Advertisement
ಎಲ್ಹೋದೆ ವಾಸಯ್ಯ… : ಲೈಲಾ ಪರ್ವೀನ್‌ ಬರಹ

ಎಲ್ಹೋದೆ ವಾಸಯ್ಯ… : ಲೈಲಾ ಪರ್ವೀನ್‌ ಬರಹ

ಸ್ವಲ್ಪ ದೊಡ್ಡವಳಾಗುತ್ತಾ ಬಂದಂತೆ ವಾಸಯ್ಯನಿಗೇನೋ ಅನ್ಯಾಯವಾಗಿದೆ, ಅದಕ್ಕೇ ಅವನು‌ ಹಾಗಿರುವುದು ಎಂದು ಬಲವಾಗಿ ಅನಿಸತೊಡಗಿತ್ತು. ಅವತ್ತೆಲ್ಲ ಅಷ್ಟು ಸಾರಿ‌ ಕೇಳಿದಾಗಲೂ‌ ಅಮ್ಮ ಹೇಳಿರಲಿಲ್ಲ. ಅಮ್ಮನಿಗೂ ಗೊತ್ತಿಲ್ಲವೇನೋ ಅಂದುಕೊಂಡಿದ್ದೆ. ನನಗೂ ಮದುವೆಯಾಗಿ ಮಕ್ಕಳಾಗಿ ಶಾಲೆ ಮನೆ ಅಂತ ನಿಭಾಯಿಸುವಾಗ ಎದುರಾಗುವ ಕಷ್ಟಗಳನ್ನು ಹೇಳಿಕೊಳ್ಳಲು ಯಾರೂ ಇರದೆ ಮನಸ್ಸು ಭಾವುಕವಾಗಿ ರಾತ್ರಿ ಕತ್ತಲೆಯಲ್ಲಿ ಕಣ್ಣೀರು ಸುರಿಸಿ ಹಗಲು ಹೊತ್ತು ಮೌನ ಆವರಿಸಿಕೊಂಡಾಗ ಈ ಮಹಾಮೌನಿ ವಾಸಯ್ಯ ನೆನಪಾಗದೇ ಇರುತ್ತಿರಲಿಲ್ಲ. ಪ್ರತೀ ಮೌನದ ಹಿಂದೆ ಶಬ್ದಗಳ ಗೊಂಚಲು ಇದ್ದೇ ಇರುತ್ತದೆ ಎಂಬುದು ಆಗ ಅರ್ಥವಾಗಿ ಹೋಗಿತ್ತು.
ಲೈಲಾ ಪರ್ವೀನ್‌  ಬರಹ ನಿಮ್ಮ ಓದಿಗೆ

