ಗೊತ್ತಿರಲಿ ಇದು ಲಾಭರಹಿತ ಸಾಮುದಾಯಿಕ ಸಂಸ್ಥೆ. ಯಾರೂ ಸಂಬಳಕ್ಕಾಗಿ ಇದನ್ನು ಮಾಡುತ್ತಿಲ್ಲ. ಜಗತ್ತೆ ಕೈಜೋಡಿಸಿ ತನಗೆ ಬೇಕಾದ ಉತ್ತಮ ವಿಶ್ವಕೋಶವನ್ನು ಸೃಷ್ಟಿಸುವುದು ಇದರ ಮೂಲ ಉದ್ದೇಶ. ಪ್ರಪಂಚದ ಯಾವ ಮೂಲೆಯಿಂದಲಾದರೂ ಯಾರು ಬೇಕಾದರೂ ಇಲ್ಲಿ ಅಂಕಣ ಬರೆಯಬಹುದು, ಅಥವಾ ಇನ್ನೊಬ್ಬರು ಬರೆದದ್ದನ್ನು ತಿದ್ದಬಹುದು. ಅಂದರೆ, ನಾನು ರಾಜ್ ಕುಮಾರ್ ಇಂಥಿಂತವರು ಎಂದು ಅಂಕಣ ಬರೆದು ಅದರಲ್ಲಿ ಅವರ ಸಿನಿಮಾಗಳ ತಪ್ಪು ಪಟ್ಟಿ ಮಾಡಿದ್ದಲ್ಲಿ ಅದನ್ನು ನೀವು ತಿದ್ದಬಹುದು. ಈ ಮುಕ್ತ ಮಾಡೆಲ್ಲಿನ ಪರಿಣಾಮ ಇಲ್ಲಿನ ಅಂಕಣಗಳು ಅತ್ಯಂತ ನಿಖರವಾಗಿರಲು ಸಾಧ್ಯ.
ಮಧುಸೂದನ್ ವೈ.ಎನ್ ಅಂಕಣ

 

ನಾನು ಹುಟ್ಟಿದ್ದು ಎಂಭತ್ತರ ದಶಕದ ಉತ್ತರಾರ್ಧದಲ್ಲಿ. ನನ್ನ ಬಾಲ್ಯದ ಪ್ರಮುಖ ಭಾಗ ಇಪತ್ತನೆಯ ಶತಮಾನದ ಹೊಸ್ತಿಲಿನ ಆಚೀಚೆ. ನಾ ಓದುತ್ತಿದ್ದ ನವೋದಯ ವಿದ್ಯಾಲಯದಲ್ಲಿ ಒಂದು ಗ್ರಂಥಾಲಯ ಇತ್ತು, ನಮಗೇನಾದರೂ ವಿಶ್ವದ ಬಗೆಗಿನ ಮಾಹಿತಿ ಬೇಕಿದ್ದಲ್ಲಿ ಎನ್ಸೈಕ್ಲೋಪಿಡಿಯ ಅಥವಾ ಅದೇ ಅಲ್ಲದಿದ್ದರೂ ಆ ಬಗೆಯ ಮಾಹಿತಿಕೋಶಗಳು ಒಂದು ಮಟ್ಟಿಗೆ ನಮ್ಮ ಅಗತ್ಯವನ್ನು ಪೂರೈಸುತ್ತಿದ್ದವು. ಕೆಲವರು ಮನೋರಮಾ ಎಂಬ ಕೇರಳ ಮೂಲದ ಪತ್ರಿಕೆಯ ವಿಶೇಷಾಂಕವೆಂದೆನ್ನಬಹುದಾದ ದೇಸೀ ವಿಶ್ವಕೋಶ ತರಿಸುತ್ತಿದ್ದರು. ಒಂದು ಪ್ರತಿ ಸಾಕು, ಇಡೀ ಶಾಲೆಯ ಕೈಗಳ ಬದಲಾಯಿಸುತ್ತಿತ್ತು.

ನಮ್ಮಲ್ಲಿ ಆಗೆಲ್ಲ ಹೀಗೆಯೆ ಇರುತ್ತಿತ್ತು. ಒಂದು ಬಾಲ ಮಂಗಳ, ಒಂದು ಚಂಪಕ, ಗಂಟಲ ಧ್ವನಿ ಬದಲಾಗುವ ಹೊತ್ತಿಗೆ ಇನ್ನೊಂದು ಮತ್ತೊಂದು ಪುಸ್ತಕಗಳು ಮೆತ್ತಗಾಗಿ ಹುಳಿಸೊಪ್ಪಾಗುವವರೆಗೆ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸಲ್ಪಡುತ್ತಿದ್ದವು. ವಿಷಯಕ್ಕೆ ಬರೋಣ, ಏನೀ ಮನೋರಮಾ, ಎನ್ಸೈಕ್ಲೋಪಿಡಿಯ, ವಿಶ್ವಕೋಶ? ಸ್ಥಳೀಯದಿಂದಿಡಿದು ರಾಜ್ಯ, ದೇಶ, ಪ್ರಪಂಚ, ವಿಶ್ವ, ಬಾಹ್ಯಾಕಾಶ.. ಮನುಷ್ಯನ ಮೆದುಳು ಎಲ್ಲಿ ತನಕ ಹಿಗ್ಗಬಲ್ಲುದೊ ಅಲ್ಲಿ ತನಕ ಇರುವ ಮಾಹಿತಿ ಮತ್ತು ಜ್ಞಾನದ ಸಂಗ್ರಹ ಕೋಶಗಳು ಇವೆಲ್ಲ. ಉದಾಹರಣೆಗೆ ಯಾವ ರಾಜ ಎಲ್ಲಿ ಹುಟ್ಟಿ ಏನೇನು ಜನೋಪಕಾರಿ, ಏನೇನು ಕಿತಾಪತಿ ನಡೆಸಿ ಎಲ್ಲಿ ಸತ್ತ ಎಂಬುದರಿಂದ ಹಿಡಿದು, ಜೀನ್ ಎಂದರೇನು, ಡೀ ಎನ್ ಎ, ಆರ್ ಎನ್ ಏ ಎಂದರೇನು, ಬ್ಲಾಕ್ ಹೋಲ್ ಎಂದರೇನು, ಏರೋಪ್ಲೇನ್ ಹೇಗೆ ಹಾರುತ್ತದೆ, ಆಸ್ಟ್ರಿಚ್ ಪಕ್ಷಿ ಹೇಗಿರುತ್ತದೆ, ಈ ವರುಷ ಯಾರಿಗೆ ನೋಬೆಲ್ಲು, ಮ್ಯಾಗ್ಸೆಸ್ಸೆ, ಜ್ಞಾನಪೀಠ ಇತ್ಯಾದಿ ಇತ್ಯಾದಿ ಮಾಹಿತಿಗಳನ್ನೆಲ್ಲ ಈ ವಿಶ್ವಕೋಶಗಳು ಹಿಡಿದಿಡುತ್ತವೆ. ಹಾಗಿದ್ದರೂ ಈ ದಢೂತಿ ಪುಸ್ತಕಗಳಿಗೆ ಮಿತಿಯಿತ್ತು. ಬೇಕಾದ್ದೆಲ್ಲವೂ ಸಿಗುತ್ತಿರಲಿಲ್ಲ. ಜಗತ್ತನ್ನು ಅದರ ಒಳ ಹೊರ ಹಂದರವನ್ನು ಮನುಷ್ಯನಾದವನು ಎಷ್ಟರ ಮಟ್ಟಿಗೆ ತಾನೇ ಪ್ರಿಂಟಿಸಬಲ್ಲನು? ಮತ್ತು ದಿನಾ ದಿನಾ, ವರುಷಾ ವರುಷಾ ಬದಲಾಗುವ ಪ್ರೆಸಿಡೆಂಟು, ಜನಸಂಖ್ಯೆ, ವೈಜ್ಞಾನಿಕ ಸತ್ಯಗಳು ಇವನ್ನೆಲ್ಲ ಶ್ರದ್ಧೆಯಿಂದ ಸಂಗ್ರಹಿಸಿ ಪ್ರಿಂಟ್ ಮಾಡಿ ಇಡೀ ಜಗತ್ತಿಗೆ ತಲುಪಿಸುವ ಕೆಲಸ ಸುಲಭದ ಮಾತೇನು?

