ವಿನಯ ಅಲಿಶಾಳಿಗೆ ಪ್ರಪೋಸ್ ಮಾಡಿದ ಎಂಬ ಸುದ್ದಿ ಕೇಳಿದ ಮೂರು ದಿನಕ್ಕೇ ಅರವಿಂದನಿಗೆ ಲಘು ಹೃದಯಾಘಾತವಾಗಿತ್ತು. ಶಿಕಾಗೋದಿಂದ ಓಡಿಬಂದಿದ್ದರು, ವಿನಯ ಮತ್ತು ಅಲಿಶಾ ಇಬ್ಬರೂ. ಮನಸ್ಸಿನ ವ್ಯಾಪಾರವೇ ವಿಚಿತ್ರ. ವಿನಯ ಅಲಿಶಾಳನ್ನು ಮದುವೆ ಮಾಡಿಕೊಳ್ಳುವುದು ಗ್ಯಾರಂಟಿ ಎಂದು ಗೊತ್ತಿದ್ದರೂ ವಿನಯನ ಪ್ರಪೋಸಲ್ಲಿಗೂ, ಅರವಿಂದನ ಹಾರ್ಟ್ ಅಟ್ಯಾಕಿಗೂ ಕಾರ್ಯಕಾರಣ ಸಂಬಂಧ ಹುಡುಕಲು ವೈದ್ಯಕೀಯ ಪುರಾವೆಗಳ ಸಾಥ್ ಕೇಳಿದ್ದಳು, ಸುಕನ್ಯಾ. ‘ಎಮೋಶನಲ್ ಆಗಿ ಅಪ್‌ಸೆಟ್ ಆದರೂ…’ ಎಂದು ಡಾಕ್ಟರುಗಳು ಇನ್ನೂ ಮಾತನ್ನೂ ಪೂರಾ ಮಾಡಿರಲಿಲ್ಲ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಎರಡನೆಯ ಕಂತು ನಿಮ್ಮ ಓದಿಗಾಗಿ

ಆ ಮನೆ ಕಟ್ಟಿದ್ದು ಸುಮಾರು ಮೂವತ್ತು ವರ್ಷದ ಹಿಂದೆ. ಅರವಿಂದ ಓದಿದ್ದು ಸಿವಿಲ್ ಇಂಜಿನಿಯರಿಂಗ್, ನಂತರ ನಾಲ್ಕು ವರ್ಷ ಸೌದಿ ಅರೇಬಿಯಾದಲ್ಲಿ ಕೆಲಸ, ಆಮೇಲೆ ಓದಿಗೆ ಯಾವ ಸಂಬಂಧವೂ ಇಲ್ಲದ ಏರ್ ಕಂಡಿಶನಿಂಗ್ ಯುನಿಟ್ಟುಗಳ ಮಾರಾಟದ ಏಜೆನ್ಸಿಗೆ ಪಾಲುದಾರನಾಗಿ ಮಿನಿಯಾಪೊಲಿಸ್‌ಗೆ ವಲಸೆ. ಈ ಚಳಿಯಿಂದ ಯಾವಾಗ ನಮಗೆ ಮುಕ್ತಿ ಕಾಣುತ್ತದೋ ಎಂದು ಬಯ್ದುಕೊಳ್ಳುತ್ತಲೇ ಮಿನೆಟೊಂಕಾ ಸರೋವರದ ದಡದಲ್ಲಿ ಎಂಟೆಕೆರೆ ಜಾಗ ಕೊಂಡು, ಹನ್ನೆರಡು ಸಾವಿರ ಚದರಡಿ ಮನೆಯನ್ನು ಕಟ್ಟಿಸಿ ಅಲ್ಲಿಯೇ ಇಡೀ ಜೀವನವನ್ನುಅರವಿಂದನಿಗೆ ಹಾರ್ಟ್ ಆಟ್ಯಾಕ್ ಆಗುವತನಕ ಕಳೆದದ್ದೂ ಆಯಿತು.

ಆ ಮನೆಯ ಬಗ್ಗೆ ಮಾತಾಡಲು ಶುರು ಮಾಡಿದರೆ ಸುಕನ್ಯಾಳಿಗೆ ಏನೋ ಸಂತಸ. ಈಗಲೂ ಮನೆಯನ್ನು ಯಾರಿಗಾದರೂ ತೋರಿಸಲು ಶುರುಮಾಡಿದರೆ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗುವಾಗ ಆಕೆಯ ಕಣ್ಣುಗಳು ತರಹೇವಾರಿ ಹೊಳೆಯತೊಡಗುತ್ತವೆ. ಅವಳ ಬಳಿ ಪ್ರತಿ ರೂಮಿಗೂ, ಪ್ರತಿ ಮೂಲೆಗೂ ಒಂದೊಂದು ಕಥೆಗಳಿವೆ. ಲಿವಿಂಗ್ ರೂಮಿನ ಪೀಠೋಪಕರಣಗಳನ್ನು ಕೊಳ್ಳಲು ಯಾರದೋ ಮಾತು ಕೇಳಿ ನ್ಯೂ ಮೆಕ್ಸಿಕೋದ ನಹಾವೋ ಅಮೆರಿಕನ್ ಇಂಡಿಯನ್ ಬುಡಕಟ್ಟಿಗೆ ತುಂಬುಬಸುರಿಯಾಗಿದ್ದರೂ ಅರವಿಂದನ ಜತೆ ಡ್ರೈವ್ ಮಾಡಿಕೊಂಡು ಹೋದದ್ದು, ವಾಪಸ್ ಬರುವಾಗಲೇ ನೋವು ಶುರುವಾಗಿ ಮಾರ್ಗಮಧ್ಯದಲ್ಲಿ ಹೆರಿಗೆಯಾಗಿಬಿಡುತ್ತದೆ ಎಂದು ರಂಪ ಮಾಡಿ, ಕ್ಯಾನ್ಸಾಸ್‌ನ ವಿಚಿಟಾ ಎಂಬ ವಿಚಿತ್ರ ಹೆಸರಿನ ಊರಿನ ಎಮರ್ಜೆನ್ಸಿ ರೂಮಿನಲ್ಲಿ ಇಳಿದು ‘ಫಾಲ್ಸ್ ಅಲಾರ್ಮ್’ ಎಂದು ವಾಪಸ್ ಮಿನಿಯಾಪೊಲಿಸ್‌ಗೆ ಬಂದಾಕ್ಷಣ ಹೆರಿಗೆಯಾಗಿದ್ದು, ಮುಂಬಾಗಿಲಿನಿಂದ ಮನೆಯೊಳಗೆ ಬಂದ ತಕ್ಷಣ ರಂಗೋಲಿಯ ಆಕಾರದಲ್ಲಿದ್ದ ಇಟಲಿಯ ಕರಾರ ಎಂಬ ಊರಿನಿಂದಲೇ ಆರ್ಡರ್ ಕೊಟ್ಟು ತರಿಸಿದ್ದ ಇಟಾಲಿಯನ್ ಮಾರ್ಬಲು, ಕಾವೇರಿ ಎಂಪೋರಿಯಮ್‌ನ ಡೈನಿಂಗ್ ಸೆಟ್, ಗೀತೋಪದೇಶದ ಚಿತ್ರ, ಪಕ್ಕದ ಪ್ಲೇರೂಮು, ಹಿಂದಿನ ಸನ್‌ರೂಮಿನ ಕೆಳಗಿದ್ದ ಜಾಗವನ್ನು ಸರಿಸಿ, ಸುತ್ತಲೂ ಮತ್ತೆ ಗಾಜಿನ ಗೋಡೆಗಳನ್ನು ಎಬ್ಬಿಸಿ ಕಟ್ಟಿಸಿದ ಗ್ರೀನ್ ರೂಮು, ಮಿನೆಸೊಟಾದ ಆ ಆರುತಿಂಗಳ ಛಳಿಯಲ್ಲೂ ಅಲ್ಲಿ ಬೆಳೆಯುವ ಮೈಸೂರು ಮಲ್ಲಿಗೆ, ದಾಸವಾಳ, ಜಾಜಿ, ಕೊತ್ತಂಬರಿ ಸೊಪ್ಪು – ಎಲ್ಲ ತಾನು ಕೈಯಾರೆ ಮಾಡಿದ್ದು, ಬೆಳೆಸಿದ್ದು ಎಂಬ ಹೆಮ್ಮೆಯಿರುತ್ತಿತ್ತು, ಪುಳಕವಿರುತ್ತಿತ್ತು.

