ತಾತನ ನೆನಪು ವಿಚಿತ್ರವಾಗಿ ಕಾಡಲು ಆರಂಭವಾಯಿತು. ಅವರು ತಾವು ನಾಟಕ ಕಲಿಸಲು ಬಳಸುತ್ತಿದ್ದ ಸ್ಕ್ರಿಪ್ಟ್ ಗಳನ್ನ ಒಂದು ಟ್ರಂಕಿನಲ್ಲಿ ತುಂಬಿಟ್ಟಿದ್ದರು. ಅವರು ನಿರ್ಗಮಿಸಿದ ಮೇಲೆ ಅದನ್ನ ಯಾರೂ ತೆರೆದಿರಲಿಲ್ಲ. ಹಾರ್ಮೋನಿಯಂನಿಂದ ಅವರ ನೆನಪು ಹೆಚ್ಚು ಒತ್ತರಿಸಿ ಬಂದದ್ದರಿಂದ ನಾನು ಆ ಟ್ರಂಕ್ ತೆರೆದೆ. ತಾತ ಕೈಯಾರೆ ಬರೆದು ಜೋಪಾನವಾಗಿ ಕಾಪಾಡಿಕೊಂಡಿದ್ದ ನಾಟಕದ ಸ್ಕ್ರಿಪ್ಟ್ ಗಳು ಇದ್ದವು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರʼ ಅಂಕಣ

 

‘ನಿನ್ನ ತಾತ ಆ ಲೆಗ್ ಹಾರ್ಮೋನಿಯಂನಲ್ಲಿ ಜೀವಾನೇ ಇಟ್ಕೊಂಡಿದ್ರು. ‘ಅಯ್ಯ ಇದು ನಿನಗೆ..’ ಅಂತ ಕೊಟ್ಟು ಹೋಗಿದ್ದಾರೆ. ವಾರಕ್ಕೆ ಬೇಡ, ಒಂದು ತಿಂಗಳಿಗಾದರೂ ಒಂದು ಸಲ ಸುಮ್ಮನೆ ಹಾಗೇ ನುಡಿಸೋದು ಬೇಡ್ವಾ..? ನುಡಿಸ್ದೆ ಇದ್ರೆ ರೀಡ್ಸ್ ಹೋಗ್ಬಿಡ್ತಾವೆ ಅಂತಿದ್ರು. ಇರೋವಾಗ ಅದರ ಬೆಲೆ ಗೊತ್ತಾಗಲ್ಲ. ಕಳಕೊಂಡ ಮೇಲೇನೇ ಗೊತ್ತಾಗೋದು..’ ಅಂತ ಅಮ್ಮ ಆಗಾಗ ನನಗೆ ಎಚ್ಚರಿಸುತ್ತಲೇ ಇದ್ದರು.

ಹಾರ್ಮೋನಿಯಂ ಹೊರಡಿಸುವ ನಾದಕ್ಕೂ ನನಗೂ ಮೊದಲಿನಿಂದಲೂ ಏನೋ ನಂಟು ಇದೆ. ಬೇರೆಲ್ಲ ವಾದ್ಯಗಳಿಗೆ ಹೋಲಿಸಿದರೆ ಹಾರ್ಮೋನಿಯಂನ ನಾದ ನನ್ನಲ್ಲಿ ಕಂಪನ ತರಿಸುತ್ತೆ. ಇದು ತಾತನಿಂದ ಬಂದ ಬಳುವಳಿ ಇರಬೇಕು ಎಂದು ಅನೇಕ ಸಲ ಅನಿಸಿದೆ. ತಾತ ಹಳ್ಳಿಯಲ್ಲಿನ ಹಳೇ ಕಾಲದ ಮಣ್ಣಿನ ಮನೆಯಲ್ಲಿದ್ದ ಕಾಲದಲ್ಲಿ ನಡೆಯುತ್ತಿದ್ದ ಹರಿಕಥೆಗೆ ಇದೇ ಲೆಗ್ ಹಾರ್ಮೋನಿಯಂ ನುಡಿಸುತ್ತಿದ್ದಾಗಿನಿಂದ ಇದು ನನಗೆ ಪರಿಚಿತ. ನಂತರ ಅವರು ಹಳ್ಳಿಗರಿಗೆ ಸಂಜೆ ಹೊತ್ತು ದೇವಸ್ಥಾನದಲ್ಲಿ ಪೌರಾಣಿಕ ನಾಟಕ ಕಲಿಸುತ್ತಿದ್ದ ಸಂದರ್ಭದಿಂದಲೂ ಈ ಹಾರ್ಮೋನಿಯಂ ಚಿತ್ರ ನನ್ನ ಕಣ್ಣಲ್ಲಿ ಸ್ಥಾಪಿತವಾಗಿ ಕೂತಿದೆ.

ತಾತ ಅಂದಿನಿಂದ ತಾವು ನಿರ್ಗಮಿಸುವವರೆಗೆ ಈ ಹಾರ್ಮೊನಿಯಂನನ್ನ ತುಂಬ ಜತನದಿಂದ ಕಾಪಾಡಿಕೊಂಡು ಬಂದ ಬಗೆಯೂ ನನಗೆ ತಿಳಿದಿದೆ. ಕಡೆಗೆ ಅವರು ನಿರ್ಗಮಿಸುವ ಪೂರ್ವದಲ್ಲಿ ಕೂಡ ನನಗೆ ಒಮ್ಮೆ ‘ನಾನು ಇರೋವರೆಗೂ ಈ ಹಾರ್ಮೋನಿಯಂ ಕಳೀಬೇಡಪ್ಪೋ..’ ಅಂದ ಮಾತು ಇನ್ನೂ ನನ್ನ ನೆನಪಿನಲ್ಲಿ ಹಾಗೇ ಇದೆ. ಅಷ್ಟು ಪ್ರೀತಿಯಿಂದ ನನಗೆ ತಮ್ಮ ಜೀವದಂತಿದ್ದ ಹಾರ್ಮೋನಿಯಂ ಬಿಟ್ಟುಕೊಟ್ಟು ನಡೆದಿದ್ದರು.

