ದೀಪಾವಳಿ ಸಂದರ್ಭದಲ್ಲಿ ತಿರುಗಾಟ ಆರಂಭಿಸುವ ಕರಾವಳಿಯ ಯಕ್ಷಗಾನ ಮೇಳಗಳು ವೃಷಭ ಮಾಸದ ಹನ್ನೊಂದನೇ ದಿನದಂದು ಅಂದರೆ ಮೇ ತಿಂಗಳಂತ್ಯದಲ್ಲಿ ಪ್ರದರ್ಶನ ಮುಕ್ತಾಯಗೊಳಿಸುತ್ತವೆ. ದೇವಸ್ಥಾನಗಳ ಆಶ್ರಯದಲ್ಲಿ ನಡೆಯುವ ಮೇಳಗಳ ಸಮಾರೋಪವು ಒಂದು ಪುಟ್ಟ ಜಾತ್ರೆಯಂತೆ ವೈಭವಯುತವಾಗಿ ಇರುತ್ತಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಆಚರಣೆಗಳಿಗೆ ಅವಕಾಶವಿಲ್ಲ. ಸಾಂಕೇತಿಕ ಆಚರಣೆಯ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿದ್ದಾರೆ.

‘ದೇವರ ಎದುರೇ ರಂಗಸ್ಥಳ ಹಾಕಿದ್ದರು. ಅಂದರೆ ಸರಿಯಾಗಿ ರಂಗಸ್ಥಳದ ಎದುರು ಕಟೀಲು ದುರ್ಗಾಪರಮೇಶ್ವರಿ ದೇವಿಯ ಗರ್ಭಗುಡಿಯೇ ಕಾಣುತ್ತತ್ತು. ದೇವಿಯೊಬ್ಬಳೇ ಪ್ರೇಕ್ಷಕಿಯಾಗಿ ಕುಳಿತಂತೆ ಭಾಸವಾಗುವಂತೆ ಆ ವಾತಾವರಣವಿತ್ತು… ಆಸ್ತಿಕ ಭಾವದಿಂದ ಯೋಚನೆ ಮಾಡುವುದಾದರೆ ಮಾತ್ರ ಇಂತಹ ಕಲ್ಪನೆಗಳು ಮೂಡುವುದು.’ ಕಟೀಲು ಮೇಳದ ಪ್ರಸಿದ್ಧ ಕಲಾವಿದ ರವಿರಾಜ ಪನೆಯಾಲ ಅವರು ತಮ್ಮ ಅನಿಸಿಕೆ ಹೇಳುತ್ತಿದ್ದರು.

ಲಾಕ್ ಡೌನ್ ವಿಧಿಸಿದ್ದರಿಂದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ವರ್ಷದ ಬೇಸಿಗೆಯ ಕೊನೆಯಲ್ಲಿ ಯಕ್ಷಗಾನ ಪ್ರದರ್ಶನಗಳಿಗೆ ಅವಕಾಶವಿರಲಿಲ್ಲ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಲಿಯ ಆರು ಮೇಳಗಳಿವೆ. ಹೀಗೆ ಶಾಸ್ತ್ರೋಕ್ತವಾಗಿ ನಡೆಯಬೇಕಾದ ‘ಸಮಾರೋಪದ’ ವಿಧಿ ವಿಧಾನಗಳಿಗೆ ಸರ್ಕಾರದ ಅನುಮತಿ ಪಡೆದು, ಎಲ್ಲ ಮೇಳಗಳ ಕೆಲವೇ ಕಲಾವಿದರು ಮಂಗಳವಾರ ರಾತ್ರಿ ದೇವರ ಎದುರು ಪ್ರದರ್ಶನ ನೀಡಿದರು. ಬುಧವಾರ ಮುಂಜಾನೆಯವರೆಗೆ ನಡೆದ ಪ್ರದರ್ಶನದ ಬಳಿಕ ದೇವರ ಎದುರು ಗೆಜ್ಜೆ ಬಿಚ್ಚಿದರು.