‘ಅಮ್ಮಾ, ಮನೆಯೋ ಮ್ಯೂಸಿಯಮ್ಮೋ ಇದು. ಸ್ಮಿತ್ಸೋನಿಯನ್ ತರ ಒಂದು ರೂಮಿನಿಂದ ಇನ್ನೊಂದು ರೂಮಿಗೆ ಬಂದರೆ ವಾಸನೆ, ನೋಟ, ತಂಪು. ನಿನ್ನ ಗ್ರೀನ್‌ರೂಮಿಗೆ ಹೋದರೆ ಡಿಸೆಂಬರಿನಲ್ಲೂ ಮಿನೆಸೊಟಾದಲ್ಲಿದೇವೆ ಅನ್ನೋದೇ ಮರೆತು ಹೋಗುತ್ತದೆ. ನಿನಗೆ ಸುಸ್ತೇ ಆಗಲ್ವಾ? ಇಬ್ಬರೇ ಇರ್ತೀರಾ? ಇಷ್ಟು ದೊಡ್ಡ ಮನೇನ ಕ್ಲೀನ್ ಮಾಡೋಕೆ, ಎಲ್ಲ ಓರಣವಾಗಿ ಇಟ್ಕೊಳೋಕೆ ಕಷ್ಟಾ ಆಗಲ್ವಾ’ ಕಳೆದ ಬಾರಿ ಬಂದಾಗ ವಿನಯ ಕೇಳಿದ್ದ.

‘ಅಯ್ಯೋ ಅದಕ್ಕೇ ಅಲ್ವೇನೋ ಗ್ರೀನ್ ಕಾರ್ಡ್ ಕೊಡಿಸಿ ಭದ್ರಾವತಿಯಿಂದ ರತ್ನನ್ನ ಕರಕೊಂಡು ಬಂದಿರೋದು. ಪಾಪ, ಒಳ್ಳೇ ಹುಡುಗೀ ಆಕೆ. ನನ್ ಜತೇಗೂ ಕೆಲಸ ಮಾಡ್ತಾಳೆ. ಅವ್ಳಿಗೆ ಏನಾರ ಒಂದು ನೆಲೆ ತೋರಿಸ್ಬೇಕು, ನೋಡು’ ಎಂದು ಅಲವತ್ತುಕೊಂಡಿದ್ದಳು.

ಸುಕನ್ಯಾ ಬೆಳೆದದ್ದು ಭದ್ರಾವತಿಯಲ್ಲಿ. ಶಾರದತ್ತೆಯ ಮನೆಯಲ್ಲಿ. ಮೊದಲಿನಿಂದಲೂ ಒಂಟಿಯಾಗಿಯೇ ಬೆಳೆದಿದ್ದಳು. ಚಿಕ್ಕಂದಿನಲ್ಲಿಯೇ ಅಮ್ಮನನ್ನು ಕಳೆದುಕೊಂಡಿದ್ದಳು. ಅಪ್ಪ ನಾಣಿ ಶಿವಮೊಗ್ಗಾದ ಯಾವುದೋ ಲೋಕಲ್ ಪೇಪರಿನಲ್ಲಿ ಕೆಲಸಕ್ಕಿದ್ದ. ಸುಕನ್ಯಾಳಿಗೆ ಆತ ಎಂದೂ ಅಪ್ಪನಾಗಿ ಒದಗಿಬಂದಿರಲಿಲ್ಲ. ಬೆಳಗಿನ ಹೊತ್ತು ಲೋಕಲ್ ಪೇಪರಿನಲ್ಲಿ ಮಾರ್ಕ್ಸ್‌ವಾದ ಬರೆದು ಊರುದ್ಧಾರ ಮಾಡುವ ಕಾಯಕದ ಗಡಿಬಿಡಿ, ರಾತ್ರಿ ಜ್ಯುವೆಲ್ ರಾಕಿನ ಪಕ್ಕದಲ್ಲಿದ್ದ ಬಾರು, ಅಥವಾ ರಾಮಣ್ಣಶೆಟ್ಟಿ ಪಾರ್ಕಿನ ಯಾವುದೋ ಗಡಂಗು. ನಾಣಿಯ ಈ ಚಟುವಟಿಕೆಗಳ ನಡುವೆ ಒಂಬತ್ತು ವರ್ಷದ ಸುಕನ್ಯಾ ಉದ್ಧಾರ ಆಗುವುದಿಲ್ಲವೆಂಬುದನ್ನು ಮನಗಂಡಿದ್ದ ಶಾರದತ್ತೆ ಆಕೆಯನ್ನು ತನ್ನ ಮನೆಯಲ್ಲಿಯೇ ಕರೆತಂದು ಇಟ್ಟುಕೊಂಡಿದ್ದಳು.

