ಸಂಕಣ್ಣನಾಯಕನು ಕಟ್ಟಿಸಿದ ದೇವಾಲಯವು ಮುಂದಿನ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ ಅಭಿವೃದ್ಧಿಪಡಿಸಿರುವಂತೆ ಕಂಡುಬರುತ್ತದೆ. ಈ ದೇಗುಲದ ಮಂಟಪನಿರ್ಮಿತಿಯಲ್ಲಿ ಹೊಯ್ಸಳ, ವಿಜಯನಗರ ಶೈಲಿಗಳಲ್ಲದೆ, ಬಿಜಾಪುರದ ಸುಲ್ತಾನರ ಕಟ್ಟಡನಿರ್ಮಾಣಗಳ ಪ್ರಭಾವವೂ ಗೋಚರವಾಗುತ್ತದೆ. ದೇವಾಲಯದ ಆವರಣವನ್ನು ಪ್ರವೇಶಿಸುತ್ತಿರುವಂತೆ ಭವ್ಯವಾದ ನಂದಿಮಂಟಪವು ಕಂಡುಬರುತ್ತದೆ. ಈ ಮಂಟಪದ ಸುತ್ತ ಇಸ್ಲಾಮಿಕ್ ಶೈಲಿಯ ಕಮಾನುಬಾಗಿಲುಗಳು. ಆಕರ್ಷಕ ಸಿಂಹಸ್ತಂಭಗಳು. ಸೊಗಸಾದ ಕೆತ್ತನೆಯ ಪ್ರನಾಳಗಳು ಇವೆ (ನೀರಿನ ಹೊರಗಿಂಡಿಗಳು). ಮಂಟಪದೊಳಗೆ ಕಪ್ಪುಶಿಲೆಯ ಭವ್ಯವಿಗ್ರಹವಾಗಿ ಗರ್ಭಗುಡಿಗೆ ಅಭಿಮುಖನಾಗಿ ಕುಳಿತ ನಂದಿ ವಿಗ್ರಹವಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೊಂಭತ್ತನೆಯ ಕಂತು

 

ಕೆಳದಿಯ ನಾಯಕ ಅರಸರ ರಾಜಧಾನಿಗಳಲ್ಲೊಂದಾದ ಇಕ್ಕೇರಿಯೂ ಕೆಳದಿಗೆ ಸಮೀಪದಲ್ಲೇ ಇದೆ. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಇಕ್ಕೇರಿಯಲ್ಲಿ ಕೆಳದಿ ಮನೆತನದ ಅರಸ ಸದಾಶಿವ ನಾಯಕನ ಆಳ್ವಿಕೆಯ ಕಾಲದಲ್ಲಿ ಸಂಕಣ್ಣನಾಯಕನಿಂದ ಕಟ್ಟಿಸಲ್ಪಟ್ಟ ಪ್ರಸಿದ್ಧ ದೇಗುಲವೇ ಅಘೋರೇಶ್ವರ ದೇವಾಲಯ.

ಕೆಳದಿ ಸಂಸ್ಥಾನದ ಆಡಳಿತ ಕಾಲದಲ್ಲಿ ನಿರ್ಮಿತವಾದ ದೇಗುಲಗಳಲ್ಲಿ ಅತ್ಯಂತ ಪ್ರಸಿದ್ಧವೆನಿಸಿದ ಅಘೋರೇಶ್ವರ ದೇವಾಲಯದ ಬಗೆಗೆ ಕೆಳದಿ ಅರಸರ ಕಾಲದಲ್ಲೇ ರಚಿತವಾದ ಶಿವತತ್ವ ರತ್ನಾಕರ ಗ್ರಂಥದಲ್ಲಿ ಹಲವು ವಿವರಗಳಿವೆಯಂತೆ. ಅದಕ್ಕನುಗುಣವಾಗಿ ಈ ದೇವಾಲಯದಲ್ಲಿದ್ದ ಅಘೋರೇಶ್ವರ ಮೂರ್ತಿ ಮೂವತ್ತೆರಡು ಭುಜಗಳ ಭವ್ಯವಿಗ್ರಹವಾಗಿದ್ದಿತು. ಅದರ ಪೀಠದ ಕೆಳಭಾಗದಲ್ಲಿ ಮೂವತ್ತೆರಡು ಶಕ್ತಿದೇವತೆಗಳನ್ನು ಚಿತ್ರಿಸಲಾಗಿತ್ತು. ಆ ಕಾಲದಲ್ಲಿ ಕೆಳದಿರಾಜ್ಯಕ್ಕೆ ಭೇಟಿನೀಡಿದ ವಿದೇಶಿಪ್ರವಾಸಿಗರೂ ಈ ಮೂರ್ತಿಯನ್ನು ಬಣ್ಣಿಸಿದ್ದಾರೆ.


