ಅಪರಾಧಿಯು ತಪ್ಪೊಪ್ಪಿಕೊಂಡ ಐದು ತಿಂಗಳ ನಂತರ ತೀರ್ಪು ಹೊರಬಂದಿತು. ರಝುಮಿಖಿನ್ ಸಾಧ್ಯವಾದಾಗಲೆಲ್ಲ ಸೆರೆಮನೆಗೆ ಹೋಗಿ ಅವನ ಭೇಟಿ ಮಾಡುತ್ತಿದ್ದ. ಸೋನ್ಯಾಳೂ ಅಷ್ಟೇ. ದೂರವಾಗುವ ದಿನ ಬಂದಿತು. ಶಾಶ್ವತವಾಗಿ ದೂರವಾಗುತ್ತಿಲ್ಲ ನಾವು ಎಂದು ದುನ್ಯಾ ಆಣೆ ಮಾಡಿ ಹೇಳಿದಳು ಅಣ್ಣನಿಗೆ. ರಝುಮಿಖಿನ್ ಕೂಡ ಅದನ್ನೇ ಹೇಳಿದ. ಕನಿಷ್ಠಪಕ್ಷ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಏನು ಮಾಡಬೇಕೆಂಬ ಬಗ್ಗೆ ಅವನ ಸ್ನೇಹಪೂರ್ಣ ಮನಸಿನಲ್ಲಿ ಆಗಲೇ ಒಂದು ಯೋಜನೆ ದೃಢವಾಗಿ ರೂಪುತಳೆದಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಕೊನೆಯ ನುಡಿಗಳು.

 

ವಿಶಾಲವಾದ, ನಿರ್ಜನವಾದ ನದಿಯ ದಂಡೆಯ ಮೇಲೆ ಇರುವ ಬಲು ದೂರದ ಊರು ಸೈಬೀರಿಯ. ರಶಿಯದ ಆಡಳಿತ ಕೇಂದ್ರಗಳಲ್ಲೊಂದು. ಆ ಊರಲ್ಲೊಂದು ಕೋಟೆಯಿದೆ, ಅದು ಜೈಲು. ಗಡೀಪಾರಾಗಿ ಬಂದು ದ್ವಿತೀಯ ದರ್ಜೆಯ ಕೈದಿಯಾಗಿ ಒಂಬತ್ತು ತಿಂಗಳಿಂದ ಸೆಮನೆ ವಾಸ ಅನುಭವಿಸುತ್ತಿರುವ ರಾಸ್ಕೋಲ್ನಿಕೋವ್ ಆ ಜೈಲಿನಲ್ಲಿದ್ದಾನೆ. ಅವನು ಅಪರಾಧವನ್ನೆಸಗಿ ಸುಮಾರು ಒಂದೂವರೆ ವರ್ಷ ಕಳೆದಿದೆ.

ಕೋರ್ಟಿನಲ್ಲಿ ಯಾವ ದೊಡ್ಡ ಕಷ್ಟಗಳೂ ಇಲ್ಲದೆ ವಿಚಾರಣೆ ಮುಗಿದಿತ್ತು. ಅಪರಾಧಿಯು ದೃಢವಾಗಿ, ಖಚಿತವಾಗಿ, ಸ್ಪಷ್ಟವಾಗಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ. ಸಮಯ ಸಂದರ್ಭಗಳ ಗೊಂದಲವಿರಲಿಲ್ಲ. ತನಗೆ ಅನುಕೂಲವಾಗುವ ಹಾಗೆ ವಸ್ತುಸಂಗತಿಗಳನ್ನು ತಿರುಚುವ ಪ್ರಯತ್ನವೂ ಇರಲಿಲ್ಲ. ಅತಿ ಸಣ್ಣ ವಿವರವನ್ನೂ ಮರೆತಿರಲಿಲ್ಲ. ಕೊಲೆಯ ಇಡೀ ವಿವರವನ್ನು ಒಂದಿಷ್ಟೂ ಬಿಡದೆ ಹೇಳಿದ್ದ. ಕೊಲೆಯಾದ ಹೆಂಗಸಿನ ಕೈಯಲ್ಲಿದ್ದ, ಪೇಪರಿನಲ್ಲಿ ಸುತ್ತಿದ್ದ ಲೋಹದ ಚೂರಿನ ರಹಸ್ಯವನ್ನು ವಿವರಿಸಿದ್ದ. ಸತ್ತ ಮುದುಕಿಯ ಬಳಿ ಇದ್ದ ಕೀಗಳನ್ನು ಹೇಗೆ ತೆಗೆದುಕೊಂಡೆ ಎಂದು ಹೇಳಿ ಬೀಗದ ಕೈಗಳನ್ನೆಲ್ಲ ವಿವರವಾಗಿ ವರ್ಣಿಸಿದ್ದ. ಪೆಟ್ಟಿಗೆಯನ್ನು, ಅದರೊಳಗೆ ತುಂಬಿಟ್ಟಿದ್ದ ಕೆಲವು ವಸ್ತುಗಳನ್ನೂ ಕುರಿತು ಹೇಳಿದ. ಲಿಝವೆಟಳ ಕೊಲೆಯ ರಹಸ್ಯ ಬಯಲು ಮಾಡಿದ. ಕೋಚ್ ಬಂದು ಬಾಗಿಲು ತಟ್ಟಿದ್ದು, ಅವನ ಹಿಂದೆ ಸ್ಟೂಡೆಂಟು ಬಂದಿದ್ದು, ಅವರಿಬ್ಬರೂ ಮಾತಾಡಿಕೊಂಡದ್ದು ಹೇಳಿದ; ಅಪರಾಧಿಯಾದ ತಾನು ಮೆಟ್ಟಿಲಿಳಿದು ಓಡಿ ಹೋದದ್ದು, ಮಿಕೋಲ್ಕ ಮತ್ತು ಮಿಟ್ಕಾರ ಕಿರಿಚಾಟ ಕೇಳಿದ್ದು, ಖಾಲಿ ಅಪಾರ್ಟ್‍ಮೆಂಟಿನಲ್ಲಿ ಅಡಗಿದ್ದು, ಆಮೇಲೆ ಮನೆಗೆ ಹೋದದ್ದು ಹೇಳಿದ. ವೋಝ್ನೆಸೆನ್ಸ್ಕಿ ಪ್ರಾಸ್ಪೆಕ್ಟಿನ ಕಟ್ಟಡದ ಅಂಗಳದಲ್ಲಿ, ಗೇಟಿನ ಹತ್ತಿರ ಇದ್ದ ಕಲ್ಲಿನ ಕೆಳಗೆ ವಡವೆಗಳನ್ನು ಗಿರವಿ ವಸ್ತುಗಳನ್ನು ಬಚ್ಚಿಟ್ಟ ಜಾಗ ತೋರಿಸಿದ. ಸ್ವಲ್ಪದರಲ್ಲಿ ಹೇಳಬೇಕೆಂದರೆ ಕೇಸು ಸ್ಪಷ್ಟವಾಗಿತ್ತು. ಅವನು ಪರ್ಸನ್ನೂ ವಸ್ತುಗಳನ್ನೂ ಬಳಸದೆ ಕಲ್ಲಿನ ಕೆಳಗೆ ಬಚ್ಚಿಟ್ಟದ್ದು, ಅದಕ್ಕಿಂತ ಹೆಚ್ಚಾಗಿ ಆ ವಸ್ತುಗಳ ವಿವರವಾಗಲೀ ಸಂಖ್ಯೆಯಾಗಲೀ ಅವನಿಗೆ ಖಚಿತವಾಗಿ ನೆನಪು ಇಲ್ಲದೆ ಇದ್ದದ್ದು ನೋಡಿ ವಿಚಾರಣಾಧಿಕಾರಿಗಳು, ನ್ಯಾಯಾಧೀಶರು ಬಹಳ ಆಶ್ಚರ್ಯಪಟ್ಟರು. ಅವನು ಪರ್ಸನ್ನು ಒಮ್ಮೆಯೂ ತೆರೆಯದೆ ಇದ್ದದ್ದು, ಅದರಲ್ಲಿ ಎಷ್ಟು ದುಡ್ಡು ಇತ್ತು ಅನ್ನುವುದೂ ಅವನಿಗೆ ಗೊತ್ತಿರದೆ ಇದ್ದದ್ದು, ನಂಬಲು ಅಸಾಧ್ಯವೆಂದು ತೋರಿತ್ತು (ಪರ್ಸಿನಲ್ಲಿ ಮುನ್ನೂರ ಹದಿನೇಳು ಬೆಳ್ಳಿಯ ರೂಬಲ್‌ಗಳು, ಇಪ್ಪತ್ತು ಕೊಪೆಕ್‌ನ ಮೂರು ನಾಣ್ಯಗಳು ಇದ್ದವು. ಅಷ್ಟು ದೀರ್ಘಕಾಲ ಕಲ್ಲಿನ ಕೆಳಗೆ ಇದ್ದುದರಿಂದ ಮೇಲಿದ್ದ ದೊಡ್ಡ ನೋಟಿಗೆ ಹಾನಿಯಾಗಿತ್ತು.) ಮಿಕ್ಕೆಲ್ಲ ಸಂಗತಿಗಳ ಬಗ್ಗೆ ಸ್ವಂತ ಇಚ್ಛೆಯಿಂದ ಸತ್ಯವನ್ನೇ ನುಡಿದ ಆಪಾದಿತ ಇದೊಂದು ವಿಷಯದಲ್ಲಿ ಸುಳ್ಳೇಕೆ ಹೇಳಿದನೆಂದು ಬಹಳ ಕಾಲ ಉತ್ತರಕ್ಕೆ ತಡಕಾಡಿದರು. ಕೊನೆಗೆ ಕೆಲವರು, ಮುಖ್ಯವಾಗಿ ಮನಶ್ಶಾಸ್ತ್ರಜ್ಞರು, ಅವನು ನಿಜವಾಗಲೂ ಪರ್ಸಿನೊಳಗೆ ಏನಿದೆ ಎಂದು ನೋಡಿಯೇ ಇಲ್ಲ ಹಾಗಾಗಿ ಅದರಲ್ಲೇನಿದೆ ಅನ್ನುವುದು ಅವನಿಗೆ ಗೊತ್ತಿಲ್ಲ, ಅದನ್ನು ತೆಗೆದುಕೊಂಡು ಹೋಗಿ ಇದ್ದ ಹಾಗೇ ಕಲ್ಲಿನ ಅಡಿಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ಒಪ್ಪಿಕೊಂಡರು. ಇದರಿಂದಾಗಿ ಅವನು ಮಾಡಿದ ಅಪರಾಧಕ್ಕೆ ಯಾವುದೋ ರೀತಿಯ ತಾತ್ಕಾಲಿಕವಾದ ಮಾನಸಿಕ ಅಸ್ವಸ್ಥತೆ ಕಾರಣವಿರಬೇಕು, ಕೊಲೆ ಮಾಡುತ್ತೇನೆ ಎಂಬ ವ್ಯಾಧಿಭ್ರಾಂತಿಯೂ ಅಂಥದೊಂದು ಕಾರಣವಿರಬೇಕು, ದರೋಡೆಯಾಗಲೀ ಲಾಭಗಳಿಕೆಯ ಉದ್ದೇಶವಾಗಲೀ ಕೊಲೆಗೆ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಯಿತು. ಈ ತೀರ್ಮಾನಕ್ಕೂ ನಮ್ಮ ಕಾಲದ ಫ್ಯಾಶನ್ ಆಗಿರುವ ತಾತ್ಕಾಲಿಕ ಮಾನಸಿಕ ಅಸ್ವಸ್ಥತೆ ಎಂಬ ಸಿದ್ಧಾಂತಕ್ಕೂ ಹೊಂದಿಕೆಯಾಗುತ್ತಿತ್ತು. ಕೆಲವು ಅಪರಾಧಿಗಳಿಗೆ ಈ ಸಿದ್ಧಾಂತವನ್ನು ಅನ್ವಯಿಸುತ್ತಿದ್ದಾರೆ. ಅಲ್ಲದೆ ರಾಸ್ಕೋಲ್ನಿಕೋವ್‌ನ ದೀರ್ಘಕಾಲದ ಹೈಪೊಕಾಂಡ್ರಿಯ ಸ್ಥಿತಿಯ ಬಗ್ಗೆ ಡಾಕ್ಟರ್ ಝೋಸ್ಸಿಮೋವ್, ಓನರಮ್ಮ, ಕೆಲಸದಾಕೆ, ಹಳೆಯ ಗೆಳೆಯರು ಎಲ್ಲರೂ ಖಚಿತವಾದ ಸಾಕ್ಷಿಯನ್ನು ನೀಡಿದರು. ಹಾಗಾಗಿ ರಾಸ್ಕೋಲ್ನಿಕೋವ್ ಸಾಮಾನ್ಯವಾದ ಕೊಲೆಗಾರ, ದರೋಡೆಕೋರ, ಅಪರಾಧಿ ಅಲ್ಲ, ಅವನು ಮಾಡಿದ ಕೆಲಸದಲ್ಲಿ ಮತ್ತೇನೋ ಇದೆ ಅನ್ನುವ ತೀರ್ಮಾನಕ್ಕೆ ಬಂದರು. ಈ ಅಭಿಪ್ರಾಯವನ್ನು ಬೆಂಬಲಿಸಿದ ಅನೇಕರಿಗೆ ರಾಸ್ಕೋಲ್ನಿಕೋವ್ ತನ್ನ ರಕ್ಷಣೆಯ ಯಾವ ಉಪಾಯವನ್ನೂ ಮಾಡದೆ, ಹೋಮಿಸೈಡ್‍ ಕ್ರಿಯೆಗೆ ಅಂತಿಮ ಕಾರಣ ಏನು, ದರೋಡೆ ನಡೆಸಲು ಕಾರಣವೇನು ಎಂಬ ಪ್ರಶ್ನೆಗೆ ತನ್ನ ದುಸ್ಥಿತಿಯೇ ಕಾರಣ, ತನ್ನ ಬಡತನ ಅಸಹಾಯಕತೆಗಳೇ ಕಾರಣ, ತನ್ನ ಬದುಕಿನ ದಾರಿ ಸುಗಮಗೊಳಿಸಿಕೊಳ್ಳಲು ಮೊದಲ ಹೆಜ್ಜೆಯಾಗಿ ಮೂರು ಸಾವಿರ ರೂಬಲ್ ಸಂಪಾದಿಸುವ ಬಯಕೆಯೇ ಕಾರಣ, ಸತ್ತ ಹೆಂಗಸಿನ ಮನೆಯಲ್ಲಿ ಅಷ್ಟು ಹಣವಿರುತ್ತದೆ ಎಂದುಕೊಂಡಿದ್ದೆ ಎಂಬ ಉತ್ತರ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು.

ತನ್ನ ಚೆಲ್ಲಾಟದ ದುರ್ಬಲ ಸ್ವಭಾವದ ಕಾರಣದಿಂದಲೇ ಕೊಲೆಯಾಯಿತು, ಕಷ್ಟ, ವಿಫಲತೆಗಳು ನನ್ನ ದೌರ್ಬಲ್ಯಕ್ಕೆ ಕುಮ್ಮಕ್ಕು ಕೊಟ್ಟವು ಎಂದು ವಿವರಿಸಿದ. ಅವನಾಗಿಯೇ ಬಂದು ತಪ್ಪೊಪ್ಪಿಕೊಳ್ಳುವುದಕ್ಕೆ ಕಾರಣವೇನು ಎಂದು ಕೇಳಿದ್ದಕ್ಕೆ ಪ್ರಾಮಾಣಿಕ ಪಶ್ಚಾತ್ತಾಪವೇ ಕಾರಣ ಎಂದು ಉತ್ತರಿಸಿದ. ಎಲ್ಲದರಲ್ಲೂ ಒಂದು ಥರ ಕ್ರೂಡ್ ಅನ್ನುವಂಥದಿತ್ತು. ಹಾಗಿದ್ದರೂ ಶಿಕ್ಷೆಯು ನಿರೀಕ್ಷಿಸಿದಷ್ಟು ಕಠಿಣವಾಗಿರದೆ ಕರುಣೆಯಿಂದ ಕೂಡಿದ್ದಾಗಿತ್ತು. ಅಪರಾಧಿಯು ತನ್ನನ್ನು ಸಮರ್ಥಿಸಿಕೊಳ್ಳದೇ ಇದ್ದದ್ದು, ಅದಕ್ಕೆ ಬದಲಾಗಿ ತನ್ನ ತಪ್ಪನ್ನು ಪ್ರತಿಹಂತದಲ್ಲೂ ದೃಢಪಡಿಸುತ್ತಲೇ ಇದ್ದದ್ದು ಇವು ಕೂಡ ಬಹುಶಃ ಅಂಥ ತೀರ್ಪಿಗೆ ಕಾರಣವಾಗಿರಬಹುದು. ಅಪರಾಧದ ವಿಚಿತ್ರವಾದ ನಿರ್ದಿಷ್ಟವಾದ ಸಂದರ್ಭಗಳನ್ನು ಪರಿಶೀಲಿಸಲಾಯಿತು. ಅಪರಾಧ ಎಸಗುವ ಮೊದಲೇ ಅಪರಾಧಿಗೆ ಇದ್ದ ಕಾಯಿಲೆ, ಮಾನಸಿಕ ಒತ್ತಡ ಇವುಗಳ ಬಗ್ಗೆ ಕಿಂಚಿತ್ತೂ ಅನುಮಾನವಿರಲಿಲ್ಲ. ಅವನಲ್ಲಿ ಎಚ್ಚೆತ್ತಿದ್ದ ಪಶ್ಚಾತ್ತಾಪದ ಭಾವನೆಯ ಕಾರಣದಿಂದ ಮತ್ತು ಅಪರಾಧ ಎಸಗಿದಾಗ ಅವನ ಮಾನಸಿಕ ಸಾಮರ್ಥ್ಯ ಸ್ಥಿರವಾಗಿರದಿದ್ದ ಕಾರಣದಿಂದ ತಾನು ಕದ್ದದ್ದನ್ನು ಅವನು ಉಪಯೋಗಿಸರಲಿಲ್ಲ ಎಂದು ತಿಳಿಯಲಾಯಿತು. ಲಿಝವೆಟಳ ಆಕಸ್ಮಿಕ ಕೊಲೆಯ ಸಂಗತಿಯು ಅವನ ಮಾನಸಿಕ ಅಸ್ಥಿರತೆಗೆ ಪುರಾವೆ ಒದಗಿಸುತ್ತದೆ, ಎರಡು ಕೊಲೆಗಳನ್ನು ಮಾಡಿದವನು ಆ ಕ್ಷಣದಲ್ಲಿ ಬಾಗಿಲು ತೆರೆದೇ ಇದೆ ಅನ್ನುವುದನ್ನು ಗಮನಿಸದೇ ಇರಲು ಹೇಗೆ ಸಾಧ್ಯ ಎಂದು ತಿಳಿಯಲಾಯಿತು. ಹತಾಶ ಧರ್ಮಾಂಧ (ನಿಕೊಲಾಯ್)ನ ಸುಳ್ಳು ಹೇಳಿಕೆಯ ಆತ್ಮಾರೋಪದ ಕಾರಣದಿಂದ ಇಡೀ ಪ್ರಸಂಗವು ಬಿಡಿಲಾಗದಂತೆ ಕಗ್ಗಂಟಾಗಿರುವಾಗ, ಅಪರಾಧಿಯ ವಿರುದ್ಧವಾಗಿ ಸ್ಪಷ್ಟವಾದ ಪುರಾವೆಯಾಗಲೀ ಸಾಕ್ಷ್ಯವಾಗಲೀ ಇಲ್ಲದಿರುವುದು ಮಾತ್ರವಲ್ಲ, ಇವನೇ ಅಪರಾಧಿ ಎಂಬ ಸಂಶಯವೂ ಇರದಿದ್ದಾಗ (ಪೋರ್ಫಿರಿ ತನ್ನ ಮಾತು ಉಳಿಸಿಕೊಂಡಿದ್ದ) ತಾನಾಗಿಯೇ ನಿಜ ಅಪರಾಧಿಯು ತಪ್ಪೊಪ್ಪಿಗೆ ಮಾಡಿಕೊಂಡಿರುವುದು ಬಹಳ ಮುಖ್ಯವಾಗಿ ಕಂಡು ಬಂದಿತ್ತು.

