ಒಂದು ಎಡವಟ್ಟಾಗಿತ್ತು! ನಾನು ಹಳೆಯ, ಕಮಲ್ ಹಾಸನ್ ನಟಿಸಿದ್ದ ಪುಷ್ಪಕ ವಿಮಾನದಂತೆಯೇ ಇದು ಕೂಡ ತಮಾಷೆಯಾಗಿಯೇ ಇರಬಹುದು ಅಂದುಕೊಂಡಿದ್ದೆ. ಆದರೆ ಇದು ಅಪ್ಪ ಮಗಳ ನಡುವೆ ಪ್ರೀತಿ ವಾತ್ಸಲ್ಯದ ಬಗ್ಗೆ ಕೇಂದ್ರಿತವಾಗಿದ್ದು, ಕತೆಯಲ್ಲಿ ಬಹಳಷ್ಟು ಭಾವನಾತ್ಮಕ ಘಟನೆಗಳು ಇದ್ದವು. ಸ್ವಲ್ಪ ಸಮಯದಲ್ಲೇ ಅತ್ತಿತ್ತ ಗಮನಿಸಲು ಶುರು ಮಾಡಿದರೆ ಎಷ್ಟೋ ಹೆಣ್ಣು ಮಕ್ಕಳು ಕಣ್ಣೀರು ಹಾಕಲು ಶುರು ಮಾಡಿದ್ದರು. ಇತ್ತೀಚೆಗಷ್ಟೇ ಅಪ್ಪನನ್ನು ಕಳೆದುಕೊಂಡಿದ್ದ ನನ್ನ ಹೆಂಡತಿ ಕೂಡ ಗೊಳೋ ಅಂತ ಅಳಲು ಶುರು ಮಾಡಿದ್ದಳು. ಒಂದೆರಡು ಕುಟುಂಬಗಳು ಮಧ್ಯದಲ್ಲಿ ಎದ್ದೇ ಹೋಗಿಬಿಟ್ಟರು!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನೆಂಟನೆಯ ಬರಹ
ಬೆಳ್ ಬೆಳಿಗ್ಗೆ ವಿನಯ್ ಫೋನ್ ಮಾಡಿದ್ದರು. ಅವರು ನನ್ನ ನಾಟಕ ಸಹಪಾಠಿ. ಬೆಂಗಳೂರಿನಲ್ಲಿದ್ದಾಗ ನಾವಿಬ್ಬರೂ ಶ್ರೀ. ಅನಾ ರಾವ್ ಜಾದವ ಗುರುಗಳ ಹತ್ತಿರ ನಾಟಕವನ್ನು ಕಲಿಯಲು ಹೋಗುತ್ತಿದ್ದೆವು. ಅವರೂ ಕೂಡ ನನ್ನಂತೆಯೇ IT ಕರ್ಮಿಗಳು ಹಾಗೂ ಅತೃಪ್ತರು ಆಗಿದ್ದರು! ಬಣ್ಣದ ಗೀಳು ಅವರಿಗೆ ನನಗಿಂತಲೂ ಅಧಿಕವಾಗಿತ್ತು. ಅವರು ಎಷ್ಟೋ ಕಿರು ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದರು. ಹೀಗಾಗಿ ಅವರಿಗೆ ಆಗಾಗ ಕೆಲವರು ತಮ್ಮ ಚಿತ್ರಗಳಲ್ಲಿ ನಟಿಸಲು ಕರೆ ಮಾಡುತ್ತಿದ್ದರು. ಹೆಚ್ಚಾಗಿ ಕನ್ನಡದಲ್ಲಿ ನಟನೆಗೆ ಕರೆಗಳು ಬರುತ್ತಿದ್ದವಾದರೂ ತೆಲುಗು ತಮಿಳು ಕೂಡ ಮಾಡುತ್ತಿದ್ದರು. ಅವರು ದುಡ್ಡಿಗೆ ಅಂತ ನಟಿಸುತ್ತಿರಲಿಲ್ಲ. ದುಡ್ಡು ಕೇಳಿದರೂ ಯಾರೂ ಕೊಡುತ್ತಿರಲಿಲ್ಲ ಬಿಡಿ! ಯಾಕೆಂದರೆ ಕನ್ನಡದಲ್ಲಿ, ಸಿನೆಮಾ ನೋಡುವವರಿಗಿಂತ ಮಾಡುವವರೆ ಜಾಸ್ತಿ. ಹಾಗೆ ಸುಮ್ಮನೆ ಸಿನೆಮಾ ಮಾಡುವವರಿಂದ ಸಂಭಾವನೆ ಹೇಗೆ ತಾನೇ ನಿರೀಕ್ಷೆ ಮಾಡಲಾದೀತು? ನಮ್ಮ ಕೈಯಿಂದ ಹಾಕದಿದ್ದರೆ ಸಾಕಾಗಿತ್ತು. ಇವರೂ ಕೂಡ ಯಾರಿಂದಲೂ ಏನೂ ಅಪೇಕ್ಷೆ ಮಾಡದೆ ತಮ್ಮ ಕೈಲಾದ ಕಲಾ ಸೇವೆಯನ್ನು ನಿರಂತರ ಮಾಡಿಕೊಂಡಿದ್ದರು! ಹೀಗಾಗಿ ಆಯಾ ಹವ್ಯಾಸಿ ತಂಡಗಳು ಏಳೆಂಟು ನಿಮಿಷಗಳ ಕಿರು ಚಿತ್ರಗಳನ್ನು ಮಾಡಿ ಮಾಡಿ ಕೆಲವು film festival