Advertisement
ಇರಲಿರಲಿ ಇಲಿಗಳು  ಇಳೆಯಲಿ: ಸುಮಾವೀಣಾ ಅಂಕಣ

ಇರಲಿರಲಿ ಇಲಿಗಳು  ಇಳೆಯಲಿ: ಸುಮಾವೀಣಾ ಅಂಕಣ

ಇಲಿಗಳು ಮನುಷ್ಯನನ್ನು ಬುದ್ಧಿಮತ್ತೆಯಲ್ಲಿ ಹೋಲುತ್ತವೆ ಎನ್ನುತ್ತಿದ್ದಂತೆ ಸಾಮಾಜಿಕ ಮತ್ತು ಹಾಸ್ಯ ಭರಿತ ಕುವೆಂಪುರವರ ಕೃತಿ ಮಕ್ಕಳ ನಾಟಕ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನೆನಪಾಗುತ್ತದೆ.   ಕಿಂದರಿ ಬಾರಿಸುವುದರ ಮೂಲಕ ನೂರಾರು ಇಲಿಗಳನ್ನು ಒಟ್ಟುಗೂಡಿಸಿ ಧಾನ್ಯಗಳ ಕಣಜಗಳನ್ನು ನಾಶಮಾಡಿಸುತ್ತಾನೆ. ಅವುಗಳ ಉಪದ್ರ ತಾಳಲಾರದೆ ‘ಅವುಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಸಾವಿರಹೊನ್ನು ಕೊಡುತ್ತೇವೆ’ ಎಂದ ಗ್ರಾಮಸ್ಥರು ಅವುಗಳನ್ನು ಕಿಂದರಿಜೋಗಿ ಹಿಂದಕ್ಕೆ ಕರೆಸಿಕೊಂಡ ನಂತರ ಮಾತಿಗೆ ತಪ್ಪುತ್ತಾರೆ ಮೋಸ ಹೋದ ಕಿಂದರಿ ಜೋಗಿ ಕಿಂದರಿ ಬಾರಿಸಿ ಇಲಿಗಳನ್ನು ಮಕ್ಕಳೆದುರು ಪುನಃ ಕರೆಸಿ ಗ್ರಾಮಸ್ಥರ ವಂಚನೆಯ ಸ್ವಭಾವವನ್ನು ಬಯಲಿಗೆಳೆಯುತ್ತಾನೆ. ಆದರೂ ರೈತರ ಪಾಲಿಗೆ ಇಲಿಗಳು ಬೆಳೆನಾಶ ಮಾಡಿ ವಿಲನ್‌ಗಳೆ ಆಗಿವೆ ಬಿಡಿ.
ಸುಮಾವೀಣಾ
ಹೊಸ ಅಂಕಣ “ನುಡಿನಲಿವು”

‘ಮದ್ದಳೆಯ ಹೊಕ್ಕಿಲಿಯಂತೆ’ ಎಂಬ  ಮಾತೊಂದಿದೆ. ಮಂಗರಸ ತನ್ನ ‘ನೇಮಿಜಿನೇಶ’   ಎಂಬ ಕೃತಿಯಲ್ಲಿ ಈ ಮಾತನ್ನು ಪ್ರಸ್ತಾಪಿಸುತ್ತಾನೆ. ‘ಮದ್ದಳೆಯ ಹೊಕ್ಕಿಲಿಯಂತೆ’ ಈ ವಾಕ್ಯ ಅರ್ಥಧ್ವನಿಯುಳ್ಳದ್ದು.  ಮದ್ದಳೆ ತಾಳವಾದ್ಯದ ಒಂದು ಬಗೆ. ಅಂಥ ತಾಳವಾದ್ಯದೊಳಕ್ಕೆ ಪ್ರವೇಶಿಸಿದ ಇಲಿ  ಸಿಲುಕಿ ಅಲ್ಲಿಯೇ ಇರಲಾಗದಂತೆ ತಪ್ಪಿಸಿಕೊಂಡು ಹೊರಬರಲಾಗದಂತೆ ವಿಷಮ ಪರಿಸ್ಥಿತಿಯನ್ನು ಅನುಭವಿಸುವಂತಾಗುತ್ತದೆ.  ಅರ್ಥಾತ್ ‘ಇತ್ತ ಪುಲಿ ಅತ್ತ ದರಿ’  ಎನ್ನುವ ಹಾಗಾಗುತ್ತದೆ. ಏನೇ ಕೆಲಸ ಮಾಡಬೇಕಾದರೂ ಪೂರ್ವತಯಾರಿಯೊಂದಿಗೆ ಮಾಡಬೇಕು; ಇಲ್ಲವಾದರೆ ಅರ್ಥನಷ್ಟ, ಸಮಯನಷ್ಟಗಳು ಉಂಟಾಗುತ್ತವೆ. ಹಾಗೆ ಸಮಸ್ಯೆಯೊಂದರಲ್ಲಿ ಸಿಕ್ಕು ತಹತಹ ಪಡುವ ಜನರನ್ನು ಈ ಮಾತು  ಉದಾಹರಿಸುತ್ತದೆ. ಇನ್ಯಾರದೋ ಮಾತಿನಿಂದ ಪ್ರಲೋಭನೆಗೊಂಡು ಅವರ ಮಾತಿಗೆ ಮರುಳಾಗಿ ತೊಳಲಾಟದಲ್ಲಿ ಸಿಲುಕುವವರನ್ನು, ಗೊತ್ತು ಗುರಿಯಿಲ್ಲದ ಸ್ಥಳದಲ್ಲಿ ಇನ್ಯಾವುದೋ ಕಾರಣಕ್ಕೆ  ವಿಷಜಾಲದಲ್ಲಿ ಸಿಲುಕಿ ಮೋಸ ಹೋಗುವವರನ್ನು ಕಂಡಾಗ ಮದ್ದಳೆಯೊಳಗೆ ಸಿಲುಕಿದ ಇಲಿಯದೆ ಪರಿಸ್ಥಿತಿಯೇ ನೆನಪಾಗುತ್ತದೆ. ಅಪ್ಪಿ ತಪ್ಪಿ ಏನೋ ಕುತೂಹಲದಿಂದ ಇಲಿಗಳು ಮದ್ದಳೆ ಪ್ರವೇಶಿಸಿದರೆ ಅದನ್ನು ಉಪಯೋಗಿಸುವವರು ಬಿಡುತ್ತಾರೆಯೇ. ಅದನ್ನು ಹಿಡಿದು  ಕೊಲ್ಲುವವರೆಗೆ  ಬಿಡುವುದಿಲ್ಲ!  ಇಲ್ಲಿ ಇಲಿಯ ಚೆಲ್ಲಾಟದಿಂದ ಮದ್ದಳೆ ನುಡಿಸುವವರಿಗೂ ನಷ್ಟ ಇಲಿಗೂ ಪ್ರಾಣಭೀತಿ!  ಒಟ್ಟಾರೆ ಉಭಯ ಭೀತಿ ಪಜೀತಿ!

ಯಾರಿಗಾದರೂ ನಾವು ಉಪಕಾರ ಮಾಡಲು ಸಾಧ್ಯವಾಗದೆ ಇದ್ದರೂ ಉಪದ್ರವ ಮಾಡುವ ಗೋಜಲಿಗೆ ಹೋಗಬಾರದು. ಹಾಗಾದರೆ ಈ ರೀತಿಯ ಕಷ್ಟಗಳು ಎದುರಾಗುತ್ತವೆ ಎಂಬ ಎಚ್ಚರಿಕೆಯನ್ನು ಮೂರನೆಯ ಮಂಗರಸ ಕೊಟ್ಟಿದ್ದಾನೆ. ಈ ವಾಕ್ಯವನ್ನು ಓದುವಾಗ ವೀರ ಅಭಿಮನ್ಯು ನೆನಪಿಗೆ ಬರುತ್ತಾನೆ. ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹದಲ್ಲಿ ಪ್ರವೇಶಿಸುತ್ತಾನೆ. ಆದರೆ  ಅವನಿಗೆ ಹೊರಗೆ ಬರಲಾಗುವುದಿಲ್ಲ ಧೀರೋದಾತ್ತವಾಗಿ ಹೋರಾಡುತ್ತಾನೆ, ವೀರಮರಣವನ್ನಪ್ಪುತ್ತಾನೆ. ಅಂಥ ಅಭಿಮನ್ಯುವನ್ನು ಮದ್ದಳೆಯಲ್ಲಿ ಸಿಕ್ಕ ಇಲಿಗೆ ಹೋಲಿಸಲಾಗುವುದಿಲ್ಲ. ಕಾರಣ ತನ್ನವರಿಗಾಗಿ ಪ್ರವೇಶಿಸಿದ  ಅಭಿಮನ್ಯುವಿನಲ್ಲಿ ಹೋರಾಟದ ಛಲವಿತ್ತೇ ವಿನಃ ಅನ್ಯ ಆಲೋಚನೆಗಳಿರಲಿಲ್ಲ. ಆದರೆ  ಹಿಂದು ಮುಂದು ನೋಡದೆ  ಮದ್ದಳೆಯನ್ನು ಪ್ರವೇಶಿಸಿದ ಇಲಿಯದ್ದು ಸಂಕಟದ ಪರಿಸ್ಥಿತಿ  ಅಲ್ವೆ! ಮೊನ್ನೆ ಇಂಥ ಇಲಿಗಳು ತಮ್ಮ ಅಜ್ಞಾತ ಸ್ಥಳದಿಂದ ಹೊರಬರುವುದನ್ನು ನಾನು  ಬೆಂಗಳೂರಿನಿಂದ ಊರಿಗೆ  ವಾಪಸ್ಸಾಗುವಾಗ ಕಂಡಾಗ ಬೇರೆಯೆ ಅಲೋಚನೆಗಳು ಬಂದವು. ಕತ್ತಲಾಗಿತ್ತು! ಬಸ್ ಕಾಯುತ್ತಾ  ಏನೋ ಸದ್ದಾಯಿತು ಎಂದು ಕುರುಕಲು ಅಂಗಡಿಗಳ ಕಡೆಗೆ ಹೊರಳಿದೆ. ಮೂರ್ನಾಲ್ಕು ಇಲಿಗಳ  ಸ್ಕ್ವಾಡ್ ಅಲ್ಲಿಗೆ  ಬಂದು ಬಂದು ಹೋಗುತ್ತಿತ್ತು.   