ಎರಡು ನಿಮಿಷ ಕಳೆಯಿತು. ನಮ್ಮ ಗಾಡಿ ಚಲಿಸುವ ಲಕ್ಷಣ ಕಾಣಲಿಲ್ಲ. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು. ಏನೋ ತಾಂತ್ರಿಕ ಸಮಸ್ಯೆ ಆಗಿದೆ ಅಂತ ಗೊತ್ತಾಯ್ತು. ಆದರೂ ಇಳಿದು ಹೋಗಲೂ ಆಗಲ್ಲವಲ್ಲ. ನಾವು ಕೂತಾಗಲೇ ಹಿಂದಿನಿಂದ ಇನ್ನೊಂದು ಟ್ರೈನ್ ಬಂದು ಡಿಕ್ಕಿ ಹೊಡೆದುಬಿಟ್ಟರೆ ಏನು ಗತಿ ಎಂಬ ಯೋಚನೆ ಬಂದು ಬೆವರು ಹರಿಯಲು ಶುರು ಆಗಿತ್ತು! ನನ್ನ ಪಕ್ಕದಲ್ಲಿ ಕೂತಿದ್ದ ಒಂದು ಸಣ್ಣ ಹುಡುಗಿ ಆಗಲೇ ಅಳಲು ಶುರು ಮಾಡಿದಳು. ಆಶಾಳ ಕಣ್ಣಲ್ಲೂ ನೀರು ಹರಿಯಲು ಶುರು ಆಗಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನೇಳನೆಯ ಬರಹ
ಫ್ಲೊರಿಡಾಕ್ಕೆ ಹೋಗುವುದು ಅಂತ ನಿರ್ಧಾರ ಮಾಡಿ ಆಗಿತ್ತು. ಅದಕ್ಕೆ ಎಷ್ಟು ಖರ್ಚು ಆದೀತು ಏನು ಕತೆ ಎಂಬಂತಹ ಯೋಚನೆಗಳನ್ನು ನಾವು ಮಾಡಿರಲೆ ಇಲ್ಲ. ಎಷ್ಟಾದರೂ ಆಗಲಿ, ಒಂದು ಸಲ ನೋಡಿ ಬರೋಣ ಅಂತ ಅಂದುಕೊಂಡಿದ್ದೆವು. ಅಷ್ಟೊತ್ತಿಗೆ ಚಂದ್ರು ಪ್ರವಾಸದ ಬಗ್ಗೆ ಟಿಕೆಟ್, ಹೊಟೇಲ್ ಬುಕಿಂಗ್ ಬಗ್ಗೆ ವಿಚಾರಿಸತೊಡಗಿದ್ದ. ಅವನು ಅಲ್ಲಿಗೆ ಈಗಾಗಲೇ ಹೋಗಿ ಬಂದಿದ್ದನಾದ್ದರಿಂದ ಎಲ್ಲವನ್ನೂ ಅವನು ವ್ಯವಸ್ಥಿತವಾಗಿ ತಯಾರಿ ಮಾಡುತ್ತಾನೆ ಎಂಬ ನಂಬಿಕೆ ಇತ್ತು. ಅದೂ ಅಲ್ಲದೆ ಅವನು ಮಹಾ ಜಿಪುಣ. ಹೀಗಾಗಿ ತುಂಬಾ ಒಳ್ಳೆಯ package ಹುಡುಕುತ್ತಾನೆ ಎಂಬುದರಲ್ಲಿ ಸಂಶಯವೇ ಇರಲಿಲ್ಲ. ಹೀಗಾಗಿ ಇಂತಹ ಮಿತ್ರರನ್ನು ಸಂಪಾದಿಸುವಾಗ ಯಾವತ್ತೂ ಜಿಪುಣತನ ಮಾಡಲೇಬಾರದು!