ಗಳಲ್ಲಿ ಭಾಗವಹಿಸಿ ಬಹುಮಾನ ಬಂದರೂ, ಬರದೇ ಇದ್ದರು ಅದನ್ನು ಪ್ರಚಾರ ಮಾಡಿ ಅಂತಿಮವಾಗಿ YouTube ನಲ್ಲಿ ಹರಿಯ ಬಿಡುತ್ತಿದ್ದರು. YouTube ಆಗ ಅಷ್ಟೊಂದು ಪ್ರಸಿದ್ಧಿ ಪಡೆದಿರಲಿಲ್ಲವಾದರೂ ಇಂತಹ ಪ್ರಯೋಗಶೀಲ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಅಂತೂ ಆಗಿತ್ತು.
ನಾನು ಅಮೆರಿಕೆಗೆ ಬರೋದಕ್ಕಿಂತ ಮೊದಲು ಬೆಂಗಳೂರಿನಲ್ಲಿ ಇದ್ದಾಗ, ಅವರಿಗೆ ಒಂದು ಚಲನಚಿತ್ರದಲ್ಲಿ ನಟಿಸುವ ಅವಕಾಶವೂ ಬಂದಿತ್ತು. ಎರಡುವರೆ ಗಂಟೆಗಳಷ್ಟು ಉದ್ದದ “404” ಎಂಬ ಹೆಸರಿನ ಆ ಚಿತ್ರವನ್ನು ನಮ್ಮಂತೆಯೇ IT ಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಹವ್ಯಾಸಿ, ನಿರ್ದೇಶಿಸುತ್ತಿದ್ದರು ಅಂತ ತಿಳಿಯಿತು. ಆ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿ, ತಾವೇ ನಿರ್ದೇಶಿಸುತ್ತಿದ್ದ ಆ ಯುವಕನ ಹೆಸರು ನಿರಂಜನ ಅಂತ. ಅವರು ವಿನಯಗೆ ತಮ್ಮ ಚಿತ್ರದಲ್ಲಿ ಒಬ್ಬ real estate ಏಜೆಂಟ್‌ನ ಪಾತ್ರ ಕೊಟ್ಟಿದ್ದರು. ನಾಯಕನ ಮಗಳ ಪಾತ್ರಕ್ಕೆ ನನ್ನ ಮಗಳ ಹೆಸರನ್ನು ವಿನಯ್ ಸೂಚಿಸಿದ್ದರು. ಅವಳ ಜೊತೆಗೆ ನನಗೂ ಒಂದು ಪುಟ್ಟ ಪಾತ್ರ ಸಿಕ್ಕಿತ್ತು. ಆ ಪಾತ್ರವನ್ನು ಈಗಾಗಲೇ ವಹಿಸಿಕೊಂಡಿದ್ದ ಪಾತ್ರಧಾರಿ ಪರಾರಿ ಆಗಿದ್ದಕ್ಕೆ ನನಗೊಂದು ಬಂಗಾರದ ಅವಕಾಶ ಸಿಕ್ಕಿತ್ತು! ಅವರ ತಂಡದಲ್ಲಿ ಕೆಲಸ ಮಾಡುವ ಎಲ್ಲರೂ ನನ್ನ ತರಹವೆ ಸಾಫ್ಟವೇರ್ ಉದ್ದಿಮೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಪ್ರತಿ ವಾರಾಂತ್ಯದಲ್ಲಿ ಮಾತ್ರ ಶೂಟಿಂಗ್ ಇರುತ್ತಿತ್ತು. ಚಿಕ್ಕ ಪಾತ್ರಗಳು ಆಗಿದ್ದರಿಂದ ಎರಡು ದಿನಗಳಲ್ಲಿ ನಮ್ಮ ಭಾಗದ ಶೂಟಿಂಗ್ ಮುಗಿದಿತ್ತು. ನಾವು ಅಮೆರಿಕೆಗೆ ಹೊರಡುವ ಕೆಲವೇ ದಿನಗಳ ಮುಂಚೆ ಚಿತ್ರದ ಡಬ್ಬಿಂಗ್ ಕಾರ್ಯ ಕೂಡ ಮುಗಿಸಿ ಬಂದಿದ್ದೆವು. ಅದೊಂದು ಅತಿ ಕಡಿಮೆ ಬಜೆಟ್‌ನಲ್ಲಿ ಹವ್ಯಾಸಕ್ಕಾಗಿ ಮಾಡಿದ ಚಿತ್ರ ಆಗಿದ್ದರಿಂದ ಅದನ್ನು ಯಾವುದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇರಲಿಲ್ಲ. ಒಂದಿಷ್ಟು private show ಗಳನ್ನು ಮಾಡುವ ಇರಾದೆ ನಿರ್ದೇಶಕರಿಗೆ ಇತ್ತು.
