ಅಲೆ

ಭಾಗ ಒಂದು

ಕೂಸು ಹುಟ್ಟುವ ಮೊದಲೆ
ಕುಲಾವಿಯಂತೆ
ಲವಣ ಬೆರೆಸಿದ ಬಿಸಿನೀರಲಿ ಬಾಯ್ಮುಕ್ಕಳಿಸಿದ್ದೇನು
ವಿಟಮಿನ್ ಮಾತ್ರೆಗಳ ಸೇವಸಿದ್ದೇನು
ಪದೇ ಪದೇ ಸ್ಯಾನಿಟೈಸರಿನಲಿ ಕೈಸ್ನಾನ ಒಂದೆಡೆ
ತೆನಾಲಿರಾಮನ ಮಡಕೆಯಂತೆ ಮುಖಗವಸು ಮತ್ತೊಂದೆಡೆ
ತದ್ವಿರುದ್ಧವಾಗಿ ಮುಂಜಾಗರೂಕತೆಗೆಂದು
ದಿನಸಿ, ತರಕಾರಿಗಳ ಸಂಗ್ರಹಕೆ ಓಡಾಟ
ಅದೂಇದೂ ಅಂದುಕೊಳ್ಳುವುದರಲಿ
ದಾಟಿತೊಂದನೆಯಲೆ

ಭಾಗ ಎರಡು

ಹುಚ್ಚರೇ
ನೀವು ಬರೀ ಚಾಪೆಗಳು
ನಾನು ರಂಗೋಲಿಯೆಂಬುದನು ಮರೆತಿರೆಂದು
ಎರಗಿತು ಎರಡನೆಯಲೆ
ಥಟ್ಟನೆ ಮೈಕೈ ಹಿಂಡಿಹಿಪ್ಪೆಯಾದನುಭವ
ಅರೆ ಲಸಿಕೆಯ ನೋವಿರಬಹುದೆಂದೂಹೆ
ಸಾಮಾನ್ಯ ಜ್ವರ, ನೆಗಡಿ ಔಷಧಿ ಸೇವನೆಯದು ತಾತ್ಕಾಲಿಕ ಶಮನ
ಎಲ್ಲೋ ಓದಿದ ನೆನಪು
ಲಸಿಕೆಯ ಜ್ವರಕೆ
ನೋವು ನಿವಾರಕ ಚುಚ್ಚುಮದ್ದು
ವೈದ್ಯನ ಇಹಲೋಕ ಪಯಣ
ಭಯಕೆ ಮಲಗಿದೆಡೆ ನಡುಗಿ ಒದ್ದಾಟ
ಶಕ್ಯವಲ್ಲದ ಶೂಲೆ
ಆಸ್ಪತ್ರೆಗೆ ಹೋಗಲೂ ಭಯ, ಮನೆಯಲಿರಲೂ ಭಯ
ನಿರ್ಲಕ್ಷ್ಯ ಸಲ್ಲವೆಂಬ ಮನದಮಾತನರಿತು
ಬರುವುದೆಲ್ಲ ಬರಲಿ ದೈವಕೃಪೆಯೊಂದಿರಲಿ
ದೈವಬಲ ಉಸುರಿದಾಗ
ಎದುರಿಸುವ ಚಲದತ್ತ ಚಿತ್ತ

ಪರೀಕ್ಷೆಯ ವರದಿ ಪಾಸಿಟಿವ್
ಕೂಡಲೆ ಹದಿನಾಲ್ಕು ದಿನಗಳ ವನವಾಸಕೆ
ಆನ್‍ಲೈನಿನಲಿ ವೈದ್ಯರ ಮೇಲ್ವಿಚಾರಣೆ
ಅವರ ಸೂಚನೆಯಂತೆ ಔಷಧ ಸೇವನೆ
ಪ್ರಾಣಾಯಾಮದಭ್ಯಾಸ
ಆಗಾಗ ಬಿಟ್ಟೂ ಬಿಡದೆ ಕಾಡುವ
ಮಾನವಸಹಜ ಚಿಂತೆ
ಕುಶಲ ಕ್ಷೇಮದ ಕರೆಗಳು ಆರಂಭದಲಿ ಮುದ ನೀಡಿದರೂ
ಬರುಬರುತ ಕೇಳಲೇನಿದೆ, ಹೇಳಲೇನಿದೆ
ಮತ್ತದೇ ಬೇಸರ
ಕಾಲ, ಸಮಯ ಸ್ಥಗಿತಗೊಂಡಿರುವ ಸಂಶಯ
ದೇಶ ಕಾಯ್ವ ಯೋಧನಂತೆ
ತನಯನ ಆರೈಕೆಯದು ಬಣ್ಣಿಸಲಸದಳ
ಖರ್ಚುವೆಚ್ಚಗಳೆಣಿಸದ ಕೈಹಿಡಿದವನ ಉದಾರತೆ
ಮನೆ ಹಿರಿಯರ ಆರೈಕೆ ಹಾರೈಕೆ

ಹದಿನಾಲ್ಕನೇ ದಿನದ ಮರುಪರೀಕ್ಷೆಯ
ಹಿಂದಿನ ರಾತ್ರಿ ಕರಾಳ
ಮತ್ತೆ ಜ್ವರ, ಮೈಕೈ ನೋವಿನ ಲಕ್ಷಣಗಳ ಭೀತಿ
ಅರೆ ಜಿಹ್ವಾ ಚಾಪಲ್ಯಕೆ ಸೋತೆನೆಂಬ ಪರಿತಾಪ
ಮೊದಲು ಆವಿ ತೆಗೆದುಕೊಳ್ಳಬೇಕು,
ಮೊದಲು ಬಾಯ್ಮುಕ್ಕಳಿಸಬೇಕೆಂಬ ಚಡಪಡಿಕೆ
ಅಬ್ಬ! ಬೆಳಗ್ಗೆ ವೇಳೆಗೆ ದೇಹ ನಾರ್ಮಲ್ ಆಗಿದೆ
ಕಿಟ್ ಹಿಡಿದು ಬಂದ ಲ್ಯಾಬಿನವ
ಆತ್ಮವಿಶ್ವಾಸ ಪಾಸಿಟಿವ್
ವರದಿಯದು ನೆಗೆಟಿವ್