ಅದನ್ನು ಆಗಾಗ ನುಡಿಸದಿದ್ದರೆ ನಂತರ ಅದು ನುಡಿಯುವುದನ್ನೇ ನಿಲ್ಲಿಸುತ್ತದೆ ಎಂದು ನನಗೆ ಗೊತ್ತಿದ್ದರೂ ಯಾಕೋ ನುಡಿಸಲು ಮನಸ್ಸು ಬರುತ್ತಿರಲಿಲ್ಲ. ಇದಕ್ಕೆ ನಾನು ಹಾರ್ಮೋನಿಯಂ ಶಾಸ್ತ್ರೀಯವಾಗಿ ಅಭ್ಯಾಸ ಮಾಡದಿರುವುದೂ ಕಾರಣವಿದ್ದಿರಬಹುದು. ಆದರೂ ತಾತ ಬದುಕಿದ್ದಾಗ ಮತ್ತು ಅವರು ಹಾರ್ಮೋನಿಯಂ ನುಡಿಸುತ್ತಿದ್ದಾಗ ನನಗೂ ಹಾರ್ಮೋನಿಯಂ ನುಡಿಸಬೇಕೆಂದು ಆಸೆಯಾಗುತ್ತಿತ್ತು. ಆ ತುಡಿತ ಮುಂದುವರೆದು ಯಾವ ಬಿಳುಪಿನ ಮನೆಯದು ಎಷ್ಟನೆಯ ಶೃತಿ ಮತ್ತು ಯಾವ ಕಪ್ಪಿನ ಮನೆಯದು ಎಷ್ಟನೆಯ ಶೃತಿ ಅಂತ ತಿಳಿದುಕೊಂಡು ಮೊದಲಿಗೆ ಸ ಪ ಸ ತಿಳಿದು ನಂತರ ಮಧ್ಯಮ ಕಾಲದ ಕೀರ್ತನೆಗಳವರೆಗೂ ಸುಮ್ಮನೆ ಹಾಗೇ ಕೊಂಚ ಕಾಲ ಬೇರೆ ಪುಟ್ಟ ಹಾರ್ಮೊನಿಯಂನಲ್ಲಿ ಅಭ್ಯಾಸ ಮಾಡಿದ್ದುಂಟು. ಇದನ್ನು ನೋಡಿಯೋ ಏನೋ ತಾತ ನನಗೆ ನಾಟಕಗಳಿಗೆ ಬಳಸುತ್ತಿದ್ದ ತಮ್ಮ ಲೆಗ್ ಹಾರ್ಮೋನಿಯಂ ಕೊಟ್ಟು ನಡೆದದ್ದು.

ಹಾಗೆ ನೋಡಿದರೆ ನಾನು ಕಲಿಯಲು ಆರಂಭಿಸಿದ್ದು ಫಿಡ್ಲು (ಇದು ತಾತ ಪಿಟೀಲನ್ನ ಕರೆಯುತ್ತಿದ್ದ ಬಗೆ). ಅದರ ಜೊತೆಗೆ ಹಾರ್ಮೋನಿಯಂ ನಾದದ ಬಗೆಗೂ ವ್ಯಾಮೋಹವಿದ್ದದ್ದರಿಂದ ಗಮನ ಆ ಕಡೆಗೂ ಹರಿದಿತ್ತು. ನನಗೆ ಫಿಡ್ಲಿನಲ್ಲಿ ಎಷ್ಟು ಪಾಠವಾಗಿತ್ತೋ ಅಷ್ಟನ್ನ ಹಾರ್ಮೋನಿಯಂ ಮನೆಗಳಲ್ಲಿ ಆಗಾಗ ತಾಕಲು ಪ್ರಯತ್ನಿಸುತ್ತಿದ್ದೆ. ಆಮೇಲೆ ಯಾಕೆ ಆಸಕ್ತಿ ಕುಂದಿತು ಎಂಬುದು ನನಗೆ ಗೊತ್ತಿಲ್ಲ.

ಅಮ್ಮ ಆಗಾಗ ‘ರೀಡ್ಸ್ ಹೋಗ್ಬಿಡ್ತಾವಂತೆ…. ನುಡಿಸು..’ ಅಂತಿದ್ದ ಮಾತು ಒಮ್ಮೆ ಕಿವಿಗೆ ತಾಕಿ ಲೆಗ್ ಹಾರ್ಮೋನಿಯಂ ನುಡಿಸಲು ಕೂತೆ. ಸಂಗೀತದೊಂದಿಗಿನ ಸಾತತ್ಯ ಬಿಟ್ಟು ಎಷ್ಟು ವರ್ಷಗಳಾಯಿತು ಎಂದು ಹಾರ್ಮೋನಿಯಂ ನುಡಿಸಲು ಕೂತಾಗ ಗೊತ್ತಾಯಿತು. ತಾತನ ಬೆರಳುಗಳು ಅದೇ ಹಾರ್ಮೋನಿಯಂ ಮೇಲೆ ಚಲಿಸುತ್ತಿದ್ದ ಬಗೆಯಲ್ಲೇ ಒಂದು ಲಾಲಿತ್ಯ ಇತ್ತು. ಮತ್ತು ನಾದದಲ್ಲೂ ಪ್ರೌಢಿಮೆ ಇತ್ತು.

ನಾನು ಕೂತಾಗ ಹಾರ್ಮೋನಿಯಂ ತನ್ನ ಗೊಗ್ಗರು ಗಂಟಲು ತೆರೆದಂತೆ ಮತ್ತು ಕ್ಷೀಣ ದೀನ ಸ್ವರ ತೆಗೆಯುತ್ತಿರುವಂತೆ ಅನಿಸಿತು. ಇದನ್ನು ಸಹಿಸಿಕೊಳ್ಳುವುದು ನನಗೇ ಕಷ್ಟವಾಗತೊಡಗಿತು. ರೀಡ್ಸ್ ಹೋಗಬಾರದು ತಾನೇ ಅಂದುಕೊಂಡು ನೆಪಕ್ಕೆ ಯಾವುಯಾವುದೋ ಮನೆಗಳ ಮೇಲೆ ಬೆರಳುಗಳನ್ನ ಒತ್ತಿ ಹಾರ್ಮೋನಿಯಂಗೆ ವಿರಾಮ ಕೊಟ್ಟೆ.