ಇಷ್ಟೇ ಅಲ್ಲದೆ ಇನ್ನಿತರ ಸಂಗತಿಗಳೂ ಅನಿರೀಕ್ಷಿತವಾಗಿ ಆಪಾದಿತನ ಪರವಾಗಿ ಸದಭಿಪ್ರಾಯ ಮೂಡಿಸಲು ನೆರವಾದವು. ಮಾಜೀ ಸ್ಟೂಡೆಂಟು ರಝುಮಿಖಿನ್‍ ಎಲ್ಲೆಲ್ಲಿಂದಲೋ ಮಾಹಿತಿ ಸಂಗ್ರಹಿಸಿ ಅಪರಾಧಿ ರಾಸ್ಕೋಲ್ನಿಕೋವ್ ವಿಶ್ವವಿದ್ಯಾಲಯದಲ್ಲಿದ್ದಾಗ ತನ್ನ ಬಳಿಯಿದ್ದ ದುಡ್ಡನ್ನು ಬಳಸಿ ಕ್ಷಯರೋಗ ಪೀಡಿತ ವಿದ್ಯಾರ್ಥಿಗೆ ಸಹಾಯಮಾಡಿದ್ದನ್ನು, ಆರು ತಿಂಗಳ ಕಾಲ ಅವನ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದನ್ನು ತಿಳಿಸಿದ. ವಿದ್ಯಾರ್ಥಿ ತೀರಿಕೊಂಡ ಮೇಲೆ ಅವನ ಮುದಿ ತಂದೆ, ಪಾರ್ಶವಾಯು ಪೀಡಿತ ರೋಗಿಯನ್ನು (ದಿವಂಗತ ವಿದ್ಯಾರ್ಥಿಯು ಅದು ಹೇಗೋ ತನ್ನ ಹದಿಮೂರನೆಯ ವಯಸಿನಿಂದ ತಂದೆಯನ್ನು ನೋಡಿಕೊಂಡಿದ್ದ) ಉಪಚರಿಸಿದ್ದಲ್ಲದೆ, ಆಸ್ಪತ್ರೆಗೆ ಸೇರಿಸಿ, ಅವನು ಸತ್ತಾಗ ಅಂತ್ರಕ್ರಿಯೆಗಳನ್ನೂ ನೆರವೇರಿಸಿದ್ದ ಮಾಹಿತಿ ಇವೆಲ್ಲವೂ ರಾಸ್ಕೋಲ್ನಿಕೋವ್‌ನ ಶಿಕ್ಷೆಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಅವನು ಮೊದಲು ಬಾಡಿಗೆಗಿದ್ದ ಮನೆಯ ಯಜಮಾನಿ, ಅವನು ಮದುವೆಯಾಗಬೇಕಾಗಿದ್ದ, ಆದರೆ ತೀರಿ ಹೋದ, ಹುಡುಗಿಯ ತಾಯಿ, ಝರ್ಮಿತ್ಸ್ಯನ್‌ನ ವಿಧವೆ ಪತ್ನಿ ಕೂಡ ಸಾಕ್ಷಿ ಹೇಳಿ, ಅವರೆಲ್ಲ ಇದ್ದ ಮನೆಗೆ ಬೆಂಕಿ ಬಿದ್ದಿದ್ದಾಗ ರಾಸ್ಕೋಲ್ನಿಕೋವ್ ಇಬ್ಬರು ಮಕ್ಕಳನ್ನು ಬೆಂಕಿಯ ಜ್ವಾಲೆಯಿಂದ ಕಾಪಾಡಿದ್ದ, ಸ್ವತಃ ಗಾಯಗೊಂಡದ್ದನ್ನೂ ಲೆಕ್ಕಿಸಿರಲಿಲ್ಲ ಎಂದಿದ್ದಳು. ಈ ಸಂಗತಿಯನ್ನು ಪರಿಶೀಲಿಸಲಾಗಿ ಅದನ್ನು ಧೃಡೀಕರಿಸುವ ಇನ್ನಿತರ ಅನೇಕ ಸಾಕ್ಷಿಗಳೂ ದೊರೆತವು. ಒಟ್ಟಾರೆಯಾಗಿ ಹೇಳುವುದಾದರೆ ಅಪರಾಧಿಯ ಸ್ವ ಇಚ್ಛೆಯ ತಪ್ಪೊಪ್ಪಿಗೆ ಮತ್ತು ಇತರ ಪೂರಕ ಸಾಕ್ಷಿಗಳ ಕಾರಣದಿಂದ ಅಪರಾಧಿಗೆ ಎರಡನೆಯ ದರ್ಜೆಯ ಕಠಿಣ ಶಿಕ್ಷೆಯನ್ನು ಎಂಟು ವರ್ಷಗಳ ಅವಧಿಗೆ ಮಾತ್ರ ವಿಧಿಸಲಾಯಿತು.

ಕೇಸು ಆರಂಭಗೊಂಡ ಮೊದಲ ದಿನಗಳಲ್ಲೇ ರಾಸ್ಕೋಲ್ನಿಕೋವ್‌ನ ತಾಯಿ ಕಾಯಿಲೆ ಬಿದ್ದಳು. ದುನ್ಯಾ ಮತ್ತು ರಝುಮಿಖಿನ್ ಅವಳನ್ನು ರಾಸ್ಕೋಲ್ನಿಕೋವ್‌ನ ವಿಚಾರಣೆ ಮುಗಿಯುವವರೆಗೆ ಪೀಟರ್ಸ್‍ಬರ್ಗಿನಿಂದ ದೂರ ಒಯ್ದರು. ಊರಿನಿಂದ ಅನತಿ ದೂರದಲ್ಲಿರುವ, ರೈಲಿನ ಸಂಪರ್ಕ ಸುಲಭವಾಗಿ ದೊರೆಯುವ ಸ್ಥಳವೊಂದನ್ನು ರಝುಮಿಖಿನ್ ಪತ್ತೆ ಮಾಡಿದ್ದ. ಅದರಿಂದ ಅವನು ಪೀಟರ್ಸ್‌ಬರ್ಗಿಗೆ ದಿನವೂ ಬಂದು ವಿಚಾರಣೆಯನ್ನು ಗಮನಿಸುವುದಲ್ಲದೆ ದುನ್ಯಾ ಮತ್ತವಳ ತಾಯಿಯ ಸಂಪರ್ಕದಲ್ಲೂ ಇರುವುದಕ್ಕೆ ಸಾಧ್ಯವಾಗಿತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ವಿಚಿತ್ರವಾದ ನರದೌರ್ಬಲ್ಯಕ್ಕೆ ಗುರಿಯಾಗಿ, ಪೂರಾ ಅಲ್ಲದಿದ್ದರೂ ಭಾಗಶಃ ಹುಚ್ಚಿಯ ಹಾಗಾಗಿದ್ದಳು. ದುನ್ಯಾ ತನ್ನಣ್ಣನನ್ನು ಕೊನೆಯ ಬಾರಿಗೆ ಭೇಟಿ ಮಾಡಿ ಧಾವಿಸಿ ಬಂದಾಗ ಅಮ್ಮನಿಗೆ ಆಗಲೇ ಕಾಯಿಲೆ ಜಾಸ್ತಿಯಾಗಿತ್ತು. ಜ್ವರ ಬಂದು ಸನ್ನಿ ಹಿಡಿದಿತ್ತು. ಅಂದೇ ಸಂಜೆ ರಝುಮಿಖಿನ್‌ನೊಡನೆ ಕುಳಿತು ಅಮ್ಮನನ್ನು ಒಪ್ಪಿಸುವಂಥ ಕಥೆಯನ್ನು ಇಬ್ಬರೂ ಕಟ್ಟಿದ್ದರು. ರಝುಮಿಖಿನ್ ಎಲ್ಲೋ ದೂರ, ರಶಿಯದ ಗಡಿಯ ಅಂಚಿಗೆ ಹೋಗಿದ್ದಾನೆ, ಯಾವುದೋ ಖಾಸಗಿ ಕೆಲಸ, ಅದು ಮುಗಿದಾಗ ಅವನಿಗೆ ಕೀರ್ತಿಯೂ ಹಣವೂ ಬರುತ್ತದೆ ಎಂದು ಹೇಳುವ ತೀರ್ಮಾನ ಮಾಡಿದ್ದರು. ಆದರೆ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಅವರನ್ನು ಅಂದಾಗಲೀ ಆನಂತರವಾಗಲೀ ಆ ಬಗ್ಗೆ ಏನೂ ಕೇಳಲೇ ಇಲ್ಲ. ಬದಲಾಗಿ ಮಗನ ಬಗ್ಗೆ ಅವಳು ತಾನೇ ಒಂದು ಕಥೆ ಕಟ್ಟಿಕೊಂಡಂತಿತ್ತು. ತನಗೆ ಗುಡ್ ಬೈ ಹೇಳಲು ಅವನು ಬಂದು ಹೋದ ಕಥೆಯನ್ನು ಕಣ್ಣಲ್ಲಿ ನೀರು ತಂದುಕೊಂಡು ಹೇಳುತ್ತಿದ್ದಳು. ಅನೇಕ ನಿಗೂಢ ಸಂಗತಿಗಳು, ರಹಸ್ಯಗಳು ತನಗೆ ಮಾತ್ರ ತಿಳಿದಿವೆ ಅನ್ನುವಂಥ ಸೂಚನೆಗಳನ್ನು ನೀಡುತ್ತಿದ್ದಳು. ರೋದ್ಯಾಗೆ ಅನೇಕ ಪ್ರಬಲ ಶತ್ರುಗಳಿದ್ದಾರೆ, ಹಾಗಾಗಿ ಅವನು ಬಚ್ಚಿಟ್ಟುಕೊಂಡಿರಬೇಕಾಗಿದೆ ಅನ್ನುತ್ತಿದ್ದಳು. ಅವನಿಗೆ ಎದುರಾಗಿರುವ ಕಂಟಕ ಮುಗಿಯುತ್ತಿದ್ದ ಹಾಗೇ ಅವನು ದೊಡ್ಡ ಮುತ್ಸದ್ದಿಯಾಗುತ್ತಾನೆ, ಅದಕ್ಕೆ ಅವನ ಲೇಖನವೇ ಸಾಕ್ಷಿ, ಅವನ ಸಾಹಿತ್ಯಕ ಪ್ರತಿಭೆಯೇ ಸಾಕ್ಷಿ ಎಂದು ರಝುಮಿಖಿನ್‌ಗೆ ಹೇಳುತ್ತಿದ್ದಳು. ಮಗನ ಲೇಖನವನ್ನು ಎಷ್ಟೋ ಸಾರಿ ಗಟ್ಟಿಯಾಗಿ ಓದುತ್ತಿದ್ದಳು, ಮಲಗುವಾಗಲೂ ಅವಳ ಪಕ್ಕದಲ್ಲೇ ಇರುತ್ತಿತ್ತು ಅದು.

ರಾಸ್ಕೋಲ್ನಿಕೋವ್‌ನ ಬಗ್ಗೆ ಜನ ಅವಳೆದುರಿಗೆ ಮಾತಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದರೂ, ಅದರಿಂದ ಅವಳಿಗೆ ಏನೋ ಸಂಶಯ ಬರುವಹಾಗಿದ್ದರೂ ‘ರೋದ್ಯಾ ಈಗೆಲ್ಲಿದ್ದಾನೆ?’ ಎಂಬ ಪ್ರಶ್ನೆಯನ್ನು ಮಾತ್ರ ಅವಳು ಕೇಳುತ್ತಲೇ ಇರಲಿಲ್ಲ. ಕೊನೆಗೆ ಪುಲ್ಚೇರಿಯಳನ್ನು ಕಂಡರೆ, ಕೆಲವು ವಿಷಯಗಳ ಅವಳ ವಿಚಿತ್ರ ಮೌನವನ್ನು ಕಂಡರೆ, ಅವರಿಗೆ ಭಯವಾಗುತ್ತಿತ್ತು. ಮಗನಿಂದ ಯಾವ ಪತ್ರವೂ ಬರದಿದ್ದರೂ ಅವಳು ಆ ಬಗ್ಗೆ ದೂರುತ್ತಲೇ ಇರಲಿಲ್ಲ; ಮೊದಲಾದರೆ ಅವಳು ಹಳ್ಳಿಯಲ್ಲಿದ್ದಾಗ, ಮುದ್ದಿನ ಮಗನ ಪತ್ರದ ನಿರೀಕ್ಷೆಯಲ್ಲೇ ಬದುಕುತ್ತಿದ್ದಳು. ಈ ವಿಷಯ ದುನ್ಯಾಳನ್ನು ಹೆದರಿಸುತ್ತಿತ್ತು. ಅಮ್ಮ ಬಹುಶಃ ತನ್ನ ಮಗನ ಭಯಂಕರ ವಿಧಿಯನ್ನು ಹೇಗೋ ಊಹಿಸಿ ಭಯಪಟ್ಟಿದ್ದಾಳೆ, ಆ ಬಗ್ಗೆ ವಿಚಾರಿಸಿದರೆ ಇನ್ನೂ ಭಯಂಕರವಾದ ವಿಷಯ ಕೇಳಬೇಕಾದೀತೆಂದು ಹೆದರಿದ್ದಾಳೆ ಅಂದುಕೊಂಡಳು. ಒಟ್ಟಿನಲ್ಲಿ ಅಮ್ಮನ ಮನಸ್ಥಿತಿ ನೆಟ್ಟಗಿಲ್ಲ ಅನ್ನುವುದು ದುನ್ಯಾಗೆ ಸ್ಪಷ್ಟವಾಗಿ ತಿಳಿಯಿತು.

ಒಂದೆರಡು ಬಾರಿ ಅವಳೇ ಮಾತನ್ನು ಹೇಗೆ ತಿರುಗಿಸಿದ್ದಳೆಂದರೆ ರೋದ್ಯಾ ಆಗ ಎಲ್ಲಿದ್ದಾನೆಂದು ಹೇಳಲೇಬೇಕಾಗಿ ಬಂದು, ಅವರು ತೃಪ್ತಿ ತಾರದ, ಸಂಶಯ ಹುಟ್ಟಿಸುವ ಉತ್ತರಗಳನ್ನು ಹೇಳಿದರೂ ಪುಲ್ಚೇರಿಯ ಮಾತ್ರ ತಕ್ಷಣವೇ ಅಗಾಧ ದುಃಖಕ್ಕೆ ಒಳಗಾಗಿ, ಮಂಕಾಗಿ, ಮಾತಿಲ್ಲದೆ ಬಹಳ ಹೊತ್ತು ಸುಮ್ಮನೆ ಕೂತುಬಿಟ್ಟಿದ್ದಳು. ಸುಳ್ಳು ಹೇಳುವುದು, ಕಥೆ ಕಟ್ಟುವುದು ಇನ್ನು ಕಷ್ಟ, ಕೆಲವು ವಿಷಯಗಳ ಮೌನವಾಗಿದ್ದುಬಿಡುವುದು ವಾಸಿ ಅನ್ನುವ ತೀರ್ಮಾನಕ್ಕೆ ಬಂದಿದ್ದಳು ದುನ್ಯಾ. ಭಯಂಕರವಾದದ್ದೇನೋ ಆಗಿದೆ ಎಂದು ಬಡಪಾಯಿ ಅಮ್ಮ ಅನುಮಾನಪಡುತಿದ್ದಾಳೆ ಅನ್ನುವ ತೀರ್ಮಾನಕ್ಕೆ ಬರದೆ ವಿಧಿಯಿರಲಿಲ್ಲ. ಅಣ್ಣ ಶರಣಾಗುವ ಹಿಂದಿನ ದಿನ, ಸ್ವಿಡ್ರಿಗೈಲೋವ್ ಪ್ರಸಂಗವಾದ ನಂತರ, ಅವಳು ಮಲಗಿದ್ದಾಗ ನಿದ್ದೆಯಲ್ಲಿ ಬಡಬಡಿಸಿದ್ದನ್ನು ಅಮ್ಮ ಕೇಳಿದ್ದಾಳೆ ಎಂದು ರಾಸ್ಕೋಲ್ನಿಕೋವ್ ಹೇಳಿದ್ದು ನೆನಪಿಗೆ ಬಂದಿತ್ತು. ಅವಳು ಏನಾದರೂ ಕೇಳಿಸಿಕೊಂಡಿದ್ದಳೋ ಹೇಗೆ? ಆಮೇಲೆ ಎಷ್ಟೋ ದಿನ, ವಾರಗಳು ಕೂಡ, ಅಮ್ಮ ಮಂಕಾಗಿ, ಸಪ್ಪೆಯಾಗಿ, ಮಾತಿಲ್ಲದೆ ಅಳುತ್ತ ಇದ್ದುಬಿಟ್ಟಿದ್ದಳು. ಇಂಥ ಕಾಯಿಲೆ ಹೆಂಗಸು ಇದ್ದಕಿದ್ದ ಹಾಗೆ ಹಿಸ್ಟೀರಿಯಕ್ಕೆ ಒಳಗಾದವಳ ಹಾಗೆ, ತಡೆಯೇ ಇಲ್ಲದೆ ಒಂದೇ ಸಮ ಮಾತಾಡುವುದಕ್ಕೆ ಶುರು ಮಾಡಿದ್ದಳು—ತನ್ನ ಮಗನ ಬಗ್ಗೆ, ಅವಳ ಆಸೆಗಳ ಬಗ್ಗೆ, ಭವಿಷ್ಯದ ಬಗ್ಗೆ ಹೇಳುತಿದ್ದಳು. ಒಂದೊಂದು ಸಲ ಅವಳ ಭ್ರಮೆಗಳೆಲ್ಲ ವಿಚಿತ್ರವಾಗಿರುತ್ತಿದ್ದವು. ಅವಳ ಸಮಾಧಾನಕ್ಕೆಂದು ಅವರು ಅವಳು ಹೇಳಿದ್ದಕ್ಕೆಲ್ಲ ಹ್ಞೂಂಗುಟ್ಟುತ್ತಿದ್ದರು (ಸ್ವತಃ ಕಾಯಿಲೆ ಹೆಂಗಸಿಗೂ ಅವರು ತನ್ನ ಖುಷಿಗಾಗಿ ಎಲ್ಲಕ್ಕೂ ಹೂಂ ಅನ್ನುತ್ತಿದ್ದಾರೆ ಅನ್ನುವುದು ಗೊತ್ತಾಗಿತ್ತು ಅನಿಸುತ್ತದೆ). ಆದರೂ ಮಾತಾಡುತ್ತಲೇ ಇದ್ದಳು.

