷೆಯ ವಿಶಿಷ್ಟತೆಯನ್ನು ಅರಿಯಲು ಪ್ರಯತ್ನ ಮಾಡುವುದು ಈ ಲೇಖನದ ಉದ್ದೇಶವಾಗಿದೆ.
*****
ತತ್ವಪದ ಎಂಬ ಶಬ್ಧದಲ್ಲಿ ತತ್ವ ಮತ್ತು ಪದ ಎಂಬ ಎರಡು ಪದಗಳು ಸೇರಿವೆ. ತತ್ವ ಅಂದರೆ ಬದುಕಿನ ಅರ್ಥದ ಸಾರ. ಕೆಲವರು ಇದನ್ನು `ಪರಾತ್ಪರ ಪರಬ್ರಹ್ಮ ಸ್ವರೂಪ’ ಎಂದೂ ಹೇಳುತ್ತಾರೆ. ಪದ ಎಂದರೆ ಹಾಡು. ಅಂದ ಮೇಲೆ, ತತ್ವಪದ ಅಂದರೆ ಬದುಕಿನ ಅರ್ಥವನ್ನು ಕುರಿತು ಜಿಜ್ಞಾಸೆ ಮಾಡುವ ಒಂದು ಹಾಡು ಎಂದಾಯಿತು. ತತ್ವಪದಗಳಿಗೆ ಕೈವಲ್ಯಪದ, ಸ್ವರವಚನ, ಸ್ವರಪದ, ಸ್ವರಬೊಲ್ಲಿ ಎಂಬೆಲ್ಲ ಹೆಸರುಗಳಿವೆ. ಒಟ್ಟಿನಲ್ಲಿ ಇವು ನಮ್ಮ ಸಂಸ್ಕೃತಿಯ ಹಾಡುಗಬ್ಬಗಳ ಸಿರಿಖಜಾನೆಯಲ್ಲಿರುವ ವಿಶಿಷ್ಟ ರತ್ನಗಳು.
ಕನ್ನಡ ಸಾಹಿತ್ಯದ ರೂಪವೈವಿಧ್ಯಕ್ಕೆ ಕಾರಣವಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ತತ್ವಪದವೂ ಒಂದು. ಕನ್ನಡ ವಿವೇಕದ ಮುಖ್ಯ ಖಜಾನೆಯೊಂದು ತತ್ವಪದಗಳಲ್ಲಿ ಅಡಗಿದೆ. ಸಮೃದ್ಧವಾದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಶಿಷ್ಟ ಹಾಗೂ ಜಾನಪದ ಲೋಕಗಳ ವಿಶಿಷ್ಟ ಮಿಶ್ರಣ ಅಂದರೆ ತತ್ವಪದಗಳು. ಅವು ನಿರೂಪಿಸಿದ ನುಡಿಸಮಾಜವು ತುಂಬ ವಿಶಿಷ್ಟವಾದುದು.
ಹದಿನೈದನೇ ಶತಮಾನದ ಆಸುಪಾಸು ಜೀವಿಸಿದ್ದ ನಿಜಗುಣಶಿವಯೋಗಿಗಳು ತತ್ವಪದ ಸಾಹಿತ್ಯದ ಆದ್ಯ ಪ್ರವರ್ತಕರು ಅನ್ನಬಹುದು. ಅವರ `ಕೈವಲ್ಯ ಪದ್ಧತಿ’ ಎಂಬ ಗ್ರಂಥವು ಅನುಭಾವ ತತ್ವಪದಗಳ ಸಂಕಲನ, ನಂತರ ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಘನಮಠದರ‍್ಯ, ಶಿಶುನಾಳ ಶರೀಫ ಮೊದಲಾದವರಿಂದ ಈ ಪರಂಪರೆಯು ಮೈದುಂಬಿ ಮುಂದುವರಿಯಿತು. ತತ್ವಪದಕಾರರು ತಮ್ಮ ಪದಗಳ ಮೂಲಕ ಸಾಮಾನ್ಯ ಭಾಷೆಯಲ್ಲಿ ಆಧ್ಯಾತ್ಮಿಕ ಜೀವನದ ಆದರ್ಶವನ್ನು ಬಿತ್ತಲು ಕಾರಣರಾದರು. ಭಾವನೆಗೆ ಅನುಗುಣವಾದ ರಾಗಗಳೊಂದಿಗೆ ಮೂಡಿಬಂದಿರುವುದರಿಂದ ಈ ತತ್ವಪದಗಳು ತುಂಬ ಪರಿಣಾಮಕಾರಿಯಾದವು.