ಅವನು ಕಲಿತವನು. ತುಂಬಾ ಅಂದರೆ ತುಂಬಾ. ನಾವೆಲ್ಲ ಇನ್ನೂ ಎರಡು ಮೂರನೇ ಕ್ಲಾಸಿನಲ್ಲಿರುವಾಗ ಅವನು ನಮಗಿಂತ ಹತ್ತು ಹನ್ನೆರಡು ಕ್ಲಾಸು ಜಾಸ್ತಿ ಕಲಿತವನು. ಅವನಿಗೆ ಎಬಿಸಿಡಿ ಬರುತ್ತಿತ್ತು. ಮತ್ತು ಅದರ ಮುಂದೆ ತುಂಬಾ ಅಕ್ಷರಗಳಿದ್ದಾವಲ್ಲ ಅವೆಲ್ಲ ಬರುತ್ತಿತ್ತು. ನನಗೆ ಅವನನ್ನು ಕಂಡರೆ ಆಶ್ಚರ್ಯ. ಏಕೆಂದರೆ ನಾವೆಲ್ಲ ಟೀಚರ್ ಹೇಳಿದ ಹಾಗೆ ಅಕ್ಷರಗಳನ್ನು ದುಂಡಗೆ ಮಾಡುವುದರಲ್ಲೇ ತಿಂದದ್ದೆಲ್ಲ ಕರಗಿಸಿ ಗೊಬ್ಬರ ಮಾಡಿದರೆ, ಇವನು ಕಡ್ಡಿ ಕಡ್ಡಿಗಳನ್ನು ಸೇರಿಸಿ ಬರೆದ ಹಾಗೆ ಇಂಗ್ಲಿಷ್ ಅಕ್ಷರಗಳನ್ನು ಬರೆದು ನಮ್ಮ ಕಣ್ಣಿಗೆ ದೊಡ್ಡ ಜನ‌ ಆದದ್ದು. ಬೇರೆ ಯಾರಿಗೆ ಅವನು ದೊಡ್ಡ ಜನವೋ ಸಣ್ಣ ಜನವೋ ಅಥವಾ ಹದ ಅಳತೆಯವನೋ ಗೊತ್ತಿಲ್ಲ. ನನಗೆ ಮಾತ್ರ ಅವನು ಎಲ್ಲರಿಗಿಂತ ದೊಡ್ಡ ಜನ. ಏಕೆಂದರೆ ಅವನಿಗೆ ಇಂಗ್ಲಿಷ್ ಅಕ್ಷರಗಳನ್ನು ಬರೆಯಲಿಕ್ಕೆ ಮಾತ್ರವಲ್ಲ ಅವುಗಳನ್ನು ಸೇರಿಸಿ ಓದಲೂ ಬರುತ್ತಿತ್ತು. ಅಷ್ಟೇ ಅಲ್ಲ ಅದನ್ನು ಕಲಿಸುವುದು ಹೇಗೆಂದೂ ಅವನಿಗೆ ಗೊತ್ತಿತ್ತು. ‌ಸರಿಯಾಗಿ ಬರೆಯದಿದ್ದರೆ ಕೆಂಪು ಶಾಯಿಯಲ್ಲಿ ತಪ್ಪು ಹಾಕಿ ಸರಿ ಹೇಗೆ ಬರೆಯಬೇಕೆಂದು ಹೇಳಿಕೊಡುತ್ತಿದ್ದ. ಇದೆಲ್ಲವನ್ನು ಅವನು ಮಾಡುತ್ತಿದ್ದದ್ಧು  ನಮ್ಮಂತಹ ಪಿಳ್ಳೆಗಳಿಗಲ್ಲ.. ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಕಲಿಯುವ ದೊಡ್ಡ ಹುಡುಗರಿಗೆ ಮತ್ತು ವಿಮಾನ ಹತ್ತಿ  ಫಾರಿನ್ನಿಗೆಲ್ಲ ಹೋಗಿ ದುಡಿದು ವಾಪಾಸು ಬರುವಾಗ ಅತ್ತರು ಮೆತ್ತಿಕೊಂಡು ಪರಿಮಳವಾಗಿ ಬಂದವರಿಗೆ. ಊರಿನವರಿಗೆಲ್ಲ ಈ ಕಲಿಯುವ ದುಡಿಯುವ ಹುಡುಗರೇ ದೊಡ್ಡ ಜನರಾದರೆ ಇವರು ಬರೆದದ್ದನ್ನು ತಪ್ಪು ಹಾಕುವ ವಾಸಯ್ಯನೇ ನನಗೆ ದೊಡ್ಡ ಜನ.  ಅವರಿಗೆಲ್ಲ ಕಲಿಸುತ್ತಾನೆಂದರೆ  ಇವನ ಮಹಿಮೆಯೇನು‌ ಕಡಿಮೆಯೇ.. ಇಂತಿಂಥವರೆಲ್ಲ ಬರೆದದ್ದನ್ನು ಕೆಂಪುಶಾಯಿಯಲ್ಲಿ  ತಪ್ಪು ಹಾಕುವುದೆಂದರೆ‌ ಅದೇನು ಕಡಿಮೆ ಸಾಧನೆಯೇ.. ಅವರಿಗೆಲ್ಲ ಸರಿ ಮಾಡಿ ಹೇಳಿಕೊಡುವುದೆಂದರೆ ಇವನು ನಮ್ಮ ಶಾಲೆಯ ಹೆಡ್ ಮೇಷ್ಟರಿಗೆ ಕಡಿಮೆ ಇಲ್ಲ ಅನಿಸಿ ಗೌರವ ಎಂಬ ಚೀಜೊಂದು ಅವನ ಮೇಲೆ ಉಕ್ಕುಕ್ಕಿ ಬಂದು ಅಕ್ಷರಶಃ ದೊಡ್ಡಜನವೇ ಆಗಿಬಿಟ್ಟಿದ್ದ ನನ್ನ ಪುಟ್ಟ ಕಣ್ಣುಗಳಿಗೆ.

ಬೇಸಿಗೆ ರಜೆ ಎಂಬ ಪ್ರಸಾದ ದೊರೆತ ಕೂಡಲೇ ಅಜ್ಜಿಮನೆಗೆ ಹೊರಟು ಬಿಡುತ್ತಿದ್ದ ನಮಗೆ ಅಲ್ಲಿ ನಮ್ಮನಮ್ಮದೇ ಆದ ವಿಶೇಷ ಆಕರ್ಷಣೆಗಳಿದ್ದವು. ದೂರದಿಂದಲೇ ಕಲ್ಲು ಬೀರಿ‌ ಗೇರುಹಣ್ಣಿನಿಂದ ಬೀಜ‌ ಮಾತ್ರ  ಬೇರೆ ಮಾಡಿ ಉದುರಿಸಿ ಬಿಡುತ್ತಿದ್ದ ನನ್ನ ಶಾರ್ಪ್ ಶೂಟರ್ ತಮ್ಮನಿಗೆ ಅಜ್ಜಿ ಮನೆಯ ಗೇರು ಮರಗಳೇ ಆಕರ್ಷಣೆ. ತಂಗಿಗೆ ಅವಳ‌ಂತಹ ಗೊಂಬೆಪ್ರಿಯ ಹುಡುಗಿಯರ ಗೊಂಬೆಗಳೂ ಅವುಗಳ ಅಂಗಿಗಳೂ ಕುತೂಹಲ ಮೂಡಿಸಿದರೆ ಇನ್ನೂ ಪುಟಾಣಿಯಾಗಿದ್ದ ನನ್ನ ಚಿಕ್ಕ ತಮ್ಮನಿಗೆ ಈ ಸಲ ರಜೆಯಲ್ಲಿ ಅಜ್ಜಿಮನೆಗೆ ಬರುವ ಅವನ ಪ್ರಾಯದ ವೀರಾಧಿವೀರರನ್ನು ಮಣಿಸಿ ಕಳೆದ ಸಲದ ಸೇಡು ತೀರಿಸಿಕೊಳ್ಳುವ ಛಲ. ಇವೆಂತದರ ಗೊಡವೆಯೂ ಇಲ್ಲದೆ ಶಾಲೆ, ಪುಸ್ತಕ, ಬರೆ, ಓದು‌ ಎಂಬುದನ್ನೇ ಪಾಲಿಸುತ್ತಾ ಬದುಕಿದ್ದ ನನ್ನಂತಹ ನಿತ್ರಾಣದ ಜೀವಕ್ಕೆ ಈ ನಮ್ಮ ವಾಸಯ್ಯನೇ ಪ್ರಮುಖ ಆಕರ್ಷಣೆ.

