ನಾನು ಸೋಮ್ಲಾನಾಯಕ್‌ರನ್ನು ಎಷ್ಟು ಹಚ್ಚಿಕೊಂಡಿದ್ದೆ ಅಂದರೆ ಅವರೊಂದಿಗೆ ಕೆಲವೊಮ್ಮೆ ಅವರುಗಳು ಮಲಗುತ್ತಿದ್ದ ಆ ಹೊಂಗೆಯ ಮರದಡಿಯಲ್ಲೇ ಮಲಗುತ್ತಿದ್ದೆ. ಬೇಸಿಗೆಯ ಬೆಳದಿಂಗಳಿನಲ್ಲಿ ಆ ಏಕಾಂತ, ಆ ಹಾಲು ಚೆಲ್ಲಿದಂತ ಬೆಳದಿಂಗಳು, ಹೊಂಗೆ ಸೀಗೆ ಹೂಗಳ ಆಹ್ಲಾದಕರ ಘಮಲು ಇಂದಿಗೂ ಮಾಸಿಲ್ಲ. ಆ ತಂಗಾಳಿ, ಅದರೊಂದಿಗೆ ಅಡ್ಡಾಡುತ್ತಿದ್ದ ಯಾರದೋ ಹೊಲದಲ್ಲಿ ಹಾಕಿರುತ್ತಿದ್ದ ಮಂದೆಯಿಂದ ಕುರಿ, ಮೇಕೆಗಳ ಕೂಗು, ನಾಯಿಗಳ ಬೊಬ್ಬಿರಿಯುವಿಕೆ, ಕುರಿಗಾಹಿಗಳು ಹಾಡುತ್ತಿದ್ದ ಹಾಡುಗಳು, ಜಲ್ಲೆ ಗಾಡಿಯವರ ಅರ್ಥವಾಗದ ಭಾಷೆಯ ಮಾತುಗಳ ಸಂಗೀತ ಮಾಧುರ್ಯ ಇಂದಿಗೂ ಮರೆಯಾಗಿಲ್ಲ.
ಕನ್ನಡದ ಕತೆಗಾರ ಎಸ್. ಗಂಗಾಧರಯ್ಯ ಬರೆಯುವ ಅನುಭವ ಕಥನ “ಕಾಡ ಕಕ್ಕೆ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಜಲ್ಲೆ ಗಾಡಿ ಮತ್ತು ಲಿಂಗಮುದ್ರೆ ಕಲ್ಲು
ನನ್ನ ಅಪ್ಪ ಮತ್ತವರ ತಮ್ಮಂದಿರು ಆಸ್ತಿ ಹಿಸ್ಸೆ ಮಾಡಿಕೊಂಡಾಗ ನಾನು ನನ್ನೂರು ಮಾಕುವಳ್ಳಿಯ ಪ್ರೆöÊಮರಿ ಶಾಲೆಯಲ್ಲಿದ್ದೆ. ಒಂದು ಕಾಲದಲ್ಲಿ ಇದು ಐವತ್ತರವತ್ತು ಮನೆಗಳಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಒಂದು ಪುಟ್ಟ ಹಳ್ಳಿ. ಈಗ ಸುಮಾರು ಇನ್ನೂರು ಮನೆಗಳಿವೆ. ತಾಲ್ಲೂಕು ಕೇಂದ್ರದಿಂದ ಎಂಟು ಕಿಲೋಮೀಟರ್ ದೂರವಿರುವ ಇದು ಈಗ ಆಡು ಭಾಷೆಯಲ್ಲಿ ಮಾಕಳ್ಳಿಯಾಗಿದೆ. ಬಹುತೇಕ ಹಳ್ಳಿಗಳಂತೆ ರೈತಾಪಿ ಬದುಕಿನ ಜೊತೆಗೆ ಪಶುಪಾಲನೆಯೂ ಮುಖ್ಯ ಕಸುಬು. ಹಂಗಾಗಿ ಹಿಂದಿನಂತೆ ಅಲ್ಲದಿದ್ದರೂ ಹಸು, ಎಮ್ಮೆಗಳ ಜೊತೆಗೆ ಮೇಕೆ ಹಾಗೂ ಕುರಿ ಸಾಕಾಣಿಕೆಯೂ ರೈತಾಪಿ ಬದುಕಿನ ಒಂದು ಭಾಗವಾಗಿದೆ. ನನ್ನೂರಿನ ಪಕ್ಕದಲ್ಲಿ ಇವುಗಳನ್ನೆಲ್ಲಾ ಕಾಪಾಡಿಕೊಳ್ಳಲು ಬೇಕಾದ ಪುಟ್ಟ ಕಾಡಿದೆ. ಚಿಕ್ಕಂದಿನಲ್ಲಿ ನನ್ನ ಮನೆಯಲ್ಲಿ ಕೂಡ ನೂರೈವತ್ತರಿಂದ ಇನ್ನೂರು ಕುರಿಗಳು, ಜೊತೆಗೊಂದಿಷ್ಟು ಮೇಕೆಗಳು ಇರುತ್ತಿದ್ದವು. ಊರಾಚೆಯ ಬಳಸಾಕಟ್ಟೆ ಅಂತ ಕರೆಯುತ್ತಿದ್ದ, ಈಗಲೂ ಕರೆಯುವ ಪುಟ್ಟ ಕೆರೆಯ ದಿಬ್ಬದಲ್ಲಿ ಕುರಿ ಗೂಡು ಇತ್ತು. ಆ ಗೂಡಿನ ಸುತ್ತಲೂ ಕಿರುಬ, ತೋಳ ಮುಂತಾದವುಗಳಿಂದ ಕುರಿಗಳನ್ನು ರಕ್ಷಿಸಲು ತರಾದ, ಕಾರೆ, ಜಾಲಿ, ತೊಡರು ಮುಳ್ಳುಗಳಿಂದ ಕೂಡಿದ ಆಳೆತ್ತರದ, ಮಾರಗಲದ ಬೇಲಿ ಇರುತ್ತಿತ್ತು. ಇನ್ನು ಕುರಿ ಗೂಡಿನೊಳಗೆ ಮಲಗಲು ಮಂಚಿಗೆ, ಮಂಚಿಗೆಯ ಪಕ್ಕದಲ್ಲಿ ಎಳೆಯ ಮರಿಗಳ ಗುಬ್ಬ, ಒಂದೆರಡು ಬಂದ್ರಿಕೆ ಸೊಪ್ಪಿನ ಬರಲುಗಳು ಇರುತ್ತಿದ್ದವು. ಗೂಡನ್ನು ಹೊಕ್ಕ ಕೂಡಲೇ ಕುರಿ ಪಿಸಿಗೆ, ಗಂಜಲಗಳ ಕಮ್ಮನೆಯ ವಾಸನೆ ಮೂಗಿಗಡರುತ್ತಿತ್ತು. ಈಗ ಕುರಿ ಗೂಡು ಇದ್ದ ದಿಬ್ಬವೂ ಇಲ್ಲ. ಕುರಿ ಗೂಡೂ ಇಲ್ಲ. ಕೆರೆಯ ಹೂಳೆತ್ತುವ ನೆಪದಲ್ಲಿ ದಿಬ್ಬ ಕರಗಿ ಹೋಗಿದೆ. ನಮ್ಮ ಮನೆಯಲ್ಲಿ ಕುರಿಗಳ ಸಾಕಾಣಿಕೆಯೂ ನಿಂತು ಹೋಗಿದೆ. ಆದರೆ ಆ ದಿಬ್ಬ, ಆ ಗೂಡು ಮನದ ಕಣ್ಣಿನಲ್ಲಿ ಆಗಾಗ ಹಸಿರಾಗುತ್ತಿರುತ್ತದೆ. ಅದರೊಳಗಿನ ಆ ಘಮಲು ಆಗಾಗ ಮೂಗಿಗೆ ಬಡಿಯುತ್ತಿರುತ್ತದೆ.
