ಜೀವನದಲ್ಲಿ ನಾನು ಯಾರನ್ನು ನೋಡುತ್ತೇನೆಯೋ ಅವರಂತೆ ಆಗಲು, ಅವರಲ್ಲಿ ತಾನು ಇಷ್ಟಪಟ್ಟದ್ದನ್ನು ತನ್ನ ಭಾಗವಾಗಿಸಿಕೊಳ್ಳುವ ತನ್ನ ಗುಣಕ್ಕೆ ಏನೆನ್ನಬೇಕು? ಆ ರೀತಿ ಎಲ್ಲರೊಳಗಿನಿಂದ ಒಂದೊಂದು ಹೆಕ್ಕುತ್ತಾ ಅರಗಿಸಿಕೊಂಡು ಬರುತ್ತಾ ಇದ್ದ ತನಗೆ ತನ್ನ ನಿಜವಾದ ಅಸ್ಮಿತೆ ಯಾವುದು? ಎಂದು ಪ್ರತಿಸಲ ಗೊಂದಲಕ್ಕೆ ಬೀಳುತ್ತಾನೆ. ಅದೇ ಹೊತ್ತಿಗೆ ಆ ಹುಡುಗ ಅವನು ಕೂತಿದ್ದ ಜಾಗದಿಂದಲೇ ”ಅಂಕಲ್, ನೀವು ರೈಟರ್ ಆಲ್ವಾ?” ಎಂದು ಜೋರಾಗಿ ಕೇಳಿದ. ಅವನು ಸುಮ್ಮನೆ ತಲೆ ಅಲ್ಲಾಡಿಸಿದ. ಕೂಡಲೇ ಹುಡುಗ ಅಲ್ಲಿಂದ ಈಜಿ ಬಂದು ಅವನ ಪಕ್ಕದಲ್ಲಿ ಒಂದು ಮೀಟರ್ ಅಂತರದಲ್ಲಿ ಕುಳಿತುಕೊಂಡ.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

ಅವನು ಈಜುಗೊಳದಲ್ಲಿ ಕಾಲಿಳಿಬಿಟ್ಟುಕೊಂಡು ಅನಂತವನ್ನು ದಿಟ್ಟಿಸುತ್ತಾ ಕಳೆದುಹೋಗಿದ್ದ. ಐವತ್ತಾರು ವರ್ಷದ ಅವನು ಭಾನುವಾರದ ಬೆಳಗುಗಳನ್ನು ಇಲ್ಲಿ ಕಳೆಯುವುದು ರೂಢಿ. ಬರಿಮೈಯಲ್ಲಿ ಒಂದು ನೀಲಿ ಚಣ್ಣ ಹಾಕಿಕೊಂಡು ಅಲುಗಾಡದೆ ಕೂತವನ ಕಣ್ಣುಗಳು ಸಣ್ಣಗೆ ತುಳುಕಾಡುತ್ತಿದ್ದ ನೀರಿನ ಮೇಲ್ಮೈಯಾಗಲಿ, ನೀರೊಳಗೆ ಬಿದ್ದ ಆಕಾಶದ ಬಿಂಬವನ್ನೇ ಆಗಲಿ ಗಮನಿಸುತ್ತಿದ್ದಂತೆ ಅನಿಸುತ್ತಿರಲಿಲ್ಲ. ಮುಸುಕು ಮೋಡಗಳು ಹರಡಿದ್ದ ಶುಭ್ರ ಬೆಳಕನ್ನು ತಿಳಿಗೊಳಿಸಿದ್ದವು… ನೀರಿನ ತುಳುಕಾಟದ ಲಯ ನೆನಪಿನ ಹರಿವಿನ ಪ್ರತಿಫಲನವೋ ಎಂಬಂತೆ ಇತ್ತು.

ಅದೇ ಹೊತ್ತಿಗೆ ಒಬ್ಬ ಹುಡುಗ ಬಂದು ಈಜುಗೊಳದಲ್ಲಿ ಧುಮುಕಿದ. ಅಲ್ಲಿಯವರೆಗಿನ ನೀರಿನ ಲಯ ಕಲಕಿ ಹೊಸ ತರಂಗಗಳೆದ್ದವು. ಈ ಹೊಸ ವಿದ್ಯಮಾನದಿಂದ ನಡುವಯಸ್ಕ ವಾಸ್ತವಕ್ಕೆ ಮರಳಿದ. ಅವನ ಮುಖದ ನೆರಿಗೆಗಳು ಸರಿದಾಡಿ ಮುಖದಲ್ಲೊಂದು ಮುಗುಳ್ನಗೆ ಮೂಡಿದ್ದು ಅದನ್ನು ಸ್ಪಷ್ಟಪಡಿಸುವಂತಿತ್ತು.

ಎದುರುಗಡೆಯಿಂದ ಈಜುತ್ತಾ ಬಂದ ಹುಡುಗನ ಆಕೃತಿ ಮೀನಿನಂತೆ ಕಂಡಿತು. ಗೋಧಿಬಣ್ಣದ ಮೀನು. ಪ್ರತಿ ಭಾನುವಾರ ಇದೆ ಸಮಯಕ್ಕೆ ಆ ಹುಡುಗ ಈಜಲು ಬರುವುದು ಕೇವಲ ಕಾಕತಾಳೀಯವೋ ಅಥವಾ ಅವರಿಬ್ಬರು ಹಾಗೆ ಒಬ್ಬರಿಗೊಬ್ಬರು ಭೇಟಿಯಾಗಬೇಕೆಂದು ಪೂರ್ವನಿರ್ಧರಿತವೋ ಎಂದು ಪ್ರತಿಬಾರಿ ಯೋಚಿಸುತ್ತಾನಾದರೂ ಯಾವುದೇ ನಿಲುವಿಗೆ ಬರುವುದು ಅವನಿಗೆ ಸಾಧ್ಯವಾಗುವುದಿಲ್ಲ… ಅವನು ಮತ್ತೆ ಮೀನಿನ ಹುಡುಗನ ಈಜುವುದರ ಕಡೆಗೇ ದೃಷ್ಟಿ ನೆಟ್ಟ. ಒಂದು ಸಣ್ಣ ಬದಲಾವಣೆ ನಾವು ನೋಡುವ ನೋಟಕ್ರಮವನ್ನೇ ಬದಲಾಯಿಸಿಬಿಡುತ್ತದೆ.

ಬೆಳಿಗ್ಗೆಯ ಒಂಭತ್ತು ಮುಕ್ಕಾಲರ ತಣ್ಣನೆಯ ಗಾಳಿ ಮೈಗೆ ಸೋಕಿ ಹಿತವೆನಿಸುತು. ಸೂರ್ಯನ ಕಿರಣಗಳನ್ನು ತಮ್ಮೊಳಗೆ ಹೊತ್ತ ಎಳೆಬಿಸಿಲು ಅವನ ಮೈಸೋಕಿ ಯಾವುದೋ ದಿವ್ಯಭಾವದ ಅನುಭೂತಿ ಕೊಟ್ಟಿತು. ಅವನು ಮುಂದೆ ಆಗುವುದನ್ನು ಖಚಿತವಾಗಿ ಊಹಿಸಿದ; ಹುಡುಗ ಈಜುತ್ತಾ ಬರುತ್ತಾನೆ, ತನ್ನ ಪಕ್ಕ ಕುಳಿತು ಗುಡ್ ಮಾರ್ನಿಂಗ್ ಅಂಕಲ್ ಎನ್ನುತ್ತಾನೆ. ಏನು ಈಜಲ್ವಾ ಇವತ್ತು? ಕೇಳುತ್ತಾನೆ. ಸಾಕಾಯಿತಪ್ಪ ಈಜಿ ಈಜಿ… ಎಂದಾಗ, ಅಯೋ ಬನ್ನಿ ಅಂಕಲ್ ಈಜಿದ ದಣಿವನ್ನ ಈಜುತ್ತಾನೆ ಕಳೆದುಕೊಳ್ಳಬೇಕು ಅಂತಾನೆ. ಆಗ ಅವನು ಸುಮ್ಮನೆ ಮುಗುಳ್ನಕ್ಕು ಅವನೊಂದಿಗೆ ಈಜಲು ನೀರಿಗೆ ಬೀಳುತ್ತಾನೆ.