ಅಪರಾಧಿಯು ತಪ್ಪೊಪ್ಪಿಕೊಂಡ ಐದು ತಿಂಗಳ ನಂತರ ತೀರ್ಪು ಹೊರಬಂದಿತು. ರಝುಮಿಖಿನ್ ಸಾಧ್ಯವಾದಾಗಲೆಲ್ಲ ಸೆರೆಮನೆಗೆ ಹೋಗಿ ಅವನ ಭೇಟಿ ಮಾಡುತ್ತಿದ್ದ. ಸೋನ್ಯಾಳೂ ಅಷ್ಟೇ. ದೂರವಾಗುವ ದಿನ ಬಂದಿತು. ಶಾಶ್ವತವಾಗಿ ದೂರವಾಗುತ್ತಿಲ್ಲ ನಾವು ಎಂದು ದುನ್ಯಾ ಆಣೆ ಮಾಡಿ ಹೇಳಿದಳು ಅಣ್ಣನಿಗೆ. ರಝುಮಿಖಿನ್ ಕೂಡ ಅದನ್ನೇ ಹೇಳಿದ. ಕನಿಷ್ಠಪಕ್ಷ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಏನು ಮಾಡಬೇಕೆಂಬ ಬಗ್ಗೆ ಅವನ ಸ್ನೇಹಪೂರ್ಣ ಮನಸಿನಲ್ಲಿ ಆಗಲೇ ಒಂದು ಯೋಜನೆ ದೃಢವಾಗಿ ರೂಪುತಳೆದಿತ್ತು. ಮುಂದಿನ ಭವಿಷ್ಯಕ್ಕೆ ಅಸ್ತಿವಾರ ಹಾಕಬೇಕು, ಕನಿಷ್ಠಪಕ್ಷ ದುಡ್ಡು ಕೂಡಿಡಬೇಕು, ಸೈಬೀರಿಯಕ್ಕೆ ಹೋಗಬೇಕು, ಅಲ್ಲಿ ಸಮೃದ್ಧವಾದ ಭೂಮಿ ಇದೆ, ಕೆಲಸಗಾರರು, ಜನ, ಬಂಡವಾಳದ ಕೊರತೆ ಇದೆ. ರೋದ್ಯಾ ಇರುವ ಊರಲ್ಲೇ ಇರಬೇಕು, ಒಟ್ಟಿಗೆ ಹೊಸ ಬದುಕು ಶುರು ಮಾಡಬೇಕು ಅನ್ನುವ ಯೋಜನೆ. ಗುಡ್ ಬೈ ಹೇಳುತ್ತ ಎಲ್ಲರೂ ಅತ್ತರು. ಕೊನೆಯ ಕೆಲವು ದಿನಗಳಲ್ಲಿ ರಾಸ್ಕೋಲ್ನಿಕೋವ್ ಬಹಳ ದುಃಖದಲ್ಲಿದ್ದ. ತಾಯಿಯ ಬಗ್ಗೆ ಮತ್ತೆ ಮತ್ತೆ ವಿಚಾರಿಸಿದ. ಅವಳ ಬಗ್ಗೆಯೇ ಯೋಚನೆ ಮಾಡುತ್ತಿದ್ದ. ಅಮ್ಮನ ಬಗ್ಗೆ ಅಣ್ಣ ಒಂದೇ ಸಮ ಯೋಚನೆ ಮಾಡುತ್ತಿರುವುದನ್ನು ನೋಡಿ ದುನ್ಯಾಗೆ ಭಯವಾಯಿತು. ಅಮ್ಮನ ಕಾಯಿಲೆಯ ವಿಷಯ ಕೇಳಿ ವಿಷಣ್ಣನಾದ. ಸೋನ್ಯಾಳ ಜೊತೆಯಲ್ಲಿ ಮಾತ್ರ ಯಾವ ಕಾರಣಕ್ಕೋ ಮೌನವಾಗಿದ್ದುಬಿಟ್ಟ. ಸೋನ್ಯಾ ಬಹಳ ಹಿಂದೆಯೇ ಸಿದ್ಧವಾಗಿಬಿಟ್ಟಿದ್ದಳು. ಸ್ವಿದ್ರಿಗೈಲೋವ್ ಅವಳಿಗಾಗಿ ಬಿಟ್ಟು ಹೋಗಿದ್ದ ಹಣ ಬಳಸಿಕೊಂಡು ರಾಸ್ಕೋಲ್ನಿಕೋವ್ ಯಾವ ಖೈದಿಗಳ ಜೊತೆ ಯಾವತ್ತು ಹೊರಡುತ್ತಾನೋ ಅವತ್ತೇ ಹೊರಡಲು ಸಿದ್ಧಳಾಗಿದ್ದಳು. ರಾಸ್ಕೋಲ್ನಿಕೋವ್ ಅಥವಾ ಅವಳು ಈ ಬಗ್ಗೆ ಒಂದೂ ಮಾತಾಡಿರಲಿಲ್ಲ, ಆದರೂ ಇದು ಹೀಗೇ ಅನ್ನುವುದು ಇಬ್ಬರಿಗೂ ತಿಳಿದಿತ್ತು. ಕೊನೆಯ ಭೇಟಿಯ ಹೊತ್ತಿನಲ್ಲಿ ತನ್ನ ತಂಗಿ ಮತ್ತು ರಝುಮಿಖಿನ್ ನೀಡಿದ ಆಶ್ವಾಸನೆಗಳನ್ನು ಕೇಳುತ್ತ, ತನ್ನ ಕಠಿಣ ಶಿಕ್ಷೆಯ ಅವಧಿ ಮುಗಿದ ಬಳಿಕ ತಾವೆಲ್ಲರೂ ಹೇಗೆ ಸುಖವಾಗಿರುತ್ತೇವೆ, ಅಮ್ಮನ ದುಃಖ ಸದ್ಯದಲ್ಲೇ ಹೇಗೆ ಮುಗಿಯಲಿದೆ ಎಂಬ ಅವರ ಮಾತಿಗೆ ಅವನು ವಿಚಿತ್ರವಾಗಿ ನಗುತ್ತಿದ್ದ. ಕೊನೆಗೆ ಅವನು ಮತ್ತು ಸೋನ್ಯಾ ಹೊರಟರು.

ಎರಡು ತಿಂಗಳಾದಮೇಲೆ ದುನ್ಯಾ ರಝುಮಿಖಿನ್‌ನನ್ನು ಮದುವೆಯಾದಳು. ವಿಷಾದ ತುಂಬಿದ ಸರಳವಾದ ಮದುವೆ. ಮದುವೆಗೆ ಆಹ್ವಾನಿತರಾಗಿದ್ದವರಲ್ಲಿ ಪೋರ್ಫಿರಿ ಪೆಟ್ರೊವಿಚ್, ಡಾಕ್ಟರ್ ಝೋಸ್ಸಿಮೋವ್ ಸೇರಿದ್ದರು. ಇತ್ತೀಚೆಗಂತೂ ರಝುಮಿಖಿನ್ ಗಟ್ಟಿ ಮನಸ್ಸು ಮಾಡಿದವನ ಹಾಗೆ ಕಾಣುತ್ತಿದ್ದ. ಅವನು ಅಂದುಕೊಂಡದ್ದನ್ನೆಲ್ಲ ಮಾಡಿಯೇ ಮಾಡುತ್ತಾನೆ ಅನ್ನುವ ಕುರುಡು ವಿಶ್ವಾಸ ದುನ್ಯಾಳಲ್ಲಿ ಮೂಡಿತ್ತು. ಅವಳು ಹಾಗೆ ನಂಬದೇ ಇರಲು ಸಾಧ್ಯವೇ ಇರಲಿಲ್ಲ. ಅವನ ಮನಸ್ಸು ಕಬ್ಬಣದ ಹಾಗೆ ಗಟ್ಟಿಯಾಗಿರುವುದು ಎಲ್ಲರಿಗೂ ತಿಳಿಯುತ್ತಿತ್ತು. ಓದು ಮುಗಿಸಲು ಮತ್ತೆ ಯೂನಿವರ್ಸಿಟಿಗೆ ಹೋಗಲು ಶುರು ಮಾಡಿದ್ದ. ಗಂಡ ಹೆಂಡಿರು ಒಟ್ಟಿಗೆ ಭವಿಷ್ಯವನ್ನು ಕುರಿತು ಯೋಜನೆ ರೂಪಿಸುತ್ತಿದ್ದರು, ಇನ್ನೈದು ವರ್ಷಗಳಲ್ಲಿ ಖಂಡಿತ ಸೈಬೀರಿಯಕ್ಕೆ ಹೋಗುವುದಾಗಿ ತೀರ್ಮಾನ ಮಾಡಿದ್ದರು. ಅಲ್ಲಿಯ ತನಕ ಸೋನ್ಯಾ ಅಲ್ಲಿರುತ್ತಾಳೆ ಅನ್ನುವ ಧೈರ್ಯವಿತ್ತು.

ತನ್ನ ಮಗಳು ರಝುಮಿಖಿನ್‌ನನ್ನು ಮದುವೆಯಾಗುವುದಕ್ಕೆ ಪುಲ್ಚೇರಿಯ ಮನಃಪೂರ್ವಕವಾಗಿ ಒಪ್ಪಿ ಹರಸಿದಳು. ಅವರ ಮದುವೆಯಾದ ತಕ್ಷಣ ಅವಳು ಮತ್ತೂ ವಿಷಾದದಲ್ಲಿ ಅದ್ದಿಹೋದಂತೆ, ಅವಳ ಮನಸ್ಸು ಎಲ್ಲೋ ಇರುವಂತೆ ತೋರುತ್ತಿತ್ತು. ಅವಳ ಮನಸಿಗಷ್ಟು ಸಂತೋಷ ದೊರೆಯಲೆಂದು ರಝುಮಿಖಿನ್ ಒಮ್ಮೆ ಅಕಸ್ಮಾತ್ತಾಗಿ ರಾಸ್ಕೋಲ್ನಿಕೋವ್ ಸಹಾಯ ಮಾಡಿದ್ದ ಬಡ ಹುಡುಗ ಮತ್ತು ಅವನ ಅಸಹಾಯಕ ಮುದಿ ತಂದೆಯ ಬಗ್ಗೆ, ಬೆಂಕಿ ಬಿದ್ದ ಮನೆಯಿಂದ ರಾಸ್ಕೋಲ್ನಿಕೋವ್ ಕಾಪಾಡಿದ್ದ ಎರಡು ಮಕ್ಕಳ ಬಗ್ಗೆ ಹೇಳಿದ. ಆ ವೇಳೆಗಾಗಲೇ ಅಸ್ಥಿರವಾಗಿದ್ದ ಪುಲ್ಚೇರಿಯಳ ಮನಸ್ಸು ಈಗ ಉನ್ಮಾದಕ್ಕೆ ಗುರಿಯಾಯಿತು. ಒಂದೇ ಸಮ ಮಾತಾಡುವುದಕ್ಕೆ ಶುರು ಮಾಡಿದಳು. (ದುನ್ಯಾ ಯಾವಾಗಲೂ ಜೊತೆಗೆ ಇರುತ್ತಿದ್ದರೂ) ಬೀದಿಯಲ್ಲಿ ಹೋಗುವಾಗಲೂ, ಸಾರ್ವಜನಿಕ ವಾಹನಗಳಲ್ಲೂ, ಅಂಗಡಿಗಳಲ್ಲೂ ಕೇಳುವವರು ಯಾರಾದರು ಸಿಕ್ಕರೆ ತನ್ನ ಮಗನ ಬಗ್ಗೆ, ಅವನ ಲೇಖನದ ಬಗ್ಗೆ, ವಿದ್ಯಾರ್ಥಿಗೆ ಸಹಾಯ ಮಾಡಿದ ಬಗ್ಗೆ, ಬೆಂಕಿಯಲ್ಲಿ ಬಿದ್ದ ಮಕ್ಕಳನ್ನು ಕಾಪಾಡಿದ ಬಗ್ಗೆ ಹೇಳುವುದಕ್ಕೆ ಶುರು ಮಾಡುತ್ತಿದ್ದಳು. ಅವಳ ಮಾತು ನಿಲ್ಲಿಸುವುದು ಹೇಗೆನ್ನುವುದೇ ದುನ್ಯಾಗೆ ತಿಳಿಯುತ್ತಿರಲಿಲ್ಲ. ಇಂಥ ಉನ್ಮತ್ತ ಮನಸ್ಥಿತಿ ಮಾತ್ರವಲ್ಲದೆ ಕೇಸಿನ ವಿಚಾರವಾಗಿ ರಾಸ್ಕೋಲ್ನಿಕೋವ್‍ನ ಹೆಸರನ್ನು ಯಾರಾದರೂ ಅಕಸ್ಮಾತ್ತಾಗಿ ಹೇಳಿದ್ದು ಕಿವಿಗೆ ಬಿದ್ದರೂ ಇಂಥದೇ ತೊಂದರೆಯಾಗುತ್ತಿತ್ತು.

ರಾಸ್ಕೋಲ್ನಿಕೋವ್ ಬೆಂಕಿಯಿಂದ ಕಾಪಾಡಿದ ಇಬ್ಬರು ಮಕ್ಕಳ ತಾಯಿಯ ವಿಳಾಸವನ್ನೂ ಪುಲ್ಚೇರಿಯ ಹೇಗೋ ಹುಡುಕಿದ್ದಳು. ಅವಳನ್ನು ಹೋಗಿ ಕಾಣಬೇಕೆಂಬ ಆಸೆ ಹುಟ್ಟಿತ್ತು. ಅವಳ ಕಳವಳ ಮಿತಿ ಮೀರಿತು. ಒಮ್ಮೊಮ್ಮೆ ಇದ್ದಕಿದ್ದ ಹಾಗೆ ಅಳುತ್ತಿದ್ದಳು. ಕಾಯಿಲೆ ಬಂದು ಮಲಗುತ್ತಿದ್ದಳು. ಜ್ವರದಲ್ಲಿ ಒಂದೇ ಸಮ ಕೂಗಾಡುತ್ತಿದ್ದಳು. ಲೆಕ್ಕ ಹಾಗಿದ್ದೇನೆ, ಸದ್ಯದಲ್ಲೇ ರೋದ್ಯಾ ಬರತಾನೆ, ಅವನು ಹೋಗುವಾಗ ಇನ್ನು ಒಂಬತ್ತು ತಿಂಗಳಿಗೆ ಬರುತ್ತೇನೆ ಅಂತ ಮಾತುಕೊಟ್ಟಿದ್ದ, ಇನ್ನೇನು ಇವತ್ತೋ ನಾಳೆಯೋ ಬರುತ್ತಾನೆ ಅನ್ನುತ್ತಿದ್ದಳು. ಮನೆಯನ್ನೆಲ್ಲ ಸ್ವಚ್ಛಮಾಡಿ ಮಗನನ್ನು ಬರಮಾಡಿಕೊಳ್ಳುವುದಕ್ಕೆ ಸಿದ್ಧಳಾದಳು. ತನ್ನ ಕೋಣೆಯನ್ನೇ ಅವನಿಗೆ ಬಿಟ್ಟುಕೊಡಬೇಕೆಂದು ರೂಮಿಗೆ ಅಲಂಕಾರ ಮಾಡಲು ಶುರುಮಾಡಿದಳು. ಕುರ್ಚಿ ಮೇಜುಗಳನ್ನೆಲ್ಲ ಒರೆಸಿ, ಕಿಟಕಿಗೆ ಹೊಸ ಪರದೆ ಹಾಕಿ, ಅಣಿಮಾಡಿದಳು. ದುನ್ಯಾಗೆ ಚಿಂತೆಯಾದರೂ ಏನೂ ಹೇಳಲಿಲ್ಲ. ಅಣ್ಣನ ರೂಮನ್ನು ಸ್ವಚ್ಛಮಾಡಲು ತಾನೂ ಸಹಕರಿಸಿದಳು. ಕೊನೆಯಿಲ್ಲದ ಭ್ರಮೆ, ಸಂತೋಷದ ಕನಸು, ಕಂಬನಿಗಳಲ್ಲಿ ಒಂದು ಇಡೀ ದಿನ ಕಳೆದು ರಾತ್ರಿಯ ಹೊತ್ತಿಗೆ ಜ್ವರ ಬಂದು ಮಲಗಿದಳು ಪುಲ್ಚೇರಿಯ. ಜ್ವರದಲ್ಲೇ ಕೂಗಾಡಿದಳು. ಇನ್ನೆರಡು ವಾರದಲ್ಲಿ ತೀರಿ ಹೋದಳು. ಅವಳ ಚೀರಾಟದಲ್ಲಿ ಆಗಾಗ ಹೊರ ಬಿದ್ದ ಪದಗಳನ್ನು ಕೇಳಿದರೆ ತನ್ನ ಮಗನ ಭಯಂಕರ ವಿಧಿಯ ಬಗ್ಗೆ ಮಿಕ್ಕವರು ಕಲ್ಪಿಸಿಕೊಂಡದ್ದಕ್ಕಿಂತ ಹೆಚ್ಚಾಗಿಯೇ ಆಕೆಗೆ ತಿಳಿದಿತ್ತು ಅನಿಸುತ್ತಿತ್ತು.

