ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ.
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಅಶೋಕ ಪವಾರರ ಆತ್ಮಕತೆ “ಬಿಡಾರ”

ಒಂದು ದಿನ ರಾತ್ರಿ ಮುದುಕನ ಮೈಯಾಗ ದೇವರು ಬಂತು. ಅಂವಾ ಕಾನ್ಹೂ ಸತಿಮಾತೆಯ ಮಾಲೀದಾ ಪ್ರಸಾದ ಮಾಡಾಕ ಹೇಳಿದ. ಕಾನ್ಹೂ ಸತಿಮಾತೆ ಬೇಲದಾರರ ಕುಲದೇವತೆ. ಬೇಲದಾರರು ಈ ದೇವತೆಗೆ ಶ್ರದ್ಧೆಯಿಂದ ನಡಕೊಳ್ತಾರೆ. ಸಂಕಟ ಬಂದಾಗಲೆಲ್ಲ ಈ ಮಂದಿ ಸತೀ ಮಾತೆಗೇ ಮಾಲೀದಾದಿಂದ ಮಾಡಿದ ನೇವೇದ್ಯ ತೋರಿಸ್ತಾರು. ಆವಾಗ ಆ ದೇವಿ ದುಃಖ ನಿವಾರಣೆ ಮಾಡ್ತಾಳು. ಬೇಲದಾರರಿಗೆ ಕೆಲಸ ಸಿಗದಿದ್ದರ, ಆಕಿಗೆ ನೇವೇದ್ಯ ತೋರಿಸಿದರ, ಆಕಿ ಆಶೀರ್ವಾದದಿಂದ ಕೆಲಸ ಸಿಗತಿತ್ತು. ಮುದುಕ ಶೆರಿ ಕುಡಿದ ದಿನಾ ಸತೀಮಾತೆಯ ಕಥಿ ಹೇಳತಿದ್ದ. ಆ ಕಥಿ ಹಿಂಗದ – ‘ಇದು ನಾನೂರು ವರುಷದ ಹಿಂದಿನ ಕಥಿ. ಬುಲ್ಡಾಣಾ ಜಿಲ್ಲೆಯ ಪಾನ್ಹೋರಾ ಎಂಬ ಹಳ್ಳಿಯೊಳಗ 20-25 ಬೇಲದಾರರ ಬಿಡಾರ ಇಳಿದಿತ್ತು. ಒಂದು ದಿನ ಬೇಲದಾರ ಜನರ ಜಾತಿ ಪಂಚಾಯತಿ ಸೇರಿತು. ಆವತ್ತು ಮದವಿ ಮಾಡೋದು, ಮದವಿ ಮುರಿಯೋದು ಎಲ್ಲ ನಡೀತದ. ಪಂಚರು ಗ್ಲಾಸ ಮ್ಯಾಲೆ ಗ್ಲಾಸ ಶೆರಿ ಕುಡಿತಿದ್ದರು. ಒಬ್ಬ ಬೇಲದಾರರ ಪೋರಿ ನೋಡಾಕ ಭಾಳ ಚೆಂದ ಇದ್ಲು. ಆಕಿ ಹೆಸರು ಕಾನ್ಹೂ. ಪೇನೆಖಾನೆ ಎಂಬ ಬೇಲದಾರ ಯುವಕನ ಜೋಡಿ ಕಾನ್ಹೂಳ ಲಗ್ನ ನಿಕ್ಕಿಯಾತು. ಆ ಯುವಕನಿಗೆ ರಗುತ ವಾಂತಿ ಮಾಡಿಕೊಳ್ಳೊ ರೋಗಯಿತ್ತು. ಈ ವಿಷಯ ಕಾನ್ಹೂಳ ತಾಯಿ ತಂದಿಗೆ ಗೊತ್ತಾತ. ಅವರು ಈ ಲಗ್ನಕ್ಕೆ ಒಪ್ಪಿಗೆ ಕೊಡಲಿಲ್ಲ. ಆಗ ಆ ಯುವಕನ ಅಪ್ಪ ಜಾತಿ ಪಂಚಾಯತಿ ಕರೆದ. ನಮ್ಮ ಮಂದ್ಯಾಗ ಪಂಚರ ಮುಂದ ಒಮ್ಮಿ ಮಾತು ಕೊಟ್ಟಿರಿ ಅಂದರ ಬದಲಾಯಿಸಾಂಗಿಲ್ಲ. ಜಾತಿ ಪಂಚಾಯತಿಯೇ ಈ ಲಗ್ನ ನಿಕ್ಕಿ ಮಾಡಿತ್ತು. ಹಿಂಗಾಗಿ ಅವರು ಮದವಿ ಮಾಡಿದರು.

(ಅಶೋಕ ಪವಾರ)

ಕಾನ್ಹೂ ಗಂಡನ ಮನಿಗೆ ಹೋದ್ಲು. ಒಂದೆರಡು ತಿಂಗಳು ಕಳೆಯಿತು. ಕಾನ್ಹೂಳ ಸಂಸಾರ ನಡೀತು. ಆದರ ಆಕಿ ಗಂಡನ ರೋಗ ಹೆಚ್ಚಾಯಿತು. ಅಂವಾ ಹಾಸಿಗಿನೇ ಹಿಡಿದ. ಅನ್ನ ನೀರು ಬಿಟ್ಟ. ಮೈ ಸೊರಗಿ ಕಡ್ಡಿ ಹಾಂಗಾತು. ಜೀವಾ ಒದ್ದಾಡಾಕ ಹತ್ತಿತು. ಆಗ ಕಾನ್ಹೂ ಸ್ವತಃ ದುಡಿದು ಗಂಡನನ್ನು ಸಾಕಿದ್ಲು. ಗಂಡನ ಸೇವೆ ಮಾಡಿದ್ಲು. ಮತ್ತ ಒಂದೆರಡು ತಿಂಗಳು ಕಳೀತು. ಹಾಸಿಗ್ಯಾಗ ಮಲಗಿ-ಮಲಗಿ ಅವನ ದೇಹ ಕೊಳೀತು. ಹುಳಾ ಹತ್ತಿತು. ಹಾಸಿಗಿ ಮ್ಯಾಲೇ ಉಚ್ಚಿ-ಹೇಲು. ಆಕಿನೇ ಗಂಡನ ಉಚ್ಚಿ ಹೇಲು ಬಳಿತಿದ್ಲು. ಎಷ್ಟೋ ದ್ಯಾವರು – ದೇವರ್ಸಿಗಳಾದರು. ಬೂದಿ-ವಿಭೂತಿ, ಭಸ್ಮ ಎಲ್ಲ ಹಚ್ಚಿ ನೋಡಿದರು. ಆದರೆ ಕಾನ್ಹೂನ ಗಂಡ ಮಾತ್ರ ನೆಟ್ಟಿಗಾಗಲಿಲ್ಲ. ಅಂತೂ ಕೊನೆಗೊಂದು ದಿನಾ ಅಂವಾ ಸತ್ತ. ಅವನ ಹೆಣದ ಸುತ್ತಲೂ ಕುಂತು ಎಲ್ಲರೂ ಬೊಬ್ಬೆ ಹೊಡೆದು ಅತ್ತರು. ಅತ್ತಿ-ಮಾವ ಕಾನ್ಹೂಳಿಗೇ ಬಯ್ಯಾಕ ಹತ್ತಿದರು. ಈ ಪೋರಿ ಕೆಟ್ಟ ಕಾಲ್ಗುಣದಾಕಿ. ಆಕಿಯಿಂದಾನೇ ನನ್ನ ಮಗ ಸತ್ತ. ಆಕಿ ಈಗ ಗಂಡನ್ನ ನುಂಗಿ ಕುಂತಾಳು. ಕಾನ್ಹೂ ಹರೇದಾಗ ರಂಡಿಯಾದ್ಲು. ಸುತ್ತಮುತ್ತ ಹಳ್ಳಿಯೊಳಗ ಬಿಡಾರ ಮಾಡಿಕೊಂಡಿದ್ದ ಎಲ್ಲ ಬೇಲದಾರ ಮಂದಿ ಮಣ್ಣಿಗೆ ಬಂದರು. ಕಟ್ಟಿಗಿ ತಂದರು. ಊರ ಹೊರಗ ಆಗಸಿ ಹತ್ತರ ತಂದರು. ಅಲ್ಲಿ ಚಿತೆ ತಯಾರ ಮಾಡಿದರು.

ಕಾನ್ಹೂಳ ಗಂಡನಿಗೆ ಜಳಕ ಹಾಕಿದರು. ಹೊಸ ಅರವಿ ತೊಡಿಸಿದರು. ಕಾನ್ಹೂಳ ಕೊಳ್ಳಾಗಿದ್ದ ಕರೀಮಣಿ ಸರ ತುಂಡ ಮಾಡಿದರು, ಹಣಿ ಮ್ಯಾಲಿನ ಕುಂಕುಮ ಅಳಿಸಿದರು. ಕಾನ್ಹೂಳ ಕಣ್ಣು ಅತ್ತು-ಅತ್ತು ಕೆಂಪಾಗಿತ್ತು. ಹಣಿ-ಹಣಿ ಬಡಕೊಂಡ್ಲು. ಎಚ್ಚರ ತಪ್ಪಿ ಬಿದ್ಲು. ಎಲ್ಲಾರೂ ಹೆದರಿದರು. ಆಕಿ ಮಾರಿಗೆ ನೀರ ಹೊಡೆದ ಮ್ಯಾಗ ಆಕಿ ಎಚ್ಚರ ಆತು. ಆಕಿ ಎದ್ದು ಕುಂತಳು. ನಾನ ಸತಿ ಹೋಗತೇನಿ ಅಂದ್ಲು. ಎಲ್ಲ ಬೇಲದಾರರು ಅಂಜಿದರು. ಜಾತಿ ಪಂಚಾಯತಿ ಸಭೆ ಕರೆದರು, ಅವರು ಕಾನ್ಹೂಳಿಗೆ ಸತಿ ಹೋಗಾಕ ವಿರೋಧ ಮಾಡಿದರು. ಆದರೆ ಕಾನ್ಹೂಳ ತಾಯಿ-ತಂದಿ, ಅತ್ತಿ-ಮಾವ ಆಕಿಗೆ ಸತಿ ಹೋಗಾಕ ಅನುಮತಿ ಕೊಡರಿ ಅಂತ ಜಾತಿ ಪಂಚಾಯತಿಗೆ ಹೇಳಿದರು. ಆದರೂ ಪಂಚರು ಅನುಮತಿ ಕೊಡಲಿಲ್ಲ. ಆದರ ಕಾನ್ಹೂ ಮಾತ್ರ ಹಠ ಬಿಡಲಿಲ್ಲ. ಈ ಪ್ರಕರಣ ಊರ ಗೌಡರ ಮುಂದ ಒಯ್ದರು. ಗೌಡರೂ ವಿರೋಧ ಮಾಡಿದರು. ಆದರೂ ಕಾನ್ಹೂ ಹಠ ಬಿಡಲಿಲ್ಲ. ಆಗ ಗೌಡ ಸಿಟ್ಟಿಗೆದ್ದು ‘ಏ ಪೋರಿ, ನೀನು ಸತಿ ಹೋಗಬೇಕಂತಿ ಯಲ್ಲ, ನಿನ್ನ ಹಂತ್ಯಾಕ ಅಂಥ ಯಾವ ಶಕ್ತಿಯದ ತೋರಿಸು’ ಎಂದರು. ಗೌಡರ ಆ ಮಾತಿಗೆ ಆಕಿ ನಡೆಯಾಕ ಶುರು ಮಾಡಿದ್ಲು. ಆಕಿ ಪ್ರತಿ ಹೆಜ್ಜಿ ಕೆಳಗ ಕುಂಕುಮದ ಹೆಜ್ಜಿ ಮೂಡಿದ್ದು ಕಾಣಿಸಿತು. ಗೌಡ ಬೆರಗಾದ. ಆಕಿಗೆ ಸತಿ ಹೋಗಾಕ ಅನುಮತಿ ನೀಡಿದ. ಜಾತಿ ಪಂಚಾಯತಿನೂ ಒಪ್ಪಿಗೆ ನೀಡಿತು. ಇಡೀ ಊರಾಗ ಈ ಸುದ್ದಿ ಹಬ್ಬಿತು. ಊರಿಗೆ ಊರೇ ಬೇಲದಾರರ ಬಿಡಾರಕ್ಕ ಬಂತು. ಹೆಂಗಸರು ಕಾನ್ಹೂಳಿಗೆ ಜಳಕ ಹಾಕಿದರು. ‘ಸತೀ ಮಾತಾ ಕಾನ್ಹೂಳಿಗೆ ಜೈ’ ಎಂದರು. ಸೀರಿ ಉಡಸಿದರು. ಅಡ್ಡ ಕುಂಕುಮ ಹಚ್ಚಿದರು. ಕೊರಳಿಗೆ ಕರೀಮಣಿ ಸರ ಹಾಕಿದರು. ಕಾಲ ಬೆರಳಿಗೆ ಕಾಲುಂಗುರ ಹಾಕಿದರು. ಹಿಂಗ ಎಲ್ಲ ತಯಾರಿ ಮಾಡಿದರು. ಬೇಲದಾರರೂ ಶೆರಿ ಕುಡಿದು ಟೈಟ್ ಆಗಿದ್ದರು. ಒಬ್ಬಾಂವ ಕಾನ್ಹೂಳನ್ನು ಹೆಗಲ ಮ್ಯಾಲೆ ಹೊತಕೊಂಡ. ಮುಂದೆ ಆಕಿ ಗಂಡನ ಹೆಣಕ್ಕ ನಾಲ್ಕಮಂದಿ ಹೆಗಲು ಕೊಟ್ಟಿದ್ದರು. ಅದಕ್ಕಿಂತ ಮುಂದೆ `ಡಂಗ್ ಚಿಕ್ ಡಡಂಗ ಡಂಗ’ ಅಂತ ಹಲಗಿ ಬಾರಿಸಾಕ ಹತ್ತಿದ್ದ. ಎಲ್ಲಾರೂ ಹಾದಿ ಹಿಡಿದು ಹೊಂಟರು. ಇಡೀ ಊರಿಗೆ ಊರೇ ಬೆನ್ನ ಹಿಂದೆ ಬರಾಕ ಹತ್ತಿತ್ತು. ಬೇಲದಾರರು ಕುಣಿತಿದ್ದರು. ಕಾನ್ಹೂಳಿಗೆ ನಿವಾಳಿಸಿ ಚಿಲ್ಲರೆ ದುಡ್ಡು ಬೀಸಿ ಒಗಿತಿದ್ದರು. ನಡೀತಾ ನಡೀತಾ ಚಿತೆ ಹತ್ತರ ಬಂದರು. ಕಾನ್ಹೂಳನ್ನು ಹೆಗಲ ಮ್ಯಾಲಿಂದ ಕೆಳಗ ಇಳಿಸಿದರು.

