ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ.
ಡಾ. ಎಚ್.ಎಸ್. ಅನುಪಮಾ ಅವರ ಹೊಸ ಕಾದಂಬರಿ “ಬೆಳಗಿನೊಳಗು ಮಹಾದೇವಿಯಕ್ಕ” ಕುರಿತು ಡಾ. ಎಲ್.ಸಿ. ಸುಮಿತ್ರಾ ಬರಹ

ಅಕ್ಕಮಹಾದೇವಿಯ ‘ಮಹಾಪ್ರಸ್ಥಾನʼವನ್ನು ಆಧರಿಸಿ ಬರೆದ 775 ಪುಟಗಳ ಮಹಾ ಕಾದಂಬರಿಯನ್ನು ಓದಿದಾಗ ಹನ್ನೆರಡನೇ ಶತಮಾನದ ಅಕ್ಕಮಹಾದೇವಿಯ ಜತೆಗೆ ನಾನು ಕದಳಿಯ ಗುಹೆಗಳವರೆಗೆ ಹೋದ ಅನುಭವ ಆಯ್ತು. ಜತೆಗೆ ಅನುಪಮಾ ಅವರ ವೈದ್ಯ ವೃತ್ತಿಯ ನಡುವೆ ಇದಕ್ಕೆಲ್ಲ ಸಮಯ ಹೇಗೆ ಹೊಂದಿಸುತ್ತಾರೆ ಎಂದು ಅಚ್ಚರಿಯೂ ಆಯ್ತು.

(ಡಾ. ಎಚ್.ಎಸ್. ಅನುಪಮಾ)

ಡಾಕ್ಟರ್ ಎಚ್ ಎಸ್ ಅನುಪಮಾ ಹೊನ್ನಾವರದ ಕವಲಕ್ಕಿಯಲ್ಲಿ ವೈದ್ಯೆ. ಅವರ ಪತಿ ಕೃಷ್ಣ ಗಿಳಿಯಾರ್ ಸಹ ಹೊನ್ನಾವರದಲ್ಲಿ ವೈದ್ಯರು. ಚಿತ್ರ ಕಲಾವಿದರು. ನನ್ನ ಎರಡು ಪುಸ್ತಕಗಳಿಗೆ ಕೃಷ್ಣ ಗಿಳಿಯಾರ್ ಬರೆದ ಚಿತ್ರಗಳೇ ಮುಖಪುಟವಾಗಿವೆ. 2008 /09 ರಲ್ಲಿ ಕೆಂಡಸಂಪಿಗೆಯಲ್ಲಿ ಅನುಪಮಾ ಬರೆಯುತ್ತಿದ್ದಾಗ ಅವರ ಬರವಣಿಗೆ ನನ್ನ ಗಮನ ಸೆಳೆಯಿತು. ಅವರು ಮಹಿಳಾ ದೌರ್ಜನ್ಯ ವಿರೋಧಿ ಹೋರಾಟದಲ್ಲಿಯೂ ಸಕ್ರಿಯರಾಗಿದ್ದಾರೆ. ಯುವಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಾರೆ. ಇದೆಲ್ಲದರ ನಡುವೆ ಸಾಹಿತ್ಯ ರಚನೆ ಮಾಡುತ್ತಾರೆ. ಮೌಲಿಕವಾದ ಪುಸ್ತಕ ಬರೆಯುತ್ತಾರೆ. ಚೆಗೆವಾರನ ಜೀವನ ಚರಿತ್ರೆಯಿಂದ ಪ್ರಾರಂಭಿಸಿ, ನಾನು ಕಸ್ತೂರ್, ಯಶೋಧರ ದಾಸಪ್ಪ, ಸ್ವಾತಂತ್ರ್ಯದ ಬೆಳಗಿನಲ್ಲಿ ಗಡಿ ದಾಟಿದ ಸಾಧಕಿಯರು, (ಅಚ್ಚಿನಲ್ಲಿ) ಪುಸ್ತಕಗಳನ್ನು ಗಮನಿಸಿದರೆ ಅನುಪಮಾ ಅವರ ಆಸಕ್ತಿ ಅವರ ಬರವಣಿಗೆಯ ಉದ್ದೇಶ ಅರಿವಾಗುತ್ತದೆ. ಕೋವಿಡ್ ಡೈರಿ ಅವರ ಇನ್ನೊಂದು ಮುಖ್ಯ ಪುಸ್ತಕ. ಮುಟ್ಟು, ಪುಸ್ತಕ ಸಹ ಹೆಣ್ಣು ಮಕ್ಕಳು ಅನುಭವಿಸುವ ಕೊನೆಯಿಲ್ಲದ ಸಂಕಟವನ್ನು ತೆರೆದಿಡುತ್ತದೆ. ಪ್ರಸ್ತುತ ಬೆಳಗಿನೊಳಗು ಕಾದಂಬರಿ‌ ಅವರ ೫೬ ನೆಯ ಪುಸ್ತಕ.

