Advertisement
ಉಳಿದ ಗೋಡೆ…: ವಿನಾಯಕ ಅರಳಸುರಳಿ ಅಂಕಣ

ಉಳಿದ ಗೋಡೆ…: ವಿನಾಯಕ ಅರಳಸುರಳಿ ಅಂಕಣ

ಒಂದು ಕಾಲಕ್ಕೆ ಅತ್ಯಾಧುನಿಕ ರೂಪ-ವಿನ್ಯಾಸವೇ ಆಗಿದ್ದು, ಪ್ರಸ್ತುತವಾಗಿ ನಿಂತಿದ್ದ ಈ ಕಟ್ಟಡ ಆ ಹೊತ್ತಿನ ಪ್ರಮುಖ ಮಳಿಗೆಯೇ ಆಗಿದ್ದಿರಬಹುದು. ಇಲ್ಲೂ ಆ ಹೊತ್ತಿನ ನಗರ ಜೀವನಕ್ಕೆ ಅತ್ಯವಶ್ಯಕವಾಗಿದ್ದ ಯಾವುದೋ ವ್ಯವಹಾರವೊಂದು ನಡೆದಿದ್ದಿರಬಹುದು. ತಿರುಗುವ ಫ್ಯಾನಿನ ಕೆಳಗೆ ರಸೀತಿ ಬರೆಯುತ್ತ ಇದರ ಮಾಲಿಕ ಕುಳಿತಿದ್ದಿರಬಹುದು. ಹರಿದು ಹರಿದು ರಸೀತಿಯ ಪುಸ್ತಕ ಮುಗಿದಂತೆ ಇವರ ಕಾಲವೂ ಅದ್ಯಾವಾಗ ಮುಗಿಯಿತೋ? ಬದಲಾದ ವೈಖರಿಯಲ್ಲಿ ಅಪ್ರಸ್ತುತವಾದ ಈ ಕಟ್ಟಡ ಪೂರ್ತಿ ಕೆಡವುವವರೂ ಇಲ್ಲವಾಗಿ, 2026ರ ಡೈರಿಯ ನಡುವೆ ಸೇರಿಕೊಂಡ 1990ರದೊಂದು ಹಾಳೆಯಂತೆ ನಿಂತುಬಿಟ್ಟಿದೆ.
ವಿನಾಯಕ
ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

ನಾನು ಡಿಗ್ರಿ ಓದುತ್ತಿದ್ದ ದಿನಗಳವು. ಒಂದು ವರ್ಷ ಮುಗಿದು ಇನ್ನೊಂದು ಆರಂಭವಾಗುವ ನಡುವಿನ ರಜೆಯ ಸಮಯ. ಮಂತ್ರ ಕಲಿಯಲೆಂದು ಅಮ್ಮ ನನ್ನನ್ನು ನಮ್ಮೂರಿನವರೊಬ್ಬರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಳು. ಪಿಯುಸಿ ಓದಲೆಂದು ಉಡುಪಿಯಲ್ಲಿ ಬಿಟ್ಟರೆ ಅದೊಂದು ಸಂಜೆ ಸರ್ವಸ್ವವನ್ನೂ ಪ್ಯಾಕ್ ಮಾಡಿಕೊಂಡು ಓಡಿ ಬಂದು ಕಟ್ಟಿಗೆ ಕೊಟ್ಟಿಗೆಯ ಹಿಂಭಾಗದಲ್ಲಿ ದಾರಿ ತಪ್ಪಿ ಬಂದ ಕಾಡೊಕೋಣದಂತೆ ಅಚಾನಕ್ಕಾಗಿ ಪ್ರತ್ಯಕ್ಷವಾಗಿದ್ದವನು ನಾನು. ಯಾವಾಗ ಯಾವ ಕಲಿಕೆಯನ್ನು ಬಿಟ್ಟು ಅವಿದ್ಯಾವಂತನಾಗಿ ನಿಲ್ಲುವೆನೋ ಎಂಬ ಭಯದಲ್ಲಿ, ಒಂದು ಬಿಟ್ಟ ಬಳಿಕವೂ ಇನ್ನೊಂದು ಉಳಿದೀತೆಂಬ ಆಸೆಯಲ್ಲಿ ಅಮ್ಮ ನಾನು ಮಂತ್ರ ಕಲಿಯಲೇಬೇಕೆಂದು ಪಟ್ಟು ಹಿಡಿದಿದ್ದಳು. ನಾನು ಹೋಗುವುದಿಲ್ಲವೆಂದು ಕುಳಿತ ಮಧ್ಯಾಹ್ನಗಳಲ್ಲಿ ಬೈದು, ಅತ್ತು, ಕರೆದು ಗಲಾಟೆ ಎಬ್ಬಿಸುತ್ತಿದ್ದಳು.

