ಹಾಂ, ನಾನು ಕೊಪ್ಪಳದಲ್ಲಿರುವ ಸುದ್ದಿ ನನ್ನ ಸೋದರಮಾವ ಅಂದರೆ ತಾಯಿಯವರ ಅಣ್ಣನಿಗೆ ತಿಳಿಯಿತು. ಅವ್ವ ಸೋದರಮಾವನಿಗೆ ಪತ್ರ ಬರೆದಿದ್ದಳಂತೆ. ಅವ್ವ ನೀಡಿದ ವಿಳಾಸಕ್ಕೆ ಸರಿಯಾಗಿ ತಲುಪಿದ್ದರು. ಅವರ ಏಕೈಕ ಮಗನಿಗೆ ನನ್ನ ಕೊಟ್ಟು ಮದುವೆ ಮಾಡುವುದೆಂದು ಯೋಚಿಸಿದ್ದರು. ನನ್ನ ವಯಸ್ಸು ಮತ್ತವನ ವಯಸ್ಸು ಹೊಂದುತ್ತಿತ್ತೆಂದು, ಜೋಡಿ ಚೆನ್ನಾಗಿರುತ್ತದೆಂದು ಅವ್ವ ಮತ್ತು ಮಾವ ಮಾತಾಡಿಕೊಂಡಿದ್ದರು. ಮದುವೆ ಮಾಡುವ ಸಲುವಾಗಿಯೇ ನನ್ನನ್ನು ಕರೆದುಕೊಂಡು ಹೋದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೆರಡನೆಯ ಕಂತು
ಗೋವಿಂದರೆಡ್ಡಿ ಅವರು ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸಿಗುತ್ತಿದ್ದಂತೆ ಅವರ ಊರಿನಲ್ಲಿ ಒಂದು ಮೀಟಿಂಗ್ ಆಯಿತಂತೆ. ಗೋವಿಂದರೆಡ್ಡಿ ಬಂದು ಕೇಳಿದಾಗ ಬೇಡ ಎನ್ನಬೇಕೆಂದು ಮೃತ್ಯುಂಜಯ ಗುರುಗಳನ್ನೂ ಒಪ್ಪಿಸಲಾಯಿತಂತೆ. ಅವರು ನನ್ನ ಮದುವೆಯಾಗುವುದರಿಂದ ಊರವರಿಗೇನು ಸಮಸ್ಯೆ ನಿಜಕ್ಕೂ ತಲೆಗೆ ಹೊಳೆಯುತ್ತಲೇ ಇಲ್ಲ. ಯಾರಿಗೇನಾದರೂ ನನ್ನ ಬಗ್ಗೆಯಾಗಲೀ ಗೋವಿಂದರೆಡ್ಡಿ ಬಗ್ಗೆಯಾಗಲೀ ದ್ವೇಷವಿತ್ತಾ? ಕೊನೆಗೂ ತಿಳಿಯಲಿಲ್ಲ.