ಕನ್ನಡ ಭಾಷೆಯ ದೇಶಿ ಸೊಗಡಿನ ಆಡುನುಡಿಯನ್ನು ಬಳಸಿಕೊಂಡು ಪದಗಳನ್ನು ರಚಿಸುವ ಮೂಲಕ ಕನ್ನಡ ಭಾಷೆಗೆ ಹೊಸ ಜೀವಂತಿಕೆಯನ್ನು ತಂದುಕೊಟ್ಟವರು ತತ್ವಪದಕಾರರು. ವಚನಕಾರರ ಹಾಗೂ ಕೀರ್ತನಕಾರರ ತರುವಾಯ ಜನವಾಣಿಯನ್ನು ಬಳಸಿಕೊಂಡು ಇವರು ಸಂಪದ್ಭರಿತ ಸಾಹಿತ್ಯವನ್ನು ನಿರ್ಮಿಸಿದರು.
ತತ್ವಪದಗಳ ಸರಳ ಸುಂದರ ಭಾಷೆಯು ಹಾಡುಗಳ ಸ್ವರೂಪದಲ್ಲಿದ್ದು ಆಧ್ಯಾತ್ಮಿಕ ಸಂಗತಿಗಳನ್ನು ಜನರಿಗೆ ಗೊತ್ತಿರುವ ರೂಪಕಗಳ ಮೂಲಕ ಮುಂದಿಡುತ್ತವೆ. ಉದಾಹರಣೆಗೆ ಮುಪ್ಪಿನ ಷಡಕ್ಷರಿಯವರ ಪ್ರಸಿದ್ಧ ಪದ “ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ”. ಇದು, ತನ್ನ ಕನಸಿನಲ್ಲಿ ತಾನು ರಾಜನಾದಂತೆ ಭಾಸವಾಗಿ ಕಣ್ಣು ಬಿಟ್ಟಾಗ ಏನೂ ಇಲ್ಲದ್ದು ಅರಿವಾಗುವಂತಹ ಭಿಕ್ಷುಕನ ಕಥೆ. “ಧರೆಯ ಭೋಗವನ್ನು ನೆಚ್ಚಿ ಹರನ ಮರೆದು ಕೆಡಲು ಬೇಡ, ಧರೆಯ ಭೋಗ ಕನಸಿನಂತೆ ಕೇಳು ಮಾನವ” ಎಂಬ ಸಂದೇಶವನ್ನು ಕೊಡುವ ಪದ ಇದು. ಇದರ ಭಾಷೆ ಹಾಗೂ ಹೇಳುವ ರೀತಿ ಸರಳವಾದದ್ದು, ಆದರೆ ಇದು ಕೊಡುವ ಸಂದೇಶವು ತುಂಬ ಅರ್ಥಪೂರ್ಣವಾದದ್ದು.
ಮೇಲಿನ ಉದಾಹರಣೆಯಂತಹ ತತ್ವಪದಗಳು ತಮ್ಮ ರಾಗದಿಂದಾಗಿ ಮತ್ತು ತಾವು ಕೊಡುವ ಮೌಲಿಕ ಸಂದೇಶದಿಂದಾಗಿ, ಇವು ಜನಸಾಮಾನ್ಯರ ಮನಸ್ಸನ್ನು ಆಕರ್ಷಿಸಿ ಅವರ ಬಾಯಲ್ಲಿ ತೋಂಡಿ ಸಂಪ್ರದಾಯದ ಹಾಡುಗಳಂತೆ ಉಳಿದುಬಂದವು. ಇನ್ನೊಂದು ಉದಾಹರಣೆ – `ಸೋರುತಿಹುದು ಮನೆಯ ಮಾಳಿಗೆ’ ಪದ. ಶಿಶುನಾಳ ಶರೀಫರ ರಚನೆ ಇದು. ಇಂತಹ ಹಾಡುಗಳನ್ನು ಏಕತಾರಿ, ತಾಳ, ದಮಡಿ ಮೊದಲಾದ ಸರಳವಾದ ಜನಪದೀಯ ವಾದ್ಯಗಳೊಂದಿಗೆ ಭಜನಾಮಂಡಳಿಗಳಲ್ಲಿ ಹಾಡುತ್ತಿದ್ದರು. ನೆಲಮೂಲ ನುಡಿಯಲ್ಲಿ ಪ್ರಾದೇಶಿಕ ಸಂಗೀತವನ್ನು ಬಳಸಿ ಜನಪದ ಸಮುದಾಯವು ಮೈದುಂಬಿ, ಮನದುಂಬಿ ಹಾಡುವಂತಹ ಹಾಡುಗಳನ್ನು ಕೊಟ್ಟ ಹೆಗ್ಗಳಿಕೆಯು ತತ್ವಪದಕಾರರಿಗೆ ಸಲ್ಲುತ್ತದೆ.