ಸ್ವಲ್ಪವೂ ಭಯ ಬೇಡವೆ ಅವಕ್ಕೆ;  ಅವುಗಳು ಅವುಗಳ ಪಾಡಿಗೆ  ತಮ್ಮ ಆಹಾರ ಬೇಟೆಯನ್ನು ನಿರ್ಭೀತಿಯಿಂದ ಮುಂದುವರೆಸಿದ್ದವು ಥಟ್ಟನೆ ಈಸೋಪನ  ಕಥೆಯೊಂದು ನೆನಪಾಯಿತು. ಆ ಕಥೆಯಲ್ಲಿ  ಹಳ್ಳಿಇಲಿ ಪೇಟೆಯ  ಸಹೋದರಇಲಿ ಮನೆಗೆ  ಹೋಗುತ್ತದೆ.  ಪೇಟೆಯ ಸಹೋದರಇಲಿ ಸಿಹಿತಿಂಡಿ, ಕುರುಕಲು ತಿಂಡಿಗಳನ್ನು  ತಾನೂ ತಿಂದು ಹಳ್ಳಿಯ   ಸಹೋದರ ಇಲಿಗೂ ತಿನ್ನುವಂತೆ ಹೇಳುತ್ತದೆ. ಅದರ  ನಡುನಡುವೆ ನಾಯಿ ಮತ್ತು ಬೆಕ್ಕುಗಳು  ಬಂದು ಹೆದರಿಸಿ ಹೆದರಿಸಿ ಹೋಗುತ್ತಿರುತ್ತವೆ.  ಬೇಸರಗೊಂಡ ಹಳ್ಳಿಇಲಿ ಪೇಟೆಯ ಇಲಿಗೆ ‘ನಾನು ವಾಪಾಸ್ಸಾಗುತ್ತೇನೆ. ಇಲ್ಲಿ ಹೆದರಿ ಹೆದರಿ ತಿನ್ನುತ್ತಿರುವುದು ರುಚಿಸುತ್ತಿಲ್ಲ. ಹಳ್ಳಿಯಲ್ಲಿ ಸಾಮಾನ್ಯ ಊಟವಾದರೂ ನಿರ್ಭೀತಿಯಿಂದ   ತಿನ್ನಬಹುದು. ಅದೇ ಬಹುವಾಗಿ  ರುಚಿಸುತ್ತದೆ,  ಬಿಡುಬೀಸಾಗಿ ಓಡಾಡದ, ತಿನ್ನದ  ಈ ಬದುಕು ಬದುಕೇ?’ ಎನ್ನುತ್ತದೆ. ಆ ಕಥೆಯನ್ನು ನೆನಪಿಸಿಕೊಂಡು ಕಾಲ ಎಷ್ಟು ಬದಲಾಗಿದೆ. ಈಗಿನ ಇಲಿಗಳು ಬೆಕ್ಕು ನಾಯಿ ಇರಲಿ ಇಷ್ಟು ಜನಸಂದಣಿಗೂ ಹೆದರುವುದಿಲ್ಲವಲ್ಲ ಎಂದುಕೊಂಡೆ.  ‘ಬಿಡುಬೀಸಾಗಿ ಓಡಾಡದ, ತಿನ್ನದ ಈ ಬದುಕು ಬದುಕೇ?’  ಎಂಬ ಇಲಿಯ ಮಾತಿಗೆ ಬಂದರೆ ಅದು ಅಕಷರಶಃ ಸತ್ಯ ಅಲ್ವೆ? ಎಲ್ಲವೂ ಇದ್ದು ಸ್ವಾತಂತ್ರದ ಸುಖಭಾವವಿಲ್ಲದಿದ್ದರೆ ಬಂಗಾರದ ಪಂಜರದಲ್ಲಿ, ಮುತ್ತಿನ  ಸರಪಳಿಯಲ್ಲಿ ಬಂಧಿಯಾದಂತೆ  ಆಗುವುದಿಲ್ಲವೆ. “ಹೇಳ್ಕೊಳಾಕ್ ಒಂದು ಊರು ತಲೆಮ್ಯಾಗೆ  ಒಂದ್ ಸೂರು ಮಲ್ಗಾಕೆ ಭೂಮ್ತಾಯ್ ಮಂಚ  ಕೈಹಿಡ್ದೋಳ್ ಪುಟ್ನಂಜಿ ನಗನಗ್ತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ…” ವಾವ್ ಎಷ್ಟು ಅರ್ಥ ಪೂರ್ಣ ಸಾಲುಗಳು. ಇಂಥ ನಿರ್ಲಿಪ್ತತೆ ಬದುಕಿನಲ್ಲಿ ಬಂದು ಬಿಟ್ಟರೆ  ಎಲ್ಲರೂ ಸುಖಿಗಳೆ! ಅದರೆ ಅದು ಸಾಧ್ಯವೆ? ಲೌಕಿಕ ಕಾಮನೆಗಳು ಮದ್ದಳೆಯನ್ನು  ಹೊಕ್ಕ ಇಲಿಯಂತೆ ಮನಸ್ಸಿನಲ್ಲಿಯೂ ಇರದೆ ಹೊರಗೂ ಬರಲಾದೆ ಹಿಂಸಿಸುತ್ತವೆ. ಯಾವುದೇ ನಷ್ಟವಿಲ್ಲದೆ ಮದ್ದಳೆಯಿಂದ ಇಲಿ ಆಚೆ ಬಂದರೆ ಮದ್ದಳೆಯೂ ಚನ್ನಾಗಿರುತ್ತದೆ ಅದೂ ಬಚಾವಾಗುತ್ತದೆ. ವಿಪರ್ಯಾಸ  ಹಾಗಾಗುವುದಿಲ್ಲ  ಪ್ರಲೋಭನೆಗಳು ನಮ್ಮನ್ನು ಬಂಧಿಸಿವೆ.