ಹದಿನೆಂಟನೆಯ ಶತಮಾನದ ವೇಳೆಗೆ ಕೆಳದಿ ರಾಜ್ಯದ ಅವನತಿಯೊಡನೆ ಈ ದೇಗುಲವೂ ಹಾಳುಹಿಡಿದು ಶಿಲ್ಪವು ಭಗ್ನಗೊಂಡಿತೆಂದು ತೋರುತ್ತದೆ. ಈಗ ದೇವಾಲಯಸಂಕೀರ್ಣದ ಆವರಣದಲ್ಲಿ ಒಂದೆಡೆ ಪೀಠದ ಮೇಲೆ ವಿಗ್ರಹವೊಂದರ ಪಾದಭಾಗವು ಮಾತ್ರ ಉಳಿದಿದ್ದು ಅಘೋರೇಶ್ವರ ಮೂರ್ತಿಯ ಅವಶೇಷವಿರಬಹುದೆಂದು ಹೇಳಲಾಗಿದೆ. ಗರ್ಭಗುಡಿಯ ಪೀಠದ ಕೆಳಭಾಗದಲ್ಲಿ ಮೂವತ್ತೆರಡು ಶಕ್ತಿದೇವತೆಗಳ ಬಿಂಬಗಳು ಮಾತ್ರ ಇನ್ನೂ ಉಳಿದುಕೊಂಡಿವೆ. ಮೂಲವಿಗ್ರಹದ ಜಾಗದಲ್ಲಿ ಶಿವಲಿಂಗವೊಂದು ಪೂಜೆಗೊಳ್ಳುತ್ತಿದೆ.

ಸಂಕಣ್ಣನಾಯಕನು ಕಟ್ಟಿಸಿದ ದೇವಾಲಯವು ಮುಂದಿನ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ ಅಭಿವೃದ್ಧಿಪಡಿಸಿರುವಂತೆ ಕಂಡುಬರುತ್ತದೆ. ಈ ದೇಗುಲದ ಮಂಟಪನಿರ್ಮಿತಿಯಲ್ಲಿ ಹೊಯ್ಸಳ, ವಿಜಯನಗರ ಶೈಲಿಗಳಲ್ಲದೆ, ಬಿಜಾಪುರದ ಸುಲ್ತಾನರ ಕಟ್ಟಡನಿರ್ಮಾಣಗಳ ಪ್ರಭಾವವೂ ಗೋಚರವಾಗುತ್ತದೆ. ದೇವಾಲಯದ ಆವರಣವನ್ನು ಪ್ರವೇಶಿಸುತ್ತಿರುವಂತೆ ಭವ್ಯವಾದ ನಂದಿಮಂಟಪವು ಕಂಡುಬರುತ್ತದೆ. ಈ ಮಂಟಪದ ಸುತ್ತ ಇಸ್ಲಾಮಿಕ್ ಶೈಲಿಯ ಕಮಾನುಬಾಗಿಲುಗಳು. ಆಕರ್ಷಕ ಸಿಂಹಸ್ತಂಭಗಳು. ಸೊಗಸಾದ ಕೆತ್ತನೆಯ ಪ್ರನಾಳಗಳು ಇವೆ (ನೀರಿನ ಹೊರಗಿಂಡಿಗಳು). ಮಂಟಪದೊಳಗೆ ಕಪ್ಪುಶಿಲೆಯ ಭವ್ಯವಿಗ್ರಹವಾಗಿ ಗರ್ಭಗುಡಿಗೆ ಅಭಿಮುಖನಾಗಿ ಕುಳಿತ ನಂದಿ ವಿಗ್ರಹವಿದೆ.