ಈಗ ತತ್ವಪದಗಳ ಭಾಷಿಕ ರೂಪುರೇಷೆಯನ್ನು ನೋಡೋಣ. ಇವು ಪಲ್ಲವಿಯಿಂದ ಪ್ರಾರಂಭವಾಗುತ್ತವೆ. ಪಲ್ಲವಿಯಲ್ಲಿ ಹಾಡಿನ ವಿಷಯದ ಸಾರಸಂಗ್ರಹ ಇರುತ್ತದೆ. ಹಾಡುವಾಗ ಪ್ರತಿಯೊಂದು ನುಡಿ ಅಥವಾ ಚರಣದ ನಂತರ ಪಲ್ಲವಿ ಬರುತ್ತದೆ. ಬರೆಯುವಾಗ ಹಾಗೆ ಬರೆಯುವುದಿಲ್ಲ. ಪಲ್ಲವಿ, ಒಮ್ಮೊಮ್ಮೆ ಅನುಪಲ್ಲವಿ, ನಂತರ ಹಲವಾರು ಚರಣಗಳು ಬಂದು ಕೊನೆಗೆ ಕಡ್ಡಾಯವಾಗಿ ತತ್ವಪದಕಾರರ ಮುದ್ರಿಕೆ ಅಥವಾ ಅಂಕಿತನಾಮ ಬರುತ್ತದೆ. ಉದಾಹರಣೆಗೆ ನಿಜಗುಣಶಿವಯೋಗಿಗಳ ಅಂಕಿತ ಶಂಭುಲಿಂಗ, ಮುಪ್ಪಿನ ಷಡಕ್ಷರಿಯವರದು ಷಡಕ್ಷರ ಲಿಂಗ, ಶಿಶುನಾಳ ಶರೀಫ ಸಾಹೇಬರದು ಶಿಶುನಾಳಾಧೀಶ ….. ಹೀಗೆ. ಇದು ತತ್ವಪದದ ಸ್ವರೂಪದ ವಿಚಾರವಾಯಿತು. ಪ್ರತಿಯೊಂದು ತತ್ವಪದದ ಬರಹರೂಪದಲ್ಲೂ ಅದರ ರಾಗ ಹಾಗೂ ಕೆಲವೊಮ್ಮೆ ತಾಳಗಳ ನಿರ್ದೇಶನ ಇರುತ್ತದೆ.
