ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು.
ಇತ್ತೀಚೆಗಷ್ಟೇ ಬಿಡುಗಡೆಯಾದ ಹೆಚ್.ಆರ್. ಸುಜಾತಾ ಅವರ ಕೃತಿ “ಮಣಿಬಾಲೆ” ಕೆಲವು ಪುಟಗಳು ನಿಮ್ಮ ಓದಿಗೆ

ಗದ್ದೆ ಕುಯ್ಲು ಎಂಬುಯಿಲು

ಹಿಂಗೆ ಮ್ಯಾರೆ ಮುರುದಾದ ಮೇಲೆ ಒಂದೇ ಸಲಕ್ಕೆ ವಡೆ ಆದ ಭತ್ತ ಆ ತುದಿಂದ ಈ ತುದಿವರ್ಗೂ ಹಾಸಿಗೆ ಹಾಸಿ, ವಣಗಿ ಗಾಳಿ ಬಂದಾಗ ಸರಸರನೆ ತೂರಾಡಿ, ವಾಲಾಡಿ ಗಾಳಿ ಬೀಸೋ ದಿಕ್ಕನೇ ತನ್ನ ಮೇಲೆ ಹಾಯಸ್ಕಂಡು ಹಾದು ಹೋಗ ಚಂದ, ಗದ್ದೆ ಬದಿನ ಮೇಲೆ ನಿಂತೋರ ಕಣ್ಣ ಅಳ್ಳಾಡದಂಗೆ ಹಿಡ್ದಿಡತಿತ್ತು.

ಈ ಪಟು ಊರ ಗಟ್ಟಾಳುಗಳು ಅತ್ತಿಮರದ ಗದ್ದೆಗೆ ನುಗ್ಗದಾಗ ಆಚೀಚೆ ಗದ್ದೆ ಹೊಂಬಣ್ಣವಾಗಿ ಕಂಡ್ರೆ ಈ ಗದ್ದೆ ನಡುಮಧ್ಯಕ್ಕೆ ಕೆಂಚಗೆ ಕಾಣ್ತಿತ್ತು. ವಾರ ಮೊದಲೇ ನೀರು ಸೋರ ಹಾಕಿದ ಗದ್ದೆ ವಣಗಿದ್ರೂವೆ ಒಳಗಿದ್ದ ಹಸಿತೇವ ಕಾಲಿಗೆ ತಂಪಾಗಿತ್ತು. ಸುತ್ತಲೂ ಇರೊ ಹತ್ತಾರು ಮರದಲ್ಲಿ ಹಕ್ಕಿಹಿಂಡು ಕಾಳಾಸೆಗೆ ಬಂದು ಕೂತಿದ್ದವು ಈ ತುಂಡುಡ್ಲು ದಂಡು ಕಂಡು….
‘ಓ… ಇನ್ನ ಇವತ್ತು ಕಾಳ ಆಯಾಕ್ಕಾಗಕ್ಕುಲ್ಲ, ಮನುಷ್ಯರು ಇರ ಕಡೆಲಿ ನಾವೆಲ್ಲಾರ ಬದುಕೋದು ಉಂಟಾ?’ ಅಂತವ ದೊಡ್ಡಕೆರೆ ಹಿಂದಿರೊ ಸದ್ದಿಲ್ಲದಿರ ಗದ್ದಿಗೆ ಪುರ್ರನೆ ಹಾರಕಂದು ಹೋಗೇಬುಟ್ಟು! ಬರ್ರನೆ…ಬೀಡ ಬಿಟ್ಕಂಡೇಬುಟ್ವು .

ಬಾಲೆಯೀಗ ದೂರಕ್ಕೆ ಬೆಳ್ಳ ತೋರಿ, ಗುಂಪಲ್ಲಿದ್ದ ಅಮಲಿಗೆ ಹಾರಿ ಹೋದ ಹಕ್ಕಿ ದಂಡ ತೋರ್ದಾಗ ಅವಳು ನಕ್ಳು. ಅಮಲಿ ನಗದು ಎಷ್ಟು ಚಂದ ಅಂತ ಬಾಲೆ ಅವಳ ನೋಡ್ತಲೆ ಇತ್ತು. ಈ ಏಳಾಳು ಗುಂಪಲ್ಲಿ ಇವಳೇ ಚೆಂದ.