ರಾಸ್ಕೋಲ್ನಿಕೋವ್ ಸೈಬೀರಿಯಕ್ಕೆ ಹೋದಂದಿನಿಂದ ಅವನೊಡನೆ ಪತ್ರವ್ಯವಹಾರಕ್ಕೆ ವ್ಯವಸ್ಥೆ ಮಾಡಿದ್ದರೂ ತಾಯಿ ತೀರಿಕೊಂಡ ಸುದ್ದಿ ಅವನಿಗೆ ತಡವಾಗಿ ತಲುಪಿತು. ಇಂಥ ವ್ಯವಸ್ಥೆ ಮಾಡಿದ್ದು ಸೋನ್ಯಾ, ಅವಳು ಪ್ರತಿ ತಿಂಗಳೂ ರಝುಮಿಖಿನ್ ಮತ್ತು ದುನ್ಯಾರ ಹೆಸರಿಗೆ ಪತ್ರ ಬರೆಯುತ್ತಿದ್ದಳು, ಪ್ರತಿ ತಿಂಗಳೂ ಪೀಟರ್ಸ್‌ಬರ್ಗಿನಿಂದ ಅವಳಿಗೆ ನಿಗದಿಯಾಗಿ ಪತ್ರ ಬರುತ್ತಿತ್ತು. ಸೋನ್ಯಾಳ ಪತ್ರಗಳು ಬಹಳ ಶುಷ್ಕವಾಗಿವೆ, ಓದಿದರೆ ಸಮಾಧಾನವಾಗುವುದಿಲ್ಲ ಎಂದು ಮೊದಮೊದಲು ಅನ್ನಿಸುತ್ತಿತ್ತು. ಕ್ರಮೇಣ ಉತ್ತಮವಾದ ರೀತಿಯಲ್ಲಿ ಬರೆಯಲು ಸಾಧ್ಯವೇ ಇಲ್ಲ, ಈ ಪತ್ರಗಳು ಅಣ್ಣನ ದುರದೃಷ್ಟದ ಬದುಕಿನ ಸಂಪೂರ್ಣವಾದ, ಖಚಿತವಾದ ವಿವರಗಳನ್ನು ನೀಡುತ್ತಿವೆ ಎಂದು ದುನ್ಯಾಗೆ ಅನಿಸುವುದಕ್ಕೆ ಶುರುವಾಯಿತು. ರಾಸ್ಕೋಲ್ನಿಕೋವ್‌ನ ಬದುಕು ಮತ್ತು ಕಠಿಣ ಶಿಕ್ಷೆಯ ಬಗ್ಗೆ ಅತ್ಯಂತ ಸಾಮಾನ್ಯವಾದ ವಾಸ್ತವಗಳನ್ನು ಅತ್ಯಂತ ಸರಳವಾಗಿ, ಸ್ಪಷ್ಟವಾಗಿ ವಿವರಿಸುತ್ತಿದ್ದಳು ಸೋನ್ಯಾ. ಆ ಪತ್ರಗಳಲ್ಲಿ ಅವಳದೇ ಆಸೆಗಳ ಪ್ರಸ್ತಾಪವಾಗಲೀ, ಭವಿಷ್ಯದ ಬಗ್ಗೆ ಊಹೆಗಳಾಗಲೀ, ಅವಳ ಭಾವನೆಗಳನ್ನು ಹೇಳಿಕೊಳ್ಳುವುದಾಗಲೀ ಇರಲೇ ಇಲ್ಲ. ಅದಕ್ಕೆ ಬದಲಾಗಿ ಅವನ ಮನಸ್ಥಿತಿ, ಅಥವ ಅವನ ಅಂತರಂಗದ ಬದುಕಿನ ವಿವರಗಳು ಕೇವಲ ವಾಸ್ತವ ಸಂಗತಿಗಳಾಗಿ, ಅವನೇ ಆಡಿದ ಮಾತುಗಳಲ್ಲಿ ಇರುತ್ತಿದ್ದವು. ಅವನ ಆರೋಗ್ಯದ ಬಗ್ಗೆ ವಿವರವಾದ ವರದಿ ಇರುತ್ತಿತ್ತು. ಇಂತಿಂಥ ದಿನ ಅವನ ಭೇಟಿ ಮಾಡಿದಾಗ ಅವನು ಏನೇನು ಕೇಳಿದ್ದ, ಏನೇನು ಮಾಡುವಂತೆ ಹೇಳಿದ್ದ, ಇತ್ಯಾದಿಗಳನ್ನು ಬರೆದಿರುತ್ತಿದ್ದಳು. ಈ ಎಲ್ಲ ಸುದ್ದಿ ವಿವರವಾಗಿ ಇರುತ್ತಿದ್ದವು. ಪತ್ರದ ಕೊನೆಯ ಹೊತ್ತಿಗೆ ದುನ್ಯಾಳ ದುರದೃಷ್ಟವಂತ ಅಣ್ಣನ ಚಿತ್ರ ಖಚಿತವಾಗಿ, ಸ್ಪಷ್ಟವಾಗಿ ಮೂಡುತ್ತಿತ್ತು. ಯಾಕೆಂದರೆ ಅವಳು ವಸ್ತು ಸಂಗತಿಗಳನ್ನಲ್ಲದೆ ಇನ್ನೇನನ್ನೂ ಬರೆಯುತ್ತಿರಲಿಲ್ಲ.

ಆದರೂ ದುನ್ಯಾಗೂ ಅವಳ ಗಂಡನಿಗೂ ಈ ಸುದ್ದಿಯಿಂದ ಸಂತೊಷವೇನೂ ಆಗುತ್ತಿರಲಿಲ್ಲ, ಅದೂ ಮೊದಮೊದಲಲ್ಲಿ. ಅವನು ಮಾತೇ ಆಡುವುದಿಲ್ಲ, ಮಂಕಾಗಿ ಇರುತ್ತಾನೆ, ಅವಳು ಹೇಳುವ ಸುದ್ದಿಗಳಲ್ಲೂ ಆಸಕ್ತಿ ಇಲ್ಲ, ನಿಮ್ಮ ಕಾಗದ ತೆಗೆದುಕೊಂಡು ಹೋಗಿ ಕೊಟ್ಟರೂ ಅಷ್ಟೆ ಅವನು ಸತ್ಯವನ್ನು ಊಹಿಸುತ್ತಿದ್ದಾನೆಂದು ಗೊತ್ತಾದಾಗ ಅವನ ತಾಯಿಯ ಸಾವಿನ ಸುದ್ದಿ ಹೇಳಿದೆ. ಅದರಿಂದ ಅವನ ಮೇಲೆ ತುಂಬ ದೊಡ್ಡ ಪರಿಣಾಮವಾದ ಹಾಗೆ ಕಾಣಲಿಲ್ಲ, ಅಥವಾ ಹೊರ ನೋಟಕ್ಕೆ ನನಗೆ ಹಾಗೆ ಕಂಡಿತ್ತು ಎಂದು ಬರೆದಿದ್ದಳು. ಅವನು ಸಂಪೂರ್ಣವಾಗಿ ತನ್ನೊಳಗೇ ಮುಳುಗಿ ಹೋಗಿದ್ದಾನೆ ಅನಿಸಿದರೂ ಯಾರೊಡನೆಯೂ ಮಾತಾಡಲು ಬಯಸದಿದ್ದರೂ ಅವನ ಹೊಸ ಬದುಕಿನ ಬಗ್ಗೆ ನೇರವಾದ, ಸರಳವಾದ ಧೋರಣೆ ಇದೆ; ತನ್ನ ಪರಿಸ್ಥಿತಿ, ಸ್ಥಾನ ಇವನ್ನೆಲ್ಲ ಅರ್ಥಮಾಡಿಕೊಂಡಿದ್ದಾನೆ, ಸದ್ಯದಲ್ಲೇ ಉತ್ತಮ ಭವಿಷ್ಯ ದೊರೆತೀತು ಎಂಬ ನಿರೀಕ್ಷೆಯೂ ಇಲ್ಲ, ಹೊಸ ಪರಿಸರದಲ್ಲಿ ಏನು ಕಂಡರೂ ಆಶ್ಚರ್ಯವೂ ಆಗುತ್ತಿಲ್ಲ, ಕ್ಷುಲ್ಲಕ ಆಸೆಗಳೂ ಇಲ್ಲ (ಅವನ ಪರಿಸ್ಥಿಗೆ ಅದು ಸಹಜ) ಎಂದು ಬರೆದಿದ್ದಳು. ಅವನ ಆರೋಗ್ಯ ತೃಪ್ತಿಕರವಾಗಿದೆ, ಕೆಲಸಕ್ಕೆ ಹೋಗುತ್ತಾನೆ, ಆಸೆಪಟ್ಟೂ ಅಲ್ಲ, ತಪ್ಪಿಸಿಕೊಳ್ಳುವ ಬಯಕೆಯೂ ಇಲ್ಲ; ಊಟದ ಬಗ್ಗೆ ಉದಾಸೀನ; ಕೊಡುವ ಆಹಾರ ಚೆನ್ನಾಗಿಲ್ಲ, ಭಾನುವಾರ ಮತ್ತು ಹಬ್ಬದ ದಿನಗಳಲ್ಲಿ ಮಾತ್ರ ಪರವಾಗಿಲ್ಲ. ಕೊನೆಗೆ ದಿನವೂ ಟೀ ಕುಡಿಯುವುದಕ್ಕಾಗುತ್ತದೆ ಎಂದು ಅವಳಿಂದ ಸ್ವಲ್ಪ ದುಡ್ಡು ಇಸಿದುಕೊಂಡ, ಮಿಕ್ಕಂತೆ ಚಿಂತೆ ಮಾಡಬೇಡ ಅಂದು ಅವನ ಬಗ್ಗೆ ನಾನು ತೋರಿಸುವ ಕಾಳಜಿಯಿಂದ ಅವನಿಗೆ ಸಿಟ್ಟು ಬರುತ್ತದೆ ಎಂದು ಬರೆದಿದ್ದಳು. ಮತ್ತೂ ಮುಂದುವರೆಸಿ, ಅವನನ್ನು ಮಿಕ್ಕ ಎಲ್ಲರ ಜೊತೆಗೇ ಜೈಲಿನಲ್ಲಿ ಇರಿಸಿದ್ದಾರೆ, ಅವನು ಬ್ಯಾರಕ್ಕಿನಲ್ಲಿ ಹೇಗಿದ್ದಾನೆಂದು ನೋಡಿಲ್ಲ, ಆದರೆ ಬಹಳ ಇಕ್ಕಟ್ಟಾಗಿ, ವಿಕಾರವಾಗಿ, ಅನಾರೋಗ್ಯಕರವಾಗಿ ಇದೆ ಎಂದು ಊಹಿಸಿದ್ದೇನೆ; ಮರದ ಹಲಗೆಯ ಮೇಲೆ ತೆಳ್ಳನೆಯ ಹಾಸಿನ ಮೇಲೆ ಮಲಗುತ್ತಾನೆ, ಅವನು ತನಗಾಗಿ ಬೇರೆ ಯಾವ ವ್ಯವಸ್ಥೆಯೂ ಬೇಡವೆಂದ; ಬಹಳ ರಿಕ್ತವಾಗಿ, ಯಾವ ಪೂರ್ವ ಯೋಜನೆಯೂ ಇಲ್ಲದೆ, ಉದ್ದೇಶವೂ ಇಲ್ಲದೆ, ಸರಳವಾಗಿ ಬದುಕುತ್ತ ತನ್ನ ಪರಿಸ್ಥಿತಿಗೆ ಯಾವುದೇ ಗಮನಕೊಡದೆ, ಉದಾಸೀನವಾಗಿ ಇರುವಂತೆ ತೋರುತ್ತದೆ ಎಂದಿದ್ದಳು. ಮೊದಮೊದಲಲ್ಲಿ ನನ್ನನ್ನು ಭೇಟಿ ಮಾಡುವುದಕ್ಕೇ ಅವನಿಗೆ ಇಷ್ಟವಿರಲಿಲ್ಲ, ನನ್ನನ್ನು ಕಂಡರೆ ಕಸಿವಿಸಿಯಾಗಿ, ರೇಗಿ, ಮಾತಾಡುವುದೇ ಕಷ್ಟ ಅನ್ನುವ ಹಾಗಿರುತ್ತಿದ್ದ, ಒರಟಾಗಿ ನಡೆದುಕೊಳ್ಳುತ್ತಿದ್ದ, ನಿಧಾನವಾಗಿ ಭೇಟಿಯ ಅಭ್ಯಾಸವಾಗಿ, ಅಗತ್ಯ ಅನ್ನಿಸಿ, ಅವಳಿಗೆ ಅನಾರೋಗ್ಯವಾಗಿ ಕೆಲವು ದಿನ ಅವನ ಭೇಟಿಯಾಗದಿದ್ದರೆ ದುಃಖಪಡುತ್ತಿದ್ದ ಎಂದು ನೇರವಾಗಿ ಬರೆದಿದ್ದಳು. ಹಬ್ಬದ ದಿನಗಳಲ್ಲಿ ಅವನನ್ನು ಸೆರೆಮನೆಯ ಗೇಟಿನ ಹತ್ತಿರ ಅಥವ ಗಾರ್ಡ್‍ ರೂಮಿನಲ್ಲಿ ನೋಡುತ್ತೇನೆ, ಕೆಲವು ನಿಮಿಷಗಳ ಭೇಟಿಗೆ ಅವನನ್ನು ಕರೆದುಕೊಂಡು ಬರುತ್ತಾರೆ; ವಾರದ ದಿನಗಳಲ್ಲಿ ಅವನು ಕೆಲಸದ ಮಾಡುತ್ತಿರುವಾಗ ಇಟ್ಟಿಗೆ ಗೂಡಿನ ಹತ್ತಿರವೋ ವರ್ಕ್‌ಶಾಪಿನಲ್ಲೋ ಅಥವಾ ಇರ್ಟಿಶ್ ಹೊಳೆಯ ದಡದ ಶೆಟ್ಟಿನಲ್ಲೋ ಭೇಟಿಯಾಗುತ್ತದೆ ಎಂದು ತಿಳಿಸಿದ್ದಳು. ಇನ್ನು ತನ್ನ ಬಗ್ಗೆ ಕೆಲವು ಸಂಗತಿ ಹೇಳಿದ್ದಳು. ಆ ಊರಿನಲ್ಲಿ ಕೆಲವರು ಪರಿಚಯವಾಗಿದ್ದಾರೆ, ಕೆಲವರು ಆಶ್ರಯದಾತರಿದ್ದಾರೆ; ಬಟ್ಟೆ ಹೊಲಿಯುತ್ತೇನೆ, ಆ ಊರಿನಲ್ಲಿ ದರ್ಜಿಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಮೆ ಇರುವುದರಿಂದ ಅನೇಕ ಮನೆಗಳವರಿಗೆ ತಾನು ಅನಿವಾರ್ಯವಾಗಿದ್ದೇನೆ ಎಂದಿದ್ದಳು. ತನ್ನ ಮೂಲಕ ರಾಸ್ಕೋಲ್ನಿಕೋವ್‌ಗೂ ಕೆಲವರು ಅಧಿಕಾರಿಗಳು ಆಶ್ರಯದಾತರಾಗಿದ್ದಾರೆ, ಅವನಿಗೆ ಕಡಮೆ ಕೆಲಸ ಕೊಡುತ್ತಾರೆ ಇತ್ಯಾದಿಯೆಲ್ಲ ಅನ್ನುವುದನ್ನು ಅವಳು ಹೇಳಿರಲಿಲ್ಲ. ಕೊನೆಯ ಪತ್ರದಲ್ಲಿ ಬರೆದಿದ್ದ ಸುದ್ದಿಯನ್ನು ಓದಿ ದುನ್ಯಾ ಕಳವಳಪಟ್ಟು ಹೆದರಿದ್ದಳು: ಅವನು ಯಾರನ್ನೂ ನೋಡಲು ಇಷ್ಟಪಡುವುದಿಲ್ಲ, ಜೈಲಿನ ಮಿಕ್ಕ ಖೈದಿಗಳು ಅವನನ್ನು ಇಷ್ಟಪಡುವುದಿಲ್ಲ, ಅವನು ಬಿಳಿಚಿಕೊಂಡಿದ್ದಾನೆ, ತೀರ ಗಂಭೀರವಾಗಿದೆ ಅವನ ಆರೋಗ್ಯ, ಸೆರೆಮನಯೆ ಆಸ್ಪತ್ರೆಯಲ್ಲಿದ್ದಾನೆ… ಎಂದು ಸೋನ್ಯಾ ಬರೆದಿದ್ದಳು.

ಅವನಾಗಿಯೇ ಬಂದು ತಪ್ಪೊಪ್ಪಿಕೊಳ್ಳುವುದಕ್ಕೆ ಕಾರಣವೇನು ಎಂದು ಕೇಳಿದ್ದಕ್ಕೆ ಪ್ರಾಮಾಣಿಕ ಪಶ್ಚಾತ್ತಾಪವೇ ಕಾರಣ ಎಂದು ಉತ್ತರಿಸಿದ. ಎಲ್ಲದರಲ್ಲೂ ಒಂದು ಥರ ಕ್ರೂಡ್ ಅನ್ನುವಂಥದಿತ್ತು. ಹಾಗಿದ್ದರೂ ಶಿಕ್ಷೆಯು ನಿರೀಕ್ಷಿಸಿದಷ್ಟು ಕಠಿಣವಾಗಿರದೆ ಕರುಣೆಯಿಂದ ಕೂಡಿದ್ದಾಗಿತ್ತು. ಅಪರಾಧಿಯು ತನ್ನನ್ನು ಸಮರ್ಥಿಸಿಕೊಳ್ಳದೇ ಇದ್ದದ್ದು, ಅದಕ್ಕೆ ಬದಲಾಗಿ ತನ್ನ ತಪ್ಪನ್ನು ಪ್ರತಿಹಂತದಲ್ಲೂ ದೃಢಪಡಿಸುತ್ತಲೇ ಇದ್ದದ್ದು ಇವು ಕೂಡ ಬಹುಶಃ ಅಂಥ ತೀರ್ಪಿಗೆ ಕಾರಣವಾಗಿರಬಹುದು.