ಆಕಿ ಚಿತೆ ಮ್ಯಾಲೆ ಏರಿದಳು. ಗಂಡನ ಹೆಣ ತೊಡಿ ಮ್ಯಾಲೆ ಇಟಕೊಂಡ್ಲು. ಆಮ್ಯಾಲೆ ಆಕಿ ಬೇಲದಾರರಿಗೆ ಹೇಳಿದ್ಲು, ‘‘ಬೇಲದಾರರೆ, ನಾನೀಗ ಹೊಂಟೆ. ನೀವು ಚಿತೆಗೆ ಉರಿ ಹಚ್ಚಿದ ಮ್ಯಾಲೆ ಇಲ್ಲೇ ನಿಂದರ್ರಿ. ನಾನು ಸುಟ್ಟ ಹ್ವಾದ ಮ್ಯಾಲೆ ಬೆಂಕಿಯಿಂದ ಹೊರ ಬರ್ತೇನಿ. ನಿಮಗೊಂದು ವಸ್ತು ಕೊಡ್ತೀನಿ. ಅದನ್ನ ತಗೊಂಡು ಮನಿಗೆ ಹೋಗರಿ. ಆ ವಸ್ತು ಒಂದು ಪೆಟ್ಟಿಗ್ಯಾಗ ಇಡರಿ. ಮುಂದ ನಿಮ್ಗ ಹತ್ತು ಊರು ತಿರುಗಾಡೋ ಪಾಳಿ ಬರಾಂಗಿಲ್ಲ. ನೀವು ಲಕ್ಷಾಧಿಪತಿ ಆಗತೀರಿ. ಆದರ ನಿದ್ದಿ ಮಾಡಬ್ಯಾಡರಿ. ಜಾಗರಣೆ ಮಾಡರಿ. ಹಚ್ಚರಿ ಬೆಂಕಿ ಚಿತೆಗೆ’’. ಊರ ಮಂದಿ ಮತ್ತು ಬೇಲದಾರರು ಕಾನ್ಹೂಳ ಮೈಮ್ಯಾಗ ತುಪ್ಪದ ಡಬ್ಬಿ ಸುರವಿದರು. ಕಾನ್ಹೂಳ ಮಾವ ಮುಂದ ಬಂದ. ಚಿತೆಗೆ ಬೆಂಕಿ ಹಚ್ಚಿದ. ಬೆಂಕಿ ಭಗಭಗ ಅಂತ ಉರಿಯಾಕ ಹತ್ತಿತು. ಕಾನ್ಹೂಳ ಆಕ್ರಂದನ ಪ್ರತಿಧ್ವನಿಯಾಗಿ ಕೇಳಬರಾಕ ಹತ್ತಿತು. ಎಲ್ಲಾರೂ ಶೆರಿ ಕುಡಿದಿದ್ದರು. ಸತೀ ಮಾತೆಗೆ ಜೈ ಅಂತ ಕುಣಿಯಾಕ ಹತ್ತಿದ್ದರು. ಕೂಗುತಿದ್ದರು. ಜರಾ ಹೊತ್ತ ಆದ ಮ್ಯಾಗ ಎಲ್ಲಾನೂ ಶಾಂತವಾಯಿತು. ಕಾನ್ಹೂ ಗಂಡನ ಜೋಡಿ ಸುಡಾಕ ಹತ್ತಿದ್ಲು. ಮುಂದ ಬೆಂಕಿ ನಡುವಿಂದ ಫಟ್ ಅಂತ ಸದ್ದಾಯಿತು. ತಲೀ ಒಡೀತು. ಎಲ್ಲ ಊರ ಮಂದಿ ಮತ್ತು ಬೇಲದಾರ ಹೆಂಗಸರು ತಿರುಗಿ ಹೋದರು. ಅಲ್ಲಿ ಬರೇ ಬೇಲದಾರರು ಮತ್ತು ದಾಡಿ ಜಾತಿ ಮಾತ್ರ ಉಳಿದರು. ಸಾಕಷ್ಟು ಹೊತ್ತಾತು. ಕಾನ್ಹೂ ಬೆಂಕಿಯಿಂದ ಹೊರಗ ಬರೋ ಹಾದಿ ಬೇಲದಾರರು ಕಾಯಾಕ ಹತ್ತಿದರು. ಆಕಿ ಎಷ್ಟ ಹೊತ್ತಾದರೂ ಬಂದಿಲ್ಲ. ಬೇಲದಾರರು ಬ್ಯಾಸತ್ತ ಹ್ವಾದರು. ಅವರು ದಾಡಿ ಜಾತಿಗೆ ಜಾಗರಣೆ ಮಾಡಾಕ ಹೇಳಿದರು, ಕಾನ್ಹೂ ಬಂದ ಮ್ಯಾಲೆ ನಮಗ ಎಬ್ಬಿಸು ಅಂತ ಹೇಳಿ ಎಲ್ಲಾ ಬೇಲದಾರರು ಮಲಗಿಬಿಟ್ಟರು. ದಾಡಿ ಜಾತಿ ಮಾತ್ರ ಜಾಗರಣೆ ಮಾಡಿದರು.

ಮುಂದ ಕಾನ್ಹೂ ಬೆಂಕಿಯಿಂದ ಹೊರಗ ಬಂದ್ಲು. ನೋಡಿದರ ಎಲ್ಲಾ ಬೇಲದಾರರು ಮಲಕ್ಕೊಂಡಾರು. ದಾಡಿ ಜಾತಿಯವರು ಮಾತ್ರ ಎಚ್ಚರವಾಗಿದ್ದರು. ಆಕಿಗೆ ಕೆಟ್ಟ ಅನಿಸ್ತು. ಆಕಿ ದಾಡಿ ಜಾತಿ – ಅವರಿಗೆ ಸೀರಿ ಧಡಿ ಕೊಟ್ಲು. ಅದನ್ನ ಪೆಟ್ಟಿಗ್ಯಾಗ ಇಡಾಕ ಹೇಳಿದ್ಲು. ಮತ್ತು ಎಲ್ಲ ಬೇಲದಾರ ಮಂದಿ ಭಿಕ್ಷುಕರಾಗೇ ಇರ್ತಾರು ಅಂತ ಶಾಪ ಕೊಟ್ಲು. ಆಕಿ ಅದೃಶ್ಯ ಆದ್ಲು. ದಾಡಿ ಜಾತಿಯವರು ಬೇಲದಾರರನ್ನು ಎಬ್ಬಿಸಿದರು. ಅವರು ಯಾವ ವಿಷಯಾನೂ ಹೇಳಲಿಲ್ಲ. ಎಲ್ಲಾರೂ ತಮ್ಮ ತಮ್ಮ ಬಿಡಾರಕ್ಕ ಹ್ವಾದರು. ದಾಡಿಜಾತಿ ಪೆಟ್ಟಿಗ್ಯಾಗ ಇಟ್ಟ ಸೀರಿ ಥಡಿ ಬಂಗಾರ ಆಯಿತು. ಆವತ್ತಿನಿಂದ ದಾಡಿಜಾತಿ ಲಕ್ಷಾಧಿಪತಿ ಆದರು, ಬೇಲದಾರರು ಭಿಕ್ಷಾಧಿಪತಿಯಾಗೇ ಉಳಿದರು.

ಆಮ್ಯಾಲೆ ಆಕಿ ಬೇಲದಾರರ ದೇವಿ ಆದ್ಲು. ಆಕಿಗೆ ಹರಕೆ ಹೊತ್ತರ ಫಲ ಸಿಗಾಕ ಹತ್ತಿತು. ಬೇಲದಾರರು ಆಕಿ ಪೂಜಿ ಮಾಡಾಕ ಸುರು ಮಾಡಿದರು. ಸಂಕಟ ಬಂತಂದರ ಮಾಲೀದಾ ನೇವೇದ್ಯ ತೋರಿಸ್ತಾರು. ಆಕಿನೇ ಮುಂದ ಬೇಲದಾರರ ಕಾನ್ಹೂ ಸತೀ ಮಾತೆಯಾದ್ಲು.

ಅಪ್ಪನಿಗೆ ಕೆಲಸ ಸಿಗಲಿ ಅಂತ ಸತಿ ಮಾತೆಗೆ ಮಾಲೀದದ ನೈವೇದ್ಯ, ತೋರಿಸೋದು ನಿಕ್ಕಿಯಾಯಿತು. ಅಪ್ಪ ಒಂದೂವರಿ ಶೇರ ಗೋದಿ ತಂದ. ಊರಾಗ ಹಿಟ್ಟಿನ ಗಿರಣಿಯಿಲ್ಲ, ನಮ್ಮ ಮನ್ಯಾಗ ಬೀಸೋ ಕಲ್ಲಿಲ್ಲ. ಬೀಸೊಧ್ಯಾಂಗ ಅನ್ನೋ ಪ್ರಶ್ನೆ ಬಂತು. ಆವಾಗ ನಾನೂ, ಅವ್ವ ಊರಾಗ ಬೀಸಿ ತರಾಕ ಹೋದವಿ. ಬೀಸಾಕ ಜರಾ ಬೀಸೋಕಲ್ಲ ಕೊಡರಿ ಅಂದಿವಿ, ಆದರ ಯಾರೂ ಕೊಡಲಿಲ್ಲ. ಬೀಸೋಕಲ್ಲ ಸಲುವಾಗ ಇಡೀ ಊರ ತುಂಬ ತಿರುಗಾಡಿದಿವಿ. ಜನ ನಮ್ಮನ್ನು ಕ್ಷುದ್ರ ಅಂತ ತಿಳಕೊಳ್ಳತಿದ್ದರು. ನಮ್ಮ ಹುಚ್ಚು ಅವತಾರ ನೋಡಿ ನಾಯಿಗಳು ಬೊಗಳಾಕ ಹತ್ತಿದ್ವು. ಹೆಂಗಸರು ಮನೀ ಬಾಗಿಲಾದಾಗ ನಿಂತು ನಗಾಕ ಹತ್ತಿದರು. ಕೆಲವರು ಚ್ಯಾಷ್ಟಿ ಮಾಡತ್ತಿದ್ದರು. ‘ನೋಡರಿ ಪಾವಣ್ಯಾರ ಬಂದರು’ ಅಂತ ಹಂಗಿಸುತ್ತಿದ್ದರು. ನಾವು ಮಾತ್ರ ಬೀಸೋಕಲ್ಲಿಗಾಗಿ ಯಾಚನೆ ಮಾಡತಿದ್ವಿ.

ಕೊನೆಗೆ ಒಬ್ಬ ಮುದುಕಪ್ಪನಿಗೆ ನಮ್ಮ ಮ್ಯಾಲೆ ದಯೆ ಬಂತು. ಅವನ ಹೆಂಡತಿ ಬೀಸೊಕಲ್ಲ ಕೊಡಾಕ ತಯಾರಿರಲಿಲ್ಲ, ಮುದುಕಪ್ಪ ಆಕಿ ಮನಸು ಬದಲಾಯಿಸಿದ. ಆಕಿ ಪಡಸಾಲ್ಯಾಗ ಬೀಸೊಕಲ್ಲು ತಂದಿಟ್ಟಳು. ಅವ್ವ ಗೋದಿ ಗಂಟು ಬಿಚ್ಚಿ ಬೀಸಾಕ ಕುಂತ್ಲು. ಒಂದು ಮುಟಗಿ ಗೋದಿ ಹಾಕಿ ಒಂದು ಸಾಲು ಹಾಡತಿದ್ಲು. ಬೀಸೊಕಲ್ಲು ಘರಾಘರಾ ತಿರಗತಿತ್ತು.

ಅವ್ವ ಬೀಸಾಕ ಕುಂತಾಗ ನನಗ ನೀರಡಿಕೆ ಆಯಿತು. ಅವ್ವನಿಗೆ ನನ್ನ ಕಡಿ ಲಕ್ಷಯಿರಲಿಲ್ಲ. ಸಾವಕಾಶ ಎದ್ದು ಮನಿಯೊಳಗೆ ನುಗ್ಗಿದೆ. ತಂಬಿಗಿ ತಗೊಂಡು ನೀರಾಗ ಮುಳುಗಿಸಿದೆ. ತಂಬಿಗಿಗೆ ಬಾಯಿ ಹಚ್ಚಿ ಕುಡಿಯಾಕ ಶುರು ಮಾಡಿದೆ. ಯಜಮಾನಿ ಬಯ್ಯುತ್ತ ಓಡಿ ಬಂದ್ಲು. ತಂಬಿಗಿ ನನ್ನ ಕೈಯಿಂದ ಜಾರಿ ಕೆಳಗ ಬಿತ್ತು.

ಬೆಂಕಿ ಹಚ್ಚಲಿ ಈ ಬೇಲದಾರ ಜಾತಿಗೆ. ಮಟನ-ಮೀನು ತಿನ್ನೋ ಹಲ್ಕಟ ಮಂದಿ. ಮೈಲಗಿ ಮಾಡಿಬಿಟ್ಟ. ಅಂತ ಬೊಬ್ಬೆ ಹೊಡೆದ್ಲು. ನೀರೆಲ್ಲ ಹೊರಗ ಸುರಿದ್ಲು. ಅಷ್ಟರಾಗ ಅವ್ವ ಬಂದು ನನಗ ಬಡಿದ್ಲು. ‘‘ನಾವು ಬೇಲದಾರ ಮಂದಿ. ಕೆಳಗಿನ ಜಾತಿಯವರು. ಯಾಕ ಮೈಲಗಿ ಮಾಡಿದಿಯೋ ಭಾಡ್ಯಾ’’ ಅಂತೆಲ್ಲ ಬಾಯಿಗೆ ಬಂದಾಗ ಬಯ್ದಳು. ನಾನು ಹೆದರಿ ಕಂಗಾಲು. ಆ ಯಜಮಾನಿ ಅವ್ವನಿಗೆ ಬೈದಳು ‘‘ಏನೇ ಉಂಡಗಿ ರಂಡೆ, ನಿನಗೂ ಬುದ್ಧಿ ಬ್ಯಾಡೇನು. ಕಣ್ಣ ಮುಚಕೊಂಡು ಕುಂತಿಯೇನು? ಸಾಕ ಮಾಡು ಬೀಸೋದು. ಇಲಾಂದರ ಖಾರ ತುರುಕಿ ಬಿಡಿಸಾಕ ಹಚ್ಚತೇನ ನೋಡು. ಮೊದ್ಲು ಇಲ್ಲಿಂದ ಹೊರಗ ಹೋಗರಿ’’ ಪುಣ್ಯಕ್ಕ ಗೋದಿ ಬೀಸಿ ಮುಗಿದಿತ್ತು. ಅವ್ವ ನಡಗಾಕ ಹತ್ತಿದ್ಲು. ಹಿಟ್ಟು ಗಂಟಿನಾಗ ಕಟ್ಟಿಕೊಂಡ್ಲು. ತಾಯಿ-ಮಗ ಇಬ್ಬರೂ ಬಿಡಾರದ ಕಡಿಗೆ ಹೊಂಟವಿ. ಅವ್ವ ಅಪ್ಪನಿಗೆ ಇದನ್ನೆಲ್ಲ ಹೇಳ್ತೇನಿ ಅಂದ್ಲು. ನನಗ ಹೆದರಿಕೆ ಶುರುವಾಯಿತು. ಆದರ ಆಕಿ ಅಪ್ಪನಿಗೆ ಏನೂ ಹೇಳಲಿಲ್ಲ.