ತಗಳಪ್ಪ ಶುರುವಾತು ನೋಡಿ ಹಬ್ಬ. ‘ಊರೂರನ್ನೇ ಪುಡಿ ಮಾಡ್ಬುಡ್ತೀವಿ ಬೇಕಾರೆ ನಾವು’ ಅನ್ನುವ ಹೊಸಳ್ಳಿಯ ಏಳಾಳು ಹೆಣ್ಣಾಳುವೆ ಗದ್ದಿಗಿಳ್ಕಂಡು, ಹಿಂದ್ಗುಟೆ ಬಂದ ಗಂಡ್ಗೆಲ್ಲ ಬಾಯಿನೀರ ಕುಡುಸ್ತಿದ್ರು. ಅವ್ರು ಗದ್ದೆ ವಳಗೆ ಒಡ್ಡಾಡದ ನೋಡಕ್ಕೊಂದು ಚಂದ. ಕೆಲ್ಸ ಅಂದ್ರೆ ಬುಡಿ ಅವ್ರಗೆ ಕೈಲಾಸ! ಅಂಥ ಗಟ್ಗಿತ್ತಿರು ಅವ್ರು. ನಾಕಾಳು ಮ್ಯಾಗಳಕೇರಿ ಹೆಣ್ಣು, ಇನ್ನು ಮೂರಾಳಿದ್ದೋರು ಹೊಸಳ್ಳಿ, ಹಳೆಮರಸಿನ ಹೊಲಗೇರಿಯರಾಗಿದ್ರು. ಅದ್ರಳೊಗಿದ್ದ ತಂಗ್ಯಮ್ಮ…ಅಮಲಿ, ಇಬ್ರೂವೆ ಎಂಥ ಗಟ್ಗಿತ್ತೀರು ಅಂದ್ರೆ….ತುಂಬಿದ ಗಾಡಿ ಮನೆ ಮುಂದೆ ಬಂದು ನಿಂತಕಂದ್ರೆ ಗಂಡಾಳಿರ್ನಿಲ್ಲ ಅಂದ್ರೂ ಸೈತ, ಪಲ್ಲ ಮೂಟೆಯ ನಿಸೂರಾಗಿ ಗಾಡಿಂದ ಇಳುಸಿ ಬೆನ್ನ ಮ್ಯಾಲೆ ಹೊತ್ಕಬಂದು ಮನೆ ವಳಕೆ ಇಳ್ಕೊ ಛತಾಮಿರಾಗಿದ್ರು.

ಇವ್ರು ಏಳ ಜನವೂ ಮಾತ್ರವ ಒಂದಿಸಕ್ಕೂವೆ ಒಬ್ರನ್ನೊಬ್ರು ಬುಟ್ಟಿರ್ತಿರ್ನಿಲ್ಲ. ಕೊಳ್ಳ ಕಟ್ಕಂಡು ಒಟ್ಗೆ ಕೆಲ್ಸಕ್ಕೆ ಹೋಗರು, ಒಟ್ಗೆ ಬರರು. ಈ ಹುಡುಗೀರು ಎದ್ದ್ ಮೇಲೆ ಅವರ ಮನೆ ಕಷ್ಟಗಳು ಸೈತ ಕಟ್ಟೊಡದು ಹರದ್ಹೋಗಿದ್ವು. ಅವರ ಆಳ್ತನ, ಎಣ್ಣೆ ಹಾಕಿ ತಲೆ ಬಾಚಿ ಮುಡಿಯೋ ಮಲ್ಗೆ, ಜಾಲಾರಿ, ಸಂಪ್ಗೆ ಹುವಿನ ಘಮನ, ದುಡಿಮೆ ಮಾಡದಂಗೆಲ್ಲ ಕಳಗಟ್ಟೋ ಅವ್ರ ನೀಟಾದ ಮುಖ, ಅವ್ವೇ…. ಅವ್ರು ಬತ್ತರೆ ಕೆಲ್ಸಕ್ಕೆ ಅಂದ್ರೆ ಸಾಕು, ಊರಲ್ಲಿ ಯಾರೂ ಬೇಡ ಅನ್ನದೆ ಕರಕಳರು, ಅವರು ಕೆಲ್ಸ ನುರಿಯದ ನೋಡಿ ‘ ಅಯ್ಯವ್ವ ‘ ಆಂತಲೂ ಅನ್ಕಳರು.