ಕೆಲವು ಕಾಲದಿಂದ ಅವನಿಗೆ ಹುಷಾರಿರಲಿಲ್ಲ. ಅದಕ್ಕೆ ಕಾರಣ ಸೆರೆಮನೆಯ ಕಷ್ಟವಲ್ಲ, ದುಡಿಮೆಯಲ್ಲ, ಅಥವಾ ಸಿಗುತ್ತಿದ್ದ ಆಹಾರವೂ ಅಲ್ಲ; ಬೋಳಿಸಿದ ತಲೆ, ಅಥವಾ ತೇಪೆ ಹಚ್ಚಿದ ಚಿಂದಿ ಬಟ್ಟೆಯಾಗಲೀ ಅವನನ್ನು ಕಾಯಿಲೆಗೆ ದಬ್ಬಲಿಲ್ಲ. ಇವೆಲ್ಲ ನೋವು, ಹಿಂಸೆಗಳ ಬಗ್ಗೆ ಅವನಿಗೆ ಕೇರೇ ಇರಲಿಲ್ಲ! ಬದಲಾಗಿ ಕೆಲಸ ಇಷ್ಟವಾಗುತ್ತಿತ್ತು, ಕೆಲಸಮಾಡಿ ಮೈ ದಣಿಸುವುದಕ್ಕೆ ಖುಷಿಯಾಗುತ್ತಿತ್ತು, ಅದರಿಂದ ಕೆಲವು ಗಂಟೆಗಳ ಕಾಲ ನೆಮ್ಮದಿಯಾಗಿ ನಿದ್ದೆಮಾಡುವುದಕ್ಕೆ ಸಾಧ್ಯವಾಗುತ್ತಿತ್ತು. ಇನ್ನು ಆಹಾರ—ಜಿರಳೆಗಳು ತೇಲುವ, ತೆಳ್ಳನೆ ನೀರಿನ ಹಾಗಿರುತ್ತಿದ್ದ ಕೋಸಿನ ಸೂಪ್ ಬೇಸರವಾಗುತ್ತಿರಲಿಲ್ಲ. ಅವನು ವಿದ್ಯಾರ್ಥಿಯಾಗಿದ್ದಾಗ ಅದು ಕೂಡ ಸಿಗುತ್ತಿರಲಿಲ್ಲ ಅವನಿಗೆ. ಅವನ ಉಡುಪು ಬೆಚ್ಚಗಿತ್ತು, ಅವನ ಈಗಿನ ಬದುಕಿನ ರೀತಿಗೆ ಹೊಂದುತ್ತಿತ್ತು. ಅವನ ಮೈಮೇಲಿದ್ದ ಸರಪಳಿಗಳೂ ಅವನ ಗಮನಕ್ಕೆ ಬರುತ್ತಿರಲಿಲ್ಲ. ಬೋಳಿಸಿದ ತಲೆಯ ಬಗ್ಗೆ, ಎರಡು ಬಣ್ಣದ ಜಾಕೆಟ್ಟಿನ ಬಗ್ಗೆ ನಾಚಿಕೆ ಪಡಬೇಕೇ? ಯಾರ ಮುಂದೆ? ಸೋನ್ಯಾ? ಸೋನ್ಯಾಗೆ ಅವನನ್ನು ಕಂಡರೆ ಭಯವಿತ್ತು. ಅವಳೆದುರಿನಲ್ಲಿ ನಾಚಬೇಕೇ?

ಹಾಗಾದರೆ ಮತ್ತೇನು? ಸೋನ್ಯಾಳ ಎದುರಿಗೆ ನಿಜಕ್ಕೂ ಅವನಿಗೆ ನಾಚಿಕೆಯಾಗುತ್ತಿತ್ತು, ಆ ಕಾರಣಕ್ಕೇ ತಿರಸ್ಕಾರ ತೋರಿ, ಒರಟಾಗಿ ನಡೆದುಕೊಂಡು ಅವಳಿಗೆ ಹಿಂಸೆಯಾಗುವ ಹಾಗೆ ವರ್ತಿಸುತ್ತಿದ್ದ, ನಾಚಿಕೆಯಾಗುತ್ತಿದ್ದದ್ದು ಬೋಳಿಸಿದ ತಲೆಯ, ಅಥವಾ ಬಿಗಿದ ಸರಪಳಿಯ ಕಾರಣಕ್ಕಲ್ಲ. ಅವನ ಅಭಿಮಾನಕ್ಕೆ ಘಾಸಿಯಾಗಿತ್ತು. ಅವನ ಅಹಂಕಾರಕ್ಕೆ ಪೆಟ್ಟಾದುದರಿಂದ ಕಾಯಿಲೆ ಬಿದ್ದಿದ್ದ. ತನ್ನನ್ನು ತಾನೇ ನಿಂದಿಸಿಕೊಳ್ಳುವುದಕ್ಕೆ ಸಾಧ್ಯವಾಗಿದ್ದಿದ್ದರೆ ಎಷ್ಟು ಸಂತೋವಾಗುತ್ತಿತ್ತು ಅವನಿಗೆ! ಆಗ ಎಲ್ಲವನ್ನೂ, ಬೋಳು ತಲೆಯ ಅಪಮಾನವನ್ನೂ ಸಹಿಸುತ್ತಿದ್ದ. ತನ್ನ ಬಗ್ಗೆ ತಾನೇ ನಿಷ್ಠುರವಾಗಿ ತೀರ್ಮಾನ ಕೊಟ್ಟುಕೊಂಡಿದ್ದರೂ ಅವನ ಮನಸ್ಸು ಮಾತ್ರ ತನ್ನ ಗತಕಾಲದಲ್ಲಿ ಸಾಮಾನ್ಯ ತಪ್ಪು ಮಾತ್ರ ಮಾಡಿದೆ, ಯಾರು ಬೇಕಾದರೂ ಮಾಡಬಹುದಾದಂಥ ತಪ್ಪು, ಅಪರಾಧವನ್ನೇನೂ ಮಾಡಿಲ್ಲ ಎಂದೇ ವಾದಿಸುತ್ತಿತ್ತು. ಅವನಿಗೆ ನಾಚಿಕೆಯಾಗಿದ್ದು ಯಾಕೆಂದರೆ, ಅವನು, ರಾಸ್ಕೋಲ್ನಿಕೋವ್ ಕುರುಡು ಕುರುಡಾಗಿ, ಹೋಪ್ಲೆಸ್ಸಾಗಿ ಪೆದ್ದು ಪೆದ್ದಾಗಿ ಉರುಡು ವಿಧಿಯ ಆಜ್ಞೆಯಂತೆ ನಾಶವಾಗಿ ಹೋಗಿದ್ದ. ಮನಸಿನ ಶಾಂತಿಗಾಗಿ ವಿಧಿಯ ಆಜ್ಞೆಯ ಅಸಂಬದ್ಧತೆಗೆ ಶರಣಾಗಿದ್ದ.

ವರ್ತಮಾನಕಾಲದ ಅರ್ಥಹೀನ ಉದ್ದೇಶರಹಿತ ಕಳವಳ ಮತ್ತು ಈಗ ಅರ್ಪಿಸಬೇಕಾಗಿದ್ದ, ಭವಿಷ್ಯತ್ಕಾಲದಲ್ಲಿ ಒಂದಿಷ್ಟೂ ಉಪಯೋಗಕ್ಕೆ ಬಾರದಂಥ, ಬಲಿದಾನ ಇಷ್ಟು ಬಿಟ್ಟರೆ ಜಗತ್ತಿನಲ್ಲಿ ನನ್ನ ಪಾಲಿಗೆ ಏನೂ ಇಲ್ಲ ಅನಿಸಿತ್ತು. ‘ಇನ್ನೆಂಟು ವರ್ಷಗಳಲ್ಲಿ ನಿನಗೆ ಬರೀ ಮೂವತ್ತೆರಡು ವರ್ಷಗಳಾಗಿರುತ್ತವೆ, ಮತ್ತೆ ಹೊಸ ಬದುಕು ಶುರುಮಾಡಬಹುದು,’ ಅಂದರೆ ಏನು ಹೇಳಿದ ಹಾಗಾಯಿತು! ಬದುಕಬೇಕು ಯಾಕೆ? ಏನಿದೆ ಅಂತ ಬದುಕಬೇಕು? ಯಾಕಾಗಿ ಹೆಣಗಬೇಕು? ಜೀವ ಉಳಿಸಿಕೊಂಡಿರಬೇಕೆಂದು ಬದುಕಬೇಕೇ? ಈ ಮೊದಲೂ ಅವನು ತನ್ನದೊಂದು ವಿಚಾರದ ಸಲುವಾಗಿ, ಭರವಸೆಯ ಸಲುವಾಗಿ, ಭ್ರಮೆಯ ಸಲುವಾಗಿ, ಸಾವಿರ ಬಾರಿ ಜೀವ ತ್ಯಾಗ ಮಾಡುವುದಕ್ಕೆ ಸಿದ್ಧವಾಗಿದ್ದನಲ್ಲಾ. ಬದುಕುವುದಷ್ಟೇ ಎಂದೂ ಸಾಕಾಗಿರಲಿಲ್ಲ ಅವನಿಗೆ; ಮತ್ತೂ ಹೆಚ್ಚಿನದೇನೋ ಬೇಕಾಗಿತ್ತು. ತನ್ನ ಆಕಾಂಕ್ಷೆಗಳ ಬಲದಿಂದಲೇ ತಾನು ಮಿಕ್ಕವರಿರಿಗಿಂತ ಮತ್ತೂ ಹೆಚ್ಚಾಗಿ ಪಡೆಯಲು ಅರ್ಹನಾಗಿದ್ದವನೆಂದು ಭಾವಿಸಿದ್ದನೋ ಏನೋ.

ವಿಧಿಯು ಅವನಿಗೆ ಪಶ್ಚಾತ್ತಾಪವನ್ನು ಮೂಡಿಸಿದ್ದಿದ್ದರೆ—ಸುಟ್ಟು ದಹಿಸುವಂಥ, ಹೃದಯವನ್ನು ಸೀಳುವಂಥ, ನಿದ್ದೆಯನ್ನು ಓಡಿಸುವಂಥ, ನೀರಿನಲ್ಲಿ ಮುಳುಗಿ ಸಾಯುವ, ನೇಣಿಗೆ ಕೊರಳೊಡ್ಡುವ ಕನಸುಗಳನ್ನು ತರುವಂಥ ಪಶ್ಚಾತ್ತಾಪವಾಗಿದ್ದಿದ್ದರೆ! ಆಹಾ, ಅವನಿಗಾಗ ಸಂತೋಷವಾಗಿರುತ್ತಿತ್ತು. ಹಿಂಸೆ, ಕಣ್ಣೀರು-ಅವು ಕೂಡ ಸ್ವಾಗಕ್ಕೆ ಅರ್ಹವಾಗಿದ್ದವು. ಆದರೆ ತಾನು ಮಾಡಿದ ಅಪರಾಧದ ಬಗ್ಗೆ ಅವನಿಗೆ ಪಶ್ಚಾತ್ತಾಪವಿರಲಿಲ್ಲ.

ಈ ಮೊದಲು ತನ್ನ ರಾಕ್ಷಸ ಗಾತ್ರದ ಪೆದ್ದು ಕೆಲಸಗಳು ಸೆರೆಮನೆಗೆ ತಳ್ಳಿದ ಬಗ್ಗೆ ಸಿಟ್ಟುಗೊಂಡ ಹಾಗೆ ಈಗಲೂ ತನ್ನ ಪೆದ್ದುತನದ ಬಗ್ಗೆ ಆಕ್ರೋಶಗೊಳ್ಳಬಹುದಾಗಿತ್ತು, ಈಗ ಸೆರೆಯಲ್ಲಿರುತ್ತ ತನ್ನೆಲ್ಲ ಕ್ರಿಯೆಗಳನ್ನು ಸಾವಕಾಶವಾಗಿ ಪರಿಶೀಲಿಸಿ ತೂಗಿ ನೋಡುತ್ತ ಮೊದಲು ಅನಿಸಿದ್ದ ಹಾಗೆ ಅವು ಪೆದ್ದು ಕೆಲಸಗಳು, ರಾಕ್ಷಸೀ ಕೃತ್ಯಗಳು ಅನ್ನಿಸುತ್ತಲೇ ಇರಲಿಲ್ಲ.

‘ಈ ಜಗತ್ತು ಹುಟ್ಟಿದಾಗಿನಿಂದ ಈಜಾಡಿಕೊಂಡು, ಡಿಕ್ಕಿ ಹೊಡೆದುಕೊಂಡು ಇರುವ ಅಸಂಖ್ಯ ಇತರ ಆಲೋಚನೆ, ಸಿದ್ಧಾಂತಗಳಿಗಿಂತ ನನ್ನ ಸಿದ್ಧಾಂತ ಅದು ಹೇಗೆ ಪೆಕರ ಸಿದ್ಧಾಂತವಾಗಲು ಸಾಧ್ಯ? ಎಲ್ಲ ಪ್ರಭಾವಗಳಿಂದ ಮುಕ್ತವಾದ ಮನಸಿಟ್ಟುಕೊಂಡು ವಿಶಾಲವಾದ ದೃಷ್ಟಿಯಿಂದ ನೋಡಿದರೆ ನನ್ನ ಆಲೋಚನೆ ಅಷ್ಟೊಂದು… ವಿಚಿತ್ರ ಅಂತ ಖಂಡಿತ ಅನ್ನಿಸುವುದಿಲ್ಲ. ಇಲ್ಲಪ್ಪಗಳು, ಮೂರು ಕಾಸಿನ ತತ್ವಶಾಸ್ತ್ರಜ್ಞರು ಯಾಕೆ ಅರ್ಧ ದಾರಿಯಲ್ಲೇ ನಿಂತು ಹೋಗುತ್ತಾರೆ?

‘ನಾನು ಮಾಡಿದ ಕೆಲಸದಲ್ಲಿ ಅವರಿಗೆ ಅಷ್ಟು ವಿಕಾರವಾಗಿ ಕಾಣುವುದೇನು? ಅದು ಕೆಟ್ಟ ಕೆಲಸವೆಂದೇ? ಕೆಟ್ಟಕೆಸಲ ಅಂದರೆ ಏನರ್ಥ? ನನ್ನ ಮನಸ್ಸಾಕ್ಷಿ ಶುದ್ಧವಾಗಿದೆ. ನಿಜ, ಅಪರಾಧ ನಡೆಯಿತು, ಕಾನೂನಿ ಅಕ್ಷರಾರ್ಥ ಮುರಿದಂತಾಯಿತು, ರಕ್ತ ಹರಿಯಿತು; ಸರಿ, ಕಾನೂನಿಗೋಸ್ಕರ ನನ್ನ ತಲೆ ತೆಗಿಯಿರಿ… ಅಷ್ಟು ಸಾಕಲ್ಲಾ! ಹಾಗೆ ಮಾಡುವುದಾದರೆ ಮನುಷ್ಯಕುಲಕ್ಕೆ ಉಪಕಾರ ಮಾಡಿದ, ತಮಗೆ ಅಧಿಕಾರವಿರದಿದ್ದರೂ ತಾವಾಗಿಯೇ ಅದನ್ನು ಪಡೆದುಕೊಂಡ ಎಲ್ಲರನ್ನೂ ಅವರು ಮೊದಲ ಹೆಜ್ಜೆ ಇಟ್ಟ ತಕ್ಷಣವೇ ಮರಣದಂಡನೆಗೆ ಗುರಿಪಡಿಸಬೇಕಾಗಿತ್ತು, ಅವರೆಲ್ಲ ತಮ್ಮ ಮೊದಲ ಹೆಜ್ಜೆಯ ಕೃತ್ಯಗಳನ್ನು ಸಹಿಸಿಕೊಂಡರು, ಹಾಗಾಗಿಯೇ ಅವರು ಸರಿ. ನಾನು ಸಹಿಸಲಿಲ್ಲ, ಅದಕ್ಕೆಂದೇ ನಾನು ಮೊದಲ ಹೆಜ್ಜೆ ಇಡುವುದಕ್ಕೆ ಅನುಮತಿ ಇಲ್ಲ.’

ಈ ಅರ್ಥದಲ್ಲಿ ಮಾತ್ರವೇ ಅವನು ತಾನು ಮಾಡಿದ ಅಪರಾಧವನ್ನು ಗ್ರಹಿಸಿದ್ದ: ಅಂದರೆ ಮಾಡಿದ್ದನ್ನು ಅರಗಿಸಿಕೊಳ್ಳಲು ಆಗದೆ ಇದ್ದದ್ದು. ತಾನಾಗೇ ಹೋಗಿ ತಪ್ಪೊಪ್ಪಿಗೆ ಮಾಡಿಕೊಂಡದ್ದು ಮಾತ್ರವೇ ನನ್ನ ಅಪರಾಧ ಅಂದುಕೊಂಡಿದ್ದ.

ಇನ್ನೊಂದು ಯೋಚನೆ ಅವನಿಗೆ ನೋವು ಕೊಡುತ್ತಿತ್ತು: ಆಗಲೇ ಯಾಕೆ ಅವನು ತನ್ನನ್ನೇ ಕೊಂಡುಕೊಂಡಿರಲಿಲ್ಲ? ನದಿಯ ಮೇಲಿನ ಸೇತುವೆಯಲ್ಲಿ ನಿಂತಿದ್ದಾಗ ಹೊಳೆಗೆ ಹಾರುವ ಬದಲು ಹೋಗಿ ತಪ್ಪೊಪ್ಪಿಕೊಳ್ಳುವುದು ವಾಸಿ ಎಂದು ಯಾಕೆ ಅಂದುಕೊಂಡಿದ್ದ? ಬದುಕಬೇಕು ಅನ್ನುವ ಆಸೆಯಲ್ಲಿ ಅಷ್ಟೊಂದು ಶಕ್ತಿ ಇತ್ತೋ, ಅದನ್ನು ಮೀರಲು ಆಗುತ್ತಿರಲಿಲ್ಲವೋ? ಸಾವನ್ನು ಕಂಡರೆ ಹೆದರುತ್ತಿದ್ದ ಸ್ವಿದ್ರಿಗೈಲೋವ್ ಆ ಭಯವನ್ನು ಮೀರಿದನೋ?

ಸಂಕಟಪಡುತ್ತ ಈ ಪ್ರಶ್ನೆ ಕೇಳಿಕೊಂಡ. ಹೊಳೆಯ ಸೇತುವೆಯ ಮೇಲೆ ನಿಂತಿದ್ದಾಗಲೇ ತನ್ನೊಳಗಿನ ಸುಳ್ಳನ್ನು ಅಂತರಂಗದ ಆಳದಲ್ಲಿ ಅರಿತಿದ್ದೆ, ತನ್ನ ನಂಬಿಕೆಗಳು ಸುಳ್ಳು ಅನ್ನುವುದನ್ನು ತಿಳಿದಿದ್ದೆ ಅನ್ನುವುದು ಅವನಿಗೆ ಅರ್ಥವಾಗಲಿಲ್ಲ. ಗೊತ್ತಾಗದಿದ್ದರೂ ಮನಸಿನೊಳಗಿದ್ದ ಆ ಅರಿವು ಭವಿಷ್ಯದ ಬದುಕಿನಲ್ಲಿ ಅವನು ಹೊಸ ದೃಷ್ಟಿ ತಳೆಯುತ್ತಾನೆ, ಬರಲಿರುವ ಬಿಕ್ಕಟ್ಟನ್ನು ದಾಟುತ್ತಾನೆ, ಅವನ ಪುನರುತ್ಥಾನವಾಗುತ್ತದೆ ಅನ್ನುವುದರ ಮುನ್ಸೂಚನೆಯಾಗಿತ್ತು ಅನ್ನುವುದು ಅವನಿಗೆ ತಿಳಿಯಲಿಲ್ಲ.

