ಜಲಿಯನ್ ವಾಲಾ ಭಾಗ್ ಗೆ ನೂರು ತುಂಬಿದ್ದರ ಚರ್ಚೆ ಒಂದು ನೆಪವಾಗಲಿ. ಈ ಸಮಯದ ಕ್ಷಮೆ, ಪರಿಹಾರ ಮತ್ತೇನೋ ನಾಟಕಗಳನ್ನು ಬದಿಗಿಟ್ಟು ಇಲ್ಲಿನ ಮಕ್ಕಳು ಓದುವ ಚರಿತ್ರೆಯ ಪುಸ್ತಕಗಳಲ್ಲಿ ಬ್ರಿಟನ್ನಿನ ಅಧಿಪತ್ಯದ ಕಾಲದ ಸೌಜನ್ಯದ, ದೌರ್ಜನ್ಯದ ಕೆಲಸಗಳನ್ನು ಸೇರಿಸುವ, ಉಲ್ಲೇಖಿಸುವ ಕೆಲಸವಾಗಲಿ. ಅದರಲ್ಲಿ ಬ್ರಿಟಿಷರು ಭಾರತದಲ್ಲಿ ಸ್ಥಾಪಿಸಿದ ಕಾನೂನು, ಆಡಳಿತ ವ್ಯವಸ್ಥೆ, ದೇಶದುದ್ದಗಲಕ್ಕೆ ಎಳೆದ ರೈಲು ಹಳಿಗಳು, ಕಟ್ಟಿದ ರಸ್ತೆ ಸೇತುವೆಗಳು,ಕ್ಷಾಮ ಡಾಮರಗಳ ಕತೆಗಳು ತಿಳಿಸಲ್ಪಡಲಿ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್.

 

ಜಲಿಯನ್ ವಾಲಾ ಭಾಗ್. ಇದು ಬರೇ ಸ್ಥಳದ ಹೆಸರಲ್ಲ . ನಾವು ಓದಿದ ಕೇಳಿದ ಸ್ವಾತಂತ್ಯ್ರ ಹೋರಾಟಗಾರರ ಸಾಲಿನಲ್ಲಿ ನಿಲ್ಲಬಹುದಾದ ಘಟನೆ ವಿಷಯ ವ್ಯಕ್ತಿತ್ವ. ನನ್ನ ತಲೆಮಾರಿನನವರು ಹೀಗೊಂದು ಹೆಸರು ಮೊದಲು ಕೇಳಿದ್ದು ಪ್ರಾಥಮಿಕ ಶಾಲೆಯ ಸಮಾಜ ಪಠ್ಯದಲ್ಲಿ ಇರಬಹುದು ಅಥವಾ ಅಲ್ಲಿ ನಡೆದಿರಬಹುದಾದ ದೃಶ್ಯಕಲ್ಪನೆ ಕಣ್ಣಿಗೆ ಕಟ್ಟಿದ್ದು ಅಟ್ಟೆನ್ಬರೋ ನಿರ್ಮಿಸಿದ ಗಾಂಧಿ ಚಿತ್ರದ ಮೂಲಕವೂ ಇರಬಹುದು . ಆ ಸ್ಥಳದ ಚಂದದ ಹೂದೋಟ , ಪಂಜಾಬಿನ ನೆಲದ ಅಸಲೀ ಹಸಿರು, ಬೈಸಾಖಿಯ ಸಾಂಸ್ಕೃತಿಕ ಸಂಭ್ರಮ ಎಷ್ಟು ಜನರಿಗೆ ಪರಿಚತವೋ ಗೊತ್ತಿಲ್ಲ ಆದರೆ ಹಾಗೊಂದು ಸ್ಥಳ ದೂರ ದೂರದವರಿಗೂ ನೆನಪಾಗುವುದು 1919ರ ಏಪ್ರಿಲ್ 13ರಂದು ನಡೆದ ಹತ್ಯಾಕಾಂಡದ ಕಾರಣಕ್ಕೇ.