ಪ್ರವಾಸ ಮಾಡಲು ದುಡ್ಡಿನ ಚಿಂತೆ ಇರಲಿಲ್ಲವಾದರೂ ರಜೆಯನ್ನು ಹೇಗೆ ಕೇಳುವುದು ಎಂಬ ಅಳುಕು ಇತ್ತು. ಕನಿಷ್ಟವೆಂದರೂ ಐದು ದಿನಗಳ ಪ್ರವಾಸವದು. ಈಗಾಗಲೇ ಭಾರತಕ್ಕೆ ಹೋದಾಗ ರಜೆ ತೆಗೆದುಕೊಂಡಿದ್ದೆ. ಅಮೆರಿಕೆಯಲ್ಲಿ firstdata ಎಂಬ ಕಂಪೆನಿ ನಮ್ಮ client ಆಗಿತ್ತು. ಅವರ ಪ್ರಾಜೆಕ್ಟ್ ಅನ್ನು ಅವರದೆ ಆಫೀಸ್ನಲ್ಲಿ ಇದ್ದು ನಿರ್ವಹಿಸಬೇಕಿತ್ತು. ಆ ಕಂಪೆನಿಯ ಡೈರೆಕ್ಟರ್ ಒಬ್ಬ ಭಾರತೀಯ ಆಗಿದ್ದರು. ಅವರ ಹೆಸರು ವೆಂಕಟ್ ಅಂತ. ಅವರು ಮೂಲತಃ ಆಂಧ್ರದವರು. ಆದರೆ ಒಮಾಹಾದಲ್ಲಿ ಈಗಾಗಲೇ ಹಲವು ವರ್ಷಗಳಿಂದ ನೆಲೆ ನಿಂತವರಾಗಿದ್ದರು. ಆಂಧ್ರದವರಿಗೆ ಅಮೆರಿಕೆಯೆಡೆಗೆ ಪ್ರೀತಿ, ಆಕರ್ಷಣೆ ತುಂಬಾ ಜಾಸ್ತಿ. ಅಲ್ಲಿ ನೆಲೆ ನಿಲ್ಲಲು ಏನು ಬೇಕಾದರೂ ಮಾಡಲು ಸಿದ್ಧರು ಅವರು. ಅಲ್ಲೊಬ್ಬ ನನ್ನ ಪರಿಚಯದವನು ಆಂಧ್ರದಿಂದ ಅಲ್ಲಿಗೆ ಬಂದಿದ್ದ. ಅಲ್ಲಿನ ಮಿಲಿಟರಿಯಲ್ಲಿ ಕೆಲಸ ಮಾಡಿದರೆ ಅಲ್ಲಿಯೇ ಶಾಶ್ವತವಾಗಿ ಉಳಿದುಕೊಳ್ಳುವಂತಹ ವೀಸಾ ಕೊಡುತ್ತಾರೆ ಎಂಬ ಸುದ್ದಿ ತಿಳಿದು, ಅದಕ್ಕೂ ತಯಾರಾಗಿದ್ದನವನು!