ಅವತ್ತು ವಿನಯ್ ಫೋನ್ ಮಾಡಿದ ಕೂಡಲೇ ಅದೇ ಪ್ರಾಜೆಕ್ಟ್ ಕುರಿತು ಹೇಳಲು ಮಾಡಿರಬಹುದು ಅಂತ ನಾನು ಊಹಿಸಿದ್ದು ನಿಜವಾಗಿತ್ತು. ಉಭಯಕುಶಲೋಪರಿಗಳ ಬಳಿಕ “ಗುರುಗಳೆ ನಮ್ಮ 404 ಪಿಚ್ಚರು release ಆಗ್ತಿದೆ. ಬೆಂಗಳೂರಿನಲ್ಲಿ ಒಂದು premier show ಇದೆ” ಅಂದರು.
ಜೀವನದಲ್ಲಿ ಒಂದು ಬಾರಿಯಾದರೂ ಸಿನೆಮಾದಲ್ಲಿ ನಟಿಸಬೇಕು ಅಂತ ಆಸೆ ಪಟ್ಟು, ಅದು ಸಾಕ್ಷಾತ್ಕಾರಗೊಂಡ ಸಾರ್ಥಕ ಕ್ಷಣಗಳನ್ನು ಅನುಭವಿಸಲು ನನಗೆ ಸಾಧ್ಯ ಇರಲಿಲ್ಲವಲ್ಲ ಎಂಬ ಬೇಜಾರು ಕೂಡಲೇ ಮನದಲ್ಲಿ ಮೂಡಿತು. ನನ್ನ ನಟನೆಯನ್ನು ನೋಡುವುದಕ್ಕಿಂತ ನನ್ನ ಮಗಳನ್ನು ದೊಡ್ಡ ಪರದೆಯಲ್ಲಿ ನೋಡುವ ಆಸೆ ಇತ್ತು. ಅವಳು ಆ ಸಿನೆಮಾದಲ್ಲಿ ನನಗಿಂತಲೂ ಸಹಜವಾಗಿ ನಟಿಸಿದ್ದಳು.
“ನೀವು ಬೆಂಗಳೂರಿನಲ್ಲಿ ಇದ್ದಿದ್ದರೆ ಚೆನ್ನಾಗಿತ್ತು ಗುರುಗಳೆ” ಅಂತ ವಿನಯ್ ಕೂಡ ಬೇಜಾರು ಮಾಡಿಕೊಂಡರು.