ಚಿಕ್ಕಂದಿನ ದಿನಗಳಲ್ಲಿ ಬೆಳಗು ಬೈಗುಗಳಲ್ಲಿ ದನ ಕುರಿ ಮೇಕೆಗಳು, ಮತ್ತವುಗಳ ಕರುಗಳು, ಮರಿಗಳು ಮಾಡುತ್ತಿದ್ದ ಸದ್ದುಗಳು ನನ್ನೂರಿನ ಬೀದಿಗಳಲ್ಲಿ ದಿನವೂ ಕೇಳುತ್ತಿದ್ದ ಬೇಸರವೇ ಆಗದ ಹಾಡುಗಳಾಗಿರುತ್ತಿದ್ದವು. ಒಂಚೂರು ದೊಡ್ಡವನಾದ ಮೇಲೆ ಅಂದರೆ ಮಿಡ್ಲೂಸ್ಕೂಲ್‌ಗೆ ಹೋಗುತ್ತಿದ್ದ ಹೊತ್ತಲ್ಲಿ ಊರಿನ ಬೀದಿಯಲ್ಲಿ ದನ ಕರುಗಳು ಇಡುತ್ತಿದ್ದ ಸಗಣಿಯನ್ನು ಚಿಕ್ಕ ಮಂಕರಿಯೊಂದಕ್ಕೆ ತುಂಬಿಸಿ ತಂದು ಮನೆಯ ಪಕ್ಕದ ಇಲ್ಲಾ ಮನೆಯ ಹಿಂದಿರುತ್ತಿದ್ದ ತಿಪ್ಪೆಗಳಿಗೆ ಹಾಕುವುದು ಹಾಗೂ ಜೊತೆಗೆ ಹಿತ್ತಲಿನಲ್ಲಿರುತ್ತಿದ್ದ ಕೈ ಗುಡಿಯಿಂದ ಪುಟಾಣಿ ಗಡಿಗೆಗಳಲ್ಲಿ ನೀರನ್ನು ಮಗೆದು ತರಕಾರಿ ಮಡಿಗಳಿಗೆ ನನ್ನಂಥ ವಯಸ್ಸಿನ ಮಕ್ಕಳ ಕೆಲಸವಾಗಿರುತ್ತಿತ್ತು. ನನ್ನ ವಾರಿಗೆಯವರಿಗೆ ಹಿಂಗೆ ಶುರುವಾದ ಸಣ್ಣಪುಟ್ಟ ಕೆಲಸಗಳು ಅವರನ್ನು ಹೊಲ, ತೋಟ ಹಾಗೂ ಒಟ್ಟಾರೆ ಕೃಷಿ ಬದುಕಿಗೆ ತೊಡಗಿಕೊಳ್ಳುವಂತೆಯೂ ಹಾಗೂ ರೈತಾಪಿ ಬದುಕಿನ ಬಗ್ಗೆ ಪ್ರೀತಿ ಹುಟ್ಟುವುದಕ್ಕೆ ಮೂಲ ಕಾರಣಗಳಾಗಿದ್ದವು. ಜೊತೆಗೆ ಮನೆಯಲ್ಲಿ ದೊಡ್ಡವರು ಮಾಡುತ್ತಿದ್ದ ರೈತಾಪಿ ಕೆಲಸಗಳಲ್ಲಿ ಹುಮ್ಮಸ್ಸಿನಿಂದ ತೊಡಗಿಕೊಳ್ಳುವಂತೆಯೂ ಮಾಡುತ್ತಿದ್ದವು.
ಅಪ್ಪನನ್ನು ನಾನು ಅಯ್ಯ ಅಂತಲೇ ಕರೆಯುತ್ತಿದ್ದೆ. ಅಯ್ಯನ ಪಾಲಿಗೆ ಬಂದಿದ್ದ ಹೊಲದಲ್ಲಿ ಸಮಪಾಲಿದ್ದರೂ ತೋಟದಲ್ಲಿ ಮಾತ್ರ ಕಡಿಮೆಯಾಗಿತ್ತು. ತೆಂಗಿನ ಮರಗಳ ಜೊತೆಗೆ ಆವುಗಳ ವಾರಾಸಿಗೇ ಇದ್ದ ಪಾಳು ಜಮೀನೂ ಸೇರಿಕೊಂಡಿತ್ತು. ಅದು ಪಾಳೆಂದರೆ ಬರೀ ಪಾಳಲ್ಲ. ಒಂದು ರೀತಿಯಲ್ಲಿ ತಗ್ಗು ಪ್ರದೇಶವಾಗಿತ್ತು. ಈ ಪಾಳಿನ ಪಕ್ಕದಲ್ಲೇ ಅದಕ್ಕೆ ಹೊಂದಿಕೊಂಡಂತೆಯೇ ನನ್ನೂರಿನ ಅಜ್ಜನ ಕೆರೆ ಎಂದು ಕರೆಯಲ್ಪಡುವ ಕೆರೆ. ಅದರಲ್ಲಿ ಹೆಚ್ಚೂ ಕಡಿಮೆ ತುಂಬಿರುತ್ತಿತ್ತು. ಎಲ್ಲೋ ಅಪರೂಪಕ್ಕೆ ಕೆರೆಯಲ್ಲಿ ನೀರು ಬಿಡುತ್ತಿತ್ತು. ಆಗ ರೈತರು ಕೆರೆಯ ಗೋಡು ಫಲವತ್ತಾಗಿರುತ್ತೆ ಅನ್ನುವ ಕಾರಣಕ್ಕೆ ತಮ್ಮ ಹೊಲ, ತೋಟಗಳಿಗೆ ಆ ಗೋಡು ಮಣ್ಣನ್ನು ಹೊಡೆದುಕೊಳ್ಳುತ್ತಿದ್ದರು. ನಮ್ಮ ಪಾಳು ಭೂಮಿ ಕೆರೆಗೆ ಹೊಂದಿಕೊಂಡಂತೆ ಇದ್ದುದ್ದರಿಂದ ಕೆರೆ ತುಂಬಿದಾಗಲೆಲ್ಲಾ ಸೊಂಟದೆತ್ತರದ ನೀರು ನಿಂತು ಬಿಡುತ್ತಿತ್ತು. ಹಂಗಾಗಿ ಅಪ್ಪ ಅಲ್ಲಿ ತೋಟವನ್ನು ಎಬ್ಬಿಸುವ ಸಲುವಾಗಿ ಕಟ್ಟುತ್ತಿದ್ದ ತೆಂಗಿನ ಸಸಿಗಳೆಲ್ಲಾ ಕೆರೆ ತುಂಬಿದಾಗ ನಿಂತ ನೀರಿನಿಂದಾಗಿ ನೀರಿಡಿದು ಹೋಗಿಬಿಡುತ್ತಿದ್ದವು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ತನ್ನ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂಗೆ ಆಗಿಬಿಡುತ್ತೆ ಅನ್ನುವುದು ಅಯ್ಯನಿಗೆ ಮನವರಿಕೆಯಾಯ್ತು.