ಸಂಜಿಗೆ ಅವ್ವ ಮತ್ತ ಮುದುಕಿ ಕೂಡಿ ಗೋದಿ ಹಿಟ್ಟು ಕಲಸಿ ದಪ್ಪ ರೋಟಿ ಮಾಡಿದರು. ಅದನ್ನ ಚೂರು ಚೂರು ಮಾಡಿದರು. ಅದರಾಗ ಬೆಲ್ಲ ಹಾಕಿದರು. ಆವಾಗ ಮಾಲೀದಾ ತಯಾರಾತು. ಮುದುಕ ದೇವರ ಪೆಟ್ಟಗಿ ತೆರೆದ. ದೇವರನ್ನು ತೊಳೆದ. ದೇವರ ಮುಂದ ಊದುಬತ್ತಿ ಹಚ್ಚಿದ. ಮಾಲೀದಾದ ರಾಶಿ ದೇವರ ಮುಂದಿಟ್ಟ. ಅದರ ಮ್ಯಾಗ ಎಣ್ಣಿದೀಪ ಹಚ್ಚಿದ. ಎಲ್ಲಾದರ ಮ್ಯಾಲೂ ಗೋಮೂತ್ರ ಸಿಂಪಡಿಸಿದ. ನಾವು ಕೈಮುಗಿದು ದೇವರಿಗೆ ನಮಸ್ಕಾರ ಮಾಡಿದ್ವಿ. ಮುದುಕ ದೇವರ ಮುಂದ ಶಿರಯಿಟ್ಟು ಬೇಡಿಕೊಂಡ. ‘‘ತಪ್ಪಾತು-ತಪ್ಪಾತು. ಕಾನ್ಹೂಸತಿ, ನಿನ್ನ ಹೇಲು- ಉಚ್ಚಿ ಕುಡಿತೇವಿ. ತಪ್ಪಾಗಿದ್ದರ ಕ್ಷಮಿಸು. ಮಕ್ಕಳ ಮರಿಗೆ ಸುಖಾ ಕೊಡು. ಬೇಗ ಕೆಲಸ ಸಿಗೋ ಹಾಂಗ ಮಾಡವ್ವ ತಾಯೀ..”. ಮುಂದ ಉಂಡು ಮಲಗಿದ್ವಿ.

ನಸುಕಿಗೇ ಎದ್ದು ಕತ್ತಿ ಮ್ಯಾಲೆ ಬಿಡಾರ ಹೇರಿದ್ವಿ. ಹರದಾರಿ-ಹರದಾರಿ ನಡೀತ-ನಡೀತ ಕಾಟಿಖೇಡಾ ಅನ್ನೋ ಊರಿಗೆ ಬಂದು ಮುಟ್ಟಿದಿವಿ- ಅಲ್ಲೇ ಬಿಡಾರ ನಿಲ್ಲಿಸಿದಿವಿ. ನೀರು ಕುಡಿದಿವಿ. ಅಲ್ಲಿ ಧೋಂಡು ಮಾಮಾ ಭೇಟಿಯಾದ. ಅಪ್ಪ-ಅಂವಾ ನಮಸ್ಕಾರ ಮಾಡಿದರು. ಅವನಿಗೆ ಅಲ್ಲಿ ಕೆಲಸ ಸಿಕ್ಕಿತ್ತು. ಅಂವಾ ಅಂದ- ಸಾಮಾಯಿಕ ಕೆಲಸ ಮಾಡೋಣು. ಅಪ್ಪ-ಅಂವಾ ಕೂಡಿ-ಕೂಡಿ ಕೆಲಸ ಮಾಡೋದು ನಿಕ್ಕಿ ಆತು. ಅಂತೂ ಅಪ್ಪನಿಗೂ ಕೆಲಸ ಸಿಕ್ಕಿತು. ಅಪ್ಪ-ಅವ್ವ ಇದೆಲ್ಲ ಸತಿ ಮಾತೆಯ ಪುಣ್ಯ ಅಂದರು. ಆಕಿಗೆ ಮಾಲೀದಾದ ನೇವೇದ್ಯ ಮಾಡಿದ್ದರಿಂದಾನೇ ಕೆಲಸ ಸಿಗ್ತು ಅಂದರು.

ಮುಂದ ಬಿಡಾರ ಹೊತಕೊಂಡು ಧೋಂಡು ಮಾಮಾನ ಬೆನ್ನ ಹತ್ತಿದ್ವಿ. ಮಾಮಾ ನಮ್ಮನ್ನ ಊರ ಹೊರಗ ಕರ್ಕೊಂಡ ಬಂದ. ಅಲ್ಲೊಂದು ಬಾವಿಯಿತ್ತು. ಅವನ ಬಿಡಾರಾನೂ ಅಲ್ಲೇ ಇತ್ತು. ಅವನ ಬಿಡಾರದ ಹತ್ತಿರಾನೇ ನಮ್ಮ ಬಿಡಾರಾನೂ ಇಳಿಸಿದಿವಿ. ಅಪ್ಪ ಮತ್ತು ಮಾಮಾ ಸಾಮಾಯಿಕ ಕೆಲಸ ಶುರು ಮಾಡಿದರು.

ಧೋಂಡೋ ಮಾಮಾನಿಗೆ ಪಾಂಡೂ ಮತ್ತು ಸೋಮು ಅಂತ ಇಬ್ಬರು ಮಕ್ಕಳು. ನಂದೇ ವಯಸ್ಸು. ಈಗ ನಮ್ಮ ಬುದ್ದಿ ಬಲೀತಿತ್ತು. ಮೊದಮೊದಲು ನಾನು ಬಿಡಾರದಾಗ ಅಡಗಿ ಕುಂಡರತಿದ್ದೆ. ಮುಂದ ನಂದೂ ಅವರದೂ ದೋಸ್ತಿ ಆಯಿತು. ದಿನಾಲೂ ನಾನೂ, ಪಾಂಡೂ, ಸೋಮು ಕತ್ತಿ ಮೇಯಿಸಾಕ ಕರ್ಕೊಂಡು ಹೋಗತಿದ್ದಿವಿ. ನಡು-ನಡುವೆ ಚಿನ್ನಿದಾಂಡೂ, ಕಣ್ಮುಚ್ಚಾಲೆ ಆಟ ಆಡತಿದ್ವಿ. ಈಗ ನಾನೂ-ಪಾಂಡೂ ಜೀವದ ಗೆಳೆಯರಾದ್ವಿ. ಒಬ್ಬರನ್ನ ಬಿಟ್ಟು ಮತ್ತೊಬ್ಬರು ಒಂದು ತುತ್ತೂ ತಿಂತಿರಲಿಲ್ಲ. ಅಪ್ಪ-ಮಾಮಾ ಕಲ್ಲು ಒಡಿತಿದ್ದರು. ಅವ್ವ ಮತ್ತು ಸರಿಮಾಮಿ ಕಲ್ಲ-ಚೂರಿನ ಸಾರಿಗೆ ಮಾಡತ್ತಿದ್ದರು. ಕತ್ತಿಗಳಿಗೆ ಕೆಲಸ ಇರದಿದ್ದರ ನಾವು ಮೇಯಿಸಿಕೊಂಡು ಬರತಿದ್ವಿ.

ನಮ್ಮಪ್ಪನಿಗೆ ಚಿಗರಿ ಸಾಕೋ ಹುಚ್ಚ ಭಾಳ. ಕಾಡಿಗೆ ಹೋಗಿ ಚಿಗರಿ ಮರಿ ಹಿಡಕೊಂಡು ಬಂದು ಸಾಕತಿದ್ವಿ. ಸ್ವಲ್ಪ ದೊಡ್ಡ ಆದ ಮ್ಯಾಲ ಹಗ್ಗದ ಕುಣಿಕೆ ಮತ್ತು ಪಂಜರಾ ತಗೊಂಡು ಅಪ್ಪ-ಮಗ ಇಬ್ಬರೂ ಕಾಡಿಗೆ ಹೋಗತಿದ್ವಿ. ಸರಿಯಾದ ಜಾಗ ನೋಡಿ ಪಂಜರಾ ಇಡತಿದ್ವಿ. ಪಂಜರದ ಸುತ್ತಲೂ ನೇಣಿನ ಹಗ್ಗ ಹಾಸತಿದ್ವಿ. ನಾವು ಪೆÇದೆ ಹಿಂದೆ ಅಡಗಿ ಕುಂಡರತಿದ್ವಿ. ಪಂಜರದಾಗಿರೋ ಚಿಗರಿ ಮರಿ ಕೂಗತಿತ್ತು. ಅದರ ಕೂಗು ಕೇಳಿ ಕಾಡಿನಾಗಿರೋ ಉಳಿದ ಚಿಗರೆಗಳು ಬರುತಿದ್ದವು. ಆವಾಗ ನೇಣು ಹಗ್ಗದಾಗ ಕಾಲು ಅಥವಾ ತಲೀ ಸಿಕ್ಕಿ ಹಾಕ್ಕೋತಿತ್ತು. ಚಿಗರಿ ಬಿಡಿಸಿಕೊಳ್ಳಾಕ ಒದ್ದಾಡುತ್ತಿತ್ತು. ನಮ್ಮ ಧ್ಯಾನ ಎಲ್ಲ ಅಲ್ಲೇ. ನಾವು ಓಡಿ ಬರತಿದ್ವಿ. ಗಪ್ಪಂತ ಚಿಗರಿ ಹಿಡಿತಿದ್ವಿ. ಅದರ ನೇಣ ಹಗ್ಗ ಬಿಡಿಸಿ, ಅದರ ಕಾಲು ಕಟ್ಟಿ ಹಾಕತಿದ್ವಿ. ಒಮ್ಮೊಮ್ಮೆ ಏನೂ ಸಿಗತಿರಲಿಲ್ಲ. ಒಮ್ಮೊಮ್ಮೆ ಐದಾರ ಚಿಗರಿ ಸಿಗತಿದ್ದವು. ಅದನ್ನ ಹೊತಕೊಂಡು ಬಿಡಾರಕ್ಕ ಬರತಿದ್ವಿ. ರಾತ್ರಿ ಚಿಗರಿ ಮಟನ ಊಟ ಮಾಡತಿದ್ವಿ. ಅಪ್ಪ ಶೆರಿ ಕುಡಿದು ಬರ್ತಿದ್ದ. ರಾತ್ರಿ ಉಂಡ ಮುಗಿದ ಮ್ಯಾಲೆ ಅವ್ವನಿಗೆ ಬರೀ ಬಯ್ಯತಾನೇ ಇರ್ತಿದ್ದ. ಧೋಂಡು ಮಾಮಾ ಅಪ್ಪನ ಮ್ಯಾಲೆ ಗುರುಗುಡತ್ತಿದ್ದ. ಹಾಂಗೆಲ್ಲ ಬಯ್ಯಬ್ಯಾಡರಿ. ಬಾಯಿ ಬಿಗಿ ಹಿಡೀರಿ. ಇಲ್ಲದಿದ್ದರ ಹಲ್ಲು ಉದುರಿಸೇ ಬಿಡತೇನಿ. ಅಪ್ಪ ಕ್ಯಾರೆ ಮಾಡತಿರಲಿಲ್ಲ. ಸರಿಮಾಮಿ ಧೋಂಡು ಮಾಮಾನಿಗೆ ಸಮಾಧಾನ ಮಾಡತಿದ್ಲು, ಆವಾಗ ಜಗಳ ತಣ್ಣಗಾಗತಿತ್ತು.

ಕಾಟಖೇಡ ಊರಾಗಿನ ಕೆಲಸ ಮುಗೀತು. ಕೆಲಸ ಹುಡುಕ್ತ-ಹುಡುಕ್ತ ನಮ್ಮ ಬಿಡಾರ ಧುಂದಿ ಗಾಟೋಡಿ ಅನ್ನೋ ಊರಿಗೆ ಬಂತು. ಭಾಳ ಊರು ಸುತ್ತಾಡಿದಿವಿ. ಆದರ ಎಲ್ಲೂ ಕೆಲಸ ಸಿಗಲಿಲ್ಲ. ಉಪವಾಸ ಸಾಯೋ ಪಾಳಿ ಬಂತು. ಪ್ರತಿದಿವಸ ಅಪ್ಪ ಮತ್ತು ಮಾಮಾ ಎದ್ದವರೇ, ಮಾರಿಸೈತ ತೊಳಿದೇನೆ ಕೆಲಸ ಹುಡಕಾಕ ಹೊರ ಬೀಳತಿದ್ದರು. ಸುತ್ತಮುತ್ತಲಿನ ಹಳ್ಳಿ-ಹಳ್ಳಿ ಸುತ್ತಾಡಿ, ರಾತ್ರಿ-ಅಪರಾತ್ರಿಗೆ ಬಿಡಾರಕ್ಕ ಬರತಿದ್ದರು. ಅದೂ ಖಾಲಿ ಕೈಯಿಂದಾನೇ. ಅವ್ವ, ಮುದುಕಿ, ಸರಿಮಾಮಿ, ನಾನು ಪಾಂಡೂ ದಿನಾಲೂ ಊರಾಗ ಭಿಕ್ಕಿ ಬೇಡಾಕ ಹೋಗತಿದ್ವಿ. ಮುಂದ ಮುಂದ ಮಂದಿ ಭಿಕ್ಷಾ ಹಾಕೋದೂ ಬಿಟ್ಟರು. ಹಾಂಗ ಅರ್ಧ ಹೊಟ್ಟಿ ಉಪಾಸ ಇದ್ದ ದಿನಾ ಕಳೀಬೇಕಾಗತಿತ್ತು. ಏನ ಮಾಡಬೇಕು ಅನ್ನೋದ ಗೊತ್ತಾಗತ್ತಿರಲಿಲ್ಲ. ಬೇಕಾದ್ದ ಕೆಲಸ ಮಾಡಾಕೂ ನಾವು ತಯಾರಿದ್ದಿವಿ. ಆದರ ಕೆಲಸ ಮಾತ್ರ ಸಿಗತಿರಲಿಲ್ಲ. ‘ಬೇಲದಾರರೂ ಕಳ್ಳರಿದ್ದಾಂಗ, ಯಾರೂ ಅವರಿಗೆ ಕೆಲ್ಸ ಕೊಡಬ್ಯಾಡರಿ’ ಅಂತ ಮಂದಿ ಮಾತಾಡಿ ಕೊಳ್ಳತಿದ್ದರು.