ಹನ್ನೆರಡು ದಿನಗಳು ಕಳೆದ ಮೇಲೆ ಗೋವಿಂದರೆಡ್ಡಿ ಅವರು ಬಂದಿದ್ದು, ವಿಷಯ ತಿಳಿಸಿದ್ದು ಸರಿ. ಆದರೆ ನನ್ನ ಪಾಡು! ’ಮೃತ್ಯುಂಜಯ ಗುರುಗಳು ಬೇಡವೆಂದರು. ಹೀಗೆ ನಿರ್ಲಕ್ಷ್ಯ ತೋರಿ ಮದುವೆಯಾದರೆ ಸಾಂಸಾರಿಕವಾಗಿ ತೊಂದರೆ ಎದುರಿಸಬೇಕಾಗುತ್ತದೆ’ ಎಂದ ಸಂಗತಿಯನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಹೇಳಿಬಿಟ್ಟರು. ಅವರ ಪ್ರಾಮಾಣಿಕತೆಯನ್ನು ಒಪ್ಪೋಣ. ಆದರೆ ನನಗೆ ತೋರಿದ ಪ್ರೀತಿಯ ಲೋಕ ಇದೆಯಲ್ಲಾ, ಅದರ ತುಂಬ ಸುತ್ತಾಡಿಸಿ, ಮಾಸದ ನೆನಪುಗಳನ್ನು ಕೊಟ್ಟು, ಈಗ ಅದೊಂದು ಕನಸೆಂದರೆ ಹೇಗಾಗುತ್ತದೆ? ಮಾಂಡ್ರೆ ಕವಿಗಳ ಕಂಪೆನಿಯಲ್ಲಿದ್ದಾಗಲೆ ಪ್ರೀತಿಯ ಕಾರಣಕ್ಕೆ ಮನ ನೊಂದಿತ್ತು. ಗಾಯದ ಮೇಲೆ ಬರೆ ಎಳೆದ ಹಾಗೆ ಇವರ ಘಟನೆಯೂ ಸೇರಿತು. ಮನಸ್ಸು ಅವರನ್ನೇ ಗಂಡನೆಂದು ತೀರ್ಮಾನಿಸಿತ್ತು. ಅವರಾಡಿದ ಮಾತುಗಳು ನೋವಿನ ಶೂಲದಂತೆ ಮನಸ್ಸನ್ನು ಇನ್ನಿಲ್ಲದೆ ಘಾಸಿಗೊಳಿಸಿತ್ತು. ಈಗಲೂ ನನ್ನ ಬದುಕನ್ನು ಹಿಂತಿರುಗಿ ಕಂಡಾಗ ನೋವು ಬಿಟ್ಟರೆ ಬೇರೆನಿದೆ ಎನಿಸುತ್ತದೆ. ಸಹಜ ಕನಸುಗಳನ್ನು ಕಮರಿಟ್ಟು ಹೆಣ್ಣೊಬ್ಬಳು ಬದುಕುವುದು ಬಹುಕಷ್ಟ ಎಂದು ಜಗತ್ತಿಗೆ ಕೂಗಿ ಹೇಳಬೇಕು. ಮನಸ್ಸಿನ ಜೊತೆ ಚೆಲ್ಲಾಟ ಆಡುವ ಹೀನ ಬುದ್ಧಿ ಬಿಡಿ ಎಂದು ಕಿರುಚಬೇಕು ಎಂದು ಏನೇನೊ ಅನಿಸುತ್ತದೆ. ಆದರೇನು, ಅವೆಲ್ಲ ಅರಣ್ಯರೋಧನವಷ್ಟೇ!