ಆ ಕಾರಣಕ್ಕೆ ಆ ತಗ್ಗಿನ ಜಾಗಕ್ಕೆ ಮಣ್ಣು ಹೊಡೆಸಿ ಭರ್ತಿ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿತ್ತು ಅಯ್ಯ. ಆದರೆ ಕೆಲವು ವರ್ಷಗಳ ಹಿಂದಷ್ಟೇ ಪಾಲು ಮಾಡಿಕೊಂಡಿದ್ದ ಅಯ್ಯ ಎತ್ತುಗಳು ಇದ್ದರೂ ಅವುಗಳಿಗಾಗಿ ಎತ್ತಿನ ಗಾಡಿಯನ್ನು ಮಾಡಿಸಿರಲಿಲ್ಲ. ಅದು ಆ ಕಾಲಕ್ಕೆ ತುಂಬಾ ದುಬಾರಿಯ ಸಂಗತಿಯೂ ಆಗಿತ್ತು. ಇನ್ನು ಕೂಲಿ ಎತ್ತಿನ ಗಾಡಿಗಳಿಂದ ಮಣ್ಣು ಹೊಡೆಸುವುದೂ ದುಸ್ತರವಾಗಿತ್ತು. ಆದ್ದರಿಂದ ಇದು ಒಂದೇ ಸಲಕ್ಕೆ ಆಗದ ಮಾತು ಅಂತ ಯಾವಾಗ್ಯಾವಾಗ ಸಾಧ್ಯವಾಗುತ್ತೋ ಆವಾಗಾವಾಗ ಕೆರೆಯಿಂದ ಮಣ್ಣು ಹೊಡೆಸುವ ತೀರ್ಮಾನಕ್ಕೆ ಬಂದಿತ್ತು. ಆ ಕಾಲದಲ್ಲಿ ಎತ್ತಿನ ಗಾಡಿಗಳಿಗಿಂತ ತುಂಬಾ ಸಸ್ತವಾಗಿ ಈ ಕೆಲಸವನ್ನು ಮಾಡುತ್ತಿದ್ದದ್ದು ಜಲ್ಲೆ ಗಾಡಿಗಳು. ಜಲ್ಲೆ ಗಾಡಿ ಒಂದು ಪುಟ್ಟ ಎತ್ತಿನ ಗಾಡಿ. ಪುಟಾಣಿ ಚಕ್ರಗಳು. ಒಂದು ಸಣ್ಣ ಮೂಕು ಮತ್ತದಕ್ಕೆ ಹೊಂದಿಕೊಂಡಂತೆ ಜಲ್ಲೆಯನ್ನು ಕೂರಿಸುವ ಸಲುವಾಗಿ ಅಚ್ಚಿನ ಮೇಲೆ ಇರ್ಚಿಮರ ಇರುತ್ತಿತ್ತು. ಅದರ ಮೇಲೆ ಜಲ್ಲೆ ಕೂರುವಷ್ಟು ದೊಡ್ಡದೊಂದು ಸಿಂಬೆ. ಆ ಸಿಂಬೆಯನ್ನು ತೆಂಗಿನ ಗರಿ ಮತ್ತು ಈಚಲು ಗರಿಗಳನ್ನು ಸೀಳಿ ಸಿಂಬೆ ಸುತ್ತಿ ಅವುಗಳು ಅಲುಗದಂತೆ ದಪ್ಪ ಹುರಿಗಳಿಂದ ಬಿಗಿದಿರುತ್ತಿತ್ತು. ಜಲ್ಲೆಯನ್ನು ಬಿದಿರು ಅಥವಾ ದಪ್ಪ ಈಚಲು ಕಡ್ಡಿಗಳಿಂದ ಹೆಣೆದಿರುತ್ತಿತ್ತು. ಅದು ಅಬ್ಬಬ್ಬಾ ಅಂದರೆ ಚಿಕ್ಕ ಮಂಕರಿಯಲ್ಲಿ ಹತ್ತು ಮಂಕರಿಯಷ್ಟು ಮಣ್ಣನ್ನು ಹಿಡಿಸುತ್ತಿತ್ತು. ಇವುಗಳಲ್ಲಿ ಒಂಟಿ ಎತ್ತಿನ ಜಲ್ಲೆ ಗಾಡಿಗಳೂ ಜೋಡೆತ್ತಿನ ಜಲ್ಲೇ ಗಾಡಿಗಳೂ ಇದ್ದವು. ನಮ್ಮ ತೋಟಕ್ಕೆ ಬಂದ ಗಾಡಿಗಳೆಲ್ಲವೂ ಜೋಡೆತ್ತಿನವುಗಳಾಗಿದ್ದವು. ಬಡವರಾಧಾರಿಯಾಗಿರುತ್ತಿದ್ದ ಈ ಜಲ್ಲೆ ಗಾಡಿಗಳು ಆಗ ಹಳ್ಳಿಗಾಡುಗಳಲ್ಲಿ ಸಾಮಾನ್ಯವಾಗಿ ನೋಡ ಸಿಗುತ್ತಿದ್ದವು. ಅಂಥ ಜಲ್ಲೆ ಗಾಡಿಗಳ ಯಜಮಾನರುಗಳೂ ಬಡವರೇ ಆಗಿರುತ್ತಿದ್ದರು. ಕೆಲವು ಹಳ್ಳಿಗಳಲ್ಲಿ ಇಂಥ ಜಲ್ಲೆ ಗಾಡಿಗಳು ಯಾವುದಾದರೂ ಊರಿಗೆ ಕೆಲಸಕ್ಕೆ ಹೋಗಬೇಕಾದರೆ ಬಹುತೇಕ ಒಟ್ಟೊಟ್ಟಿಗೇ ಹೋಗುತ್ತಿದ್ದವು.
ನಮ್ಮ ಪಾಳು ನೆಲವನ್ನು ಇಂಥ ಜಲ್ಲೆ ಗಾಡಿಗಳೇ ಅರ್ಧಕ್ಕಿಂದ ಹೆಚ್ಚು ಭರ್ತಿ ಮಾಡಿದ್ದವು. ಚಿಕ್ಕನಾಯಕನಹಳ್ಳಿಯ ಪಕ್ಕದಲ್ಲಿ ತಾಂಡ್ಯವೊಂದಿತ್ತು. ಈಗಲೂ ಇದೆ. ಅಯ್ಯ ಇಂಥ ಜಲ್ಲೆ ಗಾಡಿಗಳಿಂದ ಮಣ್ಣು ಹೊಡೆಸಲು ತೀರ್ಮಾನಿಸುವ ಹೊತ್ತಿಗೆ ನಾನಾಗಲೇ ಆರನೆಯ ತರಗತಿಯಲ್ಲಿದ್ದೆ. ಮಳೆಗಾಲ ಕೈಕೊಟ್ಟಿದ್ದರಿಂದ ಆ ವರ್ಷ ನಮ್ಮ ಜಮೀನಿನ ಪಕ್ಕದ ಅಜ್ಜನ ಕೆರೆ ಪೂರಾ ತಳ ತೋರಾಕಿಕೊಂಡಿತ್ತು. ಹಂಗಾಗಿ ಜನ ತಂತಮ್ಮ ಶಕ್ತಿಯಾನುಸಾರ ಕೆರೆಯಿಂದ ಮಣ್ಣು ಹೊಡೆಯಲಾರಂಭಿಸಿದ್ದರು. ಅದೊಂದು ದಿನ ಬೆಳಬೆಳಗ್ಗೆಯೇ ನಾನು ಕೊಟ್ಟಿಗೆಯ ಸಗಣಿಯನ್ನು ಚಿಕ್ಕ ಮಂಕರಿಯೊಂದರಲ್ಲಿ ತುಂಬಿಕೊಂಡು ಹೊಲಕ್ಕೆ ಹಾಕಿ ಬರುವಷ್ಟರಲ್ಲಿ ತಾಂಡ್ಯದಿಂದ ಬಂದಿದ್ದ ಜಲ್ಲೆ ಗಾಡಿಗಳ ಮೂವರು ಯಜಮಾನರು ನಮ್ಮ ತೋಟದ ಮನೆಯ ಜಗಲಿಯಲ್ಲಿ ಕೂತಿದ್ದರು. ಆ ಹೊತ್ತಿಗಾಗಲೇ ಅವರು ಮಣ್ಣು ಹೊಡೆಯಬೇಕಾದ ಪಾಳು ನೆಲವನ್ನು ಹಾಗೂ ಕೆರೆಯೊಳಗಿನಿಂದ ಮಣ್ಣನ್ನು ಹೇರಿಕೊಂಡು ಬರಲು ಮಾಡಬೇಕಾಗಿದ್ದ ಜಾಡಿನ ಜಾಗವನ್ನು ನೋಡಿಕೊಂಡು ಬಂದಿದ್ದರು. ಅಯ್ಯ ಮತ್ತು ಅವರುಗಳ ನಡುವೆ ವ್ಯಾಪಾರದ ಚೌಕಾಸಿ ನಡೆಯುತ್ತಿತ್ತು. ಕಡೆಗೆ ಒಂದು ಜಲ್ಲೆಗೆ ನಾಲ್ಕಾಣೆಯಂತೆ, ಅಂದರೆ ಇಪ್ಪತೈದು ಪೈಸೆಯಂತೆ ಮಾತು ಪೈಸಲ್ ಆದ ನೆನಪಿದೆ.