ಹಾಗಂತ ಸುಮ್ಮನೆ ಇರೋಕಾಗುತ್ತೆಯೇ? ಹೇಗಾದರೂ ಮಾಡಿ ನಾವು ನಟಿಸಿದ್ದ ಸಿನೆಮಾವನ್ನು ನಾನು ನೋಡಲೇಬೇಕಿತ್ತು. ಅದಕ್ಕಾಗಿ 3000 ಡಾಲರು ವ್ಯಯಿಸಿ ಅಮೆರಿಕೆಯಿಂದ ಬೆಂಗಳೂರಿಗೆ ಹೋಗುವಷ್ಟು ಹುಚ್ಚು ಇರಲಿಲ್ಲ. ಆದರೆ ಆ ಸಿನೆಮಾವನ್ನೇ ಅಮೆರಿಕೆಗೆ ತರಿಸಿದರೆ ಹೇಗೆ ಎಂಬ ಯೋಚನೆ ಬಂತು. ಈಗಿನ ಡಿಜಿಟಲ್ ಯುಗದಲ್ಲಿ ಸುಲಭವಾಗಿ ಆ ಇಡೀ ಮೂವಿ file ಅನ್ನು ಕ್ಷಣಾರ್ಧದಲ್ಲಿ ತರಿಸಬಹುದಿತ್ತು. ನಾನು ನೋಡಬೇಕು ಕಳಿಸಿಕೊಡು ಅಂದರೆ ನಮ್ಮ ನಿರ್ದೇಶಕರು ಕಳಿಸಬೇಕಲ್ಲ? ಯಾಕೆಂದರೆ ಅವರಿಗೆ ಅದನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮನಸ್ಸು ಇರಲಿಲ್ಲ. ನಾನೇನಾದರೂ ಅದನ್ನು ಅಲ್ಲಿಗೆ ತರಿಸಿ ಎಲ್ಲರಿಗೂ online ನಲ್ಲಿ ಹಂಚಿಕೊಂಡುಬಿಟ್ಟರೆ ಎಂಬ ಸಂಶಯ ಅವರಿಗೆ ಬಂದೆ ಬರುತ್ತದೆ. ಹೀಗಾಗಿ ಅವರಿಗೆ ಹೇಗೆ ಕೇಳುವುದು ಅಂತ ಗೊಂದಲ ಮೂಡಿತು. ಆಗ ನನಗೆ ಇನ್ನೊಂದು ಯೋಚನೆ ಬಂತು. ನಾನೊಬ್ಬನೇ ವೀಕ್ಷಣೆ ಮಾಡುತ್ತೇನೆ ಎನ್ನುವ ಬದಲು, ನಮ್ಮ ಸಿನೆಮಾವನ್ನು ನಾನಿದ್ದ ಓಮಾಹಾದಲ್ಲಿ ಕನ್ನಡಿಗರ ಎದುರು ಪ್ರದರ್ಶಿಸಿದರೆ ಹೇಗೆ ಎಂಬ ಯೋಚನೆ ಬಂತು.
ದೊಡ್ಡ ಚಿತ್ರಮಂದಿರ ಅಲ್ಲದಿದ್ದರೂ ನಮ್ಮ ಅಪಾರ್ಟ್ಮೆಂಟ್‌ನಲ್ಲಿಯೇ ಒಂದು ಸಣ್ಣ theatre, ಚಿಕ್ಕ ಪರದೆ ಹಾಗೂ ಪ್ರೊಜೆಕ್ಟರ್ ಇತ್ತು. ಸುಮಾರು ಐವತ್ತು ಜನರು ಕುಳಿತುಕೊಳ್ಳುವಷ್ಟು ಆಸನ ವ್ಯವಸ್ಥೆ ಕೂಡ ಇತ್ತು. ಅದನ್ನು ದಿನಕ್ಕೆ ಇಷ್ಟು ಡಾಲರ್ ಅಂತ ಬಾಡಿಗೆಗೆ ಕೊಡುತ್ತಾರೆ ಎಂಬ ವಿಷಯವೂ ಅಲ್ಲಿ ವಿಚಾರಿಸಿದಾಗ ತಿಳಿಯಿತು. ಇನ್ನೇಕೆ ತಡ ಅಂತ ಕೂಡಲೇ ನಿರ್ದೇಶಕ ನಿರಂಜನ ಅವರನ್ನು ಸಂಪರ್ಕ ಮಾಡಿ ಈ ವಿಚಾರ ತಿಳಿಸಿದೆ. ಹಾಗಂತ ಪುಕ್ಕಟೆ ಪ್ರದರ್ಶನ ಮಾಡುವ ಇರಾದೆ ಇರಲಿಲ್ಲ. ಒಬ್ಬರಿಗೆ 5 ಡಾಲರ್ ಟಿಕೆಟ್ ಅಂತ ನಿರ್ಧರಿಸಿ, ಅದರಲ್ಲಿ ಬಂದ ಹಣವನ್ನು