ಒಂದು ರೀತಿಯಲ್ಲಿ ನೋಡಿದರೆ ತತ್ವಪದಗಳು ನಮ್ಮ ನೆಲದಲ್ಲಿ ಸಹಜವಾಗಿ ಬೆಳೆಯುವ ಗಿಡಗಳಂತಹ ಗುಣ ಹೊಂದಿವೆ. ಬೀದಿಗಳಲ್ಲಿ, ಸಂತೆಮಾಳಗಳಲ್ಲಿ, ಅರಳಿಕಟ್ಟೆಗಳಲ್ಲಿ, ಭಂಗಿ ಸೇದುವ ಸಂದರ್ಭಗಳಲ್ಲಿ, ಹರಟೆ, ಮಾತುಕತೆಯ ಹೊತ್ತಿನಲ್ಲಿ, ಹೇಳುವವರು ಕೇಳಿಸಿಕೊಳ್ಳುವವರು ಇದ್ದಾಗ, ದೇವರು-ಬದುಕು ಮತ್ತು ಅದರ ನಿಗೂಢತೆ, ನಶ್ವರತೆ-ಸಾರ್ಥಕತೆ-ಒಳ್ಳೆಯದು-ಕೆಟ್ಟದ್ದು-ಜಾತಿ-ಧರ್ಮಗಳಾಚೆಗೆ ಹರಿಯುವ ಮಾನವೀಯ ಸತ್ವ…. ಇಂತಹ ವಿಷಯಗಳ ಚರ್ಚೆ ಬಂದಾಗ ಇದ್ದಕ್ಕಿದ್ದಂತೆ, ಯಾವುದೇ ಔಪಚಾರಿಕತೆ ಇಲ್ಲದೆ ಹುಟ್ಟಿದಂಥವು ಅವು. ಚಿಂತನೆ ಮಾಡುವ ಶಕ್ತಿ ಇರುವ ನುಡಿಜಾಣರು ಏಕತಾರಿಯನ್ನೋ, ತಾಳ-ದಮಡಿಗಳನ್ನೋ ಬಳಸಿ ಆ ಕ್ಷಣದಲ್ಲಿ ಆಶುಕವಿತೆಯ ಹಾಗೆ ರಾಗವಾಗಿ ಹಾಡುವುದು, ಅವರ ಸುತ್ತ ನೆರೆದವರು ತಾವು ಅದನ್ನು ಪುನರಾವರ್ತಿಸುವುದು … ಹೀಗೆ ಹಾಡುತ್ತಾ, ಪುನರಾವರ್ತಿಸುತ್ತಾ, ಮತ್ತೊಮ್ಮೆ ಅದನ್ನು ನೆನಪಿಸಿಕೊಂಡು ಹಾಡುತ್ತಾ…. ಕೆಲವು ದಿನಗಳಲ್ಲಿ ಅವು ಅವರು ಹಾಡುಗಳ ಪಟ್ಟಿಗೆ ಇದು ಸೇರಿಹೋಗುತ್ತಿತ್ತು. ಒಂದು ಉದಾಹರಣೆಯಾಗಿ `ಬಿದ್ದೀಯಬ್ಬೇ ಮುದುಕಿ’ ಎಂಬ ಶಿಶುನಾಳ ಶರೀಫರ ತತ್ವಪದವನ್ನು ಗಮನಿಸಬಹುದು. ಸಂತೆಗೆ ಬಂದ ಒಬ್ಬಳು ಹಣ್ಣುಹಣ್ಣು ಮುದುಕಿಯನ್ನು ಈ ಭೂಮಿಯ ಮೇಲಿನ ಜೀವಕ್ಕೆ ಹೋಲಿಸಿ, `ಏಕೆ ಬಂದೆ ಈ ಸಂತೆಗೆ?’ ಎಂದು ಮುದುಕಿಯನ್ನು ಕೇಳುವ ನೆಪದಿಂದ, ಜೀವವು ಈ ಭೂಮಿಯಲ್ಲಿ ಪಡುವ ಕಷ್ಟಗಳನ್ನು ಈ ಪದದಲ್ಲಿ ವರ್ಣಿಸಲಾಗಿದೆ.