ಮಾರನೆಯ ದಿನ ನನಗಿನ್ನೂ ಎಚ್ಚರವಾಗುವುದಕ್ಕೂ ಮುನ್ನವೇ ನಮ್ಮ ತೋಟದ ಮನೆಯ ಮುಂದಿ ತೋಟದ ಪಟ್ಟೆಯಲ್ಲಿ ಜಮಾಯಿಸಿದ್ದ ಅವರಾಗಲೇ ಮಾತಿಗಿಳಿದಿದ್ದರು. ಅವರ ಮಾತುಗಳು ಕೇಳಿಸುತ್ತಿದ್ದವು. ಆದರೆ ಅವರಾಡುವ ಮಾತು ಮಾತ್ರ ಅರ್ಥವಾಗುತ್ತಿರಲಿಲ್ಲ. ಯಾರಿರಬಹುದು ಅಂತ ಪಡಸಾಲೆಯ ತುಂಡು ಗೋಡೆಗೆ ಕೂರಿಸಿದ್ದ ಫ್ರೇಮ್ ಸೆಟ್ಟಿನೊಳಗಡೆಯಿಂದ ನೋಡಿದರೆ ಆವತ್ತು ಬಂದಿದ್ದ ಅದೇ ಆ ಮೂರು ಜನ ಮತ್ತವರೊಂದಿಗೆ ಇನ್ನೂ ಹಲವು ಮಂದಿ. ಅವರುಗಳ ಜಲ್ಲೆ ಗಾಡಿಗಳು ಮನೆಯ ಮುಂದಲ ಪಟ್ಟೆಯಲ್ಲಿ ನಿಂತಿದ್ದವು. ಅವುಗಳಿಗೆ ಹೂಡಿದ್ದ ಎತ್ತುಗಳ ಕೊರಳು ಬಿಚ್ಚಿ ಅವುಗಳೆದುರಿಗೆ ಒಂದೊಂದು ತೆಕ್ಕೆ ಒಣ ಹುಲ್ಲನ್ನು ಹಾಕಿದ್ದರು. ಆ ಎತ್ತುಗಳೆಲ್ಲಾ ಹುಲ್ಲು ತಿನ್ನುವ ಕಾಯಕದಲ್ಲಿ ಮುಳುಗಿದ್ದವು. ಅವು ಎದ್ದೆತ್ತುಗಳಲ್ಲ. ಒಂದು ರೀತಿಯ ಮಟ್ಟದ ಗಿಡ್ಡಗಳು. ಅವುಗಳಲ್ಲಿ ಒಂದೆರಡು ಬಡಕಲು ಬಿಟ್ಟರೆ ಮಿಕ್ಕವುಗಳೆಲ್ಲಾ ಗಟ್ಟಿ ಮುಟ್ಟಾಗಿದ್ದವು. ಆ ಗಿಡ್ಡಗಳು ಅವುಗಳ ಪಕ್ಕದಲ್ಲಿದ್ದ ಜಲ್ಲೆ ಗಾಡಿಗಳನ್ನು ನೋಡುತ್ತಲೇ ಒಂಥರಾ ರೋಮಾಂಚನವಾದ ನಾನು ಎದ್ದವನೇ ಸೀದಾ ಅವರುಗಳು ಮಾತಾನಾಡಿಕೊಂಡು ನಿಂತಿದ್ದ ಗುಂಪಿನತ್ತ ಚಂಗನೆ ಹಾರಿದೆ. ಅವರು ಮಾತನಾಡುತ್ತಿರುವ ಭಾಷೆ ಅರ್ಥವಾಗದಿದ್ದರೂ ಪೆಕರು ಪೆಕರಾಗಿ ಅವರುಗಳನ್ನೇ ನೋಡುತ್ತಾ ನಿಂತೆ. ನನ್ನ ಪೆಕರು ಮೂತಿಯನ್ನು ಕಂಡ ಆ ಗುಂಪಿನಲ್ಲಿ ಒಬ್ಬರು ನನ್ನತ್ತ ಪ್ರೀತಿಯ ಭಾವ ಬೀರಿ ಹತ್ತಿರ ಬಂದು ತಲೆ ನೇವರಿಸಿದರು. ಅವರೊಳಗೆಲ್ಲಾ ಎತ್ತರಕ್ಕಿದ್ದ, ದುಂಡು ಮುಖದ, ಚೂಪು ಮೂಗಿನ, ಹುರಿ ಮೀಸೆಯ, ಗುಂಗುರು ತಲೆಗೂದಲಿಗೆ ಜಿನುಗುವಂತೆ ಹರಳೆಣ್ಣೆ, ಪಟಾಪಟಿ ಶರ್ಟನ್ನು ಹಾಕಿಕೊಂಡಿದ್ದ ಆ ವ್ಯಕ್ತಿಯ ಕಣ್ಣುಗಳು ಆತ್ಮೀಯತೆಯಿಂದ ಮಿಂದೆದ್ದಂತೆ ಭಾಸವಾಗುತ್ತಿದ್ದವು. ಆ ಚಣದಿಂದ ಮುಂದಿನ ಎರಡು ತಿಂಗಳುಗಳ ಕಾಲ, ಅಂದರೆ ನಮ್ಮ ತೋಟಕ್ಕೆ ಮಣ್ಣು ಹೊಡೆಯುತ್ತಿದ್ದ ಚಣದವರೆಗೂ ನನಗೆ ಆ ವ್ಯಕ್ತಿ ತುಂಬಾ ಪ್ರೀತಿಯವರಾಗಿಬಿಟ್ಟಿದ್ದರು. ಹೆಸರು ಸೋಮ್ಲಾನಾಯಕ್. ಸುಮಾರು ಮುವ್ವತ್ತು ವರ್ಷದ ಆಸುಪಾಸಿನಲ್ಲಿದ್ದ ಸೋಮ್ಲಾನಾಯಕ್‌ನ ಜಲ್ಲೆ ಗಾಡಿ ಅಷ್ಟೂ ದಿನ ನನ್ನ ನೆಚ್ಚಿನ ಬಂಡಿಯಾಗಿತ್ತು.