ಅನಂತರ ತಾತನ ನೆನಪು ವಿಚಿತ್ರವಾಗಿ ಕಾಡಲು ಆರಂಭವಾಯಿತು. ಅವರು ತಾವು ನಾಟಕ ಕಲಿಸಲು ಬಳಸುತ್ತಿದ್ದ ಸ್ಕ್ರಿಪ್ಟ್ ಗಳನ್ನ ಒಂದು ಟ್ರಂಕಿನಲ್ಲಿ ತುಂಬಿಟ್ಟಿದ್ದರು. ಅವರು ನಿರ್ಗಮಿಸಿದ ಮೇಲೆ ಅದನ್ನ ಯಾರೂ ತೆರೆದಿರಲಿಲ್ಲ. ಹಾರ್ಮೋನಿಯಂನಿಂದ ಅವರ ನೆನಪು ಹೆಚ್ಚು ಒತ್ತರಿಸಿ ಬಂದದ್ದರಿಂದ ನಾನು ಆ ಟ್ರಂಕ್ ತೆರೆದೆ. ತಾತ ಕೈಯಾರೆ ಬರೆದು ಜೋಪಾನವಾಗಿ ಕಾಪಾಡಿಕೊಂಡಿದ್ದ ನಾಟಕದ ಸ್ಕ್ರಿಪ್ಟ್ ಗಳು ಇದ್ದವು. ಅವುಗಳಲ್ಲಿ ‘ಸಂಪೂರ್ಣ ರಾಮಾಯಣ..’ ‘ದಾನಶೂರ ಕರ್ಣ’, ‘ಕುರುಕ್ಷೇತ್ರ’, ‘ಸುಭದ್ರಾ ಕಲ್ಯಾಣ..’ ಇತ್ಯಾದಿ ಸ್ಕ್ರಿಪ್ಟ್ ಗಳಿದ್ದವು. ಅದರಲ್ಲಿ ಮೊದಲಿಗೆ ನನ್ನ ಗಮನ ಸೆಳೆದದ್ದೆಂದರೆ ತಾತನ ಅಕ್ಷರಗಳು. ಎಷ್ಟು ಚೆಂದ ಮತ್ತು ಮುದ್ದಾದ ಅಕ್ಷರಗಳು! ಅವುಗಳನ್ನು ಹಾಗೆ ಬರೆಯಲು ಎಷ್ಟು ತಾಳ್ಮೆ ಬೇಕು ಎಂದು ಅಂದಾಜಿಸುತ್ತ ಹಾಗೇ ನಾಟಕದ ಸ್ಕ್ರಿಪ್ಟ್ ಗಳ ಪುಟ ತಿರುವುತ್ತಾ ಹೋದೆ.

ಮೊದಲಿಗೆ ರಾಮಾಯಣ ನಾಟಕದಲ್ಲಿ ದಶರಥ ಹಾಡುವ ‘ಮಂತ್ರಿಯೇ ಕೇಳು…. ಇಂತು ನಾನು ರಾಜ್ಯವಾ..’ ಹಾಡಿನಿಂದ ಓದಲಿಕ್ಕೆ ಆರಂಭಿಸಿದೆ. ಇದೇ ಹಾಡನ್ನ ತುಂಬ ಹಿಂದೆ ಹಳ್ಳಿಯಲ್ಲಿ ಮಾಡಿದ ನಾಟಕದಲ್ಲಿ ದಶರಥನ ಪಾತ್ರಧಾರಿ ಹೇಗೆ ಹಾಡಿದ್ದರು ಎಂದೂ ಆ ದಿನದ ನಾಟಕದ ಸಂಭ್ರಮ ಬಣ್ಣದ ದಿರಿಸುಗಳ ಸಮೇತ ನೆನಪಿಗೆ ನಿಲುಕಲು ಆರಂಭಿಸಿದವು. ಹಾಗೇ ರಾಮಾಯಣ ನಾಟಕದ ಒಂದೊಂದು ದೃಶ್ಯಗಳೂ ತಾತನ ಅಕ್ಷರಗಳ ಲಾಲಿತ್ಯದ ಸಮೇತ ಕಣ್ಣಿಗೆ ಕಟ್ಟಲು ಆರಂಭಿಸಿದವು.

ಹೀಗೇ ಪುಟ ತಿರುವುತ್ತಿದ್ದಾಗ ಒಂದು ದೊಡ್ಡ ಪಾಂಪ್ಲೆಂಟ್ ಕಂಡಿತು. ತೆಗೆದು ನೋಡಿದೆ. ಅದು ತಾತ ಎಂಬತ್ತರ ದಶಕದಲ್ಲಿ ಕಲಿಸಿದ್ದ ‘ಸಂಪೂರ್ಣ ರಾಮಾಯಣ’ ನಾಟಕದ ವಿವರಗಳನ್ನ ಒಳಗೊಂಡಿದ್ದ ಪಾಂಪ್ಲೆಂಟ್. ಅದನ್ನ ನೋಡುವುದೇ ಒಂದು ಚೆಂದ ಅನಿಸಿತು. ಯಾಕೆಂದರೆ ತುಂಬ ಪ್ರಸಿದ್ಧ ಸ್ಲೋಗನ್ ‘ಕಲಾದೇವಿ ಎಲ್ಲರನ್ನೂ ಕೈಬೀಸಿ ಕರೆಯುತ್ತಾಳೆ.. ಆದರೆ ಆರಿಸಿಕೊಳ್ಳುವುದು ಮಾತ್ರ ಕೆಲವರನ್ನೇ..’ ಎಂಬಿತ್ಯಾದಿ ವಿವರಗಳಿದ್ದವು. ಅಲ್ಲದೆ ಕೆಳಗೆ ‘ನಾಟಕ ನೋಡಲು ಮರೆಯದಿರಿ.. ಮರೆತು ನಿರಾಶರಾಗದಿರಿ..’ ಎಂದಿತ್ತು. ಮಧ್ಯೆ ನಾಟಕದ ಹೆಸರು ದೊಡ್ಡ ಹೆಸರುಗಳಲ್ಲಿ ನಮೂದಾಗಿತ್ತು. ಆಮೇಲೆ ಸುತ್ತ ಇಂತಿಂಥ ನಟರು ಇಂತಿಂಥ ಪಾತ್ರಗಳನ್ನ ಮಾಡುತ್ತಿದ್ದಾರೆ ಎಂಬ ವಿವರಗಳು. ನಡುವೆ ನಿರ್ದೇಶನ, ಹಾರ್ಮೋನಿಯಂ ಮಾಸ್ಟರ್ ಎಂದು ನನ್ನ ತಾತನ ಹೆಸರು ಇತ್ತು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಗಮನ ಸೆಳೆದು ನನ್ನ ಕಣ್ಣುಗಳು ಅರಳುವಂತೆ ಮಾಡಿದ್ದು ಒಂದು ಸಾಲು. ಅದು ನನ್ನ ತಾತನ ಹೆಸರಿನ ಮೇಲೆ ‘ಪೀರ್ ಸಾಹೇಬರ ಶಿಷ್ಯ…’ ಅಂತ ಆರಂಭಿಸಿ ನನ್ನ ತಾತನ ಹೆಸರು ಇತ್ತು! ನನ್ನಲ್ಲಿ ಕುತೂಹಲ ಕೆರಳಿತು. ಯಾವ ಪೀರ್ ಸಾಹೇಬರು? ಮಹಮದ್ ಪೀರ್?! ಇರಲಾರದು ಎಂದು ನನಗೇ ತಕ್ಷಣ ಅನಿಸಿತು. ಯಾಕೆಂದರೆ ಮಹಮದ್ ಪೀರ್ ಸಾಹೇಬರು ವೃತ್ತಿರಂಗಭೂಮಿಯಲ್ಲಿ ಒಂದು ದಂತಕಥೆ. ಅವರ ಬಗ್ಗೆ ದಾಖಲಾಗಿರುವ ಕೆಲ ವಿವರಗಳನ್ನ ಓದಿ ತಿಳಿಯುವ ಪ್ರಯತ್ನವನ್ನ ಹಿಂದೆ ಮಾಡಿದ್ದೆ.