ಇನ್ನು ನಾನಾದರೂ ಯಾವುದನ್ನು ಯಾಕೆ ಕಲಿಯಬೇಕೆಂಬ ಸ್ಪಷ್ಟ ಉದ್ದೇಶವಿಲ್ಲದೆ ಪಿಯುಸಿ ಮುಗಿಯಿತೆಂಬ ಒಂದೇ ಕಾರಣಕ್ಕೆ ಡಿಗ್ರಿಗೆ ಸೇರಿದ್ದೆ. ಗೆಳೆಯರು ಕರೆದರೆಂದು ಕ್ರಿಕೇಟಿಗೆ ಓಡುತ್ತಿದ್ದೆ. ಅಮ್ಮ ಅಟ್ಟಿದಾಗ ಮಂತ್ರ ಕಲಿಯುವ ವಿಫಲ ಪ್ರಯತ್ನ ಮಾಡಿದ್ದೆ. ಎಲ್ಲೋ ಕೇಳಿದೆನೆಂದು ಕವಿತೆ ಬರೆಯುತ್ತಿದ್ದೆ. ಈ ಯಾವ ದಾರಿಯಲ್ಲೂ ಭವಿಷ್ಯವನ್ನು ಕಾಣುವ ದೂರ ದೃಷ್ಟಿಯಿರಲಿಲ್ಲ. ಅಂಥ ನಿರುಪಾಯದ ಮಧ್ಯಾಹ್ನಗಳಲ್ಲೇ ನಾನು ಅವರ ಮನೆಯನ್ನು ನೋಡಿದ್ದು…

ಅದೊಂದು ವಿಶಾಲವಾದ ಮನೆ. ಅದರ ಒಂದೊಂದು ಕಂಬದಲ್ಲೂ ಏನಿಲ್ಲವೆಂದರೂ ಆಗಿನ ಕಾಲಕ್ಕೇ ನಲವತ್ತು/ಐವತ್ತು ವರ್ಷಗಳಿಂದ ನಿಂತಿರುವ ಸುಸ್ತು. ಆಚಾರಿಯ ಕೈ ಕುಸುರಿಯಿರುವ ಕಪ್ಪನೆಯ ಕಂಬಗಳು. ಅಗಲ ಕಡಿಮೆಯಿರುವ, ಉದ್ದಕ್ಕೆ ಚಾಚಿಕೊಂಡಿರುವ ಜಗುಲಿ. ಕಿಟಕಿ ತೆರೆದರಷ್ಟೇ ಒಳಬರುವ ಬೆಳಕು. ಒಳಗಿನ ನೆಲವನ್ನು ಹೊರಗಿನ ಅಂಗಳದ ಹಾಗೆ ಕಾಣದಂತೆ ಬೇರ್ಪಡಿಸಿದ ಏಕಮಾತ್ರ ಲಕ್ಷಣವಾದ ರೆಡ್ ಆಕ್ಸೈಡ್ ಗಾರೆಯ ನೆಲ. ಅದರ ಅಂಚಿನಿಂದ ಆರಂಭವಾಗಿ ಮೇಲೆ ಸೂರಿನ ತನಕ ಚಾಚಿಕೊಂಡ ಮಣ್ಣಿನ ಗೋಡೆ. ಅದರ ಮೇಲ್ಮೈಯಲ್ಲಿ ಹಪ್ಪಳ ಹಪ್ಪಳವಾಗಿ ಕಿತ್ತು ಬಂದಿರುವ ತಿಳಿ ಹಸಿರು ಬಣ್ಣದ ಲೇಪ. ಒಂದು ಕಾಲಕ್ಕೆ ಹೊಚ್ಚ ಹೊಸದಾಗಿದ್ದ ಅದರ ಪ್ರಸ್ತುತತೆಯ ಮೇಲೆ ಕಾಲ ಕೈ ಆಡಿಸಿದ ಗುರುತು ಸ್ಪಷ್ಟವಾಗಿತ್ತು. ಕೋಣೆಯ ಒಳಗಡೆ ಊಟ ಮುಗಿಸಿ ಮಲಗಿರುವ ತಾಯಿ. ಅವರ ಜೊತೆ ಅವರ ಚಟುವಟಿಕೆಗಳನ್ನೇ ತನ್ನದೂ ಮಾಡಿಕೊಂಡು ಮಲಗಿರುವ ವಿಶೇಷ ಚೇತನ ಮಗ. ಹೊರಗೆ ಬೀಸಣಿಕೆಯ ಗಾಳಿಗೆ ಅಂಗಿ ತೆಗೆದ ಬರಿಮೈಯನ್ನು ಒಡ್ಡಿಕೊಂಡು ಕುಳಿತಿರುವ ವೃದ್ಧ ತಂದೆ. ಕಾರ್ಯಕ್ರಮದ ಮನೆಯಿಂದ ಇನ್ನೂ ಬಾರದ ನನ್ನ ಗುರುಗಳು. ಕಿಟಕಿಯಾಚೆಗಿನ ಅಂಗಳದಲ್ಲಿ ಮರಗಳಾಕೃತಿಯ ನೆರಳು ಚೆಲ್ಲಿ ಉರಿಯುತ್ತಿರುವ ಬಿಸಿಲು… ಮಧ್ಯಾಹ್ನವೆನ್ನುವುದು ಆ ಮನೆಯಲ್ಲಿ ಶಿಥಿಲ ಸಾಮ್ರಾಜ್ಯವೊಂದರ ಪಳೆಯುಳಿಕೆಯಂತೆ ಹಾಸಿಕೊಂಡಿತ್ತು.