ಈಗ ಹೊಸದಾಗಿ ಬಂದಿರುವ ಬೆಳಗಿನೊಳಗು ಎಂಬ ಬೃಹತ್ ಕಾದಂಬರಿ ಅಕ್ಕಮಹದೇವಿಯ ಜೀವನವನ್ನು, ಕುರಿತು ಬರೆದಿದ್ದು. ಇತಿಹಾಸ, ಕಾವ್ಯ, ಶಾಸನಗಳಲ್ಲಿ ಸಿಗುವ ಮಹಾದೇವಿಯ ಕುರಿತ ಆಕರಗಳನ್ನು ಬಳಸಿಕೊಂಡಿದ್ದಾರೆ. ಕಲ್ಲರಳಿ, ಹೂವಾಗಿ, ಎಲ್ಲರಿಗೂ ಬೇಕಾಗಿ, ಶಿಖರಕ್ಕೆ ಬೆಳಕಾಗಿ, ಬಲ್ಲವರಿದ ಪೇಳಿ, ಐಕ್ಯ ಎಂಬ ಆರು ಭಾಗಗಳು ಇದ್ದು ಐದು ಜನ ಚಿತ್ರಕಾರರು ಚಿತ್ರ ಬರೆದಿದ್ದಾರೆ.

ಕೆರೆ ಗೌರವ್ವ ಎಂಬ ಅಧ್ಯಾಯದಲ್ಲಿ ಕೌಳ ಪಂಥದವರು ಪೂಜಿಸುವ ಲಜ್ಜಾಗೌರಿ ಪ್ರತಿಮೆ ಕೆರೆ ಶುದ್ಧೀಕರಣದಲ್ಲಿ ಸಿಗುವುದರೊಂಡಿಗೆ ಉಡುತಡಿಯ ಕತೆ ತೆರೆದುಕೊಳ್ಳುತ್ತದೆ. ಸೋಮಯ್ಯ ಶೆಟ್ಟಿ ಲಿಂಗಮ್ಮನವರ ಮಗಳು ಮಾದೇವಿ ಬಹಳ ಚುರುಕು ಕುತೂಹಲಿ. ಸದಾ ಕೆಲಸದಲ್ಲಿ ತೊಡಗಿರುವ ಹುಡುಗಿ ಎಲ್ಲದರಲ್ಲೂ ಕುತೂಹಲ, ಪ್ರಶ್ನೆ. ಬೆಳೆಯುವಾಗಲೇ ಭಿನ್ನ. ಎಲ್ಲದಕ್ಕೂ ಯಾಕೆ ಯಾಕೆ ಎಂದು ಪ್ರಶ್ನಿಸುತ್ತಲೇ ಬೆಳೆದವಳು.

ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ. ಎರಡೇ ಭೇಟಿಗಳಲ್ಲಿ ರಾಯನು ಮಾದೇವಿಯು ಪರಸ್ಪರ ಒಲಿದು ಮದುವೆಯು ಆಗುತ್ತದೆ. ಆದರೆ ಅರಮನೆಯ ಕಟ್ಟುಕಟ್ಟಲೆಗಳು ಮಾದೇವಿಗೆ ಬಂಧನವಾಗುತ್ತದೆ. ಒಮ್ಮೆ ಮಹಾದೇವಿಯ ತಂದೆ ತಮ್ಮ ಮನೆಯಿಂದ ಮಗಳಿಗಾಗಿ ತಿಂಡಿಗಳನ್ನು ಬಿಳಿ ಬುತ್ತಿ ಕರಿ ಬುತ್ತಿ ಎಂಬ ಭಕ್ಷಗಳನ್ನು ತಂದಾಗ ಮಹದೇವಿಯ ಅತ್ತೆ ಆ ಆ ತಿಂಡಿಗಳ ಬೆಳ್ಳುಳ್ಳಿಯ ಈರುಳ್ಳಿಯ ವಾಸನೆಗೆ ಅಸಹಿಸಿಕೊಂಡು ಮಡಿಹಾಳಾಯಿತು ಎಂದು ಅದನ್ನು ಎಸೆಯುತ್ತಾರೆ. ರಾಯನು ಕೋಪಿಸಿಕೊಂಡು ನೀರಿನ ತಂಬಿಗೆಯನ್ನು ಅಡುಗೆಯ ಮೇಲೆ ಬೀಸಿ ಒಗೆಯುತ್ತಾನೆ. ಮೊದಲೇ ಜಿನಮತ್ತಕ್ಕೂ ಶಿವ ಭಕ್ತಿಗೂ ಹೊಂದಾಣಿಕೆ ಮನೆಯಲ್ಲಿ ಇರಲಿಲ್ಲ. ಕಸಪ್ಪಯ್ಯನ ಕ್ರೌರ್ಯ ಅಧಿಕಾರ ಶಾಹಿಯನ್ನು ಸಹಿಸದೆ ಅವನು ಮತ್ತೆ ಮತ್ತೆ ದೈಹಿಕ ಹಲ್ಲೆಯನ್ನು ಮಾಡಿದಾಗ ಮಹಾದೇವಿ ಆ ಪಂಜರದಿಂದ ಹೊರ ಹೋಗುತ್ತಾಳೆ. ತೊಟ್ಟ ತೊಡುಗೆಗಳನ್ನು ಉಟ್ಟ ಬಟ್ಟೆಗಳನ್ನು ಕಿತ್ತೆಸೆದು ಹೋಗುತ್ತಾಳೆ. ಕುರುಬರ ಚಂದ್ರಿ ಅವಳಿಗೆ ಹೊದೆದುಕೊಳ್ಳಲು ಕಂಬಳಿ ಒಂದನ್ನು ಕೊಡುತ್ತಾಳೆ. ಮಹಾದೇವಿಯ ಪ್ರಕಾರ ಧರ್ಮವೆಂದರೆ ದೇವಲೋಕದತ್ತ ಮುಖ ಮಾಡುವುದಲ್ಲ, ಮನುಷ್ಯ ಲೋಕವನ್ನು ಹಸನುಗೊಳಿಸುವುದು. ಕೂದಲು ಬಿಚ್ಚಿಕೊಂಡು ಅರೆ ನಗ್ನಳಾಗಿ ಹೋಗುವ ಅಕ್ಕನನ್ನು ಹುಚ್ಚಿ ಎಂದು ಕೆಲವರು ಭಾವಿಸುತ್ತಾರೆ. ಆದರೆ ಲಕ್ಕುಂಡಿಯಲ್ಲಿ ಅವಳು ಶಾಸನವನ್ನು ಓದಿದಾಗ ಅವಳು ಹೇಳುವ ಪದಗಳನ್ನು ಕೇಳಿದಾಗ ಜನರು ಅವಳನ್ನು ಜ್ಞಾನಿ ಎಂದು ತಿಳಿಯುತ್ತಾರೆ. ಗೌರವಿಸುತ್ತಾರೆ ಪ್ರೀತಿ ತೋರುತ್ತಾರೆ. ಅವಳಿಗೆ ಪಯಣದ ಉದ್ದಕ್ಕೂ ಕೌಳ ಗೋರಖನಾಥ ಭೈರವಿ ಕಾಳ ಮುಖ ಹಲವು ಸಂಪ್ರದಾಯದ ಸಂತರು ಭೇಟಿಯಾಗುತ್ತಾರೆ.