(ರವಿರಾಜ ಪನೆಯಾಲ)

ಸಾಮಾನ್ಯವಾಗಿ ದೀಪಾವಳಿಯ ನಂತರ ತಿರುಗಾಟ ಆರಂಭಿಸುವ ಯಕ್ಷಗಾನದ ವಿವಿಧ ಮೇಳಗಳು ಮಳೆಗಾಲಕ್ಕೆ ಮುನ್ನ ತಿರುಗಾಟ ಮುಕ್ತಾಯ ಮಾಡುವುದು ವಾಡಿಕೆ. ವೃಷಭ ಸಂಕ್ರಮಣದ ಹತ್ತನೇ ದಿನದಂದು ಪತ್ತನಾಜೆ(ಹತ್ತನಾದಿ) ಎಂಬ ಆಚರಣೆಯಿದೆ. ಅದರ ಮರುದಿವಸವೇ ಕಟೀಲು ಯಕ್ಷಗಾನ ಮೇಳಗಳ ಸಮಾರೋಪ ಪ್ರದರ್ಶನ ಪ್ರತೀವರ್ಷ ಅದ್ಧೂರಿಯಾಗಿ ನಡೆಯುತ್ತದೆ. ಕರಾವಳಿ ಭಾಗದ ಹೆಚ್ಚಿನ ಯಕ್ಷಗಾನ ಮೇಳಗಳು ಪತ್ತನಾಜೆಯ ನಂತರ ಹೀಗೆ ಸಮಾರೋಪದ ಆಚರಣೆಯನ್ನು ನಡೆಸುವುದುಂಟು.

‘ಕಳೆದ ವರ್ಷವೂ ಸರಳವಾಗಿಯೇ ಪತ್ತನಾಜೆ ಆಚರಣೆ ನಡೆಯಿತು. ಆದರೆ ಕೆಲವೇ ಮಂದಿ ಪ್ರೇಕ್ಷಕರಾದರೂ ಇದ್ದರು. ಆದರೆ ಈ ಬಾರಿ ಯಾರೊಬ್ಬರೂ ಪ್ರೇಕ್ಷಕರಿರಲಿಲ್ಲ.. ಯಕ್ಷಗಾನದ ಇತಿಹಾಸದಲ್ಲಿಯೇ ಇಂತಹ ಸಂದರ್ಭ ಎದುರಾಗಿಲ್ಲ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನಂದಿನಿ ನದಿಯ ಮಧ್ಯೆ ಇದೆ. ಹಾಗಾಗಿ ರಂಗಸ್ಥಳದಲ್ಲಿ ಅರ್ಥಗಾರಿಕೆ ಹೇಳುವಾಗ, ನದಿಯಲ್ಲಿ ಬೊಬ್ಬಿರಿಯುತ್ತ ಹರಿಯುವ ನೀರಿನ ಧ್ವನಿ ಕೇಳುತ್ತಿತ್ತು. ರಾತ್ರಿಯಾದಂತೆ ಶ್ರುತಿ ಪೆಟ್ಟಿಗೆಯ ಧ್ವನಿಯ ನಡುವೆ ಜೀರುಂಡೆಯ ಸದ್ದು ಕೂಡ ಆಗೀಗ ಕಿವಿಗೆ ಬೀಳುತ್ತಿತ್ತು. ‘ಅಮ್ಮ’ನೊಬ್ಬಳೇ ಕುಳಿತು ಯಕ್ಷಗಾನ ಪ್ರದರ್ಶನ ನೋಡುತ್ತಿದ್ದಾಳೆ ಎಂಬ ಭಾವ ಬರುವಂತಹ ಪೂರಕ ವಾತಾವರಣ ಇದ್ದದ್ದು ಹೌದು..’ ಎನ್ನುವ ಪನೆಯಾಲರು ಮತ್ತೊಂದು ಮಾತು ಸೇರಿಸುತ್ತಾರೆ. ‘ಯಕ್ಷಗಾನದ ಮಾತು ಹಾಗಿರಲಿ, ಕಟೀಲು ದೇವಸ್ಥಾನದ ರಥಬೀದಿಯೇ ಇಷ್ಟೊಂದು ನಿರ್ಜನವಾಗಿರುವುದನ್ನು ನಾನು ನೋಡಿದ್ದಿಲ್ಲ..’