ಭಜನೆಯ ಹಾಡುಗಳು ಮತ್ತು ತತ್ವಪದಗಳು ಅಭಿನ್ನ. ಪ್ರಾಪಂಚಿಕರಿಗೆ ಪಾರಮಾರ್ಥಿಕ ವಿಚಾರಗಳನ್ನು ಬೋಧಿಸುವ ಹಾಡುಗಳು ಇವು. ಅವು ಒಬ್ಬನಿಂದ ರಚಿತವಾದರೂ ಎಲ್ಲರ ಸ್ವತ್ತಾಗಿರುತ್ತಿದ್ದವು. ಹೀಗೆ ಹಾಡುತ್ತಿರುವಾಗ ಕೆಲವರು ಮೂಲಕವಿಯ ಅಂಕಿತವನ್ನು ಬದಲಿಸಿ ತಮ್ಮ ನಡುವಿನ ಇಲ್ಲವೆ ದೇವರ ಹೆಸರುಗಳನ್ನು ಸೇರಿಸುವುದುಂಟು. ಆದರೆ ಇವು ಜನಪದರು ಹಾಡುತ್ತಿದ್ದ ಹಾಡುಗಳು ಎಂಬ ಕಾರಣದಿಂದಾಗಿ ಪಂಡಿತರು ಇವನ್ನು ಉಪೇಕ್ಷೆ ಮಾಡುತ್ತಿದ್ದರು. ಹೀಗಾಗಿ ಇವುಗಳ ಸಂಗ್ರಹಕಾರ್ಯ ವಿಳಂಬವಾಯಿತು. ಅವು ಹಾಡಿನ ರೂಪದಲ್ಲಿ ಇದ್ದುದರಿಂದ ಜನರ ಬಾಯಲ್ಲಿ ಹೇಗೋ ಉಳಿದುಕೊಂಡು ಅಳಿಯದೆ ಪ್ರಸಾರವಾಗುತ್ತಾ ಬಂದಿವೆ. ಜಾತಿಧರ್ಮಗಳನ್ನು ಮೀರಿ, ಈ ನೆಲದ ತತ್ವಚಿಂತನೆಯನ್ನು ನಿಸರ್ಗ ವಿವೇಕದ ಜೊತೆ ಬೆರೆಸುತ್ತ ಸಮಾಜದ ಚಿಂತನಾಕ್ರಮವನ್ನು ಆರೋಗ್ಯಕರವಾಗಿರುವಂತೆ ಈ ತತ್ವಪದಗಳು ನೋಡಿಕೊಂಡಿವೆ.
“ತತ್ವಪದಗಳು ಗುರುಪಂಥಗಳಿಗೆ ಸೇರಿದಂಥವು. ಇಲ್ಲಿ ಗುರುವೇ ಅಂತಿಮ, ಗುರುವೇ ಸರ್ವಸ್ವ. ಸಾಧಕನಿಗೆ ತನ್ನ ಸಾಧನೆಯ ಮಾರ್ಗದರ್ಶನಕ್ಕಾಗಿ ಗುರುವೊಬ್ಬ ಬೇಕೇ ಬೇಕು. ಗುರುವಿಲ್ಲದ ಸಾಧನೆಯ ಚಕ್ರ ಪೂರ್ತಿಯಾಗುವುದಿಲ್ಲ. ಗುರುವಿನಿಂದ ದೀಕ್ಷೆ ತೆಗೆದುಕೊಂಡವನನ್ನು ಗುರುಮಕ್ಕಳು ಎಂದು ಗುರುತಿಸುತ್ತಾರೆ. ಶಿಕ್ಷಾಗುರು, ದೀಕ್ಷಾಗುರು, ಮೋಕ್ಷಗುರು, ಗುರುವಿನ ಗುರು ಮತ್ತು ಪರಮಗುರು. ಕನ್ನಡ ನುಡಿಲೋಕಕ್ಕೆ ಇದು ತಂದಿರುವ ಶ್ರೀಮಂತಿಕೆಯನ್ನು ಗಮನಿಸಬೇಕು. ಚಲನರೂಪೀ ಗುರು ಮಾತ್ರವೇ ನಿರಂತರ ಬದಲಾಗುತ್ತಿರುವ ಸತ್ಯದ ಸ್ವರೂಪವನ್ನು ಕಾಣಿಸಿಕೊಡಬಲ್ಲ. ಗುರುವಿನಿಂದ ದೀಕ್ಷಾಬದ್ಧರಾದ ಸಾಧಕರು ನಿರಂತರ ಸಾಧನೆಯ ಹಾದಿಯಲ್ಲಿರುತ್ತಾರೆ. ನಿಗದಿತ ಸಮಯದಲ್ಲಿ, ನಿಗದಿತ ಸ್ಥಳಗಳಲ್ಲಿ ಅವರೆಲ್ಲ ಒಟ್ಟಿಗೇ ಸೇರಿ ತತ್ವಚಿಂತನೆ ನಡೆಸುತ್ತಾರೆ. ಅದು ಹತ್ತಿರದ ಬೆಟ್ಟದ ಗವಿಗಳಾಗಬಹುದು, ಪಾಳು ಗುಡಿಗಳಾಗಬಹುದು, ಊರಿನ ದೇವಸ್ಥಾನಗಳಾಗಬಹುದು, ಅಲ್ಲಿ ಸೇರಿ ತತ್ವಪದಗಳನ್ನು ಹಾಡುತ್ತಾರೆ, ತತ್ವ ಚಿಂತನೆ ನಡೆಸುತ್ತಾರೆ. ಇಲ್ಲಿ ನಡೆಸುವ ತತ್ವ ಜಿಜ್ಞಾಸೆಯನ್ನು ತತ್ವಕ್ಕೆ ಹಾಕುವುದು ಎನ್ನುತ್ತಾರೆ”. (ನೋಡಿ – ಪುಸ್ತಕ – ತತ್ವಪದ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯ ಮಾಲಿಕೆ, ಲೇಖಕರು – ಡಾ. ಸುರೇಶ ಹನಗಂಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಪ್ರಕಟಣೆಯ ವರ್ಷ – 2022).