‘ಮೂಷಿಕ ವಾಹನ ಮೋದಕ ಹಸ್ತ’ ಎನ್ನುತ್ತಿದ್ದಂತೆ ವಿಘ್ನೇಶ್ವರನ ಚಿತ್ರ ಸ್ಮರಣೆಗೆ ತಂದುಕೊಳ್ಳದೆ ಇದ್ದವರು ಇದ್ದಾರೆಯೇ? ಕೆಲವರಾದರೂ ಕೈಲಾಸದ ಸಾರಿಗೆ ‘ಇಲಿ’ ಎಂದೂ ನೆನೆದು ಮಗುಳ್ನಗುತ್ತಾರೆ ಅಂದರೆ ಲಾಗಾಯಿತ್ತಿನಿಂದಲು ಇಲಿಗಳು ಮತ್ತು ಮಾನವರ ಒಡನಾಟದಲ್ಲಿ ಇದ್ದೇ ಇವೆ ಎನ್ನುವ ಹಾಗಾಯ್ತಲ್ಲವೆ? ಇಲಿಗಳಲ್ಲಿ ಉಪಕಾರಿಗಳು, ಉಪದ್ರವಿಗಳು ಇರುತ್ತವೆ. “168 ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ವ್ಯಯಿಸಿದ ರೈಲ್ವೇ ಇಲಾಖೆ” ಇದು ಸೆಪ್ಟೆಂಬರ್ 16 2023 ರಲ್ಲಿ ನಾನೋದಿದ  ಸುದ್ದಿಯೊಂದರ ಶೀರ್ಷಿಕೆ. ಆಗ ಕುತೂಹಲದಿಂದ  ಓದಿದ್ದೆ.  ಲಕ್ನೋನದ ರೈಲ್ವೇ ನಿಲ್ದಾಣದಲ್ಲಿ ಉಪದ್ರ ಕೊಡುತ್ತಿದ್ದ ಇಲಿಗಳನ್ನು ಸೆಂಟ್ರಲ್ ವೇರ್‌ಹೌಸಿಂಗ್‌ ಕಾರ್ಪೊರೇಷನ್ನಿನವರಿಗೆ ಹಿಡಿಯಲು ಗುತ್ತಿಗೆ ಕೊಡಲಾಗಿತ್ತಂತೆ. ಸರಾಸರಿ  ಒಂದು ಇಲಿ ಹಿಡಿಯಲು  41 ಸಾವಿರ   ವೆಚ್ಚ ತಗುಲಿತ್ತು  ಎಂಬುದೆ ಸುದ್ದಿ ಸಾರಾಂಶವಾಗಿತ್ತು. ‘ಮೂಷಿಕ ನಿನ್ನನ್ನು ಬಂಧಿಸಲು ಬೆಕ್ಕುಗಳಿರಲಿಲ್ವೆ? ಕಳ್ ಬೆಕ್ಕುಗಳ ಜಾಲ ಅರ್ಥಾತ್ ಮಾರ್ಜಾಲ ಇರಲಿಲ್ವೆ?’  ಎಂಬ ಪ್ರಶ್ನೆ ನನಗೆ ಬಂದರೂ  ಹಣ ಖರ್ಚಾದರೂ ಸರಿ ಉಪದ್ರವಿ ಇಲಿಗಳನ್ನು   ಹಿಡಿಸಿದ್ದು ಸರಿಯಾದ ಕ್ರಮವೆ ಎಂದುಕೊಂಡೆ. ಸ್ವಾತಂತ್ರ ಪೂರ್ವದಲ್ಲಿ ಸಾಂಕ್ರಾಮಿಕ ಪ್ಲೇಗ್ ಹಾವಳಿ ಇಲಿಗಳಿಂದಲೇ ಇತ್ತಂತ್ತಲ್ಲ! ಇದರ ಪ್ರಸ್ತಾಪ  ಚದುರಂಗರ ‘ವೈಶಾಖ’, ಭೈರಪ್ಪವನರ ‘ಗೃಹಭಂಗ’ ಅಲ್ಬರ್ಟ್ ಕಮೂವಿನ ‘ದ ಪ್ಲೇಗ್ʼ ಕಾದಂಬರಿಗಳೂ ಪ್ಲೇಗ್ ತಂದ ಕರುಣಾಜನಕ ಸ್ಥಿತಿಗಳನ್ನು ವಿವರಿಸುತ್ತವೆ. 2019 ರ ಕರೋನಾದಂತೆ ಆಗ ಪ್ಲೇಗ್ ಎಲ್ಲರನ್ನು ಕಂಗೆಡಿಸಿತ್ತಂತೆ. ಹಾಗಂತ ಇಂದಿಗೆ ಇಲಿಗಳ ಸಂತತಿಯೇನು ಕಡಿಮೆಯಾಗಿಲ್ಲವಲ್ಲ!