ಯಾವಾಗಲೂ ಮಾತಾಡದ ವಾಸಯ್ಯ ಇಷ್ಟು ಕ್ಲಾಸು‌ ಹೇಗೆ ಕಲಿತ..? ಇಂಗ್ಲೀಷನ್ನು ಹೇಗೆ ಕಲಿತ..? ಇಂಗ್ಲೀಷು ಕಲಿತ ಮೇಲೆ ಅವನಿಗೆ ಕನ್ನಡ ಮರೆಯಲಿಲ್ಲವಾ..? ಕನ್ನಡ ಇಂಗ್ಲಿಷು ಎಲ್ಲವನ್ನು ನೆನಪಿಟ್ಟುಕೊಳ್ಳಲಿಕ್ಕೆ ಯಾರಿಗಾದರೂ ಆಗ್ತದಾ..? ಊರಿನಲ್ಲಿರುವ ಎಲ್ಲರಿಗೆ ಇವನು ಇಷ್ಟು ಕಲಿತಿದ್ದಾನೆ ಅಂತ ಗೊತ್ತಿದ್ರೂ ಯಾಕೆ ಇವನನ್ನು ಚಂದ ಮಾಡಿ‌ ಮಾತಾಡಿಸುವುದಿಲ್ಲ..? ಮತ್ತೆ ಅವನ್ಯಾಕೆ ಯಾರಲ್ಲೂ ಮಾತಾಡುವುದಿಲ್ಲ..? ಇಂಗ್ಲಿಷು ಕಲಿಸುವಾಗ ಮಾತ್ರ ಒಂದೆರಡು‌ ಮಾತು ಅವನ ಬಾಯಿಯಿಂದ ಬರುತ್ತವೆ ಅನ್ನುವುದು ಬಿಟ್ಟರೆ ಉಳಿದೆಲ್ಲ ಸಮಯವೂ ಅವನು ಮೌನಿಯೇ. ಯಾರನ್ನೂ ತಲೆ ಎತ್ತಿ ನೋಡುವುದಿಲ್ಲ. ಯಾರನ್ನು ಮಾತಾಡಿಸುವುದೂ ಇಲ್ಲ. ಉಳಿದವರು ಮಾತಾಡಿಸಿದರೆ ಉತ್ತರ ಕೊಡುವುದೂ ಇಲ್ಲವಂತೆ. ಚಿಕ್ಕವಳಿದ್ದಾಗ  ನಾನೊಂದೆರಡು‌ ಸಲ ಹೀಗೆ ಸುಮ್ಮನೆ ಕುತೂಹಲದಿಂದ ಮಾತಾಡಿಸಿದ್ದಕ್ಕೆ ನೆಲ ನೋಡಿಕೊಂಡೇ ಉತ್ತರ ಕೊಟ್ಟಿದ್ದ. ಬೇರೆಯವರಿಗೆಲ್ಲ ಅಷ್ಟೂ ಇಲ್ಲವಂತೆ. ಏನೂ ಇಲ್ಲದ ಉಂಡಾಡಿ ಗುಂಡಗಳೆಲ್ಲ ಜೋರಾಗಿ ಮಾತಾಡಿಕೊಂಡು ಅಟ್ಟಹಾಸ ಮಾಡಿಕೊಂಡು ಊರಿಗೆಲ್ಲ ತಾವೇ ನರಿಗಳೆಂದು ಊಳಿಡುವುದನ್ನು ಕಂಡರೆ ನಮ್ಮ ವಾಸಯ್ಯ ಕಲಿತವನು ಅದರಲ್ಲೂ ಇಂಗ್ಲಿಷು ಕಲಿತವನು ಮಾತಿಲ್ಲದೆ ಮೌನವಾದದ್ದು ಯಾಕೆ ಯಾಕೆ ಎಂದು ಹೊಟ್ಟೆ ಉರಿದುರಿದು ಹೋಗುತ್ತಿತ್ತು.  ಅಮ್ಮ ಹೇಳಿದ ಹಾಗೆ ತುಂಬ ಕಲಿತ ಮೇಲೆ ಕೆಲಸ ಸಿಗುತ್ತಂತೆ. ಹಾಗಾದರೆ ಇವನಿಗೆ ಸಿಗಲಿಲ್ಲವಾ… ಕೆಲಸವಾದರೂ ಸಿಕ್ಕಿದ್ದರೆ ಅದನ್ನೇ ಮಾಡಿಕೊಂಡಾದರೂ ಇರುತ್ತಿದ್ದ. ಈ ರೀತಿ ದೇವಸ್ಥಾನದ ಪೌಳಿಯಲ್ಲಿ ಸದಾ ಮೌನವಾಗಿ ದೇವರ ಹಾಗೆ ಕೂತಿರುತ್ತಿರಲಿಲ್ಲವೇನೋ..

