Advertisement
ಎಐ ಲೋಕದ ಅಲೆಗಳಲ್ಲಿ ಆಸ್ಟ್ರೇಲಿಯಾ: ವಿನತೆ ಶರ್ಮಾ ಅಂಕಣ

ಎಐ ಲೋಕದ ಅಲೆಗಳಲ್ಲಿ ಆಸ್ಟ್ರೇಲಿಯಾ: ವಿನತೆ ಶರ್ಮಾ ಅಂಕಣ

ನನ್ನ ಸಮಯವನ್ನು ಜಾಣ್ಮೆಯಿಂದ ಬಳಸುವುದು ನನಗೆ ಅಗತ್ಯವಾಗಿತ್ತು. ಅದಕ್ಕೆ ವಿರುದ್ಧವಾಗಿ ಎಐ ಬಳಕೆಗೇ ಅಧಿಕ ಸಮಯ ಹಿಡಿಸಿದ್ದು ನನಗೆ ಒಪ್ಪಿಗೆಯಾಗಲಿಲ್ಲ ಇರಿಸುಮುರಿಸಾಗಿತ್ತು.. ಆ ಸಮಯದಲ್ಲಿ ಯಾವುದೇ ಸಾಧನಗಳನ್ನು ಉಪಯೋಗಿಸದೆ ನಾನೇ ಪದ-ಕಡಿತ ಮಾಡಬಹುದಿತ್ತು ಎಂದೆನಿಸಿತು. ಬಹುಶಃ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ ಎನ್ನುವುದರ ಬಗ್ಗೆ ನಾನು ಕಲಿಯಬೇಕಿದೆ. ಮುಂಬರುವ ನಿರೀಕ್ಷೆಗಳಿಗೆ, ಸನ್ನಿವೇಶಗಳಿಗೆ ತಯಾರಾಗಬೇಕಿದೆ.
ಡಾ.
ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಪ್ರಿಯ ಓದುಗರೆ,

ಈ ವಾರ ಒಂದು ಕಾನ್ಫರೆನ್ಸ್‌ಗೆ abstract ಬರೆಯುತ್ತಿದ್ದೆ. ಕನ್ನಡದಲ್ಲಿ abstract ಪದಕ್ಕೆ ಪರ್ಯಾಯ ಪದ ಸಾರಾಂಶ ಎಂದಿರಬಹುದು. ಅಂದರೆ ನಾನು ಕಾನ್ಫರೆನ್ಸ್ ಗೆ ಹೋಗಿ ಅಲ್ಲಿ ಮಂಡಿಸಲಿದ್ದ ಪೂರ್ಣ ಅಧ್ಯಯನದ ವಿವರಗಳ ಸಾರಾಂಶವೆ ಈ abstract. ಇದನ್ನು ಬರೆಯಲು ಇಂತಿಷ್ಟು ಅನ್ನೋ ಪದಮಿತಿಯಿತ್ತು. ನಾನೊ ಬರೆಯುತ್ತಾ ಹೋದಂತೆ ಅದು ಪದಮಿತಿಗಿಂತಲೂ ಹೆಚ್ಚಾಯ್ತು. ನನ್ನಲ್ಲಿ ಆಗ ಸಮಯದ ಅಭಾವ. ಮುಂದಿನ ಮೀಟಿಂಗ್‌ಗೆ ಹೋಗುವ ಧಾವಂತ. ಆಗ ನೆನಪಿಗೆ ಬಂದಿದ್ದು ಮೈಕ್ರೋಸಾಫ್ಟ್ ಕೋ-ಪೈಲಟ್ ಅನ್ನುವ ಕೃತಕ ಬುದ್ಧಿಮತ್ತೆ ಸಾಧನ. ಇದನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಯೋಗಿಸುತ್ತಾರೆ. ಇಲ್ಲಿಯವರೆಗೂ ನಾನು ಯಾವುದೇ ಕೃತಕ ಬುದ್ಧಿಮತ್ತೆ  ಸಾಧನಗಳನ್ನು ಬಳಸಿರಲಿಲ್ಲ. ನನ್ನ ಸ್ವಂತ ಬರವಣಿಗೆಯಲ್ಲಿ ನಂಬಿಕೆಯಿಟ್ಟುಕೊಂಡು ಸಾಗಿದ್ದೀನಿ. ಬರವಣಿಗೆಗೆ ಸಾಕಷ್ಟು ಸಮಯ ಹಿಡಿದರೂ ಸರಿ ಪರವಾಗಿಲ್ಲ ಎಂದುಕೊಂಡೆ ಸಾಕಷ್ಟು ಗಂಟೆಗಳನ್ನೂ ವ್ಯರ್ಥ ಮಾಡಿದ್ದೀನಿ.