ಲಾಕ್ ಡೌನ್ ಇಲ್ಲದೇ ಇರುತ್ತಿದ್ದರೆ, ಸಮಾರೋಪ ದಿನದ ಪ್ರದರ್ಶನ ವೈಭವ ನೋಡುವುದಕ್ಕೆ ಬಲು ಚಂದ. ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಆರು ಮೇಳಗಳೂ ದೇವಸ್ಥಾನದ ಎದುರು ಸಾಲಾಗಿ ರಂಗಸ್ಥಳ ಹಾಕಿ, ವರ್ಷದ ಕೊನೆಯ ಸೇವೆಯನ್ನು ಸಲ್ಲಿಸುತ್ತಾರೆ. ಯಕ್ಷಗಾನ ಪ್ರದರ್ಶನದ ದೃಶ್ಯಗಳಿಗಿಂತಲೂ ಆ ದಿನವಿಡೀ ಕಟೀಲು ದೇವಸ್ಥಾನದ ಆವರಣಲ್ಲಿ, ರಥಬೀದಿಯಲ್ಲಿ ಕಾಣಿಸುವ ದೃಶ್ಯಗಳೇ ಬಹಳ ಜೀವನ್ಮುಖಿಯಾಗಿ ಇರುತ್ತಿದ್ದವು. ತಮ್ಮ ಕುಟುಂಬಿಕರೊಡನೆ ಬರುವ ಕಲಾವಿದರು ದೇವರಿಗೆ ಸೇವೆ ಸಲ್ಲಿಸುವುದು ಒಂದೆಡೆಯಾದರೆ, ಜಾತ್ರೆಯಂತಹ ಆ ಬೀದಿಯಲ್ಲಿ ಪುಟ್ಟ ಶಾಪಿಂಗ್ ನ ಖುಷಿ, ಮಕ್ಕಳಿಗೆ ಆಟಿಕೆ ಕೊಡಿಸುವ, ಮಹಿಳೆಯರು ಬಳೆ ತೊಡುವ, ಹಿರಿಯ ಕಲಾವಿದರೊಂದಿಗೆ ಕಿರಿಯ ಕಲಾವಿದರ ಭೇಟಿ, ತಮ್ಮ ಮನೆಯಲ್ಲಿ ನಡೆದ ಪ್ರದರ್ಶನದಲ್ಲಿ ಮನಮುಟ್ಟುವಂತೆ ಪಾತ್ರ ನಿರ್ವಹಿಸಿದ ಕಲಾವಿದರನ್ನು ಮಾತನಾಡಿಸುವ ಸೇವಾಕರ್ತರು, ಸೆಲ್ಫಿ ತೆಗೆದುಕೊಳ್ಳುವ ಕಲಾವಿದರ ಅಭಿಮಾನಿ ವೃಂದ, ಲೋಕಾಭಿರಾಮ ಮಾತುಕತೆ, ‘ಒಂದು ಚಾ ಕುಡಿವಾ..ಬನ್ನಿ..’ ಎನ್ನುತ್ತ ವೀಳ್ಯ ಜಗಿಯುತ್ತ ರಂಗದ ಮೇಲಿನ ಪಾತ್ರಗಳ ಬಗ್ಗೆ ಶುರುವಾಗುವ ಚರ್ಚೆ, ಮಳೆಗಾಲದ ದಿನಗಳನ್ನು ಎದುರಿಸುವುದು ಹೇಗೆ ಎಂಬ ಮಾತುಗಳ ವಿನಿಯಮ….-ಈ ಎರಡು ವರ್ಷಗಳಲ್ಲಿ ಈ ಚಿತ್ರಗಳೆಲ್ಲವೂ ಪಟದಿಂದ ಅಳಿಸಿಹೋಗಿವೆ.

(ಸುಣ್ಣಂಬಳ ವಿಶ್ವೇಶ್ವರ ಭಟ್)

ಇಡೀ ರಾತ್ರಿ ನಡೆಯುವ ಯಕ್ಷಗಾನವನ್ನು ನೋಡುವುದಕ್ಕೆ ಕಟೀಲು ದುರ್ಗಾಪರಮೇಶ್ವರಿ ದೇವಿ ಬರುತ್ತಾಳೆ ಎಂಬ ನಂಬಿಕೆ, ಕಟೀಲು ಮೇಳದ ಯಕ್ಷಗಾನ ಸೇವೆಯಾಟ ನಡೆಸುವ ಭಕ್ತರಲ್ಲಿದೆ. ದೇವಿಯು ಯಕ್ಷಗಾನ ಪ್ರದರ್ಶನ ಪ್ರಿಯೆ. ದೇವರೇ ಬರುತ್ತಾರೆ ಎಂಬ ನಂಬಿಕೆಯಿಂದಲೇ ಭಕ್ತರು ಪ್ರದರ್ಶನವನ್ನೂ ಕೈಮೀರಿ ವೈಭವದಿಂದ ಆಯೋಜಿಸುತ್ತಾರೆ. ಕಲಾವಿದರೂ,ದೇವರಿಗೆ ಸೇವೆ ಸಲ್ಲಿಸುವ ಮನಸ್ಥಿತಿಯಲ್ಲಿಯೇ ಪ್ರದರ್ಶನ ನೀಡುತ್ತಾರೆ.