ಇದೆಲ್ಲವೂ ನನ್ನ ಮನಸಿನ ಮೇಲಿರುವ ಹೆಣಭಾರ, ಅದನ್ನು ಬಿಸಾಕುವುದಕ್ಕೂ ಆಗದೆ, ಮೀರುವುದಕ್ಕೂ ಆಗದೆ ದುರ್ಬಲನಾಗಿದ್ದೇನೆ, ಅಯೋಗ್ಯ, ಆದ್ದರಿಂದಲೇ ದುರ್ಬಲ ಎಂದುಕೊಳ್ಳಲು ಇಷ್ಟಪಡುತ್ತಿದ್ದ ಅವನು. ತನ್ನ ಜೊತೆಯ ಖೈದಿಗಳನ್ನು ನೋಡುತ್ತಾ ಅವರು ಕೂಡ ಅದು ಹೇಗೆ ಬದುಕನ್ನು ಪ್ರೀತಿಸುತ್ತಿದ್ದಾರೆ, ಬದುಕಿಗೆ ಬೆಲೆ ಕೊಡುತ್ತಿದ್ದಾರೆ ಎಂದು ಆಶ್ಚರ್ಯಪಡುತ್ತಿದ್ದ. ಅವರು ಸ್ವತಂತ್ರವಾಗಿದ್ದಾಗ ಬದುಕಿಗೆ ಎಷ್ಟು ಬೆಲೆ ಕೊಡುತ್ತಿದ್ದರೋ ಅದಕ್ಕಿಂತ ಮಿಗಿಲಾದ ಬೆಲೆ ಈಗ ಕೊಡುತ್ತಿದ್ದಾರೆ. ಇಲ್ಲಿರುವ ಅಬ್ಬೇಪಾರಿಗಳು ಎಂತೆಂಥ ಕಷ್ಟ, ನೋವು, ಹಿಂಸೆ ಅನುಭವಿಸಿದ್ದರು ಜೈಲಿಗೆ ಬರುವ ಮೊದಲು! ಸೂರ್ಯನ ಒಂದು ಕಿರಣ, ದಟ್ಟವಾದ ಕಾಡು, ಜನರ ಹೆಜ್ಜೆ ಗುರುತು ಬೀಳದ ನಿರ್ಜನ ಪ್ರದೇಶದಲ್ಲಿ ನಾಲ್ಕಾರು ವರ್ಷದ ಹಿಂದೆ ಕಂಡ ತಣ್ಣನೆಯ ನೀರಿನ ಚಿಲುಮೆ ಇವೆಲ್ಲ ಅಷ್ಟೊಂದು ಮಹತ್ವದ್ದಾಗಿ ಕಾಣುತ್ತವೆಯೆ! ಹಕ್ಕಿಯೊಂದು ಬಂದು ಹಾಡುವ, ಹಸಿರು ಸುತ್ತುವರೆದಿರುವ ನೀರಿನ ಚಿಲುಮೆಯನ್ನು ಕನಸಲ್ಲೂ ಕಂಡು ಹಂಬಲಿಸುತ್ತಾನೆ ಅಬ್ಬೇಪಾರಿ—ಪ್ರೇಯಸಿಯನ್ನು ಕಾಣಲು ಪ್ರಿಯಕರ ಹಂಬಲಿಸುವ ಹಾಗೆ! ಅಷ್ಟೊಂದು ಮಹತ್ವದ್ದೇ ಅವೆಲ್ಲ? ಇಂಥವೇ ಇನ್ನೂ ವಿವರಿಸಲಾಗದ ಹಲವಾರು ಉದಾಹರಣೆಗಳು ಅವನಿಗೆ ಕಂಡವು.

ಸೆರೆಮನೆಯಲ್ಲಿ, ಅವನಿದ್ದ ಪರಿಸರದಲ್ಲಿ ಅವನು ಹೆಚ್ಚಾಗಿ ಗಮನಿಸದ, ನಿಜವಾಗಿ ಗಮನಿಸಲು ಬಯಸದ ಅನೇಕ ಸಂಗತಿಗಳಿದ್ದವು. ಅವನು ತಲೆ ಬಗ್ಗಿಸಿಕೊಂಡು ಬದುಕುತ್ತಿದ್ದ, ತಲೆ ಎತ್ತಿ ನೋಡುವುದಕ್ಕೆ ಅಸಹ್ಯವಾಗುತ್ತಿತ್ತು. ಆದರೂ ಎಷ್ಟೋ ಸಂಗತಿಗಳು ಅವನಿಗೆ ಆಶ್ಚರ್ಯ ಹುಟ್ಟಿಸುತಿದ್ದವು. ಇದುವರೆಗೆ ಇಂಥವು ಇವೆ ಎಂದು ಊಹಿಸಿಯೂ ಇರದ ಸಂಗತಿಗಳನ್ನು ತನಗೇ ಗೊತ್ತಿರದ ಹಾಗೆ ಕಾಣಲು ಶುರುಮಾಡಿದ. ಅವನಿಗೆ ಬಲು ದೊಡ್ಡ ಅಚ್ಚರಿಯನ್ನು ತಂದದ್ದು ಆ ಜನಕ್ಕೂ ಅವನಿಗೂ ನಡುವೆ ಇದ್ದ ದಾಟಲಾಗದಂಥ ಕಂದರ. ಇವನೇ ಬೇರೆಯ ದೇಶ ಅವರು ಬೇರೆಯದೇ ದೇಶದವರ ಹಾಗಿದ್ದರು. ಅವರು ಇವನನ್ನ ಇವನು ಅವರನ್ನ ಅನುಮಾನದಿಂದಲೂ ದ್ವೇಷದಿಂದಲೂ ನೋಡುತ್ತಿದ್ದರು. ಇದಕ್ಕೆ ಇರುವ ಸಾಮಾನ್ಯ ಕಾರಣ ಅವನಿಗೆ ತಿಳಿಯಿತು, ಆದರೆ ಅವರಿಗೂ ತನಗೂ ಇಷ್ಟು ಆಳವಾದ, ಪ್ರಬಲವಾದ ಅಂತರವಿರುತ್ತದೆ ಎಂದು ಎಂದೂ ಅಂದುಕೊಂಡಿರಲಿಲ್ಲ ಅವನು. ಗಡೀಪಾರದ ಪೋಲಿಶ್ ಜನರಿದ್ದರು, ರಾಜಕೀಯ ಖೈದಿಗಳಿದ್ದರು. ಅವರು ಈ ಮಾಮೂಲು ಖೈದಿಗಳನ್ನು ಅಜ್ಞಾನಿಗಳು, ಗುಲಾಮರು ಎಂದು ತಿಳಿದು ಉದ್ಧಟತನದಿಂದ, ತಿರಸ್ಕಾರದಿಂದ ವರ್ತಿಸುತ್ತಿದ್ದರು. ಅಂಥ ದೃಷ್ಟಿಯನ್ನು ತಳೆಯುವುದು ರಾಸ್ಕೋಲ್ನಿಕೋವ್‌ಗೆ ಆಗುತ್ತಿರಲಿಲ್ಲ. ಈ ಮೂರ್ಖ ಜನರೇ ಪೋಲಾಂಡಿನವರಿಗಿಂತ ಎಷ್ಟೋ ವಿಚಾರಗಳಲ್ಲಿ ಜಾರಣರೆಂದು ಕಾಣುತ್ತಿದ್ದರು ಅವನಿಗೆ. ಕೆಲವು ರಶಿಯನ್ ಖೈದಿಗಳು ಮಾಜೀ ಅಧಿಕಾರಿ ಮತ್ತೆ ಇಬ್ಬರು ಸೆಮಿನರಿಗಳು, ಈ ಜನರ ಬಗ್ಗೆ ಅಸಹ್ಯಪಡುತ್ತಿದ್ದರು. ಅವರ ತಪ್ಪೂ ರಾಸ್ಕೋಲ್ನಿಕೋವ್‌ಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವನನ್ನು ಯಾರೂ ಇಷ್ಟಪಡುತ್ತಿರಲಿಲ್ಲ. ಎಲ್ಲರೂ ಅವನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು, ಕೊನೆಗೆ ಅವರು ಅವನನ್ನು ದ್ವೇಷಿಸುವುದಕ್ಕೂ ಶುರು ಮಾಡಿದರು. ಯಾಕೆ ಅನ್ನುವುದು ಅವನಿಗೆ ತಿಳಿಯಲಿಲ್ಲ. ಅವನಿಗಿಂತ ದೊಡ್ಡ ಅಪರಾಧಿಗಳೂ ಅವನ ಕಂಡು ಅಸಹ್ಯಪಡುತ್ತಿದ್ದರು, ಅವನು ಮಾಡಿದ ಅಪರಾಧವನ್ನು ಆಡಿಕೊಂಡು ನಗುತ್ತಿದ್ದರು.

‘ನೀನು ಜಂಟಲ್ ಮ್ಯಾನ್! ಯಾಕೆ ಕೊಡಲಿ ಕೈಗೆತ್ತಿಕೊಂಡೆ, ಅದು ಜಂಟಲ್ ಮ್ಯಾನ್ ಮಾಡುವ ಕೆಲಸವಲ್ಲ,’ ಅನ್ನುತ್ತಿದ್ದರು.
ಲೆಂಟ್ ಹಬ್ಬದ ಎರಡನೆಯ ವಾರದಲ್ಲಿ ಉಪವಾಸದ ಸರದಿ ಅವನ ಪಾಲಿಗೆ ಬಂದಿತ್ತು, ಬ್ಯಾರಕ್‌ನಲ್ಲಿದ್ದವರ ಜೊತೆಯಲ್ಲಿ ಚರ್ಚಿಗೆ ಹೋಗಬೇಕಾಗಿತ್ತು. ಪ್ರಾರ್ಥನೆ ಮಾಡಲು ಎಲ್ಲರೂ ಚರ್ಚಿಗೆ ಹೋದರು. ಅವನಿಗೆ ಗೊತ್ತಿರದ ಯಾವ ಕಾರಣಕ್ಕೋ ಜಗಳ ಹುಟ್ಟಿತು ಅವರೆಲ್ಲ ಅವನ ಮೇಲೆ ಎರಗಿ ಬಿದ್ದರು.

‘ನೀನು ನಾಸ್ತಿಕ! ನೀನು ದೇವರನ್ನ ನಂಬಲ್ಲ! ನಿನ್ನ ಕೊಲ್ಲಬೇಕು!’ ಎಂದು ಕೂಗಾಡಿದರು.

ಅವನು ದೇವರ ಬಗ್ಗೆ, ಧರ್ಮದ ಬಗ್ಗೆ ಅವರ ಜೊತೆಯಲ್ಲಿ ಮಾತೇ ಆಡಿರಲಿಲ್ಲ. ಆದರೂ ಅವನನ್ನು ಕೊಲ್ಲಬೇಕು ಅವನು ನಾಸ್ತಿಕ ಅನ್ನುತ್ತಿದ್ದರು. ಅವನು ಮೌನವಾಗಿದ್ದ, ಅವರ ಜೊತೆಯಲ್ಲಿ ವಾದಮಾಡಲಿಲ್ಲ. ಖೈದಿಯೊಬ್ಬ ಉಗ್ರನಾಗಿ ಅವನ ಮೇಲೇರಿ ಬಂದ. ರಾಸ್ಕೋಲ್ನಿಕೋವ್ ಶಾಂತನಾಗಿ, ಮೌನವಾಗಿ ನಿಂತೇ ಇದ್ದ. ಅವನ ಕಣ್ಣು ಕೂಡ ಅತ್ತಿತ್ತ ಅಲುಗಲಿಲ್ಲ. ಮುಖದಲ್ಲಿ ಭಯವೂ ಇರಲಿಲ್ಲ. ಗಾರ್ಡನೊಬ್ಬ ಅಡ್ಡ ಬಂದ. ಕೊಲೆ ತಪ್ಪಿತು. ಇಲ್ಲದಿದ್ದರೆ ರಕ್ತಪಾತವಾಗುತ್ತಿತ್ತು.

ಇನ್ನೂ ಒಂದು ಪ್ರಶ್ನೆ ಅವನ ಮನಸಿನಲ್ಲಿ ಪರಿಹಾರವಾಗದೆ ಉಳಿದಿತ್ತು. ಅವರೆಲ್ಲರೂ ಯಾಕೆ ಸೋನ್ಯಾಳನ್ನು ಅಷ್ಟೊಂದು ಪ್ರೀತಿಸುತ್ತಾರೆ? ಅವರ ಮನಸ್ಸು ಗೆಲ್ಲಲು ಪ್ರಯತ್ನಪಟ್ಟಿರಲಿಲ್ಲ ಅವಳು. ಅವರು ಅವಳನ್ನು ಕಾಣುತಿದ್ದದ್ದೂ ಅಪರೂಪವಾಗಿ. ಕೆಲಸಮಾಡುತ್ತಿರುವಾಗ ಅವಳೊಂದೆರಡು ಕ್ಷಣ ಬಂದು ಅವನನ್ನು ಕಂಡು ಹೋಗುತ್ತಿದ್ದಳು. ಆದರೂ ಆಕೆ ಅವನನ್ನು ಹಿಂಬಾಲಿಸಿ ಬಂದಿರುವುದು ಅವರಿಗೆಲ್ಲ ತಿಳಿದಿತ್ತು. ಹೇಗೆ ಬದುಕಿದ್ದಾಳೆ, ಎಲ್ಲಿದ್ದಾಳೆ ಅನ್ನುವುದೂ ಅವರಿಗೆ ಗೊತ್ತಿತ್ತು. ಅವರಿಗೆ ಅವಳು ದುಡ್ಡನ್ನಾಗಲೀ ಉಡುಗೊರೆಯನ್ನಾಗಲೀ ಕೊಟ್ಟಿರಲಿಲ್ಲ. ಒಮ್ಮೆ ಮಾತ್ರ ಕ್ರಿಸ್ಮಸ್ ಸಮಯದಲ್ಲಿ ಅವಳು ಇಡೀ ಜೈಲಿನವರಿಗೆ ಪೈ ಮತ್ತು ಕಲಾಚಿಯ ಪ್ರಸಾದ ತಂದಿದ್ದಳು. ಅವರ ಮತ್ತು ಅವಳ ನಡುವೆ ಸ್ವಲ್ಪ ಸ್ವಲ್ಪವಾಗಿ ನಿಕಟವಾದ ಸಂಬಂಧ ಬೆಳೆದಿತ್ತು. ಅವರ ಮನೆಯವರಿಗೆ ಕಳಿಸಲು ಕಾಗದ ಬರೆದುಕೊಡುತ್ತಿದ್ದಳು, ಪೋಸ್ಟಿಗೆ ಹಾಕುತ್ತಿದ್ದಳು. ಖೈದಿಗಳ ಮನೆಗಳವರು ಅವರನ್ನು ಕಾಣಲೆಂದು ಬಂದಾಗ ತಮಗೆ ಕೊಡುವ ವಸ್ತುಗಳನ್ನು, ದುಡ್ಡನ್ನು ಕೂಡ ಸೋನ್ಯಾ ಕೈಗೆ ಕೊಡುವಂತೆ ಹೇಳುತ್ತಿದ್ದರು. ಅವರ ಹೆಂಡಿರು, ಪ್ರೇಯಸಿಯರು ಅವಳನ್ನ ಬಲ್ಲವರಾಗಿದ್ದರು, ಅವಳ ಭೇಟಿ ಮಾಡುತ್ತಿದ್ದರು. ಅವಳು ರಾಸ್ಕೋಲ್ನಿಕೋವ್ ಕೆಲಸ ಮಾಡುತಿದ್ದ ಜಾಗಕ್ಕೆ ಅವನನ್ನು ನೋಡಲು ಬಂದಾಗ ಅಥವಾ ಅವರೆಲ್ಲ ಕೆಲಸಕ್ಕೆ ಹೋಗುವಾಗ ದಾರಿಯಲ್ಲಿ ಅವಳು ಕಂಡಾಗ ಎಲ್ಲರೂ ಹ್ಯಾಟು ತೆಗೆದು, ಅವಳಿಗೆ ಬಾಗಿ ನಮಸ್ಕಾರ ಮಾಡುತ್ತಿದ್ದರು. ‘ಚಿಕ್ಕತಾಯಿ, ಸೋಫ್ಯಾ ಸೆಮ್ಯೊನೋವ್ನಾ, ನಮ್ಮಮ್ಮ, ನಮ್ಮ ಚಿಕ್ಕ ತಾಯಿ!ʼ ಅನ್ನುತ್ತ ಈ ರೂಕ್ಷ, ಕುಖ್ಯಾತ ಖೈದಿಗಳು ಪುಟ್ಟ ಗಾತ್ರದ, ದುರ್ಬಲ ಕಾಯದ ಸೋನ್ಯಾಗೆ ಹೇಳುತ್ತಿದ್ದರು. ಅವಳೂ ನಗುತ್ತ ಅವರಿಗೆ ವಂದಿಸುತ್ತಿದ್ದಳು. ಅವಳು ನಗುವುದನ್ನು ನೋಡುವುದಕ್ಕೆ ಅವರಿಗೆಲ್ಲ ಇಷ್ಟವಾಗುತ್ತಿತ್ತು. ಅವಳು ನಡೆದು ಹೋಗುವಾಗ ಅವಳನ್ನು ಕಣ್ಣಲ್ಲೇ ಹಿಂಬಾಲಿಸುತ್ತಿದ್ದರು. ಅವಳನ್ನು ಎಷ್ಟು ಪುಟ್ಟ ಗಾತ್ರದವಳೆಂದು ಹೊಗಳುತ್ತಿದ್ದರು. ಎಷ್ಟು ಹೊಗಳಿದರೂ ಸಾಲುತ್ತಿರಲಿಲ್ಲ ಅವರಿಗೆ. ಕಾಯಿಲೆಯಾದಾಗ ಅವಳ ಬಳಿಗೆ ಹೋಗಿ ಉಪಚಾರ ಮಾಡಿಸಿಕೊಳ್ಳುತ್ತಿದ್ದರು.