ವೆಂಕಟ್ ತುಂಬಾ aggressive ಬಾಸ್. ಅವರ ಎದಿರು ಹೋಗಿ ನಿಲ್ಲಲು ಕೂಡ ಜನ ಹೆದರುತ್ತಿದ್ದರು. ಕುಳ್ಳಗೆ ಇದ್ದ ಅವರಿಗೆ ಹಿಟ್ಲರ್ ಅಂತ ಅಡ್ಡ ಹೆಸರು ಕೂಡ ಇತ್ತು. ಅವರು ಆಡುತ್ತಿದ್ದ ಮಾತುಗಳೂ ಕೂಡ ತುಂಬಾ ಅವಮಾನಕರವಾಗಿ ಇರುತ್ತಿದ್ದವು. ಎಲ್ಲರಿಗೂ ಹಾಗೆ ಬೈಯುತ್ತಿರಲಿಲ್ಲವಾದರೂ, ಹೆಚ್ಚಿನವರು ಅವರ ಬಳಿ ಬೈಸಿಕೊಂಡಿದ್ದರು. ನನಗೆ ಅವರು ಅಷ್ಟೊಂದು ತೊಂದರೆ ಕೊಡಲಿಲ್ಲ. ಯಾಕಂದರೆ ನಾನು ಆದಷ್ಟು ಪೂರ್ವಭಾವಿ ಸಿದ್ಧತೆಗಳೊಂದಿಗೆ ಅವರ ಜೊತೆಗೆ ವ್ಯವಹರಿಸುತ್ತಿದ್ದೆ. ಏನಾದರೂ ಹೆಚ್ಚು ಕಡಿಮೆ ಆಗುತ್ತೆ ಅನಿಸಿದರೆ ಕೂಡಲೇ ಹೋಗಿ ಅವರಿಗೆ ಅದರ ಬಗ್ಗೆ ತಿಳಿಸುತ್ತಿದ್ದೆ. Software ಕ್ಷೇತ್ರದಲ್ಲಿ ಅಥವಾ ಯಾವುದೇ ಕ್ಷೇತ್ರದಲ್ಲಿಯೇ ಇರಲಿ, ಸಂವಹನ ತುಂಬಾ ಮುಖ್ಯ. ಅವರು ಕೇಳುವುದಕ್ಕಿಂತ ಮುಂಚೆಯೇ ಅವರಿಗೆ ಕೆಲಸದ ಕುರಿತು ವರದಿ ಕೊಡುತ್ತಿದ್ದರೆ ಬಾಸ್ಗಳಿಗೆ ಅಷ್ಟು ಸಾಕು. ಇಂತಹ ಸಂಗತಿಗಳನ್ನು ನಾನು ಕಲಿತದ್ದು ನಾನೂ ಒಬ್ಬ ಮ್ಯಾನೇಜರ್ ಆಗಿದ್ದರಿಂದ ಹಾಗೂ ತುಂಬಾ ಹಿಂದೆ ನನ್ನನ್ನು ನಕ್ಷತ್ರಿಕನಂತೆ ಕಾಡಿದ್ದ ಬೇರೊಬ್ಬ ಖಢೂಸ ಬಾಸ್ನಿಂದ. ಹೀಗಾಗಿ ಅನುಭವಗಳು ತುಂಬಾ ಮುಖ್ಯ. ಎಲ್ಲವೂ ಸರಳವಾಗಿ ನಡೆಯುತ್ತಿದ್ದರೆ ನಾವು ಕಲಿಯುವುದು ಯಾವಾಗ?
ಹಾಗೂ ಹೀಗೂ ಮಾಡಿ ರಜೆಯನ್ನು ಪಡೆದುಕೊಂಡೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ, ನನಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದ ರಾನ್ ಡೆಕರ್ಡ್ ಅನ್ನುವವರು, ನೀನು ಕೆಲಸ ಮಾಡುವುದಕ್ಕಿಂತ ಬರಿ ರಜೆ ತೊಗೊಂಡು ಅಡ್ಡಾಡೊದೇ ಜಾಸ್ತಿ ಮಾಡ್ತೀಯಲ್ಲಾ ಅಂತ ತಮಾಷೆ ಮಾಡೋರು.