ನಮ್ಮ ಬಿಡಾರದ ಆಚೆಗೆ ಕಬ್ಬಿನ ಹೊಲದ ಹತ್ತರ ಹತ್ತು-ಹನ್ನೆರಡು ಲಮಾಣಿಗರ ಗುಡಿಸಲು ಇತ್ತು. ಅವರು ತಮ್ಮ ತಾಂಡೆ ಬಿಟ್ಟು ಇಲ್ಲಿ ಕಬ್ಬು ಕಡಿಯಾಕ ಬಂದಿದ್ದರು. ಲಮಾಣಿಗರಿಗೂ-ಧೋಂಡಿ ಮಾಮಾನಿಗೂ ಗುರುತು-ಪರಿಚಯ ಆಯಿತು. ಅವರ ನಂಬಿಗೆ ಮ್ಯಾಲಿಂದ ಅಪ್ಪ ಮತ್ತು ಮಾಮಾನಿಗೆ ಕಬ್ಬು ಕಟಾವು ಮಾಡೋ ಕೆಲಸ ಸಿಗ್ತು. ನಮ್ಮ ಬಿಡಾರಾನೂ ಅವರ ಗುಡಿಸಲು ಹತ್ತಿರಾನೇ ಹಾಕಿದ್ವಿ. ಲಮಾಣಿಗಳ ಸಂಗಡ ಅಪ್ಪ-ಧೋಂಡಿ ಮಾಮಾ, ಅವ್ವ-ಸರಿಮಾಮಿ ನಸುಕಿನ್ಯಾಗ ಎದ್ದು ಕೆಲಸ ಶುರು ಮಾಡತಿದ್ದರು. ಗಂಡಸರು ಕಬ್ಬು ಕಡಿತಿದ್ದರು, ಹೆಂಗಸರು ಕಬ್ಬು ಸವರುತ್ತಿದ್ದರು. ಟ್ರಕ್ ಬಂದ ನಿಂತ ಮ್ಯಾಲೆ, ಗಂಡಸರು ಕಬ್ಬಿನ ಹೊರೆ ಕಟ್ಟಿ ಅದರ ಮ್ಯಾಲೆ ಹೇರತಿದ್ದರು. ಟ್ರಕ್ ಹ್ವಾದ ಮ್ಯಾಲೆ ಮತ್ತ ಕಬ್ಬು ಕಡಿಯೋದು ಶುರು. ಬಿಸಿಲು ನೆತ್ತಿಗೆ ಬಂದ ಮ್ಯಾಲೆ ಹೆಂಗಸರು ಬಿಡಾರಕ್ಕ ಬಂದು, ಮೂರು ಕಲ್ಲಿನ ಒಲಿ ಮ್ಯಾಲೆ ರೊಟ್ಟಿ ಮಾಡತ್ತಿದ್ದರು. ಮುಂದೆ ಗಂಡಸರು ಊಟಕ್ಕ ಬರ್ತಿದ್ದರು. ಎಲ್ಲಾರೂ ಬಕ್‍ಬಕಾ ತಿಂತಿದ್ದರು. ಕೈ ತೊಳಕೊಂಡಿದ್ದೇ ತಡ, ಮತ್ತ ಕೆಲಸ ಶುರು. ಸಣ್ಣ-ಸಣ್ಣ ಹುಡುಗರು ಅಳುತ್ತಿದ್ದರು. ನಾವು ಆ ಹುಡುಗರನ್ನ ಆಡಸ್ತಿದ್ವಿ. ಆಟ ಆಡ್ತ-ಆಡ್ತ ಬಿಡಾರ ಮತ್ತ ಕತ್ತಿಗಳನ್ನ ಕಾಯತಿದ್ವಿ. ಎಲ್ಲಾರೂ ಸಾಯೋಮಟ ಕೆಲಸ ಮಾಡತಿದ್ದರು. ಬಿಸಿಲ ಕಡೆಗೂ ಖಬರೆ ಯಿರತಿರಲಿಲ್ಲ. ನೀರಡಿಕೆಯಾದರೂ ಖಬರಯಿರತಿರಲಿಲ್ಲ. ಹಗಲು ರಾತ್ರಿ ಬರೇ ಕೆಲಸ ಕೆಲಸ ಮತ್ತ ಕೆಲಸ. ಪ್ರತಿದಿನ ಸಂಜಿಗೆ ಅಪ್ಪ, ಧೋಂಡಿ ಮಾಮಾ, ಮತ್ತು ಲಮಾಣಿ ಮಂದಿ ಶೆರಿ ಕುಡಿದು-ಕುಡಿದು ಟೈಟ್ ಆಗತ್ತಿದ್ದರು. ರಾತ್ರಿಯಿಡೀ ಗಲಾಟೆಯೋ- ಗಲಾಟೆ. ಉಣಬೇಕು ಅನ್ನೋ ಖಬರೂ ಇರಲಿಲ್ಲ.

‘‘ನಾವು ಬೇಲದಾರ ಮಂದಿ. ಕೆಳಗಿನ ಜಾತಿಯವರು. ಯಾಕ ಮೈಲಗಿ ಮಾಡಿದಿಯೋ ಭಾಡ್ಯಾ’’ ಅಂತೆಲ್ಲ ಬಾಯಿಗೆ ಬಂದಾಗ ಬಯ್ದಳು. ನಾನು ಹೆದರಿ ಕಂಗಾಲು. ಆ ಯಜಮಾನಿ ಅವ್ವನಿಗೆ ಬೈದಳು ‘‘ಏನೇ ಉಂಡಗಿ ರಂಡೆ, ನಿನಗೂ ಬುದ್ಧಿ ಬ್ಯಾಡೇನು. ಕಣ್ಣ ಮುಚಕೊಂಡು ಕುಂತಿಯೇನು? ಸಾಕ ಮಾಡು ಬೀಸೋದು. ಇಲಾಂದರ ಖಾರ ತುರುಕಿ ಬಿಡಿಸಾಕ ಹಚ್ಚತೇನ ನೋಡು. ಮೊದ್ಲು ಇಲ್ಲಿಂದ ಹೊರಗ ಹೋಗರಿ’’ ಪುಣ್ಯಕ್ಕ ಗೋದಿ ಬೀಸಿ ಮುಗಿದಿತ್ತು.

ಹೋಳಿ ಹುಣ್ಣವಿ ಸನೇಕ ಬಂತು. ಎರಡು ವಾರ ಮೊದಲೇ ಲಮಾಣಿಗರ ಹಾಡು, ಕುಣಿತ, ಶೆರೆ ಕುಡಿಯೋದು, ಗದ್ದಲ ಹಾಕೋದು ನಡೆದಿತ್ತು. ಜೇಮಲ್ಯಾ ಲಮಾಣಿ ಹೋಳಿ ಹುಣ್ಣವಿ ದಿನ ಔತಣ ಹಾಕಾಂವ ಇದ್ದ. ಅಂವಾ ಹರಕಿ ಹೊತ್ತಿದ್ದ. ಏಳು ಪೋರಿಯರ ನಂತರ ಅವನಿಗೆ ಗಂಡಮಗಾ ಹುಟ್ಟಿದ್ದ. ಇದಕ್ಕ ನಮ್ಮ ಮಂದಿಯೊಳಗ ಧುಂಡ ಅಂತಾರೆ. ಎಲ್ಲಾರಿಗೂ ಮಟನ ಊಟ, ಮತ್ತು ದಾರೂ ಕುಡಿಸಬೇಕಾಗತದ.

ಹೋಳಿ ಹುಣ್ಣವಿ ದಿನ ಬೆಳಕ ಹರೀತು. ಕಪ್ಪು ಎರಿ ಭೂಮ್ಯಾಗ ಖೀರ ತುಂಬಿದ ಒಂದು ದೊಡ್ಡ ಪಾತ್ರೆಯಿಟ್ಟರು. ನಾಲ್ಕೂ ಕಡೆ ಗೂಟ ಹುಗಿದರು. ಪಾತ್ರೆಯನ್ನು ಹಗ್ಗದಿಂದ ಗೂಟಕ್ಕ ಬಿಗಿದು ಕಟ್ಟಿದರು. ಕುಮಾರಿ ಪೋರಿಯರು ಕೈಯಾಗ ಬಡಿಗಿ ಹಿಡಕೊಂಡು, ಆ ಭಾಂಡೆದ ಸುತ್ತಲೂ ನಿಂತರು. ಅವರಿಗೆ ಗೆಹಳನಿ ಅಂತ ಕರೀತಾರೆ. ಹುಡುಗರು ಆ ಭಾಂಡೆ ಎತಕೊಂಡ ಹೋಗಬೇಕು. ಅವರಿಗೆ ಗೆರ್ಯಾ ಅಂತಾರೆ. ಗೆರ್ಯಾ ಮತ್ತು ಗೆಹಳನಿ ಶೆರಿ ಕುಡಿದು ಟೈಟ್ ಆಗಿರ್ತಾರೆ. ಗೆರ್ಯಾ ಹುಡುಗರು ಭಾಂಡೆ ಒಯ್ಯಾಕ ಮುಂದ ಬಂದರ ಸಾಕು ಗೆಹಳನಿ ಪೋರಿಯರು ಬಡಿಗಿ ತಗೊಂಡ ಬಡಿತ್ತಿದ್ದರು. ಗೆರ್ಯಾಗಳು ಗೆಹಳನಿಯವರಿಂದ ಹೊಡೆತ ತಿಂದು ಭಾಂಡೆ ಎತಕೊಂಡ ಹೋಗಬೇಕಾಗತದ. ಆದರ ಗೂಟಕ್ಕ ಬಿಗಿದ ಕಟ್ಟಿದ ಹಗ್ಗ ಮಾತ್ರ ಹರೀಬಾರದು. ಗೂಟ ಕಿತ್ತ ಹಾಕಿ ಭಾಂಡೆ ತಗೊಂಡ ಹೋಗಬೇಕು. ಒಂದು ವ್ಯಾಳೆ ಹರೀತು ಅಂದರ ಕೂಸುಗಳು ಸಾಯತಾವೆ – ಅಂತ ಅವರ ನಂಬಿಕಿ. ಸುತ್ತಲೂ ಮುದುಕರು ಮುದುಕಿಯರು ಹೆಂಗಸರು ನಿಂತು ತಮಾಷೆ ನೋಡತ್ತಿದ್ದರು. ಗೆರ್ಯಾ ಹಾಗೂ ಗೆಹಳನಿಯವರ ಹಾಡೂ ಶುರು ಇರತದ. ಅದಕ್ಕ ಲೇಂಗಿ ಅಂತಾರೆ. ಅವರ ಈ ರಿವಾಜು ನೋಡಾಕ ನಾವೂ ಹೋದವಿ. ಬಿಸಲ ಏರಿದ ಮ್ಯಾಲ ಗಂಡಸರು ಹೆಂಗಸರು, ಪೋರ ಪೋರಿಯರು ಮತ್ತ ದಾರೂ ಕುಡಿತಾರು. ಎಲ್ಲಾರೂ ದಾರೂ ಕುಡದು ಲೋಡ್ ಆಗ್ತಾರು. ಹಿಂಗ ಅವರ ಗದ್ದಲ ನಡೆದಿತ್ತು. ಅಷ್ಟರಾಗ ಝಾಮವ್ವ ಅನ್ನೋ ಒಬ್ಬಾಕಿಗೆ ದಾರೂ ತಲಿಗೇರಿತು. ಜೋಲಿ ಹೊಡಿಯಾಕ ಹತ್ತಿದ್ಲು. ಈ ಗದ್ದಲದಾಗ, ನೂಕಾಟ-ತಳ್ಳಾಟದಾಗ ಆಕಿ ಲಂಗದ ದಾರ ಹರೀತು. ಲಂಗ ಬಿಚ್ಚಿತು. ಆಕಿ ಬತ್ತಲೆಯಾಗಿಯೇ ಕೆಳಗ ಬಿದ್ಲು. ಆವಾಗ ಗೆರ್ಯಾಗಳು ಓಡಿ ಬಂದರು. ಆಕಿ ಮುಕಳಿ ಮ್ಯಾಲೆ ದಾರೂ ಸುರಿವಿದರು. ಇದನು ಗೆಹಳನಿಯರು ನೋಡಿದರು. ಅವರೆಲ್ಲ ಓಡಿ ಬಂದರು ಮತ್ತು ಝಾಮವ್ವ ಎತ್ತಕೊಂಡು ಜೋಪಡಿಗೆ ಒಯ್ದರು. ಅಷ್ಟರಾಗ ಗೆರ್ಯಾ ಹುಡುಗರು ಹಗ್ಗ ಹರಿದಾಂಗ ಖೀರ ಭಾಂಡೆ ಹೊತಕೊಂಡ ಹ್ವಾದರು…

ಹೋಳಿ ಹುಣ್ಣವಿ ಮಾರನೇ ದಿನ ಧೂಳವಾಡಿ. ಆವತ್ತು ಒಬ್ಬರು ಮತ್ತೊಬ್ಬರ ಮ್ಯಾಲೆ ಕೆಸರು ಎರಚೋದು, ರಾಡ್ಯಾಗ ಮುಳುಗಿಸೋದು, ಮಾರಿಗೆ ಕಾಡಿಗೆ ಹಚ್ಚೋದು, ದಾರೂ ಕುಡಿಯೋದು. ಇದು ಮಧ್ಯಾಹ್ನದವರೆಗೆ ನಡೀತು. ಆಮ್ಯಾಲೆ ಎಲ್ಲಾರೂ ಜಳಕ ಮಾಡಿದರು.