ಪ್ರತಿಯೊಂದು ವೃತ್ತಿ ನಾಟಕ ಕಂಪನಿಯ ಮಾಲೀಕರೂ ಮತ್ತು ನಟರು ಒಂದೊಂದು ಪಾತ್ರದಲ್ಲಿ ಜನರ ಮನಸ್ಸಲ್ಲಿ ಸ್ಥಾಯಿಯಾಗಿ ಉಳಿದಿದ್ದರು. ಗುಬ್ಬಿ ವೀರಣ್ಣನವರು ಎಂದರೆ ಸದಾರಮೆಯಲ್ಲಿ ಕಳ್ಳನ ಪಾತ್ರ, ಸುಬ್ಬಯ್ಯನಾಯ್ಡುಗಳು ಅಂದರೆ ರಾವಣ, ಕೆ. ಹಿರಣ್ಣಯ್ಯನವರು ಎಂದರೆ ನಾಜೂಕಯ್ಯ, ಬಳ್ಳಾರಿ ಲಲಿತಮ್ಮನವರೆಂದರೆ ಮಣಿಮಂಜರಿ, ಕೊಟ್ಟೂರಪ್ಪನವರೆಂದರೆ ಕರ್ಣ, ಏಣಗಿ ಬಾಳಪ್ಪನವರು ಅಂದರೆ ಬಸವೇಶ್ವರ, ಮಾಸ್ಟರ್ ಹಿರಣ್ಣಯ್ಯನವರೆಂದರೆ ದತ್ತು.. ಹಾಗೇ ಮಹಮದ್ ಪೀರ್ ಸಾಹೇಬರು ಅಂದರೆ ‘ಗೌತಮ ಬುದ್ಧ..’ ಎಂದು ಕೇಳಿ ಮತ್ತು ಓದಿ ತಿಳಿದಿದ್ದೆ.

ತಾತನ ಬೆರಳುಗಳು ಅದೇ ಹಾರ್ಮೋನಿಯಂ ಮೇಲೆ ಚಲಿಸುತ್ತಿದ್ದ ಬಗೆಯಲ್ಲೇ ಒಂದು ಲಾಲಿತ್ಯ ಇತ್ತು. ಮತ್ತು ನಾದದಲ್ಲೂ ಪ್ರೌಢಿಮೆ ಇತ್ತು.

ಇಂದು ಕೆಲ ಮುಸಲ್ಮಾನರು ಬಳಸುವ ಕನ್ನಡವನ್ನ ನಾವು ಹಾಸ್ಯದ ಸ್ಟಫ್ ಆಗಿಸಿಕೊಂಡು ನಗುತ್ತಿದ್ದೇವೆ. ಅವರು ಕನ್ನಡವನ್ನು ಬಳಸುವ ಕ್ರಮ ಹಾಸ್ಯಕ್ಕೆ ವಸ್ತುವಾಗತೊಡಗಿದೆ. ಆದರೆ ಇದಕ್ಕೆ ಅಪವಾದದಂತೆ ಬದುಕಿದವರು ಮಹಮದ್ ಪೀರ್ ಸಾಹೇಬರು ಎಂದು ಅನೇಕರು ಹೇಳಿರುವುದನ್ನ ಕೇಳಿದ್ದೇನೆ. ಮುಸಲ್ಮಾನರಾದರೂ ರಂಗದ ಮೇಲೆ ಕೆಲವೊಮ್ಮೆ ಸಂಸ್ಕೃತದ ಆಶುಕವಿತ್ವ ರಚಿಸಿ ಸಂಸ್ಕೃತ ಪಂಡಿತರು ತಲೆಕೆರೆದುಕೊಳ್ಳುವಂತೆ ಮಾಡುವ ಛಾತಿ ಪೀರ್ ಸಾಹೇಬರಿಗೆ ಇತ್ತಂತೆ. ಹಾಗೇ ಅನಕೃರವರು ಒಮ್ಮೆ ಪೀರ್ ಅವರನ್ನ ಅವರ ಎಳವೆಯಲ್ಲಿ ನೋಡಿದ ಸಂದರ್ಭದಲ್ಲಿ ಕೂಡ ಪೀರ್ ಸಾಹೇಬರು ಇಂಗ್ಲಿಷ್ ನಲ್ಲಿ ತುಂಬ ಸ್ಪುಟವಾಗಿ ಮಾತಾಡುತ್ತಿದ್ದರಂತೆ. ಅನಕೃ ಅವರಿಗೇ ಆಶ್ಚರ್ಯ. ಇಷ್ಟು ಚೆಂದ ಇಂಗ್ಲಿಷ್ ಬರುವ ತರುಣ ನಾಟಕ ಕಂಪನಿ ಯಾಕೆ ಸೇರಿದ ಎಂದು ಅವರು ಕೇಳಿಕೊಳ್ಳುತ್ತಾರೆ. ಜೊತೆಗೆ ಈ ಪ್ರಶ್ನೆಯನ್ನ ಸ್ವತಃ ಪೀರ್ ಸಾಹೇಬರಿಗೇ ಕೇಳಿ ಉತ್ತರ ಪಡೆದುಕೊಳ್ಳುತ್ತಾರೆ.