ನನಗೆ ಇಲ್ಲಿ ಇರುವುದು ಇಷ್ಟ ಇಲ್ಲ, ಅದಕ್ಕೆ ಸಾಧ್ಯ ಆದಾಗಲೆಲ್ಲ ನಿಮ್ಮ ದೇಶವನ್ನು ನೋಡಿಕೊಂಡು ಬಿಡೋಣ ಅಂತ.. ಅವರಿಗೆ ಹೇಳುತ್ತಿದ್ದೆ. ಅವರು ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು. ನೀನು ತುಂಬಾ ಚೆನ್ನಾಗಿ ಇಂಗ್ಲೀಶ್ ಮಾತಾಡುತೀಯ. ನೀನು ಹೇಳಿದ್ದು ನನಗೆ ಅರ್ಥ ಆಗುತ್ತೆ. ಆದರೆ ನಿನ್ನ ಭಾರತೀಯ ಸಹೋದ್ಯೋಗಿಗಳು ಮಾತಾಡೋದು ಏನೂ ತಿಳಿಯಲ್ಲ ಅಂತಿದ್ದರು. ನಮ್ಮ ಭಾರತದ development team ಚೆನ್ನೈನಲ್ಲಿ ಇತ್ತು. ಅಲ್ಲಿನವರು ಆಂಗ್ಲ ಭಾಷೆಯನ್ನು ಕೂಡ ತಮಿಳಿನಂತೆಯೇ ಮಾತಾಡುತ್ತಿದ್ದರು. ಅವರಿಗೆ ಅಷ್ಟು ಭಾಷಾಭಿಮಾನ! ಅದು ನನಗೇ ಅರ್ಥ ಆಗುತ್ತಿರಲಿಲ್ಲ. ಇನ್ನು ರಾನ್ ಗತಿ?! ಅದೂ ಅಲ್ಲದೆ ಎಷ್ಟೋ ಸಲ ಅಲ್ಲಿ ಏನು ನಡೆಯುತ್ತಿದೆ ಅಂತಲೇ ಗೊತ್ತಾಗುತ್ತಿರಲಿಲ್ಲ.
ಒಂದು ಸಲ ಚೆನ್ನೈನಲ್ಲಿ ಪ್ರವಾಹ ಉಂಟಾಗಿ ಯಾರೂ ಆಫೀಸ್ಗೆ ಬಂದಿರಲಿಲ್ಲ. ಆದರೆ ಹಾಗಂತ ಅಲ್ಲಿನವರು ಯಾರೂ ನಮಗೆ ತಿಳಿಸಲಿಲ್ಲ. ಕೆಲಸದ ಪ್ರಗತಿ ಏನಾಯ್ತು ಅಂತ ಅಮೆರಿಕೆಯಲ್ಲಿ ಕೂತ ನಮಗೆ ಏನೂ ತಿಳಿಯದಾದಾಗ ತುಂಬಾ ಆತಂಕ ಆಗುತ್ತಿತ್ತು. ಮೊದಲೇ ಕೆಟ್ಟದಾಗಿ ಮಾತಾಡುತ್ತಿದ್ದ ವೆಂಕಟ್, ನಿಮ್ಮ team ನವರು flood ಅಲ್ಲಿ ತೇಲಿಕೊಂಡು ಹೋದರೋ ಏನು? ಎಂಬಂತಹ ಕುಹಕಾದ ಮಾತುಗಳನ್ನು ಆಡುತ್ತಿದ್ದ. ನನಗೆ ಬೇಜಾರಾಗಿ ಮುಂದೊಮ್ಮೆ ನಮ್ಮ team ಜೊತೆಗೆ ಮಾತಾಡಿದೆ. ನಾನು ನಿಮ್ಮ ಹಾಗೂ ವೆಂಕಟ್ ಮಧ್ಯದಲ್ಲಿ ಇದ್ದು ನಿಮಗೆ ಸಹಾಯ ಮಾಡುವೆ. ಒಟ್ಟಿಗೆ ಸೇರಿಕೊಂಡು ಕೆಲಸ ಮಾಡೋಣ ಅಂತೆಲ್ಲ ಅವರಿಗೆ ಹೇಳಿದೆ. ಆದರೆ ಅವರು ಅದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ನೀವು ಅವನ ಬಳಿ ಬೈಸಿಕೊಳ್ಳುವುದಕ್ಕೆ ಲಾಯಕ್ಕು ಅಂತ ಸುಮ್ಮನಾಗಿದ್ದೆ.