ಹಿಂದೆ… ಹಾಸನದಮ್ಮನ ಜೊತೆ ಹುಟ್ಟಿದ ಏಳು ಅಕ್ಕತಂಗೇರುವೆ ಒಟ್ಟೊಟ್ಗೆ ಹಾಸನದಲ್ಲಿ ನೆಲೆಸಿ ಈ ಪ್ರಾಂತ್ಯವ
ಕಾಯೋ ದೇವತೆರಾಗವ್ರಲ್ಲ! ಹಂಗೆ…ಗುಂಪಾಗಿ ಅಡ್ಡಾಡೊ ಇವ್ರನ್ನ ಕಂಡು ಬಾಯಿನೀರ ಕುಡಿತಿದ್ದ ಪಕ್ಕದೂರ ಗಂಡುಡ್ಲು…ಒಳಗಡೆ ಆಸೆ ಇದ್ರೂವೆ… ‘ಅವ್ವೇ! ಮುಟ್ಟುದ್ರೆ ಉಳ್ಯೋದುಂಟಾ ಈ ತಾಯೀರ ಕೈಲಿ’ ಅಂತನ್ಕಳರು. ಆದ್ರೂ ಅವರಿದ್ ಕಡೆ ಕುಶಾಲಿಗೇನು ಕಡಿಮೆ ಇರನಿಲ್ಲ ಅನ್ನಿ, ಹಾಡು ಹಸೆ, ಪೋಲಿ ಬಯ್ಗಳ, ಪೋಲಿ ಕಥೆ, ಇವ್ರಿರೋ ಗದ್ದೆ ತುಂಬಾ ಅಡ್ಡಾಡದೂ ಅಲ್ಲದೆ ನಗು ಕೇಕೆ ದೂರದಲ್ಲಿದ್ದ ಊರ ಕಿವಿಗೆ ಹಾಕ್ಕಂಡು ಬಡಿಯೋ ಹಂಗೆ ಗದ್ದೇನೆ ಎದ್ದೆದ್ದು ಬೊಂಬಡ ಹೊಡಿತಿರದು.

ಹರತ್ವಾಗಿರ ಕುಡ್ಲು ಕಣಿಕಣಿನೆ ಆಡುವಾಗ ಬಳೆ, ಬೆಳ್ಳಿ ಮುರಿಗೆ ತಾಗಿ ಆಗೊ ಸದ್ದಿಗೆ ಗಂಡುಡ್ಲು ‘ಸದ್ದು ಮಾಡದೆ ಆತ್ರವ್ವ, ನೀವು! ಬನ್ನಿ ,ಬನ್ನಿ, ಮುಂದ್ಕೆ’ ಅಂತ ಕೂಕ ಹಾಕರು. ಹಂಗೆ ಹೆಣ್ಣಾಳ ಕೈಲಿ ಬಯಸ್ಕಣರು.