ಹೊರಗೆ ನಿಂತು ನೋಡಿದರೆ ಈಗ ಈಜುಗೊಳದಲ್ಲಿ ಎರಡು ಮೀನುಗಳು ಈಜುತ್ತಿರುವಂತೆ ಕಾಣುತ್ತವೆ. ನೀರೊಳಗೆ ಈಜುವಾಗಲೇ ಅವನಿಗೆ ಮೊದಲ ಬಾರಿ ಈಜು ಕಲಿಯಲು ನೀರಿಗೆ ಬಿದ್ದದ್ದು ನೆನಪಾಗುತ್ತದೆ. ಅವನಿಗೆ ಈಜು ಕಲಿಸುತ್ತಿದ್ದ ಅಪ್ಪ, “ನೋಡು, ಈಜು ಕಲಿಬೇಕು ಅಂದ್ರೆ ನೀರನ್ನು ಮೊದ್ಲು ಪ್ರೀತಿಸ್ಬೇಕು. ಹಾಗಾಗಬೇಕಾದರೆ ಮೊದಲು ನೀರನ್ನು ನೀನು ನಂಬಬೇಕು.” ಅಂತ ಹೇಳಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ಈಜುತ್ತಾ ಈಜುತ್ತಾ ನೀರಿನಲ್ಲಿ ತಾನೂ ಒಂದಾಗುವ ಉಮೇದಿನಲ್ಲಿ ಆ ಇಬ್ಬರು ಸ್ಪರ್ಧೆಗೆ ಬಿದ್ದವರಂತೆ ಈಜುತ್ತಾರೆ. ಹುಡುಗನೇ ಕೊನೆಗೆ ಸೋತು ‘ಅವನು’ ಮೊದಲು ಕೂತಿದ್ದ ಜಾಗದಲ್ಲಿ ಕೂರುತ್ತಾನೆ. ಈಗ ಅವನು ಅಂಗಾತವಾಗಿ ಈಜುತ್ತಿದ್ದಾನೆ.

ಆಕಾಶ ತನ್ನ ಪಾಡಿಗೆ ತಾನು ಹಾಯಾಗಿ ತನ್ನದೇ ಆರಾಮದಲ್ಲಿ ತೇಲುತ್ತಿರುವಂತೆ ಕಾಣುತ್ತದೆ. ಚಲಿಸುವ ಮೋಡದ ಪ್ರತಿಬಿಂಬಗಳು ಈಜುಗೊಳದಲ್ಲೂ ಬಿದ್ದಿರುವುದು ಅವನ ಅರಿವಿಗೆ ಬರುತ್ತದೆ. ತಾನೀಗ ಆಕಾಶದಲ್ಲಿ ಈಜುತ್ತಿದ್ದೇನೆಯೋ ಅಥವಾ ನೀರಿನಲ್ಲೋ? ಎಂದು ಪುಳಕಗೊಳ್ಳುತ್ತಾನೆ… ಮತ್ತೆ ಮರುಕ್ಷಣವೇ ಅವನಿಗೆ ತಾನು ಯಾರೆಂದು ಗೊತ್ತಿರದ ಅಥವಾ ಜೀವವೇ ಇಲ್ಲದೆ ತೇಲಿ ಹೋಗುತ್ತಿರುವ ಒಂಟಿ ಹೆಣ ಎನಿಸಿ ಅವನ ಕಣ್ಣುಗಳು ಹನಿಗೂಡುತ್ತವೆ. ಅದೇ ಹೊತ್ತಿಗೆ ಮೇಲೆ ಆಕಾಶದಲ್ಲಿ ಹಕ್ಕಿಯೊಂದು ಒಂಟಿಯಾಗಿ ಹಾರುತ್ತದೆ.

*****

ಈಗ ಹುಡುಗ ಮತ್ತು ಅವನು ಎದುರು ಬದಿರಾಗಿ ಕೂತಿದ್ದಾರೆ. ಒಬ್ಬರಿಗೊಬ್ಬರು ಕಾಣುತ್ತಾರೆ. ನಡುವೆ ಈಜುಗೊಳದ ಅಂತರ. ಆ ಹುಡುಗ ತಾನು ಕೂತಿದ್ದ ಜಾಗದಲ್ಲೇ ಕೂತು ಕಾಲಿನಿಂದ ನೀರಿನಲ್ಲಿ ಅದೇನೋ ಅಕ್ಷರಗಳನ್ನು ಮೂಡಿಸುತ್ತಿದ್ದಾನೆ. ಹುಡುಗನನ್ನೇ ನೋಡುವ ಅವನಿಗೆ ತನ್ನ ಹೈಸ್ಕೂಲು ದಿನಗಳು ನೆನಪಾಗುತ್ತವೆ. ಅವನು ಓದುತ್ತಿದ್ದ ಶಾಲೆಯಲ್ಲಿದ್ದ ಶಾಂತಲಾ ಟೀಚರ್ ನೆನಪಾಗುತ್ತಾರೆ. ‘ಅವರು ಉಳಿದೆಲ್ಲಾ ಟೀಚರುಗಳಂತೆ ಸೀರೆ ಉಟ್ಟುಕೊಂಡು ಬರದೆ ಚೂಡಿದಾರ್ ಹಾಕುತ್ತಿದ್ದುದು, ಕೂದಲನ್ನು ಹರವಿ ಬಿಟ್ಟು ಒಂದು ಕ್ಲಿಪ್ಪು ಮಾತ್ರ ಹಾಕಿ ಅದಕ್ಕೊಂದು ಪುಟ್ಟ ಹೂವು ಸಿಕ್ಕಿಸಿಕೊಳ್ಳುತ್ತಿದ್ದುದು, ಅವರು ಪೂಸಿಕೊಂಡು ಬರುತ್ತಿದ್ದ ಸೆಂಟಿನ ಘಮ, ಅವರ ನಗು… ಹೀಗೆ ನೆನಪುಗಳು ಜಾತ್ರೆಗೆ ತೊಡಗುತ್ತವೆ. ”ಅವರಿಗೆ ತಾನೆಂದರೆ ಅದೆಷ್ಟು ಅಚ್ಚುಮೆಚ್ಚು! ಅವರು ಅದೆಷ್ಟು ದುಂಡಗೆ ಅಕ್ಷರ ಬರೆಯುತ್ತಿದ್ದರು. ನಾನು ಅವರಂತೆಯೇ ಅಕ್ಷರಗಳನ್ನು ಕಲಿತೆ. ಥೇಟ್ ಅವರಂತೆಯೇ! ಈಗ ನನ್ನ ಕನ್ನಡ ಅಕ್ಷರಗಳನ್ನು ನೋಡಿದರೆ ಅದು ಶಾಂತಲಾ ಟೀಚರ್ ಅಕ್ಷರಗಳಂತೆಯೇ ಕಾಣುತ್ತವೆ.” ಎಂದು ನೆನಪು ಮಾಡಿಕೊಂಡ. ಇದಂತೆಯೇ ಅಲ್ಲ ಜೀವನದಲ್ಲಿ ನಾನು ಯಾರನ್ನು ನೋಡುತ್ತೇನೆಯೋ ಅವರಂತೆ ಆಗಲು, ಅವರಲ್ಲಿ ತಾನು ಇಷ್ಟಪಟ್ಟದ್ದನ್ನು ತನ್ನ ಭಾಗವಾಗಿಸಿಕೊಳ್ಳುವ ತನ್ನ ಗುಣಕ್ಕೆ ಏನೆನ್ನಬೇಕು? ಆ ರೀತಿ ಎಲ್ಲರೊಳಗಿನಿಂದ ಒಂದೊಂದು ಹೆಕ್ಕುತ್ತಾ ಅರಗಿಸಿಕೊಂಡು ಬರುತ್ತಾ ಇದ್ದ ತನಗೆ ತನ್ನ ನಿಜವಾದ ಅಸ್ಮಿತೆ ಯಾವುದು? ಎಂದು ಪ್ರತಿಸಲ ಗೊಂದಲಕ್ಕೆ ಬೀಳುತ್ತಾನೆ. ಅದೇ ಹೊತ್ತಿಗೆ ಆ ಹುಡುಗ ಅವನು ಕೂತಿದ್ದ ಜಾಗದಿಂದಲೇ ”ಅಂಕಲ್, ನೀವು ರೈಟರ್ ಆಲ್ವಾ?” ಎಂದು ಜೋರಾಗಿ ಕೇಳಿದ. ಅವನು ಸುಮ್ಮನೆ ತಲೆ ಅಲ್ಲಾಡಿಸಿದ. ಕೂಡಲೇ ಹುಡುಗ ಅಲ್ಲಿಂದ ಈಜಿ ಬಂದು ಅವನ ಪಕ್ಕದಲ್ಲಿ ಒಂದು ಮೀಟರ್ ಅಂತರದಲ್ಲಿ ಕುಳಿತುಕೊಂಡ. ”ಅಪ್ಪ, ನಿಮ್ಮ ಬಗ್ಗೆ ಹೇಳ್ತಾ ಇರ್ತಾರೆ. ನೀವು ತುಂಬಾ ಒಳ್ಳೆಯ ಕಾದಂಬರಿಗಳನ್ನು ಬರೆದಿದ್ದೀರಂತೆ! ಈಗೇನು ಬರಿತಿದೀರಾ?”