ಈ ಸಮಯದಲ್ಲಿ ನಮಗಿನ್ನೂ ಅದರ ಗಂಧ ಗಾಳಿ ಗೊತ್ತಿರದ ಹೊತ್ತಲ್ಲಿ ಇಂಟರ್ನೆಟ್ ಎಂಬ ಜಾಲ ನಿಧನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ಇಂಟರ್ನೆಟ್ಟಿನ ತಂತ್ರಜ್ಞಾನ ಕಂಡುಹಿಡಿದವರು ಅತ್ಯಂತ ಜವಾಬ್ದಾರಿಯುತ ಹಿರಿಯರಂತೆ (ಅದೃಷ್ಟವಶಾತ್ ಆಗಿನ ಕಾಲದಲ್ಲಿ ಹೆಚ್ಚೂ ಕಮ್ಮಿ ನಮ್ಮ ಹಿರಿಯರೆಲ್ಲರೂ ಬಹಳ ಬಹಳಾನೆ ಜವಾಬ್ದಾರಿಯಿಂದ ಮುಂದಿನ ಪೀಳಿಗೆಯ ಹಿತಕ್ಕಾಗಿ ದುಡಿಯುತ್ತಿದ್ದರು) ತಂತ್ರಜ್ಞಾನವನ್ನು ತಮ್ಮ ಜೇಬಿನಲ್ಲೆ ಅಡಗಿಸಿಕೊಳ್ಳದೆ ಅಥವಾ ತಮ್ಮ ದೇಶದ ಸರ್ಕಾರಕ್ಕೆ ಒಪ್ಪಿಸದೆ ಜಗತ್ತಿನಾದ್ಯಂತ ಹರಿಯಬಿಟ್ಟರು. ಇದಕ್ಕೂ ಐವತ್ತು ಅರವತ್ತು ವರುಷಗಳ ಹಿಂದೆ ನ್ಯೂಕ್ಲಿಯರ್ ಬಾಂಬ್ ಕಂಡುಹಿಡಿದವನು ಅದನ್ನು ಹೇಗೆ ತಯಾರಿಸುವುದೆಂಬ ಮಾಹಿತಿಯನ್ನು ಹಾಗೆ ಉಚಿತ ಹರಿಬಿಡಲಿಲ್ಲ. ಹೀಗಾಗಿ ಇವತ್ತಿನ ಕಾಲಕ್ಕೂ ಕೆಲವೇ ಕೆಲವು ದೇಶಗಳು ಮಾತ್ರ ನ್ಯೂಕ್ಲಿಯರ್ ಬಾಂಬ್ ಹೊಂದಿರುವುದು ಮತ್ತು ಅದು ಒಳ್ಳೆಯದೇ ಆಯಿತು ಬಿಡಿ. ಈ ಬಾಂಬಿನ ಸೂತ್ರವೇನು ರೇಬಿಸ್ ಪೋಲಿಯೋ ಕ್ಷಯ ರೋಗಕ್ಕೆ ಮದ್ದಾಗ ಬಲ್ಲ ಸೂತ್ರವಲ್ಲ ತಾನೆ!

(ಜಿಮ್ಮಿ ವೇಲ್ಸ್)

ಈ ದಿಕ್ಕಿನಲ್ಲಿ ಸಾಫ್ಟವೇರ್ ವಿಭಾಗದಲ್ಲಿ ರಿಚರ್ಡ್ ಸ್ಟಾಲ್ಮನ್, ಲಿನಸ್ ಟೋರ್ವಾಲ್ಡ್ ರ ಕೊಡುಗೆಗಳನ್ನು ಈ ಹಿಂದೆ ಇದೇ ಅಂಕಣ ಸರಣಿಯಲ್ಲಿ ಸ್ಮರಿಸಿದ್ದೇವೆ. ಓಪನ್ ಸೋರ್ಸ್, ಫ್ರೀ ಸಾಫ್ಟವೇರ್, ಮುಕ್ತ ತಂತ್ರಜ್ಞಾನ ಇವನ್ನೆಲ್ಲ ಚರ್ಚಿಸಿದ್ದೇವೆ. 1999ರಲ್ಲಿ ಇದೇ ಸ್ಟಾಲ್ ಮನ್ ತನ್ನ ಮುಕ್ತ ತಂತ್ರಜ್ಞಾನದ ಪರಿಕಲ್ಪನೆಯನ್ನು ವಿಶ್ವಕೋಶಗಳಿಗೂ ವಿಸ್ತರಿಸಿ ಅಂತರ್ಜಾಲದಲ್ಲಿ ವಿಶ್ವಕೋಶವೊಂದನ್ನು ಸ್ಥಾಪಿಸಬೇಕಿದ್ದು ಅದು ಸಾಫ್ಟವೇರಿನಲ್ಲಿರುವ ಮುಕ್ತ ತಂತ್ರಜ್ಞಾನದಂತೆ ಅದಷ್ಟೇ ಅಲ್ಲದೆ ಈ ಎನ್ಸೈಕ್ಲೋಪಿಡಿಯವು ಮುಕ್ತವಾಗಿಯೂ ಸ್ವತಂತ್ರವಾಗಿಯೂ ಉಚಿತವಾಗಿಯೂ ಇರಬೇಕೆಂದು ಪ್ರಪಂಚದ ಎಲ್ಲರಿಗೂ ಅದು ಸಿಗುವಂತಿರಬೇಕೆಂದು ಪ್ರತಿಪಾದಿಸುತ್ತಾನೆ. ಎರಡು ವರ್ಷಗಳ ತರುವಾಯ ಜಿಮ್ಮಿ ವೇಲ್ಸ್ ಎಂಬ ಉದ್ಯಮಿ ಮತ್ತು ಲ್ಯಾರಿ ಸ್ಯಾಂಗರ್ ಎಂಬ ತಂತ್ರಜ್ಞಾನಿಯು ಸ್ಟಾಲ್ ಮನ್ ಪ್ರತಿಪಾದಿಸಿದ ಮುಕ್ತ ಆನ್ಲೈನ್ ಎನ್ಸೈಕ್ಲೋಪಿಡಿಯಾವನ್ನು ಆರಂಭಿಸುತ್ತಾರೆ; ಅದೇ ಇವತ್ತಿನ ಜಗತ್ ಪ್ರಸಿದ್ಧ ಇದಕ್ಕೆ ಸರಿಸಾಟಿಯಿಲ್ಲದ ಬೃಹತ್ ವಿಶ್ವಕೋಶ ವಿಕಿಪೀಡಿಯ.