“ಹೂಂ ಹೋಗು, ಇವ್ನ ಪಕ್ಕಕ್ಕೆ ಬಗ್ಗದ್ರೆ ಸಾಕು ಚಡ್ಡಿಲಿ ಅಳ್ಳಾಡದ ಕಾಣುವಂತೆ ” ಅನ್ನೊ ಸವ್ವಾಸೇರಿನ ಮಾತಿಗೆ ‘ಹೋ..’ ಅಂತೆಲ್ಲರೂ ನಕ್ರೆ… ಮಲ್ಲ ಮಾತ್ರವ ಒಬ್ಬ…
“ಹೋ… ನೀ ಬಗ್ಗದ್ರೂ ಹಂಗೆ ತಗಳವ್ವ, ನಮ್ಮ ಹೋರಿಕರ ಹಾಯದು ಕಾಣಸ್ತಿತೆ ನನ್ ಕಣ್ಣಿಗೆ ” ಅಂತಂದು ಹೀನಾಮಾನ ಆ ಏಳು ಹಕ್ಕಿಗಳ ಕೈಲಿ ಕಣಿಕಣಿನೆ ಉಗಸ್ಕಂಡು ಮೀಸೆ ಮರೆಲಿ ನಗೆ ಉಕ್ಸದ ಮಾತ್ರ ಅವ್ನು ತಪ್ಪುಸ್ತಿರನಿಲ್ಲ. ಆಮೇಲೆ
“ಹೋಕ್ಕಳ್ಳಿ ಬುಡ್ರೆ ನಮ್ಮವ್ವದೀರ…ಹಾಸನದಮ್ಮರಂಗೆ ನಿಮ್ಮ ಒಬ್ಬೊಬ್ರುನೂ ಕರಕ ಹೋಗಿ ಒಂದೊಂದು ಬನದಲ್ಲಿ ಕೂರಸಿ ಪೂಜ್ಸನ” ಅನ್ನೋ ಮಲ್ಲನ ಮಾತ್ಗೆ…. ಅಮಲಿ ಇದ್ದೋಳು….

“ಏ.. ಇದೇಳಕ್ಕೆ ಬಂದಾ? ಕೊಡಗಳ್ಳಿಂದ ಇಲ್ಲಿವರಗೂವೆ! ಗದ್ದೆ ಕುಯ್ಲು ಮುಗ್ಯೊ ಹೊತ್ಗೆ ನಿನ್ನ ಉಳಸಕ್ಕುಲ್ಲ ನೋಡು” ಅಂತ ಬೆದರ್ಸದ್ದ ಕಂಡು ಎಲ್ಲರು ‘ಹೋ’ ಅಂತ ನಕ್ರು.

“ಆತು ಬುಡ್ರವ್ವ…ಈ ಪಟು! ಬನದಲ್ಲಿ ಕೂರಸದಾಗ ನನ್ನೇ ನಿಮ್ ಮುಂದೆ ಬಲಿ ಹಾಕೂರಂತೆ ” ಅಂತ ಕಾಣದನಂಗೆ ಅಂದ ಮಾತ್ಗೆ….

“ನೀನು ಆ ಕಡೆ ನೋಡದೆ ಗದ್ದೆ ಕುಯ್ಯಪ್ಪ! ಎಲ್ಲಾರ ನಿಂದೇ ಕುಯ್ಕಂಡು ಹೊರೆ ಕಟ್ಟೀಯಾ? ” ದ್ಯಾವಣಿಯ ನಗೆಸಾರಿಕೆ ಮಾತಿಗೆ…
“ಹೊಸಳ್ಳಿ ಊರೋರು ಬುಡ್ರಪ್ಪ, ಅಂಕೆಶಂಕೆ ಇಲ್ಲದಂಗೆ ಪೂರಾ ಹದಗೆಟ್ಟು ಹೋಗೀದೀರ ಕಣ. ಈ ಹೆಣ್ಣುಡ್ಲು ಜತೆಲಿ ನೀನು ಹಾಳಾಗಿ ಹೋಗಿದಿಯಲ್ಲೊ ದ್ಯಾವಣಿ ” ಅಂತ ಒಬ್ರುಗೊಬ್ರು ಪಂಥಕ್ಕಿಟ್ಟ ಮಾತಿನ ಹರಳ ಹುರಿತಿರುವಾಗಲೇ ಸೂರಪ್ಪ ನೆತ್ತಿ ಮ್ಯಾಕೆ ಬಂದು, ತ್ಯಾವದ ಗದ್ದೆ ಬಯಲ ಸೀಳಕಂಡು ಗದ್ದೆಬದಿನ ಮೇಲೆ ಗೌಡ್ರು ಮನೆಯ ಬಿಸ್ಬಿಸಿ ಊಟದ ಕುಕ್ಕೆ ವಾಲಾಡಕಂಡು ಬತ್ತಾ ಇತ್ತು. ಬಾಲೆ ಈಗ ತನ್ನವ್ವನತ್ರಕ್ಕೆ ವಾಟ ಬಿದ್ದು ಹೋಯ್ತು.