ಇನ್ನೊಂದು ಈಸೋಪನ  ಕಥೆಯಲ್ಲಿ  ಇಲಿಯೊಂದು ಸಿಂಹದ ಮೇಲೆ ಓಡಾಡುತ್ತಿರುತ್ತದೆ. ಅದನ್ನು ಸಿಂಹ ತಿನ್ನಲು ಮೊದಲು ಮಾಡಿದಾಗ ‘ನನ್ನನ್ನು ಬಿಟ್ಟು ಬಿಡು ನಿನ್ನ ಋಣವನ್ನು ತೀರಿಸುವೆ’ ಎಂದ ಇಲಿಗೆ ಸಿಂಹ ಜೀವಭಿಕ್ಷೆ ಕೊಡುತ್ತದೆ. ಮುಂದೊಂದು ದಿನ ಬೇಟೆಗಾರನ ಬಲೆಗೆ ಸಿಂಹ  ಸಿಲುಕಿದಾಗ  ಆ ಬಲೆಯನ್ನು  ಇಲಿ ಕಚ್ಚಿಕಚ್ಚಿ ಸಿಂಹವನ್ನು ಬಿಡುಗಡೆಗೊಳಿಸುತ್ತದೆ. ಸಿಂಹ ಕರುಣೆ ತೋರಿದ್ದರಿಂದ ಅದಕ್ಕೆ ಸಹಾಯವಾಯಿತು ಅರ್ಥಾತ್ ಕರುಣೆ ಎಂದಿಗೂ ವ್ಯರ್ಥವಾಗುವುದಿಲ್ಲ ಎನ್ನುವುದೇ ಇದರ ಸಾರಾಂಶ.  ಹಾಗಂತ ಮನೆಗಳಲ್ಲಿ ಉಪದ್ರ ಕೊಡುವ  ಇಲಿಗಳನ್ನು ಬಿಟ್ಟು ಬಿಡಿ! ಅವುಗಳ ಮೇಲೆ ಕರುಣೆ ತೋರಿಸಿ!  ನಿಮ್ಮನ್ನು ಕಾಪಾಡುತ್ತವೆ! ಎಂದಲ್ಲ. ಮಾನವನ ಸಂಶೋಧನೆ ಇಲಿಯವರೆಗೂ ಹಬ್ಬಿದೆ. ಸಂಶೋಧನೆಗೆಂದೇ ಬೆಳೆಸಿದ ಇಲಿಗಳು ನಾನಾ ಪ್ರಯೋಗಕ್ಕೊಳಗಾಗಿ  ಮನುಕುಲಕ್ಕೆ  ಮಹದುಪಕಾರ ಮಾಡುತ್ತಿವೆ. ಮಾನವವನ ಆರೋಗ್ಯ ಕುರಿತ ಸಂಶೋಧನೆಗಳಲ್ಲಿ ಇಲಿಗಳಿಗೆ ಅನೂಹ್ಯ  ಸ್ಥಾನವಿರುವುದರಿಂದಲೇ ಅವುಗಳ ಸ್ಮರಣಾರ್ಥವಾಗಿಯೇ ರಷ್ಯಾದ ನೊವೊಸಿಬಿರ್ಸ್ಕ್ನ ಅಕಾಡಮೆಗೊರೊಡಾಕ್ ನಲ್ಲಿರುವ ಸೈಟಾಲಜಿ ಮತ್ತು ಜೆನೆಟಿಕ್ಸ್  ಸಂಸ್ಥೆಯ  ಪ್ರಯೋಗಾಲಯದಲ್ಲಿ  ಇಲಿಗಳ (LABORATRY  MICE) ಸ್ಮಾರಕವಿದೆ.   ಇಲ್ಲಿ ಇಲಿಯ ಪ್ರತಿಮೆಯು ಗ್ರಾನೈಟ್ ಕಲ್ಲಿನ ಮೇಲೆ ಕುಳಿತ ಕಂಚಿನದ್ದಾಗಿದ್ದು ಕನ್ನಡಕ  ಧರಿಸಿ ಡಿಎನ್ಎ ಯ ಡಬಲ್ ಹೆಲಿಕ್ಸನ್ನು  ಹೆಣೆಯುತ್ತಿರುವಂತಿದೆ.    ಅಂದರೆ ಇಲಿಗಳ ಜೀನ್ಸ್‌ಗಳಿಗೂ ಮನುಷ್ಯನ ಜೀನ್ಸ್‌ಗಳಿಗೂ ಸಾಮ್ಯತೆ  ಇದೆ ಎಂದು ವಿಜ್ಞಾನ  ಖಾತ್ರಿಪಡಿಸಿಕೊಂಡಿವೆ ಎಂದಾಯಿತಲ್ಲವೆ?