ಅಲ್ಲಿ ಅಂದು ಹಾರಿದ ಗುಂಡುಗಳಿಗೆ ಮಡಿದ ಜೀವಗಳಿಗೆ ಇದೀಗ ನೂರು ವರ್ಷ. ಅಂದು ಹಾರಿಸಿದ್ದು 1650 ಸುತ್ತು ಗುಂಡುಗಳು ಎಂದು ಇತಿಹಾಸದ ಪುಟಗಳಲ್ಲಿ ಲೆಕ್ಕ ಹೇಳಲಾಗಿದೆ. ಅಂದು ಜನರು ಯಾಕೆ ಅಲ್ಲಿ ಸೇರಿದ್ದರು, ಇದು ಯಾರಿಗೆ ಸಹ್ಯವಾಗಿರಲಿಲ್ಲ, ಗುಂಡಿನ ಆದೇಶ ಯಾರು ಕೊಟ್ಟರು, ಯಾವ ಬಂದೂಕು ಬಳಸಿದರು, ನಳಿಗೆಗಳಲ್ಲಿ ಯಾವ ಗುಂಡುಗಳನ್ನು ತುಂಬಿದರು, ಎಷ್ಟು ಹೊತ್ತು ಗುಂಡು ಹಾರಿಸಿದರು, ಯಾವ ಸೇನಾ ತುಕಡಿಗಳು ಎಷ್ಟೆಷ್ಟಿದ್ದವು ಎನ್ನುವ ಪ್ರತಿ ವಿವರವೂ ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ. ಈ ದುರ್ಘಟನೆಯ ಸುತ್ತ ಮುತ್ತಲಿನ ಸಣ್ಣ ಸಣ್ಣ ವಿಷಯಗಳು ಪುಸ್ತಕಗಳಲ್ಲಿಯೂ ಲಭ್ಯ ಇದ್ದರೂ ಘಟನೆಯಲ್ಲಿ ಸತ್ತವರು ಎಷ್ಟು ಎನ್ನುವ ದಾಖಲೆಗಳು ಮಾತ್ರ ಊಹೆಗಳ ಆಧಾರದ ಮೇಲೆಯೇ ನಿಂತಿವೆ. ಅಲ್ಲಿ ಅಂದು ಸೇರಿದ್ದ ಹತ್ತು ಸಾವಿರಕ್ಕಿಂತ ಮಿಕ್ಕಿದ ಜನರಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಜನರು ಜೀವತೆತ್ತರು ಎನ್ನುವುದು ಪ್ರಚಲಿತ ಊಹೆಯಾದರೆ ಅಂದಾಜಿನ ಮೇಲೆ ಬರೆಯಲ್ಪಟ್ಟ ಬ್ರಿಟಿಷರ ಅಧಿಕೃತ ದಾಖಲೆ ಸತ್ತವರು ನಾಲ್ಕುನೂರಕ್ಕಿಂತ ಕಡಿಮೆ ಎಂದೂ ಹೇಳುತ್ತದೆ. ಈ ಘಟನೆಯಲ್ಲಿ ಕರಾರುವಕ್ಕಾಗಿ ಎಷ್ಟು ಜನರು ಸತ್ತರು ಎನ್ನುವುದಕ್ಕಿಂತ ಹೇಗೆ ಸತ್ತರು ಎನ್ನುವುದು ಮುಂದೆ ನಡೆಯುವ ಘಟನೆಗಳಿಗೆ ಕಿಡಿ ಹಚ್ಚಿಸಿದ್ದು ಇದೀಗ ಹಳೆಯ ಕತೆ.

ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ಭಾರತದಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್ ಅಲ್ಲಿಯೂ ತೀವ್ರ ಆಕ್ಷೇಪವನ್ನು ಎದುರಿಸಿತು ; ಇದರ ಹಿಂದಿನ ರೂವಾರಿ ಜನರಲ್ ಡೈಯರ್ ತನ್ನ ಪದವಿಯನ್ನು ಕಳೆದುಕೊಂಡ, ಇಂಗ್ಲೆಂಡ್ ಗೆ ಮರಳಿ ವಿಚಾರಣೆಯನ್ನು ಎದುರಿಸಿದ. ಡೈಯರ್ ನಹೇಯ ನಿರ್ಧಾರವನ್ನು ಬೆಂಬಲಿಸಿದವರು ಬ್ರಿಟನ್ನಿನಲ್ಲಿ ಇದ್ದರೂ ಅಂದಿನ ಬ್ರಿಟಿಷ್ ಆಡಳಿತಶಾಹಿಯ ಕೆಲ ಹಿರಿಯರು ಇದೊಂದು ಅಮಾನುಷ ಕೃತ್ಯ ಎಂದೂ ಕರೆದಿದ್ದರು. ಭಾರತದಾದ್ಯಂತ ಪ್ರತಿಭಟನೆಗಳ ಜೊತೆಗೆ ಹೋರಾಟದ ಹೊಸ ರೊಚ್ಚನ್ನು ಈ ದುರ್ಘಟನೆ ಹೊತ್ತಿಸಿತ್ತು. ಹಲವು ಇತಿಹಾಸಕಾರರರು ಈ ಹತ್ಯಾಕಾಂಡವನ್ನು ಭಾರತ ಸ್ವಾತಂತ್ಯ್ರ ಹೋರಾಟದ ಮಹತ್ವದ ತಿರುವು ಎಂದು ಗುರುತಿಸುತ್ತಾರೆ. ಎಲ್ಲ ಚಾರಿತ್ರಿಕ ಘಟನೆಗಳಲ್ಲಿ ಏನೋ ಒಂದು ಮಹತ್ತರದ್ದನ್ನು ಕಾಣುವ ಬ್ರಿಟಿಷರು ಜಲಿಯನ್ ವಾಲಾ ಭಾಗ್ ಹತ್ಯಾಕಾಂಡವನ್ನು ಭಾರತಕ್ಕೆ ಸ್ವಾತಂತ್ಯ್ರ ದೊರೆಯುವ ವೇಗವನ್ನು ಹೆಚ್ಚಿಸಿದ ಘಟನೆ ಎಂದು ಹೇಳುತ್ತಾರೆ . ಹಾಗಾಗಿಯೇ ಜಲಿಯನ್ ವಾಲಾ ಭಾಗ್ ಬರಿಯ ಸ್ಥಳ ನಾಮವಲ್ಲ, ಅಥವಾ ಯಾವ ಸ್ವಾತಂತ್ರ್ಯ ಸೇನಾನಿಗಳಿಗೂ ಅದು ಕಡಿಮೆಯಲ್ಲ.