ಅದ ಕಂಡು… ಆಸಾಳು ಹೆಣ್ಣುಡ್ಲುವೆ ಮಲ್ಲನ ಬಡ್ಡಿಗೋಗಿ ಕುಶಾಲಿಗೆ ಅವನ ಮೂತಿ ತಿವದು, ಬಿರಬಿರನೆ ಹೋಗಿ ನಗ್ತನಗ್ತ ಕೆಳಗಲ ಗದ್ದೆ ಕಾವ್ಲಿಲಿ ಹರದೋತಿದ್ದ ತಣ್ಣನೆ ನೀರಿಗೆ ಕೈಕಾಲ ವಡ್ಡಕಂಡು ತೊಳಕತಿದ್ರು. ಅವರ ಹಿಡತಕ್ಕೆ ಸಿಗ ಹಾಕ್ಕಂದು, ಕೂದು ಹಾಕ್ದ ಭತ್ತದ ತೆನೆ, ಈಗ ಈ ಹರೇದ ಹುಡುಗರ ನಗೆಗೆ ಮನಸೋತು ಗದ್ದೆನುಂಬಲ್ಲಿ ಸಾಲಾಗಿ ಒರಗಿದ್ವು.

ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು.

ಅತ್ತಿ ಮರದ ಪೊಟರೆಯ ಹಕ್ಕಿಪಾಡು

ಮತ್ತೆ ಕೈಹಿಡದ ಕುಯ್ಲು ಮುಗಿವೊತ್ಗೆ ಸಂದಾತು, ಈ ಹರೇವಕ್ಕೆ ಮೈ ನೋವೇ ಕಾಣದಿರೋವಂಥ ಆ ಚೋಜಿಗದ ನಗೆಗೆ ಮನಸೋತ ಹಕ್ಕಿಪಕ್ಕಿ ಅನಾದಿ ಕಾಲದಿಂದಲೂ ಪೊರೆದಂಥ ಆ ಅತ್ತಿ ಮರದ ಪೊಟರೆಗೆ ಹಾರಕಂಬಂದು ಕಿಚಪಿಚನೆ ಮಾತಾಡ್ಕಂಡು ಕೂತ್ಕತಿದ್ವು. ಹಂಗೆ… ಕುಡುಗೋಲ ಹರಿತಕ್ಕೆ ಆಳುಗಳ ಹಿಡಿತಕ್ಕೆ ನೊಂದು ನೊಂದು… ತೆನೆ ಒಂದೇ ಸಮನೆ ನೆಲಕ್ಕೆ ಬಿದ್ದು ಚೆಲ್ಲಾಡಿಸಿದ ನಾಕಾರು ಕಾಳನ್ನ… ಮರದಿಂದ ರೊಯ್ಯನೆ ಕೆಳಗಿಳಿದು ಕುಪ್ಪಳಸ್ತ ಕುಪ್ಪಳಸ್ತ, ತಟಪಟನೆ ಹಕ್ಕಿ… ಬಾಯಿಗೆ ಎಸ್ಕಂತಿದ್ವು.