ಪುರಾಣದಿಂದಲೂ ಹೆಣ್ಣು ಗಂಡಿನ ತಾತ್ಸಾರಕ್ಕೆ ಒಳಗಾದವಳು. ಅಹಲ್ಯೆ, ಸೀತೆ, ರೇಣುಕೆ, ಅಂಬೆ, ಚಿತ್ರಾಂಗದೆ, ಜ್ವಾಲೆ, ಶಾಕುಂತಲೆ, ಚಂದ್ರಮತಿ ಎಷ್ಟೆಲ್ಲ ಹೆಣ್ಣುಮಕ್ಕಳಿಲ್ಲ. ತಿರಸ್ಕಾರ ಮಾಡಿದರೂ ಮತ್ತೆ ಅವಳೇ ಬೇಕು! ಚೆನ್ನಾಗಿದೆ ಅಲ್ಲವೇ. ತೊರೆದ ಗಂಡಸನ್ನು ಮತ್ತೆ ಒಪ್ಪಿ, ತಲೆತಗ್ಗಿಸಿಕೊಂಡು ಅವನು ಹೇಳಿದಂತೆ ಕೇಳಿ, ಬದುಕುವುದು ಪುರಾಣವಾಯಿತು. ವರ್ತಮಾನದಲ್ಲೇನಾದರೂ ಅಹಲ್ಯೆ ಇದ್ದಿದ್ದರೆ ಗೌತಮನ ಸಹವಾಸಕ್ಕೆ ನಮಸ್ಕಾರ ಮಾಡಿ, ’ಮಣ್ಣಿನ ಮಡಿಕೆ’ ಮಾಡಿಯಾದರೂ ಬದುಕು ಕಟ್ಟಿಕೊಳ್ಳುತ್ತಿದ್ದಳು. ಇವರೆಲ್ಲರ ಬದುಕಿನೊಳಕ್ಕೆ ನಾನು ಪ್ರವೇಶ ಪಡೆಯುತ್ತಿದ್ದದ್ದು, ರಂಗದ ಮೇಲೆ. ಕಲಾವಿದರು ಪಾತ್ರದೊಂದಿಗೆ ಅನುಸಂಧಾನ ನಡೆಸುವುದು ಸಾಮಾನ್ಯ. ಅರಿವಾಗಿದ್ದು, ನೋವು ಕೊಟ್ಟ ಗಂಡು ಯಾವ ಗೊಡವೆಯೂ ಇಲ್ಲದೆ ಆರಾಮವಾಗಿರುತ್ತಾನೆಂದು. ಹೆಣ್ಣಿನ ಈ ತಲ್ಲಣಗಳನ್ನು ಜಗತ್ತು ಎಷ್ಟು ಸಲೀಸಾಗಿ ತಳ್ಳಿಹಾಕಿದೆ ನೋಡಿ!
ಮಾಂಡ್ರೆ ಕವಿಗಳ ಕಂಪೆನಿಯಿಂದ ಅಪಹರಿಸಿಕೊಂಡು ತಂದ ನನ್ನನ್ನು ಇಷ್ಟು ನೋಯಿಸುವುದು ಸರಿಯೇ? ಗೋವಿಂದ ರೆಡ್ಡಿ ಅವರು ಮನೆದೇವರು ಮೃತ್ಯುಂಜಯ ಗುರುಗಳ ಬಳಿ ಹೋಗುವ ಮುನ್ನ ಒಂದಷ್ಟು ಹಣ ಕೊಟ್ಟಿದ್ದರು, ಅದನ್ನು ಕಂಪೆನಿ ಕೆಲಸಕ್ಕೆ ವಿನಿಯೋಗಿಸುವಂತೆ ತಿಳಿಸಿದ್ದರು ಎಂದಿದ್ದೆನಲ್ಲಾ, ಖರ್ಚೆಲ್ಲವನ್ನೂ ಕಳೆದ ಉಳಿದ ಹಣವನ್ನು ಲೆಕ್ಕ ಸಮೇತ ಅವರಿಗೆ ಒಪ್ಪಿಸಿದೆ. ಅಚ್ಚರಿಗೊಂಡರು! ವ್ಯವಹಾರದ ವಿಷಯದಲ್ಲಿ ಮೊದಲಿಂದಲೂ ನನಗೆ ಶಿಸ್ತು ಹೆಚ್ಚು. ಗೋವಿಂದರೆಡ್ಡಿ ಅವರು ನನ್ನಲ್ಲಿ ಮಾತಾಡಿಕೊಂಡು ಹೋಗುವಾಗ, ಹಣದ ಗಂಟನ್ನು ಅಲ್ಲೇ ಮರೆತು ಹೋಗುತ್ತಿದ್ದರು. ಅವರು ಬರುವ ತನಕ ಹಾಗೇ ಜೋಪಾನ ಮಾಡಿ, ನೀಡುತ್ತಿದ್ದೆ. ಆಗೆಲ್ಲ ನೀಡುತ್ತಿದ್ದ ಶಹಭಾಷ್ಗಿರಿ ಅಂದೂ ನೀಡಿದರು.