”ಓಹ್, ಥ್ಯಾಂಕ್ಸ್. ಈಗ ಕೂಡ ಕಾದಂಬರಿಯನ್ನೇ ಬರೀತಾ ಇದೀನಿ. ಅರ್ಧ ಮುಗಿದಿದೆ. ಇನ್ನರ್ಧ ಬಾಕಿಯಿದೆ.”

”ನೈಸ್.”

”ಸಮಯ ಆದಾಗ ಮನೆ ಕಡೆ ಬಾ. ನಾನಿರೋದು ಜಿ- ೦೦೯ ಅಲ್ಲಿ…”

”ಖಂಡಿತಾ ಬರ್ತೀನಿ. ನಿಮಗೇನೋ ಹೇಳ್ಬೇಕು ನಾನು! ನಾನು ನಾಳೆ ನನ್ನ ಅಮ್ಮನನ್ನು ನೋಡೋದಕ್ಕೆ ಹೋಗ್ತಾ ಇದೀನಿ ಅಂಕಲ್. ಅಪ್ಪನಿಗೆ ಗೊತ್ತಿಲ್ಲ ಆ ವಿಷಯ. ಅಮ್ಮನೇ ಫೋನ್ ಮಾಡಿದ್ರು. ಅವರೇ ನನ್ನ ಅಮ್ಮ ಅಂತ ಹೇಳಿಕೊಂಡರು! ನಾನು ಅವರನ್ನು ನೋಡಿದ ಯಾವುದೇ ನೆನಪು ಕೂಡ ಇಲ್ಲ. ಆದರೆ ಈಗ ಕುತೂಹಲ ಆಗ್ತಿದೆ… ನಾನು ಚಿಕ್ಕವನಿರುವಾಗಲೇ ಅಮ್ಮ ನನ್ನ ಬಿಟ್ಟುಹೋದರಂತೆ! ಅದಕ್ಕೆ ಅಪ್ಪನಿಗೆ ಕೋಪ. ಅವರ ಹೆಸರು ಕೇಳಿದರೆ ಉರಿದುಕೋತಾರೆ. ನನಗೂ ಅವರ ಬಗ್ಗೆ ಸಿಟ್ಟಿದೆ. ಇಲ್ಲ, ಸಿಟ್ಟಿತ್ತು… ಫೋನಲ್ಲಿ ಆ ಧ್ವನಿ ಕೇಳಿದ ಮೇಲೆ ಅವರನ್ನು ನೋಡ್ಬೇಕು ಅನಿಸ್ತಿದೆ. ಏನ್ಮಾಡ್ಲಿ ಅಂಕಲ್?”

”ಹ್ಮ್‌… ನಿನಗೇನನಿಸತ್ತೆ?”

”ಯಾಕೋ ನೋಡ್ಲೇಬೇಕು ಅನಿಸ್ತಿದೆ… ಯಾಕೆ ಅಂತ ಗೊತ್ತಿಲ್ಲ.”

”ಹ್ಮ್‌…”

”ಕಡೆ ಪಕ್ಷ ಯಾಕೆ ನನ್ನನ್ನು ಒಬ್ಬನನ್ನೇ ಬಿಟ್ಟುಹೋದೆ ಅಂತ ಕೇಳ್ಬೇಕು ಅನ್ಸತ್ತೆ… ಅಪ್ಪ ನಿನ್ನ ಬಗ್ಗೆ ಹೇಳಿದ್ದು ಸರಿಯಿತ್ತಾ ಅಂತ ಕೇಳ್ಬೇಕು ಅನ್ಸತ್ತೆ. ಸಾರಿ. ಇವೆಲ್ಲಾ ನಾನು ನಿಮಗೆ ಯಾಕೆ ಕೇಳ್ತಾ ಇದೀನಿ ಅಂತಾನೂ ಗೊತ್ತಿಲ್ಲ.” ಆ ಹುಡುಗನ ಕಣ್ಣಲ್ಲಿ ಒಂದು ವಿಲಕ್ಷಣ ಅನಾಥ ಭಾವವಿತ್ತು. ಅದರಲ್ಲಿ ಗೊಂದಲವೇ ದ್ರವ್ಯವಾಗಿ ತುಳುಕುತ್ತಿದ್ದಂತೆನಿಸಿತು.

ಅವನು ಹುಡುಗನ ಬೆನ್ನು ನೇವರಿಸಿದ. ಅವನಿಗೆ ಏನೊಂದು ಹೇಳಬೇಕೆನಿಸಲಿಲ್ಲ. ಅವನ ತಲೆಯ ತುಂಬೆಲ್ಲಾ ಹೊಸದಾಗಿ ಕೆಲಸಕ್ಕೆ ಸೇರಿದಾಗ ಕಾಲೇಜಿನ ಪ್ರಥಮ ವರ್ಷದಲ್ಲಿದ್ದ ಆ ರಿಹಾನ್ ಎಂಬ ಹುಡುಗನೇ ನೆನಪಾದ. ”ನಾನೇಕೆ ಆ ಕಾಲೇಜಿನ ವಾರ್ಷಿಕೋತ್ಸವದ ಮರುದಿನದಿಂದ ಆ ಕಾಲೇಜನ್ನೇ ಬಿಟ್ಟುಬಂದೆ? ಯಾರಿಗೂ ಯಾವ ವಿಷಯವನ್ನೂ ಹೇಳದೆ! ಕಡೇಪಕ್ಷ ಆ ಹುಡುಗನಿಗಾದರೂ ಹೇಳಬಹುದಿತ್ತು… ಹೇಳದೆ ಹೊರಟುಬಿಡುವುದರಲ್ಲಿಯೇ ನೆಮ್ಮದಿ ಅಡಗಿದೆಯಾ?” ಏನೇನೋ ಯೋಚನೆಗಳು ಸುತ್ತುತ್ತಿರುವ ಹೊತ್ತಿಗೆ ದಟ್ಟೈಸಿದ ಮೋಡಗಳು ಕರಗಿ ಆಗೊಂದು ಈಗೊಂದು ಎಂಬಂತೆ ಹನಿಹನಿಯುದುರಲಾರಂಭಿಸಿದವು.