ಸಂಭಾವನೆ ರೂಪದಲ್ಲಿ ನಿಮಗೆ ಕೊಡುತ್ತೇನೆ ಅಂತ ಹೇಳಿದೆ. ಅದೇನು ದೊಡ್ಡ ಮೊತ್ತವಲ್ಲದಿದ್ದರೂ ಅವರ ಪರಿಶ್ರಮಕ್ಕೆ ಒಂದು ರೀತಿ ಉತ್ತೇಜನ ಸಿಗುತ್ತದೆ ಅನಿಸಿತು. ಅದೂ ಅಲ್ಲದೆ ಡಾಲರು ಬೇರೆ! ಅವರೂ ಕೂಡ ತುಂಬಾ ಧನಾತ್ಮಕವಾಗಿ ಸ್ಪಂದಿಸಿದರು. ಅಮೆರಿಕೆಯಲ್ಲಿ ನಮ್ಮ ಸಿನೆಮಾ ಪ್ರದರ್ಶನ ಆದರೆ ನಮಗೂ ಖುಷಿನೇ ಸರ್, ಖಂಡಿತ ಮಾಡಿ ಅಂದುಬಿಟ್ಟರು. ಒಂದೆರಡು ದಿನಗಳಲ್ಲಿ ಗೂಗಲ್ ಡ್ರೈವ್ ನಲ್ಲಿ ಕಾಪಿ ಮಾಡಿ ಕಳಿಸಿಕೊಟ್ಟರು. ಅದು ಅವರ ಪ್ರಥಮ ಪ್ರಯತ್ನ ಆಗಿದ್ದರಿಂದ ಯಾವುದೇ ನಿರೀಕ್ಷೆ ಇಲ್ಲದೆ ಮೊದಲು ಮನೆಯಲ್ಲಿ ಕುಳಿತು ನಾನು, ಆಶಾ ಹಾಗೂ ಪರಿಧಿ ವೀಕ್ಷಿಸಿದೆವು. ತುಂಬಾ ವಿಶೇಷ ಅನಿಸದಿದ್ದರೂ ಪರವಾಗಿಲ್ಲ ಅನ್ನುವಂತಹ ಸಿನೆಮಾ ಅದು.
ಒಮಾಹಾದಲ್ಲಿ ಪ್ರದರ್ಶನಕ್ಕೆ ತಯಾರಿ ಶುರು ಮಾಡಿದೆ. ಒಂದು ರವಿವಾರದ ದಿನ ನಿಗದಿಪಡಿಸಿ ಮಿನಿ ಚಿತ್ರಮಂದಿರವನ್ನು ಬಾಡಿಗೆಗೆ ಕಾಯ್ದಿರಿಸಿದೆ. ನಮ್ಮ ಕನ್ನಡ ಸಂಘದ ಸದಸ್ಯರುಗಳಿಗೆ ಒಂದು ಇಮೇಲ್ ಕಳಿಸಿದೆ. ತುಂಬಾ ಒಳ್ಳೆಯ ಸ್ಪಂದನೆ ವ್ಯಕ್ತವಾಯ್ತು. ಹಲವಾರು ಜನರು ತಾವು ಚಿತ್ರವನ್ನು ವೀಕ್ಷಿಸಲು ಬರುತ್ತೇವೆ ಅಂತ ಹೇಳಿದರು. ಅಲ್ಲಿ ಅಷ್ಟೆಲ್ಲಾ ಕನ್ನಡ ಚಿತ್ರಗಳು ಬರೋದು ಕೂಡ ಕಡಿಮೆ. ತಮಿಳು, ತೆಲುಗು, ಹಿಂದಿ ಚಿತ್ರಗಳು ಬರುತ್ತಿದ್ದುದೆ ಜಾಸ್ತಿ. ಅದೂ ಅಲ್ಲದೆ ನಾನು ನನ್ನ ಮಗಳು ನಟಿಸಿದ್ದು ಅಂತ ಪ್ರಚಾರ ಬೇರೆ ಮಾಡಿದ್ದೆನಲ್ಲ. ಇವರಿಗೆ ಇಷ್ಟ ಆಗದಿದ್ದರೆ ಅಂತ ಭಯವೂ ಶುರು ಆಯ್ತು. ಜಾಸ್ತಿ ನಿರೀಕ್ಷೆ ಇಟ್ಟುಕೋಬೇಡಿ ಅಂತಲೂ ಹೇಳಿದ್ದೆ. ಹೆಚ್ಚು ಕಡಿಮೆ ಐವತ್ತು ಜನ ಸೇರಿದರು. ಹೊಸಬರೇ ಸೇರಿಕೊಂಡು ಮಾಡಿದ ಅತಿ ಸಾಧಾರಣ ಚಿತ್ರವೊಂದನ್ನು ತಾಳ್ಮೆಯಿಂದ ಕೂತು ನೋಡಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ನಮ್ಮ ಕನ್ನಡಿಗರ ಹೃದಯ ದೊಡ್ಡದು!