ಅದ ನೋಡಿದ್ದೆ… ‘ಹೊಟ್ಟೆ ಹಸಿವು ಅನ್ನೋದು ನಮ್ಮ ಭೂಮಿ ಮ್ಯಾಲೆ ಏಷ್ಟು ದೊಡ್ಡದೋ ಶಿವನೇ’ ಅನ್ಕಂಡ ಸೂರ್ಯದೇವ ಮುಖವ ಅಳ್ಳಸಕಂಡು, ಮರದ ತುಂಬ ನ್ಯಾತು ಬಿದ್ದಿದ್ದ ತನ್ನ ಇಳಿಸಂದೆ ಬಣ್ಣದ ಜೊಂಪೆಜೊಂಪೆ ಅತ್ತಿಹಣ್ಣ ಬೆಳಕು ಬಿಟ್ಟು ತೋರಿದ್ದ ಕಂಡು… ‘ಹೊಟ್ಟಿಯಿಟ್ಟವನೇ ಶಿವ, ಕಾಳು ಕೊಟ್ಟವಳೇ ತಾಯಿ’ ಅಂತಂದು ಹಕ್ಕಿಗಳು ಮರದ ಗೂಡಲ್ಲಿದ್ದ ತಮ್ಮರಿಗಳಿಗೆ, ಹಣ್ಣ ಕಿತ್ತುತಂದು ಗುಕ್ಕಿಡುವ ಆ ಸಡಗರವ ಕಂಡ ಸೂರಪ್ಪನೂ ಒಂದು ನೆಮ್ಮದೀಲಿ ದೊಡ್ಡಕೆರೆ ನೀರಿಗೆ ಧುಮುಕ್ತಾ ಇದ್ದ.

ಎಂದಿನಂಗೆ ತಣ್ಣನೆ ಗಾಳಿಜೋಲಿಯ ತೂಗುತ್ತ ಆ ಗಾಳಿರಾಯ ಈ ಸಂದೇಲೂ ಬಂದೋನೆ, ತನ್ನ ಬೀಡಲ್ಲಿ ಕೂದು ಮಲಗ್ಸಿದ್ದ…. ಗದ್ದೆಯ ಕಂಡೋನೆ…. ಅಯ್ಯೋ….ಅನ್ಕಂಡು,

ತೆನೆಯ ಭಾರಕ್ಕೆ ತೂಗಿತೂಗಿ… ಬೀಳ್ತಿದ್ದ ಭತ್ತದ ಬೆಳಸೇ!
ನನ್ನ ಹರಿವಿಗೆ ಹರವಾಗ್ತಿದ್ದ ಎನ್ನ ಮನಸೇ….
ದೂರದೂರಕ್ಕೂ ಹೊತ್ತೊಯ್ಯತ್ತಿದ್ದ ಆಗಸದ ಕನಸೇ…” ಹಳೆ ಹಾಡೊಂದನ್ನ ಕನವರಿಸುತ್ತ… ಪಕ್ಕದ ಭತ್ತದ ಗದ್ದೆಯ ಹುಲುಸಾದ ಬೆಳೆಯ ಮೇಲೆ ಕಯ್ಯಾಡಿಸ್ತಿದ್ದ.

ಈಗ… ಆ ಹಾಡಿಗೆ ತಣ್ಣಗೆ ಗೂಡಲ್ಲಿದ್ದ ಹಕ್ಕಿ, ಮಾತ ಮರೆತು ಕಿವಿಗೊಡತಿದ್ವು. ಮರಿಲಾರದಂಥ ಈ ಹೊಂಬಣ್ಣದ ಗದ್ದೆಹಾಸು, ಹಕ್ಕಿಮಾತು, ತಣ್ಣನೆ ಗಾಳಿಪದವ, ಮಣಿಮಗವೂ ತನ್ನ ಮನದ ತಿಜೋರಿಗಿಳಿಸಿ ಭರ್ತಿ ಮಾಡ್ಕಂತಿತ್ತು.