ಅಂತೂ ವಿಮಾನದಿಂದ ಹಿಡಿದು ಫ್ಲೊರಿಡ ರಾಜ್ಯದ Orlando ದಲ್ಲಿ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆಯನ್ನು ಚಂದ್ರು ಮಾಡಿ ಮುಗಿಸಿದ್ದ. ಅದು ಅಮೆರಿಕೆಯ ದಕ್ಷಿಣಕ್ಕಿರುವ ರಾಜ್ಯ. ಅಲ್ಲಿನ ಹವಾಗುಣ ಹೆಚ್ಚುಕಡಿಮೆ ದಕ್ಷಿಣ ಭಾರತದ ಹವಾಮಾನವನ್ನು ಹೋಲುತ್ತದೆ. ಅಲ್ಲಿನ ದೊಡ್ಡ ಆಕರ್ಷಣೆ ಡಿಸ್ನಿ ವರ್ಲ್ಡ್. ನನ್ನ ಮಗಳು ಹಾಗೂ ಚಂದ್ರುನ ಮಗಳು ಹೆಚ್ಚುಕಡಿಮೆ ಒಂದೇ ವಾರಿಗೆಯವರು ಆಗಿದ್ದ ಕಾರಣ ಅವರಿಬ್ಬರೂ ತುಂಬಾ ಉತ್ಸುಕರಾಗಿದ್ದರು.
ಅಲ್ಲಿಗೆ ಹೋಗುವ ದಿನ ಬಂದೆ ಬಿಟ್ಟಿತು. ನಾವು ಅಮೆರಿಕೆಯಲ್ಲಿ ಮಾಡಿದ್ದ ಪ್ರಥಮ ಬಹು ದೊಡ್ಡ ಪ್ರವಾಸ ಅದಾಗಿತ್ತು. ಅಲ್ಲಿಗೆ ತಲುಪಿದ ಕೂಡಲೇ ರಮಡಾ ಅನ್ನುವ ಹೊಟೇಲ್ನಲ್ಲಿ ತಂಗಿದ್ದೆವು. ಅದು ಅಂತಾರಾಷ್ಟ್ರೀಯ ಗುಣಮಟ್ಟದ ತುಂಬಾ ಪ್ರಸಿದ್ಧ ಹೊಟೇಲ್. ಅಲ್ಲಿಂದ ಮೊಟ್ಟ ಮೊದಲ ದಿನವೇ ಹೋಗಿದ್ದು ಡಿಸ್ನಿ ವರ್ಲ್ಡ್ ಥೀಮ್ ಪಾರ್ಕ್ಗೆ. Walt Disney Company ಯವರು ನಿರ್ವಹಿಸುವ, 25000 ಏಕರೆಗಳಲ್ಲಿ ನಿರ್ಮಾಣಗೊಂಡ ಅತ್ಯಾಕರ್ಷಕ ರೆಸಾರ್ಟ್ ಅದು. ಅದರಲ್ಲಿ ಹಲವಾರು ಆಕರ್ಷಣೆಗಳು ಇವೆ. ಒಂದು ವಾರ ಅಲ್ಲಿಯೇ ಉಳಿದುಕೊಂಡರೂ ಮನಸ್ಸು ತಣಿಯದಷ್ಟು ತಹರೆವಾರಿ ಮೋಜು ಮಸ್ತಿಗಳು ಅಲ್ಲಿವೆ. ಮಕ್ಕಳ ಜೊತೆಗೆ ಅಲ್ಲಿ ಉಳಿದುಕೊಂಡು ಮಜಾ ಮಾಡುವವರು ಎಷ್ಟೋ ಜನ ಇದ್ದಾರೆ. ಒಟ್ಟಿನಲ್ಲಿ ಅದೊಂದು ದೊಡ್ಡ ಜಾತ್ರೆ! ಅಲ್ಲಿನ ಕೆಲವು ಆಕರ್ಷಣೆಗಳಲ್ಲಿ ಲೆಗೊ ಲ್ಯಾಂಡ್, animal kingdom, magic kingdom, Hollywood studios ಇತ್ಯಾದಿ. ಸಾಧ್ಯವಾದಷ್ಟು ಚಟುವಟಿಕೆಗಳಲ್ಲಿ ತೊಡಗಿದ್ದೆವು. ಮಕ್ಕಳು ತುಂಬಾ ಖುಷಿಯಾಗಿದ್ದರು.
