ಅವನು ನನ್ನ ಕೆಲಸದಲ್ಲಿ ಜತೆಗಾರ. ಆರೆಂಟು ವರ್ಷದಿಂದ ಅವನನ್ನು ಬಲ್ಲೆ. ಹುಡುಗಾಟದ ವಯಸ್ಸಿನಿಂದ ಜವಾಬ್ದಾರಿಯುತ ತಂದೆಯಾಗುವುದನ್ನು ಗಮನಿಸಿದ್ದೇನೆ. ಹುಡುಗಾಟದಲ್ಲೂ ಕೊಂಚ ತೆರೆದ ಮನಸ್ಸು, ಮೂವತ್ತು ದಾಟಿದ್ದರೂ ಕೊಂಚ ಹುಡುಗಾಟ ಉಳಿಸಿಕೊಂಡಿದ್ದಾನೆ. ಅಷ್ಟೇನೂ ಸಿರಿವಂತನಲ್ಲ. ವಾರದ ಸಂಬಳವನ್ನು ಖರ್ಚು ಮಾಡಿಬಿಡುತ್ತಾನೆ.

ಇವನು ಮದುವೆಯಾಗಿಲ್ಲ. ತನ್ನ ನಲ್ಲೆಯನ್ನು ತುಂಬಾ ಪ್ರೀತಿಸುತ್ತಾನೆ. ಅದನ್ನು ಬಾಯಿ ತೆರೆದು ಹೇಳಿಲ್ಲ. ತಮ್ಮ ಪ್ರೀತಿಯ ಬಗ್ಗೆ ಆಸ್ಟ್ರೇಲಿಯನ್ ಗಂಡಸರಿಗೆ ಸಹಜವಾಗಿರುವ ನಾಚಿಕೆ ಇದೆ ಅವನಿಗೆ. ವಾರದಲ್ಲಿ ಒಂದು ದಿನ ಹೇಗೋ ಮಾಡಿ ಗೆಳೆಯರೊಡನೆ ಪಬ್‌ಗೆ ಹೋಗಿ ಬಿಯರ್‍ ಸಮಾರಾಧನೆ ಮಾಡುತ್ತಾನೆ. ಉಳಿದ ದಿನ ನಲ್ಲೆಯ ಮೇಲಿನ ಪ್ರೀತಿ ಮತ್ತು ಭಯದಿಂದ ಆದಷ್ಟು ಬೇಗ ಮನೆಗೆ ಓಡುತ್ತಾನೆ.

ಹುಡುಗಾಟದ ವಯಸ್ಸಲ್ಲಿ ನನಗೆ ಬೇಜಾವಾಬ್ದಾರಿಯಾಗಿ ಕಾಣುತ್ತಿದ್ದ. ಮೋಜು ಮಜದಲ್ಲೇ ಮುಳುಗಿರುವವನಂತೆ ಇದ್ದ. ತನ್ನ ನಲ್ಲೆಯೊಡನೆ ಮದುವೆಯಾಗುವ ಯೋಚನೆ ಇತ್ತು. ಪ್ರೊಪೋಸ್ ಮಾಡಿದ್ದ. ಆಕೆ ಒಪ್ಪಿಕೊಂಡಿದ್ದಳು. ಎಂಗೇಜ್ ಆಗಿದ್ದರು. ಹಿಂದೆಂದೂ ಕಂಡರಿಯದ ಅತ್ಯಂತ ಸುಖದಲ್ಲಿ ದಿನಗಳನ್ನು ಕಳೆಯುತ್ತಿದ್ದ ಎಂದು ನಮಗೆ ಕೆಲಸದಲ್ಲಿ ತೋರುತ್ತಿತ್ತು.