ಲಿನಕ್ಸ್ ನಂತೆ, ಇತರೆ ಓಪನ್ ಸೋರ್ಸ್ ಸಾಫ್ಟವೇರಿನಂತೆ ಇದೂ ಸಹ ವಿಶ್ವದಾದ್ಯಂತ ಸೇವಾ ಮನೋಭಾವವುಳ್ಳ, ಕೇವಲ ತಂತ್ರಜ್ಞಾನ ಪರಿಣಿತರಲ್ಲದೆ, ಜಗತ್ತಿನ ಎಲ್ಲ ಬಗೆಯ ಪರಿಣಿತರು ಸಾಮಾನ್ಯರಲ್ಲಿ ಸಾಮಾನ್ಯರು ಸಮುದಾಯವಾಗಿ ಮುಂದೆ ಬಂದು ಕಟ್ಟಿರುವ ಕಟ್ಟುತ್ತಿರುವ ಬೃಹತ್ ಬೃಹತ್ ಅಂತರ್ಜಾಲದ ಎನ್ಸೈಕ್ಲೋಪಿಡಿಯ ಈ ವಿಕಿಪಿಡಿಯ. ಇದು ಎಷ್ಟು ದೊಡ್ಡದು ಎಂದರೆ ಇದರಲ್ಲಿರುವ ಕೇವಲ ಇಂಗ್ಲೀಷ್ ಮಾಹಿತಿಯನ್ನು ಪ್ರಿಂಟ್ ಮಾಡಿಸಿದರೆ ಮೂರು ಸಾವಿರ ದಪ್ಪನೆಯ ಗ್ರಂಥಗಳಾಗುತ್ತವಂತೆ. ಕೇವಲ ಇಂಗ್ಲೀಷ್ ಯಾಕೆಂದೆನೆಂದರೆ ಇದರ ಇದು ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಲ್ಲೂ ಲಭ್ಯವಿದ್ದು, ಕೇವಲ ಹದಿನೈದು ಜನ ಬಳಸುವ ವಿಕಿಪೀಡಿಯಾವೂ ಇದೆ, ಇಂಗ್ಲೀಷಿಗೆ ಸರಿಸಾಟಿಯಾಗಬಲ್ಲ ಸ್ಪಾನಿಷ್ ಭಾಷೆಯಲ್ಲೂ ಇದೆ. ಮತ್ತು ಇವುಗಳೆಲ್ಲ ಇಂಗ್ಲೀಷಿನ ಅನುವಾದಗಳೇ ಆಗಬೇಕೆಂದೇನಿಲ್ಲ, ಆಯಾ ಭಾಷೆಯಲ್ಲೆ ಬರೆದ ಮೂಲ ಅಂಕಣಗಳೇ ಹೆಚ್ಚು. ನಮ್ಮ ಕನ್ನಡದವು ಸುಮಾರು ಇಪ್ಪತ್ತೈದು ಸಾವಿರ ಅಂಕಣಗಳಿವೆ.

ಜಿಮ್ಮಿ ವೇಲ್ಸ್ ಮೊದಲಿಂದಲೂ ಪುಸ್ತಕಪ್ರೇಮಿ. ಸಣ್ಣವನಿದ್ದಾಗ ಅಮ್ಮ ತರಿಸಿದ ಎನ್ಸೈಕ್ಲೋಪಿಡಿಯಾ ಓದುತ್ತ ಅದು ಅಪೂರ್ಣವಿದೆಯೆನ್ನಿಸಿ ತಾನೇ ತಿದ್ದುತ್ತಿದ್ದನಂತೆ. ಹಾಗಾಗಿ ವಿಕಿಪಿಡಿಯಾಗೆ ಅವನ ಬಾಲ್ಯದ ಹಿನ್ನೆಲೆಯಿದೆ. ವಿಕಿಪೀಡಿಯಾದ ಪರಿಕಲ್ಪನೆಯ ಶ್ರೇಯಸ್ಸು ಜಿಮ್ಮಿಗೆ ಸಲ್ಲಬೇಕು.

ಸಂಕ್ಷಿಪ್ತವಾಗಿ ವಿಕಿಪೀಡಿಯ ಎಂದರೇನು; ಜಿಮ್ಮಿಯ ಮಾತಲ್ಲೆ ಹೇಳುವುದಾದರೆ “Imagine a world in which every single person on the planet is given free access to the sum of all human knowledge. That’s what we’re doing.”, ಇದರರ್ಥ ಓದುವುದೊಂದನ್ನು ಶಾಲೆಯಲ್ಲಿ ಕಲಿತುಬಿಟ್ಟರೆ ತಮಗೆ ಬೇಕಾದ ಆಸಕ್ತಿಯಿರುವ ಜ್ಞಾನವನ್ನು ನಾವು ಅಂತರ್ಜಾಲದ ಮೂಲಕವೆ ಕಲಿಯಬಹುದು. ವಿಕಿಪಿಡಿಯದಂತಹ ಜವಾಬ್ದಾರಿಯುತ ವೆಬ್ಸೈಟುಗಳಿದ್ದಲ್ಲಿ. ಶಾಲೆಗಳಲ್ಲಿ ಕಲಿಸಿಕೊಡುವುದು ಅಷ್ಟರಲ್ಲೇ ಇದೆ.

ಸರಳವೂ ಸುಸ್ಪಷ್ಟವೂ ಆದ ವೆಬ್ಸೈಟ್ ಕಟ್ಟಿದ ಶ್ರೇಯಸ್ಸು ಲ್ಯಾರಿ ಸ್ಯಾಂಗರ್ ಗೆ ಸಲ್ಲಬೇಕು. ಈತ ಮೂಲತಃ ತತ್ವಶಾಸ್ತ್ರದಲ್ಲಿ ಅಪಾರ ಆಸಕ್ತಿಯುಳ್ಳವನು, ಈ ವಿಭಾಗದಲ್ಲಿ ಪಿ. ಎಚ್ ಡಿ ಮಾಡಿರುವವನು. ತತ್ವಶಾಸ್ತ್ರದಲ್ಲಿನ ಸಮಾನ ಆಸಕ್ತಿಯು ಇವರಿಬ್ಬರನ್ನು ಬೆಸೆದು ಮುಂದೆ ಈ ಸ್ನೇಹ ವಿಕಿಪೀಡಿಯದ ಜನನಕ್ಕೆ ಕಾರಣವಾಗುತ್ತದೆ.

ಆರಂಭದಲ್ಲಿ ವಿಕಿಪಿಡಿಯದ ಅಂಕಣಗಳನ್ನು ಪರಿಶೀಲಿಸಲು ಜಿಮ್ಮಿ ಅಕಡೆಮಿಕ್ ತಂಡವೊಂದನ್ನು ಕಟ್ಟಿ ಆ ಬಗೆಯ ಅಕಡೆಮಿಕ್ ರಿವ್ಯೂಗಳಿಂದ ಜನ ಅಂಕಣ ಬರೆಯಲು ಹೆದರಿ ಹಿಂದೆ ಸರಿಯುತ್ತಿದ್ದಾರೆಂದು ಗಮನಿಸಿ ವಿಕಿಪೀಡಿಯಾವನ್ನು ಸಂಪೂರ್ಣವಾಗಿ ಜನಸಾಮಾನ್ಯರಿಗೆ ಮುಕ್ತವಾಗಿಸುತ್ತಾನೆ. ಜನರೇ ಅಂಕಣಕಾರರು, ಜನರೇ ಪರಿಶೀಲಕರು. ಈ ರೀತಿ ಮಾಡುವುದರಿಂದ ಟ್ರಾಲ್ ಗಳು (ಫೇಸ್ ಬುಕ್ಕಿನಲ್ಲಿರುವ ಸುಳ್ಳುಗಾರರ ತರಹ) ಹೆಚ್ಚಾಗಿ ವಿಕಿಪಿಡಿಯಾದಲ್ಲಿನ ವಸ್ತುವಿನ ಗುಣಮಟ್ಟ ಘನತೆ ಕುಂದುತ್ತದೆ ಎಂದು ಲ್ಯಾರಿ ತಗಾದೆ ತೆಗೆದು ಜಿಮ್ಮಿ ಅವನ ತಗಾದೆಗೆ ಸೊಪ್ಪು ಹಾಕಿದಿದ್ದಾಗ ಲ್ಯಾರಿ ವಿಕಿಪೀಡಿಯದಿಂದ ಹೊರಬರುತ್ತಾನೆ. ಆದರೆ ಅವನು ಗ್ರಹಿಸಿದ ಮಟ್ಟಿಗೆ ವಿಕಿಪಿಡಿಯಾಗೆ ಆಘಾತವೇನು ಆಗುವುದಿಲ್ಲ. ಶೇಕಡಾ ತೊಂಭತ್ತು ಭಾಗ ಇಲ್ಲಿನ ಮಾಹಿತಿಯು ನಿಖರವಾಗಿದ್ದು ಇದನ್ನು ಮತ್ತೂ ನಿಖರಗೊಳಿಸುವ ಮುಕ್ತ ವಾತಾವರಣ ಇಲ್ಲಿದೆ. ಯಾವುದಾದರೂ ಮಾಹಿತಿ ತಪ್ಪು ಕಂಡುಬಂದಲ್ಲಿ ನೀವೂ ಅದನ್ನು ತಿದ್ದಬಹುದು, ಹಾಗೆ ತಿದ್ದಿದ್ದು ಸರಿಯೆನಿಸಿದ್ದಲ್ಲಿ ಸಮುದಾಯದಲ್ಲಿ ನಿಮ್ಮ ಮೇಲಿನ ಗೌರವ ಹೆಚ್ಚುತ್ತದೆ.