(ವಿನ್ಸೆಂಟ್‌ ವ್ಯಾನ್‌ಗಾಗ್‌ನ ಕಲಾಕೃತಿ)

ಇಡೀ ಲೆಂಟ್ ಮತ್ತು ಹೋಲೀ ವೀಕ್ ಅವಧಿಯಲ್ಲಿ ಅವನು ಆಸ್ಪತ್ರೆಯಲ್ಲಿ ಮಲಗಿದ್ದ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗ, ಜ್ವರದ ತಾಪ ಇನ್ನೂ ಇದ್ದಾಗ, ಅವನಿಗೆ ಬಿದ್ದ ಕನಸು ನೆನಪಿನಲ್ಲಿ ಉಳಿದಿತ್ತು: ಇಡೀ ಜಗತ್ತು ಇದುವರೆಗೆ ಕಂಡು ಕೇಳಿ ಅರಿಯದ, ಭಯಂಕರವಾದ, ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದರಲ್ಲಿತ್ತು. ಏಶಿಯದ ಆಳದಲ್ಲಿ ಹುಟ್ಟಿ ಯೂರೋಪಿಗೆ ಹರಡುತ್ತಿತ್ತು. ತೀರ ಕೆಲವೇ ಆಯ್ದ ವ್ಯಕ್ತಿಗಳನ್ನು ಬಿಟ್ಟರೆ ಎಲ್ಲರೂ ನಾಶವಾಗುತ್ತಿದ್ದರು. ಯಾವುದೋ ಹೊಸ ಟ್ರಿಖೈನೆ ಸೂಕ್ಷಾಣು, ಮೈಕ್ರೋಸ್ಕೋಪಿನಲ್ಲಿ ಮಾತ್ರ ಕಾಣುವಂಥದ್ದು ಹಂದಿ ಇಲಿಗಳ ಕರುಳಿನಿಂದ ಮನುಷ್ಯ ದೇಹವನ್ನು ಹೊಕ್ಕು ವಸತಿ ಹೂಡಿದ್ದು ಕಂಡುಬಂದಿತ್ತು. ಆದರೆ ಈ ಸೂಕ್ಷ್ಮಾಣುಗಳು ಸ್ವಂತದ ವಿಚಾರ ಮತ್ತು ಮನೋಬಲವಿದ್ದ ಆತ್ಮಗಳು. ಅವಕ್ಕೆ ವಶರಾದವರು ದೆವ್ವ ಮೈಮೇಲೆ ಬಂದವರ ಹಾಗೆ ಆಡುತ್ತಿದ್ದರು, ಹುಚ್ಚರಾಗುತ್ತಿದ್ದರು. ಆದರೆ ಈ ರೋಗ ಪೀಡಿತರು ಮಾತ್ರ ತಾವೇ ಅತ್ಯಂತ ಬುದ್ಧಿವಂತರು, ವಿವೇಕಿಗಳು, ಸತ್ಯಸಂಧರು ತಮ್ಮಂಥವರು ಇನ್ನು ಯಾರೂ ಇಲ್ಲ ಎಂದು ಭಾವಿಸಿದ್ದರು. ತಮ್ಮ ತೀರ್ಮಾನ, ತಮ್ಮ ವೈಜ್ಞಾನಿಕ ನಿರ್ಣಯ, ತಮ್ಮ ನೈತಿಕ ನಂಬಿಕೆ ವಿಶ್ವಾಸಗಳು ಅಚಲವೆಂದೇ ತಿಳಿದಿದ್ದರು. ಪ್ರತಿಯೊಂದೂ ವಸತಿ ಪ್ರದೇಶ ಪ್ರತಿಯೊಂದೂ ನಗರ, ದೇಶ ಸಾಂಕ್ರಾಮಿಕಕ್ಕೆ ಗುರಿಯಾಗಿ ಹುಚ್ಚು ಹಿಡಿಸಿಕೊಂಡಿತ್ತು. ಪ್ರತಿಯೊಬ್ಬರಿಗೂ ಕಳವಳ, ಯಾರೂ ಯಾರನ್ನೂ ಅರ್ಥಮಾಡಿಕೊಳ್ಳುತ್ತಿರಲಿಲ್ಲ. ಸತ್ಯ ತನಗೆ ಮಾತ್ರ ಗೊತ್ತು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಿದ್ದರು. ಇತರರನ್ನು ಕಂಡು ಅಯ್ಯೋ ಎಂದು ನರಳುತ್ತಿದ್ದರು, ಎದೆ ಬಡಿದುಕೊಂಡು ಅಳುತ್ತಿದ್ದರು, ಕೈ ಕೈ ಹಿಸುಕಿಕೊಳ್ಳುತ್ತಿದ್ದರು. ಯಾರನ್ನು ವಿಚಾರಣೆ ಮಾಡಬೇಕು, ಹೇಗೆ ತೀರ್ಮಾನ ಹೇಳಬೇಕು, ಯಾವುದು ಕೆಡುಕು, ಯಾವುದು ಒಳಿತು ಯಾರಿಗೂ ಗೊತ್ತಿರಲಿಲ್ಲ. ಯಾರನ್ನು ಆಪಾದಿಸಬೇಕು, ಯಾರನ್ನು ಆರಾಧಿಸಬೇಕು ಅವರಿಗೆ ತಿಳಿದಿರಲಿಲ್ಲ. ಅರ್ಥಹೀನ ಆಕ್ರೋಶದಲ್ಲಿ ಜನ ಒಬ್ಬರನ್ನೊಬ್ಬು ಕೊಂದರು. ದೊಡ್ದ ಸೈನ್ಯ ಕಟ್ಟಿಕೊಂಡು ಹೊರಡುತ್ತಿದ್ದರು, ಸೈನಿಕರೇ ಸಾಲು ಮುರಿದು ಒಬ್ಬರ ಮೇಲಿನ್ನೊಬ್ಬರು ಬಿದ್ದು, ಒಬ್ಬರನ್ನಿನ್ನೊಬ್ಬರು ಬಡಿದು, ಕತ್ತರಿಸಿ, ಕೊಂದು ತಮ್ಮನ್ನು ತಾವೇ ನಾಶಮಾಡಿಕೊಳ್ಳುತ್ತಿದ್ದರು. ನಗರಗಳಲ್ಲಿ ಎಚ್ಚರಿಕೆಯ ಗಂಟೆ ಸತತವಾಗಿ ಇಡೀ ದಿನ ಮೊಳಗುತ್ತಿತ್ತು. ಎಲ್ಲರನ್ನೂ ಕರೆಯುತ್ತಿತ್ತು. ಯಾರು ಕರೆಯುತ್ತಿದ್ದಾರೆ, ಯಾಕೆ ಅನ್ನುವುದು ಗೊತ್ತಾಗುತ್ತಿರಲಿಲ್ಲ. ಎಲ್ಲರೂ ಕಳವಳಪಡುತ್ತಿದ್ದರು. ಅತಿ ಸಾಮಾನ್ಯ ವ್ಯವಹಾರಗಳೂ ನಿಂತುಹೋದವು. ಯಾಕೆಂದರೆ ಪ್ರತಿಯೊಬ್ಬರೂ ತಮ್ಮದೇ ವಿಚಾರ ಹೇಳುತ್ತ, ಅದಕ್ಕೆ ತಾವೇ ತಿದ್ದುಪಡಿ ಸೂಚಿಸುತ್ತ, ಯಾರೂ ಯಾರ ಮಾತನ್ನೂ ಒಪ್ಪುತ್ತಿರಲಿಲ್ಲ. ಬೇಸಾಯ ನಿಂತುಹೋಯಿತು. ಅಲ್ಲಿಲ್ಲಿ ಕೆಲವು ಜನ ಒಟ್ಟುಗೂಡಿ, ಏನಾದರೂ ಮಾಡಬೇಕು ಅನ್ನುವ ಒಪ್ಪಂದಕ್ಕೆ ಬರುತ್ತಿದ್ದರು. ನಾವು ಎಂದೂ ಬೇರೆಯಾಗುವುದಿಲ್ಲ ಎಂದು ಆಣೆ ಇಟ್ಟುಕೊಳ್ಳುತ್ತಿದ್ದರು. ಮರುಕ್ಷಣವೇ ತಾವು ಹೇಳಿದ್ದಕ್ಕಿಂತ ಬೇರೆಯ ಥರ ನಡೆದುಕೊಳ್ಳುತ್ತ ಮತ್ತೊಬ್ಬರನ್ನು ಆಪಾದಿಸಿ ಜಗಳ ಹುಟ್ಟಿ, ಕೊಲೆಗಳು ನಡೆಯುತ್ತಿದ್ದವು. ಜಗಳ, ಕದನ, ಬೆಂಕಿಯ ಅವಗಢ ಬರಗಾಲ. ಎಲ್ಲವೂ ನಾಶವಾಗುತ್ತಿತ್ತು, ಎಲ್ಲರೂ ನಾಶವಾಗುತ್ತಿದ್ದರು. ಸಾಂಕ್ರಾಮಿಕ ಹರಡುತ್ತಿತ್ತು. ಇಡೀ ಜಗತ್ತಿನಲ್ಲಿ ಕೆಲವೇ ಕೆಲವು ಜನ ಮಾತ್ರ ಸ್ವಸ್ಥವಾಗಿ ಉಳಿದಿದ್ದರು. ಅವರು ಪರಿಶುದ್ಧರಾಗಿದ್ದರು, ಹೊಸ ತಲೆಮಾರನ್ನು, ಹೊಸ ಬದುಕನ್ನು ತರುವುದು, ಇಡೀ ಭೂಮಿಯನ್ನು ಪರಿಶುದ್ಧಮಾಡಿ ಹೊಸತುಗೊಳಿಸುವ ಕರ್ತವ್ಯ ಅವರ ಪಾಲಿಗೆ ಬಂದಿತ್ತು. ಅವರನ್ನು ಎಲ್ಲೂ ಯಾರೂ ಕಂಡಿರಲಿಲ್ಲ, ಅವರ ದನಿಯನ್ನು ಯಾರೂ ಕೇಳಿರಲಿಲಲ್ಲ.

ಅರ್ಥಹೀನವಾದ ಈ ದುಃಸ್ವಪ್ನ ನೆನಪು ಬಹು ಕಾಲ ಮನಸಿನಲ್ಲೇ ಉಳಿದು ಹಿಂಸೆಕೊಡುತ್ತಿತ್ತು. ಎರಡನೆಯ ಪವಿತ್ರ ವಾರ ನಡೆಯುತ್ತಿತ್ತು. ಹಿತವಾದ ವಸಂತ ಬಂದಿತ್ತು. ಖೈದಿಗಳ ವಾರ್ಡಿನ ಕಿಟಕಿ ತೆರೆದಿದ್ದರು. ಸರಳುಗಳಿದ್ದ ಕಿಟಕಿ. ಅದರಾಚೆ ಸೆಂಟ್ರಿಯೊಬ್ಬ ಕಾವಲು ಕಾಯುತ್ತಿದ್ದ. ರಾಸ್ಕೋಲ್ನಿಕೋವ್ ಕಾಯಿಲೆ ಬಿದ್ದಿದ್ದ ಅವಧಿಯಲ್ಲಿ ಸೋನ್ಯಾ ಎರಡು ಬಾರಿ ಮಾತ್ರ ಈ ವಾರ್ಡಿನೊಳಕ್ಕೆ ಬಂದಿದ್ದಳು. ಪ್ರತಿ ಬಾರಿಯೂ ಅನುಮತಿ ಪಡೆಯಬೇಕಾಗುತ್ತಿತ್ತು, ಅನುಮತಿ ಪಡೆಯುವುದು ಕಷ್ಟವಾಗುತ್ತಿತ್ತು. ಆದರೂ ಅವಳು ಎಷ್ಟೋ ಬಾರಿ ಆಸ್ಪತ್ರೆಯ ಅಂಗಳಕ್ಕೆ ಬಂದಿದ್ದಳು, ಸಂಜೆಯ ಹೊತ್ತಿನಲ್ಲಿ ಬಂದು, ಅಂಗಳದಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ನಿಂತು, ದೂರದಿಂದಲೇ ವಾರ್ಡಿನ ಕಿಟಕಿಯನ್ನು ನೋಡುತ್ತಿದ್ದಳು. ರಾಸ್ಕೋಲ್ನಿಕೋವ್ ಬಹಳಮಟ್ಟಿಗೆ ಸುಧಾರಿಸಿಕೊಂಡಿದ್ದಾಗ, ಒಂದು ದಿನ ಸಂಜೆ, ನಿದ್ರೆಯಿಂದೆದ್ದ, ಅಕಸ್ಮಾತ್ತಾಗಿ ಕಿಟಕಿಯ ಹತ್ತಿರ ಹೋದ. ಇದ್ದಕಿದ್ದ ಹಾಗೆ ದೂರದಲ್ಲಿ, ಗೇಟಿನ ಹತ್ತಿರ ಸೋನ್ಯ ನಿಂತಿರುವುದು ಕಂಡಿತ್ತು. ಯಾತಕ್ಕೋ ಕಾಯುತ್ತಿದ್ದ ಹಾಗಿತ್ತು. ಆ ಕ್ಷಣದಲ್ಲಿ ಅವನ ಹೃದಯ ಸೀಳಿದಂತಾಯಿತು. ಮೆಟ್ಟಿಬಿದ್ದು ಕಿಟಕಿಯಿಂದ ದೂರ ಸರಿದ. ಸೋನ್ಯಾ ಮಾರನೆಯ ದಿನ ಬರಲಿಲ್ಲ. ಅದರ ಮರುದಿನವೂ ಬರಲಿಲ್ಲ. ಇಡೀ ದಿನ ಅವಳ ಬಗ್ಗೆ ಚಿಂತೆ ಮಾಡುತ್ತ ಕಾಯುತ್ತಿದ್ದೇನೆ ಅನ್ನುವುದು ಅವನಿಗೇ ಅರಿವಾಗಿತ್ತು. ಕೊನೆಗೆ ಆಸ್ಪತ್ರೆಯಿಂದ ಬಿಡುಗಡೆಯಾಯಿತು. ತನ್ನ ಸೆರೆಮನೆಗೆ ಹಿಂದಿರುಗಿದ. ಸೋನ್ಯಾಗೆ ಹುಷಾರಿಲ್ಲ, ಹಾಸಿಗೆ ಹಿಡಿದಿದ್ದಾಳೆ, ಹೊರಗೆಲ್ಲೂ ಓಡಾಡುತ್ತಿಲ್ಲ ಎಂದು ಖೈದಿಗಳ ಮೂಲಕ ತಿಳಿಯಿತು.

ಅವನಿಗೆ ಬಹಳ ಚಿಂತೆಯಾಗಿ ಅವಳ ವಿಚಾರ ತಿಳಿಯಲು ಹೇಳಿಕಳಿಸಿದ. ಅವಳ ಕಾಯಿಲೆ ಅಪಾಯಕಾರಿಯಾದದ್ದಲ್ಲ ಅನ್ನುವುದು ತಿಳಿಯಿತು. ಅವನು ತನ್ನ ಬಗ್ಗೆ ಆತಂಕಪಡುತ್ತ ತನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂಬುದನ್ನು ತಿಳಿದ ಸೋನ್ಯಾ ಪೆನ್ಸಿಲಿನಲ್ಲಿ ಚೀಟಿ ಬರೆದು ಕಳಿಸಿದಳು. ತಾನೀಗ ಹುಷಾರಾಗಿದ್ದೇನೆ, ನೆಗಡಿಯಾಗಿತ್ತು, ಬಲು ಬೇಗ ಅವನು ಕೆಲಸ ಮಾಡುವ ಜಾಗಕ್ಕೆ ಬಂದು ನೋಡುತೇನೆ ಅಂದಿದ್ದಳು. ಅದನ್ನು ಓದುತ್ತ ಅವನೆದೆ ಜೋರಾಗಿ ಬಡಿದುಕೊಂಡಿತ್ತು, ನೋವಾಗುತ್ತಿತ್ತು.

ಅವತ್ತು ಬೆಚ್ಚನೆಯ ಸ್ವಚ್ಚವಾದ ದಿನ. ಬೆಳಗಿನ ಆರು ಗಂಟೆಯ ಹೊತ್ತಿಗೆ ಅವನು ಹೊಳೆಯ ದಡದ ಶೆಡ್ಡಿನಲ್ಲಿ ಕೆಲಸ ಮಾಡಲು ಹೊರಟ ಅಲ್ಲಿದ್ದ ದೊಡ್ಡ ಒಲೆಗೂಡಿನಲ್ಲಿ ಜಿಪ್ಸಂ ಬೇಯಿಸಿ ಆಮೇಲೆ ಪುಡಿ ಮಾಡುತ್ತಿದ್ದರು. ಕೇವಲ ಮೂವರು ಕೆಲಸಗಾರರು ಮಾತ್ರ ಅಲ್ಲಿಗೆ ಹೋಗುತ್ತಿದ್ದರು. ಒಬ್ಬ ಕಾವಲಿಗೆ ನಿಂತ, ಇನ್ನೊಬ್ಬ ಹಿಂದೆ ಸಮೀಪದಲ್ಲೆ ಇದ್ದ ಕೋಟೆಗೆ ಏನೋ ಉಪಕರಣಗಳನ್ನು ತರಲು ಹೋದ; ಮತ್ತೊಬ್ಬ ಸೌದೆ ಸೀಳಿ ಅದನ್ನು ಒಲೆಗೆ ಹಾಕುವುದಕ್ಕೆ ಶುರು ಮಾಡಿದ. ರಾಸ್ಕೋಲ್ನಿಕೋವ್ ಶೆಡ್ಡಿನಿಂದ ಆಚೆಗೆ ಬಂದು ನದಿಯ ದಡಕ್ಕೆ ಹೋಗಿ ಅಲ್ಲಿ, ಶೆಡ್ಡಿನ ಹಿಂಭಾಗದಲ್ಲೇ ಜೋಡಿಸಿಟ್ಟಿದ್ದ ಮರದ ದಿಮ್ಮಿಗಳ ಮೇಲೆ ಕೂತು ವಿಶಾಲವಾದ ಬೋಳು ನದಿಯನ್ನು ನೋಡುತ್ತಿದ್ದ. ಅವನಿದ್ದ ಎತ್ತರದ ದಂಡೆಯಿಂದ ಸುತ್ತಲ ಹಳ್ಳಿಗಾಡಿನ ವಿಶಾಲ ದೃಶ್ಯ ಕಾಣುತ್ತಿತ್ತು. ದೂರದ ಆಚೆಯ ದಂಡೆಯಿಂದ ಯಾವುದೋ ಹಾಡು ಅಸ್ಪಷ್ಟವಾಗಿ ಕೇಳುತ್ತಿತ್ತು. ಅಲ್ಲಿ, ಬಿಸಿಲಿನಲ್ಲಿ ಬೇಯುತ್ತ ಅನಂತವಾಗಿ ಹರಡಿಕೊಂಡಿದ್ದ ಸ್ತಪ್ಪಿ ಹುಲ್ಲುಗಾವಲಲ್ಲಿ ಅಲೆಮಾರಿಗಳ [ಹೊತ್ತೊಯ್ಯಬಹುದಾದ ಗುಡಿಸಲು ಮನೆ] ಯುರ್ಟ್‌ಗಳು ದೂರದೂರಕ್ಕೆ ಹರಡಿ ಬಿದ್ದಿರುವ ಕಪ್ಪು ಚುಕ್ಕೆಗಳ ಹಾಗೆ ಕಾಣುತ್ತಿದ್ದವು. ಅಲ್ಲಿ ಸ್ವಾತಂತ್ರ್ಯವಿತ್ತು, ಇಲ್ಲಿಗಿಂತ ಬೇರೆಯ ಥರದ ಜನ ಇದ್ದರು, ಎಷ್ಟೋ ಶತಮಾನಗಳಿಂದಲೂ, ಅಬ್ರಹಾಮನ ಕುರಿ ಮಂದೆ ಸಾಗಿ ಹೋದಾಗಿನಿಂದಲೂ ಕಾಲ ಅಲ್ಲಿ ನಿಶ್ಚಲವಾಗಿರುವಂತೆ ಅನಿಸುತ್ತಿತ್ತು. ರಾಸ್ಕೋಲ್ನಿಕೋವ್ ಕೂತು ದಿಟ್ಟಿಸಿ ನೋಡಿದ, ಕಣ್ಣು ನೆಟ್ಟು ಕೂತಿದ್ದ. ಅವನ ಯೋಚನೆಗಳು ಹಗಲುಗನಸಿಗೆ ಹೊರಳಿಕೊಂಡವು. ಅವನ ಮನಸಿನಲ್ಲಿ ನಿರ್ದಿಷ್ಟವಾದ ಯೋಚನೆ ಇರದಿದ್ದರೂ ಎಂಥದೋ ನೋವು ಪೀಡಿಸಿ ಹಿಂಸೆ ಕೊಡುತ್ತಿತ್ತು.