*****
ತತ್ವಪದಕ್ಕೆ ಪದ, ಪದನು, ಸ್ವರಪದ, ಬೆಡಗಿನ ಸ್ವರಪದ, ಅನುಭಾವಪದ, ಸ್ವರಬೊಲ್ಲ, ಗೀತ, ವಚನ, ಸ್ವರವಚನ, ರಾಗಲಲಿತವಚನ, ಸ್ವರವಚನ ಎಂದೆಲ್ಲ ಹೆಸರುಗಳಿವೆ. ಇಷ್ಟೊಂದು ಹೆಸರುಗಳಿರುವುದೇ ಇದಕ್ಕೆ ಎಷ್ಟು ವ್ಯಾಪ್ತಿ ಇದೆ ಎಂಬುದನ್ನು ತೋರಿಸುತ್ತದೆ.
ತತ್ವಪದದ ಸ್ವರವಚನ ಎಂಬ ರೂಪಕ್ಕೆ ಬರೋಣ. ಭಾಷೆಯ ದೃಷ್ಟಿಯಿಂದ ಸ್ವರವಚನಗಳಲ್ಲಿ ನಡುಗನ್ನಡದ ಬಳಕೆ ಸಾಮಾನ್ಯವಾಗಿ ಕಂಡು ಬಂದರೂ ಹನ್ನೆರಡನೆಯ ಶತಮಾನದ ಶರಣರ ರಚನೆಗಳಲ್ಲಿ ತತ್ವಪದಗಳಿಗೆ ಅವರು ಕೊಟ್ಟ ಹೊಸ ರೂಪ ಕಾಣಿಸುತ್ತದೆ. ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ ಹಾಡು ಅಥವಾ ಗೀತ ಎಂಬ ಸಾಹಿತ್ಯ ಪ್ರಕಾರವು ಅತ್ಯಂತ ಪ್ರಾಚೀನವಾದುದು. ಕನ್ನಡ ಸಾಹಿತ್ಯವು ಲಿಖಿತ ಗ್ರಾಂಥಿಕ ರೂಪ ತಾಳುವುದಕ್ಕಿಂತ ಮುಂಚೆಯೇ ಅದು ಜನಪದರಲ್ಲಿ ಹುಟ್ಟಿ ಕಂಠಸ್ಥವಾಗಿ ಮೌಖಿಕ ಪರಂಪರೆಯ ಮೂಲಕ ಹರಿದು ಬಂದಿತ್ತು. ನಮ್ಮ ಜನಪದರ ಹುಟ್ಟಿನೊಂದಿಗೇ ಈ ಸಾಹಿತ್ಯ ಪ್ರಕಾರವು ಜನ್ಮ ತಳೆಯಿತೆಂದು ನಾವು ಭಾವಿಸಲು ಅಡ್ಡಿಯಿಲ್ಲ. ಪ್ರಾಚೀನ ಕಾವ್ಯಗಳಲ್ಲಿ ಉಲ್ಲೇಖವಾದ ಪಾಡು, ಪಾಡುಗಬ್ಬ, ಒನಕೆವಾಡು, ಪಾಡುಗವಿತೆ, ಬೀದಿವಾಡು ಎಂಬ ಹೆಸರುಗಳು ಈ ಪ್ರಕಾರದ ಹಿಂದಿನ ಇರುವಿಕೆಯನ್ನು ಸೂಚಿಸುತ್ತವೆ. 