ಆ ಸಮಯದಲ್ಲಿ ಶಾರದತ್ತೆಯೂ ಸಹ ಪರಮಾತ್ಮ ತನ್ನ ವಿಷಯದಲ್ಲಿ ಕರುಣಿಯೋ ಚಮತ್ಕಾರಿಯೋ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುತ್ತಿದ್ದಳು. ಆಕೆಯೂ ವಿಧವೆ. ಇದ್ದ ಒಬ್ಬ ಮಗ ಶೀನಣ್ಣನಿಗೆ ಚಿಕ್ಕಂದಿನಿಂದಲೇ ಮೈಮೇಲೆ ರಾಯರು ಬರುತ್ತಿದ್ದರು. ಯಾವಾಗ ನೋಡಿದರೂ ಹಣೆ ತುಂಬಾ ಗೋಪಿಚಂದನ ಹಚ್ಚಿಕೊಂಡು ಒಂದು ಅಂಗವಸ್ತ್ರ ಸುತ್ತಿಕೊಂಡು ಮಡಿನೀರಾದ ಮೇಲೆ ‘ಹಾದಿ, ಹಾದಿ’ ಎಂದುಕೊಂಡೇ ಓಡಾಡುತ್ತಿದ್ದ. ಬೆಳಗ್ಗೆ ಸ್ನಾನ ಸಂಧ್ಯಾವಂದನೆ ಮಾಡಿ ಹತ್ತುಗಂಟೆಗೆ ಅಮ್ಮ ಕೆಲಸಕ್ಕೆ ಹೋಗುವ ಮೊದಲು ತಾನೂ ಊಟ ಮಾಡಿ ಬಸ್ ಹತ್ತಿಕೊಂಡು ಶಿವಮೊಗ್ಗಾದ ದುರ್ಗಿಗುಡಿ ರಾಯರ ಮಠಕ್ಕೆ ಹೋಗಿಬಿಡುತ್ತಿದ್ದ. ಅಲ್ಲಿ ಆಚಾರ್ರುಗಳು ಹೇಳಿದ ಕೆಲಸವನ್ನು ಮಾಡಿಕೊಂಡು ಸಂಜೆಯ ಮೇಲೆ ಮನೆಗೆ ಬಂದರೆ ಬಂದ, ಇಲ್ಲದಿದ್ದರೆ ಇಲ್ಲ. ಒಂದು ದಿನ ಹೀಗೇ ಬೆಳಿಗ್ಗೆ ಊಟ ಮಾಡಿ ಮಠಕ್ಕೆ ಹೋದವನು ವಾಪಸ್ ಬರಲೇ ಇಲ್ಲ. ಶಾರದತ್ತೆ ಇಂದು ಬರುತ್ತಾನೆ, ನಾಳೆ ಬರುತ್ತಾನೆ ಎಂದು ಕಾದು ಕೊನೆಗೆ ಒಂದು ವಾರವಾದರೂ ಬರದೇ ಇದ್ದಾಗ ಸುಕನ್ಯಾಳ ಜತೆ ಶಿವಮೊಗ್ಗಾಕ್ಕೆ ಹೋಗಿ ಬಂದಿದ್ದಳು. ಶೀನಣ್ಣ ಯಾವುದೋ ಗುಂಪಿನ ಜತೆ ಮಂತ್ರಾಲಯಕ್ಕೆ ಹೋದ ಎಂದು ಮಠದ ಆಚಾರ್ರು ಹೇಳಿದ್ದರು. ಇನ್ನೂ ಒಂದು ವಾರ ಕಾದು ನಾಣಿಯ ಸಹಾಯ ಕೇಳಿದ್ದಳು. ಆತ ‘ಕಾಣೆಯಾಗಿದ್ದಾನೆ’ ಎಂದು ಶೀನನ ಚಿತ್ರವೊಂದನ್ನು ಪೇಪರಲ್ಲಿ ಹಾಕಿ ‘ನಂಪೇಪರನ್ನು ಬರೇ ಶಿವಮೊಗಾದಲ್ಲಿ ಮಾತ್ರ ಓದ್ತಾರಂಕೊಬೇಡ ಅಕ್ಕಾ. ಗಜಾನನದಲ್ಲಿ ಬಳ್ಳಾರಿ, ಆದೋನಿಗೂ ಇಪ್ಪತ್ತೈದು ಕಾಪಿ ಕಳಿಸ್ತೀವಿ. ಅದೋನೀ ಅಂದರೆ ಮಂತ್ರಾಲಯ ಅಂತಾನೇ ಲೆಕ್ಕ. ಯಾರಾದ್ರೂ ನೋಡಿದರೆ ಫೋನ್ ಮಾಡಕ್ಕೆ ಆಫೀಸ್ ಫೋನ್ ನಂಬರ್ ಕೊಟ್ಟಿದೀನಿ. ಯೋಚ್ನೆ ಮಾಡ್ಬೇಡ. ಬಂದೇ ಬರ್ತಾನೆ. ಕೈಯಲ್ಲಿ ದುಡ್ಡಿಲ್ಲ, ಕಾಸಿಲ್ಲ. ಎಲ್ಲಿಗೆ ಹೋಗ್ತಾನೆ.’ ಎಂದಿದ್ದ, ನಾಣಿ. ಆದರೆ, ಅಂದು ಹೋದ ಶೀನ ಇಂದಿನವರೆಗೂ ಬಂದಿರಲಿಲ್ಲ. ಶಾರದತ್ತೆ ಕೊಂಚ ದಿನ ಅತ್ತು, ಮಂತ್ರಾಲಯಕ್ಕೆ ಹೋಗಿ ಬರುವವರಿಗೆಲ್ಲ ಮಗನ ಚಿತ್ರ ತೋರಿಸಿ ‘ಹೆಸರು, ಶೀನ ಅಂತ. ಯಾವಾಗಲೂ ದಾಡಿ ಬಿಟ್ಟಿರ್ತಾನೆ’ ಎಂದು ಗುರುತು ಹೇಳಿ, ಹೇಳಿ ಕೊನೆಗೂ ಸಿಗದಿದ್ದಾಗ ‘ಎಲ್ಲಿದ್ದಾನೋ, ಆ ರಾಯರ ಸನ್ನಿಧೀಲಿ ಇರೋ ತನಕ ಆತನಿಗೆ ಕೆಡುಕೇನೂ ಆಗೋದಿಲ್ಲ. ಆ ರಾಯರೇ ಕಾಪಾಡ್ತಾರೆ’ ಎಂದು ಸಮಾಧಾನ ಮಾಡಿಕೊಂಡಿದ್ದಳು.

