ವಸಂತಾನೆ ಹುಚ್ಚುಚ್ಚು. ನೆನ್ನೆ ಇಪ್ಪತ್ತೆರಡು ಡಿಗ್ರಿಯ ಹದ. ಈವತ್ತು ಮೂವತ್ಮೂರಿನ ಉರಿ. ನಾಳೆ ಮತ್ತೆ ಇಪ್ಪತ್ತಕ್ಕೆ ಇಳಿದು ತಂಪು. ಬೇಸಿಗೆ ಕಡೆ ಹೊರಟ ಗೇರು ಸರಿಯಾಗಿ ಬೀಳದ ಬಸ್ಸಿನ ತರ.

ಈವತ್ತು ಉರಿಯ ದಿನ. ತಂಪಾಗಿದ್ದ ರೈಲಲ್ಲಿ ಜೂಲಿ ಮತ್ತು ಬಿಲ್‌ನ ನೋಡಿದೆ. ಅದೇನು ವಿಶೇಷ ಅಲ್ಲ. ಆಗಾಗ ನೋಡ್ತಾ ಇರ್ತೀನಿ ಅಂತಿಟ್ಕೊಳ್ಳಿ. ನೋಡಿದಾಗೆಲ್ಲಾ ಅವರಿಬ್ಬರೂ ಎದುರುಬದುರು ಸೀಟಲ್ಲಿ ಕೂತ್ಕೊಂಡು, ರಾತ್ರಿ ನಿದ್ದೆ ಸಾಲದವರಂತೆ ದಾರಿ ಉದ್ದಕ್ಕೂ ಮಕ್ಕಳ ಹಾಗೆ ಮಲಗಿರ್ತಾರೆ. ಮೊದಲು ಬಿಲ್ ತನ್ನ ಸ್ಟೇಷನ್ ಬಂದಿದ್ದೆ ದಡಬಡ ಎಚ್ಚೆತ್ತುಕೊಂಡು ಇಳೀವಾಗ, ಜೂಲಿ ಕಣ್ಣು ಉಜ್ಜಿಕೊಂಡು ಏಳ್ತಾಳೆ. ಅವನು ಬಗ್ಗಿ ಅವಳಿಗೆ ಒಂದು ಪುಟ್ಟ ಮುತ್ತು ಕೊಟ್ಟು ಹೋಗ್ತಾನೆ. ಅವಳದು ಮುಂದಿನ ಸ್ಟೇಷನ್ನು.

ಏಳೆಂಟು ವರ್ಷದ ಕೆಳಗೆ ಇವರಿಬ್ಬರು ಕೆಲಸ ಮಾಡ್ತಿದ್ದ ಕಡೆ ನಾನೂ ಮಾಡ್ತಿದ್ದೆ. ಇದೊಂದು ವಿಚಿತ್ರ ನೋಡಿ. ನನಗೆ ಅವರ ಹೆಸರು ಪರಿಚಯ ಇರುವ ಹಾಗೇನೇ ಅವರಿಗೂ ನನ್ನ ಹೆಸರು, ಪರಿಚಯ ಎಲ್ಲ ಇದೆ. ಕೆಲವು ತಿಂಗಳ ಹಿಂದೆ ರೈಲಿನಲ್ಲಿ ಇವರನ್ನ ನೋಡಿದಾಗ, ಅವರಿಬ್ಬರೂ ಮುಗಳ್ನಕ್ಕಿದ್ದರು. ಆದರೆ ನಾನು ನಕ್ಕಿರಲಿಲ್ಲ. ಯಾಕೆ ಅಂತ ಗೊತ್ತಿಲ್ಲ. ನಾನು ನಗದೇ ಇದ್ದಿದ್ದು ನೋಡಿ ಏನಂದುಕೊಂಡರೋ, ಸುಮ್ಮನಾಗಿಬಿಟ್ಟರು. ನನಗೆ ಮಾತಾಡೋದು ಇಷ್ಟ ಇಲ್ಲ ಅಂದುಕೊಂಡಿರಬೇಕು. ಹಾಗೆ ಇರಲಿ ಅಂತ ನಾನು ಸುಮ್ಮನಾಗಿಬಿಟ್ಟಿದ್ದೀನಿ. ವಾರಕ್ಕೊಂದೆರಡು ಸಲ ನೋಡ್ತೀನಿ. ನನ್ನ ಪಾಡಿಗೆ ನಾನು, ಅವರ ಪಾಡಿಗೆ ಅವರು.