ಪ್ರತಿ ಭಾನುವಾರ ಇದೆ ಸಮಯಕ್ಕೆ ಆ ಹುಡುಗ ಈಜಲು ಬರುವುದು ಕೇವಲ ಕಾಕತಾಳೀಯವೋ ಅಥವಾ ಅವರಿಬ್ಬರು ಹಾಗೆ ಒಬ್ಬರಿಗೊಬ್ಬರು ಭೇಟಿಯಾಗಬೇಕೆಂದು ಪೂರ್ವನಿರ್ಧರಿತವೋ ಎಂದು ಪ್ರತಿಬಾರಿ ಯೋಚಿಸುತ್ತಾನಾದರೂ ಯಾವುದೇ ನಿಲುವಿಗೆ ಬರುವುದು ಅವನಿಗೆ ಸಾಧ್ಯವಾಗುವುದಿಲ್ಲ…

”ಮನುಷ್ಯನ ಮೂಲ ಸ್ವಭಾವ ಅಂಟಿಕೊಳ್ಳುವುದು! ಬದುಕಿನಲ್ಲಿ ನಾವು ಎಲ್ಲದಕ್ಕೂ ಅಂಟಿಕೊಳ್ಳೋದಕ್ಕೆ ಇಷ್ಟಪಡ್ತೀವಿ. ಯಾವನೇ ಒಬ್ಬ ಅಂಟಿಕೊಂಡದ್ದನ್ನ ಕೊಡವಿಕೊಂಡು ಹೋಗುತ್ತಾನೆ ಅಂದರೆ ಕಾರಣಗಳು ಇದ್ದೆ ಇರುತ್ತವೆ. ಆ ಕಾರಣಗಳನ್ನು ತಿಳಿದುಕೊಳ್ಳೋದರಿಂದ ನಿನ್ನ ಮನಸ್ಸು ಹಗುರಾಗುತ್ತೆ ಅಂದ್ರೆ ಖಂಡಿತಾ ಹೋಗು. ಆದರೆ ನಿನ್ನ ಮನಸ್ಸಿನ ತಿಳಿನೀರು ಶಾಶ್ವತವಾಗಿ ಕದಡಿ ಹೋಗತ್ತೆ ಅಂತಾದರೆ ಅದು ತಾನೇ ತಾನಾಗಿ ಬಂದರೂ ಒಂದು ಅಂತರ ಕಾಯ್ದುಕೊಳ್ಳೋದೇ ಉತ್ತಮ.”

”ಹ್ಮ್‌… ಥ್ಯಾಂಕ್ಸ್.” ಎಂದು ಹೇಳಿದ. ಮಳೆಯ ಹನಿಗಳು ಅವರಿಬ್ಬರ ಮೇಲೆ ಥಟಥಟನೆ ಬಿದ್ದು ಮತ್ತೆ ಹೊಸದಾಗಿ ತೋಯಿಸತೊಡಗಿದವು.

ಮಳೆಯ ಹನಿಗಳು ಜೋರಾಗುತ್ತಲೇ ಹುಡುಗ ಎದ್ದು ಹೊರಟ. ಅಲ್ಲೇ ಕೂತಿದ್ದ ಅವನು ಈಜುಗೊಳದ ನೀರಿನಲ್ಲಿ ಮಳೆಹನಿಗಳಿಂದ ಏಳುತ್ತಿದ್ದ ಅಸಂಖ್ಯಾತ ತರಂಗಗಳನ್ನು ನೋಡುತ್ತಾ ಕುಳಿತ. ಮಳೆ ಜೋರಾಗತೊಡಗಿತು… ಅವನಿಗೆ ತನ್ನ ಅಪ್ಪ ಅವನು ಹತ್ತನೇ ತರಗತಿಯಲ್ಲಿರುವಾಗ ಕರೆಂಟು ಹೋಗಿ ಇಂತದ್ದೇ ಮಳೆಗಾಲದ ಜೋರಾಗಿ ಮಳೆ ಸುರಿಯುತ್ತಿದ್ದ ಒಂದು ರಾತ್ರಿ ಹಿತ್ತಲಿನ ಕಡಪಾ ಕಲ್ಲಿನ ಮೇಲೆ ಬೆತ್ತಲೆಯಾಗಿ ಕುಳಿತಿದ್ದು ನೆನಪಾಯಿತು. ಕೂಡಲೇ ಮಳೆಯಲ್ಲಿಯೇ ಈಜುಗೊಳದಲ್ಲಿ ಜಿಗಿದ.

*****

ಮರುದಿನದ ಸಂಜೆ ಅವನು ತಾನು ಅರ್ಧ ಬರೆದ ಕಾದಂಬರಿಯ ಮುಂದಿನ ಭಾಗವನ್ನು ಬರೆಯುತ್ತಾ ಕುಳಿತಿದ್ದ. ಕಿಟಕಿಯಿಂದ ಸೂರ್ಯಾಸ್ತದ ಕೆಂಪು ಬೆಳಕು ಅವನ ಕೋಣೆಗೆ ನಿಧಾನವಾಗಿ ಆವರಿಸುತ್ತಿತ್ತು. ಪಕ್ಷಿಗಳ ಚಿವ್ ಚಿವ್ ದನಿ ಕಿವಿಗೆ ಹಿತವೆನಿಸಿತ್ತು. ಬಾಲ್ಕನಿಯಾಚೆಯಿದ್ದ ಮಕ್ಕಳ ಆಟದ ಕೇಕೆ ಅಸ್ಪಷ್ಟವಾಗಿ ಹಿನ್ನಲೆಯಲ್ಲಿ ಕೇಳಿಸುತ್ತಿತ್ತು.

ಅಮ್ಮ ಮನೆಯೊಳಗಡೆ ಮುಂಬತ್ತಿ ಹಚ್ಚಿಟ್ಟು ತನ್ನನ್ನು ಅವಳ ಪಕ್ಕ ಕುಳ್ಳಿರಿಸಿಕೊಂಡು ಕೈಕೈ ಹೊಸೆಯುತ್ತಾ ಕುಳಿತಿದ್ದಳು. ಹಿಂಬಾಗಿಲಿನಿಂದ ಬರುತ್ತಿದ್ದ ಗಾಳಿಗೆ ಹೊಯ್ದಾಡುತ್ತಿದ್ದ ಗಾಳಿ ಬೆಳಕನ್ನು ನೂಕಾಡುತ್ತಿರುವುದನ್ನು, ಹಾಗೆ ನೂಕಾಡಿದಾಗೆಲ್ಲಾ ತಮ್ಮ ನೆರಳುಗಳೂ ಸಹ ಚಲಿಸುತ್ತಿದ್ದವು. ಆಗ ಪ್ರತಿಸಲ ಗುಡುಗಿದಾಗ ಕೂಡ ಅಮ್ಮ ‘ಅರ್ಜುನ ಅರ್ಜುನ ಅರ್ಜುನ ಅರ್ಜುನ’ ಎಂದು ಜಪಿಸುತ್ತಾ ಮತ್ತೊಂದು ಕಡೆ ಅಪ್ಪನನ್ನು ”ಹಾಳಾದವನು ಮರ್ಯಾದೆ ತೆಗೀಬೇಕು ಅಂತಾನೆ ಬೆತ್ತಲೆ ಕೂತಿದ್ದಾನೆ. ಯಾವಾಗ ಸಾಯ್ತಾನೇನೋ ಹಡಿಬಿಟ್ಟಿ!” ಎಂದು ಶಪಿಸುತ್ತಿದ್ದಳು. ಅಂದು ಮಳೆ ಅದೆಷ್ಟೋ ಹೊತ್ತು ಧೋ ಎಂದು ಸುರಿದಿತ್ತು. ಅಪ್ಪನನ್ನು ಊಟಕ್ಕೆ ಕರೆದುಬಂದಳು. ಅವನಿಂದ ಯಾವುದೇ ಉತ್ತರ ಬರಲಿಲ್ಲ. ”ಬಾ, ಅವನು ಹೇಗಾದರೂ ಸಾಯಲಿ. ನಾಮರ್ದ ಅವನು. ಪಿಶಾಚಿ. ಹಾಳಾಗಿ ಹೋಗಲಿ. ನಾವಿಬ್ಬರೂ ಊಟ ಮಾಡಣ.” ಎಂದು ಗಟ್ಟಿಯಾಗಿ ಅವನಿಗೆ ಕೇಳುವಂತೆ ಹೇಳಿ ಅಡುಗೆ ಮನೆಯಿಂದ ಊಟ ಹಾಕಿಕೊಂಡುಬಂದು ತುತ್ತು ಮಾಡಿ ತಿನ್ನಿಸಿ ತಾನು ಈ ಮೊದಲು ಊಟವೇ ಮಾಡಿಯೇ ಇಲ್ಲವೇನೋ ಎಂಬಂತೆ ಗಬಗಬನೆ ಉಂಡಿದ್ದಳು. ಆಗ ಅವಳ ಕಣ್ಣಾಲಿಗಳು ಹೊಳೆದದ್ದು ಯಾಕೆಂದು ನನಗೆ ಅರ್ಥವಾಗಿರಲಿಲ್ಲ. ಚೆನ್ನಾಗಿ ಹೊದೆಸಿ ಮಲಗಿಸಿದಳು. ಮಾರನೇ ದಿನ ಅಪ್ಪ ಏಳಲಿಲ್ಲ. ಅಮ್ಮ ಗರಬಡಿದವಳಂತೆ ಕೂತಿದ್ದಳು. ಅಮ್ಮ ಅತ್ತಿರಲಿಲ್ಲ…