ಸಂಜೆಯಾದ ಮ್ಯಾಲೆ ನಾನೂ, ಪಾಂಡೂ, ಅಪ್ಪ ಮತ್ತು ಧೋಂಡು ಮಾಮಾ ಊರಾಗ ಹೋದಿವಿ. ನಾವು ನಾಲ್ಕೂ ಮಂದಿ ಕೂಡಿ ಒಂದು ಬಾಗಿಲ ಎದುರು ನಿಲ್ಲೋದು, ಅಪ್ಪ ಹಾಡು ಹೇಳತಿದ್ದ. ಮಾಮಾ ಮತ್ತು ನಾವು ಕುಣಿತಿದ್ವಿ. ಆವಾಗ ಆ ಮನಿಯವರು ನಮ್ಗ ಒಂದೆರಡು ರುಪಾಯಿ ಕೊಡುತ್ತಿದ್ದರು. ಹಿಂಗ ಹಾಡತ-ಕುಣೀತ ಎಲ್ಲರ ಕಡೆ ದುಡ್ಡು ಬೇಡತಿದ್ದಿವಿ. ಇದಕ್ಕ ನಮ್ಮ ಮಂದಿ ಪೋಸ್ ಬೇಡೋದು ಅಂತಾರೆ. ಕತ್ತಲೆಯಾಗೋ ಮಟಾ ನಮ್ಮ ಮಂದಿ ಪೋಸ್ ಬೇಡಿದರು. ಸುಮಾರು ಎರಡುನೂರು ರುಪಾಯಿ ಜಮಾ ಆಗಿರಬೇಕು. ರಾತ್ರಿಯಾದ ಮ್ಯಾಲೆ ಬಿಡಾರಕ್ಕ ಬಂದಿವಿ. ಆ ದುಡ್ಡಿಂದ ಅಪ್ಪ ಮತ್ತು ಮಾಮಾ ಶೆರಿ ಕುಡಿದರು ಮತ್ತು ಮಟನ್ ತಗೊಂಡ ಬಂದರು. ರಾತ್ರಿಯೆಲ್ಲ ದಾರೂ ಕುಡಿದು ಗದ್ದಲ ಹಾಕಿದರು. ಹಿಂಗ ಹೋಳಿ ಹುಣ್ಣವಿ ಮಾಡಿದ್ವಿ.

ಬೆಳಕು ಹರೀದ ಬಳಿಕ ಎಲ್ಲರೂ ಕೆಲಸದಾಗ ಮುಳುಗಿದರು.

*****

ಲಮಾಣ್ಯಾರಾಗ ಒಬ್ಬ ಗಟ್ಟಿಮುಟ್ಟ ಹುಡುಗಯಿದ್ದ. ಅವ್ನ ಹೆಸರು ಧಾರ್ಯಾ. ಅಂವಾ ಏನೂ ಕೆಲಸ ಮಾಡತಿರಲಿಲ್ಲ. ರಾತ್ರಿ ಹೊತ್ತಿನಾಗ ಸಣ್ಣಪುಟ್ಟ ಕಳ್ಳತನ ಮಾಡಿ, ತಂದ ಮಾಲು ಕಟುಕನಿಗೆ ಮಾರುತ್ತಿದ್ದ. ಕಟುಕ ಅರ್ಧ ದುಡ್ಡು ಕೊಡತಿದ್ದ. ಅವನ ಸಹವಾಸ ಮಾಡಿ ನಾನೂ ಮತ್ತು ಪಾಂಡೂ ಕಳ್ಳತನ ಮಾಡಾಕ ಹೋಗತಿದ್ವಿ. ಹತ್ತಿ, ಭಾಂಡೆ, ಕೋಳಿ, ಆಡು-ಕದ್ದಕೊಂಡು ಬರತಿದ್ವಿ. ಭಾಂಡೆ ಮತ್ತು ಹತ್ತಿ ಕಟುಕನ ಮೂಲಕ ಮಾರುತ್ತಿದ್ವಿ. ಆಡು, ಕೋಳಿ ಬಿಡಾರದಾಗ ಕೊಯ್ದು ತಿಂತಿದ್ವಿ. ಕೆಲವರು ಇದಕ್ಕ ವಿರೋಧ ಮಾಡಿದರು. ಅಪ್ಪ, ಧೋಂಡು ಮಾಮಾ, ಧಾರ್ಯಾನ ಅಪ್ಪ ಯಾವ ತಕರಾರೂ ಮಾಡಲಿಲ್ಲ. ಯಾಕಂದರ ಪುಗಸಟ್ಟೆ ತಿನ್ನಾಕ ಸಿಗತಿತ್ತು.

ಒಮ್ಮೆ ಬೆಳ್ದಿಂಗಳು ಬಿದ್ದಾಗ ನಾನು, ಪಾಂಡೂ, ಧಾರ್ಯಾ ಹೊಂಟವಿ. ನಡೀತ-ನಡೀತ ಒಂದು ಹೊಲಕ ಬಂದಿವಿ. ಹೊಲದಾದ ಹತ್ತಿ ಬೊಂಡೆ ಒಡೆದು ಹತ್ತಿ ಹೊರ ಬಿದ್ದಿತ್ತು. ಅರಿವಿ ಹಾಸಿದಿವಿ, ಮತ್ತು ಹತ್ತಿ ಕೀಳಾಕ ಶುರು ಮಾಡಿದ್ವಿ. ಕೀಳಾತ ಕೀಳಾತ ಮೂರು ಮಂದಿ ಮೂರು ಗಂಟ ತಯಾರಾತು. ಇನ್ನೇನ ಗಂಟು ಹೊತಕೋಬೇಕು ಅನ್ನೋದರಾಗ, ತೊಗರಿ ಹೊಲದಾಗಿಂದ ಯಾರೊ ಬಂದು ಗಪ್ಪಂತ ಧಾರ್ಯಾನ್ನ ಅಪ್ಪಿಕೊಂಡ. ನಾನು, ಪಾಂಡೂ ಭೂತ ಬಂತಂತ ಅನಕೊಂಡ್ವಿ. ನಾನು ಮತ್ತು ಪಾಂಡೂ ಠಣ್ಣಂತ ಜಿಗಿದು, ಭರ್ರಂತ ಓಡಿದ್ವಿ. ಹೊಲದಿಂದ ದೂರ ಬಂದು ನಿಂತಕೊಂಡಿವಿ. ನಾನು ತಿರುಗಿ ಬಂದೆ. ಪಾಂಡೂ ಓಡಿ ಹ್ವಾದ. ಬಂದ ನೋಡಿದರ ಆ ಮನಶ್ಯಾ ಮತ್ತು ಧಾರ್ಯಾನ ನಡುವೆ ಝಟಾಪಟಿ ನಡೆದಿತ್ತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಬಹಾದ್ದೂರರೇ. ಅಂವಾ ನಾನು ಗೌಡ ಅದೇನಿ, ನಿಮ್ಮನ್ನ ಬಿಡಾಂಗಿಲ್ಲ ಅಂತ ಅಂತಿದ್ದ. ಆಗ ನನಗ ಅಂವಾ ಗೌಡ ಅದಾನು, ಭೂತ ಅಲ್ಲ ಅಂತ ಗೊತ್ತಾತು. ಧಾರ್ಯಾ ಬಿಡಿಸಿಕೊಂಡು ಓಡಿ ಹೋಗಾಕ ನೋಡತಿದ್ದ. ಆವಾಗ ಗೌಡ, ಅವನನ್ನು ಕೆಳಗ ಕೆಡವಿ, ಅವನ ಎದೀ ಮ್ಯಾಲೆ ಕುಂತ. ಮುಖಾ-ಮಾರಿ ನೋಡದೆ ಗುದ್ದಿದ. ನಾನು ಗೌಡಗೆ ಒದ್ದೆ. ಅವನೂ ತಿರುಗಿ ನನ್ನ ಮುಕುಳಿ ಮ್ಯಾಲೆ ಒದ್ದ. ನಾನು ಗಪ್ಪಂತ ಬಿದ್ದೆ. ಚಲೋ ಹೊಡೆತ ಬಿದ್ದಿತ್ತು. ನನಗ ಗೌಡ ಮ್ಯಾಲೆ ಭಾಳ ಸಿಟ್ಟು ಬಂತು. ತಲೀ ಮ್ಯಾಲೆ ಕಲ್ಲು ಹಾಕಬೇಕಂತ ಕಲ್ಲು ಹುಡುಕಿದೆ. ನೋಡಿದರ ಎಲ್ಲ ಕಪ್ಪು ಎರಿನೆಲಾ, ಕಲ್ಲು ಎಲ್ಲಿ ಸಿಗಬೇಕು. ಅಷ್ಟರಾಗ ಸಿಂಧೂರ ಹಚ್ಚಿದ ಕಲ್ಲು ಕಾಣಿಸಿತು. ಅದು ದೇವರ ಕಲ್ಲು ಇರಬೇಕು. ನಾನು ಹಿಂದ ಮುಂದ ವಿಚಾರ ಮಾಡಲಿಲ್ಲ. ಆ ದೇವರ ಕಲ್ಲು ಎತ್ತಿ ಗೌಡನ ತಲೀ ಮ್ಯಾಲೆ ಹಾಕಿದೆ. ಆಗ ಅಂವಾ ಜೋರಾಗಿ ಕಿರುಚಿದ. ಮೈಯೆಲ್ಲ ರಗುತದಿಂದ ತೊಯ್ದಿತ್ತು. ಎಚ್ಚರ ತಪ್ಪಿ ಕೆಳಗ ಬಿದ್ದ. ಆವಾಗ ಧಾರ್ಯಾ ಪಾರಾದ. ನಾವಿಬ್ಬರೂ ಓಡಿ-ಓಡಿ ಬಿಡಾರಕ್ಕ ಬಂದಿವಿ. ಕೌಂದಿಯೊಳಗೆ ಹೊಕ್ಕಿದ್ವಿ. ಗುಜಾ, ಗೋಬರ್ಯಾ, ಜೇಮಲ್ಯಾ, ಧೇನೂ, ಪೋಗೂ, ಗೇಮು – ಹಿಂಗ ಲಮಾಣಿಗಳು ಡೋಲು ಬಾರಿಸ್ತ ಭಜನೀ ಮಾಡಾಕ ಹತ್ತಿದ್ದರು. ಸ್ವಲ್ಪ ಹೊತ್ತ ಆದಮ್ಯಾಲೆ ಭಜನೀ ಮುಗೀತು. ಇನ್ನ ಬೆಳಕು ಹರೀತಂದರ ಏನ ಗತಿ ಅಂಬೋ ಚಿಂತೆಯಿಂದ ನಮಗ ನಿದ್ದಿನೇ ಹತ್ತಲಿಲ್ಲ. ಹೊಲದಾಗ ನಡೆದ ಈ ಹಗರಣ ನಾವು ಯಾರಿಗೂ ಹೇಳಲಿಲ್ಲ.

ನಸುಕಿನ ಹೊತ್ತಿಗೆ ಪೋಲೀಸರ ಗಾಡಿ ನಮ್ಮ ಬಿಡಾರಗಳ ಎದುರಿಗೆ ಬಂತು. ಪೋಲೀಸರ ಜೊತೆಗೆ ಇಡೀ ಊರೇ ಬಂದಿತ್ತು. ಎಲ್ಲ ಕಡೆ ಗದ್ದಲವೋ ಗದ್ದಲ. ಹೆದರಿಕೆಯಿಂದ ನಮ್ಮ ಎದಿ ಪಕ ಪಕ ಅಂತ ಹಾರುತ್ತಿತ್ತು. ಏನು ಮಾಡಬೇಕು ಅನ್ನೋದೆ ಗೊತ್ತಾಗಲಿಲ್ಲ. ಪೋಲೀಸರು ಬಿಡಾರದೊಳಗೆ ಹೋಗಿ ಎಲ್ಲರನ್ನು ಕೌಂದಿಯಿಂದ ಹೊರಗೆ ಎಳೆದು ತಂದರು. ಕೇಳಿದರು, ‘‘ಖರೆ ಖರೆ ಹೇಳರಿ, ರಾತ್ರಿ ಗೌಡರ ಹೊಲಕ್ಕ ಯಾರ-ಯಾರ ಕಳ್ಳತನ ಮಾಡಾಕ ಹೋಗಿದ್ದಿರಿ, ಗೌಡರ ತಲೀ ಮ್ಯಾಲೆ ಕಲ್ಲು ಹಾಕಿದವರು ಯಾರು? ನಮ್ಗ ಪುರಾವೆ ಸಹಿತ ಖರೇ ಮಾಹಿತಿ ಸಿಕ್ಕೇದ. ಅವರೊಳಗ ನಿಮ್ಮ ಪೈಕಿ ಜನರೇ ಅದಾರು. ಯಾರ-ಯಾರ ಇದ್ದರು, ಅವರ ಹೆಸರು ಹೇಳರಿ. ನೀವು ಹೇಳದಿದ್ದರೂ ಗೌಡರು ದವಾಖಾನೆದಾಗ ಅದಾರು, ಅವರನ್ನ ಕರ್ಕೊಂಡ ಬರತೇವಿ. ಅವರು ಗುರತಾ ಹಿಡಿತಾರು, ಇಲ್ಲಂದರ ನಿಮ್ಮ ಎಲ್ಲರನ್ನೂ ಬಡಿದು ಜೇಲಿನ್ಯಾಗ ಹಾಕತೇವಿ. ಹೆಸರ ಹೇಳರಿ. ಅಂಜಬ್ಯಾಡರಿ ಖರೆ ಹೆಸರ ಹೇಳಿದಿರಿ ಅಂದರ ನಾವು ನಿಮಗ ಏನೂ ಮಾಡಾಂಗಿಲ್ಲ. ಬರೇ ಕಾಗದದ ಮ್ಯಾಲೆ ಸಹಿ ಮಾಡಿಸಕೊಂಡು ಬಿಟ್ಟ ಬಿಡ್ತೇವಿ.’’

ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ. ಮತ್ತ ಹೊಯ್ಕೊಳ್ಯಾಕ ಹತ್ತಿದ. ‘‘ಅವ್ವಾ ಸತ್ತೆ, ನಂಗ ಹೊಡಿಬ್ಯಾಡರಿ. ಸಾಯೇಬರ ಬ್ಯಾಡರಿಯಪ್ಪ. ಎಲ್ಲ ಖರೆ-ಖರೆ ಹೇಳತೇನಿ. ಜರಾ ನಿಂದರ್ರಿ. ನಂಗೆಲ್ಲ ಗೊತೈತಿ’’ ಅಪ್ಪ ಬೆನ್ನು ತಿಕ್ಕುತ್ತ ಎದ್ದು ನಿಂತ. ಧಾರ್ಯಾ ಲಮಾಣಿಯ ಹೆಸರು ಹೇಳಿದ. ಆವಾಗ ಪೋಲೀಸರು ಧಾರ್ಯಾನನ್ನು ಹಿಡಿದರು. ದಬಾದಬಾ ಅಂತ ಬಡಿದರು. ಅಂವಾ ಒಪ್ಪಿಕೊಂಡ. ನನ್ನ ಮತ್ತ ಪಾಂಡೂನ ಹೆಸರೂ ಹೇಳಿದ. ಪಾಂಡೂ ಸಣ್ಣಂವ ಇದ್ದ. ಪೋಲೀಸರು ಅವನನ್ನು ಬಿಟ್ಟರು. ನನಗ ಹತ್ತು-ಹನ್ನೊಂದು ವರ್ಷ ಆಗಿರಬೇಕು. ನನಗ ಹಾಗೂ ಧಾರ್ಯಾನಿಗ ಪೋಲೀಸರು ಬೇಡಿ ಹಾಕಿದರು. ಮತ್ತು ಗಾಡ್ಯಾಗ ಕುಂಡರಿಸಿದರು. ನಾನು ಬೊಬ್ಬೆ ಹೊಡಿಯಾಕ ಶುರು ಮಾಡಿದೆ. ಪೋಲೀಸ ರಪ್ಪಂತ ಹೊಡೆದ. ನಾನು ಗಪ್ಪಗಾರ್ ಆದೆ. ಹೊರಗ ನೋಡಿದೆ. ಅವ್ವ ನನಗಾಗಿ ತಲೀ-ತಲೀ ಬಡಕೋತಿದ್ಲು. ಕೂದಲಾ ಕಿತ್ತಕೋತಿದ್ಲು. ಅಪ್ಪ ಪೋಲೀಸರಿಗೆ ಹೇಳಿದ, ‘‘ಸಾಯೇಬರ„„, ನನ್ನ ಕೂಸು ಸಣ್ಣದೈತರಿ. ಎಳೆ ಕೂಸು ಅಂಜೀ ಸತ್ತ ಹೋಗಬೌದು. ಅವನನ್ನ ಬಿಡರಿಯಪ್ಪ. ಬೇಕಾದರ ನನ್ನ ಎಳಕೊಂಡ ಹೋಗರಿ, ಆದರ ಅವನ್ನ ಬಿಡರಿ’’ ಪೋಲೀಸರ ಯಾಕ ಅವ್ನ ಮಾತಿಗೆ ಕಿಮ್ಮತ್ತ ಕೊಡ್ತಾರು, ಮತ್ತ ಯಾಕ ಬಿಡ್ತಾರು. ಪೋಲೀಸರು ತಮ್ಮ ಮಾತು ಕೇಳಾಂಗಿಲ್ಲ ಅನ್ನೋದು ಅಪ್ಪ ಮತ್ತು ಮಾಮಾನ ಧ್ಯಾನದಾಗ ಬಂತು. ಹಿಂಗಾಗಿ ಅಪ್ಪ ಊರ ಮಂದಿ ಕಾಲಿಗೆ ಬಿದ್ದ. ನನ್ನ ಕೂಸಿನ್ನ ಬಿಡಸರಿ ತಾಯಿ-ತಂದೆ ಅಂದ.

ಅಪ್ಪ-ಅವ್ವನ ಆಕ್ರಂದನ ಕೇಳಿ ಒಬ್ಬ ಮನಶ್ಯಾ ಮುಂದೆ ಬಂದ. ಅವ್ನಿಗೆ ನಮ್ಮ ಮ್ಯಾಲೆ ದಯೆ ಬಂದಿರಬೇಕು. ಅಂವಾ ಪೋಲೀಸರಿಗೆ ಅಂದ ‘‘ಬಚ್ಚಾ ಬಹುತ್ ಹೀ ಛೋಟಾ ಹೈ, ಹುಡುಗ ಅಂಜಿ ಸಾಯಬೌದು. ಅವ್ನಿಗೆ ಬಿಡರಿ. ನಾನು ಬೇಕಾದರ ನಾಳೆ ಅವನನ್ನ ಟೇಶನಕ್ಕ ಕರ್ಕೊಂಡ ಬರ್ತೇನಿ’’ ಈ ಮಾತು ಕೇಳಿ ಊರ ಮಂದಿಯೆಲ್ಲ ಅವನ ಮ್ಯಾಲೆ ಏರಿ ಬಂದರು. ಕೆಲವರು ಅವ್ನಿಗೆ ಹೇಳಿದರು, ‘‘ಈ ಹಲ್ಕಟ್ ಜಾತಿ ಜವಾಬ್ದಾರಿ ನೀ ಯಾಕ ತಗೋತಿ? ಈ ಬೇಲದಾರ ಅಲೆಮಾರಿ ಜನರನ್ನ ನಂಬೋ ಹಾಂಗಿಲ್ಲ. ಇವತ್ತ ಇಲ್ಲಿ ಇದ್ದರ, ನಾಳೆ ಮತ್ತೆಲ್ಲೋ ಇರ್ತಾರೆ. ಅವರು ಓಡಿ ಹೋದರಂತೂ ನೀನ ಟೇಶನಕ್ಕ ಎಡತಾಕಾಕ ಬೇಕು. ಈ ಅಲೆಮಾರಿ ಮಂದಿ ಹನ್ನೆರಡು ಊರೆಲ್ಲ ತಿರುಗಾಡಿ ಕಳ್ಳತನ ಮಾಡತಾರು. ಅವರ ಮ್ಯಾಲೆ ದಯಾ ತೋರಿಸಬಾರ್ದು. ದಯೆ ತೋರಿಸಿದವರ ಜೀವಾನ್ನೇ ತಗೋತಾರು. ಇವರೇನು ಮನಶ್ಯಾರ ಅಂದಕೊಂಡಿಯೇನು, ಪಕ್ಕಾ ಪ್ರಾಣಿಗಳು ಅವರು. ಮಾರಾಯಾ, ಅವರ ಜವಾಬ್ದಾರಿ ತಗೋಬ್ಯಾಡ. ಗೌಡರ ವಿರುದ್ಧ ಹೋಗಬ್ಯಾಡ. ನೀನು ಊರಾಗ ಇರಬೇಕಂತ ಮಾಡಿಯೋ ಇಲ್ಲೋ?’’ ಆ ಮನಶ್ಯಾನ ಹೆಂಡತಿನೂ ಬೈದ್ಲು. ಆವಾಗ ಅಂವಾ ಪೋಲೀಸರಿಗೆ ಅಂದ, ‘‘ಸಾಯೇಬರ, ನಮ್ಮೂರ ಮಂದಿ ಹೇಳಿದ್ದೂ ಖರೆ ಅದ. ನೀವೀಗ ಇವರನ್ನು ಹಿಡಕೊಂಡ ಹೋಗರಿ. ಇಲ್ಲಾ ಬಿಡರಿ. ನನಗೇನ ಸಂಬಂಧಯಿಲ್ಲ. ನಿಮ್ಮ ಮನಸಿಗೆ ಬಂದಾಂಗ ಮಾಡರಿ. ನಾನು ಇವರ ನಡುವೆ ಬೀಳೊದಿಲ್ಲ’’. ಆ ಮನಶ್ಯಾ ತಲೀ ಕೆಳಗ ಹಾಕಿ ಊರ ಕಡೆ ಸರಸರ ಹೊಂಟ. ಅಪ್ಪ ಅವ್ನ ಕಾಲಿಗೆ ಬಿದ್ದ, ಕೈ ಮುಗಿದ, ಅವನ ಕೈ ಹಿಡಕೊಂಡ. ನನ್ನ ಮಗನನ್ನ ಪಾರ ಮಾಡರಿಯಪ್ಪ ಅಂತ ಗೋಗರೆದ. ಆದರ ಆ ಮನಶ್ಯಾ ಬಾಯಿ ತೆರೀಲಿಲ್ಲ. ಅಪ್ಪನ ಕೈ ಝಾಡಿಸಿ, ಬಿಡಿಸಿಕೊಂಡು ಊರ ಹಾದಿ ಹಿಡಿದ.

ಆಮ್ಯಾಲೆ ಪೋಲೀಸರು ಬೇಲದಾರರಿಗೆ ಬೆದರಿಕೆ ಹಾಕಿದರು, ‘‘ನೀವು ಇವತ್ತೇ ತಾಲೂಕಿನ ಸೀಮೆ ಬಿಟ್ಟು ಹೋಗಬೇಕು. ಇಲ್ಲದಿದ್ದರ ಉಲ್ಟಾ ತೂಗುಹಾಕಿ ಮೆಣಸಿನ ಖಾರ ಮುಕಳ್ಯಾಗ ತುರಕತೇವಿ’’. ಮುಂದ ಪೋಲೀಸರು ಗಾಡಿಯೊಳಗ ಹೋಗಿ ಕುಂತರು. ನಾನು ಮತ್ತು ಧಾರ್ಯಾ ಇಬ್ಬರೂ ಮೋಟಾರ ಏರಿದ್ವಿ. ಗಾಡಿ ಶುರು ಆದಾಗ ಅಪ್ಪನ ಬೊಬ್ಬೆ ಮತ್ತ ಜೋರಾಯಿತು. ಅವ್ವ ಕೂದಲಾ ಕಿತ್ತಕೋತಿದ್ಲು, ಧೋಂಡು ಮಾಮಾ, ಲಮಣ್ಯಾರು ಅಳಾಕ ಹತ್ತಿದ್ದರು.

ಗಾಡಿ ಓಡತ್ತಿತ್ತು. ಸ್ವಲ್ಪ ಹೊತ್ತಾದ ಮ್ಯಾಲೆ ಎಲ್ಲರೂ ಕಣ್ಮರೆಯಾದರು. ನಡು ಮಧ್ಯಾಹ್ನದ ಹೊತ್ತಾಗಿತ್ತು. ದಾರಿಯಲ್ಲಿ ಒಬ್ಬ ನರಮನಶ್ಯಾನೂ ಕಾಣಲಿಲ್ಲ. ನನ್ನ ಎದಿ ದಡ ದಡ ಅಂತ ಹಾರತಿತ್ತು. ಧಾರ್ಯಾ ಪೋಲೀಸರ ಹತ್ತರ ಒಂದು ಬೀಡಿ ಇಸಕೊಂಡು ಸೇದಾಕ ಹತ್ತಿದ. ಗಾಡಿ ಈಗ ಒಂದು ಕಚ್ಚಾ ರಸ್ತೆಗೆ ಹೋಗಿ ನಿಂತಿತು. ಹೊರಗ ಇಣುಕಿ ನೋಡಿದರ ಒಂದು ಚಕ್ಕಡಿ ನಿಂತಿತ್ತು. ಅದರಾಗ ಗೌಡ ಮತ್ತು ಅವನ ಮಂದಿಯಿತ್ತು. ಗೌಡ ಗಟ್ಟಿಮುಟ್ಟಾದ ಆಸಾಮಿ, ಹುರಿಮೀಸಿ ತಲೆಗೆ ಬ್ಯಾಂಡೇಜ ಕಟ್ಟಿತ್ತು. ಗೌಡ ಮತ್ತು ನಾಲ್ಕು ಮಂದಿ ಗಾಡಿಯಿಂದ ಕೆಳಗ ಇಳಿದರು. ಪೋಲೀಸರು ಕೆಳಗೆ ಇಳಿದು ಬಂದರು. ಎಲ್ಲಾರೂ ಸೇರಿ ದೂರ ಹೋಗಿ ನಿಂತರು. ಎಷ್ಟೋ ಹೊತ್ತು ಗುಸುಗುಸು ಮಾತಾಡಿದರು. ಪೋಲೀಸರು ಅಲ್ಲೇ ಗಿಡದ ಕೆಳಗೆ ಕುಂತರು. ಗೌಡರ ಜೋಡಿ ಮೂರ್ನಾಕ ಮಂದಿ ಗಾಡಿ ಹಂತ್ಯಾಕ ಬಂದರು. ನನ್ನ ಮತ್ತು ಧಾರ್ಯಾನಿಗೆ ಕೆಳಗಿಳಿ ಅಂದರು. ಆ ಮಂದಿ ಎಲ್ಲಾರೂ ಸೇರಿ ನಮ್ಮನ್ನ ಹಿಡಿದು ಒದಿಲಿಕ್ಕ ಶುರು ಮಾಡಿದರು. ಧಾರ್ಯಾ ಬೊಬ್ಬೆ ಹೊಡೆಯಾಕ ಹತ್ತಿದ. ಬಿಡಿಸಬರ್ರಿ„„ ಅಂತ ಪೋಲೀಸರಿಗೆ ಗೋಗರೆದು ಬೇಡಿಕೊಂಡ. ನನ್ನ ಕೆನ್ನೆಗೂ ನಾಲ್ಕಾರು ಹೊಡೆತ ಹಾಕಿದರು. ನಾನು ಉಚ್ಚೆ ಹೊಯ್ದಬಿಟ್ಟೆ. ಅದನ್ನು ನೋಡಿ ನನ್ನ ಬಿಟ್ಟರು. ಮತ್ತ ಧಾರ್ಯಾನ್ನ ಹಿಡಿದು ಬಡಿಯಾಕ ಹತ್ತಿದರು. ಒಬ್ಬಾಂವ ಧಾರ್ಯಾನ ತರಡ ಮ್ಯಾಲೆ ಜೋರಾಗಿ ಒದ್ದ. ಧಾರ್ಯಾ ಕುಸಿದು ಗಕ್ಕಂತ ಕೆಳಗ ಬಿದ್ದ. ಧಾರ್ಯಾ ಕಣ್ಣ ಬೆಳ್ಳಗ ಮಾಡಿದ. ಕೈಕಾಲು ಝಾಡಿಸಾಕ ಹತ್ತಿದ. ಅವನ ಬಾಯಿಂದ ನೊರಿ ಬಂತು. ಬಾಯಿಂದ ಒಂದ ಶಬುದ ಹೊರಗ ಬರಲಿಲ್ಲ. ಮಂದಿ ಬಡಿಯೋದು ನಿಲ್ಲಿಸಿದರು. ಇದು ಪೋಲೀಸರ ಗಮನಕ್ಕ ಬಂತು. ಅವರು ಓಡಿ ಬಂದರು. ಒಬ್ಬ ಪೋಲೀಸ ಜೀಪಿನ್ಯಾಗ ಇದ್ದ ನೀರ ತಗೊಂಡ ಬಂದ. ಧಾರ್ಯಾನ ಬಾಯಾಗ ನೀರು ಸುರಿದ. ಮಾರಿಗೆ ನೀರು ಸಿಂಪಡಿಸಿದ. ಆವಾಗ ಧಾರ್ಯಾ ಉಸಿರಾಡಾಕ ಹತ್ತಿದ. ಸ್ವಲ್ಪ ಹೊತ್ತಾದ ಮ್ಯಾಲೆ ಕಣ್ಣಬಿಟ್ಟ. ಎದ್ದು ಕುಂತ. ಪೋಲೀಸರಿಗೂ ಸಿಟ್ಟು ಬಂದು, ಆ ಮಂದಿಗೆ ಹೇಳಿದರು, ‘‘ವ್ಹಾರೆವ್ಹಾ! ಹಿಂಗ ತರಡ ಬೀಜದ ಮ್ಯಾಲೆ ಹೊಡಿ ಅಂತ ಹೇಳಿದ್ವಿ ಏನು? ನಾವು ನೌಕರಿ ಕಳಕೊಳ್ಳೊ ಪಾಳಿನೇ ಬರ್ತಿತ್ತು.’’ ಆಮ್ಯಾಲೆ ಪೋಲೀಸರು ನನ್ನ ಮತ್ತು ಧಾರ್ಯಾನನ್ನ ಕರ್ಕೊಂಡು ಮೋಟಾರು ಏರಿದರು. ಮೋಟಾರು ಹೊಂಟಿತು. ಒಬ್ಬ ಪೋಲೀಸ ಧಾರ್ಯಾನಿಗೆ ಬೀಡಿ ಕೊಟ್ಟ. ಧಾರ್ಯಾ ಬೀಡಿ ಸೇದಾಕ ಹತ್ತಿದ. ನಾನು ಈ ಹಿಂದ ಒಂದೆರಡು ಸಲ ಅಪ್ಪನ ಜೋಡಿ ಪೋಲೀಸ ಠಾಣಿಕ್ಕ ಬಂದಿದ್ದೆ. ಆದರ ಹಿಂಗ ಮಾತ್ರ ಎಂದೂ ಆಗಿರಲಿಲ್ಲ. ಮೋಟಾರು ಪೋಲೀಸ ಠಾಣೆ ಮುಂದೆ ಬಂದು ನಿಂತಿತು. ನಮ್ಮಿಬ್ಬರನ್ನು ಕೆಳಗ ಇಳಿಸಿ, ಒಂದು ಖೋಲಿಯೊಳಗೆ ಕೂಡಿ ಹಾಕಿದರು.