ನನ್ನ ಹಲವಾರು ಸಹೋದ್ಯೋಗಿಗಳು ಮೈಕ್ರೋಸಾಫ್ಟ್ ಕೋ-ಪೈಲಟ್ ಅನ್ನು ಚಾಕಚಕ್ಯತೆಯಿಂದ ಉಪಯೋಗಿಸುತ್ತಾರೆ. ಅವರೆಲ್ಲಾ ‘ವರ್ಕ್ ಸ್ಮಾರ್ಟ್, ನಾಟ್ ಹಾರ್ಡ್’ ಎನ್ನುವ ತಂತ್ರವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಅದೇನೂ ತಪ್ಪಲ್ಲ. ಆಸ್ಟ್ರೇಲಿಯಾದ ಕ್ಯಾಪಿಟಲಿಸ್ಟ್ ನವ-ಉದಾರ ನೀತಿ ಆರ್ಥಿಕ ವ್ಯವಸ್ಥೆಯಲ್ಲಿ ಮೂರ್ನಾಲ್ಕು ಜನರ ಕೆಲಸವನ್ನು ಒಬ್ಬ ಉದ್ಯೋಗಿ ಮಾಡುವ ಅನಿವಾರ್ಯತೆಯಿದೆ. ಬಹುತೇಕ ಉದ್ಯೋಗಸ್ಥಳಗಳಲ್ಲಿ ಪ್ರತಿಯೊಬ್ಬ ನೌಕರರ ಮೇಲೂ ಬೃಹತ್ ಪ್ರಮಾಣದ ಒತ್ತಡವಿದೆ. ವಾರದಲ್ಲಿನ ಐದು ಅಥವಾ ಆರು ದಿನಗಳ ಕಾಲದ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸಲು ಹರಸಾಹಸ ಮಾಡಬೇಕು. ಉದಾಹರಣೆಗೆ, ಮೀಟಿಂಗ್‌ಗಳಿಗೆ ಹಾಜರಾಗಬೇಕು, ತಮ್ಮ ಸ್ಥಾನದಲ್ಲಿ ತಮಗೆ ಕೊಟ್ಟಿರುವ ಎಲ್ಲಾ ‘ಕರ್ತವ್ಯ ಮತ್ತು ಜವಾಬ್ದಾರಿ’ ಕೆಲಸಗಳನ್ನು ಪೂರೈಸಬೇಕು, ಯಾವುದಕ್ಕೂ ನೆವ ಹೇಳುವಂತಿಲ್ಲ. ನಮ್ಮ ಕೆಲಸವನ್ನು ಮತ್ಯಾರೊ ಮಾಡುವುದಿಲ್ಲ. ಇವತ್ತು ಆಗಿಲ್ಲವೆಂದರೆ ನಾಳೆ ಅದನ್ನು ಪೂರೈಸಲೇಬೇಕು. ರಜೆ ಹಾಕಿದ್ದರೂ ಇಮೇಲ್ ಗಮನಿಸುವ ಅನಿವಾರ್ಯತೆ. ಇಲ್ಲವೆಂದರೆ ರಜೆ ಮುಗಿಸಿ ಬಂದಾಗ ಎದುರಾಗುವ ಇಮೇಲ್ ಪರ್ವತವನ್ನು ಏರಿಳಿಯುವ ಸಾಹಸದಲ್ಲಿ ಹೃದಯಾಘಾತವಾಗಬಹುದು! ನಮ್ಮ ಕೆಲಸ ವಿವರಗಳ ಪ್ರತಿಯೊಂದನ್ನೂ ದಾಖಲಿಸಬೇಕು, ವರದಿ ಮಾಡಬೇಕು. ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ತಪಾಸಣೆಗೆ ಒಳಗಾಗುತ್ತದೆ.