ಇವೆಲ್ಲ ಕುತೂಹಲದ ಮೂಟೆ ಹೊತ್ತುಕೊಂಡು ಪ್ರತಿ ಸಲವೂ ರಜೆಯಲ್ಲಿ ಅಜ್ಜಿಮನೆಗೆ ಹೋಗುವುದು… ಅಲ್ಲಿ ಅವನು  ಮಾಡುವುದನ್ನೆಲ್ಲ ನೋಡಿ ಇನ್ನೂ ಒಂದ್ರಾಶಿ‌ ಪ್ರಶ್ನೆಗಳನ್ನು ಅದಕ್ಕೆ‌ ಸೇರಿಸಿ ಮೂಟೆಯನ್ನು ಇನ್ನೊಂದಿಷ್ಟು ಭಾರವಾಗಿಸಿಕೊಂಡೇ  ರಜೆ ಮುಗಿಸಿ ವಾಪಾಸು ಬರುವುದು‌. ಮತ್ತೆ ಮುಂದಿನ ರಜೆಗೆ ಹೋಗುವ ಕನಸು ಹೊತ್ತು, ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುವ ಆಸೆ ಹೊತ್ತು ಶಾಲೆ ಪುಸ್ತಕ ಓದು ಬರಹಗಳು ಶುರುವಾಗುವುದು. ಇದೆಲ್ಲ ನಡೀತಾ ವರ್ಷಗಳೇ ಉರುಳುತ್ತಾ ನಮ್ಮ ಎರಡು ಮೂರನೇ ಕ್ಲಾಸುಗಳೆಲ್ಲ‌ ಮುಗಿದು ನಾವು ಐದಾರೇಳೆಂಟಕ್ಕೆಲ್ಲ ಬರುವಷ್ಟಕ್ಕೆ ತಲೆಯಲ್ಲಿ ಬುದ್ಧಿ ಅನ್ನುವುದೊಂದು ಮೊಳೆತು, ನಾನೂ ಇಂಗ್ಲಿಷಿನ ಕಡ್ಡಿ ಕಡ್ಡಿ ಅಕ್ಷರಗಳನ್ನು ಬರೆಯಲು ಕಲಿತು, ವಾಸಯ್ಯ ಎಂಬ ಕುತೂಹಲಕ್ಕೆ ನನ್ನದೇ ಆದ ಉತ್ತರಗಳೂ‌ ಆ‌ ಉತ್ತರಗಳಿಗೊಂದೆರಡು ಹೆಚ್ಚುವರಿ ಪ್ರಶ್ನೆಗಳೂ ಮೂಡಿ ಅಂತೂ ಅವನೊಂದು‌ ಕೇಸ್ ಸ್ಟಡಿ ಮ್ಯಾಟರಾಗಿ ಕಾಣುತ್ತಿದ್ದ.