ಮಂಟಪವನ್ನು ಬಳಸಿ ಸಾಗಿದರೆ ಮುಂದಿರುವುದೇ ಮುಖ್ಯದೇವಾಲಯದ ಭವ್ಯಮಂಟಪ. ಮುಖ್ಯಸೋಪಾನದ ಇಕ್ಕೆಲಗಳಲ್ಲಿ ದೊಡ್ಡ ಆನೆಗಳಿದ್ದು, ಬಾಗಿಲಲ್ಲಿ ಶೈವದ್ವಾರಪಾಲಕರಲ್ಲದೆ ವಿಜಯನಗರ ಶೈಲಿಯ ಶಿಲಾಸುಂದರಿಯರು ( ಇವರನ್ನು ಗಂಗೆ, ಯಮುನೆಯರೆಂದೂ ಗುರುತಿಸುವುದುಂಟು) ಮಕರಗಳ ಮೇಲೆ ನಿಂತು ಹೂಬಳ್ಳಿಗಳನ್ನು ಹಿಡಿದಿದ್ದಾರೆ. ಸುತ್ತುಗೋಡೆಗಳ ಕೆಳಭಾಗದಲ್ಲಿ ಕಿರುಗಂಬಗಳು, ಗೋಡೆಯ ನಡುವಿಗೆ ಕಿರುಗೋಪುರಗಳು ಹಾಗೂ ಮೇಲುಗೋಡೆಯಲ್ಲಿ ಕಟ್ಟಡದ ಉದ್ದಕ್ಕೂ ಅಲಂಕೃತ ಜಾಲಂದ್ರಗಳನ್ನು ಕಾಣಬಹುದು (ಕಿಟಕಿಗಳು).

ಭಿತ್ತಿಯ ಕೆಳಭಾಗದ ಪಟ್ಟಿಕೆಗಳಲ್ಲಿ ಅಲ್ಲಲ್ಲಿ ಸಿಂಹಗಳ ಸಾಲು, ಮಿಥುನಶಿಲ್ಪಗಳು, ಹಲ್ಲಿ, ಚೇಳು, ಸಿಂಹಮುಖ ತೋರಣಗಳು ಹಾಗೂ ಗರ್ಭಗುಡಿಯ ಮೇಲೆ ನಾಲ್ಕು ಸ್ತರದ ಶಿಖರವಿದೆ. ಮೇಲುಸ್ತರದ ನಾಲ್ಕು ಅಂಚುಗಳಲ್ಲಿ ಆಯಾ ದಿಕ್ಕುಗಳತ್ತ ಮುಖತಿರುಹಿ ಕುಳಿತ ನಂದಿಯಿದೆ. ಈ ವೇದಿಕೆಯ ಮೇಲೊಂದು ಸ್ತೂಪಿಯಿದ್ದು ಅದರ ಮೇಲೆ ಲೋಹದ ಕಳಶವಿದೆ. ಗರ್ಭಗುಡಿಯ ಹೊರಗೋಡೆಗಳು ಶಿಲ್ಪಗಳಿಲ್ಲದೆ ಸಪಾಟಾಗಿದ್ದರೂ ಮೂರು ದಿಕ್ಕುಗಳಲ್ಲಿ ದೇವಕೋಷ್ಠ (ಗೂಡು)ಗಳಿವೆ. ಮುಖ್ಯಮಂಟಪದ ಒಳಾವರಣ ವಿಶಾಲವಾಗಿದ್ದು ಎತ್ತರದ ಕಂಬಗಳು ಗಮನಸೆಳೆಯುತ್ತವೆ. ಈ ಕಂಬಗಳ ವಿನ್ಯಾಸ, ಕೆತ್ತನೆ ಹೊಯ್ಸಳಶೈಲಿಯನ್ನು ನೆನಪಿಸುತ್ತದೆ.