ಇಂತಹ ಬಹು-ಒತ್ತಡದ ಪರಿಸ್ಥಿತಿಯಲ್ಲಿ ಈಗ ಅನೇಕರಿಗೆ ಕೃತಕ ಬುದ್ಧಿಮತ್ತೆ ಸಾಧನಗಳು ವರದಾನವಾಗಿವೆ. ಉದಾಹರಣೆಗೆ, ಬರೆಯಬೇಕಾದ ವರದಿಯ ಮುಖ್ಯಾಂಶಗಳನ್ನು ಕೋ-ಪೈಲಟ್ ಸಾಧನಕ್ಕೆ ಕೊಟ್ಟು, ‘ಇದನ್ನು ಇಂತಹ ಮಾದರಿಯ ವರದಿಯನ್ನಾಗಿ ಬರಿ’ ಎಂದು ಹೇಳಿದರೆ ಆಯ್ತು, ಅದು ಸಿದ್ಧವಾಗುತ್ತದೆ, ಅಂತ ನನ್ನ ಸಹೋದ್ಯೋಗಿಗಳು ಹೇಳುತ್ತಾರೆ. ಇದೆಲ್ಲಾ ನೆನಪಿಗೆ ಬಂದು, ಸಮಯದ ಅಭಾವವನ್ನು ನೆನೆದು, ಸ್ವ-ಮರುಕಕ್ಕೆ ಎಡೆಕೊಡದೆ ಕೋ-ಪೈಲಟ್‌ಗೆ ಶರಣಾದೆ. ನಾನು ಬರೆದಿದ್ದ ಉದ್ದನೆ ಸಾರಾಂಶವನ್ನು ಅದಕ್ಕೆ ಕೊಟ್ಟು, ಇದನ್ನು ಇನ್ನೂರೈವತ್ತು ಪದಮಿತಿಗೆ ಅಳವಡಿಸು, ಎಂದು ನಿರ್ದೇಶಿಸಿದೆ. ನಮ್ಮ ಕೋ-ಪೈಲಟ್ ಮಹಾಶಯರು ಹೇಳಿದ್ದು, ‘ಈ ಸಾರಾಂಶ ಈಗಾಗಲೆ ಉತ್ತಮ ಬರಹವಾಗಿದ್ದು, ನೀನು ಹೇಳಿದ ಕಾನ್ಫರೆನ್ಸ್ ಥೀಮ್‌ಗೆ ನಿಖರವಾಗಿ ಒಗ್ಗುತ್ತದೆ. ಇಗೋ ಇಲ್ಲಿದೆ ನಿನ್ನ ಇನ್ನೂರೈವತ್ತು ಪದಮಿತಿಯ ಸಾರಾಂಶ.’

ನನಗೆ ಫಜೀತಿಯಾಯ್ತು. ಸಾರಾಂಶದ ಗುಣಮಟ್ಟ ಚೆನ್ನಾಗಿದೆ ಎಂದಾದರೆ ಎಲ್ಲಿ ಯಾವ್ಯಾವ ಪದಗಳನ್ನು ತೆಗೆಯಲಾಯ್ತು? ನಾನು ಬರೆದಿದ್ದ ಎಲ್ಲಾ ಮುಖ್ಯಾಂಶಗಳೂ ಇವೆಯೇ ಎಂದು ಅದನ್ನು ಓದುವ ಪರಿಶೀಲಿಸುವ ಅಗತ್ಯ ಮುಂದಾಯ್ತು. ಸರಿ, ಪ್ರತಿಯೊಂದು ವಾಕ್ಯವನ್ನೂ ಓದಿ, ಅಲ್ಲಲ್ಲಿ ತಿದ್ದಿ ನಾನು ಬರೆದಿದ್ದ, ಕೋ-ಪೈಲಟ್ ಮಹಾಶಯರು ಪದ-ಕಡಿತ ಮಾಡಿದ್ದ ಸಾರಾಂಶವನ್ನು ಮತ್ತೊಮ್ಮೆ ತಿದ್ದಿತೀಡುವ ಕೆಲಸವನ್ನು ಪೂರೈಸಿ, ಸಾರಾಂಶವನ್ನು ಕಾನ್ಫರೆನ್ಸ್ ಜಾಲತಾಣದಲ್ಲಿ submit ಮಾಡಿದೆ. ಹಾಗೆ ಮಾಡುವಾಗ ಕಡ್ಡಾಯವಾಗಿ ನನ್ನ ಎಐ-ಬಳಕೆಯ ಬಗ್ಗೆ ನಾನು ಹೇಳಬೇಕಿತ್ತು. ಪದ-ಕಡಿತಕ್ಕಾಗಿ ಬಳಸಿದ್ದನ್ನು ಹೇಳಿದೆ.