ಸ್ವಲ್ಪ ಹೊತ್ತಾದ ಮ್ಯಾಲೆ ನನ್ನನ್ನು ಒಬ್ಬ ಸಾಹೇಬರ ಮುಂದೊಯ್ದು ನಿಲ್ಲಿಸಿದರು. ಸಾಹೇಬ ಪ್ರಶ್ನೆ ಕೇಳುತ್ತಿದ್ದ, ನಾನು ಖರೆ ಖರೆ ಹೇಳುತ್ತಿದ್ದೆ. ಮತ್ತೊಬ್ಬ ಸಾಹೇಬ ಬರಕೋತಿದ್ದ. ಅಷ್ಟರಾಗ ಒಬ್ಬ ಪೋಲೀಸ ನನ್ನ ಹಂತ್ಯಾಕ ಬಂದ. ‘‘ಚೋರಿ ಕರತಾ ಹೈ ಕ್ಯಾ ಭೋಸಡಿಕೆ’’ ಎಂದವನು ನನ್ನ ಗಲ್ಲಕ್ಕ ಹೊಡಿಲಿಕ್ಕ ಬಂದ. ನಾನು ತಪ್ಪಿಸಿಕೊಂಡೆ. ಆ ಹೊಡೆತ ಒದೆಯಾಕ ಹತ್ತಿದ ಸಾಹೇಬನ ಗಲ್ಲಕ್ಕ ಬಡಿತು. ಅಂವಾ ಬರೆಯೋದನ್ನ ನಿಲ್ಲಿಸಿದ. ಹೊಡೆದ ಪೋಲೀಸ ಗಾಬರಿಯಾದ. ಅಂವಾ ತಪ್ಪಾಯ್ತರಿ – ತಪ್ಪಾಯ್ತರಿ ಸಾಹೇಬರಿಗೆ ಬೇಡಿಕೊಂಡ. ಸಾಹೇಬರು ಸಿಟ್ಟಿನಿಂದ ಬೈದರು. ನೌಕರಿಯಿಂದ ಕಿತ್ತ ಹಾಕ್ತೇನಿ ಅಂತ ಧಮಕಿ ಹಾಕಿದರು. ಮತ್ತೊಬ್ಬ ಪೋಲೀಸ ಬಂದು ಅವನನ್ನು ಹೊರಗೆ ಕಳಿಸಿದ. ಮುಂದ ಮತ್ತೆ ಸಾಹೇಬ ಪ್ರಶ್ನೆ ಕೇಳಿದ. ನಾನು ಹೇಳಿದ್ದು ಬರಕೊಂಡ. ಬರೆದು ಮುಗಿಸಿದ ಮ್ಯಾಲೆ ಅಂವಾ ಗಂಟೆ ಬಾರಿಸಿದ. ಆಗ ನನಗೆ ಹೊಡೆಯಾಕ ಬಂದ ಪೋಲೀಸ ಓಡಿ ಬಂದ. ‘ಇವನ್ನ ಕರ್ಕೊಂಡು ಹೋಗಿ ಖೋಲಿದಾಗ ಹಾಕರಿ’ ಅಂತ ಅವನಿಗೆ ಹೇಳಿದ. ಪೋಲೀಸರು ಹೊರಗೆ ಹೋದರು. ಆ ಪೋಲೀಸ ನನ್ನನ್ನ ಜೇಲಿಗೆ ಕರ್ಕೊಂಡು ಹೋದ. ಕತ್ತಲೆ ಖೋಲಿ ಲೈಟ್ ಹಚ್ಚಿದ. ಬಾಗಿಲಾ ತೆರೆದ. ಒಳಗ ಧಾರ್ಯಾ ಇದ್ದ. ಇಬ್ಬರು-ಮೂವರು ಸೇರಿ ಅವನನ್ನು ಕೆಳಗ ಕೆಡವಿದರು.

ಹೊಡೆಯಾಕ ಶುರು ಮಾಡಿದರು. ಧಾರ್ಯಾ ಜೋರಾಗಿ ಬೊಬ್ಬೆ ಹೊಡೆದ. ಅವನ ಪಾಯಜಾಮಾ ಬಿಚ್ಚಿದರು. ಕುಂಡ್ಯಾಗ ಖಾರದ ಪುಡಿ ತುರುಕಿದರು. ಧಾರ್ಯಾಗ ಬೆಂಕಿ ಬಿದ್ಧಾಂಗ ಆಗಿರಬೇಕು. ಅಂವಾ ಲಬೋ-ಲಬೋ ಅಂತ ಭಾಳ ಹೊಯ್ಕೊಂಡ. ನನ್ನ ಮುಂದ ಇದೆಲ್ಲ ನಡೆದದ್ದ ನೋಡಿ ನನಗ ಭಾಳ ಅಂಜಿಕಿಯಾತು. ನಾನೂ ಬೊಬ್ಬೆ ಹೊಡೆಯಾಕ ಹತ್ತಿದೆ. ಒಬ್ಬ ಪೋಲೀಸ ನನ್ನ ಬೆನ್ನಿಗೆ ಗುದ್ದಿದ. ನನ್ನ ಕಾಲು ಲಟಲಟ ನಡಗಾಕ ಹತ್ತಿತು. ನಾನು ಪಾಯಜಾಮಾದಾಗ ಸಳಸಳ ಉಚ್ಚೆ ಹೊಯ್ಕೊಂಡೆ. ಆಗ ಹೊಡೆಯೋದು ನಿಲ್ಲಿಸಿದರು.

(ಚಂದ್ರಕಾಂತ ಪೋಕಳೆ)

ಅಷ್ಟರಾಗ ಮತ್ತೊಬ್ಬ ಪೋಲೀಸ ಬಂದು ಹೇಳಿದ, ‘‘ಅದೇನ ಮಾಡಾಕ ಹತ್ತಿದಿರೋ, ಅಂಥ ಸಣ್ಣ ಹುಡುಗನಿಗೆ ಹಾಂಗೆಲ್ಲ ಹೊಡಿಬ್ಯಾಡರಿ. ಸತ್ತಗಿತ್ತ ಹೋದಾನು. ಸಾಕು ಮಾಡರಿ’’ ಪೋಲೀಸರು ಹೊಡೆಯೋದು ನಿಲ್ಲಿಸಿದರು. ನಾವು ಅಳಾಕ ಹತ್ತಿದ್ವಿ. ಆ ಪೋಲೀಸ ನಮ್ಗ ಸುಮ್ನಿರಾಕ ಹೇಳಿದ. ಹೊಡಿಬ್ಯಾಡ ಅಂತ ಹೇಳಿದ ಪೋಲೀಸ ನನ್ನ ಹಂತ್ಯಾಕ ಬಂದ. ನನ್ನ ತಲೀಮ್ಯಾಲೆ ಕೈಯಾಡಿಸಿದ. ಕುಡಿಯಾಕ ನೀರು ಕೊಟ್ಟ. ಮಾರಿ ತೊಳಕೊಳ್ಳಾಕ ಹೇಳಿದ. ಆವಾಗ ನನಗ ನಮ್ಮಪ್ಪನ ನೆನಪಾಯಿತು. ಆ ಪೋಲೀಸ ಅಂದ, ‘‘ಹೆದರಬ್ಯಾಡ, ನಾನೀಗ ಅವರಿಗೆ ಹೊಡಿಯಾಕ ಬಿಡಾಂಗಿಲ್ಲ.’’ ಮುಂದ ನನ್ನ ಮತ್ತ ಧಾರ್ಯಾನ ಒಯ್ದು ಬ್ಯಾರೆ ಖೋಲಿಯೊಳಗ ಕೂಡಿ ಹಾಕಿದರು. ಅಲ್ಲಿ ಮತ್ತ ಮೂರ್ನಾಕ ಮಂದಿ ಬ್ಯಾರೆದವರು ಇದ್ದರು. ಸಣ್ಣ ಖೋಲಿ. ಎದುರಿಗೆ ಬಾಗಿಲಾ. ಅದಕ್ಕ ದೊಡ್ಡ ಕೀಲಿ. ಖೋಲಿಯೊಳಗೇ ಉಚ್ಚಿ ಹೊಯ್ಯೋದು. ದೊಡ್ಡ-ದೊಡ್ಡ ಚಿಕ್ಕಾಡು. ಕಚಾ ಕಚಾ ಕಚ್ಚುತ್ತಿದ್ವು. ಕಚ್ಚಿದಾಗ ಪಟ್ಟಂತ ಹೊಡೀತಿದ್ದೆ. ಹುಚ್ಚು ಹಿಡಿದವರಾಂಗಾತು. ಅಲ್ಲಿ ರಾತ್ರಿ ಮಲಗಬೇಕಾರ ಹಾಸಗಿನೂ ಇಲ್ಲ. ಹೊದಿಕಿನೂ ಇಲ್ಲ. ರಾತ್ರಿಯಿಡೀ ಹಾಂಗ ಕೂತೆ. ಚಿಕ್ಕಾಡಂತೂ ಸಾರ್ಕೆ ಕಚ್ಚತಾನೆ ಇತ್ತು. ನಿದ್ದಿನೂ ಬರಲಿಲ್ಲ. ಪ್ರತಿದಿನ ಒಂದು ಹಸಿಬಿಸಿ ರೊಟ್ಟಿ ಕೊಡತಿದ್ದರು.

