1

ಪ್ರತಿಯೊಂದು ದಿನ
ಪ್ರತಿಯೊಂದು ಕ್ಷಣ
ನಿನ್ನ ಪ್ರೇಮದ ಮೊನಚು
ನನಗೆ ಮಾತ್ರ ನೆಟ್ಟಿದ್ದರೆ
ಮುಜುಗರ ಗೊಂದಲ ತಳಮಳ
ರೆಕ್ಕೆಯಿದ್ದರೂ ಹಾರಲು ತಿಳಿಯದ
ಹಕ್ಕಿಯು
ಹಿಕ್ಕೆ ಹಾಕಲೂ ಹೆದರಿಕೊಂಡು
ಅಪ್ಪಣೆಗಾಗಿ ಕಾಯುವಂತೆ

2

ಆವತ್ತಿನ ಸ್ಥಿತಿ ಗೊತ್ತಾ?
“ಏನಿರುತ್ತದೆ, ಹೊಳಪಿನಿಂದ
ಕೂಡಿರುತ್ತದೆ”
ಹಾಗಾದರೆ ಇವತ್ತು
ಕಂಡ ಮಿಂಚುಹುಳ ನಾಳೆ
ಯಾವ ಕಾಡಿನಲ್ಲಿ ಮಿನುಗುವುದು ಹೇಳುವೆಯಾ?
“ಪವಿತ್ರ ಕತ್ತಲೆಯ ಕಲಕದಿರುವ ಜೀವವ ತಿಳಿಸು”
ಬಸವನಹುಳು ತುಟಿಯ ಮೇಲೆ ತೆವಳಿದರೆ ಹೇಗೆ?
“ಇಸ್ಸಿ!”
ಅದೇ ಪರಿಸ್ಥಿತಿಯಿತ್ತು ಆವತ್ತು

ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.