ದೇವಸ್ಥಾನದ ಪೌಳಿಯಲ್ಲಿ ನಾಲ್ಕು ಗೆರೆಯ ಕಾಪಿ ಪುಸ್ತಕದಲ್ಲಿ ಅವರೆಲ್ಲ ಬರೆದ ಇಂಗ್ಲಿಷ್ ಅಕ್ಷರಗಳನ್ನು ತಿದ್ದುವ ದೊಡ್ಡಜನ ವಾಸಯ್ಯ ಮಕ್ಕಳಿಗೆ ಗಣಿತ ಪಾಠವನ್ನೂ ಹೇಳಿಕೊಡುತ್ತಿದ್ದ. ಅದು ಗೊತ್ತಾದ ಬಳಿಕ ಅವನು ಮತ್ತೂ ದೊಡ್ಡ ಜನವಾಗಿ ಬಿಟ್ಟ. ಎಷ್ಟೆಂದರೆ ನಮ್ಮೂರಲ್ಲಿ ಕನ್ನಡಕ ಏರಿಸಿಕೊಂಡೇ ಕಾಣಿಸಿಕೊಳ್ಳುತ್ತಿದ್ದ‌ ಪ್ರಿನ್ಸಿಪಾಲ್ ಇದ್ರಲ್ಲ… ಅವರಷ್ಟು. ಯಾವತ್ತಿಗೂ ನಗದ ಮನುಷ್ಯನಾದರೂ ಅವರು ತುಂಬಾ ಬುದ್ಧಿವಂತರಂತೆ. ಇವನೂ ಅಷ್ಟೇ ತಾನೇ.. ನಗುವುದೂ ಇಲ್ಲ, ಮಾತಾಡುವುದೂ ಇಲ್ಲ. ಜೊತೆಗೆ ಇಂಗ್ಲಿಷ್ ಗಣಿತ ಎಲ್ಲ ಪಾಠ ಹೇಳಲು ಬರುತ್ತದಂದ್ರೆ ನಮ್ಮ ವಾಸಯ್ಯ ಕೂಡ ಪ್ರಿನ್ಸಿಪಾಲನೇ… ಕನ್ನಡಕ ಮಾತ್ರ ಇಲ್ಲ ಅವನಿಗೆ.

ನಾನು ಕಾಲೇಜಿಗೆ ಬರುವಷ್ಟಕ್ಕೆ ವಾಸಯ್ಯ ಮತ್ತೂ ಮೌನಿಯಾದ ಹಾಗೆ ಕಾಣುತ್ತಿದ್ದ.  ಮೊದಲೇ ಉದ್ದುದ್ದದ ಕೈಕಾಲಿನವನು. ಸಪುರ ಕಡ್ಡಿ. ಇಂಗ್ಲಿಷಿನ ಐ ಅಕ್ಷರದ ಹಾಗೇ ಕಾಣುತ್ತಿದ್ದ. ದಿನಕಳೆದಂತೆ  ಬಲಹೀನನಾಗಿ ಇನ್ನೂ ‌ಲಾಚಾರಾಗಿ ಬಿಟ್ಟಿದ್ದ.  ಅಯ್ಯೋ ಪಾಪವೇ ಅನಿಸಿಬಿಡುವುದು ಅವನ ಬಗ್ಗೆ. ಛೆ… ಮತ್ತೂ ಇವನು ಯಾಕೆ ಹೀಗಿದ್ದಾನೆ ಎಂಬುದೇ ಪ್ರಶ್ನೆ. ಮನೆಗೆ ಊಟಕ್ಕೊಂದು ಹೋಗ್ತಾನೇನೋ.. ಉಳಿದೆಲ್ಲ ಸಮಯ‌ ರಸ್ತೆ ಮೇಲೆ ಹೋಗುತ್ತಿರುತ್ತಾನೆ ಇಲ್ಲವೇ ಬರುತ್ತಿರುತ್ತಾನೆ. ರಸ್ತೆ ಮೇಲೆ ಇವನಿಲ್ಲವಾದರೆ ದೇವಸ್ಥಾನದ ಪೌಳಿಯಲ್ಲಿ ಇದ್ದೇ ಇರುತ್ತಾನೆ. ಯಾರೊಂದಿಗೂ ಮಾತಾಡದವನು ದೇವರ ಜೊತೆ ಮಾತಾಡುತ್ತಾನೇನೋ. ದೇವರೂ ಅಷ್ಟೇ.. ಯಾರೊಂದಿಗೂ ಹೇಳಲಾಗದ ಕಷ್ಟ ಸುಖಗಳನ್ನು  ಇವನ ಜೊತೆ ಮಾತ್ರ ತೋಡಿಕೊಳ್ಳುತ್ತಾನೇನೋ..

ಹೀಗಾಗುತ್ತ ಅಜ್ಜಿಮನೆಯಿಂದ ನಾನು ದೂರವಾಗಿ ಕಲಿಯುವ‌ ಕೆಲಸವೇ ಹೆಚ್ಚಾಗಿ ಎಪ್ರಿಲ್ ಮೇ ತಿಂಗಳಲ್ಲಿ ಸಿಗುತ್ತಿದ್ದ ರಜೆ ಇನ್ಯಾವುದೋ ಸಮಯದಲ್ಲೆಲ್ಲ ಸಿಗುತ್ತ ಕಾಲ ಕಳೆಯಿತು. ನಾನು ಟೀಚರಾದೆ. ಕೆಲಸ ಸಿಕ್ಕಿದ ಮೇಲೂ ಅಜ್ಜಿ ಮನೆ ಕಡೆ ಇವನು‌ ಸಿಗುತ್ತಾನೇನೋ ನೋಡ್ಕೊಂಡಾದರೂ ಬರೋಣವೆಂದು ಹೋಗುತ್ತಿದ್ದೆ. ಒಮ್ಮೊಮ್ಮೆ ಸಿಗುತ್ತಿದ್ದ. ಸಿಕ್ಕಿದಾಗಲೆಲ್ಲ ಕೈಯಲ್ಲೊಂದು‌ ನೂರು ರೂಪಾಯಿ‌‌ ಕೊಟ್ಟು ಬರುವುದಿತ್ತು. ಚಾ ಕುಡಿ‌ ವಾಸಯ್ಯ ಅಂತ ಹೇಳಿದರೆ  “ಹಾ ಅಕ್ಕ್ ಮಗಾ ಕುಡಿತೆ” ಅನ್ನುವನು. ಇವನ‌ ನಸೀಬೂ‌ ಚೆನ್ನಾಗಿದ್ದಿದ್ದರೆ ಒಂದೊಳ್ಳೆ ಕೆಲಸ ಪಡ್ಕೊಂಡು ಎಷ್ಟು ಜನಕ್ಕೆ ಕೊಡುವವನಾಗುತ್ತಿದ್ದನೋ.