ಮುಂದೆ ಸುಕನ್ಯಾಳ ಕಾಲೇಜು ಮುಗಿದ ತಕ್ಷಣ ಕಾಲಿಗೆ ತೊಡರಿದಂತೆ ಅರವಿಂದನ ಸಂಬಂಧ ಬಂದಾಗ ಯಾವುದೇ ಹಿಂದೆಗೆಯಿಲ್ಲದೆ ಒಪ್ಪಿಕೊಂಡಿದ್ದಳು. ಅರವಿಂದ ಕೆಲಸದ ಮೇಲೆ ಸೌದಿ, ದುಬೈಗೆ ಹೋಗಿ ಬರುತ್ತಿರಬೇಕು ಎಂದು ಹೇಳಿದಾಗ ‘ಯೋಚ್ನೆ ಮಾಡು, ಶಾರದ. ನಮಗೂ ವಯಸ್ಸಾಯ್ತು. ಇರವ್ಳೊಬ್ಳು ಮಗಳು. ಇಲ್ಲೇ ಹತ್ತಿರ ಕೊಟ್ಟರೆ ನಾವೂ ಹೋಗಿ ಆಗಾಗ್ಗೆ ನೋಡಿಕೊಂಡು ಬರಬಹುದು’ ಎಂದು ನಾಣಿ ಅಡ್ಡಿ ಚಡ್ಡಿ ಮಾಡಿದ್ದ, ‘ಹುಚ್ಚುಮುಂಡೇಗಂಡ. ಹುಟ್ದಾಗಿಂದ ಬದುಕಿದ್ಯಾ, ಸತ್ತಿದ್ಯಾ ಎಂದು ನೋಡಕ್ಕೆ ಬರ್ಲಿಲ್ಲ. ಈಗ ಮಗಳ ಮದುವೆ ಸಮಯದಲ್ಲಿ ಹಕ್ಕು ಸ್ಥಾಪಿಸೋಕೆ ಬಂದೆಯಾ. ಈ ಕಡೆ ಬಂದರೆ ಕಾಲ್ಮುರೀತೀನಿ. ನಿನಗ್ಯಾಕೆ ಬೇಕೋ ಸಂಸಾರ, ನಿಂಗೆ ರಾತ್ರಿ ಖರ್ಚಿಗೆ ಎಷ್ಟು ದುಡ್ಡು ಬೇಕು ಅಂತ ಹೇಳು. ನಾನೇ ನಿನ್ನ ಜೀವಮಾನ ಇಡೀ ಪೂರೈಸ್ತೀನಿ. ಆ ಮಗೂ ಜೀವನಾನ ಮಾತ್ರ ಹಾಳ್ಮಾಡಬೇಡ’ ಎಂದು ಕೈ ಮುಗಿದು ಕೇಳಿಕೊಂಡಿದ್ದಳು. ನಾಣಿಗೆ ಏನನಿಸಿತೋ ಮದುವೆಯ ದಿನ ನೀಟಾಗಿ ಶೇವ್ ಮಾಡಿಕೊಂಡು, ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಹಾಕಿಕೊಂಡು ಬಂದು ಒಂದು ಕಡೆ ಕೂತಿದ್ದು ಮದುಮಕ್ಕಳಿಗೆ ಹರಸಿ ಹೋಗಿದ್ದ. ಶಾರದತ್ತೆ ಕಣ್ಣೊರೆಸಿಕೊಂಡು ಸುಕನ್ಯಾಳನ್ನು ಬೀಳ್ಕೊಟ್ಟಿದ್ದಳು.

ಅಂದಿನಿಂದ ಇಂದಿನವರೆಗೆ ಸುಮಾರು ನಲವತ್ತು ವರ್ಷ, ಶಾರದತ್ತೆ ಒಂಟಿಯಾಗಿಯೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಿದ್ದಳು. ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ಸುಕನ್ಯಾ ಭದ್ರಾವತಿಗೆ ಹೋದಾಗಲೂ ಶಾರದತ್ತೆಯೇ ಸುಕನ್ಯಾಳಿಗೆ ಇನ್ನಿಲ್ಲದ ಉಪಚಾರ ಮಾಡಿ ಕಳಿಸುತ್ತಿದ್ದಳು. ಅರವಿಂದನ ಕುಟುಂಬದವರೆಲ್ಲಾ ಬೆಂಗಳೂರಿನಲ್ಲಿಯೇ ಸೆಟಲ್ ಆಗಿರುವುದರಿಂದ ಸುಕನ್ಯಾಳಿಗೆ ಈ ನಡುವೆ ಹೆಚ್ಚು ದಿನ ಭದ್ರಾವತಿಗೆ ಹೋಗಿದ್ದುಬರಲೂ ಆಗುತ್ತಿರಲಿಲ್ಲ. ಒಂದು ದಿನವೂ ಶಾರದತ್ತೆ, ಬೆಂಗಳೂರಿಗೆ ಬಂದರೂ ಭದ್ರಾವತಿಗೆ ಬಂದು ತನ್ನನ್ನು ನೋಡುವುದಿಲ್ಲ ಎಂದು ದೂರುತ್ತಲೂ ಇರಲಿಲ್ಲ, ಬೇರೆಯವರ ಜತೆ ಅಲವತ್ತುಕೊಳ್ಳುತ್ತಲೂ ಇರಲಿಲ್ಲ. ಅಂತಾಕೆಗೆ ಈಗ ಕೈಕಾಲು ಆಡದ ಪರಿಸ್ಥಿತಿ ಬಂದಿತ್ತು. ಮೊನ್ನೆ ಯಾವತ್ತೂ ಇಲ್ಲದವಳು, ಶಾರದತ್ತೆಯೇ ಫೋನ್ ಮಾಡಿ ‘ಸುಕನ್ಯಾ ನಂದು ಮುಗೀತನಿಸುತ್ತೆ. ಹೋಗೋದ್ರೊಳಗೆ ನಿನ್ನೊಮ್ಮೆ ನೋಡ್ಬೇಕೇ, ತಾಯಿ. ಒಮ್ಮೆ ಬಂದು ಹೋಗಕ್ಕಾಗುತ್ತೇನೇ?’ ಎಂದು ಕೇಳಿದಾಗ ಸುಕನ್ಯಾಗೆ ಏನು ಉತ್ತರ ಕೊಡಬೇಕೆಂದು ಗೊತ್ತಾಗದೆ ಮೈಪರಚಿಕೊಳ್ಳುವ ಹಾಗಾಗಿತ್ತು.
ಸುಕನ್ಯಾಳ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇದ್ದವು.

ಸುಕನ್ಯಾಳಿಗೆ ಆತ ಎಂದೂ ಅಪ್ಪನಾಗಿ ಒದಗಿಬಂದಿರಲಿಲ್ಲ. ಬೆಳಗಿನ ಹೊತ್ತು ಲೋಕಲ್ ಪೇಪರಿನಲ್ಲಿ ಮಾರ್ಕ್ಸ್‌ವಾದ ಬರೆದು ಊರುದ್ಧಾರ ಮಾಡುವ ಕಾಯಕದ ಗಡಿಬಿಡಿ, ರಾತ್ರಿ ಜ್ಯುವೆಲ್ ರಾಕಿನ ಪಕ್ಕದಲ್ಲಿದ್ದ ಬಾರು, ಅಥವಾ ರಾಮಣ್ಣಶೆಟ್ಟಿ ಪಾರ್ಕಿನ ಯಾವುದೋ ಗಡಂಗು. ನಾಣಿಯ ಈ ಚಟುವಟಿಕೆಗಳ ನಡುವೆ ಒಂಬತ್ತು ವರ್ಷದ ಸುಕನ್ಯಾ ಉದ್ಧಾರ ಆಗುವುದಿಲ್ಲವೆಂಬುದನ್ನು ಮನಗಂಡಿದ್ದ ಶಾರದತ್ತೆ ಆಕೆಯನ್ನು ತನ್ನ ಮನೆಯಲ್ಲಿಯೇ ಕರೆತಂದು ಇಟ್ಟುಕೊಂಡಿದ್ದಳು.