ನನಗಾಗ ಬೇಸಿಗೆ ರಜೆಯಿತ್ತು. ಸ್ಕೂಲಿನಲ್ಲಿ ಪಾಸು ಫೇಲು ಹೇಳಿಯಾಗಿತ್ತು. ನಾನು ಆರರಿಂದ ಏಳಕ್ಕೆ ಪಾಸಾಗಿದ್ದೆ. ಬೆಳಗಿನ ಜಾವಕ್ಕೆ ಗಾಡಿಗಳನ್ನು ಹೂಡುತ್ತಿದ್ದ ಅವರು ಬಿಸಿಲು ರಂಗಾಗತೊಡಗುವ ಹೊತ್ತಿಗೆ ಕೊರಳು ಬಿಚ್ಚುತ್ತಿದ್ದರು. ನಾನು ಏಳುವ ಹೊತ್ತಿಗಾಗಲೇ ಅವರುಗಳಾಗಲೇ ಮಣ್ಣು ಹೊಡೆಯುತ್ತಿದ್ದರೂ ಎದ್ದವನೇ ಸೋಮ್ಲಾನಾಯಕ್ ಗಾಡಿಯತ್ತ ಓಡಿಬಿಡುತ್ತಿದ್ದೆ. ಹಂಗಾಗಿ ಕೊಟ್ಟಿಗೆಯಲ್ಲಿ ಸಗಣಿ ಬಾಚುವ ಕೆಲಸ ನನ್ನ ಅಜ್ಜಿಯ ಹೆಗಲಿಗೆ ಬೀಳುತ್ತಿತ್ತು. ಅದು ಅಯ್ಯನಿಗೆ ಗೊತ್ತಾಗಲೂ ಸಾಧ್ಯವಿರಲಿಲ್ಲ. ಏಕೆಂದರೆ ಅವರ ಜೊತೆಗೇ ಎದ್ದು ಅವರು ಹೊಡೆಯುತ್ತಿದ್ದ ಒಂದೊಂದು ಗುಪ್ಪೆಗೂ ಒಂದೊಂದು ಹಸಿ ಈಚಲು ಗರಿಯನ್ನು ಸಿಗಿಸುವ ಕೆಲಸದಲ್ಲಿರುತ್ತಿತ್ತು. ಬೆಳಗಿನ ಕೆಲಸ ಮುಗಿದಾಗ ಆ ಒಂದೊಂದೇ ಗುಪ್ಪೆಗಳನ್ನೂ ಎಣಿಸಿ ನೋಟ್‌ಬುಕ್ಕೊಂದರಲ್ಲಿ ಗುರುತಾಕುತ್ತಿತ್ತು. ನಾನು ಅತ್ತ ಕಡೆ ಹೋಗುವಾಗಲೆಲ್ಲಾ ಆ ಗುಪ್ಪೆಗಳನ್ನು ಹಾರಿಕೊಂಡು ಓಡಾಡುತ್ತಿದ್ದೆ.
ಕೆರೆಯೊಳಗೆ ಮಣ್ಣನ್ನು ಕಡಿಯಲೆಂದೇ ನಾಲ್ಕು ಮಂದಿ ಇರುತ್ತಿದ್ದರು. ಅವರು ಹತ್ತು ಗಡಿಗಳಿಗೂ ಸಮನಾಗಿ ತುಂಬುತ್ತಿದ್ದರು. ನನಗೆ ಸೋಮ್ಲಾನಾಯಕ್ ಬಗ್ಗೆ ಇದ್ದ ಅಪಾರ ಪ್ರೀತಿಗೆ ಅವರು ನನಗೆ ಆ ಜಲ್ಲೆ ಗಾಡಿಯನ್ನು ಹೊಡೆಯಲು ಕೊಡುತ್ತಿದ್ದದ್ದು. ಕೆರೆಯೊಳಗಿಂದ ತುಂಬಿದ ಗಾಡಿಯನ್ನು ಹೊಡೆಯಲು ಕೊಟ್ಟರೆ, ಜಲ್ಲೆಯನ್ನು ಬಗ್ಗಿಸಿದ ಮೇಲೆ ಖಾಲಿ ಜಲ್ಲೆಯನ್ನು ಮೂಕಿನ ಕಡೆಗೆ ವಾಲಿಸಿ ಅದರೊಳಕ್ಕೆ ಕೂರಿಸಿ ಕೆರೆಯೊಳಕ್ಕೆ ಹೊಡೆದುಕೊಂಡು ಹೋಗಲು ಕೊಡುತ್ತಿದ್ದರು. ಅವರು ಮಾತ್ರ ಎರಡೂ ಕಡೆಯೂ ಗಾಡಿಯ ಪಕ್ಕದಲ್ಲಿ ನಡೆದು ಬರುತ್ತಿದ್ದರು. ಜಲ್ಲೆಯನ್ನು ಸುರಿಯುವಾಗ ಮುಂಚೆ ಹೊಡೆದಿದ್ದ ಗುಪ್ಪೆಗಳಿಗೆ ಒತ್ತಿದಂತೆ ಸುರಿಯಬೇಕಿತ್ತು. ಒಮ್ಮೊಮ್ಮೆ ಎತ್ತುಗಳು ನಾನು ಹೇಳಿದಂತೆ ಕೇಳುತ್ತಿರಲಿಲ್ಲ. ಆಗ ಸೋಮ್ಲಾನಾಯಕ್ ಅದರ ಮೂಗುದಾರ ಹಿಡಿದು ಗದರಿಸಿ ಸರಿಯಾದ ತಾವಿಗೆ ಹೋಗುವಂತೆ ಮಾಡುತ್ತಿದ್ದರು. ಈ ಅನುಭವ ಮುಂದೆ ನಮ್ಮ ಮನೆಯ ಎತ್ತಿನ ಗಾಡಿಯಲ್ಲಿ ನಾನು ಒಬ್ಬನೇ ಮಣ್ಣು ಮತ್ತು ಗೊಬ್ಬರವನ್ನು ಹೊಡೆಯಲು ನೆರವಾಗಿತ್ತು.

ಮಣ್ಣು ಅಗೆಯುವವರೂ ಸೇರಿ ಅವರು ಒಟ್ಟು ಹದಿನಾರು ಮಂದಿ ಇದ್ದರು. ಅವರಲ್ಲಿ ಇಬ್ಬರದು ಪೂರಾ ಅಡಿಗೆಯ ಕೆಲಸ. ಹೊತ್ತು ಚುಮುಗುಡುವ ಹೊತ್ತಿಗಾಗಲೇ ಅವರ ತಿಂಡಿ ರೆಡಿಯಾಗಿರುತ್ತಿತ್ತು. ಬಹುತೇಕ ಚಿತ್ರಾನ್ನ, ಪುರಿ ಉಸ್ಲಿಗಳಿದ್ದರೆ ಒಂದೆರಡು ದಿನ ರಾಗಿ ರೊಟ್ಟಿ ಇರುತಿತ್ತು. ಹಾಸುಗಲ್ಲೊಂದರ ಮೇಲೆ ಖಾರ ಅರೆದು ಮಧ್ಯಾಹ್ನದ ಹೊತ್ತಿಗೆ ಸಾರಿನ ಘಮಘಮ ಅತ್ತ ಸುಳಿದವರ ಮೂಗಿಗಡರುತ್ತಿತ್ತು. ಮಣ್ಣು ಹೊಡೆಯುತ್ತಿದ್ದ ಪಾಳಿನಿಂದ ಒಂದು ಸ್ವಲ್ಪ ದೂರದಲ್ಲಿ ಪಾಳಿಗಿಂತಲೂ ತಗ್ಗಾದ ಹಳ್ಳದಂಥ ಜಾಗವಿತ್ತು. ಅದರಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿತ್ತು. ಒಂಚೂರು ನೀರು ಇಳಿಯುತ್ತಲೇ ಅಲ್ಲಿ ದೊಡ್ಡಿ ಬತ್ತ ಅಥವಾ ಬರಬತ್ತವನ್ನು ಹಾಕಲಾಗುತ್ತಿತ್ತು. ಆ ಜಾಗ ಬೇಸಿಗೆಯಲ್ಲಿ ಮುಸುಕಿನ ಜೋಳಕ್ಕೆ ಅನುವು ಮಾಡಿಕೊಡುತ್ತಿತ್ತು.