ವಾಸಯ್ಯನ‌ ಬಗೆಗಿನ ನನ್ನ ಹಲವಾರು ಪ್ರಶ್ನೆಗಳು ಉತ್ತರ ಕಾಣದ ಹಂತ ತಲುಪಿದಾಗ ಅಮ್ಮನ ಬಳಿ‌ ಕೇಳುವುದಿತ್ತು. ಒಂದೇ ಊರಿನಲ್ಲಿ ಹುಟ್ಟಿ‌ ಬೆಳೆದವರಲ್ಲವೇ… ವಾಸಯ್ಯನ ಬಗ್ಗೆ ಅಮ್ಮನಿಗೂ ಅಕ್ಕರೆ. ಚಿಕ್ಕವಳಿದ್ದಾಗ ಹಲವು ಬಾರಿ “ವಾಸಯ್ಯ ಯಾಕಮ್ಮ ಮಾತಾಡುವುದಿಲ್ಲ” ಅಂತ ಕೇಳಿದ್ದೆ. “ಅವನು‌ ಹಾಗೆಯೇ ಇರುವುದು.. ಯಾರಿಗೆ ಬೇಕು ಮಾತು. ಒಂದಕ್ಕೆ ಹತ್ತು ಮಾತಾಡುವ ಈ ಜನರೊಟ್ಟಿಗೆ ಮಾತಾಡದಿದ್ದರೆ ಏನೀಗ… ಅವನು ಮಾಡುವುದು ಸರಿಯೇ.” ಅನ್ನುತ್ತಿದ್ದರು. ಆದರೂ ಯಾವಾಗಲೂ ಮೌನವಾಗಿರುವ ಈ ಜೀವ ನನ್ನನ್ಯಾಕೆ ಇಷ್ಟು ಕಾಡುತ್ತಿತ್ತೋ.. ಸ್ವಲ್ಪ ದೊಡ್ಡವಳಾಗುತ್ತಾ ಬಂದಂತೆ ವಾಸಯ್ಯನಿಗೇನೋ ಅನ್ಯಾಯವಾಗಿದೆ, ಅದಕ್ಕೇ ಅವನು‌ ಹಾಗಿರುವುದು ಎಂದು ಬಲವಾಗಿ ಅನಿಸತೊಡಗಿತ್ತು. ಅವತ್ತೆಲ್ಲ ಅಷ್ಟು ಸಾರಿ‌ ಕೇಳಿದಾಗಲೂ‌ ಅಮ್ಮ ಹೇಳಿರಲಿಲ್ಲ. ಅಮ್ಮನಿಗೂ ಗೊತ್ತಿಲ್ಲವೇನೋ ಅಂದುಕೊಂಡಿದ್ದೆ. ನನಗೂ ಮದುವೆಯಾಗಿ ಮಕ್ಕಳಾಗಿ ಶಾಲೆ ಮನೆ ಅಂತ ನಿಭಾಯಿಸುವಾಗ ಎದುರಾಗುವ ಕಷ್ಟಗಳನ್ನು ಹೇಳಿಕೊಳ್ಳಲು ಯಾರೂ ಇರದೆ ಮನಸ್ಸು ಭಾವುಕವಾಗಿ ರಾತ್ರಿ ಕತ್ತಲೆಯಲ್ಲಿ ಕಣ್ಣೀರು ಸುರಿಸಿ ಹಗಲು ಹೊತ್ತು ಮೌನ ಆವರಿಸಿಕೊಂಡಾಗ ಈ ಮಹಾಮೌನಿ ವಾಸಯ್ಯ ನೆನಪಾಗದೇ ಇರುತ್ತಿರಲಿಲ್ಲ. ಪ್ರತೀ ಮೌನದ ಹಿಂದೆ ಶಬ್ದಗಳ ಗೊಂಚಲು ಇದ್ದೇ ಇರುತ್ತದೆ ಎಂಬುದು ಆಗ ಅರ್ಥವಾಗಿ ಹೋಗಿತ್ತು. ಅಪರೂಪಕ್ಕೊಮ್ಮೆ ಮನೆಗೆ ಹೋದಾಗಲೂ ಅಮ್ಮನಲ್ಲಿ ವಾಸಯ್ಯನನ್ನು ಕೇಳದೇ ಬರುತ್ತಿರಲಿಲ್ಲ. ಒಂದು ಸಲ  ವಾಸಯ್ಯ ಕಾಣೆಯಾಗಿದ್ದಾನಂತೆ ಅಂತ ಅಮ್ಮ ಅಂದಾಗ ಅಯ್ಯೋ ಎಲ್ಹೋದ ವಾಸಯ್ಯ ಅನಿಸಿ ಮನಸ್ಸು ಮರುಗಿತು. ಆನಂತರ ಅವನು ಸಿಕ್ಕಿದ್ನಾ ಅಂತ ಹಲವು ಬಾರಿ ವಿಚಾರಿಸಿದಾಗಲೂ ನನಗೆ ಬೇಕಾದ ಉತ್ತರ ಸಿಗಲಿಲ್ಲ.