ಅಷ್ಟರಲ್ಲಿ ಆಕೆ ಈತನಿಂದ ಬಸುರಿಯಾಗಿ ಬಿಟ್ಟಿದ್ದಳು. ತಮ್ಮ ಲಗ್ನಕ್ಕೆ ತುಂಬಾ ಆಸೆ-ಕನಸುಗಳನ್ನು ಇಬ್ಬರೂ ಹಂಚಿಕೊಂಡಿದ್ದಿರಬೇಕು. ಲಗ್ನಕ್ಕಾಗಿ ಹಣವನ್ನೂ ಕೂಡಿ ಹಾಕಿಕೊಂಡಿದ್ದರು ಎಂದು ಕಾಣುತ್ತದೆ. ಆಕೆ ಬಸುರಿಯಾಗಿದ್ದು, ಮಗು ಬೇಕೆನಿಸದ್ದು, ತಮ್ಮ ಮದುವೆ ಸಮಾರಂಭಕ್ಕೆ ಹಾಕಿಕೊಂಡ ಲೆಕ್ಕಾಚಾರಕ್ಕೆ ಕುಂದು ಬಂತು. ಇಬ್ಬರೂ ಒಂದು ಪುಟ್ಟ ಸಂಸಾರ ಕಟ್ಟಿಕೊಳ್ಳಲು ಮಾನಸಿಕವಾಗಿ ಹಾತೊರೆಯುತ್ತಿದ್ದರು. ಆದರೀಗ ಈ ಸಂದಿಗ್ಧ ಎದುರಾಗಿದೆ. ತಾವು ಕೂಡಲೇ ಮದುವೆಯಾಗುವುದೆ? ಆಗ ಕೈಲಿರುವ ಹಣವೆಲ್ಲಾ ಖರ್ಚು ಮಾಡಿಕೊಳ್ಳುತ್ತೇವಲ್ಲ? ಆಗ ಹುಟ್ಟುವ ಮಗುವಿಗೆ ಏನು ಮಾಡುವುದು? ಈಗ ತಾವು ಹೇಗೆ ಮಾಡಬೇಕು ಎಂದು ನಾಕಾರು ದಿನ ತಲೆ ಕೆಡಿಸಿಕೊಂಡಂತೆ ಕಂಡಿತು.

ಹಲವು ದಿನಗಳು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು. ಸದ್ಯಕ್ಕೆ ಲಗ್ನ ಬೇಡ. ಕೂಡಿಟ್ಟ ಹಣ ಉಳಿಸಿಕೊಳ್ಳುವುದು ಮುಖ್ಯ. ಹುಟ್ಟಲಿರುವ ಮಗುವಿಗಾಗಿ ಅದನ್ನು ಖರ್ಚುಮಾಡೋದು. ಮುಂದೆಂದಾದರೂ ಹಣ ಕೂಡಿಸಿಕೊಂಡು ಮದುವೆಯಾಗೋದು. ಮದುವೆಗೇನು ಯಾವಾಗಲಾದರೂ ಆಗಬಹುದು. ಇಬ್ಬರಿಗೂ ಈ ನಿರ್ಧಾರದಿಂದ ಸಮಾಧಾನವಾದಂತಿತ್ತು. ಈ ನಿರ್ಧಾರಕ್ಕೆ ಕಿಂಚಿತ್ತೂ ನೈತಿಕ ಒತ್ತಡವಿದ್ದಂತೆ ಕಾಣಲಿಲ್ಲ. ಮಗುವನ್ನು ಚೆನ್ನಾಗಿ ಬೆಳೆಸುವುದು, ಅದಕ್ಕೆ ಮದುವೆಗಾಗಿ ಕೂಡಿಟ್ಟ ಹಣವನ್ನು ಬಳಸುವುದು, ಇನ್ನು ಮುಂದೆ ಹಣವನ್ನು ಹೆಚ್ಚೆಚ್ಚು ಉಳಿಸುವುದು. ಮದುವೆಯಾಗುವುದಕ್ಕಿಂತ ಮಗುವಿಗೆ ಇವೆಲ್ಲಾ ಮುಖ್ಯ ಎಂದು ಬಗೆದಂತೆ ಕಾಣುತಿತ್ತು.

ಎಷ್ಟೋ ದಿನಗಳ ಮೇಲೆ ಮತ್ತೆ ಈ ಗೆಳೆಯ ಸಿಕ್ಕಿದ್ದ. ಈಗ ತಮ್ಮ ಗೂಡಲ್ಲಿ ಮರಿ ಹಕ್ಕಿಯನ್ನು ಇಬ್ಬರೂ ಮುದದಿಂದ ಸಾಕುತ್ತಿದ್ದಾರೆ ಎಂದು ತಿಳಿಯಿತು. ನಾನು ಒಂದಷ್ಟು ದಿನ ನೈತಿಕ ಸ್ವಾತಂತ್ಯ್ರ ಮತ್ತು ಸಮಾಜ ಎಂದು ಏನೇನೋ ತಲೆ ಕೆಡಿಸಿಕೊಂಡು ಓಡಾಡಿದ್ದು ನೆನಪಾಯಿತು.