ಮೊದಲ ಮಗ ವಿನಯಾ ಈಗ ನಾಲ್ಕು ವರ್ಷಗಳ ಹಿಂದೆ ಅಲೀಶಾ ಯಂಗ್ ಎಂಬ ಹೊಂಗೂದಲ ಹೆಣ್ಣನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಹೇಳಿದಾಗ, ಮನಸ್ಸಿಗೆ ಏನನ್ನಿಸಿತ್ತು ಎಂದೂ ಈಗ ಮರೆತುಹೋಗಿದೆ. ಅಮೆರಿಕಾಕ್ಕೆ ಬಂದ ಹೊಸತರಲ್ಲಿ ಮಕ್ಕಳನ್ನು ಹಾಗೆ ಬೆಳೆಸಬೇಕು, ಹೀಗೆ ಬೆಳೆಸಬೇಕು ಎಂದೆಲ್ಲ ಕನಸು ಕಂಡಿದ್ದ ಸುಕನ್ಯಾಳಿಗೆ ತಾನಂದುಕೊಂಡಿದ್ದಕ್ಕಿಂತಾ ತಾನು ಬಹಳ ಬೇರೆ ಅನ್ನಿಸಿದ್ದು ವಿನಯಾ ಅಲಿಶಾ ಜತೆ ಹೈಸ್ಕೂಲಿನ ಪ್ರಾಮ್‌ಗೆ ಹೋಗುತ್ತೀನಿ ಎಂದಾಗ. ತಾನೇ ಖುದ್ದು ವಿನಯನನ್ನು ಕರೆದುಕೊಂಡು ಹೋಗಿ ಅವನ ಟಕ್ಸಿಡೋ ಅನ್ನು ಮತ್ತು ಅಲಿಶಾಳಿಗೆ ಕೊಡಬೇಕಾದ ಹೂವಿನ ಕೊರ್ಸಾಜನ್ನೂ ಆರಿಸಿ ತಂದಿದ್ದಳು. ವಿನಯ ಚಿಕ್ಕವನಿದ್ದಾಗ ಆಗಿನ ಕನ್ನಡ ಸಂಘದ ಅಧ್ಯಕ್ಷೆ ವೈಷ್ಣವಿಯ ಮಗಳು ಪ್ರಾರ್ಥನಾ ಜತೆಗೇ ವಿನಯನ ಪ್ರಾಮು, ಹೋಮ್‌ಕಮಿಂಗು, ಡೇಟಿಂಗು, ಮದುವೆ ಎಂದು ಎಲ್ಲವನ್ನೂ ನಿರ್ಧರಿಸಿಕೊಂಡಿದ್ದನ್ನು ನೆನಪಿಸಿಕೊಂಡು ಒಮ್ಮೆ ಕಣ್ಣಂಚು ತೇವವಾಗಿತ್ತು. ಪ್ರಾರ್ಥನಾ ಇನ್ಯಾರೋ ಅಹಮದ ಆಡೆನ್ ಎಂಬ ಸೊಮಾಲಿ ಹುಡುಗನ ಜತೆಗೆ ಪ್ರಾಮ್ ಹೋಗುತ್ತಿದ್ದಾಳೆ ಎಂದು ಗೊತ್ತಾದಾಗ ತನ್ನ ಅದೃಷ್ಟವನ್ನು ಹೊಗಳಾಡಿಕೊಂಡಿದ್ದಳು. ನಂತರ ಕಾಲೇಜಿಗೆ ಶಿಕಾಗೋಗೆ ಹೋಗುತ್ತೇನೆಂದು ಹಟ ಹಿಡಿದು ವಿನಯಾ, ಅಲಿಶಾ ಇಬ್ಬರೂ ಮಿನಿಯಾಪೊಲಿಸ್ ಬಿಟ್ಟುಹೋದರು. ನಂತರ ಇಬ್ಬರೂ ಮೆಡಿಕಲ್ ಕಾಲೇಜಿಗೂ ಅಲ್ಲಿಯೇ ಶಿಕಾಗೋದಲ್ಲಿ ಜತೆಜತೆಗೇ. ಮೆಡಿಕಲ್ ಸೇರಿದ ಮೇಲೆ ವಿನಯ ‘ಫಸ್ಟ್ ಲವ್’ ‘ಹೈಸ್ಕೂಲು ಸ್ವೀಟುಹಾರ್ಟು’ ಎಂತೆಲ್ಲಾ ಹೇಳಿ ‘ಅಮ್ಮ, ನಿನ್ನೆ ಅಲಿಶಾಗೆ ಪ್ರಪೋಸ್ ಮಾಡಿದೆ’ ಎಂದೂ ಹೇಳಿಬಿಟ್ಟಿದ್ದಾಗ ಈ ಮಾತನ್ನು ಎಂದಿನಿಂದಲೋ ನಿರೀಕ್ಷಿಸಿದ್ದಂತೆ ಒಪ್ಪಿಕೊಂಡುಬಿಟ್ಟಿದ್ದಳು. ಅರವಿಂದನೂ ಏನೂ ಮಾತಾಡಿರಲಿಲ್ಲ.

ಅಲಿಶಾ ಅನಾಥೆ. ಸುಕನ್ಯಾಳಿಗೆ ಗೊತ್ತಿರುವ ಪ್ರಕಾರ ಅಲಿಶಾ ಶಿಕಾಗೋದ ಬೀದಿಗಳಲ್ಲಿ ಅಪ್ರಾಪ್ತ ವಯಸ್ಸಿನ ಮಾದಕ ವ್ಯಸನಿಯೊಬ್ಬಳಿಗೆ ಹುಟ್ಟಿದ ಮಗು. ಅವಳಮ್ಮ ಯಾರು ಎಂದು ಅಲಿಶಾಳಿಗೂ ಗೊತ್ತಿರಲಿಲ್ಲ. ಸರಕಾರದಿಂದ ತಿಂಗಳಿಗಿಷ್ಟು ಎಂದು ದುಡ್ಡು ಪಡೆದು ಮಕ್ಕಳನ್ನು ಸಾಕುವ ಫಾಸ್ಟರ್ ಅಪ್ಪ, ಅಮ್ಮಂದಿರುಗಳ ಕೈಕೆಳಗೆ ಬೆಳೆದ ಆಕೆ ಬಹಳ ಚುರುಕು ಹುಡುಗಿ. ಹೈಸ್ಕೂಲ್ ಓದುತ್ತಿರಬೇಕಾದರೆ ಸರಕಾರ ಗೊತ್ತು ಪಡಿಸಿದ್ದ ಆಕೆಯ ಫಾಸ್ಟರ್ ಅಪ್ಪ, ಅಮ್ಮಂದಿರು ಮಿನಿಯಾಪೊಲಿಸ್‌ನಲ್ಲಿದ್ದರು. ಹಾಗಾಗಿಯೇ ಆಕೆ ಮಿನಿಯಾಪೊಲಿಸ್‌ಗೆ ಬಂದದ್ದು. ಅಲ್ಲಿ, ಹೈಸ್ಕೂಲಿನಲ್ಲಿ ವಿನಯನ ಪರಿಚಯವಾದದ್ದು. ಪರಿಚಯದಿಂದ ಮುಂದಾಗಬೇಕಾದೆಲ್ಲವೂ ತಂತಾನೇ ಆಗಿದ್ದವು.