ಆ ಕಾಲದಲ್ಲಿ ಬ್ರಿಟಿಷರ ಬಗ್ಗೆ ಸಹಾನುಭೂತಿ ಇದ್ದ ಭಾರತೀಯರಿಗೆ, ಅರೆಮನಸ್ಸಿನಿಂದ ಸ್ವಾತಂತ್ರ್ಯಸಂಗ್ರಾಮದಲ್ಲಿ ಇಳಿದವರಿಗೆ ಸುಸ್ಪಷ್ಟವಾಗಿ ಭಾರತದ ಬಗ್ಗೆ ಬ್ರಿಟಿಷರ ಭಾವನೆಯನ್ನು ಅನಾವರಣಗೊಳಿಸಿದ ಬ್ರಿಟಿಷ್ ವಿರೋಧಿ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೇರೇಪಿಸಿದ ನೆಲ ಹಾಗು ಘಟನೆ ಅದು. ಬ್ರಿಟಿಷರಿಗೆ ಅವರ ಇತಿಹಾಸದ ಪ್ರತಿ ಘಟನೆಯಲ್ಲೂ ಒಂದು ಮಹಾನ್ ವ್ಯಕ್ತಿತ್ವ ಕಾಣಿಸುತ್ತದೆ. ಆದರೂ ಈ ಒಂದು ದುರಂತ ನಡೆದಂದಿನಿಂದ ಇಂದಿನವರೆಗೂ ಬ್ರಿಟಿಷ್ ರಾಜಪ್ರಭುತ್ವ, ಚಕ್ರಾಧಿಪತ್ಯ, ಆಡಳಿತಶಾಹಿಗಳೆಲ್ಲವುಗಳಿಗೂ ಒಂದು ಮುಜುಗರದ ಘಟನೆಯಾಗಿ ಕಾಡುತ್ತಲೇ ಇದೆ. ಬ್ರಿಟಿಷರಿಗೆ ನಿರಂತರವಾಗಿ ಕಸಿವಿಸಿ ಉಂಟುಮಾಡುವುದೇ ಜಲಿಯನ್ ವಾಲಾ ಭಾಗ್ ಘಟನೆಯ ಚಾರಿತ್ಯ್ರ ಇರಬೇಕು. ತನ್ನ ವಸಾಹತುಗಳಲ್ಲಿ ಅನೇಕ ತಣ್ಣಗಿನ ಕ್ರೌರ್ಯಗಳಿಗೂ, ಹೆಚ್ಚಾಗಿ ಚರ್ಚಿಸಲ್ಪಡದ ಭೀಕರ ದೌರ್ಜನ್ಯಗಳಿಗೂ ಹೊಣೆಯಾಗಿದ್ದ ಬ್ರಿಟಿಷ್ ರಾಜಪ್ರಭುತ್ವ ಜಲಿಯನ್ವಾಲಾ ಭಾಗ್ ಘಟನೆಯನ್ನು ನೆನಪಿಂದ ಅಳಿಸಲೂ ಆಗದೆ ಸೂಕ್ತವಾದ ಸ್ಮರಣೆಯನ್ನೂ ಕೊಡಲಾಗದೆ ಇಂದಿಗೂ ತೊಳಲಾಡುತ್ತದೆ. ಇವತ್ತಿನ ಸಮಯದಲ್ಲಿ ಶಾಂತಿಪ್ರಿಯ ಪ್ರಜಾತಾಂತ್ರಿಕ ಎಲ್ಲರನ್ನೂ ಒಳಗೊಳ್ಳುವ ತೆರೆದ ಸಂಸ್ಕೃತಿಯನ್ನು ಆಚರಿಸುವ ಬ್ರಿಟನ್ ನ ಗತಪುಟಗಳಲ್ಲಿ ಹುದುಗಿರುವ 1919ರ ಕೆಂಪು ಅಕ್ಷರದ ಸಾಲುಗಳು ಸುಲಭವಾಗಿ ಉತ್ತರಿಸಲಾಗದ ಸವಾಲಾಗಿ ಎದುರು ಬರುತ್ತವೆ.

ಇತಿಹಾಸದ ಕರಾಳ ಘಟನೆಗಳನ್ನು ಮುಕ್ತವಾಗಿ ಎದುರಿಸುವುದು ಚರ್ಚಿಸುವುದು ಸ್ಮರಿಸುವುದು ಇಂದಿನ ಬ್ರಿಟಿಷ್ ರಾಜಕೀಯ ಸಾಮಾಜಿಕ ಸತ್ಸಂಪ್ರದಾಯಗಳಲ್ಲಿ ಒಂದು. ಆದರೆ ತಮ್ಮ ಆಡಳಿತಾವಧಿಯ 1919ರ ಘಟನೆ ಮಾತ್ರ ಇವರ ತೆರೆದ ಸಂಪ್ರದಾಯದೊಳಗೆ ಪೂರ್ತಿ ನುಸುಳಲಾಗದ ಹೊರಗಿರಲೂ ಆಗದ ದ್ವಂದ್ವವಾಗಿದೆ. ನೂರು ವರ್ಷಗಳ ಹಿಂದಿನ ಹತ್ಯಾಕಾಂಡವನ್ನು ಪೂರ್ತಿ ದೂರೀಕರಿಸುವುದು ಮರೆಯುವುದು ಅಥವಾ ತಪ್ಪು ಮಾಡಿದೆ ಎಂದು ಸ್ವೀಕರಿಸುವುದು ಇವೆರಡರ ಮಧ್ಯದ ಇಬ್ಬಂಧಿತನದಲ್ಲಿದೆ ಈಗಿನ ಬ್ರಿಟನ್ ಇದೆ.