ನನ್ನ ಸಮಯವನ್ನು ಜಾಣ್ಮೆಯಿಂದ ಬಳಸುವುದು ನನಗೆ ಅಗತ್ಯವಾಗಿತ್ತು. ಅದಕ್ಕೆ ವಿರುದ್ಧವಾಗಿ ಎಐ ಬಳಕೆಗೇ ಅಧಿಕ ಸಮಯ ಹಿಡಿಸಿದ್ದು ನನಗೆ ಒಪ್ಪಿಗೆಯಾಗಲಿಲ್ಲ ಇರಿಸುಮುರಿಸಾಗಿತ್ತು.. ಆ ಸಮಯದಲ್ಲಿ ಯಾವುದೇ ಸಾಧನಗಳನ್ನು ಉಪಯೋಗಿಸದೆ ನಾನೇ ಪದ-ಕಡಿತ ಮಾಡಬಹುದಿತ್ತು ಎಂದೆನಿಸಿತು. ಬಹುಶಃ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ ಎನ್ನುವುದರ ಬಗ್ಗೆ ನಾನು ಕಲಿಯಬೇಕಿದೆ. ಮುಂಬರುವ ನಿರೀಕ್ಷೆಗಳಿಗೆ, ಸನ್ನಿವೇಶಗಳಿಗೆ ತಯಾರಾಗಬೇಕಿದೆ.

ಆಸ್ಟ್ರೇಲಿಯಾದ ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಉಪಯೋಗಿಸುವುದು ಹೆಚ್ಚುತ್ತಿದೆ. ಅವರಲ್ಲಿ ವಿದ್ಯಾರ್ಥಿಗಳೇ ಹೆಚ್ಚು. ಮತ್ತು ಇವರುಗಳು ಬಹಳ ಸ್ಮಾರ್ಟ್. Generative AI – ಉತ್ಪಾದಕ ಕೃತಕ ಬುದ್ಧಿಮತ್ತೆಯನ್ನು ತಮ್ಮಅಸೈನ್ಮೆಂಟ್‌ಗಳಲ್ಲಿ ಹೇಗೆಲ್ಲಾ ಬಳಸಬಹುದು ಎನ್ನುವುದರಲ್ಲಿ ಇವರು ನಿಷ್ಣಾತ ಪಂಡಿತರು. ಬರುಬರುತ್ತಾ ವಿದ್ಯಾರ್ಥಿಗಳ ಸ್ವಂತ ಕಲಿಕಾ ಸಾಮರ್ಥ್ಯಗಳನ್ನು ಮತ್ತು ಕಲಿಕೆಯ ಮೌಲ್ಯ ನಿರ್ಣಯವನ್ನು ಮಾಡುವುದು ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ. ಶಾಲೆಗಳಲ್ಲಿ, ಉನ್ನತ ಶಿಕ್ಷಣ ವಲಯಗಳಲ್ಲಿ AI ಉಪಯೋಗಿಸುವುದರ ಬಗ್ಗೆ ಬಹಳಷ್ಟು ಚಿಂತನೆ ನಡೆಯುತ್ತಿದೆ. ಸಂಸ್ಥೆಗಳು ತಮ್ಮದೇ ಆದ ರೀತಿಗಳಲ್ಲಿ ನಿರ್ದೇಶನಗಳನ್ನು ನೀಡುವುದೂ, ನಿರ್ದಿಷ್ಟ ಕ್ರಮಗಳನ್ನು ಜಾರಿಗೆ ತರುವುದೂ ನಡೆಯುತ್ತಿದೆ. ವಿದ್ಯಾರ್ಥಿಗಳ AI-ಬಳಕೆಯ ಜಾಣ್ಮೆ ಹೇಗೆ ಸುಧಾರಿಸುತ್ತಿದೆಯೋ ಹಾಗೆಯೇ ಅದಕ್ಕೆ ತಕ್ಕಂತೆ ವರ್ಷದಿಂದ ವರ್ಷಕ್ಕೆ ಕ್ರಮಗಳೂ ಬದಲಾಗುತ್ತಿವೆ. ಇನ್ನೂ ಏನೂ ಖಚಿತವಾಗುತ್ತಿಲ್ಲ.