ಮನಸ್ಸು ಸಮಸ್ಥಿತಿಗೆ ಬರಲು ಸ್ಥಳ ಬದಲಿಸಬೇಕಿತ್ತು. ಅವ್ವ ಅಪ್ಪರನ್ನು ನೋಡಬೇಕು ಹೊರಡುತ್ತೇನೆ ಎಂದೆ. ಮತ್ತೆ ಕಂಪೆನಿಗೆ? ಎಂಬ ಪ್ರಶ್ನೆ ಗೋವಿಂದರೆಡ್ಡಿ ಅವರ ಮುಖದಲ್ಲಿ ಕಾಣುತ್ತಿತ್ತು. ಒಂದಷ್ಟು ಸಮಯ ಕಳೆದು ಬರುತ್ತೇನೆ ಎಂದು ನಾನೇ ಹೇಳಿದೆ. ಅವರೇ ನನ್ನನ್ನು ಪ್ರೀತಿಸಿದ್ದು, ಮದುವೆಯಾಗುವಂತೆ ಒತ್ತಾಯಿಸಿದ್ದು. ನಾನು ಹೊರಡುತ್ತೇನೆ ಎಂದಾಗ ಪಾಪಪ್ರಜ್ಞೆ ಮನಸ್ಸಿನಲ್ಲಿ ಕಾಡಿತೋ ಏನೋ ಮುಖ ಸಪ್ಪಗಾಯಿತು! ಕರಗಿ, ಮತ್ತಲ್ಲಿಯೇ ಉಳಿವುದಕ್ಕೆ ಸಾಧ್ಯವೇ? ಸ್ವಾಭಿಮಾನ, ಆತ್ಮವಿಶ್ವಾಸ ಕಳೆದುಕೊಂಡು ಬದುಕಬೇಕಾದ ಅನಿವಾರ್ಯತೆ ಆದರೂ ಏನಿದೆ! ತಂದೆಯವರಿಗೆ ಪತ್ರ ಬರೆದು ಹೊರಡುವುದಕ್ಕೆ ಸಿದ್ಧತೆ ಮಾಡಿಕೊಂಡೆ.
ಅಂದು ಹೊರಟವಳ ಕೈ ಹಿಡಿದು ಕರೆದು, ನನ್ನ ಕೈ ಮೇಲೆ ಅವರ ಕೈಯಿಟ್ಟು ಹೇಳಿದ್ದಿಷ್ಟು. ‘ನೀನು ಅವ್ವ ಅಪ್ಪರ ಜೊತೆಲೇ ಇರು. ಅವರನ್ನು, ನಿನ್ನ ಆಸೆಯಂತೆ ದೊಡ್ಡಪ್ಪದೀರು, ಚಿಕ್ಕಪ್ಪಂದಿರು, ಮನೆಯವರು ಎಲ್ಲರನ್ನೂ ಒಪ್ಪಿಸಿ ನಿನ್ನನ್ನು ನಾನೇ ಮದುವೆಯಾಗುತ್ತೇನೆ’ ಎಂದು. ಆಗ ಆ ಮಾತನ್ನು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ನೋವಿನಿಂದ ತತ್ತರಿಸಿಹೋಗಿದ್ದೆ. ಮನಸ್ಸನ್ನು ಮತ್ತೆ ಕಾಯಿಸಿ, ಸತಾಯಿಸಿ, ನೋವು ಕೊಡುವುದಿಲ್ಲ ಎಂಬುದಕ್ಕೆ ಅವರ ಬಳಿಯೇನಾದರೂ ಪುರಾವೆ ಇದೆಯೇ? ಅಕ್ಕ ಚೆನ್ನಮಲ್ಲಿಕಾರ್ಜುನನ್ನು ನೆನೆದು ಶ್ರೀಶೈಲದ ಕದಳೀವನದಲ್ಲಿದ್ದರೆ, ಕೌಶಿಕ ಮಹಾರಾಜ ಅಲ್ಲಿಗೂ ಬಂದಿದ್ದನಲ್ಲಾ! ಬಿಟ್ಟು ಹೊರಡು, ಎಂದು ಹೇಳಿದ ಮೇಲೆ ಹೊರಟು ನಿಲ್ಲುತ್ತೇವಲ್ಲಾ ಬಹುಶಃ ಹೆಣ್ಣಿನ ಈ ಎದೆಗಾರಿಕೆಯನ್ನು ಸಹಿಸಿಕೊಳ್ಳಬಲ್ಲ ಗಟ್ಟಿತನ ಗಂಡಿಗಿಲ್ಲ ಎನಿಸುತ್ತದೆ. ಹಾಗಾಗಿಯೋ ಏನೊ, ಗೋವಿಂದರೆಡ್ಡಿ ಮತ್ತೆ ಅವರ ಬಳಿಗೆ ಬಾರದ ನನ್ನನ್ನು ಹುಡುಕಿ ನಾನಿರುವಲ್ಲಿಗೇ ಬಂದಿದ್ದರು!