ಎಲಿಜಿಬೆತ್ ರಾಣಿ 1997ರಲ್ಲಿ ಜಲಿಯನ್ ವಾಲಾ ಭಾಗ್ ಭೇಟಿ ಮಾಡಿದಳು. ಇದು 1919ರ ಸ್ಮಾರಕಕ್ಕೆ ಬ್ರಿಟನ್ನಿನ ಮೊದಲ ಉನ್ನತ ಸ್ಥರದ ಭೇಟಿ ಎಂದು ಗುರುತಿಸಲ್ಪಡುತ್ತದೆ. ಗುಂಡುಗಳಿಂದ ತೂತಾದ ಇಟ್ಟಿಗೆಯ ಗೋಡೆಗಳು, ಗುಂಡುಗಳಿಗೆ ಮೈಯೊಡ್ಡುವುದು ಅಥವಾ ತೋಟದ ಆವರಣದಲ್ಲಿದ್ದ ಬಾವಿಗೆ ಜಿಗಿಯುವ ಸಾವಿನ ಆಯ್ಕೆಯಲ್ಲಿ ಅಥವಾ ಆಘಾತದಲ್ಲಿ ಬಾವಿಗೆ ಹಾರಿ ಪ್ರಾಣ ಬಿಟ್ಟವರ ನೆನಪುಗಳು, ಡೈಯರನ ಆಜ್ಞೆಗೆ ಸಮ್ಮತಿಸಿ ಗುಂಡಿನ ಮಳೆಗರೆದ ಗೂರ್ಖಾ ಮತ್ತು ಬಲೂಚಿ ಸೇನಾತುಕಡಿಗಳು ನಿಂತು ಗುರಿಹೂಡಿದ ಜಾಗ ಅಂದಿನ ದಿನವನ್ನು ಜೀವಂತಗೊಳಿಸುವ ತೈಲ ಚಿತ್ರಣ ಹೀಗೆ ಜಲಿಯನ್ ವಾಲಾ ಭಾಗ್ ಅಲ್ಲಿ ಈಗ ಓಡಾಡಿದವರಿಗೂ ಹಳೆಯ ನೆನಪುಗಳ ಕಲ್ಪನೆಯನ್ನು ಬಡಿದೆಬ್ಬಿಸಬಲ್ಲ ಸ್ಮರಣೆಗಳು ಕಾಣಸಿಗುತ್ತವೆ. ಇವನ್ನೆಲ್ಲ ನೋಡಿದ ಬ್ರಿಟಿಷ್ ರಾಣಿಗೆ ನಿಜವಾಗಿ ಎಷ್ಟು ಬೇಸರ ಅನುಕಂಪ ಹುಟ್ಟಿತೋ ಗೊತ್ತಿಲ್ಲ ಆದರೆ ಹತ್ಯಾಕಾಂಡದ ಬಗ್ಗೆ ಸಾಂತ್ವನಪೂರ್ವಕ ಹೇಳಿಕೆಗಳನ್ನು ನೀಡಿ ರಾಣಿ ಮರಳಿದ್ದಳು. ಡೇವಿಡ್ ಕ್ಯಾಮರೂನ್ 2013ರಲ್ಲಿ ಇಲ್ಲಿಗೆ ಭೇಟಿ ನೀಡಿದಾಗ ಹೀಗೆ ತನ್ನ ಅಧಿಕಾರಾವಧಿಯಲ್ಲಿ ಭೇಟಿ ಮಾಡಿದ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಸರೂ ಸಿಕ್ಕಿತ್ತು. ಆ ಹತ್ಯಾಕಾಂಡವೊಂದು “ಕಡು ನಾಚಿಕೆಯ ಘಟನೆ” ಎಂದು ಹೇಳಿ ಸಿಖ್ ಸಮುದಾಯದ ಗಮನ ಸೆಳೆಯುವ ಯತ್ನವೂ ನಡೆಯಿತು.

ಹಲವು ಇತಿಹಾಸಕಾರರರು ಈ ಹತ್ಯಾಕಾಂಡವನ್ನು ಭಾರತ ಸ್ವಾತಂತ್ಯ್ರ ಹೋರಾಟದ ಮಹತ್ವದ ತಿರುವು ಎಂದು ಗುರುತಿಸುತ್ತಾರೆ. ಎಲ್ಲ ಚಾರಿತ್ರಿಕ ಘಟನೆಗಳಲ್ಲಿ ಏನೋ ಒಂದು ಮಹತ್ತರದ್ದನ್ನು ಕಾಣುವ ಬ್ರಿಟಿಷರು ಜಲಿಯನ್ ವಾಲಾ ಭಾಗ್ ಹತ್ಯಾಕಾಂಡವನ್ನು ಭಾರತಕ್ಕೆ ಸ್ವಾತಂತ್ಯ್ರ ದೊರೆಯುವ ವೇಗವನ್ನು ಹೆಚ್ಚಿಸಿದ ಘಟನೆ ಎಂದು ಹೇಳುತ್ತಾರೆ.