ಪ್ರಯೋಗಕ್ಕೆ  ಒಳಗಾಗುವ ಇಲಿಗಳು  ಕನಿಷ್ಟ  ಇಪ್ಪತ್ತೈದು ಗ್ರಾಮ್  ತೂಕದಿಂದ  ಪ್ರಾರಂಭಗೊಂಡು  ಐನೂರು ಗ್ರಾಂವರೆಗೆ  ಸರಿಸುಮಾರು ಆರು ವಾರಗಳ ಕಾಲಾವಧಿಯಲ್ಲಿ ಅಂದರೆ ಹುಟ್ಟಿನಿಂದ ಅವುಗಳು ಪ್ರೌಢಾವಸ್ಥೆಗೆ ಬರುವರೆಗೂ ಅನೇಕ ಸಂಶೋಧನೆಗೆ ಒಳಗಾಗಿ ನಂತರ ರೋಗವಾಹಕಗಳಾಗುತ್ತವೆ ಎಂಬ ಕಾರಣಕ್ಕೆ (ಬಾಲವನ್ನು ಜಗ್ಗಿಸಿಕೊಂಡು) ಕೊಲ್ಲಲ್ಪಡುತ್ತವೆ. ಪಾಪ! ಅಡಿಗಳೆತ್ತರದ ಮನುಷ್ಯನ ರೋಗಗಳಿಗೆ ಔಷಧಿ ಕಂಡು ಹಿಡಿಯಲು ಇಂಚುಗಳೆತ್ತರ ಇಲಿಗಳು ಜೀವ ತ್ಯಾಗ ಮಾಡಬೇಕು ನೋಡಿ!..

ವೈದ್ಯಕೀಯ ಮತ್ತು ಜೈವಿಕ ಸಂಶೋಧನೆಗಳಲ್ಲಿ  ಮಾದರಿ ಜೀವಿಗಳಾಗಿ  ಇಲಿಗಳು ಯಥೇಚ್ಛವಾಗಿ ಬಳಕೆಯಾಗುತ್ತಿವೆ. ಮಾನವಶರೀರ ಶಾಸ್ತ್ರದ ರಚನೆಯನ್ನು ಇವುಗಳು ಬಹುವಾಗಿ ಹೋಲುವುದರಿಂದ, ಕಲಿಕೆ ಬುದ್ಧಿವಂತಿಕೆ  ಮತ್ತು ನರರೋಗಗಳು, ಪಾರ್ಶ್ವವಾಯು, ಮರೆವಿನ ಕಾಯಿಲೆಗಳ ಅಧ್ಯಯನಕ್ಕೆ ಇವುಗಳನ್ನು ಬಳಸಲಾಗುವುದಲ್ಲದೆ ನರರೋಗಗಳು, ಖಿನ್ನತೆ ಔಷಧಗಳ  ಪರಿಣಾಮವನ್ನು ಪರೀಕ್ಷಿಸಲು  ಮತ್ತು ಸುರಕ್ಷತೆಯನ್ನು ಪರೀಕ್ಷಿಸಲು  ಬಳಸಲಾಗುತ್ತದೆ. ಮುಖ್ಯವಾಗಿ ವಿಸ್ಟಾರ್ ಮತ್ತು ಸ್ಟಾಗ್ ಡಾವ್ಲಿ  ಹೆಸರಿನ ತಳಿಗಳನ್ನು ಉಲ್ಲೇಖಿಸಬಹುದು. ಇವುಗಳಲ್ಲಿ ವಿಧೇಯತೆ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ಗುಣವಿರುವುದರಿಂದ ನಿರಂತರವಾಗಿ ಇವುಗಳ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ಮುಂದುವರೆದಂತೆ ಮಾನವನ ಬುದ್ಧಿವಂತಿಕೆಯನ್ನು ಇವುಗಳು ಹೋಲುವುದರಿಂದ ನಿರ್ದಿಷ್ಟ ಜೀನ್‌ಗಳನ್ನು ಅಭಿವೃದ್ಧಿಪಡಿಸಲು ಇವುಗಳನ್ನು ಸಂಶೋಧನೆಗೊಳಪಡಿಸಲಾಗುತ್ತಿದೆ. ಸಾಧಾರಣವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಹೇಳುವುದಾದರೆ ಬಿಳಿಯ ಇಲಿಗಳು ಆಂತರಿಕ ದೇಹರಚನೆ ಮತ್ತು ಪರಿಣಾಮಗಳಿಗಾಗಿ ಕಂದು ಇಲಿಗಳು ಬಾಹ್ಯನಡವಳಿಕೆಗಳ ಪ್ರಯೋಗಕ್ಕೊಳಗಾಗುತ್ತಿವೆ. ಇಲಿ ಮತ್ತು ಅಳಿಲುಗಳನ್ನು  ಪ್ರಯೋಗಾಲಯಗಳಲ್ಲಿ  ಸಂಭಾಳಿಸುವುದು ಸುಲಭ  ತ್ವರಿತಗತಿಯ ಫಲಿತಾಂಶ  ದೊರೆಯುತ್ತದೆ ಎಂಬ ಕಾರಣದಿಂದ ಇಲಿಗಳೆ  ಸಂಶೋಧನೆಗೆ ಮುಂಚೂಣಿಯಲ್ಲಿವೆ  ಎನ್ನಬಹುದು.