ವಿನಯ ಅಲಿಶಾಳಿಗೆ ಪ್ರಪೋಸ್ ಮಾಡಿದ ಎಂಬ ಸುದ್ದಿ ಕೇಳಿದ ಮೂರು ದಿನಕ್ಕೇ ಅರವಿಂದನಿಗೆ ಲಘು ಹೃದಯಾಘಾತವಾಗಿತ್ತು. ಶಿಕಾಗೋದಿಂದ ಓಡಿಬಂದಿದ್ದರು, ವಿನಯ ಮತ್ತು ಅಲಿಶಾ ಇಬ್ಬರೂ. ಮನಸ್ಸಿನ ವ್ಯಾಪಾರವೇ ವಿಚಿತ್ರ. ವಿನಯ ಅಲಿಶಾಳನ್ನು ಮದುವೆ ಮಾಡಿಕೊಳ್ಳುವುದು ಗ್ಯಾರಂಟಿ ಎಂದು ಗೊತ್ತಿದ್ದರೂ ವಿನಯನ ಪ್ರಪೋಸಲ್ಲಿಗೂ, ಅರವಿಂದನ ಹಾರ್ಟ್ ಅಟ್ಯಾಕಿಗೂ ಕಾರ್ಯಕಾರಣ ಸಂಬಂಧ ಹುಡುಕಲು ವೈದ್ಯಕೀಯ ಪುರಾವೆಗಳ ಸಾಥ್ ಕೇಳಿದ್ದಳು, ಸುಕನ್ಯಾ. ‘ಎಮೋಶನಲ್ ಆಗಿ ಅಪ್‌ಸೆಟ್ ಆದರೂ…’ ಎಂದು ಡಾಕ್ಟರುಗಳು ಇನ್ನೂ ಮಾತನ್ನೂ ಪೂರಾ ಮಾಡಿರಲಿಲ್ಲ. ‘ಈ ಗಂಡಸರೇ ವಾಸಿ, ಹಾರ್ಟ್ ಅಟ್ಯಾಕ್ ಗೀರ್ಟ್ ಅಟ್ಯಾಕ್ ಆಗಿಸಿಕೊಂಡು ತಮ್ಮ ಮನಸ್ಸಿಗಾಗಿರೋ ನೋವನ್ನು ತೋರಿಸಿಕೋತಾರೆ. ನಮ್ಮಗಳದು ಗಟ್ಟಿಪಿಂಡ. ಹಾಳಾದ್ದು, ಅಂಥಾದ್ದೂ ಏನೂ ಆಗಲ್ಲ’ ಎಂದು ಎಲ್ಲರ ಮುಂದೆಯೇ ಒಟಗುಟ್ಟಿದ್ದಳು. ಅರವಿಂದನಿಗೆ ಏನು ಮಾತಾಡಬೇಕೆಂದು ಗೊತ್ತಾಗದೇ ‘ಎಂಥ ಮಾತಾಡ್ತೀಯಾ, ಸುಕನ್ಯಾ? ಮಗನ ಮದುವೆ ಅಂದರೆ ಒಳ್ಳೆ ಸುದ್ದಿ. ಇದಕ್ಯಾಕೆ ದುಃಖಪಡಲಿ’ ಎಂದಾಗ ‘ಅಯ್ಯೋ, ಸುಮ್ಮನಿರಿ. ನನಗ್ಗೊತ್ತಾಗಲ್ವ. ನಿಮ್ಮನ್ನು ಮದುವೆ ಆದಾಗಿನಿಂದ ನೋಡಿದೀನಿ, ನಿಮಗೆ ಅಲಿಶಾನ ನೋಡಿ ಚಂಪಾಕಲಿ ತಿಂದಷ್ಟು ಖುಷಿಯಾಗಿದೆಯೇನು? ನಾಟಕ ಮಾಡೋಕೆ ಹೋಗಬೇಡಿ. ಅಷ್ಟಕ್ಕೂ ನಿಮಗಾಗಿರೋದು ಮೈಲ್ಡ್ ಹಾರ್ಟ್ ಅಟ್ಯಾಕು. ಒಂದು ಸ್ಟೆಂಟ್ ಹಾಕಿದ್ರೆ ಎಲ್ಲ ಸರಿ ಹೋಗತ್ತಂತೆ. ಅವೆಲ್ಲ ದೊಡ್ಡ ಕಾಯಿಲೆಯೇ ಅಲ್ಲ, ಈ ಕಾಲದಲ್ಲಿ.’ ಎಂದು ಆತನಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಅದು ಮಾರಣಾಂತಿಕವಲ್ಲದ್ದು, ಅದಕ್ಕೂ ವಿನಯನ ಪ್ರಪೋಸಲ್ಲಿಗೂ ಇರುವ ಒಂದು ವಿಚಿತ್ರ ಸಂಬಂಧ, ಒಂದು ರೀತಿ ಅರವಿಂದ ತನ್ನ ಈ ಮಿದುಖಾಯಿಲೆಯ ಹುತಾತ್ಮತನವನ್ನು ಆನಂದಿಸುತ್ತಿದ್ದಾನೆ ಎನ್ನುವ ಮಟ್ಟಿಗೆ ಆರೋಪಿಸಿಬಿಟ್ಟಿದ್ದಳು, ಸುಕನ್ಯಾ. ಎಲ್ಲ ಮಾತುಕತೆ ಅಲಿಶಾಗೆ ಅರ್ಥವಾಗದ ಭಾಷೆಯಲ್ಲಿ ಆಗಿದ್ದರೂ ಸನ್ನಿವೇಶದ ಸೂಕ್ಷ್ಮವನ್ನು ಅರಿತ ಅಲಿಶಾ ವಿನಯನ ಕಿವಿಯಲ್ಲಿ ಉಸುರಿದ್ದಳು ‘ಐ ಡೋಂಟ್ ಥಿಂಕ್ ಶಿ ಲೈಕ್ಸ್ ಮಿ’.