ಬಹುಶಃ ವೈಭವದ ಸದ್ದಿನ ನಡುವೆ ಪ್ರಶಾಂತ ಪ್ರದರ್ಶನವೊಂದನ್ನು ನೋಡಬೇಕೆಂದು ದೇವರಿಗೆ ಅನಿಸಿತೇ ? ಗೊತ್ತಿಲ್ಲ. ಈಗ ಸುತ್ತಲಿನ ಪರಿಸ್ಥಿತಿಯಲ್ಲಿ ಬೇಸರವು ಕತ್ತಲಿಗಿಂತ ಗಾಢವಾಗಿ ಹೆಪ್ಪುಗಟ್ಟಿದೆ.

ಸಮಾರೋಪದಂದು ಅಂದರೆ ಮಂಗಳವಾರ ರಾತ್ರಿ ಕಟೀಲು ದೇವಸ್ಥಾನದ ಪ್ರಾಂಗಣದಲ್ಲಿ ಪ್ರಹ್ಲಾದ ಚರಿತ್ರೆ, ದ್ರೌಪದೀ ಸ್ವಯಂವರ, ಸುಭದ್ರ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಕಟೀಲು ದೇವಸ್ಥಾನಕ್ಕೆ ಸಮೀಪ ಇರುವ ಕಲಾವಿದರನ್ನು ಆಹ್ವಾನಿಸಿ ಪಾತ್ರ ಹಂಚಿಕೆ ಮಾಡಲಾಗಿತ್ತು. ಆರು ಮೇಳಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಕಲಾವಿದರು ಇದ್ದಾರೆ. ಆದರೆ ಈ ಪ್ರದರ್ಶನದಲ್ಲಿ ಅವಕಾಶ ದೊರೆತುದು ಕೇವಲ 60 ಜನರಿಗೆ ಮತ್ತು ಬೆರಳೆಣಿಕೆಯ ಅರ್ಚಕವರ್ಗದವರಿಗೆ. ಹಲವಾರು ಮಂದಿ ಕಲಾವಿದರು, ‘ಹೇಗಾದರೂ ಪ್ರಯತ್ನಿಸಿ ನಾನೂ ಸೇವೆ ಸಲ್ಲಿಸಲು ಬರಲೇ..’ ಎಂದು ಕೇಳಿಕೊಂಡಿದ್ದರು. ದೇವಿಯ ಚರಣದಲ್ಲಿಈ ಬಾರಿ ಸಮಾರೋಪದ ಸೇವೆ ಸಲ್ಲಿಸುವುದು ಸಾಧ್ಯವಾಗಲಿಲ್ಲವಲ್ಲ ಎಂಬ ಬೇಸರವೂ ಕಲಾವಿದರಲ್ಲಿದೆ.

ಭಾಗವತರಾದ ಪ್ರಸಾದ್ ಬಲಿಪ ಅವರು ‘ಪ್ರದರ್ಶನದಲ್ಲಿ ಸೇವೆ ಸಲ್ಲಿಸುವುದು ಸಾಧ್ಯವಾಗಲೇ ಇಲ್ಲ. ಸಮಾರೋಪದ ಪ್ರದರ್ಶನಕ್ಕೆ ಹೋಗಲಾಗದ ಪರಿಸ್ಥಿತಿ ಇದೇ ಮೊದಲ ಬಾರಿಗೆ ಎದುರಾಗಿರುವುದು. ಈ ಕೆಟ್ಟ ದಿನಗಳು ಬಹಳ ಬೇಗನೇ ಮುಗಿಯಲಿ ಎಂದು ಬೇಡಿಕೊಳ್ಳುತ್ತಿದ್ದೇನೆ’ ಎಂದು ಬೇಸರದಿಂದ ನುಡಿದರು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನಂದಿನಿ ನದಿಯ ಮಧ್ಯೆ ಇದೆ. ಹಾಗಾಗಿ ರಂಗಸ್ಥಳದಲ್ಲಿ ಅರ್ಥಗಾರಿಕೆ ಹೇಳುವಾಗ, ನದಿಯಲ್ಲಿ ಬೊಬ್ಬಿರಿಯುತ್ತ ಹರಿಯುವ ನೀರಿನ ಧ್ವನಿ ಕೇಳುತ್ತಿತ್ತು. ರಾತ್ರಿಯಾದಂತೆ ಶ್ರುತಿ ಪೆಟ್ಟಿಗೆಯ ಧ್ವನಿಯ ನಡುವೆ ಜೀರುಂಡೆಯ ಸದ್ದು ಕೂಡ ಆಗೀಗ ಕಿವಿಗೆ ಬೀಳುತ್ತಿತ್ತು.