ಮೊದಲಿನಿಂದಲೂ ಅಮ್ಮ ನನಗೆ ಗಟ್ಟಿಗಿತ್ತಿಯಾಗಿಯೇ ಕಂಡವಳು. ಆದರೆ ನನ್ನ ಬಗ್ಗೆ ಮಾತ್ರ ಅಮ್ಮ ಉಸಿರುಗಟ್ಟಿಸುವಂತೆ ನಡೆದುಕೊಂಡಳು. ಈಗ ತಿರುಗಿ ನೋಡಿದರೆ ನನ್ನ ಬಗ್ಗೆ ಅಮ್ಮನಿಗೆ ಎಲ್ಲಾ ಗೊತ್ತಿತ್ತು. ನನ್ನನ್ನು ನನ್ನ ಪಾಡಿಗೆ ಬಿಟ್ಟಿದ್ದರೆ ನಾನೇನಾಗಬಹುದಿತ್ತೆಂದು ಕೂಡ ಗೊತ್ತಿದ್ದಂತೆ ಕಾಣುತ್ತದೆ. ಅಮ್ಮ ನನ್ನನ್ನು ಯಾವುದೇ ಹಾಸ್ಟೆಲ್ಲಿಗೆ ಸೇರಿಸಲಿಲ್ಲ. ಮನೆಯಲ್ಲಿಯೇ ಕುಳಿತು ಓದಿಸಿದಳು. ಸದಾ ನನ್ನನ್ನು ತನ್ನ ನೆರಳಲ್ಲಿಯೇ ಇಟ್ಟುಕೊಂಡಳು. ನನ್ನ ಓದಿನ ಕೋಣೆ, ಪುಸ್ತಕಗಳು, ಸದಾ ತುಂಬಿರುತ್ತಿದ್ದ ಕುಡಿಯುವ ನೀರಿನ ಗಾಜಿನ ಲೋಟ, ಪಕ್ಕದಲ್ಲಿನ ಕಿಟಕಿ ಅಷ್ಟೇ ನನ್ನ ಮನೆಯ ಪ್ರಪಂಚವಾಗಿದ್ದವು. ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕಿತ್ತು. ಅಮ್ಮ ತನ್ನ ಪ್ರೀತಿಯಲ್ಲಿ ನನ್ನೊಳಗನ್ನ ಕೊಲ್ಲುತ್ತಿದ್ದಾಳೇನೋ ಎನಿಸುವ ಮಟ್ಟಿಗೆ ನನಗೆ ಹಿಂಸೆಯೆನಿಸುತ್ತಿತ್ತು… ಒಮ್ಮೊಮ್ಮೆ ಧಿಡೀರನೆ ಕಾಲೇಜಿಗೆ ಬಂದು ಹಾಜರಿ ತಿಳಿದುಕೊಂಡು ಹೋಗಿಬಿಡುತ್ತಿದ್ದಳು. ಮನೆಯಲ್ಲಿ ಯಾವ ಬೆಕ್ಕು ಮತ್ತು ನಾಯಿಯನ್ನೂ ಕೂಡ ಸಾಕಲು ಬಿಟ್ಟಿರಲಿಲ್ಲ. ಅಪ್ಪ ಸತ್ತ ಮೇಲೆ ಅಮ್ಮ ಬ್ಯೂಟಿ ಪಾರ್ಲರ್ ತೆಗೆದಿದ್ದಳು. ಅದಕ್ಕೆ ”ಸರೋಜಾ ಬ್ಯೂಟಿ ಪಾರ್ಲರ್” ಅಂತಲೇ ಹೆಸರಿಟ್ಟಿದ್ದಳು. ಅಲ್ಲಿಗೆ ಬರುತ್ತಿದ್ದ ಹೆಂಗಸರೆಲ್ಲರೂ ಅದೆಷ್ಟು ಮುದ್ದಾಗಿದ್ದಾನೆ ನಿಮ್ಮ ಮಗ? ಥೇಟ್, ನಿಮ್ಮದೇ ರೂಪು. ಹುಡುಕಿದರೂ ಅವರಪ್ಪನ ಕಳೆ ಇಲ್ಲ ನೋಡಿ, ಚೆನ್ನಾಗಿದ್ದಾನೆ ಚೆನ್ನಾಗಿದ್ದಾನೆ.” ಎಂದು ಹೇಳಿ ನನ್ನ ಕೆನ್ನೆ ಹಿಂಡುತ್ತಿದ್ದರಾದರೂ ಅವರ ಆ ಮಾತುಗಳು ಅಮ್ಮನನ್ನು ಕಸಿವಿಸಿ ಮಾಡುತ್ತಿದ್ದವು. ಅದರ ಯಾವ ಕಾರಣವೂ ನನಗೆ ತಿಳಿಯುತ್ತಿರಲಿಲ್ಲ.

ಮೊದಲೆಲ್ಲಾ ಅವಳ ಅಂಗಡಿಗೆ ನನ್ನನ್ನು ಬಿಟ್ಟುಕೊಳ್ಳುತ್ತಿದ್ದ ಅಮ್ಮ ನಾನು ಆಗಾಗ ಅಲ್ಲಿರುತ್ತಿದ್ದ ಪ್ರಸಾದನ ಸಾಮಗ್ರಿಗಳ ಬಗ್ಗೆ ಹೊಂದಿದ್ದ ಕುತೂಹಲದ ಕಣ್ಣುಗಳನ್ನು ಸರಿಯಾಗಿ ಗುರುತಿಸಿದಳೋ ಏನೋ ಕಾಣೆ, ಅವಳ ಅಂಗಡಿಗೆ ನನಗೆ ಪ್ರವೇಶವೇ ಕೊಡಲಿಲ್ಲ. ನಾನು ಕೋಣೆಗೆ ನನ್ನ ಓದಿನ ರೂಮಿನ ಕೋಣೆ, ಪುಸ್ತಕಗಳು, ಸದಾ ತುಂಬಿರುತ್ತಿದ್ದ ಕುಡಿಯುವ ನೀರಿನ ಗಾಜಿನ ಲೋಟ, ಪಕ್ಕದಲ್ಲಿನ ಕಿಟಕಿಯ ಪ್ರಪಂಚದಲ್ಲಿ ಉಳಿದುಹೋದೆ. ಒಮ್ಮೆ ಅಮ್ಮನಿಗೆ ಪುಟ್ಟ ಅಕ್ವೇರಿಯಂ ಆದರೂ ತರೋಣ ಎಂದು ಕೇಳಿದ್ದಕ್ಕೆ ಆ ಮೀನುಗಳನ್ನು ಅದರಲ್ಲಿ ಹಾಕಿ ಅವುಗಳ ಜೀವನ ನರಕ ಮಾಡೋದು ಬೇಡ ಎಂದು ಸುತರಾಂ ತಿರಸ್ಕರಿಸಿಬಿಟ್ಟಿದ್ದಳು. ಕಡೆಗೆ ನಾನು ನನ್ನ ಮುಂದಿದ್ದ ಗಾಜಿನ ಲೋಟದಲ್ಲಿ ನನ್ನ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಾ, ಅದರಲ್ಲಿನ ಒಂದೊಂದೇ ನೀರಿನ ಹನಿಯನ್ನು ಮೇಲೆತ್ತಿ ತರಂಗಳೇಳಿಸುವುದನ್ನು, ಹೊರಗಡೆ ಮಳೆ ಬರುತ್ತಿರುವಾಗ ಕೈ ಹೊರಗೆ ಮಾಡಿ ಖಾಲಿ ಗಾಜಿನ ಲೋಟವನ್ನು ಹೊರಗಡೆ ಹಿಡಿದು ಮಳೆನೀರು ತುಂಬಿಸುವುದನ್ನು ಮಾಡುತ್ತಿದ್ದೆ.