ಅನುವಂಶಿಕವಾಗಿ ಮಾರ್ಪಡಿಸಿದ ಇಲಿಗಳನ್ನು ಬಳಸಿ ರೋಗಗಳ ಮೂಲ ಕಾರಣಗಳನ್ನು  ಅರ್ಥಮಾಡಿಕೊಳ್ಳಲೂ ಉಪಯುಕ್ತವಾಗಿವೆ.   ಇವುಗಳಲ್ಲಿ ‘ಬಕ್ಸ್’ ಆದರೆ ಗಂಡು ಇಲಿಗಳು  ‘ಡ್ಯಾಮ್’ ಎಂದರೆ ಹೆಣ್ಣು  ಇಲಿಗಳು.  ಇವುಗಳು ಮನುಷ್ಯರ ಸಹಚರ್ಯವನ್ನು  ಹೆಚ್ಚು  ಬಯಸುವುದರಿಂದ   ಸಂಶೋಧನೆಗೆ ಒಳಪಡುವ ಪ್ರಾಣಿಗಳಲ್ಲಿ ಇಲಿಗಳು ಮುಂಚೂಣಿಯವು.  ಹುಟ್ಟಿದ 5-6 ತಿಂಗಳೆಲ್ಲ  ಸಾಮಾಜಿಕ ಪ್ರಬುದ್ಧತೆಯನ್ನು ಪಡೆದುಕೊಳ್ಳುತ್ತವಾದ್ದರಿಂದ ಗುಂಪು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು, ಮಾದಕ ದ್ರವ್ಯಗಳ ಸೇವನಾನಂತರ ಚಿಕಿತ್ಸೆಗೊಳಗಾಗುವ  ವೇಳೆಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಲು ಇವು ಸಹಕಾರಿಯಾಗಿವೆ. ಕ್ಯಾನ್ಸರ್ ರೋಗಗಳಲ್ಲಿ ಬಳಸುವ ಔಷಧಗಳ ಅಡ್ಡ ಪರಿಣಾಮಗಳನ್ನು ತಿಳಿಯಲೂ ಇವೇ ಬಳಕೆಯಾಗುತ್ತಿವೆ. ಎಂಥ ಪ್ರಯೋಗಕ್ಕೂ ಒಗ್ಗಿಕೊಳ್ಳುವ ಇಲಿ ಸಂತತಿಗೆ ನಾವು ಕೃತಜ್ಞರಾಗಿರಬೇಕು.  ಹಾಗಂತ ರಾಜಸ್ಥಾನದ ಬಿಕೆನಾರ್‌ನಲ್ಲಿ  ‘ಕರ್ಣಿಮಾತಾ’ ಎಂಬ ‘ಕಬ್ಬಾ’ಗಳೆಂದು ಕರೆಯುವ ಬಿಳಿ ಇಲಿಗಳ ದೇವಾಲಯವೇ ಇದೆಯಲ್ಲ. ಅಲ್ಲಿ ಇಲಿಗಳಿಗಿಟ್ಟು ಉಳಿದ ಆಹಾರವೇ ಭಕ್ತರಿಗೆ ಪ್ರಸಾದ! ರಷ್ಯಾದ ಇಲಿಗಳ ಸ್ಮಾರಕ ವೈಜ್ಞಾನಿಕ ಮಹತ್ವವನ್ನು ಸಾರಿದರೆ ಕರ್ಣಿಮಾತಾ ದೇವಾಲಯ ಇಲಿಗಳಿಗಿರುವ  ಧಾರ್ಮಿಕ ಮಹತ್ವನ್ನು  ಸಾರುತ್ತದೆ.

ಇಲಿಗಳು ಮನುಷ್ಯನನ್ನು ಬುದ್ಧಿಮತ್ತೆಯಲ್ಲಿ ಹೋಲುತ್ತವೆ ಎನ್ನುತ್ತಿದ್ದಂತೆ ಸಾಮಾಜಿಕ ಮತ್ತು ಹಾಸ್ಯ ಭರಿತ ಕುವೆಂಪುರವರ ಕೃತಿ ಮಕ್ಕಳ ನಾಟಕ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನೆನಪಾಗುತ್ತದೆ.   ಕಿಂದರಿ ಬಾರಿಸುವುದರ ಮೂಲಕ ನೂರಾರು ಇಲಿಗಳನ್ನು ಒಟ್ಟುಗೂಡಿಸಿ ಧಾನ್ಯಗಳ ಕಣಜಗಳನ್ನು ನಾಶಮಾಡಿಸುತ್ತಾನೆ. ಅವುಗಳ ಉಪದ್ರ ತಾಳಲಾರದೆ ‘ಅವುಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಸಾವಿರಹೊನ್ನು ಕೊಡುತ್ತೇವೆ’ ಎಂದ ಗ್ರಾಮಸ್ಥರು ಅವುಗಳನ್ನು ಕಿಂದರಿಜೋಗಿ ಹಿಂದಕ್ಕೆ ಕರೆಸಿಕೊಂಡ ನಂತರ ಮಾತಿಗೆ ತಪ್ಪುತ್ತಾರೆ ಮೋಸ ಹೋದ ಕಿಂದರಿ ಜೋಗಿ ಕಿಂದರಿ ಬಾರಿಸಿ ಇಲಿಗಳನ್ನು ಮಕ್ಕಳೆದುರು ಪುನಃ ಕರೆಸಿ ಗ್ರಾಮಸ್ಥರ ವಂಚನೆಯ ಸ್ವಭಾವವನ್ನು ಬಯಲಿಗೆಳೆಯುತ್ತಾನೆ. ಆದರೂ ರೈತರ ಪಾಲಿಗೆ ಇಲಿಗಳು ಬೆಳೆನಾಶ ಮಾಡಿ ವಿಲನ್‌ಗಳೆ ಆಗಿವೆ ಬಿಡಿ. ದೇವನೂರು ಮಹಾದೇವ ಅವರ ‘ಒಡಲಾಳ’ ಕಾದಂಬರಿಯಲ್ಲಿ  ಇಲಿಗಳಿಂದಲೆ  ತಿಂದ ಕಡೆಲೆಕಾಯಿ ಸಿಪ್ಪೆಗಳ ಮೂಲಕ ಕಡಲೆಕಾಯಿ ಕದ್ದಿದ್ದ  ಕಾಳ ಪೋಲಿಸಿನವರ ಕೈಗೆ ಸಿಕ್ಕಿ ಬೀಳುತ್ತಾನೆ.  ಕದ್ದ ಕಡಲೆಕಾಯಿಯನ್ನು ಇಲಿಗಳು  ಪುನಃ ಕದ್ದು ತಿಂದು ಪೇಚಿಗೆ ಸಿಲುಕಿಸುತ್ತವೆ. ಇದನ್ನು ಓದಿದ ಮೇಲೆ ಇಲಿಗಳೂ ಬಹಳ ಕಿಲಾಡಿಗಳು ಅನ್ನಿಸುತ್ತದೆ ಅಲ್ವೆ!