‘ಸಾಮಾಜಿಕ ಪರಿಸ್ಥಿತಿಯು ಇಷ್ಟೊಂದು ಬಿಗಡಾಯಿಸಿರುವ ಕುರಿತು ಕಲಾವಿದರಲ್ಲಿ ಬೇಸರವಿರುವುದು ನಿಜ. ಸಮಾರೋಪ ಪ್ರದರ್ಶನದ ಸಂಭ್ರಮವನ್ನೂ ಅವರೆಲ್ಲ ನೆನಪಿಸಿಕೊಳ್ಳುತ್ತಿರುವುದೂ ನಿಜ. ಆದರೆ ಪ್ರೇಕ್ಷಕರಿಲ್ಲ ಎಂಬಕಾರಣಕ್ಕೆ ಯಾವುದೇ ಕಲಾವಿದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಲಾರ’ ಎಂದು ಹೇಳುತ್ತಾರೆ ಹಿರಿಯ ಕಲಾವಿದರೂ ಆಗಿರುವ, ಕಟೀಲು ಐದನೇ ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್.

(ಪ್ರಸಾದ್‌ ಬಲಿಪ)

‘ಯಾಕೆಂದರೆ ಎಷ್ಟೋ ಪ್ರದರ್ಶನಗಳಲ್ಲಿ ತಡರಾತ್ರಿಯ ನಂತರ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುತ್ತದೆ. ನಾಲ್ಕೈದು ಮಂದಿ ಪ್ರೇಕ್ಷಕರಿಗೂ ಅದೇ ಹುಮ್ಮಸ್ಸಿನಿಂದ ಕಲಾವಿದರು ಕಥೆಯನ್ನು ಪ್ರಸ್ತುತಪಡಿಸುತ್ತಾರೆ. ಮಳೆ ಬಂದಾಗ, ದೇವಿಯ ಸೇವೆ ನಿಲ್ಲಬಾರದು ಎಂಬ ಕಾರಣಕ್ಕೆ ಮನೆಯ ಚಾವಡಿಯಲ್ಲಿ ಪ್ರದರ್ಶನ ಮುಂದುವರೆಸಿದ್ದುಂಟು. ಕಟೀಲು ದೇವಸ್ಥಾನದ ಆವರಣದಲ್ಲಿಯೇ ಕೆಲವೊಮ್ಮೆ ಒಂದೇ ರಾತ್ರಿ ಎರಡು ಕಡೆ ಪ್ರದರ್ಶನ ನಡೆದಿದೆ. ಆಟವು ದೇವರಿಗೆ ಸಲ್ಲಿಸುವ ಸೇವೆ ಎಂಬ ಭಾವದಿಂದಲೇ ಮೇಳದ ಎಲ್ಲ ಕಲಾವಿದರೂ ಪ್ರದರ್ಶನ ನೀಡುವುದರಿಂದ, ಅವರ ಪ್ರಸ್ತುತಿ, ಪ್ರೇಕ್ಷಕರ ಸಂಖ್ಯೆಯನ್ನು ಆಧರಿಸಿದಂತೆ
ಆದರೆ ಸಾಮಾಜಿಕ ಪರಿಸ್ಥಿತಿ ಇಷ್ಟೊಂದು ಖಿನ್ನವಾಗಿದೆಯಲ್ಲ ಎಂಬ ನೋವೊಂದು ಎಲ್ಲರಲ್ಲೂ ಇದ್ದೇ ಇದೆ. ಪ್ರತೀ ಆಟವೂ ‘ಕೆಡುಕನ್ನೂ ಕಳೆದು ಒಳಿತನ್ನು ಕರುಣಿಸಮ್ಮಾ ತಾಯಿ..’ ಎಂಬ ಪ್ರಾರ್ಥನೆಯೊಂದನ್ನು ಒಳಗೊಂಡಿರುತ್ತದೆ. ಈ ಬಾರಿಯ ಸಮಾರೋಪ ಪ್ರದರ್ಶನದಲ್ಲಂತೂ ಎಲ್ಲ ಕಲಾವಿದರ ಭಾವವೂ ಅದೇ ರೀತಿಯಾಗಿತ್ತು’ ಎಂದು ಅವರು ವಿವರಿಸುತ್ತಾರೆ.