ಅಮ್ಮನ ಕೊನೆ ದಿನಗಳಲ್ಲಿ ಆಸ್ಪತ್ರೆಗೆ ಸೇರಿಸಿದ್ದೆ. ಆಗತಾನೇ ನನಗೆ ಕೆಲಸ ಸಿಕ್ಕಿತ್ತು. ಅಮ್ಮ ಅಂದು ಆಸ್ಪತ್ರೆಯಲ್ಲಿ ಹೇಳಿದ ಮಾತು; ”ನೀನು ನಿನ್ನಪ್ಪನ ಹಾಗೆ ಆಗಬಾರದು ಅಂತ ನಿನ್ನ ಜೀವನವನ್ನೇ ಉಸಿರುಗಟ್ಟಿಸಿಬಿಟ್ಟೆ. ನಿನ್ನಿಂದ ನನ್ನ ಜೀವನ ನಗುವವರ ಮುಂದೆ ನಗೆಪಾಟಲಿಗೆ ಈಡಾಗದೆ ಬದುಕಬೇಕು ಅನ್ನೋ ಜಿದ್ದಿನಿಂದ ನಿನ್ನ ಸಹಜತೆಯನ್ನೇ ಕೊಂದೆ ಅನ್ಸತ್ತೆ. ನನ್ನ ಕಾಲ ಮುಗೀತು. ಇನ್ನು ನೀನು ನಿನಗೆ ಬೇಕಾದ ಹಾಗಿರು…” ಎಂದಳಾದರೂ ಮತ್ತೆ ಮಾತು ಮುಂದುವರೆಸಿ ”ಆದರೂ ನೀನು ನಾನಿಲ್ಲದೇ ತುಂಬಾ ಕಷ್ಟ ಪಡ್ತೀಯಾ ಅಂತಾ ನನಗೆ ಬಹಳ ದುಃಖ ಆಗ್ತಿದೆ ಕಣೋ! ನಿನ್ನನ್ನು ಒಬ್ಬನೇ ಬಿಟ್ಟುಹೋಗೋದಕ್ಕೆ ನನಗಿಷ್ಟ ಇಲ್ಲ… ನನ್ನನ್ನು ಬದುಕಿಸಿಕೋ ಪ್ಲೀಸ್… ಈ ಜೀವ ಉಳೀತು ಅಂದ್ರೆ ಇನ್ಮೇಲೆ ನೀನು ಹೇಗೋ ಹಾಗೆ! ನನ್ನನ್ನು ಬದುಕಿಸೋ,” ಎಂದು ಗೋಗರೆದಿದ್ದಳು. ನರ್ಸ್ ಬಂದು ಇಂಜೆಕ್ಷನ್ ಕೊಟ್ಟು ಸಲಾಯಿನ್ ಬಾಟಲ್ ಹಾಕಿಟ್ಟು ಹೋಗಿದ್ದಳು. ನಾನು ಅಂದು ಅದರಿಂದ ಬೀಳುತ್ತಿದ್ದ ಒಂದೊಂದೇ ಹನಿಯನ್ನು ನೋಡುತ್ತಾ ಕೂತಿದ್ದೆ. ಎಷ್ಟೋ ಹೊತ್ತಿಗೆ ನಿದ್ದೆ ಹತ್ತಿತು. ಅಮ್ಮ ಚೇತರಿಸಿಕೊಳ್ಳಲಿಲ್ಲ.

ಮುಂದಿನ ಅಧ್ಯಾಯ…

ನಾನೇಕೆ ಅಂದು ಆ ಕಾಲೇಜು ವಾರ್ಷಿಕೋತ್ಸವದ ಮರುದಿನದಿಂದ ಕಾಲೇಜಿಗೇ ಹೋಗಲಿಲ್ಲ? ನನ್ನನ್ನವರು ಕ್ವೀರ್ ಡೇಟಿಂಗ್ ಸೈಟಿನಲ್ಲಿ ನೋಡಿಬಿಟ್ಟಿದ್ದರು. ನಾನಂದು ಬಾಯ್ಸ್ ಡ್ರೆಸ್ಸಿಂಗ್ ರೂಮಿನ ಇಂಚಾರ್ಜ್ ಆಗಿದ್ದೆ. ಕಾರ್ಯಕ್ರಮ ಇನ್ನೇನು ಮುಗಿಯುವುದರಲ್ಲಿತ್ತು. ಕಾರ್ಯಕ್ರಮ ನೋಡಲು ಮನಸ್ಸಿರಲಿಲ್ಲ. ಸುಮ್ಮನೆ ಕೋಣೆಯಲ್ಲಿ ಕೂತಿದ್ದೆ. ವೇದಿಕೆಯ ಭಾಗದಿಂದ ಬಾಲಿವುಡ್ ಹಾಡಿನ ಧ್ವನಿ ಧ್ವನಿವರ್ಧಕದ ಮೂಲಕ ಜೋರಾಗಿ ಕೇಳಿಸುತ್ತಿತ್ತು. ರಿಹಾನ್ ಅದೇ ಹೊತ್ತಿಗೆ ಬಂದ. ನಾನು ತುಸು ಅಧೀರನಾಗಿದ್ದೆ. “ಹಾಯ್ ಸರ್, ಕಾರ್ಯಕ್ರಮ ನೋಡಲು ಬರುವುದಿಲ್ಲವಾ?” ಎಂದು ಕೇಳಿದ್ದ. ನಾನು ”ಇಲ್ಲಪ್ಪ, ನನಗವೆಲ್ಲಾ ಮಹಾಬೋರು.” ಎಂದು ಹೇಳಿ ಸುಮ್ಮನೆ ಕುಳಿತೆ. “ನನಗೂ ಮನಸ್ಸಿಲ್ಲ ಸರ್. ಇಲ್ಲೇ ನಿಮ್ಮ ಜೊತೇನೆ ಆರಾಮಾಗಿ ಮಾತಾಡ್ತಾ ಕೂರೋದೇ ಚೆನ್ನಾಗಿರತ್ತೆ” ಎಂದವನೇ ಪಕ್ಕ ಬಂದು ಕುಳಿತಿದ್ದ. ನನ್ನ ಎದೆ ಹೊಡೆದುಕೊಳ್ಳಲಾರಂಭಿಸಿತು…

*****

ಮುಂದಿನದನ್ನು ಅವನಿಗೆ ಬರೆಯಲು ಸಾಧ್ಯವಾಗಲಿಲ್ಲ. ಕೈಗಳು ನಡುಗುತ್ತಿದ್ದವು. ಯಾಕೆ ಹಾಗೆ? ಎಂದು ಕೇಳಿಕೊಂಡರೆ ಇದು ಹೀಗೆ… ಎಂದು ಅದೆಷ್ಟೇ ದೃಢವಾಗಿ ಉತ್ತರಿಸಿದರೂ ಕೂಡ ಮನಸ್ಸಿನ ಯಾವುದೇ ಮೂಲೆಗೆ ಅಂಟಿ ಕುಳಿತಿದ್ದ ಅಪರಾಧಿ ಮನೋಭಾವ ಅದನ್ನು ಬರೆಯದಂತೆ ತಡೆದಿತ್ತು. ಬರೆಯುತ್ತಿರುವುದು ಕಾದಂಬರಿಯಾ? ಆತ್ಮಕತೆಯಾ? ಗೊಂದಲಕ್ಕಿಟ್ಟುಕೊಂಡಿತು. ಎರಡೂ ಸಂದರ್ಭಗಳಲ್ಲಿಯೂ ನಿಜ ಹೇಳದಿದ್ದರೆ ಬರವಣಿಗೆಗೆ ಜೀವ ಬರುವುದಿಲ್ಲವೆಂದು ಅವನಿಗನಿಸಿತು. ಅದೇ ಹೊತ್ತಿಗೆ ಕಾಲಿಂಗ್ ಬೆಲ್ ಬಾರಿಸಿದ ಸದ್ದು ಕೇಳಿಸಿತು. ಅವನು ಮನಸ್ಸಿನಲ್ಲಿ ”ಓಹ್, ಈಜುಗೊಳದ ಮೀನಿನ ಹುಡುಗನೇ ಆಗಿರಬೇಕು!” ಎಂದುಕೊಂಡ. ಒಂದು ವೇಳೆ ಬಂದಿರುವುದು ರಿಹಾನ್ ಆಗಿದ್ದರೆ? ಈಗಲೂ ಸಹ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಎದೆ ಹೊಡೆದುಕೊಂಡ ತೀವ್ರತೆಯಲ್ಲಿಯೇ ಎದೆ ಹೊಡೆದುಕೊಳ್ಳುತ್ತದಾ?