ಪ್ರಬುದ್ಧ ನಟನೊಬ್ಬ ಮನಸ್ಸು ಮಾಡಿದರೆ ಸನ್ನಿವೇಶ ನಿರ್ಮಾಣವನ್ನೇ ಬದಲಿಸಿ ಬೇರೆ ಸನ್ನಿವೇಶದ ನಿರ್ಮಾಣದ ಮೂಲಕ ಹೊಸ ಪರಿಕಲ್ಪನೆ ಹೇಗೆ ಹುಟ್ಟು ಹಾಕಿ ಮಾದರಿ ಕಲ್ಪಿಸಬಲ್ಲ ಎಂಬುದಕ್ಕೆ ಪೀರ್ ಸಾಹೇಬರ ನಟನ ಬದುಕಿನ ಆರಂಭಿಕ ಘಟ್ಟ ಸಾಕ್ಷಿ ಒದಗಿಸುತ್ತದೆ. ಅದು ‘ಕೃಷ್ಣ ಲೀಲಾ’ ನಾಟಕ. ಅದರಲ್ಲಿ ಪೀರ್ ಸಾಹೇಬರದು ವಿಜಯನ ಪಾತ್ರ. ಅನಕೃ ಅವರು ಒಂದು ಕಡೆ ಈ ನಾಟಕದ ಬಗ್ಗೆ ಹೀಗೆ ದಾಖಲಿಸಿದ್ದಾರೆ- “ವಿಜಯನದು ಮುಗ್ಧ ಭಕ್ತನ ಪಾತ್ರ. ಬುದ್ಧಿಯ ಪ್ರಪಂಚಕ್ಕೆ ಹಾರದೆ ಭಕ್ತ ಪರಮಾತ್ಮನನ್ನು ಗೆಳೆಯನ ಹಾಗೆ ಕಂಡು, ಆರಾಧಿಸುವ ಭಾವ. ಈ ಸಖ್ಯಯೋಗವನ್ನು ಯಾವ ಮಟ್ಟಕ್ಕೆ ಶಿರಹಟ್ಟಿ ವೆಂಕೋಬರಾಯರು ತಮ್ಮ ‘ಕೃಷ್ಣಲೀಲಾʼ ಪ್ರದರ್ಶನಗಳಲ್ಲಿ ತಂದಿದ್ದರೆಂಬುದನ್ನು ಕಂಡಿದ್ದೆ. ವೆಂಕೋಬರಾಯರ ಕೃಪೆಯಿಂದ ಕೃಷ್ಣನ ವಿಷಯಾಸಕ್ತಿಗೆ ಗ್ರಾಸವೊದಗಿಸುವ ವೃತ್ತಿ ವಿಜಯನ ಕೊರಳಿಗೆ ಬಿದ್ದಿತ್ತು. ಅವನ ಮಾತುಗಳು, ನಡತೆ ಎಲ್ಲ ವೇಶ್ಯಾವಾಟಿಕೆಗಳ ಪ್ರತೀಕ. ಇಂತಹ ವಿಕೃತ ಪರಿಸ್ಥಿತಿಯಿಂದ ವಿಜಯನನ್ನ ಪಾರುಮಾಡಿ ಅವನಿಗೂ ಅವನ ಆರಾಧ್ಯದೇವ ಕೃಷ್ಣನಿಗೂ ಮಾನ ಮರ್ಯಾದೆಗಳನ್ನು ತಂದುಕೊಟ್ಟವರು ಮುಸಲ್ಮಾನರಾದ ಮಹಮದ್ ಪೀರರವರು..”

ಇದನ್ನು ಹಿಂದೆ ಓದಿದ್ದ ಸಂದರ್ಭದಲ್ಲೇ ಪೀರ್ ಸಾಹೇಬರು ನನ್ನ ಮನಸ್ಸಿನಲ್ಲಿ ದಾಖಲಾಗಿದ್ದರು. ಅವರ ಚಿತ್ರ ಮನಸ್ಸಿನಲ್ಲಿ ಬೆಳೆಯುತ್ತಾ ಸಾಗಿತ್ತು. ಹಾಗೇ ರಂಗದಲ್ಲಿ ಅವರ ಪಯಣದ ಹೆಜ್ಜೆಗಳ ಕಡೆಗೆ ಗಮನ ಹರಿಸಬೇಕೆನಿಸಿತ್ತು. ಈ ನಿಟ್ಟಿನಲ್ಲಿ ಅರಿಯುತ್ತಾ ಹೋದಂತೆ ಪೀರ್ ಸಾಹೇಬರು ಗೌತಮ ಬುದ್ಧನ ಪಾತ್ರದಲ್ಲಿ ಎಲ್ಲರ ಮನಸ್ಸಿನಲ್ಲಿ ನೆಲೆ ನಿಲ್ಲುವ ಪೂರ್ವದಲ್ಲಿ ‘ಷಹಜಹಾನ್’ ನಾಟಕದಲ್ಲಿ ತಮ್ಮ ಛಾಪು ಕಾಣಿಸಿದ್ದರು. ಅಲ್ಲಿ ಅವರದು ಷಹಜಹಾನ್ ಪುತ್ರ ‘ದಾರಾ’ನ ಪಾತ್ರ. ಹೆಚ್.ಎಲ್.ಎನ್ ಸಿಂಹ ಅವರು ಷಹಜಹಾನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದರಂತೆ. ಆದರೆ ಅನಕೃ ಹೇಳುವಂತೆ ‘ಪೀರರ ಕಲಾಮಂದಿರದ ಹೆಬ್ಬಾಗಿಲು ದಾರಾನ ಪಾತ್ರʼ.

ಆದರೆ ಅನಂತರ ಅವರು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತದ್ದು ಗೌತಮ ಬುದ್ಧನಾಗಿ. ‘ಚಂದ್ರಕಲಾ ನಾಟಕ ಮಂಡಳಿ’ ಸ್ಥಾಪಿಸಿದರು. ಷಹಜಹಾನ್ ನಾಟಕದಿಂದ ಗಣಪತಿ ಪೂಜೆ ಆರಂಭವಾಯಿತು. ಬುದ್ಧನ ಪಾತ್ರ ದೃಢವಾಗಿ ನಿಂತಿತು. ಆದರೂ ನಾಟಕದ ಬದುಕು ಎಂದರೆ ಸುಮ್ಮನೆ ಮಾತೆ? ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪೀರ್ ಸಾಹೇಬರು ಒಮ್ಮೆ ಮಾತಾಡುತ್ತಾರೆ. ಸತತ ಎರಡು ಗಂಟೆಗಳ ಕಾಲ ತಮ್ಮ ರಂಗದ ಬದುಕಿನ ಕಷ್ಟಗಳು ಮತ್ತು ಅನುಭವಗಳ ಬಗ್ಗೆ ಮಾತಾಡಿದ್ದು ದಾಖಲಾಗಿದೆ.