ಅಷ್ಟೊತ್ತಿಗೆ ಅಲ್ಲಿನ ತುಂಬಾ ಆಕರ್ಷಣೀಯ ಹಾಗೂ ಭಯಾನಕ ರೈಡ್ಗಳಲ್ಲಿ ಒಂದಾದ ಎವರೆಸ್ಟ್ ರೈಡ್ಗೆ ಹೋಗೋಣ ಅಂತ ಎಲ್ಲರೂ ತಯಾರಾದರು. ಅದೊಂದು ಹಿಮಾಲಯದ ಪ್ರತಿರೂಪದ ಹಿಮಾವೃತ ಅನಿಸುವ ಬೆಟ್ಟಗಳ ನಡುವೆ ಒಂದು ತೆರೆದ ಪುಟ್ಟ ಟ್ರೈನ್ನಲ್ಲಿ ಹೋಗುವ ಐದು-ಹತ್ತು ನಿಮಿಷಗಳ ಪಯಣ. ಅದು ಯಾಕೆ ಭಯಾನಕ ಅಂದರೆ ಒಮ್ಮೆಲೇ ವೇಗವಾಗಿ ಹೋಗುತ್ತೆ, ಮೇಲೆ ಹೋಗುತ್ತೆ, ವೇಗವಾಗಿ ಹಿಂದೆ ಹೋಗುತ್ತೆ.. ನಾನು, ಆಶಾ ಇಬ್ಬರೂ ಈ ತರಹದ ರೈಡ್ಗಳನ್ನು ಅಷ್ಟೊಂದು ಇಷ್ಟ ಪಡುವುದಿಲ್ಲ. ಆದರೂ ಮಗಳಿಗೋಸ್ಕರ ಮನಸ್ಸು ಮಾಡಿದೆವು. ಪ್ರಾರಂಭದಲ್ಲಿ ನಿಧಾನ ಚಲಿಸಿ ಆಮೇಲೆ ವೇಗವನ್ನು ಹೆಚ್ಚಿಸಿ ನಮ್ಮ ಹೃದಯದ ಬಡಿತವನ್ನೂ ಜಾಸ್ತಿ ಮಾಡಿತು! ಹಾಗೆಯೇ ಹಿಮಾಲಯದ ಮೇಲೆ ಏರುತ್ತಾ ಒಂದು ಮುರಿದು ಹೋದ ಹಳಿಯ ಬಳಿ ನಿಂತಿತು. ಅದು ಬೇಕಂತಲೆ ಮಾಡಿದ setup ಅಂತ ಟ್ರೈನ್ನಲ್ಲಿ ಕುಳಿತಿದ್ದ ಎಲ್ಲರಿಗೂ ಗೊತ್ತಿತ್ತು. ಕೂಡಲೇ ಭರ್ ಅಂತ ಹಿಂದೆ ಚಲಿಸಲು ಶುರು ಮಾಡಿತು. ಎಲ್ಲರೂ ಕಿರುಚಿ ತಮ್ಮ ಭಯ ಮಿಶ್ರಿತ ಖುಷಿ ತೋರಿಸುತ್ತಿದ್ದರು. ಒಂದು ಜಾಗದಲ್ಲಿ ಗಕ್ ಅಂತ ನಿಂತುಬಿಟ್ಟಿತು. ಇನ್ನು ಮುಂದೆ ಏನಾಗಬಹುದು ಅಂತ ಕಾಯತೊಡಗಿದೆವು. ಹಾಗೆಯೇ ಎರಡು ನಿಮಿಷ ಕಳೆಯಿತು. ನಮ್ಮ ಗಾಡಿ ಚಲಿಸುವ ಲಕ್ಷಣ ಕಾಣಲಿಲ್ಲ. ಇನ್ನಷ್ಟು ಕ್ಷಣಗಳು ಕಳೆದವು. ಹಿಂದೂ ಹೋಗುತ್ತಿಲ್ಲ ಮುಂದೆಯೂ ಹೋಗುತ್ತಿಲ್ಲ. ಎಲ್ಲರೂ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು. ಏನೋ ತಾಂತ್ರಿಕ ಸಮಸ್ಯೆ ಆಗಿದೆ ಅಂತ ಗೊತ್ತಾಯ್ತು. ಆದರೂ ಇಳಿದು ಹೋಗಲೂ ಆಗಲ್ಲವಲ್ಲ. ನಾವು ಕೂತಾಗಲೇ ಹಿಂದಿನಿಂದ ಇನ್ನೊಂದು ಟ್ರೈನ್ ಬಂದು ಡಿಕ್ಕಿ ಹೊಡೆದುಬಿಟ್ಟರೆ ಏನು ಗತಿ ಎಂಬ ಯೋಚನೆ ಬಂದು ಬೆವರು ಹರಿಯಲು ಶುರು ಆಗಿತ್ತು! ನನ್ನ ಪಕ್ಕದಲ್ಲಿ ಕೂತಿದ್ದ ಒಂದು ಸಣ್ಣ ಹುಡುಗಿ ಆಗಲೇ ಅಳಲು ಶುರು ಮಾಡಿದಳು. ಆಶಾಳ ಕಣ್ಣಲ್ಲೂ ನೀರು ಹರಿಯಲು ಶುರು ಆಗಿತ್ತು. ಅಂತೂ ಕೆಲವು ನಿಮಿಷಗಳ ನಂತರ ಟ್ರೈನ್ ಚಲಿಸಲು ತೊಡಗಿತು. ಕಡೆಗೆ platform ಮುಟ್ಟಿದ ಕೂಡಲೇ ಅದರಿಂದ ಇಳಿದು ನಿಟ್ಟುಸಿರು ಬಿಟ್ಟೆವು.
ತಾಂತ್ರಿಕ ದೋಷದಿಂದಲೇ ಹಾಗೆ ಆಗಿತ್ತು ಅಂತ ನಮಗೆ ಅಲ್ಲಿ ತಿಳಿಸಿದರು. ಅದಕ್ಕೆ ಪ್ರಾಯಶ್ಚಿತ ಎಂಬಂತೆ ಮತ್ತೊಂದು ರೈಡ್ ಹೋಗೋಕೆ ನಮಗೆಲ್ಲರಿಗೂ ಒಂದೊಂದು ಉಚಿತ ಟಿಕೆಟ್ ಕೊಟ್ಟರು! ಅಷ್ಟೆಲ್ಲಾ ಆದ ಮೇಲೆ ಮತ್ತೊಮ್ಮೆ ಹೋಗಲು ನಮಗೇನು ಹುಚ್ಚೆ? ಆದರೆ ಮಗಳು ಮಾತ್ರ ಅತ್ತು ಕರೆದು ಇನ್ನೊಂದು ರೈಡ್ ಹೋಗಿ ಬಂದಳು.
ಇಂತಹ ಅಪಸವ್ಯಗಳು ಭಾರತದಲ್ಲಿ ಮಾತ್ರ ಆಗುತ್ತವೆ ಎಂಬಂತೆ NRI ಗಳು ಮಾತಾಡೋದನ್ನ ಕೇಳಿದ್ದೆ. ಆದರೆ ಅಲ್ಲೂ ಆಗಿತ್ತಲ್ಲ! ಸಮಸ್ಯೆಗಳು, ಅವಘಡಗಳು ಎಲ್ಲ ಕಡೆಗೂ ಆಗುತ್ತವೆ. ಅದರಿಂದ ಹೊರಗೆ ಬಂದಾಗ ಮಾತ್ರ ಆಗುವ ಖುಷಿಯೇ ಬೇರೆ. ಅವತ್ತಿನದು ಪುನರ್ಜನ್ಮ ಆದಂತಹ ಅನುಭವ.