ಇದೊಂದು ಚಿತ್ರ ಪ್ರದರ್ಶನ ಆದ ಬಳಿಕ ನನ್ನ ಮೇಲೆ ಓಮಹಾದ ಅನಿವಾಸಿ ಕನ್ನಡಿಗರ ನಿರೀಕ್ಷೆಗಳು ಇನ್ನೂ ಹೆಚ್ಚಾದವು! ಇನ್ನೊಂದು ಸಿನೆಮಾ ಮಾಡಲಿ ಅಂತಲ್ಲ.. ಮತ್ತೊಂದು ಕನ್ನಡ ಸಿನೆಮಾ ಪ್ರದರ್ಶನ ಮಾಡಲಿ ಅಂತ! ಆಗ ತಾನೇ ಭಾರತದಲ್ಲಿ ಸೂರಿ ನಿರ್ದೇಶನದ ಕೆಂಡಸಂಪಿಗೆ ಬಿಡುಗಡೆ ಆಗಿತ್ತು. ಅದರ ಪ್ರದರ್ಶನ ಮಾಡಿಸು ಅಂತ ಚಂದ್ರು ನನ್ನ ಬೆನ್ನು ಹತ್ತಿದ.
ಅದನ್ನು ತರಿಸುವುದು ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ. ನಿರಂಜನ ಕಡೆಯಿಂದ ಗೂಗಲ್ ಡ್ರೈವ್‌ನಲ್ಲಿ ತರಿಸಿಕೊಂಡಂತೆ ಅದನ್ನು ತರಿಸುವುದು ಸಾಧ್ಯವೇ ಇರಲಿಲ್ಲ. ಅದೂ ಅಲ್ಲದೆ ಅದನ್ನು ಪ್ರದರ್ಶನ ಮಾಡಲು ದೊಡ್ಡ ಚಿತ್ರಮಂದಿರವನ್ನೇ ಬಾಡಿಗೆಗೆ ತೆಗೆದುಕೊಳ್ಳಬೇಕಿತ್ತು. ಅದನ್ನೂ ವಿಚಾರಿಸಿ ಅದು ಲಭ್ಯ ಇದೆ ಅಂತ ಗೊತ್ತಾಯ್ತು. ಆದರೆ ಅದಕ್ಕೆ ಅಂತ encrypt ಮಾಡಿದ ಒಂದು ಹಾರ್ಡ್ ಡಿಸ್ಕ್ ಕಳಿಸುತ್ತಾರೆ. ಅಮೆರಿಕೆಯಲ್ಲಿ “ಕೆಂಡ ಸಂಪಿಗೆ” ಚಿತ್ರದ ವಿತರಕರು ಯಾರಿದ್ದಾರೆ ಅಂತ ವಿಚಾರಿಸಲು ತೊಡಗಿದೆ. ಬೆಂಗಳೂರಿನಲ್ಲಿದ್ದಾಗ, ನಿರ್ದೇಶಕರಾದ ಶ್ರೀ. ಕ್ರಿಶ್ ಜೋಷಿ ನನಗೆ ಪರಿಚಯವಾಗಿದ್ದರು. ಅವರಿಗೆ ಕರೆಮಾಡಿ ವಿಚಾರಿಸಿದಾಗ ಶ್ರೀ. ರಾಜೇಶ್ ನಟರಂಗ ಅವರ ಸಂಪರ್ಕ ಸಿಕ್ಕಿತು. ಅವರ ಜೊತೆಗೆ ಮಾತಾಡುವ ಅವಕಾಶವೂ ದೊರಕಿತು. ಅನಿವಾಸಿ ಭಾರತೀಯರಾದಾಗ ಇಂತಹ ಒಂದಿಷ್ಟು ಬೋನಸ್‌ಗಳು ಸಿಗುತ್ತವೆ! ಅವರು ಅಮೆರಿಕೆಯಲ್ಲೇ ಇದ್ದ ಕನ್ನಡ ಚಿತ್ರ ವಿತರಕರಾದ ಅಟ್ಲಾಂಟಾ ನಾಗೇಂದ್ರ ಎಂಬುವವರ ಸಂಪರ್ಕ ಕೊಟ್ಟರು. ಕೂಡಲೇ ಅವರಿಗೆ ಕರೆ ಮಾಡಿ ಮಾತಾಡಿದೆ. ಆದರೆ ಆ ವೇಳೆಗೆ ಅವರ ಬಳಿ ಕೆಂಡ ಸಂಪಿಗೆ ಚಿತ್ರದ ಕಾಪಿ ಇನ್ನೂ ಇರಲಿಲ್ಲ. ಶ್ರೀ. ರಮೇಶ ಅರವಿಂದ ನಟಿಸಿದ್ದ “ಪುಷ್ಪಕ ವಿಮಾನ” ಇದೆ, ಚೆನ್ನಾಗಿದೆ ಅಂದರು. ಚಿತ್ರ ಪ್ರದರ್ಶನ ಮಾಡುವ ಉಮೇದಿಯಲ್ಲಿ ಹಿಂದೆ ಮುಂದೆ ಯೋಚಿಸದೆ, ಆಯ್ತು ಕಳಿಸಿ ಅಂದುಬಿಟ್ಟೆ. ಅವರು ಕೊರಿಯರ್ ಮೂಲಕ ಚಿತ್ರದ ಹಾರ್ಡ್ ಡಿಸ್ಕ್ ಕಳಿಸಿಕೊಟ್ಟರು. ಅದಕ್ಕೆ ಇಷ್ಟು ಡಾಲರ್ ಅಂತ ನಾವು ಕೊಡಬೇಕಿತ್ತು.