ಅವರ ಮಾತು ಹೀಗಿದೆ- “ನನ್ನ ಕಂಪನಿ ಹೇಗೆ ನಡೆದಿದೆ ಎಂದು ಹೇಳಬೇಕಾದ ಕಾರಣವೇ ಇಲ್ಲ. ರಂಗಮಂದಿರ ಯಾವಾಗಲೂ ತುಂಬಿರುತ್ತದೆ. ಯಾರಿಂದ ಎನ್ನುವಿರಿ- ನನ್ನ ಸಾಲಗಾರರಿಂದ. ಒಳಗೆ ಬಣ್ಣದ ಕೋಣೆಯಲ್ಲಿಯೂ- ಅವರೇ, ಹೊರಗೆ ಸೋಫಾಗಳ ಮೇಲೂ ಅವರೇ. ನನ್ನ ಮೇಲೆ ವಾರಂಟುಗಳ ಸುರಿಮಳೆ. ಆದರೆ ಭಗದನುಗ್ರಹದಿಂದ ರಂಗವನ್ನ ಪ್ರವೇಶಿಸಿದನೆಂದರೆ ಅವುಗಳೆಲ್ಲ ಮರೆತುಹೋಗುತ್ತದೆ. ನನ್ನನ್ನು ಕಾಪಾಡಿರುವುದು ಈ ಪಾತ್ರಲೀನತೆ. ರಂಗದ ಮೇಲಿದ್ದಷ್ಟು ಹೊತ್ತಾದರೂ ನಾನು ತಾಪತ್ರಯಗಳನ್ನು ಮರೆಯುತ್ತೇನೆ…”

ಪೀರ್ ಸಾಹೇಬರ ಈ ಮಾತುಗಳು ನನ್ನ ತಲೆಯಲ್ಲಿ ಇಂದಿಗೂ ಹಾಗೇ ಉಳಿದುಬಿಟ್ಟಿವೆ. ಇಂದು ಅನೇಕರು ನಾಟಕದ ತಂಡಗಳನ್ನ ಕಟ್ಟಿಕೊಂಡು ಇಸಂಗಳಿಗೆ ಕಟ್ಟುಬೀಳುತ್ತಾ ಜನರು ಇಷ್ಟಪಡದ ನಾಟಕಗಳನ್ನೇ ಮಾಡುತ್ತ ಮತ್ತು ಸಿದ್ಧಾಂತಿಗಳಾಗುತ್ತ ಲಾಸ್ ಮಾಡಿಕೊಳ್ಳುತ್ತಿದ್ದರೂ ಮತ್ತೆ ಸಿದ್ಧಾಂತಕ್ಕೆ ಕಟ್ಟುಬೀಳುತ್ತಿರುವ ಬಗೆಯನ್ನು ಕಾಣುತ್ತಲೇ ಇದ್ದೇನೆ. ಅಂಥವರು ನಾಟಕಗಳ ರಿಪೀಟೆಡ್ ಶೋಗಳನ್ನ ಮಾಡಿದಾಗ ಹೋಗಿ ಪೀರರು ಹೇಳಿದ ‘ಕಡೆಪಕ್ಷ ರಂಗದ ಮೇಲಿದ್ದಷ್ಟು ಹೊತ್ತಾದರೂ ಎಲ್ಲ ಮರೆಯುತ್ತೇನೆ’ ಎಂಬುದು ಆ ತಂಡದ ಸ್ಥಾಪಕನ ಮುಖದಲ್ಲಿ ಇಣುಕುತ್ತಿದೆಯೇ ಎಂದು ನೋಡುವ ಕೂತೂಹಲಕ್ಕೆ ಹೋಗುತ್ತೇನೆ. ಇದು ನನಗೆ ರೂಢಿ ಆಗಿಬಿಟ್ಟಿದೆ.

ಇಂಥ ಪೀರರ ಬಳಿ ನನ್ನ ತಾತ ಶಿಷ್ಯರಾಗಿದ್ದರೆ..? ಇರಲಾರರು ಅನಿಸಿತು. ಆದರೆ ಪಾಂಪ್ಲೆಟ್ ನಲ್ಲಿ ಹಾಗೇ ಇತ್ತು. ಕುತೂಹಲ ಹೆಚ್ಚಾಗಿ ಅಮ್ಮನ ಬಳಿ ಹೋಗಿ ‘ತಾತ ಪೀರರ ಶಿಷ್ಯಾನಾ..?’ ಅಂತ ಕೇಳಿದೆ. ಅವರು ‘ಹೌದು..’ ಅಂದರು.

ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿರುವಾಗಲೇ ಅಮ್ಮ ತಮ್ಮ ನೆನಪುಗಳನ್ನ ಕೆದಕಲು ಆರಂಭಿಸಿದರು.

‘ಹೌದು ಊರಿಗೆ ಆಗಾಗ ಬರೋರು. ನಾನೂ ನೋಡಿದ್ದೀನಿ. ಬಂದರೆ ಒಂದು ವಾರ ಊರಲ್ಲೇ ಇದ್ದುಬಿಡೋರು. ನಾಟಕದ ಹಾಡುಗಳನ್ನ ಹೇಗೆ ಹೇಳೋರು ಗೊತ್ತಾ..? ಸೂಪರ್…’

ಅಮ್ಮ ಹೇಳುತ್ತಿದ್ದ ವಿವರ ಕೇಳಿಸಿಕೊಂಡು ಅಪ್ಪ ಕೂಡ ಪೀರ್ ಸಾಹೇಬರಿಗೆ ಸಂಬಂಧಿಸಿದ ನೆನಪುಗಳನ್ನ ಕೆದಕಲು ಆರಂಭಿಸಿದರು. ಅಪ್ಪ ಇದ್ದದ್ದೂ ಕೂಡ ಅದೇ ಹಳ್ಳಿಯಲ್ಲಿಯೇ. ‘ನಾನೂ ನೋಡಿದ್ದೀನಲ್ಲ.. ಏನು ಕಂಠ ಅವರದು… ಕಂಚಿನ ಕಂಠ… ಯಾವುದದು ಅವರು ಹಾಡ್ತಿದ್ದ ಪ್ರಸಿದ್ಧ ಹಾಡು..?’ ಎಂದು ಮತ್ತೆ ಅಮ್ಮನನ್ನೇ ಕೇಳಿದರು.