ಈಗ, ಅದೆಲ್ಲ ಮುಗಿದ ಹದಿನೈದು ವರ್ಷಗಳ ಬಳಿಕ ಆ ಮನೆಯಲ್ಲಿ ಉಳಿದಿರುವುದು ಗುರುಗಳು ಮಾತ್ರ. ಆ ಮನೆಯ ಒಂದೊಂದು ಜಂತಿಯ ಮೂಲೆಯಲ್ಲಿರುವ ಜೇಡದ ಮೇಲೂ ಯುದ್ಧ ಸಾರುತ್ತಿದ್ದ, ಆ ನೀರವ ಸಂಜೆಗಳುದ್ದಕ್ಕೂ ಘಲಘಲ ಸದ್ದಿನಲ್ಲಿ ಓಡಾಡುತ್ತ ಮೌನದೊಡನೆ ಹೋರಾಡುತ್ತಿದ್ದ ಅಮ್ಮ ಊಟದ ನಂತರದ ನಿದ್ರೆಯಂಥದೇ ನಿದ್ರೆಯೊಂದನ್ನು ಶಾಶ್ವತವಾಗಿ ಅಪ್ಪಿಕೊಂಡರು. ಅಪ್ಪನನ್ನು ಯಾವ ಬೀಸಣಿಕೆಯ ಗಾಳಿಗೂ ಹಾರದ ವೃದ್ಧಾಪ್ಯ ಬಲಿತೆಗೆದುಕೊಂಡಿತು. ವಿಶೇಷ ಚೇತನ ಮಗ ಈ ಸರತಿಯ ಮೊದಲೋ, ಮಧ್ಯವೋ, ಕೊನೆಯೋ ಗೊತ್ತಾಗದ ಅನುಕ್ರಮವೊಂದರಲ್ಲಿ ಅಪ್ಪ-ಅಮ್ಮನನ್ನು ಅನುಸರಿಸಿ ಎದ್ದುಹೋದ. ಈಗಲ್ಲಿ ಉಳಿದಿರುವುದು ಮತ್ತದೇ ನೀರವ ಮಧ್ಯಾಹ್ನ, ಇನ್ನಷ್ಟು ಕಾಲು ನೋವಾಗಿರುವ ಕಂಬ ಹಾಗೂ ತನಗಾಗಿ ಯಾರೂ ಕಾಯದ ಮನೆಯೊಳಕ್ಕೆ ಪ್ರತೀ ಮಧ್ಯಾಹ್ನ ದಾಖಲಾಗುವ ನನ್ನ ಗುರುಗಳು.