ಈ ಸಲ ಹಠ ಬಿಡದೆ ಅಮ್ಮನನ್ನು ಪ್ರಶ್ನಿಸಿದೆ. “ಎಂತ ಆಗಿತ್ತಮ್ಮ ವಾಸಯ್ಯನಿಗೆ… ಅವನ್ಯಾಕೆ ಮಾತಾಡ್ತಾ ಇರಲಿಲ್ಲ.?” ಅಮ್ಮ ಹೇಳುತ್ತಾ ಹೋದರು. “ವಾಸಯ್ಯ ಕಲೀಲಿಕ್ಕೆ ತುಂಬಾ ಹುಷಾರಿದ್ದ ಹುಡುಗ. ಕಲೀತಾ ಕಲೀತಾ ಇಂಜಿನಿಯರಿಂಗ್ ತನಕ ಹೋದ. ಚಿಕ್ಕವನಿದ್ದಾಗಲೇ  ಅವರ ಸಂಬಂಧಿಕರ ಹುಡುಗಿ ಮಂಗಳಕ್ಕನನ್ನು ಅವನಿಗೆ ಮದುವೆ ಮಾಡಿ‌ಕೊಡುವುದು ಅಂತ ಕುಟುಂಬದೊಳಗೆ  ಮಾತಾಗಿತ್ತು.  ವಾಸಯ್ಯನ ಕಲಿಕೆ ಇನ್ನೂ ಮುಗಿದಿರಲಿಲ್ಲ. ಮಂಗಳಕ್ಕನಿಗೊಂದು ಡಾಕ್ಟರ್ ಹುಡುಗನ ಸಂಬಂಧ ಬಂತು.  ಅವಳ ಮನೆಯವರು ವಾಸಯ್ಯನದು ಇನ್ನೂ ಕಲಿತು ಮುಗಿಯಲು ತುಂಬಾ ಸಮಯವಿದೆ. ಅಲ್ಲೀತನಕ ಮಂಗಳಕ್ಕನ ತಂಗಿಯರಿಗೂ ಪ್ರಾಯವಾಗುತ್ತೆ. ಅಷ್ಟೆಲ್ಲ ಕಾಯುವುದು ಬೇಡ.  ಈ ಡಾಕ್ಟರ್ ಹುಡುಗನಿಗೆ ಕೊಟ್ಟು ಅವಳನ್ನು ಮದುವೆ ಮಾಡಿ ಬಿಡುವುದೆಂದು ನಿರ್ಧಾರ ಮಾಡಿದರು. ಮಂಗಳಕ್ಕ ಎಷ್ಟು ಕೊರಗಿದಳೋ ಯಾರು ಬಲ್ಲರು? ವಾಸಯ್ಯನಿಗೆ ಹೇಳದೆ ಮದುವೆ ತಯಾರಿಯೂ ಆಗಿ ಮಂಗಳಕ್ಕನನ್ನು ಗಂಡನ ಮನೆಗೆ ಕಳಿಸಿಯೂಬಿಟ್ಟರು. ದೂರದೂರಿನಲ್ಲಿ  ಹಾಸ್ಟೆಲ್ಲಿನಲ್ಲಿದ್ದು ಕಲಿಯುತ್ತಿದ್ದ ವಾಸಯ್ಯ ಒಮ್ಮೆ ಊರಿಗೆ ಬಂದವನಿಗೆ ಇದೆಲ್ಲ ಗೊತ್ತಾಗುವಾಗ ರಾತ್ರಿ ಹೊತ್ತು. ಆ ರಾತ್ರಿಯಿಡೀ ವಾಸಯ್ಯ ಚೀರಾಡಿದನಂತೆ. ಅನಂತರ ಮೌನವಾದವನು ಮಾತು ಮರೆತುಬಿಟ್ಟ. ಅವನು ಇಂಗ್ಲಿಷ್ ಕಲಿಯುವುದನ್ನು ಬರೆಯುವುದನ್ನು ಮಂಗಳಕ್ಕ ತುಂಬಾ ಇಷ್ಟಪಡುತ್ತಿದ್ದಳು. ಅದಕ್ಕಾಗಿಯೇನೋ ಇಂಗ್ಲಿಷ್ ಕಲಿಸುವಾಗ ಒಂದೆರಡು ಮಾತು ಬಿಟ್ಟರೆ ಮತ್ತೆಲ್ಲ ಮೌನವೇ. ಮಂಗಳಕ್ಕನಿಗಾಗಿ ಅವನು ಇಂಗ್ಲಿಷ್ ನ್ನು ಬಿಟ್ಟಿಲ್ಲ ಅನ್ಸುತ್ತೆ. ಮಂಗಳಕ್ಕನ ಗಂಡ ಅವಳನ್ನು ಫಾರಿನ್ನಿಗೆ ಕರ್ಕೊಂಡು ಹೋದ. ಮತ್ತೆ ವಾಸಯ್ಯನಿಗೆ ಅವಳು ಕಾಣಿಸಲೇ ಇಲ್ಲ. ವಾಸಯ್ಯನೇನು ಎಲ್ಲೂ ಅವಳ ಹೆಸರು ಹೇಳ್ಕೊಂಡು ತಿರುಗಾಡಲಿಲ್ಲ. ಅವಳದ್ದಲ್ಲದ ತಪ್ಪಿಗೆ ಅವಳನ್ನು ಶಿಕ್ಷಿಸಲಿಲ್ಲ. ಬದಲಿಗೆ ಮೌನವಾಗಿ ಬಿಟ್ಟ” ಅಂತ ಅಮ್ಮ ಹೇಳಿದರು.