ಒಂದು ಉದಾಹರಣೆ ಹೀಗಿದೆ. ಕೆಲ ವಿದ್ಯಾರ್ಥಿಗಳು ತಮ್ಮ ಡಿಗ್ರಿಯ ಒಂದು ಅಸೈನ್ಮೆಂಟ್ ಅಲ್ಲಿ AI ಬಳಸುತ್ತಾರೆ. ಯಾವ AI ಸಾಧನವನ್ನು ಎಲ್ಲಿ ಹೇಗೆ ಬಳಸಿದರು ಎನ್ನುವುದನ್ನು ವಿದ್ಯಾರ್ಥಿಗಳು ದಾಖಲಿಸಬೇಕು ಎನ್ನುವ ಕ್ರಮವಿದೆ. ಆದರೆ ಈ ವಿದ್ಯಾರ್ಥಿಗಳು ಅಂತಹ ದಾಖಲೆಯನ್ನು ಕೊಡುವುದಿಲ್ಲ. ತರಗತಿಗಳಲ್ಲಿ ಇವರುಗಳು ಪಠ್ಯ ವಿಷಯಗಳ ಚರ್ಚೆಗಳಲ್ಲಿ, ಚಟುವಟಿಕೆಗಳಲ್ಲಿ ಭಾಗವಹಿಸದೇ ಅಲಕ್ಷ್ಯ ತೋರುವುದು, ತಮ್ಮ ಫೋನ್ ಬಳಸುವುದು, ಇತ್ಯಾದಿಗಳನ್ನು ಅವರ ಬೋಧಕರು ಗಮನಿಸಿರುತ್ತಾರೆ. ವಿದ್ಯಾರ್ಥಿ ಬರೆದ ಅಸೈನ್ಮೆಂಟ್ ನಲ್ಲಿ AI ಬಳಕೆಯಾಗಿದೆ, ಇದು ವಿದ್ಯಾರ್ಥಿಯ ಸ್ವಂತ ಬರಹವಲ್ಲ,  ಕಲಿಕೆಯ ನಿದರ್ಶನವಲ್ಲ, ಎಂದು ಬೋಧಕರಿಗೆ ಅನ್ನಿಸಿದರೂ ಅವರು ಅದನ್ನು ಪ್ರಮಾಣಿಸಿ ತೋರಿಸಲು ಕಷ್ಟ. ವಿದ್ಯಾರ್ಥಿಗೆ ಒಳ್ಳೆಯ ಅಂಕಗಳು ಸಿಗುತ್ತವೆ. ಮುಂದೆ ಈ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಉದ್ಯೋಗದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತಾರೆ ಎನ್ನುವುದು ಯಕ್ಷಪ್ರಶ್ನೆ. ಬೋಧಕರಿಗೆ ಮಾನಸಿಕವಾಗಿ ನಿರಾಸೆ ಮತ್ತು ಕೆಲಸದ ಬಗ್ಗೆ ನೀರಸ ಭಾವನೆ ಉಂಟಾಗುತ್ತದೆ.

ಹೋದ ತಿಂಗಳಲ್ಲಿ ಒಬ್ಬರು ನನಗೆ ಅವರ ಅಧ್ಯಯನಾ ಯೋಜನೆಯನ್ನು ಕಳಿಸಿದ್ದರು. ನಿಮ್ಮ ವಿಶ್ವವಿದ್ಯಾಲಯದಲ್ಲಿ ತನಗೆ ಉನ್ನತ ವ್ಯಾಸಂಗವನ್ನು ಕೈಗೊಳ್ಳುವ ಆಸೆಯಿದೆ, ತನಗೆ ಇಷ್ಟೆಲ್ಲಾ ಅನುಭವವಿದೆ, ಪರಿಣಿತಿಯಿದೆ, ಎಂದರು. ಇವರು ಏಷ್ಯಾ ಖಂಡದ ಒಂದು ದೇಶದವರು ಅಂದಿಟ್ಟುಕೊಳ್ಳೋಣ. ಅವರು ಕಳಿಸಿದ್ದ ಯೋಜನೆಯನ್ನು ಓದಿದರೆ ಅದರಲ್ಲಿ ವಸ್ತುವಿಷಯದ ಬಗ್ಗೆ ಒಂದೇ ಒಂದು ಉಲ್ಲೇಖವಿಲ್ಲ, ಪ್ರಸ್ತುತ ಸನ್ನಿವೇಶದ ಉದಾಹರಣೆಗಳಿಲ್ಲ. ಈಗಾಗಲೆ ಲಭ್ಯವಿರುವ ಇತರ ಅಧ್ಯಯನಗಳ ಪ್ರಸ್ತಾಪವಿಲ್ಲ. ಅವರ ಬರಹವು ಸಂಪೂರ್ಣ AI-ಉತ್ಪಾದಿತ ಪಠ್ಯವಾಗಿತ್ತು, ಅನ್ನಿಸಿತು. ಈ ವ್ಯಕ್ತಿಯ ನೈತಿಕ ನಿಲುವುಗಳ ಬಗ್ಗೆ ಪ್ರಶ್ನೆಯಿತ್ತು.