ಸರಿ, ತಂದೆ ಬಂದು ಕರೆದುಕೊಂಡು ಹೋಗಿದ್ದಾಯಿತು. ಆದರೆ ಸೇರಿದ್ದು ಮಾತ್ರ ಕೊಪ್ಪಳವನ್ನು. ಅಲ್ಲೇ ಸಂಬಂಧಿಕರ ಮನೆಯಲ್ಲಿ ಎರಡು ದಿನ ಉಳಿದೆವು. ಅದಾದ ಮೇಲೆ ಬಾಡಿಗೆ ಮನೆಯನ್ನು ಅಪ್ಪನೇ ಹುಡುಕಿದರು. ನನ್ನನ್ನು ಟೈಲರಿಂಗ್ ಕೆಲಸಕ್ಕೆ ಸೇರಿಸಿದರು. ಹೋಗುತ್ತಿದ್ದೆ. ಅಪ್ಪ ಎಂದೂ ಸುಮ್ಮನೆ ಕೂತವರಲ್ಲ. ಹೂವಿನ ವ್ಯಾಪಾರವನ್ನು ಅಲ್ಲೂ ಶುರು ಮಾಡಿಕೊಂಡರು. ಅವರು ಹೊರ ಹೋದ ಸಮಯದಲ್ಲಿ ದುಃಖಿಸುತ್ತಲಿದ್ದೆ. ಮಡುಗಟ್ಟಿದ ನೋವನ್ನು ಹೊರಹಾಕದಿದ್ದರೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುವ ಸಾಧ್ಯತೆ ಇತ್ತು. ಅವರ ನೆನಪಲ್ಲೇ ಹುಚ್ಚಿಯಾದಂತಿದ್ದೆ. ಮನಸ್ಸು ಜಡವಾಗುವ ಪ್ರಕ್ರಿಯೆ ಅಷ್ಟು ಸುಲಭವಲ್ಲ. ನಿರಾಕರಣೆಯ ನೋವು ಏನೆಂಬುದನ್ನು ಅನುಭವಿಸಿದವರಷ್ಟೇ ಬಲ್ಲರು. ಲಿಂಗದ ಪೀಠಿಕೆ ಹಿಡಿದು, ಅದನ್ನೇ ಶಿವನೆಂದು ಭಾವಿಸಿ ಬದುಕೇಕೆ ಹೀಗಾಯಿತು? ಅವರೊಮ್ಮೆ ಬಂದಿದ್ದರೆ, ನನ್ನ ಸಂತೈಸಿ, ಕೈ ಹಿಡಿದಿದ್ದರೆ? ಎಂದೆಲ್ಲ ದೇವರೆಂದು ಭಾವಿಸಿ ನನ್ನೊಳಗಿನ ಸಂಕಟವನ್ನು ಹಂಚಿಕೊಳ್ಳುತ್ತಿದ್ದೆ. ಇದಾವುದರ ಅರಿವಿರದ ತಂದೆ, ಕೆಲಸ ಮುಗಿಸಿ ಮನೆಗೆ ಹಿಂತಿರುಗಿದರೆ ನನ್ನ ಕಣ್ಣು ಬಾತುಹೋಗಿರುತ್ತಿತ್ತು. ‘ಯಾಕವ್ವಾ, ಕಣ್ಣು ಕೆಂಪಾಗ್ಯವಲ್ಲಾ?’ ಎಂದರೆ, ‘ಅಯ್ಯೋ, ಒಲಿ ಊದಿ, ಅಡ್ಗಿ ಮಾಡಿ, ಕಣ್ ಕೆಂಪಾಗೈತೋ ಯಪ್ಪಾ’ ಎಂದುಬಿಡುತ್ತಿದ್ದೆ. ಅಪ್ಪನ ಪಾಲಿಗೆ ನಾನೆಂದೂ ಅಪರಂಜಿಯೇ ಆಗಿದ್ದೆನಲ್ಲಾ, ಹಾಗಾಗಿ ಮಗಳ ಕೈಯಲ್ಲಿ ಒಲೆ ಊದಿಸಿ, ಅಡುಗೆ ಮಾಡಿಸಬೇಕಲ್ಲಾ ಎಂದು ಬೇಸರಿಸುತ್ತಿದ್ದರು.
ಹಾಂ, ನಾನು ಕೊಪ್ಪಳದಲ್ಲಿರುವ ಸುದ್ದಿ ನನ್ನ ಸೋದರಮಾವ ಅಂದರೆ ತಾಯಿಯವರ ಅಣ್ಣನಿಗೆ ತಿಳಿಯಿತು. ಅವ್ವ ಸೋದರಮಾವನಿಗೆ ಪತ್ರ ಬರೆದಿದ್ದಳಂತೆ. ಅವ್ವ ನೀಡಿದ ವಿಳಾಸಕ್ಕೆ ಸರಿಯಾಗಿ ತಲುಪಿದ್ದರು. ಅವರ ಏಕೈಕ ಮಗನಿಗೆ ನನ್ನ ಕೊಟ್ಟು ಮದುವೆ ಮಾಡುವುದೆಂದು ಯೋಚಿಸಿದ್ದರು. ನನ್ನ ವಯಸ್ಸು ಮತ್ತವನ ವಯಸ್ಸು ಹೊಂದುತ್ತಿತ್ತೆಂದು, ಜೋಡಿ ಚೆನ್ನಾಗಿರುತ್ತದೆಂದು ಅವ್ವ ಮತ್ತು ಮಾವ ಮಾತಾಡಿಕೊಂಡಿದ್ದರು. ಮದುವೆ ಮಾಡುವ ಸಲುವಾಗಿಯೇ ನನ್ನನ್ನು ಕರೆದುಕೊಂಡು ಹೋದರು. ನನ್ನಲ್ಲಿ ಏನೊಂದೂ ಹೇಳದೆ, ಹೊರಡಬೇಕು ಎಂದರು. ಯಾಕೆ? ಏನು? ಎತ್ತ? ಏನೊಂದು ಪ್ರಶ್ನಿಸುವುದಕ್ಕೂ ಮನಸ್ಸಿರಲಿಲ್ಲ. ಎಲ್ಲಿದ್ದರೂ ಅದೇ ನೋವು. ಕೋಲೆಬಸವನ ರೀತಿ ತಲೆಯಾಡಿಸಿ ಒಪ್ಪಿದೆ.