ಆಗಿನ್ನೂ ನನ್ನ ಅಜ್ಜ ಬದುಕಿದ್ದರು. ಜಲ್ಲೆ ಗಾಡಿಯವರು ತಿನ್ನುಣ್ಣುವವರು ಅಂತ ತಿಳಿಯುತ್ತಲೇ ಅವರುಗಳಿಗೆ ಯಾವುದೇ ಕಾರಣಕ್ಕೂ ತೋಟದೊಳಗೆ ಮಾಂಸ ಮಡ್ಡಿಯನ್ನು ಮಾಡಕೂಡದು ಅಂತ ಎಚ್ಚರಿಸಿದ್ದರು. ಅದು ಲಿಂಗಮುದ್ರೆ ಜಾಗವೆಂದೂ ಹಾಗೆ ಮಾಂಸ ಮಡ್ಡಿ ಮಾಡಿದರೆ ರಕ್ತ ಕಾರಿಕೊಂಡು ಸಾಯುತ್ತಾರೆಂದೂ ಹೇಳಿತ್ತು. ಅದಕ್ಕೆ ನಿದರ್ಶನವಾಗಿ ಅಜ್ಜ ಅವರು ಅಡಿಗೆ ಮಾಡಿಕೊಳ್ಳುತ್ತಿದ್ದ ಜಾಗದಿಂದ ಕೊಂಚ ದೂರದಲ್ಲಿದ್ದ ನೆಡುಗಲ್ಲಿನಂಥದ್ದೊಂದನ್ನು ತೋರಿಸಿತ್ತು. ಅದು ಸುಳ್ಳು ಅಂತ ಗೊತ್ತಾಗಲೂ ನನಗೆ ಸುಮಾರು ವರ್ಷಗಳೇ ಬೇಕಾದವು. ಆ ಕಾರಣಕ್ಕೆ ಅವರು ಇದ್ದಷ್ಟೂ ದಿನ ಒಂದು ದಿನವೂ ಮಾಂಸದ ಅಡಿಗೆ ಇರಲಿ ಒಂದು ಮೊಟ್ಟೆಯನ್ನು ಬೇಯಿಸಿರಲಿಲ್ಲ. ಅವರೆಲ್ಲರೂ ಮಾಂಸ ಪ್ರಿಯರು. ಅವರಿಗೆ ವಾರದಲ್ಲಿ ಒಂದೆರಡು ದಿನವಾದರೂ ಮಾಂಸದ ಊಟ ಇರಲೇಬೇಕಿತ್ತು. `ದುಡ್ಯಾದೇ ತಿನ್ನಾಕೆ ಅಂತದ್ರಾಗೆ ಹಿಂಗೆ ಬಾಯಿ ಕಟ್ಕೆಂಡು ಯಾಕಿರ‍್ಬೇಕು,’ ಅಂತ ಗೊಣಗಿಕೊಳ್ಳುತ್ತಿದ್ದರು. ಆ ನೆಪದಲ್ಲಿ ಕೆಲವರು ಮಾಂಸದ ಉತ್ಕಟ ಆಸೆಯಲ್ಲಿ ಒಂದೆರಡು ದಿನ ರಜೆ ಮಾಡಿ ಊರಿಗೆ ಹೋಗಿ ಬರುತ್ತಿದ್ದರು. ಸೋಮ್ಲಾನಾಯಕ್ ಕೂಡಾ ಆಗಾಗ ಊರಿಗೆ ಹೋಗಿ ಬರುತ್ತಿದ್ದರು. ಆವಾಗೆಲ್ಲಾ ಅವರು ಜಲ್ಲೆಯೊಳಗೆ ಕೂತು ತನ್ನ ಗಾಡಿಯಲ್ಲೇ ಹೋಗುತ್ತಿದ್ದರು.
ಈ ಬರಬತ್ತ ಮತ್ತು ಮುಸುಕಿನ ಜೋಳ ಹಾಕುತ್ತಿದ್ದ ಹಳ್ಳದ ಪಕ್ಕದಲ್ಲಿ ಒಂದು ಪುರಾತನ ಹೊಂಗೆ ಮರವಿತ್ತು. ಆ ಹೊಂಗೆಮರಕ್ಕೆ ಅಷ್ಟೇ ಪುರಾತನ ಅನಿಸುವಂಥ ಸೀಗೆ ಮೆಳೆಯೊಂದು ಎಣೆದುಕೊಂಡಿತ್ತು. ಆ ಸೀಗೆ ಕಾಯಿಗಳು ಕಡು ಕೆಂಪು ಬಣ್ಣಕ್ಕಿರುತ್ತಿದ್ದವು. ವಾರದ ಅಂದರೆ ಸಾಮಾನ್ಯವಾಗಿ ಸೋಮವಾರ ಮತ್ತು ಶನಿವಾರ ಆ ಹಸಿ ಸೀಗೆಕಾಯಿಗಳನ್ನು ಕಿತ್ತು ಬೇಯಿಸುತ್ತಿದ್ದರು. ಅದರಿಂದಲೇ ತಲೆ ಮತ್ತು ಮೈ ತೊಳೆದುಕೊಳ್ಳಬೇಕಿತ್ತು. ಅಂಥ ಸೀಗೆ ಮರದ ಒಂದು ರೆಂಬೆ ಉಯ್ಯಾಲೆಯಂತೆ ಬಾಗಿಕೊಂಡಿತ್ತು. ಅದು ನನ್ನಂಥ ಚಿಕ್ಕವರಿಗೂ ಎಟಕುವಂತಿತ್ತು. ಅಜ್ಜನ ಕಾವಲಿನಲ್ಲಿ ನಾನು ಆಗಾಗ ಆ ಉಯ್ಯಾಲೆಯಲ್ಲಿ ಕೂತು ಜೀಕುತ್ತಿದ್ದೆ. ಇಂತ ಈ ಹೊಂಗೆ ಮತ್ತು ಸೀಗೆ ಮರಗಳಡಿಯ ಹರವಿನ ತಾವಿನಲ್ಲಿ ಇವರುಗಳು ಅಡಿಗೆ ಮಾಡಲು ಒಲೆ ಹೂಡಿಕೊಂಡಿದ್ದರು. ಹಂಗೇನೇ ಮಧ್ಯಾಹ್ನದ ಬಿಸಿನಲ್ಲಿ ಅವುಗಳ ನೆರಳಿನಡಿಯಲ್ಲಿ ವಿರಮಿಸುತ್ತಿದ್ದರು. ಆ ಜಾಗದಿಂದ ಕೊಂಚ ದೂರದಲ್ಲಿ ಅಂಬಿನ ದಿಬ್ಬ ಅಂತ ಈಗಲೂ ಕರೆಯುವ ಬದುವಿನ ಪಕ್ಕದಲ್ಲಿ ವರ್ಷಕ್ಕೊಮ್ಮೆ ಚೌಳು ಏಳುತ್ತಿತ್ತು. ನನ್ನ ಅಜ್ಜಿ ಬೆಳಗ್ಗೆ ಏಳುತ್ತಲೇ ಹೂವಿನಂತೆ ಎದ್ದಿರುತ್ತಿದ್ದ ಆ ಚೌಳನ್ನು ಬೊಗಸೆಯಲ್ಲಿ ಗುಡಿಸಿಕೊಂಡು ಪಾತ್ರೆಯೊಂದಕ್ಕೆ ತುಂಬಿ ತರುತ್ತಿತ್ತು. ಮತ್ತು ಅದರಲ್ಲೇ ಬಟ್ಟೆಗಳನ್ನು ಒಗೆಯುತ್ತಿತ್ತು. ಅದೇರೀತಿ, ಆ ಗಾಡಿಯವರು ಇದ್ದ ಅಷ್ಟೂ ದಿನಗಳು ಆ ಚೌಳಿನಿಂದ ಬಟ್ಟೆ ಒಗೆದುಕೊಳ್ಳುತ್ತಿದ್ದರು.