ಅಲ್ಲಿ ನಂತರದ ದಿನಗಳಲ್ಲಿ ಬಾಡಿಗೆಯ ಕಾರ್ನಲ್ಲಿ ಅಡ್ಡಾಟ ಮುಂದುವರಿಸಿದೆವು. ಹಾಗೆಯೇ ಕೊನೆಯ ದಿನ private cruize ಅನ್ನುವ ಒಂದು ದೊಡ್ಡ ಹಡುಗಿನಲ್ಲಿ ಒಂದು ಗಂಟೆ ಪ್ರಯಾಣ ಮಾಡುವ ಅವಕಾಶ ಸಿಕ್ಕಿತು. ಹಡಗು ಸಾಗಿದ್ದಾಗ ಸುತ್ತಲೂ ತುಂಬಾ ರಮಣೀಯ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ನಿಂತಿದ್ದೆ. ಅಲ್ಲಿಲ್ಲಿ ಡಾಲ್ಫಿನ್ಗಳೂ ಕಂಡವು. ಮಧ್ಯದಲ್ಲಿ ಹಡಗಿಗೆ ದಾರಿ ಕೊಡಲು ಬ್ರಿಡ್ಜ್ ಮೇಲಕ್ಕೆ ಹೋಗುವ ದೃಶ್ಯ ಕಂಡು ಬೆರಗಾದೆವು. ದಂಡೆಯಲ್ಲಿ ಒಂದಿಷ್ಟು ದೊಡ್ಡ ದೊಡ್ಡ ಮಹಲುಗಳೂ ಕಂಡವು. ನನ್ನ ಪಕ್ಕದಲ್ಲಿ ನಿಂತಿದ್ದ ಅಮೆರಿಕೆಯ ವ್ಯಕ್ತಿಯೊಬ್ಬ ನನ್ನನ್ನು ಉದ್ದೇಶಿಸಿ, ಇವರಿಗೆಲ್ಲಾ ಇಷ್ಟು ದೊಡ್ಡ ಮನೆಗಳು ಯಾಕೆ ಬೇಕು? ಅಷ್ಟೆಲ್ಲಾ ರೂಂ ಗಳನ್ನು ಯಾಕೆ ಕಟ್ಟಿಸುತ್ತಾರೋ ಏನೋ.. ಅಂತ ತನ್ನ ಅಸಮಾಧಾನ ಹೊರಹಾಕಿದ.
ನಾನು ನಕ್ಕು, ನಿನ್ನ ಮನೆಯಲ್ಲಿ ಎಷ್ಟು ರೂಂ ಗಳಿವೆ ಅಂದೆ.
ಅದಕ್ಕವನು ಮೂರು ಅಂದ.
ಎಷ್ಟು ಜನ ಇದ್ದೀರಿ?
ನಾನು ನನ್ನ ಹೆಂಡತಿ ಇಬ್ಬರೆ..
ಹಾಗಾದರೆ ಮೂರು ರೂಂ ಯಾಕೆ ಬೇಕು? ನಿನಗಿಂತ ಕಡಿಮೆ ರೂಂ ಇರುವವವನು ನಿನ್ನನ್ನು ನೋಡಿ ಹೀಗೆಯೇ ಕೇಳಬಹುದಲ್ಲವೇ? ಅಂದೆ.
ನನ್ನ ವೇದಾಂತ ಅವನಿಗೆ ಇಷ್ಟವಾಗಲಿಲ್ಲ ಅಂತ ಅವನ ಮುಖ ನೋಡಿಯೇ ತಿಳಿಯಿತು! ಅವನು ನನ್ನನ್ನು ಎತ್ತಿ ನೀರಿನಲ್ಲಿ ಒಗೆಯುವಷ್ಟರಲ್ಲಿ ಪುಣ್ಯಕ್ಕೆ ನಾವು ದಡ ಸೇರಿದ್ದೆವು!
(ಮುಂದುವರಿಯುವುದು…)
(ಹಿಂದಿನ ಕಂತು: ಎಲ್ಲರಂಥವನಲ್ಲ ನನ್ನಪ್ಪ..)
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
ಇಷ್ಟವಾಯಿತು.