ಒಳಗೆ ಬಂದು;
”ನೀವು ಆ ದಿನದ ನಂತರ ಕಾಲೇಜಿಗೆ ಬರಲೇ ಇಲ್ಲ! ಅಂದಿನ ಒಂದು ಮುತ್ತು ನಿಮ್ಮನ್ನು ಅಷ್ಟು ಭಯ ಪಡಿಸಿತಾ? ನಿಮ್ಮ ಕಣ್ಣುಗಳು ನಾನು ಆ ಧೈರ್ಯ ತೆಗೆದುಕೊಳ್ಳುವಂತೆ ಮಾಡಿದ್ದವು! ನಿಜ ಹೇಳಿ, ನಿಮಗೆ ಅಂದಿನ ಘಟನೆ ಅಸಹ್ಯ ಅನಿಸಿತಾ? ಎದುರಿಸಲಾರದೆ ಬಿಟ್ಟುಹೋದಿರಾ?”

ಆ ಪ್ರಶ್ನೆಗೆ ಹೆದರಿದಂತಾಗಿ ಮೆಟ್ಟಿ ಬಿದ್ದ. ಅವನು ಎದ್ದ ರಭಸಕ್ಕೆ ಕೈತಾಗಿ ಗಾಜಿನ ಲೋಟ ಈಗಷ್ಟೇ ಶುರುಮಾಡಿದ ಅಧ್ಯಾಯದ ಮೇಲೆ ಚೆಲ್ಲಿಬಿಟ್ಟಿತು. ಅಕ್ಷರಗಳು ಕಲೆತುಹೋದವು. ಅಕ್ಷರಗಳು ನೀರಿನಲ್ಲಿ ನೆಂದು ಜಾರಿ ಹೋಗುತ್ತಿರುವಂತೆ ಅನಿಸಿತು. ಗಾಯವಾದಾಗ ಒಸರುವ ರಕ್ತದಂತೆ ಬಿಳಿಯ ಹಾಳೆಯ ಮೈಮೇಲಿಂದ ನೀಲಿ ಬಣ್ಣ ಹರಿದುಹೋಗುತ್ತಿತ್ತು… ತನಗೆ ಕಾನೂನಿನ ಭಯವಿತ್ತಾ? ಹೌದಲ್ಲವೇ? ಅವನಿಗೆ ಕೇವಲ ಹದಿನಾರು ಆಗ. ನಮ್ಮ ನಡುವಿನ ಹೃದಯಬಡಿತದ ತೀವ್ರತೆ ಅದೇನೇ ಆಗಿದ್ದರೂ ಸಂಬಂಧವನ್ನು ಮುಂದುವರೆಸದಿದ್ದುದೆ ಸರಿ ಎಂದು ನಿರ್ಧರಿಸಿದ. ”ಮತ್ತೆ ನೀವು ಕೊಟ್ಟ ಮುತ್ತಿಗೆ ಅರ್ಥ?” ಎಂದು ಕೇಳಿದರೆ? ಯಾಕೆ ಕಾರಣ ಹೇಳದೆ ಹೋದಿರಿ ಎಂದರೆ? ಅವನಿಗೆ ಏನು ಉತ್ತರ ಹೇಳಬೇಕು?

”ಬದುಕು ನಾವು ಮಾಡಿಕೊಳ್ಳುವ ಕಾನೂನಿಗಿಂತಲೂ ದೊಡ್ಡದು! ಆದರೆ ನಿನ್ನ ವಯಸ್ಸು ಸರಿ ತಪ್ಪುಗಳನ್ನು ತೂಗಿ ಬೇಕುಬೇಡಗಳನ್ನು ಸರಿಯಾಗಿ ನಿರ್ಧರಿಸಿ ಮುಂದುವರೆಯುವ ವಯಸ್ಸಾಗಿರಲಿಲ್ಲವಲ್ಲ! ಆಗ ನಿನ್ನದು ಏರು ಯೌವನದ ಹುಚ್ಚು ಹೊಳೆಯಲ್ಲಿ ತರಗೆಲೆಯ ಹಾಗೆ ಕೊಚ್ಚಿ ಹೋಗುವ ಮನಸು. ನಿನ್ನ ಆ ಕ್ಷಣದ ಯೋಚನಾರಹಿತ ನಡವಳಿಕೆಯ ಕ್ಷಣದ ಫಾಯಿದೆ ಪಡೆದು ಜೀವನದ ಭಾಗ ಮಾಡಿಕೊಂಡು ಪಂಜರದಲ್ಲಿ ಇರಿಸುವುದು ಸಾಧ್ಯವಿರಲಿಲ್ಲ. ಅದು ನಿಜವಾದ ತಪ್ಪು. ಮನಸ್ಸಿನ ಮಾತು ಎಂದು ನೀನು ಕೇಳಬಹುದು? ನಿನ್ನ ಪ್ರಶ್ನೆ ಸರಿಯೇ, ಆದರೆ ನಿನ್ನ ಮನಸ್ಸು ಮಾಗದ ಕಾಲವದು! ಆಗಷ್ಟೇ ನನ್ನ ಅಮ್ಮ ತೀರಿಹೋಗಿದ್ದಳು. ನಾನು ಅಷ್ಟೊಂದು ದೊಡ್ಡ ಜವಾಬ್ದಾರಿಯನ್ನು ಕಾನೂನಿನ ತೊಡಕಿನ ಜೊತೆಗೆ ನಿಭಾಯಿಸಬಲ್ಲೆನು ಎಂದು ನನಗೆ ಖಂಡಿತಾ ಅನಿಸಲಿಲ್ಲ… ಮೇಲಾಗಿ ನಾನು ಕಾಲೇಜನ್ನು ಯಾರಿಗೂ ಹೇಳದೆ ಕೇಳದೆ ತೊರೆದು ಬರುವುದಕ್ಕೆ ನೀನು ಯಾವುದೇ ಕಾರಣವಲ್ಲ. ಆಗ ನನ್ನನ್ನು ಯಾವುದೋ ಡೇಟಿಂಗ್ ಸೈಟಿನಲ್ಲಿ ನಮ್ಮದೇ ಕಾಲೇಜಿನ ಯಾರೋ ಒಬ್ಬರು ನೋಡಿ ನನಗೆ ಬೆದರಿಕೆಯ ಮೆಸೇಜ್ ಮಾಡತೊಡಗಿದ್ದರು… ಏನು ಮಾಡಬೇಕೆಂದೇ ತೋಚಲಿಲ್ಲ. ನಾನು ಮಾಡುತ್ತಿದ್ದ ಕೆಲಸ ಕೂಡ ಅಸಂಘಟಿತ ಆದ್ದರಿಂದ ಸಂಸ್ಥೆಯ ಕಡೆಯಿಂದ ಮತ್ತು ಸಹೋದ್ಯೋಗಿಗಳಿಂದ ಯಾವುದೇ ಸಹಾಯ ನಿರೀಕ್ಷಿಸುವ ಹಾಗಿರಲೂ ಇಲ್ಲ. ಅದಕ್ಕಾಗಿಯೇ ತಪ್ಪಿಸಿಕೊಂಡು ಓಡಿದೆ. ಅಂದು ಶುರುವಾದ ಆ ಓಟ ಸಾಗುತ್ತಲೇ ಹೋಯಿತು.