2017ರಲ್ಲಿ ಲಂಡನ್ ಮೇಯರ್ ಸಾದಿಕ್ ಖಾನ್ ಭೇಟಿ ಮಾಡಿ, ಇನ್ನಾದರೂ ಬ್ರಿಟಿಷರು ಅಂದಿನ ಕರಾಳ ಘಟನೆಗೆ ಕ್ಷಮೆ ಕೇಳಲಿ, ಈ ದುರಂತಕ್ಕೊಂದು ಅಂತ್ಯ ನೀಡಲಿ ಎಂದಿದ್ದ. ಅಂದರೆ ಈವರೆಗೆ ಭೇಟಿ ಮಾಡಿದ ಎಲ್ಲ ರಾಜವಂಶಸ್ಥರು ರಾಜಕಾರಣಿಗಳು ತಮ್ಮಿಂದ ಎಂದೋ ಆದ ಅಪರಾಧವೊಂದಕ್ಕೆ ಕ್ಷಮೆ ಬೇಡುವ ತಯಾರಿಯ ಮಾತುಗಳನ್ನು ಆಡಿ ಆದರೆ ಕ್ಷಮೆ ಕೇಳದೆ ಮರಳಿದವರು. ಹೀಗೆ ತಮ್ಮ ಅನುಕಂಪ ಬೇಸರ ಸೂಚಿಸುವವರು ಒಂದು ಕ್ಷಮೆಯನ್ನು ಯಾಕೆ ಕೇಳುವುದಿಲ್ಲ ಎನ್ನುವುದು ಬ್ರಿಟಿಷ್ ಪತ್ರಿಕೆಗಳಲ್ಲಿ ಸಂಸತ್ತಿನಲ್ಲಿ ಚರ್ಚೆಯನ್ನು ಹಿಂದೆಯೂ ಹುಟ್ಟುಹಾಕಿದ್ದಿದೆ. ಜಲಿಯನ್ ವಾಲಾ ಭಾಗ್ ಗೆ ಇಂತಹ ಭೇಟಿಗಳು ನಡೆದಾಗಲೆಲ್ಲ, ಹೇಳಿಕೆಗಳು ನೀಡಲ್ಪಟ್ಟಾಗಲೆಲ್ಲ ಹತ್ಯಾಕಾಂಡದ ನೆನಪು ಮತ್ತೆ ಹಸಿರಾಗಿಸಿ ಬ್ರಿಟಿಷರು ಕ್ಷಮೆ ಕೇಳಬೇಕೋ ಬೇಡವೋ ಎನ್ನುವ ವಾದವನ್ನ ಜೀವಂತವಾಗಿಸಿದ್ದಿದೆ. ಮತ್ತೆ ಈಗ ಅಂದರೆ ನೂರು ವರ್ಷ ತುಂಬುವ ಈ ಹೊತ್ತಲ್ಲಾದರೂ ಈಗಿನ ಬ್ರಿಟಿಷ್ ಪ್ರಧಾನಿಯಿಂದ ಒಂದು ಕ್ಷಮೆ ಬರಲಿ ಎಂದು ವಾದಿಸುವವರು ಬ್ರಿಟನ್ನಿನಲ್ಲಿ ಈಗಲೂ ಇದ್ದಾರೆ. ಒಂದು ಶತಮಾನ ಕಳೆದು ಕ್ಷಮೆ ಕೇಳಿದ್ದರಿಂದ ಯಾರಿಗೆ ಯಾವ ಸಾಂತ್ವನ ಪರಿಹಾರ ಸಿಗಬಹುದು ಅಥವಾ ಕ್ಷಮೆ ಕೇಳುವುದೇ ಆದರೆ ಈ ಘಟನೆಗಿಂತಲೂ ಹೆಚ್ಚು ಜನರನ್ನು ಗುರಿಯಾಗಿಸಿದ ಕುಕೃತ್ಯಗಳನ್ನು ಬ್ರಿಟಿಷರು ಭಾರತದಲ್ಲಿ ಮಾಡಿಲ್ಲವೇ ಎನ್ನುವ ನಿಲುವೂ ಕೆಲವರದು.

2015ರಲ್ಲಿ ಶಶಿ ತರೂರ್ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಮಾಡಿದ ಭಾಷಣ ಭಾರತದಲ್ಲೂ ಬ್ರಿಟನ್ನಿನಲ್ಲೂ ಚರ್ಚೆಯ ಅಲೆ ಎಬ್ಬಿಸಿತು. ಎರಡು ಶತಮಾನಗಳ ಕಾಲ ಭಾರತದಲ್ಲಿ ಬ್ರಿಟಿಷರು ಮಾಡಿದ ದೌರ್ಜನ್ಯಗಳನ್ನು ಬಿಚ್ಚಿಡುತ್ತಾ ವ್ಯಂಗ್ಯ ಮಾಡಿದ್ದ ತರೂರ್ ನುಡಿಗಳು ಇಂದಿಗೂ ಬ್ರಿಟನ್ನಿನಲ್ಲಿ ನೆನಪಿಸಲ್ಪಡುತ್ತದೆ. ಇನ್ನೂರು ವರ್ಷಗಳ ವಸಾಹತಿನ ಆಡಳಿತದ ಫಲವಾಗಿ ಭಾರತ ಅತಿ ಮುಖ್ಯವಾಗಿ ಆರ್ಥಿಕವಾಗಿ ಬಡವಾಗಿದೆ. ಜಗತ್ತಿನ ದೊಡ್ಡ ಆರ್ಥಿಕ ಪಾಲುದಾರ, ಶಕ್ತಿ ಆಗಿದ್ದ ಭಾರತ ಬ್ರಿಟಿಷರ ಕೊಳ್ಳೆಯಲ್ಲಿ ದೈನ್ಯಕ್ಕೆ ದೂಡಲ್ಪಟ್ಟಿತು. ಬ್ರಿಟಿಷರಿಂದ ಸಿಗಬಹುದಾದ ನಯಮಾತಿನ ಕ್ಷಮೆಗಳು ಸಿಹಿ ಸೋಗಿನ ನಡವಳಿಕೆಗಳು ಬಹಳ ದೂರ ಸಾಗುವುದಿಲ್ಲ, ಬದಲಾಗಿ ನಷ್ಟಭರ್ತಿಗಾಗಿ ಹಣ ನೀಡಲಿ, ನಮ್ಮ ಜಿಡಿಪಿಯನ್ನು ವೃದ್ಧಿಗೊಳಿಸುವ ಪೂರಕ ಕ್ರಮ ಕೈಗೊಳ್ಳಲಿ ಎನ್ನುವುದು ತರೂರ್ ನೀಡಿದ ಸಂದೇಶವಾಗಿತ್ತು. ಕಳೆದ ವಾರ ಬ್ರಿಟಿಷ್ ಸಂಸತ್ತಿನಲ್ಲಿ ಪ್ರಧಾನಿ ಥೆರೆಸಾ ಮೇ, ವಿರೋಧ ಪಕ್ಷದ ನಾಯಕ ಜೆರ್ಮಿ ಕೊರ್ಬಿನ್ ಇಬ್ಬರೂ ಅಮೃತಸರದ “ಮ್ಯಾಸ್ಸಕರ್” ಬಗ್ಗೆ ಪ್ರಸ್ತಾಪಿಸಿದರು. ಈ ಹಾರಿಕೆಯ ಪ್ರಸ್ತಾಪದ ಹಿಂದಿರುವುದು ಕೂಡ ಒಂದು ಚಾರಿತ್ರಿಕ ದ್ವೈತ ಸ್ಥಿತಿ, ಇಲ್ಲಿನ ಸಿಖ್ ಸಮುದಾಯವನ್ನು ಸ್ವಲ್ಪಮಟ್ಟಿಗೆ ಓಲೈಸುವ ರಾಜಕಾರಣ, ಅಷ್ಟೇ.