ನಿಮಗೆ ಅವರದೊಂದು ಕತೆ ಹೇಳಬೇಕು. ಏಳೆಂಟು ವರ್ಷದ ಹಿಂದೆ ಕೆಲಸ ಮಾಡ್ತಿದ್ದೆ ಅಂದನಲ್ಲ. ಆಗಲೇ ಇವರಿಬ್ಬರೂ ನನಗೆ ಗೊತ್ತಾಗಿದ್ದು. ಬಿಲ್‌ಗೆ ಅಕೌಂಟ್ಸಲ್ಲಿ ಕೆಲಸ. ಯಾವಾಗಲೂ ಜೋರಾಗಿ ನಕ್ಕೊಂಡು ಖುಷಿಯಾಗಿರ್ತಿದ್ದ. ಅದೇ ಅಕೌಂಟ್ಸ್ ಗ್ರೂಪಿಗೆ ಜೂಲಿ ಕೆಲಸಕ್ಕೆ ಸೇರಿ ಒಂದೆರಡು ತಿಂಗಳೊಳಗೆ ಇವರಿಬ್ಬರೂ ಒಟ್ಟೊಟ್ಟಿಗೆ ಓಡಾಡೋಕೆ ಶುರು ಮಾಡಿದ್ದರು. ಮೊದಮೊದಲು ಹೆಚ್ಚು ಮಾತಾಡದ ಜೂಲಿ ಕ್ರಮೇಣ ಜೋರು ಜೋರಾಗಿ ಮಾತಾಡಿಕೊಂಡು ನಗೋಕೆ ಶುರು ಮಾಡಿದಳು. ಜೋರಾಗಿ ನಗ್ತಿದ್ದ ಬಿಲ್ ಯಾಕೋ ತುಸು ಮೌನವಾಗತೊಡಗಿದ. ಆಗಾಗ ಅವಳನ್ನು ನೋಡುತಾ ಕೂರ್ತಿತಿದ್ದ. ಇವಳು ಅವನ ಜತೆ ಮಿಡುಕಾಡಿಕೊಂಡಿದ್ದಳು.

ಆಮೇಲೆ ಒಂದು ದಿನ ಇದ್ದಕ್ಕಿದ್ದ ಹಾಗೆ ಎಲ್ಲರ ಬಾಯಲ್ಲೂ ಒಂದು ಸಂಗತಿ ನಲಿದಾಡತೊಡಗಿತು. ಇವರಿಬ್ಬರ ವಿಷಯಾನೆ. ಯಾರೋ ಲೇಟಾಗಿ ಕೆಲಸ ಮಾಡ್ತಾ ಇದ್ದವರು ಹೇಳಿದ ಸುದ್ದಿ. ನಮ್ಮ ಕಾಫಿರೂಮಿನ ಪಕ್ಕದ ಮೂಲೇಲಿ ಒಂದು ಸ್ಟೋರು ರೂಮಿತ್ತು. ಅಲ್ಲಿ ಆಫೀಸಿಗೆ ಬೇಕಾದ ಸ್ಟೇಷನರಿ ಅಲ್ಲದೆ, ಬೇಡದ ಹಳೇ ಸಮಾನು ಒಂದಷ್ಟು ಇಟ್ಟಿದ್ದರು. ಆಫೀಸು ಕ್ಲೀನ್ ಮಾಡ್ತಿದ್ದ ಕ್ಲೀನರ್ ಆ ಸ್ಟೋರ್ ರೂಮಿನ ಹತ್ತಿರ ಹೋದನಂತೆ. ಒಳಗಿಂದ ಏನೋ ಸದ್ದು ಕೇಳಿತಂತೆ. ಯಾರೋ ಏನೋ ಒದ್ದ ಹಾಗೆ. ಯಾರಿರಬಹುದು ಎಂದು ಧಡಕ್ಕನೆ ಬಾಗಿಲು ತೆಗೆದನಂತೆ. ಒಳಗೆ ಬಿಲ್ ಹಾಗು ಜೂಲಿ ಪರಸ್ಪರ ತೆಕ್ಕೆಯೊಳಗೆ ಹೂತು ಹೋಗಿದ್ದರಂತೆ. ಆಫೀಸಲ್ಲಿ ಇರಬಾರದ ಭಂಗಿನಲ್ಲಿ, ಯಾರೂ ನೋಡಬಾರದ ಅವಸ್ಥೆಯಲ್ಲಿ ಇದ್ದರಂತೆ. ಅವರೆಲ್ಲೋ ಅವರ ಬಟ್ಟೆ ಎಲ್ಲೋ. ಚೈನಾದಿಂದ ಇಲ್ಲಿಗೆ ಹೊಸದಾಗಿ ವಲಸೆ ಬಂದಿದ್ದ ಕ್ಲೀನರ್ ದಿಗ್ಮೂಢನಾಗಿ ಬಾಗಿಲು ಮುಚ್ಚದೆ ಹಾಗೇ ನಿಂತುಬಿಟ್ಟನಂತೆ.

ಆಮೇಲೆ ಕೆಲವು ತಿಂಗಳಿಗೇ ಬಿಲ್ ಕೆಲಸ ಬಿಟ್ಟ. ಆದರೆ ಬಿಡುವವರೆಗೂ ಅವನ ಗೆಳೆಯರು ಅವನ ಬಗ್ಗೆ ತುಂಟ ಜೋಕುಗಳನ್ನು ಮಾಡ್ತಾ ಕೆಣಕುತಾನೇ ಇದ್ದರು. ಜೂಲಿ ಮಾತ್ರ ಏನೂ ಆಗದವಳಂತೆ ಜೋರಾಗಿ ನಕ್ಕೊಂಡೇ ಓಡಾಡಿಕೊಂಡು ಇದ್ದಳು. ಆದರೆ, ಪ್ರತಿಸಂಜೆ ಆ ಚೈನೀಸ್ ಕ್ಲೀನರ್ ಬರೋದರೊಳಗೆ ಹೇಗಾದರೂ ಸರಿ, ಕೆಲಸ ಮುಗಿಸಿ ಮಾಯವಾಗಿಬಿಡುತ್ತಿದ್ದಳು.