ಇದಾಗಿ ನಾಲ್ಕು ವರ್ಷಗಳೇ ಕಳೆದಿವೆ. ವಿನಯನ ಮದುವೆಯೂ ಆಗಿದೆ. ವಿನಯ, ಅಲಿಶಾ ಇಬ್ಬರೂ ಮೆಡಿಕಲ್ ಸ್ಕೂಲು ಮುಗಿಸಿ ರೆಸಿಡೆನ್ಸಿ ಮಾಡುತ್ತಿದ್ದಾರೆ. ವಿನಯಾ ರೇಡಿಯಾಲಜಿ, ಅಲಿಶಾ ಕಾರ್ಡಿಯಾಲಜಿ. ಆದರೆ, ಅಲಿಶಾ ಈಗ ಬಸುರಿಯಾಗಿರುವುದರಿಂದ ಸಂಬಳವಿಲ್ಲದ ರಜೆ ಹಾಕಿದ್ದಾಳೆ.

ಅರವಿಂದನೂ ಸುಧಾರಿಸಿಕೊಂಡು ಆರಾಮಾಗಿ ಓಡಾಡಿಕೊಂಡಿದ್ದಾನೆ. ಅವನ ವ್ಯವಹಾರವೂ ಚೆನ್ನಾಗಿಯೇ ನಡೆದಿದೆ. ಎರಡನೆಯ ಮಗ ವಿಶೂದೂ ಈ ವರ್ಷ ಕಾಲೇಜು ಮುಗಿಯುತ್ತದೆ. ಆತ ಸಿನೆಮಾ ನಿರ್ದೇಶಕನಾಗಬೇಕೆಂದು ಎನ್‍ವೈಯು ನಲ್ಲಿ ಇಂಗ್ಲಿಷ್, ಸಿನೆಮಟೊಗ್ರಾಫಿ, ದಕ್ಷಿಣ ಏಶಿಯಾದ ಭಾಷೆಗಳಲ್ಲಿ ಮೇಜರ್ ಶುರುಮಾಡಿ, ಇನ್ನೆರಡು ಸಲ ಮೇಜರನ್ನು ಬದಲಾಯಿಸಿ ನಾಲ್ಕು ವರ್ಷದ ಕಾಲೇಜನ್ನು ಆರು ವರ್ಷಕ್ಕೆ ಮುಗಿಸುತ್ತಲಿದ್ದಾನೆ.

ಇಷ್ಟರ ನಡುವೆ ಆಗಿರುವ ಇನ್ನೊಂದು ಬೆಳವಣಿಗೆಯೆಂದರೆ ವಿಶೂ ತನ್ನ ಬಲುದಿನದ ಸಖ ಸುಪ್ರೀತ್ ಸಿಂಗನೊಂದಿಗೆ ಮನ್‌ಹಾಟನ್ನಿನ ಅಪಾರ್ಟ್‌ಮೆಂಟಿನಲ್ಲಿ ಕಳೆದ ಆರು ತಿಂಗಳಿಂದ ಜತೆಯಲ್ಲಿಯೇ ವಾಸಿಸುತ್ತಿರುವುದು. ಸುಪ್ರೀತ್‌ ಮೊದಲ ಬಾರಿಗೆ ವಿಶೂನ ಅಪ್ಪ, ಅಮ್ಮನನ್ನು ನೋಡಲು ಮಿನಿಯಾಪೊಲಿಸ್‌ಗೆ ಬರುತ್ತಿದ್ದಾನೆ, ಈ ಥ್ಯಾಂಕ್ಸ್‌ಗಿವಿಂಗಿಗೆ.