ಮಲ್ಲಿಗೆ ಬುಕ್ ಹೌಸ್‌ನನ ಉದ್ಘಾಟನೆಗಾಗಿ ಮೈಸೂರಿನ ಬೀದಿಯೊಂದರಲ್ಲಿ ಆಟೋದಲ್ಲಿ ಹೋಗುತ್ತಿದ್ದೆವು. ದಾರಿಯ ನಡುವೆ ಇನ್ಯಾವುದೋ ಅಂಗಡಿ ಮುಂಗಟ್ಟೊಂದನ್ನು ಕಟ್ಟಲಾಗುತ್ತಿತ್ತು. ಹೀಗೆ ಹೊಸತನ್ನು ಕಟ್ಟಿಕೊಳ್ಳುತ್ತ ಕಟ್ಟಿಕೊಳ್ಳುತ್ತ ಇಡೀ ಶಹರ ತಲೆಮಾರಿಂದ ತಲೆಮಾರಿಗೆ ಸದ್ದಿಲ್ಲದೇ ದಾಟಿಕೊಂಡು ಬಿಡುತ್ತದೆ ಅನ್ನಿಸಿತು. ಹಾಗೇ ನೋಡುತ್ತ ಹೋಗುತ್ತಿರುವಾಗಲೇ ನಡುವೆ ಒಂದು ಅರ್ಧ ಉದುರಿದ ಮಣ್ಣಿನ ಗೋಡೆಗಳ ಕಟ್ಟಡ ಥಟ್ಟನೆ ಕಂಡಿತು. ಯಾರೋ ಉದುರಿಸಿದರೋ, ಇಲ್ಲ ತಾನಾಗಿಯೋ ಬಿತ್ತೋ ಗೊತ್ತಾಗದಂತೆ ಅರ್ಧ ಕುಸಿದು ಅರ್ಧ ಉಳಿದಿದ್ದ ಆ ಒಂದು ಮಹಡಿಯ ಕಟ್ಟಡದ ಗೋಡೆಗಳ ಮೇಲೆ ಹಪ್ಪಳ ಹಪ್ಪಳವಾಗಿ ಕಿತ್ತು ನಿಂತಿತ್ತು- ತಿಳಿ ನೀಲಿ ಬಣ್ಣದ ಲೇಪ!

ಒಂದು ಕಾಲಕ್ಕೆ ಅತ್ಯಾಧುನಿಕ ರೂಪ-ವಿನ್ಯಾಸವೇ ಆಗಿದ್ದು, ಪ್ರಸ್ತುತವಾಗಿ ನಿಂತಿದ್ದ ಈ ಕಟ್ಟಡ ಆ ಹೊತ್ತಿನ ಪ್ರಮುಖ ಮಳಿಗೆಯೇ ಆಗಿದ್ದಿರಬಹುದು. ಇಲ್ಲೂ ಆ ಹೊತ್ತಿನ ನಗರ ಜೀವನಕ್ಕೆ ಅತ್ಯವಶ್ಯಕವಾಗಿದ್ದ ಯಾವುದೋ ವ್ಯವಹಾರವೊಂದು ನಡೆದಿದ್ದಿರಬಹುದು. ತಿರುಗುವ ಫ್ಯಾನಿನ ಕೆಳಗೆ ರಸೀತಿ ಬರೆಯುತ್ತ ಇದರ ಮಾಲಿಕ ಕುಳಿತಿದ್ದಿರಬಹುದು. ಹರಿದು ಹರಿದು ರಸೀತಿಯ ಪುಸ್ತಕ ಮುಗಿದಂತೆ ಇವರ ಕಾಲವೂ ಅದ್ಯಾವಾಗ ಮುಗಿಯಿತೋ? ಬದಲಾದ ವೈಖರಿಯಲ್ಲಿ ಅಪ್ರಸ್ತುತವಾದ ಈ ಕಟ್ಟಡ ಪೂರ್ತಿ ಕೆಡವುವವರೂ ಇಲ್ಲವಾಗಿ, 2026ರ ಡೈರಿಯ ನಡುವೆ ಸೇರಿಕೊಂಡ 1990ರದೊಂದು ಹಾಳೆಯಂತೆ ನಿಂತುಬಿಟ್ಟಿದೆ.

ಕಾಲ ಎಲ್ಲವನ್ನೂ ಒರೆಸಿ ಹಾಕುವ ಬಗೆಯ ನೋಡಿದಾಗ ಭಯವಾಗುತ್ತದೆ. ನೆಲದ ಮೇಲೆ ಬಿದ್ದ ಧೂಳನ್ನು ಪೊರಕೆಯೊಂದು ಗುಡಿಸಿ ಎಸೆದಂತೆ ಮನೆತನಗಳನ್ನೂ, ನಾಗರೀಕತೆಗಳನ್ನೂ, ತಲೆಮಾರುಗಳನ್ನೂ ಕಾಲವೆಂಬ ಕಡ್ಡಿಪೊರಕೆ ಹೇಗೆ ಅಳಿಸಿಹಾಕುತ್ತದಲ್ಲ! ಏನೊಂದು ಸುಳಿವನ್ನೂ ಉಳಿಸದಂತೆ ಮಾಯವೇ ಆಗಿಬಿಡುವ ಮನುಷ್ಯನ ಬದುಕಿನ ಉದ್ದೇಶವಾದರೂ ಏನು? ಕೇವಲ ವಂಶವೊಂದನ್ನು ಮುನ್ನಡೆಸಲೆಂದು, ಸರಪಳಿಯ ನಡುವಿನ ಕೊಂಡಿಯಂತೆ ಭೂಮಿಗೆ ಬಿದ್ದವರು ನಾವೇ? ನಾವು ಮಾಡುವ ಈ ಉದ್ಯೋಗ, ಕೂಡಿಡುವ ಆಸ್ತಿ, ಬೆಳೆಸಿಕೊಂಡ ಹಮ್ಮು, ಮುಚ್ಚಿಟ್ಟುಕೊಂಡ ಪ್ರೀತಿ, ಕಲಿಯುವ ವಿದ್ಯೆಗಳು, ಮಾಡುವ ಸಾಧನೆಗಳು, ಬೆಂಬಲಿಸಿದ ಸಿದ್ಧಾಂತಗಳು… ಇವುಗಳ ಪೈಕಿ ಉಳಿಯುವುದು ಯಾವುದು, ಅಳಿಯುವುದು ಯಾವುದು? ಊರಿನ ಆ ಹಳೆಯ ಮನೆಯಲ್ಲಿ ಏನೆಲ್ಲ ಪ್ರೀತಿ, ಖುಷಿ, ದುಃಖ, ಆದರ್ಶ, ಮತ್ಸರ, ಒಳಿತು, ಕೆಡುಕುಗಳ ಸಮೇತ ಬದುಕಿ ಹೋದ ಆ ತಲೆಮಾರಿನ ಗುರುತು ಈಗ ಉದುರದೇ ಉಳಿದ ಯಾವ ಮಾಸಲು ಗೋಡೆಯಲ್ಲಿ ಉಳಿದಿದೆ? ಪೂರ್ತಿ ಕೆಡವದೇ ಅರ್ಧರ್ಧವಾಗಿ ಕಾಣುವ ಗೋಡೆ ಉಳಿದ ಅರ್ಧವನ್ನಾದರೂ ನೆನಪಿಸುತ್ತಿದೆ. ಅದೂ ಮುರಿದು ಬಿದ್ದ ಬಳಿಕ ಗತಿಸಿದ ಕಾಲದಿಂದ ಈ ಸಮಯಕ್ಕೂ ಹರಿದು ಬರಬಹುದಾಗಿದ್ದ ನಿಚ್ಚಳ ಅಂಶಗಳನ್ನು ಮಣ್ಣಿನಿಂದ ಅಗೆದು ತೆಗೆಯುವವರ್ಯಾರು? ಯಾವುದೋ ಎರಡು ತಲೆಮಾರುಗಳ ನಡುವಿನ ಕೊಂಡಿಯಂತೆ ಕಾಣುವ, ಹೀಗೆ ಎರಡು ಕಾಲಮಾನಗಳ ನಡುವೆ ಹರಿಯುತ್ತ ಎಷ್ಟೋ ಒಳಿತನ್ನು ಕಳಚಿಕೊಂಡು ಚಲಿಸುವ ನಮಗೆ ಹಳತರ ಒಳಿತನ್ನು ಅರ್ಥ ಮಾಡಿಸುವವರ್ಯಾರು?

ಕಾಲ ಎತ್ತ ಸಾಗುತ್ತಿದೆ?

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