ಒಂದೇ ಚಣ! ಆಗಲಾಗಲೇ… ಅಲಲಾ… ಇಂಥ ನೆಮ್ಮದಿಗೆ ಭಂಗ ತರುವಂಗೆ…. ಹಕ್ಕಿಕುಲ ಥರಗುಟ್ಟಿ…ಆ ದೈತ್ಯ ಅತ್ತಿಮರವೇ ಪರಪರನೆ…ಥರಗುಡುತ ಪರದಾಡಿ ಹೋಗುವಂಗೆ ಬೊಬ್ಬೆ ಹೊಡೀತು. ಕೆಲ್ಸ ಕೈಬುಟ್ಟು, ಮಖಮೈ ತೊಳಕಂಡು ವಲ್ಲೀಲಿ, ಸೆರಗಲ್ಲಿ ಮಖಮೈ ಸೀಟಕಂತಿದ್ದ ಆಳುಮಕ್ಕಳೆಲ್ಲ ಯಾಕೆ ಅಂತ ತಮ್ಮ ತಲೆಯೆತ್ತಿ ನೋಡದ್ರೆ…ಕಂಡದ್ದೇನು? ಆ ಸಂಜೆಗಪ್ಪಲ್ಲಿ ರೆಕ್ಕೆ ಮೀಟಿ ಆಕಾಶದ ಬಣ್ಣದಲ್ಲಿ, ಮಾಸಲು ಚಿತ್ರವಾಗಿ ಹಾರುತಿದ್ದ ಹದ್ದಿನ ಕಾಲಿಗೆ; ಅಯ್ಯೋ…ಒಂದು ಹಕ್ಕಿಮರಿ ಸಿಗಹಾಕ್ಕಂಡಿತ್ತು.

ಅದಾಗಲೇ ಗೂಡುಸೇರಿ ಸುಮ್ಮಗಾಗ್ತಿದ್ದ ಹಕ್ಕಿಬಳಗ ಮತ್ತೆ ಕರ್ರನೆ, ದುಃಖದಲ್ಲಿ ಅರಚಿಕೊಳ್ಳೋದನ್ನ ಕೇಳಿಕೊಂಡ ಮಲ್ಲ ಇದ್ದೋನು…
“ಥೋ… ರಾವ್ ಹೊಡ್ಯ… ಇದ್ರವ್ವಸಾಳಾಗ, ಇದ್ರ ನೆತ್ತಿ ಹೊಡೆಯ! ನಾವು ಈಸಾಳು ಇಲ್ಲೇ ಇದ್ದಂಗೇಯ…ಗರುಡಾಳ ಬಂದು ಆ ಮರಿಯ ಹಾರಸ್ಕಹೋಯ್ತಲ್ಲ… ಎಲ್ಲಿ ಕೂತಿತ್ತೋ…ಬಂದು ಸಾವು” ಆ ಸಣ್ಣ ಹಕ್ಕಿಮರಿಗೆ ಮಮ್ಮುಲ ಮರುಗುವ ಮಾತು ಗಾಳೀಲಿ ಕೊಡಗಳ್ಳಿ ಕಡೆಗೆ ಅವನ ಕಾಲ ಜತೇಲೆ ಹೋಯ್ತ ಇತ್ತು.

ಹೆಣ್ಣಾಳ ಹಿಂದೆ ಮಣಿಮಗ ಮಾತು ಮರೆತು ಊರ ದಾರಿಯಲ್ಲಿತ್ತು. ಅರಗಿಸಿಕೊಳ್ಳಲಾರದ ಒಂದು ಬದುಕಿನ ಕಣ್ಕಟ್ಟು ಮನದಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಬೆಳಗ್ಗಿನಿಂದ ಲಗುಬಗೆಯಾಗಿದ್ದ ಬಾಲೆಗೆ ಅರಿಯದ ಕಾರ್ಮೋಡ ಕವಿದಿತ್ತು.

ತೆನೆತುಂಬಿ ಒರಗಿದ್ದ ಗದ್ದೆ ಬಯಲಲ್ಲೀಗ ತೀರದ ದುಃಖ ಮಡುಗಟ್ಟಿತ್ತು. ಕೂದು ಹಾಕಿದ ಭತ್ತದ ಗದ್ದೆಯ ತೆನೆಗೀಗ ಇದರ ಯೋಚನೆಯೇ ಇರನಿಲ್ಲ.

(ಕೃತಿ: ಮಣಿಬಾಲೆ, ಲೇಖಕರು : ಹೆಚ್ ಆರ್ ಸುಜಾತಾ, ಪ್ರಕಾಶಕರು: ಸಂಕಥನ ಪ್ರಕಾಶನ, ಪುಟ: 500, ಬೆಲೆ : ರೂ. 360/-)