1.ಒಲವ ಜಾತಿ
ಆಕಾಶದ ತಿಳಿನೀಲಿಯಲಿ
ಅಲೆಯಲೆಯಾಗಿ ತೇಲುತಿದ್ದ
ಅವನೆದೆಗೆ ಹಾರಬೇಕೆಂದಿದ್ದೆ
ಗರಿಬಿಚ್ಚಿ
ಬಂದೆ ಅಂಗಳಕೆ
ಬಾಳಬಂಡಿಯ ಸಾಮಾನುಗಳ
ಬೆನ್ನಚೀಲದಿ ಹೊತ್ತು
ಎಷ್ಟೊಂದು ಹಗುರ ಒಲವಿನ ಲಗೇಜು!
ಬೆಳದಿಂಗಳ ಚುಕ್ಕಿ ಚಪ್ಪರದಡಿ
ಮುಂಗಾಲ ಮೇಲೆ ನಿಂತು ಕೈಚಾಚಿ
ಇನ್ನೇನು ಮೇಲಕ್ಕೆ
ಚಿಮ್ಮಬೇಕು..
ಕೆಸರಲಿ ಸಿಕ್ಕಿಕೊಂಡಿದೆ ಕಾಲು
ಕಂಡಿರಲಿಲ್ಲ ಇಷ್ಟು ಸ್ಪಷ್ಟ ಹಿಂದೆಂದೂ
ಮನೆಯ ಬುನಾದಿಯ ಅನಾದಿ ಕೆಸರು
ಪೂರ್ವಜರೆಲ್ಲಾ ಒಮ್ಮಿಂದೊಮ್ಮೆಲೆ
ಅವಮಾನದಿ ಅತ್ತುಕರೆವ ಸದ್ದು
ಬೆಳದಿಂಗಳ ಆ ಕಾರ್ಗತ್ತಲಲಿ
ನೆನಪಾದದ್ದು ಕಲ್ಯಾಣದ ಪುಟ್ಟ ಹಣತೆ
ಎದೆಯ ಕತ್ತಲೆಯೆಲ್ಲಾ ಕಳೆದು
ಕೆಸರೆಲ್ಲ ಹಾಗೇ ಕರಗಿಹೋಗಿ
ಹಕ್ಕಿಯಾಗಿ ಅವನಂತೆ
ಏರುತ್ತಾ ಇಳಿಯುತ್ತಾ ಪ್ರೀತಿಯ
ಆಗಸದಲಿ ತೇಲಾಡಿದೆ
ಮೊದಲಸಲ ಲೋಕದಿ
ಮನುಷ್ಯರು ಕಾಣತೊಡಗಿದರು
2.ಧ್ಯಾನದ ನಡಿಗೆ
ಎಲ್ಲದಕ್ಕೂ ಅವರು
ಆಕಾರವಿದೆಯೆನ್ನುತ್ತಾರೆ
ಆಸೆ ಒಮ್ಮೆಲೇ ಕಮರಿದಂತಾಗಿ
ಹಾಗೇ ಮತ್ತೆ ಚಿಗಿಯುತ್ತದೆ
ಪಕ್ಷಿಗಳು
ಗಾಳಿಯಲ್ಲಿ ಹಾರುವುದು
ಮೀನುಗಳು
ನೀರಲ್ಲಿ ಈಜುವುದು
ಜೀವಗಳು
ಬೆಳಕಲ್ಲಿ ಅರಳುವುದು
ಬಿಳಿ ಮೋಡಗಳು
ಆಕಾಶದಲ್ಲಿ ತೇಲುವುದು
ತುಂಬಾ ಇಷ್ಟ
ಗಾಳಿ ಬೆಳಕು ನೀರು
ಆಕಾಶಗಳ ಆಕಾರವೇ ಇಷ್ಟ
ಅಲ್ಲಿ ಹೆಜ್ಜೆಗಳು ಮೂಡಿದಂತೆ
ಮಾಯವೂ ಆಗುತ್ತವೆ
ನಿರಾಕಾರವಾಗುವ ಅರಿವಿನಲ್ಲಿ
ಇಟ್ಟ ಹೆಜ್ಜೆಗಳು
ಮಾಯವಾಗುವುದಿಲ್ಲ
ಶಾಸನವಾಗುವುದೂ ಇಲ್ಲ
ಕಾಲವನ್ನೇ ಧ್ಯಾನಿಸುತ್ತ
ನಡೆಯುತ್ತಿರುತ್ತವೆ

ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