ಅವರ ಪ್ರಕಾರ, ವ್ಯಾವಹಾರಿಕವಾಗಿ ನೋಡುವುದಾದರೆ, ಪ್ರದರ್ಶನವು ಸ್ಥಳೀಯ ವಾಹಿನಿಗಳಲ್ಲಿ ನೇರಪ್ರಸಾರ ಆಗುತ್ತಿದ್ದುದರಿಂದ, ಪ್ರಸಂಗದ ಕತೆಯನ್ನು ಪರೋಕ್ಷವಾಗಿ ಪ್ರೇಕ್ಷಕರು ನೋಡುತ್ತಿದ್ದರು. ರಾತ್ರಿ 9 ಗಂಟೆಗೆ ಪ್ರದರ್ಶನ ಆರಂಭವಾದಾಗ ಸುಮಾರು 1400 ಮಂದಿ ಪ್ರೇಕ್ಷಕರು ವಾಹಿನಿಯಲ್ಲಿ ವೀಕ್ಷಿಸುತ್ತಿದ್ದ ಮಾಹಿತಿ ಇದೆ. ಪ್ರದರ್ಶನದ ದಾಖಲೀಕರಣ ಆಗಿರುವುದರಿಂದ ಈ ಆಟವನ್ನು ಕಲಾಭಿಮಾನಿಗಳು ಮತ್ತೆ ಮತ್ತೆ ನೋಡುವ ಅವಕಾಶವಿದೆ. ಆದರೆ ಗರ್ಭಗುಡಿಯ ಎದುರೇ ಹಾಕಿದ್ದ ರಂಗಸ್ಥಳದ ಎದುರು ಪ್ರದರ್ಶನ ನೀಡುವ ಸಂದರ್ಭದಲ್ಲಿ ಕಲಾವಿದರ ಎದೆಯಲ್ಲಿ ಪುಳಕವೋ, ಭಕ್ತಿಯೋ, ಶರಣಾಗತಿಯ ಭಾವವೋ ಮೂಡುವ ವಾತಾವರಣ ಅಲ್ಲಿತ್ತು ಎಂಬುದು ಸತ್ಯ.

ಕೊರೊನಾ ಜಾಗತಿಕ ಸೋಂಕಿನ ಭರಾಟೆಯಲ್ಲಿ ಕರಾವಳಿ ಯಕ್ಷಗಾನ ಮೇಳಗಳಿಗೆ 2020 ಮತ್ತು 2021ನೇ ಸಾಲಿನಲ್ಲಿ ಪ್ರದರ್ಶನಗಳಿಗೆ ಸಾಕಷ್ಟು ಅವಕಾಶಗಳು ಸಿಕ್ಕಿಲ್ಲ. ದೇವಸ್ಥಾನಗಳ ಬೆಂಬಲ ಇರುವ ಕೆಲವು ಮೇಳಗಳು ಕಲಾವಿದರಿಗೆ ವೇತನ ನೀಡುವುದಷ್ಟೇ ಸಾಧ್ಯವಾಗಿದೆ. ಕಲಾವಿದರಿಗೆ ಗೌರವಾದರಗಳ ನೆಪದಲ್ಲಿ ದೊರೆಯುವ ಬೆಂಬಲ, ಸನ್ಮಾನ, ಆರ್ಥಿಕ ಪ್ರೋತ್ಸಾಹಗಳು ದೊರೆಯುತ್ತಿಲ್ಲ. ಸಂಘ ಸಂಸ್ಥೆಗಳು ಕೆಲವೆಡೆ ಸಹಾಯ ನೀಡಿವೆ. ಸರ್ಕಾರವೂ ಸಹಾಯ ನೀಡುವುದಾಗಿ ಹೇಳಿದೆ.