ಓಮಾಹದ ದೊಡ್ಡ ಚಿತ್ರಮಂದಿರದಲ್ಲಿ ನಿಗದಿತ ದಿನ ಪುಷ್ಪಕ ವಿಮಾನ ದ ಪ್ರದರ್ಶನಕ್ಕೆ ಎಲ್ಲ ಸಿದ್ಧತೆಗಳು ಆಗಿದ್ದವು. ತುಂಬಾ ಜನ ಕನ್ನಡಿಗರು ತಲೆಗೆ ಹತ್ತು ಡಾಲರ್ ಕೊಟ್ಟು ಸಿನೆಮಾ ನೋಡಲು ಬಂದಿದ್ದರು. ನಾನು ನನ್ನದೇ ಚಿತ್ರದ ಪ್ರದರ್ಶನವೇನೋ ಎಂಬಂತೆ ಉತ್ಸಾಹದಲ್ಲಿದ್ದೆ. ಎಲ್ಲವೂ ಸೂಸುತ್ರವಾಗಿ ಶುರು ಆಯ್ತು. ಆದರೆ ಒಂದು ಎಡವಟ್ಟಾಗಿತ್ತು! ನಾನು ಹಳೆಯ, ಕಮಲ್ ಹಾಸನ್ ನಟಿಸಿದ್ದ ಪುಷ್ಪಕ ವಿಮಾನದಂತೆಯೇ ಇದು ಕೂಡ ತಮಾಷೆಯಾಗಿಯೇ ಇರಬಹುದು ಅಂದುಕೊಂಡಿದ್ದೆ. ಆದರೆ ಇದು ಅಪ್ಪ ಮಗಳ ನಡುವೆ ಪ್ರೀತಿ ವಾತ್ಸಲ್ಯದ ಬಗ್ಗೆ ಕೇಂದ್ರಿತವಾಗಿದ್ದು, ಕತೆಯಲ್ಲಿ ಬಹಳಷ್ಟು ಭಾವನಾತ್ಮಕ ಘಟನೆಗಳು ಇದ್ದವು. ಸ್ವಲ್ಪ ಸಮಯದಲ್ಲೇ ಅತ್ತಿತ್ತ ಗಮನಿಸಲು ಶುರು ಮಾಡಿದರೆ ಎಷ್ಟೋ ಹೆಣ್ಣು ಮಕ್ಕಳು ಕಣ್ಣೀರು ಹಾಕಲು ಶುರು ಮಾಡಿದ್ದರು. ಇತ್ತೀಚೆಗಷ್ಟೇ ಅಪ್ಪನನ್ನು ಕಳೆದುಕೊಂಡಿದ್ದ ನನ್ನ ಹೆಂಡತಿ ಕೂಡ ಗೊಳೋ ಅಂತ ಅಳಲು ಶುರು ಮಾಡಿದ್ದಳು. ಒಂದೆರಡು ಕುಟುಂಬಗಳು ಮಧ್ಯದಲ್ಲಿ ಎದ್ದೇ ಹೋಗಿಬಿಟ್ಟರು! ಯಾಕೆ ಎದ್ದು ಹೋದರೂ ಅಂತ ನಂತರ ವಿಚಾರಿಸಿದಾಗ ತಿಳಿದಿದ್ದು, ಅಲ್ಲೊಂದು ದೃಶ್ಯದಲ್ಲಿ ಅಪ್ಪ, ಚಿಕ್ಕ ಹುಡುಗಿಗೆ ಅತ್ಯಾಚಾರ ಮಾಡುವನೇನೋ ಎಂಬಂತೆ ತೋರಿಸಿದ್ದಾರೆ ಎಂಬ ಕಾರಣಕ್ಕೆ! ಕೆಲವೇ ಸೆಕೆಂಡುಗಳ ಆ ದೃಶ್ಯವೇನು ಅತಿರೇಕವಾಗಿ ಇರಲಿಲ್ಲ. ಆದರೂ ಕೆಲವರಿಗೆ ಅದು ಕೋಪ ತರಿಸಿತ್ತು. ಅಮೆರಿಕೆಯಲ್ಲಿ ಮಕ್ಕಳು ಎಂತೆಂತಹ ದೃಶ್ಯಗಳನ್ನು ಸಾರ್ವಜನಿಕವಾಗಿಯೆ ನೋಡುವಂತಹ ವಾತಾವರಣ ಇರುವಾಗ ಕೆಲವರ ಇಂತಹ ಮಡಿವಂತಿಕೆ ನೋಡಿ ಆಶ್ಚರ್ಯ ಆಯ್ತು. ಅಂತೂ ಚಿತ್ರ ಮುಗಿದ ಮೇಲೆ ಹೆಚ್ಚುಕಡಿಮೆ ಎಲ್ಲ ಹೆಣ್ಣುಮಕ್ಕಳು ಕಣ್ಣು ಮೂಗು ವರೆಸುತ್ತಲೇ ಹೊರಗೆ ಬಂದರು.