ನಾನು ಸೋಮ್ಲಾನಾಯಕ್‌ರನ್ನು ಎಷ್ಟು ಹಚ್ಚಿಕೊಂಡಿದ್ದೆ ಅಂದರೆ ಅವರೊಂದಿಗೆ ಕೆಲವೊಮ್ಮೆ ಅವರುಗಳು ಮಲಗುತ್ತಿದ್ದ ಆ ಹೊಂಗೆಯ ಮರದಡಿಯಲ್ಲೇ ಮಲಗುತ್ತಿದ್ದೆ. ಬೇಸಿಗೆಯ ಬೆಳದಿಂಗಳಿನಲ್ಲಿ ಆ ಏಕಾಂತ, ಆ ಹಾಲು ಚೆಲ್ಲಿದಂತ ಬೆಳದಿಂಗಳು, ಹೊಂಗೆ ಸೀಗೆ ಹೂಗಳ ಆಹ್ಲಾದಕರ ಘಮಲು ಇಂದಿಗೂ ಮಾಸಿಲ್ಲ. ಆ ತಂಗಾಳಿ, ಅದರೊಂದಿಗೆ ಅಡ್ಡಾಡುತ್ತಿದ್ದ ಯಾರದೋ ಹೊಲದಲ್ಲಿ ಹಾಕಿರುತ್ತಿದ್ದ ಮಂದೆಯಿಂದ ಕುರಿ, ಮೇಕೆಗಳ ಕೂಗು, ನಾಯಿಗಳ ಬೊಬ್ಬಿರಿಯುವಿಕೆ, ಕುರಿಗಾಹಿಗಳು ಹಾಡುತ್ತಿದ್ದ ಹಾಡುಗಳು, ಜಲ್ಲೆ ಗಾಡಿಯವರ ಅರ್ಥವಾಗದ ಭಾಷೆಯ ಮಾತುಗಳ ಸಂಗೀತ ಮಾಧುರ್ಯ ಇಂದಿಗೂ ಮರೆಯಾಗಿಲ್ಲ. ಈಗ ಆ ಹೊಂಗೆ ಮರ ಹಾಗೂ ಸೀಗೆ ಗೀಡಗಳಿದ್ದ ಜಾಗದಲ್ಲಿ ಅಡಕೆ ಮತ್ತು ತೆಂಗಿನ ಮರಗಳು ಎದ್ದಿವೆ. ಪಾಳು ಜಮೀನು ಈಗ ಪೂರಾ ತೋಟವಾಗಿಬಿಟ್ಟಿದೆ. ಈ ನಡುವೆ ಆ ಲಿಂಗಮುದ್ರೆ ಕಲ್ಲೂ ಅಲ್ಲಿಂದ ನಾಪತ್ತೆಯಾಗಿದೆ.
ಸೋಮ್ಲಾನಾಯಕ್‌ಗೂ ನನ್ನನ್ನು ಕಂಡರೆ ಅಷ್ಟೇ ಮಮಕಾರ. ಕೆಲವು ಸಾರ್ತಿ ಜಲ್ಲೆ ಗಾಡಿಯ ಎತ್ತುಗಳು ಮೂಕಿನ ಮೇಲೆ ಕೂತಿರುತ್ತಿದ್ದ ನನ್ನ ಮಾತು ಕೇಳದೆ ಜಾಡನ್ನು ಬಿಟ್ಟು ಮಣ್ಣು ತುಂಬಿದ ಜಲ್ಲೆ ಪಲ್ಟಿಯಾಗುವಂತೆ ಮಾಡಿಬಿಡುತ್ತಿದ್ದವು. ಆವಾಗಲೂ, `ಅಯ್ಯೋ ಮಣ್ಣು ಹೋದ್ರೆ ಹೋಗ್ಲಿ ನಿಂಗೆ ಏನೂ ಆಗಿಲ್ವಲ್ಲ ಸಧ್ಯ’ ಅಂತ ಸೋಮ್ಲಾನಾಯಕ್ ಆ ಎತ್ತಿಗೆ ಒಂದೆರಡು ಏಟು ಬಾರಿಸುತ್ತಿದ್ದರು. ಮಣ್ಣು ಹೊಡೆಯುವುದು ಇನ್ನೂ ಬಾಕಿ ಇದ್ದಾಗಲೇ ಅದೊಂದು ರಾತ್ರಿ ಜೋರು ಮಳೆ ಬಂದು ತೋಟದ ಪಕ್ಕದಲ್ಲಿದ್ದ ಹಳ್ಳ ಹರಿದು ಅಜ್ಜನ ಕೆರೆ ಬೆಳಗಾಗುವುದರಲ್ಲಿ ಅರ್ಧ ಕೆರೆಯಾಗಿಬಿಟ್ಟಿತ್ತು. ಹಂಗಾಗಿ ಅವತ್ತೇ ಅವರುಗಳ ಕೆಲಸದ ಕೊನೆಯ ದಿನವಾಗಿತ್ತು. ನನಗದು ವಿಪರೀತ ಸಂಕಟದ ದಿನವಾಗಿತ್ತು. ಬೆಳಗಾದರೆ ಆ ಗಾಡಿಗಳು, ಆ ಅಡಿಗೆಯ ಘಮ, ಆ ಅರ್ಥವಾಗದ ಭಾಷೆ, ಅವರ ನಡುವಿನ ಒಡನಾಟ ಎಲ್ಲವೂ ಒಮ್ಮೆಗೇ ಮಾಯವಾಗಿಬಿಡುತ್ತದಲ್ಲ ಅನ್ನುವ ಹೇಳಿಕೊಳ್ಳಲಾಗದ ಯಾತನೆ ಅವತ್ತು ಇಡೀ ದಿನ ಹಿಂಡಿತ್ತು. ಅಯ್ಯ ಅವರಿಗೆ ಅವತ್ತು ಊರಿಗೆ ಹೋಗಲು ಬಿಡಲಿಲ್ಲ. ಉಳಿದುಕೊಂಡ ಅವರಿಗೆ ಪಾಯಸ, ಪಕೋಡಗಳ ಸತ್ಕಾರ ನಡೆದಿತ್ತು. ಅವತ್ತು ಸಂಜೆಗೇ ಮತ್ತೆ ಭಯಂಕರ ಮಳೆ ಹೊಡೆದಿತ್ತು. ತೋಟಾಂತ ತೋಟವೆಲ್ಲಾ ನೀರಿನಿಂದ ತೇಪಾಡಿಹೋಗಿತ್ತು. ಅದರ ಬಿರುಸು ಎಷ್ಟಿತ್ತೆಂದರೆ ಮನೆಯ ಮುಂದಲ ತೆಂಗಿನ ಮರದಡಿಯಲ್ಲಿ ಗುಡ್ಡಾಕಿದ್ದ ತೆಂಗಿನ ಕಾಯಿಗಳನ್ನು ಹಂಗೆ ಹರಿದ ನೀರು ಅಷ್ಟೂ ಕಾಯಿಗಳನ್ನು ಅಜ್ಜನ ಕೆರೆಯೊಳಕ್ಕೆ ಕೊಚ್ಚಿಕೊಂಡು ಹೋಗಿತ್ತು. ಅವತ್ತು ಅಷ್ಟೂ ಜನ ಪಡಸಾಲೆಯಲ್ಲಿಯೇ ಮಲಗಬೇಕಾಗಿತ್ತು. ಅವತ್ತು ಹೆಚ್ಚೂ ಕಡಿಮೆ ಮಲಗುವುದಕ್ಕಿಂತ ಮಾತಿನಲ್ಲಿ ಮುಳುಗಿದ್ದೇ ಹೆಚ್ಚು. ಅವರುಗಳ ಇಕ್ಕಟ್ಟಿನ ಜಾಗದಲ್ಲಿ ಸೋಮ್ಲಾನಾಯಕ್ ಪಕ್ಕದಲ್ಲೇ ಯಾವಾಗಲೋ ನಿದ್ದೆಗೆ ಜಾರಿಬಿಟ್ಟಿದ್ದೆ. ಎಚ್ಚರವಾದಾಗ ಇನ್ನೂ ಮಾತುಕತೆಗಳು ನಡೆದಿದ್ದವು.