ಎಲ್ಲವೂ ಸುರಳೀತವಾಗಿದ್ದಾಗ, ಕರಾವಳಿ ಭಾಗದಲ್ಲಿ 40ಕ್ಕೂ ಹೆಚ್ಚು ಮೇಳಗಳು ನಿರಂತರ ಪ್ರದರ್ಶನಗಳನ್ನು ನೀಡುತ್ತಿದ್ದವು. ದೀಪಾವಳಿಗೆ ತಿರುಗಾಟ ಹೊರಡುವ ಮೇಳಗಳು ಪತ್ತನಾಜೆಯವರೆಗೆ ಲಭ್ಯವಾಗುವ ಸುಮಾರು 160 ದಿನಗಳಲ್ಲಿ 6,400ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡುತ್ತವೆ. ಇದಲ್ಲದೆ ಹವ್ಯಾಸಿ ಸಂಘಟನೆಗಳೂ ಯಕ್ಷಗಾನ ಪ್ರದರ್ಶಿಸುತ್ತವೆ. ಒಂದು ಪ್ರದರ್ಶನಕ್ಕೆ ವೀಳ್ಯ 50 ಸಾವಿರದಿಂದ 80 ಸಾವಿರ ರೂಪಾಯಿ ವೀಳ್ಯ ನಿಗದಿಯಾಗುವುದುಂಟು. ಸೇವಾಕರ್ತರ ಆಸಕ್ತಿಗೆ ತಕ್ಕಂತೆ ಇತರ ಖರ್ಚುಗಳು ಸೇರಿಕೊಳ್ಳುತ್ತವೆ. ಅಂದರೆ ಈ ಕ್ಷೇತ್ರದಲ್ಲಿ ವಾರ್ಷಿಕ ಅಂದಾಜು ವಹಿವಾಟು ₹ 320 ಕೋಟಿಯಷ್ಟು ನಡೆಯುತ್ತಿತ್ತು ಎನ್ನಲಡ್ಡಿಯಿಲ್ಲ. 10 ಸಾವಿರಕ್ಕೂ ಹೆಚ್ಚು ಮಂದಿ ಕಲಾವಿದರು ದುಡಿಯುವ ಕ್ಷೇತ್ರವಿದು.

ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಪುಟಾಣಿ ಮಕ್ಕಳೆಲ್ಲ ಸೇರಿ ಒಂದು ಪ್ರದರ್ಶನವೇರ್ಪಡಿಸಿದ್ದರು. ದೇವಿಮಹಾತ್ಮ್ಯೆ ಪ್ರಸಂಗದಲ್ಲಿ ಮಹಿಷಾಸುರ ವಧೆಯ ಸಂದರ್ಭವನ್ನು ಆಧರಿಸಿ ಮರರೂಪಿಸಿದ ಒಂದು ಸ್ಕಿಟ್ ಅದು.ಅದರ ಹೂರಣ ಹೀಗಿದೆ:

ಸೃಷ್ಟಿಕರ್ತ ಬ್ರಹ್ಮ, ಸೃಷ್ಟಿಪಾಲಕ ದೇವರಾದ ವಿಷ್ಣು ಮತ್ತು ಲಯಕಾರಕನಾದ ಮಹೇಶ್ವರ ಮತ್ತು ದೇವತೆಗಳು ಒಂದೆಡೆ ಚಿಂತಾಕ್ರಾಂತರಾಗಿ ಕುಳಿತಿರುತ್ತಾರೆ. ತಾಯಿ ಆದಿಮಾಯೆಯು ಮಹಿಷಾಸುರ, ಚಂಡಮುಂಡ ರಾಕ್ಷಸರು, ಧೂಮ್ರಾಕ್ಷ, ರಕ್ತಬೀಜ, ಶುಂಭ ನಿಶುಂಭರ ನ್ನು ಸಂಹಾರ ಮಾಡಿ ಒದಗಿದ ಎಷ್ಟೋ ಸಂಕಷ್ಟಗಳನ್ನುದೂರ ಮಾಡಿದ್ದಾಳೆ. ಆದರೆ ಈಗ ಬಂದಿರುವ ಸೋಂಕು, ಮತ್ತೆ ಸೃಷ್ಟಿಯನ್ನು ಬಾಧಿಸುತ್ತಿದೆ ಎನ್ನುತ್ತ ಮಾತನಾಡಿಕೊಳ್ಳುವರು. ಇದೀಗ ಮತ್ತೊಮ್ಮೆ ದೇವಿಯ ಮೊರೆಹೋಗುವ ಅನಿವಾರ್ಯತೆ ಎದುರಾಗಿದೆ ಎನ್ನುತ್ತ, ತ್ರಿಮೂರ್ತಿಗಳು ಏಕಮನಸ್ಸಿನಿಂದ ದೇವಿಯನ್ನು ಸ್ತುತಿಸುತ್ತಾರೆ. ತ್ರಿಮೂರ್ತಿಗಳ ನೇತೃತ್ವದಲ್ಲಿ ದೇವತೆಗಳೆಲ್ಲ ಸೇರಿ ನಡೆಸಿದ ಸ್ತುತಿಗೆ ದೇವಿಯು ಒಲಿದು ಪ್ರತ್ಯಕ್ಷಳಾಗುವಳು. ‘ನನ್ನನ್ನು ಸಾಕ್ಷಾತ್ಕರಿಸಿಕೊಂಡ ಕಾರಣವೇನು?’ ಎಂದು ಪ್ರಶ್ನಿಸುತ್ತಾಳೆ.