ಮನುಷ್ಯ ಬದಲಾದಂತೆ ಇಲಿಗಳೂ ಪ್ರಯೋಗಗಳಿಗೆ ಒಗ್ಗಿಕೊಳ್ಳುವಂತೆ ಅವುಗಳ ಸ್ವಭಾವದಲ್ಲೂ ಬದಲಾವಣೆ ಹೊಂದುತ್ತಿವೆ ಎನ್ನುವುದಕ್ಕೆ ಉದಾಹರಿಸಬಹುದಾದ ಕಥೆಯೊಂದರಲ್ಲಿ ಬೆಕ್ಕುಗಳು ಇಲಿಗಳನ್ನು ಅಟ್ಟಾಡಿಸುತ್ತಿದ್ದವು. ಇಲಿಗಳೂ ಹುಷಾರಾಗಿಯೇ ಬಚಾವಾಗುತ್ತಿದ್ದವು. ಇದರಿಂದ ಬೇಸತ್ತ ಬೆಕ್ಕು ಸತ್ತಂತೆ ನಟಿಸುತ್ತದೆ ಆದರೂ ಇಲಿಗಳು ಹತ್ತಿರ ಹೋಗದೆ ಜಾಣ್ಮೆ ತೋರಿಸುತ್ತವೆ. ಇದರಲ್ಲಿ ಇಲಿಗಳ ಅನುಭವವೆ ಮುಖ್ಯವಾಗಿದೆಯಲ್ಲವೆ. ‘ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟ ನೆಗೆದಂತಾಯ್ತು’ ಎಂದು ಮನುಷ್ಯರ ಢಾಂಬಿಕ ಭಕ್ತಿಯನ್ನು ನೆನೆದು  ವಚನಕಾರರು ಆಡಿರುವ ಮಾತಿದೆ. ಆ ಢಂಬಾಚಾರ ಇನ್ನೂ ಬಲಿತು ಹಬ್ಬುತ್ತಿದೆ. ಆದರೆ ಇಲ್ಲಿ ಇಲಿಗಳು ಮನುಷ್ಯನ ರೋಗಗಳಿಗೆ ಔಷಧಿಗಳನ್ನು ಕಂಡು ಹಿಡಿಯುವ ಮಹತ್ಪ್ರಯೋಗಗಳಿಗೆ ಒಳಗಾಗುತ್ತಿವೆ ಸಾಯುತ್ತಿವೆ. ಮನುಷ್ಯರಾಗಿದ್ದರೆ ಸಂಶೋಧನೆಯ ಫಲಿತಗಳೆಲ್ಲಾ ನನ್ನ ಪಾಲಿನವೇ ಜಗತ್ತಿನ ಶ್ರೇಷ್ಟ ಪ್ರಶಸ್ತಿಗಳು ಬಿರುದುಗಳು ನನಗೇ ಸೇರಬೇಕು ಎಂದು ಹಠ ಹಿಡಿದಿರುತ್ತಿದ್ದ. ಮನುಷ್ಯ ಸಮಾಜಕ್ಕೆ ಪ್ರಕೃತಿಗೆ ಕಂಟಕಪ್ರಾಯನಾಗಿಯೇ ಮುಂದುವರೆಯುತ್ತಿದ್ದಾನೆ. ತಕ್ಷಣ ನೀನಾರಿಗಾದೆಯೋ ಎಲೆ ಮಾನವ? ಎನ್ನುವ ಪ್ರಶ್ನೆ ಕಾಡುತ್ತದೆ. ತಮಗೇ ಗೊತ್ತಿಲ್ಲದಂತೆ ಪ್ರಯೋಗಗಳಿಗೊಳಗಾಗಿ, ತನ್ನಿಂದಾಗುತ್ತಿರುವ  ಉಪಕಾರದ ಲವಲೇಶವನ್ನೂ ಅರಿಯದ ಇಲಿಗಳು ಅಜ್ಞಾತವಾಗಿಯೇ ಮನುಕುಲಕ್ಕೆ ಸಹಾಯ ಮಾಡುತ್ತಿವೆ. ಇರಲಿರಲಿ ಇಲಿಗಳು  ಇಳೆಯಲಿ  ಪ್ರಯೋಗದಾ ಹರಳಾಗಿ  ಬಲಿದು ಹಬ್ಬಲಿ  ಅರಳರಳಿ  ಏನಂತೀರಾ……..?

About The Author

ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