12ನೆಯ ಶತಮಾನದ ಶಿವಶರಣರು ಈ ಹಳೆಯ ರೂಪಕ್ಕೆ ಹೊಸಕಳೆಯನ್ನು ತಮ್ಮ ಸ್ವರವಚನಗಳ ಮೂಲಕ ನೀಡಿದರು. ಜನಸಾಮಾನ್ಯರಲ್ಲಿ ಮೊದಲು ಹಗುರಾದ ಶೃಂಗಾರ, ಅತಿಯಾದ ಅಶ್ಲೀಲ ಭಾವಗಳನ್ನು ಪ್ರಕಟಿಸಲು ತನ್ನನ್ನು ಒಡ್ಡಿಕೊಂಡ ಈ ಸಾಹಿತ್ಯಪ್ರಕಾರವನ್ನು ಶರಣರು ತಮ್ಮ ಶಿವಾನುಭವ, ಶಿವತತ್ವ, ಶಿವಸ್ತುತಿಗಳಿಗೆ ಮಾಧ್ಯಮವಾಗಿ ಮಾಡಿಕೊಂಡು ಅದಕ್ಕೊಂದು ಗಂಭೀರತೆಯನ್ನು. ಸಾತ್ವಿಕತೆಯನ್ನು ತಂದುಕೊಟ್ಟರು. ಅವರ ಶುದ್ಧ ಚಾರಿತ್ರ್ಯ, ನಡೆ-ನುಡಿ ಆಚಾರ ವಿಚಾರಗಳಿಗನುಗುಣವಾಗಿ ಭಕ್ತಿ, ತತ್ವ, ಆಧ್ಯಾತ್ಮಾನುಭವವನ್ನು ಅಳವಡಿಸಿಕೊಂಡು, ಜನಪದರಲ್ಲಿ ಪಾಡು ಆಗಿದ್ದದ್ದು `ಸ್ವರವಚನ’ ಎಂಬ ಹೊಸ ಹೆಸರನ್ನು ಧರಿಸಿ ಅದು ತನ್ನ ಘನತೆ-ಗೌರವಗಳನ್ನು ಹೆಚ್ಚಿಸಿಕೊಂಡಿತು.
ಅಧ್ಯಯನದ ಅನುಕೂಲಕ್ಕಾಗಿ ಸ್ವರವಚನಗಳನ್ನು ನಾಲ್ಕು ಯುಗಗಳಾಗಿ ವಿಭಜಿಸಿ ಅಧ್ಯಯನ ಮಾಡುತ್ತಾರೆ. ಬಸವ ಯುಗ, ನೂರೊಂದು ವಿರಕ್ತರ ಯುಗ, ತೋಂಟದ ಸಿದ್ಧಲಿಂಗರ ಯುಗ ಹಾಗೂ ತತ್ವಪದಕಾರರ ಯುಗ. ಇಲ್ಲಿನ ನಾಲ್ಕನೆಯ ಯುಗವಾದ ತತ್ವಪದಗಳ ಯುಗವನ್ನು ಹದಿನೆಂಟು ಹಾಗೂ ಹತ್ತೊಂಬತ್ತನೆಯ ಶತಮಾನಗಳನ್ನು ಸ್ವರವಚನಗಳ ಸುಗ್ಗಿಯ ಕಾಲ ಎಂದು ಹೇಳಲಾಗುತ್ತದೆ.

ತೀರ್ಮಾನರೂಪವಾಗಿ ಹೀಗೆ ಹೇಳಬಹುದು. ತತ್ವಪದಗಳೆಂದರೆ ನಮ್ಮ ಸಂತೆಮಾಳಗಳಲ್ಲಿನ ಸಂತರು ರಚಿಸಿ ಜನರಿಗೆ ಹಾಡಲು ಕಲಿಸಿದ ಜೀವನ ವಿವೇಕದ ಸಂಪತ್ತಿನ ಗಣಿಗಳು. ನಮ್ಮ ಸಮುದಾಯಜ್ಞಾನದ ಮುಖ್ಯ ಭಾಗಗಳು. ಪದ್ಯ, ಮಾತು, ರಾಗ, ತಾಳ, ಧಾಟಿ, ಅರ್ಥಗಳ ವಿಶಿಷ್ಟ ಸಮಾಗಮದ ಅಚ್ಚರಿಗಳು. ಇವುಗಳನ್ನು ನಮ್ಮ ಕಿರಿಯ ಪೀಳಿಗೆಗಳಿಗೆ ಪರಿಚಯಿಸುವ ಕೆಲಸ ಜರೂರಾಗಿ ಆಗಬೇಕಿದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