ಅಯ್ಯೋ ವಾಸಯ್ಯ.. ನನಗೆ ಮೊದಲಿನಿಂದಲೂ ಅನಿಸುತ್ತಿದ್ದುದು ನಿನಗೇನೋ ಅನ್ಯಾಯವಾಗಿದೆ ಅಂತಲೇ. ಮಾತುಕತೆ ಫೋನುಗೀನು ಇಲ್ಲದ ಆ ಕಾಲದಲ್ಲೂ ಮಂಗಳಕ್ಕನನ್ನು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಂಡೆಯ.. ಹೆಣ್ಣುಮಕ್ಕಳನ್ನು ಕೇಳದೆ ಎಲ್ಲ ನಿರ್ಧಾರಗಳು ನಡೆಯುವ ಕಾಲದಲ್ಲಿ ನಿನ್ನಂತಹ ಮುಗ್ಧನ ಬದುಕು ಈ ರೀತಿ ಬಲಿಯಾಯಿತೆ… ಅದಕ್ಕಾಗಿ ಯಾರನ್ನೂ ಶಿಕ್ಷಿಸದೆ ಯಾರ ಮೇಲೂ ದ್ವೇಷ ಕಾರದೆ ನೀನೇ ಬದುಕಿನುದ್ದಕ್ಕೂ ಮೌನಧರಿಸಿ ಕಾಲ ಕಳೆದೆಯಲ್ಲ… ಮಂಗಳಕ್ಕ ಅಲ್ಲವಾದರೆ ಇನ್ಯಾರೋ ಬೆಳದಿಂಗಳಕ್ಕ ಸಿಗುತ್ತಿದ್ದಳು ನಿನ್ನ ಒಳ್ಳೇತನಕ್ಕೆ. ಆದರೆ ಯಾರಿಗೆ ಹೇಳುವುದು.? ಅವರವರ ಮನಸ್ಸಿನ ವಿಚಾರ ಅವರವರದ್ದು.

ಇಷ್ಟು ದಿನ ದೇವಸ್ಥಾನದ ಪೌಳಿಯಲ್ಲಿ ದೇವರೊಂದಿಗೆ ಮಾತಾಡಿಕೊಂಡು ಬೇಕಾದವರಿಗೆ ಇಂಗ್ಲಿಷು ಕಲಿಸಿಕೊಂಡು ಇದ್ದವನು  ಈಗ ಕಾಣಿಸುತ್ತಿಲ್ಲವಂತೆ..

ಎಲ್ಹೋದೆ ವಾಸಯ್ಯ..?

ಎಲ್ಲಿ ಹೋದರೂ ಒಂದಷ್ಟು ದಿನ ಅಲ್ಲಿದ್ದು ಬೇಗ ವಾಪಾಸು ಬಂದು ಬಿಡು ಮಾರಾಯ. ಮತ್ತೆ ಮೊದಲಿನ ಹಾಗೆ  ನೀನು ಆ ದಡ್ಡರಿಗೆಲ್ಲ ಇಂಗ್ಲಿಷು ಕಲಿಸಿ ದೊಡ್ಡ ಜನವಾಗುವುದನ್ನು ಕಾಣುವ ಆಸೆ ನನಗೆ…!

About The Author

ಲೈಲಾ ಪರ್ವೀನ್

ಲೈಲಾ ಪರ್ವೀನ್ ಮೂಲತಃ ಕುಂದಾಪುರ ತಾಲೂಕಿನ ಬಸ್ರೂರಿನವರು. ವಾಸ ಬೆಳ್ತಂಗಡಿ. ಬಂಟ್ವಾಳದ ಕಾವಳಪಡೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