‘ಭೂಮಿಯಲ್ಲಿ ಸೋಂಕಿನ ಕಾರಣದಿಂದ ಮಕ್ಕಳಿಗೆ ವಿದ್ಯೆ ದೊರೆಯುತ್ತಿಲ್ಲ. ವೃದ್ಧರು, ಹಿರಿಯರು, ಸಜ್ಜನರು ಬಳಲುವಂತಾಗಿದೆ. ಪೂಜಾಸ್ಥಾನಗಳಲ್ಲಿ ಆರಾಧನೆಗಳು ನಡೆಯುತ್ತಿಲ್ಲ.ಜಗತ್ತೇ ಚಲನೆಯನ್ನು ನಿಧಾನಗೊಳಿಸಿದ್ದು, ಬಹಳ ಆತಂಕವಾಗಿದೆಯಮ್ಮಾ ’ ಎಂಬ ದೂರನ್ನು ತ್ರಿಮೂರ್ತಿಗಳು ದೇವಿಯ ಬಳಿ ಅರಿಕೆ ಮಾಡುತ್ತಾರೆ.

ಆಗ ದೇವಿ ನೀಡುವ ಉತ್ತರ ಮನೋಜ್ಞವಾಗಿದೆ: ‘ ಸೃಷ್ಟಿಯಲ್ಲಿಕ್ರಿಮಿ ಕೀಟಾದಿಗಳಿಂದ ಹಿಡಿದು, ಪ್ರಾಣಿ, ಮನುಷ್ಯ ವರ್ಗದವರೆಗೆ ಯಾವುದೂ ಕೀಳಲ್ಲ- ಮೇಲಲ್ಲ. ಆದರೆ ಮನುಷ್ಯ ವರ್ಗ ಮಾತ್ರ ತಾನೇ ಮೇಲೆಂದು ಭ್ರಮಿಸಿ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ. ಆದ್ದರಿಂದ ಬಹಿರಂಗದ ಆಡಂಬರದಿಂದ ದೂರವಿದ್ದು, ಮನುಷ್ಯರು ಅಂತರಂಗದ ಕಡೆಗೆ ಮುಖಮಾಡಬೇಕು. ಆಚರಣೆಗಳು, ಸಂಭ್ರಮಗಳಿಗೆ ಅಲ್ಪವಿರಾಮವಿರಿಸಿ, ಮನೆಯೊಳಗೇ ಇದ್ದು ಮನಸ್ಸಿನೊಡನೆ ಮಾತನಾಡಬೇಕು. ಸೃಷ್ಟಿಕ್ರಿಯೆಯಲ್ಲಿ ಯಾವುದೂ ಮೇಲಲ್ಲ ,ಯಾವುದೂ ಕೀಳಲ್ಲ ಎಂಬ ವಿಚಾರ ಮನುಷ್ಯವರ್ಗಕ್ಕೆ ಎಂದು ಅರಿವಾಗುವುದೋ, ಅಂದು ಈ ಸೋಂಕು ತಾನಾಗಿಯೇ ಭೂಮಿಯಿಂದ ಮಾಯವಾಗುವುದು. ಈ ವಿಚಾರದ ಕುರಿತು ಮನುಷ್ಯವರ್ಗದಲ್ಲಿ ಅರಿವನ್ನು ಮೂಡಿಸುವ ಕೆಲಸ ನಿಮ್ಮಿಂದ ನಡೆಯಬೇಕಾಗಿದೆ’ ಎಂದು ಹೇಳುವ ದೇವಿ, ಅಭಯ ನೀಡಿ ಅಂತರ್ಧಾನಳಾಗುತ್ತಾಳೆ.

ಹೌದು. ಕಲಾಪ್ರಕಾರ ಯಾವುದೇ ಇರಲಿ, ಅವುಗಳಿಗೆ ಮನುಷ್ಯನ ಅಂತರಂಗದ ಕದತಟ್ಟುವ ಸಾಮರ್ಥ್ಯವಿದೆ.