ಗೊತ್ತಿರಲಿ ಇದು ಲಾಭರಹಿತ ಸಾಮುದಾಯಿಕ ಸಂಸ್ಥೆ. ಯಾರೂ ಸಂಬಳಕ್ಕಾಗಿ ಇದನ್ನು ಮಾಡುತ್ತಿಲ್ಲ. ಜಗತ್ತೆ ಕೈಜೋಡಿಸಿ ತನಗೆ ಬೇಕಾದ ಉತ್ತಮ ವಿಶ್ವಕೋಶವನ್ನು ಸೃಷ್ಟಿಸುವುದು ಇದರ ಮೂಲ ಉದ್ದೇಶ. ಪ್ರಪಂಚದ ಯಾವ ಮೂಲೆಯಿಂದಲಾದರೂ ಯಾರು ಬೇಕಾದರೂ ಇಲ್ಲಿ ಅಂಕಣ ಬರೆಯಬಹುದು, ಅಥವಾ ಇನ್ನೊಬ್ಬರು ಬರೆದದ್ದನ್ನು ತಿದ್ದಬಹುದು. ಅಂದರೆ, ನಾನು ರಾಜ್ ಕುಮಾರ್ ಇಂಥಿಂತವರು ಎಂದು ಅಂಕಣ ಬರೆದು ಅದರಲ್ಲಿ ಅವರ ಸಿನಿಮಾಗಳ ತಪ್ಪು ಪಟ್ಟಿ ಮಾಡಿದ್ದಲ್ಲಿ ಅದನ್ನು ನೀವು ತಿದ್ದಬಹುದು. ಈ ಮುಕ್ತ ಮಾಡೆಲ್ಲಿನ ಪರಿಣಾಮ ಇಲ್ಲಿನ ಅಂಕಣಗಳು ಅತ್ಯಂತ ನಿಖರವಾಗಿರಲು ಸಾಧ್ಯ. ಕಿಡಿಗೇಡಿಗಳು ತಪ್ಪು ತಪ್ಪೇ ಬರೆದರೆ ಅದನ್ನು ತಿದ್ದಲು ಒಳ್ಳೆಯ ಮಂದಿಯೂ ಇರುತ್ತಾರೆ. ಹಾಗೆ ತಪ್ಪು ಮಾಹಿತಿ ಹಾಕಿದವರನ್ನು ಬ್ಲಾಕ್ ಮಾಡಲಾಗುತ್ತದೆ.

ಈಗ ಇದನ್ನು ಫೇಸ್ ಬುಕ್ಕಿಗೆ ಅನ್ವಿಯಿಸಿ ನೋಡಿ, ಫೇಸ್ ಬುಕ್ಕಲ್ಲಿನ ಸಮಸ್ಯೆಯೆಂದರೆ ನೀವು ಒಂದು ಅಂಕಣ ಬರೆದು ಹಂಚಿದರೆ ಅದನ್ನು ತಿದ್ದಿ ತಮಗೆ ಬೇಕಾದ ಸುಳ್ಳು ಮಾಹಿತಿ ಸೇರಿಸಿ ಮಂದಿ ಇತರರಿಗೆ ಹಂಚಬಹುದು. ಮತ್ತು ಫೇಸ್ಬುಕ್ಕಲ್ಲಿ ಮೂಲ ಪ್ರತಿಯನ್ನು ಮತ್ತೊಬ್ಬನು ತಿದ್ದಲು ಬರುವುದಿಲ್ಲ. ಯಾವುದೇ ಮಾಹಿತಿಗೆ ಸಿಂಗಲ್ ಸೋರ್ಸ್ ಎಂಬುದಿರುವುದಿಲ್ಲ. ಹಾಗಾಗಿ ಅಲ್ಲಿ ಜನ ಅವರವರಿಗೆ ಮನಬಂದಂತೆ ಬರೆದು ಸುಳ್ಳಿನ ಕಂತೆಯನ್ನೆ ಸೃಷ್ಟಿಸಿದ್ದಾರೆ. ಝುಕರ್ ಬರ್ಗನಿಗೆ ಬೇಕಿರುವುದೂ ಅದೇ, ಕಾರಣ ಅವನಿಗೆ ಆದಾಯ ಬರುವುದು ಮಂದಿ ತಮಗೆ ಬೇಕಾದ ಮಾಹಿತಿಯನ್ನು ತಮ್ಮಭಿಪ್ರಾಯದಂತೆ ರೂಪಿಸಿ ಫೇಸ್ ಬುಕ್ಕಿಗೆ ದುಡ್ಡು ಕೊಟ್ಟು ಜನರಿಗೆ ತಲುಪಿಸುವುದು. ಒಂದು ಬಗೆಯಲ್ಲಿ ಕಾಸು ಕೊಟ್ಟು ಪಾಂಪ್ಲೇಟು ಹಂಚಿದಂತೆ.