ಅಮ್ಮ ನೆನಪಿಸಿಕೊಂಡು ‘ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನಾ… ದೇಗುಲದಿ ಹಾಡಿದನು..’ ಅಂತ ನೆನಪಿಸಿದರು. ಅಪ್ಪ ಅದಕ್ಕೆ ದನಿಗೂಡಿಸಿ ‘ಕರೆಕ್ಟ್ ಅದೇ ಹಾಡು… ಅದೇನು ಕಂಠ ಅವರದು… ಆ ಥರ ಭಾವದಲ್ಲಿ ಹಾಡೋರನ್ನ ಆಮೇಲೆ ನಾನು ನೋಡಲೇ ಇಲ್ಲ ಬಿಡು..’ ಅಂದರು.

ಮಹಮದ್ ಪೀರ್ ಸಾಹೇಬರು ತುಂಬ ಅದ್ಭುತವಾಗಿ ಹಾಡುತ್ತಿದ್ದರು ಎಂದು ನಾನು ಎಲ್ಲೂ ಓದಿದ್ದು ನೆನಪಾಗಲೇ ಇಲ್ಲ. ಕೊಂಚ ಅನುಮಾನವಾಗಿ ‘ಅವರು ಯಾವ ನಾಟಕ ಕಂಪನಿ ಕಟ್ಟಿದ್ರು ಹೇಳಿ..’ ಅಂತ ಕೇಳಿದೆ. ಅಮ್ಮ ಅಪ್ಪನಿಗೆ ಅದು ಗೊತ್ತಿರಲಿಲ್ಲ. ನೆನಪೂ ಇರಲಿಲ್ಲ. ‘ಅವರು ಮಾಡ್ತಿದ್ದ ಗೌತಮ ಬುದ್ಧನ ಪಾತ್ರ ನೋಡಿದ್ದಿರಾ..?’ ಅಂತ ಕ್ರಾಸ್ ಚೆಕ್ ಮಾಡಿದೆ. ಯಾಕೆಂದರೆ ಅಮ್ಮ ಆ ಕಾಲದಲ್ಲಿ ಕೆಲವೊಮ್ಮೆ ಬೇರೆಬೇರೆ ನಾಟಕದ ಕಂಪನಿಗಳು ಬಂದಾಗ ಎತ್ತಿನ ಗಾಡಿಯಲ್ಲಿ ಮನೆಯವರೊಂದಿಗೆ ಹೋಗಿ ನಾಟಕ ನೋಡಿ ಬಂದದ್ದಿದೆ. ಈ ಬಗ್ಗೆ ಅವರೇ ಹೇಳಿದ್ದರು. ಹಾಗಾಗಿ ಕೇಳಿದೆ.

‘ಬುದ್ಧನ ಪಾತ್ರಾನಾ..?’ ಅಂತ ಹುಬ್ಬೇರಿಸಿದರು. ಅವರಿಗೆ ನೆನಪಿರಲಿಲ್ಲ. ಹೋಗಲಿ ಎಂದು ಮಹಮದ್ ಪೀರ್ ಸಾಹೇಬರ ಫೋಟೊವನ್ನ ನೆಟ್ನಿಂದ ಹೆಕ್ಕಿ ತೆಗೆದುಕೊಂಡು ಹೋಗಿ ತೋರಿಸಿ ‘ ಇವರೇನಾ..?’ ಎಂದು ಕೇಳಿದೆ.

ಅಪ್ಪ ಅಮ್ಮ ಇಬ್ಬರೂ ನೋಡಿದರು. ‘ ಗೊತ್ತಾಗ್ತಿಲ್ಲಪ್ಪ… ನಾನು ನೋಡೊ ಕಾಲಕ್ಕಾಗಲೇ ಅವರ ತಲೆಕೂದಲು ಹೆಚ್ಚೇ ಉದುರಿ ಹೋಗಿತ್ತು. ಅವರನ್ನ ಕಂಡರೆ ತಾತನಿಗೆ ವಿಪರೀತ ಗೌರವ. ಕಂಡ ಕೂಡಲೆ ಕಾಲಿಗೆ ನಮಸ್ಕಾರ ಮಾಡತಿದ್ರು. ಅವರು ಒಂದು ವಾರ ಇದ್ದು ಪಾಠ ಹೇಳಿ ಹೊರಟಾಗ ತುಂಬ ಗೌರವದಿಂದ ತಾತ ಪೀರ್ ಸಾಹೇಬರನ್ನ ಕಳುಹಿಸಿಕೊಡ್ತಿದ್ರು. ಆದರೆ ಅದಕ್ಕಿಂತ ಹೆಚ್ಚಾಗಿ ನನಗೆ ನೆನಪಿರೋದು ಪೀರ್ ಸಾಹೇಬರು ಊಟವಾದ ಮೇಲೆ ತುಂಬ ನೀರು ಕುಡೀತಿದ್ದರು ಅನ್ನೋದು. ಮೊದಲೇ ಕೇಳೋರು- ‘ ತಾಯಿ ನಾನು ಜಾಸ್ತಿ ನೀರು ಕುಡೀತೀನಿ… ನೀರು ಇದೆ ಅಲ್ವಾ ಮನೇಲಿ..?’ ಅಂತ. ನಿಮ್ಮ ಅಜ್ಜಿ ಅದಕ್ಕೆ ‘ ಅಯ್ಯೋ ನೀರು ಇಲ್ವೇ.. ಇದೆ ಹೇಳಿ..’ ಅಂತಿದ್ರು. ಅವರು ಹೇಳಿದ ಹಾಗೆ ಊಟವಾದ ಮೇಲೆ ನೀರು ಜಾಸ್ತಿ ಕುಡೀತಿದ್ರು…’ ಅಂತ ಅಮ್ಮ ಹೇಳುತ್ತಿದ್ದಂತೆ ಅಪ್ಪ ಮಾತು ತೆಗೆದರು-
‘ ನೀರೂ ಕುಡೀತಿದ್ರು ಹಾಗೇ ರಮ್ಮೂ ಕುಡೀತಿದ್ರು… ನಾಟಕದ ಮಧ್ಯೆ ಬೇರೆಯವರು ಬಂದು ಹಾಡು ಹಾಡಲಿಕ್ಕೆ ನಿಲ್ತಾರಲ್ಲ… ಆಗ ಪೀರ್ ಸಾಹೇಬರು ಬಂದು ಹಾಡ್ಲಿ ಅಂತ ಜನ ಕಾಯ್ತಿರತಿದ್ರು.. ಇವರೂ ಮೊದಲು ಹಾಡಿ ಅಲ್ಲಿಂದ ಜಾಗ ಖಾಲಿ ಮಾಡತಿದ್ರು..ಯಾಕ್ಹೇಳು… ಕುಡಿಬೇಕಲ್ಲ…’ ಅಂತ ಅಪ್ಪ ನಕ್ಕರು. ಇದರಿಂದ ಅಮ್ಮನಿಗೆ ಸಿಟ್ಟು ಬಂತು. ‘ ನೀವು ಯಾವಾಗಲೂ ಇನ್ನೊಬ್ಬರಲ್ಲಿನ ನೆಗೆಟಿವೇ ಹೇಳೋದು. ಕುಡಿಯೋದು ಹೇಳಬೇಕಾಗಿತ್ತಾ.. ಈಗ..?’ ಅಂತಂದರು. ಅಪ್ಪ ಕೂಡ ಅದಕ್ಕೆ ಚೂರು ಕನಲಿ ‘ ಅಯ್ಯೋ ನಾನೇನು ಇಲ್ದೆ ಇರೋದನ್ನ ಹೇಳಿದ್ನಾ.. ಇರೋದನ್ನೇ ಹೇಳಿದ್ದು.. ತಗೋ..’ ಅಂದರು.