ಮಾವನಿದ್ದ ಊರು ಕೊಡದಾಳ. ಮಾವನಿಗೂ ಮತ್ತೆ ಅತ್ತೆಗೂ ಜಗಳವಾಗಿ ಇಬ್ಬರೂ ಬೇರೆ ಬೇರೆಯಾಗಿದ್ದರು. ಸೋದರಮಾವನ ಮಗ ಶಂಕರ ಮಾತ್ರ ಇಬ್ಬರ ಮನೆಗೂ ಹೋಗಿಬರುತ್ತಿದ್ದ. ನನ್ನನ್ನು ಕೊಡದಾಳಿಗೆ ಕರೆತಂದ ಮೇಲೆ ಬಹಳ ಪ್ರೀತಿಯಿಂದ ನೋಡಿಕೊಂಡರು. ಶಂಕರನೆಂದರೆ ಅದೊಂದು ಥರ ಮುಜುಗರ, ನಾಚಿಕೆ. ಅವನು ಬರುತ್ತಾನೆಂದರೆ ಮೈ ಕುಗ್ಗಿಸಿ, ಕೆಳ ಕಾಣುತ್ತಾ ಕುಳಿತುಬಿಡುತ್ತಿದ್ದೆ. ಎರಡೆರಡು ಡಜ಼ನ್ಗಟ್ಟಲೆ ಹಣ್ಣು, ಹೂವೆಂದರೆ ಪ್ರೀತಿಯಾಗಿದ್ದ ನನಗೆಂದೇ ಮೊಳಗಟ್ಟಲೆ ಹೂವು ತರುತ್ತಿದ್ದ. ಜಿಲೇಬಿಯಂತೆ, ತುಪ್ಪದ ಉಂಡೆಯಂತೆ, ನಾನಿಷ್ಟಪಟ್ಟ ಎಲ್ಲವನ್ನೂ ತಂದು ಕೊಡುತ್ತಿದ್ದರು.
ಹೆಚ್ಚೆಂದರೆ ಐದಾರು ದಿನಗಳಾಗಿರಬಹುದು. ಅಡುಗೆಮನೆಯ ಜವಾಬ್ದಾರಿ ಕೊಟ್ಟರು. ಹಸಿವು ತಣಿಸುವ ಹೊಣೆ ನಿಂದವ್ವಾ ಎಂದಿದ್ದಷ್ಟೇ. ಆಯ್ತು ಎಂದು ಸಮ್ಮತಿಸಿದೆ. ಬೆಳಿಗ್ಗೆಗೆಂದು ತಿಂಡಿ, ಮಧ್ಯಾಹ್ನಕ್ಕೆ ರೊಟ್ಟಿ – ಪಲ್ಯ, ರಾತ್ರಿಗೆ ಅನ್ನ ಸಾರು ಮಾಡಿಕೊಟ್ಟೆ. ಒಂದೆರಡು ದಿನ ಕಳೆಯಿತು. ಏನೂ ಹೇಳಲಿಲ್ಲ; ನಾನೂ ಕೇಳಲಿಲ್ಲ. ಮಾರನೇ ದಿನವೂ ಹೀಗೆ ಮಾಡಿಟ್ಟೆ. ಸೋದರ ಮಾವ ಬಂದು, ‘ಏನವ್ವಾ ನೀನು? ಬೆಳಿಗ್ಗೆ ಒಂದು, ಮಧ್ಯಾಹ್ನ ಒಂದು ಮತ್ ರಾತ್ರಿಗೂ ಒಂದೊಂದು ಅಡ್ಗಿ. ಹೀಂಗಾತಂದ್ರೆ ಮನಿ ಉಳಿತದಾ? ಹಿಂಗಾ ಮಾಡೋದು. ಗೊತ್ತಾಗಲ್ಲೆನು’ ಎಂದು ಜೋರಾಗಿಯೇ ಗದರಿಬಿಟ್ಟರು. ನನ್ನನ್ನವರು ಸೊಸೆಯಾಗಿ ಸ್ವೀಕರಿಸಿಯಾಗಿತ್ತು. ಆ ಮಾತುಗಳಲ್ಲಿ ಸೊಸೆಗೆ ಮನೆಯ ರೀತಿನೀತಿಗಳನ್ನು ಕಲಿಸಬೇಕೆಂದಿತ್ತಂತೆ. ಇವಳು ತನ್ನ ಸೊಸೆ. ನಾನಿವಳ ಮಾವ ಎಂಬ ಅಧಿಕಾರದಿಂದ ಹೇಳಿದ ಮಾತುಗಳು ನನಗೆ ಬೇಕೇ ಆಗಿರಲಿಲ್ಲ. ನನಗವು ದರ್ಪದ ಮಾತುಗಳಂತಿತ್ತು. ನೋವನ್ನೆಲ್ಲ ಸಹಿಸಿಕೊಂಡು ಮನಸ್ಸು ಅದಾಗಲೇ ಮಾಗಿಹೋಗಿತ್ತು. ಈ ಘಟನೆಯಿಂದ ಆ ಕ್ಷಣಕ್ಕೆ ಭಯಗೊಂಡೆನಷ್ಟೆ.