ಕಂಬಗಳ ಮೇಲೆ ಕಾಳಿಂಗಮರ್ದನ ಕೃಷ್ಣ, ಯೋಗಿಗಳು, ನರ್ತಕಿಯರು, ಯಕ್ಷರು, ಭೈರವ, ನರಸಿಂಹ ಮೊದಲಾದವರನ್ನು ಉಬ್ಬುಶಿಲ್ಪರೂಪದಲ್ಲಿ ಚಿತ್ರಿಸಿದೆ. ವಾಹನಾರೂಢರಾದ ಇಂದ್ರ, ಅಗ್ನಿ, ವರುಣ ಮೊದಲಾದ ದಿಕ್ಪಾಲಕರೂ ಕಂಡುಬರುತ್ತಾರೆ. ಹಲವು ರೇಖಾಚಿತ್ರಗಳೂ ಇವೆ. ಒಳಗುಡಿಯ ಕೋಷ್ಠಗಳಲ್ಲಿ ಗಣೇಶ, ಸುಬ್ರಹ್ಮಣ್ಯ ಮೊದಲಾದ ವಿಗ್ರಹಗಳಿವೆ. ದೇವಾಲಯದ ಮುಖ್ಯಮಂಟಪದಿಂದ ಮೂರುದಿಕ್ಕುಗಳಿಗೆ ಪ್ರವೇಶದ್ವಾರಗಳು. ದ್ವಾರದೆಡೆ ಸೋಪಾನಗಳಿದ್ದು ಆನೆ, ಶರಭಗಳನ್ನು ಚಿತ್ರಿಸಿರುವ ಆಕರ್ಷಕ ಕೈಪಿಡಿಗಳಿಂದ ಮನಸೆಳೆಯುತ್ತವೆ. ಶಂಖನಾದಮಾಡುತ್ತಿರುವ ಯಕ್ಷರನ್ನೂ ಈ ಮೆಟ್ಟಿಲುಗಳೆಡೆಯಲ್ಲಿ ಚಿತ್ರಿಸಿದೆ.

(ಚಿತ್ರಗಳು: ಲೇಖಕರವು)

ಅಘೋರೇಶ್ವರ ದೇವಾಲಯದ ಪಕ್ಕದಲ್ಲಿ ಅಮ್ಮನವರ ಗುಡಿಯಿದೆ. ಅಖಿಲಾಂಡೇಶ್ವರಿ ಎಂದು ಹೆಸರುಪಡೆದ ಪಾರ್ವತೀದೇವಿಯ ಗುಡಿ ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ಅಘೋರೇಶ್ವರ ಗರ್ಭಗುಡಿ ಹಾಗೂ ಶಿಖರಗಳ ಮಾದರಿಯಲ್ಲೇ ನಿರ್ಮಾಣವಾಗಿರುವ ಈ ಗುಡಿಯಲ್ಲೂ ವಿಜಯನಗರ ಕಾಲದ ಸಿಂಹಸ್ತಂಭಗಳು ಕಂಡುಬರುತ್ತವೆ.

ಹದಿನೆಂಟನೆಯ ಶತಮಾನದ ವೇಳೆಗೆ ಮರಾಠರು ಮತ್ತು ಹೈದರಾಲಿಯ ಆಕ್ರಮಣಕ್ಕೆ ತುತ್ತಾದರೂ ತಕ್ಕಮಟ್ಟಿಗೆ ತನ್ನ ಮೂಲಸೌಂದರ್ಯವನ್ನು ಉಳಿಸಿಕೊಂಡಿರುವ ಈ ದೇವಾಲಯವು ಕೆಳದಿ ರಾಜ್ಯದ ಹೆಮ್ಮೆಯ ಪ್ರತೀಕವಾಗಿ ಈವರೆಗೂ ಉಳಿದುಕೊಂಡುಬಂದಿರುವುದು ಸುದೈವವೇ ಸರಿ.