ಈವತ್ತು ರೈಲಿನಲ್ಲಿ ಇಬ್ಬರೂ ಎದುರುಬದುರು ಕೂರದೆ, ಅಕ್ಕಪಕ್ಕ ಕೂತಿದ್ದರು. ಬಿಲ್ ಅವಳ ಹೆಗಲ ಮೇಲೆ ಕೈ ಹಾಕಿಕೊಂಡೇ ಇದ್ದ. ಆಗಾಗ ಅವಳನ್ನ ಹತ್ತಿರಕ್ಕೆ ಎಳಕೊಂಡು ಮುತ್ತುಕೊಡುತ್ತಿದ್ದ. ಅವಳು ಆಗಾಗ ಅವನ ಮುತ್ತಿಗೆ ಖುಷಿಯಾಗಿ ತುಟಿಕೊಡುತ್ತಿದ್ದಳು. ಅವನು ಇಳೀವಾಗಲೂ ಒಮ್ಮೆ ಬಲವಾಗಿ ಮುತ್ತು ಕೊಟ್ಟು ಇಳಿದ. ರೈಲಿನ ಕಿಟಕಿಯಿಂದ ಅವಳನ್ನೇ ನೋಡಿ ಟಾಟಾ ಮಾಡಿ ಹೋದ. ಈವತ್ತು ಅವರ ಅಡ್ತಿದ್ದದ್ದು ನೋಡಿ, ಯಾಕೋ ನಿಮಗೆ ಅವರ ಕತೆ ಹೇಳಬೇಕು ಅನ್ನಿಸ್ತು.

ನನ್ನ ಸ್ಟೇಷನ್ ಬಂತು. ಒಳಗೆ ತಂಪಗಿದ್ದ ರೈಲಿಂದ ಹೊರಗಿಳಿದ ತಕ್ಷಣ ಉರಿ ಹವೆ ಭಗ್ಗಂತ ಮುಖಕ್ಕೆ ತಟ್ಟಿತು.

ಅಲ್ಲಿ ಪುಟ್ಟ ಮಗು ಎತ್ತಿಕೊಂಡಿದ್ದವನೊಬ್ಬ, ಕೆಲಸಕ್ಕೆ ಹೊರಟಂತಿದ್ದ ತನ್ನ ಸಂಗಾತಿಗೆ ಮುತ್ತಿಟ್ಟು ಕಳಿಸಿಕೊಡುತ್ತಿದ್ದ. ರೈಲಿಗೆ ಹತ್ತಲಿರುವಾಗ ಹಿಡಿದ ಅವಳ ಕೈಗೆ ಮತ್ತೆ ಮುತ್ತುಕೊಟ್ಟ. ಇಷ್ಟವಿಲ್ಲದೆ ಬೀಳ್ಕೊಡುತ್ತಿದ್ದಂತಿತ್ತು. ಸ್ಟೇಷನ್ ಹೊರಗೆ ಬಂದರೆ, ಇರುಳೆಲ್ಲಾ ಜತೆಯಲ್ಲಿ ಕಳೆದಂತೆ ಕಾಣುವ ಒಂದು ಜೋಡಿ ಅಪ್ಪಿಕೊಂಡು ಮುದ್ದಾಡುತ್ತಿದ್ದರು. ಹುಡುಗನ ತಲೆಯೆಲ್ಲಾ ಕೆದರಿತ್ತು. ಹುಡುಗಿಯ ಸೊಂಟಬಳಸಿ ಗಟ್ಟಿಯಾಗಿ ಹಿಡಕೊಂಡು ಅವಳ ಕೆನ್ನೆ, ಹಣೆ, ಕಿವಿ, ಕತ್ತು, ಎದೆಗೆಲ್ಲಾ ಮುತ್ತಿಡುತ್ತಿದ್ದ. ಕಣ್ಣಲ್ಲೇ ಅವಳ ಚಂದವನ್ನು ಪೂಜಿಸುತ್ತಾ, ಅಮಲೇರಿದವನಂತಿದ್ದ. ಅವಳೂ ಅದನ್ನು ಆನಂದಿಸುತ್ತಾ ಅವನ ಕೊರಳಿಗೆ ಜೋತು ಬಿದ್ದಿದ್ದಳು. ಇಬ್ಬರೂ ಉನ್ಮತ್ತರ ಹಾಗಿದ್ದರು.

ಈವತ್ತು ಲೋಕಕ್ಕೆ ಏನಾಗಿದೆ ಅಂದುಕೊಂಡು ಕೆಲಸದ ಕಡೆ ಸರಸರ ಹೊರಟೆ.