ತಂದೆಯವರು ಬಂದರು. ಬೇಸರದಲ್ಲಿದ್ದೆ, ಅತ್ತು ಹೀಗಾಯಿತೆಂದು ಹೇಳಿದೆ. ತಂದೆಯವರಿಗೂ ಈ ಮದುವೆ ಇಷ್ಟವಿರಲಿಲ್ಲ. ಅವರ ಅಕ್ಕನ ಮಗನಿಗೆ ನನ್ನನ್ನು ಮದುವೆ ಮಾಡಿಕೊಡಬೇಕೆಂದು ಭಾವಿಸಿದ್ದರು. ತಾಯಿಯ ಮತ್ತೊಬ್ಬರು ಅಣ್ಣ ಶ್ರೀಮಂತರಾಗಿದ್ದರು. ಅವರ ಕಣ್ಣಲ್ಲಿ ಹೂವಿದ್ದಿತೆಂದು, ನೋಡಲು ಕುರೂಪವಾಗಿದ್ದಾರೆಂದು ಯಾರೂ ಮದುವೆ ಮಾಡಿಕೊಳ್ಳಲಿಲ್ಲ. ಹಾಗಾಗಿ ತಾಯಿಯವರಿಗೆ ಇಬ್ಬರಲ್ಲಿ ಒಬ್ಬರ ಜೊತೆ ನನ್ನ ಮದುವೆ ಮಾಡಿಸಬೇಕೆಂಬ ಇರಾದೆ. ಅದಕ್ಕಾಗಿ ಸೋದರಮಾವ ಬಂದು ಕರೆದ ತಕ್ಷಣ ಅಪ್ಪನವರು ನನ್ನನ್ನು ಮಾತ್ರ ಕಳುಹಿಕೊಟ್ಟು, ಅವರು ಊರಿಗೆ ವಾಪಾಸಾದರು. ಈಗ ಹೀಗೆ ಬೈದಿದ್ದಾರೆಂದು ಗೊತ್ತಾಗಿದ್ದೇ ಅವರೂ ಬಾಯಿಗೆ ಬಂದಂತೆ ಬೈದು, ಕರೆದುಕೊಂಡು ಹೋದರು. ಆಚೀಚೆ ಮನೆಯವರೆಲ್ಲ ‘ಯಾಕೆ ಹೀಗೆ ಹೊರಡುತ್ತಿದ್ದೀಯಾ?’ ಎಂದು ಕೇಳುತ್ತಿದ್ದರೆ, ಏನುತ್ತರಿಸಬೇಕೆಂದು ತೋಚದೆ, ‘ಊರಿಗೆ ಹೋಗಿ ಬರುತ್ತೇನೆ’ ಎಂದುಬಿಟ್ಟೆ!
(ಹಿಂದಿನ ಕಂತು: ಮತ್ತೊಮ್ಮೆ ಒಡೆಯಿತು ಹೃದಯ…)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