ಬೆಳಗ್ಗೆ ತಿಂಡಿ ನಮ್ಮ ಮನೆಯಲ್ಲಿಯೇ ಆಯ್ತು. ಇನ್ನೇನು ಹೊರಡಬೇಕು ಅನ್ನುವಾಗ ಸೋಮ್ಲಾನಾಯಕ್, `ಅಣ್ಣಾ ಮಗೂನಾ ಇವತ್ತು ನನ್ ಜೊತೇಲಿ ಕರ್ಕಂಡು ಹೋಗ್ತೀನಿ ಕಳ್ಸಿ. ವತಾರಿಕೇ ತಂದು ಬಿಟ್ಟೋಗ್ತೀನಿ’ ಅಂತ ಅಯ್ಯನನ್ನು ಕೇಳಿದರು. ಅಯ್ಯನಿಗೆ ಅಚ್ಚರಿ. ಇಲ್ಲ ಅನ್ನಲು ಮನಸು ಒಪ್ಪದೆ, `ಹುಷಾರು’ ಅಂದಷ್ಟೇ ಹೇಳಿದರು. ಆಗ ಆದ ಆನಂದವನ್ನು ಹೇಳಲಾಗುವುದೇ ಇಲ್ಲ. ಅವತ್ತು ಅವರೊಂದಿಗೆ ಜಲ್ಲೆ ಗಾಡಿಯೊಳಗೆ ಕೂತು ಚಿಕ್ಕನಾಯಕನಹಳ್ಳಿ ಎಂಬ ಪಟ್ಟಣವನ್ನು ಮೊಟ್ಟ ಮೊದಲು ನೋಡಿದ್ದು. ಹಂಗೆ ಸಾಗುವ ಹೊತ್ತಲ್ಲಿ ದಾರಿಯುದ್ದಕ್ಕೂ ಸೋಮ್ಲಾನಾಯಕ್ ನನಗೆ ಯಾವುದೋ ಮಾಂತ್ರಿಕ ಲೋಕದ ವ್ಯಕ್ತಿಯಂತೆ ಭಾಸವಾಗುತ್ತಾ ಅವರ ಬಗ್ಗೆ ಎದೆ ತುಂಬಿ ಬರುತ್ತಿತ್ತು. ಚಿಕ್ಕನಾಯಕನಹಳ್ಳಿ ತಲುಪುತ್ತಿದ್ದಂತೆ ಗಾಡಿ `ಲಕ್ಷ್ಮೀ ನರಸಿಂಹ’ ಎಂಬ ಸಿನೇಮಾ ಟೆಂಟಿನೆದುರು ನಿಂತಿತು. ಆಗ ಅದರಲ್ಲಿ `ಬಿಡುಗಡೆ’ ಎಂಬ ರಾಜಕುಮಾರ್ ಅಭಿನಯದ ಸಿನೇಮಾ ನಡೆಯುತ್ತಿತ್ತು. ಅದು ನಾನು ನೋಡಿದ ಮೊಟ್ಟ ಮೊದಲ ಸಿನೇಮಾ. ಮ್ಯಾಟ್ನಿ ಶೋ ಮುಗಿಯುವ ಹೊತ್ತಿಗೆ ಸಂಜೆಯಾಗಿತ್ತು. ಮತ್ತೆ ಜಲ್ಲೆಗಾಡಿಯಲ್ಲಿ ಕೂರಿಸಿಕೊಂಡು ತನ್ನ ತಾಂಡ್ಯಕ್ಕೆ ಕರೆದೊಯ್ದರು ಸೋಮ್ಲಾನಾಯಕ್. ಅಷ್ಟು ಹೊತ್ತಿಗೆ ಇತರೆ ಗಾಡಿಯವರೂ ಊರು ತಲುಪಿದ್ದರು. ರಾತ್ರಿ ಊಟಕ್ಕೆ ಅಡಿಗೆ ಘಮಲು ನಮ್ಮ ಮನೆಗಿಂತ ಬೇರೆಯಾಗಿತ್ತು. ಅದು ಕೋಳಿ ಸಾರಿನ ಘಮಲು ಅಂತ ತುಂಬಾ ದಿನ ಆದ ಮೇಲೆ ಗೊತ್ತಾಯ್ತು. ಆವರೆವಿಗೂ ಕೋಳಿಮೊಟ್ಟೆಯನ್ನು ನೋಡಿದ್ದ ನಾನು ಯಾವತ್ತೂ ತಿಂದಿರಲಿಲ್ಲ. ಅವತ್ತು ಮೊಟ್ಟೆಯನ್ನು ನಾಲ್ಕು ಭಾಗ ಮಾಡಿ ತಿನ್ನು ಚೆನಾಗಿರುತ್ತೆ ಅಂತ ಮುಂದಿಟ್ಟರು. ತಿಂದೆ. ಹಿತವಾಗಿ ಕಂಡಿತು. ನಾನು ತಿನ್ನುವ ಪರಿಯನ್ನು ನೋಡಿ ಸೋಮ್ಲಾನಾಯಕ್ ತಾಯಿ ಬೆರಗುಗಣ್ಣಿನಿಂದ ನೋಡುತ್ತಾ ನಿಂತಿತ್ತು.
ಇದಾದ ಮೇಲೆ ನಾನು ಪಿ.ಯೂ.ಸಿ ಓದುವ ಹೊತ್ತಲ್ಲಿ ಒಂದೆರಡು ಸಾರ್ತಿ ಸೋಮ್ಲಾನಾಯಕ್ ಸಿಕ್ಕಿದ್ದರು. ಅದೇ ಮಾಸದ ನಗೆಯೊಂದಿಗೆ `ವಿದ್ಯಾರ್ಥಿ ಭವನ್’ಎಂಬ ಹೊಟೇಲಿಗೆ ಕರಕಂಡು ಹೋಗಿ ಖಾಲಿ ದೋಸೆ ಕೊಡಿಸಿದ್ದರು.

ಅದಾದ ಮೇಲೆ ನಾನು ಮೈಸೂರು ಬಸ್ ಹತ್ತಿದೆ. ಅಲ್ಲಿಂದ ಬಂದ ಮೇಲೆ ಮತ್ತೆ ಸೋಮ್ಲಾನಾಯಕ್ ನನಗೆ ಸಿಗಲಿಲ್ಲ. ನಾನೇ ಹುಡುಕಿಕೊಂಡು ಹೋಗಬಹುದಿತ್ತು. ಹೋಗಬೇಕಿತ್ತು ಕೂಡಾ. ಯಾಕೋ ಗೊತ್ತಿಲ್ಲ ನಾನು ಅದನ್ನೂ ಮಾಡಲಿಲ್ಲ. ಇದನ್ನು ಬರೆಯುತ್ತಿರುವ ಈ ಹೊತ್ತಲ್ಲಿ ಸೋಮ್ಲಾನಾಯಕ್ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಆ ಜಲ್ಲೆ ಗಾಡಿ, ಅವರು ತೋರಿಸಿದ ಆ ಸಿನೇಮಾ, ಅವರು ತಿನ್ನಿಸಿದ ಆ ಕೋಳಿ ಮೊಟ್ಟೆ, ಅವರ ಆ ನಿಷ್ಕಲ್ಮಷ ಪ್ರೀತಿ ನನ್ನೊಳಗೆ ನಾನಿರುವವರೆಗೂ ಬದುಕಿರುತ್ತವೆ.
* * *
ಹಿಸ್ಸೆ: ಪಾಲು.
ಗೋಡು: ಕೆರೆಗಳಲ್ಲಿ ಸಿಗುವ ಫಲವತ್ತಾದ ಹೂಳು ಮಣ್ಣು.
ಬರಲು: ಕಸಬರಿಗೆ.
ಬರಬತ್ತ: ಖುಷ್ಕಿ ನೆಲದಲ್ಲಿ ಬೆಳೆಯುವ ಮಳೆಯಾಧಾರಿತ ಬತ್ತ.
ಅಚ್ಚು: ನಡುಗೂಟ ಅಥವಾ ಕೀಲು.
ಇರ್ಚಿಮರ: ಅಚ್ಚನ್ನು ಕೂರಿಸುವ ಸಲುವಾಗಿ ಉಪಯೋಗಿಸುವ ಮರದ ತುಂಡು.
ಲಿಂಗಮುದ್ರೆ ಕಲ್ಲು: ದೇವರಿಗೆ ಸೇರಿದ್ದು ಎಂಬುದರ ಸೂಚಕಾರ್ಥವಾಗಿ ಇರುತ್ತಿದ್ದ ಲಿಂಗದ ಗುರುತಿನ ಕಲ್ಲು.
ವತಾರಿಕೆ: ಮರುದಿನ ಬೆಳಗ್ಗೆ.
* * *

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.