ಇಪ್ಪತ್ತೈದು ವರ್ಷಗಳ ಹಿಂದೆ ತಾನಾಯಿತು, ತನ್ನ ಮನೆಯಾಯಿತು, ಒಂದಷ್ಟು ಪುಸ್ತಕಗಳಾಯಿತು, ಇಲ್ಲವೇ ಟೀವಿಯ ಶೋಗಳಾಯಿತು ಎಂದಿದ್ದ ಸುಕನ್ಯಾ ತನ್ನನ್ನು ತಾನು ಬಹಳ ಉದಾರಿ ಎಂದುಕೊಳ್ಳುತ್ತಿದ್ದುದು ಮನೆಗೆ ಬಂದ ಅರವಿಂದನ ಬಿಳೀ ಮಿತ್ರರನ್ನು ಬೀಳ್ಕೊಳ್ಳುವಾಗ ಹೆಂಗಸರು ಗಂಡಸರು ಎಂಬ ಎಗ್ಗಿಲ್ಲದಂತೆ ತಬ್ಬಿಕೊಂಡು ಕೆನ್ನೆಗೆ ಕೆನ್ನೆ ತಾಗಿಸಿ ಗಾಳಿಯನ್ನು ಚುಂಬಿಸಿ ‘ಕಿಸ್ ಹಲೋ’ ಮಾಡುವಾಗ ಮಾತ್ರ. ಒಂದು ದಿನವೂ ಹೊರಗೆ ಕೆಲಸ ಮಾಡದೇ ಮನೆಯಲ್ಲಿಯೇ ಇದ್ದುದರಿಂದಲೋ ಏನೋ ಆಕೆಯ ಪ್ರಪಂಚ ನಮಸ್ತೆ, ಕೈಕುಲುಕುವಿಕೆಯಿಂದ ಒಂದೊಂದೇ ಘಟ್ಟ ದಾಟಿ ‘ಕಿಸ್ ಹಲೋ’ಗೆ ಬಂದು ನಿಂತಾಗ ತಾನು ಲಿಬರಲ್, ಸೋಶಿಯಲೈಟು ಎಂದೆಲ್ಲ ಅಂದುಕೊಂಡಿದ್ದಳು. ಆದರೆ ಎಂದಿಗೂ ಆಕೆ ವಿನಯ, ವಿಶೂರ ಪ್ರಪಂಚಕ್ಕೆ ತನ್ನನ್ನು ತೆರೆದುಕೊಂಡಿರಲೇ ಇಲ್ಲ. ಅಲಿಶಾಳನ್ನು ವಿನಯ ಮದುವೆ ಮಾಡಿಕೊಂಡಾಗ ತಾನು ಅದಕ್ಕೆ ಯಾವುದೇ ಪ್ರತಿರೋಧವನ್ನೂ ವ್ಯಕ್ತಪಡಿಸದೇ ಸುಮ್ಮನಾಗಿದ್ದು ಆಕೆಗೇ ಆಶ್ಚರ್ಯವನ್ನುಂಟುಮಾಡಿತ್ತು. ಈಗ ವಿಶೂ ತನಗೆ ಗಂಡಸರೆಂದರೆ ಇಷ್ಟ, ತನಗೊಬ್ಬ ಬಾಯ್‌ಫ್ರೆಂಡಿದ್ದಾನೆ ಎಂದು ಹೇಳಿದಾಗ ಅದನ್ನೂ ಕೂಡ ಬಹಳ ದಿನದಿಂದ ನಿರೀಕ್ಷಿಸುತ್ತಿದ್ದೆ ಎಂದಂತೆ ‘ಐ ಆಮ್ ಹ್ಯಾಪಿ ಫಾರ್ ಯು, ಕಿಡ್ಡೋ’ ಎಂದು ಹೇಳಿ ಸುಮ್ಮನಾಗಿಬಿಟ್ಟಿದ್ದಳು. ಅಮ್ಮನಾದ ಆಕೆ ಆತನ ಇಷ್ಟಾನಿಷ್ಟಗಳನ್ನು ಅಥವಾ ಪಡ್ಡೆ ಲೈಂಗಿಕತೆಯ ಹಸಿಯನ್ನು ಅರ್ಥಮಾಡಿಕೊಳ್ಳಲಾಗದ ದಡ್ಡಿಯಲ್ಲ. ಆದರೂ ವಾಯಿಲ್ ಸೀರೆ, ಉಪ್ಪಿನ ಕಾಯಿ, ಚಟ್ನಿ ಪುಡಿ, ವಿಷ್ಣುಸಹಸ್ರನಾಮದ ಪುಸ್ತಕಗಳ ಜತೆ ಎಪ್ಪತ್ತರ ದಶಕದಲ್ಲಿ ಅಮೆರಿಕಾಕ್ಕೆ ಬಂದ ಮನೆಹೆಂಗಸರ ಹಾಗೆ ಆಕೆಯ ಮನಸ್ಸು ಇಂಥ ವಿಷಯಗಳಲ್ಲಿ ಎಷ್ಟು ಉದಾರವಾಗಬೇಕು ಎಂದು ಗೊತ್ತಾಗದೇ ಚಡಪಡಿಸುತ್ತಿತ್ತು. ಅವಳ ಪ್ರಕಾರ ಇಂಥ ಬದಲಾವಣೆಗಳು, ಶಾಕ್‌ಗಳು ಅಮೆರಿಕಾಕ್ಕೆ ಬಂದ ಹೊಸತರಲ್ಲಿ ಕಷ್ಟಪಟ್ಟು ಪಾರ್ಟಿಗಳಿಗೆ ಸ್ಲೀವ್‌ಲೆಸ್ ಬ್ಲೌಸ್ ಹಾಕಿದ ಹಾಗೆ, ಬೀಚಿನಲ್ಲಿ ಸ್ವಿಮ್‌ಸೂಟ್ ಹಾಕಿದ ಹಾಗೆ. ನಾಚಿಕೆ, ಅಳುಕು, ಕೊಂಚ ಅವಮಾನ, ಯಾಕಾದರೂ ಇಲ್ಲಿಗೆ ಬಂದೆವಪ್ಪಾ ಎಂಬ ಪಶ್ಚಾತ್ತಾಪ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೀಗೆಲ್ಲ ಅನಿಸುವುದು ತನಗೆ ಮಾತ್ರ, ಎದುರಿರುವವರು ಬಿಡುಬೀಸಾಗಿ ಇದು ದೊಡ್ಡ ವಿಷಯವೇ ಅಲ್ಲ ಎನ್ನುವಂತೆ ಓಡಾಡಿಕೊಂಡಿದ್ದಾರೆ ಎಂಬ ಭಾವನೆ. ಆಗ ತಾನು ಈ ಪ್ರಪಂಚಕ್ಕೆ ಸೇರಿದವಳಲ್ಲ ಎಂದನಿಸಿ ಆಕೆ ಹೈರಾಣಾಗಿಬಿಡುತ್ತಿದ್ದಳು.

ಆಶ್ಚರ್ಯವೆನಿಸುವಂತೆ ಸ್ವಲ್ಪ ಕಾಲದ ನಂತರ ಎಲ್ಲವೂ ತಂತಾನೇ ಸರಿಹೋಗಿಬಿಡುತ್ತಿತ್ತು. ತಾನು ದೇವರ ದೀಪ ಹಚ್ಚುವ ಸಮಯದಲ್ಲಿ ಹೊರಗಿನ ಸನ್‌ರೂಮಿನಲ್ಲಿ ಅರವಿಂದ ಬೆರೆಸಿಕೊಳ್ಳುವ ಸ್ಕಾಚು, ಮನೆಗೆ ಬರುವ ಅತಿಥಿಗಳಿಗೆ ಮನೆಯಲ್ಲಿ ತಾನು ಮಾಡಿದ ಅಡುಗೆ ಸರಿಹೋಗುವುದಿಲ್ಲ ಎಂದು ಕೇಟರ್ ಮಾಡಿಸುವ ತಾನು ವಾಸನೆ ನೋಡಿದರೂ ವಾಕರಿಸಿಕೊಳ್ಳುವ ಎಲ್ಲ ತರದ ಊಟಗಳು- ಇಂಥವೆಲ್ಲ ಸಮಸ್ಯೆಯೇ ಅಲ್ಲ ಎನ್ನುವಂತೆ ಆಕೆಯ ಜೀವನದ ಭಾಗವಾಗಿಹೋಗಿತ್ತು. ಅಲಿಶಾ ಕೂಡ. ಆದರೆ ಆಕೆ ಅಂದುಕೊಂಡಿದ್ದ ಸೋಪ್‌ಅಪೆರಾದಲ್ಲಿ ಮಾತ್ರ ಇರಬಹುದಾದಂತ ವಿಶೂ, ಸುಪ್ರೀತನ ಸಂಬಂಧ ಮನೆಬಾಗಿಲಿಗೇ ಬಂದಾಗ ಅದೇ ಸೋಪ್‌ಅಪೆರಾದ ಅಮ್ಮಂದಿರಂತೆ ‘ಹ್ಯಾಪಿ ಫಾರ್ ಯು ಕಿಡ್ಡೋ.’ ಬಿಟ್ಟು ಏನು ಹೇಳಬೇಕೆಂದು ಆಕೆಗೆ ಗೊತ್ತಾಗಿರಲಿಲ್ಲ. ತನ್ನ ಸ್ಲೀವ್‌ಲೆಸ್ ಬ್ಲೌಸಿನಂತೆ ಇದೂ ಒಂದು ದಿನ ಸಂಕೋಚ, ಅಳುಕಿಲ್ಲದೆ ಪ್ರದರ್ಶಿಸಬಹುದಾದ ತನ್ನ ಹೆಮ್ಮೆಯಾಗಬಹುದು ಎಂದು ಅಂದುಕೊಂಡಿದ್ದಳು.
ಅರವಿಂದನಿಗೆ ವಿಶೂ, ಸುಪ್ರೀತನ ಸಂಬಂಧ ಕೇಳಿ ಮತ್ತೊಮ್ಮೆ ಹೃದಯಾಘಾತವೇನೂ ಆಗಿರಲಿಲ್ಲ.

(ಮುಂದುವರೆಯುವುದು…)