ವಿಕಿಪೀಡಿಯಾದಲ್ಲಿ ಹಾಗಲ್ಲ. ಮಹಾತ್ಮ ಗಾಂಧಿ ಎಂದು ಉದಾಹರಣೆಗೆ ಎತ್ತಿಕೊಂಡರೆ ಮಹಾತ್ಮ ಗಾಂಧಿಯವರಿಗೆಂದು ಇರುವುದು ಒಂದೇ ಅಂಕಣ. ನೀವು ಏನೇ ಸೇರಿಸಬೇಕಿದ್ದರೂ ತೆಗೆಯಬೇಗಿದ್ದರೂ ಅಲ್ಲೇ ಆಗಬೇಕು. ಇದನ್ನು ಝಕರ್ ಬರ್ಗ್ ಫೇಸ್ ಬುಕ್ಕಿಗೂ ಅಳವಡಿಸಬಹುದಿತ್ತು, ಅವನು ಅದನ್ನು ಮಾಡಲೊಲ್ಲ, ಕಾರಣ ಅವನ ಉದ್ದೇಶ ಲಾಭದಾಯಕ ವ್ಯಾಪಾರ. ಫೇಸ್ ಬುಕ್ಕಲ್ಲಿ ನಿಮಗೆ ಬೇಕಿದ್ದರೂ ಬೇಡದಿದ್ದರೂ ಅವರು ಹೇರಿದ ಜಾಹೀರಾತನ್ನು ನೋಡಬೇಕು. ವಿಕಿಪೀಡಿಯಾದಲ್ಲಿ ಜಾಹೀರಾತಿಗೆ ಆಸ್ಪದವಿಲ್ಲ. ಇದು ಪಠ್ಯಪುಸ್ತಕಗಳಿದ್ದಂತೆ. ಪಠ್ಯದ ಬೆನ್ನು ಪುಟ ಒಳ ಪುಟಗಳಲ್ಲಿ ಲೂನಾರ್ ಚಪ್ಪಲಿ ರಾಮ್ರಾಜ್ ಪಂಚೆ, ಇಚ್ಚುಗಾರ್ಡು ಇತ್ಯಾದಿ ಇತ್ಯಾದಿ ಜಾಹೀರಾತುಗಳು ಕಾಣಿಸಿಕೊಂಡರೆ ಹೇಗಿರುತ್ತದೆ ಊಹಿಸಿಕೊಳ್ಳಿ. ಇದರಿಂದ ಭಿನ್ನ ಸಂಸ್ಥೆಗಳ ಭಿನ್ನ ಮಾದರಿಗಳ ಉದ್ದೇಶವೇನು? ಮನುಕುಲಕ್ಕೆ ಯಾವುದು ಒಳಿತು? ಯಾವುದು ಕೆಡುಕು? ಎಂಬುದು ನಿಮಗೆ ಅರ್ಥವಾಗಿರಬೇಕು.

ಜಿಮ್ಮಿ ವೇಲ್ಸ್ ಮೊದಲಿಂದಲೂ ಪುಸ್ತಕಪ್ರೇಮಿ. ಸಣ್ಣವನಿದ್ದಾಗ ಅಮ್ಮ ತರಿಸಿದ ಎನ್ಸೈಕ್ಲೋಪಿಡಿಯಾ ಓದುತ್ತ ಅದು ಅಪೂರ್ಣವಿದೆಯೆನ್ನಿಸಿ ತಾನೇ ತಿದ್ದುತ್ತಿದ್ದನಂತೆ. ಹಾಗಾಗಿ ವಿಕಿಪಿಡಿಯಾಗೆ ಅವನ ಬಾಲ್ಯದ ಹಿನ್ನೆಲೆಯಿದೆ. ವಿಕಿಪೀಡಿಯಾದ ಪರಿಕಲ್ಪನೆಯ ಶ್ರೇಯಸ್ಸು ಜಿಮ್ಮಿಗೆ ಸಲ್ಲಬೇಕು.

ಬಹುಮುಖ್ಯವಾದ ಅಂಶವೆಂದರೆ ವಿಕಿಪೀಡಿಯಾದಲ್ಲಿ ಅಭಿಪ್ರಾಯಕ್ಕೆ ಆಸ್ಪದವಿಲ್ಲ. ಏನಿದ್ದರೂ ಮಾಹಿತಿ ಮಾತ್ರ ಹಂಚಿಕೊಳ್ಳಬೇಕು. ದೂರದರ್ಶನದ ವಾರ್ತೆಗಳ ರೀತಿ. ಪಬ್ಲಿಕ್ಕು ರಿಪಬ್ಲಿಕ್ಕಿನಂತೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಸೇರಿಸುವಂತಿಲ್ಲ. ಅಲ್ಲೂ ಹಾಗೆ ಮಾಡುವ ಪ್ರಯತ್ನಗಳು ಆಗುತ್ತಿರುತ್ತವೆ, ಆದರೆ ಅದನ್ನು ನಿರಂತರ ಪರಿಷ್ಕರಿಸಲಾಗುತ್ತಿರುತ್ತದೆ. ಹೀಗಿದ್ದರೂ ವಿಕಿಪೀಡಿಯಾ ಮೇಲೆ ಅಮೇರಿಕಾದ ಬಲಪಂಥೀಯರ ಅಸಮಾಧಾನವಿದೆ. ವಿಕಿಪೀಡಿಯಾ ಕ್ರಿಶ್ಚಿಯನ್-ವಿರೋಧಿ, ಅಮೇರಿಕಾ-ವಿರೋಧಿ ಎಂದು ಸಿಡಿಮಿಡಿಗೊಂಡಿದ್ದಾರೆ. ಇದಕ್ಕೆ ಮುಯ್ಯಿಯಾಗಿ Conservapedia ಎಂಬ ಇನ್ನೊಂದು ವೆಬ್ಸೈಟು ತೆರೆದಿದ್ದಾರೆ. ಈ ಅಂಕಣ ಬರೆವಾದ ಕಂಸರ್ವೇಪಿಡಿಯಾ ಕ್ರಾಷ್ ಆಗಿದ್ದುದು ವಿನೋದದ ಸಂಗತಿ.

ಇನ್ನು ಕಡೆಯ ವಿಷಯ. ಕನ್ನಡದ ಅಂಕಣಗಳು ಇಪ್ಪತ್ತೈದು ಸಾವಿರ ಎಂದನಲ್ಲವೇ. ಪಕ್ಕದ ಮಲಯಾಳಂ ತಮಿಳಿಗೆ ಹೋಲಿಸಿದರೆ ಇದು ಬಹಳ ಸಣ್ಣ ಸಂಖ್ಯೆ. ಮಲಯಾಳಂದು ಅರವತ್ತು ಸಾವಿರದ ಮೇಲೆ, ತಮಿಳದು ಲಕ್ಷದ ಮೇಲೆ ಅಂಕಣಗಳಿವೆ. ಸ್ವಾಭಿಮಾನ ಕೆಣಕಲು ಈ ಹೋಲಿಕೆ ತರುತ್ತಿಲ್ಲ, ಉಪಯುಕ್ತತೆಯ ಮಹತ್ವ ತಿಳಿಸಲು ಹೇಳುತ್ತಿರುವೆ.