ಏನ್ ಗುರು ಎಲ್ಲರನ್ನೂ ಅಳಿಸಿ ಬಿಟ್ಟಿರಲ್ಲ.. ಅಂತ ಹಲವರು ಪ್ರೀತಿಯಿಂದ ಬೈದ್ರು. ಇದೆಂತಹ ಸಿನೆಮಾ ತರಿಸಿದ ಅಂತ, ಇನ್ನೂ ಕೆಲವರ ಕಣ್ಣು ಕೋಪದಿಂದಲೂ ಕೆಂಪಾಗಿತ್ತು. ಹಲವಾರು ಚೆನ್ನಾಗಿತ್ತು ಥ್ಯಾಂಕ್ಸ್ ಅಂತಲೂ ಅಭಿನಂದಿಸಿದರು. ಆದರೂ ನಾನು ಕೆಂಡ ಸಂಪಿಗೆ ಸಿನೆಮಾ ತರಿಸಲಿಲ್ಲ ಅಂತ ಚಂದ್ರುಗೆ ತುಂಬಾ ನಿರಾಸೆಯಾಗಿತ್ತು. ಅವತ್ತಿನಿಂದ ಅವನು ನನ್ನನ್ನು “ಕೆಂಡಾ” ಎಂಬ ಅಡ್ಡ ಹೆಸರಿನಿಂದಲೇ ಕರೆಯಲು ಶುರು ಮಾಡಿದ! ಈ ಘಟನೆಯ ಬಳಿಕ “ನಿಂಗಿದು ಬೇಕಿತ್ತಾ ಮಗನೆ.. ” ಎಂಬ ಹಾಡನ್ನು ಗುನುಗುನಿಸಲು ಶುರು ಮಾಡಿದ್ದೆ. ಆದರೂ ಅಮೆರಿಕೆಯಲ್ಲಿ ಸಿನೆಮಾ ಪ್ರದರ್ಶನದ ಸಾಹಸ ಮಾಡಿದ್ದು ಒಂದು ಅದ್ಭುತವಾದ, ಮರೆಯಲಾಗದ ಘಟನೆಯಾಗಿ ಶಾಶ್ವತವಾಗಿ ನನ್ನ ಮನಸ್ಸಿನಲ್ಲಿ ಉಳಿಯುತ್ತದೆ…
(ಮುಂದುವರಿಯುವುದು…)
(ಹಿಂದಿನ ಕಂತು: ಎವರೆಸ್ಟ್‌ನಲ್ಲಿ ಹೃದಯ ಬಡಿತ ನಿಂತಾಗ! )
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
Super ri
ವಿನಯ್, ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು! 🙂
ಸರ್ ನಿಮ್ಮ ಸಿನಿಮಾ ಬಿಡುಗಡೆ ಮತ್ತು ಪ್ರದರ್ಶನದ ನೆನಪಿನ ಪ್ರಸಂಗ ಖುಷಿ ಕೊಟ್ಟಿತು. ಒಟ್ಟಿನಲ್ಲಿ ಅಲ್ಲಿದ್ದರೂ ಇಲ್ಲಿದ್ದರೂ ನಿಮ್ಮದು ಲವಲವಿಕೆಯಿಂದ ಕೂಡಿದ ಬದುಕು.
ಧನ್ಯವಾದಗಳು ಗದಗ್ ಸರ್. 🙂