‘ ಅದನ್ನೇ ಯಾಕೆ ಹೇಳಬೇಕಾಗಿತ್ತು..?’ ಎಂದು ಅಮ್ಮ ಮತ್ತೆ ಜಗಳ ತೆಗೆದರು. ಅದಕ್ಕೆ ಅಪ್ಪ ‘ ಅಯ್ಯೊ ಆಗಲ್ಲಪ್ಪ ಇವಳತ್ರ… ಸರಿ ಏನೀಗ…ಆದರೆ ಏನೆಲ್ಲ ಕುಡಿದ್ರೂ ನನ್ನನ್ನ ಕಂಡಕೂಡಲೇ ‘ ಏನ್ ಮರೀ..’ ಅಂತ ಪ್ರೀತಿಯಿಂದ ಮಾತಾಡಿಸೋರು…ನನಗೆ ನೆನಪಿದೆ..’ ಅಂದರು. ಅಮ್ಮನಿಗೆ ಚೂರು ನಿರಾಳ ಆದಂತೆ ಅನಿಸಿತು.

ಆದರೆ ನನಗೆ ವಿಪರೀತ ಗೊಂದಲವಾಯಿತು. ಗೌತಮ ಬುದ್ಧ ಖ್ಯಾತಿಯ ಪೀರ್ ಸಾಹೇಬರಿಗೂ ಮತ್ತು ಈ ಪೀರ್ ಸಾಹೇಬರಿಗೂ ತಾಳೆ ಆಗುತ್ತಿಲ್ಲ ಅನಿಸಿತು. ಬುದ್ಧ ಖ್ಯಾತಿಯ ಮಹಮದ್ ಪೀರ್ ರಿಗೆ ಸಂಬಂಧಿಸಿದ ಮತ್ತಷ್ಟು ವಿವರಗಳನ್ನ ಹುಡುಕಲು ಆರಂಭಿಸಿದೆ. ಹೀಗೇ ಹುಡುಕುತ್ತಿದ್ದಾಗ ‘ ಚಂದ್ರಕಲಾ ನಾಟಕ ಮಂಡಳಿಯ’ ಪೀರ್ ಸಾಹೇಬರು 1937ರಲ್ಲಿ ಮೈಸೂರಿನಲ್ಲಿ ಅಕಾಲ ಮರಣಕ್ಕೆ ತುತ್ತಾದರು ಎಂಬ ವಿವರ ಸಿಕ್ಕಿತು.

ನನ್ನ ಅಪ್ಪ ಹುಟ್ಟಿದ್ದು ಭಾರತಕ್ಕೆ ಸ್ವಾತಂತ್ರ ಬಂದ ವರ್ಷ ಎಂದು ನನಗೆ ಗೊತ್ತಿತ್ತು. ಅಂದರೆ ನನ್ನ ಅಪ್ಪ ಹುಟ್ಟುವ ಮೊದಲೇ ಬುದ್ಧನ ಖ್ಯಾತಿಯ ಪೀರ್ ಸಾಹೇಬರು ತೀರಿ ಹೋಗಿದ್ದರು.

ಹಾಗಿದ್ದರೆ ತಾತನಿಗೆ ಹಾಡು ಕಲಿಸಿದ ಆ ಪೀರ್ ಸಾಹೇಬರು ಯಾರು..? ಇನ್ನೂ ಯೋಚಿಸುತ್ತಲೇ ಇದ್ದೇನೆ. ಅವರು ಯಾರಾದರೂ ಆಗಿರಲಿ. ನನ್ನ ತಾತ ಪೀರ್ ಸಾಹೇಬರ ಕಾಲಿಗೆ ನಮಸ್ಕಾರ ಮಾಡಿ ಅವರನ್ನ ಬರಮಾಡಿಕೊಳ್ಳುತ್ತಿದ್ದ ಚಿತ್ರ ಕಣ್ಣ ಮುಂದೆಯೇ ಸುಳಿ ತಿರುಗುತ್ತಲೇ ಇದೆ. ಜೊತೆಗೆ ಒಳಗೆ ಖುಷಿ ಅರಳಿಕೊಳ್ಳುತ್ತಿದೆ. ಇಂಥದ್ದೊಂದು ಕಾಲ ಇತ್ತೆ ಎಂದು ಪ್ರಶ್ನಿಸಿಕೊಳ್ಳುತ್ತಲೇ ಇದ್ದೇನೆ. ಇದಕ್ಕೆ ಕಾರಣ ಇಂದಿನ ಪ್ರಕ್ಷುಬ್ಧ ಕಾಲ. ಮತ್ತು ಅಸಹನೀಯ ಕಾಲ. ಏನು ಎಂದು ವಿವರಿಸುವ ಅಗತ್ಯವಿಲ್ಲ. ಆದರೆ ನನ್ನ ತಾತ ಪೀರ್ ಸಾಹೇಬರನ್ನ ಗುರುವಾಗಿ ಕಂಡು ಕಾಲಿಗೆ ನಮಸ್ಕರಿಸಿದ ಚಿತ್ರ ಕಾಲಕ್ಕೆ ಪಾಠವಾಗಬಾರದೆ ಅನಿಸುತ್ತಲೇ ಇದೆ..