ಇದಕ್ಕೆ ವ್ಯತಿರಿಕ್ತವಾದ ಆದರೆ ಒಪ್ಪಿಗೆಯಾಗುವ ಸಮರ್ಪಕ ಉದಾಹರಣೆ ಹೀಗಿದೆ. ಆಸ್ಟ್ರೇಲಿಯಾದಲ್ಲಿ ಈಗ ನಾವು ಡಾಕ್ಟರ್ ಬಳಿ ಹೋದರೆ ಅವರು ಕೇಳುತ್ತಾರೆ, ‘ನಾನು ನನ್ನ ತಪಾಸಣಾ ವರದಿಯನ್ನು ಬರೆಯಲು AI ಬಳಸುತ್ತೀನಿ. ಇದರ ಬಗ್ಗೆ ನಿನಗೆ ಒಪ್ಪಿಗೆಯಾ? ಒಪ್ಪಿಗೆಯಾದರೆ ದಯವಿಟ್ಟು ಈ ಒಂದು ಹೇಳಿಕೆಯನ್ನು ಓದಿ ಇಲ್ಲಿ ಸಹಿ ಮಾಡು.’ ಹೀಗೆ ಹೇಳುತ್ತಿರುವವರು, ಕೇಳುತ್ತಿರುವವರು ವೈದ್ಯರಷ್ಟೇ ಅಲ್ಲ. ಆರೋಗ್ಯರಂಗದಲ್ಲಿ ಇರುವ ಹಲವಾರು ವಿವಿಧ ಸಿಬ್ಬಂದಿ ವರ್ಗದವರು AI ಬಳಸುತ್ತಾರೆ. ನರ್ಸ್ ಆಗಬಹುದು ಕೂಡಾ. ನನಗೆ ಪರಿಚಯವಿರುವ ಒಬ್ಬ ಸ್ಪೀಚ್ ಪೆಥೋಲಜಿಸ್ಟ್ ತಾನು AI ಬಳಸುತ್ತಿರುವುದರ ಬಗ್ಗೆ ಹೇಳುತ್ತಾ ನಾನು ಯಾವ AI ಸಾಧನವನ್ನು ಬಳಸುತ್ತೀನಿ ಎಂದು ಕೇಳಿದರು. ಯಾವುದನ್ನೂ ಬಳಸುತ್ತಿಲ್ಲ ಎಂದರೆ ಅವರು ಹೌಹಾರಿದರು. ‘Really? ನೀನು ಯಾವ ಯುಗದಲ್ಲಿದ್ದೀಯಾ!’ ಎಂದು ಉದ್ಗರಿಸಿದರು. ಹೌದು, ನಾನು ಈಗಾಗಲೇ ಇಪ್ಪತ್ತೊಂದನೆ ಶತಮಾನದ ಕಾಲುಭಾಗವನ್ನು ಕಳೆದಿರುವುದರ ನಿಜ ಕಣ್ಣ ಮುಂದಿದೆ. AI ಬಾಲವನ್ನು ಹಿಡಿದು ಅದರ ಲೋಕಕ್ಕೆ ಜಿಗಿಯಬೇಕಿದೆ. ಆ virual ಲೋಕದಲ್ಲಿ ಭೂರಮೆಯ ಮುಟ್ಟಿ ಆನಂದಿಸುವ ಹೂಗಳು, ಹಾರಾಡುವ ಚಿಟ್ಟೆಗಳು, ಜೀರುಂಡೆ, ದುಂಬಿಗಳು, ಹಕ್ಕಿಗಳು ಸಿಗುತ್ತವೆಯಾ, ಎಂದು ಹುಡುಕಬೇಕಿದೆ.

About The Author

ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