ಕಪ್ಪಡಿ ಸಂಗಮದಲ್ಲಿ ಅಕ್ಕನಾಗಮ್ಮ ಚೆನ್ನಬಸವಣ್ಣ ಇವರನ್ನು ಭೇಟಿಯಾಗುತ್ತಾಳೆ. ಕಲ್ಯಾಣದಲ್ಲಿ ಮಹಾಮನೆಯಲ್ಲಿ ಕೆಲವು ಕಾಲ ಇರುತ್ತಾಳೆ. ಅಲ್ಲಮ, ಬಸವಣ್ಣ ಅವರ ಜೊತೆ ವಿಚಾರ ವಿನಿಮಯ ಮಾಡುತ್ತಾಳೆ. ಅಲ್ಲಿ ಕೆಲವು ಕಾಲ ಇದ್ದು ಶ್ರೀಶೈಲಕ್ಕೆ ಹೊರಡುತ್ತಾಳೆ. ಈ ದೀರ್ಘ ಪ್ರಯಾಣವೇ ಅವಳ ಅರಿವನ್ನು ವಿಸ್ತರಿಸುತ್ತದೆ. ಕೃಷ್ಣಾ ನದಿ ತೀರದಲ್ಲಿ ನಡೆದು ಹೋಗುವಾಗ ಒಮ್ಮೆ ಅವಳನ್ನು ಹುಡುಕಿಕೊಂಡು ರಾಯ ಬರುತ್ತಾನೆ. ಕ್ಷಮೆ ಕೇಳುತ್ತಾನೆ. ಚೆಂಚು ಆದಿವಾಸಿಗಳ ಸಹಾಯದಿಂದ ಶ್ರೀಶೈಲ ಗಿರಿಯನ್ನು ಏರುತ್ತಾಳೆ. ಅವರು ಆಹಾರ ನೀರು ಒದಗಿಸಿ ಸಹಾಯ ಮಾಡುತ್ತಾರೆ. ಚೇಳು ಕಚ್ಚಿ ಪ್ರಜ್ಞೆ ತಪ್ಪಿದಾಗ ತಮ್ಮ ಗುಡಿಸಲಿಗೆ ಕರೆದೊಯ್ದು ಉಪಚರಿಸುತ್ತಾರೆ. ಪೆದ್ದನ ಎಂಬ ಚಿಂಚು ಯುವಕ ಅವಳಿಗೆ ಚಪ್ಪಲಿಯನ್ನು, ಊರೆಗೋಲನ್ನೂ ಕೊಡುತ್ತಾನೆ. ಅವಳು ಕೃಷ್ಣಾ ನದಿ ದಾಟಿ ಕದಳಿ ಗುಹೆಗಳನ್ನು ತಲುಪಲು ಸಹಾಯ ಮಾಡುತ್ತಾನೆ. ಐಕ್ಯ ಎಂಬ ಅಧ್ಯಾಯದಲ್ಲಿ ಅವಳ ಕೊನೆಯ ಚಿತ್ರ ತುಂಬಾ ತೀವ್ರವಾಗಿ ಮೂಡಿದೆ.

ಗುರುಮನೆಯಲ್ಲಿ ಕಲಿತ ವಿದ್ಯೆಯನ್ನು ಅಕ್ಕಮಹಾದೇವಿ ತನ್ನ ಪಯಣದ ದಾರಿಯಲ್ಲಿ ಬೇಟಿಯಾದ ಜನರಿಂದ ಕಲಿಯುತ್ತ ಬೆಳೆಯುತ್ತಾ ಮಾಗುತ್ತ ಹೋಗುತ್ತಾಳೆ. ಇವತ್ತಿನ ಭೋಗಜೀವನವೆ ಅಂತಿಮ ಎಂದು ಭಾವಿಸುವ ಕಾಲದಲ್ಲಿ ಅಕ್ಕಮಹಾದೇವಿಯ ಬದುಕು ವಿಚಾರ ತುಂಬಾ ಪ್ರಸ್ತುತವಾಗಿವೆ. ಕಾದಂಬರಿ ಓದಿ ಮುಗಿಸಿದಾಗ ನಾವು ಅಕ್ಕನ ಜತೆ ಕದಳಿ ಗುಹೆಗಳನ್ನು ಕಂಡ ಅನುಭವ ಆಗುತ್ತದೆ. 12ನೇ ಶತಮಾನದ ಚಾರಿತ್ರಿಕ ಸಂಗತಿಗಳನ್ನು ವಚನ ಸಾಹಿತ್ಯವನ್ನು ಶಾಸನದ ಮಾಹಿತಿಗಳನ್ನು ಲೇಖಕಿ ಸಮರ್ಥವಾಗಿ ಬಳಸಿಕೊಂಡು ಆ ಕಾಲದ ಪರಿಸರವನ್ನು ಸೃಷ್ಟಿಸಿದ್ದಾರೆ. ವಚನಗಳ ಜೊತೆಗೆ ಆ ಕಾಲದ ಜನಪದವನ್ನು, ಗಾದೆಗಳನ್ನು ಬಳಸಿಕೊಂಡಿದ್ದಾರೆ.
ಒಂದು ಉತ್ತಮ ಓದಿನ ಅನುಭವಕ್ಕಾಗಿ ಅನುಪಮಾ ಅವರಿಗೆ ಅಭಿನಂದನೆಗಳು.

(ಕೃತಿ: ಬೆಳಗಿನೊಳಗು ಮಹಾದೇವಿಯಕ್ಕ (ಕಾದಂಬರಿ), ಲೇಖಕರು: ಡಾ. ಎಚ್.ಎಸ್.‌ ಅನುಪಮಾ, ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ, ಬೆಲೆ: 650/-)