ಇದನ್ನು ಹೀಗೆ ಯೋಚಿಸಬಹುದು, ಇಷ್ಟು ಕಡಿಮೆ ಅಂಕಣಗಳೆಂದರೆ ನಮಗೆ ವಿಕಿಪಿಡಿಯ ತುಂಬಿಸಲು ಎಷ್ಟೊಂದು ವಿಫುಲ ವಸ್ತುಗಳಿದ್ದಾವೆ!. ನನ್ನ ಅಭಿಪ್ರಾಯದಲ್ಲಿ ಇಂಗ್ಲೀಷಿನ ಅಂಕಣಗಳನ್ನೆಲ್ಲ ಕನ್ನಡೀಕರಿಸಬೇಕಿಲ್ಲ, ಅಂದರೆ ಅದು ಆಗಬೇಕಿದ್ದರೂ ತಡವಾಗಿಯೆ ಆಗಲಿ. ಇತರ ಕನ್ನಡಿಗರಿಗೆ ಹಂಚಲು ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಗಳೇ ಬರೆಯಲಿಕ್ಕೆ ಸಾಕಷ್ಟಿವೆ. ಮತ್ತು ನಾನು ನಿಮ್ಮನ್ನು ಹೊಸತಾಗಿ ಕೂತು ಸಂಶೋಧನೆ ಮಾಡಿ ಬರೆಯಿರಿ ಎಂದು ಶ್ರಮದ ಕೆಲಸ ಹೇಳುತ್ತಿಲ್ಲ. ನನಗನ್ನಿಸಿದಂತೆ ಕನ್ನಡ ಸಾಹಿತ್ಯದಲ್ಲಿ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಜೀವ ಸಂಕುಲ, ಭೌಗೋಳಿಕ ಪ್ರದೇಶಗಳು, ಕೋಟೆಗಳು, ಅರಮನೆಗಳು, ದೇವಾಲಯಗಳು, ಚರ್ಚು ಮಸೀದಿಗಳು, ತರಕಾರಿ ಸೊಪ್ಪುಗಳು, ಮಾಂಸ ಭಕ್ಷ್ಯಗಳು, ಸ್ಥಳೀಯ ಜಾತಿ ಪಂಗಡಗಳು ಇವುಗಳ ಬಗ್ಗೆ ಯತೇಚ್ಛವಾಗಿ ಸಂಶೋಧನಾತ್ಮಕ ಪುಸ್ತಕಗಳು ಬಂದಿವೆ. ಮತ್ತು ಆ ಪುಸ್ತಕಗಳು ಎಲ್ಲೆಲ್ಲಿಯೋ ಹಂಚಿ ಹೋಗಿದ್ದಾವೆ, ಮರುಮುದ್ರಣವಿಲ್ಲ, ಅಂಗಡಿಗಳು ಮಾರುತ್ತಿರುವುದಿಲ್ಲ. ಏನೇನೋ ಕಾರಣಗಳಿಂದ ಲೇಖಕನು ಸಂಶೋಧಿಸಿ ಕಲೆಹಾಕಿದ ಶ್ರಮಯುಕ್ತ ಬೆಲೆಬಾಳುವ ಮಾಹಿತಿ ವ್ಯರ್ಥವಾಗಿಬಿಟ್ಟಿದೆ. ಅಥವಾ ಯಾವುದೋ ವಿಶೇಷಾಂಕದಲ್ಲಿ ಬರೆದಿರುತ್ತೀರಿ ಅದು ಆ ಕೆಲವು ದಿನಗಳ ನಂತರ ಎಲ್ಲಿಯೂ ಸಿಗುವುದಿಲ್ಲ. ಅಂತಹ ಪುಸ್ತಕಗಳು ಮಾರ್ಕೆಟ್ಟಿನಲ್ಲಿ ಚಾಲ್ತಿಯಲ್ಲಿಲ್ಲವೆಂದರೆ ಅದನ್ನು ವಿಕಿಪೀಡಿಯಾದ ಅಂಕಣವಾಗಿಸಬಹುದಲ್ಲವೇ?

ಉದಾಹರಣೆಗೆ ನಾನು ಅಣ್ಣೆಸೊಪ್ಪು ಎಂದು ಹುಡುಕಿದಾಗ ವಿಕಿಪಿಡಿಯದ ಪುಟ ಸಿಗಲಿಲ್ಲ. ಅದೇ ರಾಗಿಮುದ್ದೆ, ಒಬ್ಬಟ್ಟು, ಮಧುಗಿರಿ ಬೆಟ್ಟ, ಸಿರಾ ಬೆಟ್ಟ ಇವೆಲ್ಲ ಸಿಕ್ಕಿದವು. ಹಾಗೆ ನೋಡಿದರೆ ವಿಕಿಪಿಡಿಯದಲ್ಲಿ ಸೊಪ್ಪುಗಳು ಎಂಬ ಪುಟವೇ ಖಾಲಿಯಿದೆ!. ನಿಮ್ಮಲ್ಲಿ ಯಾರಾದರೂ ಸೊಪ್ಪುಗಳ ಮೇಲೆ ಪುಸ್ತಕ ಬರೆದಿದ್ದರೆ.. ಆ ಪುಸ್ತಕವೀಗ ಚಾಲ್ತಿಯಲ್ಲಿರದಿದ್ದರೆ(ಅಥವಾ ನೀವು ಲಾಭಾಂಶ ಉದ್ದೇಶವನ್ನು ಬದಿಗಿರಿಸುವುದಾದರೆ) ಅದರಲ್ಲಿನ ಮಾಹಿತಿಯನ್ನು ಕಂಪ್ಯೂಟರಿಗೆ ಅಪಲೋಡ್ ಮಾಡಬಹುದಲ್ಲವೆ? ಅಲ್ಲಿಗೆ ವಿಕಿಪಿಡಿಯ ಎಂಬ ವಿಶ್ವಕೋಶದಲ್ಲಿ ಕರ್ನಾಟಕದಲ್ಲಿ ಬಳಸುವ ಸೊಪ್ಪಿನ ಮಾಹಿತಿ ಶಾಶ್ವತವಾಗಿ ದಾಖಲಾಗಿ ಪ್ರಪಂಚದ ಯಾವ ಮೂಲೆಯಿಂದ ಬೇಕಾದರೂ ಓದಿ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಮತ್ತು ನೀವು ಹಾಕಿದ ಮೂಲ ಪ್ರತಿಗೆ ಇತರರು ಸದುದ್ದೇಶದಿಂದ ಪರಿಶೀಲಿಸಿ ಇನ್ನಷ್ಟು ಸೇರಿಸಿ ಆ ವಸ್ತುವಿನ ಬಗ್ಗೆ ಸಮಗ್ರವಾಗಿ ದಾಖಲೆ ಸೃಷ್ಟಿಯಾಗುವ ಅವಕಾಶವಿದೆ. ಗೊತ್ತಿರಲಿ ಅಲ್ಲಿ ಹಾಕಿದ ಮೇಲೆ ಅದನ್ನು ಬೇರೆ ಯಾರು ಬೇಕಾದರೂ ಪರಿಶೀಲಿಸಿ ಪರಿಷ್ಕರಿಸಬಹುದು. ಅಂಕಣದ ಮೂಲ ಕರ್ತೃ ಅದನ್ನು ತಿದ್ದಿದವರು ಎಲ್ಲರ ಹೆಸರೂ ಅಲ್ಲಿ ದಾಖಲಾಗಿರುತ್ತದೆ, ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಹಾಗಾಗಿ ದುರುದ್ದೇಶಪೂರಿತ ಅಪ್ಡೇಟ್ ಮಾಡಿದರೆ ಇಂಟರ್ನೆಟ್ ನಲ್ಲಿ ಖಳನಾಗಿ ಶಾಶ್ವತವಾಗಿ ದಾಖಲಾಗುತ್ತೀರಿ.