ಅದೆಷ್ಟು ಕೆಲಸಗಳನ್ನ ನಾನು ಬದಲಾಯಿಸಿದೆ. ಪ್ರತಿಬಾರಿ ಹೊಸ ಕೆಲಸಕ್ಕೆ ಸೇರಿಕೊಂಡಾಗಲೂ ಕೂಡ ನಾಟಕವಾಡುವ ಪ್ರಸಂಗ ಬರುತ್ತಿತ್ತು. ನಾನು ನಾನಾಗಿರುವ ತಾವು ಈ ಜಗತ್ತಿನಲ್ಲಿ ಇದೆಯಾದರೂ ಎಲ್ಲಿ ಎಂಬ ಅನುಮಾನವಾಗುತ್ತಿತ್ತು. ನಾನು ಬರೆಯಬಹುದೆಂಬ ಯಾವುದೇ ನಂಬಿಕೆ ನನಗಿರಲಿಲ್ಲ. ಕೊನೆಗೆ ಇದೆಲ್ಲದರಿಂದ ನಾನು ನಾನಾಗಿ ವ್ಯಕ್ತಗೊಳ್ಳುವ ಒಂದೇ ಒಂದು ಮಾಧ್ಯಮ ಎಂದರೆ ಬರವಣಿಗೆ ಎಂದು ಗೊತ್ತಾಗುತ್ತಾ ಹೋಯಿತು. ನಾನು ನನ್ನನ್ನೇ ಕಂಡುಕೊಳ್ಳುತ್ತಾ ಹೋದೆ… ಮೇಲಾಗಿ ಬೇರೊಬ್ಬರ ಸ್ಥಾನದಲ್ಲಿ ನಿಂತು ಅವರೇಕೆ ಹಾಗೆ ಮಾಡಿರಬಹುದೆಂದು ಯೋಚಿಸಲು ಶುರುಮಾಡಿದೆ. ಆಗ ಅಮ್ಮ ಸಹನೀಯವಾದಳು, ಅಪ್ಪ ಚೂರು ಅರ್ಥವಾದ, ನೀನು ನನಗೆ ಅರ್ಥವಾದೆ… ಮನೆಯಲ್ಲಿ ನಾನು ನಾನಾಗಿರುವ ಪ್ರಯತ್ನ ಮಾಡಿದೆ ಅಂತಿಟ್ಟುಕೋ! ಒಮ್ಮೊಮ್ಮೆ ನಾನ್ಯಾರು ಎಂಬ ಪ್ರಶ್ನೆ ಸುಳಿದುಬಿಡುತ್ತಿತ್ತು. ನಾನು ‘ಹೀಗೆ’ ಮತ್ತು ‘ಇದು ಮಾತ್ರ’ ಎಂದು ಹೇಳಿಕೊಳ್ಳಲಾರದಷ್ಟು ಹರಿಯುವ ಗುಣ ನನ್ನದಾಗುತ್ತಾ ಹೋಯಿತು. ನಾನೊಂದು ನದಿ ಎನಿಸಲು ಶುರುವಾಯಿತು. ಹರಿಯುವ ಜಾಗೆಯನ್ನೆಲ್ಲಾ ತನ್ನದಾಗಿ ಮಾಡಿಕೊಳ್ಳುತ್ತಾ ಸಾಗದೆ ಹೋದರೆ ಅದು ನದಿಯಾದರೂ ಎಲ್ಲಾದೀತು ಹೇಳು. ಈ ಕ್ಷಣಕ್ಕೆ ಹೊಳೆದಿರುವುದು ಮತ್ತು ಸತ್ಯ ಎನಿಸುತ್ತಿರುವುದು ಇಷ್ಟೇ…”

ಇಷ್ಟನ್ನು ಬರೆಯದೆ ಮುಕ್ತಿಯಿಲ್ಲ ಎಂದು ಯೋಚಿಸುತ್ತಿರುವಾಗ ಅವನಿಗೆ ಸ್ವಲ್ಪ ಹೊತ್ತಿನ ಮುಂಚೆ ಯಾರೋ ಕಾಲಿಂಗ್ ಬೆಲ್ ಬಾರಿಸಿ ಸುಮ್ಮನಾದ ನೆನೆಪಾಯಿತು. ಅವನು ರಿಹಾನ್ ಆಗಿದ್ದರೆ? ಇಲ್ಲ ಇಲ್ಲ ಅವನಾಗಿರುವುದಕ್ಕೆ ಸಾಧ್ಯವೇ ಇಲ್ಲ. ಅವನು ಅಕ್ಷರದ ಬಾಗಿಲಿಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾನೆ. ಇಲ್ಲದಿದ್ದರೆ ಆ ಅಧ್ಯಾಯದ ಮೇಲೆ ನೀರು ಚೆಲ್ಲುತ್ತಿರಲಿಲ್ಲ! ಈಗಬಂದವನು ಬಂದವನು ಈಜುಗೊಳದಲ್ಲಿ ಸಿಕ್ಕಿದ ಹುಡುಗನೇ ಆಗಿರುತ್ತಾನೆ. ಅಲ್ಲ, ಅವನಿಗೆ ತನ್ನ ಅಮ್ಮ ಸಿಕ್ಕಳಾ? ಏನು ಮಾತಾಗಿರಬಹುದು ಅವರ ನಡುವೆ? ಅವಳು ತನ್ನ ಸೌಖ್ಯ ಅರಸಿ ಹೋದೆ ಎಂಬುದೆ ಸತ್ಯ ಆಗಿದ್ದರೆ ಅವನು ಅದನ್ನು ಹೇಗೆ ತೆಗೆದುಕೊಳ್ಳುತ್ತಾನೆ? ತನ್ನ ತಾಯಿಯನ್ನು ದ್ವೇಷಿಸುತ್ತಾನಾ? ಆ ತಾಯಿ ತನ್ನ ಮಗನನ್ನು ಹುಡುಕದಿದ್ದರೇನೇ ಚೆನ್ನಾಗಿತ್ತು ಎನಿಸಿಬಿಟ್ಟಿತು.

ಹೇಗೋ ಉಳಿದವರು ಅವರವರ ಪ್ರಪಂಚದಲ್ಲಿ ಅವರದ್ದೇ ಸುಖಕೊಡುವ ನಂಬಿಕೆಯಲ್ಲಿ ಹಾಯಾಗಿರುತ್ತಾರೆ… ಎನಿಸಿದ ಮರುಕ್ಷಣವೇ ಅವರು ಹಾಗೆ ಹುಡುಕಿಕೊಂಡು ಬರುವುದೇ ನಮಗೊಂದು ನಮ್ಮನ್ನು ನೋಡಿಕೊಳ್ಳುವ ಭಾಗ್ಯವಲ್ಲವೇ? ಇಲ್ಲದಿದ್ದರೆ ನಾವುಗಳು ಬಾವಿಯೊಳಗಿನ ಕಪ್ಪೆಯಾಗುವುದಿಲ್ಲವೇ? ಈ ಯೋಚನೆಗಳ ಇಬ್ಬಂದಿತನಕ್ಕೆ ಬಿಡುಗಡೆಯಿಲ್ಲವೆಂದುಕೊಂಡ. ಮೊದಲಬಾರಿಗೆ ಕಾಲಿಂಗ್ ಬೆಲ್ ಬಾರಿಸಿದಾಗಲೇ ತಾನ್ಯಾಕೆ ಬಾಗಿಲು ತೆರೆಯಲಿಲ್ಲ? ಈಗಲೂ ಅವನು ಅಲ್ಲಿಯೇ ನಿಂತಿರುತ್ತಾನೆಯೇ? ಆ ಹುಡುಗ ಹೊರಟುಹೋಗಿದ್ದರೆ? ಹಾಳೆಯ ಮೇಲೆ ನೀರು ಬಿದ್ದದ್ದು ಅದರ ಸೂಚನೆಯಾಗಿತ್ತೇ? ಅಯ್ಯೋ, ಇದೇನಾಗಿ ಹೋಯಿತು? ಎಂದು ತನ್ನನ್ನು ತಾನು ಹಳಿಯುತ್ತಾ ಬಾಗಿಲಿನ ಬಳಿ ನಡೆದ. ಅವನ ಕಾಲುಗಳು ನಡುಗುತ್ತಿದ್ದವು. ಬಾಗಿಲು ತೆರೆದಾಗ ಆಶ್ಚರ್ಯವೆಂಬಂತೆ ಈಜುಗೊಳದ ಹುಡುಗ ಅಲ್ಲಿಯೇ ನಿಂತಿದ್ದ. ಅದೆಷ್ಟು ಹೊತ್ತಿನಿಂದ ಅಲ್ಲಿಯೇ ನಿಂತಿದ್ದ? ಮತ್ತೊಮ್ಮೆ ಕಾಲಿಂಗ್ ಬೆಲ್ ಬಾರಿಸಬೇಕಿತ್ತು ಎಂದು ಹೇಳಹೊರಟ ಮಾತು ಗಂಟಲಿನಲ್ಲಿಯೇ ಉಳಿಯಿತು. ಆ ಹುಡುಗನ ಕಣ್ಣುಗಳು ಹನಿಗೂಡಿದ್ದವು. ಅವನಿಗೆ ತಾನೆ ತನ್ನೆದುರು ನಿಂತಂತೆನಿಸಿತು…