ಇದ್ದಕ್ಕಿದ್ದ ಹಾಗೆ ಸೋನ್ಯಾ ಅವನ ಪಕ್ಕದಲ್ಲಿ ಬಂದು ಕೂತಿದ್ದಳು. ಸದ್ದೇ ಮಾಡದೆ ಬಂದಿದ್ದಳು. ತೀರ ಬೆಳಗಿನ ಹೊತ್ತು, ಬೆಳಗಿನ ಚಳಿ ಇನ್ನೂ ಕಡಮೆಯಾಗಿರದ ಹೊತ್ತು. ಅವಳು ಹಳೆಯ ಹಸಿರು ಶಾಲು ಹೊದ್ದಿದ್ದಳು. ಮುಖದಲ್ಲಿನ್ನೂ ರೋಗದ ದಣಿವು ಇತ್ತು. ಮುಖ ಇನ್ನಷ್ಟು ಬಿಳಿಚಿ, ಸೊರಗಿದಂತೆ ಕಾಣುತ್ತಿತ್ತು. ಸಂತೋಷ ತೋರುತ್ತ ಸ್ನೇಹಪೂರ್ವಕವಾಗಿ ನಕ್ಕಳು. ಎಂದಿನಂತೆ ಹೆದರುತ್ತ ಕೈ ಮುಂದೆ ನೀಡಿದಳು.
ಅವಳು ಯಾವಾಗಲೂ ಅಂಜಿಕೊಂಡೇ ಕೈ ಮುಂದೆ ಮಾಡುತ್ತಿದ್ದಳು. ಒಂದೊಂದು ಸಲ ಕೈ ನೀಡದೆ ಸುಮ್ಮನೆ ಇದ್ದುಬಿಡುತ್ತಿದ್ದಳು, ಅವನು ಕೈಕುಲುಕದೆ ದೂರ ತಳ್ಳುವನೋ ಎಂದು ಅಂಜಿದವಳ ಹಾಗೆ. ಅವನಂತೂ ಯಾವಾಗಲೂ ಅಸಹ್ಯಪಡುತ್ತಲೇ ಅವಳ ಕೈ ಕುಲುಕುತ್ತಿದ್ದ. ಯಾವಾಗಲೂ ಕಿರಿಕಿರಿಗೊಂಡವನ ಹಾಗೇ ಅವಳನ್ನು ಭೇಟಿ ಮಾಡುತ್ತಿದ್ದ. ಒಂದೊಂದು ಸಲ ಹಟಮಾರಿಯ ಹಾಗೆ ಭೇಟಿಯುದ್ದಕ್ಕೂ ಒಂದೂ ಮಾತಾಡದೆ ಸುಮ್ಮನೆ ಇದ್ದುಬಿಡುತ್ತಿದ್ದ. ಅವನೆದುರೇ ಭಯದಿಂದ ನಡುಗಿ, ಆಳವಾದ ದುಃಖ ಅನುಭವಿಸುತ್ತ ಅವಳು ಹೊರಟು ಹೋದ ಸಂದರ್ಭಗಳೂ ಇದ್ದವು. ಆದರೆ ಈ ಬಾರಿ ಅವರ ಕೈಗಳು ಬೇರ್ಪಡಲಿಲ್ಲ. ತಟ್ಟನೊಮ್ಮೆ ಅವಳನ್ನು ನೋಡಿ, ಏನೂ ಮಾತಾಡದೆ, ದೃಷ್ಟಿ ತಗ್ಗಿಸಿ ನೆಲ ನೋಡಿದ. ಅವರಿಬ್ಬರೇ ಇದ್ದರು. ಯಾರೂ ಅವರನ್ನ ನೋಡಿರಲಿಲ್ಲ. ಆ ಕ್ಷಣದಲ್ಲಿ ಕಾವಲುಗಾರ ಅವರತ್ತ ಬೆನ್ನುಮಾಡಿದ್ದ.

ಹೇಗಾಯಿತೋ ಅವನಿಗೇ ಗೊತ್ತಾಗಲಿಲ್ಲ. ಯಾವದೋ ಶಕ್ತಿ ಅವನನ್ನೆತ್ತಿ ಎಸೆದ ಹಾಗೆ ರಾಸ್ಕೋಲ್ನಿಕೋವ್ ಅವಳ ಕಾಲ ಬಳಿ ಬಿದ್ದಿದ್ದ. ಅವನು ಅಳುತ್ತ ಅವಳ ಮೊಳಕಾಲು ಅಪ್ಪಿ ಹಿಡಿದ. ಒಂದು ಕ್ಷಣ ಅವಳು ಭಯಂಕರವಾಗಿ ಹೆದರಿದ್ದಳು. ಮುಖ ವಿವರ್ಣವಾಗಿತ್ತು. ಹಿಂದಕ್ಕೆ ಹಾರಿ ನಡುಗುತ್ತ ಅವನನ್ನು ನೋಡಿದಳು. ಆ ಕ್ಷಣಾರ್ಧದಲ್ಲೇ ಅವಳು ಎಲ್ಲವನ್ನೂ ಅರ್ಥಮಾಡಿಕೊಂಡಳು. ಅವಳ ಕಣ್ಣಲ್ಲಿ ಅನಂತವಾದ ಸಂತೋಷ ಬೆಳಗಿತು. ಅರ್ಥಮಾಡಿಕೊಂಡಿದ್ದಳು. ಅವನು ತನ್ನನ್ನು ಪ್ರೀತಿಸುತ್ತಾನೆ ಅನ್ನುವ ಬಗ್ಗೆ ಅವಳಿಗೆ ಯಾವ ಸಂಶಯವೂ ಉಳಿಯಲಿಲ್ಲ. ಕೊನೆ ಇರದಷ್ಟು ಪ್ರೀತಿ ಇದೆ ಅವನಲ್ಲಿ, ಗಳಿಗೆ ಬಂದಿದೆ-ಅದು ತಿಳಿಯಿತು ಅವಳಿಗೆ.

ಇಬ್ಬರಿಗೂ ಮಾತಾಡಬೇಕು ಅನಿಸಿತು. ಮಾತು ಹೊರಡಲಿಲ್ಲ. ಕಣ್ಣಲ್ಲಿ ನೀರು ತುಂಬಿ ನಿಂತಿತ್ತು. ಇಬ್ಬರೂ ಬಿಳಿಚಿದ್ದರು, ಬಡಕಲಾಗಿದ್ದರು ಆದರೂ ಅವರ ಮುಖದಲ್ಲಿ ಹೊಸ ಭವಿಷ್ಯದ ನಸುಕು ಕಾಣುತ್ತಿತ್ತು. ಹೊಸ ಬದುಕಿನ ಹೊಸ ಎಚ್ಚರ, ಹೊಸ ಪುನರುತ್ಥಾನ ಕಾಣುತ್ತಿತ್ತು. ಪ್ರೀತಿ ಅವರನ್ನು ಹೊಸಬರನ್ನಾಗಿಸಿತ್ತು, ಇಬ್ಬರ ಹೃದಯದಲ್ಲೂ ಮತ್ತೊಬ್ಬರ ಹೃದಯದ ಬೇರು ಇತ್ತು.

ಕಾಯುವ ಸಹಿಸುವ ತೀರ್ಮಾನ ಮಾಡಿದರು. ಅವರಿನ್ನೂ ಏಳು ವರ್ಷ ಕಾಯಬೇಕಾಗಿತ್ತು ಅಲ್ಲಿಯವರೆಗೆ ಸಹಿಸಲಾಗದಂಥ ಸಂಕಟ, ನೋವು ಆನಂತರ ಕೊನೆಯಿರದ ಆನಂದ! ಅವನು ಉದ್ಧಾರವಾಗಿದ್ದ, ಅದು ಅವನಿಗೂ ಗೊತ್ತಾಗಿತ್ತು. ಅವನ ಈ ಹೊಸ ಅಸ್ತಿತ್ವದಲ್ಲಿ ಆ ಉದ್ಧಾರದ ಭಾವವನ್ನು ಇಡಿಯಾಗಿ ಅನುಭವಿಸುತ್ತಿದ್ದ. ಆಕೆ—ಅವನ ಬದುಕಿನಿಂದಷ್ಟೇ ಬದುಕಿದ್ದಳು!

ಅವತ್ತೇ ಸಾಯಂಕಾಲ, ಬ್ಯಾರಕ್ಕಿನ ಬಾಗಿಲಿಕ್ಕಿದ ಮೇಲೆ, ರಾಸ್ಕೋಲ್ನಿಕೋವ್ ಮರದ ಹಲಗೆಯ ಮೇಲೆ ಮಲಗಿ ಅವಳ ಬಗ್ಗೆ ಯೋಚನೆ ಮಾಡುತ್ತಿದ್ದ. ಅವನ ವೈರಿಗಳಾಗಿದ್ದ ಎಲ್ಲ ಖೈದಿಗಳೂ ಇವತ್ತು ಆಗಲೇ ಅವನನ್ನು ಬೇರೆಯ ಥರ ನೋಡುತ್ತಿದ್ದಾರೆ ಅನಿಸಿತ್ತು. ಅವರನ್ನು ಮಾತು ಕೂಡ ಆಡಿಸಿದ್ದ, ಅವರು ಸ್ನೇಹದಿಂದಲೇ ಉತ್ತರ ಹೇಳಿದ್ದರು. ಅದು ನೆನಪಿಗೆ ಬಂದಿತು. ಎಲ್ಲವೂ ಬದಲಾದಾಗ ಇದೂ ಹೀಗೇ ಇರಬೇಕಲ್ಲವೇ ಅಂದುಕೊಂಡ. ಅವಳ ಯೋಚನೆ ಬರುತ್ತಿತ್ತು. ಅವಳಿಗೆ ನಿರಂತರವಾಗಿ ಅದೆಷ್ಟು ಹಿಂಸೆ ಕೊಟ್ಟಿದ್ದೆ, ಅವಳ ಹೃದಯ ಛಿದ್ರಮಾಡಿದ್ದೆ ಅನ್ನುವುದು ನೆನಪು ಮಾಡಿಕೊಂಡ. ಅವಳ ಸೊರಗಿದ ಮುಖ ನೆನೆದ. ಈ ನೆನಪುಗಳಿಂದ ಅವನಿಗೆ ಹಿಂಸೆಯಾಗಲಿಲ್ಲ. ಅನಂತವಾದ ಪ್ರೀತಿಯಿಂದ ಅವಳೆಲ್ಲ ವೇದನೆ ಇಲ್ಲವಾಗಿಸುತ್ತೇನೆ ಅನ್ನುವುದು ಅವನಿಗೆ ಗೊತ್ತಾಗಿತ್ತು.

ಗತಕಾಲದ ಆ ಎಲ್ಲ ಹಿಂಸೆ ಈಗೆಲ್ಲಿ! ಎಲ್ಲವೂ ಅವನ ಅಪರಾಧ ಕೂಡ, ಅವನ ಗಡೀಪಾರು, ಅವನ ಶಿಕ್ಷೆ ಕೂಡ ವಿಚಿತ್ರವಾದ ಬಾಹ್ಯ ಸತ್ಯಗಳು, ಅವೆಲ್ಲ ನನಗೆ ಆದವು ಅಲ್ಲವೇ ಅಲ್ಲ, ನನ್ನ ಸೋಂಕಲೇ ಇಲ್ಲ ಅನಿಸುತ್ತಿತ್ತು. ಆದರೂ, ಅವತ್ತು ಸಂಜೆ ಅವನು ದೀರ್ಘ ಕಾಲ ಏನನ್ನೂ ಯೊಚಿಸುವ ಸ್ಥಿತಿಯಲ್ಲಿರಲಿಲ್ಲ, ಯಾವ ವಿಷಯದ ಮೇಲೂ ಮನಸ್ಸು ನಿಲ್ಲಿಸಲು ಆಗುತ್ತಿರಲಿಲ್ಲ ಅವನಿಗೆ, ಅಲ್ಲದೆ ಪ್ರಜ್ಞಾಪೂರ್ವಕವಾಗಿ ಏನನ್ನೂ ತೀರ್ಮಾನಿಸುವುದಕ್ಕೂ ಆಗುತ್ತಿರಲಿಲ್ಲ. ತನ್ನೊಳಗೆ ಈಗ ಚರ್ಚೆಯ ಬದಲಾಗಿ ಬದುಕು ಇದೆ, ಸಂಪೂರ್ಣವಾಗಿ ಬೇರೆಯದೇ ಆದ ಇನ್ನೇನೋ ತನ್ನ ಪ್ರಜ್ಞೆಯೊಳಗೆ ಪ್ರವೇಶಿಸಿ ತತ್ಪರವಾಗಿದೆ ಅನಿಸುತ್ತಿತ್ತು.

ಅವನ ದಿಂಬಿನ ಹತ್ತಿರ ಸುವಾರ್ತೆಗಳಿದ್ದವು. ಯಾಂತ್ರಿಕವಾಗಿ ಅದನ್ನೆತ್ತಿಕೊಂಡ. ಅದು ಅವಳ ಪುಸ್ತಕ. ಆ ಪುಸ್ತಕದಿಂದಲೇ ಅವಳು ಲಾಜರಸ್‌ನ ಪುನರುತ್ಥಾನವನ್ನು ಓದಿ ಹೇಳಿದ್ದಳು. ಕಠಿಣ ಶಿಕ್ಷೆಯ ಸೆರೆಮನೆಯ ವಾಸ ಆರಂಭವಾದಾಗ ಅವಳು ಧರ್ಮದ ವಿಷಯವನ್ನಿಟ್ಟುಕೊಂಡು ನನ್ನ ಬೇಟೆಯಾಡುತ್ತಾಳೆ, ಸದಾ ಸುವಾರ್ತೆಯ ಬಗ್ಗೆ ಮಾತಾಡುತ್ತಾಳೆ, ಪುಸ್ತಕ ಓದು ಎಂದು ಬಲವಂತ ಮಾಡುತ್ತಾಳೆ ಅಂದುಕೊಂಡಿದ್ದ. ಅವನಿಗೆ ಅತ್ಯಾಶ್ಚರ್ಯವಾಗುವ ಹಾಗೆ ಅವಳು ಒಮ್ಮೆಯೂ ಆ ಬಗ್ಗೆ ಮಾತಾಡಲೇ ಇಲ್ಲ, ಒಮ್ಮೆಯೂ ಸುವಾರ್ತೆಗಳ ಸುದ್ದಿ ಎತ್ತಲಿಲ್ಲ. ಅವನು ಕಾಯಿಲೆ ಬೀಳುವ ಸ್ವಲ್ಪ ಮೊದಲು ತಾನೇ ಸುವಾರ್ತೆಗಳು ಬೇಕು ಅಂದಿದ್ದ. ಅವಳು ಮರುಮಾತಿಲ್ಲದೆ ತಂದುಕೊಟ್ಟಿದ್ದಳು.

ಅವನು ಇನ್ನೂ ಅದನ್ನು ತೆರೆದೂ ನೋಡಿರಲಿಲ್ಲ. ಈಗಲೂ ಪುಸ್ತಕ ತೆರೆಯಲಿಲ್ಲ. ಆದರೂ, ‘ಅವಳ ವಿಶ್ವಾಸವೇ ಈಗ ನನ್ನ ವಿಶ್ವಾಸವೂ ಆಗಬೇಕಲ್ಲವೇ? ಕೊನೆಯ ಪಕ್ಷ ಅವಳ ಭಾವನೆ, ಅವಳ ಆಕಾಂಕ್ಷೆಗಳಾದರೂ…’ ಅನ್ನುವ ಯೋಚನೆ ಮನಸಿಗೆ ಬಂದಿತ್ತು.
ಅವಳು ಕೂಡ ಇಡೀ ದಿನ, ಉನ್ಮತ್ತಳ ಹಾಗಿದ್ದಳು. ರಾತ್ರಿ ಮತ್ತೆ ಜ್ವರ ಬಂದಿತು. ಅವಳಿಗೆಷ್ಟು ಖುಷಿಯಾಗಿತ್ತೆಂದರೆ, ಇಷ್ಟೊಂದು ಸಂತೋಷವಾಗುತ್ತಿದೆಯಲ್ಲಾ ಎಂದೇ ಭಯವಾಗಿತ್ತು. ಏಳು ವರ್ಷ, ಬರಿಯ ಏಳೇ ವರ್ಷ! ಅವರ ಸಂತೋಷದ ಮುಂಜಾವಿನಲ್ಲಿ ಏಳು ವರ್ಷಗಳನ್ನು ಏಳು ದಿನಗಳೆಂದೇ ತಿಳಿಯಲು ಸಿದ್ಧರಾಗಿದ್ದರು ಅವರು. ಆದರೆ ದೊಡ್ಡ ಬೆಲೆಯನ್ನು ತೆರದೆ, ಬಲು ದೊಡ್ಡ ಹೋರಾಟದ ಬೆಲೆ ತೆರದೆ ಹೊಸ ಬದುಕು ಅವನಿಗೆ ದಕ್ಕುವುದಿಲ್ಲ ಅನ್ನುವುದು ಅವನಿಗೆ ಗೊತ್ತೂ ಇರಲಿಲ್ಲ….

ಆದರೆ—ಅದು ಹೊಸ ಕಥೆಯ ಆರಂಭ. ಮನುಷ್ಯನೊಬ್ಬ ಸಾವಕಾಶವಾಗಿ ಹೇಗೆ ಹೊಸಬನಾದ, ಸಾವಕಾಶವಾಗಿ ಉದ್ದಾರವಾದ, ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಹೇಗೆ ಹೊರಳಿಕೊಂಡ, ಇದುವರೆಗೆ ಅವನಿಗೆ ಸಂಪೂರ್ಣವಾಗಿ ಅಪರಿಚಿತವೇ ಆಗಿದ್ದ ಹೊಸ ಸತ್ಯವನ್ನು ಹೇಗೆ ಪರಿಚಯಮಾಡಿಕೊಂಡ ಅನ್ನುವ ಕಥೆ. ಅದು ಹೊಸ ಕಥೆಯ ವಸ್ತು. ನಾವು ಹೇಳುತ್ತಿದ್ದ ಈಗಿನ ಕಥೆ ಇಲ್ಲಿಗೆ ಮುಗಿಯುತ್ತದೆ.