ಸಾಮಾನ್ಯವಾಗಿ ಅಂಕಣದ ರೂಪುರೇಷ ಹೀಗಿರುತ್ತದೆ; ಅಣ್ಣೇಸೊಪ್ಪು ಎಂದರೆ ಏನು, ಯಾವ ಬಗೆಯ ಸಸ್ಯ ಸಂಕುಲಕ್ಕೆ ಸೇರುತ್ತದೆ, ಇದರ ವೈಶಿಷ್ಟ್ಯಗಳೇನು? ಇದರಿಂದಾಗುವ ಪ್ರಯೋಜನಗಳೇನು? ರೈತರಿಗೆ ಉಂಟಾಗುವ ತೊಂದರೆಗಳೇನು, ಇತಿಹಾಸದಲ್ಲಿ ಇದು ಹೇಗೆ ಚಿತ್ರಿತವಾಗಿದೆ, ಸಮಕಾಲೀನ ಸಾಹಿತ್ಯ ಸಿನಿಮಾಗಳಲ್ಲಿ ಎಲ್ಲಿಯಾದರೂ ಹೆಸರಿಸಲಾಗಿದೆಯೇ.. ಹೀಗೆ. ತಮಾಷೆಗೆ ಎತ್ತಿನ ಗಾಡಿ ಎಂದು ಹುಡುಕಿದೆ, ಕನ್ನಡದ ವಿಕಿಯಿಲ್ಲ, ಬುಲಕ್ ಕಾರ್ಟ್ ಎಂದು ಹುಡುಕಿದೆ, ಅಲ್ಲಿ ಎತ್ತಿನ ಗಾಡಿಯ ಇತಿಹಾಸ ಯಾವ ಯಾವ ದೇಶಗಳಲ್ಲಿ ಎತ್ತಿನ ಗಾಡಿಗಳು ಹೇಗಿರುತ್ತವೆ ಎಂದೆಲ್ಲ ಮಾಹಿತಿಯಿದೆ! ಕೆಳಜಾತಿಯ ಜನಾಂಗಗಳ ಬಗ್ಗೆ ಹುಡುಕುತ್ತಿದ್ದಾಗ ಒಡ್ಡರ ಬಗ್ಗೆ ಮಾಹಿತಿಯಿದೆ, ಕೊರಮರ ಬಗ್ಗೆಯಿಲ್ಲ. ಚಂದನ್ ಶೆಟ್ಟಿಯ ಪುಟವಿದೆ; ವಿಕಿಯಲ್ಲಿ ದಾಖಲಾಗಿರುವ ವ್ಯಕ್ತಿಗಳೆಂದರೆ ಅದೊಂದು ಹಿರಿಮೆಯ ಸಂಗತಿ. ನಿಮ್ಮ ನಿಮ್ಮ ಮೆಚ್ಚುಗೆಯ ನಟರು, ನಾಯಕರು ಅಲ್ಲಿಲ್ಲವಾದರೆ ಅವರ ಮಾಹಿತಿ ಕಲೆಹಾಕಿ ನೀವು ವಿಕಿಪಿಡಿಯದಲ್ಲಿ ಸೇರಿಸಬಹುದು.

ಇದೆಲ್ಲ ಶ್ರಮವಿಲ್ಲದ, ಕೇವಲ ಕಾಪಿ ಪೇಸ್ಟಿನ ಕೆಲಸ. ಇದರಿಂದಾಗುವ ಉಪಯೋಗ ಮಾತ್ರ ಮಹತ್ವದ್ದು. ನೀವು ಪುಸ್ತಕವನ್ನೆ ಡಿಜಿಟಲೈಸ್ ಮಾಡಿ ಅಪ್ಲೋಡ್ ಮಾಡಿದರೆ ಏನೂ ಸುಖವಿಲ್ಲ. ನಿಮ್ಮ ಹೆಸರಿನ ಮೇಲಿನ ಪ್ರೀತಿಯಿಂದ ಹಾಕಬೇಕಷ್ಟೆ. ನಾನು ಗೂಗಲ್ ನಲ್ಲಿ ಹೋಗಿ ಅಣ್ಣೆಸೊಪ್ಪು ಎಂದು ಹುಡುಕಿದರೆ ನಿಮ್ಮ ಪುಸ್ತಕ ಅಲ್ಲಿ ಬರುವುದಿಲ್ಲ, ಬಂದರೂ ಪುಸ್ತಕ ಡೌನ್ಲೋಡ್ ಮಾಡಿ ಬೇಕಾದ ಸೊಪ್ಪಿನ ಮಾಹಿತಿ ಹುಡುಕುವ ವ್ಯವಧಾನವಿರುವುದಿಲ್ಲ. ಗೂಗಲ್ ನಲ್ಲಿ ಟೈಪಿಸಿದ ತಕ್ಷಣ ಮೊದಲ ಪುಟದಲ್ಲೆ ಅಣ್ಣೆಸೊಪ್ಪು: ವಿಕಿಪೀಡಿಯ ಪುಟ ಎಂದು ಬಂದರೆ ಎಷ್ಟು ಅನುಕೂಲ ಊಹಿಸಿಕೊಳ್ಳಿ. ಫೇಸ್ ಬುಕ್ಕಲ್ಲಿ ತೌಡು ಕುಟ್ಟುವ ಶ್ರಮದ ಕಾಲುಭಾಗವನ್ನು ಇಲ್ಲಿ ವ್ಯಯಿಸಿದರೆ ಜನರಿಗೆ ಒಳಿತಾಗುವಂತಹ ಶಾಶ್ವತ ದಾಖಲೆ ಸೃಷ್ಟಿಸಿದಂತಾಗುತ್ತದೆ.

(ಜಿಮ್ಮಿ ವೇಲ್ಸ್)

ಅಂಕಣ ಬರೆಯುವಾಗ ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಸೇರಿಸಕೂಡದು. ದೂರದರ್ಶನದ ವಾರ್ತೆ, ಅಥವಾ ಅದರಲ್ಲಿ ಬರುವ ಕೃಷಿ ಮಾಲಿಕೆಯಂತಿರಬೇಕು ನಿಮ್ಮ ಅಂಕಣ. ಬೇಕಿದ್ದರೆ ಈಗಿರುವ ಯಾವುದಾದರೂ ಅಂಕಣವನ್ನು ಅಭ್ಯಾಸ ಮಾಡಿ ಅದನ್ನು ನಕಲಿ ಮಾಡಬಹುದು. ನಕಲಿಯೆ ಮೊದಲ ಕಲಿಕೆ. ಮಗು ಕಲಿಯುವುದೇ ಅಪ್ಪ ಅಮ್ಮನ ವರ್ತನೆಗಳನ್ನು ನಕಲಿಸುವ ಮೂಲಕ.

ಹಾಗಿದ್ದರೆ ವಿಕಿಪೀಡಿಯ ಮೇಲೆ ಆರೋಪಗಳಿಲ್ಲವೇ? ಇದಾವೆ, ಕೆಲವು ಕಡೆ ಮಾಹಿತಿ ನಿಖರವಾಗಿಲ್ಲವೆಂದು, ಕೆಲವು ಕಡೆ ಪಕ್ಷಪಾತಿ ಮಾಹಿತಿಯೆಂದು, ಪುರುಷ ಪ್ರಧಾನ್ಯತೆ ಕಾಣುತ್ತದೆಂದು, ಲಿಬರಲ್ ಎಂದು ಇನ್ನೂ ಏನೇನೋ. ತಮಾಷೆಯಂದರೆ ಈ ಆರೋಪಗಳ ಪಟ್ಟಿಯೂ ನಿಮಗೆ ವಿಕಿಪಿಡಿಯದಲ್ಲೇ ಸಿಗುತ್ತದೆ, ಮತ್ತು ಆರೋಪ ಪಟ್ಟಿಯು ಸುಖಾಸುಮ್ಮನಾದ ಕಲ್ಲೆಸೆದು ಓಡುವ ಪ್ರಕ್ರಿಯೆಯಲ್ಲದೆ ಗಂಭೀರ ಸ್ವರೂಪದ್ದಾಗಿರುತ್ತದೆ. ಯಾಕಂದರೆ ಒಬ್ಬ ಲಿಬರಲ್ ವಿರೋಧಿ, ಕಂಸರ್ವೇಟಿವ್ ಕೂಡ ಖಚಿತ ಮಾಹಿತಿಯಿದ್ದಲ್ಲಿ ತನ್ನ ಪರವಾಗಿ ಸತ್ಯವಿದ್ದಲ್ಲಿ ವಿಕಿಪಿಡಿಯದಲ್ಲೆ ಅದನ್ನು ದಾಖಲಿಸಬಹುದು. ಅಷ್ಟರ ಮಟ್ಟಿಗೆ ವಿಕಿಪಿಡಿಯ ಡೆಮಾಕ್ರಟಿಕ್. ವಿರೋಧ ಪಕ್ಷದವರನ್ನು ವಿರೋಧಿ ದ್ವನಿಗಳನ್ನು, ಸುದ್ದಿ ಮಾಧ್ಯಮಗಳನ್ನು ಅಡಗಿಸಲು ಸದಾ ಹಾತೊರೆಯುವ ಸರ್ಕಾರಗಳು ನಿಜವಾದ ಡೆಮಾಕ್ರಟಿಕ್ ಅಂದರೆ ಏನೆಂದು ವಿಕಿಪೀಡಿಯ ನೋಡಿ ಕಲಿಯಬೇಕು.