(ರಾಣಿ ಎಲಿಜಿಬೆತ್ )

ಜಲಿಯನ್ ವಾಲಾ ಭಾಗ್ ಗಿಂತ ಹಿಂದಿನ ಮುಂದಿನ ಕೆಲ ಘಟನೆಗಳನ್ನು ಹುಡುಕಿದರೆ, 1860ರ ನಂತರ ಪೂರ್ವ ಹಾಗು ದಕ್ಷಿಣ ಭಾರತಗಳಲ್ಲಿ ಮತ್ತೆ ಮತ್ತೆ ಆಗಿಹೋದ ಕ್ಷಾಮಗಳು ನೆನಪಾಗುತ್ತವೆ. ಭಾರತದಿಂದ ನಿರಂತರವಾಗಿ ಧಾನ್ಯ ಬೇಳೆ ಕಾಳುಗಳನ್ನು ತನ್ನ ದೇಶಕ್ಕೆ ಸಾಗಿಸುತ್ತಿದ್ದ ಬ್ರಿಟನ್ ಅಂತಹ ವಿಷಮ ಪರಿಸ್ಥಿತಿಯಲ್ಲೂ ಆಹಾರ ಧಾನ್ಯಗಳನ್ನು ಸಾಗಿಸುವುದನ್ನು ನಿಲ್ಲಿಸರಲಿಲ್ಲ, ಕರ ವಿಧಿಸುವುದನ್ನು ತಡೆದಿರಲಿಲ್ಲ. “ಬ್ರಿಟಿಷ್ ರಾಜ್”ನ ಕೆಟ್ಟ ಸಾಮಾಜಿಕ ಆರ್ಥಿಕ ನೀತಿ ಕಾನೂನುಗಳಿಂದ ಲಕ್ಷಗಟ್ಟಲೆ ಜನರು ಹಸಿವಿನಿಂದ ಕಾಯಿಲೆಯಿಂದ ಸತ್ತು ಹೋಗಿದ್ದರು. ದಾಖಲೆ, ಉಲ್ಲೇಖ, ಸ್ಮರಣೆಗಳ ಯಾವ ಪಟ್ಟವೂ ಸಿಗದ ಬ್ರಿಟಿಷ್ ಕಾಲದ ಭಾರತದ ಕ್ಷಾಮ ಜಲಿಯನ್ ವಾಲಾ ಭಾಗ್ ನ ಶತಮಾನದ ಹೊತ್ತಿನ ಚರ್ಚೆಗಳನ್ನು ನೋಡಿ ನಗುತ್ತಿರಬಹುದು. ಎರಡನೆಯ ಮಹಾಯುದ್ಧದ ಬ್ರಿಟಿಷ್ ಸೇನೆಯಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಭಾರತೀಯ ಸೈನಿಕರು ದುಡಿದಿದ್ದರು. ಅವರಲ್ಲಿ ಸುಮಾರು ತೊಂಬತ್ತು ಸಾವಿರ ಭಾರತೀಯ ಸೈನಿಕರು ಯುದ್ಧದಲ್ಲಿ ಮರಣ ಹೊಂದಿದ್ದರು. ಹಿಂದೆ ನಡೆದು ಹೋದ ಯುದ್ಧಗಳನ್ನು ಮತ್ತೆ ಮತ್ತೆ ನೆನಪು ಮಾಡಿ ಗೌರವ ಸಲ್ಲಿಸುವ, ತನ್ನ ದೇಶದ ಸೈನಿಕರ ಬಲಿದಾನಗಳನ್ನು ಮರಣಗಳನ್ನು ವಿಶೇಷವಾಗಿ ಸ್ಮರಿಸುವ ಬ್ರಿಟನ್ ಎಂದೂ ಭಾರತೀಯ ಸೈನಿಕರನ್ನು ಹುತಾತ್ಮರೆಂದು ಪರಿಗಣಿಸಲಿಲ್ಲ. ಔಪಚಾರಿಕ ಸೇನಾ ಸಮಾರಂಭದಲ್ಲಿ ಬಿಡಿ ಎರಡನೆಯ ಮಹಾಯುದ್ಧದ ಆಧಾರದ ಮೇಲೆ ಮಾಡಿದ ಚಲನಚಿತ್ರಗಳಲ್ಲೂ ಭಾರತೀಯ ಸೈನಿಕರ ಕೊಡುಗೆ ದಾಖಲಾಗಲಿಲ್ಲ.