ಹೊಟ್ಟಿ ತುಂಬತಿರಲಿಲ್ಲ. ಬಾಟಲಿ ನೀರು ಕುಡಿಬೇಕಾಗತಿತ್ತು. ಆಲ್ಯುಮನಿಯಂ ಬಾಲ್ಡಿ ಜಂಗ ಹಿಡಿದಿತ್ತು. ಧಾರ್ಯಾ ಪೋಲೀಸರಿಗೆ ಸಲಾಂ ಹೊಡಿತಿದ್ದ. ಗುರುತು ಮಾಡಿಕೊಳ್ಳುತ್ತಿದ್ದ. ನೂರು – ಎರಡು ನೂರು ಕೊಡತೇನಿ ಅಂತಿದ್ದ. ಸಾಯೇಬರ ನೋಡತಾರ ಮಾರಾಯಾ ಅಂತ ಪೋಲೀಸರ ಉತ್ತರ. ಧಾರ್ಯಾ ಪೋಲೀಸರ ಹತ್ತರ ಬೀಡಿ ಬೇಡಿ ಸೇದತ್ತಿದ್ದ. ಪೋಲೀಸರು ಅವ್ನಿಗೆ ಹೆಚ್ಚು ರೊಟ್ಟಿ ಕೊಡತ್ತಿದ್ದರು. ಅಲ್ಲಿ ಮತ್ತ ಮೂರ್ನಾಕ ಮಂದಿ ಇದ್ದರು. ಅವರೂ ರೊಟ್ಟಿ ಕೊಡರಿ ಅಂತ ಬಡಕೋತ್ತಿದ್ದರು. ಅವರು ಕೊಟ್ಟ ಒಂದ ರೊಟ್ಟಿಯಿಂದ ಹೊಟ್ಟಿ ತುಂಬತಿರಲಿಲ್ಲ. ಅವರು ಹಸಿವಿನಿಂದ ಹೈರಾಣಾಗತ್ತಿದ್ದರು. ಆಗಾಗ ಜೋರಾಗಿ ಕೂಗಿ ಹೇಳತಿದ್ದರು, ‘‘ನಮ್ಗ ರೊಟ್ಟಿ ತಂದ ಕೊಡರಿ, ಇಲ್ಲಾ ಅಂದರ, ನಾಯಿ ಹೇಲಾದರೂ ತಂದ ಕೊಡರಿ. ಅದನ್ನೂ ಬೇಕಾರ ನಾವು ತಿಂತೇವಿ. ಹೊಟ್ಟಾ ್ಯಗ ಭಾಳ ಬೆಂಕಿ ಬಿದ್ದೆ ೈತರೋ. ರೊಟ್ಟಿಯಾರ ಕೊಡರಿ, ಇಲ್ಲಾ ಗುಂಡ ಹಾಕಿ ಕೊಲ್ಲರಿ’’ ಹಿಂಗ ಏನೇನೋ ಬಡಬಡಸ್ತಿದ್ದರು. ಮೂರ್ನಾಕ ದಿನಾ ಆದಮ್ಯಾಲೆ ಧಾರ್ಯಾ ಜಾಮೀನ ಮ್ಯಾಲೆ ಹೊರಗ ಬಂದ. ನಾನ ಮಾತ್ರ ಹಾಂಗ ಉಳಕೊಂಡೆ. ನನ್ನ ಬಿಡಿಸಿ ಕರಕೊಂಡ ಹೋಗಾಕ ನಮ್ಮ ಮಂದಿ ಯಾರೂ ಬರಲಿಲ್ಲ. ಅಂಥವರು ಯಾರದಾರು? ಎಲ್ಲಾರೂ ಪೋಲೀಸರಿಗೆ ಅಂಜತಿದ್ದರು. ಜೈಲಿನಾಗ ನನ್ನ ಜೋಡಿಯಿದ್ದ ಮೂರ್ನಾಕ ಮಂದಿ, ನನಗ ಕಾಲೊತ್ತಾಕ ಹೇಳತಿದ್ದರು. ಅವರು ಅಲ್ಲೇ ಉಚ್ಚಿ ಹೊಯ್ಯುತ್ತಿದ್ದರು. ನನಗ ಸ್ವಚ್ಚ ಮಾಡಾಕ ಹೇಳತಿದ್ದರು. ನಾನು ಅದನ್ನ ಮಾಡದಿದ್ದರ, ಅವರು ಹೇಳಿದ ಮಾತು ಕೇಳದಿದ್ದರ, ಹಿಡಿದು ಬಡೀತ್ತಿದ್ದರು. ರಾತ್ರಿ ಅವರು ಮಲಗಿದಾಗ ಚಿಕ್ಕಾಡ ಕಚ್ಚತಾವ ಅಂತ, ನನಗ ಅಂಗಿ ಕಳದ ಗಾಳಿ ಹಾಕಾಕ ಹೇಳತ್ತಿದ್ದರು. ಗಾಳಿ ಹಾಕಿ ಹಾಕಿ ಕೈ ಸೋತಬಂದು ನೋಯಿಸತಿತ್ತು. ಒಮ್ಮೊಮ್ಮಿ ತೂಕಡಿಕೆ ಬರತಿತ್ತು. ಗಾಳಿ ಹಾಕೋದು ನಿಲ್ಲಿಸಿದರ ಮುಕುಳಿ ಮ್ಯಾಲೆ ಒದೀತಿದ್ದರು. ಏನ್ ಮಾಡಬೇಕೋ ಗೊತ್ತಾಗತಿರಲಿಲ್ಲ. ಪೋಲೀಸರಿಗೆ ಹೇಳೋಣ ಅಂದರ, ಅವರೂ ಹಿಡಿದ ಬಡಿದರ ಅಂತ ಅಂಜಿಕಿ…

ಒಂದು ದಿನ ನನ್ನ ಕೈ ಕಾಲು ನೋವು ಹೆಚ್ಚಾಗಿ ಜ್ವರ ಬಂತು. ಬಾಯಿಂದ ಬಿಸಿ-ಬಿಸಿ ಉಸಿರು ಹೊರ ಬರಾಕ ಹತ್ತಿತು. ಪೋಲೀಸ ಸಾಯೇಬರ ಕಿವಿಗೆ ಈ ಸುದ್ದಿ ಹಾಕಿ ನನಗೆ ಆಸ್ಪತ್ರೆಗೆ ಒಯ್ದ ತೋರಿಸಿಕೊಂಡು ಆ ಪೋಲೀಸ ಸಾಯೇಬರಿಗೆ ಏನೋ ಹೇಳಿದ. ನನ್ನನ್ನ ಅವರ ಹತ್ತರ ಕರಕೊಂಡ ಹೋದ. ಸಾಯೇಬನಿಗೆ ಹುರಿ ಮೀಸೆಯಿತ್ತು. ಟೇಬಲ ಮ್ಯಾಲೆ ಟೊಪ್ಪಿಗೆಯಿಟ್ಟು ಕೂತಿದ್ದ. ಎಲ್ಲ ಪೋಲೀಸರು ಅವನಿಗೆ ಸಲಾಮ ಹೊಡಿತಿದ್ದರು. ಸಾಯೇಬ ಎತ್ತರವಾಗಿದ್ದ. ಸಣ್ಣ ಕೂದಲು. ದೊಡ್ಡ ಕಣ್ಣು. ಅವರು ಮೆಲ್ಲಗೆ ಕೇಳಿದರು ‘‘ಹುಡುಗಾ, ನೀನ ಯಾರ ಪೈಕಿ?’’
‘‘ಬೇಲದಾರ ಪೈಕಿರಿ.’’
‘‘ಯಾಕ ಹಿಡಕೊಂಡ ಬಂದರು?’’
‘‘ಗೌಡರ ತಲೀ ಒಡೆದೆ, ಕಳ್ಳತನ ಮಾಡಿದೆ ಅಂತ.’’

ನಾನಂತೂ ನಡಗಾಕ ಹತ್ತಿದ್ದೆ. ಸಾಯೇಬ ‘‘ಕತ್ತೆ, ಮತ್ತ ಕಳ್ಳತನ ಮಾಡಬೇಡ. ಅರೆ ಹವಾಲ್ದಾರ ಬಚ್ಚಾ ಛೋಟಾ ಹೈ, ಐಸೇ ಬಚ್ಚೆಕೋ ಕಾಯಕು ಲಾತೆ ಹೋ? ಇಸಕೋ ಛೋಡದೋ. ಔರ ರಸ್ತಾ ಬತಾದೇನಾ.’’ ಯಾವ ಪೋಲೀಸನಿಗೆ ನನ್ನ ಮ್ಯಾಲೆ ದಯೆ ಬಂದಿತ್ತೋ ಅಂವಾ ನನ್ನನ್ನು ಠಾಣೆಯಿಂದ ಹೊರಗ ಕರ್ಕೊಂಡ ಬಂದ. ಹೋಟೆಲಿಗೊಯ್ದು ಭಜಿ ತಿನ್ನಿಸಿದ. ತಲೀ ನೇವರಿಸಿದ. ಅಂಜಬ್ಯಾಡ ಅಂತ ಹೇಳಿ ಬಿಟ್ಟುಬಿಟ್ಟ.
ನಾನು ರಸ್ತೆ ಹಿಡಿದು ಹೊಂಟೆ. ಎಲ್ಲಿ ನೋಡಿದರೂ ಬರೇ ಮಂದಿನೇ ತುಂಬಿ ಕೊಂಡಿದ್ದರು. ಮೋಟಾರಗಳೂ ಓಡತಿದ್ದವು. ನನಗ ನಡೆಯಾಕ ಬರತಿರಲಿಲ್ಲ. ಊರು ನೆನಪಿದ್ದರೂ, ದಾರಿ ನೆನಪಿರಲಿಲ್ಲ. ಒಂದಿಬ್ಬರಿಗೆ ಕೇಳಿದೆ. ಅವರು ಏನೂ ಹೇಳಲಿಲ್ಲ. ನಾನು ಮಂದಿ ನಡುವೆ ನಡಕೋತ ಹೊಂಟೆ. ಕಾಲು ಎಳಕೊಂಡ ಹೋದ ಕಡೆ ಹೊಂಟಿದ್ದೆ. ಕೊನೆಗೆ ಒಬ್ಬ ಪೇಟಾದವನಿಗೆ ಕೇಳಿದೆ. ಅಂವಾ ಏನೇನೋ ಪ್ರಶ್ನೆ ಕೇಳಿದ. ಪೆಪ್ಪರಮಿಂಟ ತಿನ್ನಲು ಹತ್ತು ಪೈಸೆ ಕೊಟ್ಟ. ‘‘ಹುಡುಗಾ, ಹಿಂಗ„„ ಹೋಗಿ ಬಲಕ್ಕ ತಿರುಗು. ಸೀದಾ ಹೋಗು, ಅಂದರ ಅದೇ ಊರಿಗೆ ಹೋಗತಿ’’ ಎಂದ.
ಅಂವಾ ಹೇಳಿದ ಹಾದಿ ಹಿಡಿದು ನಾನು ಹೊಂಟೆ. ನಡೀತ-ನಡೀತ ಊರ ಹೊರಗ ಬಂದೆ. ಈಗ ಮೈಕೈ ನೋವು ಕಡಿಮೆ ಆಗಿತ್ತು. ಜ್ವರಾನೂ ಹೋಗಿತ್ತು. ಧುಂದಿ-ಘಾಟುಡಿ ಹಾದಿ ಹಿಡಿದು ಹೊಂಟೆ. ಹೊಟ್ಟಾ ್ಯಗ ಅನ್ನದ ಅಗಳೂ ಇರಲಿಲ್ಲ. ಹಸಿವೆಯಾಗಿತ್ತು. ಜೀವಾ ಚಡಪಡಿಸಾಕ ಹತ್ತಿತ್ತು. ಒಂದು ಹೆಜ್ಜಿನೂ ಮುಂದಿಡಾಕ ಆಗತಿರಲಿಲ್ಲ. ಆದರೆ ನಡೀದೆ ಬಿಡುವಾಂಗ ಇರಲಿಲ್ಲ. ಅವ್ವ-ಅಪ್ಪನ್ನು ಭೇಟಿ ಆಗಬೇಕೆಂಬ ಇಚ್ಚಾ ಕಾಡಾಕ ಹತ್ತಿತ್ತಲ್ಲ. ಅಂತೂ ನಡೀತ ನಡೀತ ಧುಂದಿ-ಘಾಟೋಡಿ ಊರಿಗೆ ಬಂದೆ. ಹಳ್ಳದ ಆಚೆಗಿರುವ ಹೊಲಕ್ಕ ಬಂದೆ. ನೋಡಿದರ ಅಲ್ಲಿ ನಮ್ಮ ಬಿಡಾರವಾಗಲಿ, ಲಮಾಣಿಗಳ ಜೋಪಡಿಯಾಗಲಿ ಇರಲಿಲ್ಲ. ಬಿಡಾರ ಯಾವಾಗೋ ಹೋಗಿತ್ತು. ಗೂಟ ಕಿತ್ತ ಜಾಗ. ಮೂರು ಕಲ್ಲಿನ ಒಲಿ ಹೆಂಗಿತ್ತೋ ಹಾಂಗ ಇತ್ತು. ಸ್ವಲ್ಪ ತೊಗರಿ ಕಟ್ಟಗಿ ಮತ್ತು ಕತ್ತಿಗಳ ಲದ್ದಿ. ಈಗ ಅಲ್ಲಿ ಮಂದಿ ಹೇಲಾಕ ಕುಂಡರತಿದ್ದರು. ಕಾಲಿಟ್ಟಲ್ಲೆಲ್ಲ ಹೇಲ„„ ಹೇಲು, ಅದನ್ನೆಲ್ಲ ನೋಡಿ ಕಣ್ಣಾಗ ನೀರು ಬಂತು.

ಈ ಜಾಗದಾಗ ನಮ್ಮ ಬಿಡಾರಗಳಿದ್ದವು. ಲಮಾಣಿಗಳ ಜೋಪಡಿಗಳಿದ್ದವು. ಜನರ ಓಡಾಟವಿತ್ತು. ಅವ್ವ-ಅಪ್ಪ ಈಗ ಎಲ್ಲಿಗೆ ಹೋಗಿರಬಹುದು? ಅವ್ವನ ಗತಿ ಏನಾಗೈತೋ? ಅವರನ್ನು ಎಲ್ಲಿ ಭೇಟಿಯಾಗಲಿ? ಏನ ಮಾಡಲಿ? ನಾನು ಒಬ್ಬನೇ ವಿಚಾರ ಮಾಡತಾ ನಿಂತಿದ್ದೆ. ಅಳು ಬಂತು. ಕಣ್ಣ ಒರೆಸಿಕೊಂಡೆ. ಅವ್ವ-ಅಪ್ಪ ಭೇಟಿಯಾಗಲಿ ಸತೀಮಾಯಿ ಅಂತ ಕೈಮುಗಿದೆ. ಹಾಂಗ ಮುಂದ ಹೆಜ್ಜೆಯಿಟ್ಟೆ. ವಾಡಿ ಊರಾಗ ತಾತ್ಯಾನ ಬಿಡಾರ ಇರೋದು ನನಗ ಗೊತ್ತಿತ್ತು. ವಾಡಿಗೆ ಬಂದೆ. ಅಲ್ಲಿ ಬೇಲದಾರರ ಬಿಡಾರ ಎಲ್ಲಿಯದ ಅಂತ ಮಂದಿನ್ನ ಕೇಳಿದೆ. ಅವರು ಹೇಳಿದರು. ಅವರನ್ನು ಹುಡುಕ್ತ-ಹುಡುಕ್ತ ಒಂದು ಕರಿ-ಎರಿ ಹೊಲಕ್ಕ ಬಂದೆ. ಅಲ್ಲಿ ಒಂದು ಬಿಡಾರ ಕಾಣಿಸ್ತು. ತಾತ್ಯಾನಿಗೆ ಐದಾರು ಸಣ್ಣ ಸಣ್ಣ ಹುಡುಗರು ಇದ್ದರು. ತಾತ್ಯಾ, ಕಾಕೂ ಮಾತಾಡಕೋತ ಕುಂತಿದ್ದರು. ಸಂಜಿಯಾಗಾಕ ಹತ್ತಿತ್ತು. ನನಗೂ ನಡೆದು-ನಡೆದು ಸಾಕಾಗಿತ್ತು. ಹಸಿವೆಯಿಂದ ಕಸಿವಿಸಿಯಾಗಾಕ ಹತ್ತಿತ್ತು. ನಾನು ತಾತ್ಯಾನನ್ನು ‘‘ತಾತ್ಯಾ-ಓ-ತಾತ್ಯಾ’’ ಅಂತ ಕೂಗಿ ಕರೆದೆ.

(ಕೃತಿ: ಬಿಡಾರ (ಆತ್ಮಕತೆ), ಮರಾಠಿ ಮೂಲ: ಅಶೋಕ ಪವಾರ, ಕನ್ನಡಕ್ಕೆ: ಚಂದ್ರಕಾಂತ ಪೋಕಳೆ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-, ಪುಟಗಳು: 256)