ವಿಕಿಪೀಡಿಯ ಹೀಗಿರಲು ಸಾಧ್ಯವಾಗಿರುವುದು, ಅದರದ್ದು ಬಾಟಮ್ ಅಪ್ ಅಪ್ರೋಚ್. ಅಂದರೆ ಅಲ್ಲಿ ಮೇಲೆ ಕೂತು ನಿರ್ಧಾರ ತಳೆದು ಕೆಳಗಿನವರಿಗೆ ಅದನ್ನು ಮಾಡಲು ಹೇಳುವುದಿಲ್ಲ. ಕೆಳಗಿದ್ದವರು ನಿರ್ಧಾರ ತೆಗೆದುಕೊಂಡು ಮೇಲಿನವರಿಗೆ ಮನವರಿಕೆ ಮಾಡುತ್ತಾರೆ. ಅತ್ಯಂತ ಯಶಸ್ವೀ ಸ್ವಯಂ-ಚಾಲಿತ ಸ್ವಯಂ ಆಡಳಿತ ಹೊಂದಿರುವ ಸಂಸ್ಥೆ ವಿಕಿಪೀಡಿಯ. ನಾವೆಲ್ಲ ಒಬ್ಬ ಶಕ್ತಿಶಾಲಿ ನಾಯಕನಿರಬೇಕು ಮತ್ತು ಅವನು ನಮಗೆಲ್ಲ ಮಾರ್ಗದರ್ಶನ ನೀಡುತ್ತ ನಮ್ಮನ್ನಾಳಬೇಕು, ಇಲ್ಲಾಂದರೆ ದೊಂಬಿ ದಾಂಧಲೆಗಳು ಎದ್ದುಬಿಡುತ್ತವೆ ಎಂದು ನಂಬಿದ್ದೇವಲ್ಲ(ಇದು ನಂಬಿಕೆಯಲ್ಲ, ತಲತಲಾಂತರದಿಂದ ರಾಜರ ಆಡಳಿತಕ್ಕೆ ಒಳಪಟ್ಟು ರಕ್ತಗತವಾಗಿರುವ ಗುಲಾಮಗಿರಿ) ಆ ನಂಬಿಕೆಯನ್ನು ಸುಳ್ಳಾಗಿಸಿ ಪ್ರಜೆಯೇ ಪ್ರಭು ಎಂಬ ತತ್ವವನ್ನು ಯಶಸ್ವಿಯಾಗಿ ಪರಿಪಾಲಿಸುತ್ತ ನಡೆದು ಬಂದಿರುವ ಸಂಸ್ಥೆ ವಿಕಿಪಿಡಿಯ.

ಮೇಲೆ ತಿಳಿಸಿದ ಆರೋಪಗಳು ಸತ್ಯವಾಗಿದ್ದಲ್ಲಿ ಅದಕ್ಕೆ ಹೊಣೆಗಾರರು ಜನಸಾಮಾನ್ಯರೇ ಆಗಿರುತ್ತಾರೆ. ಅದನ್ನು ತಿದ್ದಿ ಸರಿಮಾಡಿಕೊಳ್ಳುವ ಜವಾಬ್ದಾರಿ ಜನಸಾಮಾನ್ಯರ ಮೇಲೆಯೆ ಇರುತ್ತದೆ. ಯಾಕಂದರೆ ವಿಕಿಪೀಡಿಯಾದ ಸಮಗ್ರ ವಸ್ತು ಜನಸಾಮಾನ್ಯರಿಂದಲೆ ಬರೆದಿರುವುದು!

ಕೊನೆಯದಾಗಿ.. ಇತ್ತೀಚೆಗೆ ಕೇಳ್ಪಟ್ಟಂತೆ ವಿಕಿಪೀಡಿಯದ ಕರ್ತೃ ಜಿಮ್ಮಿ ವೇಲ್ಸ್ ಇದೀಗ ಫೇಸ್ ಬುಕ್ ಟ್ವಿಟ್ಟರಿಗೆ ಬದಲಿ ಸಾಫ್ಟವೇರು ತಯಾರಿಸಲು ಕೈ ಹಾಕಿದ್ದಾನೆ. ಇದರ ಹೆಸರು WT:Social ಎಂದು. ಅಕ್ಷರಶಃ ಸೊನ್ನೆಯಿಂದ ಶುರು ಮಾಡುತ್ತಿರುವೆ ಅಂತಿದ್ದಾನೆ. ಮತ್ತು ಇದೂ ಕೂಡ ಲಾಭ ರಹಿತ ಸಂಸ್ಥೆಯಾಗಿರುತ್ತದಂತೆ. ಬಹುಶಃ ಬರಲಿರುವ ಹೊಸ ವೆಬ್ಸೈಟು ಬಳಸಲಿಕ್ಕೆ ಫೇಸ್ ಬುಕ್ಕಿನಂತಿದ್ದರೂ ಮಾಹಿತಿ ನಿಖರತೆ ದೃಷ್ಟಿಯಿಂದ ವಿಕಿಪೀಡಿಯ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಮತ್ತು ಅದರಲ್ಲಿ ಜಾಹೀರಾತುಗಳ ಹೇರಿಕೆ ಇರುವುದಿಲ್ಲ. ಮತ್ತು ರಾಜಕೀಯ ಪಕ್ಷಗಳು ದುಡ್ಡು ಕೊಟ್ಟು ತಮಗೆ ಬೇಕಾದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಂತದಕ್ಕೆ ನಾವು ಬಲಿಯಾಗುವ ಸನ್ನಿವೇಶವಿರುವುದಿಲ್ಲ.

ವಿಕಿಪೀಡಿಯಾಗಿರುವ ಸಣ್ಣ ಸಮಸ್ಯೆಯಂತೆ ಅಲ್ಲಿಯೂ ಟ್ರಾಲ್ ಗಳು ಬಂದು ಬೇಕಾಬಿಟ್ಟಿ ಎಡಿಟ್ ಮಾಡುವುದು ಕೆಲವನ್ನು ಮಾತ್ರವೆ ಲೈಕ್ ಒತ್ತಿ ಅದು ಸುದ್ದಿಯಲ್ಲಿರುವಂತೆ ನೋಡಿಕೊಳ್ಳುವುದು- ಮಾಡಬಹುದು. ಅಂತಹ ಸಮಯದಲ್ಲಿ ವಿಕಿಪೀಡಿಯಾಗೆ ಬೆನ್ನೆಲುಬಾಗಿರುವ ಮನುಷ್ಯನ ಮೂಲ ಗುಣ, ಒಳ್ಳೆಯತನ ಅಂದರೆ Goodwill ಕೆಲಸ ಮಾಡಿ ಆದಷ್ಟೂ ಅಂತರ್ಜಾಲ ಸ್ವಸ್ಥವಾಗಿರುವಂತೆ ನೋಡಿಕೊಳ್ಳುತ್ತದೆಂದು ಆಶಾಭಾವನೆ ಇಟ್ಟುಕೊಳ್ಳಬಹುದು. ನೆರೆ ಬಂದಾಗ ಒಳ್ಳೆಯವರೂ ಕೆಟ್ಟವರೂ ಎಲ್ಲ ಸೇರಿ ಪರಿಹಾರ ಕಾರ್ಯಕ್ಕಿಳಿಯುತ್ತಾರಲ್ಲ, ಹಾಗೆ.