ಬ್ರಿಟಿಷ್ ಅಧಿಪತ್ಯದ ಇಂತಹ ದೊಡ್ಡ ದೊಡ್ಡ ಘಟನೆಗಳ ಬಗ್ಗಿನ ಮರವೆ ಅಸಡ್ಡೆಗಳ ಎದುರಲ್ಲಿ ಜಲಿಯನ್ ವಾಲಾ ಭಾಗ್ ಘಟನೆಯ ಬಗ್ಗೆ ಒಂದು ಮನಪೂರ್ವಕ ವಿಷಾದ ತೋಡಿಕೊಂಡರೆಷ್ಟು ಬಿಟ್ಟರೆಷ್ಟು ಎಂದೂ ಯೋಚಿಸಬಹುದು. ಅಥವಾ ಇಂತಹ ಹಲವು ಕಾರಣಗಳಿಗೆ ಕ್ಷಮೆಯೋ ಅಥವಾ ಪರಿಹಾರ ದ್ಯೋತಕ ಪ್ರತಿಕ್ರಿಯೆಯೋ ನೀಡಬೇಕಾದಿತೆಂದು ಜಲಿಯನ್ ವಾಲಾ ಭಾಗ್ ಘಟನೆಗೆ ಅರೆಮನಸ್ಸಿನ ಅನುಕಂಪ ಸಾಂತ್ವನವನ್ನು ಇಲ್ಲಿಯವರೆಗೆ ರಾಜತಾಂತ್ರಿಕರು ನೀಡಿದ್ದಿರಬಹುದು ಎಂದೂ ವಾದಿಸಬಹುದು. ಇಂತಹ ವಾದಗಳು ಇಲ್ಲಿನ ಪತ್ರಿಕೆಗಳಲ್ಲೂ ಬರೆಯಲ್ಪಟ್ಟಿವೆ, ಇಂದಿನ ಹಿಂದಿನ ಸರಕಾರಗಳ ಅರೆಮನಸ್ಸಿನ ಸಾಂತ್ವನವನ್ನು ಪ್ರಶ್ನಿಸಿವೆ. ತಮ್ಮ ದೇಶಕ್ಕೆ ತನ್ನದೇ ಚರಿತ್ರೆಯ ಕೆಲವು ಭಾಗಗಳ ಬಗ್ಗೆ ಇರುವ ಅಜ್ಞಾನವನ್ನು ವ್ಯಂಗ್ಯ ಮಾಡಿವೆ.

ಬ್ರಿಟಿಷ್ ಸಂಸತ್ತಿನ ಅಥವಾ ರಾಜಮನೆತನದ ಒಂದು ಕ್ಷಮೆ ಭಾರತ ಹಾಗು ಬ್ರಿಟನ್ನಿನ ಸಂಬಂಧವನ್ನು ಹೊಸದಾಗಿ ಹಿಗ್ಗಿಸಲಿಕ್ಕಿಲ್ಲ ಕುಗ್ಗಿಸಲಿಕ್ಕಿಲ್ಲ. ಅಥವಾ ತನ್ನ ವಸಾಹತು ಇದ್ದಲ್ಲೆಲ್ಲ ಮಾಡಿದ ದೌರ್ಜನ್ಯ, ಹೊಡೆದ ಕೊಳ್ಳೆಗಳಿಗೆ ಪರಿಹಾರಾರ್ಥಕ ಧನ ಸಹಾಯ ಅಥವಾ ಇನ್ಯಾವುದೋ ಸಹಾನುಭೂತಿ ಪ್ರಾಯೋಗಿಕವೂ ಅಲ್ಲ. ಹಾಗಾಗಿ ಈ ಕ್ಷಮೆಯ ಬಗ್ಗೆ ಬ್ರಿಟನ್ನಿನಲ್ಲಿ ಭಾರತದ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಬಿಡುವ, ಇವೆಲ್ಲದರ ಹಿನ್ನಲೆಯಲ್ಲಿ ಸದ್ಯ ಏಳುವ ಮೂಲಭೂತ ಪ್ರಶ್ನೆ, ಇಂದಿನ ಬ್ರಿಟನ್ನಿಗೆ “ಬ್ರಿಟಿಷ್ ರಾಜ್” ನ ಅಥವಾ ಬ್ರಿಟಿಷ್ ವಸಾಹತಿನ ಚರಿತ್ರೆ ಎಷ್ಟು ತಿಳಿದಿದೆ ಎಂಬುದು, ಬ್ರಿಟಿಷರು ಎಸಗಿದ ಅಮಾನುಷ ಕೃತ್ಯಗಳು ಅವು ಬೀರಿದ ಪರಿಣಾಮಗಳು ಎಷ್ಟು ಗೊತ್ತಿದೆ ಎನ್ನುವುದು.

ಬ್ರಿಟನ್ನಿನ ಯಾವ ಶಾಲೆಯ ಇತಿಹಾಸದ ಪುಸ್ತಕಗಳೂ ಜಲಿಯನ್ ವಾಲಾ ಭಾಗ್ ಬಗ್ಗೆ ತಿಳಿಸುವುದಿಲ್ಲ ಅಥವಾ ಬಂಗಾಳದ ಮಹಾಕ್ಷಾಮದ ಬಗ್ಗೆ ಮಾತಾಡುವುದಿಲ್ಲ. ಜಗತ್ತನ್ನು ಆಳಿದ “ಮಹಾನ್ ಆಂಗ್ಲರು” ಎಂದು ಅರ್ಧಸತ್ಯವನ್ನು ಮಾತ್ರ ಬೋಧಿಸುವ ಇಲ್ಲಿನ ಶಾಲಾ ಪಠ್ಯಗಳು ಇದೀಗ ವಿಮರ್ಶೆಗೆ ಒಳಪಡಬೇಕು. ಒಂದು ವ್ಯಕ್ತಿಯ ವ್ಯಕ್ತಿತ್ವ ಪರಿಪೂರ್ಣ ಆಗಲು ನಡೆದು ಬಂದ ಹಾದಿ, ಬದುಕಿನ ಹಿಂದಿನ ಎಲ್ಲ ಕತೆಗಳು, ಎಲ್ಲ ಆಯಾಮಗಳು ಹೇಗೆ ಪ್ರಸ್ತುತವಾಗುತ್ತವೋ ಒಂದು ದೇಶಕ್ಕೂ ತನ್ನ ಇತಿಹಾಸದ ಪ್ರತಿಪುಟವೂ, ವಾಸ್ತವದ ಪ್ರತಿ ಮಗ್ಗುಲಿನ ನೋಟವೂ ತಿಳಿದಿರುವುದು ಮುಖ್ಯವಾಗುತ್ತದೆ. ಮತ್ತೆ ಅಂತಹ ವಾಸ್ತವದ, ಚರಿತ್ರೆಯ ಅರಿವಿನಿಂದಲೇ ಆ ದೇಶದ ಬಗ್ಗೆ ಆ ದೇಶದ ಜನರ ಬಗ್ಗೆ ಹೊರಗಿನವರು, ದೂರದವರು, ಸಂಬಂಧಿಗಳಲ್ಲದವರು, ಇನ್ನೊಂದು ದೇಶದವರು ಮತ್ತೊಂದು ಊರಿನವರು ಏನು ಅಭಿಪ್ರಾಯ ಹೊಂದಿರುತ್ತಾರೆ ಎನ್ನುವುದು ಗೊತ್ತಾಗುವುದು. ನಮ್ಮ ನಮ್ಮ ಬಗ್ಗೆ ನಮ್ಮ ನಮ್ಮ ಮನಸ್ಸಲ್ಲಿ ಎಷ್ಟು ಹೆಮ್ಮೆ ಬಿಂಕಗಳು ಇದ್ದರೂ ಇನ್ನೊಬ್ಬರ ಕಣ್ಣಿನಲ್ಲಿ ನಾವು ಏನು ಎಂದು ತಿಳಿಯುವುದು ಬದುಕಿಗೆ ಅವಶ್ಯಕವಾದಂತೆ ಇದು ಕೂಡ.


ಸಾರಾಂಶ ಎಂದರೆ ಬ್ರಿಟನ್ನಿನ ವ್ಯಕ್ತಿತ್ವದ ಪೂರ್ಣ ಕಲ್ಪನೆ ಇಂದಿನ ಬ್ರಿಟನ್ನಿಗೂ ಈಗಿನ ಇಲ್ಲಿನ ಮಕ್ಕಳಿಗೂ ಸಿಗುತ್ತಿಲ್ಲ. ಜಲಿಯನ್ ವಾಲಾ ಭಾಗ್ ಗೆ ನೂರು ತುಂಬಿದ್ದರ ಚರ್ಚೆ ಒಂದು ನೆಪವಾಗಲಿ. ಈ ಸಮಯದ ಕ್ಷಮೆ, ಪರಿಹಾರ ಮತ್ತೇನೋ ನಾಟಕಗಳನ್ನು ಬದಿಗಿಟ್ಟು ಇಲ್ಲಿನ ಮಕ್ಕಳು ಓದುವ ಚರಿತ್ರೆಯ ಪುಸ್ತಕಗಳಲ್ಲಿ ಬ್ರಿಟನ್ನಿನ ಅಧಿಪತ್ಯದ ಕಾಲದ ಸೌಜನ್ಯದ ದೌರ್ಜನ್ಯದ ಕೆಲಸಗಳನ್ನು ಸೇರಿಸುವ ಉಲ್ಲೇಖಿಸುವ ಕೆಲಸವಾಗಲಿ. ಅದರಲ್ಲಿ ಬ್ರಿಟಿಷರು ಭಾರತದಲ್ಲಿ ಸ್ಥಾಪಿಸಿದ ಕಾನೂನು ಆಡಳಿತ ವ್ಯವಸ್ಥೆ, ದೇಶದುದ್ದಗಲಕ್ಕೆ ಎಳೆದ ರೈಲು ಹಳಿಗಳು ಕಟ್ಟಿದ ರಸ್ತೆ ಸೇತುವೆಗಳ ಪ್ರಸ್ತಾಪವೂ ಬರಲಿ. ಕ್ಷಾಮ ಡಾಮರಗಳ ಕತೆಗಳು ಭಾರತೀಯ ಸೈನಿಕರ ಕೊಡುಗೆಗಳು ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯಗಳೂ ತಿಳಿಸಲ್ಪಡಲಿ. ಇತಿಹಾಸಪ್ರಿಯ ಎನ್ನುವ ಹೆಮ್ಮೆಯ ಬ್ರಿಟಿಷರ ಹೆಸರಿಗೂ ಹೀಗೊಂದು ಹೆಜ್ಜೆ ಹೊಸ ಅರ್ಥವನ್ನು ತರಲಿ. ತಾವು ಹೊಣೆಗಾರರಾದ ಘಟನೆಯ ಬಗ್ಗೆ ಮನಪೂರ್ವಕ ಕ್ಷಮೆ ಕೇಳಲು ತೊಳಲಾಡುವ ಈ ಸಮಯದಲ್ಲಿ ಅಥವಾ ಯಾವ ಆಯಾಮದಿಂದ ಕಂಡರೂ ಅಕ್ಷಮ್ಯ ಎನಿಸುವ ಜಲಿಯನ್ ವಾಲಾ ಭಾಗ್ ಘಟನೆಯ ನೂರರ ಹೊತ್ತಲ್ಲಿ ಹೀಗೊಂದು ಅಪೇಕ್ಷೆ ಇದ್ದರೆ ತಪ್ಪೇನು?